171 ಅಶ್ವತ್ಥಾಮಪರಾಕ್ರಮಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ನಾರಾಯಣಾಸ್ತ್ರಮೋಕ್ಷ ಪರ್ವ

ಅಧ್ಯಾಯ 171

ಸಾರ

ಕೃಷ್ಣಾರ್ಜುನರು ಭೀಮನನ್ನು ಅವರ ರಥದಿಂದ ಎಳೆದು ಭೂಮಿಯ ಮೇಲೆ ಕೆಡವಿದುದು; ನಾರಾಯಣಾಸ್ತ್ರವು ಪ್ರಶಮನಗೊಂಡಿದುದು (1-22). ಆ ನಾರಾಯಣಾಸ್ತ್ರವನ್ನು ಇನ್ನೊಮ್ಮೆ ಪ್ರಯೋಗಿಸಬೇಕೆಂದು ದುರ್ಯೋಧನನು ಕೇಳಿಕೊಳ್ಳಲು ಅಶ್ವತ್ಥಾಮನು ನಿರಾಕರಿಸಿದುದು (23-31). ಅಶ್ವತ್ಥಾಮ-ಧೃಷ್ಟದ್ಯುಮ್ನರ ಯುದ್ಧ (32-44). ಸಾತ್ಯಕಿ-ಅಶ್ವತ್ಥಾಮರ ಯುದ್ಧ (45-52). ಅಶ್ವತ್ಥಾಮನ ಪರಾಕ್ರಮ; ಪಾಂಡುಸೇನೆಯ ಪಲಾಯನ (53-69).

07171001 ಸಂಜಯ ಉವಾಚ।
07171001a ಭೀಮಸೇನಂ ಸಮಾಕೀರ್ಣಂ ದೃಷ್ಟ್ವಾಸ್ತ್ರೇಣ ಧನಂಜಯಃ।
07171001c ತೇಜಸಃ ಪ್ರತಿಘಾತಾರ್ಥಂ ವಾರುಣೇನ ಸಮಾವೃಣೋತ್।।

ಸಂಜಯನು ಹೇಳಿದನು: “ಆ ಅಸ್ತ್ರದಿಂದ ಭೀಮಸೇನನು ಮುಚ್ಚಿಹೋಗಿರುವುದನ್ನು ನೋಡಿ ಧನಂಜಯನು ತೇಜಸ್ಸನ್ನು ನಾಶಗೊಳಿಸಲು ವಾರುಣಾಸ್ತ್ರದಿಂದ ಅದನ್ನು ಎಲ್ಲ ಕಡೆಗಳಿಂದ ಮುಚ್ಚಿದನು.

07171002a ನಾಲಕ್ಷಯತ ತಂ ಕಶ್ಚಿದ್ವಾರುಣಾಸ್ತ್ರೇಣ ಸಂವೃತಂ।
07171002c ಅರ್ಜುನಸ್ಯ ಲಘುತ್ವಾಚ್ಚ ಸಂವೃತತ್ವಾಚ್ಚ ತೇಜಸಃ।।

ಅರ್ಜುನನ ಹಸ್ತಲಾಘವದಿಂದ ಮತ್ತು ಸುತ್ತುವರೆದಿದ್ದ ಆ ತೇಜಸ್ಸಿನಿಂದಾಗಿ ಭೀಮಸೇನನು ವಾರುಣಾಸ್ತ್ರದಿಂದ ಸುತ್ತುವರೆಯಲ್ಪಟ್ಟಿದ್ದುದನ್ನು ಯಾರೂ ಗಮನಿಸಲಿಲ್ಲ.

07171003a ಸಾಶ್ವಸೂತರಥೋ ಭೀಮೋ ದ್ರೋಣಪುತ್ರಾಸ್ತ್ರಸಂವೃತಃ।
07171003c ಅಗ್ನಾವಗ್ನಿರಿವ ನ್ಯಸ್ತೋ ಜ್ವಾಲಾಮಾಲೀ ಸುದುರ್ದೃಶಃ।।

ರಥ-ಅಶ್ವ-ಸೂತನೊಡನೆ ದ್ರೋಣಪುತ್ರನ ಅಸ್ತ್ರದಿಂದ ಸಂವೃತನಾಗಿದ್ದ ಭೀಮನು ಧಗಧಗಿಸುತ್ತಿರುವ ಅಗ್ನಿಯೊಳಗೆ ಇಟ್ಟಿರುವ ಇನ್ನೊಂದು ಅಗ್ನಿಯಂತೆಯೇ ಪ್ರಕಾಶಿಸಿದನು.

07171004a ಯಥಾ ರಾತ್ರಿಕ್ಷಯೇ ರಾಜಂ ಜ್ಯೋತೀಂಷ್ಯಸ್ತಗಿರಿಂ ಪ್ರತಿ।
07171004c ಸಮಾಪೇತುಸ್ತಥಾ ಬಾಣಾ ಭೀಮಸೇನರಥಂ ಪ್ರತಿ।।

ರಾಜನ್! ರಾತ್ರಿಯು ಕಳೆಯಲು ನಕ್ಷತ್ರಗಳು ಅಸ್ತಗಿರಿಯ ಕಡೆ ಹೋಗುವಂತೆ ಆ ಬಾಣಗಳು ಭೀಮಸೇನನ ರಥದ ಮೇಲೆಯೇ ಬೀಳುತ್ತಿದ್ದವು.

07171005a ಸ ಹಿ ಭೀಮೋ ರಥಶ್ಚಾಸ್ಯ ಹಯಾಃ ಸೂತಶ್ಚ ಮಾರಿಷ।
07171005c ಸಂವೃತಾ ದ್ರೋಣಪುತ್ರೇಣ ಪಾವಕಾಂತರ್ಗತಾಭವನ್।।

ಮಾರಿಷ! ದ್ರೋಣಪುತ್ರನ ಅಸ್ತ್ರದಿಂದ ಆವೃತರಾದ ಭೀಮ, ಅವನ ರಥ, ಕುದುರೆ ಮತ್ತು ಸಾರಥಿಗಳು, ಬೆಂಕಿಯ ಅಂತರ್ಗತರಾದರು.

07171006a ಯಥಾ ದಗ್ಧ್ವಾ ಜಗತ್ ಕೃತ್ಸ್ನಂ ಸಮಯೇ ಸಚರಾಚರಂ।
07171006c ಗಚ್ಚೇದಗ್ನಿರ್ವಿಭೋರಾಸ್ಯಂ ತಥಾಸ್ತ್ರಂ ಭೀಮಮಾವೃಣೋತ್।।

ಸಮಯದಲ್ಲಿ ಸಚರಾಚರ ಜಗತ್ತೆಲ್ಲವನ್ನೂ ಭಸ್ಮಮಾಡಿ ಅಗ್ನಿಯು ವಿಭುವಿನ ಮುಖವನ್ನು ಪ್ರವೇಶಿಸುವಂತೆ ಆ ಅಸ್ತ್ರವು ಭೀಮನನ್ನು ಆವರಿಸಿತು.

07171007a ಸೂರ್ಯಮಗ್ನಿಃ ಪ್ರವಿಷ್ಟಃ ಸ್ಯಾದ್ಯಥಾ ಚಾಗ್ನಿಂ ದಿವಾಕರಃ।
07171007c ತಥಾ ಪ್ರವಿಷ್ಟಂ ತತ್ತೇಜೋ ನ ಪ್ರಾಜ್ಞಾಯತ ಕಿಂ ಚನ।।

ಸೂರ್ಯನು ಅಗ್ನಿಯನ್ನು ಮತ್ತು ಅಗ್ನಿಯು ದಿವಾಕರನನ್ನು ಪ್ರವೇಶಿಸುವಂತೆ ಆ ತೇಜಸ್ಸು ಭೀಮನನ್ನು ಪ್ರವೇಶಿಸಲು ಅವನು ಎಲ್ಲಿರುವನೆಂದೇ ಯಾರಿಗೂ ತಿಳಿಯದಾಯಿತು.

07171008a ವಿಕೀರ್ಣಮಸ್ತ್ರಂ ತದ್ದೃಷ್ಟ್ವಾ ತಥಾ ಭೀಮರಥಂ ಪ್ರತಿ।
07171008c ಉದೀರ್ಯಮಾಣಂ ದ್ರೌಣಿಂ ಚ ನಿಷ್ಪ್ರತಿದ್ವಂದ್ವಮಾಹವೇ।।

ಆ ಅಸ್ತ್ರವು ಭೀಮನ ರಥವನ್ನು ಆವರಿಸಿದುದನ್ನು ನೋಡಿ, ತನಗೆ ಎದುರಾಳಿಗಳ್ಯಾರೂ ಇಲ್ಲವೆಂದು ದ್ರೌಣಿಯ ಬಲವು ಇನ್ನೂ ಉಲ್ಬಣಗೊಂಡಿತು.

07171009a ಸರ್ವಸೈನ್ಯಾನಿ ಪಾಂಡೂನಾಂ ನ್ಯಸ್ತಶಸ್ತ್ರಾಣ್ಯಚೇತಸಃ।
07171009c ಯುಧಿಷ್ಠಿರಪುರೋಗಾಂಶ್ಚ ವಿಮುಖಾಂಸ್ತಾನ್ಮಹಾರಥಾನ್।।

ಪಾಂಡವರ ಸರ್ವಸೇನೆಗಳೂ ಅಸ್ತ್ರಗಳನ್ನು ಕೆಳಗಿಟ್ಟು ಮೂಢರಂತಾಗಿದ್ದರು. ಯುಧಿಷ್ಠಿರನೇ ಮೊದಲಾದ ಮಹಾರಥರು ಯುದ್ಧದಿಂದ ವಿಮುಖರಾಗಿದ್ದರು.

07171010a ಅರ್ಜುನೋ ವಾಸುದೇವಶ್ಚ ತ್ವರಮಾಣೌ ಮಹಾದ್ಯುತೀ।
07171010c ಅವಪ್ಲುತ್ಯ ರಥಾದ್ವೀರೌ ಭೀಮಮಾದ್ರವತಾಂ ತತಃ।।

ಆಗ ವೀರ ಅರ್ಜುನ ಮತ್ತು ಮಹಾದ್ಯುತಿ ವಾಸುದೇವರು ತ್ವರೆಮಾಡಿ ರಥದಿಂದ ಕೆಳಕ್ಕೆ ಹಾರಿ ಭೀಮನಿದ್ದಲ್ಲಿಗೆ ಓಡಿದರು.

07171011a ತತಸ್ತದ್ದ್ರೋಣಪುತ್ರಸ್ಯ ತೇಜೋಽಸ್ತ್ರಬಲಸಂಭವಂ।
07171011c ವಿಗಾಹ್ಯ ತೌ ಸುಬಲಿನೌ ಮಾಯಯಾವಿಶತಾಂ ತದಾ।।

ಆ ಮಹಾಬಲಿಗಳಿಬ್ಬರೂ ದ್ರೋಣಪುತ್ರನ ಅಸ್ತ್ರಬಲದಿಂದ ಹುಟ್ಟಿದ್ದ ತೇಜಸ್ಸನ್ನು ಮಾಯೆಯಿಂದ ಪ್ರವೇಶಿಸಿ ಭೀಮನ ಬಳಿ ಬಂದರು.

07171012a ನ್ಯಸ್ತಶಸ್ತ್ರೌ ತತಸ್ತೌ ತು ನಾದಹದಸ್ತ್ರಜೋಽನಲಃ।
07171012c ವಾರುಣಾಸ್ತ್ರಪ್ರಯೋಗಾಚ್ಚ ವೀರ್ಯವತ್ತ್ವಾಚ್ಚ ಕೃಷ್ಣಯೋಃ।।

ಆ ಅಸ್ತ್ರದಿಂದ ಹುಟ್ಟಿದ್ದ ಅಗ್ನಿಯು ಅಸ್ತ್ರಗಳನ್ನು ಕೆಳಗಿಟ್ಟಿದುದರಿಂದ ಮತ್ತು ವಾರುಣಾಸ್ತ್ರಪ್ರಯೋಗದಿಂದ ಆ ವೀರ್ಯವಂತ ಕೃಷ್ಣರಿಬ್ಬರನ್ನೂ ಪೀಡಿಸಲಿಲ್ಲ.

07171013a ತತಶ್ಚಕೃಷತುರ್ಭೀಮಂ ತಸ್ಯ ಸರ್ವಾಯುಧಾನಿ ಚ।
07171013c ನಾರಾಯಣಾಸ್ತ್ರಶಾಂತ್ಯರ್ಥಂ ನರನಾರಾಯಣೌ ಬಲಾತ್।।

ಆಗ ನಾರಾಯಣಾಸ್ತ್ರವನ್ನು ಶಾಂತಗೊಳಿಸಲೋಸುಗ ಆ ನರನಾರಾಯಣರು ಬಲವನ್ನುಪಯೋಗಿಸಿ ಭೀಮನನ್ನೂ ಅವನ ಸರ್ವ ಆಯುಧಗಳನ್ನೂ ಎಳೆದು ಕೆಳಗಿಳಿಸಿದರು.

07171014a ಅಪಕೃಷ್ಯಮಾಣಃ ಕೌಂತೇಯೋ ನದತ್ಯೇವ ಮಹಾರಥಃ।
07171014c ವರ್ಧತೇ ಚೈವ ತದ್ಘೋರಂ ದ್ರೌಣೇರಸ್ತ್ರಂ ಸುದುರ್ಜಯಂ।।

ಕೆಳಗೆ ಎಳೆಯಲ್ಪಡುತ್ತಿರುವಾಗಲೂ ಕೂಡ ಮಹಾರಥ ಕೌಂತೇಯನು ಗರ್ಜಿಸುತ್ತಿರಲು ದ್ರೌಣಿಯ ಆ ದುರ್ಜಯ ಘೋರ ಅಸ್ತ್ರವು ಹೆಚ್ಚುತ್ತಲೇ ಇತ್ತು.

07171015a ತಮಬ್ರವೀದ್ವಾಸುದೇವಃ ಕಿಮಿದಂ ಪಾಂಡುನಂದನ।
07171015c ವಾರ್ಯಮಾಣೋಽಪಿ ಕೌಂತೇಯ ಯದ್ಯುದ್ಧಾನ್ನ ನಿವರ್ತಸೇ।।

ಆಗ ವಾಸುದೇವನು ಅವನಿಗೆ ಹೇಳಿದನು: “ಇದೇನಿದು ಪಾಂಡುನಂದನ! ಕೌಂತೇಯ! ತಡೆಹಿಡಿದರೂ ನೀನು ಯುದ್ಧಮಾಡುವುದನ್ನು ನಿಲ್ಲಿಸುತ್ತಿಲ್ಲ!

07171016a ಯದಿ ಯುದ್ಧೇನ ಜೇಯಾಃ ಸ್ಯುರಿಮೇ ಕೌರವನಂದನಾಃ।
07171016c ವಯಮಪ್ಯತ್ರ ಯುಧ್ಯೇಮ ತಥಾ ಚೇಮೇ ನರರ್ಷಭಾಃ।।

ಒಂದುವೇಳೆ ಈ ಸಮಯದಲ್ಲಿ ಕೌರವನಂದನರನ್ನು ಜಯಿಸುವಂತಿದ್ದರೆ ನಾವಿಬ್ಬರು ಕೂಡ ಯುದ್ಧಮಾಡುತ್ತಿದ್ದೆವು. ಈ ನರರ್ಷಭರೂ ಕೂಡ ಯುದ್ಧಮಾಡುತ್ತಿದ್ದರು.

07171017a ರಥೇಭ್ಯಸ್ತ್ವವತೀರ್ಣಾಸ್ತು ಸರ್ವ ಏವ ಸ್ಮ ತಾವಕಾಃ।
07171017c ತಸ್ಮಾತ್ತ್ವಮಪಿ ಕೌಂತೇಯ ರಥಾತ್ತೂರ್ಣಮಪಾಕ್ರಮ।।

ನಿನ್ನವರೆಲ್ಲರೂ ರಥದಿಂದ ಕೆಳಗಿಳಿದಿದ್ದಾರೆ. ಕೌಂತೇಯ! ನೀನೂ ಕೂಡ ಪರಾಕ್ರಮವನ್ನು ತೋರಿಸದೇ ಬೇಗನೇ ರಥದಿಂದ ಕೆಳಗಿಳಿ!”

07171018a ಏವಮುಕ್ತ್ವಾ ತತಃ ಕೃಷ್ಣೋ ರಥಾದ್ಭೂಮಿಮಪಾತಯತ್।
07171018c ನಿಃಶ್ವಸಂತಂ ಯಥಾ ನಾಗಂ ಕ್ರೋಧಸಂರಕ್ತಲೋಚನಂ।।

ಹೀಗೆ ಹೇಳಿ ಕೃಷ್ಣನು ಕ್ರೋಧದಿಂದ ಸಂರಕ್ತಲೋಚನನಾಗಿ ಸರ್ಪದಂತೆ ಭುಸುಗುಟ್ಟುತ್ತಿದ್ದ ಭೀಮನನ್ನು ರಥದಿಂದ ನೆಲಕ್ಕೆ ಕೆಡವಿದನು.

07171019a ಯದಾಪಕೃಷ್ಟಃ ಸ ರಥಾನ್ನ್ಯಾಸಿತಶ್ಚಾಯುಧಂ ಭುವಿ।
07171019c ತತೋ ನಾರಾಯಣಾಸ್ತ್ರಂ ತತ್ಪ್ರಶಾಂತಂ ಶತ್ರುತಾಪನಂ।।

ಯಾವಾಗ ಅವನನ್ನು ಕೆಳಕ್ಕೆ ಎಳೆದರೋ ಮತ್ತು ಆಯುಧಗಳನ್ನು ನೆಲದಮೇಲಿಟ್ಟರೋ ಆಗ ಶತ್ರುಗಳನ್ನು ಸುಡುತ್ತಿದ್ದ ಆ ನಾರಾಯಣಾಸ್ತ್ರವು ಪ್ರಶಾಂತಗೊಂಡಿತು.

07171020a ತಸ್ಮಿನ್ಪ್ರಶಾಂತೇ ವಿಧಿನಾ ತದಾ ತೇಜಸಿ ದುಃಸ್ಸಹೇ।
07171020c ಬಭೂವುರ್ವಿಮಲಾಃ ಸರ್ವಾ ದಿಶಃ ಪ್ರದಿಶ ಏವ ಚ।।

ವಿಧಿವತ್ತಾಗಿ ದುಃಸ್ಸಹವಾಗಿದ್ದ ಆ ತೇಜಸ್ಸು ಪ್ರಶಾಂತಗೊಳ್ಳಲು ಸರ್ವ ದಿಕ್ಕುಗಳೂ ಉಪದಿಕ್ಕುಗಳೂ ಶುಭ್ರವಾದವು.

07171021a ಪ್ರವವುಶ್ಚ ಶಿವಾ ವಾತಾಃ ಪ್ರಶಾಂತಾ ಮೃಗಪಕ್ಷಿಣಃ।
07171021c ವಾಹನಾನಿ ಚ ಹೃಷ್ಟಾನಿ ಯೋಧಾಶ್ಚ ಮನುಜೇಶ್ವರ।।

ಮನುಜೇಶ್ವರ! ಸುಮಂಗಲ ಗಾಳಿಯು ಬೀಸತೊಡಗಿತು. ಮೃಗಪಕ್ಷಿಗಳು ಶಾಂತಗೊಂಡವು. ವಾಹನಗಳು ಮತು ಯೋಧರು ಪ್ರಹೃಷ್ಟಗೊಂಡರು.

07171022a ವ್ಯಪೋಢೇ ಚ ತತೋ ಘೋರೇ ತಸ್ಮಿಂಸ್ತೇಜಸಿ ಭಾರತ।
07171022c ಬಭೌ ಭೀಮೋ ನಿಶಾಪಾಯೇ ಧೀಮಾನ್ಸೂರ್ಯ ಇವೋದಿತಃ।।

ಭಾರತ! ಆ ಅಸ್ತ್ರದ ಘೋರ ತೇಜಸ್ಸು ಹೊರಟುಹೋಗಲು ಧೀಮಾನ್ ಭೀಮನು ರಾತ್ರಿಯು ಕಳೆದನಂತರ ಉದಿಸುತ್ತಿರುವ ಸೂರ್ಯನಂತೆ ಪ್ರಕಾಶಿಸಿದನು.

07171023a ಹತಶೇಷಂ ಬಲಂ ತತ್ರ ಪಾಂಡವಾನಾಮತಿಷ್ಠತ।
07171023c ಅಸ್ತ್ರವ್ಯುಪರಮಾದ್ಧೃಷ್ಟಂ ತವ ಪುತ್ರಜಿಘಾಂಸಯಾ।।

ಅಸ್ತ್ರವು ಶಾಂತವಾದುದನ್ನು ನೋಡಿ ಅಳಿದುಳಿದ ಪಾಂಡವ ಸೇನೆಯು ಸಂತೋಷಗೊಂಡು ನಿನ್ನ ಪುತ್ರನನ್ನು ಸಂಹರಿಸಲು ಬಯಸಿ ಪುನಃ ಯುದ್ಧಸನ್ನದ್ಧವಾಯಿತು.

07171024a ವ್ಯವಸ್ಥಿತೇ ಬಲೇ ತಸ್ಮಿನ್ನಸ್ತ್ರೇ ಪ್ರತಿಹತೇ ತಥಾ।
07171024c ದುರ್ಯೋಧನೋ ಮಹಾರಾಜ ದ್ರೋಣಪುತ್ರಮಥಾಬ್ರವೀತ್।।

ಮಹಾರಾಜ! ಆ ಅಸ್ತ್ರದಿಂದ ಹತಗೊಳ್ಳದೇ ವ್ಯವಸ್ಥಿತವಾಗಿ ನಿಂತಿದ್ದ ಆ ಸೇನೆಯನ್ನು ನೋಡಿ ದುರ್ಯೋಧನನು ದ್ರೋಣಪುತ್ರನಿಗೆ ಹೇಳಿದನು:

07171025a ಅಶ್ವತ್ಥಾಮನ್ಪುನಃ ಶೀಘ್ರಮಸ್ತ್ರಮೇತತ್ಪ್ರಯೋಜಯ।
07171025c ವ್ಯವಸ್ಥಿತಾ ಹಿ ಪಾಂಚಾಲಾಃ ಪುನರೇವ ಜಯೈಷಿಣಃ।।

“ಅಶ್ವತ್ಥಾಮ! ಶೀಘ್ರದಲ್ಲಿಯೇ ಪುನಃ ಆ ಅಸ್ತ್ರವನ್ನು ಪ್ರಯೋಗಿಸು! ಜಯೈಷಿ ಪಾಂಚಾಲರು ಪುನಃ ಯುದ್ಧಕ್ಕೆ ಸಿದ್ಧರಾಗಿದ್ದಾರೆ!”

07171026a ಅಶ್ವತ್ಥಾಮಾ ತಥೋಕ್ತಸ್ತು ತವ ಪುತ್ರೇಣ ಮಾರಿಷ।
07171026c ಸುದೀನಮಭಿನಿಃಶ್ವಸ್ಯ ರಾಜಾನಮಿದಮಬ್ರವೀತ್।।

ಮಾರಿಷ! ನಿನ್ನ ಪುತ್ರನು ಹಾಗೆ ಹೇಳಲು ಅಶ್ವತ್ಥಾಮನು ದೀನನಾಗಿ ನಿಟ್ಟುಸಿರುಬಿಡುತ್ತಾ ರಾಜನಿಗೆ ಈ ಮಾತನ್ನಾಡಿದನು:

07171027a ನೈತದಾವರ್ತತೇ ರಾಜನ್ನಸ್ತ್ರಂ ದ್ವಿರ್ನೋಪಪದ್ಯತೇ।
07171027c ಆವರ್ತಯನ್ನಿಹಂತ್ಯೇತತ್ಪ್ರಯೋಕ್ತಾರಂ ನ ಸಂಶಯಃ।।

“ರಾಜನ್! ಈ ಅಸ್ತ್ರವನ್ನು ಮರುಕಳಿಸಲಾಗುವುದಿಲ್ಲ. ಎರಡನೆಯ ಬಾರಿ ಪ್ರಯೋಗಿಸಲಿಕ್ಕಾಗುವುದಿಲ್ಲ. ಪುನಃ ಪ್ರಯೋಗಿಸಿದ್ದಾದರೆ ಪ್ರಯೋಗಿಸಿದವನನ್ನೇ ಅದು ಸಂಹರಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

07171028a ಏಷ ಚಾಸ್ತ್ರಪ್ರತೀಘಾತಂ ವಾಸುದೇವಃ ಪ್ರಯುಕ್ತವಾನ್।
07171028c ಅನ್ಯಥಾ ವಿಹಿತಃ ಸಂಖ್ಯೇ ವಧಃ ಶತ್ರೋರ್ಜನಾಧಿಪ।।

ಈ ಅಸ್ತ್ರದ ನಿವಾರಣೋಪಾಯವನ್ನು ಕೃಷ್ಣನೇ ತಿಳಿಸಿದನು. ಜನಾಧಿಪ! ಅನ್ಯಥಾ ಯುದ್ಧದಲ್ಲಿ ಶತ್ರುಗಳ ವಧೆಯು ನಿಶ್ಚಿತವಾಗಿದ್ದಿತು.

07171029a ಪರಾಜಯೋ ವಾ ಮೃತ್ಯುರ್ವಾ ಶ್ರೇಯೋ ಮೃತ್ಯುರ್ನ ನಿರ್ಜಯಃ।
07171029c ನಿರ್ಜಿತಾಶ್ಚಾರಯೋ ಹ್ಯೇತೇ ಶಸ್ತ್ರೋತ್ಸರ್ಗಾನ್ಮೃತೋಪಮಾಃ।।

ಪರಾಜಯ ಮತ್ತು ಮೃತ್ಯುಗಳ ನಡುವೆ ಮೃತ್ಯುವೇ ಶ್ರೇಯಸ್ಕರವಾದುದು. ಸೋಲಲ್ಲ. ಶಸ್ತ್ರಗಳನ್ನು ಕೆಳಗಿಟ್ಟಿರುವ ಇವರೆಲ್ಲರೂ ಮೃತ್ಯುಸಮ ಸೋಲನ್ನೇ ಹೊಂದಿದ್ದಾರೆ.”

07171030 ದುರ್ಯೋಧನ ಉವಾಚ।
07171030a ಆಚಾರ್ಯಪುತ್ರ ಯದ್ಯೇತದ್ದ್ವಿರಸ್ತ್ರಂ ನ ಪ್ರಯುಜ್ಯತೇ।
07171030c ಅನ್ಯೈರ್ಗುರುಘ್ನಾ ವಧ್ಯಂತಾಮಸ್ತ್ರೈರಸ್ತ್ರವಿದಾಂ ವರ।।

ದುರ್ಯೋಧನನು ಹೇಳಿದನು: “ಆಚಾರ್ಯಪುತ್ರ! ಅಸ್ತ್ರವಿದರಲ್ಲಿ ಶ್ರೇಷ್ಠ! ಈ ಅಸ್ತ್ರವನ್ನು ಎರಡನೆಯ ಬಾರಿ ಬಳಸಲಿಕ್ಕಾಗುವುದಿಲ್ಲವಾದರೆ ನಿನ್ನಲ್ಲಿರುವ ಅನ್ಯ ಅಸ್ತ್ರಗಳಿಂದ ಈ ಗುರುಘಾತಿಗಳನ್ನು ವಧಿಸು!

07171031a ತ್ವಯಿ ಹ್ಯಸ್ತ್ರಾಣಿ ದಿವ್ಯಾನಿ ಯಥಾ ಸ್ಯುಸ್ತ್ರ್ಯಂಬಕೇ ತಥಾ।
07171031c ಇಚ್ಚತೋ ನ ಹಿ ತೇ ಮುಚ್ಯೇತ್ಕ್ರುದ್ಧಸ್ಯಾಪಿ ಪುರಂದರಃ।।

ತ್ರ್ಯಂಬಕನಲ್ಲಿರುವಂತೆ ನಿನ್ನಲ್ಲಿಯೂ ದಿವಾಸ್ತ್ರಗಳಿವೆ. ನೀನು ಇಚ್ಛಿಸಿದರೆ ಕ್ರುದ್ಧ ಪುರಂದರನೂ ಕೂಡ ನಿನ್ನಿಂದ ಬಿಡಿಸಿಕೊಂಡು ಹೋಗಲಾರ!””

07171032 ಧೃತರಾಷ್ಟ್ರ ಉವಾಚ।
07171032a ತಸ್ಮಿನ್ನಸ್ತ್ರೇ ಪ್ರತಿಹತೇ ದ್ರೋಣೇ ಚೋಪಧಿನಾ ಹತೇ।
07171032c ತಥಾ ದುರ್ಯೋಧನೇನೋಕ್ತೋ ದ್ರೌಣಿಃ ಕಿಮಕರೋತ್ಪುನಃ।।
07171033a ದೃಷ್ಟ್ವಾ ಪಾರ್ಥಾಂಶ್ಚ ಸಂಗ್ರಾಮೇ ಯುದ್ಧಾಯ ಸಮವಸ್ಥಿತಾನ್।
07171033c ನಾರಾಯಣಾಸ್ತ್ರನಿರ್ಮುಕ್ತಾಂಶ್ಚರತಃ ಪೃತನಾಮುಖೇ।।

ಧೃತರಾಷ್ಟ್ರನು ಹೇಳಿದನು: “ಸುಳ್ಳಿನಿಂದ ದ್ರೋಣನು ಹತನಾಗಲು ಮತ್ತು ಆ ಅಸ್ತ್ರವೂ ನಾಶಗೊಳ್ಳಲು, ದುರ್ಯೋಧನನಿಂದ ಹಾಗೆ ಹೇಳಲ್ಪಟ್ಟ ದ್ರೌಣಿಯು ಸಂಗ್ರಾಮದಲ್ಲಿ ಪಾರ್ಥರು ಯುದ್ಧಕ್ಕೆ ಸನ್ನದ್ಧರಾಗಿ ನಾರಾಯಣಾಸ್ತ್ರದಿಂದ ಮುಕ್ತರಾಗಿ ಸೇನೆಯ ಮುಂದೆ ಬರುತ್ತಿದ್ದವರನ್ನು ನೋಡಿ ಪುನಃ ಏನು ಮಾಡಿದನು?”

07171034 ಸಂಜಯ ಉವಾಚ।
07171034a ಜಾನನ್ಪಿತುಃ ಸ ನಿಧನಂ ಸಿಂಹಲಾಂಗೂಲಕೇತನಃ।
07171034c ಸಕ್ರೋಧೋ ಭಯಮುತ್ಸೃಜ್ಯ ಅಭಿದುದ್ರಾವ ಪಾರ್ಷತಂ।।

ಸಂಜಯನು ಹೇಳಿದನು: “ಧ್ವಜದಲ್ಲಿ ಸಿಂಹದ ಬಾಲದ ಚಿಹ್ನೆಯನ್ನು ಹೊಂದಿದ್ದ ಅಶ್ವತ್ಥಾಮನು ತನ್ನ ಪಿತನ ನಿಧನವನ್ನು ಸ್ಮರಿಸಿಕೊಂಡು ಕ್ರೋಧದೊಂದಿಗೆ ಭಯವನ್ನು ತೊರೆದು ಪಾರ್ಷತನ ಮೇಲೆರಗಿದನು.

07171035a ಅಭಿದ್ರುತ್ಯ ಚ ವಿಂಶತ್ಯಾ ಕ್ಷುದ್ರಕಾಣಾಂ ನರರ್ಷಭಃ।
07171035c ಪಂಚಭಿಶ್ಚಾತಿವೇಗೇನ ವಿವ್ಯಾಧ ಪುರುಷರ್ಷಭಂ।।

ನರರ್ಷಭನು ಅವನ ಸಮೀಪಕ್ಕೆ ಹೋಗಿ ಇಪ್ಪತ್ತು ಕ್ಷುದ್ರಕಗಳಿಂದ ಮತ್ತು ಅತಿವೇಗದ ಐದು ಬಾಣಗಳಿಂದ ಆ ಪುರುಷರ್ಷಭನನ್ನು ಹೊಡೆದನು.

07171036a ಧೃಷ್ಟದ್ಯುಮ್ನಸ್ತತೋ ರಾಜನ್ ಜ್ವಲಂತಮಿವ ಪಾವಕಂ।
07171036c ದ್ರೋಣಪುತ್ರಂ ತ್ರಿಷಷ್ಟ್ಯಾ ತು ರಾಜನ್ವಿವ್ಯಾಧ ಪತ್ರಿಣಾಂ।।

ಆಗ ಧೃಷ್ಟದ್ಯುಮ್ನನು ಪಾವಕನಂತೆ ಪ್ರಜ್ವಲಿಸುತ್ತಿರುವ ಅರವತ್ಮೂರು ಪತ್ರಿಗಳಿಂದ ದ್ರೋಣಪುತ್ರನನ್ನು ಪ್ರಹರಿಸಿದನು.

07171037a ಸಾರಥಿಂ ಚಾಸ್ಯ ವಿಂಶತ್ಯಾ ಸ್ವರ್ಣಪುಂಖೈಃ ಶಿಲಾಶಿತೈಃ।
07171037c ಹಯಾಂಶ್ಚ ಚತುರೋಽವಿಧ್ಯಚ್ಚತುರ್ಭಿರ್ನಿಶಿತೈಃ ಶರೈಃ।।

ಬಂಗಾರದ ರೆಕ್ಕೆಗಳುಳ್ಳ ಮಸೆಗಲ್ಲಿನಿಂದ ಹರಿತಮಾಡಲ್ಪಟ್ಟ ಇಪ್ಪತ್ತು ನಿಶಿತ ಶರಗಳಿಂದ ಅವನ ಸಾರಥಿಯನ್ನೂ ನಾಲ್ಕರಿಂದ ಅವನ ನಾಲ್ಕು ಕುದುರೆಗಳನ್ನೂ ಹೊಡೆದನು.

07171038a ವಿದ್ಧ್ವಾ ವಿದ್ಧ್ವಾನದದ್ದ್ರೌಣಿಃ ಕಂಪಯನ್ನಿವ ಮೇದಿನೀಂ।
07171038c ಆದದತ್ಸರ್ವಲೋಕಸ್ಯ ಪ್ರಾಣಾನಿವ ಮಹಾರಣೇ।।

ಹಾಗೆ ಹೊಡೆದವನನ್ನು ಪುನಃ ಹೊಡೆಯುತ್ತಾ ದ್ರೌಣಿಯು ಮೇದಿನಿಯನ್ನು ನಡುಗಿಸುವನೋ ಮತ್ತು ಸರ್ವಲೋಕಗಳ ಪ್ರಾಣಗಳನ್ನು ಹೀರುವನೋ ಎನ್ನುವಂತೆ ಮಹಾರಣದಲ್ಲಿ ಮಹಾನಾದಗೈದನು.

07171039a ಪಾರ್ಷತಸ್ತು ಬಲೀ ರಾಜನ್ ಕೃತಾಸ್ತ್ರಃ ಕೃತನಿಶ್ರಮಃ।
07171039c ದ್ರೌಣಿಮೇವಾಭಿದುದ್ರಾವ ಕೃತ್ವಾ ಮೃತ್ಯುಂ ನಿವರ್ತನಂ।।

ರಾಜನ್! ಬಲಶಾಲಿ ಕೃತಾಸ್ತ್ರ ಕೃತನಿಶ್ರಮ ಪಾರ್ಷತನಾದರೋ ಮೃತ್ಯುವನ್ನೇ ಹಿಂದಿರುಗುವ ಕಾರಣವನ್ನಾಗಿಸಿಕೊಂಡು ದ್ರೌಣಿಯನ್ನೇ ಆಕ್ರಮಣಿಸಿದನು.

07171040a ತತೋ ಬಾಣಮಯಂ ವರ್ಷಂ ದ್ರೋಣಪುತ್ರಸ್ಯ ಮೂರ್ಧನಿ।
07171040c ಅವಾಸೃಜದಮೇಯಾತ್ಮಾ ಪಾಂಚಾಲ್ಯೋ ರಥಿನಾಂ ವರಃ।।

ಆಗ ಅಮೇಯಾತ್ಮ ರಥಿಗಳಲ್ಲಿ ಶ್ರೇಷ್ಠ ಪಾಂಚಾಲ್ಯನು ದ್ರೋಣಪುತ್ರನ ತಲೆಯ ಮೇಲೆ ಬಾಣಮಯ ಮಳೆಯನ್ನೇ ಸುರಿಸಿದನು.

07171041a ತಂ ದ್ರೌಣಿಃ ಸಮರೇ ಕ್ರುದ್ಧಶ್ಚಾದಯಾಮಾಸ ಪತ್ರಿಭಿಃ।
07171041c ವಿವ್ಯಾಧ ಚೈನಂ ದಶಭಿಃ ಪಿತುರ್ವಧಮನುಸ್ಮರನ್।।

ಸಮರದಲ್ಲಿ ಪಿತೃವಧೆಯನ್ನು ಸ್ಮರಿಸಿಕೊಂಡು ದ್ರೌಣಿಯು ಕ್ರುದ್ಧನಾಗಿ ಅವನನ್ನೂ ಹತ್ತು ಪತ್ರಿಗಳಿಂದ ಹೊಡೆದು ಗಾಯಗೊಳಿಸಿದನು.

07171042a ದ್ವಾಭ್ಯಾಂ ಚ ಸುವಿಕೃಷ್ಟಾಭ್ಯಾಂ ಕ್ಷುರಾಭ್ಯಾಂ ಧ್ವಜಕಾರ್ಮುಕೇ।
07171042c ಚಿತ್ತ್ವಾ ಪಾಂಚಾಲರಾಜಸ್ಯ ದ್ರೌಣಿರನ್ಯೈಃ ಸಮಾರ್ದಯತ್।।

ಚೆನ್ನಾಗಿ ಸೆಳೆದು ಬಿಟ್ಟಿದ್ದ ಎರಡು ಕ್ಷುರಗಳಿಂದ ಪಾಂಚಾಲರಾಜನ ಧ್ವಜ ಮತ್ತು ಧನುಸ್ಸುಗಳನ್ನು ತುಂಡರಿಸಿ ದ್ರೌಣಿಯು ಅನ್ಯ ಬಾಣಗಳಿಂದ ಅವನನ್ನು ಗಾಯಗೊಳಿಸಿದನು.

07171043a ವ್ಯಶ್ವಸೂತರಥಂ ಚೈನಂ ದ್ರೌಣಿಶ್ಚಕ್ರೇ ಮಹಾಹವೇ।
07171043c ತಸ್ಯ ಚಾನುಚರಾನ್ ಸರ್ವಾನ್ ಕ್ರುದ್ಧಃ ಪ್ರಾಚ್ಚಾದಯಚ್ಚರೈಃ।।

ಕೂಡಲೇ ಮಹಾಯುದ್ಧದಲ್ಲಿ ದ್ರೌಣಿಯು ಕ್ರುದ್ಧನಾಗಿ ಅವನನ್ನು ಕುದುರೆ, ಸಾರಥಿ ಮತ್ತು ರಥಗಳಿಂದ ವಿಹೀನನನ್ನಾಗಿ ಮಾಡಿ ಅವನ ಅನುಚರರನ್ನು ಶರಗಳಿಂದ ಮುಚ್ಚಿಬಿಟ್ಟನು.

07171044a ಪ್ರದ್ರುದ್ರಾವ ತತಃ ಸೈನ್ಯಂ ಪಾಂಚಾಲಾನಾಂ ವಿಶಾಂ ಪತೇ।
07171044c ಸಂಭ್ರಾಂತರೂಪಮಾರ್ತಂ ಚ ಶರವರ್ಷಪರಿಕ್ಷತಂ।।

ವಿಶಾಂಪತೇ! ಶರವರ್ಷಗಳಿಂದ ಮುಚ್ಚಿಹೋಗಿ ಸಂಭ್ರಾಂತರೂ ಆರ್ತರೂ ಆಗಿ ತೋರುತ್ತಿದ್ದ ಪಾಂಚಾಲ ಸೇನೆಯು ಆಗ ಪಲಾಯನಮಾಡಿತು.

07171045a ದೃಷ್ಟ್ವಾ ಚ ವಿಮುಖಾನ್ಯೋಧಾನ್ಧೃಷ್ಟದ್ಯುಮ್ನಂ ಚ ಪೀಡಿತಂ।
07171045c ಶೈನೇಯೋಽಚೋದಯತ್ತೂರ್ಣಂ ರಣಂ ದ್ರೌಣಿರಥಂ ಪ್ರತಿ।।

ಯೋಧರು ವಿಮುಖರಾಗುತ್ತಿರುವುದನ್ನು ಮತ್ತು ಧೃಷ್ಟದ್ಯುಮ್ನನು ಪೀಡಿತನಾಗಿರುವುದನ್ನು ನೋಡಿ ತಕ್ಷಣವೇ ಶೈನೇಯನು ತನ್ನ ರಥವನ್ನು ದ್ರೌಣಿರಥದ ಕಡೆ ಓಡಿಸಿದನು.

07171046a ಅಷ್ಟಭಿರ್ನಿಶಿತೈಶ್ಚೈವ ಸೋಽಶ್ವತ್ಥಾಮಾನಮಾರ್ದಯತ್।
07171046c ವಿಂಶತ್ಯಾ ಪುನರಾಹತ್ಯ ನಾನಾರೂಪೈರಮರ್ಷಣಂ।
07171046e ವಿವ್ಯಾಧ ಚ ತಥಾ ಸೂತಂ ಚತುರ್ಭಿಶ್ಚತುರೋ ಹಯಾನ್।।

ಅಶ್ವತ್ಥಾಮನನ್ನು ಎದುರಿಸಿ ಅವನನ್ನು ಎಂಟು ನಿಶಿತ ಬಾಣಗಳಿಂದ ಗಾಯಗೊಳಿಸಿದನು. ಪುನಃ ನಾನಾರೂಪದ ಇಪ್ಪತ್ತು ಬಾಣಗಳಿಂದ ಆ ಅಮರ್ಷಣನನ್ನು ಹೊಡೆದು, ಹಾಗೆಯೇ ಅವನ ಸಾರಥಿಯನ್ನೂ ನಾಲ್ಕು ಬಾಣಗಳಿಂದ ನಾಲ್ಕು ಕುದುರೆಗಳನ್ನೂ ಹೊಡೆದನು.

07171047a ಸೋಽತಿವಿದ್ಧೋ ಮಹೇಷ್ವಾಸೋ ನಾನಾಲಿಂಗೈರಮರ್ಷಣಃ।
07171047c ಯುಯುಧಾನೇನ ವೈ ದ್ರೌಣಿಃ ಪ್ರಹಸನ್ವಾಕ್ಯಮಬ್ರವೀತ್।।

ಹೀಗೆ ನಾನಾವಿಧದ ಬಾಣಗಳಿಂದ ಅತಿಯಾಗಿ ಗಾಯಗೊಂಡ ಮಹೇಷ್ವಾಸ ಅಮರ್ಷಣ ದ್ರೌಣಿಯು ನಕ್ಕು ಯುಯುಧಾನನಿಗೆ ಈ ಮಾತನ್ನಾಡಿದನು:

07171048a ಶೈನೇಯಾಭ್ಯವಪತ್ತಿಂ ತೇ ಜಾನಾಮ್ಯಾಚಾರ್ಯಘಾತಿನಃ।
07171048c ನ ತ್ವೇನಂ ತ್ರಾಸ್ಯಸಿ ಮಯಾ ಗ್ರಸ್ತಮಾತ್ಮಾನಮೇವ ಚ।।

“ಶೈನೇಯ! ಆಚಾರ್ಯಘಾತಿನಿಯ ಮೇಲೆ ನಿನಗೆ ಅನುಗ್ರಹಬುದ್ಧಿಯಿದೆ ಎನ್ನುವುದನ್ನು ನಾನು ತಿಳಿದಿದ್ದೇನೆ. ಆದರೆ ನನ್ನ ಹಿಡಿತಕ್ಕೆ ಬಂದಿರುವ ಅವನನ್ನು ಅಥವಾ ನಿನ್ನನ್ನೂ ನೀನು ರಕ್ಷಿಸಲಾರೆ!”

07171049a ಏವಮುಕ್ತ್ವಾರ್ಕರಶ್ಮ್ಯಾಭಂ ಸುಪರ್ವಾಣಂ ಶರೋತ್ತಮಂ।
07171049c ವ್ಯಸೃಜತ್ಸಾತ್ವತೇ ದ್ರೌಣಿರ್ವಜ್ರಂ ವೃತ್ರೇ ಯಥಾ ಹರಿಃ।।

ಹೀಗೆ ಹೇಳಿ ದ್ರೌಣಿಯು ಸೂರ್ಯನ ರಶ್ಮಿಗಳ ಕಾಂತಿಯುಳ್ಳ ಸುತೀಕ್ಷ್ಣ ಉತ್ತಮ ಶರವನ್ನು ವೃತ್ರನಮೇಲೆ ಹರಿಯು ಹೇಗೋ ಹಾಗೆ ಸಾತ್ವತನ ಮೇಲೆ ಪ್ರಯೋಗಿಸಿದನು.

07171050a ಸ ತಂ ನಿರ್ಭಿದ್ಯ ತೇನಾಸ್ತಃ ಸಾಯಕಃ ಸಶರಾವರಂ।
07171050c ವಿವೇಶ ವಸುಧಾಂ ಭಿತ್ತ್ವಾ ಶ್ವಸನ್ಬಿಲಮಿವೋರಗಃ।।

ಅವನು ಪ್ರಯೋಗಿಸಿದ ಆ ಸಾಯಕವು ಕವಚದೊಂದಿಗೆ ಸಾತ್ಯಕಿಯ ದೇಹವನ್ನು ಭೇದಿಸಿ ಭುಸುಗುಟ್ಟುವ ಸರ್ಪವು ಬಿಲವನ್ನು ಹೊಗುವಂತೆ ಭೂಮಿಯನ್ನು ಹೊಕ್ಕಿತು.

07171051a ಸ ಭಿನ್ನಕವಚಃ ಶೂರಸ್ತೋತ್ತ್ರಾರ್ದಿತ ಇವ ದ್ವಿಪಃ।
07171051c ವಿಮುಚ್ಯ ಸಶರಂ ಚಾಪಂ ಭೂರಿವ್ರಣಪರಿಸ್ರವಃ।।

ಭಿನ್ನಕವಚನಾಗಿದ್ದ ಶೂರ ಸಾತ್ಯಕಿಯು ಅಂಕುಶದಿಂದ ತಿವಿಯಲ್ಪಟ್ಟ ಆನೆಯಂತೆ ವ್ಯಥಿತನಾದನು. ಗಾಯದಿಂದ ಅತಿಯಾಗಿ ರಕ್ತಸ್ರಾವವಾಗಲು ಅವನು ಧನುಸ್ಸು ಬಾಣಗಳನ್ನು ಕೆಳಗಿಟ್ಟನು.

07171052a ಸೀದನ್ರುಧಿರಸಿಕ್ತಶ್ಚ ರಥೋಪಸ್ಥ ಉಪಾವಿಶತ್।
07171052c ಸೂತೇನಾಪಹೃತಸ್ತೂರ್ಣಂ ದ್ರೋಣಪುತ್ರಾದ್ರಥಾಂತರಂ।।

ರಕ್ತಸ್ರಾವದಿಂದ ಮೂರ್ಛೆಹೋಗಿ ರಥದಲ್ಲಿಯೇ ಕುಳಿತು ಒರಗಿದನು. ತಕ್ಷಣವೇ ಅವನ ಸಾರಥಿಯು ಅವನನ್ನು ದ್ರೋಣಪುತ್ರನ ರಥದಿಂದ ದೂರಕ್ಕೆ ಕೊಂಡೊಯ್ದನು.

07171053a ಅಥಾನ್ಯೇನ ಸುಪುಂಖೇನ ಶರೇಣ ನತಪರ್ವಣಾ।
07171053c ಆಜಘಾನ ಭ್ರುವೋರ್ಮಧ್ಯೇ ಧೃಷ್ಟದ್ಯುಮ್ನಂ ಪರಂತಪಃ।।

ಅನಂತರ ಪರಂತಪ ಅಶ್ವತ್ಥಾಮನು ಇನ್ನೊಂದು ಸುಂದರ ಪುಂಖಗಳುಳ್ಳ ನತಪರ್ವ ಶರದಿಂದ ಧೃಷ್ಟದ್ಯುಮ್ನನ ಹುಬ್ಬುಗಳ ಮಧ್ಯೆ ಹೊಡೆದನು.

07171054a ಸ ಪೂರ್ವಮತಿವಿದ್ಧಶ್ಚ ಭೃಶಂ ಪಶ್ಚಾಚ್ಚ ಪೀಡಿತಃ।
07171054c ಸಸಾದ ಯುಧಿ ಪಾಂಚಾಲ್ಯೋ ವ್ಯಪಾಶ್ರಯತ ಚ ಧ್ವಜಂ।।

ಮೊದಲೇ ಅತಿಯಾಗಿ ಗಾಯಗೊಂಡಿದ್ದ ಪಾಂಚಾಲ್ಯನು ಇನ್ನೂ ಪೀಡಿತನಾಗಿ ಯುದ್ಧದಲ್ಲಿ ಧ್ವಜವನ್ನು ಹಿಡಿದು ಕುಳಿತುಕೊಂಡನು.

07171055a ತಂ ಮತ್ತಮಿವ ಸಿಂಹೇನ ರಾಜನ್ಕುಂಜರಮರ್ದಿತಂ।
07171055c ಜವೇನಾಭ್ಯದ್ರವಂ ಶೂರಾಃ ಪಂಚ ಪಾಂಡವತೋ ರಥಾಃ।।
07171056a ಕಿರೀಟೀ ಭೀಮಸೇನಶ್ಚ ವೃದ್ಧಕ್ಷತ್ರಶ್ಚ ಪೌರವಃ।
07171056c ಯುವರಾಜಶ್ಚ ಚೇದೀನಾಂ ಮಾಲವಶ್ಚ ಸುದರ್ಶನಃ।
07171056e ಪಂಚಭಿಃ ಪಂಚಭಿರ್ಬಾಣೈರಭ್ಯಘ್ನನ್ಸರ್ವತಃ ಸಮಂ।।

ರಾಜನ್! ಆನೆಯನ್ನು ಪೀಡಿಸುವ ಮದಿಸಿದ ಸಿಂಹದಂತ್ತಿದ್ದ ಅವನನ್ನು ವೇಗದಿಂದ ಐವರು ಶೂರ ಪಾಂಡವ ರಥರು – ಕಿರೀಟೀ, ಭೀಮಸೇನ, ಪೌರವ ವೃದ್ಧಕ್ಷತ್ರ, ಚೇದಿಗಳ ಯುವರಾಜ ಮತ್ತು ಮಾಲವದ ಸುದರ್ಶನ - ಇವರು ಧಾವಿಸಿಬಂದು ಐವರೂ ಐದೈದು ಬಾಣಗಳಿಂದ ಒಂದೇವೇಳೆಯಲ್ಲಿ ಎಲ್ಲಕಡೆಗಳಿಂದ ಅಶ್ವತ್ಥಾಮನನ್ನು ಹೊಡೆದರು.

07171057a ಆಶೀವಿಷಾಭೈರ್ವಿಂಶದ್ಭಿಃ ಪಂಚಭಿಶ್ಚಾಪಿ ತಾಂ ಶರೈಃ।
07171057c ಚಿಚ್ಚೇದ ಯುಗಪದ್ದ್ರೌಣಿಃ ಪಂಚವಿಂಶತಿಸಾಯಕಾನ್।।

ಐವರೂ ಬಿಟ್ಟ ಆ ಇಪ್ಪತ್ತೈದು ಸಾಯಕಗಳನ್ನು ದ್ರೌಣಿಯು ಇಪ್ಪತ್ತೈದು ಶರಗಳಿಂದ ಒಟ್ಟಿಗೇ ಕತ್ತರಿಸಿದನು.

07171058a ಸಪ್ತಭಿಶ್ಚ ಶಿತೈರ್ಬಾಣೈಃ ಪೌರವಂ ದ್ರೌಣಿರಾರ್ದಯತ್।
07171058c ಮಾಲವಂ ತ್ರಿಭಿರೇಕೇನ ಪಾರ್ಥಂ ಷಡ್ಭಿರ್ವೃಕೋದರಂ।।

ಮತ್ತೆ ದ್ರೌಣಿಯು ಏಳು ನಿಶಿತ ಬಾಣಗಳಿಂದ ಪೌರವನನ್ನೂ, ಮೂರರಿಂದ ಮಾಲವನನ್ನೂ, ಒಂದರಿಂದ ಪಾರ್ಥನನ್ನೂ, ಮತ್ತು ಆರರಿಂದ ವೃಕೋದರನನ್ನೂ ಹೊಡೆದನು.

07171059a ತತಸ್ತೇ ವಿವ್ಯಧುಃ ಸರ್ವೇ ದ್ರೌಣಿಂ ರಾಜನ್ಮಹಾರಥಾಃ।
07171059c ಯುಗಪಚ್ಚ ಪೃಥಕ್ಚೈವ ರುಕ್ಮಪುಂಖೈಃ ಶಿಲಾಶಿತೈಃ।।

ರಾಜನ್! ಆಗ ಅವರೆಲ್ಲ ಮಹಾರಥರೂ ದ್ರೌಣಿಯನ್ನು ಒಟ್ಟಾಗಿ ಮತ್ತು ಪ್ರತ್ಯೇಕವಾಗಿ ರುಕ್ಮಪುಂಖ ಶಿಲಾಶಿತಗಳಿಂದ ಹೊಡೆದರು.

07171060a ಯುವರಾಜಸ್ತು ವಿಂಶತ್ಯಾ ದ್ರೌಣಿಂ ವಿವ್ಯಾಧ ಪತ್ರಿಣಾಂ।
07171060c ಪಾರ್ಥಶ್ಚ ಪುನರಷ್ಟಾಭಿಸ್ತಥಾ ಸರ್ವೇ ತ್ರಿಭಿಸ್ತ್ರಿಭಿಃ।।

ಯುವರಾಜನಾದರೋ ದ್ರೌಣಿಯನ್ನು ಇಪ್ಪತ್ತು ಪತ್ರಿಗಳಿಂದ ಹೊಡೆದನು. ಪಾರ್ಥನು ಪುನಃ ಎಂಟರಿಂದ ಮತ್ತು ಎಲ್ಲರೂ ಮೂರು ಮೂರರಿಂದ ಅವನನ್ನು ಹೊಡೆದರು.

07171061a ತತೋಽರ್ಜುನಂ ಷಡ್ಭಿರಥಾಜಘಾನ ದ್ರೌಣಾಯನಿರ್ದಶಭಿರ್ವಾಸುದೇವಂ।
07171061c ಭೀಮಂ ದಶಾರ್ಧೈರ್ಯುವರಾಜಂ ಚತುರ್ಭಿರ್ ದ್ವಾಭ್ಯಾಂ ಚಿತ್ತ್ವಾ ಕಾರ್ಮುಕಂ ಚ ಧ್ವಜಂ ಚ।
07171061e ಪುನಃ ಪಾರ್ಥಂ ಶರವರ್ಷೇಣ ವಿದ್ಧ್ವಾ ದ್ರೌಣಿರ್ಘೋರಂ ಸಿಂಹನಾದಂ ನನಾದ।।

ಅನಂತರ ದ್ರೌಣಾಯನು ಅರ್ಜುನನ್ನು ಆರರಿಂದ, ವಾಸುದೇವನನ್ನು ಹತ್ತರಿಂದ, ಭೀಮನನ್ನು ಹತ್ತರಿಂದ, ಯುವರಾಜನನ್ನು ನಾಲ್ಕರಿಂದ ಹೊಡೆದು ಎರಡರಿಂದ ಅವನ ಧನ್ನುಸ್ಸು-ಧ್ವಜಗಳನ್ನು ಕತ್ತರಿಸಿದನು. ಪುನಃ ಪಾರ್ಥನನ್ನು ಶರವರ್ಷದಿಂದ ಹೊಡೆದು ದ್ರೌಣಿಯು ಘೋರವಾದ ಸಿಂಹನಾದವನ್ನು ಮಾಡಿದನು.

07171062a ತಸ್ಯಾಸ್ಯತಃ ಸುನಿಶಿತಾನ್ಪೀತಧಾರಾನ್ ದ್ರೌಣೇಃ ಶರಾನ್ಪೃಷ್ಠತಶ್ಚಾಗ್ರತಶ್ಚ।
07171062c ಧರಾ ವಿಯದ್ದೌಃ ಪ್ರದಿಶೋ ದಿಶಶ್ಚ ಚನ್ನಾ ಬಾಣೈರಭವನ್ಘೋರರೂಪೈಃ।।

ದ್ರೌಣಿಯು ಪ್ರಯೋಗಿಸುತ್ತಿದ್ದ ಆ ನಿಶಿತವಾದ, ಎಣ್ಣೆಯಲ್ಲಿ ಅದ್ದಿ ಹದಗೊಳಿಸಿದ್ದ ಬಾಣಗಳು ಭೂಮಿ, ಆಕಾಶ, ದಿಕ್ಕು-ಉಪದಿಕ್ಕುಗಳನ್ನೂ ಆವರಿಸಿ ಎಲ್ಲವೂ ಬಾಣಮಯವಾಗಿ ಘೋರರೂಪವಾಗಿ ಕಾಣುತ್ತಿದ್ದವು.

07171063a ಆಸೀನಸ್ಯ ಸ್ವರಥಂ ತೂಗ್ರತೇಜಾಃ ಸುದರ್ಶನಸ್ಯೇಂದ್ರಕೇತುಪ್ರಕಾಶೌ।
07171063c ಭುಜೌ ಶಿರಶ್ಚೇಂದ್ರಸಮಾನವೀರ್ಯಸ್ ತ್ರಿಭಿಃ ಶರೈರ್ಯುಗಪತ್ಸಂಚಕರ್ತ।।

ವೀರ್ಯದಲ್ಲಿ ಇಂದ್ರನ ಸಮಾನನಾಗಿದ್ದ ಉಗ್ರತೇಜಸ್ವಿ ಅಶ್ವತ್ಥಾಮನು ತನ್ನ ರಥದ ಬಳಿಯಿದ್ದ ಸುದರ್ಶನನ ಇಂದ್ರನ ಧ್ವಜಗಳಂತೆ ಪ್ರಕಾಶಮಾನವಾಗಿದ್ದ ಎರಡು ಭುಜಗಳನ್ನೂ ಶಿರಸ್ಸನ್ನೂ ಏಕಕಾಲದಲ್ಲಿ ಮೂರು ಬಾಣಗಳಿಂದ ಹೊಡೆದು ಕತ್ತರಿಸಿದನು.

07171064a ಸ ಪೌರವಂ ರಥಶಕ್ತ್ಯಾ ನಿಹತ್ಯ ಚಿತ್ತ್ವಾ ರಥಂ ತಿಲಶಶ್ಚಾಪಿ ಬಾಣೈಃ।
07171064c ಚಿತ್ತ್ವಾಸ್ಯ ಬಾಹೂ ವರಚಂದನಾಕ್ತೌ ಭಲ್ಲೇನ ಕಾಯಾಚ್ಚಿರ ಉಚ್ಚಕರ್ತ।।

ಅವನು ರಥಶಕ್ತಿಯಿಂದ ಪೌರವನ ರಥವನ್ನು ಬಾಣಗಳಿಂದ ಎಳ್ಳುಕಾಳುಗಳಷ್ಟು ಸಣ್ಣದಾಗಿ ಪುಡಿಪುಡಿಮಾಡಿ, ಚಂದನಗಳಿಂದ ಲೇಪಿತವಾದ ಅವನ ಬಾಹುಗಳನ್ನು ಕತ್ತರಿಸಿ, ಭಲ್ಲದಿಂದ ಅವನ ಶಿರವನ್ನು ದೇಹದಿಂದ ಬೇರ್ಪಡಿಸಿದನು.

07171065a ಯುವಾನಮಿಂದೀವರದಾಮವರ್ಣಂ ಚೇದಿಪ್ರಿಯಂ ಯುವರಾಜಂ ಪ್ರಹಸ್ಯ।
07171065c ಬಾಣೈಸ್ತ್ವರಾವಾನ್ಜ್ವಲಿತಾಗ್ನಿಕಲ್ಪೈರ್ ವಿದ್ಧ್ವಾ ಪ್ರಾದಾನ್ಮೃತ್ಯವೇ ಸಾಶ್ವಸೂತಂ।।

ಅನಂತರ ಆ ವೇಗವಾನನು ಪ್ರಜ್ವಲಿಸುವ ಅಗ್ನಿಯಂತಿರುವ ಬಾಣಗಳಿಂದ ಯುವಕನಾಗಿದ್ದ ನೀಲಕಮಲದ ಬಣ್ಣದ ಚೇದಿಪ್ರಿಯ ಯುವರಾಜನನ್ನು ಹೊಡೆದು ಅವನನ್ನು ಕುದುರೆ-ಸಾರಥಿಗಳೊಂದಿಗೆ ಮೃತ್ಯುಲೋಕಕ್ಕೆ ಕಳುಹಿಸಿದನು.

07171066a ತಾನ್ನಿಹತ್ಯ ರಣೇ ವೀರೋ ದ್ರೋಣಪುತ್ರೋ ಯುಧಾಂ ಪತಿಃ।
07171066c ದಧ್ಮೌ ಪ್ರಮುದಿತಃ ಶಂಖಂ ಬೃಹಂತಮಪರಾಜಿತಃ।।

ಅವರನ್ನು ರಣದಲ್ಲಿ ಸಂಹರಿಸಿ ವೀರ ಯೋಧರ ನಾಯಕ ಅಪರಾಜಿತ ದ್ರೋಣಪುತ್ರನು ಸಂತೋಷಗೊಂಡು ದೊಡ್ಡ ಶಂಖವನ್ನು ಊದಿದನು.

07171067a ತತಃ ಸರ್ವೇ ಚ ಪಾಂಚಾಲಾ ಭೀಮಸೇನಶ್ಚ ಪಾಂಡವಃ।
07171067c ಧೃಷ್ಟದ್ಯುಮ್ನರಥಂ ಭೀತಾಸ್ತ್ಯಕ್ತ್ವಾ ಸಂಪ್ರಾದ್ರವನ್ದಿಶಃ।।

ಅನಂತರ ಎಲ್ಲ ಪಾಂಚಾಲಯೋಧರೂ ಪಾಂಡವ ಭೀಮಸೇನನೂ ಭಯದಿಂದ ಧೃಷ್ಟದ್ಯುಮ್ನನ ರಥವನ್ನು ಬಿಟ್ಟು ದಿಕ್ಕಾಪಾಲಾಗಿ ಓಡಿ ಹೋದರು.

07171068a ತಾನ್ಪ್ರಭಗ್ನಾಂಸ್ತಥಾ ದ್ರೌಣಿಃ ಪೃಷ್ಠತೋ ವಿಕಿರಂ ಶರೈಃ।
07171068c ಅಭ್ಯವರ್ತತ ವೇಗೇನ ಕಾಲವತ್ಪಾಂಡುವಾಹಿನೀಂ।।

ಓಡಿಹೋಗುತ್ತಿರುವವರ ಮೇಲೆ ದ್ರೌಣಿಯು ಶರಗಳನ್ನು ಸುರಿಸಿ, ಕಾಲನಂತೆ ಪಾಂಡವಸೇನೆಯನ್ನು ಹಿಂದಿನಿಂದ ಬೆನ್ನಟ್ಟಿ ಹೋದನು.

07171069a ತೇ ವಧ್ಯಮಾನಾಃ ಸಮರೇ ದ್ರೋಣಪುತ್ರೇಣ ಕ್ಷತ್ರಿಯಾಃ।
07171069c ದ್ರೋಣಪುತ್ರಂ ಭಯಾದ್ರಾಜನ್ದಿಕ್ಷು ಸರ್ವಾಸು ಮೇನಿರೇ।।

ರಾಜನ್! ದ್ರೋಣಪುತ್ರನಿಂದ ವಧಿಸಲ್ಪಡುತ್ತಿರುವ ಆ ಕ್ಷತ್ರಿಯರು ಸಮರದಲ್ಲಿ ದ್ರೋಣಪುತ್ರನ ಭಯದಿಂದ ಎಲ್ಲ ದಿಕ್ಕುಗಳಿಗೆ ಓಡಿ ಹೋದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣಪರ್ವಣಿ ನಾರಾಯಣಾಸ್ತ್ರಮೋಕ್ಷಣಪರ್ವಣಿ ಅಶ್ವತ್ಥಾಮಪರಾಕ್ರಮೇ ಏಕಸಪ್ತತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣಪರ್ವದಲ್ಲಿ ನಾರಾಯಣಾಸ್ತ್ರಮೋಕ್ಷಣಪರ್ವದಲ್ಲಿ ಅಶ್ವತ್ಥಾಮಪರಾಕ್ರಮ ಎನ್ನುವ ನೂರಾಎಪ್ಪತ್ತೊಂದನೇ ಅಧ್ಯಾಯವು.