ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ನಾರಾಯಣಾಸ್ತ್ರಮೋಕ್ಷ ಪರ್ವ
ಅಧ್ಯಾಯ 166
ಸಾರ
ದ್ರೋಣನ ವಧೆಯ ನಂತರ ಅಶ್ವತ್ಥಾಮನು ಏನು ಮಾಡಿದನೆಂದು ಧೃತರಾಷ್ಟ್ರನು ಸಂಜಯನನ್ನು ಪ್ರಶ್ನಿಸಿದುದು (1-15). ತಂದೆಯ ಮರಣದ ಕುರಿತು ಕೇಳಿ ಕ್ರುದ್ಧನಾದ ಅಶ್ವತ್ಥಾಮನು ಮಹಾ ನಾರಾಯಣಾಸ್ತ್ರವನ್ನು ಪ್ರಯೋಗಿಸುವೆನೆಂದು ದುರ್ಯೋಧನನಿಗೆ ಹೇಳಿದುದು (16-60)
07166001 ಧೃತರಾಷ್ಟ್ರ ಉವಾಚ।
07166001a ಅಧರ್ಮೇಣ ಹತಂ ಶ್ರುತ್ವಾ ಧೃಷ್ಟದ್ಯುಮ್ನೇನ ಸಂಜಯ।
07166001c ಬ್ರಾಹ್ಮಣಂ ಪಿತರಂ ವೃದ್ಧಮಶ್ವತ್ಥಾಮಾ ಕಿಮಬ್ರವೀತ್।।
ಧೃತರಾಷ್ಟ್ರನು ಹೇಳಿದನು: “ಸಂಜಯ! ಧೃಷ್ಟದ್ಯುಮ್ನನಿಂದ ತನ್ನ ತಂದೆ ಬ್ರಾಹ್ಮಣ ವೃದ್ಧನು ಅಧರ್ಮದಿಂದ ಹತನಾದನೆಂದು ಕೇಳಿ ಅಶ್ವತ್ಥಾಮನು ಏನು ಹೇಳಿದನು?
07166002a ಮಾನುಷಂ ವಾರುಣಾಗ್ನೇಯಂ ಬ್ರಾಹ್ಮಮಸ್ತ್ರಂ ಚ ವೀರ್ಯವಾನ್।
07166002c ಐಂದ್ರಂ ನಾರಾಯಣಂ ಚೈವ ಯಸ್ಮಿನ್ನಿತ್ಯಂ ಪ್ರತಿಷ್ಠಿತಂ।।
07166003a ತಮಧರ್ಮೇಣ ಧರ್ಮಿಷ್ಠಂ ಧೃಷ್ಟದ್ಯುಮ್ನೇನ ಸಂಜಯ।
07166003c ಶ್ರುತ್ವಾ ನಿಹತಮಾಚಾರ್ಯಮಶ್ವತ್ಥಾಮಾ ಕಿಮಬ್ರವೀತ್।।
ಮಾನುಷ, ವಾರುಣ, ಆಗ್ನೇಯ, ಬ್ರಹ್ಮಾಸ್ತ್ರಗಳು, ಐಂದ್ರ ಮತ್ತು ನಾರಾಯಣಾಸ್ತ್ರಗಳು ನಿತ್ಯವೂ ಯಾರಲ್ಲಿ ಪ್ರತಿಷ್ಠಿತವಾಗಿದ್ದವೋ ಆ ಧರ್ಮಿಷ್ಠ ಆಚಾರ್ಯನನ್ನು ಅಧರ್ಮದಿಂದ ಧೃಷ್ಟದ್ಯುಮ್ನನು ಕೊಂದನು ಎಂದು ಕೇಳಿ ವೀರ್ಯವಾನ್ ಅಶ್ವತ್ಥಾಮನು ಏನು ಹೇಳಿದನು?
07166004a ಯೇನ ರಾಮಾದವಾಪ್ಯೇಹ ಧನುರ್ವೇದಂ ಮಹಾತ್ಮನಾ।
07166004c ಪ್ರೋಕ್ತಾನ್ಯಸ್ತ್ರಾಣಿ ದಿವ್ಯಾನಿ ಪುತ್ರಾಯ ಗುರುಕಾಂಕ್ಷಿಣೇ।।
ಅವನು ಮಹಾತ್ಮ ರಾಮನಿಂದ ಧನುರ್ವೇದವನ್ನು ಪಡೆದು ಮಗನನ್ನು ದೊಡ್ಡವನನ್ನಾಗಿ ಮಾಡಬೇಕೆಂದು ಬಯಸಿ ಅವನಿಗೆ ದಿವ್ಯ ಅಸ್ತ್ರಗಳನ್ನು ತಿಳಿಸಿಕೊಟ್ಟಿದ್ದನು.
07166005a ಏಕಮೇವ ಹಿ ಲೋಕೇಽಸ್ಮಿನ್ನಾತ್ಮನೋ ಗುಣವತ್ತರಂ।
07166005c ಇಚ್ಚಂತಿ ಪುತ್ರಂ ಪುರುಷಾ ಲೋಕೇ ನಾನ್ಯಂ ಕಥಂ ಚನ।।
ಈ ಲೋಕದಲ್ಲಿ ಪುರುಷನು ತನಗಿಂತಲೂ ಮಗನು ಹೆಚ್ಚಿನ ಗುಣವಂತನಾಗಬೇಕೆಂದು ಬಯಸುತ್ತಾನೆಯೇ ಹೊರತು ಬೇರೆ ಏನನ್ನೂ ಬಯಸುವುದಿಲ್ಲ.
07166006a ಆಚಾರ್ಯಾಣಾಂ ಭವಂತ್ಯೇವ ರಹಸ್ಯಾನಿ ಮಹಾತ್ಮನಾಂ।
07166006c ತಾನಿ ಪುತ್ರಾಯ ವಾ ದದ್ಯುಃ ಶಿಷ್ಯಾಯಾನುಗತಾಯ ವಾ।।
ಮಹಾತ್ಮ ಆಚಾರ್ಯರು ತಮ್ಮಲ್ಲಿರುವ ರಹಸ್ಯಗಳನ್ನು ತಮ್ಮ ಪುತ್ರನಿಗೆ ಅಥವಾ ಶುಶ್ರೂಷೆಮಾಡುವ ಶಿಷ್ಯರಿಗೆ ಕೊಟ್ಟಿರುತ್ತಾರೆ.
07166007a ಸ ಶಿಲ್ಪಂ ಪ್ರಾಪ್ಯ ತತ್ಸರ್ವಂ ಸವಿಶೇಷಂ ಚ ಸಂಜಯ।
07166007c ಶೂರಃ ಶಾರದ್ವತೀಪುತ್ರಃ ಸಂಖ್ಯೇ ದ್ರೋಣಾದನಂತರಃ।।
ಆ ಎಲ್ಲ ಕುಶಲಗಳನ್ನು ವಿಶೇಷ ರಹಸ್ಯಗಳೊಂದಿಗೆ ಪಡೆದು ಶಾರದ್ವತೀಪುತ್ರನು ರಣದಲ್ಲಿ ದ್ರೋಣನ ನಂತರ ಶೂರನೆನಿಸಿಕೊಂಡಿರುವನು.
07166008a ರಾಮಸ್ಯಾನುಮತಃ ಶಾಸ್ತ್ರೇ ಪುರಂದರಸಮೋ ಯುಧಿ।
07166008c ಕಾರ್ತವೀರ್ಯಸಮೋ ವೀರ್ಯೇ ಬೃಹಸ್ಪತಿಸಮೋ ಮತೌ।।
07166009a ಮಹೀಧರಸಮೋ ಧೃತ್ಯಾ ತೇಜಸಾಗ್ನಿಸಮೋ ಯುವಾ।
07166009c ಸಮುದ್ರ ಇವ ಗಾಂಭೀರ್ಯೇ ಕ್ರೋಧೇ ಸರ್ಪವಿಷೋಪಮಃ।।
07166010a ಸ ರಥೀ ಪ್ರಥಮೋ ಲೋಕೇ ದೃಢಧನ್ವಾ ಜಿತಕ್ಲಮಃ।
07166010c ಶೀಘ್ರೋಽನಿಲ ಇವಾಕ್ರಂದೇ ಚರನ್ಕ್ರುದ್ಧ ಇವಾಂತಕಃ।।
ಶಸ್ತ್ರವಿಧ್ಯೆಯಲ್ಲಿ ರಾಮನ ಸಮನಾದ, ಯುದ್ಧದಲ್ಲಿ ಪುರಂದರನ ಸಮನಾದ, ವೀರ್ಯದಲ್ಲಿ ಕಾರ್ತವೀರ್ಯನ ಸಮನಾದ, ಬುದ್ಧಿಯಲ್ಲಿ ಬೃಹಸ್ಪತಿಯ ಸಮನಾದ, ಧೃತಿಯಲ್ಲಿ ಮಹೀಧರೆಯ ಸಮನಾಗಿರುವ, ತೇಜಸ್ಸಿನಲ್ಲಿ ಅಗ್ನಿಯ ಸಮನಾಗಿರುವ, ಸಮುದ್ರದಂತೆ ಗಾಂಭೀರ್ಯವುಳ್ಳ, ಕ್ರೋಧದಲ್ಲಿ ಸರ್ಪದ ವಿಷದಂತಿರುವ ಆ ಯುವಕನು ಲೋಕದಲ್ಲಿ ಪ್ರಪ್ರಥಮ ರಥಿ. ದೃಢಧನ್ವಿ. ಶ್ರಮವನ್ನು ಜಯಿಸಿದವನು. ಅಂತಕನಂತೆ ಕ್ರುದ್ಧನಾಗಿ, ಅನಿಲನಂತೆ ಶೀಘ್ರವಾಗಿ ಸಂಚರಿಸುವವನು.
07166011a ಅಸ್ಯತಾ ಯೇನ ಸಂಗ್ರಾಮೇ ಧರಣ್ಯಭಿನಿಪೀಡಿತಾ।
07166011c ಯೋ ನ ವ್ಯಥತಿ ಸಂಗ್ರಾಮೇ ವೀರಃ ಸತ್ಯಪರಾಕ್ರಮಃ।।
07166012a ವೇದಸ್ನಾತೋ ವ್ರತಸ್ನಾತೋ ಧನುರ್ವೇದೇ ಚ ಪಾರಗಃ।
07166012c ಮಹೋದಧಿರಿವಾಕ್ಷೋಭ್ಯೋ ರಾಮೋ ದಾಶರಥಿರ್ಯಥಾ।।
ಅವನು ಸಂಗ್ರಾಮಕ್ಕೆ ತೊಡಗಲು ಭೂಮಿಯೇ ಪೀಡೆಗೊಳಗಾಗುತ್ತದೆ. ಆ ವೀರ ಸತ್ಯಪರಾಕ್ರಮನು ಸಂಗ್ರಾಮದಲ್ಲಿ ವ್ಯಥೆಪಡುವುದಿಲ್ಲ. ಅವನು ವೇದಸ್ನಾತ. ವ್ರತಸ್ನಾತ. ಧನುರ್ವೇದ ಪಾರಂಗತ. ದಾಶರಥಿ ರಾಮನಂತೆ, ಮಹಾಸಾಗರದಂತೆ ಶಾಂತನಾಗಿರುವವನು.
07166013a ತಮಧರ್ಮೇಣ ಧರ್ಮಿಷ್ಠಂ ಧೃಷ್ಟದ್ಯುಮ್ನೇನ ಸಂಯುಗೇ।
07166013c ಶ್ರುತ್ವಾ ನಿಹತಮಾಚಾರ್ಯಮಶ್ವತ್ಥಾಮಾ ಕಿಮಬ್ರವೀತ್।।
ಅಂತಹ ಅಶ್ವತ್ಥಾಮನು ಸಂಯುಗದಲ್ಲಿ ಧರ್ಮಿಷ್ಠ ಆಚಾರ್ಯನು ಅಧರ್ಮಪೂರ್ವಕವಾಗಿ ಧೃಷ್ಟದ್ಯುಮ್ನನಿಂದ ಹತನಾದನೆಂದು ಕೇಳಿ ಏನು ಹೇಳಿದನು?
07166014a ಧೃಷ್ಟದ್ಯುಮ್ನಸ್ಯ ಯೋ ಮೃತ್ಯುಃ ಸೃಷ್ಟಸ್ತೇನ ಮಹಾತ್ಮನಾ।
07166014c ಯಥಾ ದ್ರೋಣಸ್ಯ ಪಾಂಚಾಲ್ಯೋ ಯಜ್ಞಸೇನಸುತೋಽಭವತ್।।
ದ್ರೋಣನ ಮೃತ್ಯುವಾಗಿ ಪಾಂಚಾಲ ಯಜ್ಞಸೇನನಿಗೆ ಅವನು ಹೇಗೆ ಮಗನಾದನೋ ಹಾಗೆ ಧೃಷ್ಟದ್ಯುಮ್ನನ ಮೃತ್ಯುವಾಗಿ ಮಹಾತ್ಮ ದ್ರೋಣನು ಮಗನನ್ನು ಸೃಷ್ಟಿಸಿದ್ದನು.
07166015a ತಂ ನೃಶಂಸೇನ ಪಾಪೇನ ಕ್ರೂರೇಣಾತ್ಯಲ್ಪದರ್ಶಿನಾ।
07166015c ಶ್ರುತ್ವಾ ನಿಹತಮಾಚಾರ್ಯಮಶ್ವತ್ಥಾಮಾ ಕಿಮಬ್ರವೀತ್।।
ಆ ನೃಶಂಸ, ಪಾಪಿ, ಕ್ರೂರಿ, ಅಲ್ಪದರ್ಶಿಯು ಆಚಾರ್ಯನನ್ನು ಕೊಂದನೆಂದು ಕೇಳಿ ಅಶ್ವತ್ಥಾಮನು ಏನು ಹೇಳಿದನು?”
07166016 ಸಂಜಯ ಉವಾಚ।
07166016a ಚದ್ಮನಾ ನಿಹತಂ ಶ್ರುತ್ವಾ ಪಿತರಂ ಪಾಪಕರ್ಮಣಾ।
07166016c ಬಾಷ್ಪೇಣಾಪೂರ್ಯತ ದ್ರೌಣೀ ರೋಷೇಣ ಚ ನರರ್ಷಭ।।
ಸಂಜಯನು ಹೇಳಿದನು: “ನರರ್ಷಭ! ಪಾಪಕರ್ಮಿಯ ಮೋಸದಿಂದ ತನ್ನ ತಂದೆಯು ಹತನಾದನೆಂದು ಕೇಳಿ ದ್ರೌಣಿಯ ಕಣ್ಣುಗಳು ರೋಷದ ಕಣ್ಣೀರಿನಿಂದ ತುಂಬಿದವು.
07166017a ತಸ್ಯ ಕ್ರುದ್ಧಸ್ಯ ರಾಜೇಂದ್ರ ವಪುರ್ದಿವ್ಯಮದೃಶ್ಯತ।
07166017c ಅಂತಕಸ್ಯೇವ ಭೂತಾನಿ ಜಿಹೀರ್ಷೋಃ ಕಾಲಪರ್ಯಯೇ।।
ರಾಜೇಂದ್ರ! ಪ್ರಳಯ ಕಾಲದಲ್ಲಿ ಪ್ರಾಣಿಗಳ ಅಸುವನ್ನು ಹೀರಿಕೊಳ್ಳುವ ಅಂತಕನೋಪಾದಿಯಲ್ಲಿ ಕ್ರುದ್ಧನಾದ ಅವನ ಶರೀರವು ದಿವ್ಯವಾಗಿ ಕಂಡಿತು.
07166018a ಅಶ್ರುಪೂರ್ಣೇ ತತೋ ನೇತ್ರೇ ಅಪಮೃಜ್ಯ ಪುನಃ ಪುನಃ।
07166018c ಉವಾಚ ಕೋಪಾನ್ನಿಃಶ್ವಸ್ಯ ದುರ್ಯೋಧನಮಿದಂ ವಚಃ।।
ಕಣ್ಣುಗಳು ಕಣ್ಣೀರಿನಿಂದ ತುಂಬಿಕೊಳ್ಳುತ್ತಿರಲು ಅವನು ಪುನಃ ಪುನಃ ಒರೆಸಿಕೊಳ್ಳುತ್ತಾ, ಕೋಪದಿಂದ ನಿಟ್ಟುಸಿರು ಬಿಡುತ್ತಾ ದುರ್ಯೋಧನನಿಗೆ ಈ ಮಾತನ್ನಾಡಿದನು:
07166019a ಪಿತಾ ಮಮ ಯಥಾ ಕ್ಷುದ್ರೈರ್ನ್ಯಸ್ತಶಸ್ತ್ರೋ ನಿಪಾತಿತಃ।
07166019c ಧರ್ಮಧ್ವಜವತಾ ಪಾಪಂ ಕೃತಂ ತದ್ವಿದಿತಂ ಮಮ।
07166019e ಅನಾರ್ಯಂ ಸುನೃಶಂಸಸ್ಯ ಧರ್ಮಪುತ್ರಸ್ಯ ಮೇ ಶ್ರುತಂ।।
“ಶಸ್ತ್ರಸಂನ್ಯಾಸವನ್ನು ಮಾಡಿದ ನನ್ನ ತಂದೆಯನ್ನು ಕ್ಷುದ್ರಜನರು ಕೊಂದರು. ಧರ್ಮಧ್ವಜನೆನಿಸಿಕೊಂಡವನು ಈ ಪಾಪದ ಕೆಲಸವನ್ನು ಮಾಡಿದನೆಂದು ನನಗೆ ತಿಳಿದಿದೆ. ಧರ್ಮಪುತ್ರನ ಅತ್ಯಂತ ಅನಾರ್ಯ ಕ್ರೂರಕೃತ್ಯದ ಕುರಿತು ನಾನು ಕೇಳಿದೆ.
07166020a ಯುದ್ಧೇಷ್ವಪಿ ಪ್ರವೃತ್ತಾನಾಂ ಧ್ರುವೌ ಜಯಪರಾಜಯೌ।
07166020c ದ್ವಯಮೇತದ್ಭವೇದ್ರಾಜನ್ವಧಸ್ತತ್ರ ಪ್ರಶಸ್ಯತೇ।।
ಯುದ್ಧದಲ್ಲಿ ತೊಡಗಿದವರಿಗೆ ಜಯ ಅಪಜಯಗಳೆರಡರಲ್ಲಿ ಒಂದಾಗುವುದು ನಿಶ್ಚಿತವಾದುದು. ರಾಜನ್! ಆದರೆ ಅಲ್ಲಿ ವಧೆಗೆ ಹೆಚ್ಚಿನ ಪ್ರಾಶಸ್ತವಿದೆ.
07166021a ನ್ಯಾಯವೃತ್ತೋ ವಧೋ ಯಸ್ತು ಸಂಗ್ರಾಮೇ ಯುಧ್ಯತೋ ಭವೇತ್।
07166021c ನ ಸ ದುಃಖಾಯ ಭವತಿ ತಥಾ ದೃಷ್ಟೋ ಹಿ ಸ ದ್ವಿಜಃ।।
ಸಂಗ್ರಾಮ ಯುದ್ಧದಲ್ಲಿ ನ್ಯಾಯರೀತಿಯಲ್ಲಿ ವಧೆಯಾದರೆ ಅದರಿಂದ ಯಾರಿಗೂ ಯಾವವಿಧವಾದ ದುಃಖವೂ ಆಗುವುದಿಲ್ಲ. ದ್ವಿಜರು ಈ ಧರ್ಮರಹಸ್ಯವನ್ನು ಕಂಡಿದ್ದಾರೆ.
07166022a ಗತಃ ಸ ವೀರಲೋಕಾಯ ಪಿತಾ ಮಮ ನ ಸಂಶಯಃ।
07166022c ನ ಶೋಚ್ಯಃ ಪುರುಷವ್ಯಾಘ್ರಸ್ತಥಾ ಸ ನಿಧನಂ ಗತಃ।
ನನ್ನ ತಂದೆಯು ವೀರಲೋಕಗಳಿಗೇ ಹೋಗಿದ್ದಾನೆ. ಅದರಲ್ಲಿ ನನಗೆ ಸಂಶಯವಿಲ್ಲ. ಪುರುಷವ್ಯಾಘ್ರ! ಆದುದರಿಂದ ಅವನು ನಿಧನನಾದನೆಂದು ಶೋಕಿಸುತ್ತಿಲ್ಲ.
07166023a ಯತ್ತು ಧರ್ಮಪ್ರವೃತ್ತಃ ಸನ್ಕೇಶಗ್ರಹಣಮಾಪ್ತವಾನ್।
07166023c ಪಶ್ಯತಾಂ ಸರ್ವಸೈನ್ಯಾನಾಂ ತನ್ಮೇ ಮರ್ಮಾಣಿ ಕೃಂತತಿ।।
ಧರ್ಮಪ್ರವೃತ್ತನಾಗಿದ್ದ ಅವನ ತಲೆಕೂದಲನ್ನು ಸರ್ವ ಸೈನ್ಯಗಳೂ ನೋಡುತ್ತಿರುವಂತೆ ಧೃಷ್ಟದ್ಯುಮ್ನನು ಹಿಡಿದನು ಎನ್ನುವುದೇ ನನ್ನ ಮರ್ಮಗಳನ್ನು ಛಿದ್ರಗೊಳಿಸುತ್ತಿದೆ.
07166024a ಕಾಮಾತ್ಕ್ರೋಧಾದವಜ್ಞಾನಾದ್ದರ್ಪಾದ್ಬಾಲ್ಯೇನ ವಾ ಪುನಃ।
07166024c ವೈಧರ್ಮಿಕಾನಿ ಕುರ್ವಂತಿ ತಥಾ ಪರಿಭವೇನ ಚ।।
ಲೋಕದಲ್ಲಿ ಜನರು ಕಾಮ, ಕ್ರೋಧ, ಅಜ್ಞಾನ, ದರ್ಪ, ಅಥವಾ ಬಾಲ್ಯತನದಿಂದ ಧರ್ಮಕ್ಕೆ ಬಾಹಿರ ಕೆಲಸಗಳನ್ನು ಮಾಡುತ್ತಾರೆ.
07166025a ತದಿದಂ ಪಾರ್ಷತೇನೇಹ ಮಹದಾಧರ್ಮಿಕಂ ಕೃತಂ।
07166025c ಅವಜ್ಞಾಯ ಚ ಮಾಂ ನೂನಂ ನೃಶಂಸೇನ ದುರಾತ್ಮನಾ।।
ಇಂತಹ ಮಹಾ ಅಧರ್ಮಿಕ ಕೆಲಸವನ್ನು ದುರಾತ್ಮ ಕ್ರೂರಿ ಪಾರ್ಷತನು ನನ್ನನ್ನೂ ಅಲ್ಲಗಳೆದು ಮಾಡಿದ್ದಾನೆ.
07166026a ತಸ್ಯಾನುಬಂಧಂ ಸ ದ್ರಷ್ಟಾ ಧೃಷ್ಟದ್ಯುಮ್ನಃ ಸುದಾರುಣಂ।
07166026c ಅನಾರ್ಯಂ ಪರಮಂ ಕೃತ್ವಾ ಮಿಥ್ಯಾವಾದೀ ಚ ಪಾಂಡವಃ।।
ಅದಕ್ಕೆ ತಕ್ಕುದಾದ ಸುದಾರುಣ ಫಲವನ್ನು ಧೃಷ್ಟದ್ಯುಮ್ನನೂ ಆ ಅನಾರ್ಯ ಕಾರ್ಯವನ್ನು ಮಾಡಿದ ಪರಮ ಮಿಥ್ಯಾವಾದೀ ಪಾಂಡವನೂ ಕಾಣಲಿದ್ದಾರೆ.
07166027a ಯೋ ಹ್ಯಸೌ ಚದ್ಮನಾಚಾರ್ಯಂ ಶಸ್ತ್ರಂ ಸಂನ್ಯಾಸಯತ್ತದಾ।
07166027c ತಸ್ಯಾದ್ಯ ಧರ್ಮರಾಜಸ್ಯ ಭೂಮಿಃ ಪಾಸ್ಯತಿ ಶೋಣಿತಂ।।
ಶಸ್ತ್ರಸಂನ್ಯಾಸ ಮಾಡಿದ್ದ ಆಚಾರ್ಯನನ್ನು ಹೀಗೆ ಮೋಸದಿಂದ ಸಂಹರಿಸಿದ ಧರ್ಮರಾಜನ ರಕ್ತವನ್ನು ಭೂಮಿಯು ಇಂದು ಕುಡಿಯುತ್ತದೆ!
07166028a ಸರ್ವೋಪಾಯೈರ್ಯತಿಷ್ಯಾಮಿ ಪಾಂಚಾಲಾನಾಮಹಂ ವಧೇ।
07166028c ಧೃಷ್ಟದ್ಯುಮ್ನಂ ಚ ಸಮರೇ ಹಂತಾಹಂ ಪಾಪಕಾರಿಣಂ।।
ನಾನು ಸರ್ವೋಪಾಯಗಳಿಂದ ಪಾಂಚಾಲನನ್ನು ವಧಿಸಲು ಪ್ರಯತ್ನಿಸುತ್ತೇನೆ. ಪಾಪಕಾರಿಣಿ ಧೃಷ್ಟದ್ಯುಮ್ನನನ್ನು ನಾನು ಸಮರದಲ್ಲಿ ಕೊಲ್ಲುತ್ತೇನೆ.
07166029a ಕರ್ಮಣಾ ಯೇನ ತೇನೇಹ ಮೃದುನಾ ದಾರುಣೇನ ವಾ।
07166029c ಪಾಂಚಾಲಾನಾಂ ವಧಂ ಕೃತ್ವಾ ಶಾಂತಿಂ ಲಬ್ಧಾಸ್ಮಿ ಕೌರವ।।
ಕೌರವ! ಮೃದು ಅಥವಾ ದಾರುಣ ಕರ್ಮದಿಂದ ನಾನು ಆ ಪಾಂಚಾಲನ ವಧೆಯನ್ನು ಮಾಡಿಯೇ ಶಾಂತಿಯನ್ನು ಪಡೆಯುತ್ತೇನೆ.
07166030a ಯದರ್ಥಂ ಪುರುಷವ್ಯಾಘ್ರ ಪುತ್ರಮಿಚ್ಚಂತಿ ಮಾನವಾಃ।
07166030c ಪ್ರೇತ್ಯ ಚೇಹ ಚ ಸಂಪ್ರಾಪ್ತಂ ತ್ರಾಣಾಯ ಮಹತೋ ಭಯಾತ್।।
ಪುರುಷವ್ಯಾಘ್ರ! ಪರಲೋಕದಲ್ಲಿ ಮತ್ತು ಈ ಲೋಕದಲ್ಲಿ ಬರಬಹುದಾದ ಮಹಾಭಯದ ರಕ್ಷಣೆಗೆಂದೇ ಜನರು ಮಕ್ಕಳನ್ನು ಬಯಸುತ್ತಾರೆ.
07166031a ಪಿತ್ರಾ ತು ಮಮ ಸಾವಸ್ಥಾ ಪ್ರಾಪ್ತಾ ನಿರ್ಬಂಧುನಾ ಯಥಾ।
07166031c ಮಯಿ ಶೈಲಪ್ರತೀಕಾಶೇ ಪುತ್ರೇ ಶಿಷ್ಯೇ ಚ ಜೀವತಿ।।
ಪರ್ವತಸಮಾನ ಪುತ್ರನೂ ಶಿಷ್ಯನೂ ಆದ ನಾನು ಜೀವಂತವಿರುವಾಗಲೇ ಯಾರೂ ಬಂಧುಗಳೇ ಇಲ್ಲದವರಂತೆ ನನ್ನ ತಂದೆಗೆ ಈ ಅವಸ್ಥೆಯು ಪ್ರಾಪ್ತವಾಯಿತು!
07166032a ಧಿಙ್ಮಮಾಸ್ತ್ರಾಣಿ ದಿವ್ಯಾನಿ ಧಿಗ್ಬಾಹೂ ಧಿಕ್ಪರಾಕ್ರಮಂ।
07166032c ಯನ್ಮಾಂ ದ್ರೋಣಃ ಸುತಂ ಪ್ರಾಪ್ಯ ಕೇಶಗ್ರಹಣಮಾಪ್ತವಾನ್।।
ನನ್ನಲ್ಲಿರುವ ದಿವ್ಯಾಸ್ತ್ರಗಳಿಗೆ ಧಿಕ್ಕಾರ! ನನ್ನ ಬಾಹುಗಳಿಗೆ ಧಿಕ್ಕಾರ! ಪರಾಕ್ರಮಕ್ಕೆ ಧಿಕ್ಕಾರ! ನನ್ನಂತಹ ಮಗನನ್ನು ಪಡೆದುದರಿಂದಲೇ ದ್ರೋಣನು ತಲೆಗೂದಲನ್ನು ಹಿಡಿಸಿಕೊಂಡವನಾದನು!
07166033a ಸ ತಥಾಹಂ ಕರಿಷ್ಯಾಮಿ ಯಥಾ ಭರತಸತ್ತಮ।
07166033c ಪರಲೋಕಗತಸ್ಯಾಪಿ ಗಮಿಷ್ಯಾಮ್ಯನೃಣಃ ಪಿತುಃ।।
ಭರತಸತ್ತಮ! ನನ್ನ ತಂದೆಯು ಪರಲೋಕಕ್ಕೆ ಹೋಗಿದ್ದರೂ ಕೂಡ ಅವರ ಋಣವು ಮುಗಿಯುವಂತೆ ನಾನು ಮಾಡುತ್ತೇನೆ.
07166034a ಆರ್ಯೇಣ ತು ನ ವಕ್ತವ್ಯಾ ಕದಾ ಚಿತ್ಸ್ತುತಿರಾತ್ಮನಃ।
07166034c ಪಿತುರ್ವಧಮಮೃಷ್ಯಂಸ್ತು ವಕ್ಷ್ಯಾಮ್ಯದ್ಯೇಹ ಪೌರುಷಂ।।
ಆರ್ಯನು ಎಂದೂ ಆತ್ಮಸ್ತುತಿಯನ್ನು ಮಾಡಿಕೊಳ್ಳಬಾರದು. ಆದರೆ ಪಿತೃವಧೆಯನ್ನು ಸಹಿಸಿಕೊಳ್ಳಲಾಗದೇ ನಾನು ನನ್ನ ಪೌರುಷದ ಕುರಿತು ಹೇಳುತ್ತೇನೆ.
07166035a ಅದ್ಯ ಪಶ್ಯಂತು ಮೇ ವೀರ್ಯಂ ಪಾಂಡವಾಃ ಸಜನಾರ್ದನಾಃ।
07166035c ಮೃದ್ನತಃ ಸರ್ವಸೈನ್ಯಾನಿ ಯುಗಾಂತಮಿವ ಕುರ್ವತಃ।।
ಸರ್ವಸೇನೆಗಳನ್ನೂ ಅರೆದು ಯುಗಾಂತವನ್ನೇ ಉಂಟುಮಾಡುವ ನನ್ನ ಈ ವೀರ್ಯವನ್ನು ಇಂದು ಜನಾರ್ದನನೊಡನೆ ಪಾಂಡವರು ನೋಡಲಿ!
07166036a ನ ಹಿ ದೇವಾ ನ ಗಂಧರ್ವಾ ನಾಸುರಾ ನ ಚ ರಾಕ್ಷಸಾಃ।
07166036c ಅದ್ಯ ಶಕ್ತಾ ರಣೇ ಜೇತುಂ ರಥಸ್ಥಂ ಮಾಂ ನರರ್ಷಭ।।
ನರರ್ಷಭ! ಇಂದು ರಥಸ್ಥನಾದ ನನ್ನನ್ನು ರಣದಲ್ಲಿ ದೇವತೆ-ಗಂಧರ್ವ-ಅಸುರ-ರಾಕ್ಷಸರು ಯಾರೂ ಗೆಲ್ಲಲು ಶಕ್ತರಾಗುವುದಿಲ್ಲ.
07166037a ಮದನ್ಯೋ ನಾಸ್ತಿ ಲೋಕೇಽಸ್ಮಿನ್ನರ್ಜುನಾದ್ವಾಸ್ತ್ರವಿತ್ತಮಃ।
07166037c ಅಹಂ ಹಿ ಜ್ವಲತಾಂ ಮಧ್ಯೇ ಮಯೂಖಾನಾಮಿವಾಂಶುಮಾನ್।
07166037e ಪ್ರಯೋಕ್ತಾ ದೇವಸೃಷ್ಟಾನಾಮಸ್ತ್ರಾಣಾಂ ಪೃತನಾಗತಃ।।
ಈ ಲೋಕದಲ್ಲಿ ನನ್ನ ಮತ್ತು ಅರ್ಜುನನನ್ನು ಮೀರಿಸಿದ ಅಸ್ತ್ರವಿತ್ತಮನು ಬೇರೆ ಯಾರೂ ಇಲ್ಲ. ಸೂರ್ಯನು ಕಿರಣಗಳನ್ನು ಪಸರಿಸಿ ಹೇಗೆ ಸುಡುವನೋ ಹಾಗೆ ನಾನಿಂದು ಸೇನೆಗಳ ಮಧ್ಯದಲ್ಲಿ ದೇವತೆಗಳು ಸೃಷ್ಟಿಸಿದ ಅಸ್ತ್ರಗಳನ್ನು ಪ್ರಯೋಗಿಸುತ್ತೇನೆ.
07166038a ಕೃಶಾಶ್ವತನಯಾ ಹ್ಯದ್ಯ ಮತ್ಪ್ರಯುಕ್ತಾ ಮಹಾಮೃಧೇ।
07166038c ದರ್ಶಯಂತೋಽಽತ್ಮನೋ ವೀರ್ಯಂ ಪ್ರಮಥಿಷ್ಯಂತಿ ಪಾಂಡವಾನ್।।
ಇಂದಿನ ಮಹಾಯುದ್ಧದಲ್ಲಿ ನನ್ನ ಧನುಸ್ಸಿನಿಂದ ಪ್ರಮುಕ್ತ ಬಾಣಗಳು ಪಾಂಡವರನ್ನು ಮಥಿಸಿ ನನ್ನ ವೀರ್ಯವನ್ನು ತೋರಿಸಿಕೊಡುತ್ತವೆ.
07166039a ಅದ್ಯ ಸರ್ವಾ ದಿಶೋ ರಾಜನ್ಧಾರಾಭಿರಿವ ಸಂಕುಲಾಃ।
07166039c ಆವೃತಾಃ ಪತ್ರಿಭಿಸ್ತೀಕ್ಷ್ಣೈರ್ದ್ರಷ್ಟಾರೋ ಮಾಮಕೈರಿಹ।।
ರಾಜನ್! ಇಂದು ಎಲ್ಲ ದಿಕ್ಕುಗಳೂ ಮಳೆಯ ನೀರಿನಿಂದ ತುಂಬಿಬಿಡುವಂತೆ ನನ್ನ ತೀಕ್ಷ್ಣ ಬಾಣಗಳಿಂದ ಆವೃತವಾಗುವುದನ್ನು ಎಲ್ಲರೂ ನೋಡುವವರಿದ್ದಾರೆ!
07166040a ಕಿರನ್ ಹಿ ಶರಜಾಲಾನಿ ಸರ್ವತೋ ಭೈರವಸ್ವರಂ।
07166040c ಶತ್ರೂನ್ನಿಪಾತಯಿಷ್ಯಾಮಿ ಮಹಾವಾತ ಇವ ದ್ರುಮಾನ್।।
ಭೈರವಸ್ವರದ ಶರಜಾಲಗಳನ್ನು ಎಲ್ಲೆಡೆ ಎರಚಿ ಚಂಡಮಾರುತವು ವೃಕ್ಷಗಳನ್ನು ಕೆಡಹುವಂತೆ ಶತ್ರುಗಳನ್ನು ಕೆಳಗುರುಳಿಸುತ್ತೇನೆ!
07166041a ನ ಚ ಜಾನಾತಿ ಬೀಭತ್ಸುಸ್ತದಸ್ತ್ರಂ ನ ಜನಾರ್ದನಃ।
07166041c ನ ಭೀಮಸೇನೋ ನ ಯಮೌ ನ ಚ ರಾಜಾ ಯುಧಿಷ್ಠಿರಃ।।
07166042a ನ ಪಾರ್ಷತೋ ದುರಾತ್ಮಾಸೌ ನ ಶಿಖಂಡೀ ನ ಸಾತ್ಯಕಿಃ।
07166042c ಯದಿದಂ ಮಯಿ ಕೌರವ್ಯ ಸಕಲ್ಯಂ ಸನಿವರ್ತನಂ।।
ಈ ಅಸ್ತ್ರವನ್ನು ಬೀಭತ್ಸುವಾಗಲೀ, ಜನಾರ್ದನನಾಗಲೀ, ಭೀಮಸೇನನಾಗಲೀ, ನಕುಲ-ಸಹದೇವರಾಗಲೀ, ರಾಜಾ ಯುಧಿಷ್ಠಿರನಾಗಲೀ, ದುರಾತ್ಮ ಪಾರ್ಷತ-ಶಿಖಂಡಿ-ಸಾತ್ಯಕಿಗಳಾಗಲೀ ತಿಳಿದಿಲ್ಲ. ಕೌರವ್ಯ! ಇದರ ಪ್ರಯೋಗ-ಸಂಹಾರಗಳೆರಡೂ ನನ್ನಲ್ಲಿ ಮಾತ್ರ ಪ್ರತಿಷ್ಠಿತವಾಗಿವೆ.
07166043a ನಾರಾಯಣಾಯ ಮೇ ಪಿತ್ರಾ ಪ್ರಣಮ್ಯ ವಿಧಿಪೂರ್ವಕಂ।
07166043c ಉಪಹಾರಃ ಪುರಾ ದತ್ತೋ ಬ್ರಹ್ಮರೂಪ ಉಪಸ್ಥಿತೇ।।
ಹಿಂದೆ ನನ್ನ ತಂದೆಯು ವಿಧಿಪೂರ್ವಕವಾಗಿ ನಾರಾಯಣನನ್ನು ನಮಸ್ಕರಿಸಿ ಬ್ರಹ್ಮರೂಪ ಉಪಹಾರವನ್ನು ಸಮರ್ಪಿಸಿದ್ದನು.
07166044a ತಂ ಸ್ವಯಂ ಪ್ರತಿಗೃಹ್ಯಾಥ ಭಗವಾನ್ಸ ವರಂ ದದೌ।
07166044c ವವ್ರೇ ಪಿತಾ ಮೇ ಪರಮಮಸ್ತ್ರಂ ನಾರಾಯಣಂ ತತಃ।।
ಅದನ್ನು ಸ್ವಯಂ ಸ್ವೀಕರಿಸಿದ ಭಗವಾನನು ವರವನ್ನಿತ್ತನು. ಆಗ ನನ್ನ ತಂದೆಯು ಶ್ರೇಷ್ಠ ನಾರಾಯಣಾಸ್ತ್ರವನ್ನು ವರವನ್ನಾಗಿ ಕೇಳಿದನು.
07166045a ಅಥೈನಮಬ್ರವೀದ್ರಾಜನ್ಭಗವಾನ್ದೇವಸತ್ತಮಃ।
07166045c ಭವಿತಾ ತ್ವತ್ಸಮೋ ನಾನ್ಯಃ ಕಶ್ಚಿದ್ಯುಧಿ ನರಃ ಕ್ವ ಚಿತ್।।
ರಾಜನ್! ಆಗ ದೇವಸತ್ತಮ ಭಗವಾನನು ಹೀಗೆ ಹೇಳಿದ್ದನು: “ಇದರ ನಂತರ ಯುದ್ಧದಲ್ಲಿ ನಿನಗೆ ಸರಿಸಾಟಿಯಾದ ಯಾವ ನರನೂ ಇರುವುದಿಲ್ಲ.
07166046a ನ ತ್ವಿದಂ ಸಹಸಾ ಬ್ರಹ್ಮನ್ಪ್ರಯೋಕ್ತವ್ಯಂ ಕಥಂ ಚನ।
07166046c ನ ಹ್ಯೇತದಸ್ತ್ರಮನ್ಯತ್ರ ವಧಾಚ್ಚತ್ರೋರ್ನಿವರ್ತತೇ।।
ಆದರೆ ಬ್ರಹ್ಮನ್! ಇದನ್ನು ವಿಚಾರಮಾಡದೇ ಎಂದೂ ಪ್ರಯೋಗಿಸಕೂಡದು. ಈ ಅಸ್ತ್ರವು ಶತ್ರುವನ್ನು ವಧಿಸದೇ ಹಿಂದಿರುಗುವುದಿಲ್ಲ.
07166047a ನ ಚೈತಚ್ಚಕ್ಯತೇ ಜ್ಞಾತುಂ ಕೋ ನ ವಧ್ಯೇದಿತಿ ಪ್ರಭೋ।
07166047c ಅವಧ್ಯಮಪಿ ಹನ್ಯಾದ್ಧಿ ತಸ್ಮಾನ್ನೈತತ್ಪ್ರಯೋಜಯೇತ್।।
ಪ್ರಭೋ! ಇದು ಯಾರನ್ನು ವಧಿಸುತ್ತದೆ ಎನ್ನುವುದನ್ನು ತಿಳಿಯಲು ಶಕ್ಯವಿಲ್ಲ. ಅವಧ್ಯರಾದವರನ್ನೂ ವಧಿಸಿಬಿಡಬಹುದು. ಆದುದರಿಂದ ಇದನ್ನು ದುಡುಕಿ ಪ್ರಯೋಗಿಸಬಾರದು.
07166048a ವಧಃ ಸಂಖ್ಯೇ ದ್ರವಶ್ಚೈವ ಶಸ್ತ್ರಾಣಾಂ ಚ ವಿಸರ್ಜನಂ।
07166048c ಪ್ರಯಾಚನಂ ಚ ಶತ್ರೂಣಾಂ ಗಮನಂ ಶರಣಸ್ಯ ಚ।।
07166049a ಏತೇ ಪ್ರಶಮನೇ ಯೋಗಾ ಮಹಾಸ್ತ್ರಸ್ಯ ಪರಂತಪ।
07166049c ಸರ್ವಥಾ ಪೀಡಿತೋ ಹಿ ಸ್ಯಾದವಧ್ಯಾನ್ಪೀಡಯನ್ರಣೇ।।
ಪರಂತಪ! ಯುದ್ಧದಲ್ಲಿ ಪಲಾಯನ ಮಾಡಿದವರನ್ನೂ ಇದು ವಧಿಸುತ್ತದೆ. ಶಸ್ತ್ರಗಳನ್ನು ವಿಸರ್ಜಿಸುವುದು, ಅಭಯವನ್ನು ಯಾಚಿಸುವುದು, ಶತ್ರುಗಳಿಗೆ ಶರಣಾಗತರಾಗುವುದು ಇವುಗಳು ಈ ಮಹಾಸ್ತ್ರವನ್ನು ಶಮನಗೊಳಿಸತಕ್ಕ ಕೆಲವು ಉಪಾಯಗಳು. ಅವಧ್ಯರಾದವರನ್ನು ಇದು ಪೀಡಿಸಿದ್ದೇ ಆದರೆ ಅಸ್ತ್ರವನ್ನು ಪ್ರಯೋಗಿಸಿದವನೇ ಪೀಡೆಗೊಳಗಾಗುತ್ತಾನೆ.”
07166050a ತಜ್ಜಗ್ರಾಹ ಪಿತಾ ಮಹ್ಯಮಬ್ರವೀಚ್ಚೈವ ಸ ಪ್ರಭುಃ।
07166050c ತ್ವಂ ವರ್ಷಿಷ್ಯಸಿ ದಿವ್ಯಾನಿ ಶಸ್ತ್ರವರ್ಷಾಣ್ಯನೇಕಶಃ।
07166050e ಅನೇನಾಸ್ತ್ರೇಣ ಸಂಗ್ರಾಮೇ ತೇಜಸಾ ಚ ಜ್ವಲಿಷ್ಯಸಿ।।
ಆಗ ನನ್ನ ತಂದೆಯು ಅದನ್ನು ಸ್ವೀಕರಿಸಿದನು. ಪ್ರಭುವು ಮತ್ತೆ ಹೇಳಿದನು: “ನೀನು ಅನೇಕ ದಿವ್ಯಾಸ್ತ್ರಗಳ ಮಳೆಗಳನ್ನು ಸುರಿಸುವೆ! ಈ ಅಸ್ತ್ರವನ್ನು ಹೊಂದಿರುವುದರಿಂದ ನೀನು ಸಂಗ್ರಾಮದಲ್ಲಿ ತೇಜಸ್ಸಿನಿಂದ ಪ್ರಜ್ವಲಿಸುತ್ತೀಯೆ!”
07166051a ಏವಮುಕ್ತ್ವಾ ಸ ಭಗವಾನ್ದಿವಮಾಚಕ್ರಮೇ ಪ್ರಭುಃ।
07166051c ಏತನ್ನಾರಾಯಣಾದಸ್ತ್ರಂ ತತ್ಪ್ರಾಪ್ತಂ ಮಮ ಬಂಧುನಾ।।
ಹೀಗೆ ಹೇಳಿ ಆ ಭಗವಾನ್ ಪ್ರಭುವು ದಿವಕ್ಕೆ ತೆರಳಿದನು. ಇಗೋ ಇದು ನನ್ನ ಬಂಧುವಿನಿಂದ ಪಡೆದ ಆ ನಾರಾಯಣಾಸ್ತ್ರವು.
07166052a ತೇನಾಹಂ ಪಾಂಡವಾಂಶ್ಚೈವ ಪಾಂಚಾಲಾನ್ಮತ್ಸ್ಯಕೇಕಯಾನ್।
07166052c ವಿದ್ರಾವಯಿಷ್ಯಾಮಿ ರಣೇ ಶಚೀಪತಿರಿವಾಸುರಾನ್।।
ಶಚೀಪತಿಯು ಅಸುರರನ್ನು ಹೇಗೋ ಹಾಗೆ ಇದರಿಂದ ರಣದಲ್ಲಿ ನಾನು ಪಾಂಡವರನ್ನೂ, ಪಾಂಚಾಲರನ್ನೂ, ಮತ್ಸ್ಯ-ಕೇಕಯರನ್ನೂ ಓಡಿಸುತ್ತೇನೆ.
07166053a ಯಥಾ ಯಥಾಹಮಿಚ್ಛೇಯಂ ತಥಾ ಭೂತ್ವಾ ಶರಾ ಮಮ।
07166053c ನಿಪತೇಯುಃ ಸಪತ್ನೇಷು ವಿಕ್ರಮತ್ಸ್ವಪಿ ಭಾರತ।।
ನನ್ನ ಶರಗಳು ಹೇಗೆ ಹೋಗಬೇಕೆಂದು ಇಚ್ಛಿಸುವೆನೋ ಹಾಗೆ ಅವು ಪರಾಕ್ರಮಿ ಶತ್ರುಗಳ ಮೇಲೆ ಬೀಳುವವು ಭಾರತ!
07166054a ಯಥೇಷ್ಟಮಶ್ಮವರ್ಷೇಣ ಪ್ರವರ್ಷಿಷ್ಯೇ ರಣೇ ಸ್ಥಿತಃ।
07166054c ಅಯೋಮುಖೈಶ್ಚ ವಿಹಗೈರ್ದ್ರಾವಯಿಷ್ಯೇ ಮಹಾರಥಾನ್।
07166054e ಪರಶ್ವಧಾಂಶ್ಚ ವಿವಿಧಾನ್ಪ್ರಸಕ್ಷ್ಯೇಽಹಮಸಂಶಯಂ।।
ನಾನು ರಣದಲ್ಲಿ ನಿಂತು ಯಥೇಚ್ಛವಾದ ಕಲ್ಲಿನ ಮಳೆಗರೆಯುತ್ತೇನೆ. ಲೋಹದ ಕೊಕ್ಕುಗಳಿರುವ ಪಕ್ಷಿಗಳಿಂದ ಮಹಾರಥರನ್ನು ಪಲಾಯನಗೊಳಿಸುತ್ತೇನೆ. ವಿವಿಧ ಪರಶುಗಳನ್ನೂ ಸುರಿಸುತ್ತೇನೆ. ಇದರಲ್ಲಿ ಸಂಶಯವಿಲ್ಲದಿರಲಿ!
07166055a ಸೋಽಹಂ ನಾರಾಯಣಾಸ್ತ್ರೇಣ ಮಹತಾ ಶತ್ರುತಾಪನ।
07166055c ಶತ್ರೂನ್ವಿಧ್ವಂಸಯಿಷ್ಯಾಮಿ ಕದರ್ಥೀಕೃತ್ಯ ಪಾಂಡವಾನ್।।
ಶತ್ರುತಾಪನ! ಹೀಗೆ ನಾನು ಮಹಾ ನಾರಾಯಣಾಸ್ತ್ರದಿಂದ ಪಾಂಡವರನ್ನು ವ್ಯರ್ಥಗೊಳಿಸಿ ಶತ್ರುಗಳನ್ನು ಧ್ವಂಸಮಾಡುತ್ತೇನೆ.
07166056a ಮಿತ್ರಬ್ರಹ್ಮಗುರುದ್ವೇಷೀ ಜಾಲ್ಮಕಃ ಸುವಿಗರ್ಹಿತಃ।
07166056c ಪಾಂಚಾಲಾಪಸದಶ್ಚಾದ್ಯ ನ ಮೇ ಜೀವನ್ವಿಮೋಕ್ಷ್ಯತೇ।।
ಮಿತ್ರ, ಬ್ರಾಹ್ಮಣ ಮತ್ತು ಗುರು-ದ್ವೇಷಿಯಾದ ನೀಚ, ಅತಿನಿಂದ್ಯ, ಪಾಂಚಾಲಕುಲಕಳಂಕ ಆ ಧೃಷ್ಟದ್ಯುಮ್ನನನ್ನು ಜೀವದಿಂದ ಮೋಕ್ಷಗೊಳಿಸುತ್ತೇನೆ.”
07166057a ತಚ್ಛೃತ್ವಾ ದ್ರೋಣಪುತ್ರಸ್ಯ ಪರ್ಯವರ್ತತ ವಾಹಿನೀ।
07166057c ತತಃ ಸರ್ವೇ ಮಹಾಶಂಖಾನ್ದಧ್ಮುಃ ಪುರುಷಸತ್ತಮಾಃ।।
ದ್ರೋಣಪುತ್ರನ ಆ ಮಾತನ್ನು ಕೇಳಿ ಸೇನೆಯು ಹಿಂದಿರುಗಿತು. ಆಗ ಎಲ್ಲ ಪುರುಷಸತ್ತಮರೂ ಮಹಾಶಂಖಗಳನ್ನೂದಿದರು.
07166058a ಭೇರೀಶ್ಚಾಭ್ಯಹನನ್ ಹೃಷ್ಟಾ ಡಿಂಡಿಮಾಂಶ್ಚ ಸಹಸ್ರಶಃ।
07166058c ತಥಾ ನನಾದ ವಸುಧಾ ಖುರನೇಮಿಪ್ರಪೀಡಿತಾ।
07166058e ಸ ಶಬ್ದಸ್ತುಮುಲಃ ಖಂ ದ್ಯಾಂ ಪೃಥಿವೀಂ ಚ ವ್ಯನಾದಯತ್।।
ಹೃಷ್ಟರಾಗಿ ಸಹಸ್ರಾರು ಭೇರಿ-ಡಿಂಡಿಮಗಳನ್ನು ಬಾರಿಸಿದರು. ಕುದುರೆಗಳ ಗೊರಸುಗಳಿಂದಲೂ ರಥಚಕ್ರಗಳ ಸಂಚಲನದಿಂದಲೂ ವಸುಧೆಯು ಪೀಡಿತಳಾದಳು. ಆ ತುಮುಲ ಶಬ್ಧವು ಆಕಾಶ, ಸ್ವರ್ಗ ಮತ್ತು ಪೃಥ್ವಿಯಲ್ಲಿ ಮೊಳಗಿತು.
07166059a ತಂ ಶಬ್ಧಂ ಪಾಂಡವಾಃ ಶ್ರುತ್ವಾ ಪರ್ಜನ್ಯನಿನದೋಪಮಂ।
07166059c ಸಮೇತ್ಯ ರಥಿನಾಂ ಶ್ರೇಷ್ಠಾಃ ಸಹಿತಾಃ ಸಂನ್ಯಮಂತ್ರಯನ್।।
ಮೇಘಗರ್ಜನೆಗೆ ಸಮಾನ ಆ ಶಬ್ಧವನ್ನು ಕೇಳಿ ಪಾಂಡವರು ರಥಶ್ರೇಷ್ಠರೊಡನೆ ಕಲೆತು ಒಟ್ಟಿಗೇ ಮಂತ್ರಾಲೋಚನೆಗೆ ತೊಡಗಿದರು.
07166060a ತಥೋಕ್ತ್ವಾ ದ್ರೋಣಪುತ್ರೋಽಪಿ ತದೋಪಸ್ಪೃಶ್ಯ ಭಾರತ।
07166060c ಪ್ರಾದುಶ್ಚಕಾರ ತದ್ದಿವ್ಯಮಸ್ತ್ರಂ ನಾರಾಯಣಂ ತದಾ।।
ಭಾರತ! ಹಾಗೆ ಹೇಳಿ ದ್ರೋಣಪುತ್ರನೂ ಕೂಡ ನೀರನ್ನು ಮುಟ್ಟಿ ಆ ದಿವ್ಯ ನಾರಾಯಣಾಸ್ತ್ರವನ್ನು ಪ್ರಕಟಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣಪರ್ವಣಿ ನಾರಾಯಣಾಸ್ತ್ರಮೋಕ್ಷಣಪರ್ವಣಿ ಅಶ್ವತ್ಥಾಮಕ್ರೋಧೇ ಷಟ್ಷಷ್ಟ್ಯಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣಪರ್ವದಲ್ಲಿ ನಾರಾಯಣಾಸ್ತ್ರಮೋಕ್ಷಣಪರ್ವದಲ್ಲಿ ಅಶ್ವತ್ಥಾಮಕ್ರೋಧ ಎನ್ನುವ ನೂರಾಅರವತ್ತಾರನೇ ಅಧ್ಯಾಯವು.