168 ಧೃಷ್ಟದ್ಯುಮ್ನವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ನಾರಾಯಣಾಸ್ತ್ರಮೋಕ್ಷ ಪರ್ವ

ಅಧ್ಯಾಯ 168

ಸಾರ

ಅರ್ಜುನನನ್ನು ಕೇಳಿ ಭೀಮಸೇನನು ಮಾತನಾಡಿದುದು (1-20). ಧೃಷ್ಟದ್ಯುಮ್ನನ ಮಾತು (21-39).

07168001 ಸಂಜಯ ಉವಾಚ।
07168001a ಅರ್ಜುನಸ್ಯ ವಚಃ ಶ್ರುತ್ವಾ ನೋಚುಸ್ತತ್ರ ಮಹಾರಥಾಃ।
07168001c ಅಪ್ರಿಯಂ ವಾ ಪ್ರಿಯಂ ವಾಪಿ ಮಹಾರಾಜ ಧನಂಜಯಂ।।

ಸಂಜಯನು ಹೇಳಿದನು: “ಮಹಾರಾಜ! ಅರ್ಜುನನ ಆ ಮಾತನ್ನು ಕೇಳಿ ಮಹಾರಥರು ಯಾರೂ ಧನಂಜಯನಿಗೆ ಅಪ್ರಿಯವಾದ ಅಥವಾ ಪ್ರಿಯವಾದ ಏನನ್ನೂ ಹೇಳಲಿಲ್ಲ.

07168002a ತತಃ ಕ್ರುದ್ಧೋ ಮಹಾಬಾಹುರ್ಭೀಮಸೇನೋಽಭ್ಯಭಾಷತ।
07168002c ಉತ್ಸ್ಮಯನ್ನಿವ ಕೌಂತೇಯಮರ್ಜುನಂ ಭರತರ್ಷಭ।।

ಭರತರ್ಷಭ! ಆಗ ಕ್ರುದ್ಧ ಮಹಾಬಾಹು ಭೀಮಸೇನನು ಕೌಂತೇಯ ಅರ್ಜುನನನ್ನು ಬೈಯುತ್ತಿರುವನೋ ಎನ್ನುವಂತೆ ಹೇಳಿದನು:

07168003a ಮುನಿರ್ಯಥಾರಣ್ಯಗತೋ ಭಾಷಸೇ ಧರ್ಮಸಂಹಿತಂ।
07168003c ನ್ಯಸ್ತದಂಡೋ ಯಥಾ ಪಾರ್ಥ ಬ್ರಾಹ್ಮಣಃ ಸಂಶಿತವ್ರತಃ।।

“ಪಾರ್ಥ! ಅರಣ್ಯವನ್ನು ಸೇರಿರುವ ಧರ್ಮಸಂಹಿತ ಮುನಿಯಂತೆ ಮತ್ತು ದಂಡವನ್ನು ತೊರೆದ ಸಂಶಿತವ್ರತ ಬ್ರಾಹ್ಮಣನಂತೆ ಮಾತನಾಡುತ್ತಿರುವೆ!

07168004a ಕ್ಷತಾತ್ತ್ರಾತಾ ಕ್ಷತಾಜ್ಜೀವನ್ ಕ್ಷಾಂತಸ್ತ್ರಿಷ್ವಪಿ ಸಾಧುಷು।
07168004c ಕ್ಷತ್ರಿಯಃ ಕ್ಷಿತಿಮಾಪ್ನೋತಿ ಕ್ಷಿಪ್ರಂ ಧರ್ಮಂ ಯಶಃ ಶ್ರಿಯಂ।।

ಸಂಕಟದಲ್ಲಿರುವ ತನ್ನನ್ನೂ ಸಂಕಟದಲ್ಲಿರುವವರನ್ನೂ ರಕ್ಷಿಸುವ, ಸ್ತ್ರೀಯರು ಮತ್ತು ಸಾಧುಗಳ ವಿಷಯದಲ್ಲಿ ಕ್ಷಮಾಭಾವದಿಂದಿರುವ ಕ್ಷತ್ರಿಯನು ಬೇಗನೆ ಭೂಮಿಯನ್ನೂ, ಧರ್ಮವನ್ನೂ, ಯಶಸ್ಸನ್ನೂ, ಸಂಪತ್ತನ್ನೂ ಪಡೆಯುತ್ತಾನೆ.

07168005a ಸ ಭವಾನ್ ಕ್ಷತ್ರಿಯಗುಣೈರ್ಯುಕ್ತಃ ಸರ್ವೈಃ ಕುಲೋದ್ವಹಃ।
07168005c ಅವಿಪಶ್ಚಿದ್ಯಥಾ ವಾಕ್ಯಂ ವ್ಯಾಹರನ್ನಾದ್ಯ ಶೋಭಸೇ।।

ನೀನಾದರೋ ಕ್ಷತ್ರಿಯರ ಎಲ್ಲ ಗುಣಗಳಿಂದ ಕೂಡಿರುವೆ. ಕುಲೋದ್ಧಾರಕನಾಗಿರುವೆ. ಆದರೆ ಮೂರ್ಖನಂತೆ ಇಂದು ನೀನಾಡುವ ಈ ಮಾತು ನಿನಗೆ ಶೋಭಿಸುವುದಿಲ್ಲ.

07168006a ಪರಾಕ್ರಮಸ್ತೇ ಕೌಂತೇಯ ಶಕ್ರಸ್ಯೇವ ಶಚೀಪತೇಃ।
07168006c ನ ಚಾತಿವರ್ತಸೇ ಧರ್ಮಂ ವೇಲಾಮಿವ ಮಹೋದಧಿಃ।।

ಕೌಂತೇಯ! ನಿನ್ನ ಪರಾಕ್ರಮವು ಶಚೀಪತಿ ಶಕ್ರನ ಪರಾಕ್ರಮದಂತಿದೆ. ಮಹಾಸಾಗರವು ತೀರವನ್ನು ಅತಿಕ್ರಮಿಸದಂತೆ ನೀನು ಧರ್ಮವನ್ನು ಅತಿಕ್ರಮಿಸುವವನಲ್ಲ.

07168007a ನ ಪೂಜಯೇತ್ತ್ವಾ ಕೋಽನ್ವದ್ಯ ಯತ್ತ್ರಯೋದಶವಾರ್ಷಿಕಂ।
07168007c ಅಮರ್ಷಂ ಪೃಷ್ಠತಃ ಕೃತ್ವಾ ಧರ್ಮಮೇವಾಭಿಕಾಂಕ್ಷಸೇ।।

ಹದಿಮೂರುವರ್ಷಗಳ ಕೋಪವನ್ನು ಹಿಂದೆ ಸರಿಸಿ ಧರ್ಮವನ್ನೇ ಬಯಸಿರುವ ನಿನ್ನನ್ನು ಇಂದು ಯಾರು ತಾನೇ ಗೌರವಿಸುವುದಿಲ್ಲ?

07168008a ದಿಷ್ಟ್ಯಾ ತಾತ ಮನಸ್ತೇಽದ್ಯ ಸ್ವಧರ್ಮಮನುವರ್ತತೇ।
07168008c ಆನೃಶಂಸ್ಯೇ ಚ ತೇ ದಿಷ್ಟ್ಯಾ ಬುದ್ಧಿಃ ಸತತಮಚ್ಯುತ।।

ಅಯ್ಯಾ! ಅದೃಷ್ಟವಶಾತ್ ನಿನ್ನ ಮನಸ್ಸು ಇಂದು ಸ್ವಧರ್ಮವನ್ನು ಅನುಸರಿಸಿದೆ. ಅಚ್ಯುತ! ಅದೃಷ್ಟವಶಾತ್ ನಿನ್ನ ಬುದ್ಧಿಯು ಸತತವೂ ದಯಾಪೂರ್ಣವಾಗಿದೆ.

07168009a ಯತ್ತು ಧರ್ಮಪ್ರವೃತ್ತಸ್ಯ ಹೃತಂ ರಾಜ್ಯಮಧರ್ಮತಃ।
07168009c ದ್ರೌಪದೀ ಚ ಪರಾಮೃಷ್ಟಾ ಸಭಾಮಾನೀಯ ಶತ್ರುಭಿಃ।।
07168010a ವನಂ ಪ್ರವ್ರಾಜಿತಾಶ್ಚಾಸ್ಮ ವಲ್ಕಲಾಜಿನವಾಸಸಃ।
07168010c ಅನರ್ಹಮಾಣಾಸ್ತಂ ಭಾವಂ ತ್ರಯೋದಶ ಸಮಾಃ ಪರೈಃ।।

ಆದರೂ ಧರ್ಮಪ್ರವೃತ್ತನಾಗಿದ್ದವನ ರಾಜ್ಯವನ್ನು ಅಧರ್ಮದಿಂದ ಅಪಹರಿಸಲಾಯಿತು. ಶತ್ರುಗಳು ದ್ರೌಪದಿಯನ್ನು ಸಭೆಗೆ ಎಳೆದುತಂದು ಅಪಮಾನಿಸಿದರು. ಅನರ್ಹರಾಗಿದ್ದರೂ ನಮ್ಮನ್ನು ಪರಿವ್ರಾಜಕರಂತೆ ವಲ್ಕಲಜಿನಗಳನ್ನುಟ್ಟು ಹದಿಮೂರು ವರ್ಷ ವನದಲ್ಲಿರುವಂತೆ ಮಾಡಿದರು.

07168011a ಏತಾನ್ಯಮರ್ಷಸ್ಥಾನಾನಿ ಮರ್ಷಿತಾನಿ ತ್ವಯಾನಘ।
07168011c ಕ್ಷತ್ರಧರ್ಮಪ್ರಸಕ್ತೇನ ಸರ್ವಮೇತದನುಷ್ಠಿತಂ।।

ಅನಘ! ಇವೆಲ್ಲವೂ ಕೋಪಗೊಳ್ಳತಕ್ಕ ಸಂದರ್ಭಗಳಾಗಿದ್ದರೂ ಕೋಪಗೊಳ್ಳದೇ ಕ್ಷತ್ರಧರ್ಮವನ್ನು ಅನುಸರಿಸುತ್ತಿದ್ದ ನೀನು ಎಲ್ಲವನ್ನೂ ಅನುಸರಿಸಿದೆ.

07168012a ತಮಧರ್ಮಮಪಾಕ್ರಷ್ಟುಮಾರಬ್ಧಃ ಸಹಿತಸ್ತ್ವಯಾ।
07168012c ಸಾನುಬಂಧಾನ್ ಹನಿಷ್ಯಾಮಿ ಕ್ಷುದ್ರಾನ್ರಾಜ್ಯಹರಾನಹಂ।।
07168013a ತ್ವಯಾ ತು ಕಥಿತಂ ಪೂರ್ವಂ ಯುದ್ಧಾಯಾಭ್ಯಾಗತಾ ವಯಂ।
07168013c ಘಟಾಮಶ್ಚ ಯಥಾಶಕ್ತಿ ತ್ವಂ ತು ನೋಽದ್ಯ ಜುಗುಪ್ಸಸೇ।।

ಆ ಅಧರ್ಮಿಗಳನ್ನು ರಾಜ್ಯಕಳ್ಳರನ್ನು ಕ್ಷುದ್ರರನ್ನು ಅನುಯಾಯಿಗಳೊಂದಿಗೆ ಸಂಹರಿಸುತ್ತೇನೆ ಎಂದು ನೀನು ಹೇಳಿದುದರಿಂದ ನಾವು ಯುದ್ಧಕ್ಕಾಗಿ ಬಂದಿದ್ದೇವೆ. ಯಥಾಶಕ್ತಿಯಾಗಿ ನಾವು ಪರಿಶ್ರಮ ಪಡುತ್ತಿರುವಾಗ ಇಂದು ನೀನು ಯುದ್ಧದಿಂದ ಜಿಗುಪ್ಸಿತನಾದಂತಿದೆ!

07168014a ಸ್ವಧರ್ಮಂ ನೇಚ್ಛಸೇ ಜ್ಞಾತುಂ ಮಿಥ್ಯಾ ವಚನಮೇವ ತೇ।
07168014c ಭಯಾರ್ದಿತಾನಾಮಸ್ಮಾಕಂ ವಾಚಾ ಮರ್ಮಾಣಿ ಕೃಂತಸಿ।।

ನೀನು ಸ್ವಧರ್ಮವನ್ನು ತಿಳಿಯಲು ಇಚ್ಛಿಸುತ್ತಿಲ್ಲ. ನಿನ್ನ ಮಾತುಗಳು ಸುಳ್ಳು. ಭಯಾರ್ದಿತರಾದ ನಮ್ಮ ಮರ್ಮಗಳನ್ನು ನಿನ್ನ ಮಾತುಗಳು ಕತ್ತರಿಸುತ್ತಿವೆ.

07168015a ವಪನ್ವ್ರಣೇ ಕ್ಷಾರಮಿವ ಕ್ಷತಾನಾಂ ಶತ್ರುಕರ್ಶನ।
07168015c ವಿದೀರ್ಯತೇ ಮೇ ಹೃದಯಂ ತ್ವಯಾ ವಾಕ್ಶಲ್ಯಪೀಡಿತಂ।।

ಶತ್ರುಕರ್ಶನ! ಗಾಯಗೊಂಡವರ ಗಾಯದಮೇಲೆ ಉಪ್ಪುಚೆಲ್ಲುವಂತೆ ನಿನ್ನ ಮಾತಿನ ಬಾಣಗಳು ನನ್ನ ಹೃದಯವನ್ನು ಸೀಳುತ್ತಿವೆ.

07168016a ಅಧರ್ಮಮೇತದ್ವಿಪುಲಂ ಧಾರ್ಮಿಕಃ ಸನ್ನ ಬುಧ್ಯಸೇ।
07168016c ಯತ್ತ್ವಮಾತ್ಮಾನಮಸ್ಮಾಂಶ್ಚ ಪ್ರಶಂಸ್ಯಾನ್ನ ಪ್ರಶಂಸಸಿ।
07168016e ಯಃ ಕಲಾಂ ಷೋಡಶೀಂ ತ್ವತ್ತೋ ನಾರ್ಹತೇ ತಂ ಪ್ರಶಂಸಸಿ।।

ಪ್ರಶಂಸೆಗೆ ಅರ್ಹರಾದ ನಿನ್ನನ್ನು ಮತ್ತು ನಮ್ಮನ್ನು ಪ್ರಶಂಸಿಸದೇ ಇರುವುದು ಅತ್ಯಂತ ಅಧರ್ಮವೆಂದು ಧಾರ್ಮಿಕನಾದ ನಿನಗೂ ತಿಳಿಯುತ್ತಿಲ್ಲವಲ್ಲ! ನಿನ್ನ ಹದಿನಾರರಲ್ಲಿ ಒಂದು ಅಂಶಕ್ಕೂ ಸಮನಾಗಿರದ ಪ್ರಶಂಸೆಗೆ ಅರ್ಹರಲ್ಲದವರನ್ನು ನೀನು ಪ್ರಶಂಸಿಸುತ್ತಿರುವೆ!

07168017a ಸ್ವಯಮೇವಾತ್ಮನೋ ವಕ್ತುಂ ನ ಯುಕ್ತಂ ಗುಣಸಂಸ್ತವಂ।
07168017c ದಾರಯೇಯಂ ಮಹೀಂ ಕ್ರೋಧಾದ್ವಿಕಿರೇಯಂ ಚ ಪರ್ವತಾನ್।।

ಸ್ವಯಂ ತಾನೇ ತನ್ನ ಕುರಿತು ಹೇಳಿಕೊಳ್ಳುವುದು ಮತ್ತು ಗುಣಸ್ತುತಿಮಾಡಿಕೊಳ್ಳುವುದು ಸರಿಯಲ್ಲ. ಆದರೂ ಕ್ರೋಧದಿಂದ ನಾನು ಈ ಭೂಮಿಯನ್ನು ಸೀಳಿಬಿಡಬಲ್ಲೆ. ಪರ್ವತಗಳನ್ನು ಪುಡಿಪುಡಿಮಾಡಬಲ್ಲೆ.

07168018a ಆವಿಧ್ಯ ಚ ಗದಾಂ ಗುರ್ವೀಂ ಭೀಮಾಂ ಕಾಂಚನಮಾಲಿನೀಂ।
07168018c ಗಿರಿಪ್ರಕಾಶಾನ್ ಕ್ಷಿತಿಜಾನ್ಭಂಜೇಯಮನಿಲೋ ಯಥಾ।।

ಭಯಂಕರ ಭಾರದ ಈ ಕಾಂಚನಮಾಲಿನೀ ಗದೆಯನ್ನು ಪ್ರಯೋಗಿಸಿ ಚಂಡಮಾರುತದಂತೆ ಪರ್ವತಗಳಂತಿರುವ ವೃಕ್ಷಗಳನ್ನೂ ಕಡಿದುರುಳಿಸಬಲ್ಲೆ!

07168019a ಸ ತ್ವಮೇವಂವಿಧಂ ಜಾನನ್ಭ್ರಾತರಂ ಮಾಂ ನರರ್ಷಭ।
07168019c ದ್ರೋಣಪುತ್ರಾದ್ಭಯಂ ಕರ್ತುಂ ನಾರ್ಹಸ್ಯಮಿತವಿಕ್ರಮ।।

ನರರ್ಷಭ! ಅಮಿತವಿಕ್ರಮ! ನಿನ್ನ ಸಹೋದರನಾದ ನಾನು ಹೀಗಿದ್ದೇನೆಂದು ತಿಳಿದೂ ದ್ರೋಣಪುತ್ರನಿಗೋಸ್ಕರವಾಗಿ ನಮ್ಮಲ್ಲಿ ಭಯವನ್ನುಂಟುಮಾಡುವುದು ನಿನಗೆ ಸರಿಯಲ್ಲ!

07168020a ಅಥ ವಾ ತಿಷ್ಠ ಬೀಭತ್ಸೋ ಸಹ ಸರ್ವೈರ್ನರರ್ಷಭೈಃ।
07168020c ಅಹಮೇನಂ ಗದಾಪಾಣಿರ್ಜೇಷ್ಯಾಮ್ಯೇಕೋ ಮಹಾಹವೇ।।

ಬೀಭತ್ಸೋ! ಎಲ್ಲ ನರರ್ಷಭರೊಡನೆ ನೀನು ಇಲ್ಲಿಯೇ ನಿಲ್ಲು. ಗದಾಪಾಣಿಯಾಗಿ ನಾನೊಬ್ಬನೇ ಈ ಮಹಾಯುದ್ಧವನ್ನು ಜಯಿಸುತ್ತೇನೆ!”

07168021a ತತಃ ಪಾಂಚಾಲರಾಜಸ್ಯ ಪುತ್ರಃ ಪಾರ್ಥಮಥಾಬ್ರವೀತ್।
07168021c ಸಂಕ್ರುದ್ಧಮಿವ ನರ್ದಂತಂ ಹಿರಣ್ಯಕಶಿಪುಂ ಹರಿಃ।।

ಆಗ ಪಾಂಚಾಲರಾಜ ಪುತ್ರನು ಸಂಕ್ರುದ್ಧನಾದ ನರಹರಿಯು ಹಿರಣ್ಯಕಶಿಪುವಿಗೆ ಗರ್ಜಿಸಿ ಹೇಳುವಂತೆ ಹೇಳಿದನು:

07168022a ಬೀಭತ್ಸೋ ವಿಪ್ರಕರ್ಮಾಣಿ ವಿದಿತಾನಿ ಮನೀಷಿಣಾಂ।
07168022c ಯಾಜನಾಧ್ಯಾಪನೇ ದಾನಂ ತಥಾ ಯಜ್ಞಪ್ರತಿಗ್ರಹೌ।।
07168023a ಷಷ್ಠಮಧ್ಯಯನಂ ನಾಮ ತೇಷಾಂ ಕಸ್ಮಿನ್ ಪ್ರತಿಷ್ಠಿತಃ।
07168023c ಹತೋ ದ್ರೋಣೋ ಮಯಾ ಯತ್ತತ್ಕಿಂ ಮಾಂ ಪಾರ್ಥ ವಿಗರ್ಹಸೇ।।

“ಬೀಭತ್ಸೋ! ಪಾರ್ಥ! ಯಾಜನ, ಅಧ್ಯಾಪನ, ದಾನ, ಯಜ್ಞ, ಪ್ರತಿಗ್ರಹ, ಮತ್ತು ಅಧ್ಯಯನ - ಈ ಆರು ವಿಪ್ರನ ಕರ್ಮಗಳೆಂದು ತಿಳಿದವರು ಹೇಳುತ್ತಾರೆ. ಇವುಗಳಲ್ಲಿ ಯಾವುದು ಅವನಲ್ಲಿತ್ತೆಂದು ನೀನು ದ್ರೋಣನನ್ನು ಕೊಂದಿದುದಕ್ಕೆ ನನ್ನನ್ನು ನಿಂದಿಸುತ್ತಿರುವೆ?

07168024a ಅಪಕ್ರಾಂತಃ ಸ್ವಧರ್ಮಾಚ್ಚ ಕ್ಷತ್ರಧರ್ಮಮುಪಾಶ್ರಿತಃ।
07168024c ಅಮಾನುಷೇಣ ಹಂತ್ಯಸ್ಮಾನಸ್ತ್ರೇಣ ಕ್ಷುದ್ರಕರ್ಮಕೃತ್।।

ಸ್ವಧರ್ಮವನ್ನು ಅತಿಕ್ರಮಿಸಿ ಕ್ಷತ್ರಧರ್ಮವನ್ನು ಅನುಸರಿಸಿ ಆ ಕ್ಷುದ್ಧಕರ್ಮಿಯು ಅಮಾನುಷ ಅಸ್ತ್ರಗಳಿಂದ ನಮ್ಮವರನ್ನು ಸಂಹರಿಸುತ್ತಿದ್ದನು.

07168025a ತಥಾ ಮಾಯಾಂ ಪ್ರಯುಂಜಾನಮಸಹ್ಯಂ ಬ್ರಾಹ್ಮಣಬ್ರುವಂ।
07168025c ಮಾಯಯೈವ ನಿಹನ್ಯಾದ್ಯೋ ನ ಯುಕ್ತಂ ಪಾರ್ಥ ತತ್ರ ಕಿಂ।।

ಪಾರ್ಥ! ಬ್ರಾಹ್ಮಣನೆಂದು ಕರೆಯಿಸಿಕೊಂಡು ಅಸಹ್ಯವಾದ ಮಾಯೆಯಿಂದ ನಮ್ಮನ್ನು ಸಂಹರಿಸುತ್ತಿದ್ದ ಅವನನ್ನು ಇಂದು ಮಾಯೆಯಿಂದಲೇ ನಾವು ಸಂಹರಿಸಿದರೆ ಅದರಲ್ಲಿ ಸರಿಯಿಲ್ಲದೇ ಇದ್ದುದು ಯಾವುದಿದೆ?

07168026a ತಸ್ಮಿಂಸ್ತಥಾ ಮಯಾ ಶಸ್ತೇ ಯದಿ ದ್ರೌಣಾಯನೀ ರುಷಾ।
07168026c ಕುರುತೇ ಭೈರವಂ ನಾದಂ ತತ್ರ ಕಿಂ ಮಮ ಹೀಯತೇ।।

ಹಾಗಿದ್ದ ಅವನನ್ನು ಸಂಹರಿಸಲು ದ್ರೌಣಿಯು ರೋಷದಿಂದ ಭೈರವವಾಗಿ ಕೂಗಿಕೊಳ್ಳುತ್ತಿದ್ದರೆ ಅದರಲ್ಲಿ ನನ್ನದೇನು ಕಳೆದು ಹೋಗುತ್ತದೆ?

07168027a ನ ಚಾದ್ಭುತಮಿದಂ ಮನ್ಯೇ ಯದ್ದ್ರೌಣಿಃ ಶುದ್ಧಗರ್ಜಯಾ।
07168027c ಘಾತಯಿಷ್ಯತಿ ಕೌರವ್ಯಾನ್ಪರಿತ್ರಾತುಮಶಕ್ನುವನ್।।

ಯುದ್ಧದ ನೆಪಮಾಡಿಕೊಂಡು ಕೌರವರನ್ನು ರಕ್ಷಿಸಲಾಗದೇ ದ್ರೌಣಿಯು ಒಂದುವೇಳೆ ಅವರನ್ನೇ ಸಂಹರಿಸಿದರೂ ನನಗೆ ಅದ್ಭುತವೆಂದೆನಿಸುವುದಿಲ್ಲ!

07168028a ಯಚ್ಚ ಮಾಂ ಧಾರ್ಮಿಕೋ ಭೂತ್ವಾ ಬ್ರವೀಷಿ ಗುರುಘಾತಿನಂ।
07168028c ತದರ್ಥಮಹಮುತ್ಪನ್ನಃ ಪಾಂಚಾಲ್ಯಸ್ಯ ಸುತೋಽನಲಾತ್।।

ಧಾರ್ಮಿಕನಾಗಿದ್ದುಕೊಂಡು ಯಾವ ನನ್ನನ್ನು ಗುರುಘಾತಿನಿಯೆಂದು ನೀನು ಕರೆಯುತ್ತಿರುವೆಯೋ ಆ ನಾನು ಅದನ್ನು ಮಾಡಲೆಂದೇ ಅಗ್ನಿಯಿಂದ ಪಾಂಚಾಲ್ಯನ ಮಗನಾಗಿ ಉತ್ಪನ್ನನಾಗಿರುವೆ!

07168029a ಯಸ್ಯ ಕಾರ್ಯಮಕಾರ್ಯಂ ವಾ ಯುಧ್ಯತಃ ಸ್ಯಾತ್ಸಮಂ ರಣೇ।
07168029c ತಂ ಕಥಂ ಬ್ರಾಹ್ಮಣಂ ಬ್ರೂಯಾಃ ಕ್ಷತ್ರಿಯಂ ವಾ ಧನಂಜಯ।।

ಧನಂಜಯ! ರಣದಲ್ಲಿ ಯಾರಿಗೆ ಮಾಡುವಂತಹುದು ಮತ್ತು ಮಾಡಬಾರದಂತಹುದು ಒಂದೇ ಸಮನಾಗಿದ್ದವೋ ಅವನು ಬ್ರಾಹ್ಮಣ ಅಥವಾ ಕ್ಷತ್ರಿಯನೆಂದು ನೀನು ಹೇಗೆ ಹೇಳುವೆ?

07168030a ಯೋ ಹ್ಯನಸ್ತ್ರವಿದೋ ಹನ್ಯಾದ್ಬ್ರಹ್ಮಾಸ್ತ್ರೈಃ ಕ್ರೋಧಮೂರ್ಛಿತಃ।
07168030c ಸರ್ವೋಪಾಯೈರ್ನ ಸ ಕಥಂ ವಧ್ಯಃ ಪುರುಷಸತ್ತಮ।।

ಪುರುಷಸತ್ತಮ! ಅಸ್ತ್ರಗಳನ್ನು ತಿಳಿಯದವರನ್ನು ಯಾವನು ಕ್ರೋಧಮೂರ್ಛಿತನಾಗಿ ಬ್ರಹ್ಮಾಸ್ತ್ರಗಳಿಂದ ಸಂಹರಿಸುತ್ತಿದ್ದನೋ ಅಂಥವನನ್ನು ಸರ್ವೋಪಾಯಗಳಿಂದ ಏಕೆ ವಧಿಸಬಾರದು?

07168031a ವಿಧರ್ಮಿಣಂ ಧರ್ಮವಿದ್ಭಿಃ ಪ್ರೋಕ್ತಂ ತೇಷಾಂ ವಿಷೋಪಮಂ।
07168031c ಜಾನನ್ಧರ್ಮಾರ್ಥತತ್ತ್ವಜ್ಞಃ ಕಿಮರ್ಜುನ ವಿಗರ್ಹಸೇ।।

ಅರ್ಜುನ! ಧರ್ಮಾರ್ಥತತ್ತ್ವಜ್ಞ! ಧರ್ಮವಿದುಗಳು ತಮಗೆ ವಿಷಸಮರೆಂದು ವಿಧರ್ಮಿಗಳು ಹೇಳುತ್ತಾರೆ. ಅದನ್ನು ತಿಳಿದೂ ನೀನೇಕೆ ನನ್ನನ್ನು ನಿಂದಿಸುತ್ತಿರುವೆ?

07168032a ನೃಶಂಸಃ ಸ ಮಯಾಕ್ರಮ್ಯ ರಥ ಏವ ನಿಪಾತಿತಃ।
07168032c ತನ್ಮಾಭಿನಂದ್ಯಂ ಬೀಭತ್ಸೋ ಕಿಮರ್ಥಂ ನಾಭಿನಂದಸೇ।।

ಆ ಕ್ರೂರಿಯನ್ನು ನಾನು ರಥವನ್ನೇರಿಯೇ ಕೆಳಗುರುಳಿಸಿದೆನು. ಬೀಭತ್ಸೋ! ಅಭಿನಂದಿಸಬೇಕಾದ ನನ್ನನ್ನು ಏಕೆ ಅಭಿನಂದಿಸುತ್ತಿಲ್ಲ?

07168033a ಕೃತೇ ರಣೇ ಕಥಂ ಪಾರ್ಥ ಜ್ವಲನಾರ್ಕವಿಷೋಪಮಂ।
07168033c ಭೀಮಂ ದ್ರೋಣಶಿರಶ್ಚೇದೇ ಪ್ರಶಸ್ಯಂ ನ ಪ್ರಶಂಸಸಿ।।

ಪಾರ್ಥ! ಉರಿಯುತ್ತಿರುವ ಸೂರ್ಯನ ವಿಷದಂತೆ ಭಯಂಕರನಾಗಿದ್ದ ದ್ರೋಣನ ಶಿರವನ್ನು ರಣದಲ್ಲಿ ತುಂಡರಿಸಿದುದನ್ನು ಪ್ರಶಂಸೆಗೆ ಯೋಗ್ಯವಾದರೂ ನೀನು ಏಕೆ ಪ್ರಶಂಸಿಸುತ್ತಿಲ್ಲ?

07168034a ಯೋಽಸೌ ಮಮೈವ ನಾನ್ಯಸ್ಯ ಬಾಂಧವಾನ್ಯುಧಿ ಜಘ್ನಿವಾನ್।
07168034c ಚಿತ್ತ್ವಾಪಿ ತಸ್ಯ ಮೂರ್ಧಾನಂ ನೈವಾಸ್ಮಿ ವಿಗತಜ್ವರಃ।।

ಅವನಾದರೋ ಯುದ್ಧದಲ್ಲಿ ನನ್ನವರನ್ನು ಮಾತ್ರ ಸಂಹರಿಸುತ್ತಿದ್ದನೇ ಹೊರತು ಬೇರೆ ಯಾರ ಬಾಂಧವರನ್ನೂ ಸಂಹರಿಸುತ್ತಿರಲಿಲ್ಲ. ಅವನ ಶಿರವನ್ನು ಕತ್ತರಿಸಿದರೂ ನನ್ನ ಕ್ರೋಧವು ತಣಿಯುತ್ತಿಲ್ಲ.

07168035a ತಚ್ಚ ಮೇ ಕೃಂತತೇ ಮರ್ಮ ಯನ್ನ ತಸ್ಯ ಶಿರೋ ಮಯಾ।
07168035c ನಿಷಾದವಿಷಯೇ ಕ್ಷಿಪ್ತಂ ಜಯದ್ರಥಶಿರೋ ಯಥಾ।।

ಜಯದ್ರಥನ ಶಿರವನ್ನು ಹೇಗೋ ಹಾಗೆ ಅವನ ಶಿರಸ್ಸನ್ನು ಕೂಡ ತಕ್ಷಣವೇ ನಿಷಾದರ ಪ್ರದೇಶದಲ್ಲಿ ಬೀಳುವಂತೆ ನಾನು ಮಾಡಲಿಲ್ಲವೆಂದು ನನ್ನ ಮರ್ಮಸ್ಥಾನಗಳು ಚುಚ್ಚುತ್ತಿವೆ!

07168036a ಅವಧಶ್ಚಾಪಿ ಶತ್ರೂಣಾಮಧರ್ಮಃ ಶಿಷ್ಯತೇಽರ್ಜುನ।
07168036c ಕ್ಷತ್ರಿಯಸ್ಯ ಹ್ಯಯಂ ಧರ್ಮೋ ಹನ್ಯಾದ್ಧನ್ಯೇತ ವಾ ಪುನಃ।।

ಅರ್ಜುನ! ಶತ್ರುಗಳನ್ನು ವಧಿಸದೇ ಇರುವುದು ಅಧರ್ಮವೆಂದು ಹೇಳುತ್ತಾರೆ. ಏಕೆಂದರೆ ಕ್ಷತ್ರಿಯನ ಧರ್ಮವೇ ಸಂಹರಿಸುವುದು. ಇನ್ನು ಬೇರೆ ಏನಿದೆ?

07168037a ಸ ಶತ್ರುರ್ನಿಹತಃ ಸಂಖ್ಯೇ ಮಯಾ ಧರ್ಮೇಣ ಪಾಂಡವ।
07168037c ಯಥಾ ತ್ವಯಾ ಹತಃ ಶೂರೋ ಭಗದತ್ತಃ ಪಿತುಃ ಸಖಾ।।

ಪಾಂಡವ! ನಿನ್ನ ತಂದೆಯ ಸಖನಾದ ಶೂರ ಭಗದತ್ತನು ನಿನ್ನಿಂದ ಹೇಗೆ ಹತನಾದನೋ ಹಾಗೆ ಯುದ್ಧದಲ್ಲಿ ಈ ಶತ್ರುವೂ ಕೂಡ ನನ್ನಿಂದ ಧರ್ಮಪೂರ್ವಕವಾಗಿಯೇ ಹತನಾಗಿದ್ದಾನೆ.

07168038a ಪಿತಾಮಹಂ ರಣೇ ಹತ್ವಾ ಮನ್ಯಸೇ ಧರ್ಮಮಾತ್ಮನಃ।
07168038c ಮಯಾ ಶತ್ರೌ ಹತೇ ಕಸ್ಮಾತ್ಪಾಪೇ ಧರ್ಮಂ ನ ಮನ್ಯಸೇ।।

ರಣದಲ್ಲಿ ಪಿತಾಮಹನನ್ನು ಸಂಹರಿಸಿ ನಿನ್ನನ್ನು ಧರ್ಮಾತ್ಮನೆಂದು ತಿಳಿದುಕೊಂಡಿರುವ ನೀನು ನನ್ನಿಂದ ಶತ್ರುವು ಹತನಾಗಲು ಹೇಗೆ ಪಾಪವೆಂದೂ, ಧರ್ಮವಲ್ಲವೆಂದೂ ಅಭಿಪ್ರಾಯಪಡುವೆ?

07168039a ನಾನೃತಃ ಪಾಂಡವೋ ಜ್ಯೇಷ್ಠೋ ನಾಹಂ ವಾಧಾರ್ಮಿಕೋಽರ್ಜುನ।
07168039c ಶಿಷ್ಯಧ್ರುಂ ನಿಹತಃ ಪಾಪೋ ಯುಧ್ಯಸ್ವ ವಿಜಯಸ್ತವ।।

ಅರ್ಜುನ! ಜ್ಯೇಷ್ಠ ಪಾಂಡವನು ಸುಳ್ಳುಗಾರನಾಗಲಿಲ್ಲ. ಅಥವಾ ನಾನು ಅಧಾರ್ಮಿಕನಾಗಲಿಲ್ಲ. ಪಾಪಿಷ್ಟ ಆ ಶಿಷ್ಯದ್ರೋಹಿಯು ಹತನಾಗಿದ್ದಾನೆ. ಯುದ್ಧಮಾಡು. ವಿಜಯವು ನಿನ್ನದಾಗುತ್ತದೆ!””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣಪರ್ವಣಿ ನಾರಾಯಣಾಸ್ತ್ರಮೋಕ್ಷಣಪರ್ವಣಿ ಧೃಷ್ಟದ್ಯುಮ್ನವಾಕ್ಯೇ ಅಷ್ಠಷಷ್ಟ್ಯಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣಪರ್ವದಲ್ಲಿ ನಾರಾಯಣಾಸ್ತ್ರಮೋಕ್ಷಣಪರ್ವದಲ್ಲಿ ಧೃಷ್ಟದ್ಯುಮ್ನವಾಕ್ಯ ಎನ್ನುವ ನೂರಾಅರವತ್ತೆಂಟನೇ ಅಧ್ಯಾಯವು.