ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ದ್ರೋಣವಧ ಪರ್ವ
ಅಧ್ಯಾಯ 159
ಸಾರ
ಯುಧಿಷ್ಠಿರನ ನಿರ್ದೇಶನದಂತೆ ಧೃಷ್ಟದ್ಯುಮ್ನಾದಿಗಳು ದ್ರೋಣನನ್ನು ಆಕ್ರಮಣಿಸಿದುದು (1-11). ಆಯಾಸಗೊಂಡಿದ್ದ ಸೈನಿಕರು ರಣಾಂಗಣದಲ್ಲಿಯೇ ತೂಕಡಿಸುತ್ತಾ ಯುದ್ಧಮಾಡುತ್ತಿದ್ದುದು (12-21). ಅರ್ಜುನನ ಸಲಹೆಯಂತೆ ಕೌರವ-ಪಾಂಡವ ಸೇನೆಗಳು ವಾಹನಗಳೊಂದಿಗೆ ರಣಾಂಗಣದಲ್ಲಿಯೇ ನಿದ್ರೆಹೋದುದು (22-41). ಚಂದ್ರೋದಯವಾಗಲು ಪುನಃ ಯುದ್ಧವು ಪ್ರಾರಂಭವಾದುದು (42-50).
07159001 ಸಂಜಯ ಉವಾಚ।
07159001a ಘಟೋತ್ಕಚೇ ತು ನಿಹತೇ ಸೂತಪುತ್ರೇಣ ತಾಂ ನಿಶಾಂ।
07159001c ದುಃಖಾಮರ್ಷವಶಂ ಪ್ರಾಪ್ತೋ ಧರ್ಮಪುತ್ರೋ ಯುಧಿಷ್ಠಿರಃ।।
ಸಂಜಯನು ಹೇಳಿದನು: “ಆ ರಾತ್ರಿ ಸೂತಪುತ್ರನಿಂದ ಘಟೋತ್ಕಚನು ಹತನಾಗಲು ಧರ್ಮಪುತ್ರ ಯುಧಿಷ್ಠಿರನು ದುಃಖ-ರೋಷಗಳ ವಶನಾದನು.
07159002a ದೃಷ್ಟ್ವ ಭೀಮೇನ ಮಹತೀಂ ವಾರ್ಯಮಾಣಾಂ ಚಮೂಂ ತವ।
07159002c ಧೃಷ್ಟದ್ಯುಮ್ನಮುವಾಚೇದಂ ಕುಂಭಯೋನಿಂ ನಿವಾರಯ।।
ಭೀಮನಿಂದ ನಿನ್ನ ಮಹಾಸೇನೆಯು ತಡೆಹಿಡಿಯಲ್ಪಟ್ಟಿರುವುದನ್ನು ನೋಡಿ ಕುಂಭಯೋನಿ ದ್ರೋಣನನ್ನು ತಡೆಯುವಂತೆ ಧೃಷ್ಟದ್ಯುಮ್ನನಿಗೆ ಹೇಳಿದನು:
07159003a ತ್ವಂ ಹಿ ದ್ರೋಣವಿನಾಶಾಯ ಸಮುತ್ಪನ್ನೋ ಹುತಾಶನಾತ್।
07159003c ಸಶರಃ ಕವಚೀ ಖಡ್ಗೀ ಧನ್ವೀ ಚ ಪರತಾಪನಃ।
07159003e ಅಭಿದ್ರವ ರಣೇ ಹೃಷ್ಟೋ ನ ಚ ತೇ ಭೀಃ ಕಥಂ ಚನ।।
“ಶತ್ರುತಾಪನ! ದ್ರೋಣನ ವಿನಾಶಕ್ಕಾಗಿಯೇ ನೀನು ಅಗ್ನಿಯಿಂದ ಶರ, ಕವಚ, ಖಡ್ಗ ಮತ್ತು ಧನುಸ್ಸುಗಳೊಡನೆ ಸಮುತ್ಪನ್ನನಾಗಿದ್ದೀಯೆ. ಆದುದರಿಂದ ನೀನು ಸ್ವಲ್ಪವೂ ಭಯಪಡದೇ ಸಂತೋಷದಿಂದ ರಣದಲ್ಲಿ ಅವನನ್ನು ಆಕ್ರಮಣಿಸು!
07159004a ಜನಮೇಜಯಃ ಶಿಖಂಡೀ ಚ ದೌರ್ಮುಖಿಶ್ಚ ಯಶೋಧನಃ।
07159004c ಅಭಿದ್ರವಂತು ಸಂಹೃಷ್ಟಾಃ ಕುಂಭಯೋನಿಂ ಸಮಂತತಃ।।
ಜನಮೇಜಯ, ಶಿಖಂಡಿ, ದೌರ್ಮುಖಿ ಮತ್ತು ಯಶೋಧನರು ಸಂಹೃಷ್ಟರಾಗಿ ಕುಂಭಯೋನಿಯನ್ನು ಎಲ್ಲಕಡೆಗಳಿಂದ ಆಕ್ರಮಣಿಸಲಿ.
07159005a ನಕುಲಃ ಸಹದೇವಶ್ಚ ದ್ರೌಪದೇಯಾಃ ಪ್ರಭದ್ರಕಾಃ।
07159005c ದ್ರುಪದಶ್ಚ ವಿರಾಟಶ್ಚ ಪುತ್ರಭ್ರಾತೃಸಮನ್ವಿತೌ।।
07159006a ಸಾತ್ಯಕಿಃ ಕೇಕಯಾಶ್ಚೈವ ಪಾಂಡವಶ್ಚ ಧನಂಜಯಃ।
07159006c ಅಭಿದ್ರವಂತು ವೇಗೇನ ಭಾರದ್ವಾಜವಧೇಪ್ಸಯಾ।।
ನಕುಲ-ಸಹದೇವರು, ದ್ರೌಪದೇಯರು, ಪ್ರಭದ್ರಕರು, ಪುತ್ರ-ಭ್ರಾತೃಗಳೊಡನೆ ದ್ರುಪದ-ವಿರಾಟರು, ಸಾತ್ಯಕಿ, ಕೇಕಯರು, ಮತ್ತು ಪಾಂಡವ ಧನಂಜಯ ಇವರು ಭಾರದ್ವಾಜನ ವಧೆಯನ್ನು ಗುರಿಯಾಗಿಟ್ಟುಕೊಂಡು ವೇಗದಿಂದ ಆಕ್ರಮಣಿಸಲಿ.
07159007a ತಥೈವ ರಥಿನಃ ಸರ್ವೇ ಹಸ್ತ್ಯಶ್ವಂ ಯಚ್ಚ ಕಿಂ ಚನ।
07159007c ಪಾದಾತಾಶ್ಚ ರಣೇ ದ್ರೋಣಂ ಪ್ರಾಪಯಂತು ಮಹಾರಥಂ।।
ಹಾಗೆಯೇ ಸರ್ವ ರಥಿಗಳೂ, ಆನೆ-ಕುದುರೆ ಸವಾರರೂ, ಇತರ ಪಾದಾತಿಗಳೂ ರಣದಲ್ಲಿ ಮಹಾರಥ ದ್ರೋಣನನ್ನು ಉರುಳಿಸಲು ಪ್ರಯತ್ನಿಸಲಿ.”
07159008a ತಥಾಜ್ಞಪ್ತಾಸ್ತು ತೇ ಸರ್ವೇ ಪಾಂಡವೇನ ಮಹಾತ್ಮನಾ।
07159008c ಅಭ್ಯದ್ರವಂತ ವೇಗೇನ ಕುಂಭಯೋನಿಂ ಯುಯುತ್ಸಯಾ।।
ಹಾಗೆ ಪಾಂಡವ ಮಹಾತ್ಮನಿಂದ ಆಜ್ಞಾಪಿತರಾದ ಅವರೆಲ್ಲರೂ ವೇಗದಿಂದ ಮತ್ತು ಯುದ್ಧೋತ್ಸಾಹದಿಂದ ಕುಂಭಯೋನಿಯನ್ನು ಆಕ್ರಮಣಿಸಿದರು.
07159009a ಆಗಚ್ಚತಸ್ತಾನ್ಸಹಸಾ ಸರ್ವೋದ್ಯೋಗೇನ ಪಾಂಡವಾನ್।
07159009c ಪ್ರತಿಜಗ್ರಾಹ ಸಮರೇ ದ್ರೋಣಃ ಶಸ್ತ್ರಭೃತಾಂ ವರಃ।।
ಸಮರದಲ್ಲಿ ಸರ್ವ ಪ್ರಯತ್ನದಿಂದ ಒಮ್ಮೆಲೇ ತನ್ನ ಮೇಲೆ ಬೀಳುತ್ತಿದ್ದ ಆ ಪಾಂಡವ ಸರ್ವರನ್ನೂ ಶಸ್ತ್ರಭೃತರಲ್ಲಿ ಶ್ರೇಷ್ಠನಾದ ದ್ರೋಣನು ಎದುರಿಸಿದನು.
07159010a ತತೋ ದುರ್ಯೋಧನೋ ರಾಜಾ ಸರ್ವೋದ್ಯೋಗೇನ ಪಾಂಡವಾನ್।
07159010c ಅಭ್ಯದ್ರವತ್ಸುಸಂಕ್ರುದ್ಧ ಇಚ್ಚನ್ದ್ರೋಣಸ್ಯ ಜೀವಿತಂ।।
ಆಗ ರಾಜಾ ದುರ್ಯೋಧನನು ಬಹಳ ಕ್ರೋಧಿತನಾಗಿ ದ್ರೋಣನನ್ನು ಜೀವಂತವಾಗಿಡಲು ಇಚ್ಛಿಸಿ ಸರ್ವ ಪ್ರಯತ್ನದಿಂದ ಪಾಂಡವರನ್ನು ಆಕ್ರಮಣಿಸಿದನು.
07159011a ತತಃ ಪ್ರವವೃತೇ ಯುದ್ಧಂ ಶ್ರಾಂತವಾಹನಸೈನಿಕಂ।
07159011c ಪಾಂಡವಾನಾಂ ಕುರೂಣಾಂ ಚ ಗರ್ಜತಾಮಿತರೇತರಂ।।
ಆಗ ಬಳಲಿದ್ದ ಪಾಂಡವರ ಮತ್ತು ಕುರುಗಳ ವಾಹನ-ಸೈನಿಕರ ನಡುವೆ, ಪರಸ್ಪರರ ಮೇಲೆ ಗರ್ಜಿಸುತ್ತಾ, ಯುದ್ಧವು ಪ್ರಾರಂಭವಾಯಿತು.
07159012a ನಿದ್ರಾಂಧಾಸ್ತೇ ಮಹಾರಾಜ ಪರಿಶ್ರಾಂತಾಶ್ಚ ಸಂಯುಗೇ।
07159012c ನಾಭ್ಯಪದ್ಯಂತ ಸಮರೇ ಕಾಂ ಚಿಚ್ಚೇಷ್ಟಾಂ ಮಹಾರಥಾಃ।।
ಮಹಾರಾಜ! ಯುದ್ಧದಲ್ಲಿ ಬಳಲಿದ್ದ ಮತ್ತು ನಿದ್ರೆಯಲ್ಲಿ ಅಂಧರಂತಾಗಿದ್ದ ಆ ಮಹಾರಥರು ಯಾವುದೇ ರೀತಿಯಲ್ಲಿ ರಣದಲ್ಲಿ ಪ್ರಹಾರಮಾಡಲು ಸಾಧ್ಯವಾಗುತ್ತಿರಲಿಲ್ಲ.
07159013a ತ್ರಿಯಾಮಾ ರಜನೀ ಚೈಷಾ ಘೋರರೂಪಾ ಭಯಾನಕಾ।
07159013c ಸಹಸ್ರಯಾಮಪ್ರತಿಮಾ ಬಭೂವ ಪ್ರಾಣಹಾರಿಣೀ।
07159013e ವಧ್ಯತಾಂ ಚ ತಥಾ ತೇಷಾಂ ಕ್ಷತಾನಾಂ ಚ ವಿಶೇಷತಃ।।
ಮೂರುಯಾಮಗಳ ಆ ಘೋರರೂಪೀ ಭಯಾನಕ ರಾತ್ರಿಯು ಪ್ರಾಣಹಾರಿಣಿಯಾದ – ವಿಶೇಷವಾಗಿ ವಧಿಸಲ್ಪಡುತ್ತಿರುವವರಿಗೆ ಮತ್ತು ಗಾಯಗೊಂಡಿರುವವರಿಗೆ – ಸಹಸ್ರಯಾಮಗಳಂತೆ ತೋರಿತು.
07159014a ಅಹೋ ರಾತ್ರಿಃ ಸಮಾಜಜ್ಞೇ ನಿದ್ರಾಂಧಾನಾಂ ವಿಶೇಷತಃ।
07159014c ಸರ್ವೇ ಹ್ಯಾಸನ್ನಿರುತ್ಸಾಹಾಃ ಕ್ಷತ್ರಿಯಾ ದೀನಚೇತಸಃ।
07159014e ತವ ಚೈವ ಪರೇಷಾಂ ಚ ಗತಾಸ್ತ್ರಾ ವಿಗತೇಷವಃ।।
ಹಗಲು ರಾತ್ರಿ ಎಚ್ಚೆತ್ತಿದ್ದ ಅವರು ವಿಶೇಷವಾಗಿ ನಿದ್ರೆಯಿಂದ ಕಣ್ಣು ಕಾಣದಂತಾಗಿದ್ದರು. ಎಲ್ಲ ಕ್ಷತ್ರಿಯರೂ ನಿರುತ್ಸಾಹರಾಗಿ, ದೀನಚೇತಸರಾಗಿದ್ದರು. ನಿನ್ನವರ ಮತ್ತು ಶತ್ರುಗಳ ಕೈಗಳಿಂದ ಅಸ್ತ್ರ ಮತ್ತು ಬಾಣಗಳು ಜಾರಿಬೀಳುತ್ತಿದ್ದವು.
07159015a ತೇ ತಥಾ ಪಾರಯಂತಶ್ಚ ಹ್ರೀಮಂತಶ್ಚ ವಿಶೇಷತಃ।
07159015c ಸ್ವಧರ್ಮಮನುಪಶ್ಯಂತೋ ನ ಜಹುಃ ಸ್ವಾಮನೀಕಿನೀಂ।।
ಹಾಗೆ ನಿದ್ದೆ ಬರುತ್ತಿದ್ದರೂ ವಿಶೇಷವಾಗಿ ನಾಚಿಗೊಳ್ಳುತ್ತಿದ್ದ ಅವರು ಸ್ವಧರ್ಮವನ್ನು ನೋಡುತ್ತಾ ತಮ್ಮ ಸೇನೆಗಳನ್ನು ಬಿಟ್ಟೂ ಹೋಗುತ್ತಿರಲಿಲ್ಲ.
07159016a ಶಸ್ತ್ರಾಣ್ಯನ್ಯೇ ಸಮುತ್ಸೃಜ್ಯ ನಿದ್ರಾಂಧಾಃ ಶೇರತೇ ಜನಾಃ।
07159016c ಗಜೇಷ್ವನ್ಯೇ ರಥೇಷ್ವನ್ಯೇ ಹಯೇಷ್ವನ್ಯೇ ಚ ಭಾರತ।।
ಭಾರತ! ಕೆಲವು ಜನರು ನಿದ್ರೆಯಿಂದ ಕುರುಡರಾಗಿ ಅನ್ಯ ಶಸ್ತ್ರಗಳನ್ನು ವಿಸರ್ಜಿಸಿ – ಕೆಲವರು ಆನೆಗಳ ಮೇಲೆ, ಕೆಲವರು ರಥದಲ್ಲಿ ಮತ್ತು ಕೆಲವರು ಕುದುರೆಗಳ ಮೇಲೆ ನಿದ್ದೆಮಾಡುತ್ತಿದ್ದರು.
07159017a ನಿದ್ರಾಂಧಾ ನೋ ಬುಬುಧಿರೇ ಕಾಂ ಚಿಚ್ಚೇಷ್ಟಾಂ ನರಾಧಿಪಾಃ।
07159017c ತೇಽನ್ಯೋನ್ಯಂ ಸಮರೇ ಯೋಧಾಃ ಪ್ರೇಷಯಂತ ಯಮಕ್ಷಯಂ।।
ನಿದ್ರಾಂಧರಾದ ನರಾಧಿಪರಿಗೆ ಎಲ್ಲಿ ಏನು ನಡೆಯುತ್ತಿದೆ ಎನ್ನುವುದೇ ತಿಳಿಯುತ್ತಿರಲಿಲ್ಲ. ಸಮರದಲ್ಲಿ ಆ ಯೋಧರು ಅನ್ಯೋನ್ಯರನ್ನು ಯಮಕ್ಷಯಕ್ಕೆ ಕಳುಹಿಸುತ್ತಿದ್ದರು.
07159018a ಸ್ವಪ್ನಾಯಮಾನಾಸ್ತ್ವಪರೇ ಪರಾನಿತಿ ವಿಚೇತಸಃ।
07159018c ಆತ್ಮಾನಂ ಸಮರೇ ಜಘ್ನುಃ ಸ್ವಾನೇವ ಚ ಪರಾನಪಿ।।
ಸ್ವಪ್ನದಲ್ಲಿ ಕೆಲವರು ತಮ್ಮವರು ಮತ್ತು ಶತ್ರುಗಳು ಎಂದು ತಿಳಿಯದೇ ಸಮರದಲ್ಲಿ ಶತ್ರುಗಳನ್ನೂ ಸಂಹರಿಸುತ್ತಿದ್ದರು. ತಾವೂ ಸಾಯುತ್ತಿದ್ದರು. ತಮ್ಮ ಕಡೆಯವರನ್ನೂ ಸಂಹರಿಸುತ್ತಿದ್ದರು.
07159019a ನಾನಾವಾಚೋ ವಿಮುಂಚಂತೋ ನಿದ್ರಾಂಧಾಸ್ತೇ ಮಹಾರಣೇ।
07159019c ಯೋದ್ಧವ್ಯಮಿತಿ ತಿಷ್ಠಂತೋ ನಿದ್ರಾಸಂಸಕ್ತಲೋಚನಾಃ।।
ಮಹಾರಣದಲ್ಲಿ ನಿದ್ರೆಯಿಂದ ವಿವೇಚನರಹಿತರಾದ ಕೆಲವರು ಬಾಯಿಗೆ ಬಂದಂತೆ ಮಾತನಾಡಿಕೊಳ್ಳುತ್ತಿದ್ದರು. ನಿದ್ದೆಯಿಂದ ಕಣ್ಣುಗಳು ಕೆಂಪಾಗಿದ್ದರೂ ನಿದ್ರೆಯಿಂದ ಕುರುಡರಾದ ನಮ್ಮವರು ಯುದ್ಧಮಾಡಬೇಕೆಂದು ನಿಷ್ಠೆಯಿಂದ ನಿಂತಿದ್ದರು.
07159020a ಸಮ್ಮರ್ದ್ಯಾನ್ಯೇ ರಣೇ ಕೇ ಚಿನ್ನಿದ್ರಾಂಧಾಶ್ಚ ಪರಸ್ಪರಂ।
07159020c ಜಘ್ನುಃ ಶೂರಾ ರಣೇ ರಾಜಂಸ್ತಸ್ಮಿಂಸ್ತಮಸಿ ದಾರುಣೇ।।
ರಾಜನ್! ಆ ದಾರುಣ ಕತ್ತಲೆಯಲ್ಲಿ ಕೂಡ ನಿದ್ರಾಂಧರಾಗಿದ್ದರೂ ಕೆಲವರು ರಣದಲ್ಲಿ ಪರಸ್ಪರರನ್ನು ಸದೆಬಡಿಯುತ್ತಾ ಶೂರರನ್ನು ಸಂಹರಿಸುತ್ತಿದ್ದರು.
07159021a ಹನ್ಯಮಾನಂ ತಥಾತ್ಮಾನಂ ಪರೇಭ್ಯೋ ಬಹವೋ ಜನಾಃ।
07159021c ನಾಭ್ಯಜಾನಂತ ಸಮರೇ ನಿದ್ರಯಾ ಮೋಹಿತಾ ಭೃಶಂ।।
ಬಹಳ ನಿದ್ರೆಯಿಂದ ತೂಕಡಿಸುತ್ತಿದ್ದ ಅನೇಕರು ಎದುರಾಳಿಗಳು ತಮ್ಮನ್ನು ಸಂಹರಿಸಿದರೂ ಅವರಿಗೆ ಅದು ತಿಳಿಯುತ್ತಲೇ ಇರಲಿಲ್ಲ.
07159022a ತೇಷಾಮೇತಾದೃಶೀಂ ಚೇಷ್ಟಾಂ ವಿಜ್ಞಾಯ ಪುರುಷರ್ಷಭಃ।
07159022c ಉವಾಚ ವಾಕ್ಯಂ ಬೀಭತ್ಸುರುಚ್ಛೈಃ ಸಮ್ನಾದಯನ್ದಿಶಃ।।
ಸೈನಿಕರ ಆ ವಿಧದ ದುರವಸ್ಥೆಯನ್ನು ಕಂಡು ಪುರುಷರ್ಷಭ ಬೀಭತ್ಸುವು ನಾಲ್ಕು ದಿಕ್ಕುಗಳಲ್ಲಿಯೂ ಪ್ರತಿಧ್ವನಿಸುವಂತೆ ಉಚ್ಛಧ್ವನಿಯಲ್ಲಿ ಈ ಮಾತನ್ನಾಡಿದನು:
07159023a ಶ್ರಾಂತಾ ಭವಂತೋ ನಿದ್ರಾಂಧಾಃ ಸರ್ವ ಏವ ಸವಾಹನಾಃ।
07159023c ತಮಸಾ ಚಾವೃತೇ ಸೈನ್ಯೇ ರಜಸಾ ಬಹುಲೇನ ಚ।।
“ವಾಹನಸಹಿತರಾಗಿ ನೀವೆಲ್ಲರೂ ನಿದ್ರೆಯಿಂದ ಕುರುಡಾಗಿದ್ದೀರಿ! ಈ ಸೈನ್ಯವೂ ಕೂಡ ಗಾಢಾಂಧಕಾರದಿಂದ ಮತ್ತು ಬಹಳ ಧೂಳಿನಿಂದ ಆವೃತವಾಗಿಬಿಟ್ಟಿದೆ.
07159024a ತೇ ಯೂಯಂ ಯದಿ ಮನ್ಯಧ್ವಮುಪಾರಮತ ಸೈನಿಕಾಃ।
07159024c ನಿಮೀಲಯತ ಚಾತ್ರೈವ ರಣಭೂಮೌ ಮುಹೂರ್ತಕಂ।।
ಸೈನಿಕರೇ! ನಿಮಗೆಲ್ಲರಿಗೂ ಸರಿಯೆನ್ನಿಸಿದರೆ ಸ್ವಲ್ಪ ಕಾಲ ಯುದ್ಧ ಮಾಡಬೇಡಿ! ಈ ರಣಭೂಮಿಯಲ್ಲಿಯೇ ಮುಹೂರ್ತಕಾಲ ಕಣ್ಣುಮುಚ್ಚಿ ನಿದ್ರಿಸಿರಿ!
07159025a ತತೋ ವಿನಿದ್ರಾ ವಿಶ್ರಾಂತಾಶ್ಚಂದ್ರಮಸ್ಯುದಿತೇ ಪುನಃ।
07159025c ಸಂಸಾಧಯಿಷ್ಯಥಾನ್ಯೋನ್ಯಂ ಸ್ವರ್ಗಾಯ ಕುರುಪಾಂಡವಾಃ।।
ಕುರುಪಾಂಡವರೇ! ವಿಶ್ರಾಂತಿಯನ್ನು ಪಡೆದು ನಿದ್ರೆಯಿಂದ ಎಚ್ಚರಗೊಂಡ ನೀವು ಚಂದ್ರನು ಉದಯವಾಗಲು ಪುನಃ ಹಿಂದಿನಂತೆಯೇ ಅನ್ಯೋನ್ಯರನ್ನು ಸ್ವರ್ಗಕ್ಕೆ ಕಳುಹಿಸುವಿರಂತೆ!”
07159026a ತದ್ವಚಃ ಸರ್ವಧರ್ಮಜ್ಞಾ ಧಾರ್ಮಿಕಸ್ಯ ನಿಶಮ್ಯ ತೇ।
07159026c ಅರೋಚಯಂತ ಸೈನ್ಯಾನಿ ತಥಾ ಚಾನ್ಯೋನ್ಯಮಬ್ರುವನ್।।
07159027a ಚುಕ್ರುಶುಃ ಕರ್ಣ ಕರ್ಣೇತಿ ರಾಜನ್ದುರ್ಯೋಧನೇತಿ ಚ।
07159027c ಉಪಾರಮತ ಪಾಂಡೂನಾಂ ವಿರತಾ ಹಿ ವರೂಥಿನೀ।।
ಸರ್ವ ಧರ್ಮಜ್ಞ ಧಾರ್ಮಿಕ ಆ ಸೈನಿಕರು ಅವನ ಆ ಮಾತನ್ನು ಕೇಳಿ ಸರಿಯೆಂದುಕೊಂಡು ಅನ್ಯೋನ್ಯರಿಗೆ: “ಕರ್ಣ! ಕರ್ಣ! ರಾಜನ್ ದುರ್ಯೋಧನ! ಯುದ್ಧವನ್ನು ಕೂಡಲೇ ನಿಲ್ಲಿಸಿ. ಪಾಂಡವರ ಸೇನೆಯೂ ಕೂಡ ಯುದ್ಧದಿಂದ ವಿರತವಾಗಿದೆ!” ಎಂದು ಕೂಗಿ ಹೇಳಿದರು.
07159028a ತಥಾ ವಿಕ್ರೋಶಮಾನಸ್ಯ ಫಲ್ಗುನಸ್ಯ ತತಸ್ತತಃ।
07159028c ಉಪಾರಮತ ಪಾಂಡೂನಾಂ ಸೇನಾ ತವ ಚ ಭಾರತ।।
ಭಾರತ! ಹಾಗೆಯೇ ಫಲ್ಗುನನು ಅಲ್ಲಲ್ಲಿ ಕೂಗಿ ಹೇಳುತ್ತಿರಲು ಸ್ವಲ್ಪಸಮಯದಲ್ಲಿಯೇ ಪಾಂಡವರ ಸೇನೆ ಮತ್ತು ನಿನ್ನವರು ಯುದ್ಧವನ್ನು ನಿಲ್ಲಿಸಿದರು.
07159029a ತಾಮಸ್ಯ ವಾಚಂ ದೇವಾಶ್ಚ ಋಷಯಶ್ಚ ಮಹಾತ್ಮನಃ।
07159029c ಸರ್ವಸೈನ್ಯಾನಿ ಚಾಕ್ಷುದ್ರಾಃ ಪ್ರಹೃಷ್ಟಾಃ ಪ್ರತ್ಯಪೂಜಯನ್।।
ಮಹಾತ್ಮ ಅರ್ಜುನನ ಆ ಸಲಹೆಯನ್ನು ದೇವತೆಗಳೂ, ಋಷಿಗಳೂ, ಎಲ್ಲ ಸೈನಿಕರೂ ಪರಮ ಹರ್ಷಿತರಾಗಿ ಶ್ಲಾಘಿಸಿದರು.
07159030a ತತ್ಸಂಪೂಜ್ಯ ವಚೋಽಕ್ರೂರಂ ಸರ್ವಸೈನ್ಯಾನಿ ಭಾರತ।
07159030c ಮುಹೂರ್ತಮಸ್ವಪನ್ರಾಜಂ ಶ್ರಾಂತಾನಿ ಭರತರ್ಷಭ।।
ಭಾರತ! ರಾಜನ್! ಭರತರ್ಷಭ! ದಯಾಭರಿತ ಆ ಮಾತನ್ನು ಗೌರವಿಸಿ ಸರ್ವಸೇನೆಗಳೂ ಮುಹೂರ್ತಕಾಲ ರಣದಲ್ಲಿಯೇ ಮಲಗಿದರು.
07159031a ಸಾ ತು ಸಂಪ್ರಾಪ್ಯ ವಿಶ್ರಾಮಂ ಧ್ವಜಿನೀ ತವ ಭಾರತ।
07159031c ಸುಖಮಾಪ್ತವತೀ ವೀರಮರ್ಜುನಂ ಪ್ರತ್ಯಪೂಜಯತ್।।
ಭಾರತ! ನಿನ್ನ ಧ್ವಜವುಳ್ಳವರು ಕೂಡ ವಿಶ್ರಾಂತಿಯನ್ನು ಪಡೆದು ಸುಖವನ್ನು ನೀಡಿದ ವೀರ ಅರ್ಜುನನನ್ನು ಪ್ರಶಂಸಿಸುತ್ತಾ ಹೇಳಿದರು:
07159032a ತ್ವಯಿ ವೇದಾಸ್ತಥಾಸ್ತ್ರಾಣಿ ತ್ವಯಿ ಬುದ್ಧಿಪರಾಕ್ರಮೌ।
07159032c ಧರ್ಮಸ್ತ್ವಯಿ ಮಹಾಬಾಹೋ ದಯಾ ಭೂತೇಷು ಚಾನಘ।।
“ಅನಘ! ಮಹಾಬಾಹೋ! ನಿನ್ನಲ್ಲಿ ವೇದಗಳು, ಅಸ್ತ್ರಗಳು ಮತ್ತು ಬುದ್ಧಿ-ಪರಾಕ್ರಮಗಳು ಹಾಗೂ ಧರ್ಮ ಮತ್ತು ಭೂತಗಳ ಮೇಲೆ ದಯೆಯು ಮೂರ್ತಿಮತ್ತಾಗಿ ನೆಲೆಸಿವೆ.
07159033a ಯಚ್ಚಾಶ್ವಸ್ತಾಸ್ತವೇಚ್ಚಾಮಃ ಶರ್ಮ ಪಾರ್ಥ ತದಸ್ತು ತೇ।
07159033c ಮನಸಶ್ಚ ಪ್ರಿಯಾನರ್ಥಾನ್ವೀರ ಕ್ಷಿಪ್ರಮವಾಪ್ನುಹಿ।।
ಪಾರ್ಥ! ವೀರ! ಬಳಲಿದ್ದ ನಮಗೆ ನೀನು ಆಶ್ವಾಸನೆಯಿತ್ತು ನಿದ್ರೆಯ ಪರಮಸುಖವನ್ನು ಅನುಭವಿಸುವಂತೆ ಮಾಡಿದೆ. ಬೇಗನೆ ನಿನ್ನ ಮನಸ್ಸಿಗೆ ಪ್ರಿಯವಾದುದನ್ನು ಪಡೆದುಕೊಳ್ಳುವೆ!”
07159034a ಇತಿ ತೇ ತಂ ನರವ್ಯಾಘ್ರಂ ಪ್ರಶಂಸಂತೋ ಮಹಾರಥಾಃ।
07159034c ನಿದ್ರಯಾ ಸಮವಾಕ್ಷಿಪ್ತಾಸ್ತೂಷ್ಣೀಮಾಸನ್ವಿಶಾಂ ಪತೇ।।
ವಿಶಾಂಪತೇ! ಈ ರೀತಿ ಮಹಾರಥರು ಆ ನರವ್ಯಾಘ್ರನನ್ನು ಪ್ರಶಂಸಿಸುತ್ತಾ ಸ್ವಲ್ಪ ಹೊತ್ತಿನಲ್ಲಿಯೇ ನಿದ್ರಾಪರವಶರಾಗಿ ಸುಮ್ಮನಾದರು.
07159035a ಅಶ್ವಪೃಷ್ಠೇಷು ಚಾಪ್ಯನ್ಯೇ ರಥನೀಡೇಷು ಚಾಪರೇ।
07159035c ಗಜಸ್ಕಂಧಗತಾಶ್ಚಾನ್ಯೇ ಶೇರತೇ ಚಾಪರೇ ಕ್ಷಿತೌ।।
ಕೆಲವರು ಕುದುರೆಗಳ ಮೇಲೆಯೇ ಮಲಗಿದರು. ಇನ್ನು ಕೆಲವರು ರಥದ ಆಸನಗಳ ಮೇಲೆ, ಅನ್ಯರು ಆನೆಗಳ ಹೆಗಲಿನಮೇಲೂ ಮತ್ತು ಇನ್ನು ಕೆಲವರು ಭೂಮಿಯಮೇಲೂ ಮಲಗಿದರು.
07159036a ಸಾಯುಧಾಃ ಸಗದಾಶ್ಚೈವ ಸಖಡ್ಗಾಃ ಸಪರಶ್ವಧಾಃ।
07159036c ಸಪ್ರಾಸಕವಚಾಶ್ಚಾನ್ಯೇ ನರಾಃ ಸುಪ್ತಾಃ ಪೃಥಕ್ ಪೃಥಕ್।।
ಮನುಷ್ಯರು ಆಯುಧಗಳೊಂದಿಗೆ, ಗದೆಗಳನ್ನು ಹಿಡಿದುಕೊಂಡು, ಖಡ್ಗ-ಪರಶುಗಳನ್ನು ಹಿಡಿದು, ಕೆಲವರು ಪ್ರಾಸ-ಕವಚಗಳೊಂದಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಮಲಗಿದ್ದರು.
07159037a ಗಜಾಸ್ತೇ ಪನ್ನಗಾಭೋಗೈರ್ಹಸ್ತೈರ್ಭೂರೇಣುರೂಷಿತೈಃ।
07159037c ನಿದ್ರಾಂಧಾ ವಸುಧಾಂ ಚಕ್ರುರ್ಘ್ರಾಣನಿಃಶ್ವಾಸಶೀತಲಾಂ।।
ನಿದ್ರೆಯಿಂದ ಕುರುಡಾಗಿದ್ದ ಆನೆಗಳು ಸರ್ಪಕ್ಕೆ ಸಮಾನವಾಗಿದ್ದ ಮತ್ತು ಭೂಮಿಯ ಧೂಳಿನಿಂದ ಅವಲಿಪ್ತವಾಗಿದ್ದ ಸೊಂಡಿಲುಗಳಿಂದ ಸುದೀರ್ಘ ಶ್ವಾಸೋಚ್ಛ್ವಾಸಗಳನ್ನು ಬಿಡುತ್ತಾ ರಣಾಂಗಣವನ್ನೇ ಶೀತಲಗೊಳಿಸಿದವು.
07159038a ಗಜಾಃ ಶುಶುಭಿರೇ ತತ್ರ ನಿಃಶ್ವಸಂತೋ ಮಹೀತಲೇ।
07159038c ವಿಶೀರ್ಣಾ ಗಿರಯೋ ಯದ್ವನ್ನಿಃಶ್ವಸದ್ಭಿರ್ಮಹೋರಗೈಃ।।
ಸುದೀರ್ಘವಾಗಿ ನಿಟ್ಟುಸಿರುಬಿಡುತ್ತಾ ಮಲಗಿದ್ದ ಆನೆಗಳು ಆ ರಣಾಂಗಣದಲ್ಲಿ ಭುಸುಗುಟ್ಟುವ ಸರ್ಪಗಳಿಂದ ಕೂಡಿದ ಕಡಿದು ಬಿದ್ದಿರುವ ಪರ್ವತಗಳಂತೆ ಕಾಣುತ್ತಿದ್ದವು.
07159039a ಸಮಾಂ ಚ ವಿಷಮಾಂ ಚಕ್ರುಃ ಖುರಾಗ್ರೈರ್ವಿಕ್ಷತಾಂ ಮಹೀಂ।
07159039c ಹಯಾಃ ಕಾಂಚನಯೋಕ್ತ್ರಾಶ್ಚ ಕೇಸರಾಲಂಬಿಭಿರ್ಯುಗೈಃ।
07159039e ಸುಷುಪುಸ್ತತ್ರ ರಾಜೇಂದ್ರ ಯುಕ್ತಾ ವಾಹೇಷು ಸರ್ವಶಃ।।
ಕಾಂಚನದ ಕಡಿವಾಣಗಳುಳ್ಳ ಕುದುರೆಗಳು ಕತ್ತಿನ ಕೂದಲುಗಳಮೇಲೆ ಕಟ್ಟಲ್ಪಟ್ಟಿದ್ದ ನೊಗಗಳಿಂದಲೂ ಗೊರಸುಗಳ ತುದಿಯಿಂದಲೂ ಭೂಮಿಯನ್ನು ಕೆರೆಯುತ್ತಾ ಸಮವಾಗಿದ್ದ ರಣಭೂಮಿಯನ್ನು ಹಳ್ಳ-ತಿಟ್ಟುಗಳಾಗುವಂತೆ ಮಾಡಿದವು. ರಾಜೇಂದ್ರ! ಅಲ್ಲಿ ಎಲ್ಲಕಡೆ ಕುದುರೆಗಳು ರಥಗಳಿಗೆ ಕಟ್ಟಿಕೊಂಡೇ ನಿದ್ದೆಮಾಡುತ್ತಿದ್ದವು.
07159040a ತತ್ತಥಾ ನಿದ್ರಯಾ ಭಗ್ನಮವಾಚಮಸ್ವಪದ್ಬಲಂ।
07159040c ಕುಶಲೈರಿವ ವಿನ್ಯಸ್ತಂ ಪಟೇ ಚಿತ್ರಮಿವಾದ್ಭುತಂ।।
ಹಾಗೆ ತಮ್ಮ ವಾಹನಗಳೊಡನೆ ಸುಮ್ಮನೇ ಚಲಿಸದೇ ಗಾಢನಿದ್ರೆಯಲ್ಲಿ ಮಲಗಿರುವುದನ್ನು ನೋಡಿದರೆ ಕುಶಲ ಚಿತ್ರಕಾರನು ಚಿತ್ರಪಟದ ಮೇಲೆ ಅದ್ಭುತ ಚಿತ್ರವನ್ನು ಬರೆದಿರುವನೋ ಎಂಬಂತೆ ತೋರುತ್ತಿತ್ತು.
07159041a ತೇ ಕ್ಷತ್ರಿಯಾಃ ಕುಂಡಲಿನೋ ಯುವಾನಃ ಪರಸ್ಪರಂ ಸಾಯಕವಿಕ್ಷತಾಂಗಾಃ।
07159041c ಕುಂಭೇಷು ಲೀನಾಃ ಸುಷುಪುರ್ಗಜಾನಾಂ ಕುಚೇಷು ಲಗ್ನಾ ಇವ ಕಾಮಿನೀನಾಂ।।
ಪರಸ್ಪರರ ಸಾಯಕಗಳಿಂದ ಅಂಗಾಂಗಗಳಲ್ಲಿ ಗಾಯಗೊಂಡು ಆನೆಗಳ ಕುಂಭಸ್ಥಳಗಳ ಮೇಲೆ ಮುಖವನ್ನಿಟ್ಟು ಮಲಗಿರುವ ಕುಂಡಲಗಳನ್ನು ಧರಿಸಿದ್ದ ಆ ಯುವಕರು ಕಾಮಿನಿಯರ ಕುಚಗಳ ನಡುವೆ ಮುಖವನ್ನು ಹುದುಗಿಸಿಕೊಂಡು ಮಲಗಿರುವ ಕಾಮುಕರಂತೆ ಕಾಣುತ್ತಿದ್ದರು.
07159042a ತತಃ ಕುಮುದನಾಥೇನ ಕಾಮಿನೀಗಂಡಪಾಂಡುನಾ।
07159042c ನೇತ್ರಾನಂದೇನ ಚಂದ್ರೇಣ ಮಾಹೇಂದ್ರೀ ದಿಗಲಂಕೃತಾ।।
ಆಗ ಕಾಮಿನಿಯರ ಕಪೋಲಗಳಂತೆ ಬಿಳುಪಾಗಿದ್ದ ನಯನಾನಂದಕರ ಕುಮುದನಾಥ ಚಂದ್ರನು ಮಹೇಂದ್ರನ ಪೂರ್ವ ದಿಕ್ಕನ್ನು ಅಲಂಕರಿಸಿದನು.
07159043a ತತೋ ಮುಹೂರ್ತಾದ್ಭಗವಾನ್ಪುರಸ್ತಾಚ್ಚಶಲಕ್ಷಣಃ।
07159043c ಅರುಣಂ ದರ್ಶಯಾಮಾಸ ಗ್ರಸಂ ಜ್ಯೋತಿಃಷ್ಪ್ರಭಂ ಪ್ರಭುಃ।।
ಆಗ ಮುಹೂರ್ತಕಾಲದಲ್ಲಿ ಮೊಲದ ಚಿಹ್ನೆಯುಳ್ಳ ಭಗವಾನ್ ಪ್ರಭು ಚಂದ್ರನು ನಕ್ಷತ್ರಗಳ ಬೆಳಕನ್ನು ತಾನೇ ಹೀರಿಕೊಳ್ಳುತ್ತಾ ಮೊದಲು ಅರುಣನನ್ನು ತೋರಿಸಿದನು.
07159044a ಅರುಣಸ್ಯ ತು ತಸ್ಯಾನು ಜಾತರೂಪಸಮಪ್ರಭಂ।
07159044c ರಶ್ಮಿಜಾಲಂ ಮಹಚ್ಚಂದ್ರೋ ಮಂದಂ ಮಂದಮವಾಸೃಜತ್।।
ಅರುಣನ ಉದಯವನ್ನು ಅನುಸರಿಸಿ ಚಂದ್ರನು ಸುವರ್ಣಪ್ರಭೆಗೆ ಸಮಾನ ಪ್ರಭೆಯ ದೊಡ್ಡ ಕಿರಣಗಳ ಸಮೂಹಗಳನ್ನು ಮಂದ ಮಂದವಾಗಿ ಹೊರಹೊಮ್ಮಿಸಿದನು.
07159045a ಉತ್ಸಾರಯಂತಃ ಪ್ರಭಯಾ ತಮಸ್ತೇ ಚಂದ್ರರಶ್ಮಯಃ।
07159045c ಪರ್ಯಗಚ್ಚಂ ಶನೈಃ ಸರ್ವಾ ದಿಶಃ ಖಂ ಚ ಕ್ಷಿತಿಂ ತಥಾ।।
ಚಂದ್ರನ ಆ ರಶ್ಮಿಗಳು ಪ್ರಭೆಯಿಂದ ಕತ್ತಲೆಯನ್ನು ಓಡಿಸುತ್ತಾ, ಮೆಲ್ಲ ಮೆಲ್ಲಗೆ ಎಲ್ಲ ದಿಕ್ಕುಗಳನ್ನೂ ಅಂತರಿಕ್ಷ-ಭೂಮಿಗಳನ್ನು ವ್ಯಾಪಿಸಿದವು.
07159046a ತತೋ ಮುಹೂರ್ತಾದ್ಭುವನಂ ಜ್ಯೋತಿರ್ಭೂತಮಿವಾಭವತ್।
07159046c ಅಪ್ರಖ್ಯಮಪ್ರಕಾಶಂ ಚ ಜಗಾಮಾಶು ತಮಸ್ತಥಾ।।
ಆಗ ಮುಹೂರ್ತಕಾಲದಲ್ಲಿ ವಿಶ್ವವೇ ಜ್ಯೋತಿರ್ಮಯವಾಗಿ ಬೆಳಗಿತು. ಹೇಳಹೆಸರಿಲ್ಲದಂತೆ ಕತ್ತಲೆಯು ಎಲ್ಲಿಗೋ ಓಡಿಹೋಯಿತು.
07159047a ಪ್ರತಿಪ್ರಕಾಶಿತೇ ಲೋಕೇ ದಿವಾಭೂತೇ ನಿಶಾಕರೇ।
07159047c ವಿಚೇರುರ್ನ ವಿಚೇರುಶ್ಚ ರಾಜನ್ನಕ್ತಂಚರಾಸ್ತತಃ।।
ರಾಜನ್! ನಿಶಾಕರನು ಪೂರ್ಣಪ್ರಕಾಶದಿಂದ ಬೆಳಗುತ್ತಿರಲಾಗಿ ಹಗಲಿನಂತೆಯೇ ಲೋಕವು ಚಂದ್ರನ ಬೆಳಕಿನಿಂದ ಬೆಳಗತೊಡಗಲು ಕೆಲವು ನಕ್ತಂಚರ ಪ್ರಾಣಿಗಳು ಅಲ್ಲಲ್ಲಿ ಸಂಚರಿಸತೊಡಗಿದವು.
07159048a ಬೋಧ್ಯಮಾನಂ ತು ತತ್ಸೈನ್ಯಂ ರಾಜಂಶ್ಚಂದ್ರಸ್ಯ ರಶ್ಮಿಭಿಃ।
07159048c ಬುಬುಧೇ ಶತಪತ್ರಾಣಾಂ ವನಂ ಮಹದಿವಾಂಭಸಿ।।
ರಾಜನ್! ಸೂರ್ಯನ ರಶ್ಮಿಗಳಿಂದ ಕಮಲಪುಷ್ಪಗಳ ವನವು ವಿಕಸಿತವಾಗುವಂತೆ ಚಂದ್ರಕಿರಣಗಳ ಸ್ಪರ್ಶದಿಂದ ಸೈನ್ಯವು ಎಚ್ಚರಗೊಂಡಿತು.
07159049a ಯಥಾ ಚಂದ್ರೋದಯೋದ್ಧೂತಃ ಕ್ಷುಭಿತಃ ಸಾಗರೋ ಭವೇತ್।
07159049c ತಥಾ ಚಂದ್ರೋದಯೋದ್ಧೂತಃ ಸ ಬಭೂವ ಬಲಾರ್ಣವಃ।।
ಚಂದ್ರೋದಯದ ಪ್ರಭಾವದಿಂದ ಸಮುದ್ರವು ಅಲ್ಲೋಲ-ಕಲ್ಲೋಲವಾಗುವಂತೆ ಚಂದ್ರೋದಯದಿಂದ ಎಚ್ಚೆತ್ತ ಸೇನಾಸಾಗರವೂ ಕ್ಷೋಭೆಗೊಂಡಿತು.
07159050a ತತಃ ಪ್ರವವೃತೇ ಯುದ್ಧಂ ಪುನರೇವ ವಿಶಾಂ ಪತೇ।
07159050c ಲೋಕೇ ಲೋಕವಿನಾಶಾಯ ಪರಂ ಲೋಕಮಭೀಪ್ಸತಾಂ।।
ವಿಶಾಂಪತೇ! ಅನಂತರ ಪರಮ ಲೋಕಗಳನ್ನು ಬಯಸಿದ್ದ ಅವರ ನಡುವೆ ಲೋಕವಿನಾಶಕಾರಿ ಆ ಯುದ್ಧವು ಪುನಃ ಪ್ರಾರಂಭವಾಯಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣವಧ ಪರ್ವಣಿ ರಾತ್ರಿಯುದ್ಧೇ ಸೈನ್ಯನಿದ್ರಾಯಾಂ ಏಕೋನಷಷ್ಟ್ಯಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣವಧ ಪರ್ವದಲ್ಲಿ ರಾತ್ರಿಯುದ್ಧೇ ಸೈನ್ಯನಿದ್ರಾ ಎನ್ನುವ ನೂರಾಐವತ್ತೊಂಭತ್ತನೇ ಅಧ್ಯಾಯವು.