169 ಧೃಷ್ಟದ್ಯುಮ್ನಸಾತ್ಯಕಿಕ್ರೋಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ನಾರಾಯಣಾಸ್ತ್ರಮೋಕ್ಷ ಪರ್ವ

ಅಧ್ಯಾಯ 169

ಸಾರ

ಧೃಷ್ಟದ್ಯುಮ್ನನನ್ನುದ್ದೇಶಿಸಿ ಸಾತ್ಯಕಿಯ ಮಾತು (1-19). ಧೃಷ್ಟದ್ಯುಮ್ನನ ಮಾತು (20-39). ಧೃಷ್ಟದ್ಯುಮ್ನನನ್ನು ವಧಿಸಲು ಹೊರಟ ಸಾತ್ಯಕಿಯನ್ನು ಭೀಮಸೇನನು ತಡೆಯಲು ಸಹದೇವನು ಸಾತ್ಯಕಿಯನ್ನು ಸಂತವಿಸಿದುದು (40-53). ಕೃಷ್ಣ-ಯುಧಿಷ್ಠಿರರು ಧೃಷ್ಟದ್ಯುಮ್ನ-ಸಾತ್ಯಕಿಯರನ್ನು ತಡೆದುದು (54-62).

07169001 ಧೃತರಾಷ್ಟ್ರ ಉವಾಚ।
07169001a ಸಾಂಗಾ ವೇದಾ ಯಥಾನ್ಯಾಯಂ ಯೇನಾಧೀತಾ ಮಹಾತ್ಮನಾ।
07169001c ಯಸ್ಮಿನ್ಸಾಕ್ಷಾದ್ಧನುರ್ವೇದೋ ಹ್ರೀನಿಷೇಧೇ ಪ್ರತಿಷ್ಠಿತಃ।।
07169002a ತಸ್ಮಿನ್ನಾಕ್ರುಶ್ಯತಿ ದ್ರೋಣೇ ಮಹರ್ಷಿತನಯೇ ತದಾ।
07169002c ನೀಚಾತ್ಮನಾ ನೃಶಂಸೇನ ಕ್ಷುದ್ರೇಣ ಗುರುಘಾತಿನಾ।।
07169003a ಯಸ್ಯ ಪ್ರಸಾದಾತ್ಕರ್ಮಾಣಿ ಕುರ್ವಂತಿ ಪುರುಷರ್ಷಭಾಃ।
07169003c ಅಮಾನುಷಾಣಿ ಸಂಗ್ರಾಮೇ ದೇವೈರಸುಕರಾಣಿ ಚ।।
07169004a ತಸ್ಮಿನ್ನಾಕ್ರುಶ್ಯತಿ ದ್ರೋಣೇ ಸಮಕ್ಷಂ ಪಾಪಕರ್ಮಿಣಃ।
07169004c ನಾಮರ್ಷಂ ತತ್ರ ಕುರ್ವಂತಿ ಧಿಕ್ ಕ್ಷತ್ರಂ ಧಿಗಮರ್ಷಿತಂ।।

ಧೃತರಾಷ್ಟ್ರನು ಹೇಳಿದನು: “ಯಾವ ಮಹಾತ್ಮನಲ್ಲಿ ಯಥಾನ್ಯಾಯವಾಗಿ ಸಾಂಗೋಪಾಂಗವಾಗಿ ವೇದಗಳು ನೆಲೆಸಿದ್ದವೋ, ಗರ್ವವಿಲ್ಲದವನ ಯಾರಲ್ಲಿ ಸಾಕ್ಷಾದ್ ಧನುರ್ವೇದವೇ ಪ್ರತಿಷ್ಠಿತವಾಗಿತ್ತೋ, ಯಾರ ಪ್ರಸಾದದಿಂದ ಪುರುಷರ್ಷಭರು ಸಂಗ್ರಾಮದಲ್ಲಿ ದೇವತೆಗಳಿಗೂ ಅಸಾಧ್ಯ ಅಮಾನುಷ ಕರ್ಮಗಳನ್ನು ಮಾಡಿ ತೋರಿಸುತ್ತಿದ್ದನೋ ಆ ಮಹರ್ಷಿತನಯ ದ್ರೋಣನನ್ನು ನೀಚಾತ್ಮ ಗುರುಘಾತಿಯು ಕ್ಷುದ್ರ ಕ್ರೂರತನದಿಂದ ಸೆಳೆದಾಡುವಾಗ ಎದುರಿದ್ದ ಪಾಪಕರ್ಮಿಗಳ್ಯಾರೂ ವಿರೋಧಿಸಲಿಲ್ಲವಲ್ಲ! ಕ್ಷತ್ರಿಯರಿಗೆ ಧಿಕ್ಕಾರ! ಕುಪಿತರಾದವರಿಗೆ ಧಿಕ್ಕಾರ!

07169005a ಪಾರ್ಥಾಃ ಸರ್ವೇ ಚ ರಾಜಾನಃ ಪೃಥಿವ್ಯಾಂ ಯೇ ಧನುರ್ಧರಾಃ।
07169005c ಶ್ರುತ್ವಾ ಕಿಮಾಹುಃ ಪಾಂಚಾಲ್ಯಂ ತನ್ಮಮಾಚಕ್ಷ್ವ ಸಂಜಯ।।

ಪಾಂಚಾಲ್ಯನನ್ನು ಕೇಳಿ ಪಾರ್ಥರು ಮತ್ತು ಪೃಥ್ವಿಯ ಧನುರ್ಧರ ರಾಜರೆಲ್ಲರೂ ಏನು ಹೇಳಿದರೆಂದು ನನಗೆ ಹೇಳು ಸಂಜಯ!”

07169006 ಸಂಜಯ ಉವಾಚ।
07169006a ಶ್ರುತ್ವಾ ದ್ರುಪದಪುತ್ರಸ್ಯ ತಾ ವಾಚಃ ಕ್ರೂರಕರ್ಮಣಃ।
07169006c ತೂಷ್ಣೀಂ ಬಭೂವೂ ರಾಜಾನಃ ಸರ್ವ ಏವ ವಿಶಾಂ ಪತೇ।।

ಸಂಜಯನು ಹೇಳಿದನು: “ವಿಶಾಂಪತೇ! ಕ್ರೂರಕರ್ಮಿ ದ್ರುಪದಪುತ್ರನ ಆ ಮಾತನ್ನು ಕೇಳಿ ಎಲ್ಲ ರಾಜರೂ ಸುಮ್ಮನಾಗಿದ್ದರು.

07169007a ಅರ್ಜುನಸ್ತು ಕಟಾಕ್ಷೇಣ ಜಿಹ್ಮಂ ಪ್ರೇಕ್ಷ್ಯ ಚ ಪಾರ್ಷತಂ।
07169007c ಸಬಾಷ್ಪಮಭಿನಿಃಶ್ವಸ್ಯ ಧಿಗ್ಧಿಗ್ಧಿಗಿತಿ ಚಾಬ್ರವೀತ್।।

ಅರ್ಜುನನಾದರೋ ಕಡೆಗಣ್ಣಿನಿಂದ ಪಾರ್ಷತನನ್ನು ನೋಡಿ ಕಣ್ಣೀರು ತುಂಬಿ ನಿಟ್ಟುಸಿರು ಬಿಡುತ್ತಾ “ಧಿಕ್ಕಾರ! ಧಿಕ್ಕಾರ! ಧಿಕ್ಕಾರ!” ಎಂದು ನುಡಿದನು.

07169008a ಯುಧಿಷ್ಠಿರಶ್ಚ ಭೀಮಶ್ಚ ಯಮೌ ಕೃಷ್ಣಸ್ತಥಾಪರೇ।
07169008c ಆಸನ್ಸುವ್ರೀಡಿತಾ ರಾಜನ್ಸಾತ್ಯಕಿರಿದಮಬ್ರವೀತ್।।

ರಾಜನ್! ಯುಧಿಷ್ಠಿರ, ಭೀಮ, ಯಮಳರು ಮತ್ತು ಕೃಷ್ಣನೂ ಕೂಡ ತಲೆ ತಗ್ಗಿಸಿ ಕುಳಿತಿರಲು ಅರಿಂದಮ ಸಾತ್ಯಕಿಯು ಹೇಳಿದನು:

07169009a ನೇಹಾಸ್ತಿ ಪುರುಷಃ ಕಶ್ಚಿದ್ಯ ಇಮಂ ಪಾಪಪೂರುಷಂ।
07169009c ಭಾಷಮಾಣಮಕಲ್ಯಾಣಂ ಶೀಘ್ರಂ ಹನ್ಯಾನ್ನರಾಧಮಂ।।

“ಅಮಂಗಳಕರವಾಗಿ ಮಾತನಾಡುವ ಈ ಪಾಪಪುರುಷ, ನರಾಧಮನನ್ನು ಶೀಘ್ರವಾಗಿ ಕೊಲ್ಲುವ ಪುರುಷನ್ಯಾರೂ ಇಲ್ಲಿ ಇಲ್ಲವೇ?

07169010a ಕಥಂ ಚ ಶತಧಾ ಜಿಹ್ವಾ ನ ತೇ ಮೂರ್ಧಾ ಚ ದೀರ್ಯತೇ।
07169010c ಗುರುಮಾಕ್ರೋಶತಃ ಕ್ಷುದ್ರ ನ ಚಾಧರ್ಮೇಣ ಪಾತ್ಯಸೇ।।

ಕ್ಷುದ್ರ! ಗುರುವನ್ನು ನಿಂದಿಸುವ ನಿನ್ನ ನಾಲಿಗೆ ಮತ್ತು ತಲೆಯು ಏಕೆ ನೂರು ಚೂರುಗಳಾಗಿ ಸೀಳಿಹೋಗುತ್ತಿಲ್ಲ? ಈ ಅಧರ್ಮದಿಂದ ನಿನ್ನ ಪತನವೇಕೆ ಇನ್ನೂ ಆಗಿಲ್ಲ?

07169011a ಯಾಪ್ಯಸ್ತ್ವಮಸಿ ಪಾರ್ಥೈಶ್ಚ ಸರ್ವೈಶ್ಚಾಂಧಕವೃಷ್ಣಿಭಿಃ।
07169011c ಯತ್ಕರ್ಮ ಕಲುಷಂ ಕೃತ್ವಾ ಶ್ಲಾಘಸೇ ಜನಸಂಸದಿ।।

ಪಾಪಕರ್ಮವನ್ನೆಸಗಿ ಜನಸಂಸದಿಯಲ್ಲಿ ಆತ್ಮಶ್ಲಾಘನೆ ಮಾಡಿಕೊಳ್ಳುತ್ತಿರುವ ನೀನು ಎಲ್ಲ ಅಂಧಕ-ವೃಷ್ಣಿಯರ ಮತ್ತು ಪಾರ್ಥರ ಅವಹೇಳನೆಗೆ ಪಾತ್ರನಾಗಿರುವೆ!

07169012a ಅಕಾರ್ಯಂ ತಾದೃಶಂ ಕೃತ್ವಾ ಪುನರೇವ ಗುರುಂ ಕ್ಷಿಪನ್।
07169012c ವಧ್ಯಸ್ತ್ವಂ ನ ತ್ವಯಾರ್ಥೋಽಸ್ತಿ ಮುಹೂರ್ತಮಪಿ ಜೀವತಾ।।

ಆ ರೀತಿ ಮಾಡಬಾರದುದನ್ನು ಮಾಡಿ ಪುನಃ ಗುರುವನ್ನು ನಿಂದಿಸುತ್ತಿರುವ ನೀನು ವಧ್ಯನು. ಮುಹೂರ್ತಕಾಲವೂ ನೀನು ಜೀವಿಸಿರುವುದರಲ್ಲಿ ಅರ್ಥವಿಲ್ಲ!

07169013a ಕಸ್ತ್ವೇತದ್ವ್ಯವಸೇದಾರ್ಯಸ್ತ್ವದನ್ಯಃ ಪುರುಷಾಧಮಃ।
07169013c ನಿಗೃಹ್ಯ ಕೇಶೇಷು ವಧಂ ಗುರೋರ್ಧರ್ಮಾತ್ಮನಃ ಸತಃ।।

ಪುರುಷಾಧಮ! ನೀನಲ್ಲದೇ ಬೇರೆ ಯಾರು ತಾನೇ ಧರ್ಮಾತ್ಮನೂ ಸಾಧುವೂ ಆದ ಗುರುವಿನ ಶಿಖೆಯನ್ನು ಹಿಡಿದು ವಧಿಸಿಯಾನು?

07169014a ಸಪ್ತಾವರೇ ತಥಾ ಪೂರ್ವೇ ಬಾಂಧವಾಸ್ತೇ ನಿಪಾತಿತಾಃ।
07169014c ಯಶಸಾ ಚ ಪರಿತ್ಯಕ್ತಾಸ್ತ್ವಾಂ ಪ್ರಾಪ್ಯ ಕುಲಪಾಂಸನಂ।।

ಕುಲಗೇಡಿಯಾದ ನಿನ್ನನ್ನು ಪಡೆದು ನಿನ್ನ ಹಿಂದಿನ ಏಳು ತಲೆಮಾರಿನ ಬಾಂಧವರೂ ಯಶಸ್ಸಿನಿಂದ ಪರಿತ್ಯಕ್ತರಾಗಿ ನರಕಕ್ಕೆ ಬಿದ್ದಿರಬಹುದು.

07169015a ಉಕ್ತವಾಂಶ್ಚಾಪಿ ಯತ್ಪಾರ್ಥಂ ಭೀಷ್ಮಂ ಪ್ರತಿ ನರರ್ಷಭಂ।
07169015c ತಥಾಂತೋ ವಿಹಿತಸ್ತೇನ ಸ್ವಯಮೇವ ಮಹಾತ್ಮನಾ।।

ಭೀಷ್ಮನ ಕುರಿತು ನರರ್ಷಭ ಪಾರ್ಥನಿಗೆ ಹೇಳುತ್ತಿರುವೆಯಲ್ಲವೇ? ಆ ಮಹಾತ್ಮ ಭೀಷ್ಮನು ಸ್ವಯಂ ತಾನೇ ತನ್ನ ಅಂತ್ಯವು ಹೀಗಾಗಬೇಕೆಂದು ನಿರ್ದೇಶಿಸಿರಲಿಲ್ಲವೇ?

07169016a ತಸ್ಯಾಪಿ ತವ ಸೋದರ್ಯೋ ನಿಹಂತಾ ಪಾಪಕೃತ್ತಮಃ।
07169016c ನಾನ್ಯಃ ಪಾಂಚಾಲಪುತ್ರೇಭ್ಯೋ ವಿದ್ಯತೇ ಭುವಿ ಪಾಪಕೃತ್।।

ಭೀಷ್ಮನನ್ನು ಕೂಡ ನಿನ್ನ ಪಾಪಕಾರಿ ಸಹೋದರನೇ ಸಂಹರಿಸಿದನು! ನೀವಿಬ್ಬರು ಪಾಂಚಾಲಪುತ್ರರ ಹೊರತಾಗಿ ಪಾಪಿಷ್ಟರಾಗಿರುವವರು ಈ ಭುಮಿಯಲ್ಲಿಯೇ ಬೇರೆ ಯಾರಿಲ್ಲ!

07169017a ಸ ಚಾಪಿ ಸೃಷ್ಟಃ ಪಿತ್ರಾ ತೇ ಭೀಷ್ಮಸ್ಯಾಂತಕರಃ ಕಿಲ।
07169017c ಶಿಖಂಡೀ ರಕ್ಷಿತಸ್ತೇನ ಸ ಚ ಮೃತ್ಯುರ್ಮಹಾತ್ಮನಃ।।

ಅವನೂ ಕೂಡ ಭೀಷ್ಮನ ಅಂತಕನಾಗಿ ನಿನ್ನ ತಂದೆಯಿಂದ ಉತ್ಪನ್ನನಾಗಿಲ್ಲವೇ? ಆ ಮಹಾತ್ಮನ ಮೃತ್ಯುವಾದ ಶಿಖಂಡಿಯನ್ನು ನಿನ್ನ ತಂದೆಯೇ ರಕ್ಷಿಸಿದನು.

07169018a ಪಾಂಚಾಲಾಶ್ಚಲಿತಾ ಧರ್ಮಾತ್ ಕ್ಷುದ್ರಾ ಮಿತ್ರಗುರುದ್ರುಹಃ।
07169018c ತ್ವಾಂ ಪ್ರಾಪ್ಯ ಸಹಸೋದರ್ಯಂ ಧಿಕ್ಕೃತಂ ಸರ್ವಸಾಧುಭಿಃ।।

ಸಹೋದರ ಶಿಖಂಡಿಯೊಂದಿಗೆ ನಿನ್ನನ್ನು ಪಡೆದ ಪಾಂಚಾಲರು ಅಧರ್ಮಿಗಳೂ, ಕ್ಷುದ್ರರೂ, ಮಿತ್ರ-ಗುರುದ್ರೋಹಿಗಳೆಂದೆನಿಸಿಕೊಂಡು ಸರ್ವ ಸಾಧುಗಳ ಧಿಕ್ಕಾರಕ್ಕೆ ಪಾತ್ರರಾಗಿದ್ದಾರೆ.

07169019a ಪುನಶ್ಚೇದೀದೃಶೀಂ ವಾಚಂ ಮತ್ಸಮೀಪೇ ವದಿಷ್ಯಸಿ।
07169019c ಶಿರಸ್ತೇ ಪಾತಯಿಷ್ಯಾಮಿ ಗದಯಾ ವಜ್ರಕಲ್ಪಯಾ।।

ಒಂದುವೇಳೆ ಈ ರೀತಿಯ ಮಾತನ್ನು ಪುನಃ ನನ್ನ ಸಮೀಪದಲ್ಲಿ ನೀನು ಹೇಳಿದ್ದೇ ಆದರೆ ವಜ್ರದಂತಿರುವ ಗದೆಯಿಂದ ನಿನ್ನ ಶಿರವನ್ನು ಕೆಳಗುರುಳಿಸುತ್ತೇನೆ!”

07169020a ಸಾತ್ವತೇನೈವಮಾಕ್ಷಿಪ್ತಃ ಪಾರ್ಷತಃ ಪರುಷಾಕ್ಷರಂ।
07169020c ಸಂರಬ್ಧಃ ಸಾತ್ಯಕಿಂ ಪ್ರಾಹ ಸಂಕ್ರುದ್ಧಃ ಪ್ರಹಸನ್ನಿವ।।

ಈ ರೀತಿ ಕ್ರೂರಶಬ್ಧಗಳಿಂದ ಸಾತ್ವತನು ಪಾರ್ಷತನನ್ನು ಆಕ್ಷೇಪಿಸಲು, ಪರಮಕ್ರುದ್ಧನಾದ ಧೃಷ್ಟದ್ಯುಮ್ನನು ನಗುತ್ತಿರುವನೋ ಎನ್ನುವಂತೆ ಹೇಳಿದನು:

07169021a ಶ್ರೂಯತೇ ಶ್ರೂಯತೇ ಚೇತಿ ಕ್ಷಮ್ಯತೇ ಚೇತಿ ಮಾಧವ।
07169021c ನ ಚಾನಾರ್ಯ ಶುಭಂ ಸಾಧುಂ ಪುರುಷಂ ಕ್ಷೇಪ್ತುಮರ್ಹಸಿ।।

“ಮಾಧವ! ನಿನ್ನ ಮಾತನ್ನು ಕೇಳುತ್ತಲೇ ಇದ್ದೇನೆ. ಹೇಳಿಕೊಂಡಿರಲೆಂದು ಕ್ಷಮಿಸುತ್ತಲೂ ಇದ್ದೇನೆ. ಆದರೆ ಶುಭ ಸಾಧುಪುರುಷರನ್ನು ಅವಹೇಳನಮಾಡುವುದು ಅನಾರ್ಯ.

07169022a ಕ್ಷಮಾ ಪ್ರಶಸ್ಯತೇ ಲೋಕೇ ನ ತು ಪಾಪೋಽರ್ಹತಿ ಕ್ಷಮಾಂ।
07169022c ಕ್ಷಮಾವಂತಂ ಹಿ ಪಾಪಾತ್ಮಾ ಜಿತೋಽಯಮಿತಿ ಮನ್ಯತೇ।।

ಲೋಕದಲ್ಲಿ ಕ್ಷಮೆಗೆ ಪ್ರಾಶಸ್ತ್ಯವಿದೆ. ಆದರೆ ಪಾಪಿಷ್ಟರು ಕ್ಷಮೆಗೆ ಅರ್ಹರರಲ್ಲ. ಕ್ಷಮಾವಂತನೇ ಸೋತುಹೋದನೆಂದು ಪಾಪಾತ್ಮರು ತಿಳಿದುಕೊಂಡುಬಿಡುತ್ತಾರೆ.

07169023a ಸ ತ್ವಂ ಕ್ಷುದ್ರಸಮಾಚಾರೋ ನೀಚಾತ್ಮಾ ಪಾಪನಿಶ್ಚಯಃ।
07169023c ಆ ಕೇಶಾಗ್ರಾನ್ನಖಾಗ್ರಾಚ್ಚ ವಕ್ತವ್ಯೋ ವಕ್ತುಮಿಚ್ಚಸಿ।।

ನೀನು ಸ್ವತಃ ಕ್ಷುದ್ರಸಮಾಚಾರದವನು. ಕಾಲುಗುರಿನ ತುದಿಯಿಂದ ಹಿಡಿದು ಶಿಖಾಗ್ರದವರೆಗೂ ನಿನ್ನಲ್ಲಿ ಪಾಪವೇ ತುಂಬಿದೆ. ನೀಚಾತ್ಮನಾದ ನೀನು ಮಾತನಾಡಲು ಬಯಸಿ ಮಾತನಾಡುತ್ತಿರುವೆಯಷ್ಟೆ!

07169024a ಯಃ ಸ ಭೂರಿಶ್ರವಾಶ್ಚಿನ್ನೇ ಭುಜೇ ಪ್ರಾಯಗತಸ್ತ್ವಯಾ।
07169024c ವಾರ್ಯಮಾಣೇನ ನಿಹತಸ್ತತಃ ಪಾಪತರಂ ನು ಕಿಂ।।

ಭುಜವು ತುಂಡಾಗಿ ಪ್ರಾಯಗತನಾಗಿದ್ದ ಭೂರಿಶ್ರವನನ್ನು ಇತರರು ತಡೆಹಿಡಿಯುತ್ತಿದ್ದರೂ ನೀನು ಸಂಹರಿಸಿದೆ. ಅದಕ್ಕಿಂತ ಹೆಚ್ಚಿನ ಪಾಪವು ಯಾವುದಿದೆ?

07169025a ವ್ಯೂಹಮಾನೋ ಮಯಾ ದ್ರೋಣೋ ದಿವ್ಯೇನಾಸ್ತ್ರೇಣ ಸಂಯುಗೇ।
07169025c ವಿಸೃಷ್ಟಶಸ್ತ್ರೋ ನಿಹತಃ ಕಿಂ ತತ್ರ ಕ್ರೂರ ದುಷ್ಕೃತಂ।।

ಯುದ್ಧದಲ್ಲಿ ಶಸ್ತ್ರಗಳನ್ನು ಬಿಸುಟು ದಿವ್ಯಾಸ್ತ್ರಗಳಿಂದ ಆಕ್ರಮಣಿಸುತ್ತಿದ್ದ ದ್ರೋಣನನ್ನು ನಾನು ಕೊಂದಿದುರಲ್ಲಿ ಕ್ರೂರ ದುಷ್ಕೃತವೇನಿದೆ?

07169026a ಅಯುಧ್ಯಮಾನಂ ಯಸ್ತ್ವಾಜೌ ತಥಾ ಪ್ರಾಯಗತಂ ಮುನಿಂ।
07169026c ಚಿನ್ನಬಾಹುಂ ಪರೈರ್ಹನ್ಯಾತ್ಸಾತ್ಯಕೇ ಸ ಕಥಂ ಭವೇತ್।।

ಸಾತ್ಯಕೇ! ಯುದ್ಧಮಾಡದೇ ಇದ್ದ, ಪ್ರಾಯಗತನಾಗಿದ್ದ, ಬಾಹುವು ತುಂಡಾಗಿರುವ ಮುನಿಯನ್ನು ಕೊಂದು ಇತರರಿಗೆ ಏಕೆ ಉಪದೇಶಿಸುತ್ತಿರುವೆ?

07169027a ನಿಹತ್ಯ ತ್ವಾಂ ಯದಾ ಭೂಮೌ ಸ ವಿಕ್ರಾಮತಿ ವೀರ್ಯವಾನ್।
07169027c ಕಿಂ ತದಾ ನ ನಿಹಂಸ್ಯೇನಂ ಭೂತ್ವಾ ಪುರುಷಸತ್ತಮಃ।।

ಆ ವೀರ್ಯವಾನನು ನಿನ್ನನ್ನು ನೆಲ್ಲಕ್ಕೆ ಕೆಡವಿ ಎಳೆದಾಡುತ್ತಿರುವಾಗ ನೀನು ಪುರುಷಸತ್ತಮನಾಗಿದ್ದುಕೊಂಡು ಅವನನ್ನು ಏಕೆ ಆಗ ಕೊಲ್ಲಲಿಲ್ಲ?

07169028a ತ್ವಯಾ ಪುನರನಾರ್ಯೇಣ ಪೂರ್ವಂ ಪಾರ್ಥೇನ ನಿರ್ಜಿತಃ।
07169028c ಯದಾ ತದಾ ಹತಃ ಶೂರಃ ಸೌಮದತ್ತಿಃ ಪ್ರತಾಪವಾನ್।।

ಮೊದಲೇ ಪಾರ್ಥನಿಂದ ಸೋತಿದ್ದ ಪ್ರತಾಪವಾನ್ ಶೂರ ಸೌಮದತ್ತಿಯನ್ನು ಪುನಃ ನೀನು ಅನಾರ್ಯನಂತೆ ಸಂಹರಿಸಿದೆ!

07169029a ಯತ್ರ ಯತ್ರ ತು ಪಾಂಡೂನಾಂ ದ್ರೋಣೋ ದ್ರಾವಯತೇ ಚಮೂಂ।
07169029c ಕಿರಂ ಶರಸಹಸ್ರಾಣಿ ತತ್ರ ತತ್ರ ಪ್ರಯಾಮ್ಯಹಂ।।

ಆದರೆ ನಾನು ಮಾತ್ರ ಎಲ್ಲೆಲ್ಲಿ ದ್ರೋಣನು ಸಹಸ್ರಾರು ಬಾಣಗಳನ್ನು ಎರಚಿ ಪಾಂಡವ ಸೇನೆಯನ್ನು ಪಲಾಯನಗೊಳಿಸುತ್ತಿದ್ದನೋ ಅಲ್ಲಲ್ಲಿಗೆ ಹೋಗಿ ಅವನೊಂದಿಗೆ ಹೋರಾಡುತ್ತಿದ್ದೆನು.

07169030a ಸ ತ್ವಮೇವಂವಿಧಂ ಕೃತ್ವಾ ಕರ್ಮ ಚಾಂಡಾಲವತ್ಸ್ವಯಂ।
07169030c ವಕ್ತುಮಿಚ್ಚಸಿ ವಕ್ತವ್ಯಃ ಕಸ್ಮಾನ್ಮಾಂ ಪರುಷಾಣ್ಯಥ।।

ಸ್ವಯಂ ನೀನೇ ಈ ರೀತಿಯ ಚಾಂಡಾಲಕೃತ್ಯವನ್ನೆಸಗಿ ಹೇಗೆ ತಾನೆ ನೀನು ನನ್ನ ಕುರಿತು ಕ್ರೂರವಾಗಿ ಹೀಗೆ ಮಾತನಾಡಲು ಬಯಸುವೆ?

07169031a ಕರ್ತಾ ತ್ವಂ ಕರ್ಮಣೋಗ್ರಸ್ಯ ನಾಹಂ ವೃಷ್ಣಿಕುಲಾಧಮ।
07169031c ಪಾಪಾನಾಂ ಚ ತ್ವಮಾವಾಸಃ ಕರ್ಮಣಾಂ ಮಾ ಪುನರ್ವದ।।

ವೃಷ್ಣಿಕುಲಾಧಮ! ಈ ರೀತಿಯ ಉಗ್ರಕರ್ಮವನ್ನು ಮಾಡಿದವನು ನೀನೇ. ನಾನಲ್ಲ! ಪಾಪಕರ್ಮಗಳೆಲ್ಲವೂ ನಿನ್ನಲ್ಲಿಯೇ ನೆಲೆಸಿವೆ. ಪುನಃ ಮಾತನಾಡಬೇಡ!

07169032a ಜೋಷಮಾಸ್ಸ್ವ ನ ಮಾಂ ಭೂಯೋ ವಕ್ತುಮರ್ಹಸ್ಯತಃ ಪರಂ।
07169032c ಅಧರೋತ್ತರಮೇತದ್ಧಿ ಯನ್ಮಾ ತ್ವಂ ವಕ್ತುಮಿಚ್ಛಸಿ।।

ಸುಮ್ಮನಾಗು! ಪುನಃ ನನ್ನೊಡನೆ ಈ ರೀತಿ ಮಾತನಾಡಬೇಡ! ನನಗೆ ನೀನು ಏನು ಹೇಳಲಿಚ್ಛಿಸಿದ್ದೀಯೋ ಅದಕ್ಕೂ ನೀಚವಾದ ಉತ್ತರವಿದೆ!

07169033a ಅಥ ವಕ್ಷ್ಯಸಿ ಮಾಂ ಮೌರ್ಖ್ಯಾದ್ಭೂಯಃ ಪರುಷಮೀದೃಶಂ।
07169033c ಗಮಯಿಷ್ಯಾಮಿ ಬಾಣೈಸ್ತ್ವಾಂ ಯುಧಿ ವೈವಸ್ವತಕ್ಷಯಂ।।

ಮೂರ್ಖತನದಿಂದ ನನ್ನ ಕುರಿತು ಪುನಃ ಈ ರೀತಿಯ ಕಟುನುಡಿಗಳನ್ನಾಡಿದರೆ ಯುದ್ಧದಲ್ಲಿ ಬಾಣಗಳಿಂದ ನಿನ್ನನ್ನು ವೈವಸ್ವತಕ್ಷಯಕ್ಕೆ ಕಳುಹಿಸುತ್ತೇನೆ!

07169034a ನ ಚೈವ ಮೂರ್ಖ ಧರ್ಮೇಣ ಕೇವಲೇನೈವ ಶಕ್ಯತೇ।
07169034c ತೇಷಾಮಪಿ ಹ್ಯಧರ್ಮೇಣ ಚೇಷ್ಟಿತಂ ಶೃಣು ಯಾದೃಶಂ।।

ಮೂರ್ಖ! ಕೇವಲ ಧರ್ಮದಿಂದ ಜಯಗಳಿಸಲು ಶಕ್ಯವಿಲ್ಲ. ಅವರೂ ಕೂಡ ಹೇಗೆ ಅಧರ್ಮದಿಂದ ನಡೆದುಕೊಂಡಿದ್ದರು ಎನ್ನುವುದನ್ನು ಕೇಳು!

07169035a ವಂಚಿತಃ ಪಾಂಡವಃ ಪೂರ್ವಮಧರ್ಮೇಣ ಯುಧಿಷ್ಠಿರಃ।
07169035c ದ್ರೌಪದೀ ಚ ಪರಿಕ್ಲಿಷ್ಟಾ ತಥಾಧರ್ಮೇಣ ಸಾತ್ಯಕೇ।।

ಸಾತ್ಯಕೇ! ಹಿಂದೆ ಅವರು ಪಾಂಡವ ಯುಧಿಷ್ಠಿರನನ್ನು ಅಧರ್ಮದಿಂದಲೇ ವಂಚಿಸಿದರು. ಹಾಗೆಯೇ ಅಧರ್ಮದಿಂದ ದ್ರೌಪದಿಯನ್ನು ಕೂಡ ಕಾಡಿದರು.

07169036a ಪ್ರವ್ರಾಜಿತಾ ವನಂ ಸರ್ವೇ ಪಾಂಡವಾಃ ಸಹ ಕೃಷ್ಣಯಾ।
07169036c ಸರ್ವಸ್ವಮಪಕೃಷ್ಟಂ ಚ ತಥಾಧರ್ಮೇಣ ಬಾಲಿಶ।।

ಬಾಲಿಶನೇ! ಕೃಷ್ಣೆಯೊಡನೆ ಪಾಂಡವರೆಲ್ಲರೂ ವನದಲ್ಲಿ ಪರಿವ್ರಾಜಕರ ಜೀವನ ನಡೆಸಿದರು. ಈ ಎಲ್ಲ ಕಷ್ಟವನ್ನೂ ಅವರಿಗೆ ಅಧರ್ಮದಿಂದಲೇ ನೀಡಲಾಯಿತಲ್ಲವೇ?

07169037a ಅಧರ್ಮೇಣಾಪಕೃಷ್ಟಶ್ಚ ಮದ್ರರಾಜಃ ಪರೈರಿತಃ।
07169037c ಇತೋಽಪ್ಯಧರ್ಮೇಣ ಹತೋ ಭೀಷ್ಮಃ ಕುರುಪಿತಾಮಹಃ।
07169037e ಭೂರಿಶ್ರವಾ ಹ್ಯಧರ್ಮೇಣ ತ್ವಯಾ ಧರ್ಮವಿದಾ ಹತಃ।।

ಮದ್ರರಾಜನನ್ನು ಶತ್ರುಗಳು ಅಧರ್ಮದಿಂದಲೇ ತಮ್ಮೊಡನೆ ಸೆಳೆದುಕೊಳ್ಳಲಿಲ್ಲವೇ? ನಮ್ಮ ಕಡೆಯ ಅಧರ್ಮದಿಂದ ಕುರುಪಿತಾಮಹ ಭೀಷ್ಮನು ಹತನಾದನು. ನಿನ್ನ ಅಧರ್ಮದಿಂದಾಗಿ ಧರ್ಮವಿದ ಭೂರಿಶ್ರವನು ಹತನಾದನು.

07169038a ಏವಂ ಪರೈರಾಚರಿತಂ ಪಾಂಡವೇಯೈಶ್ಚ ಸಂಯುಗೇ।
07169038c ರಕ್ಷಮಾಣೈರ್ಜಯಂ ವೀರೈರ್ಧರ್ಮಜ್ಞೈರಪಿ ಸಾತ್ವತ।।

ಸಾತ್ವತ! ಹೀಗೆ ಯುದ್ಧದಲ್ಲಿ ಜಯವನ್ನು ಪಾಲಿಸಲೋಸುಗ ಪಾಂಡವರು ಮತ್ತು ಅವರ ಶತ್ರುಗಳು ಧರ್ಮಜ್ಞರಾಗಿದ್ದರೂ ಅಧರ್ಮವನ್ನು ಆಚರಿಸಿರುವರು.

07169039a ದುರ್ಜ್ಞೇಯಃ ಪರಮೋ ಧರ್ಮಸ್ತಥಾಧರ್ಮಃ ಸುದುರ್ವಿದಃ।
07169039c ಯುಧ್ಯಸ್ವ ಕೌರವೈಃ ಸಾರ್ಧಂ ಮಾ ಗಾಃ ಪಿತೃನಿವೇಶನಂ।।

ಪರಮ ಧರ್ಮವು ಯಾವುದೆನ್ನುವುದೆಂದು ತಿಳಿಯಲು ಕಷ್ಟ. ಹಾಗೆಯೇ ಅಧರ್ಮವೇನೆಂದು ತಿಳಿಯುವುದೂ ಕಷ್ಟವೇ ಸರಿ. ಯುದ್ಧಮಾಡು! ಸುಮ್ಮನೇ ಕೌರವರೊಂದಿಗೆ ಪಿತೃಲೋಕಗಳಿಗೆ ಹೋಗಬೇಡ!”

07169040a ಏವಮಾದೀನಿ ವಾಕ್ಯಾನಿ ಕ್ರೂರಾಣಿ ಪರುಷಾಣಿ ಚ।
07169040c ಶ್ರಾವಿತಃ ಸಾತ್ಯಕಿಃ ಶ್ರೀಮಾನಾಕಂಪಿತ ಇವಾಭವತ್।।

ಇವೇ ಮೊದಲಾದ ಕ್ರೂರ ಕಠಿನ ಮಾತುಗಳನ್ನು ಕೇಳಿದ ಶ್ರೀಮಾನ್ ಸಾತ್ಯಕಿಯ ಮೈ ನಡುಗಿತು.

07169041a ತಚ್ಚ್ರುತ್ವಾ ಕ್ರೋಧತಾಮ್ರಾಕ್ಷಃ ಸಾತ್ಯಕಿಸ್ತ್ವಾದದೇ ಗದಾಂ।
07169041c ವಿನಿಃಶ್ವಸ್ಯ ಯಥಾ ಸರ್ಪಃ ಪ್ರಣಿಧಾಯ ರಥೇ ಧನುಃ।।

ಅದನ್ನು ಕೇಳಿ ಕ್ರೋಧದಿಂದ ಕಣ್ಣುಗಳು ಕೆಂಪಾಗಲು ಸಾತ್ಯಕಿಯು ಧನುಸ್ಸನ್ನು ರಥದಲ್ಲಿಯೇ ಇರಿಸಿ ಸರ್ಪದಂತೆ ಭುಸುಗುಟ್ಟುತ್ತಾ ಗದೆಯೊಂದನ್ನು ಎತ್ತಿಕೊಂಡನು.

07169042a ತತೋಽಭಿಪತ್ಯ ಪಾಂಚಾಲ್ಯಂ ಸಂರಂಭೇಣೇದಮಬ್ರವೀತ್।
07169042c ನ ತ್ವಾಂ ವಕ್ಷ್ಯಾಮಿ ಪರುಷಂ ಹನಿಷ್ಯೇ ತ್ವಾಂ ವಧಕ್ಷಮಂ।।

ಆಗ ಪಾಂಚಾಲ್ಯನ ಎದುರಾಗಿ ಅತ್ಯಂತ ಕೋಪದಿಂದ “ಇನ್ನು ನಿನ್ನೊಡನೆ ಕಠೋರವಾದ ಮಾತಗಳನ್ನಾಡುವುದಿಲ್ಲ! ವಧಾರ್ಹನಾದ ನಿನ್ನನ್ನು ಈಗಲೇ ಕೊಂದುಬಿಡುತ್ತೇನೆ!” ಎಂದನು.

07169043a ತಮಾಪತಂತಂ ಸಹಸಾ ಮಹಾಬಲಮಮರ್ಷಣಂ।
07169043c ಪಾಂಚಾಲ್ಯಾಯಾಭಿಸಂಕ್ರುದ್ಧಮಂತಕಾಯಾಂತಕೋಪಮಂ।।
07169044a ಚೋದಿತೋ ವಾಸುದೇವೇನ ಭೀಮಸೇನೋ ಮಹಾಬಲಃ।
07169044c ಅವಪ್ಲುತ್ಯ ರಥಾತ್ತೂರ್ಣಂ ಬಾಹುಭ್ಯಾಂ ಸಮವಾರಯತ್।।

ತಕ್ಷಣವೇ ವಾಸುದೇವನಿಂದ ಚೋದಿತನಾದ ಮಹಾಬಲ ಭೀಮಸೇನನು ರಥದಿಂದ ಹಾರಿ ತನ್ನ ಎರಡೂ ಬಾಹುಗಳಿಂದ ಹೀಗೆ ಸಂಕ್ರುದ್ಧನಾಗಿ ಪಾಂಚಾಲ್ಯನ ಮೇಲೆ ಬೀಳುತ್ತಿದ್ದ ಅಂತಕನಿಗೂ ಅಂತಕನಂತಿದ್ದ ಆ ಮಹಾಬಲ ಅಮರ್ಷಣನನ್ನು ಭದ್ರವಾಗಿ ಹಿಡಿದು ಮುಂದೆಹೋಗದಂತೆ ತಡೆದನು.

07169045a ದ್ರವಮಾಣಂ ತಥಾ ಕ್ರುದ್ಧಂ ಸಾತ್ಯಕಿಂ ಪಾಂಡವೋ ಬಲೀ।
07169045c ಪ್ರಸ್ಕಂದಮಾನಮಾದಾಯ ಜಗಾಮ ಬಲಿನಂ ಬಲಾತ್।।

ಹಾಗೆ ಕ್ರುದ್ಧನಾಗಿ ಓಡಿಹೋಗುತ್ತಿದ್ದ ಸಾತ್ಯಕಿಯನ್ನು ಬಲಶಾಲಿ ಪಾಂಡವನು ಹಿಡಿದು ತಡೆದಿದ್ದರೂ ಸಾತ್ಯಕಿಯು ಬಲಾತ್ಕಾರವಾಗಿ ಅವನನ್ನೇ ಎಳೆದುಕೊಂಡು ಮುಂದೆ ಸಾಗುತ್ತಿದ್ದನು.

07169046a ಸ್ಥಿತ್ವಾ ವಿಷ್ಟಭ್ಯ ಚರಣೌ ಭೀಮೇನ ಶಿನಿಪುಂಗವಃ।
07169046c ನಿಗೃಹೀತಃ ಪದೇ ಷಷ್ಠೇ ಬಲೇನ ಬಲಿನಾಂ ವರಃ।।

ಎರಡು ಪಾದಗಳನ್ನೂ ಭದ್ರವಾಗಿ ಊರಿಕೊಂಡು ನಿಂತಿದ್ದ ಭೀಮನು ಬಲಿಷ್ಠರಲ್ಲಿ ಶ್ರೇಷ್ಠನಾಗಿದ್ದ ಶಿನಿಪುಂಗವನನ್ನು ಆರನೆಯ ಹೆಜ್ಜೆಯನ್ನಿಡುವುದರೊಳಗೆ ತಡೆದು ನಿಲ್ಲಿಸಿದನು.

07169047a ಅವರುಹ್ಯ ರಥಾತ್ತಂ ತು ಹ್ರಿಯಮಾಣಂ ಬಲೀಯಸಾ।
07169047c ಉವಾಚ ಶ್ಲಕ್ಷ್ಣಯಾ ವಾಚಾ ಸಹದೇವೋ ವಿಶಾಂ ಪತೇ।।

ವಿಶಾಂಪತೇ! ಅಷ್ಟರಲ್ಲಿ ಸಹದೇವನು ತನ್ನ ರಥದಿಂದಿಳಿದು ಬಲಶಾಲಿ ಭೀಮನಿಂದ ಹಿಡಿಯಲ್ಪಟ್ಟಿದ್ದ ಸಾತ್ಯಕಿಗೆ ಮಧುರವಾದ ಈ ಮಾತುಗಳನ್ನಾಡಿದನು:

07169048a ಅಸ್ಮಾಕಂ ಪುರುಷವ್ಯಾಘ್ರ ಮಿತ್ರಮನ್ಯನ್ನ ವಿದ್ಯತೇ।
07169048c ಪರಮಂಧಕವೃಷ್ಣಿಭ್ಯಃ ಪಾಂಚಾಲೇಭ್ಯಶ್ಚ ಮಾಧವ।।

“ಪುರುಷವ್ಯಾಘ್ರ! ಮಾಧವ! ನಮಗೆ ಅಂಧಕ-ವೃಷ್ಣಿಗಳನ್ನೂ ಪಾಂಚಾಲರನ್ನೂ ಬಿಟ್ಟರೆ ಬೇರೆ ಯಾವ ಮಿತ್ರರೂ ಇಲ್ಲ.

07169049a ತಥೈವಾಂಧಕವೃಷ್ಣೀನಾಂ ತವ ಚೈವ ವಿಶೇಷತಃ।
07169049c ಕೃಷ್ಣಸ್ಯ ಚ ತಥಾಸ್ಮತ್ತೋ ಮಿತ್ರಮನ್ಯನ್ನ ವಿದ್ಯತೇ।।

ಹಾಗೆಯೇ ಅಂಧಕ-ವೃಷ್ಣಿಗಳಿಗೆ ಅದರಲ್ಲೂ ವಿಶೇಷವಾಗಿ ನಿನಗೆ ಮತ್ತು ಕೃಷ್ಣನಿಗೆ ನಮ್ಮನ್ನು ಬಿಟ್ಟು ಬೇರೆ ಯಾವ ಮಿತ್ರರೂ ಇಲ್ಲ.

07169050a ಪಾಂಚಾಲಾನಾಂ ಚ ವಾರ್ಷ್ಣೇಯ ಸಮುದ್ರಾಂತಾಂ ವಿಚಿನ್ವತಾಂ।
07169050c ನಾನ್ಯದಸ್ತಿ ಪರಂ ಮಿತ್ರಂ ಯಥಾ ಪಾಂಡವವೃಷ್ಣಯಃ।।

ವಾರ್ಷ್ಣೇಯ! ಪಾಂಚಾಲರಿಗೆ ಕೂಡ ಅವರು ಸಮುದ್ರಪರ್ಯಂತವಾಗಿ ಹುಡುಕಿದರೂ ಪಾಂಡವ-ವೃಷ್ಣಿಗಳಿಗಿಂತಲೂ ಉತ್ತಮ ಮಿತ್ರರು ಯಾರೂ ಇರುವುದಿಲ್ಲ.

07169051a ಸ ಭವಾನೀದೃಶಂ ಮಿತ್ರಂ ಮನ್ಯತೇ ಚ ಯಥಾ ಭವಾನ್।
07169051c ಭವಂತಶ್ಚ ಯಥಾಸ್ಮಾಕಂ ಭವತಾಂ ಚ ತಥಾ ವಯಂ।।

ನೀನು ನಮ್ಮನ್ನು ಎಂತಹ ಮಿತ್ರರೆಂದು ಭಾವಿಸುತ್ತಿರುವೆಯೋ ನಾವೂ ಸಹ ನಿನ್ನನ್ನು ಅಂತಹ ಮಿತ್ರನೆಂದೇ ಭಾವಿಸಿರುತ್ತೇವೆ. ನೀವು ನಮಗೆ ಹೇಗೋ ನಾವೂ ಸಹ ನಿಮಗೆ ಹಾಗೆಯೇ ಇದ್ದೇವೆ.

07169052a ಸ ಏವಂ ಸರ್ವಧರ್ಮಜ್ಞೋ ಮಿತ್ರಧರ್ಮಮನುಸ್ಮರನ್।
07169052c ನಿಯಚ್ಚ ಮನ್ಯುಂ ಪಾಂಚಾಲ್ಯಾತ್ಪ್ರಶಾಮ್ಯ ಶಿನಿಪುಂಗವ।।

ಸರ್ವಧರ್ಮಗಳನ್ನೂ ತಿಳಿದಿರುವವನೇ! ಶಿನಿಪುಂಗವ! ಮಿತ್ರಧರ್ಮವನ್ನು ಸ್ಮರಿಸಿಕೊಂಡು ಪಾಂಚಾಲ್ಯನ ಮೇಲಿರುವ ಸಿಟ್ಟನ್ನು ತಡೆಹಿಡಿದು ಶಾಂತನಾಗು!

07169053a ಪಾರ್ಷತಸ್ಯ ಕ್ಷಮ ತ್ವಂ ವೈ ಕ್ಷಮತಾಂ ತವ ಪಾರ್ಷತಃ।
07169053c ವಯಂ ಕ್ಷಮಯಿತಾರಶ್ಚ ಕಿಮನ್ಯತ್ರ ಶಮಾದ್ಭವೇತ್।।

ಪಾರ್ಷತನನ್ನು ನೀನು ಕ್ಷಮಿಸಿಬಿಡು. ಪಾರ್ಷತನೂ ನಿನ್ನನ್ನು ಕ್ಷಮಿಸಿಬಿಡಲಿ. ನೀವಿಬ್ಬರೂ ಕ್ಷಮಾವಂತರಾಗಿರೆಂದು ನಾವು ಆಶಿಸುತ್ತೇವೆ. ಕ್ಷಮೆಗಿಂತಲೂ ಅಧಿಕವಾದುದು ಬೇರೆ ಏನಿದೆ?”

07169054a ಪ್ರಶಾಮ್ಯಮಾನೇ ಶೈನೇಯೇ ಸಹದೇವೇನ ಮಾರಿಷ।
07169054c ಪಾಂಚಾಲರಾಜಸ್ಯ ಸುತಃ ಪ್ರಹಸನ್ನಿದಮಬ್ರವೀತ್।।

ಮಾರಿಷ! ಸಹದೇವನು ಹೀಗೆ ಶೈನೇಯನನ್ನು ಶಾಂತಗೊಳಿಸುತ್ತಿರಲು ಪಾಂಚಾಲರಾಜನ ಮಗನು ನಗುತ್ತಾ ಹೇಳಿದನು:

07169055a ಮುಂಚ ಮುಂಚ ಶಿನೇಃ ಪೌತ್ರಂ ಭೀಮ ಯುದ್ಧಮದಾನ್ವಿತಂ।
07169055c ಆಸಾದಯತು ಮಾಮೇಷ ಧರಾಧರಮಿವಾನಿಲಃ।।

“ಭೀಮ! ಯುದ್ಧಮದಾನ್ವಿತ ಈ ಶಿನಿಯ ಮೊಮ್ಮಗನನ್ನು ಬಿಟ್ಟುಬಿಡು! ಚಂಡಮಾರುತವು ಪರ್ವತವನ್ನು ಹೇಗೋ ಹಾಗೆ ಇವನು ನನ್ನನ್ನು ಎದುರಿಸಲಿ!

07169056a ಯಾವದಸ್ಯ ಶಿತೈರ್ಬಾಣೈಃ ಸಂರಂಭಂ ವಿನಯಾಮ್ಯಹಂ।
07169056c ಯುದ್ಧಶ್ರದ್ಧಾಂ ಚ ಕೌಂತೇಯ ಜೀವಿತಸ್ಯ ಚ ಸಂಯುಗೇ।।

ಕೌಂತೇಯ! ಈಗಲೇ ನಿಶಿತ ಬಾಣಗಳಿಂದ ಈ ಯಾದವನ ಕೋಪವನ್ನು, ಯುದ್ಧದಲ್ಲಿರುವ ಶ್ರದ್ಧೆಯನ್ನೂ ಮತ್ತು ಜೀವಿತವನ್ನೂ ಅಡಗಿಸುತ್ತೇನೆ!

07169057a ಕಿಂ ನು ಶಕ್ಯಂ ಮಯಾ ಕರ್ತುಂ ಕಾರ್ಯಂ ಯದಿದಮುದ್ಯತಂ।
07169057c ಸುಮಹತ್ಪಾಂಡುಪುತ್ರಾಣಾಮಾಯಾಂತ್ಯೇತೇ ಹಿ ಕೌರವಾಃ।।

ಕೌರವರು ಮಹಾಸೇನೆಯೊಂದಿಗೆ ಪಾಂಡುಪುತ್ರರೊಡನೆ ಯುದ್ಧಕ್ಕಾಗಿ ಬರುತ್ತಿರುವ ಈ ಸಮಯದಲ್ಲಿ ನಾನಾದರೂ ಏನುತಾನೇ ಮಾಡಬಲ್ಲೆನು?

07169058a ಅಥ ವಾ ಫಲ್ಗುನಃ ಸರ್ವಾನ್ವಾರಯಿಷ್ಯತಿ ಸಂಯುಗೇ।
07169058c ಅಹಮಪ್ಯಸ್ಯ ಮೂರ್ಧಾನಂ ಪಾತಯಿಷ್ಯಾಮಿ ಸಾಯಕೈಃ।।

ಅಥವಾ ಫಲ್ಗುನನು ಯುದ್ಧದಲ್ಲಿ ಅವರೆಲ್ಲರನ್ನೂ ತಡೆಯುತ್ತಾನೆ. ನಾನಾದರೋ ಸಾಯಕಗಳಿಂದ ಇವನ ತಲೆಯನ್ನು ನೆಲಕ್ಕೆ ಬೀಳಿಸುತ್ತೇನೆ!

07169059a ಮನ್ಯತೇ ಛಿನ್ನಬಾಹುಂ ಮಾಂ ಭೂರಿಶ್ರವಸಮಾಹವೇ।
07169059c ಉತ್ಸೃಜೈನಮಹಂ ವೈನಮೇಷ ಮಾಂ ವಾ ಹನಿಷ್ಯತಿ।।

ಇವನು ನನ್ನನ್ನೂ ಯುದ್ಧದಲ್ಲಿ ಭುಜವನ್ನು ಕಳೆದುಕೊಂಡ ಭೂರಿಶ್ರವಸನೆಂದೇ ಭಾವಿಸಿದ್ದಾನೆ. ಇವನನ್ನು ಬಿಟ್ಟುಬಿಡು! ಇವನು ನನ್ನನ್ನು ಕೊಲ್ಲುತ್ತಾನೆ ಅಥವಾ ನಾನು ಇವನನ್ನು ಕೊಲ್ಲುತ್ತೇನೆ!”

07169060a ಶೃಣ್ವನ್ಪಾಂಚಾಲವಾಕ್ಯಾನಿ ಸಾತ್ಯಕಿಃ ಸರ್ಪವಚ್ಚ್ವಸನ್।
07169060c ಭೀಮಬಾಹ್ವಂತರೇ ಸಕ್ತೋ ವಿಸ್ಫುರತ್ಯನಿಶಂ ಬಲೀ।।

ಪಾಂಚಾಲ್ಯನ ಮಾತುಗಳನ್ನು ಕೇಳಿ ಸಾತ್ಯಕಿಯು ಸರ್ಪದಂತೆ ದೀರ್ಘವಾಗಿ ನಿಟ್ಟುಸಿರುಬಿಡುತ್ತಾ ಭೀಮನ ಬಾಹುಬಂಧನದಿಂದ ಬಿಡಿಸಿಕೊಳ್ಳಲು ಚಡಪಡಿಸುತ್ತಿದ್ದನು.

07169061a ತ್ವರಯಾ ವಾಸುದೇವಶ್ಚ ಧರ್ಮರಾಜಶ್ಚ ಮಾರಿಷ।
07169061c ಯತ್ನೇನ ಮಹತಾ ವೀರೌ ವಾರಯಾಮಾಸತುಸ್ತತಃ।।

ಮಾರಿಷ! ಆಗ ವಾಸುದೇವ ಮತ್ತು ಧರ್ಮರಾಜರು ತ್ವರೆಮಾಡಿ ಮಹಾ ಪ್ರಯತ್ನದಿಂದ ಆ ಇಬ್ಬರು ವೀರರನ್ನೂ ತಡೆದರು.

07169062a ನಿವಾರ್ಯ ಪರಮೇಷ್ವಾಸೌ ಕ್ರೋಧಸಂರಕ್ತಲೋಚನೌ।
07169062c ಯುಯುತ್ಸವಃ ಪರಾನ್ಸಂಖ್ಯೇ ಪ್ರತೀಯುಃ ಕ್ಷತ್ರಿಯರ್ಷಭಾಃ।।

ಆಗ ಕ್ರೋಧದಿಂದ ಕಣ್ಣುಗಳು ಕೆಂಪಾಗಿದ್ದ ಆ ಪರಮೇಷ್ವಾಸ ಕ್ಷತ್ರಿಯರ್ಷಭರಿಬ್ಬರೂ ತಮ್ಮ ಜಗಳವನ್ನು ನಿಲ್ಲಿಸಿ ಎದುರಾಗಿ ಬರುತ್ತಿರುವ ಶತ್ರುಸೇನೆಯೊಡನೆ ಯುದ್ಧಮಾಡತೊಡಗಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣಪರ್ವಣಿ ನಾರಾಯಣಾಸ್ತ್ರಮೋಕ್ಷಣಪರ್ವಣಿ ಧೃಷ್ಟದ್ಯುಮ್ನಸಾತ್ಯಕಿಕ್ರೋಧೇ ಏಕೋನಸಪ್ತತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣಪರ್ವದಲ್ಲಿ ನಾರಾಯಣಾಸ್ತ್ರಮೋಕ್ಷಣಪರ್ವದಲ್ಲಿ ಧೃಷ್ಟದ್ಯುಮ್ನಸಾತ್ಯಕಿಕ್ರೋಧ ಎನ್ನುವ ನೂರಾಅರವತ್ತೊಂಭತ್ತನೇ ಅಧ್ಯಾಯವು.