162 ನಕುಲಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ದ್ರೋಣವಧ ಪರ್ವ

ಅಧ್ಯಾಯ 162

ಸಾರ

ಯುದ್ಧ ವರ್ಣನೆ (1-46). ನಕುಲನಿಂದ ದುರ್ಯೋಧನನ ಪರಾಭವ (47-52).

07162001 ಸಂಜಯ ಉವಾಚ।
07162001a ತೇ ತಥೈವ ಮಹಾರಾಜ ದಂಶಿತಾ ರಣಮೂರ್ಧನಿ।
07162001c ಸಂಧ್ಯಾಗತಂ ಸಹಸ್ರಾಂಶುಮಾದಿತ್ಯಮುಪತಸ್ಥಿರೇ।।

ಸಂಜಯನು ಹೇಳಿದನು: “ಮಹಾರಾಜ! ಹಾಗೆ ರಣಾಂಗಣದಲ್ಲಿ ಕವಚಗಳನ್ನು ಧರಿಸಿ ಬಂದಿದ್ದ ಸೈನಿಕರು ಸಂಧ್ಯಾಸಮಯದಲ್ಲಿ ಉದಯಿಸುತ್ತಿರುವ ಸಹಸ್ರಾಂಶು ಆದಿತ್ಯನನ್ನು ನಮಸ್ಕರಿಸಿ ಪೂಜಿಸಿದರು.

07162002a ಉದಿತೇ ತು ಸಹಸ್ರಾಂಶೌ ತಪ್ತಕಾಂಚನಸಪ್ರಭೇ।
07162002c ಪ್ರಕಾಶಿತೇಷು ಲೋಕೇಷು ಪುನರ್ಯುದ್ಧಮವರ್ತತ।।

ಕುದಿಸಿದ ಕಾಂಚನ ಪ್ರಭೆಯುಳ್ಳ ಸಹಸ್ರಾಂಶನು ಉದಯಿಸಿ ಲೋಕವು ಪ್ರಾಕಾಶಿತವಾಗಲು ಪುನಃ ಯುದ್ಧವು ಪ್ರಾರಂಭವಾಯಿತು.

07162003a ದ್ವಂದ್ವಾನಿ ಯಾನಿ ತತ್ರಾಸನ್ಸಂಸಕ್ತಾನಿ ಪುರೋದಯಾತ್।
07162003c ತಾನ್ಯೇವಾಭ್ಯುದಿತೇ ಸೂರ್ಯೇ ಸಮಸಜ್ಜಂತ ಭಾರತ।।

ಭಾರತ! ಸೂರ್ಯೋದಯಕ್ಕೆ ಮೊದಲು ಅಲ್ಲಿ ಯಾರ್ಯಾರು ದ್ವಂದ್ವಯುದ್ಧದಲ್ಲಿ ತೊಡಗಿದ್ದರೋ ಅವರೇ ಸೂರ್ಯೋದಯದ ನಂತರವೂ ದ್ವಂದ್ವಯುದ್ಧವನ್ನು ಮುಂದುವರೆಸಿದರು.

07162004a ರಥೈರ್ಹಯಾ ಹಯೈರ್ನಾಗಾಃ ಪಾದಾತಾಶ್ಚಾಪಿ ಕುಂಜರೈಃ।
07162004c ಹಯಾ ಹಯೈಃ ಸಮಾಜಗ್ಮುಃ ಪಾದಾತಾಶ್ಚ ಪದಾತಿಭಿಃ।
07162004e ಸಂಸಕ್ತಾಶ್ಚ ವಿಯುಕ್ತಾಶ್ಚ ಯೋಧಾಃ ಸಮ್ನ್ಯಪತನ್ರಣೇ।।

ರಥಗಳು ಕುದುರೆಗಳೊಂದಿಗೆ, ಕುದುರೆಗಳು ಆನೆಗಳೊಂದಿಗೆ, ಪಾದಾತಿಗಳು ಆನೆಗಳೊಂದಿಗೆ, ಕುದುರೆಗಳು ಕುದುರೆಗಳೊಂದಿಗೆ ಮತ್ತು ಪದಾತಿಗಳು ಪದಾತಿಗಳೊಂದಿಗೆ ಎದುರಾಗಿ ಯುದ್ಧಮಾಡಿದರು. ಒಬ್ಬರಿಗೊಬ್ಬರು ಅಂಟಿಕೊಂಡು ಮತ್ತು ಬೇರೆ ಬೇರಾಗಿ ಯೋಧರು ರಣದಲ್ಲಿ ಬೀಳುತ್ತಿದ್ದರು.

07162005a ತೇ ರಾತ್ರೌ ಕೃತಕರ್ಮಾಣಃ ಶ್ರಾಂತಾಃ ಸೂರ್ಯಸ್ಯ ತೇಜಸಾ।
07162005c ಕ್ಷುತ್ಪಿಪಾಸಾಪರೀತಾಂಗಾ ವಿಸಂಜ್ಞಾ ಬಹವೋಽಭವನ್।।

ರಾತ್ರಿಯೆಲ್ಲಾ ಯುದ್ಧಮಾಡುತ್ತಿದ್ದು ಈಗ ಸೂರ್ಯನ ತೇಜಸ್ಸಿನಿಂದ ಬಳಲಿ, ಹಸಿವು-ಬಾಯಾರಿಕೆಗಳಿಂದ ಆಯಾಸಗೊಂಡವರಾಗಿ ಅನೇಕರು ಮೂರ್ಛಿತರಾದರು.

07162006a ಶಂಖಭೇರೀಮೃದಂಗಾನಾಂ ಕುಂಜರಾಣಾಂ ಚ ಗರ್ಜತಾಂ।
07162006c ವಿಸ್ಫಾರಿತವಿಕೃಷ್ಟಾನಾಂ ಕಾರ್ಮುಕಾಣಾಂ ಚ ಕೂಜತಾಂ।।
07162007a ಶಬ್ದಃ ಸಮಭವದ್ರಾಜನ್ದಿವಿಸ್ಪೃಗ್ಭರತರ್ಷಭ।

ರಾಜನ್! ಭರತರ್ಷಭ! ಶಂಖ-ಭೇರಿ-ಮೃದಂಗಗಳ ಮತ್ತು ಆನೆಗಳ ಗರ್ಜನೆ, ಸೆಳೆಯಲ್ಪಡುತ್ತಿದ್ದ ಧನುಸ್ಸುಗಳ ಟೇಂಕಾರಗಳು ಇವೆಲ್ಲವುಗಳ ಶಬ್ಧಗಳು ಮುಗಿಲನ್ನು ಮುಟ್ಟಿದವು.

07162007c ದ್ರವತಾಂ ಚ ಪದಾತೀನಾಂ ಶಸ್ತ್ರಾಣಾಂ ವಿನಿಪಾತ್ಯತಾಂ।।
07162008a ಹಯಾನಾಂ ಹೇಷತಾಂ ಚೈವ ರಥಾನಾಂ ಚ ನಿವರ್ತತಾಂ।
07162008c ಕ್ರೋಶತಾಂ ಗರ್ಜತಾಂ ಚೈವ ತದಾಸೀತ್ತುಮುಲಂ ಮಹತ್।।

ಓಡಿಹೋಗುತ್ತಿರವರ ಹೆಜ್ಜೆಗಳ ಶಬ್ಧಗಳೂ, ಶಸ್ತ್ರಗಳು ಬೀಳುತ್ತಿರುವ ಶಬ್ಧಗಳೂ, ಕುದುರೆಗಳ ಹೇಂಕಾರಗಳೂ, ರಥಗಳು ನಡೆಯುತ್ತಿರುವ ಶಬ್ಧಗಳೂ, ಮತ್ತು ಕೂಗು-ಗರ್ಜನೆಗಳ ಶಬ್ಧಗಳೂ ಸೇರಿ ಮಹಾ ತುಮುಲವೆದ್ದಿತು.

07162009a ವಿವೃದ್ಧಸ್ತುಮುಲಃ ಶಬ್ದೋ ದ್ಯಾಮಗಚ್ಚನ್ಮಹಾಸ್ವನಃ।
07162009c ನಾನಾಯುಧನಿಕೃತ್ತಾನಾಂ ಚೇಷ್ಟತಾಮಾತುರಃ ಸ್ವನಃ।।

ನಾನಾ ಆಯುಧಗಳಿಂದ ಕತ್ತರಿಸುತ್ತಿರುವವರ, ಆತುರ ಕೂಗುಗಳ ತುಮುಲ ಶಬ್ಧದ ಮಹಾಸ್ವನಗಳು ಆಕಾಶವನ್ನು ಸೇರಿದವು.

07162010a ಭೂಮಾವಶ್ರೂಯತ ಮಹಾಂಸ್ತದಾಸೀತ್ಕೃಪಣಂ ಮಹತ್।
07162010c ಪತತಾಂ ಪತಿತಾನಾಂ ಚ ಪತ್ತ್ಯಶ್ವರಥಹಸ್ತಿನಾಂ।।

ಕೆಳಗುರುಳಿಸುತ್ತಿದ್ದ ಮತ್ತು ಕೆಳಗುರುಳುತ್ತಿದ್ದ ಪದಾತಿ-ಅಶ್ವ-ಗಜಗಳ ದೀನತರ ಕೂಗುಗಳು ಇನ್ನೂ ಜೋರಾಗಿ ಕೇಳಿಬರುತ್ತಿತ್ತು.

07162011a ತೇಷು ಸರ್ವೇಷ್ವನೀಕೇಷು ವ್ಯತಿಷಕ್ತೇಷ್ವನೇಕಶಃ।
07162011c ಸ್ವೇ ಸ್ವಾಂ ಜಘ್ನುಃ ಪರೇ ಸ್ವಾಂಶ್ಚ ಸ್ವೇ ಪರಾಂಶ್ಚ ಪರಾನ್ಪರೇ।।

ಆ ಸರ್ವಸೇನೆಗಳಲ್ಲಿ ಅನೇಕಶಃ ನಮ್ಮವರು ನಮ್ಮವರನ್ನೇ ಕೊಲ್ಲುತ್ತಿದ್ದರು; ಶತ್ರುಗಳು ಶತ್ರುಗಳನ್ನೇ ಕೊಲ್ಲುತ್ತಿದ್ದರು.

07162012a ವೀರಬಾಹುವಿಸೃಷ್ಟಾಶ್ಚ ಯೋಧೇಷು ಚ ಗಜೇಷು ಚ।
07162012c ಅಸಯಃ ಪ್ರತ್ಯದೃಶ್ಯಂತ ವಾಸಸಾಂ ನೇಜನೇಷ್ವಿವ।।

ತೊಳೆಯಲು ಅಗಸನ ಮನೆಯಲ್ಲಿ ಬಟ್ಟೆಗಳು ರಾಶಿ ರಾಶಿಯಾಗಿ ಬಂದು ಬೀಳುವಂತೆ ಯೋಧರ ಮತ್ತು ಆನೆಗಳ ವೀರಬಾಹುಗಳು ತುಂಡಾಗಿ ತೊಪತೊಪನೆ ಬೀಳುತ್ತಿದ್ದವು.

07162013a ಉದ್ಯತಪ್ರತಿಪಿಷ್ಟಾನಾಂ ಖಡ್ಗಾನಾಂ ವೀರಬಾಹುಭಿಃ।
07162013c ಸ ಏವ ಶಬ್ದಸ್ತದ್ರೂಪೋ ವಾಸಸಾಂ ನಿಜ್ಯತಾಮಿವ।।

ಖಡ್ಗಗಳನ್ನು ಹಿಡಿದ ವೀರಬಾಹುಗಳ ಮೇಲೆ ಬೀಳುವ ಖಡ್ಗಗಳ ಶಬ್ಧವು ಅಗಸನು ಬಂಡೆಯಮೇಲೆ ಬಟ್ಟೆಯನ್ನು ಒಗೆಯುವ ಶಬ್ಧದಂತಿತ್ತು.

07162014a ಅರ್ಧಾಸಿಭಿಸ್ತಥಾ ಖಡ್ಗೈಸ್ತೋಮರೈಃ ಸಪರಶ್ವಧೈಃ।
07162014c ನಿಕೃಷ್ಟಯುದ್ಧಂ ಸಂಸಕ್ತಂ ಮಹದಾಸೀತ್ಸುದಾರುಣಂ।।

ಅರ್ಧ ತುಂಡಾದ ಚೂರಿಗಳಿಂದಲೂ, ಖಡ್ಗಗಳಿಂದಲೂ, ತೋಮರಗಳಿಂದಲೂ, ಪರಶಾಯುಧಗಳಿಂದಲೂ ಆ ಮಹಾ ಸುದಾರುಣ ಯುದ್ಧವು ನಡೆಯಿತು.

07162015a ಗಜಾಶ್ವಕಾಯಪ್ರಭವಾಂ ನರದೇಹಪ್ರವಾಹಿನೀಂ।
07162015c ಶಸ್ತ್ರಮತ್ಸ್ಯಸುಸಂಪೂರ್ಣಾಂ ಮಾಂಸಶೋಣಿತಕರ್ದಮಾಂ।।
07162016a ಆರ್ತನಾದಸ್ವನವತೀಂ ಪತಾಕಾವಸ್ತ್ರಫೇನಿಲಾಂ।
07162016c ನದೀಂ ಪ್ರಾವರ್ತಯನ್ವೀರಾಃ ಪರಲೋಕಪ್ರವಾಹಿನೀಂ।।

ಆನೆ-ಕುದುರೆಗಳ ಕಾಯದಿಂದ ಹುಟ್ಟಿದ, ನರದೇಹಗಳನ್ನು ಕೊಚ್ಚಿಕೊಂಡು ಹೋಗುತ್ತಿದ್ದ, ಶಸ್ತ್ರಗಳೇ ಮೀನುಗಳಂತೆ ತುಂಬಿಹೋಗಿದ್ದ, ಮಾಂಸ-ಶೋಣಿತಗಳೇ ಕೆಸರಾಗುಳ್ಳ, ಆರ್ತನಾದವೇ ಅಲೆಗಳ ಶಬ್ಧವಾಗಿದ್ದ, ಪತಾಕೆಗಳ ವಸ್ತ್ರಗಳೇ ನೊರೆಗಳಂತೆ ತೇಲುತ್ತಿದ್ದ ಪರಲೋಕಕ್ಕೆ ಹರಿದು ಹೋಗುತ್ತಿದ್ದ ನದಿಯನ್ನೇ ಆ ವೀರರು ಸೃಷ್ಟಿಸಿದರು.

07162017a ಶರಶಕ್ತ್ಯರ್ದಿತಾಃ ಕ್ಲಾಂತಾ ರಾತ್ರಿಮೂಢಾಲ್ಪಚೇತಸಃ।।
07162017c ವಿಷ್ಟಭ್ಯ ಸರ್ವಗಾತ್ರಾಣಿ ವ್ಯತಿಷ್ಠನ್ಗಜವಾಜಿನಃ।

ಶರ-ಶಕ್ತಿಗಳಿಂದ ಗಾಯಗೊಂಡ, ಆಯಾಸಗೊಂಡ, ರಾತ್ರಿ ಬುದ್ಧಿಗೆಟ್ಟ ಎಲ್ಲ ಗಜಾಶ್ವಗಳೂ ಸ್ಥಬ್ದಗೊಂಡು ನಿಂತುಬಿಟ್ಟಿದ್ದವು.

07162017e ಸಂಶುಷ್ಕವದನಾ ವೀರಾಃ ಶಿರೋಭಿಶ್ಚಾರುಕುಂಡಲೈಃ।।
07162018a ಯುದ್ಧೋಪಕರಣೈಶ್ಚಾನ್ಯೈಸ್ತತ್ರ ತತ್ರ ಪ್ರಕಾಶಿತೈಃ।

ಸುಂದರ ಕುಂಡಲಗಳಿಂದ ಅಲಂಕೃತ ಶಿರಗಳ ವೀರರ ಮುಖಗಳು ಬಾಡಿಹೋಗಿದ್ದವು. ಅನೇಕ ಯುದ್ಧೋಪಕರಣಗಳು ಅಲ್ಲಲ್ಲಿ ಬಿದ್ದು ಪ್ರಕಾಶಿಸುತ್ತಿದ್ದವು.

07162018c ಕ್ರವ್ಯಾದಸಂಘೈರಕೀರ್ಣಂ ಮೃತೈರರ್ಧಮೃತೈರಪಿ।।
07162018e ನಾಸೀದ್ರಥಪಥಸ್ತತ್ರ ಸರ್ವಮಾಯೋಧನಂ ಪ್ರತಿ।

ಕ್ರವ್ಯಾದಸಂಘಗಳಿಂದ, ಮೃತರಾದ ಮತ್ತು ಅರ್ಧಮೃತರಾದವರ ದೇಹಗಳಿಂದ ತುಂಬಿಹೋಗಿದ್ದ ಆ ರಣಭೂಮಿಯಲ್ಲಿ ಯುದ್ಧಕ್ಕೆ ರಥಗಳು ಹೋಗಲಿಕ್ಕೆ ದಾರಿಯೂ ಇಲ್ಲದಂತಾಗಿತ್ತು.

07162019a ಮಜ್ಜತ್ಸು ಚಕ್ರೇಷು ರಥಾನ್ಸತ್ತ್ವಮಾಸ್ಥಾಯ ವಾಜಿನಃ।
07162019c ಕಥಂ ಚಿದವಹಂ ಶ್ರಾಂತಾ ವೇಪಮಾನಾಃ ಶರಾರ್ದಿತಾಃ।
07162019e ಕುಲಸತ್ತ್ವಬಲೋಪೇತಾ ವಾಜಿನೋ ವಾರಣೋಪಮಾಃ।।

ರಕ್ತಮಾಂಸಗಳ ಕೆಸರಿನಲ್ಲಿ ರಥಚಕ್ರಗಳು ಹೂತುಹೋಗುತ್ತಿದ್ದವು. ಕುದುರೆಗಳು ಬಹಳವಾಗಿ ಬಳಲಿದ್ದವು. ಬಾಣಗಳಿಂದ ಬಹಳವಾಗಿ ಗಾಯಗೊಂಡು ನಡುಗುತ್ತಿದ್ದವು. ಆದರೂ ಉತ್ತಮ ಕುಲ-ಸತ್ತ್ವ-ಬಲಗಳುಳ್ಳ ಆ ಕುದುರೆಗಳು ಆನೆಗಳಂತೆ ಕಷ್ಟದಿಂದ ರಥಗಳನ್ನು ಒಯ್ಯುತ್ತಿದ್ದವು.

07162020a ವಿಹ್ವಲಂ ತತ್ಸಮುದ್ಭ್ರಾಂತಂ ಸಭಯಂ ಭಾರತಾತುರಂ।
07162020c ಬಲಮಾಸೀತ್ತದಾ ಸರ್ವಂ ಋತೇ ದ್ರೋಣಾರ್ಜುನಾವುಭೌ।।

ದ್ರೋಣ ಮತ್ತು ಅರ್ಜುನರಿಬ್ಬರನ್ನು ಬಿಟ್ಟು ಉಳಿದ ಎಲ್ಲ ಸೇನೆಗಳೂ ವಿಹ್ವಲ, ಭ್ರಾಂತ, ಭಯಾರ್ದಿತವಾಗಿ ಆತುರಗೊಂಡಿದ್ದವು.

07162021a ತಾವೇವಾಸ್ತಾಂ ನಿಲಯನಂ ತಾವಾರ್ತಾಯನಮೇವ ಚ।
07162021c ತಾವೇವಾನ್ಯೇ ಸಮಾಸಾದ್ಯ ಜಗ್ಮುರ್ವೈವಸ್ವತಕ್ಷಯಂ।।

ಅವರಿಬ್ಬರೂ ಅವರ ಆಶ್ರಯದಾತರಾಗಿದ್ದರು. ಆರ್ತರಕ್ಷಕರಾಗಿದ್ದರು. ಅನ್ಯೋನ್ಯರನ್ನು ಎದುರಿಸಿ ಅವರು ವೈವಸ್ವತಕ್ಷಯಕ್ಕೆ ಹೋಗುತ್ತಿದ್ದರು.

07162022a ಆವಿಗ್ನಮಭವತ್ಸರ್ವಂ ಕೌರವಾಣಾಂ ಮಹದ್ಬಲಂ।
07162022c ಪಾಂಚಾಲಾನಾಂ ಚ ಸಂಸಕ್ತಂ ನ ಪ್ರಾಜ್ಞಾಯತ ಕಿಂ ಚನ।।

ಕೌರವರ ಮತ್ತು ಪಾಂಚಾಲರ ಮಹಾಬಲಗಳು ಬೆರೆದು ಮಹಾಕಷ್ಟಕ್ಕೊಳಗಾದವು. ಅವರಿಗೆ ಯಾವುದೂ ತಿಳಿಯುತ್ತಿರಲಿಲ್ಲ.

07162023a ಅಂತಕಾಕ್ರೀಡಸದೃಶೇ ಭೀರೂಣಾಂ ಭಯವರ್ಧನೇ।
07162023c ಪೃಥಿವ್ಯಾಂ ರಾಜವಂಶಾನಾಮುತ್ಥಿತೇ ಮಹತಿ ಕ್ಷಯೇ।।

ಅಂತಕನ ಆಟದಂತಿದ್ದ, ಹೇಡಿಗಳ ಭಯವನ್ನು ಹೆಚ್ಚಿಸುತ್ತಿದ್ದ ಆ ಯುದ್ಧದಲ್ಲಿ ಪೃಥ್ವಿಯ ರಾಜವಂಶಗಳ ಮಹಾ ಕ್ಷಯವುಂಟಾಗುತ್ತಿತ್ತು.

07162024a ನ ತತ್ರ ಕರ್ಣಂ ನ ದ್ರೋಣಂ ನಾರ್ಜುನಂ ನ ಯುಧಿಷ್ಠಿರಂ।
07162024c ನ ಭೀಮಸೇನಂ ನ ಯಮೌ ನ ಪಾಂಚಾಲ್ಯಂ ನ ಸಾತ್ಯಕಿಂ।।
07162025a ನ ಚ ದುಹ್ಶಾಸನಂ ದ್ರೌಣಿಂ ನ ದುರ್ಯೋಧನಸೌಬಲೌ।
07162025c ನ ಕೃಪಂ ಮದ್ರರಾಜಂ ವಾ ಕೃತವರ್ಮಾಣಂ ಏವ ಚ।।
07162026a ನ ಚಾನ್ಯಾನ್ನೈವ ಚಾತ್ಮಾನಂ ನ ಕ್ಷಿತಿಂ ನ ದಿಶಸ್ತಥಾ।
07162026c ಪಶ್ಯಾಮ ರಾಜನ್ಸಂಸಕ್ತಾನ್ಸೈನ್ಯೇನ ರಜಸಾವೃತಾನ್।।

ರಾಜನ್! ಯುದ್ಧದಲ್ಲಿ ತೊಡಗಿ ಧೂಳಿನಿಂದ ತುಂಬಿಹೋಗಿದ್ದ ಆ ಸೇನೆಗಳಲ್ಲಿ ಕರ್ಣನನ್ನಾಗಲೀ, ದ್ರೋಣನನ್ನಾಗಲೀ, ಅರ್ಜುನನನ್ನಾಗಲೀ, ಯುಧಿಷ್ಠಿರನನ್ನಾಗಲೀ, ಭೀಮಸೇನನನ್ನಾಗಲೀ, ಯಮಳರನ್ನಾಗಲೀ, ಪಾಂಚಾಲ್ಯನನ್ನಾಗಲೀ, ಸಾತ್ಯಕಿಯನ್ನಾಗಲೀ, ದುಃಶಾಸನನನ್ನಾಗಲೀ, ದ್ರೌಣಿಯನ್ನಾಗಲೀ, ದುರ್ಯೋಧನ-ಸೌಬಲರನ್ನಾಗಲೀ, ಕೃಪನನ್ನಾಗಲೀ, ಕೃತವರ್ಮನನ್ನಾಗಲೀ, ಇನ್ನು ಇತರರನ್ನಾಗಲೀ, ಆಕಾಶವನ್ನಾಗಲೀ, ದಿಕ್ಕುಗಳನ್ನಾಗಲೀ, ಮತ್ತು ನಾವೇ ಕಾಣದಂತಾಗಿದ್ದೆವು.

07162027a ಸಂಭ್ರಾಂತೇ ತುಮುಲೇ ಘೋರೇ ರಜೋಮೇಘೇ ಸಮುತ್ಥಿತೇ।
07162027c ದ್ವಿತೀಯಾಮಿವ ಸಂಪ್ರಾಪ್ತಾಮಮನ್ಯಂತ ನಿಶಾಂ ತದಾ।।

ಆ ತುಮುಲಯುದ್ಧವು ನಡೆಯುತ್ತಿರಲು ಧೂಳಿನ ಘೋರ ಮೋಡವೇ ಮೇಲೆದ್ದಿತು. ಅದನ್ನು ನೋಡಿ ಎರಡನೆಯೇ ರಾತ್ರಿಯೇ ಬಂದುಬಿಟ್ಟಿತೋ ಎಂದು ಜನರು ಸಂಭ್ರಾಂತರಾದರು.

07162028a ನ ಜ್ಞಾಯಂತೇ ಕೌರವೇಯಾ ನ ಪಾಂಚಾಲಾ ನ ಪಾಂಡವಾಃ।
07162028c ನ ದಿಶೋ ನ ದಿವಂ ನೋರ್ವೀಂ ನ ಸಮಂ ವಿಷಮಂ ತಥಾ।।

ಆ ಧೂಳಿನಲ್ಲಿ ಕೌರವೇಯರು, ಪಾಂಚಾಲರು ಮತ್ತು ಪಾಂಡವರು ಯಾರೆಂದೇ ತಿಳಿಯುತ್ತಿರಲಿಲ್ಲ. ದಿಕ್ಕುಗಳಾಗಲೀ, ಆಕಾಶವಾಗಲೀ, ಹಳ್ಳ-ದಿಣ್ಣೆಗಳಾಗಲೀ ಕಾಣುತ್ತಿರಲಿಲ್ಲ.

07162029a ಹಸ್ತಸಂಸ್ಪರ್ಶಮಾಪನ್ನಾನ್ಪರಾನ್ವಾಪ್ಯಥ ವಾ ಸ್ವಕಾನ್।
07162029c ನ್ಯಪಾತಯಂಸ್ತದಾ ಯುದ್ಧೇ ನರಾಃ ಸ್ಮ ವಿಜಯೈಷಿಣಃ।।

ಯುದ್ಧದಲ್ಲಿ ವಿಜಯೈಷಿ ನರರು ಕೈಗೆಸಿಕ್ಕಿದವರನ್ನು, ಶತ್ರುಗಳೋ ತಮ್ಮವರೋ ಎನ್ನುವುದನ್ನು ವಿಚಾರಿಸದೇ ಕೆಳಗುರುಳಿಸುತ್ತಿದ್ದರು.

07162030a ಉದ್ಧೂತತ್ವಾತ್ತು ರಜಸಃ ಪ್ರಸೇಕಾಚ್ಚೋಣಿತಸ್ಯ ಚ।
07162030c ಪ್ರಶಶಾಮ ರಜೋ ಭೌಮಂ ಶೀಘ್ರತ್ವಾದನಿಲಸ್ಯ ಚ।।

ಗಾಳಿಯು ಜೋರಾಗಿ ಬೀಸುತ್ತಿದ್ದುದರಿಂದ ಧೂಳು ಮೇಲೆ ಹಾರಿತು. ರಕ್ತವು ಸುರಿಯುತ್ತಿದ್ದುದರಿಂದ ಧೂಳು ಭೂಮಿಯಲ್ಲಿಯೇ ನಿಂತು ಕಡಿಮೆಯಾಯಿತು.

07162031a ತತ್ರ ನಾಗಾ ಹಯಾ ಯೋಧಾ ರಥಿನೋಽಥ ಪದಾತಯಃ।
07162031c ಪಾರಿಜಾತವನಾನೀವ ವ್ಯರೋಚನ್ರುಧಿರೋಕ್ಷಿತಾಃ।।

ಅಲ್ಲಿ ರಕ್ತದಿಂದ ತೋಯ್ದುಹೋಗಿದ್ದ ಆನೆಗಳು, ಕುದುರೆಗಳೂ, ರಥವೇರಿದ್ದ ಯೋಧರು ಮತ್ತು ಪದಾತಿಗಳು ಪಾರಿಜಾತವೃಕ್ಷಗಳ ವನಗಳೋಪಾದಿಯಲ್ಲಿ ಗೋಚರಿಸುತ್ತಿದ್ದವು.

07162032a ತತೋ ದುರ್ಯೋಧನಃ ಕರ್ಣೋ ದ್ರೋಣೋ ದುಃಶಾಸನಸ್ತಥಾ।
07162032c ಪಾಂಡವೈಃ ಸಮಸಜ್ಜಂತ ಚತುರ್ಭಿಶ್ಚತುರೋ ರಥಾಃ।।

ಆಗ ದುರ್ಯೋಧನ, ಕರ್ಣ, ದ್ರೋಣ, ಮತ್ತು ದುಃಶಾಸನ ಈ ನಾಲ್ವರು ನಾಲ್ವರು ಪಾಂಡವ ಮಹಾರಥರೊಡನೆ ಯುದ್ಧದಲ್ಲಿ ತೊಡಗಿದರು.

07162033a ದುರ್ಯೋಧನಃ ಸಹ ಭ್ರಾತ್ರಾ ಯಮಾಭ್ಯಾಂ ಸಮಸಜ್ಜತ।
07162033c ವೃಕೋದರೇಣ ರಾಧೇಯೋ ಭಾರದ್ವಾಜೇನ ಚಾರ್ಜುನಃ।।

ಸಹೋದರನೊಂದಿಗೆ ದುರ್ಯೋಧನನು ಯಮಳರೊಡನೆಯೂ, ರಾಧೇಯನು ವೃಕೋದರನೊಡನೆಯೂ, ಅರ್ಜುನನು ಭಾರದ್ವಾಜನೊಂದಿಗೂ ಯುದ್ಧಮಾಡಿದರು.

07162034a ತದ್ಘೋರಂ ಮಹದಾಶ್ಚರ್ಯಂ ಸರ್ವೇ ಪ್ರೈಕ್ಷನ್ಸಮಂತತಃ।
07162034c ರಥರ್ಷಭಾಣಾಮುಗ್ರಾಣಾಂ ಸಮ್ನಿಪಾತಮಮಾನುಷಂ।।

ಪರಸ್ಪರರ ಮೇಲೆ ಎರಗುತ್ತಿದ್ದ ಆ ರಥರ್ಷಭರ ಉಗ್ರ ಅಮಾನುಷ ಮಹದಾಶ್ಚರ್ಯಕರ ಘೋರ ಯುದ್ಧವನ್ನು ಎಲ್ಲರೂ ಸುತ್ತುವರೆದು ನೋಡಿದರು.

07162035a ರಥಮಾರ್ಗೈರ್ವಿಚಿತ್ರೈಶ್ಚ ವಿಚಿತ್ರರಥಸಂಕುಲಂ।
07162035c ಅಪಶ್ಯನ್ರಥಿನೋ ಯುದ್ಧಂ ವಿಚಿತ್ರಂ ಚಿತ್ರಯೋಧಿನಾಂ।।

ವಿಚಿತ್ರ ರಥಮಾರ್ಗಗಳನ್ನೂ, ವಿಚಿತ್ರ ರಥಸಂಕುಲಗಳನ್ನೂ, ಚಿತ್ರಯೋಧಿಗಳ ಆ ವಿಚಿತ್ರ ಯುದ್ಧವನ್ನು ರಥಿಗಳು ನೋಡಿದರು.

07162036a ಯತಮಾನಾಃ ಪರಾಕ್ರಾಂತಾಃ ಪರಸ್ಪರಜಿಗೀಷವಃ।
07162036c ಜೀಮೂತಾ ಇವ ಘರ್ಮಾಂತೇ ಶರವರ್ಷೈರವಾಕಿರನ್।।

ಪರಸ್ಪರರನ್ನು ಗೆಲ್ಲಲು ಬಯಸಿದ್ದ ಆ ಪರಾಕ್ರಾಂತರು ಬೇಸಗೆಯ ಅಂತ್ಯದಲ್ಲಿನ ಮೋಡಗಳಂತೆ ಶರವರ್ಷಗಳನ್ನು ಸುರಿಸಿ ಪ್ರಯತ್ನಿಸುತ್ತಿದ್ದರು.

07162037a ತೇ ರಥಾನ್ಸೂರ್ಯಸಂಕಾಶಾನಸ್ಥಿತಾಃ ಪುರುಷರ್ಷಭಾಃ।
07162037c ಅಶೋಭಂತ ಯಥಾ ಮೇಘಾಃ ಶಾರದಾಃ ಸಮುಪಸ್ಥಿತಾಃ।।

ಸೂರ್ಯಸಂಕಾಶ ರಥಗಳಲ್ಲಿ ಕುಳಿತಿದ್ದ ಆ ಪುರುಷರ್ಷಭರು ಮಿಂಚಿನಿಂದ ಕೂಡಿದ ಶರತ್ಕಾಲದ ಮೋಡಗಳಂತೆ ಶೋಭಿಸುತ್ತಿದ್ದರು.

07162038a ಸ್ಪರ್ಧಿನಸ್ತೇ ಮಹೇಷ್ವಾಸಾಃ ಕೃತಯತ್ನಾ ಧನುರ್ಧರಾಃ।
07162038c ಅಭ್ಯಗಚ್ಚಂಸ್ತಥಾನ್ಯೋನ್ಯಂ ಮತ್ತಾ ಗಜವೃಷಾ ಇವ।।

ಆ ಮಹೇಷ್ವಾಸ ಧನುರ್ಧರರು ಪ್ರಯತ್ನಪಟ್ಟು ಸ್ಪರ್ಧಿಸುತ್ತಿದ್ದರು. ಮದಿಸಿದ ಸಲಗಗಳಂತೆ ಅನ್ಯೋನ್ಯರನ್ನು ಆಕ್ರಮಣಿಸುತ್ತಿದ್ದರು.

07162039a ನ ನೂನಂ ದೇಹಭೇದೋಽಸ್ತಿ ಕಾಲೇ ತಸ್ಮಿನ್ಸಮಾಗತೇ।
07162039c ಯತ್ರ ಸರ್ವೇ ನ ಯುಗಪದ್ವ್ಯಶೀರ್ಯಂತ ಮಹಾರಥಾಃ।।

ಕಾಲವು ಸಮೀಪವಾಗುವ ಮೊದಲು ದೇಹವು ನಾಶವಾಗುವುದಿಲ್ಲ. ಅಲ್ಲಿ ಎಲ್ಲ ಮಹಾರಥರೂ ಗಾಯಗೊಂಡಿದ್ದರೇ ಹೊರತು ಎಲ್ಲರೂ ಒಟ್ಟಿಗೇ ಸಾಯಲಿಲ್ಲ.

07162040a ಬಾಹುಭಿಶ್ಚರಣೈಶ್ಚಿನ್ನೈಃ ಶಿರೋಭಿಶ್ಚಾರುಕುಂಡಲೈಃ।
07162040c ಕಾರ್ಮುಕೈರ್ವಿಶಿಖೈಃ ಪ್ರಾಸೈಃ ಖಡ್ಗೈಃ ಪರಶುಪಟ್ಟಿಶೈಃ।।
07162041a ನಾಲೀಕಕ್ಷುರನಾರಾಚೈರ್ನಖರೈಃ ಶಕ್ತಿತೋಮರೈಃ।
07162041c ಅನ್ಯೈಶ್ಚ ವಿವಿಧಾಕಾರೈರ್ಧೌತೈಃ ಪ್ರಹರಣೋತ್ತಮೈಃ।।
07162042a ಚಿತ್ರೈಶ್ಚ ವಿವಿಧಾಕಾರೈಃ ಶರೀರಾವರಣೈರಪಿ।
07162042c ವಿಚಿತ್ರೈಶ್ಚ ರಥೈರ್ಭಗ್ನೈರ್ಹತೈಶ್ಚ ಗಜವಾಜಿಭಿಃ।।
07162043a ಶೂನ್ಯೈಶ್ಚ ನಗರಾಕಾರೈರ್ಹತಯೋಧಧ್ವಜೈ ರಥೈಃ।
07162043c ಅಮನುಷ್ಯೈರ್ಹಯೈಸ್ತ್ರಸ್ತೈಃ ಕೃಷ್ಯಮಾಣೈಸ್ತತಸ್ತತಃ।।
07162044a ವಾತಾಯಮಾನೈರಸಕೃದ್ಧತವೀರೈರಲಂಕೃತೈಃ।
07162044c ವ್ಯಜನೈಃ ಕಂಕಟೈಶ್ಚೈವ ಧ್ವಜೈಶ್ಚ ವಿನಿಪಾತಿತೈಃ।।
07162045a ಚತ್ರೈರಾಭರಣೈರ್ವಸ್ತ್ರೈರ್ಮಾಲ್ಯೈಶ್ಚ ಸುಸುಗಂಧಿಭಿಃ।
07162045c ಹಾರೈಃ ಕಿರೀಟೈರ್ಮುಕುಟೈರುಷ್ಣೀಷೈಃ ಕಿಂಕಿಣೀಗಣೈಃ।।
07162046a ಉರಸ್ಯೈರ್ಮಣಿಭಿರ್ನಿಷ್ಕೈಶ್ಚೂಡಾಮಣಿಭಿರೇವ ಚ।
07162046c ಆಸೀದಾಯೋಧನಂ ತತ್ರ ನಭಸ್ತಾರಾಗಣೈರಿವ।।

07162047a ತತೋ ದುರ್ಯೋಧನಸ್ಯಾಸೀನ್ನಕುಲೇನ ಸಮಾಗಮಃ।
07162047c ಅಮರ್ಷಿತೇನ ಕ್ರುದ್ಧಸ್ಯ ಕ್ರುದ್ಧೇನಾಮರ್ಷಿತಸ್ಯ ಚ।।

ಆಗ ಅಸಹನೆಯಿಂದ ಕ್ರುದ್ಧನಾಗಿದ್ದ ದುರ್ಯೋಧನನಿಗೂ ಕ್ರುದ್ಧನಾಗಿ ಅಸಹನೆಗೊಂಡಿದ್ದ ನಕುಲನಿಗೂ ಯುದ್ಧವು ನಡೆಯಿತು.

07162048a ಅಪಸವ್ಯಂ ಚಕಾರಾಥ ಮಾದ್ರೀಪುತ್ರಸ್ತವಾತ್ಮಜಂ।
07162048c ಕಿರಂ ಶರಶತೈರ್ಹೃಷ್ಟಸ್ತತ್ರ ನಾದೋ ಮಹಾನಭೂತ್।।

ಮಾದ್ರೀಪುತ್ರನು ನಿನ್ನ ಪುತ್ರನನ್ನು ಬಲಭಾಗಕ್ಕೆ ಮಾಡಿಕೊಂಡು ಹೃಷ್ಟನಾಗಿ ನೂರಾರು ಶರಗಳನ್ನು ಅವನ ಮೇಲೆ ಚೆಲ್ಲಿ ಮಹಾನಾದಗೈದನು.

07162049a ಅಪಸವ್ಯಂ ಕೃತಃ ಸಂಖ್ಯೇ ಭ್ರಾತೃವ್ಯೇನಾತ್ಯಮರ್ಷಿಣಾ।
07162049c ಸೋಽಮರ್ಷಿತಸ್ತಮಪ್ಯಾಜೌ ಪ್ರತಿಚಕ್ರೇಽಪಸವ್ಯತಃ।।

ಭ್ರಾತೃತ್ವದಿಂದಾಗಿ ತನ್ನನ್ನು ಬಲಭಾಗಕ್ಕೆ ಮಾಡಿಕೊಂಡು ಯುದ್ಧಮಾಡುತ್ತಿದುದನ್ನು ದುರ್ಯೋಧನನಿಗೆ ಸಹಿಸಿಕೊಳ್ಳಲಾಗಲಿಲ್ಲ. ಬಹಳಬೇಗ ಅವನು ನಕುಲನನ್ನು ತನ್ನ ಬಲಭಾಗಕ್ಕೆ ಮಾಡಿಕೊಂಡನು.

07162050a ತತಃ ಪ್ರತಿಚಿಕೀರ್ಷಂತಮಪಸವ್ಯಂ ತು ತೇ ಸುತಂ।
07162050c ನ್ಯವಾರಯತ ತೇಜಸ್ವೀ ನಕುಲಶ್ಚಿತ್ರಮಾರ್ಗವಿತ್।।

ವಿಚಿತ್ರಮಾರ್ಗಗಳನ್ನು ತಿಳಿದಿದ್ದ ತೇಜಸ್ವೀ ನಕುಲನು ನಿನ್ನ ಮಗನನ್ನು ಪುನಃ ಬಲಭಾಗಕ್ಕೆ ಮಾಡಿಕೊಂಡು ತಡೆದನು.

07162051a ಸರ್ವತೋ ವಿನಿವಾರ್ಯೈನಂ ಶರಜಾಲೇನ ಪೀಡಯನ್।
07162051c ವಿಮುಖಂ ನಕುಲಶ್ಚಕ್ರೇ ತತ್ಸೈನ್ಯಾಃ ಸಮಪೂಜಯನ್।।

ನಕುಲನು ಎಲ್ಲ ಕಡೆಗಳಿಂದಲೂ ಅವನನ್ನು ತಡೆಹಿಡಿದು, ಶರಜಾಲಗಳಿಂದ ಪೀಡಿಸಿ ವಿಮುಖನನ್ನಾಗಿ ಮಾಡಿದನು. ಅದನ್ನು ಸೇನೆಗಳು ಶ್ಲಾಘಿಸಿದವು.

07162052a ತಿಷ್ಠ ತಿಷ್ಠೇತಿ ನಕುಲೋ ಬಭಾಷೇ ತನಯಂ ತವ।
07162052c ಸಂಸ್ಮೃತ್ಯ ಸರ್ವದುಃಖಾನಿ ತವ ದುರ್ಮಂತ್ರಿತೇನ ಚ।।

ನಿನ್ನ ದುರ್ಮಂತ್ರದಿಂದ ನಡೆಯಲ್ಪಟ್ಟ ಎಲ್ಲ ದುಃಖಗಳನ್ನು ಸ್ಮರಿಸಿಕೊಳ್ಳುತ್ತಾ ನಕುಲನು ನಿನ್ನ ಮಗನಿಗೆ “ನಿಲ್ಲು! ನಿಲ್ಲು!” ಎಂದು ಕೂಗಿ ಹೇಳಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣವಧ ಪರ್ವಣಿ ನಕುಲಯುದ್ಧೇ ದ್ವಿಷಷ್ಟ್ಯಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣವಧ ಪರ್ವದಲ್ಲಿ ನಕುಲಯುದ್ಧ ಎನ್ನುವ ನೂರಾಅರವತ್ತೆರಡನೇ ಅಧ್ಯಾಯವು.