152 ರಾತ್ರಿಯುದ್ಧೇ ಅಲಾಯುಧಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಘಟೋತ್ಕಚವಧ ಪರ್ವ

ಅಧ್ಯಾಯ 152

ಸಾರ

ಘಟೋತ್ಕಚನನ್ನು ಸಂಹರಿಸು ಎಂದು ಅಲಾಯುಧನಿಗೆ ದುರ್ಯೋಧನನು ಹೇಳಿದುದು (1-13). ಅಲಾಯುಧ-ಭೀಮಸೇನರ ಯುದ್ಧ (14-47).

07152001 ಸಂಜಯ ಉವಾಚ।
07152001a ತಮಾಗತಮಭಿಪ್ರೇಕ್ಷ್ಯ ಭೀಮಕರ್ಮಾಣಮಾಹವೇ।
07152001c ಹರ್ಷಮಾಹಾರಯಾಂ ಚಕ್ರುಃ ಕುರವಃ ಸರ್ವ ಏವ ತೇ।।

ಸಂಜಯನು ಹೇಳಿದನು: “ಯುದ್ಧದಲ್ಲಿ ಭೀಮಕರ್ಮಿಯಾದ ಅವನು ಬಂದುದನ್ನು ನೋಡಿ ನಿನ್ನವರಾದ ಕುರುಗಳೆಲ್ಲರಲ್ಲಿ ಮಹಾ ಹರ್ಷವುಂಟಾಯಿತು.

07152002a ತಥೈವ ತವ ಪುತ್ರಾಸ್ತೇ ದುರ್ಯೋಧನಪುರೋಗಮಾಃ।
07152002c ಅಪ್ಲವಾಃ ಪ್ಲವಮಾಸಾದ್ಯ ತರ್ತುಕಾಮಾ ಇವಾರ್ಣವಂ।।

ಸಾಗರವನ್ನು ದಾಟಲು ಬಯಸಿದ ದೋಣಿಯಿಲ್ಲದವರಿಗೆ ದೋಣಿಯು ಸಿಕ್ಕಿದರೆ ಹೇಗೋ ಹಾಗೆ ದುರ್ಯೋಧನನೇ ಮೊದಲಾದ ನಿನ್ನ ಮಕ್ಕಳಿಗೆ ಪರಮ ಸಂತಸವಾಯಿತು.

07152003a ಪುನರ್ಜಾತಮಿವಾತ್ಮಾನಂ ಮನ್ವಾನಾಃ ಪಾರ್ಥಿವಾಸ್ತದಾ।
07152003c ಅಲಾಯುಧಂ ರಾಕ್ಷಸೇಂದ್ರಂ ಚ್ಸ್ವಾಗತೇನಾಭ್ಯಪೂಜಯನ್।।

ತಮಗೆ ಪುನರ್ಜನ್ಮವು ಬಂದಿತೆಂದು ತಿಳಿದು ಪಾರ್ಥಿವರು ರಾಕ್ಷಸೇಂದ್ರ ಅಲಾಯುಧನನ್ನು ಸ್ವಾಗತಿಸಿ ಗೌರವಿಸಿದರು.

07152004a ತಸ್ಮಿಂಸ್ಥ್ವಮಾನುಷೇ ಯುದ್ಧೇ ವರ್ತಮಾನೇ ಭಯಾವಹೇ।
07152004c ಕರ್ಣರಾಕ್ಷಸಯೋರ್ನಕ್ತಂ ದಾರುಣಪ್ರತಿದರ್ಶನೇ।।
07152005a ಉಪಪ್ರೈಕ್ಷಂತ ಪಾಂಚಾಲಾಃ ಸ್ಮಯಮಾನಾಃ ಸರಾಜಕಾಃ।

ಕರ್ಣ-ರಾಕ್ಷಸರ ನಡುವೆ ನಡೆಯುತ್ತಿದ್ದ ಆ ಅಮಾನುಷ, ಭಯಂಕರ, ನೋಡಲು ದಾರುಣವಾಗಿದ್ದ ಯುದ್ಧವನ್ನು ರಾಜರೊಂದಿಗೆ ಪಾಂಚಾಲರು ವಿಸ್ಮಯದಿಂದ ನೋಡುತ್ತಿದ್ದರು.

07152005c ತಥೈವ ತಾವಕಾ ರಾಜನ್ಘೂರ್ಣಮಾನಾಸ್ತತಸ್ತತಃ।।
07152006a ಚುಕ್ರುಶುರ್ನೇದಮಸ್ತೀತಿ ದ್ರೋಣದ್ರೌಣಿಕೃಪಾದಯಃ।

ರಾಜನ್! ಹಾಗೆಯೇ ನಿನ್ನವರೂ ಕೂಡ, ದ್ರೋಣ-ದ್ರೌಣಿ-ಕೃಪಾದಿಗಳು ಅಲ್ಲಲ್ಲಿಯೇ ಗಾಬರಿಯಿಂದ “ಅವನು ಇನ್ನಿಲ್ಲ!” ಎಂದು ಕೂಗಿಕೊಳ್ಳುತ್ತಿದ್ದರು.

07152006c ತತ್ಕರ್ಮ ದೃಷ್ಟ್ವಾ ಸಂಭ್ರಾಂತಾ ಹೈಡಿಂಬಸ್ಯ ರಣಾಜಿರೇ।।
07152007a ಸರ್ವಮಾವಿಗ್ನಮಭವದ್ಧಾಹಾಭೂತಮಚೇತನಂ।

ರಣಾಂಗಣದಲ್ಲಿ ಹೈಡಿಂಬನ ಆ ಕರ್ಮವನ್ನು ನೋಡಿ ಸಂಭ್ರಾಂತರಾದ ಅವರೆಲ್ಲರೂ ನಿರಾಶೆಯಿಂದ ಉದ್ವಿಗ್ನರಾಗಿದ್ದರು.

07152007c ತವ ಸೈನ್ಯಂ ಮಹಾರಾಜ ನಿರಾಶಂ ಕರ್ಣಜೀವಿತೇ।।
07152008a ದುರ್ಯೋಧನಸ್ತು ಸಂಪ್ರೇಕ್ಷ್ಯ ಕರ್ಣಮಾರ್ತಿಂ ಪರಾಂ ಗತಂ।
07152008c ಅಲಾಯುಧಂ ರಾಕ್ಷಸೇಂದ್ರಮಾಹೂಯೇದಮಥಾಬ್ರವೀತ್।।

ಮಹಾರಾಜ! ಕರ್ಣನು ಜೀವಿತವಾಗಿರುವನೋ ಇಲ್ಲವೋ ಎಂದು ನಿನ್ನ ಸೇನೆಯು ನಿರಾಶೆಗೊಳ್ಳಲು, ಕರ್ಣನು ಪರಮ ಆರ್ತಸ್ಥಿತಿಯಲ್ಲಿದ್ದುದನ್ನು ಕಂಡು ದುರ್ಯೋಧನನು ರಾಕ್ಷಸೇಂದ್ರ ಅಲಾಯುಧನನ್ನು ಕರೆದು ಹೇಳಿದನು:

07152009a ಏಷ ವೈಕರ್ತನಃ ಕರ್ಣೋ ಹೈಡಿಂಬೇನ ಸಮಾಗತಃ।
07152009c ಕುರುತೇ ಕರ್ಮ ಸುಮಹದ್ಯದಸ್ಯೌಪಯಿಕಂ ಮೃಧೇ।।

“ಹೈಡಿಂಬಿಯೊಡನೆ ಯುದ್ಧಮಾಡುತ್ತಿರುವ ಈ ವೈಕರ್ತನ ಕರ್ಣನು ಯುದ್ಧದಲ್ಲಿ ಮಾಡಬೇಕಾಗಿರುವ ಎಲ್ಲ ಮಹಾಕಾರ್ಯಗಳನ್ನೂ ಮಾಡುತ್ತಿದ್ದಾನೆ.

07152010a ಪಶ್ಯೈತಾನ್ಪಾರ್ಥಿವಾಂ ಶೂರಾನ್ನಿಹತಾನ್ಭೈಮಸೇನಿನಾ।
07152010c ನಾನಾಶಸ್ತ್ರೈರಭಿಹತಾನ್ಪಾದಪಾನಿವ ದಂತಿನಾ।।

ಆದರೆ ಆನೆಯು ಮರಗಳನ್ನು ಕಿತ್ತು ಬಿಸಾಡುವಂತೆ ಭೈಮಸೇನಿಯ ನಾನಾಶಸ್ತ್ರಗಳಿಂದ ಹತರಾಗುತ್ತಿರುವ ಶೂರ ಪಾರ್ಥಿವರನ್ನು ನೋಡು!

07152011a ತವೈಷ ಭಾಗಃ ಸಮರೇ ರಾಜಮಧ್ಯೇ ಮಯಾ ಕೃತಃ।
07152011c ತವೈವಾನುಮತೇ ವೀರ ತಂ ವಿಕ್ರಮ್ಯ ನಿಬರ್ಹಯ।।
07152012a ಪುರಾ ವೈಕರ್ತನಂ ಕರ್ಣಮೇಷ ಪಾಪೋ ಘಟೋತ್ಕಚಃ।
07152012c ಮಾಯಾಬಲಮುಪಾಶ್ರಿತ್ಯ ಕರ್ಶಯತ್ಯರಿಕರ್ಶನಃ।।

ಆದುದರಿಂದಲೇ ಈ ರಾಜರ ಮಧ್ಯದಲ್ಲಿ ಸಮರದಲ್ಲಿ ಅವನನ್ನು ನಿನ್ನ ಪಾಲಿಗೆ ನಾನು ಮಾಡಿದ್ದೇನೆ. ನನ್ನ ಅನುಮತಿಯಂತೆ ವೀರ! ಈ ಪಾಪಿ ಅರಿಕರ್ಶನ ಘಟೋತ್ಕಚನು ಮಾಯಬಲವನ್ನು ಆಶ್ರಯಿಸಿ ವೈಕರ್ತನ ಕರ್ಣನನ್ನು ಸಂಹರಿಸುವ ಮೊದಲೇ, ವಿಕ್ರಮದಿಂದ ಅವನನ್ನು ಸಂಹರಿಸು!”

07152013a ಏವಮುಕ್ತಃ ಸ ರಾಜ್ಞಾ ತು ರಾಕ್ಷಸಸ್ತೀವ್ರವಿಕ್ರಮಃ।
07152013c ತಥೇತ್ಯುಕ್ತ್ವಾ ಮಹಾಬಾಹುರ್ಘಟೋತ್ಕಚಮುಪಾದ್ರವತ್।।

ರಾಜನು ಹೀಗೆ ಹೇಳಲು, ಹಾಗೆಯೇ ಆಗಲೆಂದು ಹೇಳಿ ಆ ತೀವ್ರವಿಕ್ರಮಿ ಮಹಾಬಾಹುವು ಘಟೋತ್ಕಚನ ಮೇಲೆರಗಿದನು.

07152014a ತತಃ ಕರ್ಣಂ ಸಮುತ್ಸೃಜ್ಯ ಭೈಮಸೇನಿರಪಿ ಪ್ರಭೋ।
07152014c ಪ್ರತ್ಯಮಿತ್ರಮುಪಾಯಾಂತಂ ಮರ್ದಯಾಮಾಸ ಮಾರ್ಗಣೈಃ।।

ಆಗ ಪ್ರಭೋ! ಭೈಮಸೇನಿಯೂ ಕೂಡ ಕರ್ಣನನ್ನು ಬಿಟ್ಟು ಬರುತ್ತಿದ್ದ ಶತ್ರುವನ್ನು ಎದುರಿಸಿ ಮಾರ್ಗಣಗಳಿಂದ ಮರ್ದಿಸತೊಡಗಿದನು.

07152015a ತಯೋಃ ಸಮಭವದ್ಯುದ್ಧಂ ಕ್ರುದ್ಧಯೋ ರಾಕ್ಷಸೇಂದ್ರಯೋಃ।
07152015c ಮತ್ತಯೋರ್ವಾಶಿತಾಹೇತೋರ್ದ್ವಿಪಯೋರಿವ ಕಾನನೇ।।

ಆ ಇಬ್ಬರು ಕ್ರುದ್ಧ ರಾಕ್ಷಸೇಂದ್ರರ ನಡುವೆ ಕಾನನದಲ್ಲಿ ಹೆಣ್ಣಾನೆಯ ಸಲುವಾಗಿ ಮದಿಸಿದ ಸಲಗಗಳ ಮಧ್ಯೆ ನಡೆಯುವಂತೆ ಯುದ್ಧವು ನಡೆಯಿತು.

07152016a ರಕ್ಷಸಾ ವಿಪ್ರಮುಕ್ತಸ್ತು ಕರ್ಣೋಽಪಿ ರಥಿನಾಂ ವರಃ।
07152016c ಅಭ್ಯದ್ರವದ್ಭೀಮಸೇನಂ ರಥೇನಾದಿತ್ಯವರ್ಚಸಾ।।

ರಾಕ್ಷಸನಿಂದ ವಿಮುಕ್ತನಾದ ರಥಿಗಳಲ್ಲಿ ಶ್ರೇಷ್ಠ ಕರ್ಣನಾದರೋ ಆದಿತ್ಯವರ್ಚಸ ರಥದಿಂದ ಭೀಮಸೇನನನ್ನು ಆಕ್ರಮಣಿಸಿದನು.

07152017a ತಮಾಯಾಂತಮನಾದೃತ್ಯ ದೃಷ್ಟ್ವಾ ಗ್ರಸ್ತಂ ಘಟೋತ್ಕಚಂ।
07152017c ಅಲಾಯುಧೇನ ಸಮರೇ ಸಿಂಹೇನೇವ ಗವಾಂ ಪತಿಂ।।
07152018a ರಥೇನಾದಿತ್ಯವಪುಷಾ ಭೀಮಃ ಪ್ರಹರತಾಂ ವರಃ।
07152018c ಕಿರಂ ಶರೌಘಾನ್ಪ್ರಯಯಾವಲಾಯುಧರಥಂ ಪ್ರತಿ।।

ಅವನು ಬರುತ್ತಿರುವುದನ್ನು ಅನಾದರಿಸಿ, ಹೋರಿಯನ್ನು ಸಿಂಹವು ಹೇಗೋ ಹಾಗೆ ಸಮರದಲ್ಲಿ ಘಟೋತ್ಕಚನು ಅಲಾಯುಧನಿಂದ ಮುತ್ತಿಗೆಹಾಕಲ್ಪಟ್ಟದುದನ್ನು ನೋಡಿ ಪ್ರಹರಿಗಳಲ್ಲಿ ಶ್ರೇಷ್ಠ ಭೀಮನು ಅಲಾಯುಧನ ರಥದ ಕಡೆಗೆ ಶರೌಘಗಳ ರಾಶಿಯನ್ನು ಸುರಿಸಿದನು.

07152019a ತಮಾಯಾಂತಮಭಿಪ್ರೇಕ್ಷ್ಯ ಸ ತದಾಲಾಯುಧಃ ಪ್ರಭೋ।
07152019c ಘಟೋತ್ಕಚಂ ಸಮುತ್ಸೃಜ್ಯ ಭೀಮಸೇನಂ ಸಮಾಹ್ವಯತ್।।

ಪ್ರಭೋ! ಅವನು ತನ್ನ ಕಡೆ ಬರುತ್ತಿರುವುದನ್ನು ನೋಡಿ ಅಲಾಯುಧನು ಘಟೋತ್ಕಚನನ್ನು ಬಿಟ್ಟು ಭೀಮಸೇನನನ್ನು ಆಹ್ವಾನಿಸಿದನು.

07152020a ತಂ ಭೀಮಃ ಸಹಸಾಭ್ಯೇತ್ಯ ರಾಕ್ಷಸಾಂತಕರಃ ಪ್ರಭೋ।
07152020c ಸಗಣಂ ರಾಕ್ಷಸೇಂದ್ರಂ ತಂ ಶರವರ್ಷೈರವಾಕಿರತ್।।

ಪ್ರಭೋ! ಆ ರಾಕ್ಷಸಾಂತಕನು ಅವನ ಬಳಿಸಾರಿ ಗಣಗಳೊಂದಿಗೆ ಆ ರಾಕ್ಷಸೇಂದ್ರನನ್ನು ಶರವರ್ಷಗಳಿಂದ ಮುಚ್ಚಿದನು.

07152021a ತಥೈವಾಲಾಯುಧೋ ರಾಜನ್ ಶಿಲಾಧೌತೈರಜಿಹ್ಮಗೈಃ।
07152021c ಅಭ್ಯವರ್ಷತ ಕೌಂತೇಯಂ ಪುನಃ ಪುನರರಿಂದಮಃ।।

ರಾಜನ್! ಹಾಗೆಯೇ ಅರಿಂದಮ ಅಲಾಯುಧನೂ ಕೂಡ ಶಿಲಾಧೌತ ಜಿಹ್ಮಗಗಳನ್ನು ಕೌಂತೇಯನ ಮೇಲೆ ಪುನಃ ಪುನಃ ಸುರಿಸಿದನು.

07152022a ತಥಾ ತೇ ರಾಕ್ಷಸಾಃ ಸರ್ವೇ ಭೀಮಸೇನಮುಪಾದ್ರವನ್।
07152022c ನಾನಾಪ್ರಹರಣಾ ಭೀಮಾಸ್ತ್ವತ್ಸುತಾನಾಂ ಜಯೈಷಿಣಃ।।

ಹಾಗೆಯೇ ಜಯೈಷಿ ರಾಕ್ಷಸರೆಲ್ಲರೂ ಭೀಮಸೇನನನ್ನು ಆಕ್ರಮಣಿಸಿ ನಾನಾ ಪ್ರಹಾರಗಳಿಂದ ಭೀಮನನ್ನು ಎದುರಿಸಿ ಯುದ್ಧ ಮಾಡಿದರು.

07152023a ಸ ತಾಡ್ಯಮಾನೋ ಬಲಿಭಿರ್ಭೀಮಸೇನೋ ಮಹಾಬಲಃ।
07152023c ಪಂಚಭಿಃ ಪಂಚಭಿಃ ಸರ್ವಾಂಸ್ತಾನವಿಧ್ಯಚ್ಚಿತೈಃ ಶರೈಃ।।

ಪ್ರಹರಿಸಲ್ಪಡುತ್ತಿದ್ದ ಬಲಿ ಮಹಾಬಲಿ ಭೀಮಸೇನನು ಅವರೆಲ್ಲರನ್ನೂ ಐದೈದು ಶಿತ ಶರಗಳಿಂದ ಹೊಡೆದನು.

07152024a ತೇ ವಧ್ಯಮಾನಾ ಭೀಮೇನ ರಾಕ್ಷಸಾಃ ಖರಯೋನಯಃ।
07152024c ವಿನೇದುಸ್ತುಮುಲಾನ್ನಾದಾನ್ದುದ್ರುವುಶ್ಚ ದಿಶೋ ದಶ।।

ಭೀಮಸೇನನಿಂದ ವಧಿಸಲ್ಪಡುತ್ತಿದ್ದ ಆ ಖರಯೋನಿಯ ರಾಕ್ಷಸರು ತುಮುಲ ಕೂಗನ್ನು ಕೂಗುತ್ತಾ ಹತ್ತು ದಿಕ್ಕುಗಳಲ್ಲಿ ಓಡಿ ಹೋದರು.

07152025a ತಾಂಸ್ತ್ರಾಸ್ಯಮಾನಾನ್ಭೀಮೇನ ದೃಷ್ಟ್ವಾ ರಕ್ಷೋ ಮಹಾಬಲಂ।
07152025c ಅಭಿದುದ್ರಾವ ವೇಗೇನ ಶರೈಶ್ಚೈನಮವಾಕಿರತ್।।

ಅವರನ್ನು ಪೀಡಿಸುತ್ತಿರುವ ಮಹಾಬಲ ಭೀಮನನ್ನು ನೋಡಿ ರಾಕ್ಷಸ ಅಲಾಯುಧನು ವೇಗದಿಂದ ಶರಗಳನ್ನು ಸುರಿಸುತ್ತಾ ಆಕ್ರಮಣಿಸಿದನು.

07152026a ತಂ ಭೀಮಸೇನಃ ಸಮರೇ ತೀಕ್ಷ್ಣಾಗ್ರೈರಕ್ಷಿಣೋಚ್ಚರೈಃ।
07152026c ಅಲಾಯುಧಸ್ತು ತಾನಸ್ತಾನ್ಭೀಮೇನ ವಿಶಿಖಾನ್ರಣೇ।
07152026e ಚಿಚ್ಚೇದ ಕಾಂಶ್ಚಿತ್ಸಮರೇ ತ್ವರಯಾ ಕಾಂಶ್ಚಿದಗ್ರಹೀತ್।।

ಸಮರದಲ್ಲಿ ಭೀಮಸೇನನು ಅವನನ್ನು ತೀಕ್ಷ್ಣ ಅಗ್ರಭಾಗಗಳುಳ್ಳ ಬಾಣಗಳಿಂದ ಹೊಡೆದನು. ಅಲಾಯುಧನಾದರೋ ರಣದಲ್ಲಿ ಭೀಮನ ಆ ವಿಶಿಖ ಬಾಣಗಳಲ್ಲಿ ಕೆಲವನ್ನು ತುಂಡರಿಸಿದನು. ಇನ್ನು ಕೆಲವನ್ನು ಶೀಘ್ರವಾಗಿ ಕೈಯಿಂದಲೇ ಹಿಡಿದನು.

07152027a ಸ ತಂ ದೃಷ್ಟ್ವಾ ರಾಕ್ಷಸೇಂದ್ರಂ ಭೀಮೋ ಭೀಮಪರಾಕ್ರಮಃ।
07152027c ಗದಾಂ ಚಿಕ್ಷೇಪ ವೇಗೇನ ವಜ್ರಪಾತೋಪಮಾಂ ತದಾ।।

ಆ ರಾಕ್ಷಸೇಂದ್ರನನ್ನು ನೋಡಿ ಭೀಮಪರಾಕ್ರಮಿ ಭೀಮನು ವಜ್ರಪಾತದಂತೆ ವೇಗದಿಂದ ಗದೆಯನ್ನು ಅವನ ಮೇಲೆ ಎಸೆದನು.

07152028a ತಾಮಾಪತಂತೀಂ ವೇಗೇನ ಗದಾಂ ಜ್ವಾಲಾಕುಲಾಂ ತತಃ।
07152028c ಗದಯಾ ತಾಡಯಾಮಾಸ ಸಾ ಗದಾ ಭೀಮಮಾವ್ರಜತ್।।

ಜ್ವಾಲೆಗಳಿಂದ ಸುತ್ತುವರೆದು ವೇಗದಿಂದ ಮೇಲೆ ಬೀಳುತ್ತಿರುವ ಗದೆಯನ್ನು ತನ್ನ ಗದೆಯಿಂದ ಹೊಡೆಯಲು ಅದು ಪುನಃ ಭೀಮನ ಕಡೆಯೇ ರಭಸದಿಂದ ಹೊರಟುಹೋಯಿತು.

07152029a ಸ ರಾಕ್ಷಸೇಂದ್ರಂ ಕೌಂತೇಯಃ ಶರವರ್ಷೈರವಾಕಿರತ್।
07152029c ತಾನಪ್ಯಸ್ಯಾಕರೋನ್ಮೋಘಾನ್ರಾಕ್ಷಸೋ ನಿಶಿತೈಃ ಶರೈಃ।।

ಅನಂತರ ರಾಕ್ಷಸೇಂದ್ರನನ್ನು ಕೌಂತೇಯನು ಶರವರ್ಷಗಳಿಂದ ಮುಚ್ಚಿದನು. ಅವುಗಳನ್ನು ಕೂಡ ರಾಕ್ಷಸನು ನಿಶಿತ ಶರಗಳಿಂದ ನಿರರ್ಥಕಗೊಳಿಸಿದನು.

07152030a ತೇ ಚಾಪಿ ರಾಕ್ಷಸಾಃ ಸರ್ವೇ ಸೈನಿಕಾ ಭೀಮರೂಪಿಣಃ।
07152030c ಶಾಸನಾದ್ರಾಕ್ಷಸೇಂದ್ರಸ್ಯ ನಿಜಘ್ನೂ ರಥಕುಂಜರಾನ್।।

ಭೀಮರೂಪಿ ಆ ರಾಕ್ಷಸ ಸೈನಿಕರೆಲ್ಲರು ಕೂಡ ರಾಕ್ಷಸೇಂದ್ರನ ಶಾಸನದಂತೆ ರಥಕುಂಜರಗಳನ್ನು ಸದೆಬಡಿದರು.

07152031a ಪಾಂಚಾಲಾಃ ಸೃಂಜಯಾಶ್ಚೈವ ವಾಜಿನಃ ಪರಮದ್ವಿಪಾಃ।
07152031c ನ ಶಾಂತಿಂ ಲೇಭಿರೇ ತತ್ರ ರಕ್ಷಸೈರ್ಭೃಶಪೀಡಿತಾಃ।।

ರಾಕ್ಷಸರಿಂದ ಪೀಡಿತ ಪಾಂಚಾಲರು, ಸೃಂಜಯರು, ಕುದುರೆಗಳು ಮತ್ತು ಮಹಾ ಆನೆಗಳಿಗೆ ಅಲ್ಲಿ ಶಾಂತಿಯೆನ್ನುವುದೇ ಇರಲಿಲ್ಲ.

07152032a ತಂ ತು ದೃಷ್ಟ್ವಾ ಮಹಾಘೋರಂ ವರ್ತಮಾನಂ ಮಹಾಹವೇ।
07152032c ಅಬ್ರವೀತ್ಪುರುಷಶ್ರೇಷ್ಠೋ ಧನಂಜಯಮಿದಂ ವಚಃ।।

ಮಹಾಹವದಲ್ಲಿ ನಡೆಯುತ್ತಿರುವ ಆ ಮಹಾಘೋರ ಯುದ್ಧವನ್ನು ನೋಡಿ ಪುರುಷಶ್ರೇಷ್ಠ ಕೃಷ್ಣನು ಧನಂಜಯನಿಗೆ ಈ ಮಾತನ್ನಾಡಿದನು.

07152033a ಪಶ್ಯ ಭೀಮಂ ಮಹಾಬಾಹೋ ರಾಕ್ಷಸೇಂದ್ರವಶಂ ಗತಂ।
07152033c ಪದವೀಮಸ್ಯ ಗಚ್ಚ ತ್ವಂ ಮಾ ವಿಚಾರಯ ಪಾಂಡವ।।

“ಮಹಾಬಾಹೋ! ಭೀಮನು ರಾಕ್ಷಸೇಂದ್ರನ ವಶನಾಗಿರುವುದನ್ನು ನೋಡು. ಪಾಂಡವ! ಅವನಿರುವಲ್ಲಿಗೆ ನೀನು ಹೋಗು. ವಿಚಾರಮಾಡಬೇಡ!

07152034a ಧೃಷ್ಟದ್ಯುಮ್ನಃ ಶಿಖಂಡೀ ಚ ಯುಧಾಮನ್ಯೂತ್ತಮೌಜಸೌ।
07152034c ಸಹಿತಾ ದ್ರೌಪದೇಯಾಶ್ಚ ಕರ್ಣಂ ಯಾಂತು ಮಹಾರಥಾಃ।।

ಧೃಷ್ಟದ್ಯುಮ್ನ, ಶಿಖಂಡೀ, ಯುಧಾಮನ್ಯು, ಉತ್ತಮೌಜಸರು ಮಹಾರಥ ದ್ರೌಪದೇಯರೊಂದಿಗೆ ಕರ್ಣನನ್ನು ಎದುರಿಸಿ ಹೋಗಲಿ.

07152035a ನಕುಲಃ ಸಹದೇವಶ್ಚ ಯುಯುಧಾನಶ್ಚ ವೀರ್ಯವಾನ್।
07152035c ಇತರಾನ್ರಾಕ್ಷಸಾನ್ಘ್ನಂತು ಶಾಸನಾತ್ತವ ಪಾಂಡವ।।

ಪಾಂಡವ! ನಕುಲ, ಸಹದೇವ, ಮತ್ತು ವೀರ್ಯವಾನ್ ಯುಯುಧಾನರು ನಿನ್ನ ಶಾಸನದಂತೆ ಇತರ ರಾಕ್ಷಸರನ್ನು ಸಂಹರಿಸಲಿ!

07152036a ತ್ವಮಪೀಮಾಂ ಮಹಾಬಾಹೋ ಚಮೂಂ ದ್ರೋಣಪುರಸ್ಕೃತಾಂ।
07152036c ವಾರಯಸ್ವ ನರವ್ಯಾಘ್ರ ಮಹದ್ಧಿ ಭಯಮಾಗತಂ।।

ಮಹಾಬಾಹೋ! ನರವ್ಯಾಘ್ರ! ಮಹಾ ಭಯವುಂಟಾಗಿರುವ ಈ ಸಮಯದಲ್ಲಿ ನೀನು ದ್ರೋಣನ ನಾಯಕತ್ವದಲ್ಲಿರುವ ಈ ಸೇನೆಯನ್ನು ತಡೆದು ನಿಲ್ಲಿಸು!”

07152037a ಏವಮುಕ್ತೇ ತು ಕೃಷ್ಣೇನ ಯಥೋದ್ದಿಷ್ಟಾ ಮಹಾರಥಾಃ।
07152037c ಜಗ್ಮುರ್ವೈಕರ್ತನಂ ಕರ್ಣಂ ರಾಕ್ಷಸಾಂಶ್ಚೇತರಾನ್ರಣೇ।।

ಕೃಷ್ಣನು ಹೀಗೆ ಹೇಳಲು ಅವನ ಆದೇಶದಂತೆ ಮಹಾರಥರು ರಣದಲ್ಲಿ ವೈಕರ್ತನ ಕರ್ಣನ ಬಳಿ ಮತ್ತು ಇತರರು ರಾಕ್ಷಸರ ಕಡೆ ಹೋದರು.

07152038a ಅಥ ಪೂರ್ಣಾಯತೋತ್ಸೃಷ್ಟೈಃ ಶರೈರಾಶೀವಿಷೋಪಮೈಃ।
07152038c ಧನುಶ್ಚಿಚ್ಚೇದ ಭೀಮಸ್ಯ ರಾಕ್ಷಸೇಂದ್ರಃ ಪ್ರತಾಪವಾನ್।।

ಆಗ ಪ್ರತಾಪವಾನ್ ರಾಕ್ಷಸೇಂದ್ರನು ಪೂರ್ಣವಾಗಿ ಸೆಳೆದು ಬಿಟ್ಟ ಸರ್ಪಗಳ ವಿಷಕ್ಕೆ ಸಮಾನ ಶರಗಳಿಂದ ಭೀಮನ ಧನುಸ್ಸನ್ನು ಕತ್ತರಿಸಿದನು.

07152039a ಹಯಾಂಶ್ಚಾಸ್ಯ ಶಿತೈರ್ಬಾಣೈಃ ಸಾರಥಿಂ ಚ ಮಹಾಬಲಃ।
07152039c ಜಘಾನ ಮಿಷತಃ ಸಂಖ್ಯೇ ಭೀಮಸೇನಸ್ಯ ಭಾರತ।।

ಭಾರತ! ಕಣ್ಣು ಮುಚ್ಚಿ ಬಿಡುವಷ್ಟರಲ್ಲಿಯೇ ಆ ಮಹಾಬಲನು ಹರಿತ ಬಾಣಗಳಿಂದ ರಣದಲ್ಲಿ ಭೀಮಸೇನನ ಕುದುರೆಗಳನ್ನೂ, ಸಾರಥಿಯನ್ನೂ ಸಂಹರಿಸಿದನು.

07152040a ಸೋಽವತೀರ್ಯ ರಥೋಪಸ್ಥಾದ್ಧತಾಶ್ವೋ ಹತಸಾರಥಿಃ।
07152040c ತಸ್ಮೈ ಗುರ್ವೀಂ ಗದಾಂ ಘೋರಾಂ ಸ ವಿನದ್ಯೋತ್ಸಸರ್ಜ ಹ।।

ಹತಾಶ್ವನೂ ಹತಸಾರಥಿಯೂ ಆದ ಭೀಮನು ರಥದಿಂದ ಇಳಿದು ಭಾರ ಘೋರ ಗದೆಯನ್ನು ಅವನ ಮೇಲೆ ಎಸೆದು ಗರ್ಜಿಸಿದನು.

07152041a ತತಸ್ತಾಂ ಭೀಮನಿರ್ಘೋಷಾಮಾಪತಂತೀಂ ಮಹಾಗದಾಂ।
07152041c ಗದಯಾ ರಾಕ್ಷಸೋ ಘೋರೋ ನಿಜಘಾನ ನನಾದ ಚ।।

ನಿರ್ಘೋಷದೊಂದಿಗೆ ತನ್ನ ಮೇಲೆ ಬೀಳುತ್ತಿದ್ದ ಆ ಮಹಾಗದೆಯನ್ನು ರಾಕ್ಷಸನು ಘೋರ ಗದೆಯಿಂದ ಹೊಡೆದು ಗರ್ಜಿಸಿದನು.

07152042a ತದ್ದೃಷ್ಟ್ವಾ ರಾಕ್ಷಸೇಂದ್ರಸ್ಯ ಘೋರಂ ಕರ್ಮ ಭಯಾವಹಂ।
07152042c ಭೀಮಸೇನಃ ಪ್ರಹೃಷ್ಟಾತ್ಮಾ ಗದಾಮಾಶು ಪರಾಮೃಶತ್।।

ಭಯವನ್ನುಂಟುಮಾಡುವ ರಾಕ್ಷಸೇಂದ್ರನ ಆ ಘೋರ ಕರ್ಮವನ್ನು ನೋಡಿ ಸಂತೋಷಗೊಂಡ ಭೀಮಸೇನನು ಹಿಂದಿರುಗಿದ ತನ್ನ ಗದೆಯನ್ನು ಗ್ರಹಣಮಾಡಿದನು.

07152043a ತಯೋಃ ಸಮಭವದ್ಯುದ್ಧಂ ತುಮುಲಂ ನರರಕ್ಷಸೋಃ।
07152043c ಗದಾನಿಪಾತಸಂಹ್ರಾದೈರ್ಭುವಂ ಕಂಪಯತೋರ್ಭೃಶಂ।।

ಗದೆಗಳ ಪ್ರಹಾರ ಮತ್ತು ಪ್ರತಿಪ್ರಹಾರಗಳಿಂಧ ಭುವನವನ್ನೇ ಕಂಪಿಸುವಂತಿದ್ದ ಆ ನರ-ರಾಕ್ಷಸರ ತುಮುಲಯುದ್ಧವು ಜೋರಾಗಿ ನಡೆಯಿತು.

07152044a ಗದಾವಿಮುಕ್ತೌ ತೌ ಭೂಯಃ ಸಮಾಸಾದ್ಯೇತರೇತರಂ।
07152044c ಮುಷ್ಟಿಭಿರ್ವಜ್ರಸಂಹ್ರಾದೈರನ್ಯೋನ್ಯಮಭಿಜಘ್ನತುಃ।।

ಅವರಿಬ್ಬರೂ ಗದೆಗಳನ್ನು ತೊರೆದು ಮತ್ತೆ ಅನ್ಯೋನ್ಯರನ್ನು ಸಂಹರಿಸುವ ಸಲುವಾಗಿ ಒಬ್ಬರು ಇನ್ನೊಬ್ಬರನ್ನು ಮುಷ್ಟಿಗಳಿಂದ ಗುದ್ದಿ ಯುದ್ಧಮಾಡತೊಡಗಿದರು.

07152045a ರಥಚಕ್ರೈರ್ಯುಗೈರಕ್ಷೈರಧಿಷ್ಠಾನೈರುಪಸ್ಕರೈಃ।
07152045c ಯಥಾಸನ್ನಮುಪಾದಾಯ ನಿಜಘ್ನತುರಮರ್ಷಣೌ।।

ಅನಂತರ ಆ ಅಮರ್ಷಣರು ರಥಚಕ್ರಗಳಿಂದಲೂ, ನೊಗಗಳಿಂದಲೂ, ಅಚ್ಚುಮರಗಳಿಂದಲೂ, ಪೀಠಗಳಿಂದಲೂ, ಯುದ್ಧೋಪಯೋಗೀ ಸಾಮಗ್ರಿಗಳಿಂದಲೂ ಮತ್ತು ಸಿಕ್ಕಿದ ವಸ್ತುಗಳಿಂದ ಪರಸ್ಪರರನ್ನು ಪ್ರಹರಿಸತೊಡಗಿದರು.

07152046a ತೌ ವಿಕ್ಷರಂತೌ ರುಧಿರಂ ಸಮಾಸಾದ್ಯೇತರೇತರಂ।
07152046c ಮತ್ತಾವಿವ ಮಹಾನಾಗಾವಕೃಷ್ಯೇತಾಂ ಪುನಃ ಪುನಃ।।

ಅವರಿಬ್ಬರೂ ರಕ್ತವನ್ನು ಸುರಿಸುತ್ತಾ ಪರಸ್ಪರರನ್ನು ಪುನಃ ಪುನಃ ಸೆಳೆದಾಡುತ್ತಾ ಮದಿಸಿದ ಸಲಗಗಳಂತೆ ಹೋರಾಡಿದರು.

07152047a ತಮಪಶ್ಯದ್ಧೃಷೀಕೇಶಃ ಪಾಂಡವಾನಾಂ ಹಿತೇ ರತಃ।
07152047c ಸ ಭೀಮಸೇನರಕ್ಷಾರ್ಥಂ ಹೈಡಿಂಬಂ ಪ್ರತ್ಯಚೋದಯತ್।।

ಅದನ್ನು ನೋಡಿದ ಪಾಂಡವರ ಹಿತನಿರತ ಹೃಷೀಕೇಶನು ಭೀಮಸೇನನನ್ನು ರಕ್ಷಿಸುವುದಕ್ಕಾಗಿ ಹೈಡಿಂಬನನ್ನು ಪ್ರಚೋದಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣಪರ್ವಣಿ ಘಟೋತ್ಕಚವಧಪರ್ವಣಿ ರಾತ್ರಿಯುದ್ಧೇ ಅಲಾಯುಧಯುದ್ಧೇ ದ್ವಿಪಂಚಾಶದಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣಪರ್ವದಲ್ಲಿ ಘಟೋತ್ಕಚವಧಪರ್ವದಲ್ಲಿ ರಾತ್ರಿಯುದ್ಧೇ ಅಲಾಯುಧಯುದ್ಧ ಎನ್ನುವ ನೂರಾಐವತ್ತೆರಡನೇ ಅಧ್ಯಾಯವು.