164 ಸಂಕುಲಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ದ್ರೋಣವಧ ಪರ್ವ

ಅಧ್ಯಾಯ 164

ಸಾರ

ಸಂಕುಲ ಯುದ್ಧ (1-20). ದುರ್ಯೋಧನ-ಸಾತ್ಯಕಿಯರ ಯುದ್ಧ (21-42). ಕರ್ಣ-ಭೀಮಸೇನರ ಯುದ್ಧ (43-47). ದ್ರೋಣ-ಪಾಂಚಾಲರ ಯುದ್ಧ (48-65). ಕೃಷ್ಣನು ಅಶ್ವತ್ಥಾಮನು ಹತನಾದನೆಂಬ ಸುಳ್ಳು ಸುದ್ದಿಯನ್ನು ಹರಡಿಸಲು ಸೂಚಿಸಿದುದು (66-70). ಭೀಮಸೇನನು ಅಶ್ವತ್ಥಾಮ ಎಂಬ ಹೆಸರಿನ ಆನೆಯನ್ನು ಸಂಹರಿಸಿ ಅಶ್ವತ್ಥಾಮನು ಹತನಾದನೆಂದು ಘೋಷಿಸಿದುದು (71-73). ಹತಾಶನಾದ ದ್ರೋಣನು ಪಾಂಚಾಲ ಸೇನೆಯನ್ನು ಧ್ವಂಸಮಾಡಲು ತೊಡಗಿದುದು (74-85). ಋಷಿಗಳು ದ್ರೋಣನಿಗೆ ಕಾಣಿಸಿಕೊಂಡು ಯುದ್ಧದಿಂದ ನಿವೃತ್ತನಾಗಲು ಹೇಳಿದುದು (86-93). ದ್ರೋಣನು ಕೇಳಲು ಯುಧಿಷ್ಠಿರನು ಅಶ್ವತ್ಥಾಮನು ಹತನಾದನೆಂದು ಹೇಳಿದುದು (94-107). ದ್ರೋಣ- ಧೃಷ್ಟದ್ಯುಮ್ನರ ಯುದ್ಧ (108-159).

07164001 ಸಂಜಯ ಉವಾಚ।
07164001a ತಸ್ಮಿಂಸ್ತಥಾ ವರ್ತಮಾನೇ ನರಾಶ್ವಗಜಸಂಕ್ಷಯೇ।
07164001c ದುಃಶಾಸನೋ ಮಹಾರಾಜ ಧೃಷ್ಟದ್ಯುಮ್ನಮಯೋಧಯತ್।।

ಸಂಜಯನು ಹೇಳಿದನು: “ಮಹಾರಾಜ! ಹಾಗೆ ನರಾಶ್ವಗಜಸಂಹಾರವು ನಡೆಯುತ್ತಿರಲು ದುಃಶಾಸನನು ಧೃಷ್ಟದ್ಯುಮ್ನನನ್ನು ಎದುರಿಸಿ ಯುದ್ಧಮಾಡಿದನು.

07164002a ಸ ತು ರುಕ್ಮರಥಾಸಕ್ತೋ ದುಃಶಾಸನಶರಾರ್ದಿತಃ।
07164002c ಅಮರ್ಷಾತ್ತವ ಪುತ್ರಸ್ಯ ಶರೈರ್ವಾಹಾನವಾಕಿರತ್।।

ರುಕ್ಮರಥ ದ್ರೋಣನೊಡನೊಡನೆ ಯುದ್ಧಮಾಡಲು ಆಸಕ್ತನಾದ ಅವನನ್ನು ದುಃಶಾಸನನು ಶರಗಳಿಂದ ಗಾಯಗೊಳಿಸಲು ಅಸಹನೆಯಿಂದ ಅವನು ನಿನ್ನ ಮಗನ ಕುದುರೆಗಳನ್ನು ಶರಗಳಿಂದ ಮುಚ್ಚಿದನು.

07164003a ಕ್ಷಣೇನ ಸ ರಥಸ್ತಸ್ಯ ಸಧ್ವಜಃ ಸಹಸಾರಥಿಃ।
07164003c ನಾದೃಶ್ಯತ ಮಹಾರಾಜ ಪಾರ್ಷತಸ್ಯ ಶರೈಶ್ಚಿತಃ।।

ಮಹಾರಾಜ! ಪಾರ್ಷತನ ಶರಗಳಿಂದ ಮುಚ್ಚಲ್ಪಟ್ಟ ಆ ರಥವು ಧ್ವಜ-ಸಾರಥಿಗಳೊಂದಿಗೆ ಕಾಣದಂತಾಯಿತು.

07164004a ದುಃಶಾಸನಸ್ತು ರಾಜೇಂದ್ರ ಪಾಂಚಾಲ್ಯಸ್ಯ ಮಹಾತ್ಮನಃ।
07164004c ನಾಶಕತ್ಪ್ರಮುಖೇ ಸ್ಥಾತುಂ ಶರಜಾಲಪ್ರಪೀಡಿತಃ।।

ರಾಜೇಂದ್ರ! ಮಹಾತ್ಮ ಪಾಂಚಾಲನ ಶರಜಾಲಗಳಿಂದ ಚೆನ್ನಾಗಿ ಪೀಡಿತನಾದ ದುಃಶಾಸನನು ಅವನ ಮುಂದೆ ಹೆಚ್ಚುಕಾಲ ನಿಲ್ಲಲು ಶಕ್ಯನಾಗಲಿಲ್ಲ.

07164005a ಸ ತು ದುಃಶಾಸನಂ ಬಾಣೈರ್ವಿಮುಖೀಕೃತ್ಯ ಪಾರ್ಷತಃ।
07164005c ಕಿರಂ ಶರಸಹಸ್ರಾಣಿ ದ್ರೋಣಮೇವಾಭ್ಯಯಾದ್ರಣೇ।।

ಪಾರ್ಷತನು ದುಃಶಾಸನನನ್ನು ಬಾಣಗಳಿಂದ ವಿಮುಖನನ್ನಾಗಿ ಮಾಡಿ ರಣದಲ್ಲಿ ದ್ರೋಣನನ್ನೇ ಆಕ್ರಮಣಿಸುತ್ತಾ ಸಹಸ್ರ ಬಾಣಗಳನ್ನು ಎರಚಿದನು.

07164006a ಪ್ರತ್ಯಪದ್ಯತ ಹಾರ್ದಿಕ್ಯಃ ಕೃತವರ್ಮಾ ತದಂತರಂ।
07164006c ಸೋದರ್ಯಾಣಾಂ ತ್ರಯಶ್ಚೈವ ತ ಏನಂ ಪರ್ಯವಾರಯನ್।।

ಅಷ್ಟರಲ್ಲಿ ಹಾರ್ದಿಕ್ಯ ಕೃತವರ್ಮ ಮತ್ತು ದುಃಶಾಸನನ ಮೂವರು ಸಹೋದರರು ಧೃಷ್ಟದ್ಯುಮ್ನನನ್ನು ಸುತ್ತುವರೆದರು.

07164007a ತಂ ಯಮೌ ಪೃಷ್ಠತೋಽನ್ವೈತಾಂ ರಕ್ಷಂತೌ ಪುರುಷರ್ಷಭೌ।
07164007c ದ್ರೋಣಾಯಾಭಿಮುಖಂ ಯಾಂತಂ ದೀಪ್ಯಮಾನಮಿವಾನಲಂ।।

ಅಗ್ನಿಯಂತೆ ದೇದೀಪ್ಯಮಾನನಾಗಿ ಉರಿಯುತ್ತಿದ್ದ ದ್ರೋಣನ ಎದುರಾಗಿ ರಭಸದಿಂದ ಮುನ್ನುಗ್ಗುತ್ತಿದ್ದ ಧೃಷ್ಟದ್ಯುಮ್ನನನ್ನು ಪುರುಷರ್ಷಭ ಯಮಳ ನಕುಲ-ಸಹದೇವರು ರಕ್ಷಕರಾಗಿ ಹಿಂಬಾಲಿಸಿ ಹೋದರು.

07164008a ಸಂಪ್ರಹಾರಮಕುರ್ವಂಸ್ತೇ ಸರ್ವೇ ಸಪ್ತ ಮಹಾರಥಾಃ।
07164008c ಅಮರ್ಷಿತಾಃ ಸತ್ತ್ವವಂತಃ ಕೃತ್ವಾ ಮರಣಮಗ್ರತಃ।।

ಆ ಎಲ್ಲ ಏಳು ಸತ್ವವಂತ ಅಸಹನಶೀಲ ಮಹಾರಥರೂ ಮರಣವನ್ನೇ ಮುಂದಿಟ್ಟುಕೊಂಡು ಪ್ರಹಾರಕಾರ್ಯದಲ್ಲಿ ತೊಡಗಿದ್ದರು.

07164009a ಶುದ್ಧಾತ್ಮಾನಃ ಶುದ್ಧವೃತ್ತಾ ರಾಜನ್ಸ್ವರ್ಗಪುರಸ್ಕೃತಾಃ।
07164009c ಆರ್ಯನ್ಯುದ್ಧಮಕುರ್ವಂತ ಪರಸ್ಪರಜಿಗೀಷವಃ।।

ರಾಜನ್! ಆರ್ಯನ್! ಶುದ್ಧಾತ್ಮ ಶುದ್ಧನಡತೆಯ ಅವರು ಪರಸ್ಪರನ್ನು ಜಯಿಸುವ ಇಚ್ಛೆಯಿಂದ ಸ್ವರ್ಗವನ್ನೇ ಗುರಿಯನ್ನಾಗಿಟ್ಟುಕೊಂಡು ಯುದ್ಧಮಾಡುತ್ತಿದ್ದರು.

07164010a ಶುಕ್ಲಾಭಿಜನಕರ್ಮಾಣೋ ಮತಿಮಂತೋ ಜನಾಧಿಪಾಃ।
07164010c ಧರ್ಮಯುದ್ಧಮಯುಧ್ಯಂತ ಪ್ರೇಕ್ಷಂತೋ ಗತಿಮುತ್ತಮಾಂ।।

ಶುದ್ಧಕರ್ಮಗಳ ಕುಲಗಳಲ್ಲಿ ಜನಿಸಿದ ಮತಿಮಂತರಾದ ಆ ಜನಾಧಿಪರು ಉತ್ತಮ ಗತಿಯನ್ನೇ ಅಭಿಲಾಷಿಸಿ ಧರ್ಮಯುದ್ಧವನ್ನು ಮಾಡುತ್ತಿದ್ದರು.

07164011a ನ ತತ್ರಾಸೀದಧರ್ಮಿಷ್ಠಮಶಸ್ತ್ರಂ ಯುದ್ಧಮೇವ ಚ।
07164011c ನಾತ್ರ ಕರ್ಣೀ ನ ನಾಲೀಕೋ ನ ಲಿಪ್ತೋ ನ ಚ ವಸ್ತಕಃ।।
07164012a ನ ಸೂಚೀ ಕಪಿಶೋ ನಾತ್ರ ನ ಗವಾಸ್ಥಿರ್ಗಜಾಸ್ಥಿಕಃ।
07164012c ಇಷುರಾಸೀನ್ನ ಸಂಶ್ಲಿಷ್ಟೋ ನ ಪೂತಿರ್ನ ಚ ಜಿಹ್ಮಗಃ।।

ಅಲ್ಲಿ ಅಧರ್ಮಪೂರ್ವಕವಾದ ಅಥವಾ ನಿಂದನೀಯವಾದ ಯುದ್ಧವು ನಡೆಯುತ್ತಿರಲಿಲ್ಲ. ಅಲ್ಲಿ ಕರ್ಣಿ, ನಾಲೀಕ, ವಿಷಲಿಪ್ತ, ವಸ್ತಕ, ಸೂಚೀ, ಪಿಶ, ವಾಸ್ತಿಗಜಾಸ್ತಿಜ, ಸಂಶ್ಲಿಷ್ಟ, ಪೂತಿ, ಮತ್ತು ಜಿಹ್ಮಗಗಳನ್ನು ಬಳಸುತ್ತಿರಲಿಲ್ಲ.

07164013a ಋಜೂನ್ಯೇವ ವಿಶುದ್ಧಾನಿ ಸರ್ವೇ ಶಸ್ತ್ರಾಣ್ಯಧಾರಯನ್।
07164013c ಸುಯುದ್ಧೇನ ಪರಾಽಲ್ಲೋಕಾನೀಪ್ಸಂತಃ ಕೀರ್ತಿಮೇವ ಚ।।

ಧರ್ಮಯುದ್ಧದಿಂದ ಕೀರ್ತಿಯನ್ನೂ ಉತ್ತಮ ಲೋಕಗಳನ್ನೂ ಪಡೆದುಕೊಳ್ಳಬೇಕೆಂದು ಇಚ್ಛಿಸಿದ್ದ ಎಲ್ಲ ಯೋಧರೂ ನೇರ ವಿಶುದ್ಧ ಶಸ್ತ್ರಗಳನ್ನೇ ಧರಿಸಿದ್ದರು.

07164014a ತದಾಸೀತ್ತುಮುಲಂ ಯುದ್ಧಂ ಸರ್ವದೋಷವಿವರ್ಜಿತಂ।
07164014c ಚತುರ್ಣಾಂ ತವ ಯೋಧಾನಾಂ ತೈಸ್ತ್ರಿಭಿಃ ಪಾಂಡವೈಃ ಸಹ।।

ಆಗ ನಿನ್ನಕಡೆಯ ನಾಲ್ವರು ಯೋಧರು ಮತ್ತು ಮೂವರು ಪಾಂಡವರ ಕಡೆಯವರ ಮಧ್ಯೆ ಸರ್ವದೋಷವರ್ಜಿತ ತುಮುಲ ಯುದ್ಧವು ನಡೆಯಿತು.

07164015a ಧೃಷ್ಟದ್ಯುಮ್ನಸ್ತು ತಾನ್ ಹಿತ್ವಾ ತವ ರಾಜನ್ರಥರ್ಷಭಾನ್।
07164015c ಯಮಾಭ್ಯಾಂ ವಾರಿತಾನ್ದೃಷ್ಟ್ವಾ ಶೀಘ್ರಾಸ್ತ್ರೋ ದ್ರೋಣಮಭ್ಯಯಾತ್।।

ರಾಜನ್! ನಿನ್ನ ಕಡೆಯ ರಥರ್ಷಭರನ್ನು ನಕುಲ-ಸಹದೇವರು ತಡೆಯುತ್ತಿದ್ದಿದ್ದುದನ್ನು ನೋಡಿ ಶೀಘ್ರಾಸ್ತ್ರ ಧೃಷ್ಟದ್ಯುಮ್ನನು ನೇರವಾಗಿ ದ್ರೋಣನನ್ನು ಆಕ್ರಮಣಿಸಿದನು.

07164016a ನಿವಾರಿತಾಸ್ತು ತೇ ವೀರಾಸ್ತಯೋಃ ಪುರುಷಸಿಂಹಯೋಃ।
07164016c ಸಮಸಜ್ಜಂತ ಚತ್ವಾರೋ ವಾತಾಃ ಪರ್ವತಯೋರಿವ।।

ಪರ್ವತಗಳಿಂದ ಚಂಡಮಾರುತವು ತಡೆಹಿಡಿಯಲ್ಪಡುವಂತೆ ಆ ಇಬ್ಬರು ಪುರುಷಸಿಂಹ ವೀರ ನಕುಲ-ಸಹದೇವರಿಂದ ತಡೆಯಲ್ಪಟ್ಟ ನಿನ್ನವರಾದ ನಾಲ್ವರು ಅವರೊಂದಿಗೆ ಯುದ್ಧದಲ್ಲಿ ತೊಡಗಿದರು.

07164017a ದ್ವಾಭ್ಯಾಂ ದ್ವಾಭ್ಯಾಂ ಯಮೌ ಸಾರ್ಧಂ ರಥಾಭ್ಯಾಂ ರಥಪುಂಗವೌ।
07164017c ಸಮಾಸಕ್ತೌ ತತೋ ದ್ರೋಣಂ ಧೃಷ್ಟದ್ಯುಮ್ನೋಽಭ್ಯವರ್ತತ।।

ಇಬ್ಬಿಬ್ಬರು ರಥಪುಂಗವರು ಒಬ್ಬೊಬ್ಬ ಯಮಳೊಡನೆ ರಥಯುದ್ಧದಲ್ಲಿ ಸಮಾಸಕ್ತರಾಗಿರಲು ಧೃಷ್ಟದ್ಯುಮ್ನನು ದ್ರೋಣನನ್ನು ಆಕ್ರಮಣಿಸಿದನು.

07164018a ದೃಷ್ಟ್ವಾ ದ್ರೋಣಾಯ ಪಾಂಚಾಲ್ಯಂ ವ್ರಜಂತಂ ಯುದ್ಧದುರ್ಮದಂ।
07164018c ಯಮಾಭ್ಯಾಂ ತಾಂಶ್ಚ ಸಂಸಕ್ತಾಂಸ್ತದಂತರಮುಪಾದ್ರವತ್।।
07164019a ದುರ್ಯೋಧನೋ ಮಹಾರಾಜ ಕಿರಂ ಶೋಣಿತಭೋಜನಾನ್।
07164019c ತಂ ಸಾತ್ಯಕಿಃ ಶೀಘ್ರತರಂ ಪುನರೇವಾಭ್ಯವರ್ತತ।।

ಪಾಂಚಾಲ್ಯನು ಯುದ್ಧದುರ್ಮದ ದ್ರೋಣನ ಮೇಲೆ ಎರಗುತ್ತಿರುವುದನ್ನು ಮತ್ತು ನಕುಲ-ಸಹದೇವರು ಉಳಿದವರೊಡನೆ ಯುದ್ಧದಲ್ಲಿ ಸಮಾಸಕ್ತರಾಗಿರುವುದನ್ನು ನೋಡಿ ಮಹಾರಾಜ ದುರ್ಯೋಧನನು ರಕ್ತವನ್ನು ಕುಡಿಯುವ ಬಾಣಗಳನ್ನು ಸುರಿಸುತ್ತಾ ಮಧ್ಯದಲ್ಲಿ ನುಗ್ಗಿ ಆಕ್ರಮಣಮಾಡಿದನು. ಆಗ ಅವನನ್ನು ಸಾತ್ಯಕಿಯು ಪುನಃ ಶೀಘ್ರವಾಗಿ ಆಕ್ರಮಣಿಸಿ ತಡೆದನು.

07164020a ತೌ ಪರಸ್ಪರಮಾಸಾದ್ಯ ಸಮೀಪೇ ಕುರುಮಾಧವೌ।
07164020c ಹಸಮಾನೌ ನೃಶಾರ್ದೂಲಾವಭೀತೌ ಸಮಗಚ್ಚತಾಂ।।

ಅವರಿಬ್ಬರು ಕುರು-ಮಾಧವ ನರಶಾರ್ದೂಲರು ಪರಸ್ಪರರ ಸಮೀಪ ಬಂದು ನಿರ್ಭೀತರಾಗಿ ಗಹಗಹಿಸಿ ನಗುತ್ತಾ ಯುದ್ಧದಲ್ಲಿ ತೊಡಗಿದರು.

07164021a ಬಾಲ್ಯೇ ವೃತ್ತಾನಿ ಸರ್ವಾಣಿ ಪ್ರೀಯಮಾಣೌ ವಿಚಿಂತ್ಯ ತೌ।
07164021c ಅನ್ಯೋನ್ಯಂ ಪ್ರೇಕ್ಷಮಾಣೌ ಚ ಹಸಮಾನೌ ಪುನಃ ಪುನಃ।।

ಅನ್ಯೋನ್ಯರನ್ನು ನೋಡಿ ಬಾಲ್ಯದಲ್ಲಿ ನಡೆದಿದ್ದ ಎಲ್ಲ ಪ್ರಿಯ ಸಂಗತಿಗಳನ್ನೂ ಸ್ಮರಿಸಿಕೊಂಡು ಪುನಃ ಪುನಃ ನಗುತ್ತಿದ್ದರು.

07164022a ಅಥ ದುರ್ಯೋಧನೋ ರಾಜಾ ಸಾತ್ಯಕಿಂ ಪ್ರತ್ಯಭಾಷತ।
07164022c ಪ್ರಿಯಂ ಸಖಾಯಂ ಸತತಂ ಗರ್ಹಯನ್ವೃತ್ತಮಾತ್ಮನಃ।।

ಆಗ ರಾಜಾ ದುರ್ಯೋಧನನು ಪ್ರಿಯ ಸಖ ಸಾತ್ಯಕಿಗೆ ತನ್ನನ್ನು ತಾನೇ ನಿಂದಿಸಿಕೊಳ್ಳುತ್ತಾ ಹೇಳಿದನು:

07164023a ಧಿಕ್ಕ್ರೋಧಂ ಧಿಕ್ಸಖೇ ಲೋಭಂ ಧಿಂ ಮೋಹಂ ಧಿಗಮರ್ಷಿತಂ।
07164023c ಧಿಗಸ್ತು ಕ್ಷಾತ್ರಮಾಚಾರಂ ಧಿಗಸ್ತು ಬಲಮೌರಸಂ।।

“ಸಖಾ! ಈ ಕ್ರೋಧಕ್ಕೆ ಧಿಕ್ಕಾರ! ಈ ಲೋಭ, ಮೋಹ, ಅಸಹನೆಗಳಿಗೆ ಧಿಕ್ಕಾರ! ಕ್ಷತ್ರಿಯ ನಡತೆಗೆ ಧಿಕ್ಕಾರ! ಶ್ರೇಷ್ಠ ಎದೆಗಾರಿಕೆಗೂ ಧಿಕ್ಕಾರ!

07164024a ಯತ್ತ್ವಂ ಮಾಮಭಿಸಂಧತ್ಸೇ ತ್ವಾಂ ಚಾಹಂ ಶಿನಿಪುಂಗವ।
07164024c ತ್ವಂ ಹಿ ಪ್ರಾಣೈಃ ಪ್ರಿಯತರೋ ಮಮಾಹಂ ಚ ಸದಾ ತವ।।

ಶಿನಿಪುಂಗವ! ನಿನ್ನನ್ನು ನಾನು ಮತ್ತು ನನ್ನನ್ನು ನೀನು ಎದುರಿಸಿ ಯುದ್ಧಮಾಡುತ್ತಿದ್ದೇವೆಯಲ್ಲಾ! ಸದಾ ನೀನು ನನಗೆ ಪ್ರಾಣಕ್ಕಿಂತಲೂ ಪ್ರಿಯನಾಗಿದ್ದೆ. ನಾನೂ ಕೂಡ ನಿನಗೆ ಪ್ರಾಣಕ್ಕಿಂತಲೂ ಪ್ರಿಯನಾಗಿದ್ದೆ!

07164025a ಸ್ಮರಾಮಿ ತಾನಿ ಸರ್ವಾಣಿ ಬಾಲ್ಯೇ ವೃತ್ತಾನಿ ಯಾನಿ ನೌ।
07164025c ತಾನಿ ಸರ್ವಾಣಿ ಜೀರ್ಣಾನಿ ಸಾಂಪ್ರತಂ ನೌ ರಣಾಜಿರೇ।
07164025e ಕಿಮನ್ಯತ್ಕ್ರೋಧಲೋಭಾಭ್ಯಾಂ ಯುಧ್ಯಾಮಿ ತ್ವಾದ್ಯ ಸಾತ್ವತ।।

ನಾವಿಬ್ಬರೂ ಬಾಲ್ಯದಲ್ಲಿ ಮಾಡಿದುದೆಲ್ಲವನ್ನೂ ನಾನು ಸ್ಮರಿಸಿಕೊಳ್ಳುತ್ತೇನೆ. ಆದರೆ ಈ ರಣಾಂಗಣದಲ್ಲಿ ಅವೆಲ್ಲವೂ ಜೀರ್ಣವಾಗಿ ಮುಗಿದುಹೋದಂತಿವೆ! ಕ್ರೋಧ-ಲೋಭಗಳಲ್ಲದೇ ಬೇರೆ ಯಾವ ಕಾರಣಕ್ಕಾಗಿ ನಾವು ಇಂದು ಯುದ್ಧಮಾಡುತ್ತಿದ್ದೇವೆ ಸಾತ್ವತ?”

07164026a ತಂ ತಥಾವಾದಿನಂ ರಾಜನ್ಸಾತ್ಯಕಿಃ ಪ್ರತ್ಯಭಾಷತ।
07164026c ಪ್ರಹಸನ್ವಿಶಿಖಾಂಸ್ತೀಕ್ಷ್ಣಾನುದ್ಯಮ್ಯ ಪರಮಾಸ್ತ್ರವಿತ್।।

ರಾಜನ್! ಹಾಗೆ ಮಾತನಾಡುತ್ತಿದ್ದ ಅವನಿಗೆ ಪರಮಾಸ್ತ್ರಗಳನ್ನು ತಿಳಿದಿದ್ದ ಸಾತ್ಯಕಿಯು ತೀಕ್ಷ್ಣ ವಿಶಿಖಗಳನ್ನು ಎತ್ತಿಕೊಂಡು ನಗುತ್ತಾ ಉತ್ತರಿಸಿ ಹೇಳಿದನು:

07164027a ನೇಯಂ ಸಭಾ ರಾಜಪುತ್ರ ನ ಚಾಚಾರ್ಯನಿವೇಶನಂ।
07164027c ಯತ್ರ ಕ್ರೀಡಿತಮಸ್ಮಾಭಿಸ್ತದಾ ರಾಜನ್ಸಮಾಗತೈಃ।।

“ರಾಜಪುತ್ರ! ರಾಜನ್! ಇದು ಅಂದು ನಾವು ಒಟ್ಟಾಗಿ ಆಟವಾಡುತ್ತಿದ್ದ ಸಭೆಯೂ ಅಲ್ಲ. ಆಚಾರ್ಯನ ಮನೆಯೂ ಅಲ್ಲ.”

07164028 ದುರ್ಯೋಧನ ಉವಾಚ।
07164028a ಕ್ವ ಸಾ ಕ್ರೀಡಾ ಗತಾಸ್ಮಾಕಂ ಬಾಲ್ಯೇ ವೈ ಶಿನಿಪುಂಗವ।
07164028c ಕ್ವ ಚ ಯುದ್ಧಮಿದಂ ಭೂಯಃ ಕಾಲೋ ಹಿ ದುರತಿಕ್ರಮಃ।।

ದುರ್ಯೋಧನನು ಹೇಳಿದನು: “ಶಿನಿಪುಂಗವ! ಬಾಲ್ಯದಲ್ಲಿ ಆಡುತ್ತಿದ್ದ ಆ ನಮ್ಮ ಆಟವು ಎಲ್ಲಿ ಹೋಯಿತು? ಪುನಃ ಈ ಯುದ್ಧವು ಏತಕ್ಕೆ? ಕಾಲವನ್ನು ಮೀರಿಹೋಗುವುದು ಅತ್ಯಂತ ಕಷ್ಟಕರವಾದುದು!

07164029a ಕಿಂ ನು ನೋ ವಿದ್ಯತೇ ಕೃತ್ಯಂ ಧನೇನ ಧನಲಿಪ್ಸಯಾ।
07164029c ಯತ್ರ ಯುಧ್ಯಾಮಹೇ ಸರ್ವೇ ಧನಲೋಭಾತ್ಸಮಾಗತಾಃ।।

ಇಲ್ಲಿ ನಾವೆಲ್ಲರೂ ಧನಲೋಭದಿಂದಲೇ ಯುದ್ಧಕ್ಕೆ ಸೇರಿಕೊಂಡಿಲ್ಲವೇ? ಆದರೆ ನಮಗೆ ಧನದಿಂದಾಗಲೀ ಧನದ ಆಸೆಯಿಂದಾಗಲೀ ಮಾಡುವ ಕಾರ್ಯವೇನಿದೆ?””

07164030 ಸಂಜಯ ಉವಾಚ।
07164030a ತಂ ತಥಾವಾದಿನಂ ತತ್ರ ರಾಜಾನಂ ಮಾಧವೋಽಬ್ರವೀತ್।
07164030c ಏವಂವೃತ್ತಂ ಸದಾ ಕ್ಷತ್ರಂ ಯದ್ಧಂತೀಹ ಗುರೂನಪಿ।।

ಸಂಜಯನು ಹೇಳಿದನು: “ಅಲ್ಲಿ ಹಾಗೆ ಮಾತನಾಡುತ್ತಿದ್ದ ರಾಜ ದುರ್ಯೋಧನನಿಗೆ ಮಾಧವ ಸಾತ್ಯಕಿಯು ಹೇಳಿದನು: “ಕ್ಷತ್ರಿಯನಾಗಿ ಸದಾ ಹೀಗೆಯೇ ನಡೆದುಕೊಳ್ಳಬೇಕಾಗುತ್ತದೆ. ಗುರುವಾದರೂ ಅವನೊಂದಿಗೆ ಯುದ್ಧಮಾಡಬೇಕಾಗುತ್ತದೆ!

07164031a ಯದಿ ತೇಽಹಂ ಪ್ರಿಯೋ ರಾಜಂ ಜಹಿ ಮಾಂ ಮಾ ಚಿರಂ ಕೃಥಾಃ।
07164031c ತ್ವತ್ಕೃತೇ ಸುಕೃತಾಽಲ್ಲೋಕಾನ್ಗಚ್ಚೇಯಂ ಭರತರ್ಷಭ।।

ರಾಜನ್! ಒಂದುವೇಳೆ ನಾನು ನಿನಗೆ ಪ್ರಿಯನಾಗಿದ್ದರೆ ನನ್ನನ್ನು ಜಯಿಸು! ಸಾವಕಾಶಮಾಡಬೇಡ! ಭರತರ್ಷಭ! ನೀನು ಹಾಗೆ ಮಾಡಿದರೆ ನಾನು ಅನೇಕ ಸುಕೃತಲೋಕಗಳಿಗೆ ಹೋಗಬಲ್ಲೆ!

07164032a ಯಾ ತೇ ಶಕ್ತಿರ್ಬಲಂ ಚೈವ ತತ್ ಕ್ಷಿಪ್ರಂ ಮಯಿ ದರ್ಶಯ।
07164032c ನೇಚ್ಚಾಮ್ಯೇತದಹಂ ದ್ರಷ್ಟುಂ ಮಿತ್ರಾಣಾಂ ವ್ಯಸನಂ ಮಹತ್।।

ಆದುದರಿಂದ ನಿನ್ನಲ್ಲಿರುವ ಶಕ್ತಿ-ಬಲಗಳನ್ನು ಬೇಗನೇ ನನ್ನಲ್ಲಿ ಪ್ರದರ್ಶಿಸು. ಮಿತ್ರರ ಈ ಮಹಾ ವ್ಯಸನವನ್ನು ಇನ್ನೂ ಹೆಚ್ಚುಕಾಲ ನೋಡಲು ನನಗಿಷ್ಟವಿಲ್ಲ!”

07164033a ಇತ್ಯೇವಂ ವ್ಯಕ್ತಮಾಭಾಷ್ಯ ಪ್ರತಿಭಾಷ್ಯ ಚ ಸಾತ್ಯಕಿಃ।
07164033c ಅಭ್ಯಯಾತ್ತೂರ್ಣಮವ್ಯಗ್ರೋ ನಿರಪೇಕ್ಷೋ ವಿಶಾಂ ಪತೇ।।

ವಿಶಾಂಪತೇ! ಹೀಗೆ ಅವ್ಯಗ್ರ ಸಾತ್ಯಕಿಯು ಸ್ಪಷ್ಟಮಾತುಗಳನ್ನಾಡಿ ಅವನಿಗೆ ಉತ್ತರಿಸಿ ಬೇಗನೇ ನಿರಪೇಕ್ಷನಾಗಿ ಅವನನ್ನು ಆಕ್ರಮಣಿಸಿದನು.

07164034a ತಮಾಯಾಂತಮಭಿಪ್ರೇಕ್ಷ್ಯ ಪ್ರತ್ಯಗೃಹ್ಣಾತ್ತವಾತ್ಮಜಃ।
07164034c ಶರೈಶ್ಚಾವಾಕಿರದ್ರಾಜಂ ಶೈನೇಯಂ ತನಯಸ್ತವ।।

ರಾಜನ್! ಅವನು ಆಕ್ರಮಣಿಸುತ್ತಿರುವುದನ್ನು ನೋಡಿ ನಿನ್ನ ಮಗನು ಶೈನೇಯನನ್ನು ಶರಗಳಿಂದ ಮುಚ್ಚಿ ತಡೆದನು.

07164035a ತತಃ ಪ್ರವವೃತೇ ಯುದ್ಧಂ ಕುರುಮಾಧವಸಿಂಹಯೋಃ।
07164035c ಅನ್ಯೋನ್ಯಂ ಕ್ರುದ್ಧಯೋರ್ಘೋರಂ ಯಥಾ ದ್ವಿರದಸಿಂಹಯೋಃ।।

ಆಗ ಅನ್ಯೋನ್ಯರಲ್ಲಿ ಕ್ರುದ್ಧರಾಗಿದ್ದ ಕುರು-ಮಾಧವಸಿಂಹರೊಡನೆ ಆನೆ-ಸಿಂಹಗಳ ನಡುವಿನಂತೆ ಘೋರ ಯುದ್ಧವು ನಡೆಯಿತು.

07164036a ತತಃ ಪೂರ್ಣಾಯತೋತ್ಸೃಷ್ಟೈಃ ಸಾತ್ವತಂ ಯುದ್ಧದುರ್ಮದಂ।
07164036c ದುರ್ಯೋಧನಃ ಪ್ರತ್ಯವಿಧ್ಯದ್ದಶಭಿರ್ನಿಶಿತೈಃ ಶರೈಃ।।

ಅನಂತರ ದುರ್ಯೋಧನನು ಯುದ್ಧದುರ್ಮದ ಸಾತ್ವತನನ್ನು ಪೂರ್ಣಾಯತವಾಗಿ ಸೆಳೆದು ಬಿಡಲ್ಪಟ್ಟ ಹತ್ತು ನಿಶಿತ ಶರಗಳಿಂದ ಹೊಡೆದನು.

07164037a ತಂ ಸಾತ್ಯಕಿಃ ಪ್ರತ್ಯವಿದ್ಧತ್ತಥೈವ ದಶಭಿಃ ಶರೈಃ।
07164037c ಪಂಚಾಶತಾ ಪುನಶ್ಚಾಜೌ ತ್ರಿಂಶತಾ ದಶಭಿಶ್ಚ ಹ।।

ಹಾಗೆಯೇ ಸಾತ್ಯಕಿಯೂ ಕೂಡ ಅವನನ್ನು ತಿರುಗಿ ಹತ್ತು ಶರಗಳಿಂದ, ಮತ್ತೆ ಪುನಃ ಐವತ್ತು, ಮೂವತ್ತು ಮತ್ತು ಹತ್ತು ಶರಗಳಿಂದ ಹೊಡೆದನು.

07164038a ತಸ್ಯ ಸಂದಧತಶ್ಚೇಷೂನ್ಸಂಹಿತೇಷುಂ ಚ ಕಾರ್ಮುಕಂ।
07164038c ಅಚ್ಚಿನತ್ಸಾತ್ಯಕಿಸ್ತೂರ್ಣಂ ಶರೈಶ್ಚೈವಾಭ್ಯವೀವೃಷತ್।।

ಆಗ ಸಾತ್ಯಕಿಯು ತಕ್ಷಣವೇ ದುರ್ಯೋಧನನು ಸಂಧಾನಮಾಡುತ್ತಿದ್ದ ಬಾಣವನ್ನೂ ಆ ಬಾಣದಿಂದ ಕೂಡಿದ್ದ ಧನುಸ್ಸನೂ ಕತ್ತರಿಸಿ ಅವನನ್ನು ಚೆನ್ನಾಗಿ ಗಾಯಗೊಳಿಸಿದನು.

07164039a ಸ ಗಾಢವಿದ್ಧೋ ವ್ಯಥಿತಃ ಪ್ರತ್ಯಪಾಯಾದ್ರಥಾಂತರಂ।
07164039c ದುರ್ಯೋಧನೋ ಮಹಾರಾಜ ದಾಶಾರ್ಹಶರಪೀಡಿತಃ।।

ಮಹಾರಾಜ! ದಾಶಾರ್ಹನ ಶರ ಪೀಡಿತ ದುರ್ಯೋಧನನು ಗಾಡವಾಗಿ ಗಾಯಗೊಂಡು ವ್ಯಥಿತನಾಗಿ ರಥದಲ್ಲಿಯೇ ನುಸುಳಿಕೊಂಡನು.

07164040a ಸಮಾಶ್ವಸ್ಯ ತು ಪುತ್ರಸ್ತೇ ಸಾತ್ಯಕಿಂ ಪುನರಭ್ಯಯಾತ್।
07164040c ವಿಸೃಜನ್ನಿಷುಜಾಲಾನಿ ಯುಯುಧಾನರಥಂ ಪ್ರತಿ।।

ಸ್ವಲ್ಪಹೊತ್ತು ವಿಶ್ರಮಿಸಿ ನಿನ್ನ ಮಗನು ಸಾತ್ಯಕಿಯನ್ನು ಪುನಃ ಆಕ್ರಮಣಿಸಿದನು. ಯುಯುಧಾನನ ರಥದ ಮೇಲೆ ಅವನು ಬಾಣಗಳ ಜಾಲಗಳನ್ನು ಸೃಷ್ಟಿಸಿದನು.

07164041a ತಥೈವ ಸಾತ್ಯಕಿರ್ಬಾಣಾನ್ದುರ್ಯೋಧನರಥಂ ಪ್ರತಿ।
07164041c ಪ್ರತತಂ ವ್ಯಸೃಜದ್ರಾಜಂಸ್ತತ್ಸಂಕುಲಮವರ್ತತ।।

ಹಾಗೆಯೇ ಸಾತ್ಯಕಿಯು ಕೂಡ ದುರ್ಯೋಧನನ ರಥದ ಮೇಲೆ ಸತತವಾಗಿ ಬಾಣಗಳನ್ನು ಸುರಿಸುತ್ತಿದ್ದನು. ಅನಂತರ ಆ ಯುದ್ಧವು ಸಂಕುಲಯುದ್ಧವಾಗಿ ಪರಿಣಮಿಸಿತು.

07164042a ತತ್ರೇಷುಭಿಃ ಕ್ಷಿಪ್ಯಮಾಣೈಃ ಪತದ್ಭಿಶ್ಚ ಸಮಂತತಃ।
07164042c ಅಗ್ನೇರಿವ ಮಹಾಕಕ್ಷೇ ಶಬ್ದಃ ಸಮಭವನ್ಮಹಾನ್।।

ಅವರಿಬ್ಬರ ಬಾಣಗಳು ಹಾರಿ ಎಲ್ಲಕಡೆ ಬೀಳುತ್ತಿರುವಾಗ ಮಹಾಪೊದೆಯಮೇಲೆ ಬೆಂಕಿಯು ಬೀಳುತ್ತಿದ್ದರೆ ಹೇಗೆ ಶಬ್ಧವಾಗುತ್ತದೆಯೋ ಹಾಗೆ ಮಹಾ ಶಬ್ಧವು ಉಂಟಾಯಿತು.

07164043a ತತ್ರಾಭ್ಯಧಿಕಮಾಲಕ್ಷ್ಯ ಮಾಧವಂ ರಥಸತ್ತಮಂ।
07164043c ಕ್ಷಿಪ್ರಮಭ್ಯಪತತ್ಕರ್ಣಃ ಪರೀಪ್ಸಂಸ್ತನಯಂ ತವ।।

ರಥಸತ್ತಮ ಮಾಧವನ ಕೈ ಮೇಲಾಗುತ್ತಿದ್ದುದನ್ನು ನೋಡಿದ ಕರ್ಣನು ನಿನ್ನ ಮಗನನ್ನು ರಕ್ಷಿಸುವ ಸಲುವಾಗಿ ಬೇಗನೇ ಅಲ್ಲಿಗೆ ಧಾವಿಸಿದನು.

07164044a ನ ತು ತಂ ಮರ್ಷಯಾಮಾಸ ಭೀಮಸೇನೋ ಮಹಾಬಲಃ।
07164044c ಅಭ್ಯಯಾತ್ತ್ವರಿತಃ ಕರ್ಣಂ ವಿಸೃಜನ್ಸಾಯಕಾನ್ಬಹೂನ್।।

ಅದನ್ನು ಮಹಾಬಲ ಭೀಮಸೇನನು ಸಹಿಸಿಕೊಳ್ಳಲಿಲ್ಲ. ಅವನು ತ್ವರೆಮಾಡಿ ಅನೇಕ ಸಾಯಕಗಳನ್ನು ಚೆಲ್ಲುತ್ತಾ ಕರ್ಣನನ್ನು ಆಕ್ರಮಣಿಸಿದನು.

07164045a ತಸ್ಯ ಕರ್ಣಃ ಶಿತಾನ್ಬಾಣಾನ್ಪ್ರತಿಹನ್ಯ ಹಸನ್ನಿವ।
07164045c ಧನುಃ ಶರಾಂಶ್ಚ ಚಿಚ್ಚೇದ ಸೂತಂ ಚಾಭ್ಯಹನಚ್ಚರೈಃ।।

ಕರ್ಣನು ನಸುನಗುತ್ತಾ ಅವನನ್ನು ನಿಶಿತ ಬಾಣಗಳಿಂದ ತಿರುಗಿ ಹೊಡೆದನು ಮತ್ತು ಶರಗಳಿಂದ ಅವನ ಧನುಸ್ಸು-ಶರಗಳನ್ನು ತುಂಡರಿಸಿ ಸಾರಥಿಯನ್ನು ಸಂಹರಿಸಿದನು.

07164046a ಭೀಮಸೇನಸ್ತು ಸಂಕ್ರುದ್ಧೋ ಗದಾಮಾದಾಯ ಪಾಂಡವಃ।
07164046c ಧ್ವಜಂ ಧನುಶ್ಚ ಸೂತಂ ಚ ಸಮ್ಮಮರ್ದಾಹವೇ ರಿಪೋಃ।।

ಪಾಂಡವ ಭೀಮಸೇನನಾದರೋ ಸಂಕ್ರುದ್ಧನಾಗಿ ಗದೆಯನ್ನೆತ್ತಿಕೊಂಡು ಯುದ್ಧದಲ್ಲಿ ರಿಪುವಿನ ಧ್ವಜವನ್ನೂ, ಧನುಸ್ಸನ್ನೂ, ಸಾರಥಿಯನ್ನೂ ಧ್ವಂಸಮಾಡಿದನು.

07164047a ಅಮೃಷ್ಯಮಾಣಃ ಕರ್ಣಸ್ತು ಭೀಮಸೇನಮಯುಧ್ಯತ।
07164047c ವಿವಿಧೈರಿಷುಜಾಲೈಶ್ಚ ನಾನಾಶಸ್ತ್ರೈಶ್ಚ ಸಮ್ಯುಗೇ।।

ಅಸಹನಶೀಲ ಕರ್ಣನಾದರೋ ವಿವಿಧ ಶರಜಾಲಗಳಿಂದ ಮತ್ತು ನಾನಾ ಶಸ್ತ್ರಗಳಿಂದ ರಣರಂಗದಲ್ಲಿ ಭೀಮಸೇನನೊಡನೆ ಯುದ್ಧಮಾಡಿದನು.

07164048a ಸಂಕುಲೇ ವರ್ತಮಾನೇ ತು ರಾಜಾ ಧರ್ಮಸುತೋಽಬ್ರವೀತ್।
07164048c ಪಾಂಚಾಲಾನಾಂ ನರವ್ಯಾಘ್ರಾನ್ಮತ್ಸ್ಯಾನಾಂ ಚ ನರರ್ಷಭಾನ್।।

ಈ ರೀತಿ ಸಂಕುಲಯುದ್ಧವು ನಡೆಯುತ್ತಿರಲು ರಾಜಾ ಧರ್ಮಸುತನು ಪಾಂಚಾಲ ನರವ್ಯಾಘ್ರರಿಗೂ ಮತ್ಸ್ಯ ನರರ್ಷಭರಿಗೂ ಹೇಳಿದನು:

07164049a ಯೇ ನಃ ಪ್ರಾಣಾಃ ಶಿರೋ ಯೇ ನೋ ಯೇ ನೋ ಯೋಧಾ ಮಹಾಬಲಾಃ।
07164049c ತ ಏತೇ ಧಾರ್ತರಾಷ್ಟ್ರೇಷು ವಿಷಕ್ತಾಃ ಪುರುಷರ್ಷಭಾಃ।।

“ನಮ್ಮ ಪ್ರಾಣಸಮಾನರೂ ಶಿರಾಸಮಾನರೂ ಆಗಿರುವ ಆ ಮಹಾಬಲ ಯೋಧ ಪುರುಷರ್ಷಭರು ಧಾರ್ತರಾಷ್ಟ್ರರೊಂದಿಗೆ ಯುದ್ಧಮಾಡುತ್ತಿದ್ದಾರೆ.

07164050a ಕಿಂ ತಿಷ್ಠತ ಯಥಾ ಮೂಢಾಃ ಸರ್ವೇ ವಿಗತಚೇತಸಃ।
07164050c ತತ್ರ ಗಚ್ಚತ ಯತ್ರೈತೇ ಯುಧ್ಯಂತೇ ಮಾಮಕಾ ರಥಾಃ।।
07164051a ಕ್ಷತ್ರಧರ್ಮಂ ಪುರಸ್ಕೃತ್ಯ ಸರ್ವ ಏವ ಗತಜ್ವರಾಃ।

ಇಲ್ಲಿ ಏಕೆ ನೀವೆಲ್ಲರೂ ಜ್ಞಾನತಪ್ಪಿದವರಂತೆ ಮತ್ತು ಮೂಢರಂತೆ ನಿಂತಿರುವಿರಿ? ಕ್ಷತ್ರಧರ್ಮವನ್ನು ಮುಂದಿಟ್ಟುಕೊಂಡು ನಿಶ್ಚಿಂತರಾಗಿ ನನ್ನವರಾದ ಮಹಾರಥರು ಎಲ್ಲಿ ಯುದ್ಧಮಾಡುತ್ತಿರುವರೋ ಅಲ್ಲಿಗೆ ಹೋಗಿ!

07164051c ಜಯಂತೋ ವಧ್ಯಮಾನಾ ವಾ ಗತಿಮಿಷ್ಟಾಂ ಗಮಿಷ್ಯಥ।।
07164052a ಜಿತ್ವಾ ಚ ಬಹುಭಿರ್ಯಜ್ಞೈರ್ಯಕ್ಷ್ಯಧ್ವಂ ಭೂರಿದಕ್ಷಿಣೈಃ।
07164052c ಹತಾ ವಾ ದೇವಸಾದ್ಭೂತ್ವಾ ಲೋಕಾನ್ಪ್ರಾಪ್ಸ್ಯಥ ಪುಷ್ಕಲಾನ್।।

ಜಯಗಳಿಸಿಯಾದರೂ ಅಥವಾ ವಧಿಸಲ್ಪಟ್ಟರೂ ನಮಗಿಷ್ಟವಾದ ಗತಿಯನ್ನೇ ಪಡೆಯುತ್ತೇವೆ. ಗೆದ್ದರೆ ಭೂರಿದಕ್ಷಿಣೆಗಳುಳ್ಳ ಅನೇಕ ಯಜ್ಞಗಳನ್ನು ಮಾಡುವಿರಂತೆ. ಅಥವಾ ಮಡಿದರೆ ದೇವರೂಪಿಗಳಾಗಿ ಪುಷ್ಕಲ ಪುಣ್ಯಲೋಕಗಳನ್ನು ಪಡೆಯುವಿರಂತೆ!”

07164053a ತೇ ರಾಜ್ಞಾ ಚೋದಿತಾ ವೀರಾ ಯೋತ್ಸ್ಯಮಾನಾ ಮಹಾರಥಾಃ।
07164053c ಚತುರ್ಧಾ ವಹಿನೀಂ ಕೃತ್ವಾ ತ್ವರಿತಾ ದ್ರೋಣಮಭ್ಯಯುಃ।।

ರಾಜನಿಂದ ಹೀಗೆ ಪ್ರಚೋದಿತರಾದ ಮಹಾರಥರು ಯುದ್ಯೋದೃತರಾಗಿ ಸೇನೆಯನ್ನು ನಾಲ್ಕು ಭಾಗಗಳನ್ನಾಗಿ ಮಾಡಿಕೊಂಡು ತ್ವರೆಮಾಡಿ ದ್ರೋಣನನ್ನು ಆಕ್ರಮಣಿಸಿದರು.

07164054a ಪಾಂಚಾಲಾಸ್ತ್ವೇಕತೋ ದ್ರೋಣಮಭ್ಯಘ್ನನ್ಬಹುಭಿಃ ಶರೈಃ।
07164054c ಭೀಮಸೇನಪುರೋಗಾಶ್ಚ ಏಕತಃ ಪರ್ಯವಾರಯನ್।।

ಪಾಂಚಾಲರ ಒಂದು ತುಂಡು ಅನೇಕ ಶರಗಳಿಂದ ದ್ರೋಣನನ್ನು ಆಕ್ರಮಣಿಸಿತು. ಇನ್ನೊಂದು ಭಾಗವು ಭೀಮಸೇನನನ್ನು ಮುಂದಿಟ್ಟುಕೊಂಡು ದ್ರೋಣನನ್ನು ಆಕ್ರಮಣಿಸಿತು.

07164055a ಆಸಂಸ್ತು ಪಾಂಡುಪುತ್ರಾಣಾಂ ತ್ರಯೋಽಜಿಹ್ಮಾ ಮಹಾರಥಾಃ।
07164055c ಯಮೌ ಚ ಭೀಮಸೇನಶ್ಚ ಪ್ರಾಕ್ರೋಶಂತ ಧನಂಜಯಂ।।

ಪಾಂಡುಪುತ್ರರಲ್ಲಿ ಕುಟಿಲರಾಗಿದ್ದ ಮೂವರು ಮಹಾರಥರು – ನಕುಲ, ಸಹದೇವ ಮತ್ತು ಭೀಮಸೇನರು – ಧನಂಜಯನನ್ನು ಕೂಗಿ ಕರೆದು ಹೇಳಿದರು:

07164056a ಅಭಿದ್ರವಾರ್ಜುನ ಕ್ಷಿಪ್ರಂ ಕುರೂನ್ದ್ರೋಣಾದಪಾನುದ।
07164056c ತತ ಏನಂ ಹನಿಷ್ಯಂತಿ ಪಾಂಚಾಲಾ ಹತರಕ್ಷಿಣಂ।।

“ಅರ್ಜನ! ಬೇಗನೆ ಬಾ! ಕುರುಯೋಧರನ್ನು ದ್ರೋಣನಿಂದ ಬೇರ್ಪಡಿಸು! ಅನಂತರ ರಕ್ಷಣೆಯನ್ನು ಕಳೆದುಕೊಂಡ ದ್ರೋಣನನ್ನು ಪಾಂಚಾಲರು ಸಂಹರಿಸುತ್ತಾರೆ!”

07164057a ಕೌರವೇಯಾಂಸ್ತತಃ ಪಾರ್ಥಃ ಸಹಸಾ ಸಮುಪಾದ್ರವತ್।
07164057c ಪಾಂಚಾಲಾನೇವ ತು ದ್ರೋಣೋ ಧೃಷ್ಟದ್ಯುಮ್ನಪುರೋಗಮಾನ್।।

ಕೂಡಲೇ ಪಾರ್ಥನು ಕೌರವೇಯರನ್ನು ಆಕ್ರಮಣಿಸಿದನು. ದ್ರೋಣನಾದರೋ ಧೃಷ್ಟದ್ಯುಮ್ನನ ನಾಯಕತ್ವದಲ್ಲಿದ್ದ ಪಾಂಚಾಲರೊಡನೆ ಯುದ್ಧವನ್ನು ಮುಂದುವರಿಸಿದನು.

07164058a ಪಾಂಚಾಲಾನಾಂ ತತೋ ದ್ರೋಣೋಽಪ್ಯಕರೋತ್ಕದನಂ ಮಹತ್।
07164058c ಯಥಾ ಕ್ರುದ್ಧೋ ರಣೇ ಶಕ್ರೋ ದಾನವಾನಾಂ ಕ್ಷಯಂ ಪುರಾ।।

ಕ್ರುದ್ಧ ಇಂದ್ರನು ಹಿಂದೆ ರಣದಲ್ಲಿ ದಾನವರನ್ನು ಹೇಗೆ ನಾಶಗೊಳಿಸಿದನೋ ಹಾಗೆ ದ್ರೋಣನು ಪಾಂಚಾಲರೊಡನೆ ಮಹಾ ಕದನವನ್ನೇ ನಡೆಸಿದನು.

07164059a ದ್ರೋಣಾಸ್ತ್ರೇಣ ಮಹಾರಾಜ ವಧ್ಯಮಾನಾಃ ಪರೇ ಯುಧಿ।
07164059c ನಾತ್ರಸಂತ ರಣೇ ದ್ರೋಣಾತ್ಸತ್ತ್ವವಂತೋ ಮಹಾರಥಾಃ।।

ಮಹಾರಾಜ! ದ್ರೋಣನಿಂದ ಯುದ್ಧದಲ್ಲಿ ಸತತವಾಗಿ ವಧಿಸಲ್ಪಡುತ್ತಿದ್ದರೂ ಸತ್ತ್ವವಂತ ಮಹಾರಥ ಪಾಂಚಾಲರು ರಣದಲ್ಲಿ ದ್ರೋಣನಿಗೆ ಭಯಪಡಲಿಲ್ಲ.

07164060a ವಧ್ಯಮಾನಾ ಮಹಾರಾಜ ಪಾಂಚಾಲಾಃ ಸೃಂಜಯಾಸ್ತಥಾ।
07164060c ದ್ರೋಣಮೇವಾಭ್ಯಯುರ್ಯುದ್ಧೇ ಮೋಹಯಂತೋ ಮಹಾರಥಂ।।

ಮಹಾರಾಜ! ವಧಿಸಲ್ಪಡುತ್ತಿದ್ದ ಪಾಂಚಾಲ-ಸೃಂಜಯರು ಮೋಹಗೊಂಡಿರುವರೋ ಎನ್ನುವಂತೆ ಮುನ್ನುಗ್ಗಿ ಮಹಾರಥ ದ್ರೋಣನನ್ನೇ ಆಕ್ರಮಣಿಸಿ ಯುದ್ಧಮಾಡುತ್ತಿದ್ದರು.

07164061a ತೇಷಾಂ ತೂತ್ಸಾದ್ಯಮಾನಾನಾಂ ಪಾಂಚಾಲಾನಾಂ ಸಮಂತತಃ।
07164061c ಅಭವದ್ಭೈರವೋ ನಾದೋ ವಧ್ಯತಾಂ ಶರಶಕ್ತಿಭಿಃ।।

ಬಾಣಗಳಿಂದ ಮುಚ್ಚಲ್ಪಟ್ಟ ಮತ್ತು ಶರಶಕ್ತಿಯಿಂದ ವಧಿಸಲ್ಪಡುತ್ತಿದ್ದ ಪಾಂಚಾಲರ ಭೈರವ ನಾದವು ಎಲ್ಲಕಡೆಗಳಿಂದ ಕೇಳಿಬರುತ್ತಿತ್ತು.

07164062a ವಧ್ಯಮಾನೇಷು ಸಂಗ್ರಾಮೇ ಪಾಂಚಾಲೇಷು ಮಹಾತ್ಮನಾ।
07164062c ಉದೀರ್ಯಮಾಣೇ ದ್ರೋಣಾಸ್ತ್ರೇ ಪಾಂಡವಾನ್ಭಯಮಾವಿಶತ್।।

ಸಂಗ್ರಾಮದಲ್ಲಿ ದ್ರೋಣಾಸ್ತ್ರದಿಂದ ಸೀಳಲ್ಪಟ್ಟು ವಧಿಸಲ್ಪಡುತ್ತಿರುವ ಮಹಾತ್ಮ ಪಾಂಚಾಲರನ್ನು ನೋಡಿ ಪಾಂಡವರಲ್ಲಿ ಭೀತಿಯು ಆವರಿಸಿತು.

07164063a ದೃಷ್ಟ್ವಾಶ್ವನರಸಂಘಾನಾಂ ವಿಪುಲಂ ಚ ಕ್ಷಯಂ ಯುಧಿ।
07164063c ಪಾಂಡವೇಯಾ ಮಹಾರಾಜ ನಾಶಂಸುರ್ವಿಜಯಂ ತದಾ।।

ಮಹಾರಾಜ! ಆಗ ಯುದ್ಧದಲ್ಲಿ ವಿಪುಲವಾಗಿ ನಾಶಗೊಳ್ಳುತ್ತಿರುವ ಅಶ್ವ-ನರ ಸಂಘಗಳನ್ನು ನೋಡಿ ಪಾಂಡವರಿಗೆ ವಿಜಯವು ದೊರಕುತ್ತದೆ ಎನ್ನುವುದರ ಮೇಲೆ ಸಂಶಯವುಂಟಾಯಿತು.

07164064a ಕಚ್ಚಿದ್ದ್ರೋಣೋ ನ ನಃ ಸರ್ವಾನ್ ಕ್ಷಪಯೇತ್ಪರಮಾಸ್ತ್ರವಿತ್।
07164064c ಸಮಿದ್ಧಃ ಶಿಶಿರಾಪಾಯೇ ದಹನ್ಕಕ್ಷಮಿವಾನಲಃ।।

“ಗ್ರೀಷ್ಮ‌ಋತುವಿನಲ್ಲಿ ಪ್ರಜ್ವಲಿಸುವ ಅಗ್ನಿಯು ಒಣ ಪೊದೆಯನ್ನು ಸುಟ್ಟು ಭಸ್ಮಮಾಡುವಂತೆ ಪರಮಾಸ್ತ್ರವಿದುವಾದ ದ್ರೋಣನು ನಮ್ಮೆಲ್ಲರನ್ನೂ ಸಂಹರಿಸಿಬಿಡುವುದಿಲ್ಲವೇ?

07164065a ನ ಚೈನಂ ಸಮ್ಯುಗೇ ಕಶ್ಚಿತ್ಸಮರ್ಥಃ ಪ್ರತಿವೀಕ್ಷಿತುಂ।
07164065c ನ ಚೈನಮರ್ಜುನೋ ಜಾತು ಪ್ರತಿಯುಧ್ಯೇತ ಧರ್ಮವಿತ್।।

ಈ ಯುದ್ಧದಲ್ಲಿ ದ್ರೋಣನನ್ನು ದಿಟ್ಟಸಿ ನೋಡಲು ಸಮರ್ಥರು ಯಾರೂ ಇಲ್ಲ. ಧರ್ಮವಿದು ಅರ್ಜುನನಾದರೋ ದ್ರೋಣನೊಡನೆ ಯುದ್ಧಮಾಡುವವನಲ್ಲ!”

07164066a ತ್ರಸ್ತಾನ್ಕುಂತೀಸುತಾನ್ದೃಷ್ಟ್ವಾ ದ್ರೋಣಸಾಯಕಪೀಡಿತಾನ್।
07164066c ಮತಿಮಾಂ ಶ್ರೇಯಸೇ ಯುಕ್ತಃ ಕೇಶವೋಽರ್ಜುನಮಬ್ರವೀತ್।।

ದ್ರೋಣನ ಸಾಯಕಗಳಿಂದ ಪೀಡಿತರಾಗಿ ಭಯಗೊಂಡಿರುವ ಕುಂತೀಸುತರನ್ನು ನೋಡಿ ಅವರ ಶ್ರೇಯಸ್ಸನ್ನೇ ಮತಿಯಲ್ಲಿಟ್ಟುಕೊಂಡಿದ್ದ ಕೇಶವನು ಅರ್ಜುನನಿಗೆ ಹೇಳಿದನು:

07164067a ನೈಷ ಯುದ್ಧೇನ ಸಂಗ್ರಾಮೇ ಜೇತುಂ ಶಕ್ಯಃ ಕಥಂ ಚನ।
07164067c ಅಪಿ ವೃತ್ರಹಣಾ ಯುದ್ಧೇ ರಥಯೂಥಪಯೂಥಪಃ।।

“ಈ ರಥಯೂಥಪಯೂಥಪನನ್ನು ಸಂಗ್ರಾಮದಲ್ಲಿ ಯುದ್ಧದಿಂದ ಜಯಿಸಲು ವೃತ್ರಹರ ಇಂದ್ರನಿಗೂ ಎಂದೂ ಸಾಧ್ಯವಿಲ್ಲ.

07164068a ಆಸ್ಥೀಯತಾಂ ಜಯೇ ಯೋಗೋ ಧರ್ಮಮುತ್ಸೃಜ್ಯ ಪಾಂಡವ।
07164068c ಯಥಾ ವಃ ಸಮ್ಯುಗೇ ಸರ್ವಾನ್ನ ಹನ್ಯಾದ್ರುಕ್ಮವಾಹನಃ।।

ಪಾಂಡವ! ಧರ್ಮವನ್ನು ಬದಿಗೊತ್ತಿ ನಾವು ಜಯವನ್ನು ಪಡೆಯುವುದರಲ್ಲಿ ನಿರತರಾಗಬೇಕು ಅಥವಾ ರುಕ್ಮವಾಹನ ದ್ರೋಣನು ಸಂಯುಗದಲ್ಲಿ ನಮ್ಮೆಲ್ಲರನ್ನೂ ಸಂಹರಿಸುತ್ತಾನೆ.

07164069a ಅಶ್ವತ್ಥಾಮ್ನಿ ಹತೇ ನೈಷ ಯುಧ್ಯೇದಿತಿ ಮತಿರ್ಮಮ।
07164069c ತಂ ಹತಂ ಸಮ್ಯುಗೇ ಕಶ್ಚಿದಸ್ಮೈ ಶಂಸತು ಮಾನವಃ।।

ಅಶ್ವತ್ಥಾಮನು ಹತನಾದರೆ ಇವನು ಯುದ್ಧಮಾಡುವುದಿಲ್ಲ ಎಂದು ನನ್ನ ಅಭಿಪ್ರಾಯ. ಯುದ್ಧದಲ್ಲಿ ಅವನು ಹತನಾದನೆಂದು ಯಾರಾದರೂ ಮನುಷ್ಯನು ಅವನಿಗೆ ಹೇಳಲಿ!”

07164070a ಏತನ್ನಾರೋಚಯದ್ರಾಜನ್ಕುಂತೀಪುತ್ರೋ ಧನಂಜಯಃ।
07164070c ಅನ್ಯೇ ತ್ವರೋಚಯನ್ಸರ್ವೇ ಕೃಚ್ಚ್ರೇಣ ತು ಯುಧಿಷ್ಠಿರಃ।।

ರಾಜನ್! ಇದು ಕುಂತೀಪುತ್ರ ಧನಂಜಯನಿಗೆ ಸ್ವಲ್ಪವೂ ಹಿಡಿಸಲಿಲ್ಲ. ಆದರೆ ಬೇರೆಯವರೆಲ್ಲರು ಮತ್ತು ಕಷ್ಟದಿಂದ ಯುಧಿಷ್ಠಿರನೂ ಇದಕ್ಕೆ ಸಮ್ಮತಿಯಿತ್ತರು.

07164071a ತತೋ ಭೀಮೋ ಮಹಾಬಾಹುರನೀಕೇ ಸ್ವೇ ಮಹಾಗಜಂ।
07164071c ಜಘಾನ ಗದಯಾ ರಾಜನ್ನಶ್ವತ್ಥಾಮಾನಮಿತ್ಯುತ।।

ರಾಜನ್! ಆಗ ಮಹಾಬಾಹು ಭೀಮನು ತನ್ನದೇ ಸೇನೆಯಲ್ಲಿದ್ದ ಅಶ್ವತ್ಥಾಮ ಎಂದು ಕರೆಯಲ್ಪಡುತ್ತಿದ್ದ ಮಹಾಗಜವನ್ನು ಗದೆಯಿಂದ ಸಂಹರಿಸಿದನು.

07164072a ಭೀಮಸೇನಸ್ತು ಸವ್ರೀಡಮುಪೇತ್ಯ ದ್ರೋಣಮಾಹವೇ।
07164072c ಅಶ್ವತ್ಥಾಮಾ ಹತ ಇತಿ ಶಬ್ದಮುಚ್ಚೈಶ್ಚಕಾರ ಹ।।

ಭೀಮಸೇನನಾದರೋ ಲಜ್ಜಾಯುಕ್ತನಾಗಿಯೇ ಆಹವದಲ್ಲಿ ದ್ರೋಣನ ಸಮೀಪ ಹೋಗಿ ಅಶ್ವತ್ಥಾಮನು ಹತನಾದನೆಂದು ಗಟ್ಟಿಯಾಗಿ ಕೂಗಿದನು.

07164073a ಅಶ್ವತ್ಥಾಮೇತಿ ಹಿ ಗಜಃ ಖ್ಯಾತೋ ನಾಮ್ನಾ ಹತೋಽಭವತ್।
07164073c ಕೃತ್ವಾ ಮನಸಿ ತಂ ಭೀಮೋ ಮಿಥ್ಯಾ ವ್ಯಾಹೃತವಾಂಸ್ತದಾ।।

ಏಕೆಂದರೆ ಅಶ್ವತ್ಥಾಮ ಎಂಬ ಹೆಸರಿನಿಂದ ಖ್ಯಾತ ಆನೆಯೊಂದು ಹತವಾಗಿತ್ತು. ಅದನ್ನೇ ಮನಸ್ಸಿಗೆ ತಂದುಕೊಂಡು ಭೀಮನು ಸುಳ್ಳು ಸುದ್ದಿಯನ್ನು ಪಸರಿಸಿದ್ದನು.

07164074a ಭೀಮಸೇನವಚಃ ಶ್ರುತ್ವಾ ದ್ರೋಣಸ್ತತ್ಪರಮಪ್ರಿಯಂ।
07164074c ಮನಸಾ ಸನ್ನಗಾತ್ರೋಽಭೂದ್ಯಥಾ ಸೈಕತಮಂಭಸಿ।।

ಭೀಮಸೇನನ ಆ ಪರಮ ಅಪ್ರಿಯ ಮಾತನ್ನು ಕೇಳಿ ದ್ರೋಣನ ಶರೀರವು ನೀರಿನಲ್ಲಿ ಮರಳು ಕದಡಿಹೋಗುವಂತೆ ಶಿಥಿಲವಾಗಿ ಹೋಯಿತು.

07164075a ಶಂಕಮಾನಃ ಸ ತನ್ಮಿಥ್ಯಾ ವೀರ್ಯಜ್ಞಃ ಸ್ವಸುತಸ್ಯ ವೈ।
07164075c ಹತಃ ಸ ಇತಿ ಚ ಶ್ರುತ್ವಾ ನೈವ ಧೈರ್ಯಾದಕಂಪತ।।

ಆದರೆ ತನ್ನ ಮಗನ ವೀರ್ಯವನ್ನು ತಿಳಿದಿದ್ದ ಅವನು ಅದೊಂದು ಸುಳ್ಳೆಂದು ಶಂಕಿಸಿದನು. ಅವನು ಹತನಾದನೆಂದು ಕೇಳಿದರೂ ಧೈರ್ಯದಿಂದ ವಿಚಲಿತನಾಗಲಿಲ್ಲ.

07164076a ಸ ಲಬ್ಧ್ವಾ ಚೇತನಾಂ ದ್ರೋಣಃ ಕ್ಷಣೇನೈವ ಸಮಾಶ್ವಸತ್।
07164076c ಅನುಚಿಂತ್ಯಾತ್ಮನಃ ಪುತ್ರಮವಿಷಹ್ಯಮರಾತಿಭಿಃ।।

ತನ್ನ ಮಗನನ್ನು ಯುದ್ಧದಲ್ಲಿ ಅಮರರೂ ಎದುರಿಸಲಾರರು ಎಂದು ಯೋಚಿಸಿ ದ್ರೋಣನು ಕ್ಷಣದಲ್ಲಿಯೇ ಆಶ್ವಾಸನೆಹೊಂದಿ ಚೇತರಿಸಿಕೊಂಡನು.

07164077a ಸ ಪಾರ್ಷತಮಭಿದ್ರುತ್ಯ ಜಿಘಾಂಸುರ್ಮೃತ್ಯುಮಾತ್ಮನಃ।
07164077c ಅವಾಕಿರತ್ಸಹಸ್ರೇಣ ತೀಕ್ಷ್ಣಾನಾಂ ಕಂಕಪತ್ರಿಣಾಂ।।

ತನಗೆ ಮೃತ್ಯುರೂಪನಾಗಿದ್ದ ಪಾರ್ಷತನನ್ನು ಸಂಹರಿಸುವ ಇಚ್ಛೆಯಿಂದ ಸಹಸ್ರಾರು ತೀಕ್ಷ್ಣ ಕಂಕಪತ್ರಿಗಳಿಂದ ಅವನನ್ನು ಮುಚ್ಚಿದನು.

07164078a ತಂ ವೈ ವಿಂಶತಿಸಾಹಸ್ರಾಃ ಪಾಂಚಾಲಾನಾಂ ನರರ್ಷಭಾಃ।
07164078c ತಥಾ ಚರಂತಂ ಸಂಗ್ರಾಮೇ ಸರ್ವತೋ ವ್ಯಕಿರಂ ಶರೈಃ।।

ಹಾಗೆ ಸಂಗ್ರಾಮದಲ್ಲಿ ಸಂಚರಿಸುತ್ತಿದ್ದ ದ್ರೋಣನನ್ನು ಇಪ್ಪತ್ತು ಸಾವಿರ ಪಾಂಚಾಲ ನರರ್ಷಭರು ಶರಗಳಿಂದ ಎಲ್ಲಕಡೆಗಳಿಂದ ಮುಚ್ಚಿದರು.

07164079a ತತಃ ಪ್ರಾದುಷ್ಕರೋದ್ದ್ರೋಣೋ ಬ್ರಾಹ್ಮಮಸ್ತ್ರಂ ಪರಂತಪಃ।
07164079c ವಧಾಯ ತೇಷಾಂ ಶೂರಾಣಾಂ ಪಾಂಚಾಲಾನಾಮಮರ್ಷಿತಃ।।

ಆಗ ಕೋಪಗೊಂಡ ಪರಂತಪ ದ್ರೋಣನು ಆ ಪಾಂಚಾಲಶೂರರ ವಧೆಗೆಂದು ಬ್ರಹ್ಮಾಸ್ತ್ರವನ್ನು ಹೂಡಿದನು.

07164080a ತತೋ ವ್ಯರೋಚತ ದ್ರೋಣೋ ವಿನಿಘ್ನನ್ಸರ್ವಸೋಮಕಾನ್।
07164080c ಶಿರಾಂಸ್ಯಪಾತಯಚ್ಚಾಪಿ ಪಾಂಚಾಲಾನಾಂ ಮಹಾಮೃಧೇ।
07164080e ತಥೈವ ಪರಿಘಾಕಾರಾನ್ಬಾಹೂನ್ಕನಕಭೂಷಣಾನ್।।

ಆಗ ಸರ್ವ ಸೋಮಕರನ್ನು ಸಂಹರಿಸುತ್ತಾ ದ್ರೋಣನು ವಿರಾಜಿಸಿದನು. ಮಹಾರಣದಲ್ಲಿ ಪಾಂಚಾಲರ ಶಿರಗಳು ಮತ್ತು ಹಾಗೆಯೇ ಕನಭೂಷಣಗಳಿಂದ ಅಲಂಕೃತ ಪರಿಘಾಕಾರದ ಅನೇಕ ಬಾಹುಗಳೂ ಉರುಳಿದವು.

07164081a ತೇ ವಧ್ಯಮಾನಾಃ ಸಮರೇ ಭಾರದ್ವಾಜೇನ ಪಾರ್ಥಿವಾಃ।
07164081c ಮೇದಿನ್ಯಾಮನ್ವಕೀರ್ಯಂತ ವಾತನುನ್ನಾ ಇವ ದ್ರುಮಾಃ।।

ಸಮರದಲ್ಲಿ ಭಾರದ್ವಾಜನಿಂದ ವಧಿಸಲ್ಪಟ್ಟ ಪಾರ್ಥಿವರು ಚಂಡಮಾರುತಕ್ಕೆ ಸಿಕ್ಕಿ ಬಿದ್ದ ವೃಕ್ಷಗಳಂತೆ ರಣಭೂಮಿಯಲ್ಲಿ ಹರಡಿ ಬೀಳುತ್ತಿದ್ದರು.

07164082a ಕುಂಜರಾಣಾಂ ಚ ಪತತಾಂ ಹಯೌಘಾನಾಂ ಚ ಭಾರತ।
07164082c ಅಗಮ್ಯರೂಪಾ ಪೃಥಿವೀ ಮಾಂಸಶೋಣಿತಕರ್ದಮಾ।।

ಭಾರತ! ಕೆಳಗೆ ಬೀಳುತ್ತಿದ್ದ ಆನೆಗಳ ಮತ್ತು ಕುದುರೆಗಳ ಗುಂಪುಗಳಿಂದ ರಣಭೂಮಿಯು ಮಾಂಸ-ರಕ್ತ-ಮಜ್ಜೆಗಳಿಂದ ಅಗಮ್ಯರೂಪವಾಗಿ ತೋರಿತು.

07164083a ಹತ್ವಾ ವಿಂಶತಿಸಾಹಸ್ರಾನ್ಪಾಂಚಾಲಾನಾಂ ರಥವ್ರಜಾನ್।
07164083c ಅತಿಷ್ಠದಾಹವೇ ದ್ರೋಣೋ ವಿಧೂಮೋಽಗ್ನಿರಿವ ಜ್ವಲನ್।।

ರಥಾರೂಢರಾಗಿದ್ದ ಇಪ್ಪತ್ತು ಸಾವಿರ ಪಾಂಚಾಲರನ್ನು ಸಂಹರಿಸಿ ದ್ರೋಣನು ಯುದ್ಧಭೂಮಿಯಲ್ಲಿ ಪ್ರಜ್ವಲಿಸುತ್ತಿರುವ ಹೊಗೆಯಿಲ್ಲದ ಅಗ್ನಿಯಂತೆ ಶೋಭಿಸುತ್ತಿದ್ದನು.

07164084a ತಥೈವ ಚ ಪುನಃ ಕ್ರುದ್ಧೋ ಭಾರದ್ವಾಜಃ ಪ್ರತಾಪವಾನ್।
07164084c ವಸುದಾನಸ್ಯ ಭಲ್ಲೇನ ಶಿರಃ ಕಾಯಾದಪಾಹರತ್।।

ಹಾಗೆಯೇ ಕ್ರುದ್ಧ ಪ್ರತಾಪವಾನ್ ಭಾರದ್ವಾಜನು ಪುನಃ ಭಲ್ಲದಿಂದ ವಸುದಾನನ ಶಿರವನ್ನು ಶರೀರದಿಂದ ಅಪಹರಿಸಿದನು.

07164085a ಪುನಃ ಪಂಚಶತಾನ್ಮತ್ಸ್ಯಾನ್ ಷಟ್ಸಹಸ್ರಾಂಶ್ಚ ಸೃಂಜಯಾನ್।
07164085c ಹಸ್ತಿನಾಮಯುತಂ ಹತ್ವಾ ಜಘಾನಾಶ್ವಾಯುತಂ ಪುನಃ।।

ಪುನಃ ಅವನು ಐದುನೂರು ಮತ್ಸ್ಯರನ್ನೂ, ಆರುಸಾವಿರ ಸೃಂಜಯರನ್ನೂ, ಹತ್ತು ಸಾವಿರ ಆನೆಗಳನ್ನೂ, ಹತ್ತು ಸಾವಿರ ಕುದುರೆಗಳನ್ನೂ ಸಂಹರಿಸಿದನು.

07164086a ಕ್ಷತ್ರಿಯಾಣಾಮಭಾವಾಯ ದೃಷ್ಟ್ವಾ ದ್ರೋಣಮವಸ್ಥಿತಂ।
07164086c ಋಷಯೋಽಭ್ಯಾಗಮಂಸ್ತೂರ್ಣಂ ಹವ್ಯವಾಹಪುರೋಗಮಾಃ।।
07164087a ವಿಶ್ವಾಮಿತ್ರೋ ಜಮದಗ್ನಿರ್ಭಾರದ್ವಾಜೋಽಥ ಗೌತಮಃ।
07164087c ವಸಿಷ್ಠಃ ಕಶ್ಯಪೋಽತ್ರಿಶ್ಚ ಬ್ರಹ್ಮಲೋಕಂ ನಿನೀಷವಃ।।
07164088a ಸಿಕತಾಃ ಪೃಶ್ನಯೋ ಗರ್ಗಾ ಬಾಲಖಿಲ್ಯಾ ಮರೀಚಿಪಾಃ।
07164088c ಭೃಗವೋಽಮ್ಗಿರಸಶ್ಚೈವ ಸೂಕ್ಷ್ಮಾಶ್ಚಾನ್ಯೇ ಮಹರ್ಷಯಃ।।

ಕ್ಷತ್ರಿಯರನ್ನು ನಿರ್ಮೂಲನಗೊಳಿಸಲು ವ್ಯವಸ್ಥಿತನಾಗಿದ್ದ ದ್ರೋಣನನ್ನು ನೋಡಿ ತಕ್ಷಣವೇ ಹವ್ಯವಾಹನನ್ನು ಮುಂದಿರಿಸಿಕೊಂಡು ಬ್ರಹ್ಮಲೋಕಕ್ಕೆ ಕರೆದುಕೊಂಡು ಹೋಗಲು ಅವನ ಬಳಿ ವಿಶ್ವಾಮಿತ್ರ, ಜಮದಗ್ನಿ, ಭಾರದ್ವಾಜ, ಗೌತಮ, ವಸಿಷ್ಠ, ಕಶ್ಯಪ, ಅತ್ರಿ, ಸಿಕತರು, ಪೃಶ್ನರು, ಗರ್ಗರು, ವಾಲಖಿಲ್ಯರು, ಮರೀಚಿಪರು, ಭೃಗುವಂಶಜರು, ಅಂಗಿರಸರು, ಮತ್ತು ಅನ್ಯ ಸೂಕ್ಷ್ಮ ಮಹರ್ಷಿಗಳು ರಣರಂಗಕ್ಕೆ ಆಗಮಿಸಿದರು.

07164089a ತ ಏನಮಬ್ರುವನ್ಸರ್ವೇ ದ್ರೋಣಮಾಹವಶೋಭಿನಂ।
07164089c ಅಧರ್ಮತಃ ಕೃತಂ ಯುದ್ಧಂ ಸಮಯೋ ನಿಧನಸ್ಯ ತೇ।।

ಅವರೆಲ್ಲರೂ ರಣಾಂಗಣದಲ್ಲಿ ಶೋಭಾಯಮಾನ ದ್ರೋಣನಿಗೆ ಹೇಳಿದರು: “ನೀನು ಅಧರ್ಮತಃ ಯುದ್ಧಮಾಡುತ್ತಿರುವೆ. ನಿನ್ನ ನಿಧನದ ಕಾಲವು ಬಂದೊದಗಿದೆ.

07164090a ನ್ಯಸ್ಯಾಯುಧಂ ರಣೇ ದ್ರೋಣ ಸಮೇತ್ಯಾಸ್ಮಾನವಸ್ಥಿತಾನ್।
07164090c ನಾತಃ ಕ್ರೂರತರಂ ಕರ್ಮ ಪುನಃ ಕರ್ತುಂ ತ್ವಮರ್ಹಸಿ।।

ದ್ರೋಣ! ಆಯುಧವನ್ನು ಕೆಳಗಿಡು! ಇಲ್ಲಿ ಬಂದು ನಿಂತಿರುವ ನಮ್ಮನ್ನು ಸರಿಯಾಗಿ ನೋಡು! ಈ ಕ್ರೂರತರ ಕರ್ಮವನ್ನು ಮಾಡುವುದು ನಿನಗೆ ಸರಿಯಲ್ಲ!

07164091a ವೇದವೇದಾಂಗವಿದುಷಃ ಸತ್ಯಧರ್ಮಪರಸ್ಯ ಚ।
07164091c ಬ್ರಾಹ್ಮಣಸ್ಯ ವಿಶೇಷೇಣ ತವೈತನ್ನೋಪಪದ್ಯತೇ।।

ವೇದ-ವೇದಾಂಗಪಾರಂಗತನಾಗಿರುವೆ. ಸತ್ಯ-ಧರ್ಮಪರಾಯಣನಾಗಿರುವೆ. ಎಲ್ಲಕ್ಕಿಂತಲೂ ಮಿಗಿಲಾಗಿ ಬ್ರಾಹ್ಮಣನಾಗಿರುವೆ! ನಿನ್ನಂತವನಿಗೆ ಈ ವಿನಾಶಕಾರ್ಯವು ಖಂಡಿತವಾಗಿ ಶೋಭಿಸುವುದಿಲ್ಲ.

07164092a ನ್ಯಸ್ಯಾಯುಧಮಮೋಘೇಷೋ ತಿಷ್ಠ ವರ್ತ್ಮನಿ ಶಾಶ್ವತೇ।
07164092c ಪರಿಪೂರ್ಣಶ್ಚ ಕಾಲಸ್ತೇ ವಸ್ತುಂ ಲೋಕೇಽದ್ಯ ಮಾನುಷೇ।।

ಅಮೋಘ ಬಾಣಗಳನ್ನು ಹೊಂದಿರುವವನೇ! ಆಯುಧವನ್ನು ತೊರೆ! ಶಾಶ್ವತದಲ್ಲಿ ಬುದ್ಧಿಯನ್ನಿರಿಸು. ಮನುಷ್ಯ ಲೋಕದಲ್ಲಿ ನಿನ್ನ ವಾಸದ ಕಾಲವು ಪರಿಪೂರ್ಣವಾಗಿದೆ.”

07164093a ಇತಿ ತೇಷಾಂ ವಚಃ ಶ್ರುತ್ವಾ ಭೀಮಸೇನವಚಶ್ಚ ತತ್।
07164093c ಧೃಷ್ಟದ್ಯುಮ್ನಂ ಚ ಸಂಪ್ರೇಕ್ಷ್ಯ ರಣೇ ಸ ವಿಮನಾಭವತ್।।

ಅವರ ಈ ಮಾತನ್ನೂ ಭೀಮಸೇನನ ಮಾತನ್ನೂ ಕೇಳಿ ಮತ್ತು ಧೃಷ್ಟದ್ಯುಮ್ನನನ್ನೂ ನೋಡಿ ಅವನು ರಣದಿಂದ ವಿಮನಸ್ಕನಾದನು.

07164094a ಸ ದಹ್ಯಮಾನೋ ವ್ಯಥಿತಃ ಕುಂತೀಪುತ್ರಂ ಯುಧಿಷ್ಠಿರಂ।
07164094c ಅಹತಂ ವಾ ಹತಂ ವೇತಿ ಪಪ್ರಚ್ಚ ಸುತಮಾತ್ಮನಃ।।

ವ್ಯಥೆಯಿಂದ ಸುಡುತ್ತಿರುವ ಆ ಸುಮಹಾತ್ಮನು “ಅವನು ಹತನಾದನೇ ಅಥವಾ ಹತನಾಗಲಿಲ್ಲವೇ?” ಎಂದು ಕುಂತೀಪುತ್ರ ಯುಧಿಷ್ಠಿರನನ್ನು ಕೇಳಿದನು.

07164095a ಸ್ಥಿರಾ ಬುದ್ಧಿರ್ಹಿ ದ್ರೋಣಸ್ಯ ನ ಪಾರ್ಥೋ ವಕ್ಷ್ಯತೇಽನೃತಂ।
07164095c ತ್ರಯಾಣಾಮಪಿ ಲೋಕಾನಾಮೈಶ್ವರ್ಯಾರ್ಥೇ ಕಥಂ ಚನ।।

ಏಕೆಂದರೆ ಪಾರ್ಥನು ಮೂರು ಲೋಕಗಳ ಐಶ್ವರ್ಯಕ್ಕಾಗಿಯೇ ಆದರೂ ಅಥವಾ ಬೇರೆ ಯಾವುದೇ ಕಾರಣಕ್ಕಾದರೂ ಸುಳ್ಳುಹೇಳುವುದಿಲ್ಲವೆಂದು ದ್ರೋಣನ ದೃಢ ನಂಬಿಕೆಯಾಗಿತ್ತು.

07164096a ತಸ್ಮಾತ್ತಂ ಪರಿಪಪ್ರಚ್ಚ ನಾನ್ಯಂ ಕಂ ಚಿದ್ವಿಶೇಷತಃ।
07164096c ತಸ್ಮಿಂಸ್ತಸ್ಯ ಹಿ ಸತ್ಯಾಶಾ ಬಾಲ್ಯಾತ್ಪ್ರಭೃತಿ ಪಾಂಡವೇ।।

ಆದುದರಿಂದಲೇ ಅವನು ಸತ್ಯವನ್ನು ತಿಳಿಯಬೇಕಾಗಿ ಬೇರೆ ಯಾರನ್ನೂ ಕೇಳದೇ ಬಾಲ್ಯದಿಂದಲೂ ಸತ್ಯವಾದಿಯಾಗಿದ್ದ ಪಾಂಡವನಲ್ಲಿಯೇ ಕೇಳಿದನು.

07164097a ತತೋ ನಿಷ್ಪಾಂಡವಾಮುರ್ವೀಂ ಕರಿಷ್ಯಂತಂ ಯುಧಾಂ ಪತಿಂ।
07164097c ದ್ರೋಣಂ ಜ್ಞಾತ್ವಾ ಧರ್ಮರಾಜಂ ಗೋವಿಂದೋ ವ್ಯಥಿತೋಽಬ್ರವೀತ್।।

ಆಗ ಸೇನಾಪತಿ ದ್ರೋಣನು ಭೂಮಿಯನ್ನು ನಿಷ್ಪಾಂಡವರನ್ನಾಗಿ ಮಾಡುತ್ತಾನೆಂದು ತಿಳಿದ ಗೋವಿಂದನು ವ್ಯಥಿತನಾಗಿ ಧರ್ಮರಾಜನಿಗೆ ಹೇಳಿದನು:

07164098a ಯದ್ಯರ್ಧದಿವಸಂ ದ್ರೋಣೋ ಯುಧ್ಯತೇ ಮನ್ಯುಮಾಸ್ಥಿತಃ।
07164098c ಸತ್ಯಂ ಬ್ರವೀಮಿ ತೇ ಸೇನಾ ವಿನಾಶಂ ಸಮುಪೈಷ್ಯತಿ।।

“ಒಂದುವೇಳೆ ಇನ್ನೊಂದು ಅರ್ಧದಿವಸ ದ್ರೋಣನು ಕ್ರೋಧಿತನಾಗಿ ಯುದ್ಧಮಾಡಿದರೆ ಅವನು ನಿನ್ನ ಸೇನೆಯನ್ನು ಸಂಪೂರ್ಣವಾಗಿ ನಾಶಗೊಳಿಸುತ್ತಾನೆ. ನಿನಗೆ ನಾನು ಸತ್ಯವನ್ನೇ ಹೇಳುತ್ತಿದ್ದೇನೆ.

07164099a ಸ ಭವಾಂಸ್ತ್ರಾತು ನೋ ದ್ರೋಣಾತ್ಸತ್ಯಾಜ್ಜ್ಯಾಯೋಽನೃತಂ ಭವೇತ್।
07164099c ಅನೃತಂ ಜೀವಿತಸ್ಯಾರ್ಥೇ ವದನ್ನ ಸ್ಪೃಶ್ಯತೇಽನೃತೈಃ।।

ನೀನೀಗ ನಮ್ಮೆಲ್ಲರನ್ನೂ ದ್ರೋಣನಿಂದ ರಕ್ಷಿಸಬೇಕಾಗಿದೆ. ಕೆಲವು ಸಮಯಗಳಲ್ಲಿ ಸತ್ಯವಚನಕ್ಕಿಂತಲೂ ಸುಳ್ಳುಮಾತೇ ಶ್ರೇಷ್ಠವೆನೆಸಿಕೊಳ್ಳುತ್ತದೆ. ಪ್ರಾಣವನ್ನು ಉಳಿಸಿಕೊಳ್ಳುವುದಕ್ಕಾಗಿ ಆಡಿದ ಸುಳ್ಳು ಸುಳ್ಳಾಡಿದವನನ್ನು ಸ್ಪರ್ಷಿಸುವುದಿಲ್ಲ.”

07164100a ತಯೋಃ ಸಂವದತೋರೇವಂ ಭೀಮಸೇನೋಽಬ್ರವೀದಿದಂ।
07164100c ಶ್ರುತ್ವೈವ ತಂ ಮಹಾರಾಜ ವಧೋಪಾಯಂ ಮಹಾತ್ಮನಃ।।

ಅವರಿಬ್ಬರು ಹೀಗೆ ಮಾತನಾಡಿಕೊಳ್ಳುತ್ತಿರುವಾಗ ಭೀಮಸೇನನೂ ಈ ಮಾತನ್ನಾಡಿದನು: “ಮಹಾರಾಜ! ಆ ಮಹಾತ್ಮನ ವಧೋಪಾಯವನ್ನು ನಾನೂ ಕೇಳಿದೆ.

07164101a ಗಾಹಮಾನಸ್ಯ ತೇ ಸೇನಾಂ ಮಾಲವಸ್ಯೇಂದ್ರವರ್ಮಣಃ।
07164101c ಅಶ್ವತ್ಥಾಮೇತಿ ವಿಖ್ಯಾತೋ ಗಜಃ ಶಕ್ರಗಜೋಪಮಃ।।
07164102a ನಿಹತೋ ಯುಧಿ ವಿಕ್ರಮ್ಯ ತತೋಽಹಂ ದ್ರೋಣಮಬ್ರುವಂ।
07164102c ಅಶ್ವತ್ಥಾಮಾ ಹತೋ ಬ್ರಹ್ಮನ್ನಿವರ್ತಸ್ವಾಹವಾದಿತಿ।।

ಆಗ ನಿನ್ನ ಸೇನೆಯ ಮಧ್ಯದಲ್ಲಿ ಸಂಚರಿಸುತ್ತಿದ್ದ, ಇಂದ್ರನ ಐರಾವತಕ್ಕೆ ಸಮನಾದ, ಮಾಲವರಾಜ ಇಂದ್ರವರ್ಮನ ಅಶ್ವತ್ಥಾಮ ಎಂದು ವಿಖ್ಯಾತ ಆನೆಯನ್ನು ನಾನು ಯುದ್ಧದಲ್ಲಿ ವಿಕ್ರಮದಿಂದ ಸಂಹರಿಸಿ, ದ್ರೋಣನಿಗೆ “ಅಶ್ವತ್ಥಾಮನು ಹತನಾಗಿದ್ದಾನೆ. ಬ್ರಹ್ಮನ್! ಯುದ್ಧದಿಂದ ವಿಮುಖನಾಗು!” ಎಂದು ಹೇಳಿದೆ.

07164103a ನೂನಂ ನಾಶ್ರದ್ದಧದ್ವಾಕ್ಯಮೇಷ ಮೇ ಪುರುಷರ್ಷಭಃ।
07164103c ಸ ತ್ವಂ ಗೋವಿಂದವಾಕ್ಯಾನಿ ಮಾನಯಸ್ವ ಜಯೈಷಿಣಃ।।

ಆದರೆ ಆ ಪುರುಷರ್ಷಭನು ನನ್ನ ಮಾತಿನ ಮೇಲೆ ವಿಶ್ವಾಸವನ್ನಿಡಲಿಲ್ಲ. ಆದುದರಿಂದ ಜಯವನ್ನು ಬಯಸುವ ನೀನು ಗೋವಿಂದನ ಮಾತನ್ನು ಒಪ್ಪಿಕೋ!

07164104a ದ್ರೋಣಾಯ ನಿಹತಂ ಶಂಸ ರಾಜಂ ಶಾರದ್ವತೀಸುತಂ।
07164104c ತ್ವಯೋಕ್ತೋ ನೈಷ ಯುಧ್ಯೇತ ಜಾತು ರಾಜನ್ದ್ವಿಜರ್ಷಭಃ।
07164104e ಸತ್ಯವಾನ್ ಹಿ ನೃಲೋಕೇಽಸ್ಮಿನ್ಭವಾನ್ಖ್ಯಾತೋ ಜನಾಧಿಪ।।

ರಾಜನ್! ಶಾರದ್ವತೀ ಸುತನು ಹತನಾದನೆಂದು ದ್ರೋಣನಿಗೆ ಹೇಳು. ರಾಜನ್! ಇದನ್ನು ನೀನು ಹೇಳಿದರೆ ನಂತರ ಆ ದ್ವಿಜರ್ಷಭನು ಖಂಡಿತವಾಗಿ ಯುದ್ಧವನ್ನು ಮಾಡುವುದಿಲ್ಲ. ಏಕೆಂದರೆ, ಜನಾಧಿಪ! ನರಲೋಕದಲ್ಲಿ ನೀನು ಸತ್ಯವಾನನೆಂದು ಖ್ಯಾತನಾಗಿದ್ದೀಯೆ!”

07164105a ತಸ್ಯ ತದ್ವಚನಂ ಶ್ರುತ್ವಾ ಕೃಷ್ಣವಾಕ್ಯಪ್ರಚೋದಿತಃ।
07164105c ಭಾವಿತ್ವಾಚ್ಚ ಮಹಾರಾಜ ವಕ್ತುಂ ಸಮುಪಚಕ್ರಮೇ।।

ಮಹಾರಾಜ! ಅವನ ಆ ಮಾತನ್ನು ಕೇಳಿ ಮತ್ತು ಕೃಷ್ಣನ ಮಾತಿನಿಂದ ಪ್ರಚೋದಿತನಾಗಿ ಅವನು ಅದನ್ನು ಹೇಳಲು ಸಿದ್ಧನಾದನು.

07164106a ತಮತಥ್ಯಭಯೇ ಮಗ್ನೋ ಜಯೇ ಸಕ್ತೋ ಯುಧಿಷ್ಠಿರಃ।
07164106c ಅವ್ಯಕ್ತಮಬ್ರವೀದ್ರಾಜನ್ ಹತಃ ಕುಂಜರ ಇತ್ಯುತ।।

ಅದರಿಂದಾಗುವ ಪರಿಣಾಮದಿಂದ ಭಯಪಟ್ಟಿದ್ದ ಆದರೆ ವಿಜಯದಲ್ಲಿ ಆಸಕ್ತಿಯನ್ನು ಹೊಂದಿದ್ದ ಯುಧಿಷ್ಠಿರನು ಅದನ್ನು ಹೇಳಿ ಅವ್ಯಕ್ತವಾಗಿ “ಹತಃ ಕುಂಜರ” ಎಂದು ಹೇಳಿದನು.

07164107a ತಸ್ಯ ಪೂರ್ವಂ ರಥಃ ಪೃಥ್ವ್ಯಾಶ್ಚತುರಂಗುಲ ಉತ್ತರಃ।
07164107c ಬಭೂವೈವಂ ತು ತೇನೋಕ್ತೇ ತಸ್ಯ ವಾಹಾಸ್ಪೃಶನ್ಮಹೀಂ।।

ಅದರ ಮೊದಲು ಅವನ ರಥವು ಭೂಮಿಯಿಂದ ನಾಲ್ಕು ಅಂಗುಲ ಮೇಲಿದ್ದಿತ್ತು. ಅವನು ಹೀಗೆ ಹೇಳಿದೊಡನೆಯೇ ಅವನ ಕುದುರೆಗಳು ನೆಲವನ್ನು ಮುಟ್ಟಿದವು.

07164108a ಯುಧಿಷ್ಠಿರಾತ್ತು ತದ್ವಾಕ್ಯಂ ಶ್ರುತ್ವಾ ದ್ರೋಣೋ ಮಹಾರಥಃ।
07164108c ಪುತ್ರವ್ಯಸನಸಂತಪ್ತೋ ನಿರಾಶೋ ಜೀವಿತೇಽಭವತ್।।

ಯುಧಿಷ್ಠಿರನ ಆ ಮಾತನ್ನು ಕೇಳಿ ಮಹಾರಥ ದ್ರೋಣನಾದರೋ ಪುತ್ರವ್ಯಸನದಿಂದ ಸಂತಪ್ತನಾಗಿ ಜೀವನದಲ್ಲಿ ನಿರಾಶನಾದನು.

07164109a ಆಗಸ್ಕೃತಮಿವಾತ್ಮಾನಂ ಪಾಂಡವಾನಾಂ ಮಹಾತ್ಮನಾಂ।
07164109c ಋಷಿವಾಕ್ಯಂ ಚ ಮನ್ವಾನಃ ಶ್ರುತ್ವಾ ಚ ನಿಹತಂ ಸುತಂ।।
07164110a ವಿಚೇತಾಃ ಪರಮೋದ್ವಿಗ್ನೋ ಧೃಷ್ಟದ್ಯುಮ್ನಮವೇಕ್ಷ್ಯ ಚ।
07164110c ಯೋದ್ಧುಂ ನಾಶಕ್ನುವದ್ರಾಜನ್ಯಥಾಪೂರ್ವಮರಿಂದಮ।।

ರಾಜನ್! ಮಹಾತ್ಮ ಪಾಂಡವರಿಗೆ ತಾನು ಅಪರಾಧವನ್ನೆಸಗಿದ್ದೇನೆಂಬ ಋಷಿವಾಕ್ಯವನ್ನು ಮನ್ನಿಸಿ, ತನ್ನ ಮಗನು ಹತನಾದನೆನ್ನುವುದನ್ನು ಕೇಳಿ ಅರಿಂದಮ ದ್ರೋಣನು ವಿಚೇತನನಾಗಿ, ಪರಮ ಉದ್ವಿಗ್ನನಾಗಿ, ಧೃಷ್ಟದ್ಯುಮ್ನನನ್ನು ನೋಡದೇ, ಹಿಂದಿನಂತೆ ಯುದ್ಧಮಾಡಲು ಅಶಕ್ಯನಾದನು.

07164111a ತಂ ದೃಷ್ಟ್ವಾ ಪರಮೋದ್ವಿಗ್ನಂ ಶೋಕೋಪಹತಚೇತಸಂ।
07164111c ಪಾಂಚಾಲರಾಜಸ್ಯ ಸುತೋ ಧೃಷ್ಟದ್ಯುಮ್ನಃ ಸಮಾದ್ರವತ್।।

ಅವನು ಪರಮೋದ್ವಿಗ್ನನಾಗಿರುವುದನ್ನು ಮತ್ತು ಶೋಕದಿಂದ ಚೇತನವನ್ನು ಕಳೆದುಕೊಂಡಿರುವುದನ್ನು ನೋಡಿದ ಪಾಂಚಾಲರಾಜನ ಮಗ ಧೃಷ್ಟದ್ಯುಮ್ನನು ಅವನನ್ನು ಆಕ್ರಮಣಿಸಿದನು.

07164112a ಯ ಇಷ್ಟ್ವಾ ಮನುಜೇಂದ್ರೇಣ ದ್ರುಪದೇನ ಮಹಾಮಖೇ।
07164112c ಲಬ್ಧೋ ದ್ರೋಣವಿನಾಶಾಯ ಸಮಿದ್ಧಾದ್ಧವ್ಯವಾಹನಾತ್।।
07164113a ಸ ಧನುರ್ಜೈತ್ರಮಾದಾಯ ಘೋರಂ ಜಲದನಿಸ್ವನಂ।
07164113c ದೃಢಜ್ಯಮಜರಂ ದಿವ್ಯಂ ಶರಾಂಶ್ಚಾಶೀವಿಷೋಪಮಾನ್।।
07164114a ಸಂದಧೇ ಕಾರ್ಮುಕೇ ತಸ್ಮಿಂ ಶರಮಾಶೀವಿಷೋಪಮಂ।
07164114c ದ್ರೋಣಂ ಜಿಘಾಂಸುಃ ಪಾಂಚಾಲ್ಯೋ ಮಹಾಜ್ವಾಲಮಿವಾನಲಂ।।

ಯಾರನ್ನು ಮನುಜೇಂದ್ರ ದ್ರುಪದನು ಮಹಾಯಜ್ಞದಲ್ಲಿ ಸಮಿತ್ತನ್ನು ಹಾಕಿ ಹವ್ಯವಾಹನಿಂದ ದ್ರೋಣನ ವಿನಾಶಕ್ಕಾಗಿ ಪಡೆದಿದ್ದನೋ ಆ ಪಾಂಚಾಲ್ಯನು ಘೋರ ಮೋಡದಂತೆ ಗುಡುಗುತ್ತಿರುವ ಬಿಗಿಯಾದ ಧನುಸ್ಸನ್ನು ಹಿಡಿದು, ಸರ್ಪದ ವಿಷಕ್ಕೆ ಸಮಾನ ದಿವ್ಯ ಅಜರ ದೃಢ ಅಗ್ನಿಯಂತೆ ಜ್ವಾಲೆಗಳನ್ನು ಕಾರುತ್ತಿರುವ ಬಾಣವನ್ನು ಆ ಕಾರ್ಮುಕಕ್ಕೆ ಹೂಡಿ, ದ್ರೋಣನನ್ನು ಸಂಹರಿಸಲು ಬಯಸಿದನು.

07164115a ತಸ್ಯ ರೂಪಂ ಶರಸ್ಯಾಸೀದ್ಧನುರ್ಜ್ಯಾಮಂಡಲಾಂತರೇ।
07164115c ದ್ಯೋತತೋ ಭಾಸ್ಕರಸ್ಯೇವ ಘನಾಂತೇ ಪರಿವೇಶಿನಃ।।

ಮಂಡಲಾಕಾರದ ಶಿಂಜಿನಿಯ ಮಧ್ಯದಲ್ಲಿದ್ದ ಆ ಶರದ ರೂಪವು ಛಳಿಗಾಲದ ಅಂತ್ಯದಲ್ಲಿ ಭಾಸ್ಕರನಂತೆ ಪ್ರಕಾಶಿಸುತ್ತಿತ್ತು.

07164116a ಪಾರ್ಷತೇನ ಪರಾಮೃಷ್ಟಂ ಜ್ವಲಂತಮಿವ ತದ್ಧನುಃ।
07164116c ಅಂತಕಾಲಮಿವ ಪ್ರಾಪ್ತಂ ಮೇನಿರೇ ವೀಕ್ಷ್ಯ ಸೈನಿಕಾಃ।।

ಪಾರ್ಷತನಿಂದ ಎಳೆಯಲ್ಪಟ್ಟ ಪ್ರಜ್ವಲಿಸುತ್ತಿರುವ ಆ ಧನುಸ್ಸನ್ನು ನೋಡಿ ಸೈನಿಕರು ಅಂತಕಾಲವು ಬಂದೊದಗಿತು ಎಂದು ಅಂದುಕೊಂಡರು.

07164117a ತಮಿಷುಂ ಸಂಹಿತಂ ತೇನ ಭಾರದ್ವಾಜಃ ಪ್ರತಾಪವಾನ್।
07164117c ದೃಷ್ಟ್ವಾಮನ್ಯತ ದೇಹಸ್ಯ ಕಾಲಪರ್ಯಾಯಮಾಗತಂ।।

ಆ ಬಾಣವನ್ನು ಹೂಡಿದುದನ್ನು ನೋಡಿ ಪ್ರತಾಪವಾನ್ ಭಾರದ್ವಾಜನು ತನ್ನ ದೇಹದ ಕಾಲಾವಧಿಯು ಮುಗಿಯುತ್ತ ಬಂದಿತೆಂದು ಅಂದುಕೊಂಡನು.

07164118a ತತಃ ಸ ಯತ್ನಮಾತಿಷ್ಠದಾಚಾರ್ಯಸ್ತಸ್ಯ ವಾರಣೇ।
07164118c ನ ಚಾಸ್ಯಾಸ್ತ್ರಾಣಿ ರಾಜೇಂದ್ರ ಪ್ರಾದುರಾಸನ್ಮಹಾತ್ಮನಃ।।

ಆಗ ಅವನನ್ನು ತಡೆಯಲು ಆಚಾರ್ಯನು ಅತ್ಯಂತ ಪ್ರಯತ್ನಿಸಿದನು. ಆದರೆ ರಾಜೇಂದ್ರ! ಆ ಮಹಾತ್ಮನಿಗೆ ಯಾವ ಅಸ್ತ್ರಗಳೂ ನೆನಪಿಗೆ ಬರಲಿಲ್ಲ.

07164119a ತಸ್ಯ ತ್ವಹಾನಿ ಚತ್ವಾರಿ ಕ್ಷಪಾ ಚೈಕಾಸ್ಯತೋ ಗತಾ।
07164119c ತಸ್ಯ ಚಾಹ್ನಸ್ತ್ರಿಭಾಗೇನ ಕ್ಷಯಂ ಜಗ್ಮುಃ ಪತತ್ರಿಣಃ।।

ದ್ರೋಣನು ನಾಲ್ಕು ದಿನಗಳು ಮತ್ತು ಒಂದು ರಾತ್ರಿ ಒಂದೇಸಮನೆ ಬಾಣಗಳನ್ನು ಬಿಡುತ್ತಿದ್ದನು. ರಾತ್ರಿಯ ಮೂರು ಭಾಗಗಳು ಮುಗಿದುಹೋದುದರಿಂದ ಅವನ ಬಾಣಗಳೂ ಮುಗಿದುಹೋಗಿದ್ದವು.

07164120a ಸ ಶರಕ್ಷಯಮಾಸಾದ್ಯ ಪುತ್ರಶೋಕೇನ ಚಾರ್ದಿತಃ।
07164120c ವಿವಿಧಾನಾಂ ಚ ದಿವ್ಯಾನಾಮಸ್ತ್ರಾಣಾಮಪ್ರಸನ್ನತಾಂ।।

ಅವನ ಬಾಣಗಳು ಮುಗಿದುಹೋಗಿರಲು, ಪುತ್ರಶೋಕದಿಂದ ಪೀಡಿತನಾಗಿರಲು, ವಿವಿಧ ದಿವ್ಯಾಸ್ತ್ರಗಳೂ ಅವನಿಗೆ ಆ ಸಮಯದಲ್ಲಿ ಗೋಚರಿಸುತ್ತಿರಲಿಲ್ಲ.

07164121a ಉತ್ಸ್ರಷ್ಟುಕಾಮಃ ಶಸ್ತ್ರಾಣಿ ವಿಪ್ರವಾಕ್ಯಾಭಿಚೋದಿತಃ।
07164121c ತೇಜಸಾ ಪ್ರೇರ್ಯಮಾಣಶ್ಚ ಯುಯುಧೇ ಸೋಽತಿಮಾನುಷಂ।।

ಋಷಿಗಳ ಮಾತಿನಿಂದಲೂ ಪ್ರಭಾವಿತನಾಗಿ ಅವನು ಶಸ್ತ್ರಗಳನ್ನು ತ್ಯಜಿಸಲು ಬಯಸಿ ತೇಜಸ್ಸಿನಿಂದ ತುಂಬಿದ್ದರೂ ಅತಿಮಾನುಷ ಯುದ್ಧವನ್ನು ಮಾಡಲಾರದಂತಾದನು.

07164122a ಅಥಾನ್ಯತ್ಸ ಸಮಾದಾಯ ದಿವ್ಯಮಾಂಗಿರಸಂ ಧನುಃ।
07164122c ಶರಾಂಶ್ಚ ಬ್ರಹ್ಮದಂಡಾಭಾನ್ಧೃಷ್ಟದ್ಯುಮ್ನಮಯೋಧಯತ್।।

ಹಾಗಿದ್ದರೂ ಅವನು ಅನ್ಯ ದಿವ್ಯ ಆಂಗಿರಸ ಧನುಸ್ಸನ್ನು ಮತ್ತು ಬ್ರಹ್ಮದಂಡದಂತೆ ಹೊಳೆಯುತ್ತಿದ್ದ ಶರಗಳನ್ನು ತೆಗೆದುಕೊಂಡು ಧೃಷ್ಟದ್ಯುಮ್ನನನೊಡನೆ ಯುದ್ಧಮಾಡಿದನು.

07164123a ತತಸ್ತಂ ಶರವರ್ಷೇಣ ಮಹತಾ ಸಮವಾಕಿರತ್।
07164123c ವ್ಯಶಾತಯಚ್ಚ ಸಂಕ್ರುದ್ಧೋ ಧೃಷ್ಟದ್ಯುಮ್ನಮಮರ್ಷಣಃ।।

ಆಗ ಪರಮಕ್ರುದ್ಧನಾದ ಆ ಅಮರ್ಷಣನು ಧೃಷ್ಟದ್ಯುಮ್ನನನ್ನು ಮಹಾ ಶರವರ್ಷದಿಂದ ಮುಚ್ಚಿ ಗಾಯಗೊಳಿಸಿದನು.

07164124a ತಂ ಶರಂ ಶತಧಾ ಚಾಸ್ಯ ದ್ರೋಣಶ್ಚಿಚ್ಚೇದ ಸಾಯಕೈಃ।
07164124c ಧ್ವಜಂ ಧನುಶ್ಚ ನಿಶಿತೈಃ ಸಾರಥಿಂ ಚಾಪ್ಯಪಾತಯತ್।।

ದ್ರೋಣನು ಅವನ ಶರವನ್ನು ಸಾಯಕಗಳಿಂದ ನೂರು ಭಾಗಗಳಲ್ಲಿ ತುಂಡರಿಸಿ ನಿಶಿತ ಬಾಣಗಳಿಂದ ಅವನ ಧ್ವಜವನ್ನು, ಧನುಸ್ಸನ್ನೂ, ಸಾರಥಿಯನ್ನೂ ಕೆಳಗುರುಳಿಸಿದನು.

07164125a ಧೃಷ್ಟದ್ಯುಮ್ನಃ ಪ್ರಹಸ್ಯಾನ್ಯತ್ಪುನರಾದಾಯ ಕಾರ್ಮುಕಂ।
07164125c ಶಿತೇನ ಚೈನಂ ಬಾಣೇನ ಪ್ರತ್ಯವಿಧ್ಯತ್ಸ್ತನಾಂತರೇ।।

ಆಗ ಧೃಷ್ಟದ್ಯುಮ್ನನು ಜೋರಾಗಿ ನಗುತ್ತಾ ಪುನಃ ಇನ್ನೊಂದು ಕಾರ್ಮುಕವನ್ನು ಕೈಗೆತ್ತಿಕೊಂಡು ನಿಶಿತ ಬಾಣದಿಂದ ಅವನ ಎದೆಗೆ ಹೊಡೆದನು.

07164126a ಸೋಽತಿವಿದ್ಧೋ ಮಹೇಷ್ವಾಸಃ ಸಂಭ್ರಾಂತ ಇವ ಸಮ್ಯುಗೇ।
07164126c ಭಲ್ಲೇನ ಶಿತಧಾರೇಣ ಚಿಚ್ಚೇದಾಸ್ಯ ಮಹದ್ಧನುಃ।।

ಅದರಿಂದ ಅತಿಯಾಗಿ ಗಾಯಗೊಂಡರೂ ಮಹೇಷ್ವಾಸ ದ್ರೋಣನು ಗಾಬರಿಗೊಳ್ಳದೇ ಸಂಯುಗದಲ್ಲಿ ಹರಿತ ಭಲ್ಲದಿಂದ ಧೃಷ್ಟದ್ಯುಮ್ನನ ಮಹಾಧನುಸ್ಸನ್ನು ತುಂಡರಿಸಿದನು.

07164127a ಯಚ್ಚಾಸ್ಯ ಬಾಣಂ ವಿಕೃತಂ ಧನೂಂಷಿ ಚ ವಿಶಾಂ ಪತೇ।
07164127c ಸರ್ವಂ ಸಂಚಿದ್ಯ ದುರ್ಧರ್ಷೋ ಗದಾಂ ಖಡ್ಗಮಥಾಪಿ ಚ।।

ವಿಶಾಂಪತೇ! ದುರ್ಧರ್ಷ ದ್ರೋಣನು ಅವನ ಗದೆ ಮತ್ತು ಖಡ್ಗಗಳನ್ನು ಬಿಟ್ಟು ಬೇರೆ ಎಲ್ಲ ಬಾಣಗಳನ್ನೂ ಧನುಸ್ಸುಗಳನ್ನೂ ಕತ್ತರಿಸಿದನು.

07164128a ಧೃಷ್ಟದ್ಯುಮ್ನಂ ತತೋಽವಿಧ್ಯನ್ನವಭಿರ್ನಿಶಿತೈಃ ಶರೈಃ।
07164128c ಜೀವಿತಾಂತಕರೈಃ ಕ್ರುದ್ಧಃ ಕ್ರುದ್ಧರೂಪಂ ಪರಂತಪಃ।।

ಆಗ ಕ್ರುದ್ಧ ಪರಂತಪನು ಕ್ರುದ್ಧರೂಪ ಧೃಷ್ಟದ್ಯುಮ್ನನ ಜೀವವನ್ನು ಅಂತ್ಯಗೊಳಿಸಲು ಅವನನ್ನು ಒಂಭತ್ತು ನಿಶಿತ ಶರಗಳಿಂದ ಹೊಡೆದನು.

07164129a ಧೃಷ್ಟದ್ಯುಮ್ನರಥಸ್ಯಾಶ್ವಾನ್ಸ್ವರಥಾಶ್ವೈರ್ಮಹಾರಥಃ।
07164129c ಅಮಿಶ್ರಯದಮೇಯಾತ್ಮಾ ಬ್ರಾಹ್ಮಮಸ್ತ್ರಮುದೀರಯನ್।।

ಆಗ ಮಹಾರಥ ಅಮೇಯಾತ್ಮ ಧೃಷ್ಟದ್ಯುಮ್ನನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸುತ್ತಾ ತನ್ನ ರಥ-ಕುದುರೆಗಳನ್ನು ದ್ರೋಣನ ರಥ-ಕುದುರೆಗಳೊಡನೆ ತಾಗಿಸಿ ಬೆರೆಸಿದನು.

07164130a ತೇ ಮಿಶ್ರಾ ಬಹ್ವಶೋಭಂತ ಜವನಾ ವಾತರಂಹಸಃ।
07164130c ಪಾರಾವತಸವರ್ಣಾಶ್ಚ ಶೋಣಾಶ್ಚ ಭರತರ್ಷಭ।।

ಭರತರ್ಷಭ! ವಾಯುವೇಗವುಳ್ಳ ಕಪೋತಬಣ್ಣದ ಅವನ ಕುದುರೆಗಳು ಕೆಂಪುಬಣ್ಣದ ದ್ರೋಣನ ಕುದುರೆಗಳೊಡನೆ ಬೆರೆದು ಬಹಳವಾಗಿ ಶೋಭಿಸಿದವು.

07164131a ಯಥಾ ಸವಿದ್ಯುತೋ ಮೇಘಾ ನದಂತೋ ಜಲದಾಗಮೇ।
07164131c ತಥಾ ರೇಜುರ್ಮಹಾರಾಜ ಮಿಶ್ರಿತಾ ರಣಮೂರ್ಧನಿ।।

ಮಹಾರಾಜ! ಮಳೆಗಾಲದ ಪ್ರಾರಂಭದಲ್ಲಿ ಹೇಗೆ ಮಿಂಚಿನೊಡನೆ ಮೋಡಗಳು ಗುಡುಗುತ್ತವೆಯೋ ಹಾಗೆ ಆ ಕುದುರೆಗಳು ರಣರಂಗದಲ್ಲಿ ರಾಜಿಸಿದವು.

07164132a ಈಷಾಬಂಧಂ ಚಕ್ರಬಂಧಂ ರಥಬಂಧಂ ತಥೈವ ಚ।
07164132c ಪ್ರಣಾಶಯದಮೇಯಾತ್ಮಾ ಧೃಷ್ಟದ್ಯುಮ್ನಸ್ಯ ಸ ದ್ವಿಜಃ।।

ದ್ವಿಜ ಅಮೇಯಾತ್ಮ ದ್ರೋಣನು ಧೃಷ್ಟದ್ಯುಮ್ನನ ಈಷಾಬಂಧವನ್ನೂ, ಚಕ್ರಬಂಧವನ್ನೂ ಮತ್ತು ರಥಬಂಧವನ್ನೂ ಧ್ವಂಸಮಾಡಿದನು.

07164133a ಸ ಚಿನ್ನಧನ್ವಾ ವಿರಥೋ ಹತಾಶ್ವೋ ಹತಸಾರಥಿಃ।
07164133c ಉತ್ತಮಾಮಾಪದಂ ಪ್ರಾಪ್ಯ ಗದಾಂ ವೀರಃ ಪರಾಮೃಶತ್।।

ಧನುಸ್ಸು ತುಂಡಾಗಲು, ಅಶ್ವ-ಸಾರಥಿಗಳನ್ನು ಕಳೆದುಕೊಂಡು ವಿರಥನಾದ ವೀರ ಧೃಷ್ಟದ್ಯುಮ್ನನು ಪರಮ ಕಂಟಕಕ್ಕೆ ಸಿಲುಕಿ, ಉತ್ತಮ ಗದೆಯನ್ನು ತೆಗೆದುಕೊಂಡನು.

07164134a ತಾಮಸ್ಯ ವಿಶಿಖೈಸ್ತೀಕ್ಷ್ಣೈಃ ಕ್ಷಿಪ್ಯಮಾಣಾಂ ಮಹಾರಥಃ।
07164134c ನಿಜಘಾನ ಶರೈರ್ದ್ರೋಣಃ ಕ್ರುದ್ಧಃ ಸತ್ಯಪರಾಕ್ರಮಃ।।

ಅದನ್ನೂ ಕೂಡ ಕ್ರುದ್ಧ ಮಹಾರಥ ಸತ್ಯಪರಾಕ್ರಮ ದ್ರೋಣನು ತ್ವರೆಮಾಡಿ ತೀಕ್ಷ್ಣ ವಿಶಿಖ ಬಾಣಗಳಿಂದ ನಾಶಗೊಳಿಸಿದನು.

07164135a ತಾಂ ದೃಷ್ಟ್ವಾ ತು ನರವ್ಯಾಘ್ರೋ ದ್ರೋಣೇನ ನಿಹತಾಂ ಶರೈಃ।
07164135c ವಿಮಲಂ ಖಡ್ಗಮಾದತ್ತ ಶತಚಂದ್ರಂ ಚ ಭಾನುಮತ್।।

ಗದೆಯು ದ್ರೋಣನ ಶರಗಳಿಂದ ನಾಶವಾದುದನ್ನು ನೋಡಿ ಆ ನರವ್ಯಾಘ್ರನು ಹೊಳೆಯುವ ಖಡ್ಗವನ್ನೂ ಕಾಂತಿಯುಕ್ತ ಗುರಾಣಿಯನ್ನೂ ಕೈಗೆತ್ತಿಕೊಂಡನು.

07164136a ಅಸಂಶಯಂ ತಥಾಭೂತೇ ಪಾಂಚಾಲ್ಯಃ ಸಾಧ್ವಮನ್ಯತ।
07164136c ವಧಮಾಚಾರ್ಯಮುಖ್ಯಸ್ಯ ಪ್ರಾಪ್ತಕಾಲಂ ಮಹಾತ್ಮನಃ।।

ಆಗ ಪಾಂಚಾಲ್ಯನು ಮಹಾತ್ಮ ಆಚಾರ್ಯಮುಖ್ಯನ ವಧೆಯ ಕಾಲವು ಪ್ರಾಪ್ತವಾಗಿದೆ ಎಂದು ನಿಃಸಂಶಯವಾಗಿ ಭಾವಿಸಿದನು.

07164137a ತತಃ ಸ್ವರಥನೀಡಸ್ಥಃ ಸ್ವರಥಸ್ಯ ರಥೇಷಯಾ।
07164137c ಅಗಚ್ಚದಸಿಮುದ್ಯಮ್ಯ ಶತಚಂದ್ರಂ ಚ ಭಾನುಮತ್।।

ಆಗ ತನ್ನ ರಥದ ಈಷಾದಂಡದ ಮೂಲಕವಾಗಿ ತನ್ನ ರಥದ ನೀಡದಲ್ಲಿ ಕುಳಿತಿದ್ದ ದ್ರೋಣನನ್ನು ಹೊಳೆಯುತ್ತಿದ್ದ ಖಡ್ಗ ಮತ್ತು ಗುರಾಣಿಗಳೊಂದಿಗೆ ಆಕ್ರಮಣಿಸತೊಡಗಿದನು.

07164138a ಚಿಕೀರ್ಷುರ್ದುಷ್ಕರಂ ಕರ್ಮ ಧೃಷ್ಟದ್ಯುಮ್ನೋ ಮಹಾರಥಃ।
07164138c ಇಯೇಷ ವಕ್ಷೋ ಭೇತ್ತುಂ ಚ ಭಾರದ್ವಾಜಸ್ಯ ಸಮ್ಯುಗೇ।।

ಮಹಾರಥ ಧೃಷ್ಟದ್ಯುಮ್ನನು ಯುದ್ಧದಲ್ಲಿ ಭಾರದ್ವಾಜನ ಎದೆಯನ್ನು ಸೀಳುವಂತಹ ದುಷ್ಕರ ಕಾರ್ಯವನ್ನು ಮಾಡಲು ಬಯಸಿದನು.

07164139a ಸೋಽತಿಷ್ಠದ್ಯುಗಮಧ್ಯೇ ವೈ ಯುಗಸಮ್ನಹನೇಷು ಚ।
07164139c ಶೋಣಾನಾಂ ಜಘನಾರ್ಧೇಷು ತತ್ಸೈನ್ಯಾಃ ಸಮಪೂಜಯನ್।।

ಆಗ ಧೃಷ್ಟದ್ಯುಮ್ನನು ಒಮ್ಮೆ ನೊಗದ ಮಧ್ಯಭಾಗದಲ್ಲಿ ಕಾಲಿಡುತ್ತಾ,, ಇನ್ನೊಮ್ಮೆ ನೊಗದ ಬಂಧನಸ್ಥಾನದಲ್ಲಿಯೂ, ಪುನಃ ದ್ರೋಣನ ಕುದುರೆಗಳ ಹಿಂಭಾಗದಲ್ಲಿಯೂ ನಿಂತುಕೊಳ್ಳುತ್ತಿದ್ದನು. ಅದನ್ನು ನೋಡಿ ಸೇನೆಗಳು ಅವನನ್ನು ಪ್ರಶಂಸಿಸಿದವು.

07164140a ತಿಷ್ಠತೋ ಯುಗಪಾಲೀಷು ಶೋಣಾನಪ್ಯಧಿತಿಷ್ಠತಃ।
07164140c ನಾಪಶ್ಯದಂತರಂ ದ್ರೋಣಸ್ತದದ್ಭುತಮಿವಾಭವತ್।।

ನೊಗದ ಮೇಲಿದ್ದಾನೋ ಕುದುರೆಗಳ ಹಿಂದಿದ್ದಾನೋ ಎಂದು ದ್ರೋಣನಿಗೂ ತೋರದಂತಾಯಿತು. ಅದೊಂದು ಅದ್ಭುತವೇ ನಡೆಯಿತು.

07164141a ಕ್ಷಿಪ್ರಂ ಶ್ಯೇನಸ್ಯ ಚರತೋ ಯಥೈವಾಮಿಷಗೃದ್ಧಿನಃ।
07164141c ತದ್ವದಾಸೀದಭೀಸಾರೋ ದ್ರೋಣಂ ಪ್ರಾರ್ಥಯತೋ ರಣೇ।।

ಮಾಂಸದ ತುಂಡಿಗಾಗಿ ಗಿಡಗವು ಹೇಗೆ ಶೀಘ್ರಾತಿಶೀಘ್ರವಾಗಿ ಹಾರಾಡುತ್ತದೆಯೋ ಹಾಗೆ ದ್ರೋಣನನ್ನು ಬಯಸುತ್ತಿದ್ದ ಅವನು ರಣದಲ್ಲಿ ವೇಗದಿಂದ ಹಾರಾಡುತ್ತಿದ್ದನು.

07164142a ತಸ್ಯಾಶ್ವಾನ್ರಥಶಕ್ತ್ಯಾಸೌ ತದಾ ಕ್ರುದ್ಧಃ ಪರಾಕ್ರಮೀ।
07164142c ಸರ್ವಾನೇಕೈಕಶೋ ದ್ರೋಣಃ ಕಪೋತಾಭಾನಜೀಘನತ್।।

ಆಗ ಕ್ರುದ್ಧನಾಗಿ ಪರಾಕ್ರಮೀ ದ್ರೋಣನು ರಥಶಕ್ತಿಯಿಂದ ತನ್ನ ಕುದುರೆಗಳನ್ನು ಗಾಯಗೊಳಿಸದೇ ಎಚ್ಚರಿಕೆಯಿಂದ ಧೃಷ್ಟದ್ಯುಮ್ನನ ಕಪೋತವರ್ಣದ ಕುದುರೆಗಳನ್ನು ಸಂಹರಿಸಿದನು.

07164143a ತೇ ಹತಾ ನ್ಯಪತನ್ಭೂಮೌ ಧೃಷ್ಟದ್ಯುಮ್ನಸ್ಯ ವಾಜಿನಃ।
07164143c ಶೋಣಾಶ್ಚ ಪರ್ಯಮುಚ್ಯಂತ ರಥಬಂಧಾದ್ವಿಶಾಂ ಪತೇ।।

ವಿಶಾಂಪತೇ! ಅವನಿಂದ ಹತವಾಗಿ ಧೃಷ್ಟದ್ಯುಮ್ನನ ಕುದುರೆಗಳು ಭೂಮಿಗುರುಳಿದವು. ದ್ರೋಣನ ಕೆಂಪು ಕುದುರೆಗಳೂ ರಥಬಂಧನದಿಂದ ಕಳಚಿಕೊಂಡವು.

07164144a ತಾನ್ ಹಯಾನ್ನಿಹತಾನ್ದೃಷ್ಟ್ವಾ ದ್ವಿಜಾಗ್ರ್ಯೇಣ ಸ ಪಾರ್ಷತಃ।
07164144c ನಾಮೃಷ್ಯತ ಯುಧಾಂ ಶ್ರೇಷ್ಠೋ ಯಾಜ್ಞಸೇನಿರ್ಮಹಾರಥಃ।।

ತನ್ನ ಕುದುರೆಗಳು ದ್ವಿಜಾಗ್ರನಿಂದ ಹಾಗೆ ಹತವಾದುದನ್ನು ನೋಡಿ ಪಾರ್ಷತ ಯೋಧರಲ್ಲಿ ಶ್ರೇಷ್ಠ ಮಹಾರಥ ಯಾಜ್ಞಸೇನಿಯು ಸಹಿಸಿಕೊಳ್ಳಲಿಲ್ಲ.

07164145a ವಿರಥಃ ಸ ಗೃಹೀತ್ವಾ ತು ಖಡ್ಗಂ ಖಡ್ಗಭೃತಾಂ ವರಃ।
07164145c ದ್ರೋಣಮಭ್ಯಪತದ್ರಾಜನ್ವೈನತೇಯ ಇವೋರಗಂ।।

ರಾಜನ್! ವಿರಥನಾಗಿ ಆ ಖಡ್ಗಧಾರಿಗಳಲ್ಲಿ ಶ್ರೇಷ್ಠ ಧೃಷ್ಟದ್ಯುಮ್ನನು ಸರ್ಪವನ್ನು ವೈನತೇಯ ಗರುಡನು ಹೇಗೋ ಹಾಗೆ ದ್ರೋಣನನ್ನು ಆಕ್ರಮಣಿಸಿದನು.

07164146a ತಸ್ಯ ರೂಪಂ ಬಭೌ ರಾಜನ್ಭಾರದ್ವಾಜಂ ಜಿಘಾಂಸತಃ।
07164146c ಯಥಾ ರೂಪಂ ಪರಂ ವಿಷ್ಣೋರ್ಹಿರಣ್ಯಕಶಿಪೋರ್ವಧೇ।।

ರಾಜನ್! ಭಾರದ್ವಾಜನನ್ನು ಸಂಹರಿಸಲು ಹೊರಟ ಅವನ ರೂಪವು ಹಿರಣ್ಯಕಶಿಪುವಿನ ವಧೆಯಲ್ಲಿ ವಿಷ್ಣುವಿನ ಪರಮ ರೂಪವು ಹೇಗಿತ್ತೋ ಹಾಗೆ ಕಾಣುತ್ತಿತ್ತು.

07164147a ಸೋಽಚರದ್ವಿವಿಧಾನ್ಮಾರ್ಗಾನ್ಪ್ರಕಾರಾನೇಕವಿಂಶತಿಂ।
07164147c ಭ್ರಾಂತಮುದ್ಭ್ರಾಂತಮಾವಿದ್ಧಮಾಪ್ಲುತಂ ಪ್ರಸೃತಂ ಸೃತಂ।।
07164148a ಪರಿವೃತ್ತಂ ನಿವೃತ್ತಂ ಚ ಖಡ್ಗಂ ಚರ್ಮ ಚ ಧಾರಯನ್।
07164148c ಸಂಪಾತಂ ಸಮುದೀರ್ಣಂ ಚ ದರ್ಶಯಾಮಾಸ ಪಾರ್ಷತಃ।।

ಆಗ ಪಾರ್ಷತನು ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಾ ಇಪ್ಪತ್ತು ಪ್ರಕಾರದ ಖಡ್ಗಪ್ರಹಾರಗಳನ್ನು ಪ್ರದರ್ಶಿಸಿದನು: ಭ್ರಾಂತ, ಉಧ್ಭ್ರಾಂತ, ಆವಿದ್ಧ, ಆಪ್ಲುತ, ಪ್ರಸೃತ, ಸೃತ, ಪರಿವೃತ್ತ, ನಿವೃತ್ತ ಸಂಪಾತ, ಸಮುದೀರ್ಣ, ಭಾರತ, ಕೌಶಿಕ, ಸಾತ್ವತ.

07164149a ತತಃ ಶರಸಹಸ್ರೇಣ ಶತಚಂದ್ರಮಪಾತಯತ್।
07164149c ಖಡ್ಗಂ ಚರ್ಮ ಚ ಸಂಬಾಧೇ ಧೃಷ್ಟದ್ಯುಮ್ನಸ್ಯ ಸ ದ್ವಿಜಃ।।

ಆಗ ದ್ವಿಜನು ಸಹಸ್ರ ಬಾಣಗಳಿಂದ ನೂರುಚಂದ್ರರ ಚಿಹ್ನೆಗಳನ್ನು ಹೊಂದಿದ್ದ ಧೃಷ್ಟದ್ಯುಮ್ನನ ಗುರಾಣಿಯನ್ನೂ ಖಡ್ಗವನ್ನೂ ಚೂರು ಚೂರು ಮಾಡಿ ಕೆಡವಿದನು.

07164150a ತೇ ತು ವೈತಸ್ತಿಕಾ ನಾಮ ಶರಾ ಹ್ಯಾಸನ್ನಘಾತಿನಃ।
07164150c ನಿಕೃಷ್ಟಯುದ್ಧೇ ದ್ರೋಣಸ್ಯ ನಾನ್ಯೇಷಾಂ ಸಂತಿ ತೇ ಶರಾಃ।।
07164151a ಶಾರದ್ವತಸ್ಯ ಪಾರ್ಥಸ್ಯ ದ್ರೌಣೇರ್ವೈಕರ್ತನಸ್ಯ ಚ।
07164151c ಪ್ರದ್ಯುಮ್ನಯುಯುಧಾನಾಭ್ಯಾಮಭಿಮನ್ಯೋಶ್ಚ ತೇ ಶರಾಃ।।

ಹತ್ತಿರದಲ್ಲಿದ್ದವರೊಡನೆಯೂ ಯುದ್ಧಮಾಡಬಹುದಾದಂತಹ ವೈತಸ್ತಿಗಳೆಂಬ ಬಾಣಗಳನ್ನು ದ್ರೋಣನು ಬಳಸಿ ಧೃಷ್ಟದ್ಯುಮ್ನನ ಕತ್ತಿ-ಗುರಾಣಿಗಳನ್ನು ಕತ್ತರಿಸಿದನು. ಆ ಬಾಣಗಳು ಅತಿಸಮೀಪದಲ್ಲಿದ್ದವರೊಡನೆಯೂ ಯುದ್ಧಮಾಡಬಲ್ಲಂತಹ ದ್ರೋಣನನ್ನು ಮತ್ತು ಶಾರದ್ವತ ಕೃಪ, ಪಾರ್ಥ ಅರ್ಜುನ, ದ್ರೌಣಿ ಅಶ್ವತ್ಥಾಮ, ವೈಕರ್ತನ ಕರ್ಣ, ಕೃಷ್ಣನ ಮಗ ಪ್ರದ್ಯುಮ್ನ, ಯುಯುಧಾನ ಸಾತ್ಯಕಿ ಮತ್ತು ಅಭಿಮನ್ಯುವನ್ನು ಬಿಟ್ಟರೆ ಬೇರೆ ಯಾರಲ್ಲಿಯೂ ಇರಲಿಲ್ಲ.

07164152a ಅಥಾಸ್ಯೇಷುಂ ಸಮಾಧತ್ತ ದೃಢಂ ಪರಮಸಂಶಿತಂ।
07164152c ಅಂತೇವಾಸಿನಮಾಚಾರ್ಯೋ ಜಿಘಾಂಸುಃ ಪುತ್ರಸಮ್ಮಿತಂ।।

ಆಗ ಹತ್ತಿರದಲ್ಲಿಯೇ ಇದ್ದ ಪುತ್ರಸಮ್ಮಿತ ಶಿಷ್ಯ ಧೃಷ್ಟದ್ಯುಮ್ನನನ್ನು ಸಂಹರಿಸಲು ಬಯಸಿ ಆಚಾರ್ಯನು ದೃಢ ಉತ್ತಮ ಬಾಣವನ್ನು ಹೂಡಿದನು.

07164153a ತಂ ಶರೈರ್ದಶಭಿಸ್ತೀಕ್ಷ್ಣೈಶ್ಚಿಚ್ಚೇದ ಶಿನಿಪುಂಗವಃ।
07164153c ಪಶ್ಯತಸ್ತವ ಪುತ್ರಸ್ಯ ಕರ್ಣಸ್ಯ ಚ ಮಹಾತ್ಮನಃ।
07164153e ಗ್ರಸ್ತಮಾಚಾರ್ಯಮುಖ್ಯೇನ ಧೃಷ್ಟದ್ಯುಮ್ನಮಮೋಚಯತ್।।

ಆ ಶರವನ್ನು ಶಿನಿಪುಂಗವ ಸಾತ್ಯಕಿಯು ನಿನ್ನ ಮಗ ಮತ್ತು ಮಹಾತ್ಮ ಕರ್ಣನು ನೋಡುತ್ತಿದ್ದಂತೆಯೇ ಹತ್ತು ತೀಕ್ಷ್ಣ ಶರಗಳಿಂದ ಕತ್ತರಿಸಿ ಆಚಾರ್ಯಮುಖ್ಯನ ಹಿಡಿತದಿಂದ ಧೃಷ್ಟದ್ಯುಮ್ನನನ್ನು ವಿಮೋಚನಗೊಳಿಸಿದನು.

07164154a ಚರಂತಂ ರಥಮಾರ್ಗೇಷು ಸಾತ್ಯಕಿಂ ಸತ್ಯವಿಕ್ರಮಂ।
07164154c ದ್ರೋಣಕರ್ಣಾಂತರಗತಂ ಕೃಪಸ್ಯಾಪಿ ಚ ಭಾರತ।
07164154e ಅಪಶ್ಯೇತಾಂ ಮಹಾತ್ಮಾನೌ ವಿಷ್ವಕ್ಸೇನಧನಂಜಯೌ।।

ಭಾರತ! ದ್ರೋಣ, ಕರ್ಣ ಮತ್ತು ಕೃಪರ ಮಧ್ಯದಿಂದ ರಥಮಾರ್ಗದಲ್ಲಿ ಸಂಚರಿಸುತ್ತಾ ಬಂದ ಸತ್ಯವಿಕ್ರಮ ಸಾತ್ಯಕಿಯನ್ನು ಮಹಾತ್ಮ ವಿಷ್ವಕ್ಸೇನ-ಧನಂಜಯರೂ ನೋಡಿದರು.

07164155a ಅಪೂಜಯೇತಾಂ ವಾರ್ಷ್ಣೇಯಂ ಬ್ರುವಾಣೌ ಸಾಧು ಸಾಧ್ವಿತಿ।
07164155c ದಿವ್ಯಾನ್ಯಸ್ತ್ರಾಣಿ ಸರ್ವೇಷಾಂ ಯುಧಿ ನಿಘ್ನಂತಮಚ್ಯುತಂ।
07164155e ಅಭಿಪತ್ಯ ತತಃ ಸೇನಾಂ ವಿಷ್ವಕ್ಸೇನಧನಂಜಯೌ।।

ಯುದ್ಧದಲ್ಲಿ ಎಲ್ಲರ ಮೇಲೂ ದಿವ್ಯಾಸ್ತ್ರಗಳನ್ನು ಪ್ರಯೋಗಿಸಿ ಸಂಹರಿಸುತ್ತಿದ್ದ ವಾರ್ಷ್ಣೇಯ ಸಾತ್ಯಕಿಯನ್ನು ವಿಷ್ವಕ್ಸೇನ-ಧನಂಜಯರು “ಸಾಧು! ಸಾಧು!” ಎಂದು ಪ್ರಶಂಸಿಸಿ ಸೇನೆಗಳ ಮೇಲೆ ಧಾಳಿ ನಡೆಸಿದರು.

07164156a ಧನಂಜಯಸ್ತತಃ ಕೃಷ್ಣಮಬ್ರವೀತ್ಪಶ್ಯ ಕೇಶವ।
07164156c ಆಚಾರ್ಯವರಮುಖ್ಯಾನಾಂ ಮಧ್ಯೇ ಕ್ರೀಡನ್ಮಧೂದ್ವಹಃ।।
07164157a ಆನಂದಯತಿ ಮಾಂ ಭೂಯಃ ಸಾತ್ಯಕಿಃ ಸತ್ಯವಿಕ್ರಮಃ।
07164157c ಮಾದ್ರೀಪುತ್ರೌ ಚ ಭೀಮಂ ಚ ರಾಜಾನಂ ಚ ಯುಧಿಷ್ಠಿರಂ।।

ಆಗ ಧನಂಜಯನು ಕೃಷ್ಣನಿಗೆ ಹೇಳಿದನು: “ನೋಡು ಕೃಷ್ಣ! ಮಧೂದ್ವಹ ಸತ್ಯವಿಕ್ರಮಿ ಸಾತ್ಯಕಿಯು ಆಚಾರ್ಯಪ್ರಮುಖರ ಮಧ್ಯೆ ಯುದ್ಧದ ಆಟವಾಡಿ ನನ್ನನ್ನೂ ಮತ್ತು ಮಾದ್ರೀಪುತ್ರರನ್ನೂ, ಭೀಮನನ್ನೂ ಮತ್ತು ರಾಜಾ ಯುಧಿಷ್ಠಿರನನ್ನೂ ಆನಂದಗೊಳಿಸುತ್ತಿದ್ದಾನೆ.

07164158a ಯಚ್ಚಿಕ್ಷಯಾನುದ್ಧತಃ ಸನ್ರಣೇ ಚರತಿ ಸಾತ್ಯಕಿಃ।।
07164158c ಮಹಾರಥಾನುಪಕ್ರೀಡನ್ವೃಷ್ಣೀನಾಂ ಕೀರ್ತಿವರ್ಧನಃ।

ಉತ್ತಮ ಶಿಕ್ಷಣವನ್ನು ಪಡೆದಿದ್ದರೂ ಉದ್ಧಟತನವನ್ನು ತೋರಿಸದೇ ರಣರಂಗದಲ್ಲಿ ವೃಷ್ಣಿಗಳ ಕೀರ್ತಿವರ್ಧನ ಸಾತ್ಯಕಿಯು ಮಹಾರಥರೊಡನೆ ಯುದ್ಧದ ಆಟವಾಡುತ್ತಿದ್ದಾನೆ.

07164159a ತಮೇತೇ ಪ್ರತಿನಂದಂತಿ ಸಿದ್ಧಾಃ ಸೈನ್ಯಾಶ್ಚ ವಿಸ್ಮಿತಾಃ।
07164159c ಅಜಯ್ಯಂ ಸಮರೇ ದೃಷ್ಟ್ವಾ ಸಾಧು ಸಾಧ್ವಿತಿ ಸಾತ್ವತಂ।
07164159e ಯೋಧಾಶ್ಚೋಭಯತಃ ಸರ್ವೇ ಕರ್ಮಭಿಃ ಸಮಪೂಜಯನ್।।

ಸಮರದಲ್ಲಿ ಅಜೇಯ ಸಾತ್ವತನನ್ನು ನೋಡಿ ಸಿದ್ಧರೂ, ಎರಡೂ ಕಡೆಯ ಯೋಧರೂ ಸೇನೆಗಳೂ ಎಲ್ಲರೂ ವಿಸ್ಮಿತರಾಗಿ “ಸಾಧು! ಸಾಧು!” ಎಂದು ಆನಂದಿಸುತ್ತಿದ್ದಾರೆ ಮತ್ತು ಪ್ರಶಂಸಿಸುತ್ತಿದ್ದಾರೆ.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣವಧ ಪರ್ವಣಿ ಸಂಕುಲಯುದ್ಧೇ ಚತುಃಷಷ್ಟ್ಯಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣವಧ ಪರ್ವದಲ್ಲಿ ಸಂಕುಲಯುದ್ಧ ಎನ್ನುವ ನೂರಾಅರವತ್ನಾಲ್ಕನೇ ಅಧ್ಯಾಯವು.