ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಘಟೋತ್ಕಚವಧ ಪರ್ವ
ಅಧ್ಯಾಯ 158
ಸಾರ
ಧೃತರಾಷ್ಟ್ರ-ಸಂಜಯರ ಸಂವಾದ (1-18). ಕೃಷ್ಣನೊಂದಿಗೆ ದುಃಖಿತನಾಗಿದ್ದ ಯುಧಿಷ್ಠಿರನ ಸಂವಾದ (19-48). ವ್ಯಾಸನು ಯುಧಿಷ್ಠಿರನನ್ನು ಸಮಾಧಾನಗೊಳಿಸಿದುದು (49-62).
07158001 ಧೃತರಾಷ್ಟ್ರ ಉವಾಚ।
07158001a ಕರ್ಣದುರ್ಯೋಧನಾದೀನಾಂ ಶಕುನೇಃ ಸೌಬಲಸ್ಯ ಚ।
07158001c ಅಪನೀತಂ ಮಹತ್ತಾತ ತವ ಚೈವ ವಿಶೇಷತಃ।।
ಧೃತರಾಷ್ಟ್ರನು ಹೇಳಿದನು: “ಕರ್ಣ, ದುರ್ಯೋಧನಾದಿಗಳು, ಸೌಬಲ ಶಕುನಿ ಮತ್ತು ವಿಶೇಷವಾಗಿ ನೀನು ಅತಿ ದೊಡ್ಡ ಅನೀತಿಯನ್ನೇ ಅನುಸರಿಸಿದಿರಿ!
07158002a ಯದಾಜಾನೀತ ತಾಂ ಶಕ್ತಿಂ ಏಕಘ್ನೀಂ ಸತತಂ ರಣೇ।
07158002c ಅನಿವಾರ್ಯಾಮಸಹ್ಯಾಂ ಚ ದೇವೈರಪಿ ಸವಾಸವೈಃ।।
07158003a ಸಾ ಕಿಮರ್ಥಂ ನ ಕರ್ಣೇನ ಪ್ರವೃತ್ತೇ ಸಮರೇ ಪುರಾ।
07158003c ನ ದೇವಕೀಸುತೇ ಮುಕ್ತಾ ಫಲ್ಗುನೇ ವಾಪಿ ಸಂಜಯ।।
ಸಂಜಯ! ಆ ಶಕ್ತಿಯು ರಣದಲ್ಲಿ ಒಬ್ಬನನ್ನೇ ಕೊಲ್ಲಬಹುದೆನ್ನುವುದನ್ನೂ, ಅದನ್ನು ವಾಸವನ ಸಹಾಯವಿರುವ ದೇವತೆಗಳಿಗೂ ತಡೆಯಲು ಸಾಧ್ಯವಿಲ್ಲ ಎನ್ನುವುದನ್ನೂ ಯಾವಾಗಲೂ ತಿಳಿದಿದ್ದ ನೀವು ಯಾವ ಕಾರಣಕ್ಕಾಗಿ ಇದರ ಮೊದಲೇ ಸಮರದಲ್ಲಿ ದೇವಕೀಸುತನ ಮೇಲಾಗಲೀ ಫಲ್ಗುನನ ಮೇಲಾಗಲೀ ಅದನ್ನು ಪ್ರಹರಿಸುವಂತೆ ಕರ್ಣನನ್ನು ಪ್ರಚೋದಿಸಲಿಲ್ಲ?”
07158004 ಸಂಜಯ ಉವಾಚ।
07158004a ಸಂಗ್ರಾಮಾದ್ವಿನಿವೃತ್ತಾನಾಂ ಸರ್ವೇಷಾಂ ನೋ ವಿಶಾಂ ಪತೇ।
07158004c ರಾತ್ರೌ ಕುರುಕುಲಶ್ರೇಷ್ಠ ಮಂತ್ರೋಽಯಂ ಸಮಜಾಯತ।।
07158005a ಪ್ರಭಾತಮಾತ್ರೇ ಶ್ವೋಭೂತೇ ಕೇಶವಾಯಾರ್ಜುನಾಯ ವಾ।
07158005c ಶಕ್ತಿರೇಷಾ ವಿಮೋಕ್ತವ್ಯಾ ಕರ್ಣ ಕರ್ಣೇತಿ ನಿತ್ಯಶಃ।।
ಸಂಜಯನು ಹೇಳಿದನು: “ವಿಶಾಂಪತೇ! ಕುರುಕುಲಶ್ರೇಷ್ಠ! ಸಂಗ್ರಾಮದಿಂದ ಹಿಂದಿರುಗುತ್ತಲೇ ರಾತ್ರಿಯಲ್ಲಿ ನಾವೆಲ್ಲರೂ ನಿತ್ಯವೂ ಅವನಿಗೆ ಇದೇ ಸಲಹೆಯನ್ನು ನೀಡುತ್ತಿದ್ದೆವು: “ಕರ್ಣ! ಕರ್ಣ! ನಾಳೆ ಬೆಳಗಾಗುತ್ತಲೇ ಕೇಶವನ ಮೇಲಾಗಲೀ ಅರ್ಜುನನ ಮೇಲಾಗಲೀ ಈ ಶಕ್ತಿಯನ್ನು ಪ್ರಯೋಗಿಸು!” ಎಂದು.
07158006a ತತಃ ಪ್ರಭಾತಸಮಯೇ ರಾಜನ್ಕರ್ಣಸ್ಯ ದೈವತೈಃ।
07158006c ಅನ್ಯೇಷಾಂ ಚೈವ ಯೋಧಾನಾಂ ಸಾ ಬುದ್ಧಿರ್ನಶ್ಯತೇ ಪುನಃ।।
ರಾಜನ್! ಆದರೆ ಪ್ರಭಾತಸಮಯದಲ್ಲಿ ದೈವಚಿತ್ತವೋ ಎಂಬಂತೆ ಕರ್ಣನ ಮತ್ತು ಅನ್ಯ ಯೋಧರ ಬುದ್ಧಿಯು ಪುನಃ ನಾಶವಾಗಿಹೋಗುತ್ತಿತ್ತು!
07158007a ದೈವಮೇವ ಪರಂ ಮನ್ಯೇ ಯತ್ಕರ್ಣೋ ಹಸ್ತಸಂಸ್ಥಯಾ।
07158007c ನ ಜಘಾನ ರಣೇ ಪಾರ್ಥಂ ಕೃಷ್ಣಂ ವಾ ದೇವಕೀಸುತಂ।।
ರಣದಲ್ಲಿ ಕರ್ಣನು ತನ್ನ ಕೈಯಿಂದ ಪಾರ್ಥನನ್ನಾಗಲೀ ದೇವಕೀಸುತ ಕೃಷ್ಣನನ್ನಾಗಲೀ ಕೊಲ್ಲದೇ ಇರುವುದಕ್ಕೆ ದೈವವೇ ಪರಮ ಕಾರಣವೆಂದು ನನಗನ್ನಿಸುತ್ತದೆ.
07158008a ತಸ್ಯ ಹಸ್ತಸ್ಥಿತಾ ಶಕ್ತಿಃ ಕಾಲರಾತ್ರಿರಿವೋದ್ಯತಾ।
07158008c ದೈವೋಪಹತಬುದ್ಧಿತ್ವಾನ್ನ ತಾಂ ಕರ್ಣೋ ವಿಮುಕ್ತವಾನ್।।
ಅವನ ಕೈಯಲ್ಲಿ ಆ ಶಕ್ತಿಯು ಕಾಲರಾತ್ರಿಯಂತೆ ಸರ್ವತಾ ಜಾಗ್ರತವಾಗಿಯೇ ಇದ್ದಿತು. ಆದರೆ ದೈವದಿಂದ ಬುದ್ಧಿಯನ್ನು ಕಳೆದುಕೊಂಡ ಕರ್ಣನು ಅದನ್ನು ಪ್ರಯೋಗಿಸಲಿಲ್ಲ.
07158009a ಕೃಷ್ಣೇ ವಾ ದೇವಕೀಪುತ್ರೇ ಮೋಹಿತೋ ದೇವಮಾಯಯಾ।
07158009c ಪಾರ್ಥೇ ವಾ ಶಕ್ರಕಲ್ಪೇ ವೈ ವಧಾರ್ಥಂ ವಾಸವೀಂ ಪ್ರಭೋ।।
ಪ್ರಭೋ! ದೇವಮಾಯೆಯಿಂದ ಮೋಹಿತನಾದ ಅವನು ಶಕ್ರನು ನೀಡಿದ ಆ ವಾಸವೀ ಶಕ್ತಿಯನ್ನು ದೇವಕೀಪುತ್ರ ಕೃಷ್ಣನ ಅಥವಾ ಪಾರ್ಥನ ವಧೆಗಾಗಿ ಬಳಸಲಿಲ್ಲ!”
07158010 ಧೃತರಾಷ್ಟ್ರ ಉವಾಚ।
07158010a ದೈವೇನೈವ ಹತಾ ಯೂಯಂ ಸ್ವಬುದ್ಧ್ಯಾ ಕೇಶವಸ್ಯ ಚ।
07158010c ಗತಾ ಹಿ ವಾಸವೀ ಹತ್ವಾ ತೃಣಭೂತಂ ಘಟೋತ್ಕಚಂ।।
ಧೃತರಾಷ್ಟ್ರನು ಹೇಳಿದನು: “ನೀವೆಲ್ಲರೂ ಈಗಲೇ ದೈವದಿಂದ ಹತರಾಗಿದ್ದೀರಿ. ಕೇಶವನ ಬುದ್ಧಿವಂತಿಕೆಯಿಂದಾಗಿ ಇಂದ್ರನ ಆ ಮಹಾಶಕ್ತಿಯು ತೃಣಪ್ರಾಯ ಘಟೋತ್ಕಚನನ್ನು ಸಂಹರಿಸಿ ಹೊರಟುಹೋಯಿತು.
07158011a ಕರ್ಣಶ್ಚ ಮಮ ಪುತ್ರಾಶ್ಚ ಸರ್ವೇ ಚಾನ್ಯೇ ಚ ಪಾರ್ಥಿವಾಃ।
07158011c ಅನೇನ ದುಷ್ಪ್ರಣೀತೇನ ಗತಾ ವೈವಸ್ವತಕ್ಷಯಂ।।
ನಿಮ್ಮ ದುರ್ನೀತಿಯಿಂದಾಗಿ ಕರ್ಣನೂ, ನನ್ನ ಎಲ್ಲ ಮಕ್ಕಳೂ, ಮತ್ತು ಅನ್ಯ ರಾಜರೂ ಯಮಾಲಯಕ್ಕೆ ಹೋಗಿಬಿಟ್ಟಿದ್ದಾರೆ!
07158012a ಭೂಯ ಏವ ತು ಮೇ ಶಂಸ ಯಥಾ ಯುದ್ಧಮವರ್ತತ।
07158012c ಕುರೂಣಾಂ ಪಾಂಡವಾನಾಂ ಚ ಹೈಡಿಂಬೇ ನಿಹತೇ ತದಾ।।
ಹೈಡಿಂಬಿಯು ಹತನಾದ ನಂತರ ಕುರು-ಪಾಂಡವರ ನಡುವೆ ಹೇಗೆ ಯುದ್ಧ ನಡೆಯಿತು ಎನ್ನುವುದನ್ನು ನನಗೆ ಹೇಳು.
07158013a ಯೇ ಚ ತೇಽಭ್ಯದ್ರವನ್ದ್ರೋಣಂ ವ್ಯೂಢಾನೀಕಾಃ ಪ್ರಹಾರಿಣಃ।
07158013c ಸೃಂಜಯಾಃ ಸಹ ಪಾಂಚಾಲೈಸ್ತೇಽಪ್ಯಕುರ್ವನ್ ಕಥಂ ರಣಂ।।
ಪ್ರಹಾರಿ ಸೃಂಜಯ-ಪಾಂಚಾಲರು ವ್ಯೂಹವನ್ನು ರಚಿಸಿ ಹೇಗೆ ರಣದಲ್ಲಿ ದ್ರೋಣನನ್ನು ಆಕ್ರಮಣಿಸಿದರು?
07158014a ಸೌಮದತ್ತೇರ್ವಧಾದ್ದ್ರೋಣಮಾಯಸ್ತಂ ಸೈಂಧವಸ್ಯ ಚ।
07158014c ಅಮರ್ಷಾಜ್ಜೀವಿತಂ ತ್ಯಕ್ತ್ವಾ ಗಾಹಮಾನಂ ವರೂಥಿನೀಂ।।
07158015a ಜೃಂಭಮಾಣಮಿವ ವ್ಯಾಘ್ರಂ ವ್ಯಾತ್ತಾನನಮಿವಾಂತಕಂ।
07158015c ಕಥಂ ಪ್ರತ್ಯುದ್ಯಯುರ್ದ್ರೋಣಮಸ್ಯಂತಂ ಪಾಂಡುಸೃಂಜಯಾಃ।।
ಸೌಮದತ್ತಿ ಭೂರಿಶ್ರವಸ ಮತ್ತು ಸೈಂಧವರ ವಧೆಯಿಂದಾಗಿ ಮೊದಲೇ ಕುಪಿತನಾಗಿದ್ದ, ಜೀವವನ್ನು ತ್ಯಜಿಸಿ ಸೇನೆಯ ಒಳಹೊಗುತ್ತಿದ್ದ, ಆಕಳಿಸುವ ವ್ಯಾಘ್ರದಂತಿದ್ದ, ಬಾಯಿತೆರೆದ ಅಂತಕನಂತಿದ್ದ ದ್ರೋಣನನ್ನು ಪಾಂಡವ-ಸೃಂಜಯರು ಹೇಗೆ ಎದುರಿಸಿದರು?
07158016a ಆಚಾರ್ಯಂ ಯೇ ಚ ತೇಽರಕ್ಷನ್ದುರ್ಯೋಧನಪುರೋಗಮಾಃ।
07158016c ದ್ರೌಣಿಕರ್ಣಕೃಪಾಸ್ತಾತ ತೇಽಪ್ಯಕುರ್ವನ್ಕಿಮಾಹವೇ।।
ಆಚಾರ್ಯನನ್ನು ರಕ್ಷಿಸುತ್ತಿದ್ದ ದುರ್ಯೋಧನನೇ ಮೊದಲಾದ ದ್ರೌಣಿ, ಕೃಪರು ಆ ಸಮಯದಲ್ಲಿ ರಣರಂಗದಲ್ಲಿ ಏನು ಮಾಡುತ್ತಿದ್ದರು?
07158017a ಭಾರದ್ವಾಜಂ ಜಿಘಾಂಸಂತೌ ಸವ್ಯಸಾಚಿವೃಕೋದರೌ।
07158017c ಸಮಾರ್ಚನ್ಮಾಮಕಾ ಯುದ್ಧೇ ಕಥಂ ಸಂಜಯ ಶಂಸ ಮೇ।।
ಸಂಜಯ! ಭಾರದ್ವಾಜನನ್ನು ಸಂಹರಿಸಲು ಬಯಸುತ್ತಿದ್ದ ಸವ್ಯಸಾಚಿ-ವೃಕೋದರರನ್ನು ನನ್ನವರು ಹೇಗೆ ಯುದ್ಧದಲ್ಲಿ ಎದುರಿಸಿದರು ಎನ್ನುವುದನ್ನು ನನಗೆ ಹೇಳು.
07158018a ಸಿಂಧುರಾಜವಧೇನೇಮೇ ಘಟೋತ್ಕಚವಧೇನ ತೇ।
07158018c ಅಮರ್ಷಿತಾಃ ಸುಸಂಕ್ರುದ್ಧಾ ರಣಂ ಚಕ್ರುಃ ಕಥಂ ನಿಶಿ।।
ಸಿಂಧುರಾಜನ ವಧೆಯಿಂದ ಕುಪಿತರಾಗಿದ್ದ ನಮ್ಮವರೂ, ಘಟೋತ್ಕಚನ ವಧೆಯಿಂದ ಕುಪಿತರಾಗಿದ್ದ ಅವರೂ ಆ ರಾತ್ರಿ ಯಾವ ರಣನೀತಿಯನ್ನು ನಡೆಸಿದರು?”
07158019 ಸಂಜಯ ಉವಾಚ।
07158019a ಹತೇ ಘಟೋತ್ಕಚೇ ರಾಜನ್ಕರ್ಣೇನ ನಿಶಿ ರಾಕ್ಷಸೇ।
07158019c ಪ್ರಣದತ್ಸು ಚ ಹೃಷ್ಟೇಷು ತಾವಕೇಷು ಯುಯುತ್ಸುಷು।।
07158020a ಆಪತತ್ಸು ಚ ವೇಗೇನ ವಧ್ಯಮಾನೇ ಬಲೇಽಪಿ ಚ।
07158020c ವಿಗಾಢಾಯಾಂ ರಜನ್ಯಾಂ ಚ ರಾಜಾ ದೈನ್ಯಂ ಪರಂ ಗತಃ।।
ಸಂಜಯನು ಹೇಳಿದನು: “ರಾಜನ್! ರಾತ್ರಿಯಲ್ಲಿ ಕರ್ಣನಿಂದ ರಾಕ್ಷಸ ಘಟೋತ್ಕಚನು ಹತನಾಗಲು, ಪ್ರಹೃಷ್ಟರಾದ ನಿನ್ನವರು ಯುದ್ಧೋತ್ಸಾಹದಿಂದ ಯುದ್ಧಮಾಡುತ್ತಾ ವೇಗದಿಂದ ಸೇನೆಯನ್ನು ವಧಿಸುತ್ತಿರಲು, ಆ ದಟ್ಟ ರಾತ್ರಿಯಲ್ಲಿ ರಾಜಾ ಯುಧಿಷ್ಠಿರನು ಪರಮ ದುಃಖಿತನಾದನು.
07158021a ಅಬ್ರವೀಚ್ಚ ಮಹಾಬಾಹುರ್ಭೀಮಸೇನಂ ಪರಂತಪಃ।
07158021c ಆವಾರಯ ಮಹಾಬಾಹೋ ಧಾರ್ತರಾಷ್ಟ್ರಸ್ಯ ವಾಹಿನೀಂ।
07158021e ಹೈಡಿಂಬಸ್ಯಾಭಿಘಾತೇನ ಮೋಹೋ ಮಾಮಾವಿಶನ್ಮಹಾನ್।।
ಆ ಪರಂತಪನು ಮಹಾಬಾಹು ಭೀಮಸೇನನಿಗೆ ಹೇಳಿದನು: “ಮಹಾಬಾಹೋ! ಧಾರ್ತರಾಷ್ಟ್ರನ ಸೇನೆಯನ್ನು ತಡೆ! ಹೈಡಿಂಬನ ವಿಘಾತದಿಂದಾಗಿ ಮಹಾ ಮೋಹವು ನನ್ನನ್ನು ಆವೇಶಗೊಂಡಿದೆ!”
07158022a ಏವಂ ಭೀಮಂ ಸಮಾದಿಶ್ಯ ಸ್ವರಥೇ ಸಮುಪಾವಿಶತ್।
07158022c ಅಶ್ರುಪೂರ್ಣಮುಖೋ ರಾಜಾ ನಿಃಶ್ವಸಂಶ್ಚ ಪುನಃ ಪುನಃ।
07158022e ಕಶ್ಮಲಂ ಪ್ರಾವಿಶದ್ಘೋರಂ ದೃಷ್ಟ್ವಾ ಕರ್ಣಸ್ಯ ವಿಕ್ರಮಂ।।
ಭೀಮನಿಗೆ ಹೀಗೆ ಆದೇಶಿಸಿ ಯುಧಿಷ್ಠಿರನು ತನ್ನ ರಥದಲ್ಲಿಯೇ ಕುಳಿತುಕೊಂಡನು. ಮುಖವು ಕಣ್ಣೀರಿನಿಂದ ತುಂಬಿಹೋಗಲು ರಾಜನು ಪುನಃ ಪುನಃ ನಿಟ್ಟುಸಿರು ಬಿಡುತ್ತಿದ್ದನು. ಕರ್ಣನ ವಿಕ್ರಮವನ್ನು ನೋಡಿ ಘೋರ ಚಿಂತೆಯು ಅವನನ್ನು ಆವರಿಸಿತು.
07158023a ತಂ ತಥಾ ವ್ಯಥಿತಂ ದೃಷ್ಟ್ವಾ ಕೃಷ್ಣೋ ವಚನಮಬ್ರವೀತ್।
07158023c ಮಾ ವ್ಯಥಾಂ ಕುರು ಕೌಂತೇಯ ನೈತತ್ತ್ವಯ್ಯುಪಪದ್ಯತೇ।
07158023e ವೈಕ್ಲವ್ಯಂ ಭರತಶ್ರೇಷ್ಠ ಯಥಾ ಪ್ರಾಕೃತಪೂರುಷೇ।।
ಅವನು ಹಾಗೆ ವ್ಯಥಿತನಾಗಿರುವುದನ್ನು ನೋಡಿ ಕೃಷ್ಣನು ಈ ಮಾತನ್ನಾಡಿದನು: “ಕೌಂತೇಯ! ದುಃಖಿಸದಿರು! ಸಾಮಾನ್ಯ ಮನುಷ್ಯನಂತೆ ಈ ರೀತಿ ದುಃಖಿಸುವುದು ನಿನಗೆ ಸರಿಯೆನಿಸುವುದಿಲ್ಲ. ಭರತಶ್ರೇಷ್ಠ!
07158024a ಉತ್ತಿಷ್ಠ ರಾಜನ್ಯುಧ್ಯಸ್ವ ವಹ ಗುರ್ವೀಂ ಧುರಂ ವಿಭೋ।
07158024c ತ್ವಯಿ ವೈಕ್ಲವ್ಯಮಾಪನ್ನೇ ಸಂಶಯೋ ವಿಜಯೇ ಭವೇತ್।।
ರಾಜನ್! ಎದ್ದೇಳು! ಯುದ್ಧಮಾಡು! ವಿಭೋ! ಈ ಭಾರವನ್ನು ಹೊರು! ನೀನು ಗಾಬರಿಗೊಂಡರೆ ವಿಜಯದಲ್ಲಿ ಸಂಶಯವುಂಟಾಗುತ್ತದೆ.”
07158025a ಶ್ರುತ್ವಾ ಕೃಷ್ಣಸ್ಯ ವಚನಂ ಧರ್ಮರಾಜೋ ಯುಧಿಷ್ಠಿರಃ।
07158025c ವಿಮೃಜ್ಯ ನೇತ್ರೇ ಪಾಣಿಭ್ಯಾಂ ಕೃಷ್ಣಂ ವಚನಮಬ್ರವೀತ್।।
ಕೃಷ್ಣನ ಮಾತನ್ನು ಕೇಳಿ ಧರ್ಮರಾಜ ಯುಧಿಷ್ಠಿರನು ಕೈಗಳಿಂದ ಕಣ್ಣೀರನ್ನು ಒರೆಸಿಕೊಂಡು ಕೃಷ್ಣನಿಗೆ ಈ ಮಾತುಗಳನ್ನಾಡಿದನು:
07158026a ವಿದಿತಾ ತೇ ಮಹಾಬಾಹೋ ಧರ್ಮಾಣಾಂ ಪರಮಾ ಗತಿಃ।
07158026c ಬ್ರಹ್ಮಹತ್ಯಾಫಲಂ ತಸ್ಯ ಯಃ ಕೃತಂ ನಾವಬುಧ್ಯತೇ।।
“ಕೃಷ್ಣ! ಮಹಾಬಾಹೋ! ಧರ್ಮಗಳ ಪರಮ ದಾರಿಯು ನಿನಗೆ ತಿಳಿದೇ ಇದೆ. ಪಡೆದುಕೊಂಡ ಉಪಕಾರವನ್ನು ಸ್ಮರಿಸಿಕೊಳ್ಳದಿರುವವನಿಗೆ ಬ್ರಹ್ಮಹತ್ಯೆಯ ಫಲವು ದೊರಕುತ್ತದೆ!
07158027a ಅಸ್ಮಾಕಂ ಹಿ ವನಸ್ಥಾನಾಂ ಹೈಡಿಂಬೇನ ಮಹಾತ್ಮನಾ।
07158027c ಬಾಲೇನಾಪಿ ಸತಾ ತೇನ ಕೃತಂ ಸಾಹ್ಯಂ ಜನಾರ್ದನ।।
ಜನಾರ್ದನ! ನಾವು ವನದಲ್ಲಿದ್ದಾಗ ಬಾಲಕನಾಗಿದ್ದರೂ ಮಹಾತ್ಮ ಹೈಡಿಂಬಿಯು ನಿಜವಾಗಿಯೂ ನಮಗೆ ಬಹಳ ಸಹಾಯ ಮಾಡಿದ್ದನು.
07158028a ಅಸ್ತ್ರಹೇತೋರ್ಗತಂ ಜ್ಞಾತ್ವಾ ಪಾಂಡವಂ ಶ್ವೇತವಾಹನಂ।
07158028c ಅಸೌ ಕೃಷ್ಣ ಮಹೇಷ್ವಾಸಃ ಕಾಮ್ಯಕೇ ಮಾಮುಪಸ್ಥಿತಃ।
07158028e ಉಷಿತಶ್ಚ ಸಹಾಸ್ಮಾಭಿರ್ಯಾವನ್ನಾಸೀದ್ಧನಂಜಯಃ।।
ಕೃಷ್ಣ! ಶ್ವೇತವಾಹನ ಪಾಂಡವನು ಅಸ್ತ್ರಗಳಿಗಾಗಿ ಹೋಗಿರುವನೆಂದು ತಿಳಿದು ಈ ಮಹೇಷ್ವಾಸನು ಕಾಮ್ಯಕದಲ್ಲಿ ನಮ್ಮೊಡನೆಯೇ ಇದ್ದನು. ಧನಂಜಯನು ಬರುವವರೆಗೆ ಅವನು ನಮ್ಮೊಡನೆಯೇ ಇದ್ದನು.
07158029a ಗಂಧಮಾದನಯಾತ್ರಾಯಾಂ ದುರ್ಗೇಭ್ಯಶ್ಚ ಸ್ಮ ತಾರಿತಾಃ।
07158029c ಪಾಂಚಾಲೀ ಚ ಪರಿಶ್ರಾಂತಾ ಪೃಷ್ಠೇನೋಢಾ ಮಹಾತ್ಮನಾ।।
ಗಂಧಮಾದನ ಯಾತ್ರೆಯಲ್ಲಿ ಪಾಂಚಾಲಿಯು ಬಳಲಿದ್ದಾಗ ಈ ಮಹಾತ್ಮನೇ ಅವಳನ್ನು ತನ್ನ ಬೆನ್ನಮೇಲೆ ಹೊತ್ತು ದುರ್ಗಮ ಪ್ರದೇಶಗಳನ್ನು ದಾಟಿಸಿದನು.
07158030a ಆರಂಭಾಚ್ಚೈವ ಯುದ್ಧಾನಾಂ ಯದೇಷ ಕೃತವಾನ್ಪ್ರಭೋ।
07158030c ಮದರ್ಥಂ ದುಷ್ಕರಂ ಕರ್ಮ ಕೃತಂ ತೇನ ಮಹಾತ್ಮನಾ।।
ಪ್ರಭೋ! ಈ ಯುದ್ಧಗಳ ಆರಂಭದಲ್ಲಿ ಕೂಡ ಆ ಮಹಾತ್ಮನು ನನಗೋಸ್ಕರವಾಗಿ ದುಷ್ಕರ ಕರ್ಮಗಳನ್ನು ಮಾಡಿದನು.
07158031a ಸ್ವಭಾವಾದ್ಯಾ ಚ ಮೇ ಪ್ರೀತಿಃ ಸಹದೇವೇ ಜನಾರ್ದನ।
07158031c ಸೈವ ಮೇ ದ್ವಿಗುಣಾ ಪ್ರೀತೀ ರಾಕ್ಷಸೇಂದ್ರೇ ಘಟೋತ್ಕಚೇ।।
ಜನಾರ್ದನ! ಸ್ವಭಾವತಃ ನನಗೆ ಸಹದೇವನಲ್ಲಿ ಎಷ್ಟು ಪ್ರೀತಿಯಿದೆಯೋ ಅದಕ್ಕಿಂತ ಎರಡು ಪಟ್ಟು ಪ್ರೀತಿಯು ಈ ರಾಕ್ಷಸೇಂದ್ರ ಘಟೋತ್ಕಚನ ಮೇಲೆ ಇದೆ.
07158032a ಭಕ್ತಶ್ಚ ಮೇ ಮಹಾಬಾಹುಃ ಪ್ರಿಯೋಽಸ್ಯಾಹಂ ಪ್ರಿಯಶ್ಚ ಮೇ।
07158032c ಯೇನ ವಿಂದಾಮಿ ವಾರ್ಷ್ಣೇಯ ಕಶ್ಮಲಂ ಶೋಕತಾಪಿತಃ।।
ವಾರ್ಷ್ಣೇಯ! ಆ ಮಹಾಬಾಹುವು ನನ್ನ ಭಕ್ತನಾಗಿದ್ದನು. ಅವನಿಗೆ ನಾನು ಎಷ್ಟು ಪ್ರಿಯನಾಗಿದ್ದೆನೋ ಅಷ್ಟೇ ನನಗೂ ಅವನು ಪ್ರಿಯನಾಗಿದ್ದನು. ಅವನ ಅಗಲಿಕೆಯಿಂದ ಶೋಕಸಂತಪ್ತನಾಗಿದ್ದೇನೆ. ಬುದ್ಧಿಗೆಟ್ಟವನಾಗಿದ್ದೇನೆ.
07158033a ಪಶ್ಯ ಸೈನ್ಯಾನಿ ವಾರ್ಷ್ಣೇಯ ದ್ರಾವ್ಯಮಾಣಾನಿ ಕೌರವೈಃ।
07158033c ದ್ರೋಣಕರ್ಣೌ ಚ ಸಮ್ಯತ್ತೌ ಪಶ್ಯ ಯುದ್ಧೇ ಮಹಾರಥೌ।।
ವಾರ್ಷ್ಣೇಯ! ಕೌರವರಿಂದ ಓಡಿಸಲ್ಪಡುತ್ತಿರುವ ಸೈನ್ಯಗಳನ್ನು ನೋಡು! ಮಹಾರಥ ದ್ರೋಣ-ಕರ್ಣರು ಪ್ರಯತ್ನಪೂರ್ವಕವಾಗಿ ಯುದ್ಧಮಾಡುತ್ತಿರುವುದನ್ನು ನೋಡು!
07158034a ನಿಶೀಥೇ ಪಾಂಡವಂ ಸೈನ್ಯಮಾಭ್ಯಾಂ ಪಶ್ಯ ಪ್ರಮರ್ದಿತಂ।
07158034c ಗಜಾಭ್ಯಾಮಿವ ಮತ್ತಾಭ್ಯಾಂ ಯಥಾ ನಡವನಂ ಮಹತ್।।
ಮದಿಸಿದ ಎರಡು ಆನೆಗಳಿಂದ ಜೊಂಡುಹುಲ್ಲಿನ ವನವು ಧ್ವಂಸಗೊಳಿಸಲ್ಪಡುವಂತೆ ಈ ರಾತ್ರಿ ಪಾಂಡವ ಸೇನೆಯು ಧ್ವಂಸವಾಗುತ್ತಿರುವುದನ್ನು ನೋಡು!
07158035a ಅನಾದೃತ್ಯ ಬಲಂ ಬಾಹ್ವೋರ್ಭೀಮಸೇನಸ್ಯ ಮಾಧವ।
07158035c ಚಿತ್ರಾಸ್ತ್ರತಾಂ ಚ ಪಾರ್ಥಸ್ಯ ವಿಕ್ರಮಂತೇ ಸ್ಮ ಕೌರವಾಃ।।
ಮಾಧವ! ಭೀಮಸೇನನ ಬಾಹುಬಲವನ್ನೂ ಪಾರ್ಥನ ವಿಚಿತ್ರ ಅಸ್ತ್ರಬಲವನ್ನೂ ಅನಾದರಿಸಿ ಕೌರವರು ವಿಕ್ರಮದಿಂದ ನಮ್ಮ ಸೇನೆಯೊಡನೆ ಯುದ್ಧಮಾಡುತ್ತಿದ್ದಾರೆ!
07158036a ಏಷ ದ್ರೋಣಶ್ಚ ಕರ್ಣಶ್ಚ ರಾಜಾ ಚೈವ ಸುಯೋಧನಃ।
07158036c ನಿಹತ್ಯ ರಾಕ್ಷಸಂ ಯುದ್ಧೇ ಹೃಷ್ಟಾ ನರ್ದಂತಿ ಸಮ್ಯುಗೇ।।
ಯುದ್ಧದಲ್ಲಿ ರಾಕ್ಷಸನನ್ನು ಸಂಹರಿಸಿ ದ್ರೋಣ, ಕರ್ಣ ಮತ್ತು ರಾಜಾ ಸುಯೋಧನರು ರಣರಂಗದಲ್ಲಿ ಹೃಷ್ಟರಾಗಿ ಗರ್ಜಿಸುತ್ತಿದ್ದಾರೆ.
07158037a ಕಥಮಸ್ಮಾಸು ಜೀವತ್ಸು ತ್ವಯಿ ಚೈವ ಜನಾರ್ದನ।
07158037c ಹೈಡಿಂಬಃ ಪ್ರಾಪ್ತವಾನ್ಮೃತ್ಯುಂ ಸೂತಪುತ್ರೇಣ ಸಂಗತಃ।।
ಜನಾರ್ದನ! ನಾವು ಮತ್ತು ನೀನೂ ಕೂಡ ಜೀವಿಸಿರುವಾಗ ಸೂತಪುತ್ರನನ್ನು ಎದುರಿಸಿ ಹೈಡಿಂಬನು ಹೇಗೆ ಮೃತ್ಯುವನ್ನಪ್ಪಿದನು?
07158038a ಕದರ್ಥೀಕೃತ್ಯ ನಃ ಸರ್ವಾನ್ಪಶ್ಯತಃ ಸವ್ಯಸಾಚಿನಃ।
07158038c ನಿಹತೋ ರಾಕ್ಷಸಃ ಕೃಷ್ಣ ಭೈಮಸೇನಿರ್ಮಹಾಬಲಃ।।
ಕೃಷ್ಣ! ನಮ್ಮೆಲ್ಲರನ್ನೂ ತೃಣೀಕರಿಸಿ, ಸವ್ಯಸಾಚಿಯು ನೋಡುತ್ತಿರುವಂತೆಯೇ, ಭೈಮಸೇನಿ ಮಹಾಬಲ ರಾಕ್ಷಸನು ಸಂಹರಿಸಲ್ಪಟ್ಟನು!
07158039a ಯದಾಭಿಮನ್ಯುರ್ನಿಹತೋ ಧಾರ್ತರಾಷ್ಟ್ರೈರ್ದುರಾತ್ಮಭಿಃ।
07158039c ನಾಸೀತ್ತತ್ರ ರಣೇ ಕೃಷ್ಣ ಸವ್ಯಸಾಚೀ ಮಹಾರಥಃ।।
ಕೃಷ್ಣ! ದುರಾತ್ಮ ಧಾರ್ತರಾಷ್ಟ್ರರು ಅಭಿಮನ್ಯುವನ್ನು ಕೊಂದಾಗ ಮಹಾರಥ ಸವ್ಯಸಾಚಿಯು ಅಲ್ಲಿ ರಣದಲ್ಲಿರಲಿಲ್ಲ.
07158040a ನಿರುದ್ಧಾಶ್ಚ ವಯಂ ಸರ್ವೇ ಸೈಂಧವೇನ ದುರಾತ್ಮನಾ।
07158040c ನಿಮಿತ್ತಮಭವದ್ದ್ರೋಣಃ ಸಪುತ್ರಸ್ತತ್ರ ಕರ್ಮಣಿ।।
ದುರಾತ್ಮ ಸೈಂಧವನು ನಮ್ಮೆಲ್ಲರನ್ನು ತಡೆದಿದ್ದರೂ ಆ ಕೃತ್ಯಕ್ಕೆ ತನ್ನ ಮಗನೊಡನೆ ದ್ರೋಣನು ಕಾರಣನಾಗಿದ್ದನು.
07158041a ಉಪದಿಷ್ಟೋ ವಧೋಪಾಯಃ ಕರ್ಣಸ್ಯ ಗುರುಣಾ ಸ್ವಯಂ।
07158041c ವ್ಯಾಯಚ್ಚತಶ್ಚ ಖಡ್ಗೇನ ದ್ವಿಧಾ ಖಡ್ಗಂ ಚಕಾರ ಹ।।
ಸ್ವಯಂ ಗುರುವೇ ಕರ್ಣನಿಗೆ ಅಭಿಮನ್ಯುವಿನ ವಧೋಪಾಯವನ್ನು ಉಪದೇಶಿಸಿದನು. ಅಭಿಮನ್ಯುವು ಖಡ್ಗದಿಂದ ಹೋರಾಡುತ್ತಿರುವಾಗ ಅವನ ಖಡ್ಗವನ್ನು ಅವನೇ ಎರಡಾಗಿ ತುಂಡರಿಸಿದನು ಕೂಡ!
07158042a ವ್ಯಸನೇ ವರ್ತಮಾನಸ್ಯ ಕೃತವರ್ಮಾ ನೃಶಂಸವತ್।
07158042c ಅಶ್ವಾಂ ಜಘಾನ ಸಹಸಾ ತಥೋಭೌ ಪಾರ್ಷ್ಣಿಸಾರಥೀ।
07158042e ತಥೇತರೇ ಮಹೇಷ್ವಾಸಾಃ ಸೌಭದ್ರಂ ಯುಧ್ಯಪಾತಯನ್।।
ಅಭಿಮನ್ಯುವು ಕಷ್ಟದಲ್ಲಿರುವಾಗ ಸುಳ್ಳುಗಾರನಂತೆ ಕೃತವರ್ಮನು ಅವನ ಕುದುರೆಗಳನ್ನೂ ಪಾರ್ಷ್ಣಿಸಾರಥಿಯನ್ನೂ ಸಂಹರಿಸಿದನು. ಅನಂತರ ಮಹೇಷ್ವಾಸರು ಸೌಭದ್ರನನ್ನು ಕೆಳಗುರುಳಿಸಿದರು.
07158043a ಅಲ್ಪೇ ಚ ಕಾರಣೇ ಕೃಷ್ಣ ಹತೋ ಗಾಂಡೀವಧನ್ವನಾ।
07158043c ಸೈಂಧವೋ ಯಾದವಶ್ರೇಷ್ಠ ತಚ್ಚ ನಾತಿಪ್ರಿಯಂ ಮಮ।।
ಕೃಷ್ಣ! ಯಾದವಶ್ರೇಷ್ಠ! ಅಲ್ಪ ಕಾರಣಕ್ಕಾಗಿ ಗಾಂಡೀವಧನ್ವಿಯು ಸೈಂಧವನನ್ನು ಸಂಹರಿಸಿದನು. ಅದು ನನಗೆ ಪ್ರಿಯವಾಗಿರಲಿಲ್ಲ!
07158044a ಯದಿ ಶತ್ರುವಧೇ ನ್ಯಾಯ್ಯೋ ಭವೇತ್ಕರ್ತುಂ ಚ ಪಾಂಡವೈಃ।
07158044c ದ್ರೋಣಕರ್ಣೌ ರಣೇ ಪೂರ್ವಂ ಹಂತವ್ಯಾವಿತಿ ಮೇ ಮತಿಃ।।
ಒಂದುವೇಳೆ ಶತ್ರುವಧೆಯಲ್ಲಿ ನ್ಯಾಯವಾಗಬೇಕೆಂದರೆ ರಣದಲ್ಲಿ ಮೊದಲು ಪಾಂಡವರು ದ್ರೋಣ-ಕರ್ಣರನ್ನು ಸಂಹರಿಸಬೇಕೆಂದು ನನಗನ್ನಿಸುತ್ತದೆ.
07158045a ಏತೌ ಮೂಲಂ ಹಿ ದುಃಖಾನಾಮಸ್ಮಾಕಂ ಪುರುಷರ್ಷಭ।
07158045c ಏತೌ ರಣೇ ಸಮಾಸಾದ್ಯ ಪರಾಶ್ವಸ್ತಃ ಸುಯೋಧನಃ।।
ಪುರುಷರ್ಷಭ! ಇವರಿಬ್ಬರೂ ನಮ್ಮ ದುಃಖಕ್ಕೆ ಮೂಲ ಕಾರಣರು. ರಣದಲ್ಲಿ ಇವರಿಬ್ಬರನ್ನೂ ಪಡೆದು ಸುಯೋಧನನು ಸಮಾಧಾನದಿಂದಿದ್ದಾನೆ.
07158046a ಯತ್ರ ವಧ್ಯೋ ಭವೇದ್ದ್ರೋಣಃ ಸೂತಪುತ್ರಶ್ಚ ಸಾನುಗಃ।
07158046c ತತ್ರಾವಧೀನ್ಮಹಾಬಾಹುಃ ಸೈಂಧವಂ ದೂರವಾಸಿನಂ।।
ಎಲ್ಲಿ ದ್ರೋಣ ಮತ್ತು ಅನುಯಾಯಿಗಳೊಂದಿಗೆ ಸೂತಪುತ್ರನ ವಧೆಯಾಗಬೇಕಿತ್ತೋ ಅಲ್ಲಿ ಮಹಾಬಾಹು ಅರ್ಜುನನು ಅಭಿಮನ್ಯುವಿನಿಂದ ಅತಿ ದೂರದಲ್ಲಿದ್ದ ಸೈಂಧವನನ್ನು ಸಂಹರಿಸಿದನು!
07158047a ಅವಶ್ಯಂ ತು ಮಯಾ ಕಾರ್ಯಃ ಸೂತಪುತ್ರಸ್ಯ ನಿಗ್ರಹಃ।
07158047c ತತೋ ಯಾಸ್ಯಾಮ್ಯಹಂ ವೀರ ಸ್ವಯಂ ಕರ್ಣಜಿಘಾಂಸಯಾ।
07158047e ಭೀಮಸೇನೋ ಮಹಾಬಾಹುರ್ದ್ರೋಣಾನೀಕೇನ ಸಂಗತಃ।।
ಸೂತಪುತ್ರನನ್ನು ನಿಗ್ರಹಿಸುವುದು ನನ್ನ ಅವಶ್ಯ ಕಾರ್ಯವಾಗಿದೆ. ಸ್ವಯಂ ನಾನೇ ವೀರ ಕರ್ಣನನ್ನು ಸಂಹರಿಸಲು ಬಯಸಿ ಹೋಗುತ್ತೇನೆ. ಮಹಾಬಾಹು ಭೀಮಸೇನನು ದ್ರೋಣನ ಸೇನೆಯನ್ನು ಎದುರಿಸಲಿ!”
07158048a ಏವಮುಕ್ತ್ವಾ ಯಯೌ ತೂರ್ಣಂ ತ್ವರಮಾಣೋ ಯುಧಿಷ್ಠಿರಃ।
07158048c ಸ ವಿಸ್ಫಾರ್ಯ ಮಹಚ್ಚಾಪಂ ಶಂಖಂ ಪ್ರಧ್ಮಾಪ್ಯ ಭೈರವಂ।।
ಹೀಗೆ ಹೇಳಿ ಯುಧಿಷ್ಠಿರನು ಅವಸರದಲ್ಲಿ ಮಹಾಧನುಸ್ಸನ್ನು ಟೇಂಕರಿಸುತ್ತಾ ಭೈರವ ಶಂಖವನ್ನು ಊದುತ್ತಾ ಹೊರಟು ಹೋದನು.
07158049a ತತೋ ರಥಸಹಸ್ರೇಣ ಗಜಾನಾಂ ಚ ಶತೈಸ್ತ್ರಿಭಿಃ।
07158049c ವಾಜಿಭಿಃ ಪಂಚಸಾಹಸ್ರೈಸ್ತ್ರಿಸಾಹಸ್ರೈಃ ಪ್ರಭದ್ರಕೈಃ।
07158049e ವೃತಃ ಶಿಖಂಡೀ ತ್ವರಿತೋ ರಾಜಾನಂ ಪೃಷ್ಠತೋಽನ್ವಯಾತ್।।
ಆಗ ತ್ವರೆಮಾಡಿ ರಾಜನ ಹಿಂದೆಯೇ ಶಿಖಂಡಿಯು ಸಹಸ್ರ ರಥಗಳಿಂದ, ಮುನ್ನೂರು ಆನೆಗಳಿಂದ, ಐದು ಸಾವಿರ ಕುದುರೆಗಳಿಂದ ಮತ್ತು ಮೂರು ಸಾವಿರ ಪ್ರಭದ್ರಕರಿಂದ ಅವೃತನಾಗಿ ಹೋದನು.
07158050a ತತೋ ಭೇರೀಃ ಸಮಾಜಘ್ನುಃ ಶಂಖಾನ್ದಧ್ಮುಶ್ಚ ದಂಶಿತಾಃ।।
07158050c ಪಾಂಚಾಲಾಃ ಪಾಂಡವಾಶ್ಚೈವ ಯುಧಿಷ್ಠಿರಪುರೋಗಮಾಃ।
ಯುಧಿಷ್ಠಿರನ ನೇತೃತ್ವದಲ್ಲಿ ಕವಚಧಾರೀ ಪಾಂಚಾಲರು ಮತ್ತು ಪಾಂಡವರು ಭೇರಿಗಳನ್ನು ಬಾರಿಸಿದರು ಮತ್ತು ಶಂಖಗಳನ್ನೂದಿದರು.
07158051a ತತೋಽಬ್ರವೀನ್ಮಹಾಬಾಹುರ್ವಾಸುದೇವೋ ಧನಂಜಯಂ।।
07158051c ಏಷ ಪ್ರಯಾತಿ ತ್ವರಿತೋ ಕ್ರೋಧಾವಿಷ್ಟೋ ಯುಧಿಷ್ಠಿರಃ।
07158051e ಜಿಘಾಂಸುಃ ಸೂತಪುತ್ರಸ್ಯ ತಸ್ಯೋಪೇಕ್ಷಾ ನ ಯುಜ್ಯತೇ।।
ಆಗ ಮಹಾಬಾಹು ವಾಸುದೇವನು ಧನಂಜಯನಿಗೆ ಹೇಳಿದನು: “ಇಗೋ! ಕ್ರೋಧಾವಿಷ್ಟ ಯುಧಿಷ್ಠಿರನು ತ್ವರೆಮಾಡಿ ಸೂತಪುತ್ರನನ್ನು ಸಂಹರಿಸಲು ಬಯಸಿ ಹೋಗುತ್ತಿದ್ದಾನೆ! ಇದನ್ನು ಉಪೇಕ್ಷಿಸುವುದು ಸರಿಯಲ್ಲ!”
07158052a ಏವಮುಕ್ತ್ವಾ ಹೃಷೀಕೇಶಃ ಶೀಘ್ರಮಶ್ವಾನಚೋದಯತ್।
07158052c ದೂರಂ ಚ ಯಾತಂ ರಾಜಾನಮನ್ವಗಚ್ಚಜ್ಜನಾರ್ದನಃ।।
ಹೀಗೆ ಹೇಳಿ ಹೃಷೀಕೇಶನು ಶೀಘ್ರವಾಗಿ ಕುದುರೆಗಳನ್ನು ಓಡಿಸಿದನು. ಜನಾರ್ದನನು ದೂರದಲ್ಲಿ ಹೋಗುತ್ತಿದ್ದ ರಾಜಾ ಯುಧಿಷ್ಠಿರನನ್ನೇ ಅನುಸರಿಸಿದನು.
07158053a ತಂ ದೃಷ್ಟ್ವಾ ಸಹಸಾ ಯಾಂತಂ ಸೂತಪುತ್ರಜಿಘಾಂಸಯಾ।
07158053c ಶೋಕೋಪಹತಸಂಕಲ್ಪಂ ದಹ್ಯಮಾನಮಿವಾಗ್ನಿನಾ।
07158053e ಅಭಿಗಮ್ಯಾಬ್ರವೀದ್ವ್ಯಾಸೋ ಧರ್ಮಪುತ್ರಂ ಯುಧಿಷ್ಠಿರಂ।।
ಸೂತಪುತ್ರನನ್ನು ಕೊಲ್ಲಲೋಸುಗ ಅವಸರದಲ್ಲಿ ಹೋಗುತ್ತಿದ್ದ ಶೋಕದಿಂದ ಸಂಕಲ್ಪವನ್ನೇ ಕಳೆದುಕೊಂಡಿದ್ದ, ಅಗ್ನಿಯಂತೆ ದಹಿಸುತ್ತಿದ್ದ ಧರ್ಮಪುತ್ರ ಯುಧಿಷ್ಠಿರನನ್ನು ನೋಡಿ ವ್ಯಾಸನು ಬಂದು ಹೇಳಿದನು:
07158054a ಕರ್ಣಮಾಸಾದ್ಯ ಸಂಗ್ರಾಮೇ ದಿಷ್ಟ್ಯಾ ಜೀವತಿ ಫಲ್ಗುನಃ।
07158054c ಸವ್ಯಸಾಚಿವಧಾಕಾಂಕ್ಷೀ ಶಕ್ತಿಂ ರಕ್ಷಿತವಾನ್ ಹಿ ಸಃ।
“ಅದೃಷ್ಟವಶಾತ್ ಸಂಗ್ರಾಮದಲ್ಲಿ ಕರ್ಣನನ್ನು ಎದುರಿಸಿಯೂ ಫಲ್ಗುನನು ಜೀವದಿಂದಿದ್ದಾನೆ! ಏಕೆಂದರೆ ಕರ್ಣನು ಸವ್ಯಸಾಚಿಯನ್ನು ಕೊಲ್ಲಲು ಬಯಸಿ ಆ ಶಕ್ತಿಯನ್ನು ರಕ್ಷಿಸಿಕೊಂಡಿದ್ದನು.
07158055a ನ ಚಾಗಾದ್ದ್ವೈರಥಂ ಜಿಷ್ಣುರ್ದಿಷ್ಟ್ಯಾ ತಂ ಭರತರ್ಷಭ।
07158055c ಸೃಜೇತಾಂ ಸ್ಪರ್ಧಿನಾವೇತೌ ದಿವ್ಯಾನ್ಯಸ್ತ್ರಾಣಿ ಸರ್ವಶಃ।।
ಭರತರ್ಷಭ! ಸೌಭಾಗ್ಯವಶಾತ್ ಜಿಷ್ಣುವು ಕರ್ಣನೊಡನೆ ದ್ವಂದ್ವರಥಯುದ್ಧದಲ್ಲಿ ತೊಡಗಲಿಲ್ಲ. ಹಾಗಾಗಿದ್ದರೆ ಪರಸ್ಪರರೊಡನೆ ಸ್ಪರ್ಧಿಸಿ ಇಬ್ಬರೂ ದಿವ್ಯಾಸ್ತ್ರಗಳನ್ನೂ ಅನ್ಯ ಅಸ್ತ್ರಗಳನ್ನೂ ಎಲ್ಲೆಡೆ ಪ್ರಯೋಗಿಸುತ್ತಿದ್ದರು.
07158056a ವಧ್ಯಮಾನೇಷು ಚಾಸ್ತ್ರೇಷು ಪೀಡಿತಃ ಸೂತನಂದನಃ।
07158056c ವಾಸವೀಂ ಸಮರೇ ಶಕ್ತಿಂ ಧ್ರುವಂ ಮುಂಚೇದ್ಯುಧಿಷ್ಠಿರ।।
ಯುಧಿಷ್ಠಿರ! ಅವನ ಅಸ್ತ್ರಗಳೆಲ್ಲವೂ ನಾಶವಾಗುತ್ತಿರುವುದನ್ನು ನೋಡಿ ಪೀಡಿತ ಸೂತನಂದನು ನಿಜವಾಗಿಯೂ ಸಮರದಲ್ಲಿ ವಾಸವನಿತ್ತಿದ್ದ ಶಕ್ತಿಯನ್ನು ಪ್ರಯೋಗಿಸುತ್ತಿದ್ದನು!
07158057a ತತೋ ಭವೇತ್ತೇ ವ್ಯಸನಂ ಘೋರಂ ಭರತಸತ್ತಮ।
07158057c ದಿಷ್ಟ್ಯಾ ರಕ್ಷೋ ಹತಂ ಯುದ್ಧೇ ಸೂತಪುತ್ರೇಣ ಮಾನದ।।
ಭರತಸತ್ತಮ! ಮಾನದ! ಹಾಗೇನಾದರೂ ಆಗಿದ್ದರೆ ಈಗಿನದಕ್ಕಿಂತಲೂ ಘೋರ ವ್ಯಸನವನ್ನು ನೀನು ಹೊಂದುತ್ತಿದ್ದೆಯಲ್ಲವೇ? ಒಳ್ಳೆಯದಾಯಿತು – ಯುದ್ಧದಲ್ಲಿ ಸೂತಪುತ್ರನಿಂದ ರಾಕ್ಷಸನು ಹತನಾದನು!
07158058a ವಾಸವೀಂ ಕಾರಣಂ ಕೃತ್ವಾ ಕಾಲೇನಾಪಹತೋ ಹ್ಯಸೌ।
07158058c ತವೈವ ಕಾರಣಾದ್ರಕ್ಷೋ ನಿಹತಂ ತಾತ ಸಮ್ಯುಗೇ।।
ಮಗೂ! ವಾಸವನಿತ್ತ ಶಕ್ತಿಯನ್ನು ಕಾರಣವನ್ನಾಗಿಟ್ಟುಕೊಂಡು ಕಾಲನೇ ಅವನನ್ನು ಅಪಹರಿಸಿದ್ದಾನೆ. ನಿನಗೋಸ್ಕರವೇ ಈ ರಾಕ್ಷಸನು ಯುದ್ಧದಲ್ಲಿ ಹತನಾದನು.
07158059a ಮಾ ಕ್ರುಧೋ ಭರತಶ್ರೇಷ್ಠ ಮಾ ಚ ಶೋಕೇ ಮನಃ ಕೃಥಾಃ।
07158059c ಪ್ರಾಣಿನಾಮಿಹ ಸರ್ವೇಷಾಮೇಷಾ ನಿಷ್ಠಾ ಯುಧಿಷ್ಠಿರ।।
ಭರತಶ್ರೇಷ್ಠ! ಯುಧಿಷ್ಠಿರ! ಆದುದರಿಂದ ಕೋಪಗೊಳ್ಳಬೇಡ! ಮನಸ್ಸನ್ನು ಶೋಕದಲ್ಲಿ ತೊಡಗಿಸಬೇಡ! ಇಲ್ಲಿರುವ ಪ್ರಾಣಿಗಳೆಲ್ಲವೂ ಕೊನೆಯಲ್ಲಿ ಇದೇ ಅವಸ್ಥೆಯನ್ನು ಅನುಭವಿಸುತ್ತವೆ!
07158060a ಭ್ರಾತೃಭಿಃ ಸಹಿತಃ ಸರ್ವೈಃ ಪಾರ್ಥಿವೈಶ್ಚ ಮಹಾತ್ಮಭಿಃ।
07158060c ಕೌರವಾನ್ಸಮರೇ ರಾಜನ್ನಭಿಯುಧ್ಯಸ್ವ ಭಾರತ।
07158060e ಪಂಚಮೇ ದಿವಸೇ ಚೈವ ಪೃಥಿವೀ ತೇ ಭವಿಷ್ಯತಿ।।
ರಾಜನ್! ಭಾರತ! ಸಹೋದರರೊಂದಿಗೆ ಮತ್ತು ಎಲ್ಲ ಮಹಾತ್ಮ ಪಾರ್ಥಿವರೊಂದಿಗೆ ಸೇರಿ ಸಮರದಲ್ಲಿ ಕೌರವರೊಡನೆ ಯುದ್ಧಮಾಡು. ಇಂದಿನಿಂದ ಐದನೆಯ ದಿವಸದಲ್ಲಿ ಈ ಭೂಮಿಯು ನಿನ್ನದಾಗುತ್ತದೆ!
07158061a ನಿತ್ಯಂ ಚ ಪುರುಷವ್ಯಾಘ್ರ ಧರ್ಮಮೇವ ವಿಚಿಂತಯ।
07158061c ಆನೃಶಂಸ್ಯಂ ತಪೋ ದಾನಂ ಕ್ಷಮಾಂ ಸತ್ಯಂ ಚ ಪಾಂಡವ।।
ಪುರುಷವ್ಯಾಘ್ರ! ಪಾಂಡವ! ನಿತ್ಯವೂ ಧರ್ಮ, ದಯೆ, ತಪಸ್ಸು, ದಾನ, ಕ್ಷಮೆ ಮತ್ತು ಸತ್ಯಗಳ ಕುರಿತೇ ಚಿಂತಿಸು.
07158062a ಸೇವೇಥಾಃ ಪರಮಪ್ರೀತೋ ಯತೋ ಧರ್ಮಸ್ತತೋ ಜಯಃ।
07158062c ಇತ್ಯುಕ್ತ್ವಾ ಪಾಂಡವಂ ವ್ಯಾಸಸ್ತತ್ರೈವಾಂತರಧೀಯತ।।
ಪರಮಪ್ರೀತನಾಗಿ ಇವುಗಳ ಸೇವೆಯಲ್ಲಿರು. ಧರ್ಮವೆಲ್ಲಿದೆಯೋ ಅಲ್ಲಿ ಜಯವಿದೆ.” ಪಾಂಡವನಿಗೆ ಹೀಗೆ ಹೇಳಿ ವ್ಯಾಸನು ಅಲ್ಲಿಯೇ ಅಂತರ್ಧಾನನಾದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ವ್ಯಾಸವಾಕ್ಯೇ ಅಷ್ಠಪಂಚಾಶದಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ವ್ಯಾಸವಾಕ್ಯ ಎನ್ನುವ ನೂರಾಐವತ್ತೆಂಟನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-6/18, ಉಪಪರ್ವಗಳು-70/100, ಅಧ್ಯಾಯಗಳು-1135/1995, ಶ್ಲೋಕಗಳು-40257/73784.