157 ರಾತ್ರಿಯುದ್ಧೇ ಕೃಷ್ಣವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಘಟೋತ್ಕಚವಧ ಪರ್ವ

ಅಧ್ಯಾಯ 157

ಸಾರ

ಧೃತರಾಷ್ಟ್ರ-ಸಂಜಯರ ಸಂವಾದ (1-44).

07157001 ಧೃತರಾಷ್ಟ್ರ ಉವಾಚ।
07157001a ಏಕವೀರವಧೇ ಮೋಘಾ ಶಕ್ತಿಃ ಸೂತಾತ್ಮಜೇ ಯದಾ।
07157001c ಕಸ್ಮಾತ್ಸರ್ವಾನ್ಸಮುತ್ಸೃಜ್ಯ ಸ ತಾಂ ಪಾರ್ಥೇ ನ ಮುಕ್ತವಾನ್।।

ಧೃತರಾಷ್ಟ್ರನು ಹೇಳಿದನು: “ಆ ಶಕ್ತಿಯು ಒಬ್ಬನೇ ವೀರನನ್ನು ವಧಿಸಿ ನಿರಸನವಾಗುತ್ತದೆ ಎಂದು ತಿಳಿದಿದ್ದರೂ ಸೂತಾತ್ಮಜನು ಏಕೆ ಎಲ್ಲರನ್ನೂ ಬಿಟ್ಟು ಪಾರ್ಥನ ಮೇಲೆ ಅದನ್ನು ಪ್ರಯೋಗಿಸಲಿಲ್ಲ?

07157002a ತಸ್ಮಿನ್ ಹತೇ ಹತಾ ಹಿ ಸ್ಯುಃ ಸರ್ವೇ ಪಾಂಡವಸೃಂಜಯಾಃ।
07157002c ಏಕವೀರವಧೇ ಕಸ್ಮಾನ್ನ ಯುದ್ಧೇ ಜಯಮಾದಧತ್।।

ಅದರಿಂದ ಅವನು ಹತನಾಗಿದ್ದರೆ ಪಾಂಡವ-ಸೃಂಜಯರೆಲ್ಲರೂ ಹತರಾಗುತ್ತಿದ್ದರು. ಅವನೊಬ್ಬನೇ ವೀರನನ್ನು ಸಂಹರಿಸಿ ಯುದ್ಧದಲ್ಲಿ ಜಯವನ್ನು ಏಕೆ ಪಡೆಯಲಿಲ್ಲ?

07157003a ಆಹೂತೋ ನ ನಿವರ್ತೇಯಮಿತಿ ತಸ್ಯ ಮಹಾವ್ರತಂ।
07157003c ಸ್ವಯಮಾಹ್ವಯಿತವ್ಯಃ ಸ ಸೂತಪುತ್ರೇಣ ಫಲ್ಗುನಃ।।

ಆಹ್ವಾನಿಸಿದರೆ ಹಿಂದಿರುಗುವುದಿಲ್ಲ ಎನ್ನುವುದು ಅರ್ಜುನನ ಮಹಾವ್ರತವಾಗಿರುವಾಗ, ಸೂತಪುತ್ರನು ಸ್ವಯಂ ಫಲ್ಗುನನನ್ನು ಯುದ್ಧಕ್ಕೆ ಆಹ್ವಾನಿಸಬಹುದಾಗಿತ್ತು!

07157004a ತತೋ ದ್ವೈರಥಮಾನೀಯ ಫಲ್ಗುನಂ ಶಕ್ರದತ್ತಯಾ।
07157004c ನ ಜಘಾನ ವೃಷಾ ಕಸ್ಮಾತ್ತನ್ಮಮಾಚಕ್ಷ್ವ ಸಂಜಯ।।

ಹಾಗಿರುವಾಗ ದ್ವೈರಥಯುದ್ಧಕ್ಕೆ ಕರೆದು ವೃಷ ಕರ್ಣನು ಫಲ್ಗುನನನ್ನು ಶಕ್ರನು ನೀಡಿದ ಶಕ್ತಿಯಿಂದ ಏಕೆ ಕೊಲ್ಲಲಿಲ್ಲ ಎನ್ನುವುದನ್ನು ನನಗೆ ಹೇಳು ಸಂಜಯ!

07157005a ನೂನಂ ಬುದ್ಧಿವಿಹೀನಶ್ಚಾಪ್ಯಸಹಾಯಶ್ಚ ಮೇ ಸುತಃ।
07157005c ಶತ್ರುಭಿರ್ವ್ಯಂಸಿತೋಪಾಯಃ ಕಥಂ ನು ಸ ಜಯೇದರೀನ್।।

ನನ್ನ ಮಗನು ಬುದ್ಧಿವಿಹೀನನೂ ಅಸಹಾಯಕನೂ ಅಲ್ಲವೇ? ಶತ್ರುಗಳಿಂದ ಅವನು ಸಂಪೂರ್ಣವಾಗಿ ವಂಚಿತನಾಗಿಬಿಟ್ಟನು. ಅವನು ಹೇಗೆ ತಾನೇ ಶತ್ರುಗಳನ್ನು ಜಯಿಸಿಯಾನು?

07157006a ಯಾ ಹ್ಯಸ್ಯ ಪರಮಾ ಶಕ್ತಿರ್ಜಯಸ್ಯ ಚ ಪರಾಯಣಂ।
07157006c ಸಾ ಶಕ್ತಿರ್ವಾಸುದೇವೇನ ವ್ಯಂಸಿತಾಸ್ಯ ಘಟೋತ್ಕಚೇ।।

ಯಾವ ಪರಮ ಶಕ್ತಿಯು ಅವನ ವಿಜಯಕ್ಕೆ ಆಶ್ರಯಪ್ರಾಯವಾಗಿತ್ತೋ ಆ ಶಕ್ತಿಯನ್ನು ವಾಸುದೇವನೇ ಉಪಾಯದಿಂದ ಘಟೋತ್ಕಚನ ಮೇಲೆ ಪ್ರಯೋಗಿಸುವಂತೆ ಮಾಡಿದನು.

07157007a ಕುಣೇರ್ಯಥಾ ಹಸ್ತಗತಂ ಹ್ರಿಯೇದ್ಬಿಲ್ವಂ ಬಲೀಯಸಾ।
07157007c ತಥಾ ಶಕ್ತಿರಮೋಘಾ ಸಾ ಮೋಘೀಭೂತಾ ಘಟೋತ್ಕಚೇ।।

ಹಸ್ತಸ್ವಾಧೀನವಿಲ್ಲದಿರುವವನ ಕೈಯಿಂದ ಹಣ್ಣನ್ನು ಬಲಶಾಲಿಯು ಕಸಿದುಕೊಳ್ಳುವಂತೆ ಆ ಅಮೋಘ ಶಕ್ತಿಯು ಘಟೋತ್ಕಚನ ಮೇಲೆ ಪ್ರಯೋಗಿಸಲ್ಪಟ್ಟು ವ್ಯರ್ಥವಾಗಿ ಹೋಯಿತು!

07157008a ಯಥಾ ವರಾಹಸ್ಯ ಶುನಶ್ಚ ಯುಧ್ಯತೋಸ್ ತಯೋರಭಾವೇ ಶ್ವಪಚಸ್ಯ ಲಾಭಃ।
07157008c ಮನ್ಯೇ ವಿದ್ವನ್ವಾಸುದೇವಸ್ಯ ತದ್ವದ್ ಯುದ್ಧೇ ಲಾಭಃ ಕರ್ಣಹೈಡಿಂಬಯೋರ್ವೈ।।

ವಿದ್ವನ್! ಹಂದಿ ಮತ್ತು ನಾಯಿಗಳ ಯುದ್ಧದಲ್ಲಿ ಎರಡರಲ್ಲಿ ಯಾವುದೊಂದು ಸತ್ತುಹೋದರೂ ಅಥವಾ ಎರಡು ಸತ್ತು ಹೋದರೂ ಅದರ ಲಾಭವು ಶ್ವಪಚನಿಗೇ ಆಗುವಂತೆ ಕರ್ಣ-ಹೈಡಿಂಬಿಯರ ಯುದ್ಧದ ಲಾಭವು ಕೇವಲ ವಾಸುದೇವನಿಗಾಯಿತು!

07157009a ಘಟೋತ್ಕಚೋ ಯದಿ ಹನ್ಯಾದ್ಧಿ ಕರ್ಣಂ ಪರೋ ಲಾಭಃ ಸ ಭವೇತ್ಪಾಂಡವಾನಾಂ।
07157009c ವೈಕರ್ತನೋ ವಾ ಯದಿ ತಂ ನಿಹನ್ಯಾತ್ ತಥಾಪಿ ಕೃತ್ಯಂ ಶಕ್ತಿನಾಶಾತ್ಕೃತಂ ಸ್ಯಾತ್।।

ಒಂದುವೇಳೆ ಘಟೋತ್ಕಚನೇ ಕರ್ಣನನ್ನು ಸಂಹರಿಸಿದ್ದರೆ ಪಾಂಡವರಿಗೆ ಪರಮ ಲಾಭವಾಗುತ್ತಿತ್ತು. ಅಥವಾ ವೈಕರ್ತನನೇ ಒಂದು ವೇಳೆ ಅವನನ್ನು ಸಂಹರಿಸಿದ್ದರೆ ಆಗ ಕೂಡ ಆ ಶಕ್ತಿಯು ನಾಶವಾದುದರಿಂದ ಅವರಿಗೆ ಲಾಭವಾಗುತ್ತಿತ್ತು.

07157010a ಇತಿ ಪ್ರಾಜ್ಞಃ ಪ್ರಜ್ಞಯೈತದ್ವಿಚಾರ್ಯ ಘಟೋತ್ಕಚಂ ಸೂತಪುತ್ರೇಣ ಯುದ್ಧೇ।
07157010c ಅಯೋಧಯದ್ವಾಸುದೇವೋ ನೃಸಿಂಹಃ ಪ್ರಿಯಂ ಕುರ್ವನ್ಪಾಂಡವಾನಾಂ ಹಿತಂ ಚ।।

ಇದನ್ನು ತಿಳಿದೇ ಪ್ರಾಜ್ಞ ಮನುಷ್ಯಶ್ರೇಷ್ಠ ವಾಸುದೇವನು, ಪಾಂಡವರಿಗೆ ಪ್ರಿಯವಾದುದನ್ನೂ ಹಿತವಾದುದನ್ನೂ ಮಾಡಲು, ರಣದಲ್ಲಿ ಘಟೋತ್ಕಚ-ಸೂತಪುತ್ರರ ಯುದ್ಧವನ್ನು ನಿಯೋಜಿಸಿದನು!”

07157011 ಸಂಜಯ ಉವಾಚ।
07157011a ಏತಚ್ಚಿಕೀರ್ಷಿತಂ ಜ್ಞಾತ್ವಾ ಕರ್ಣೇ ಮಧುನಿಹಾ ನೃಪ।
07157011c ನಿಯೋಜಯಾಮಾಸ ತದಾ ದ್ವೈರಥೇ ರಾಕ್ಷಸೇಶ್ವರಂ।।
07157012a ಘಟೋತ್ಕಚಂ ಮಹಾವೀರ್ಯಂ ಮಹಾಬುದ್ಧಿರ್ಜನಾರ್ದನಃ।
07157012c ಅಮೋಘಾಯಾ ವಿಘಾತಾರ್ಥಂ ರಾಜನ್ದುರ್ಮಂತ್ರಿತೇ ತವ।।

ಸಂಜಯನು ಹೇಳಿದನು: “ನೃಪ! ಇದನ್ನು ತಿಳಿದೇ, ಆ ಅಮೋಘ ಶಕ್ತಿಯನ್ನು ಹಾಗೆ ನಿರಸನಗೊಳಿಸಬೇಕೆಂದೇ ಮಧುನಿಹ ಮಹಾಬುದ್ಧಿ ಜನಾರ್ದನನು ಮಹಾವೀರ್ಯ ರಾಕ್ಷಸೇಶ್ವರ ಘಟೋತ್ಕಚ ಮತ್ತು ಕರ್ಣರ ನಡುವೆ ದ್ವೈರಥವನ್ನು ನಿಯೋಜಿಸಿದನು. ರಾಜನ್! ಇದು ನಿನ್ನ ದುರಾಲೋಚನೆಯ ಫಲ!

07157013a ತದೈವ ಕೃತಕಾರ್ಯಾ ಹಿ ವಯಂ ಸ್ಯಾಮ ಕುರೂದ್ವಹ।
07157013c ನ ರಕ್ಷೇದ್ಯದಿ ಕೃಷ್ಣಸ್ತಂ ಪಾರ್ಥಂ ಕರ್ಣಾನ್ಮಹಾರಥಾತ್।।

ಕುರೂದ್ವಹ! ಮಹಾರಥ ಕರ್ಣನಿಂದ ಕೃಷ್ಣನು ಪಾರ್ಥನನ್ನು ರಕ್ಷಿಸದೇ ಇದ್ದಿದ್ದರೆ ಈಗಾಗಲೇ ನಾವು ಯಶಸ್ವಿಗಳಾಗಿಬಿಡುತ್ತಿದ್ದೆವು!

07157014a ಸಾಶ್ವಧ್ವಜರಥಃ ಸಂಖ್ಯೇ ಧೃತರಾಷ್ಟ್ರ ಪತೇದ್ಭುವಿ।
07157014c ವಿನಾ ಜನಾರ್ದನಂ ಪಾರ್ಥೋ ಯೋಗಾನಾಮೀಶ್ವರಂ ಪ್ರಭುಂ।।

ಧೃತರಾಷ್ಟ್ರ! ಯೋಗಗಳ ಈಶ್ವರ ಪ್ರಭು ಜನಾರ್ದನನಿಲ್ಲದಿದ್ದರೆ ಪಾರ್ಥನು ಈಗಾಗಲೇ ಅಶ್ವ-ಧ್ವಜ-ರಥ ಸಮೇತ ರಣಭೂಮಿಯಲ್ಲಿ ಹತನಾಗಿ ಬಿದ್ದುಹೋಗುತ್ತಿದ್ದನು!

07157015a ತೈಸ್ತೈರುಪಾಯೈರ್ಬಹುಭೀ ರಕ್ಷ್ಯಮಾಣಃ ಸ ಪಾರ್ಥಿವ।
07157015c ಜಯತ್ಯಭಿಮುಖಃ ಶತ್ರೂನ್ಪಾರ್ಥಃ ಕೃಷ್ಣೇನ ಪಾಲಿತಃ।।

ಪಾರ್ಥಿವ! ಅವನ ಅನೇಕ ಉಪಾಯಗಳಿಂದಲೇ ಅವನು ರಕ್ಷಿಸಲ್ಪಟ್ಟಿದಾನೆ. ಕೃಷ್ಣನಿಂದ ಪಾಲಿತ ಪಾರ್ಥನು ಶತ್ರುಗಳನ್ನು ಎದುರಿಸಿ ಜಯಿಸುತ್ತಿದ್ದಾನೆ.

07157016a ಸವಿಶೇಷಂ ತ್ವಮೋಘಾಯಾಃ ಕೃಷ್ಣೋಽರಕ್ಷತ ಪಾಂಡವಂ।
07157016c ಹನ್ಯಾತ್ ಕ್ಷಿಪ್ತಾ ಹಿ ಕೌಂತೇಯಂ ಶಕ್ತಿರ್ವೃಕ್ಷಮಿವಾಶನಿಃ।।

ವಿಶೇಷ ಪ್ರಯತ್ನದಿಂದಲೇ ಕೃಷ್ಣನು ಆ ಅಮೋಘ ಶಕ್ತಿಯಿಂದ ಪಾಂಡವನನ್ನು ರಕ್ಷಿಸಿದನು. ಇಲ್ಲದಿದ್ದರೆ ಆ ಶಕ್ತಿಯು ಸಿಡಿಲು ಮರವನ್ನು ಧ್ವಂಸಮಾಡುವಂತೆ ಕೌಂತೇಯನನ್ನು ಸಂಹರಿಸುತ್ತಿತ್ತು.”

07157017 ಧೃತರಾಷ್ಟ್ರ ಉವಾಚ।
07157017a ವಿರೋಧೀ ಚ ಕುಮಂತ್ರೀ ಚ ಪ್ರಾಜ್ಞಮಾನೀ ಮಮಾತ್ಮಜಃ।
07157017c ಯಸ್ಯೈಷ ಸಮತಿಕ್ರಾಂತೋ ವಧೋಪಾಯೋ ಜಯಂ ಪ್ರತಿ।।

ಧೃತರಾಷ್ಟ್ರನು ಹೇಳಿದನು: “ಪಾಂಡವರಿಗೆ ಅತ್ಯಂತ ವಿರೋಧಿಯಾಗಿದ್ದ ನನ್ನ ಮಗನು ಕುಮಂತ್ರಿಯು ಮತ್ತು ತನಗೆ ಎಲ್ಲ ತಿಳಿದಿದೆ ಎಂಬ ದುರಭಿಮಾನಿಯು. ಆದರೂ ಕೂಡ ವಿಜಯದ ವಿಷಯವಾಗಿ ಅರ್ಜುನನ ವಧೋಪಾಯವು ಅವನಿಗೆ ದೊರಕದಂತಾಯಿತೇ?

07157018a ತವಾಪಿ ಸಮತಿಕ್ರಾಂತಂ ಏತದ್ಗಾವಲ್ಗಣೇ ಕಥಂ।
07157018c ಏತಮರ್ಥಂ ಮಹಾಬುದ್ಧೇ ಯತ್ತ್ವಯಾ ನಾವಬೋಧಿತಃ।।

ಗಾವಲ್ಗಣೇ! ನಿನಗೂ ಕೂಡ ಇದು ಹೇಗೆ ಹೊಳೆಯದೇ ಹೋಯಿತು? ಮಹಾಬುದ್ಧೇ! ಇದು ನಿನಗೆ ಕೂಡ ಹೇಗೆ ತಿಳಿಯದೇ ಹೋಯಿತು?”

07157019 ಸಂಜಯ ಉವಾಚ।
07157019a ದುರ್ಯೋಧನಸ್ಯ ಶಕುನೇರ್ಮಮ ದುಃಶಾಸನಸ್ಯ ಚ।
07157019c ರಾತ್ರೌ ರಾತ್ರೌ ಭವತ್ಯೇಷಾ ನಿತ್ಯಮೇವ ಸಮರ್ಥನಾ।।

ಸಂಜಯನು ಹೇಳಿದನು: “ರಾತ್ರಿ ರಾತ್ರಿಯೂ ನಿತ್ಯವೂ ಇದನ್ನೇ ಸಮರ್ಥಿಸುವುದು ನನ್ನ, ದುರ್ಯೋಧನ, ಶಕುನಿ ಮತ್ತು ದುಃಶಾಸನರ ಕೆಲಸವಾಗಿತ್ತು.

07157020a ಶ್ವಃ ಸರ್ವಸೈನ್ಯಾನುತ್ಸೃಜ್ಯ ಜಹಿ ಕರ್ಣ ಧನಂಜಯಂ।
07157020c ಪ್ರೇಷ್ಯವತ್ಪಾಂಡುಪಾಂಚಾಲಾನುಪಭೋಕ್ಷ್ಯಾಮಹೇ ತತಃ।।

“ಕರ್ಣ! ನಾಳೆ ಎಲ್ಲ ಸೈನಿಕರನ್ನೂ ಬಿಟ್ಟು ಧನಂಜಯನನ್ನು ಸಂಹರಿಸು! ಅನಂತರ ನಾವು ಪಾಂಡು-ಪಾಂಚಾಲರನ್ನು ಸೇವಕರಂತೆ ಉಪಭೋಗಿಸುತ್ತೇವೆ!

07157021a ಅಥ ವಾ ನಿಹತೇ ಪಾರ್ಥೇ ಪಾಂಡುಷ್ವನ್ಯತಮಂ ತತಃ।
07157021c ಸ್ಥಾಪಯೇದ್ಯುಧಿ ವಾರ್ಷ್ಣೇಯಸ್ತಸ್ಮಾತ್ಕೃಷ್ಣೋ ನಿಪಾತ್ಯತಾಂ।।

ಅಥವಾ ಪಾರ್ಥನು ಹತನಾದರೂ ಕೃಷ್ಣ ವಾರ್ಷ್ಣೇಯನು ಪಾಂಡವರಲ್ಲಿ ಮತ್ತೊಬ್ಬನನ್ನು ಇಟ್ಟುಕೊಂಡು ಯುದ್ಧವನ್ನು ಮುಂದುವರಿಸುತ್ತಾನೆಂದಾದರೆ ಕೃಷ್ಣನನ್ನೇ ಸಂಹರಿಸು!

07157022a ಕೃಷ್ಣೋ ಹಿ ಮೂಲಂ ಪಾಂಡೂನಾಂ ಪಾರ್ಥಃ ಸ್ಕಂಧ ಇವೋದ್ಗತಃ।
07157022c ಶಾಖಾ ಇವೇತರೇ ಪಾರ್ಥಾಃ ಪಾಂಚಾಲಾಃ ಪತ್ರಸಂಜ್ಞಿತಾಃ।।

ಕೃಷ್ಣನೇ ಪಾಂಡವರ ಮೂಲ. ಪಾರ್ಥನು ಕಾಂಡ. ಇತರ ಪಾರ್ಥರು ರೆಂಬೆಗಳು. ಪಾಂಚಾಲರು ಎಲೆಗಳ ರೂಪದಲ್ಲಿದ್ದಾರೆ.

07157023a ಕೃಷ್ಣಾಶ್ರಯಾಃ ಕೃಷ್ಣಬಲಾಃ ಕೃಷ್ಣನಾಥಾಶ್ಚ ಪಾಂಡವಾಃ।
07157023c ಕೃಷ್ಣಃ ಪರಾಯಣಂ ಚೈಷಾಂ ಜ್ಯೋತಿಷಾಮಿವ ಚಂದ್ರಮಾಃ।।

ಪಾಂಡವರು ಕೃಷ್ಣನ ಆಶ್ರಯದಲ್ಲಿದ್ದಾರೆ. ಕೃಷ್ಣನನ್ನೇ ಬಲವನ್ನಾಗಿ ಪಡೆದಿದ್ದಾರೆ. ಕೃಷ್ಣನನ್ನು ಸ್ವಾಮಿಯೆಂದೇ ದೃಢವಾಗಿ ನಂಬಿದ್ದಾರೆ. ನಕ್ಷತ್ರಗಳಿಗೆ ಚಂದ್ರಮನು ಹೇಗೋ ಹಾಗೆ ಪಾಂಡವರಿಗೆ ಶ್ರೀಕೃಷ್ಣ.

07157024a ತಸ್ಮಾತ್ಪರ್ಣಾನಿ ಶಾಖಾಶ್ಚ ಸ್ಕಂಧಂ ಚೋತ್ಸೃಜ್ಯ ಸೂತಜ।
07157024c ಕೃಷ್ಣಂ ನಿಕೃಂಧಿ ಪಾಂಡೂನಾಂ ಮೂಲಂ ಸರ್ವತ್ರ ಸರ್ವದಾ।।

ಆದುದರಿಂದ ಸೂತಜ! ಎಲೆಗಳು, ರೆಂಬೆಗಳು ಮತ್ತು ಕಾಂಡವನ್ನು ಬಿಟ್ಟು ಇವೆಲ್ಲವಕ್ಕೂ ಬೇರಿನಂತಿರುವ ಕೃಷ್ಣನನ್ನೇ ಕತ್ತರಿಸಿಹಾಕಿಬಿಡು!”

07157025a ಹನ್ಯಾದ್ಯದಿ ಹಿ ದಾಶಾರ್ಹಂ ಕರ್ಣೋ ಯಾದವನಂದನಂ।
07157025c ಕೃತ್ಸ್ನಾ ವಸುಮತೀ ರಾಜನ್ವಶೇ ತೇ ಸ್ಯಾನ್ನ ಸಂಶಯಃ।।

ರಾಜನ್! ಒಂದುವೇಳೆ ಕರ್ಣನು ದಾಶಾರ್ಹ ಯಾದವನಂದನನನ್ನು ಸಂಹರಿಸಿದ್ದರೆ ಈ ಇಡೀ ವಸುಮತಿಯು ನಿನ್ನ ವಶವಾಗುತ್ತಿತ್ತು ಎನ್ನುವುದರಲ್ಲಿ ಸಂಶಯವೇ ಇಲ್ಲ.

07157026a ಯದಿ ಹಿ ಸ ನಿಹತಃ ಶಯೀತ ಭೂಮೌ ಯದುಕುಲಪಾಂಡವನಂದನೋ ಮಹಾತ್ಮಾ।
07157026c ನನು ತವ ವಸುಧಾ ನರೇಂದ್ರ ಸರ್ವಾ ಸಗಿರಿಸಮುದ್ರವನಾ ವಶಂ ವ್ರಜೇತ।।

ಯದುಕುಲ-ಪಾಂಡವನಂದನ ಮಹಾತ್ಮ ಕೃಷ್ಣನು ಹತನಾಗಿ ಭೂಮಿಯ ಮೇಲೆ ಮಲಗಿದ್ದರೆ ನರೇಂದ್ರ! ಗಿರಿ-ಸಮುದ್ರ-ವನ ಸಮೇತ ವಸುಧೆಯು ಇಡೀ ನಿನ್ನ ವಶವಾಗುತ್ತಿತ್ತಲ್ಲವೇ?

07157027a ಸಾ ತು ಬುದ್ಧಿಃ ಕೃತಾಪ್ಯೇವಂ ಜಾಗ್ರತಿ ತ್ರಿದಶೇಶ್ವರೇ।
07157027c ಅಪ್ರಮೇಯೇ ಹೃಷೀಕೇಶೇ ಯುದ್ಧಕಾಲೇ ವ್ಯಮುಹ್ಯತ।।

ಅವನೂ ಕೂಡ ಹಾಗೆ ಮಾಡುತ್ತೇನೆಂದು ಯೋಚಿಸಿದ್ದರೂ ಬೆಳಗಾಗುತ್ತಲೇ ಯುದ್ಧಕಾಲದಲ್ಲಿ ತ್ರಿದಶೇಶ್ವರ ಅಪ್ರಮೇಯ ಹೃಷೀಕೇಶನು ಅವನನ್ನು ಮೋಹಗೊಳಿಸುತ್ತಿದನು.

07157028a ಅರ್ಜುನಂ ಚಾಪಿ ಕೌಂತೇಯಂ ಸದಾ ರಕ್ಷತಿ ಕೇಶವಃ।
07157028c ನ ಹ್ಯೇನಮೈಚ್ಚತ್ಪ್ರಮುಖೇ ಸೌತೇಃ ಸ್ಥಾಪಯಿತುಂ ರಣೇ।।

ಕೇಶವನಾದರೋ ಕೌಂತೇಯ ಅರ್ಜುನನನ್ನು ಸದಾ ರಕ್ಷಿಸುತ್ತಾನೆ. ಆದುದರಿಂದಲೇ ಅವನು ರಣದಲ್ಲಿ ಅರ್ಜುನನನ್ನು ಸೌತಿಯ ಎದಿರು ನಿಲ್ಲಿಸುತ್ತಿರಲಿಲ್ಲ.

07157029a ಅನ್ಯಾಂಶ್ಚಾಸ್ಮೈ ರಥೋದಾರಾನುಪಸ್ಥಾಪಯದಚ್ಯುತಃ।
07157029c ಅಮೋಘಾಂ ತಾಂ ಕಥಂ ಶಕ್ತಿಂ ಮೋಘಾಂ ಕುರ್ಯಾಮಿತಿ ಪ್ರಭೋ।।

ಪ್ರಭು ಅಚ್ಯುತನು ಆ ಅಮೋಘ ಶಕ್ತಿಯನ್ನು ನಿರಸನಗೊಳಿಸಬೇಕೆಂದು ಬೇರೆ ಯಾರಾದರೂ ರಥೋದಾರರನ್ನು ಅವನ ಎದುರು ನಿಲ್ಲಿಸುತ್ತಿದ್ದನು.

07157030a ತತಃ ಕೃಷ್ಣಂ ಮಹಾಬಾಹುಃ ಸಾತ್ಯಕಿಃ ಸತ್ಯವಿಕ್ರಮಃ।
07157030c ಪಪ್ರಚ್ಚ ರಥಶಾರ್ದೂಲ ಕರ್ಣಂ ಪ್ರತಿ ಮಹಾರಥಂ।।
07157031a ಅಯಂ ಚ ಪ್ರತ್ಯಯಃ ಕರ್ಣೇ ಶಕ್ತ್ಯಾ ಚಾಮಿತವಿಕ್ರಮ।
07157031c ಕಿಮರ್ಥಂ ಸೂತಪುತ್ರೇಣ ನ ಮುಕ್ತಾ ಫಲ್ಗುನೇ ತು ಸಾ।।

ಒಮ್ಮೆ ಮಹಾಬಾಹು ಸತ್ಯವಿಕ್ರಮ ಸಾತ್ಯಕಿಯು ಮಹಾರಥ ರಥಶಾರ್ದೂಲ ಕರ್ಣನ ವಿಷಯದಲ್ಲಿ ಕೃಷ್ಣನಲ್ಲಿ ಪ್ರಶ್ನಿಸಿದ್ದನು: “ಈ ಶಕ್ತ್ಯಾಯುಧವು ಇತ್ತಾದರೂ ಅಮಿತವಿಕ್ರಮಿ ಕರ್ಣ ಸೂತಪುತ್ರನು ಏಕೆ ಅದನ್ನು ಫಲ್ಗುನನ ಮೇಲೆ ಪ್ರಯೋಗಿಸಲಿಲ್ಲ?”

07157032 ವಾಸುದೇವ ಉವಾಚ।
07157032a ದುಃಶಾಸನಶ್ಚ ಕರ್ಣಶ್ಚ ಶಕುನಿಶ್ಚ ಸಸೈಂಧವಃ।
07157032c ಸತತಂ ಮಂತ್ರಯಂತಿ ಸ್ಮ ದುರ್ಯೋಧನಪುರೋಗಮಾಃ।।

ವಾಸುದೇವನು ಹೇಳಿದನು: “ದುರ್ಯೋಧನನೇ ಮೊದಲಾಗಿ ದುಃಶಾಸನ, ಕರ್ಣ, ಶಕುನಿ, ಮತ್ತು ಸೈಂಧವರು ಸತತವೂ ಮಂತ್ರಾಲೋಚನೆಯನ್ನೇ ಮಾಡುತ್ತಿದ್ದರು:

07157033a ಕರ್ಣ ಕರ್ಣ ಮಹೇಷ್ವಾಸ ರಣೇಽಮಿತಪರಾಕ್ರಮ।
07157033c ನಾನ್ಯಸ್ಯ ಶಕ್ತಿರೇಷಾ ತೇ ಮೋಕ್ತವ್ಯಾ ಜಯತಾಂ ವರ।।
07157034a ಋತೇ ಮಹಾರಥಾತ್ಪಾರ್ಥಾತ್ಕುಂತೀಪುತ್ರಾದ್ಧನಂಜಯಾತ್।

“ಕರ್ಣ! ಕರ್ಣ! ಮಹೇಷ್ವಾಸ! ರಣದಲ್ಲಿ ಅಮಿತ ಪರಾಕ್ರಮವುಳ್ಳವನೇ! ವಿಜಯಿಗಳಲ್ಲಿ ಶ್ರೇಷ್ಠನೇ! ಕುಂತೀಪುತ್ರ ಧನಂಜಯ ಮಹಾರಥ ಪಾರ್ಥನ ಹೊರತಾಗಿ ಬೇರೆ ಯಾರಮೇಲೂ ಈ ಶಕ್ತಿಯನ್ನು ಪ್ರಯೋಗಿಸಬೇಡ!

07157034c ಸ ಹಿ ತೇಷಾಮತಿಯಶಾ ದೇವಾನಾಮಿವ ವಾಸವಃ।।
07157035a ತಸ್ಮಿನ್ವಿನಿಹತೇ ಸರ್ವೇ ಪಾಂಡವಾಃ ಸೃಂಜಯೈಃ ಸಹ।
07157035c ಭವಿಷ್ಯಂತಿ ಗತಾತ್ಮಾನಃ ಸುರಾ ಇವ ನಿರಗ್ನಯಃ।।

ವಾಸವನು ದೇವತೆಗಳಲ್ಲಿ ಹೇಗೋ ಹಾಗೆ ಅವನು ಪಾಂಡವರಲ್ಲಿ ಅತಿ ಯಶೋವಂತನು. ಅವನು ಹತನಾದರೆ ಅಗ್ನಿಯಿಲ್ಲದೇ ಸುರರು ಹೇಗೋ ಹಾಗೆ ಪಾಂಡವರೆಲ್ಲರೂ ಸೃಂಜಯರೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ!”

07157036a ತಥೇತಿ ಚ ಪ್ರತಿಜ್ಞಾತಂ ಕರ್ಣೇನ ಶಿನಿಪುಂಗವ।
07157036c ಹೃದಿ ನಿತ್ಯಂ ತು ಕರ್ಣಸ್ಯ ವಧೋ ಗಾಂಡೀವಧನ್ವನಃ।।

ಶಿನಿಪುಂಗವ! ಹಾಗೇಯೇ ಆಗಬೇಕೆಂದು ಒಪ್ಪಿಕೊಂಡ ಕರ್ಣನ ಹೃದಯದಲ್ಲಿ ನಿತ್ಯವೂ ಗಾಂಡೀವಧನ್ವಿಯನ್ನು ವಧಿಸುವ ಸಂಕಲ್ಪವಿರುತ್ತಿತ್ತು.

07157037a ಅಹಮೇವ ತು ರಾಧೇಯಂ ಮೋಹಯಾಮಿ ಯುಧಾಂ ವರ।
07157037c ಯತೋ ನಾವಸೃಜಚ್ಚಕ್ತಿಂ ಪಾಂಡವೇ ಶ್ವೇತವಾಹನೇ।।

ಯೋಧರಲ್ಲಿ ಶ್ರೇಷ್ಠನೇ! ಆ ಶಕ್ತಿಯನ್ನು ಪಾಂಡವ ಶ್ವೇತವಾಹನನ ಮೇಲೆ ಪ್ರಯೋಗಿಸಬಾರದೆಂದು ನಾನೇ ರಾಧೇಯನನ್ನು ಮೋಹಗೊಳಿಸುತ್ತಿದ್ದೆ.

07157038a ಫಲ್ಗುನಸ್ಯ ಹಿ ತಾಂ ಮೃತ್ಯುಮವಗಮ್ಯ ಯುಯುತ್ಸತಃ।
07157038c ನ ನಿದ್ರಾ ನ ಚ ಮೇ ಹರ್ಷೋ ಮನಸೋಽಸ್ತಿ ಯುಧಾಂ ವರ।।

ಯೋಧರಲ್ಲಿ ಶ್ರೇಷ್ಠನೇ! ಆ ಶಕ್ತಿಯೇ ಫಲ್ಗುನನ ಮೃತ್ಯು ಎಂದು ತಿಳಿದಿದ್ದ ನನಗೆ ನಿದ್ರೆಯಿರಲಿಲ್ಲ. ಮನಸ್ಸಿಗೆ ಹರ್ಷವಿರಲಿಲ್ಲ!

07157039a ಘಟೋತ್ಕಚೇ ವ್ಯಂಸಿತಾಂ ತು ದೃಷ್ಟ್ವಾ ತಾಂ ಶಿನಿಪುಂಗವ।
07157039c ಮೃತ್ಯೋರಾಸ್ಯಾಂತರಾನ್ಮುಕ್ತಂ ಪಶ್ಯಾಮ್ಯದ್ಯ ಧನಂಜಯಂ।।

ಶಿನಿಪುಂಗವ! ಆ ಶಕ್ತಿಯನ್ನು ಘಟೋತ್ಕಚನ ಮೇಲೆ ವ್ಯರ್ಥವಾದುದನ್ನು ನೋಡಿ ಧನಂಜಯನು ಮೃತ್ಯುವಿನ ತೆರೆದ ಬಾಯಿಂದ ಮುಕ್ತನಾದುದನ್ನು ಕಾಣುತ್ತಿದ್ದೇನೆ.

07157040a ನ ಪಿತಾ ನ ಚ ಮೇ ಮಾತಾ ನ ಯೂಯಂ ಭ್ರಾತರಸ್ತಥಾ।
07157040c ನ ಚ ಪ್ರಾಣಾಸ್ತಥಾ ರಕ್ಷ್ಯಾ ಯಥಾ ಬೀಭತ್ಸುರಾಹವೇ।।

ಯುದ್ಧದಲ್ಲಿ ಬೀಭತ್ಸುವನ್ನು ರಕ್ಷಿಸುವುದನ್ನು ಹೋಲಿಸಿದರೆ ನನಗೆ ನನ್ನ ತಂದೆಯಾಗಲೀ ತಾಯಿಯಾಗಲೀ ನೀನಾಗಲೀ ಸಹೋದರರಾಗಲೀ ನನ್ನ ಪ್ರಾಣವಾಗಲೀ ಹೆಚ್ಚೆನಿಸುವುದಿಲ್ಲ.

07157041a ತ್ರೈಲೋಕ್ಯರಾಜ್ಯಾದ್ಯತ್ಕಿಂ ಚಿದ್ಭವೇದನ್ಯತ್ಸುದುರ್ಲಭಂ।
07157041c ನೇಚ್ಚೇಯಂ ಸಾತ್ವತಾಹಂ ತದ್ವಿನಾ ಪಾರ್ಥಂ ಧನಂಜಯಂ।।

ಸಾತ್ವತ! ತ್ರೈಲೋಕ್ಯದ ಆಡಳಿತ ಅಥವಾ ಅದಕ್ಕಿಂತಲು ದುರ್ಲಭ ಇನ್ನೇನಾದರೂ ನನಗೆ ದೊರಕಿದರೆ ಕೂಡ ಪಾರ್ಥ ಧನಂಜಯನಿಲ್ಲದೇ ನಾನು ಅದನ್ನು ಬಯಸುವುದಿಲ್ಲ.

07157042a ಅತಃ ಪ್ರಹರ್ಷಃ ಸುಮಹಾನ್ಯುಯುಧಾನಾದ್ಯ ಮೇಽಭವತ್।
07157042c ಮೃತಂ ಪ್ರತ್ಯಾಗತಮಿವ ದೃಷ್ಟ್ವಾ ಪಾರ್ಥಂ ಧನಂಜಯಂ।।

ಆದುದರಿಂದ ಯುಯುಧಾನ! ಪಾರ್ಥ ಧನಂಜಯನು ಮೃತ್ಯುವಿನಿಂದ ಹೊರಬಂದುದನ್ನು ನೋಡಿ ಇಂದು ನನಗೆ ಅತ್ಯಂತ ಹರ್ಷವಾಗುತ್ತಿದೆ.

07157043a ಅತಶ್ಚ ಪ್ರಹಿತೋ ಯುದ್ಧೇ ಮಯಾ ಕರ್ಣಾಯ ರಾಕ್ಷಸಃ।
07157043c ನ ಹ್ಯನ್ಯಃ ಸಮರೇ ರಾತ್ರೌ ಶಕ್ತಃ ಕರ್ಣಂ ಪ್ರಬಾಧಿತುಂ।।

ಈ ಕಾರಣದಿಂದಲೇ ನಾನು ಕರ್ಣನೊಡನೆ ಯುದ್ಧಮಾಡಲು ರಾಕ್ಷಸನನ್ನು ಕಳುಹಿಸಿದ್ದೆ. ಈ ರಾತ್ರಿಯಲ್ಲಿ ಕರ್ಣನೊಡನೆ ಯುದ್ಧಮಾಡಲು ಬೇರೆ ಯಾರಿಗೂ ಕಷ್ಟವಾಗುತ್ತಿತ್ತು!””

07157044 ಸಂಜಯ ಉವಾಚ।
07157044a ಇತಿ ಸಾತ್ಯಕಯೇ ಪ್ರಾಹ ತದಾ ದೇವಕಿನಂದನಃ।
07157044c ಧನಂಜಯಹಿತೇ ಯುಕ್ತಸ್ತತ್ಪ್ರಿಯೇ ಸತತಂ ರತಃ।।

ಸಂಜಯನು ಹೇಳಿದನು: “ಹೀಗೆ ಸತತವೂ ಧನಂಜಯನ ಹಿತದಲ್ಲಿ ಮತ್ತು ಅವನಿಗೆ ಪ್ರಿಯವಾದುದನ್ನು ಮಾಡಲು ನಿರತನಾಗಿದ್ದ ದೇವಕಿನಂದನನು ಆಗ ಸಾತ್ಯಕಿಗೆ ಹೇಳಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಕೃಷ್ಣವಾಕ್ಯೇ ಸಪ್ತಪಂಚಾಶದಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಕೃಷ್ಣವಾಕ್ಯ ಎನ್ನುವ ನೂರಾಐವತ್ತೇಳನೇ ಅಧ್ಯಾಯವು.