ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ನಾರಾಯಣಾಸ್ತ್ರಮೋಕ್ಷ ಪರ್ವ
ಅಧ್ಯಾಯ 170
ಸಾರ
ಅಶ್ವತ್ಥಾಮನಿಂದ ನಾರಾಯಣಾಸ್ತ್ರ ಪ್ರಯೋಗ (1-24). ನಿರಾಶನಾದ ಯುಧಿಷ್ಠಿರನು ತಾನು ಅಗ್ನಿಪ್ರವೇಶಮಾಡುತ್ತೇನೆ ಎಂದುದು (21-36). ವಿರೋಧಿಸುವವರನ್ನು ಈ ಅಸ್ತ್ರವು ವಧಿಸುತ್ತದೆಯಾದುದರಿಂದ ಎಲ್ಲರೂ ಭೂಮಿಯ ಮೇಲೆ ನಿಂತು ಆಯುಧಗಳನ್ನು ಬಿಸುಟು ಅಸ್ತ್ರಕ್ಕೆ ಶರಣಾಗತರಾಗಲು ಕೃಷ್ಣನು ಹೇಳಿದುದು (37-42). ಆದರೆ ಭೀಮಸೇನನು ಅಸ್ತ್ರದೊಡನೆ ಹೋರಾಡಲು ಮುಂದಾದುದು (43-51). ಪಾಂಡವಸೇನೆಯು ಅಸ್ತ್ರತ್ಯಾಗ ಮಾಡಲು ನಾರಾಯಣಾಸ್ತ್ರವು ಆಕ್ರಮಣಿಸುತ್ತಿದ್ದ ಭೀಮಸೇನನ ಮೇಲೆ ಬಿದ್ದುದು, ಸೇನೆಗಳ ಹಾಹಾಕಾರ (52-61).
07170001 ಸಂಜಯ ಉವಾಚ।
07170001a ತತಃ ಸ ಕದನಂ ಚಕ್ರೇ ರಿಪೂಣಾಂ ದ್ರೋಣನಂದನಃ।
07170001c ಯುಗಾಂತೇ ಸರ್ವಭೂತಾನಾಂ ಕಾಲಸೃಷ್ಟ ಇವಾಂತಕಃ।।
ಸಂಜಯನು ಹೇಳಿದನು: “ಅನಂತರ ದ್ರೋಣನಂದನನು ಯುಗಾಂತದಲ್ಲಿ ಸರ್ವಭೂತಗಳನ್ನೂ ಕೊನೆಗೊಳಿಸುವ ಅಂತಕನಂತೆ ಶತ್ರುಗಳೊಂದಿಗೆ ಕದನವನ್ನು ನಡೆಸಿದನು.
07170002a ಧ್ವಜದ್ರುಮಂ ಶಸ್ತ್ರಶೃಂಗಂ ಹತನಾಗಮಹಾಶಿಲಂ।
07170002c ಅಶ್ವಕಿಂಪುರುಷಾಕೀರ್ಣಂ ಶರಾಸನಲತಾವೃತಂ।।
07170003a ಶೂಲಕ್ರವ್ಯಾದಸಂಘುಷ್ಟಂ ಭೂತಯಕ್ಷಗಣಾಕುಲಂ।
07170003c ನಿಹತ್ಯ ಶಾತ್ರವಾನ್ಭಲ್ಲೈಃ ಸೋಽಚಿನೋದ್ದೇಹಪರ್ವತಂ।।
ಅವನು ಭಲ್ಲಗಳಿಂದ ಶತ್ರುಗಳನ್ನು ಸಂಹರಿಸಿ ದೇಹಗಳ ಪರ್ವತವನ್ನೇ ಸೃಷ್ಟಿಸಿದನು. ಧ್ವಜಗಳೇ ಆ ಪರ್ವತದ ವೃಕ್ಷಗಳಾಗಿದ್ದವು, ಶಸ್ತ್ರಗಳೇ ಶಿಖರಗಳಾಗಿದ್ದವು, ಸತ್ತುಹೋಗಿದ್ದ ಆನೆಗಳೇ ಕಲ್ಲುಬಂಡೆಗಳಾಗಿದ್ದವು, ಅಶ್ವಗಳು ಕಿಂಪುರುಷರ ಗುಂಪುಗಳಾಗಿದ್ದವು, ಭತ್ತಳಿಕೆಗಳು ಲತಾವಾಟಿಕೆಗಳಾಗಿದ್ದವು, ಶೂಲಗಳು ಮಾಂಸಾಹಾರಿ ಪಕ್ಷಿಗಳ ಸಂಕುಲಗಳಾಗಿದ್ದವು ಮತ್ತು ಭೂತಯಕ್ಷಗಣಾಕುಲಗಳಾಗಿದ್ದವು.
07170004a ತತೋ ವೇಗೇನ ಮಹತಾ ವಿನದ್ಯ ಸ ನರರ್ಷಭಃ।
07170004c ಪ್ರತಿಜ್ಞಾಂ ಶ್ರಾವಯಾಮಾಸ ಪುನರೇವ ತವಾತ್ಮಜಂ।।
ಆಗ ಮಹಾವೇಗದಿಂದ ಆ ನರರ್ಷಭನು ಗರ್ಜಿಸಿ ತನ್ನ ಪ್ರತಿಜ್ಞೆಯನ್ನು ಪುನಃ ನಿನ್ನ ಮಗನಿಗೆ ಕೇಳಿಸಿದನು.
07170005a ಯಸ್ಮಾದ್ಯುಧ್ಯಂತಮಾಚಾರ್ಯಂ ಧರ್ಮಕಂಚುಕಮಾಸ್ಥಿತಃ।
07170005c ಮುಂಚ ಶಸ್ತ್ರಮಿತಿ ಪ್ರಾಹ ಕುಂತೀಪುತ್ರೋ ಯುಧಿಷ್ಠಿರಃ।।
07170006a ತಸ್ಮಾತ್ಸಂಪಶ್ಯತಸ್ತಸ್ಯ ದ್ರಾವಯಿಷ್ಯಾಮಿ ವಾಹಿನೀಂ।
07170006c ವಿದ್ರಾವ್ಯ ಸತ್ಯಂ ಹಂತಾಸ್ಮಿ ಪಾಪಂ ಪಾಂಚಾಲ್ಯಮೇವ ತು।।
“ಧರ್ಮದ ಅಂಗಿಯನ್ನು ತೊಟ್ಟು ಕುಂತೀಪುತ್ರ ಯುಧಿಷ್ಠಿರನು ಯುದ್ಧಮಾಡುತ್ತಿದ್ದ ಆಚಾರ್ಯನಿಗೆ ಶಸ್ತ್ರವನ್ನು ಬಿಡು! ಎಂದು ಹೇಳಿದುದಕ್ಕಾಗಿ ಅವನು ನೋಡುತ್ತಿರುವಂತೆಯೇ ಅವನ ಸೇನೆಯನ್ನು ಪಲಾಯನಗೊಳಿಸುತ್ತೇನೆ! ಅವರೆಲ್ಲರನ್ನೂ ಓಡಿಸಿ ನಂತರ ಆ ಪಾಪಿ ಪಾಂಚಾಲ್ಯನನ್ನು ವಧಿಸುತ್ತೇನೆ ಕೂಡ!
07170007a ಸರ್ವಾನೇತಾನ್ ಹನಿಷ್ಯಾಮಿ ಯದಿ ಯೋತ್ಸ್ಯಂತಿ ಮಾಂ ರಣೇ।
07170007c ಸತ್ಯಂ ತೇ ಪ್ರತಿಜಾನಾಮಿ ಪರಾವರ್ತಯ ವಾಹಿನೀಂ।।
ನನ್ನೊಡನೆ ರಣದಲ್ಲಿ ಯಾರ್ಯಾರು ಯುದ್ಧಮಾಡುತ್ತಾರೋ ಅವರೆಲ್ಲರನ್ನೂ ಸಂಹರಿಸುತ್ತೇನೆ. ನಿನಗೆ ಸತ್ಯವನ್ನೇ ತಿಳಿಸುತ್ತಿದ್ದೇನೆ. ಸೇನೆಯನ್ನು ಹಿಂದಿರುಗಿಸು!”
07170008a ತಚ್ಛೃತ್ವಾ ತವ ಪುತ್ರಸ್ತು ವಾಹಿನೀಂ ಪರ್ಯವರ್ತಯತ್।
07170008c ಸಿಂಹನಾದೇನ ಮಹತಾ ವ್ಯಪೋ್ಹ್ಯ ಸುಮಹದ್ಭಯಂ।।
ಅದನ್ನು ಕೇಳಿದ ನಿನ್ನ ಮಗನಾದರೋ ಮಹಾಭಯವನ್ನು ಕಳೆದುಕೊಂಡು ಮಹಾ ಸಿಂಹನಾದದಿಂದ ಸೇನೆಯನ್ನು ಹಿಂದೆ ಕರೆದನು.
07170009a ತತಃ ಸಮಾಗಮೋ ರಾಜನ್ಕುರುಪಾಂಡವಸೇನಯೋಃ।
07170009c ಪುನರೇವಾಭವತ್ತೀವ್ರಃ ಪೂರ್ಣಸಾಗರಯೋರಿವ।।
ರಾಜನ್! ಆಗ ಕುರುಪಾಂಡವ ಸೇನೆಗಳ ನಡುವೆ ತುಂಬಿದ ಎರಡು ಸಮುದ್ರಗಳ ನಡುವೆ ಹೇಗೋ ಹಾಗೆ ಪುನಃ ತೀವ್ರ ಯುದ್ಧವು ಪ್ರಾರಂಭವಾಯಿತು.
07170010a ಸಂರಬ್ಧಾ ಹಿ ಸ್ಥಿರೀಭೂತಾ ದ್ರೋಣಪುತ್ರೇಣ ಕೌರವಾಃ।
07170010c ಉದಗ್ರಾಃ ಪಾಂಡುಪಾಂಚಾಲಾ ದ್ರೋಣಸ್ಯ ನಿಧನೇನ ಚ।।
ದ್ರೋಣಪುತ್ರನಿಂದಾಗಿ ಕೌರವರು ರೋಷಾವೇಶದಿಂದ ಸುಸ್ಥಿರರಾಗಿ ನಿಂತಿದ್ದರು. ದ್ರೋಣನ ನಿಧನದಿಂದಾಗಿ ಪಾಂಡು-ಪಾಂಚಾಲರು ಉದ್ಧತರಾಗಿದ್ದರು.
07170011a ತೇಷಾಂ ಪರಮಹೃಷ್ಟಾನಾಂ ಜಯಮಾತ್ಮನಿ ಪಶ್ಯತಾಂ।
07170011c ಸಂರಬ್ಧಾನಾಂ ಮಹಾವೇಗಃ ಪ್ರಾದುರಾಸೀದ್ರಣಾಜಿರೇ।।
ತಮಗೇ ಜಯವನ್ನು ಕಾಣುತ್ತಿದ್ದ ಆ ಎರಡು ಪರಮಹೃಷ್ಟ ಕೋಪಿಷ್ಟರ ನಡುವೆ ಮಹಾವೇಗದ ಯುದ್ಧವು ನಡೆಯಿತು.
07170012a ಯಥಾ ಶಿಲೋಚ್ಛಯೇ ಶೈಲಃ ಸಾಗರೇ ಸಾಗರೋ ಯಥಾ।
07170012c ಪ್ರತಿಹನ್ಯೇತ ರಾಜೇಂದ್ರ ತಥಾಸನ್ಕುರುಪಾಂಡವಾಃ।।
ರಾಜನ್! ಒಂದು ಪರ್ವತವು ಇನ್ನೊಂದು ಪರ್ವತವನ್ನು ಅಥವಾ ಒಂದು ಸಾಗರವು ಇನ್ನೊಂದು ಸಾಗರವನ್ನು ತಾಗುವಂತೆ ಕುರುಪಾಂಡವರ ಮಧ್ಯೆ ಹೊಡೆದಾಟವು ನಡೆಯಿತು.
07170013a ತತಃ ಶಂಖಸಹಸ್ರಾಣಿ ಭೇರೀಣಾಮಯುತಾನಿ ಚ।
07170013c ಅವಾದಯಂತ ಸಂಹೃಷ್ಟಾಃ ಕುರುಪಾಂಡವಸೈನಿಕಾಃ।।
ಆಗ ಸಂಹೃಷ್ಟ ಕುರುಪಾಂಡವ ಸೈನಿಕರು ಸಹಸ್ರಾರು ಶಂಖಗಳನ್ನೂ, ಕೋಟಿಗಟ್ಟಲೆ ಭೇರಿಗಳನ್ನೂ ಬಾರಿಸಿದರು.
07170014a ತತೋ ನಿರ್ಮಥ್ಯಮಾನಸ್ಯ ಸಾಗರಸ್ಯೇವ ನಿಸ್ವನಃ।
07170014c ಅಭವತ್ತಸ್ಯ ಸೈನ್ಯಸ್ಯ ಸುಮಹಾನದ್ಭುತೋಪಮಃ।।
ಮಂದರಪರ್ವತವನ್ನು ಕಡೆಗೋಲನ್ನಾಗಿಸಿ ಸಾಗರವನ್ನು ಕಡೆದಾಗ ಉಂಟಾದ ಶಬ್ಧದಂತೆ ಆ ಸೇನೆಗಳಿಂದ ಅದ್ಭುತ ಮಹಾನಿನಾದವು ಕೇಳಿಬಂದಿತು.
07170015a ಪ್ರಾದುಶ್ಚಕ್ರೇ ತತೋ ದ್ರೌಣಿರಸ್ತ್ರಂ ನಾರಾಯಣಂ ತದಾ।
07170015c ಅಭಿಸಂಧಾಯ ಪಾಂಡೂನಾಂ ಪಾಂಚಾಲಾನಾಂ ಚ ವಾಹಿನೀಂ।।
ಆಗ ದ್ರೌಣಿಯು ಪಾಂಡವರ ಮತ್ತು ಪಾಂಚಾಲರ ಸೇನೆಗಳನ್ನು ಗುರಿಯಾಗಿಸಿ ನಾರಾಯಣಾಸ್ತ್ರವನ್ನು ಪ್ರಯೋಗಿಸಿದನು.
07170016a ಪ್ರಾದುರಾಸಂಸ್ತತೋ ಬಾಣಾ ದೀಪ್ತಾಗ್ರಾಃ ಖೇ ಸಹಸ್ರಶಃ।
07170016c ಪಾಂಡವಾನ್ಭಕ್ಷಯಿಷ್ಯಂತೋ ದೀಪ್ತಾಸ್ಯಾ ಇವ ಪನ್ನಗಾಃ।।
ಅದರಿಂದ ಆಕಾಶದಲ್ಲಿ ಸಹಸ್ರಾರು ಉರಿಯುತ್ತಿರುವ ಮುಖಗಳುಳ್ಳ ಬಾಣಗಳು ಪಾಂಡವರನ್ನು ಭಕ್ಷಿಸುವವೋ ಎಂಬಂತಿದ್ದ ಉರಿಯುತ್ತಿರುವ ಹೆಡೆಗಳ ಸರ್ಪಗಳಂತೆ ಕಾಣಿಸಿಕೊಂಡವು.
07170017a ತೇ ದಿಶಃ ಖಂ ಚ ಸೈನ್ಯಂ ಚ ಸಮಾವೃಣ್ವನ್ಮಹಾಹವೇ।
07170017c ಮುಹೂರ್ತಾದ್ಭಾಸ್ಕರಸ್ಯೇವ ರಾಜಽಲ್ಲೋಕಂ ಗಭಸ್ತಯಃ।।
ರಾಜನ್! ಸೂರ್ಯನ ಕಿರಣಗಳು ಬಹಳ ಬೇಗ ಲೋಕವನ್ನೆಲ್ಲಾ ಹರಡಿಕೊಳ್ಳುವಂತೆ ಆ ಬಾಣಗಳು ಮುಹೂರ್ತಮಾತ್ರದಲ್ಲಿ ಆಕಾಶವನ್ನೂ, ದಿಕ್ಕುಗಳನ್ನೂ, ಸೇನೆಯನ್ನೂ ಆವರಿಸಿದವು.
07170018a ತಥಾಪರೇ ದ್ಯೋತಮಾನಾ ಜ್ಯೋತೀಂಷೀವಾಂಬರೇಽಮಲೇ।
07170018c ಪ್ರಾದುರಾಸನ್ಮಹೀಪಾಲ ಕಾರ್ಷ್ಣಾಯಸಮಯಾ ಗುಡಾಃ।।
ಮಹೀಪಾಲ! ಅಮಲ ಆಕಾಶದಲ್ಲಿ ಬೆಳಗುವ ನಕ್ಷತ್ರಗಳಂತೆ ಉಕ್ಕಿನ ಚಂಡುಗಳು ಪ್ರಾದುರ್ಭವಿಸಿದವು.
07170019a ಚತುರ್ದಿಶಂ ವಿಚಿತ್ರಾಶ್ಚ ಶತಘ್ನ್ಯೋಽಥ ಹುತಾಶದಾಃ।
07170019c ಚಕ್ರಾಣಿ ಚ ಕ್ಷುರಾಂತಾನಿ ಮಂಡಲಾನೀವ ಭಾಸ್ವತಃ।।
ನಾಲ್ಕೂ ದಿಕ್ಕುಗಳಲ್ಲಿ ಉರಿಯುತ್ತಿರುವ ವಿಚಿತ್ರ ಶತಘ್ನಗಳೂ, ಖಡ್ಗಗಳಂತಹ ಅಲಗುಗಳುಳ್ಳ ಚಕ್ರಗಳೂ ಮಂಡಲಾಕಾರದಲ್ಲಿ ಹೊಳೆಯತೊಡಗಿದವು.
07170020a ಶಸ್ತ್ರಾಕೃತಿಭಿರಾಕೀರ್ಣಮತೀವ ಭರತರ್ಷಭ।
07170020c ದೃಷ್ಟ್ವಾಂತರಿಕ್ಷಮಾವಿಗ್ನಾಃ ಪಾಂಡುಪಾಂಚಾಲಸೃಂಜಯಾಃ।।
ಭರತರ್ಷಭ! ಶಸ್ತ್ರಗಳ ಆಕೃತಿಗಳಿಂದ ತುಂಬಿಹೋಗಿದ್ದ ಅಂತರಿಕ್ಷವನ್ನು ನೋಡಿ ಪಾಂಡವ-ಪಾಂಚಾಲ-ಸೃಂಜಯರು ಅತೀವ ಉದ್ವಿಗ್ನರಾದರು.
07170021a ಯಥಾ ಯಥಾ ಹ್ಯಯುಧ್ಯಂತ ಪಾಂಡವಾನಾಂ ಮಹಾರಥಾಃ।
07170021c ತಥಾ ತಥಾ ತದಸ್ತ್ರಂ ವೈ ವ್ಯವರ್ಧತ ಜನಾಧಿಪ।।
ಜನಾಧಿಪ! ಹೇಗೆ ಹೇಗೆ ಪಾಂಡವ ಮಹಾರಥರು ಯುದ್ಧಮಾಡುತ್ತಿದ್ದರೋ ಹಾಗೆ ಹಾಗೆ ಆ ಅಸ್ತ್ರವು ವರ್ಧಿಸುತ್ತಿತ್ತು.
07170022a ವಧ್ಯಮಾನಾಸ್ತಥಾಸ್ತ್ರೇಣ ತೇನ ನಾರಾಯಣೇನ ವೈ।
07170022c ದಹ್ಯಮಾನಾನಲೇನೇವ ಸರ್ವತೋಽಭ್ಯರ್ದಿತಾ ರಣೇ।।
ಆ ನಾರಾಯಣಾಸ್ತ್ರದಿಂದ ವಧಿಸಲ್ಪಡುತ್ತಿದ್ದ ಸೇನೆಗಳು ರಣದಲ್ಲಿ ಬೆಂಕಿಯಿಂದ ಸುಡಲ್ಪಡುತ್ತಿದ್ದಂತೆ ಸರ್ವಾಂಗಗಳಲ್ಲಿಯೂ ಪೀಡಿತಗೊಂಡವು.
07170023a ಯಥಾ ಹಿ ಶಿಶಿರಾಪಾಯೇ ದಹೇತ್ಕಕ್ಷಂ ಹುತಾಶನಃ।
07170023c ತಥಾ ತದಸ್ತ್ರಂ ಪಾಂಡೂನಾಂ ದದಾಹ ಧ್ವಜಿನೀಂ ಪ್ರಭೋ।।
ಪ್ರಭೋ! ಛಳಿಗಾಲದ ಅಂತ್ಯದಲ್ಲಿ ಅಗ್ನಿಯು ಒಣಹುಲ್ಲನ್ನು ಸುಡುವಂತೆ ಆ ಅಸ್ತ್ರವು ಪಾಂಡವರ ಸೇನೆಯನ್ನು ಸುಡತೊಡಗಿತು.
07170024a ಆಪೂರ್ಯಮಾಣೇನಾಸ್ತ್ರೇಣ ಸೈನ್ಯೇ ಕ್ಷೀಯತಿ ಚಾಭಿಭೋ।
071700 24c ಜಗಾಮ ಪರಮಂ ತ್ರಾಸಂ ಧರ್ಮಪುತ್ರೋ ಯುಧಿಷ್ಠಿರಃ।।
ವಿಭೋ! ಸರ್ವತ್ರ ತುಂಬಿಹೋಗಿದ್ದ ಆ ಅಸ್ತ್ರದಿಂದ ಸೈನ್ಯವು ಕ್ಷೀಣಿಸುತ್ತಿರಲು ಧರ್ಮಪುತ್ರ ಯುಧಿಷ್ಠಿರನು ಪರಮ ಭಯಭೀತನಾದನು.
07170025a ದ್ರವಮಾಣಂ ತು ತತ್ಸೈನ್ಯಂ ದೃಷ್ಟ್ವಾ ವಿಗತಚೇತನಂ।
07170025c ಮಧ್ಯಸ್ಥತಾಂ ಚ ಪಾರ್ಥಸ್ಯ ಧರ್ಮಪುತ್ರೋಽಬ್ರವೀದಿದಂ।।
ಬುದ್ಧಿಕಳೆದುಕೊಂಡು ಓಡಿಹೋಗುತ್ತಿರುವ ಆ ಸೈನ್ಯವನ್ನೂ ತಟಸ್ಥಭಾವದಿಂದಿದ್ದ ಪಾರ್ಥನನ್ನೂ ನೋಡಿ ಧರ್ಮಪುತ್ರನು ಹೀಗೆಂದನು:
07170026a ಧೃಷ್ಟದ್ಯುಮ್ನ ಪಲಾಯಸ್ವ ಸಹ ಪಾಂಚಾಲಸೇನಯಾ।
07170026c ಸಾತ್ಯಕೇ ತ್ವಂ ಚ ಗಚ್ಚಸ್ವ ವೃಷ್ಣ್ಯಂಧಕವೃತೋ ಗೃಹಾನ್।।
“ಧೃಷ್ಟದ್ಯುಮ್ನ! ನೀನು ಪಾಂಚಾಲಸೇನೆಯೊಂದಿಗೆ ಪಲಾಯನಮಾಡು. ಸಾತ್ಯಕೇ! ನೀನು ವೃಷ್ಣಿ-ಅಂಧಕರಿಂದ ಕೂಡಿ ನಿನ್ನ ನಿವಾಸಕ್ಕೆ ಹೊರಟುಹೋಗು!
07170027a ವಾಸುದೇವೋಽಪಿ ಧರ್ಮಾತ್ಮಾ ಕರಿಷ್ಯತ್ಯಾತ್ಮನಃ ಕ್ಷಮಂ।
07170027c ಉಪದೇಷ್ಟುಂ ಸಮರ್ಥೋಽಯಂ ಲೋಕಸ್ಯ ಕಿಮುತಾತ್ಮನಃ।।
ಧರ್ಮಾತ್ಮ ವಾಸುದೇವನಾದರೋ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಾನೆ. ಲೋಕಕ್ಕೇ ಉಪದೇಶಮಾಡಲು ಸಮರ್ಥನಾದ ಅವನಿಗೆ ತನ್ನನ್ನು ರಕ್ಷಿಸಿಕೊಳ್ಳುವುದರಲ್ಲಿ ಏನಿದೆ?
07170028a ಸಂಗ್ರಾಮಸ್ತು ನ ಕರ್ತವ್ಯಃ ಸರ್ವಸೈನ್ಯಾನ್ಬ್ರವೀಮಿ ವಃ।
07170028c ಅಹಂ ಹಿ ಸಹ ಸೋದರ್ಯೈಃ ಪ್ರವೇಕ್ಷ್ಯೇ ಹವ್ಯವಾಹನಂ।।
ಸರ್ವ ಸೇನೆಗಳಿಗೂ ಹೇಳುತ್ತಿದ್ದೇನೆ. ಇನ್ನು ಮುಂದೆ ಯುದ್ಧಮಾಡಬೇಡಿರಿ. ಏಕೆಂದರೆ ನಾನು ನನ್ನ ಸಹೋದರರೊಂದಿಗೆ ಅಗ್ನಿಪ್ರವೇಶಮಾಡುತ್ತೇನೆ!
07170029a ಭೀಷ್ಮದ್ರೋಣಾರ್ಣವಂ ತೀರ್ತ್ವಾ ಸಂಗ್ರಾಮಂ ಭೀರುದುಸ್ತರಂ।
07170029c ಅವಸತ್ಸ್ಯಾಮ್ಯಸಲಿಲೇ ಸಗಣೋ ದ್ರೌಣಿಗೋಷ್ಪದೇ।।
ಹೇಡಿಗಳಿಗೆ ದಾಟಲಸಾಧ್ಯ ಭೀಷ್ಮ-ದ್ರೋಣರ ಸಾಗರವೆಂಬ ರಣವನ್ನು ದಾಟಿದ ನಾವು ಈಗ ಸೇನೆಗಳೊಂದಿಗೆ ದ್ರೌಣಿಯೆಂಬ ಹಸುವಿನ ಗೊರಸಿನ ಹಳ್ಳದ ನೀರಿನಲ್ಲಿ ಮುಳುಗಿಹೋಗುತ್ತಿದ್ದೇವೆ!
07170030a ಕಾಮಃ ಸಂಪದ್ಯತಾಮಸ್ಯ ಬೀಭತ್ಸೋರಾಶು ಮಾಂ ಪ್ರತಿ।
07170030c ಕಲ್ಯಾಣವೃತ್ತ ಆಚಾರ್ಯೋ ಮಯಾ ಯುಧಿ ನಿಪಾತಿತಃ।।
ಕಲ್ಯಾಣಸಂಪನ್ನ ಆಚಾರ್ಯನನ್ನು ನಾನು ಯುದ್ಧದಲ್ಲಿ ಸಂಹರಿಸಿದುದರ ಪರಿಣಾಮವಾಗಿ ಬೀಭತ್ಸುವು ನನ್ನ ಕುರಿತು ಏನು ಆಶಯಪಟ್ಟಿದ್ದನೋ ಅದು ಈಗಲೇ ಆಗಿಹೋಗಲಿ!
07170031a ಯೇನ ಬಾಲಃ ಸ ಸೌಭದ್ರೋ ಯುದ್ಧಾನಾಮವಿಶಾರದಃ।
07170031c ಸಮರ್ಥೈರ್ಬಹುಭಿಃ ಕ್ರೂರೈರ್ಘಾತಿತೋ ನಾಭಿಪಾಲಿತಃ।।
07170032a ಯೇನಾವಿಬ್ರುವತಾ ಪ್ರಶ್ನಂ ತಥಾ ಕೃಷ್ಣಾ ಸಭಾಂ ಗತಾ।
07170032c ಉಪೇಕ್ಷಿತಾ ಸಪುತ್ರೇಣ ದಾಸಭಾವಂ ನಿಯಚ್ಚತೀ।।
07170033a ಜಿಘಾಂಸುರ್ಧಾರ್ತರಾಷ್ಟ್ರಶ್ಚ ಶ್ರಾಂತೇಷ್ವಶ್ವೇಷು ಫಲ್ಗುನಂ।
07170033c ಕವಚೇನ ತಥಾ ಯುಕ್ತೋ ರಕ್ಷಾರ್ಥಂ ಸೈಂಧವಸ್ಯ ಚ।।
07170034a ಯೇನ ಬ್ರಹ್ಮಾಸ್ತ್ರವಿದುಷಾ ಪಾಂಚಾಲಾಃ ಸತ್ಯಜಿನ್ಮುಖಾಃ।
07170034c ಕುರ್ವಾಣಾ ಮಜ್ಜಯೇ ಯತ್ನಂ ಸಮೂಲಾ ವಿನಿಪಾತಿತಾಃ।।
07170035a ಯೇನ ಪ್ರವ್ರಾಜ್ಯಮಾನಾಶ್ಚ ರಾಜ್ಯಾದ್ವಯಮಧರ್ಮತಃ।
07170035c ನಿವಾರ್ಯಮಾಣೇನಾಸ್ಮಾಭಿರನುಗಂತುಂ ತದೇಷಿತಾಃ।।
07170036a ಯೋಽಸಾವತ್ಯಂತಮಸ್ಮಾಸು ಕುರ್ವಾಣಃ ಸೌಹೃದಂ ಪರಂ।
07170036c ಹತಸ್ತದರ್ಥೇ ಮರಣಂ ಗಮಿಷ್ಯಾಮಿ ಸಬಾಂಧವಃ।।
ಯುದ್ಧದಲ್ಲಿ ವಿಶಾರದನಾಗಿರದ ಬಾಲಕ ಸೌಭದ್ರನು ಅನೇಕ ಸಮರ್ಥ ಕ್ರೂರರಿಂದ ಕೊಲ್ಲಲ್ಪಡುತ್ತಿದ್ದಾಗಲೂ ರಕ್ಷಣೆಯನ್ನು ನೀಡದೇ ಇದ್ದ, ಸಭೆಗೆ ಬಂದಾಗ ದಾಸಭಾವವನ್ನು ಕಳೆದುಕೊಳ್ಳಲು ದ್ರೌಪದಿಯು ಪ್ರಶ್ನೆಯನ್ನು ಕೇಳಿದಾಗ ಪುತ್ರನೊಡನೆ ಉತ್ತರವನ್ನು ನೀಡದೇ ಇದ್ದ, ಸೈಂಧವನನ್ನು ರಕ್ಷಿಸಲೋಸುಗ ಕುದುರೆಗಳು ಬಳಲಿದ್ದ ಫಲ್ಗುನನನ್ನು ಕೊಲ್ಲಲು ಬಯಸಿದ್ದ ಧಾರ್ತರಾಷ್ಟ್ರನಿಗೆ ಕವಚವನ್ನು ತೊಡಿಸಿದ್ದ, ನನ್ನ ವಿಜಯಕ್ಕಾಗಿ ಸರ್ವಯತ್ನವನ್ನೂ ಮಾಡುತ್ತಿದ್ದ, ಸತ್ಯಜಿತನೇ ಮೊದಲಾದ ಪಾಂಚಾಲರನ್ನು ಬ್ರಹ್ಮಾಸ್ತ್ರಜ್ಞಾನದಿಂದ ನಿಃಶೇಷವಾಗಿ ವಿನಾಶಗೊಳಿಸಿದ್ದ, ಅಧರ್ಮದಿಂದ ನಮ್ಮನ್ನು ರಾಜ್ಯಭ್ರಷ್ಟರನ್ನಾಗಿಸಿದಾಗ ನಮ್ಮವರಿಂದ ತಡೆಯಲ್ಪಟ್ಟರೂ ಅದನ್ನು ಅನುಸರಿಸುವಂತೆ ಕೌರವರಿಗೆ ಉಪದೇಶಿಸದೇ ಇದ್ದ, ಈ ರೀತಿ ನಮಗೆ ಪರಮ ಸೌಹಾರ್ದರಂತೆ ವರ್ತಿಸುತ್ತಿದ್ದ ಆಚಾರ್ಯರನ್ನು ಸಂಹರಿಸಿದುದಕ್ಕಾಗಿ ನಾನು ಬಾಂಧವರೊಡನೆ ಮರಣಹೊಂದುತ್ತೇನೆ!”
07170037a ಏವಂ ಬ್ರುವತಿ ಕೌಂತೇಯೇ ದಾಶಾರ್ಹಸ್ತ್ವರಿತಸ್ತತಃ।
07170037c ನಿವಾರ್ಯ ಸೈನ್ಯಂ ಬಾಹುಭ್ಯಾಮಿದಂ ವಚನಮಬ್ರವೀತ್।।
ಕೌಂತೇಯನು ಹೀಗೆ ಹೇಳುತ್ತಿರಲು ತ್ವರೆಮಾಡಿ ದಾಶಾರ್ಹನು ಬಾಹುಗಳಿಂದ ಸೇನೆಯನ್ನು ತಡೆದು ಈ ಮಾತನ್ನಾಡಿದನು:
07170038a ಶೀಘ್ರಂ ನ್ಯಸ್ಯತ ಶಸ್ತ್ರಾಣಿ ವಾಹೇಭ್ಯಶ್ಚಾವರೋಹತ।
07170038c ಏಷ ಯೋಗೋಽತ್ರ ವಿಹಿತಃ ಪ್ರತಿಘಾತೋ ಮಹಾತ್ಮನಾ।।
“ಬೇಗನೆ ಶಸ್ತ್ರಗಳನ್ನು ಕೆಳಗಿಡಿರಿ! ವಾಹನಗಳಿಂದ ಕೆಳಗಿಳಿಯಿರಿ! ಇದೇ ಉಪಾಯವನ್ನು ಈ ಅಸ್ತ್ರದ ನಿವಾರಣೆಗೆಂದು ಮಹಾತ್ಮ ನಾರಾಯಣನೇ ವಿಹಿಸಿದ್ದಾನೆ.
07170039a ದ್ವಿಪಾಶ್ವಸ್ಯಂದನೇಭ್ಯಶ್ಚ ಕ್ಷಿತಿಂ ಸರ್ವೇಽವರೋಹತ।
07170039c ಏವಮೇತನ್ನ ವೋ ಹನ್ಯಾದಸ್ತ್ರಂ ಭೂಮೌ ನಿರಾಯುಧಾನ್।।
ಆನೆ, ಕುದುರೆ ಮತ್ತು ರಥಗಳಿಂದ ಎಲ್ಲರೂ ನೆಲದಮೇಲೆ ಕೆಳಗಿಳಿಯಿರಿ! ನೆಲದ ಮೇಲೆ ನಿರಾಯುಧರಾಗಿರುವವರನ್ನು ಈ ಅಸ್ತ್ರವು ಸಂಹರಿಸುವುದಿಲ್ಲ.
07170040a ಯಥಾ ಯಥಾ ಹಿ ಯುಧ್ಯಂತೇ ಯೋಧಾ ಹ್ಯಸ್ತ್ರಬಲಂ ಪ್ರತಿ।
07170040c ತಥಾ ತಥಾ ಭವಂತ್ಯೇತೇ ಕೌರವಾ ಬಲವತ್ತರಾಃ।।
ಏಕೆಂದರೆ ಈ ಅಸ್ತ್ರಬಲದ ವಿರುದ್ಧವಾಗಿ ಯೋಧರು ಯಾವ ಯಾವ ರೀತಿಯಲ್ಲಿ ಯುದ್ಧಮಾಡುತ್ತಾರೋ ಹಾಗೆಯೇ ಈ ಕೌರವರ ಬಲವೂ ಹೆಚ್ಚಾಗುತ್ತಾ ಹೋಗುತ್ತದೆ.
07170041a ನಿಕ್ಷೇಪ್ಸ್ಯಂತಿ ಚ ಶಸ್ತ್ರಾಣಿ ವಾಹನೇಭ್ಯೋಽವರುಹ್ಯ ಯೇ।
07170041c ತಾನ್ನೈತದಸ್ತ್ರಂ ಸಂಗ್ರಾಮೇ ನಿಹನಿಷ್ಯತಿ ಮಾನವಾನ್।।
ಯಾರು ವಾಹನಗಳಿಂದ ಕೆಳಗಿಳಿದು ಶಸ್ತ್ರಗಳನ್ನು ಕೆಳಗಿಡುತ್ತಾರೋ ಆ ಮಾನವರನ್ನು ಸಂಗ್ರಾಮದಲ್ಲಿ ಈ ಅಸ್ತ್ರವು ಸಂಹರಿಸುವುದಿಲ್ಲ.
07170042a ಯೇ ತ್ವೇತತ್ಪ್ರತಿಯೋತ್ಸ್ಯಂತಿ ಮನಸಾಪೀಹ ಕೇ ಚನ।
07170042c ನಿಹನಿಷ್ಯತಿ ತಾನ್ಸರ್ವಾನ್ರಸಾತಲಗತಾನಪಿ।।
ಯಾರು ಇದನ್ನು ಮನಸ್ಸಿನಲ್ಲಿಯಾದರೂ ವಿರೋಧಿಸುತ್ತಾರೋ ಅವರೆಲ್ಲರನ್ನೂ, ಅವರು ರಸಾತಲಕ್ಕೆ ಹೋಗಿ ಅಡಗಿಕೊಂಡರೂ, ಇದು ಸಂಹರಿಸುತ್ತದೆ.”
07170043a ತೇ ವಚಸ್ತಸ್ಯ ತಚ್ಛೃತ್ವಾ ವಾಸುದೇವಸ್ಯ ಭಾರತ।
07170043c ಈಷುಃ ಸರ್ವೇಽಸ್ತ್ರಮುತ್ಸ್ರಷ್ಟುಂ ಮನೋಭಿಃ ಕರಣೇನ ಚ।।
ಭಾರತ! ವಾಸುದೇವನ ಆ ಮಾತನ್ನು ಕೇಳಿ ಎಲ್ಲರೂ ಮನಸ್ಸು ಮತ್ತು ಕರಣಗಳಿಂದ ಅಸ್ತ್ರವನ್ನು ತ್ಯಜಿಸಲು ಇಚ್ಛಿಸಿದರು.
07170044a ತತ ಉತ್ಸ್ರಷ್ಟುಕಾಮಾಂಸ್ತಾನಸ್ತ್ರಾಣ್ಯಾಲಕ್ಷ್ಯ ಪಾಂಡವಃ।
07170044c ಭೀಮಸೇನೋಽಬ್ರವೀದ್ರಾಜನ್ನಿದಂ ಸಂಹರ್ಷಯನ್ವಚಃ।।
ರಾಜನ್! ಶಸ್ತ್ರಾಸ್ತ್ರಗಳನ್ನು ಕೆಳಗಿಡುತ್ತಿದ್ದ ಅವರನ್ನು ನೋಡಿ ಅವರನ್ನು ಹರ್ಷಗೊಳಿಸುತ್ತಾ ಪಾಂಡವ ಭೀಮಸೇನನು ಇದನ್ನು ಹೇಳಿದನು:
07170045a ನ ಕಥಂ ಚನ ಶಸ್ತ್ರಾಣಿ ಮೋಕ್ತವ್ಯಾನೀಹ ಕೇನ ಚಿತ್।
07170045c ಅಹಮಾವಾರಯಿಷ್ಯಾಮಿ ದ್ರೋಣಪುತ್ರಾಸ್ತ್ರಮಾಶುಗೈಃ।।
“ಯಾವುದೇ ಕಾರಣದಿಂದ ಯಾರೂ ಶಸ್ತ್ರಗಳನ್ನು ಕೆಳಗಿಡಬಾರದು! ದ್ರೋಣಪುತ್ರನನ್ನು ನಾನು ಆಶುಗಗಳಿಂದ ತಡೆಯುತ್ತೇನೆ!
07170046a ಅಥ ವಾಪ್ಯನಯಾ ಗುರ್ವ್ಯಾ ಹೇಮವಿಗ್ರಹಯಾ ರಣೇ।
07170046c ಕಾಲವದ್ವಿಚರಿಷ್ಯಾಮಿ ದ್ರೌಣೇರಸ್ತ್ರಂ ವಿಶಾತಯನ್।।
ಈಗಲೇ ಈ ಸುವರ್ಣಮಯ ಭಾರ ಗದೆಯಿಂದ ದ್ರೌಣಿಯ ಅಸ್ತ್ರವನ್ನು ವಿನಾಶಗೊಳಿಸಿ ಅವನನ್ನು ಕಾಲನಂತೆ ಪ್ರಹರಿಸುತ್ತೇನೆ!
07170047a ನ ಹಿ ಮೇ ವಿಕ್ರಮೇ ತುಲ್ಯಃ ಕಶ್ಚಿದಸ್ತಿ ಪುಮಾನಿಹ।
07170047c ಯಥೈವ ಸವಿತುಸ್ತುಲ್ಯಂ ಜ್ಯೋತಿರನ್ಯನ್ನ ವಿದ್ಯತೇ।।
ಹೇಗೆ ಸವಿತು ಸೂರ್ಯನಿಗೆ ಸಮನಾದ ಬೇರೆ ನಕ್ಷತ್ರವು ಇನ್ನಿಲ್ಲವೋ ಹಾಗೆ ನನ್ನ ವಿಕ್ರಮಕ್ಕೆ ಸಮನಾಗಿರುವ ಪುರುಷರ್ಯಾರೂ ಇಲ್ಲಿ ಇಲ್ಲ.
07170048a ಪಶ್ಯಧ್ವಂ ಮೇ ದೃಢೌ ಬಾಹೂ ನಾಗರಾಜಕರೋಪಮಾ।
07170048c ಸಮರ್ಥೌ ಪರ್ವತಸ್ಯಾಪಿ ಶೈಶಿರಸ್ಯ ನಿಪಾತನೇ।।
ಶಿಖರಯುಕ್ತ ಪರ್ವತವನ್ನೂ ಕೆಳಗುರುಳಿಸಿ ಪುಡಿಮಾಡಬಲ್ಲ ಆನೆಯ ಸೊಂಡಿಲಿನಂತಿರುವ ನನ್ನ ದೃಢ ಬಾಹುಗಳ ಸಾಮಾರ್ಥ್ಯವನ್ನು ಇಂದು ನೋಡಿ!
07170049a ನಾಗಾಯುತಸಮಪ್ರಾಣೋ ಹ್ಯಹಮೇಕೋ ನರೇಷ್ವಿಹ।
07170049c ಶಕ್ರೋ ಯಥಾ ಪ್ರತಿದ್ವಂದ್ವೋ ದಿವಿ ದೇವೇಷು ವಿಶ್ರುತಃ।।
ದಿವಿಯ ದೇವತೆಗಳಲ್ಲಿ ಶಕ್ರನು ಹೇಗೆ ಪ್ರತಿದ್ವಂದ್ವಿಯಿಲ್ಲದಿರುವನೆಂದು ಪ್ರಸಿದ್ಧನೋ ಹಾಗೆ ಮನುಷ್ಯರಲ್ಲಿ ಸಾವಿರ ಆನೆಗಳ ಬಲಕ್ಕೆ ಸಮನಾದ ನಾನೊಬ್ಬನೇ ಪ್ರತಿದ್ವಂದ್ವಿಯಿಲ್ಲದಿರುವವನು!
07170050a ಅದ್ಯ ಪಶ್ಯತ ಮೇ ವೀರ್ಯಂ ಬಾಹ್ವೋಃ ಪೀನಾಂಸಯೋರ್ಯುಧಿ।
07170050c ಜ್ವಲಮಾನಸ್ಯ ದೀಪ್ತಸ್ಯ ದ್ರೌಣೇರಸ್ತ್ರಸ್ಯ ವಾರಣೇ।।
ಇಂದು ಯುದ್ಧದಲ್ಲಿ ಹತ್ತಿ ಉರಿಯುತ್ತಿದ್ದ ದ್ರೌಣಿಯ ಅಸ್ತ್ರವನ್ನು ತಡೆಯುವ ನನ್ನ ಈ ಉಬ್ಬಿದ ಬಾಹುಗಳ ವೀರ್ಯವನ್ನು ನೋಡಿ!
07170051a ಯದಿ ನಾರಾಯಣಾಸ್ತ್ರಸ್ಯ ಪ್ರತಿಯೋದ್ಧಾ ನ ವಿದ್ಯತೇ।
07170051c ಅದ್ಯೈನಂ ಪ್ರತಿಯೋತ್ಸ್ಯಾಮಿ ಪಶ್ಯತ್ಸು ಕುರುಪಾಂಡುಷು।।
ಕುರುಪಾಂಡವರಲ್ಲಿ ಇಂದು ಈ ನಾರಾಯಣಾಸ್ತ್ರವನ್ನು ಎದುರಿಸುವವನು ಯಾರೂ ಎಲ್ಲವೆಂದಾದರೆ ನಾನು ಅದನ್ನು ಎದುರಿಸುತ್ತೇನೆ! ನೋಡಿ!”
07170052a ಏವಮುಕ್ತ್ವಾ ತತೋ ಭೀಮೋ ದ್ರೋಣಪುತ್ರಮರಿಂದಮಃ।
07170052c ಅಭ್ಯಯಾನ್ಮೇಘಘೋಷೇಣ ರಥೇನಾದಿತ್ಯವರ್ಚಸಾ।।
ಹೀಗೆ ಹೇಳಿ ಅರಿಂದಮ ಭೀಮನು ಮೇಘಘೋಷದ ಆದಿತ್ಯವರ್ಚಸ ರಥದಲ್ಲಿ ಕುಳಿತು ದ್ರೋಣಪುತ್ರನನ್ನು ಸಮೀಪಿಸಿದನು.
07170053a ಸ ಏನಮಿಷುಜಾಲೇನ ಲಘುತ್ವಾಚ್ಛೀಘ್ರವಿಕ್ರಮಃ।
07170053c ನಿಮೇಷಮಾತ್ರೇಣಾಸಾದ್ಯ ಕುಂತೀಪುತ್ರೋಽಭ್ಯವಾಕಿರತ್।।
ಶೀಘ್ರವಾಗಿ ಅವನನ್ನು ಸಮೀಪಿಸಿ ನಿಮಿಷಮಾತ್ರದಲ್ಲಿ ತನ್ನ ಹಸ್ತಲಾಘವದಿಂದ ವಿಕ್ರಮಿ ಕುಂತೀಪುತ್ರನು ಅಶ್ವತ್ಥಾಮನನ್ನು ಬಾಣಗಳ ಜಾಲದಿಂದ ಮುಚ್ಚಿಬಿಟ್ಟನು.
07170054a ತತೋ ದ್ರೌಣಿಃ ಪ್ರಹಸ್ಯೈನಮುದಾಸಮಭಿಭಾಷ್ಯ ಚ।
07170054c ಅವಾಕಿರತ್ಪದೀಪ್ತಾಗ್ರೈಃ ಶರೈಸ್ತೈರಭಿಮಂತ್ರಿತೈಃ।।
ಆಗ ದ್ರೌಣಿಯು ನಗುತ್ತಾ ಉದಾಸೀನತೆಯಿಂದ ಕೆಲವು ಮಾತುಗಳನ್ನಾಡಿ ಅಭಿಮಂತ್ರಿಸಿದ ದೀಪ್ತಾಗ್ರ ಶರಗಳಿಂದ ಭೀಮನನ್ನು ಮುಚ್ಚಿದನು.
07170055a ಪನ್ನಗೈರಿವ ದೀಪ್ತಾಸ್ಯೈರ್ವಮದ್ಭಿರನಲಂ ರಣೇ।
07170055c ಅವಕೀರ್ಣೋಽಭವತ್ಪಾರ್ಥಃ ಸ್ಫುಲಿಂಗೈರಿವ ಕಾಂಚನೈಃ।।
ಬಂಗಾರದ ಬೆಂಕಿಯ ಕಿಡಿಗಳನ್ನು ಕಾರುತ್ತಾ ಉರಿಯುತ್ತಿದ್ದ ಮುಖಗಳುಳ್ಳ ಪನ್ನಗಗಳಂತಿದ್ದ ಆ ಬಾಣಗಳು ಭೀಮನನ್ನು ಮುಚ್ಚಿಬಿಟ್ಟವು.
07170056a ತಸ್ಯ ರೂಪಮಭೂದ್ರಾಜನ್ಭೀಮಸೇನಸ್ಯ ಸಂಯುಗೇ।
07170056c ಖದ್ಯೋತೈರಾವೃತಸ್ಯೇವ ಪರ್ವತಸ್ಯ ದಿನಕ್ಷಯೇ।।
ರಾಜನ್! ಯುದ್ಧದಲ್ಲಿ ಆಗ ಭೀಮಸೇನನು ಸಾಯಂಕಾಲದಲ್ಲಿ ಮಿಂಚು ಹುಳುಗಳಿಂದ ಆವೃತ ಪರ್ವತದಂತೆ ತೋರುತ್ತಿದ್ದನು.
07170057a ತದಸ್ತ್ರಂ ದ್ರೋಣಪುತ್ರಸ್ಯ ತಸ್ಮಿನ್ಪ್ರತಿಸಮಸ್ಯತಿ।
07170057c ಅವರ್ಧತ ಮಹಾರಾಜ ಯಥಾಗ್ನಿರನಿಲೋದ್ಧತಃ।।
ಮಹಾರಾಜ! ಅವನು ದ್ರೋಣಪುತ್ರನ ಆ ಅಸ್ತ್ರವನ್ನು ವಿರೋಧಿಸಲು ಅದು ಗಾಳಿಯಿಂದ ಉಲ್ಬಣಿಸುವ ಬೆಂಕಿಯಂತೆ ವೃದ್ಧಿಸಿತು.
07170058a ವಿವರ್ಧಮಾನಮಾಲಕ್ಷ್ಯ ತದಸ್ತ್ರಂ ಭೀಮವಿಕ್ರಮಂ।
07170058c ಪಾಂಡುಸೈನ್ಯಂ ಋತೇ ಭೀಮಂ ಸುಮಹದ್ಭಯಮಾವಿಶತ್।।
ಭೀಮವಿಕ್ರಮದಿಂದಿದ್ದ ಆ ಅಸ್ತ್ರವು ಬೆಳೆಯುತ್ತಿದ್ದುದನ್ನು ನೋಡಿ ಪಾಂಡವಸೇನೆಯಲ್ಲಿ, ಭೀಮಸೇನನನ್ನು ಬಿಟ್ಟು ಉಳಿದೆಲ್ಲರನ್ನೂ ಮಹಾ ಭಯವು ಆವರಿಸಿತು.
07170059a ತತಃ ಶಸ್ತ್ರಾಣಿ ತೇ ಸರ್ವೇ ಸಮುತ್ಸೃಜ್ಯ ಮಹೀತಲೇ।
07170059c ಅವಾರೋಹನ್ರಥೇಭ್ಯಶ್ಚ ಹಸ್ತ್ಯಶ್ವೇಭ್ಯಶ್ಚ ಸರ್ವಶಃ।।
ಆಗ ಎಲ್ಲರೂ ಎಲ್ಲ ಕಡೆಗಳಲ್ಲಿಯೂ ರಥ-ಆನೆ-ಕುದುರೆಗಳಿಂದ ಕೆಳಗಿಳಿದು ಶಸ್ತ್ರಗಳೆಲ್ಲವನ್ನೂ ನೆಲದ ಮೇಲೆ ಇರಿಸಿದರು.
07170060a ತೇಷು ನಿಕ್ಷಿಪ್ತಶಸ್ತ್ರೇಷು ವಾಹನೇಭ್ಯಶ್ಚ್ಯುತೇಷು ಚ।
07170060c ತದಸ್ತ್ರವೀರ್ಯಂ ವಿಪುಲಂ ಭೀಮಮೂರ್ಧನ್ಯಥಾಪತತ್।।
ಅವರು ಹಾಗೆ ವಾಹನಗಳಿಂದ ಕೆಳಗಿಳಿದು ಶಸ್ತ್ರಗಳನ್ನು ಕೆಳಗಿಡಲು ಆ ಅಸ್ತ್ರವೀರ್ಯವೆಲ್ಲವೂ ಒಟ್ಟಾಗಿ ಭೀಮನ ಶಿರದ ಮೇಲೆಯೇ ಬಿದ್ದಿತು.
07170061a ಹಾಹಾಕೃತಾನಿ ಭೂತಾನಿ ಪಾಂಡವಾಶ್ಚ ವಿಶೇಷತಃ।
07170061c ಭೀಮಸೇನಮಪಶ್ಯಂತ ತೇಜಸಾ ಸಂವೃತಂ ತದಾ।।
ತೇಜಸ್ಸಿನಿಂದ ಆವೃತನಾದ ಭೀಮಸೇನನನ್ನು ಕಾಣದೇ ಅಲ್ಲಿದ್ದ ಎಲ್ಲರೂ, ವಿಶೇಷವಾಗಿ ಪಾಂಡವರು, ಹಾಹಾಕಾರಗೈದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣಪರ್ವಣಿ ನಾರಾಯಣಾಸ್ತ್ರಮೋಕ್ಷಣಪರ್ವಣಿ ಪಾಂಡವಸೈನ್ಯಾಸ್ತ್ರತ್ಯಾಗೇ ಸಪ್ತತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣಪರ್ವದಲ್ಲಿ ನಾರಾಯಣಾಸ್ತ್ರಮೋಕ್ಷಣಪರ್ವದಲ್ಲಿ ಪಾಂಡವಸೈನ್ಯಾಸ್ತ್ರತ್ಯಾಗ ಎನ್ನುವ ನೂರಾಎಪ್ಪತ್ತನೇ ಅಧ್ಯಾಯವು.