156 ರಾತ್ರಿಯುದ್ಧೇ ಕೃಷ್ಣವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಘಟೋತ್ಕಚವಧ ಪರ್ವ

ಅಧ್ಯಾಯ 156

ಸಾರ

ಕೃಷ್ಣ-ಅರ್ಜುನರ ಸಂವಾದ (1-33).

07156001 ಅರ್ಜುನ ಉವಾಚ।
07156001a ಕಥಮಸ್ಮದ್ಧಿತಾರ್ಥಂ ತೇ ಕೈಶ್ಚ ಯೋಗೈರ್ಜನಾರ್ದನ।
07156001c ಜರಾಸಂಧಪ್ರಭೃತಯೋ ಘಾತಿತಾಃ ಪೃಥಿವೀಷ್ವರಾಃ।।

ಅರ್ಜುನನು ಹೇಳಿದನು: “ಜನಾರ್ದನ! ನಮಗಾಗಿ ನೀನು ಜರಾಸಂಧನೇ ಮೊದಲಾದ ಪೃಥಿವೀಪಾಲರನ್ನು ಯಾವ ಯಾವ ಉಪಾಯಗಳಿಂದ ಸಂಹರಿಸಿದೆ?”

07156002 ವಾಸುದೇವ ಉವಾಚ।
07156002a ಜರಾಸಂಧಶ್ಚೇದಿರಾಜೋ ನೈಷಾದಿಶ್ಚ ಮಹಾಬಲಃ।
07156002c ಯದಿ ಸ್ಯುರ್ನ ಹತಾಃ ಪೂರ್ವಮಿದಾನೀಂ ಸ್ಯುರ್ಭಯಂಕರಾಃ।।

ವಾಸುದೇವನು ಹೇಳಿದನು: “ಒಂದುವೇಳೆ ಈ ಮೊದಲೇ ಜರಾಸಂಧ, ಚೇದಿರಾಜ ಮತ್ತು ಮಹಾಬಲ ನೈಷಾದರು ಹತರಾಗಿರದಿದ್ದರೆ ಈಗ ಅವರು ನಮಗೆ ಅತಿ ಭಯಂಕರರಾಗಿರುತ್ತಿದ್ದರು.

07156003a ಸುಯೋಧನಸ್ತಾನವಶ್ಯಂ ವೃಣುಯಾದ್ರಥಸತ್ತಮಾನ್।
07156003c ತೇಽಸ್ಮಾಭಿರ್ನಿತ್ಯಸಂದುಷ್ಟಾಃ ಸಂಶ್ರಯೇಯುಶ್ಚ ಕೌರವಾನ್।।

ಅವಶ್ಯವಾಗಿ ಸುಯೋಧನನು ಆ ರಥಸತ್ತಮರನ್ನು ತನ್ನ ಕಡೆಯವರನ್ನಾಗಿಯೇ ಆರಿಸಿಕೊಳ್ಳುತ್ತಿದ್ದನು. ನಮಗೆ ನಿತ್ಯವೈರಿಗಳಾಗಿದ್ದ ಅವರೂ ಕೂಡ ಕೌರವರನ್ನೇ ಸೇರಿಕೊಳ್ಳುತ್ತಿದ್ದರು.

07156004a ತೇ ಹಿ ವೀರಾ ಮಹಾತ್ಮಾನಃ ಕೃತಾಸ್ತ್ರಾ ದೃಢಯೋಧಿನಃ।
07156004c ಧಾರ್ತರಾಷ್ಟ್ರೀಂ ಚಮೂಂ ಕೃತ್ಸ್ನಾಂ ರಕ್ಷೇಯುರಮರಾ ಇವ।।

ಆ ಕೃತಾಸ್ತ್ರ, ಧೃಢಯೋಧಿ ಮಹಾತ್ಮರು ಅಮರರಂತೆ ಧಾರ್ತರಾಷ್ಟ್ರರ ಈ ಸೇನೆಯೆಲ್ಲವನ್ನೂ ರಕ್ಷಿಸುತ್ತಿದ್ದರು.

07156005a ಸೂತಪುತ್ರೋ ಜರಾಸಂಧಶ್ಚೇದಿರಾಜೋ ನಿಷಾದಜಃ।
07156005c ಸುಯೋಧನಂ ಸಮಾಶ್ರಿತ್ಯ ತಪೇರನ್ಪೃಥಿವೀಮಿಮಾಂ।।

ಸೂತಪುತ್ರ, ಜರಾಸಂಧ, ಚೇದಿರಾಜ ಮತ್ತು ನಿಷಾದಜರು ಸುಯೋಧನನನ್ನು ಸಮಾಶ್ರಯಿಸಿ ಈ ಪೃಥ್ವಿಯೆಲ್ಲವನ್ನೂ ಕಾಡುತ್ತಿದ್ದರು.

07156006a ಯೋಗೈರಪಿ ಹತಾ ಯೈಸ್ತೇ ತಾನ್ಮೇ ಶೃಣು ಧನಂಜಯ।
07156006c ಅಜಯ್ಯಾ ಹಿ ವಿನಾ ಯೋಗೈರ್ಮೃಧೇ ತೇ ದೈವತೈರಪಿ।।

ಧನಂಜಯ! ಉಪಾಯಗಳಿಂದಲ್ಲದೇ ದೇವತೆಗಳಿಂದಲೂ ರಣದಲ್ಲಿ ಜಯಿಸಲ್ಪಡತಕ್ಕವರಾಗಿರದ ಅವರು ನನ್ನ ಯಾವ ಯಾವ ಉಪಾಯಗಳಿಂದ ಹತರಾದರೆನ್ನುವುದನ್ನು ಕೇಳು.

07156007a ಏಕೈಕೋ ಹಿ ಪೃಥಕ್ತೇಷಾಂ ಸಮಸ್ತಾಂ ಸುರವಾಹಿನೀಂ।
07156007c ಯೋಧಯೇತ್ಸಮರೇ ಪಾರ್ಥ ಲೋಕಪಾಲಾಭಿರಕ್ಷಿತಾಂ।।

ಪಾರ್ಥ! ಅವರಲ್ಲಿ ಒಬ್ಬೊಬ್ಬರೂ ಪ್ರತ್ಯೇಕವಾಗಿ ಸಮರದಲ್ಲಿ ಲೋಕಪಾಲರಿಂದ ರಕ್ಷಿತ ಸಮಸ್ತ ಸುರವಾಹಿನಿಯೊಂದಿಗೂ ಯುದ್ಧಮಾಡಬಲ್ಲತಕ್ಕವರಾಗಿದ್ದರು.

07156008a ಜರಾಸಂಧೋ ಹಿ ರುಷಿತೋ ರೌಹಿಣೇಯಪ್ರಧರ್ಷಿತಃ।
07156008c ಅಸ್ಮದ್ವಧಾರ್ಥಂ ಚಿಕ್ಷೇಪ ಗದಾಂ ವೈ ಲೋಹಿತಾಮುಖೀಂ।।

ಹಿಂದೊಮ್ಮೆ ರೌಹಿಣೇಯ ಬಲರಾಮನು ಆಕ್ರಮಣಿಸಿದ್ದಾಗ ಕ್ರೋಧದಿಂದ ಜರಾಸಂಧನು ನಮ್ಮನ್ನು ವಧಿಸಲೋಸುಗ ಉಕ್ಕಿನ ತುದಿಯುಳ್ಳ ಗದೆಯನ್ನು ನಮ್ಮ ಮೇಲೆ ಎಸೆದನು.

07156009a ಸೀಮಂತಮಿವ ಕುರ್ವಾಣಾಂ ನಭಸಃ ಪಾವಕಪ್ರಭಾಂ।
07156009c ವ್ಯದೃಶ್ಯತಾಪತಂತೀ ಸಾ ಶಕ್ರಮುಕ್ತಾ ಯಥಾಶನಿಃ।।

ಶಕ್ರನು ಬಿಟ್ಟ ವಜ್ರದೋಪಾದಿಯಲ್ಲಿ ಅಗ್ನಿಯಪ್ರಭೆಯುಳ್ಳ ಆ ಶಕ್ತ್ಯಾಯುಧವು ಬೈತಲೆಯಂತೆ ಆಕಾಶವನ್ನು ಸೀಳುತ್ತಾ ನಮ್ಮ ಮೇಲೆ ಬೀಳುತ್ತಿರುವುದನ್ನು ಕಂಡೆವು.

07156010a ತಾಮಾಪತಂತೀಂ ದೃಷ್ಟ್ವೈವ ಗದಾಂ ರೋಹಿಣಿನಂದನಃ।
07156010c ಪ್ರತಿಘಾತಾರ್ಥಮಸ್ತ್ರಂ ವೈ ಸ್ಥೂಣಾಕರ್ಣಮವಾಸೃಜತ್।।

ಅದು ಬೀಳುತ್ತಿರುವುದನ್ನು ನೋಡಿ ರೋಹಿಣೀನಂದನನು ಅದನ್ನು ತುಂಡರಿಸಲು ಸ್ಥೂಣಾಕರ್ಣವೆಂಬ ಅಸ್ತ್ರವನ್ನು ಪ್ರಯೋಗಿಸಿದನು.

07156011a ಅಸ್ತ್ರವೇಗಪ್ರತಿಹತಾ ಸಾ ಗದಾ ಪ್ರಾಪತದ್ಭುವಿ।
07156011c ದಾರಯಂತೀ ಧರಾಂ ದೇವೀಂ ಕಂಪಯಂತೀವ ಪರ್ವತಾನ್।।

ಅಸ್ತ್ರವೇಗದಿಂದ ಪ್ರತಿಹತ ಆ ಗದೆಯು ಪರ್ವತಗಳನ್ನೇ ಕಂಪಿಸುವಂತೆ ಭೂಮಿಯನ್ನು ಸೀಳಿ ಹೊಕ್ಕಿತು.

07156012a ತತ್ರ ಸ್ಮ ರಾಕ್ಷಸೀ ಘೋರಾ ಜರಾ ನಾಮಾಶುವಿಕ್ರಮಾ।
07156012c ಸಂಧಯಾಮಾಸ ತಂ ಜಾತಂ ಜರಾಸಂಧಮರಿಂದಮಂ।।

ಅಲ್ಲಿಯೇ ವಜ್ರದ ವಿಕ್ರಮವುಳ್ಳ ಘೋರ ಜರಾ ಎಂಬ ಹೆಸರಿನ ರಾಕ್ಷಸಿಯಿದ್ದಳು. ಅವಳೇ ಅರಿಂದಮ ಜರಾಸಂಧನು ಹುಟ್ಟಿದಾಗ ಅವನನ್ನು ಒಂದುಗೂಡಿಸಿದ್ದಳು.

07156013a ದ್ವಾಭ್ಯಾಂ ಜಾತೋ ಹಿ ಮಾತೃಭ್ಯಾಮರ್ಧದೇಹಃ ಪೃಥಕ್ಪೃಥಕ್।
07156013c ತಯಾ ಸ ಸಂಧಿತೋ ಯಸ್ಮಾಜ್ಜರಾಸಂಧಸ್ತತಃ ಸ್ಮೃತಃ।।

ಪ್ರತ್ಯೇಕ ಪ್ರತ್ಯೇಕ ಎರಡು ಅರ್ಧದೇಹಗಳಿಂದ ಇಬ್ಬರು ತಾಯಂದಿರಲ್ಲಿ ಹುಟ್ಟಿದ ಅವನು ಜರಾ ಎಂಬ ರಾಕ್ಷಸಿಯಿಂದ ಸೇರಿಸಲ್ಪಟ್ಟನಾಗಿರುವುದರಿಂದ ಅವನು ಜರಾಸಂಧನೆನಿಸಿಕೊಂಡನು.

07156014a ಸಾ ತು ಭೂಮಿಗತಾ ಪಾರ್ಥ ಹತಾ ಸಸುತಬಾಂಧವಾ।
07156014c ಗದಯಾ ತೇನ ಚಾಸ್ತ್ರೇಣ ಸ್ಥೂಣಾಕರ್ಣೇನ ರಾಕ್ಷಸೀ।।

ಪಾರ್ಥ! ಅಲ್ಲಿ ಭೂಮಿಯ ಕೆಳಗೆ ವಾಸಿಸುತ್ತಿದ್ದ ಆ ರಾಕ್ಷಸಿಯು ಸುತ-ಬಾಂಧವರೊಡನೆ ಆ ಗದೆ ಮತ್ತು ಸ್ಥೂಣಕರ್ಣದ ಹೊಡೆತದಿಂದಾಗಿ ಹತಳಾದಳು.

07156015a ವಿನಾಭೂತಃ ಸ ಗದಯಾ ಜರಾಸಂಧೋ ಮಹಾಮೃಧೇ।
07156015c ನಿಹತೋ ಭೀಮಸೇನೇನ ಪಶ್ಯತಸ್ತೇ ಧನಂಜಯ।।

ಧನಂಜಯ! ಆ ಗದೆಯನ್ನು ಕಳೆದುಕೊಂಡ ಜರಾಸಂಧನು ಮಹಾ ಮಲ್ಲಯುದ್ಧದಲ್ಲಿ ಭೀಮಸೇನನಿಂದ ಹತನಾದುದನ್ನು ನೀನೇ ನೋಡಿದ್ದೀಯೆ.

07156016a ಯದಿ ಹಿ ಸ್ಯಾದ್ಗದಾಪಾಣಿರ್ಜರಾಸಂಧಃ ಪ್ರತಾಪವಾನ್।
07156016c ಸೇಂದ್ರಾ ದೇವಾ ನ ತಂ ಹಂತುಂ ರಣೇ ಶಕ್ತಾ ನರೋತ್ತಮ।।

ನರೋತ್ತಮ! ಒಂದುವೇಳೆ ಪ್ರತಾಪವಾನ್ ಜರಾಸಂಧನು ಆ ಗದೆಯನ್ನು ಹೊಂದಿದ್ದರೆ ರಣದಲ್ಲಿ ಅವನನ್ನು ಸಂಹರಿಸಲು ಇಂದ್ರಸಮೇತ ದೇವತೆಗಳೂ ಶಕ್ತರಾಗುತ್ತಿರಲಿಲ್ಲ.

07156017a ತ್ವದ್ಧಿತಾರ್ಥಂ ಹಿ ನೈಷಾದಿರಂಗುಷ್ಠೇನ ವಿಯೋಜಿತಃ।
07156017c ದ್ರೋಣೇನಾಚಾರ್ಯಕಂ ಕೃತ್ವಾ ಚದ್ಮನಾ ಸತ್ಯವಿಕ್ರಮಃ।।

ನಿನ್ನ ಹಿತಕ್ಕಾಗಿಯೇ ಸತ್ಯವಿಕ್ರಮ ದ್ರೋಣನು ಆಚಾರ್ಯನ ವೇಷದಲ್ಲಿ ನೈಷಾದಿ ಏಕಲವ್ಯನ ಅಂಗುಷ್ಠವನ್ನು ಅಪಹರಿಸಿದನು.

07156018a ಸ ತು ಬದ್ಧಾಂಗುಲಿತ್ರಾಣೋ ನೈಷಾದಿರ್ದೃಢವಿಕ್ರಮಃ।
07156018c ಅಸ್ಯನ್ನೇಕೋ ವನಚರೋ ಬಭೌ ರಾಮ ಇವಾಪರಃ।।

ದೃಢವಿಕ್ರಮಿ ನೈಷಾದಿಯು ಅಂಗುಲಿತ್ರಾಣಗಳನ್ನು ಕಟ್ಟಿಕೊಂಡು ಇನ್ನೊಬ್ಬ ರಾಮನಂತೆಯೇ ವನಗಳಲ್ಲಿ ಸಂಚರಿಸುತ್ತಿದ್ದನು.

07156019a ಏಕಲವ್ಯಂ ಹಿ ಸಾಂಗುಷ್ಠಮಶಕ್ತಾ ದೇವದಾನವಾಃ।
07156019c ಸರಾಕ್ಷಸೋರಗಾಃ ಪಾರ್ಥ ವಿಜೇತುಂ ಯುಧಿ ಕರ್ಹಿ ಚಿತ್।।

ಪಾರ್ಥ! ಅಂಗುಷ್ಠವನ್ನು ಹೊಂದಿದ್ದ ಏಕಲವ್ಯನನ್ನು ದೇವ ಮಾನವ ರಾಕ್ಷಸ ಉರಗರು ಸೇರಿಯೂ ಯುದ್ಧದಲ್ಲಿ ಜಯಿಸಲು ಎಂದೂ ಶಕ್ತರಾಗುತ್ತಿರಲಿಲ್ಲ.

07156020a ಕಿಮು ಮಾನುಷಮಾತ್ರೇಣ ಶಕ್ಯಃ ಸ್ಯಾತ್ಪ್ರತಿವೀಕ್ಷಿತುಂ।
07156020c ದೃಢಮುಷ್ಟಿಃ ಕೃತೀ ನಿತ್ಯಮಸ್ಯಮಾನೋ ದಿವಾನಿಶಂ।।

ಇನ್ನು ಮನುಷ್ಯ ಮಾತ್ರರು ಏನು! ಅವನನ್ನು ನೋಡಲು ಕೂಡ ಶಕ್ಯರಾಗುತ್ತಿರಲಿಲ್ಲ. ದೃಢಮುಷ್ಟಿಯಾಗಿದ್ದ ಅವನು ಹಗಲೂ ರಾತ್ರಿ ನಿತ್ಯವೂ ಶ್ರಮಿಸುತ್ತಿದ್ದನು.

07156021a ತ್ವದ್ಧಿತಾರ್ಥಂ ತು ಸ ಮಯಾ ಹತಃ ಸಂಗ್ರಾಮಮೂರ್ಧನಿ।
07156021c ಚೇದಿರಾಜಶ್ಚ ವಿಕ್ರಾಂತಃ ಪ್ರತ್ಯಕ್ಷಂ ನಿಹತಸ್ತವ।।

ನಿನ್ನ ಹಿತಕ್ಕಾಗಿಯೇ ಸಂಗ್ರಾಮಕ್ಕೆ ಮೊದಲೇ ನಾನು ಚೇದಿರಾಜ ವಿಕ್ರಾಂತ ಶಿಶುಪಾಲನನ್ನು ನಿನ್ನ ಪ್ರತ್ಯಕ್ಷದಲ್ಲಿಯೇ ಸಂಹರಿಸಿದೆನು.

07156022a ಸ ಚಾಪ್ಯಶಕ್ಯಃ ಸಂಗ್ರಾಮೇ ಜೇತುಂ ಸರ್ವೈಃ ಸುರಾಸುರೈಃ।
07156022c ವಧಾರ್ಥಂ ತಸ್ಯ ಜಾತೋಽಹಮನ್ಯೇಷಾಂ ಚ ಸುರದ್ವಿಷಾಂ।।

ಸಂಗ್ರಾಮದಲ್ಲಿ ಅವನನ್ನು ಕೂಡ ಗೆಲ್ಲಲು ಸುರಾಸುರರೆಲ್ಲರೂ ಅಶಕ್ಯರೇ! ಅವನ ಮತ್ತು ಅನ್ಯ ಸುರಶತ್ರುಗಳ ವಧೆಗಾಗಿಯೇ ನಾನು ಹುಟ್ಟಿದ್ದೇನೆ.

07156023a ತ್ವತ್ಸಹಾಯೋ ನರವ್ಯಾಘ್ರ ಲೋಕಾನಾಂ ಹಿತಕಾಮ್ಯಯಾ।
07156023c ಹಿಡಿಂಬಬಕಕಿರ್ಮೀರಾ ಭೀಮಸೇನೇನ ಪಾತಿತಾಃ।
07156023e ರಾವಣೇನ ಸಮಪ್ರಾಣಾ ಬ್ರಹ್ಮಯಜ್ಞವಿನಾಶನಾಃ।।

ನರವ್ಯಾಘ್ರ! ನಿನ್ನ ಸಹಾಯಕ್ಕೆಂದು ಮತ್ತು ಲೋಕಗಳ ಹಿತವನ್ನು ಬಯಸಿ ಭೀಮಸೇನನು ರಾವಣನ ಸಮಪ್ರಾಣರಾದ ಬ್ರಹ್ಮ ಯಜ್ಞವಿನಾಶಕರಾದ ಹಿಡಿಂಬ-ಕಿರ್ಮೀರರನ್ನು ಉರುಳಿಸಿದನು.

07156024a ಹತಸ್ತಥೈವ ಮಾಯಾವೀ ಹೈಡಿಂಬೇನಾಪ್ಯಲಾಯುಧಃ।
07156024c ಹೈಡಿಂಬಶ್ಚಾಪ್ಯುಪಾಯೇನ ಶಕ್ತ್ಯಾ ಕರ್ಣೇನ ಘಾತಿತಃ।।

ಅದೇ ರೀತಿ ಮಯಾವಿ ಅಲಾಯುಧನೂ ಹೈಡಿಂಬಿ ಘಟೋತ್ಕಚನಿಂದ ಹತನಾದನು. ಹೈಡಿಂಬಿಯೂ ಕೂಡ ಉಪಾಯದಿಂದ ಕರ್ಣನ ಶಕ್ತಿಗೆ ಸಿಲುಕಿ ಹತನಾದನು.

07156025a ಯದಿ ಹ್ಯೇನಂ ನಾಹನಿಷ್ಯತ್ಕರ್ಣಃ ಶಕ್ತ್ಯಾ ಮಹಾಮೃಧೇ।
07156025c ಮಯಾ ವಧ್ಯೋಽಭವಿಷ್ಯತ್ಸ ಭೈಮಸೇನಿರ್ಘಟೋತ್ಕಚಃ।।

ಒಂದುವೇಳೆ ಮಹಾಯುದ್ಧದಲ್ಲಿ ಕರ್ಣನು ಶಕ್ತ್ಯಾಯುಧದಿಂದ ಇವನನ್ನು ಸಂಹರಿಸದೇ ಇದ್ದಿದ್ದರೆ ಭೈಮಸೇನಿ ಘಟೋತ್ಕಚನ ವಧೆಯು ನನ್ನಿಂದಲೇ ಆಗುತ್ತಿತ್ತು!

07156026a ಮಯಾ ನ ನಿಹತಃ ಪೂರ್ವಮೇಷ ಯುಷ್ಮತ್ಪ್ರಿಯೇಪ್ಸಯಾ।
07156026c ಏಷ ಹಿ ಬ್ರಾಹ್ಮಣದ್ವೇಷೀ ಯಜ್ಞದ್ವೇಷೀ ಚ ರಾಕ್ಷಸಃ।।
07156027a ಧರ್ಮಸ್ಯ ಲೋಪ್ತಾ ಪಾಪಾತ್ಮಾ ತಸ್ಮಾದೇಷ ನಿಪಾತಿತಃ।
07156027c ವ್ಯಂಸಿತಾ ಚಾಪ್ಯುಪಾಯೇನ ಶಕ್ರದತ್ತಾ ಮಯಾನಘ।।
07156028a ಯೇ ಹಿ ಧರ್ಮಸ್ಯ ಲೋಪ್ತಾರೋ ವಧ್ಯಾಸ್ತೇ ಮಮ ಪಾಂಡವ।

ನಿಮಗೆ ಪ್ರಿಯವಾದುದನ್ನು ಮಾಡಲೋಸುಗ ನಾನು ಅವನನ್ನು ಈ ಹಿಂದೆಯೇ ಸಂಹರಿಸಲಿಲ್ಲ. ಈ ರಾಕ್ಷಸನು ಬ್ರಾಹ್ಮಣದ್ವೇಷೀ. ಯಜ್ಞದ್ವೇಷೀ. ಧರ್ಮವನ್ನು ಕಳೆದುಕೊಂಡವನು, ಪಾಪಾತ್ಮ. ಆದುದರಿಂದಲೇ ಅವನು ಸತ್ತನು. ಅನಘ! ಉಪಾಯದಿಂದ ಶಕ್ರನು ನೀಡಿದ ಶಕ್ತಿಯು ಕೈಬಿಡುವಂತೆ ಮಾಡಿದೆ. ಧರ್ಮವನ್ನು ಲೋಪಮಾಡುವವರು ನನ್ನಿಂದ ವಧಿಸಲ್ಪಡುತ್ತಾರೆ ಪಾಂಡವ!

07156028c ಧರ್ಮಸಂಸ್ಥಾಪನಾರ್ಥಂ ಹಿ ಪ್ರತಿಜ್ಞೈಷಾ ಮಮಾವ್ಯಯಾ।।
07156029a ಬ್ರಹ್ಮ ಸತ್ಯಂ ದಮಃ ಶೌಚಂ ಧರ್ಮೋ ಹ್ರೀಃ ಶ್ರೀರ್ಧೃತಿಃ ಕ್ಷಮಾ।
07156029c ಯತ್ರ ತತ್ರ ರಮೇ ನಿತ್ಯಮಹಂ ಸತ್ಯೇನ ತೇ ಶಪೇ।।

ಧರ್ಮಸಂಸ್ಥಾಪನೆಗಾಗಿಯೇ ನಾನು ಈ ಅಚಲ ಪ್ರತಿಜ್ಞೆಯನ್ನು ಕೈಗೊಂಡಿರುವೆನು. ಎಲ್ಲಿ ಬ್ರಹ್ಮ, ಸತ್ಯ, ದಮ, ಶೌಚ, ಧರ್ಮ, ಲಜ್ಜೆ, ಸಾತ್ವಿಕ ಸಂಪತ್ತು, ಧೃತಿ ಮತ್ತು ಕ್ಷಮೆಗಳಿರುವವೋ ಅಲ್ಲಿ ನಿತ್ಯವೂ ನಾನು ರಮಿಸುತ್ತೇನೆ. ಸತ್ಯದ ಮೇಲೆ ಆಣೆಯಿಟ್ಟು ನಿನಗೆ ಹೇಳುತ್ತಿದ್ದೇನೆ.

07156030a ನ ವಿಷಾದಸ್ತ್ವಯಾ ಕಾರ್ಯಃ ಕರ್ಣಂ ವೈಕರ್ತನಂ ಪ್ರತಿ।
07156030c ಉಪದೇಕ್ಷ್ಯಾಮ್ಯುಪಾಯಂ ತೇ ಯೇನ ತಂ ಪ್ರಸಹಿಷ್ಯಸಿ।।

ವೈಕರ್ತನನ ಕುರಿತು ನೀನು ದುಃಖಿಸಬೇಕಾದುದಿಲ್ಲ. ನಂತರದಲ್ಲಿ ನಾನು ನಿನಗೆ ಅವನ ವಧೋಪಾಯವನ್ನು ಉಪದೇಶಿಸುತ್ತೇನೆ.

07156031a ಸುಯೋಧನಂ ಚಾಪಿ ರಣೇ ಹನಿಷ್ಯತಿ ವೃಕೋದರಃ।
07156031c ತಸ್ಯ ಚಾಪಿ ವಧೋಪಾಯಂ ವಕ್ಷ್ಯಾಮಿ ತವ ಪಾಂಡವ।।

ಸುಯೋಧನನನ್ನು ಕೂಡ ರಣದಲ್ಲಿ ವೃಕೋದರನು ಸಂಹರಿಸುತ್ತಾನೆ. ಪಾಂಡವ! ಅವನ ವಧೋಪಾಯವನ್ನು ಕೂಡ ನಾನು ನಿನಗೆ ಹೇಳುತ್ತೇನೆ.

07156032a ವರ್ಧತೇ ತುಮುಲಸ್ತ್ವೇಷ ಶಬ್ದಃ ಪರಚಮೂಂ ಪ್ರತಿ।
07156032c ವಿದ್ರವಂತಿ ಚ ಸೈನ್ಯಾನಿ ತ್ವದೀಯಾನಿ ದಿಶೋ ದಶ।।

ಶತ್ರುಗಳ ಸೇನೆಗಳ ಮಧ್ಯೆ ತುಮುಲ ಶಬ್ಧವು ಹೆಚ್ಚಾಗುತ್ತಲೇ ಇದೆ. ನಿನ್ನ ಸೇನೆಗಳು ಕೂಡ ದಶದಿಶಗಳಲ್ಲಿ ಓಡುತ್ತಿವೆ.

07156033a ಲಬ್ಧಲಕ್ಷ್ಯಾ ಹಿ ಕೌರವ್ಯಾ ವಿಧಮಂತಿ ಚಮೂಂ ತವ।
07156033c ದಹತ್ಯೇಷ ಚ ವಃ ಸೈನ್ಯಂ ದ್ರೋಣಃ ಪ್ರಹರತಾಂ ವರಃ।।

ಲಕ್ಷ್ಯಭೇದನದಲ್ಲಿ ಪರಿಣಿತರಾದ ಕೌರವರು ನಿನ್ನ ಸೇನೆಯನ್ನು ಧ್ವಂಸಮಾಡುತ್ತಿದ್ದಾರೆ. ಪ್ರಹರಿಗಳಲ್ಲಿ ಶ್ರೇಷ್ಠ ದ್ರೋಣನೂ ಕೂಡ ನಮ್ಮ ಸೇನೆಯನ್ನು ಸುಡುತ್ತಿದ್ದಾನೆ!””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಕೃಷ್ಣವಾಕ್ಯೇ ಷಟ್ಪಂಚಾಶದಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಕೃಷ್ಣವಾಕ್ಯ ಎನ್ನುವ ನೂರಾಐವತ್ತಾರನೇ ಅಧ್ಯಾಯವು.