161 ಸಂಕುಲಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ದ್ರೋಣವಧ ಪರ್ವ

ಅಧ್ಯಾಯ 161

ಸಾರ

ಕೃಷ್ಣ-ಭೀಮಸೇನರಿಂದ ಪ್ರಚೋದಿತನಾದ ಅರ್ಜುನನು ದ್ರೋಣನನ್ನು ಆಕ್ರಮಣಿಸಿದುದು (1-14). ಯುದ್ಧವರ್ಣನೆ (15-28). ದ್ರೋಣನು ದ್ರುಪದ-ವಿರಾಟರನ್ನೂ ದ್ರುಪದನ ಮೊಮ್ಮಕ್ಕಳನ್ನೂ ವಧಿಸಿದುದು (29-34). ಧೃಷ್ಟದ್ಯುಮ್ನನ ಪ್ರತಿಜ್ಞೆ (35-40). ಭೀಮಸೇನನಿಂದ ಪ್ರಚೋದಿತನಾದ ಧೃಷ್ಟದ್ಯುಮ್ನನು ದ್ರೋಣನನ್ನು ಆಕ್ರಮಣಿಸಿದುದು (41-51).

07161001 ಸಂಜಯ ಉವಾಚ।
07161001a ತ್ರಿಭಾಗಮಾತ್ರಶೇಷಾಯಾಂ ರಾತ್ರ್ಯಾಂ ಯುದ್ಧಮವರ್ತತ।
07161001c ಕುರೂಣಾಂ ಪಾಂಡವಾನಾಂ ಚ ಸಂಹೃಷ್ಟಾನಾಂ ವಿಶಾಂ ಪತೇ।।

ಸಂಜಯನು ಹೇಳಿದನು: “ವಿಶಾಂಪತೇ! ರಾತ್ರಿಯ ಮೂರುಭಾಗಗಳೇ ಉಳಿದಿರಲು ಸಂಹೃಷ್ಟ ಕುರುಗಳು ಮತ್ತು ಪಾಂಡವರು ಯುದ್ಧವನ್ನು ಪ್ರಾರಂಭಿಸಿದರು.

07161002a ಅಥ ಚಂದ್ರಪ್ರಭಾಂ ಮುಷ್ಣನ್ನಾದಿತ್ಯಸ್ಯ ಪುರಃಸರಃ।
07161002c ಅರುಣೋಽಭ್ಯುದಯಾಂ ಚಕ್ರೇ ತಾಮ್ರೀಕುರ್ವನ್ನಿವಾಂಬರಂ।।

ಸ್ವಲ್ಪವೇ ಸಮಯದಲ್ಲಿ ಆದಿತ್ಯನ ಮುಂಭಾಗದಲ್ಲಿರುವ ಅರುಣನು ಚಂದ್ರನ ಪ್ರಭೆಯನ್ನು ಅಪಹರಿಸುತ್ತಾ ಅಂತರಿಕ್ಷವನ್ನೇ ಕೆಂಪಾಗಿ ಮಾಡುತ್ತಾ ಉದಯಿಸಿದನು.

07161003a ತತೋ ದ್ವೈಧೀಕೃತೇ ಸೈನ್ಯೇ ದ್ರೋಣಃ ಸೋಮಕಪಾಂಡವಾನ್।
07161003c ಅಭ್ಯದ್ರವತ್ಸಪಾಂಚಾಲಾನ್ದುರ್ಯೋಧನಪುರೋಗಮಃ।।

ಅನಂತರ ಸೈನ್ಯವನ್ನು ಎರಡುಭಾಗಗಳನ್ನಾಗಿ ಮಾಡಿಕೊಂಡು ದ್ರೋಣ ಮತ್ತು ದುರ್ಯೋಧನರ ನೇತ್ರತ್ವದಲ್ಲಿ ಸೋಮಕ-ಪಾಂಡವರನ್ನು ಮತ್ತು ಪಾಂಚಾಲರನ್ನು ಆಕ್ರಮಣಿಸಿದರು.

07161004a ದ್ವೈಧೀಭೂತಾನ್ಕುರೂನ್ದೃಷ್ಟ್ವಾ ಮಾಧವೋಽರ್ಜುನಮಬ್ರವೀತ್।
07161004c ಸಪತ್ನಾನ್ಸವ್ಯತಃ ಕುರ್ಮಿ ಸವ್ಯಸಾಚಿನ್ನಿಮಾನ್ಕುರೂನ್।।

ಎರಡು ಭಾಗಗಳಾಗಿದ್ದ ಕುರುಗಳನ್ನು ನೋಡಿ ಮಾಧವನು ಅರ್ಜುನನಿಗೆ ಹೇಳಿದನು: “ಸವ್ಯಸಾಚೀ! ಬಾಂಧವರಾದ ಈ ಕುರುಗಳನ್ನು ನಿನ್ನ ಎಡಭಾಗದಲ್ಲಿರಿಸಿಕೊಂಡು ಹೋಗೋಣ!”

07161005a ಸ ಮಾಧವಮನುಜ್ಞಾಯ ಕುರುಷ್ವೇತಿ ಧನಂಜಯಃ।
07161005c ದ್ರೋಣಕರ್ಣೌ ಮಹೇಷ್ವಾಸೌ ಸವ್ಯತಃ ಪರ್ಯವರ್ತತ।।

ಹಾಗೆಯೇ ಆಗಲೆಂದು ಮಾಧವನಿಗೆ ಅನುಮತಿಯನ್ನಿತ್ತ ನಂತರ ಧನಂಜಯನು ಮಹೇಷ್ವಾಸ ದ್ರೋಣ-ಕರ್ಣರನ್ನು ಅವರ ಎಡಭಾಗದಿಂದ ಪ್ರದಕ್ಷಿಣೆ ಮಾಡಿದನು.

07161006a ಅಭಿಪ್ರಾಯಂ ತು ಕೃಷ್ಣಸ್ಯ ಜ್ಞಾತ್ವಾ ಪರಪುರಂಜಯಃ।
07161006c ಆಜಿಶೀರ್ಷಗತಂ ದೃಷ್ಟ್ವಾ ಭೀಮಸೇನಂ ಸಮಾಸದತ್।।

ಕೃಷ್ಣನ ಅಭಿಪ್ರಾಯವೇನೆಂದು ತಿಳಿದ ಪರಪುರಂಜಯ ಅರ್ಜುನನು ಸೇನೆಯ ಅಗ್ರಭಾಗದಲ್ಲಿದ್ದ ಭೀಮಸೇನನನ್ನು ನೋಡಿ ಅವನನ್ನು ಸೇರಿಕೊಂಡನು.

07161007 ಭೀಮ ಉವಾಚ।
07161007a ಅರ್ಜುನಾರ್ಜುನ ಬೀಭತ್ಸೋ ಶೃಣು ಮೇ ತತ್ತ್ವತೋ ವಚಃ।
07161007c ಯದರ್ಥಂ ಕ್ಷತ್ರಿಯಾ ಸೂತೇ ತಸ್ಯ ಕಾಲೋಽಯಮಾಗತಃ।।

ಭೀಮನು ಹೇಳಿದನು: “ಅರ್ಜುನ! ಅರ್ಜುನ! ಬೀಭತ್ಸು! ನಾನು ಹೇಳುವುದನ್ನು ಕೇಳು! ಯಾವುದಕ್ಕಾಗಿ ಕ್ಷತ್ರಿಯರಾಗಿ ಹುಟ್ಟಿದೆವೋ ಅದರ ಕಾಲವು ಬಂದೊದಗಿದೆ!

07161008a ಅಸ್ಮಿಂಶ್ಚೇದಾಗತೇ ಕಾಲೇ ಶ್ರೇಯೋ ನ ಪ್ರತಿಪತ್ಸ್ಯಸೇ।
07161008c ಅಸಂಭಾವಿತರೂಪಃ ಸನ್ನನೃಶಂಸ್ಯಂ ಕರಿಷ್ಯಸಿ।।

ಈ ಸಮಯದಲ್ಲಿ ಕೂಡ ಶ್ರೇಯಸ್ಸನ್ನು ಪಡೆಯದೇ ಇದ್ದರೆ ಅಸಂಭಾವಿತನಂತಾಗುವೆ. ನಮಗೆ ಅತಿ ಕಠೋರವಾದುದನ್ನು ಮಾಡುವೆ!

07161009a ಸತ್ಯಶ್ರೀಧರ್ಮಯಶಸಾಂ ವೀರ್ಯೇಣಾನೃಣ್ಯಮಾಪ್ನುಹಿ।
07161009c ಭಿಂಧ್ಯನೀಕಂ ಯುಧಾಂ ಶ್ರೇಷ್ಠ ಸವ್ಯಸಾಚಿನ್ನಿಮಾನ್ಕುರು।।

ಸವ್ಯಸಾಚೀ! ಯೋಧರಲ್ಲಿ ಶ್ರೇಷ್ಠ! ನಿನ್ನ ವೀರ್ಯದಿಂದ ಸತ್ಯ, ಸಂಪತ್ತು, ಧರ್ಮ ಮತ್ತು ಯಶಸ್ಸುಗಳ ಋಣವನ್ನು ತೀರಿಸು! ಈ ಸೇನೆಗಳನ್ನು ಭೇದಿಸು!””

07161010 ಸಂಜಯ ಉವಾಚ।
07161010a ಸ ಸವ್ಯಸಾಚೀ ಭೀಮೇನ ಚೋದಿತಃ ಕೇಶವೇನ ಚ।
07161010c ಕರ್ಣದ್ರೋಣಾವತಿಕ್ರಮ್ಯ ಸಮಂತಾತ್ಪರ್ಯವಾರಯತ್।।

ಸಂಜಯನು ಹೇಳಿದನು: “ಭೀಮನಿಂದ ಮತ್ತು ಕೇಶವನಿಂದ ಪ್ರಚೋದಿತನಾದ ಸವ್ಯಸಾಚಿಯು ಕರ್ಣ-ದ್ರೋಣರನ್ನು ನಾಲ್ಕೂ ಕಡೆಗಳಿಂದ ಮುತ್ತಿಗೆಹಾಕಿ ಆಕ್ರಮಣಿಸಿದನು.

07161011a ತಮಾಜಿಶೀರ್ಷಮಾಯಾಂತಂ ದಹಂತಂ ಕ್ಷತ್ರಿಯರ್ಷಭಾನ್।
07161011c ಪರಾಕ್ರಾಂತಂ ಪರಾಕ್ರಮ್ಯ ಯತಂತಃ ಕ್ಷತ್ರಿಯರ್ಷಭಾಃ।
07161011e ನಾಶಕ್ನುವನ್ವಾರಯಿತುಂ ವರ್ಧಮಾನಮಿವಾನಲಂ।।

ರಣಾಂಗಣದ ಅಗ್ರಭಾಗದಿಂದ ಬಂದು ಕ್ಷತ್ರಿಯರ್ಷಭರನ್ನು ಉರಿಯುವ ಅಗ್ನಿಯಂತೆ ದಹಿಸುತ್ತಿದ್ದ ಆ ಪರಾಕ್ರಮಿ ಪರಾಕ್ರಾಂತನನ್ನು ಕ್ಷತ್ರಿಯರ್ಷಭರು ಪ್ರಯತ್ನಪಟ್ಟರೂ ತಡೆಯಲು ಶಕ್ಯರಾಗಲಿಲ್ಲ.

07161012a ಅಥ ದುರ್ಯೋಧನಃ ಕರ್ಣಃ ಶಕುನಿಶ್ಚಾಪಿ ಸೌಬಲಃ।
07161012c ಅಭ್ಯವರ್ಷಂ ಶರವ್ರಾತೈಃ ಕುಂತೀಪುತ್ರಂ ಧನಂಜಯಂ।।

ಆಗ ದುರ್ಯೋಧನ, ಕರ್ಣ ಮತ್ತು ಸೌಬಲ ಶಕುನಿಯರು ಕುಂತೀಪುತ್ರ ಧನಂಜಯನ ಮೇಲೆ ಶರವ್ರಾತಗಳನ್ನು ಸುರಿಸಿದರು.

07161013a ತೇಷಾಮಸ್ತ್ರಾಣಿ ಸರ್ವೇಷಾಮುತ್ತಮಾಸ್ತ್ರವಿದಾಂ ವರಃ।
07161013c ಕದರ್ಥೀಕೃತ್ಯ ರಾಜೇಂದ್ರ ಶರವರ್ಷೈರವಾಕಿರತ್।।

ರಾಜೇಂದ್ರ! ಅವರ ಎಲ್ಲ ಅಸ್ತ್ರಗಳನ್ನೂ ಲೆಕ್ಕಿಸದೇ ಉತ್ತಮ ಅಸ್ತ್ರವಿದ ಅರ್ಜುನನು ಅವರನ್ನು ಶರಗಳಿಂದ ಮುಚ್ಚಿಬಿಟ್ಟನು.

07161014a ಅಸ್ತ್ರೈರಸ್ತ್ರಾಣಿ ಸಂವಾರ್ಯ ಲಘುಹಸ್ತೋ ಧನಂಜಯಃ।
07161014c ಸರ್ವಾನವಿಧ್ಯನ್ನಿಶಿತೈರ್ದಶಭಿರ್ದಶಭಿಃ ಶರೈಃ।।

ಲಘುಹಸ್ತ ಧನಂಜಯನು ಅಸ್ತ್ರಗಳಿಂದ ಅಸ್ತ್ರಗಳನ್ನು ನಿರಸನಗೊಳಿಸಿ ಅವರೆಲ್ಲರನ್ನೂ ಹತ್ತು ಹತ್ತು ನಿಶಿತ ಶರಗಳಿಂದ ಹೊಡೆದು ಗಾಯಗೊಳಿಸಿದನು.

07161015a ಉದ್ಧೂತಾ ರಜಸೋ ವೃಷ್ಟಿಃ ಶರವೃಷ್ಟಿಸ್ತಥೈವ ಚ।
07161015c ತಮಶ್ಚ ಘೋರಂ ಶಬ್ದಶ್ಚ ತದಾ ಸಮಭವನ್ಮಹಾನ್।।

ಆಗ ಧೂಳಿನ ರಾಶಿಯು ಮೇಲೆದ್ದು ಶರವೃಷ್ಟಿಯೊಂದಿಗೆ ಸುರಿಯತೊಡಗಲು ಘೋರ ಕತ್ತಲೆಯೂ ಮಹಾ ಶಬ್ಧವೂ ಆವರಿಸಿತು.

07161016a ನ ದ್ಯೌರ್ನ ಭೂಮಿರ್ನ ದಿಶಃ ಪ್ರಾಜ್ಞಾಯಂತ ತಥಾ ಗತೇ।
07161016c ಸೈನ್ಯೇನ ರಜಸಾ ಮೂಢಂ ಸರ್ವಮಂಧಮಿವಾಭವತ್।।

ಆಕಾಶ-ಭೂಮಿ-ದಿಕ್ಕುಗಳು ಎಲ್ಲಿವೆಯೆನ್ನುವುದೇ ತಿಳಿಯುತ್ತಿರಲಿಲ್ಲ. ಸೈನ್ಯಗಳಿಂದ ಮೇಲೆದ್ದ ಧೂಳಿನಿಂದ ಅಚ್ಛಾದಿತವಾಗಿ ಎಲ್ಲವೂ ಅಂಧಕಾರಮಯವಾಗಿಯೇ ಕಾಣಿಸುತ್ತಿತ್ತು.

07161017a ನೈವ ತೇ ನ ವಯಂ ರಾಜನ್ಪ್ರಜ್ಞಾಸಿಷ್ಮ ಪರಸ್ಪರಂ।
07161017c ಉದ್ದೇಶೇನ ಹಿ ತೇನ ಸ್ಮ ಸಮಯುಧ್ಯಂತ ಪಾರ್ಥಿವಾಃ।।

ರಾಜನ್! ನಾವಾಗಲೀ ಅವರಾಗಲೀ ಯಾರು ಯಾರೆಂದು ಪರಸ್ಪರರನ್ನು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ಅವರ್ಯಾರು ನಾವ್ಯಾರು ಎಂದು ಹೇಳಿಕೊಂಡೇ ಪಾರ್ಥಿವರು ಯುದ್ಧಮಾಡುತ್ತಿದ್ದರು.

07161018a ವಿರಥಾ ರಥಿನೋ ರಾಜನ್ಸಮಾಸಾದ್ಯ ಪರಸ್ಪರಂ।
07161018c ಕೇಷೇಶು ಸಮಸಜ್ಜಂತ ಕವಚೇಷು ಭುಜೇಷು ಚ।।

ರಾಜನ್! ವಿರಥ ರಥಿಗಳು ಪರಸ್ಪರರ ಬಳಿಸಾರಿ ಜುಟ್ಟನ್ನೂ, ಕವಚಗಳನ್ನೂ, ಭುಜಗಳನ್ನೂ ಹಿಡಿದು ಯುದ್ಧಮಾಡುತ್ತಿದ್ದರು.

07161019a ಹತಾಶ್ವಾ ಹತಸೂತಾಶ್ಚ ನಿಶ್ಚೇಷ್ಟಾ ರಥಿನಸ್ತದಾ।
07161019c ಜೀವಂತ ಇವ ತತ್ರ ಸ್ಮ ವ್ಯದೃಶ್ಯಂತ ಭಯಾರ್ದಿತಾಃ।।

ಹತಾಶ್ವ ಹತಸಾರಥಿ ರಥಿಗಳು ಹತರಾಗಿದ್ದರೂ ಭಯಾರ್ದಿತರಾಗಿ ಜೀವಂತವಿರುವಂತೆಯೇ ಕಾಣುತ್ತಿದ್ದರು.

07161020a ಹತಾನ್ಗಜಾನ್ಸಮಾಶ್ಲಿಷ್ಯ ಪರ್ವತಾನಿವ ವಾಜಿನಃ।
07161020c ಗತಸತ್ತ್ವಾ ವ್ಯದೃಶ್ಯಂತ ತಥೈವ ಸಹ ಸಾದಿಭಿಃ।।

ತೀರಿಕೊಂಡ ಕುದುರೆಗಳು ಕುದುರೆಸವಾರರೊಂದಿಗೆ ಸತ್ತುಹೋಗಿರುವ ಪರ್ವತಗಳಂತಿದ್ದ ಆನೆಗಳನ್ನು ಅಪ್ಪಿಕೊಂಡಿರುವವೋ ಎನ್ನುವಂತೆ ತೋರುತ್ತಿದ್ದವು.

07161021a ತತಸ್ತ್ವಭ್ಯವಸೃತ್ಯೈವ ಸಂಗ್ರಾಮಾದುತ್ತರಾಂ ದಿಶಂ।
07161021c ಅತಿಷ್ಠದಾಹವೇ ದ್ರೋಣೋ ವಿಧೂಮ ಇವ ಪಾವಕಃ।।

ಅನಂತರ ದ್ರೋಣನು ಸಂಗ್ರಾಮದ ಉತ್ತರ ದಿಕ್ಕಿಗೆ ಹೋಗಿ ಅಲ್ಲಿ ಹೊಗೆಯಿಲ್ಲದ ಅಗ್ನಿಯಂತೆ ಪ್ರಜ್ವಲಿಸುತ್ತಾ ಯುದ್ಧಕ್ಕೆ ಅಣಿಯಾಗಿ ನಿಂತನು.

07161022a ತಮಾಜಿಶೀರ್ಷಾದೇಕಾಂತಮಪಕ್ರಾಂತಂ ನಿಶಾಮ್ಯ ತು।।
07161022c ಸಮಕಂಪಂತ ಸೈನ್ಯಾನಿ ಪಾಂಡವಾನಾಂ ವಿಶಾಂ ಪತೇ।

ವಿಶಾಂಪತೇ! ದ್ರೋಣನು ರಣಾಂಗಣದ ಒಂದುಕಡೆ ಬಂದು ನಿಂತಿರುವುದನ್ನು ನೋಡಿ ಪಾಂಡವರ ಸೇನೆಯು ಭಯದಿಂದ ತತ್ತರಿಸಿತು.

07161023a ಭ್ರಾಜಮಾನಂ ಶ್ರಿಯಾ ಯುಕ್ತಂ ಜ್ವಲಂತಮಿವ ತೇಜಸಾ।।
07161023c ದ್ರೋಣಂ ದೃಷ್ಟ್ವಾರಯಸ್ತ್ರೇಸುಶ್ಚೇಲುರ್ಮಂಲುಶ್ಚ ಮಾರಿಷ।

ಮಾರಿಷ! ತೇಜಸ್ಸಿನಿಂದ ಬೆಳಗುತ್ತಿದ್ದ, ಕಳೆಯಿಂದ ತುಂಬಿಕೊಂಡು ಹೊಳೆಯುತ್ತಿದ್ದ ದ್ರೋಣನನ್ನು ನೋಡಿ ಅವರು ಭಯದಿಂದ ನಡುಗಿದರು, ಪಲಾಯನಗೈದರು ಮತ್ತು ಕಳೆಗುಂದಿದರು.

07161024a ಆಹ್ವಯಂತಂ ಪರಾನೀಕಂ ಪ್ರಭಿನ್ನಮಿವ ವಾರಣಂ।।
07161024c ನೈನಂ ಶಶಂಸಿರೇ ಜೇತುಂ ದಾನವಾ ವಾಸವಂ ಯಥಾ।

ಮದೋದಕವನ್ನು ಸುರಿಸುವ ಸಲಗದಂತೆ ಶತ್ರುಸೇನೆಯನ್ನು ಅಹ್ವಾನಿಸುತ್ತಿದ್ದ ಅವನನ್ನು ದಾನವರು ವಾಸವನನ್ನು ಹೇಗೋ ಹಾಗೆ ಜಯಿಸಲು ಇಚ್ಛಿಸಲಿಲ್ಲ.

07161025a ಕೇ ಚಿದಾಸನ್ನಿರುತ್ಸಾಹಾಃ ಕೇ ಚಿತ್ಕ್ರುದ್ಧಾ ಮನಸ್ವಿನಃ।।
07161025c ವಿಸ್ಮಿತಾಶ್ಚಾಭವನ್ಕೇ ಚಿತ್ಕೇ ಚಿದಾಸನ್ನಮರ್ಷಿತಾಃ।

ಕೆಲವರು ನಿರುತ್ಸಾಹಿಗಳಾದರು. ಕೆಲವು ಅಭಿಮಾನಿಗಳು ಕ್ರುದ್ಧರಾದರು. ಕೆಲವರು ವಿಸ್ಮಿತರಾದರು. ಇನ್ನು ಕೆಲವರು ಸಹನೆಯನ್ನು ಕಳೆದುಕೊಂಡರು.

07161026a ಹಸ್ತೈರ್ಹಸ್ತಾಗ್ರಮಪರೇ ಪ್ರತ್ಯಪಿಂಷನ್ನರಾಧಿಪಾಃ।।
07161026c ಅಪರೇ ದಶನೈರೋಷ್ಠಾನದಶನ್ಕ್ರೋಧಮೂರ್ಚಿತಾಃ।

ಕೆಲವು ನರಾಧಿಪರು ಕೈಗಳನ್ನು ಕೈತುದಿಗಳಿಂದ ಉಜ್ಜಿಕೊಂಡರು. ಇನ್ನು ಕೆಲವರು ಕ್ರೋಧಮೂರ್ಚಿತರಾಗಿ ಹಲ್ಲುಗಳಿಂದ ತುಟಿಗಳನ್ನು ಕಚ್ಚಿಕೊಂಡರು.

07161027a ವ್ಯಾಕ್ಷಿಪನ್ನಾಯುಧಾನನ್ಯೇ ಮಮೃದುಶ್ಚಾಪರೇ ಭುಜಾನ್।।
07161027c ಅನ್ಯೇ ಚಾನ್ವಪತನ್ದ್ರೋಣಂ ತ್ಯಕ್ತಾತ್ಮಾನೋ ಮಹೌಜಸಃ।

ಕೆಲವರು ತಮ್ಮ ಆಯುಧಗಳನ್ನು ಗರಗರನೆ ತಿರುಗಿಸಿ ದ್ರೋಣನ ಮೇಲೆ ಎಸೆಯುತ್ತಿದ್ದರು. ಮತ್ತೆ ಕೆಲವರು ತಮ್ಮ ಭುಜಗಳನ್ನು ತಟ್ಟಿಕೊಳ್ಳುತ್ತಿದ್ದರು. ಇನ್ನು ಕೆಲವು ಮಹೌಜಸರು ತಮ್ಮ ಜೀವವನ್ನೇ ತೊರೆದು ದ್ರೋಣನನ್ನು ಆಕ್ರಮಣಿಸಿದರು.

07161028a ಪಾಂಚಾಲಾಸ್ತು ವಿಶೇಷೇಣ ದ್ರೋಣಸಾಯಕಪೀಡಿತಾಃ।।
07161028c ಸಮಸಜ್ಜಂತ ರಾಜೇಂದ್ರ ಸಮರೇ ಭೃಶವೇದನಾಃ।

ರಾಜೇಂದ್ರ! ವಿಶೇಷವಾಗಿ ಪಾಂಚಾಲರು ದ್ರೋಣನ ಸಾಯಕಗಳಿಂದ ಪೀಡಿತರಾಗಿದ್ದರೂ ತುಂಬಾ ವೇದನೆಯಿಂದಲೂ ಸಮರದಲ್ಲಿ ಯುದ್ಧಮಾಡುತ್ತಿದ್ದರು.

07161029a ತತೋ ವಿರಾಟದ್ರುಪದೌ ದ್ರೋಣಂ ಪ್ರತಿಯಯೂ ರಣೇ।।
07161029c ತಥಾ ಚರಂತಂ ಸಂಗ್ರಾಮೇ ಭೃಶಂ ಸಮರದುರ್ಜಯಂ।

ಆಗ ರಣದಲ್ಲಿ ಹಾಗೆ ಸುತ್ತುತ್ತಿದ್ದ ಸಮರದುರ್ಜಯ ದ್ರೋಣನನ್ನು ವಿರಾಟ-ದ್ರುಪದರು ಸಂಗ್ರಾಮದಲ್ಲಿ ಎದುರಿಸಿದರು.

07161030a ದ್ರುಪದಸ್ಯ ತತಃ ಪೌತ್ರಾಸ್ತ್ರಯ ಏವ ವಿಶಾಂ ಪತೇ।।
07161030c ಚೇದಯಶ್ಚ ಮಹೇಷ್ವಾಸಾ ದ್ರೋಣಮೇವಾಭ್ಯಯುರ್ಯುಧಿ।

ವಿಶಾಂಪತೇ! ಆಗ ದ್ರುಪದನ ಮೂರು ಮೊಮ್ಮಕ್ಕಳೂ ಮಹೇಷ್ವಾಸ ಚೇದಿಗಳೂ ದ್ರೋಣನನ್ನು ಯುದ್ಧದಲ್ಲಿ ಎದುರಿಸಿದರು.

07161031a ತೇಷಾಂ ದ್ರುಪದಪೌತ್ರಾಣಾಂ ತ್ರಯಾಣಾಂ ನಿಶಿತೈಃ ಶರೈಃ।।
07161031c ತ್ರಿಭಿರ್ದ್ರೋಣೋಽಹರತ್ಪ್ರಾಣಾಂಸ್ತೇ ಹತಾ ನ್ಯಪತನ್ಭುವಿ।

ಮೂರು ನಿಶಿತ ಶರಗಳಿಂದ ದ್ರೋಣನು ದ್ರುಪದನ ಆ ಮೂವರು ಮೊಮ್ಮಕ್ಕಳ ಪ್ರಾಣಗಳನ್ನು ಅಪಹರಿಸಿ ಭೂಮಿಯ ಮೇಲೆ ಕೆಡವಿದನು.

07161032a ತತೋ ದ್ರೋಣೋಽಜಯದ್ಯುದ್ಧೇ ಚೇದಿಕೇಕಯಸೃಂಜಯಾನ್।।
07161032c ಮತ್ಸ್ಯಾಂಶ್ಚೈವಾಜಯತ್ಸರ್ವಾನ್ಭಾರದ್ವಾಜೋ ಮಹಾರಥಃ।

ಆಗ ಮಹಾರಥ ಭಾರದ್ವಾಜ ದ್ರೋಣನು ಚೇದಿ-ಕೇಕಯ-ಸೃಂಜಯರನ್ನು ಗೆದ್ದು ಎಲ್ಲ ಮತ್ಸ್ಯರನ್ನೂ ಜಯಿಸಿದನು.

07161033a ತತಸ್ತು ದ್ರುಪದಃ ಕ್ರೋಧಾಚ್ಚರವರ್ಷಮವಾಕಿರತ್।।
07161033c ದ್ರೋಣಂ ಪ್ರತಿ ಮಹಾರಾಜ ವಿರಾಟಶ್ಚೈವ ಸಮ್ಯುಗೇ।

ಮಹಾರಾಜ! ಆಗ ಕ್ರೋಧದಿಂದ ಯುದ್ಧದಲ್ಲಿ ದ್ರುಪದ ಮತ್ತು ವಿರಾಟರೂ ಕೂಡ ದ್ರೋಣನ ಮೇಲೆ ಶರವರ್ಷವನ್ನು ಸುರಿಸಿದರು.

07161034a ತತೋ ದ್ರೋಣಃ ಸುಪೀತಾಭ್ಯಾಂ ಭಲ್ಲಾಭ್ಯಾಮರಿಮರ್ದನಃ।।
07161034c ದ್ರುಪದಂ ಚ ವಿರಾಟಂ ಚ ಪ್ರೈಷೀದ್ವೈವಸ್ವತಕ್ಷಯಂ।

ಆಗ ಅರಿಮರ್ದನ ದ್ರೋಣನು ಚೂಪಾಗಿದ್ದ ಭಲ್ಲಗಳೆರಡರಿಂದ ದ್ರುಪದ-ವಿರಾಟ ಇಬ್ಬರನ್ನೂ ವೈವಸ್ವತಕ್ಷಯಕ್ಕೆ ಕಳುಹಿಸಿದನು.

07161035a ಹತೇ ವಿರಾಟೇ ದ್ರುಪದೇ ಕೇಕಯೇಷು ತಥೈವ ಚ।।
07161035c ತಥೈವ ಚೇದಿಮತ್ಸ್ಯೇಷು ಪಾಂಚಾಲೇಷು ತಥೈವ ಚ।
07161035e ಹತೇಷು ತ್ರಿಷು ವೀರೇಷು ದ್ರುಪದಸ್ಯ ಚ ನಪ್ತೃಷು।।
07161036a ದ್ರೋಣಸ್ಯ ಕರ್ಮ ತದ್ದೃಷ್ಟ್ವಾ ಕೋಪದುಃಖಸಮನ್ವಿತಃ।
07161036c ಶಶಾಪ ರಥಿನಾಂ ಮಧ್ಯೇ ಧೃಷ್ಟದ್ಯುಮ್ನೋ ಮಹಾಮನಾಃ।।

ವಿರಾಟ-ದ್ರುಪದರೂ ಹಾಗೆಯೇ ಕೇಕಯರೂ, ಹಾಗೆಯೇ ಚೇದಿ-ಮತ್ಸ್ಯರು ಮತ್ತು ಪಾಂಚಾಲರು ಹತರಾಗಲು, ದ್ರುಪದನ ಮೂವರು ವೀರ ಮೊಮ್ಮಕ್ಕಳು ಹತರಾಗಲು, ದ್ರೋಣನ ಆ ಕರ್ಮವನ್ನು ನೋಡಿ ಕೋಪ-ದುಃಖಸಮನ್ವಿತ ಮಹಾಮನಸ್ವಿ ಧೃಷ್ಟದ್ಯುಮ್ನನು ರಥಿಗಳ ಮಧ್ಯದಲ್ಲಿ ಶಪಥಮಾಡಿದನು:

07161037a ಇಷ್ಟಾಪೂರ್ತಾತ್ತಥಾ ಕ್ಷಾತ್ರಾದ್ಬ್ರಾಹ್ಮಣ್ಯಾಚ್ಚ ಸ ನಶ್ಯತು।
07161037c ದ್ರೋಣೋ ಯಸ್ಯಾದ್ಯ ಮುಚ್ಯೇತ ಯೋ ವಾ ದ್ರೋಣಾತ್ಪರಾಙ್ಮುಖಃ।।

“ಇಂದಿನ ಯುದ್ಧದಲ್ಲಿ ಯಾರಕೈಯಿಂದ ದ್ರೋಣನು ತಪ್ಪಿಸಿಕೊಂಡು ಹೋಗುವನೋ ಅಥವಾ ಯಾರು ದ್ರೋಣನಿಂದ ಪರಾಙ್ಮುಖನಾಗಿ ಹೋಗುವನೋ ಅವನ ಇಷ್ಟಾಪೂರ್ತಗಳು ನಾಶವಾಗಿ ಕ್ಷಾತ್ರಧರ್ಮದಿಂದಲೂ ಬ್ರಾಹ್ಮಣಧರ್ಮದಿಂದಲೂ ಭ್ರಷ್ಟನಾಗಿಹೋಗಲಿ!”

07161038a ಇತಿ ತೇಷಾಂ ಪ್ರತಿಶ್ರುತ್ಯ ಮಧ್ಯೇ ಸರ್ವಧನುಷ್ಮತಾಂ।
07161038c ಆಯಾದ್ದ್ರೋಣಂ ಸಹಾನೀಕಃ ಪಾಂಚಾಲ್ಯಃ ಪರವೀರಹಾ।
07161038e ಪಾಂಚಾಲಾಸ್ತ್ವೇಕತೋ ದ್ರೋಣಮಭ್ಯಘ್ನನ್ಪಾಂಡವಾನ್ಯತಃ।।

ಹೀಗೆ ಸರ್ವಧನುಷ್ಮತರ ಮಧ್ಯೆ ಪ್ರತಿಜ್ಞೆಮಾಡಿ ಪರವೀರಹ ಪಾಂಚಾಲ್ಯನು ಸೇನಾಸಮೇತನಾಗಿ ದ್ರೋಣನನ್ನು ಆಕ್ರಮಣಿಸಿದನು. ಇನ್ನೊಂದು ಕಡೆ ಪಾಂಚಾಲರು ಪಾಂಡವರೊಂದಿಗೆ ಸೇರಿಕೊಂಡು ದ್ರೋಣನನ್ನು ಪ್ರಹರಿಸುತ್ತಿದ್ದರು.

07161039a ದುರ್ಯೋಧನಶ್ಚ ಕರ್ಣಶ್ಚ ಶಕುನಿಶ್ಚಾಪಿ ಸೌಬಲಃ।
07161039c ಸೋದರ್ಯಾಶ್ಚ ಯಥಾ ಮುಖ್ಯಾಸ್ತೇಽರಕ್ಷನ್ದ್ರೋಣಮಾಹವೇ।।

ದುರ್ಯೋಧನ, ಕರ್ಣ, ಸೌಬಲ ಶಕುನಿ ಮತ್ತು ಇತರ ಮುಖ್ಯ ಸಹೋದರರು ಯುದ್ಧದಲ್ಲಿ ದ್ರೋಣನನ್ನು ರಕ್ಷಿಸುತ್ತಿದ್ದರು.

07161040a ರಕ್ಷ್ಯಮಾಣಂ ತಥಾ ದ್ರೋಣಂ ಸಮರೇ ತೈರ್ಮಹಾತ್ಮಭಿಃ।
07161040c ಯತಮಾನಾಪಿ ಪಾಂಚಾಲಾ ನ ಶೇಕುಃ ಪ್ರತಿವೀಕ್ಷಿತುಂ।।

ಹಾಗೆ ಸಮರದಲ್ಲಿ ನಿನ್ನವರಾದ ಮಹಾತ್ಮರಿಂದ ದ್ರೋಣನು ರಕ್ಷಿಸಲ್ಪಡುತ್ತಿರಲು ಪ್ರಯತ್ನಪಡುತ್ತಿದ್ದರೂ ಪಾಂಚಾಲರು ಅವನನ್ನು ನೋಡಲೂ ಕೂಡ ಶಕ್ಯರಾಗುತ್ತಿರಲಿಲ್ಲ.

07161041a ತತ್ರಾಕ್ರುಧ್ಯದ್ಭೀಮಸೇನೋ ಧೃಷ್ಟದ್ಯುಮ್ನಸ್ಯ ಮಾರಿಷ।
07161041c ಸ ಏನಂ ವಾಗ್ಭಿರುಗ್ರಾಭಿಸ್ತತಕ್ಷ ಪುರುಷರ್ಷಭ।।

ಆಗ ಮಾರಿಷ! ಧೃಷ್ಟದ್ಯುಮ್ನನ ಮೇಲೆ ಕ್ರುದ್ಧನಾಗಿ ಪುರುಷರ್ಷಭ ಭೀಮಸೇನನು ಈ ಉಗ್ರವಾದ ಮಾತುಗಳಿಂದ ಅವನನ್ನು ಚುಚ್ಚಿದನು:

07161042a ದ್ರುಪದಸ್ಯ ಕುಲೇ ಜಾತಃ ಸರ್ವಾಸ್ತ್ರೇಷ್ವಸ್ತ್ರವಿತ್ತಮಃ।
07161042c ಕಃ ಕ್ಷತ್ರಿಯೋ ಮನ್ಯಮಾನಃ ಪ್ರೇಕ್ಷೇತಾರಿಮವಸ್ಥಿತಂ।।

“ದ್ರುಪದನ ಕುಲದಲ್ಲಿ ಹುಟ್ಟಿರುವ ನೀನು ಸರ್ವ ಅಸ್ತ್ರಶಸ್ತ್ರಗಳಲ್ಲಿ ವಿತ್ತಮನಾಗಿರುವೆ. ಆದರೆ ಸ್ವಾಭಿಮಾನಿಯಾದ ಯಾವ ಕ್ಷತ್ರಿಯನು ನಿನ್ನಂತೆ ಶತ್ರುವು ಕಣ್ಣೆದುರಿರುವಾಗಲೇ ನೋಡುತ್ತಾ ನಿಂತಿರುತ್ತಾನೆ?

07161043a ಪಿತೃಪುತ್ರವಧಂ ಪ್ರಾಪ್ಯ ಪುಮಾನ್ಕಃ ಪರಿಹಾಪಯೇತ್।
07161043c ವಿಶೇಷತಸ್ತು ಶಪಥಂ ಶಪಿತ್ವಾ ರಾಜಸಂಸದಿ।।

ಅದರಲ್ಲೂ ವಿಶೇಷವಾಗಿ ಕಣ್ಣೆದುರಿನಲ್ಲಿಯೇ ಪಿತ-ಪುತ್ರರವಧೆಯನ್ನು ಕಂಡ ಯಾವ ಮನುಷ್ಯನು, ರಾಜಸಂಸದಿಯಲ್ಲಿ ಶಪಥಮಾಡಿದವನು, ಸುಮ್ಮನಿದ್ದಾನು?

07161044a ಏಷ ವೈಶ್ವಾನರ ಇವ ಸಮಿದ್ಧಃ ಸ್ವೇನ ತೇಜಸಾ।
07161044c ಶರಚಾಪೇಂಧನೋ ದ್ರೋಣಃ ಕ್ಷತ್ರಂ ದಹತಿ ತೇಜಸಾ।।

ಶರಚಾಪಗಳನ್ನೇ ಇಂಧನವನ್ನಾಗಿಸಿಕೊಂಡು ತನ್ನದೇ ತೇಜಸ್ಸಿನಿಂದ ವೈಶ್ವಾನರನಂತೆ ಪ್ರಜ್ವಲಿಸುತ್ತಿರುವ ದ್ರೋಣನು ತೇಜಸ್ಸಿನಿಂದ ಕ್ಷತ್ರಿಯರನ್ನು ದಹಿಸುತ್ತಿದ್ದಾನೆ.

07161045a ಪುರಾ ಕರೋತಿ ನಿಃಶೇಷಾಂ ಪಾಂಡವಾನಾಮನೀಕಿನೀಂ।
07161045c ಸ್ಥಿತಾಃ ಪಶ್ಯತ ಮೇ ಕರ್ಮ ದ್ರೋಣಮೇವ ವ್ರಜಾಮ್ಯಹಂ।।

ಪಾಂಡವರ ಸೇನೆಯನ್ನು ಇವನು ನಿಃಶೇಷವನ್ನಾಗಿ ಮಾಡುವ ಮೊದಲೇ ಈ ದ್ರೋಣನನ್ನು ಆಕ್ರಮಿಸುತ್ತೇನೆ. ನಿಂತು ನನ್ನ ಈ ಕರ್ಮವನ್ನು ನೋಡು!”

07161046a ಇತ್ಯುಕ್ತ್ವಾ ಪ್ರಾವಿಶತ್ಕೃದ್ಧೋ ದ್ರೋಣಾನೀಕಂ ವೃಕೋದರಃ।
07161046c ದೃಢೈಃ ಪೂರ್ಣಾಯತೋತ್ಸೃಷ್ಟೈರ್ದ್ರಾವಯಂಸ್ತವ ವಾಹಿನೀಂ।।

ಹೀಗೆ ಹೇಳಿ ಕ್ರುದ್ಧ ವೃಕೋದರನು ಪೂರ್ಣವಾಗಿ ಸೆಳೆದು ಬಿಡುತ್ತಿದ್ದ ಬಾಣಗಳಿಂದ ನಿನ್ನ ಸೇನೆಯನ್ನು ಓಡಿಸುತ್ತಾ ದ್ರೋಣನ ಸೇನೆಯನ್ನು ಪ್ರವೇಶಿಸಿದನು.

07161047a ಧೃಷ್ಟದ್ಯುಮ್ನೋಽಪಿ ಪಾಂಚಾಲ್ಯಃ ಪ್ರವಿಶ್ಯ ಮಹತೀಂ ಚಮೂಂ।
07161047c ಆಸಸಾದ ರಣೇ ದ್ರೋಣಂ ತದಾಸೀತ್ತುಮುಲಂ ಮಹತ್।।

ಪಾಂಚಾಲ್ಯ ಧೃಷ್ಟದ್ಯುಮ್ನನೂ ಕೂಡ ಆ ಮಹಾಸೇನೆಯನ್ನು ಪ್ರವೇಶಿಸಿ ರಣದಲ್ಲಿ ದ್ರೋಣನ ಬಳಿಹೋದನು. ಆಗ ಮಹಾ ತುಮುಲ ಯುದ್ಧವು ನಡೆಯಿತು.

07161048a ನೈವ ನಸ್ತಾದೃಶಂ ಯುದ್ಧಂ ದೃಷ್ಟಪೂರ್ವಂ ನ ಚ ಶ್ರುತಂ।
07161048c ಯಥಾ ಸೂರ್ಯೋದಯೇ ರಾಜನ್ಸಮುತ್ಪಿಂಜೋಽಭವನ್ಮಹಾನ್।।

ರಾಜನ್! ಆ ದಿನದ ಸೂರ್ಯೋದಯದಲ್ಲಿ ಅಂತಹ ದೊಡ್ಡದಾದ, ಹತ್ತಿಕೊಂಡು ನಡೆಯುತ್ತಿದ್ದ ಯುದ್ಧವನ್ನು ನಾವು ಹಿಂದೆ ನೋಡಿರಲಿಲ್ಲ, ಅದರ ಕುರಿತು ಕೇಳಿರಲಿಲ್ಲ.

07161049a ಸಂಸಕ್ತಾನಿ ವ್ಯದೃಶ್ಯಂತ ರಥವೃಂದಾನಿ ಮಾರಿಷ।
07161049c ಹತಾನಿ ಚ ವಿಕೀರ್ಣಾನಿ ಶರೀರಾಣಿ ಶರೀರಿಣಾಂ।।

ಮಾರಿಷ! ರಥದ ಗುಂಪುಗಳು ಒಂದಕ್ಕೊಂದು ತಾಗಿಕೊಂಡಿರುವಂತೆ ಕಾಣುತ್ತಿದ್ದವು. ಸತ್ತುಹೋಗಿದ್ದ ಸೈನಿಕರ ಶರೀರಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

07161050a ಕೇ ಚಿದನ್ಯತ್ರ ಗಚ್ಚಂತಃ ಪಥಿ ಚಾನ್ಯೈರುಪದ್ರುತಾಃ।
07161050c ವಿಮುಖಾಃ ಪೃಷ್ಠತಶ್ಚಾನ್ಯೇ ತಾಡ್ಯಂತೇ ಪಾರ್ಶ್ವತೋಽಪರೇ।।

ಬೇರೆಯೇ ಕಡೆ ಹೋಗುತ್ತಿದ್ದವರನ್ನು ದಾರಿಯಲ್ಲಿಯೇ ತಡೆದು ಕೊಳ್ಳುತ್ತಿದ್ದರು. ವಿಮುಖರಾಗಿ ಓಡಿ ಹೋಗುತ್ತಿದ್ದವರನ್ನೂ ಶತ್ರುಪಕ್ಷದವರು ಹಿಂದಿನಿಂದ ಹೊಡೆದು ಕೊಲ್ಲುತ್ತಿದ್ದರು.

07161051a ತಥಾ ಸಂಸಕ್ತಯುದ್ಧಂ ತದಭವದ್ಭೃಶದಾರುಣಂ।
07161051c ಅಥ ಸಂಧ್ಯಾಗತಃ ಸೂರ್ಯಃ ಕ್ಷಣೇನ ಸಮಪದ್ಯತ।।

ಹೀಗೆ ತುಂಬಾ ಪರಸ್ಪರ ತಾಗಿಕೊಂಡು ದಾರುಣ ಯುದ್ಧವು ನಡೆಯುತ್ತಿರಲು ಸ್ವಲ್ಪವೇ ಸಮಯದಲ್ಲಿ ಸೂರ್ಯನ ಪೂರ್ಣೋದಯವಾಯಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣವಧ ಪರ್ವಣಿ ಸಂಕುಲಯುದ್ಧೇ ಏಕಷಷ್ಟ್ಯಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣವಧ ಪರ್ವದಲ್ಲಿ ಸಂಕುಲಯುದ್ಧ ಎನ್ನುವ ನೂರಾಅರವತ್ತೊಂದನೇ ಅಧ್ಯಾಯವು.