ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಘಟೋತ್ಕಚವಧ ಪರ್ವ
ಅಧ್ಯಾಯ 154
ಸಾರ
ಕರ್ಣನ ಪರಾಕ್ರಮ (1-11). ಕರ್ಣ-ಘಟೋತ್ಕಚರ ಯುದ್ಧ; ಘಟೋತ್ಕಚನು ಅಂತರ್ಧಾನನಾಗಿ ಕುರುಸೇನೆಯನ್ನು ನಾಶಪಡಿಸಿದುದು (12-47). ಇಂದ್ರನು ಕೊಟ್ಟ ಶಕ್ತಿಯನ್ನು ಘಟೋತ್ಕಚನ ಮೇಲೆ ಪ್ರಯೋಗಿಸು ಎಂದು ಕುರುಗಳು ಹೇಳಲು ಕರ್ಣನು ಅರ್ಜುನನಿಗಾಗಿ ಇಟ್ಟುಕೊಂಡಿದ್ದ ಶಕ್ತಿಯಿಂದ ಘಟೋತ್ಕಚನನ್ನು ವಧಿಸಿದುದು (48-63).
07154001 ಸಂಜಯ ಉವಾಚ।
07154001a ನಿಹತ್ಯಾಲಾಯುಧಂ ರಕ್ಷಃ ಪ್ರಹೃಷ್ಟಾತ್ಮಾ ಘಟೋತ್ಕಚಃ।
07154001c ನನಾದ ವಿವಿಧಾನ್ನಾದಾನ್ವಾಹಿನ್ಯಾಃ ಪ್ರಮುಖೇ ಸ್ಥಿತಃ।।
ಸಂಜಯನು ಹೇಳಿದನು: “ಅಲಾಯುಧನನ್ನು ಸಂಹರಿಸಿ ಪ್ರಹೃಷ್ಟನಾದ ರಾಕ್ಷಸ ಘಟೋತ್ಕಚನು ವಾಹಿನಿಗಳ ಎದುರು ನಿಂತು ವಿವಿಧ ರೀತಿಗಳಲ್ಲಿ ಗರ್ಜಿಸಿದನು.
07154002a ತಸ್ಯ ತಂ ತುಮುಲಂ ಶಬ್ದಂ ಶ್ರುತ್ವಾ ಕುಂಜರಕಂಪನಂ।
07154002c ತಾವಕಾನಾಂ ಮಹಾರಾಜ ಭಯಮಾಸೀತ್ಸುದಾರುಣಂ।।
ಮಹಾರಾಜ! ಆನೆಗಳನ್ನೂ ನಡುಗಿಸುವ ಅವನ ಆ ತುಮುಲ ಶಬ್ಧವನ್ನು ಕೇಳಿದ ನಿನ್ನವರನ್ನು ಸುದಾರುಣ ಭಯವು ಆವರಿಸಿತು.
07154003a ಅಲಾಯುಧವಿಷಕ್ತಂ ತು ಭೈಮಸೇನಿಂ ಮಹಾಬಲಂ।
07154003c ದೃಷ್ಟ್ವಾ ಕರ್ಣೋ ಮಹಾಬಾಹುಃ ಪಾಂಚಾಲಾನ್ಸಮುಪಾದ್ರವತ್।।
ಮಹಾಬಲ ಭೈಮಸೇನಿಯೊಂದಿಗೆ ಅಲಾಯುಧನು ಹೋರಾಡುತ್ತಿರುವುದನ್ನು ನೋಡಿ ಮಹಾಬಾಹು ಕರ್ಣನು ಪಾಂಚಾಲರನ್ನು ಆಕ್ರಮಣಿಸಿದ್ದನು.
07154004a ದಶಭಿರ್ದಶಭಿರ್ಬಾಣೈರ್ಧೃಷ್ಟದ್ಯುಮ್ನಶಿಖಂಡಿನೌ।
07154004c ದೃಢೈಃ ಪೂರ್ಣಾಯತೋತ್ಸೃಷ್ಟೈರ್ಬಿಭೇದ ನತಪರ್ವಭಿಃ।।
ಸಂಪೂರ್ಣವಾಗಿ ಸೆಳೆದ ಹತ್ತು ಹತ್ತು ದೃಢ ನತಪರ್ವ ಬಾಣಗಳಿಂದ ಅವನು ಧೃಷ್ಟದ್ಯುಮ್ನ-ಶಿಖಂಡಿಯರನ್ನು ಹೊಡೆದನು.
07154005a ತತಃ ಪರಮನಾರಾಚೈರ್ಯುಧಾಮನ್ಯೂತ್ತಮೌಜಸೌ।
07154005c ಸಾತ್ಯಕಿಂ ಚ ರಥೋದಾರಂ ಕಂಪಯಾಮಾಸ ಮಾರ್ಗಣೈಃ।।
ಅನಂತರ ಪರಮ ನಾರಾಚಗಳಿಂದ ಯುಧಾಮನ್ಯು- ಉತ್ತಮೌಜಸರನ್ನೂ ಹೊಡೆದು ಮಾರ್ಗಣಗಳಿಂದ ರಥೋದಾರ ಸಾತ್ಯಕಿಯನ್ನು ನಡುಗಿಸಿದನು.
07154006a ತೇಷಾಮಭ್ಯಸ್ಯತಾಂ ತತ್ರ ಸರ್ವೇಷಾಂ ಸವ್ಯದಕ್ಷಿಣಂ।
07154006c ಮಂಡಲಾನ್ಯೇವ ಚಾಪಾನಿ ವ್ಯದೃಶ್ಯಂತ ಜನಾಧಿಪ।।
ಜನಾಧಿಪ! ಅವರುಗಳು ಕೂಡ ಅಲ್ಲಿ ಅವನ ಮೇಲೆ ಎಡ-ಬಲಗಳಲ್ಲಿ ಎಲ್ಲಕಡೆಗಳಿಂದ ಬಿಲ್ಲುಗಳನ್ನು ಮಂಡಲಾಕಾರವಾಗಿ ಸೆಳೆದು ಹೊಡೆಯುತ್ತಿರುವುದು ಕಂಡು ಬರುತ್ತಿತ್ತು.
07154007a ತೇಷಾಂ ಜ್ಯಾತಲನಿರ್ಘೋಷೋ ರಥನೇಮಿಸ್ವನಶ್ಚ ಹ।
07154007c ಮೇಘಾನಾಮಿವ ಘರ್ಮಾಂತೇ ಬಭೂವ ತುಮುಲೋ ನಿಶಿ।।
ಅವರ ಟೇಂಕಾರ ನಿರ್ಘೋಷವು ಮತ್ತು ರಥನೇಮಿಗಳ ಶಬ್ಧಗಳು ಆ ರಾತ್ರಿ ಬೇಸಗೆಯ ಕೊನೆಯಲ್ಲಿ ಮೋಡಗಳ ಶಬ್ಧದಂತೆ ಕೇಳಿಬರುತ್ತಿದ್ದವು.
07154008a ಜ್ಯಾನೇಮಿಘೋಷಸ್ತನಯಿತ್ನುಮಾನ್ವೈ ಧನುಸ್ತಡಿನ್ಮಂಡಲಕೇತುಶೃಂಗಃ।
07154008c ಶರೌಘವರ್ಷಾಕುಲವೃಷ್ಟಿಮಾಂಶ್ಚ ಸಂಗ್ರಾಮಮೇಘಃ ಸ ಬಭೂವ ರಾಜನ್।।
ರಾಜನ್! ಟೇಂಕಾರ-ರಥಶಬ್ಧಗಳು ಮೇಘದ ಘರ್ಜನೆಯಂತಿದ್ದವು; ಮಂಡಲಾಕಾರವಾಗಿ ಎಳೆಯಲ್ಪಟ್ಟ ಧನುಸ್ಸುಗಳು ಕಾಮನಬಿಲ್ಲುಗಳಂತಿದ್ದವು; ಬಾಣಗಳ ಸಮೂಹಗಳು ಮಳೆಯಂತೆ ಸುರಿಯುತ್ತಿದ್ದವು; ಆ ಸಂಗ್ರಾಮವು ಹೀಗೆ ಮೇಘದಂತಾಯಿತು.
07154009a ತದುದ್ಧತಂ ಶೈಲ ಇವಾಪ್ರಕಂಪ್ಯೋ ವರ್ಷಂ ಮಹಚ್ಚೈಲಸಮಾನಸಾರಃ।
07154009c ವಿಧ್ವಂಸಯಾಮಾಸ ರಣೇ ನರೇಂದ್ರ ವೈಕರ್ತನಃ ಶತ್ರುಗಣಾವಮರ್ದೀ।।
ನರೇಂದ್ರ! ಪರ್ವತದಂತೆ ಅಚಲನಾಗಿದ್ದ, ಶೈಲದಂತೆ ಶಕ್ತಿವಂತನಾಗಿದ್ದ ಆ ವೈಕರ್ತನನು ರಣದಲ್ಲಿ ಧ್ವಂಸಮಾಡತೊಡಗಿದನು.
07154010a ತತೋಽತುಲೈರ್ವಜ್ರನಿಪಾತಕಲ್ಪೈಃ ಶಿತೈಃ ಶರೈಃ ಕಾಂಚನಚಿತ್ರಪುಂಖೈಃ।
07154010c ಶತ್ರೂನ್ವ್ಯಪೋಹತ್ಸಮರೇ ಮಹಾತ್ಮಾ ವೈಕರ್ತನಃ ಪುತ್ರಹಿತೇ ರತಸ್ತೇ।।
ಆಗ ವಜ್ರಗಳಂತೆ ಬೀಳುತ್ತಿದ್ದ, ಬಂಗಾರದ ಬಣ್ಣದ ಪುಂಖಗಳುಳ್ಳ ಹರಿತ ಶರಗಳಿಂದ ಸಮರದಲ್ಲಿ ಶತ್ರುಗಳನ್ನು ನಿನ್ನ ಮಗನ ಹಿತದಲ್ಲಿಯೇ ನಿರತನಾಗಿದ್ದ ಆ ಮಹಾತ್ಮಾ ವೈಕರ್ತನನು ನಾಶಗೊಳಿಸಿದನು.
07154011a ಸಂಚಿನ್ನಭಿನ್ನಧ್ವಜಿನಶ್ಚ ಕೇ ಚಿತ್ ಕೇ ಚಿಚ್ಚರೈರರ್ದಿತಭಿನ್ನದೇಹಾಃ।
07154011c ಕೇ ಚಿದ್ವಿಸೂತಾ ವಿಹಯಾಶ್ಚ ಕೇ ಚಿದ್ ವೈಕರ್ತನೇನಾಶು ಕೃತಾ ಬಭೂವುಃ।।
ವೈಕರ್ತನನ ಕೃತ್ಯದಿಂದಾಗಿ ಕೆಲವರ ಬಾವುಟಗಳು ಹರಿದುಹೋದವು, ಧ್ವಜಗಳು ತುಂಡಾದವು. ಕೆಲವರ ಶರೀರಗಳು ತುಂಡಾಗಿ ನೋವಿನಿಂದ ತೊಳಲಾಡುತ್ತಿದ್ದರು. ಕೆಲವರ ಸಾರಥಿಗಳು ಸತ್ತಿದ್ದರು; ಕೆಲವರ ಕುದುರೆಗಳು ಸತ್ತಿದ್ದವು.
07154012a ಅವಿಂದಮಾನಾಸ್ತ್ವಥ ಶರ್ಮ ಸಂಖ್ಯೇ ಯೌಧಿಷ್ಠಿರಂ ತೇ ಬಲಮನ್ವಪದ್ಯನ್।
07154012c ತಾನ್ಪ್ರೇಕ್ಷ್ಯ ಭಗ್ನಾನ್ವಿಮುಖೀಕೃತಾಂಶ್ಚ ಘಟೋತ್ಕಚೋ ರೋಷಮತೀವ ಚಕ್ರೇ।।
ಕಾಡಲ್ಪಡುತ್ತಿದ್ದ ಆ ಪಾಂಚಾಲರ ಸೇನೆಯು ಯುಧಿಷ್ಠಿರನ ಸೇನೆಯನ್ನು ಸೇರಿಕೊಂಡಿತು. ಅದೂ ಕೂಡ ಭಗ್ನವಾಗಿ ಓಡಿ ಹೋಗುತ್ತಿರುವುದನ್ನು ಕಂಡ ಘಟೋತ್ಕಚನು ಅತೀವ ರೋಷಗೊಂಡನು.
07154013a ಆಸ್ಥಾಯ ತಂ ಕಾಂಚನರತ್ನಚಿತ್ರಂ ರಥೋತ್ತಮಂ ಸಿಂಹ ಇವೋನ್ನನಾದ।
07154013c ವೈಕರ್ತನಂ ಕರ್ಣಮುಪೇತ್ಯ ಚಾಪಿ ವಿವ್ಯಾಧ ವಜ್ರಪ್ರತಿಮೈಃ ಪೃಷತ್ಕೈಃ।।
ಅವನು ಕಾಂಚನರತ್ನಚಿತ್ರಿತ ಉತ್ತಮ ರಥದಲ್ಲಿ ಕುಳಿತು ಸಿಂಹದಂತೆ ಗರ್ಜಿಸಿದನು ಮತ್ತು ವೈಕರ್ತನ ಕರ್ಣನ ಬಳಿಸಾರಿ ಅವನನ್ನು ವಜ್ರದಂತಿರುವ ಪೃಷತಗಳಿಂದ ಹೊಡೆದನು.
07154014a ತೌ ಕರ್ಣಿನಾರಾಚಶಿಲೀಮುಖೈಶ್ಚ ನಾಲೀಕದಂಡೈಶ್ಚ ಸವತ್ಸದಂತೈಃ।
07154014c ವರಾಹಕರ್ಣೈಃ ಸವಿಷಾಣಶೃಂಗೈಃ ಕ್ಷುರಪ್ರವರ್ಷೈಶ್ಚ ವಿನೇದತುಃ ಖಂ।।
ಅವರಿಬ್ಬರೂ ಧಾರಾಕಾರವಾಗಿ ಸುರಿಸುತ್ತಿದ್ದ ಕರ್ಣಿ, ನಾರಾಚ, ಶಿಲೀಮುಖ, ನಾಲೀಕ, ದಂಡ, ವತ್ಸದಂತ, ವರಾಹಕರ್ಣ, ವಿಷಾಣಶೃಂಗ, ಕ್ಷುರಗಳು ಆಕಾಶದಲ್ಲಿ ಪ್ರತಿಧ್ವನಿಗೈಯುತ್ತಿದ್ದವು.
07154015a ತದ್ಬಾಣಧಾರಾವೃತಮಂತರಿಕ್ಷಂ ತಿರ್ಯಗ್ಗತಾಭಿಃ ಸಮರೇ ರರಾಜ।
07154015c ಸುವರ್ಣಪುಂಖಜ್ವಲಿತಪ್ರಭಾಭಿರ್ ವಿಚಿತ್ರಪುಷ್ಪಾಭಿರಿವ ಸ್ರಜಾಭಿಃ।।
ಧಾರಾಕಾರವಾಗಿ ಸುರಿಯುತ್ತಿದ್ದ ಆ ಬಾಣಗಳಿಂದ ಅಂತರಿಕ್ಷವು ತುಂಬಿಹೋಯಿತು. ಆಕಾಶದಲ್ಲಿ ಒಂದಕ್ಕೊಂದು ತಾಗಿ ಉರಿದು ಹಿಂದೆ ಸರಿಯುತ್ತಿದ್ದವು. ಸುವರ್ಣಪುಂಖಗಳು ಪ್ರಭೆಯಿಂದ ಪ್ರಜ್ವಲಿಸಲು ಅವು ಬಣ್ಣ ಬಣ್ಣದ ಹೂವುಗಳ ಮಾಲೆಗಳಂತೆ ತೋರುತ್ತಿದ್ದವು.
07154016a ಸಮಂ ಹಿ ತಾವಪ್ರತಿಮಪ್ರಭಾವಾವ್ ಅನ್ಯೋನ್ಯಮಾಜಘ್ನತುರುತ್ತಮಾಸ್ತ್ರೈಃ।
07154016c ತಯೋರ್ಹಿ ವೀರೋತ್ತಮಯೋರ್ನ ಕಶ್ಚಿದ್ ದದರ್ಶ ತಸ್ಮಿನ್ಸಮರೇ ವಿಶೇಷಂ।।
ಅಪ್ರತಿಮ ಪ್ರಭಾವಗಳಲ್ಲಿ ಸರಿಸಮನಾಗಿದ್ದ ಅವರು ಉತ್ತಮ ಅಸ್ತ್ರಗಳಿಂದ ಅನ್ಯೋನ್ಯರನ್ನು ಸಂಹರಿಸಲು ಪ್ರಯತ್ನಿಸುತ್ತಿದ್ದರು. ಆ ಸಮರದಲ್ಲಿ ಉತ್ತಮ ವೀರರಾಗಿದ್ದ ಅವರಿಬ್ಬರಲ್ಲಿ ಯಾರೂ ವಿಶೇಷವೆಂದು ತೋರಿಬರಲಿಲ್ಲ.
07154017a ಅತೀವ ತಚ್ಚಿತ್ರಮತೀವ ರೂಪಂ ಬಭೂವ ಯುದ್ಧಂ ರವಿಭೀಮಸೂನ್ವೋಃ।
07154017c ಸಮಾಕುಲಂ ಶಸ್ತ್ರನಿಪಾತಘೋರಂ ದಿವೀವ ರಾಹ್ವಂಶುಮತೋಃ ಪ್ರತಪ್ತಂ।।
ರವಿ ಮತ್ತು ಭೀಮಸೇನರ ಮಕ್ಕಳೊಂದಿಗೆ ನಡೆಯುತ್ತಿದ್ದ ಆ ಯುದ್ಧವು ಅತೀವ ವಿಚಿತ್ರವಾಗಿದ್ದಿತು, ಅತೀವ ರೂಪವುಳ್ಳದ್ದಾಗಿತ್ತು. ಆಕಾಶದಲ್ಲಿ ಬೀಳುತ್ತಿದ್ದ ಘೋರ ಶಸ್ತ್ರಗಳ ಸಮಾಕುಲಗಳು ಆಕಾಶದಲ್ಲಿ ರಾಹು-ಆದಿತ್ಯರ ಯುದ್ಧದಂತೆ ಬೆಳಗುತ್ತಿದ್ದವು.
07154018a ಘಟೋತ್ಕಚೋ ಯದಾ ಕರ್ಣಂ ನ ವಿಶೇಷಯತೇ ನೃಪ।
07154018c ತದಾ ಪ್ರಾದುಶ್ಚಕಾರೋಗ್ರಮಸ್ತ್ರಮಸ್ತ್ರವಿದಾಂ ವರಃ।।
ನೃಪ! ಘಟೋತ್ಕಚನನ್ನು ಅತಿಶಯಿಸಲು ಸಾದ್ಯವಾಗದಾಗ ಅಸ್ತ್ರವಿದರಲ್ಲಿ ಶ್ರೇಷ್ಠ ಕರ್ಣನು ಉಗ್ರ ಅಸ್ತ್ರಗಳನ್ನು ಪ್ರಯೋಗಿಸಲು ಪ್ರಾರಂಭಿಸಿದನು.
07154019a ತೇನಾಸ್ತ್ರೇಣ ಹಯಾನ್ಪೂರ್ವಂ ಹತ್ವಾ ಕರ್ಣಸ್ಯ ರಾಕ್ಷಸಃ।
07154019c ಸಾರಥಿಂ ಚೈವ ಹೈಡಿಂಬಃ ಕ್ಷಿಪ್ರಮಂತರಧೀಯತ।।
ಕರ್ಣನ ಆ ಅಸ್ತ್ರದಿಂದ ಕುದುರೆ ಸಾರಥಿಗಳು ಹತರಾಗಲು ರಾಕ್ಷಸ ಹೈಡಿಂಬನು ಕ್ಷಿಪ್ರವಾಗಿ ಅಂತರ್ಧಾನನಾದನು.”
07154020 ಧೃತರಾಷ್ಟ್ರ ಉವಾಚ।
07154020a ತಥಾ ಹ್ಯಂತರ್ಹಿತೇ ತಸ್ಮಿನ್ಕೂಟಯೋಧಿನಿ ರಾಕ್ಷಸೇ।
07154020c ಮಾಮಕೈಃ ಪ್ರತಿಪನ್ನಂ ಯತ್ತನ್ಮಮಾಚಕ್ಷ್ವ ಸಂಜಯ।।
ಧೃತರಾಷ್ಟ್ರನು ಹೇಳಿದನು: “ಕೂಟಯೋಧೀ ರಾಕ್ಷಸನು ಹಾಗೆ ಅಂತರ್ಹಿತನಾಗಲು ನನ್ನವರು ಯಾವ ಪ್ರಯತ್ನವನ್ನು ಮಾಡಿದರು ಎನ್ನುವುದನ್ನು ನನಗೆ ಹೇಳು ಸಂಜಯ!”
07154021 ಸಂಜಯ ಉವಾಚ।
07154021a ಅಂತರ್ಹಿತಂ ರಾಕ್ಷಸಂ ತಂ ವಿದಿತ್ವಾ ಸಂಪ್ರಾಕ್ರೋಶನ್ಕುರವಃ ಸರ್ವ ಏವ।
07154021c ಕಥಂ ನಾಯಂ ರಾಕ್ಷಸಃ ಕೂಟಯೋಧೀ ಹನ್ಯಾತ್ಕರ್ಣಂ ಸಮರೇಽದೃಶ್ಯಮಾನಃ।।
ಸಂಜಯನು ಹೇಳಿದನು: “ರಾಕ್ಷಸನು ಅಂತರ್ಧಾನನಾದುದನ್ನು ತಿಳಿದು ಕುರುಗಳೆಲ್ಲರೂ “ಕೂಟಯೋಧಿ ಈ ರಾಕ್ಷಸನು ಅದೃಶ್ಯನಾಗಿ ಸಮರದಲ್ಲಿ ಕರ್ಣನನ್ನು ಸಂಹರಿಸದೇ ಇರುವನೇ?” ಎಂದು ಜೋರಾಗಿ ಕೂಗಿಕೊಂಡರು.
07154022a ತತಃ ಕರ್ಣೋ ಲಘುಚಿತ್ರಾಸ್ತ್ರಯೋಧೀ ಸರ್ವಾ ದಿಶೋ ವ್ಯಾವೃಣೋದ್ಬಾಣಜಾಲೈಃ।
07154022c ನ ವೈ ಕಿಂ ಚಿದ್ವ್ಯಾಪತತ್ತತ್ರ ಭೂತಂ ತಮೋಭೂತೇ ಸಾಯಕೈರಂತರಿಕ್ಷೇ।।
ಆಗ ಲಘು ಚಿತ್ರಾಸ್ತ್ರಯೋಧಿ ಕರ್ಣನು ಬಾಣಜಾಲಗಳಿಂದ ಎಲ್ಲ ದಿಕ್ಕುಗಳನ್ನೂ ತುಂಬಿಸಿದನು. ಸಾಯಕಗಳಿಂದ ಕತ್ತಲೆ ತುಂಬಿದ ಅಂತರಿಕ್ಷದಲ್ಲಿ ಯಾವ ಭೂತಗಳೂ ಸಂಚರಿಸಲಾಗುತ್ತಿರಲಿಲ್ಲ.
07154023a ನ ಚಾದದಾನೋ ನ ಚ ಸಂದಧಾನೋ ನ ಚೇಷುಧೀ ಸ್ಪೃಶಮಾನಃ ಕರಾಗ್ರೈಃ।
07154023c ಅದೃಶ್ಯದ್ವೈ ಲಾಘವಾತ್ಸೂತಪುತ್ರಃ ಸರ್ವಂ ಬಾಣೈಶ್ಚಾದಯಾನೋಽಅಂತರಿಕ್ಷಂ।।
ಹಸ್ತಲಾಘವದಿಂದ ಸೂತಪುತ್ರನು ಅಂತರಿಕ್ಷವೆಲ್ಲವನ್ನೂ ಬಾಣಗಳಿಂದ ತುಂಬುತ್ತಿರಲು ಅವನು ಬಾಣಗಳನ್ನು ತೆಗೆಯುವುದಾಗಲೀ, ಅನುಸಂಧಾನ ಮಾಡುವುದಾಗಲೀ, ಕೈಯ ಅಗ್ರಭಾಗದಿಂದ ಶಿಂಜಿನಿಯನ್ನು ಎಳೆಯುವುದಾಗಲೀ ಕಾಣುತ್ತಲೇ ಇರಲಿಲ್ಲ.
07154024a ತತೋ ಮಾಯಾಂ ವಿಹಿತಾಮಂತರಿಕ್ಷೇ ಘೋರಾಂ ಭೀಮಾಂ ದಾರುಣಾಂ ರಾಕ್ಷಸೇನ।
07154024c ಸಂಪಶ್ಯಾಮೋ ಲೋಹಿತಾಭ್ರಪ್ರಕಾಶಾಂ ದೇದೀಪ್ಯಂತೀಮಗ್ನಿಶಿಖಾಮಿವೋಗ್ರಾಂ।।
ಆಗ ನಾವು ಅಂತರಿಕ್ಷದಲ್ಲಿ ರಾಕ್ಷಸನು ನಿರ್ಮಿಸಿದ ಘೋರ, ಭಯಂಕರ, ದಾರುಣ ಮಾಯೆಯನ್ನು – ಅಗ್ನಿಶಿಖೆಯಂತೆ ಉಗ್ರವಾಗಿ ದೇದೀಪ್ಯಮಾನ ಕೆಂಪುಮೋಡಗಳ ಪ್ರಕಾಶವನ್ನು ನೋಡಿದೆವು.
07154025a ತತಸ್ತಸ್ಯಾ ವಿದ್ಯುತಃ ಪ್ರಾದುರಾಸನ್ನ್ ಉಲ್ಕಾಶ್ಚಾಪಿ ಜ್ವಲಿತಾಃ ಕೌರವೇಂದ್ರ।
07154025c ಘೋಷಶ್ಚಾನ್ಯಃ ಪ್ರಾದುರಾಸೀತ್ಸುಘೋರಃ ಸಹಸ್ರಶೋ ನದತಾಂ ದುಂದುಭೀನಾಂ।।
ಕೌರವೇಂದ್ರ! ಅನಂತರ ಅದರಿಂದ ಮಿಂಚುಗಳು, ಮತ್ತು ಉರಿಯುತ್ತಿರುವ ಉಲ್ಕೆಗಳು ಹುಟ್ಟಿಕೊಂಡವು. ಅಲ್ಲಿಂದ ಸಹಸ್ರಾರು ದುಂದುಭಿಗಳು ಮೊಳಗುತ್ತಿರುವವೋ ಎನ್ನುವಷ್ಟು ಘೋರ ಅನ್ಯ ಘೋಷಗಳು ಹೊರಸೂಸಿದವು.
07154026a ತತಃ ಶರಾಃ ಪ್ರಾಪತನ್ರುಕ್ಮಪುಂಖಾಃ ಶಕ್ತ್ಯಃ ಪ್ರಾಸಾ ಮುಸಲಾನ್ಯಾಯುಧಾನಿ।
07154026c ಪರಶ್ವಧಾಸ್ತೈಲಧೌತಾಶ್ಚ ಖಡ್ಗಾಃ ಪ್ರದೀಪ್ತಾಗ್ರಾಃ ಪಟ್ಟಿಶಾಸ್ತೋಮರಾಶ್ಚ।।
ಮತ್ತೆ ಅಲ್ಲಿಂದ ರುಕ್ಮಪುಂಖಗಳ ಶಕ್ತಿಗಳು, ಪ್ರಾಸಗಳು, ಮುಸಲಗಳು, ಅನ್ಯ ಆಯುಧಗಳು, ಪರಶು, ತೈಲಧೌತಗಳು, ಖಡ್ಗಗಳು, ಮತ್ತು ಉರಿಯುತ್ತಿರುವ ಪಟ್ಟಿಶ-ತೋಮರಗಳು ಸುರಿದು ಬಿದ್ದವು.
07154027a ಮಯೂಖಿನಃ ಪರಿಘಾ ಲೋಹಬದ್ಧಾ ಗದಾಶ್ಚಿತ್ರಾಃ ಶಿತಧಾರಾಶ್ಚ ಶೂಲಾಃ।
07154027c ಗುರ್ವ್ಯೋ ಗದಾ ಹೇಮಪಟ್ಟಾವನದ್ಧಾಃ ಶತಘ್ನ್ಯಶ್ಚ ಪ್ರಾದುರಾಸನ್ಸಮಂತಾತ್।।
ಕಿರಣಗಳನ್ನು ಸೂಸುತ್ತಿದ್ದ ಪರಿಘಗಳು, ಲೋಹದಿಂದ ಬದ್ಧವಾದ ಬಣ್ಣ ಬಣ್ಣದ ಗದೆಗಳು, ಹರಿತವಾಗಿದ್ದ ಶೂಲಗಳು, ಬಂಗಾರದ ಪಟ್ಟಿಗಳನ್ನು ಹೊಂದಿದ್ದ ಭಾರ ಗದೆಗಳು, ಮತ್ತು ಶತಘ್ನಗಳು ಎಲ್ಲೆಡೆಯಿಂದ ಬೀಳತೊಡಗಿದವು.
07154028a ಮಹಾಶಿಲಾಶ್ಚಾಪತಂಸ್ತತ್ರ ತತ್ರ ಸಹಸ್ರಶಃ ಸಾಶನಯಃ ಸವಜ್ರಾಃ।
07154028c ಚಕ್ರಾಣಿ ಚಾನೇಕಶತಕ್ಷುರಾಣಿ ಪ್ರಾದುರ್ಬಭೂವುರ್ಜ್ವಲನಪ್ರಭಾಣಿ।।
ಅಲ್ಲಲ್ಲಿ ಮಹಾಶಿಲೆಗಳು ಬಿದ್ದವು. ಸಹಸ್ರ ಮಿಂಚು-ಸಿಡುಲುಗಳಂತೆ ಅನೇಕ ನೂರು ಮೊನಗುಗಳುಳ್ಳ ಚಕ್ರಗಳು ಅವುಗಳಿಂದ ಹೊರಬಿದ್ದ ಜ್ವಲನ ಪ್ರಭೆಗಳು ಉದ್ಭವಿಸಿದವು.
07154029a ತಾಂ ಶಕ್ತಿಪಾಷಾಣಪರಶ್ವಧಾನಾಂ ಪ್ರಾಸಾಸಿವಜ್ರಾಶನಿಮುದ್ಗರಾಣಾಂ।
07154029c ವೃಷ್ಟಿಂ ವಿಶಾಲಾಂ ಜ್ವಲಿತಾಂ ಪತಂತೀಂ ಕರ್ಣಃ ಶರೌಘೈರ್ನ ಶಶಾಕ ಹಂತುಂ।।
ಪ್ರಜ್ವಲಿಸುತ್ತಾ ಬೀಳುತ್ತಿದ್ದ ಶಕ್ತಿ, ಪಾಷಾಣ, ಪರಶು, ಪ್ರಾಸ, ಖಡ್ಗ, ವಜ್ರಾಶನಿ ಮತ್ತು ಮುದ್ಗರಗಳ ವಿಶಾಲ ವೃಷ್ಟಿಯನ್ನು ನಾಶಗೊಳಿಸಲು ಕರ್ಣನ ಶರೌಘಗಳು ಅಶಕ್ತವಾದವು.
07154030a ಶರಾಹತಾನಾಂ ಪತತಾಂ ಹಯಾನಾಂ ವಜ್ರಾಹತಾನಾಂ ಪತತಾಂ ಗಜಾನಾಂ।
07154030c ಶಿಲಾಹತಾನಾಂ ಚ ಮಹಾರಥಾನಾಂ ಮಹಾನ್ನಿನಾದಃ ಪತತಾಂ ಬಭೂವ।।
ಶರಗಳಿಂದ ಹತರಾಗಿ ಬೀಳುತ್ತಿರುವ ಕುದುರೆಗಳ, ವಜ್ರಗಳಿಂದ ಹತವಾಗಿ ಬೀಳುತ್ತಿರುವ ಆನೆಗಳ, ಶಿಲೆಗಳಿಂದ ಹತರಾಗಿ ಬೀಳುತ್ತಿರುವ ಮಹಾರಥಗಳ ಮಹಾ ನಿನಾದವುಂಟಾಯಿತು.
07154031a ಸುಭೀಮನಾನಾವಿಧಶಸ್ತ್ರಪಾತೈರ್ ಘಟೋತ್ಕಚೇನಾಭಿಹತಂ ಸಮಂತಾತ್।
07154031c ದೌರ್ಯೋಧನಂ ತದ್ಬಲಮಾರ್ತರೂಪಂ ಆವರ್ತಮಾನಂ ದದೃಶೇ ಭ್ರಮಂತಂ।।
ಅತ್ಯಂತ ಭಯಂಕರವಾದ ನಾನಾವಿಧದ ಶಸ್ತ್ರಗಳನ್ನು ಬೀಳಿಸಿ ಘಟೋತ್ಕಚನಿಂದ ಹತವಾದ ದುರ್ಯೋಧನನ ಆ ಸೇನೆಯು ಆರ್ತರೂಪದಿಂದ ಓಡುತ್ತಾ ತಿರುಗುತ್ತಿರುವುದು ಕಂಡುಬಂದಿತು.
07154032a ಹಾಹಾಕೃತಂ ಸಂಪರಿವರ್ತಮಾನಂ ಸಂಲೀಯಮಾನಂ ಚ ವಿಷಣ್ಣರೂಪಂ।
07154032c ತೇ ತ್ವಾರ್ಯಭಾವಾತ್ಪುರುಷಪ್ರವೀರಾಃ ಪರಾಙ್ಮುಖಾ ನ ಬಭೂವುಸ್ತದಾನೀಂ।।
ಹಾಹಾಕಾರಮಾಡುತ್ತಾ ಅಲ್ಲಲ್ಲಿಯೇ ಸುತ್ತುವರಿಯುತ್ತಾ ವಿಷಣ್ಣರೂಪರಾಗಿ ಸಂಲೀಯರಾದ ಆ ಪುರುಷಪ್ರವೀರರು ಆರ್ಯಭಾವದಿಂದ ಪರಾಙ್ಮುಖರಾಗಲಿಲ್ಲ.
07154033a ತಾಂ ರಾಕ್ಷಸೀಂ ಘೋರತರಾಂ ಸುಭೀಮಾಂ ವೃಷ್ಟಿಂ ಮಹಾಶಸ್ತ್ರಮಯೀಂ ಪತಂತೀಂ।
07154033c ದೃಷ್ಟ್ವಾ ಬಲೌಘಾಂಶ್ಚ ನಿಪಾತ್ಯಮಾನಾನ್ ಮಹದ್ಭಯಂ ತವ ಪುತ್ರಾನ್ವಿವೇಶ।।
ರಾಕ್ಷಸನ ಆ ಘೋರತರ ಭಯಂಕರ ಮಹಾಸ್ತ್ರಗಳಿಂದ ತುಂಬಿ ಸುರಿಯುತ್ತಿದ್ದ ವೃಷ್ಟಿಯನ್ನು ನೋಡಿ, ಪತನಗೊಳ್ಳುತ್ತಿದ್ದ ಸೇನೆಗಳನ್ನು ನೋಡಿ ನಿನ್ನ ಪುತ್ರರನ್ನು ಮಹಾಭಯವು ಆವರಿಸಿತು.
07154034a ಶಿವಾಶ್ಚ ವೈಶ್ವಾನರದೀಪ್ತಜಿಹ್ವಾಃ ಸುಭೀಮನಾದಾಃ ಶತಶೋ ನದಂತ್ಯಃ।
07154034c ರಕ್ಷೋಗಣಾನ್ನರ್ದತಶ್ಚಾಭಿವೀಕ್ಷ್ಯ ನರೇಂದ್ರಯೋಧಾ ವ್ಯಥಿತಾ ಬಭೂವುಃ।।
ಬೆಂಕಿಯಂತೆ ಉರಿಯುತ್ತಿರುವ ನಾಲಗೆಯನ್ನು ಹೊರಚಾಚಿ ಭಯಂಕರವಾಗಿ ಕಿರುಚಿಕೊಳ್ಳುತ್ತಿರುವ ನೂರಾರು ನರಿಗಳನ್ನು ಮತ್ತು ಗರ್ಜಿಸುತ್ತಿದ್ದ ರಾಕ್ಷಸಗಣಗಳನ್ನು ನೋಡಿ ನರೇಂದ್ರಯೋಧರು ವ್ಯಥಿತರಾದರು.
07154035a ತೇ ದೀಪ್ತಜಿಹ್ವಾನನತೀಕ್ಷ್ಣದಂಷ್ಟ್ರಾ ವಿಭೀಷಣಾಃ ಶೈಲನಿಕಾಶಕಾಯಾಃ।
07154035c ನಭೋಗತಾಃ ಶಕ್ತಿವಿಷಕ್ತಹಸ್ತಾ ಮೇಘಾ ವ್ಯಮುಂಚನ್ನಿವ ವೃಷ್ಟಿಮಾರ್ಗಂ।।
ಬೆಂಕಿಯಂತೆ ಉರಿಯುತ್ತಿರುವ ನಾಲಿಗೆಗಳುಳ್ಳ ಮುಖಗಳ, ತೀಕ್ಷ್ಣ ಹಲ್ಲುಗಳ, ವಿಭೀಷಣವಾಗಿ ತೋರುತ್ತಿರುವ, ಪರ್ವತಗಳಂತಹ ದೇಹವುಳ್ಳ, ಆಕಾಶವನ್ನೇರಿದ, ಶಕ್ತಿ-ವಿಷಕ್ತಗಳನ್ನು ಹಿಡಿದಿದ್ದ ರಾಕ್ಷಸರು ಮೇಘಗಳಂತೆ ಆಯುಧಗಳ ಮಳೆಯನ್ನು ಸುರಿಸುತ್ತಿದ್ದರು.
07154036a ತೈರಾಹತಾಸ್ತೇ ಶರಶಕ್ತಿಶೂಲೈರ್ ಗದಾಭಿರುಗ್ರೈಃ ಪರಿಘೈಶ್ಚ ದೀಪ್ತೈಃ।
07154036c ವಜ್ರೈಃ ಪಿನಾಕೈರಶನಿಪ್ರಹಾರೈಶ್ ಚಕ್ರೈಃ ಶತಘ್ನ್ಯುನ್ಮಥಿತಾಶ್ಚ ಪೇತುಃ।।
07154037a ಹುಡಾ ಭುಶುಂಡ್ಯೋಽಶ್ಮಗುಡಾಃ ಶತಘ್ನ್ಯಃ ಸ್ಥೂಣಾಶ್ಚ ಕಾರ್ಷ್ಣಾಯಸಪಟ್ಟನದ್ಧಾಃ।
07154037c ಅವಾಕಿರಂಸ್ತವ ಪುತ್ರಸ್ಯ ಸೈನ್ಯಂ ತಥಾ ರೌದ್ರಂ ಕಶ್ಮಲಂ ಪ್ರಾದುರಾಸೀತ್।।
ಅವರು ಅವ್ಯಾಹತವಾಗಿ ಸುರಿಸುತ್ತಿದ್ದ ಬಾಣ, ಶಕ್ತಿ, ಶೂಲ, ಗದೆ, ಪ್ರಜ್ವಲಿಸುತ್ತಿದ್ದ ಉಗ್ರ ಪರಿಘಗಳು, ವಜ್ರ, ಪಿನಾಕ, ವಿದ್ಯುತ್, ಪ್ರಹಾರ, ಚಕ್ರಗಳು, ಶತಘ್ನಗಳು, ಗುದ್ದಲಿ, ಭುಶುಂಡ, ಅಶ್ಮಗುಡ, ಶತಘ್ನ, ಸ್ಥೂಣ, ಕಾರ್ಷ್ಣ, ಉಕ್ಕಿನ ಪಟ್ಟಿಗಳಿಂದ ನಿನ್ನ ಮಗನ ಸೇನೆಯು ಚದುರಿ ಅವರನ್ನು ರೌದ್ರ ಸಂಕಟವು ಆವರಿಸಿತು.
07154038a ನಿಷ್ಕೀರ್ಣಾಂತ್ರಾ ವಿಹತೈರುತ್ತಮಾಂಗೈಃ ಸಂಭಗ್ನಾಂಗಾಃ ಶೇರತೇ ತತ್ರ ಶೂರಾಃ।
07154038c ಭಿನ್ನಾ ಹಯಾಃ ಕುಂಜರಾಶ್ಚಾವಭಗ್ನಾಃ ಸಂಚೂರ್ಣಿತಾಶ್ಚೈವ ರಥಾಃ ಶಿಲಾಭಿಃ।।
ಕೆಳಗೆ ಉದುರುತ್ತಿದ್ದ ಕಲ್ಲುಬಂಡೆಗಳಿಂದಾಗಿ ಅನೇಕ ಶೂರರ ತಲೆಗಳು ಒಡೆದು ಹೋಗಿ, ಅಂಗಾಂಗಗಳು ಮುರಿದು, ಕರುಳುಗಳು ಹೊರಬಂದು ಅಲ್ಲಿ ಉರುಳಿದರು. ಕುದುರೆಗಳು ಆನೆಗಳು ಮುರಿದು ಬಿದ್ದವು. ರಥಗಳು ಪುಡಿಪುಡಿಯಾದವು.
07154039a ಏವಂ ಮಹಚ್ಚಸ್ತ್ರವರ್ಷಂ ಸೃಜಂತಸ್ ತೇ ಯಾತುಧಾನಾ ಭುವಿ ಘೋರರೂಪಾಃ।
07154039c ಮಾಯಾಃ ಸೃಷ್ಟಾಸ್ತತ್ರ ಘಟೋತ್ಕಚೇನ ನಾಮುಂಚನ್ವೈ ಯಾಚಮಾನಂ ನ ಭೀತಂ।।
ಹೀಗೆ ಘಟೋತ್ಕಚನ ಮಾಯೆಯಿಂದ ಸೃಷ್ಟಿಸಲ್ಪಟ್ಟ ಮಹಾ ಶಸ್ತ್ರವೃಷ್ಟಿಯನ್ನು ಸುರಿಸುತ್ತಿದ್ದ ಆ ಘೋರರೂಪೀ ಯಾತುಧಾನರು ಭೂಮಿಯ ಮೇಲೆ ಭೀತರಾಗಿ ಯಾಚಿಸುತ್ತಿದ್ದವರನ್ನೂ ಬಿಡಲಿಲ್ಲ.
07154040a ತಸ್ಮಿನ್ಘೋರೇ ಕುರುವೀರಾವಮರ್ದೇ ಕಾಲೋತ್ಸೃಷ್ಟೇ ಕ್ಷತ್ರಿಯಾಣಾಮಭಾವೇ।
07154040c ತೇ ವೈ ಭಗ್ನಾಃ ಸಹಸಾ ವ್ಯದ್ರವಂತ ಪ್ರಾಕ್ರೋಶಂತಃ ಕೌರವಾಃ ಸರ್ವ ಏವ।।
ಕಾಲನಿಂದಲೇ ನಿಯೋಜಿತಗೊಂಡ ಆ ಕುರುವೀರವಿನಾಶಕ ಕ್ಷತ್ರಿಯಾಂತಕ ಘೋರ ಯುದ್ಧದಲ್ಲಿ ಭಗ್ನರಾದ ಎಲ್ಲ ಕೌರವರೂ ಚೀತ್ಕಾರಮಾಡುತ್ತಾ ಓಡಿಹೋದರು.
07154041a ಪಲಾಯಧ್ವಂ ಕುರವೋ ನೈತದಸ್ತಿ ಸೇಂದ್ರಾ ದೇವಾ ಘ್ನಂತಿ ನಃ ಪಾಂಡವಾರ್ಥೇ।
07154041c ತಥಾ ತೇಷಾಂ ಮಜ್ಜತಾಂ ಭಾರತಾನಾಂ ನ ಸ್ಮ ದ್ವೀಪಸ್ತತ್ರ ಕಶ್ಚಿದ್ಬಭೂವ।।
“ಪಲಾಯನಮಾಡಿರಿ! ಕೌರವರು ಉಳಿಯುವುದಿಲ್ಲ! ಪಾಂಡವರಿಗೋಸ್ಕರವಾಗಿ ಇಂದ್ರನೂಸೇರಿ ದೇವತೆಗಳು ಸಂಹರಿಸುತ್ತಿದ್ದಾರೆ!” ಹೀಗೆ ಧ್ವಂಸಗೊಳಿಸಲ್ಪಡುತ್ತಿದ್ದ ಭಾರತರಿಗೆ ಅಲ್ಲಿ ಯಾವುದೇ ಆಸರೆಯೂ ಇರಲಿಲ್ಲ.
07154042a ತಸ್ಮಿನ್ಸಂಕ್ರಂದೇ ತುಮುಲೇ ವರ್ತಮಾನೇ ಸೈನ್ಯೇ ಭಗ್ನೇ ಲೀಯಮಾನೇ ಕುರೂಣಾಂ।
07154042c ಅನೀಕಾನಾಂ ಪ್ರವಿಭಾಗೇಽಪ್ರಕಾಶೇ ನ ಜ್ಞಾಯಂತೇ ಕುರವೋ ನೇತರೇ ವಾ।।
ನಡೆಯುತ್ತಿರುವ ಆ ಆಕ್ರಂದನದ ತುಮುಲದಲ್ಲಿ ಕುರುಗಳ ಸೈನ್ಯವು ಮುಳುಗಿಹೋಗಿರಲು, ಕತ್ತಲೆಯಲ್ಲಿ ಸೇನೆಗಳ ಭಾಗಗಳಲ್ಲಿ ಏನಾಗುತ್ತಿದ್ದೆಂದು ಕೌರವರಿಗೂ ಅಥವಾ ಇತರರಿಗೂ ಅರ್ಥವೇ ಆಗುತ್ತಿರಲಿಲ್ಲ.
07154043a ನಿರ್ಮರ್ಯಾದೇ ವಿದ್ರವೇ ಘೋರರೂಪೇ ಸರ್ವಾ ದಿಶಃ ಪ್ರೇಕ್ಷಮಾಣಾಃ ಸ್ಮ ಶೂನ್ಯಾಃ।
07154043c ತಾಂ ಶಸ್ತ್ರವೃಷ್ಟಿಮುರಸಾ ಗಾಹಮಾನಂ ಕರ್ಣಂ ಚೈಕಂ ತತ್ರ ರಾಜನ್ನಪಶ್ಯಂ।।
ರಾಜನ್! ಕೊನೆಯಿಲ್ಲದಂತಿದ್ದ ಆ ಘೋರರೂಪ ಯುದ್ಧದಲ್ಲಿ ಎಲ್ಲ ದಿಕ್ಕುಗಳಲ್ಲಿ ಶೂನ್ಯದೃಷ್ಟಿಯನ್ನಿಟ್ಟು ಸೇನೆಗಳು ಓಡಿಹೋಗುತ್ತಿರಲು ಅಲ್ಲಿ ಆ ಶಸ್ತ್ರವೃಷ್ಟಿಯನ್ನು ಎದೆಯಿಟ್ಟು ತಡೆಯುತ್ತಿದ್ದ ಕರ್ಣನೊಬ್ಬನನ್ನೇ ನಾವು ನೋಡಿದೆವು.
07154044a ತತೋ ಬಾಣೈರಾವೃಣೋದಂತರಿಕ್ಷಂ ದಿವ್ಯಾಂ ಮಾಯಾಂ ಯೋಧಯನ್ರಾಕ್ಷಸಸ್ಯ।
07154044c ಹ್ರೀಮಾನ್ಕುರ್ವನ್ದುಷ್ಕರಮಾರ್ಯಕರ್ಮ ನೈವಾಮುಹ್ಯತ್ಸಮ್ಯುಗೇ ಸೂತಪುತ್ರಃ।।
ಸೂತಪುತ್ರನು ಆಗ ಬಾಣಗಳಿಂದ ಅಂತರಿಕ್ಷವನ್ನು ಮುಚ್ಚಿ, ರಾಕ್ಷಸನ ದಿವ್ಯ ಮಾಯೆಯೊಡನೆ ಯುದ್ಧಮಾಡಿದನು. ದುಷ್ಕರ ಆರ್ಯಕರ್ಮವನ್ನು ಮಾಡುತ್ತಿದ್ದ ಲಜ್ಜಾಶೀಲ ಸೂತಪುತ್ರನು ರಣದಲ್ಲಿ ಮೋಹಕ್ಕೊಳಗಾಗಲಿಲ್ಲ.
07154045a ತತೋ ಭೀತಾಃ ಸಮುದೈಕ್ಷಂತ ಕರ್ಣಂ ರಾಜನ್ಸರ್ವೇ ಸೈಂಧವಾ ಬಾಹ್ಲಿಕಾಶ್ಚ।
07154045c ಅಸಮ್ಮೋಹಂ ಪೂಜಯಂತೋಽಸ್ಯ ಸಂಖ್ಯೇ ಸಂಪಶ್ಯಂತೋ ವಿಜಯಂ ರಾಕ್ಷಸಸ್ಯ।।
ರಾಜನ್! ರಾಕ್ಷಸನ ವಿಜಯವನ್ನು ನೋಡಿ ಭಯಗೊಂಡಿದ್ದರೂ ಸೈಂಧವ-ಬಾಹ್ಲೀಕರೆಲ್ಲರೂ ಅಭೀತನಾಗಿದ್ದ ಕರ್ಣನನ್ನು ನೋಡಿ ಅವನನ್ನು ಪ್ರಶಂಸಿಸಿದರು.
07154046a ತೇನೋತ್ಸೃಷ್ಟಾ ಚಕ್ರಯುಕ್ತಾ ಶತಘ್ನೀ ಸಮಂ ಸರ್ವಾಂಶ್ಚತುರೋಽಶ್ವಾಂ ಜಘಾನ।
07154046c ತೇ ಜಾನುಭಿರ್ಜಗತೀಮನ್ವಪದ್ಯನ್ ಗತಾಸವೋ ನಿರ್ದಶನಾಕ್ಷಿಜಿಹ್ವಾ।।
ಆಗ ಘಟೋತ್ಕಚನು ಬಿಟ್ಟ ಚಕ್ರಯುಕ್ತ ಶತಘ್ನಿಯು ಒಂದೇ ಬಾರಿ ಕರ್ಣನ ನಾಲ್ಕೂ ಕುದುರೆಗಳನ್ನೂ ಸಂಹರಿಸಿತು. ಅವುಗಳು ಅಸುನೀಗಿ ನಾಲಿಗೆ-ಕಣ್ಣು ಮತ್ತು ಹಲ್ಲುಗಳನ್ನು ಹೊರಚಾಚಿ ಕೆಳಗೆ ಬಿದ್ದವು.
07154047a ತತೋ ಹತಾಶ್ವಾದವರುಹ್ಯ ವಾಹಾದ್ ಅಂತರ್ಮನಾಃ ಕುರುಷು ಪ್ರಾದ್ರವತ್ಸು।
07154047c ದಿವ್ಯೇ ಚಾಸ್ತ್ರೇ ಮಾಯಯಾ ವಧ್ಯಮಾನೇ ನೈವಾಮುಹ್ಯಚ್ಚಿಂತಯನ್ಪ್ರಾಪ್ತಕಾಲಂ।।
ಕುದುರೆಗಳು ಹತಗೊಳ್ಳಲು ರಥದಿಂದ ಕೆಳಗಿಳಿದು ಕುರುಗಳು ಓಡಿಹೋಗುತ್ತಿರುವುದನ್ನೂ ತನ್ನ ದಿವ್ಯ ಅಸ್ತ್ರಗಳು ಮಾಯೆಯಿಂದ ನಾಶವಾಗುತ್ತಿರುವುದನ್ನೂ ನೋಡಿ ಈಗ ತಾನು ಏನು ಮಾಡಬೇಕೆಂದು ಮನಸ್ಸಿನಲ್ಲಿಯೇ ಕರ್ಣನು ಚಿಂತಿಸಿದನು.
07154048a ತತೋಽಬ್ರುವನ್ಕುರವಃ ಸರ್ವ ಏವ ಕರ್ಣಂ ದೃಷ್ಟ್ವಾ ಘೋರರೂಪಾಂ ಚ ಮಾಯಾಂ।
07154048c ಶಕ್ತ್ಯಾ ರಕ್ಷೋ ಜಹಿ ಕರ್ಣಾದ್ಯ ತೂರ್ಣಂ ನಶ್ಯಂತ್ಯೇತೇ ಕುರವೋ ಧಾರ್ತರಾಷ್ಟ್ರಾಃ।।
ಘೋರರೂಪದ ಆ ಮಾಯೆಯನ್ನೂ ಕರ್ಣನನ್ನೂ ನೋಡಿ ಕುರುಗಳೆಲ್ಲರೂ ಒಕ್ಕೊರಳಿನಿಂದ ಹೇಳಿದರು: “ಕರ್ಣ! ಬೇಗನೇ ಇಂದು ಶಕ್ತಿಯಿಂದ ರಾಕ್ಷಸನನ್ನು ಸಂಹರಿಸು! ಇವನು ಧಾರ್ತರಾಷ್ಟ್ರರನ್ನು ಉಳಿಸುವುದಿಲ್ಲ!
07154049a ಕರಿಷ್ಯತಃ ಕಿಂ ಚ ನೋ ಭೀಮಪಾರ್ಥೌ ತಪಂತಮೇನಂ ಜಹಿ ರಕ್ಷೋ ನಿಶೀಥೇ।
07154049c ಯೋ ನಃ ಸಂಗ್ರಾಮಾದ್ಘೋರರೂಪಾದ್ವಿಮುಚ್ಯೇತ್ ಸ ನಃ ಪಾರ್ಥಾನ್ಸಮರೇ ಯೋಧಯೇತ।।
ಭೀಮ-ಪಾರ್ಥರು ಇದಕ್ಕಿಂತಲೂ ಹೆಚ್ಚಿನದನ್ನೇನೂ ಮಾಡಲಾರರು! ಈ ರಾತ್ರಿಯಲ್ಲಿ ಸುಡುತ್ತಿರುವ ರಾಕ್ಷಸನನ್ನು ವಧಿಸು! ಈ ಘೋರರೂಪೀ ಸಂಗ್ರಾಮದಿಂದ ನಮಗೆ ಮುಕ್ತಿಯನ್ನು ನೀಡುವವನೇ ಮುಂದೆ ಸಮರದಲ್ಲಿ ಪಾರ್ಥನೊಂದಿಗೆ ಹೋರಾಡುತ್ತಾನೆ.
07154050a ತಸ್ಮಾದೇನಂ ರಾಕ್ಷಸಂ ಘೋರರೂಪಂ ಜಹಿ ಶಕ್ತ್ಯಾ ದತ್ತಯಾ ವಾಸವೇನ।
07154050c ಮಾ ಕೌರವಾಃ ಸರ್ವ ಏವೇಂದ್ರಕಲ್ಪಾ ರಾತ್ರೀಮುಖೇ ಕರ್ಣ ನೇಶುಃ ಸಯೋಧಾಃ।।
ಆದುದರಿಂದ ಇಂದ್ರದತ್ತ ಶಕ್ತ್ಯಾಯುಧದಿಂದ ಘೋರರೂಪೀ ರಾಕ್ಶಸನನ್ನು ಕೂಡಲೇ ಸಂಹರಿಸು! ಕರ್ಣ! ಇಂದ್ರಸದೃಶ ಕೌರವರೆಲ್ಲರೂ ತಮ್ಮ ಯೋಧರೊಂದಿಗೆ ಈ ರಾತ್ರಿಯೇ ನಾಶಹೊಂದದಿರಲಿ!”
07154051a ಸ ವಧ್ಯಮಾನೋ ರಕ್ಷಸಾ ವೈ ನಿಶೀಥೇ ದೃಷ್ಟ್ವಾ ರಾಜನ್ನಶ್ಯಮಾನಂ ಬಲಂ ಚ।
07154051c ಮಹಚ್ಚ ಶ್ರುತ್ವಾ ನಿನದಂ ಕೌರವಾಣಾಂ ಮತಿಂ ದಧ್ರೇ ಶಕ್ತಿಮೋಕ್ಷಾಯ ಕರ್ಣಃ।।
ರಾಜನ್! ಆ ರಾತ್ರಿಯಲ್ಲಿ ವಧಿಸುತ್ತಿರುವ ರಾಕ್ಷಸನನ್ನೂ, ನಾಶಗೊಳ್ಳುತ್ತಿರುವ ಸೇನೆಯನ್ನೂ ನೋಡಿ, ಕೌರವರ ಮಹಾ ನಿನಾದವನ್ನೂ ಕೇಳಿ ಕರ್ಣನು ಶಕ್ತಿಯನ್ನು ಪ್ರಯೋಗಿಸುವ ಮನಸ್ಸು ಮಾಡಿದನು.
07154052a ಸ ವೈ ಕ್ರುದ್ಧಃ ಸಿಂಹ ಇವಾತ್ಯಮರ್ಷೀ ನಾಮರ್ಷಯತ್ಪ್ರತಿಘಾತಂ ರಣೇ ತಂ।
07154052c ಶಕ್ತಿಂ ಶ್ರೇಷ್ಠಾಂ ವೈಜಯಂತೀಮಸಹ್ಯಾಂ ಸಮಾದದೇ ತಸ್ಯ ವಧಂ ಚಿಕೀರ್ಷನ್।।
ರಣದಲ್ಲಿ ಮಾಡುತ್ತಿದ್ದ ಪ್ರತಿಘಾತವನ್ನು ಸಹಿಸಿಕೊಳ್ಳಲಾರದೇ ಸಿಂಹದಂತೆ ಕ್ರುದ್ಧನಾದ ಆ ಅಮರ್ಷಿಯು ಅವನನ್ನು ವಧಿಸಲು ಬಯಸಿ ಶ್ರೇಷ್ಠ ಸಹಿಸಲಸಾದ್ಯ ವೈಜಯಂತೀ ಶಕ್ತಿಯನ್ನು ತೆಗೆದುಕೊಂಡನು.
07154053a ಯಾಸೌ ರಾಜನ್ನಿಹಿತಾ ವರ್ಷಪೂಗಾನ್ ವಧಾಯಾಜೌ ಸತ್ಕೃತಾ ಫಲ್ಗುನಸ್ಯ।
07154053c ಯಾಂ ವೈ ಪ್ರಾದಾತ್ಸೂತಪುತ್ರಾಯ ಶಕ್ರಃ ಶಕ್ತಿಂ ಶ್ರೇಷ್ಠಾಂ ಕುಂಡಲಾಭ್ಯಾಂ ನಿಮಾಯ।।
ರಾಜನ್! ವರ್ಷಗಟ್ಟಲೆ ಪೂಜಿಸಿ ಇಟ್ಟುಕೊಂಡಿದ್ದ, ಫಲ್ಗುನನ ವಧೆಗೆಂದು ಮೀಸಲಾಗಿಟ್ಟಿದ್ದ, ಶ್ರೇಷ್ಠ ಕುಂಡಲಗಳ ವಿನಿಮಯದಲ್ಲಿ ಶಕ್ರನು ಸೂತಪುತ್ರನಿಗೆ ಪ್ರದಾನಿಸಿದ್ದ ಆ ಶಕ್ತಿಯನ್ನು ತೆಗೆದುಕೊಂಡನು.
07154054a ತಾಂ ವೈ ಶಕ್ತಿಂ ಲೇಲಿಹಾನಾಂ ಪ್ರದೀಪ್ತಾಂ ಪಾಶೈರ್ಯುಕ್ತಾಮಂತಕಸ್ಯೇವ ರಾತ್ರಿಂ।
07154054c ಮೃತ್ಯೋಃ ಸ್ವಸಾರಂ ಜ್ವಲಿತಾಮಿವೋಲ್ಕಾಂ ವೈಕರ್ತನಃ ಪ್ರಾಹಿಣೋದ್ರಾಕ್ಷಸಾಯ।।
ಉರಿಯುತ್ತಿರುವ ನಾಲಿಗೆಗಳುಳ್ಳ, ಅಂತಕನ ಪಾಶದಂತಿದ್ದ, ಕಪ್ಪಾಗಿದ್ದ, ಮೃತ್ಯುವಿನ ತಂಗಿಯಂತಿದ್ದ, ಉಲ್ಕೆಯಂತೆ ಪ್ರಜ್ವಲಿಸುತ್ತಿದ್ದ ಆ ಶಕ್ತಿಯನ್ನು ವೈಕರ್ತನ ಕರ್ಣನು ರಾಕ್ಷಸನಿಗಾಗಿ ಹಿಡಿದನು.
07154055a ತಾಮುತ್ತಮಾಂ ಪರಕಾಯಾಪಹಂತ್ರೀಂ ದೃಷ್ಟ್ವಾ ಸೌತೇರ್ಬಾಹುಸಂಸ್ಥಾಂ ಜ್ವಲಂತೀಂ।
07154055c ಭೀತಂ ರಕ್ಷೋ ವಿಪ್ರದುದ್ರಾವ ರಾಜನ್ ಕೃತ್ವಾತ್ಮಾನಂ ವಿಂಧ್ಯಪಾದಪ್ರಮಾಣಂ।।
ರಾಜನ್! ಶತ್ರುಗಳ ಶರೀರಗಳನ್ನು ನಾಶಗೊಳಿಸಬಲ್ಲ ಆ ಉತ್ತಮ ಶಕ್ತಿಯು ಸೌತಿಯ ಬಾಹುವಿನಲ್ಲಿ ಪ್ರಜ್ವಲಿಸುತ್ತಿರುವುದನ್ನು ನೋಡಿ ಭೀತ ರಾಕ್ಷಸನು ತನ್ನನ್ನು ವಿಂಧ್ಯಪರ್ವತದಷ್ಟು ದೊಡ್ಡದನ್ನಾಗಿಸಿಕೊಂಡು ಓಡ ತೊಡಗಿದನು.
07154056a ದೃಷ್ಟ್ವಾ ಶಕ್ತಿಂ ಕರ್ಣಬಾಹ್ವಂತರಸ್ಥಾಂ ನೇದುರ್ಭೂತಾನ್ಯಂತರಿಕ್ಷೇ ನರೇಂದ್ರ।
07154056c ವವುರ್ವಾತಾಸ್ತುಮುಲಾಶ್ಚಾಪಿ ರಾಜನ್ ಸನಿರ್ಘಾತಾ ಚಾಶಾನಿರ್ಗಾಂ ಜಗಾಮ।।
ರಾಜನ್! ಕರ್ಣನ ಬಾಹುಗಳ ಮಧ್ಯೆ ಇದ್ದ ಆ ಶಕ್ತಿಯನ್ನು ನೋಡಿ ಅಂತರಿಕ್ಷದಲ್ಲಿ ತುಮುಲ ಶಬ್ಧವು ಕೇಳಿಬಂದಿತು. ಭಿರುಗಾಳಿ ಬೀಸತೊಡಗಿತು. ಆರ್ಭಟದಿಂದ ಸಿಡಿಲು ಭೂಮಿಗೆ ಬಡಿಯಿತು.
07154057a ಸಾ ತಾಂ ಮಾಯಾಂ ಭಸ್ಮ ಕೃತ್ವಾ ಜ್ವಲಂತೀ ಭಿತ್ತ್ವಾ ಗಾಢಂ ಹೃದಯಂ ರಾಕ್ಷಸಸ್ಯ।
07154057c ಊರ್ಧ್ವಂ ಯಯೌ ದೀಪ್ಯಮಾನಾ ನಿಶಾಯಾಂ ನಕ್ಷತ್ರಾಣಾಮಂತರಾಣ್ಯಾವಿಶಂತೀ।।
ಆ ಶಕ್ತಿಯು ಮಾಯೆಯನ್ನು ಸುಟ್ಟು ಭಸ್ಮಮಾಡಿ ಪ್ರಜ್ವಲಿಸುತ್ತಾ ರಾಕ್ಷಸನ ಹೃದಯವನ್ನು ಗಾಢವಾಗಿ ಸೀಳಿ ಬೆಳಗುತ್ತಿರುವ ರಾತ್ರಿಯಲ್ಲಿ ಮೇಲಕ್ಕೆ ಹಾರಿ ನಕ್ಷತ್ರಗಳ ಮಧ್ಯೆ ಅಂತರ್ಧಾನವಾಯಿತು.
07154058a ಯುದ್ಧ್ವಾ ಚಿತ್ರೈರ್ವಿವಿಧೈಃ ಶಸ್ತ್ರಪೂಗೈರ್ ದಿವ್ಯೈರ್ವೀರೋ ಮಾನುಷೈ ರಾಕ್ಷಸೈಶ್ಚ।
07154058c ನದನ್ನಾದಾನ್ ವಿವಿಧಾನ್ಭೈರವಾಂಶ್ಚ ಪ್ರಾಣಾನಿಷ್ಟಾಂಸ್ತ್ಯಾಜಿತಃ ಶಕ್ರಶಕ್ತ್ಯಾ।।
ವಿಚಿತ್ರವಾಗಿ ವಿವಿಧ – ದಿವ್ಯ, ಮಾನುಷ, ಮತ್ತು ರಾಕ್ಷಸ – ಶಸ್ತ್ರಸಮೂಹಗಳೊಂದಿಗೆ ಯುದ್ಧಮಾಡಿ ಆ ವೀರ ಘಟೋತ್ಕಚನು ಶಕ್ರನ ಶಕ್ತಿಗೆ ಸೋತು ವಿವಿಧ ಭೈರವ ನಾದಗೈಯುತ್ತಾ ಪ್ರಾಣವನ್ನು ತೊರೆದನು.
07154059a ಇದಂ ಚಾನ್ಯಚ್ಚಿತ್ರಮಾಶ್ಚರ್ಯರೂಪಂ ಚಕಾರಾಸೌ ಕರ್ಮ ಶತ್ರುಕ್ಷಯಾಯ।
07154059c ತಸ್ಮಿನ್ಕಾಲೇ ಶಕ್ತಿನಿರ್ಭಿನ್ನಮರ್ಮಾ ಬಭೌ ರಾಜನ್ಮೇಘಶೈಲಪ್ರಕಾಶಃ।।
ರಾಜನ್! ಸಾಯುವ ಈ ಕ್ಷಣದಲ್ಲಿ ಕೂಡ ಘಟೋತ್ಕಚನು ಶತ್ರುಗಳನ್ನು ಧ್ವಂಸಮಾಡಲೋಸುಗ ಇನ್ನೊಂದು ವಿಚಿತ್ರವೂ ಆಶ್ಚರ್ಯಕರವೂ ಆದ ಕರ್ಮವನ್ನು ಮಾಡಿದನು. ಶಕ್ತಿಯು ಶರೀರವನ್ನು ಭೇದಿಸುವ ಸಮಯದಲ್ಲಿ ಅವನು ಮೇಘ ಪರ್ವತದಂತೆ ದೊಡ್ಡದಾಗಿ ಬೆಳೆದನು.
07154060a ತತೋಽಮ್ತರಿಕ್ಷಾದಪತದ್ಗತಾಸುಃ ಸ ರಾಕ್ಷಸೇಂದ್ರೋ ಭುವಿ ಭಿನ್ನದೇಹಃ।
07154060c ಅವಾಕ್ಶಿರಾಃ ಸ್ತಬ್ಧಗಾತ್ರೋ ವಿಜಿಹ್ವೋ ಘಟೋತ್ಕಚೋ ಮಹದಾಸ್ಥಾಯ ರೂಪಂ।।
ಆಗ ಮಹಾರೂಪವನ್ನು ತಳೆದ ರಾಕ್ಷಸೇಂದ್ರ ಘಟೋತ್ಕಚನು ದೇಹವು ತುಂಡಾಗಿ, ತಲೆಕೆಳಗಾಗಿ, ನಾಲಗೆ ಚಾಚಿ ಅಂತರಿಕ್ಷದಿಂದ ಭೂಮಿಯ ಮೇಲೆ ಬಿದ್ದನು.
07154061a ಸ ತದ್ರೂಪಂ ಭೈರವಂ ಭೀಮಕರ್ಮಾ ಭೀಮಂ ಕೃತ್ವಾ ಭೈಮಸೇನಿಃ ಪಪಾತ।
07154061c ಹತೋಽಪ್ಯೇವಂ ತವ ಸೈನ್ಯೇಕದೇಶಂ ಅಪೋಥಯತ್ಕೌರವಾನ್ಭೀಷಯಾಣಃ।।
ಆ ಭೀಮಕರ್ಮಿ ಭೈಮಸೇನಿಯು ತನ್ನ ರೂಪವನ್ನು ಇನ್ನೂ ಭಯಂಕರವಾಗಿ ಮಾಡಿಕೊಂಡು ನಿನ್ನ ಸೇನೆಯ ಒಂದು ಭಾಗವನ್ನೇ ನಾಶಗೊಳಿಸಿ ಕೌರವರನ್ನು ಭಯಪಡಿಸುತ್ತಾ ಕೆಳಕ್ಕೆ ಬಿದ್ದನು.
07154062a ತತೋ ಮಿಶ್ರಾಃ ಪ್ರಾಣದನ್ಸಿಂಹನಾದೈರ್ ಭೇರ್ಯಃ ಶಂಖಾ ಮುರಜಾಶ್ಚಾನಕಾಶ್ಚ।
07154062c ದಗ್ಧಾಂ ಮಾಯಾಂ ನಿಹತಂ ರಾಕ್ಷಸಂ ಚ ದೃಷ್ಟ್ವಾ ಹೃಷ್ಟಾಃ ಪ್ರಾಣದನ್ಕೌರವೇಯಾಃ।।
ಆಗ ಸಿಂಹನಾದಗಳೊಂದಿಗೆ ಭೇರಿ, ಶಂಕ, ಮುರಜ ಮತ್ತು ಅನಕಗಳು ಮೊಳಗಿದವು. ಮಾಯೆಯು ಸುಟ್ಟು ರಾಕ್ಷಸನು ಹತನಾದುದನ್ನು ನೋಡಿ ಕೌರವೇಯರು ಹರ್ಷದಿಂದ ನಿನಾದಗೈದರು.
07154063a ತತಃ ಕರ್ಣಃ ಕುರುಭಿಃ ಪೂಜ್ಯಮಾನೋ ಯಥಾ ಶಕ್ರೋ ವೃತ್ರವಧೇ ಮರುದ್ಭಿಃ।
07154063c ಅನ್ವಾರೂಢಸ್ತವ ಪುತ್ರಂ ರಥಸ್ಥಂ ಹೃಷ್ಟಶ್ಚಾಪಿ ಪ್ರಾವಿಶತ್ಸ್ವಂ ಸ ಸೈನ್ಯಂ।।
ಅನಂತರ ಕರ್ಣನು ವೃತ್ರವಧೆಯನಂತರ ಶಕ್ರನು ಮರುದ್ಗಣಗಳಿಂದ ಹೇಗೋ ಹಾಗೆ ಕುರುಗಳಿಂದ ಪ್ರಶಂಸಿಸಲ್ಪಟ್ಟು ನಿನ್ನ ಪುತ್ರನ ರಥವನ್ನೇರಿ ಸಂತೋಷದಿಂದ ತನ್ನ ಸೈನ್ಯವನ್ನು ಸೇರಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಘಟೋತ್ಕಚವಧೇ ಚತುಃಪಂಚಾಶದಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಘಟೋತ್ಕಚವಧ ಎನ್ನುವ ನೂರಾಐವತ್ನಾಲ್ಕನೇ ಅಧ್ಯಾಯವು.