ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ದ್ರೋಣವಧ ಪರ್ವ
ಅಧ್ಯಾಯ 160
ಸಾರ
“ನೀವು ಪಾಂಡವರೊಂದಿಗೆ ವಿಶೇಷ ಸಹನೆಯನ್ನು ತೋರಿಸುತ್ತಿದ್ದೀರಿ!” ಎಂದು ದುರ್ಯೋಧನನು ದ್ರೋಣನನ್ನು ನಿಂದಿಸಿದುದು (1-8). ಸರ್ವಪಾಂಚಾಲರನ್ನು ಸಂಹರಿಸಿದ ನಂತರವೇ ತನ್ನ ಕವಚವನ್ನು ಬಿಚ್ಚುತ್ತೇನೆಂದು ಹೇಳಿ ದ್ರೋಣನು ದುರ್ಯೋಧನನಿಗೆ ಅರ್ಜುನನ ಪರಾಕ್ರಮಗಳನ್ನು ವರ್ಣಿಸಿದುದು (9-20). ಕರ್ಣ-ದುಃಶಾಸನ-ಶಕುನಿಯರೊಡನೆ ಸೇರಿಕೊಂಡು ತಾನೇ ಅರ್ಜುನನನ್ನು ಸಂಹರಿಸುತ್ತೇನೆಂದು ದುರ್ಯೋಧನನು ಹೇಳಲು ದ್ರೋಣನು ವ್ಯಂಗ್ಯಮಾತುಗಳನ್ನಾಡಿ ಕಳುಹಿಸಿದುದು (21-37).
07160001 ಸಂಜಯ ಉವಾಚ।
07160001a ತತೋ ದುರ್ಯೋಧನೋ ದ್ರೋಣಮಭಿಗಮ್ಯೇದಮಬ್ರವೀತ್।
07160001c ಅಮರ್ಷವಶಮಾಪನ್ನೋ ಜನಯನ್ ಹರ್ಷತೇಜಸೀ।।
ಸಂಜಯನು ಹೇಳಿದನು: “ಅನಂತರ ಕ್ರೋಧಾವಿಷ್ಟ ದುರ್ಯೋಧನನು ದ್ರೋಣನ ಬಳಿಬಂದು ಹರ್ಷವನ್ನೂ ತೇಜಸ್ಸನ್ನೂ ಹುಟ್ಟಿಸುತ್ತಾ ಈ ಮಾತನ್ನಾಡಿದನು:
07160002a ನ ಮರ್ಷಣೀಯಾಃ ಸಂಗ್ರಾಮೇ ವಿಶ್ರಮಂತಃ ಶ್ರಮಾನ್ವಿತಾಃ।
07160002c ಸಪತ್ನಾ ಗ್ಲಾನಮನಸೋ ಲಬ್ಧಲಕ್ಷ್ಯಾ ವಿಶೇಷತಃ।।
“ಸಂಗ್ರಾಮದಲ್ಲಿ ಬಳಲಿ ವಿಶ್ರಮಿಸುತ್ತಿರುವ, ಉತ್ಸಾಹಹೀನರಾಗಿರುವವರ ಮೇಲೆ – ಅದರಲ್ಲೂ ವಿಶೇಷವಾಗಿ ಲಕ್ಷ್ಯವನ್ನು ಭೇದಿಸಬಲ್ಲ ಶತ್ರುಗಳ ಮೇಲೆ - ಕ್ಷಮೆಯನ್ನು ತೋರಿಸಲೇ ಬಾರದು.
07160003a ತತ್ತು ಮರ್ಷಿತಮಸ್ಮಾಭಿರ್ಭವತಃ ಪ್ರಿಯಕಾಮ್ಯಯಾ।
07160003c ತ ಏತೇ ಪರಿವಿಶ್ರಾಂತಾಃ ಪಾಂಡವಾ ಬಲವತ್ತರಾಃ।।
ನಿಮಗೆ ಪ್ರಿಯವಾದುದನ್ನು ಮಾಡಲೋಸುಗವೇ ನಾವು ಈಗ ತಾಳ್ಮೆಯಿಂದ ಇದ್ದೇವೆ. ನಿಶ್ಚಿಂತರಾಗಿ ವಿಶ್ರಾಂತಿಯನ್ನು ಪಡೆದ ಈ ಪಾಂಡವರು ಈಗ ಇನ್ನೂ ಹೆಚ್ಚಿನ ಬಲವುಳ್ಳವರಾಗಿದ್ದಾರೆ.
07160004a ಸರ್ವಥಾ ಪರಿಹೀನಾಃ ಸ್ಮ ತೇಜಸಾ ಚ ಬಲೇನ ಚ।
07160004c ಭವತಾ ಪಾಲ್ಯಮಾನಾಸ್ತೇ ವಿವರ್ಧಂತೇ ಪುನಃ ಪುನಃ।।
ನಾವಾದರೋ ತೇಜಸ್ಸು ಬಲಗಳಲ್ಲಿ ಸರ್ವಥಾ ಹೀನರಾಗುತ್ತಿದ್ದೇವೆ. ನಿಮ್ಮಿಂದ ಪರಿಪಾಲಿಸಲ್ಪಟ್ಟಿರುವ ಅವರು ಪುನಃ ಪುನಃ ವರ್ಧಿಸುತ್ತಲೇ ಇದ್ದಾರೆ.
07160005a ದಿವ್ಯಾನ್ಯಸ್ತ್ರಾಣಿ ಸರ್ವಾಣಿ ಬ್ರಹ್ಮಾಸ್ತ್ರಾದೀನಿ ಯಾನ್ಯಪಿ।
07160005c ತಾನಿ ಸರ್ವಾಣಿ ತಿಷ್ಠಂತಿ ಭವತ್ಯೇವ ವಿಶೇಷತಃ।।
ಬ್ರಹ್ಮಾಸ್ತ್ರವೇ ಮೊದಲಾದ ಎಲ್ಲ ದಿವ್ಯಾಸ್ತ್ರಗಳೂ ವಿಶೇಷವಾಗಿ ನಿಮ್ಮಲ್ಲಿಯೇ ಪ್ರತಿಷ್ಠಿತವಾಗಿವೆ.
07160006a ನ ಪಾಂಡವೇಯಾ ನ ವಯಂ ನಾನ್ಯೇ ಲೋಕೇ ಧನುರ್ಧರಾಃ।
07160006c ಯುಧ್ಯಮಾನಸ್ಯ ತೇ ತುಲ್ಯಾಃ ಸತ್ಯಮೇತದ್ಬ್ರವೀಮಿ ತೇ।।
ಪಾಂಡವರಾಗಲೀ, ನಾವಾಗಲೀ ಮತ್ತು ಲೋಕದಲ್ಲಿನ ಅನ್ಯ ಧನುರ್ಧರರಾಗಲೀ ಯುದ್ಧದಲ್ಲಿ ತೊಡಗಿರುವ ನಿಮಗೆ ಸಮಾನರಾಗುವುದಿಲ್ಲ. ನಿಮಗೆ ಈ ಮಾತನ್ನು ನಾನು ಸತ್ಯವಾಗಿ ಹೇಳುತ್ತಿದ್ದೇನೆ.
07160007a ಸಸುರಾಸುರಗಂಧರ್ವಾನಿಮಾಽಲ್ಲೋಕಾನ್ದ್ವಿಜೋತ್ತಮ।
07160007c ಸರ್ವಾಸ್ತ್ರವಿದ್ಭವಾನ್ ಹನ್ಯಾದ್ದಿವ್ಯೈರಸ್ತ್ರೈರ್ನ ಸಂಶಯಃ।।
ದ್ವಿಜೋತ್ತಮ! ಸರ್ವಾಸ್ತ್ರಗಳನ್ನು ತಿಳಿದುಕೊಂಡಿರುವ ನೀವು ಸುರಾಸುರಗಂಧರ್ವರಿಂದ ಕೂಡಿದ ಈ ಸರ್ವ ಲೋಕಗಳನ್ನೂ ದಿವ್ಯಾಸ್ತ್ರಗಳಿಂದ ನಾಶಗೊಳಿಸಬಲ್ಲಿರಿ. ಅದರಲ್ಲಿ ಸಂಶಯವೇ ಇಲ್ಲ.
07160008a ಸ ಭವಾನ್ಮರ್ಷಯತ್ಯೇನಾಂಸ್ತ್ವತ್ತೋ ಭೀತಾನ್ವಿಶೇಷತಃ।
07160008c ಶಿಷ್ಯತ್ವಂ ವಾ ಪುರಸ್ಕೃತ್ಯ ಮಮ ವಾ ಮಂದಭಾಗ್ಯತಾಂ।।
ಅವರು ನಿಮಗೆ ಹೆದರಿದ್ದರೂ ಅವರ ಶಿಷ್ಯತ್ವವನ್ನು ಮುಂದಿರಿಸಿಕೊಂಡೋ ಅಥವಾ ನನ್ನ ಮಂದಭಾಗ್ಯದಿಂದಲೋ ನೀವು ಅವರಲ್ಲಿ ವಿಶೇಷ ಸಹನೆಯನ್ನೇ ತೋರಿಸುತ್ತಿರುವಿರಿ!”
07160009a ಏವಮುದ್ಧರ್ಷಿತೋ ದ್ರೋಣಃ ಕೋಪಿತಶ್ಚಾತ್ಮಜೇನ ತೇ।
07160009c ಸಮನ್ಯುರಬ್ರವೀದ್ರಾಜನ್ದುರ್ಯೋಧನಮಿದಂ ವಚಃ।।
ರಾಜನ್! ಯುದ್ಧೋತ್ಸಾಹವನ್ನು ತುಂಬಬೇಕೆಂದು ಬಯಸಿ ನಿನ್ನ ಮಗನು ಹೇಳಿದ ಈ ಮಾತಿನಿಂದ ಕುಪಿತನಾದ ದ್ರೋಣನು ಕೋಪವಶನಾಗಿ ದುರ್ಯೋಧನನಿಗೆ ಹೀಗೆ ಹೇಳಿದನು:
07160010a ಸ್ಥವಿರಃ ಸನ್ಪರಂ ಶಕ್ತ್ಯಾ ಘಟೇ ದುರ್ಯೋಧನಾಹವೇ।
07160010c ಅತಃ ಪರಂ ಮಯಾ ಕಾರ್ಯಂ ಕ್ಷುದ್ರಂ ವಿಜಯಗೃದ್ಧಿನಾ।
07160010e ಅನಸ್ತ್ರವಿದಯಂ ಸರ್ವೋ ಹಂತವ್ಯೋಽಸ್ತ್ರವಿದಾ ಜನಃ।।
“ದುರ್ಯೋಧನ! ವೃದ್ಧನಾಗಿದ್ದರೂ ನಾನು ನನ್ನ ಪರಮ ಶಕ್ತಿಯನ್ನುಪಯೋಗಿಸಿ ಯುದ್ಧದಲ್ಲಿ ಹೋರಾಡುತ್ತಿದ್ದೇನೆ. ವಿಜಯದ ಆಸೆಯಿಂದ ನಾನು ನೀಚಕಾರ್ಯವನ್ನು ಮಾಡಬೇಕೇ? ಇಲ್ಲಿರುವ ಎಲ್ಲರಿಗೂ ಅಸ್ತ್ರಗಳು ತಿಳಿದಿಲ್ಲ ಎಂದು ಅಂದುಕೊಂಡು ಅಸ್ತ್ರವಿದನಾದ ನಾನು ಎಲ್ಲರನ್ನೂ ಸಂಹರಿಸಬೇಕೇ?
07160011a ಯದ್ಭವಾನ್ಮನ್ಯತೇ ಚಾಪಿ ಶುಭಂ ವಾ ಯದಿ ವಾಶುಭಂ।
07160011c ತದ್ವೈ ಕರ್ತಾಸ್ಮಿ ಕೌರವ್ಯ ವಚನಾತ್ತವ ನಾನ್ಯಥಾ।।
ಕೌರವ್ಯ! ಶುಭವೋ ಅಶುಭವೋ ನೀನು ಹೇಳಿದಂತೆಯೇ ನಾನು ಮಾಡುತ್ತೇನೆ. ನಿನ್ನ ಮಾತಿಗೆ ಹೊರತಾಗಿ ನಾನು ಏನನ್ನೂ ಮಾಡುವುದಿಲ್ಲ.
07160012a ನಿಹತ್ಯ ಸರ್ವಪಾಂಚಾಲಾನ್ಯುದ್ಧೇ ಕೃತ್ವಾ ಪರಾಕ್ರಮಂ।
07160012c ವಿಮೋಕ್ಷ್ಯೇ ಕವಚಂ ರಾಜನ್ಸತ್ಯೇನಾಯುಧಮಾಲಭೇ।।
ರಾಜನ್! ಯುದ್ಧದಲ್ಲಿ ಪರಾಕ್ರಮದಿಂದ ಹೋರಾಡಿ ಸರ್ವ ಪಾಂಚಾಲರನ್ನೂ ಸಂಹರಿಸಿದ ನಂತರವೇ ನಾನು ಈ ಕವಚವನ್ನು ಕಳಚುತ್ತೇನೆ. ಈ ಮಾತನ್ನು ನಾನು ನನ್ನ ಆಯುಧಗಳ ಮೇಲೆ ಆಣೆಯಿಟ್ಟು ಹೇಳುತ್ತಿದ್ದೇನೆ.
07160013a ಮನ್ಯಸೇ ಯಚ್ಚ ಕೌಂತೇಯಮರ್ಜುನಂ ಶ್ರಾಂತಮಾಹವೇ।
07160013c ತಸ್ಯ ವೀರ್ಯಂ ಮಹಾಬಾಹೋ ಶೃಣು ಸತ್ಯೇನ ಕೌರವ।।
ಮಹಾಬಾಹೋ! ಕೌರವ! ಯುದ್ಧದಲ್ಲಿ ಬಳಲಿರುವ ಅರ್ಜುನನನ್ನು ಸಂಹರಿಸಿಬಿಡಬಹುದೆಂದು ನಿನಗನ್ನಿಸುತ್ತದೆಯಲ್ಲವೇ? ಅವನ ವೀರ್ಯದ ಕುರಿತಾದ ಸತ್ಯವನ್ನು ನಿನಗೆ ಹೇಳುತ್ತೇನೆ. ಕೇಳು!
07160014a ತಂ ನ ದೇವಾ ನ ಗಂಧರ್ವಾ ನ ಯಕ್ಷಾ ನ ಚ ರಾಕ್ಷಸಾಃ।
07160014c ಉತ್ಸಹಂತೇ ರಣೇ ಸೋಢುಂ ಕುಪಿತಂ ಸವ್ಯಸಾಚಿನಂ।।
ರಣದಲ್ಲಿ ಕುಪಿತ ಸವ್ಯಸಾಚಿಯನ್ನು ದೇವತೆಗಳಾಗಲೀ, ಗಂಧರ್ವರಾಗಲೀ, ಯಕ್ಷರಾಗಲೀ ಮತ್ತು ರಾಕ್ಷಸರಾಗಲೀ ಎದುರಿಸಲು ಉತ್ಸಾಹಿಸುವುದಿಲ್ಲ.
07160015a ಖಾಂಡವೇ ಯೇನ ಭಗವಾನ್ಪ್ರತ್ಯುದ್ಯಾತಃ ಸುರೇಶ್ವರಃ।
07160015c ಸಾಯಕೈರ್ವಾರಿತಶ್ಚಾಪಿ ವರ್ಷಮಾಣೋ ಮಹಾತ್ಮನಾ।।
ಖಾಂಡವದಲ್ಲಿ ಅದ್ಭುತ ಮಳೆಸುರಿಸುತ್ತಿದ್ದ ಭಗವಾನ್ ಸುರೇಶ್ವರನನ್ನೇ ಮಹಾತ್ಮ ಅರ್ಜುನನು ಸಾಯಕಗಳಿಂದ ನಿಲ್ಲಿಸಿದನು.
07160016a ಯಕ್ಷಾ ನಾಗಾಸ್ತಥಾ ದೈತ್ಯಾ ಯೇ ಚಾನ್ಯೇ ಬಲಗರ್ವಿತಾಃ।
07160016c ನಿಹತಾಃ ಪುರುಷೇಂದ್ರೇಣ ತಚ್ಚಾಪಿ ವಿದಿತಂ ತವ।।
ಬಲಗರ್ವಿತ ಯಕ್ಷರು, ನಾಗರು, ದೈತ್ಯರು ಮತ್ತು ಅನ್ಯರು ಈ ಪುರುಷೇಂದ್ರನಿಂದ ನಾಶಗೊಂಡಿರುವುದು ನಿನಗೆ ತಿಳಿದೇ ಇದೆ.
07160017a ಗಂಧರ್ವಾ ಘೋಷಯಾತ್ರಾಯಾಂ ಚಿತ್ರಸೇನಾದಯೋ ಜಿತಾಃ।
07160017c ಯೂಯಂ ತೈರ್ಹ್ರಿಯಮಾಣಾಶ್ಚ ಮೋಕ್ಷಿತಾ ದೃಢಧನ್ವನಾ।।
ಘೋಷಯಾತ್ರೆಯ ಸಮಯದಲ್ಲಿ ಗಂಧರ್ವ ಚಿತ್ರಸೇನನೇ ಮೊದಲಾದವರನ್ನು ಗೆದ್ದು ಈ ದೃಢಧನ್ವಿಯು ನಿನ್ನನ್ನು ಬಿಡುಗಡೆಗೊಳಿಸಿ ನಾಚಿಕೆಗೀಡುಮಾಡಲಿಲ್ಲವೇ?
07160018a ನಿವಾತಕವಚಾಶ್ಚಾಪಿ ದೇವಾನಾಂ ಶತ್ರವಸ್ತಥಾ।
07160018c ಸುರೈರವಧ್ಯಾಃ ಸಂಗ್ರಾಮೇ ತೇನ ವೀರೇಣ ನಿರ್ಜಿತಾಃ।।
ಈ ವೀರನು ಸಂಗ್ರಾಮದಲ್ಲಿ ದೇವತೆಗಳ ಶತ್ರುಗಳಾದ ಸುರರಿಗೂ ಅವಧ್ಯ ನಿವಾತಕವಚರನ್ನೂ ಸೋಲಿಸಿದನು.
07160019a ದಾನವಾನಾಂ ಸಹಸ್ರಾಣಿ ಹಿರಣ್ಯಪುರವಾಸಿನಾಂ।
07160019c ವಿಜಿಗ್ಯೇ ಪುರುಷವ್ಯಾಘ್ರಃ ಸ ಶಕ್ಯೋ ಮಾನುಷೈಃ ಕಥಂ।।
ಸಹಸ್ರಾರು ಹಿರಣ್ಯಪುರವಾಸಿ ದಾನವರನ್ನು ಈ ಪುರುಷವ್ಯಾಘ್ರನು ಗೆದ್ದನು. ಇದು ಮನುಷ್ಯರಿಗೆ ಹೇಗೆ ಸಾಧ್ಯ?
07160020a ಪ್ರತ್ಯಕ್ಷಂ ಚೈವ ತೇ ಸರ್ವಂ ಯಥಾ ಬಲಮಿದಂ ತವ।
07160020c ಕ್ಷಪಿತಂ ಪಾಂಡುಪುತ್ರೇಣ ಚೇಷ್ಟತಾಂ ನೋ ವಿಶಾಂ ಪತೇ।।
ವಿಶಾಂಪತೇ! ನಾವೆಷ್ಟೇ ಪ್ರಯತ್ನಪಟ್ಟು ಹೋರಾಡುತ್ತಿದ್ದರೂ ನಿನ್ನ ಈ ಸೇನೆಯು ನಿನ್ನ ಕಣ್ಣುಮುಂದೇ ಪಾಂಡುಪುತ್ರನಿಂದ ನಾಶವಾಗುತ್ತಿಲ್ಲವೇ?”
07160021a ತಂ ತಥಾಭಿಪ್ರಶಂಸಂತಮರ್ಜುನಂ ಕುಪಿತಸ್ತದಾ।
07160021c ದ್ರೋಣಂ ತವ ಸುತೋ ರಾಜನ್ಪುನರೇವೇದಮಬ್ರವೀತ್।।
ರಾಜನ್! ಹೀಗೆ ಅರ್ಜುನನನ್ನು ಪ್ರಶಂಸಿಸುತ್ತಿದ್ದ ದ್ರೋಣನಿಗೆ ಕುಪಿತನಾದ ನಿನ್ನ ಮಗನು ಪುನಃ ಹೀಗೆ ಹೇಳಿದನು:
07160022a ಅಹಂ ದುಃಶಾಸನಃ ಕರ್ಣಃ ಶಕುನಿರ್ಮಾತುಲಶ್ಚ ಮೇ।
07160022c ಹನಿಷ್ಯಾಮೋಽರ್ಜುನಂ ಸಂಖ್ಯೇ ದ್ವೈಧೀಕೃತ್ಯಾದ್ಯ ಭಾರತೀಂ।।
“ಯುದ್ಧದಲ್ಲಿ ಇಂದು ಭಾರತೀಸೇನೆಯನ್ನು ಎರಡು ಭಾಗಗಳನ್ನಾಗಿಸಿಕೊಂಡು ನಾನು, ದುಃಶಾಸನ, ಕರ್ಣ ಮತ್ತು ಸೋದರಮಾವ ಶಕುನಿ – ಅರ್ಜುನನನ್ನು ಸಂಹರಿಸುತ್ತೇವೆ.”
07160023a ತಸ್ಯ ತದ್ವಚನಂ ಶ್ರುತ್ವಾ ಭಾರದ್ವಾಜೋ ಹಸನ್ನಿವ।
07160023c ಅನ್ವವರ್ತತ ರಾಜಾನಂ ಸ್ವಸ್ತಿ ತೇಽಸ್ತ್ವಿತಿ ಚಾಬ್ರವೀತ್।।
ಅವನ ಆ ಮಾತನ್ನು ಕೇಳಿ ನಸುನಗುತ್ತಾ ಭಾರದ್ವಾಜನು “ನಿನಗೆ ಮಂಗಳವಾಗಲಿ!” ಎಂದು ಹೇಳಿ ರಾಜನನ್ನು ಕಳುಹಿಸಿಕೊಡುತ್ತಾ ಇನ್ನೂ ಹೇಳಿದನು:
07160024a ಕೋ ಹಿ ಗಾಂಡೀವಧನ್ವಾನಂ ಜ್ವಲಂತಮಿವ ತೇಜಸಾ।
07160024c ಅಕ್ಷಯಂ ಕ್ಷಪಯೇತ್ಕಶ್ಚಿತ್ ಕ್ಷತ್ರಿಯಃ ಕ್ಷತ್ರಿಯರ್ಷಭಂ।।
“ತೇಜಸ್ಸಿನಿಂದ ಪ್ರಜ್ವಲಿಸುತ್ತಿರುವ ಅಕ್ಷಯ ಕ್ಷತ್ರಿಯರ್ಷಭ ಗಾಂಡೀವಧನ್ವಿಯನ್ನು ಯಾವ ಕ್ಷತ್ರಿಯನು ವಿನಾಶಮಾಡಬಲ್ಲನು?
07160025a ತಂ ನ ವಿತ್ತಪತಿರ್ನೇಂದ್ರೋ ನ ಯಮೋ ನ ಜಲೇಶ್ವರಃ।
07160025c ನಾಸುರೋರಗರಕ್ಷಾಂಸಿ ಕ್ಷಪಯೇಯುಃ ಸಹಾಯುಧಂ।।
ದಿಕ್ಪಾಲಕ ವಿತ್ತಪತಿ ಕುಬೇರನಾಗಲೀ, ಇಂದ್ರನಾಗಲೀ, ಯಮನಾಗಲೀ, ಜಲೇಶ್ವರ ವರುಣನಾಗಲೀ ಅಥವಾ ಅಸುರ-ಉರಗ-ರಾಕ್ಷಸರೂ ಕೂಡ ಆಯುಧಪಾಣಿ ಅರ್ಜುನನನ್ನು ನಾಶಗೊಳಿಸಲಾರರು.
07160026a ಮೂಢಾಸ್ತ್ವೇತಾನಿ ಭಾಷಂತೇ ಯಾನೀಮಾನ್ಯಾತ್ಥ ಭಾರತ।
07160026c ಯುದ್ಧೇ ಹ್ಯರ್ಜುನಮಾಸಾದ್ಯ ಸ್ವಸ್ತಿಮಾನ್ಕೋ ವ್ರಜೇದ್ಗೃಹಾನ್।।
ಭಾರತ! ನೀನಾಡಿದ ಈ ಮಾತುಗಳನ್ನು ಕೇವಲು ಮೂಢರು ಆಡುತ್ತಾರೆ. ಯುದ್ಧದಲ್ಲಿ ಅರ್ಜುನನನ್ನು ಎದುರಿಸಿದ ಯಾರು ತಾನೇ ಕುಶಲಿಗಳಾಗಿ ಮನೆಗೆ ಹಿಂದಿರುಗುತ್ತಾರೆ?
07160027a ತ್ವಂ ತು ಸರ್ವಾತಿಶಂಕಿತ್ವಾನ್ನಿಷ್ಠುರಃ ಪಾಪನಿಶ್ಚಯಃ।
07160027c ಶ್ರೇಯಸಸ್ತ್ವದ್ಧಿತೇ ಯುಕ್ತಾಂಸ್ತತ್ತದ್ವಕ್ತುಮಿಹೇಚ್ಚಸಿ।।
ನೀನಾದರೋ ಎಲ್ಲರನ್ನೂ ಅತಿಯಾಗಿ ಶಂಕಿಸುವವನು. ನಿಷ್ಠುರವಾಗಿ ಮಾತನಾಡುತ್ತೀಯೆ. ಪಾಪಭರಿತ ನಿಶ್ಚಯಗಳನ್ನು ಕೈಗೊಳ್ಳುತ್ತೀಯೆ. ನಿನಗೆ ಶ್ರೇಯಸ್ಕರರಾದವರ ಮತ್ತು ನಿನ್ನ ಹಿತದಲ್ಲಿಯೇ ನಿರತರಾದವರ ಮೇಲೆ ಕೂಡ ನೀನು ನಿಷ್ಠುರವಾಗಿ ಮಾತನಾಡಬಯಸುತ್ತೀಯೆ!
07160028a ಗಚ್ಚ ತ್ವಮಪಿ ಕೌಂತೇಯಮಾತ್ಮಾರ್ಥೇಭ್ಯೋ ಹಿ ಮಾಚಿರಂ।
07160028c ತ್ವಮಪ್ಯಾಶಂಸಸೇ ಯೋದ್ಧುಂ ಕುಲಜಃ ಕ್ಷತ್ರಿಯೋ ಹ್ಯಸಿ।।
ಕೌಂತೇಯನ ಸಮೀಪಕ್ಕೆ ನೀನೇ ಹೋಗು! ನಿನಗೋಸ್ಕರವಾಗಿ ಬೇಗನೆ ಅವನನ್ನು ಸಂಹರಿಸು! ಕುಲಜನೂ ಕ್ಷತ್ರಿಯನೂ ಆಗಿರುವ ನೀನು ಯುದ್ಧಮಾಡಲು ಏಕೆ ಶಂಕಿಸುತ್ತಿರುವೆ?
07160029a ಇಮಾನ್ಕಿಂ ಪಾರ್ಥಿವಾನ್ಸರ್ವಾನ್ಘಾತಯಿಷ್ಯಸ್ಯನಾಗಸಃ।
07160029c ತ್ವಮಸ್ಯ ಮೂಲಂ ವೈರಸ್ಯ ತಸ್ಮಾದಾಸಾದಯಾರ್ಜುನಂ।।
ನಿರಪರಾಧಿ ಈ ಪಾರ್ಥಿವಸರ್ವರನ್ನೂ ಏಕೆ ಸುಮ್ಮನೇ ನಾಶಗೊಳಿಸುತ್ತಿರುವೆ? ಈ ವೈರತ್ವಕ್ಕೆ ಮೂಲಕಾರಣನಾದ ನೀನೇ ಅರ್ಜುನನನ್ನು ಎದುರಿಸುವುದು ಸರಿಯಾಗಿದೆ.
07160030a ಏಷ ತೇ ಮಾತುಲಃ ಪ್ರಾಜ್ಞಃ ಕ್ಷತ್ರಧರ್ಮಮನುವ್ರತಃ।
07160030c ದೂರ್ದ್ಯೂತದೇವೀ ಗಾಂಧಾರಿಃ ಪ್ರಯಾತ್ವರ್ಜುನಮಾಹವೇ।।
ತಿಳಿದವನಾದ, ಕ್ಷತ್ರಧರ್ಮವನ್ನು ಅನುಸರಿಸುವ, ಮೋಸದ ದ್ಯೂತದಲ್ಲಿ ನಿಪುಣನಾಗಿರುವ ಗಾಂಧಾರದೇಶದ ಈ ನಿನ್ನ ಸೋದರಮಾವನನ್ನೂ ಅರ್ಜುನನೊಡನೆ ಯುದ್ಧಮಾಡಲು ಕಳುಹಿಸು.
07160031a ಏಷೋಽಕ್ಷಕುಶಲೋ ಜಿಹ್ಮೋ ದ್ಯೂತಕೃತ್ಕಿತವಃ ಶಠಃ।
07160031c ದೇವಿತಾ ನಿಕೃತಿಪ್ರಜ್ಞೋ ಯುಧಿ ಜೇಷ್ಯತಿ ಪಾಂಡವಾನ್।।
ಅಕ್ಷವಿದ್ಯೆಯಲ್ಲಿ ಮಹಾಕುಶಲನಾಗಿರುವ, ವಕ್ರಬುದ್ಧಿಯುಳ್ಳ, ಜೂಜಿನ ಜಾಲವನ್ನು ವ್ಯವಸ್ಥಾಪಿಸುವ, ಶಠ, ಜೂಜುಕೋರ, ಮೋಸದಲ್ಲಿ ಮಹಾಪ್ರಾಜ್ಞನಾದ ಇವನು ಯುದ್ಧದಲ್ಲಿ ಪಾಂಡವರನ್ನು ಜಯಿಸುತ್ತಾನೆ.
07160032a ತ್ವಯಾ ಕಥಿತಮತ್ಯಂತಂ ಕರ್ಣೇನ ಸಹ ಹೃಷ್ಟವತ್।
07160032c ಅಸಕೃಚ್ಚೂನ್ಯವನ್ಮೋಹಾದ್ಧೃತರಾಷ್ಟ್ರಸ್ಯ ಶೃಣ್ವತಃ।।
ಕರ್ಣನೊಡನೆ ಸೇರಿಕೊಂಡು ಅತ್ಯಂತ ಸಂತೋಷಗೊಂಡವನಂತೆ ಮೋಹದಿಂದ ನೀನು ಏಕಾಂತದಲ್ಲಿ ಧೃತರಾಷ್ಟ್ರನಿಗೆ ಕೊಚ್ಚಿಕೊಳ್ಳುತ್ತಿದ್ದುದನ್ನು ನಾನು ಕೇಳಿದ್ದೇನೆ:
07160033a ಅಹಂ ಚ ತಾತ ಕರ್ಣಶ್ಚ ಭ್ರಾತಾ ದುಃಶಾಸನಶ್ಚ ಮೇ।
07160033c ಪಾಂಡುಪುತ್ರಾನ್ ಹನಿಷ್ಯಾಮಃ ಸಹಿತಾಃ ಸಮರೇ ತ್ರಯಃ।।
“ಅಪ್ಪಾ! ನಾನು, ಕರ್ಣ, ಭ್ರಾತ ದುಃಶಾಸನ ಈ ಮೂವರೇ ಸೇರಿ ಪಾಂಡುಪುತ್ರರನ್ನು ಸಮರದಲ್ಲಿ ಸಂಹರಿಸಬಲ್ಲೆವು!”
07160034a ಇತಿ ತೇ ಕತ್ಥಮಾನಸ್ಯ ಶ್ರುತಂ ಸಂಸದಿ ಸಂಸದಿ।
07160034c ಅನುತಿಷ್ಠ ಪ್ರತಿಜ್ಞಾಂ ತಾಂ ಸತ್ಯವಾಗ್ಭವ ತೈಃ ಸಹ।।
ಹೀಗೆ ನೀನು ಗಳಹುತ್ತಿರುವುದನ್ನು ಪ್ರತಿ ಸಭೆಯಲ್ಲಿಯೂ ಕೇಳುತ್ತಲೇ ಬಂದಿದ್ದೇವೆ. ಆ ಪ್ರತಿಜ್ಞೆಗಳು ಸತ್ಯವಾಗುವಂತೆ ಅವರೊಂದಿಗೆ ನೀನು ನಡೆದುಕೋ!
07160035a ಏಷ ತೇ ಪಾಂಡವಃ ಶತ್ರುರವಿಷಹ್ಯೋಽಗ್ರತಃ ಸ್ಥಿತಃ।
07160035c ಕ್ಷತ್ರಧರ್ಮಮವೇಕ್ಷಸ್ವ ಶ್ಲಾಘ್ಯಸ್ತವ ವಧೋ ಜಯಾತ್।।
ಆ ನಿನ್ನ ಶತ್ರು ಅರ್ಜುನನು ಯಾವ ಶಂಕೆಯೂ ಇಲ್ಲದೇ ನಿನ್ನ ಮುಂದೆ ನಿಂತಿದ್ದಾನೆ. ಕ್ಷತ್ರಿಯಧರ್ಮವನ್ನು ಮನಸ್ಸಿನಲ್ಲಿಟ್ಟುಕೊಂಡು ಯುದ್ಧಮಾಡು. ವಿಜಯಿಯಾದರೂ ವಧಿಸಲ್ಪಟ್ಟರೂ ನೀನು ಶ್ಲಾಘನೀಯನಾಗುತ್ತೀಯೆ.
07160036a ದತ್ತಂ ಭುಕ್ತಮಧೀತಂ ಚ ಪ್ರಾಪ್ತಮೈಶ್ವರ್ಯಮೀಪ್ಸಿತಂ।
07160036c ಕೃತಕೃತ್ಯೋಽನೃಣಶ್ಚಾಸಿ ಮಾ ಭೈರ್ಯುಧ್ಯಸ್ವ ಪಾಂಡವಂ।।
ದಾನಗಳನ್ನಿತ್ತಿದ್ದೀಯೆ. ಚೆನ್ನಾಗಿ ಭೋಗಿಸಿರುವೆ. ವೇದಾಧ್ಯಯನ ಮಾಡಿರುವೆ. ಬಯಸಿದಷ್ಟು ಐಶ್ವರ್ಯವನ್ನು ಹೊಂದಿರುವೆ. ಋಣಗಳಿಂದ ಮುಕ್ತನಾಗಿರುವೆ. ಪಾಂಡವನೊಡನೆ ಯುದ್ಧಮಾಡು. ಭಯಪಡಬೇಡ!”
07160037a ಇತ್ಯುಕ್ತ್ವಾ ಸಮರೇ ದ್ರೋಣೋ ನ್ಯವರ್ತತ ಯತಃ ಪರೇ।
07160037c ದ್ವೈಧೀಕೃತ್ಯ ತತಃ ಸೇನಾಂ ಯುದ್ಧಂ ಸಮಭವತ್ತದಾ।।
ಸಮರದಲ್ಲಿ ಹೀಗೆ ಹೇಳಿ ದ್ರೋಣನು ಶತ್ರುಗಳಿರುವಲ್ಲಿಗೆ ತೆರಳಿದನು. ಅನಂತರ ಸೇನೆಯು ಎರಡು ಭಾಗಗಳಾಗಿ ವಿಂಗಡಿಸಲ್ಪಟ್ಟು ಯುದ್ಧವು ಪ್ರಾರಂಭವಾಯಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣವಧ ಪರ್ವಣಿ ದ್ರೋಣದುರ್ಯೋಧನಭಾಷಣೇ ಷಷ್ಟ್ಯಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣವಧ ಪರ್ವದಲ್ಲಿ ದ್ರೋಣದುರ್ಯೋಧನಭಾಷಣ ಎನ್ನುವ ನೂರಾಅರವತ್ತನೇ ಅಧ್ಯಾಯವು.