151 ರಾತ್ರಿಯುದ್ಧೇ ಅಲಾಯುಧಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಘಟೋತ್ಕಚವಧ ಪರ್ವ

ಅಧ್ಯಾಯ 151

ಸಾರ

ಬಕನ ಬಂಧು ಅಲಾಯುಧನು ಪಾಂಡವರನ್ನು ತಾನು ಕೊಲ್ಲುತ್ತೇನೆ ಎಂದು ದುರ್ಯೋಧನನಿಗೆ ಬಂದು ಹೇಳುವುದು (1-11). ಅಲಾಯುಧನ ವರ್ಣನೆ (12-21).

07151001 ಸಂಜಯ ಉವಾಚ।
07151001a ತಸ್ಮಿಂಸ್ತಥಾ ವರ್ತಮಾನೇ ಕರ್ಣರಾಕ್ಷಸಯೋರ್ಮೃಧೇ।
07151001c ಅಲಾಯುಧೋ ರಾಕ್ಷಸೇಂದ್ರೋ ವೀರ್ಯವಾನಭ್ಯವರ್ತತ।।

ಸಂಜಯನು ಹೇಳಿದನು: “ಹೀಗೆ ಅಲ್ಲಿ ಕರ್ಣ ಮತ್ತು ರಾಕ್ಷಸರ ಮಧ್ಯೆ ಯುದ್ಧವು ನಡೆಯುತ್ತಿರುವಾಗ ವೀರ್ಯವಾನ್ ರಾಕ್ಷಸೇಂದ್ರ ಅಲಾಯುಧನು ಆಗಮಿಸಿದನು.

07151002a ಮಹತ್ಯಾ ಸೇನಯಾ ಯುಕ್ತಃ ಸುಯೋಧನಮುಪಾಗಮತ್।
07151002c ರಾಕ್ಷಸಾನಾಂ ವಿರೂಪಾಣಾಂ ಸಹಸ್ರೈಃ ಪರಿವಾರಿತಃ।
07151002e ನಾನಾರೂಪಧರೈರ್ವೀರೈಃ ಪೂರ್ವವೈರಮನುಸ್ಮರನ್।।

ಹಿಂದಿನ ವೈರವನ್ನು ಸ್ಮರಿಸಿಕೊಂಡು ಅವನು ಸಹಸ್ರಾರು ನಾನಾರೂಪಧರ, ವೀರ ವಿರೂಪ ರಾಕ್ಷಸರಿಂದ ಸುತ್ತುವರೆಯಲ್ಪಟ್ಟು ಸುಯೋಧನನ ಬಳಿಗೆ ಬಂದನು.

07151003a ತಸ್ಯ ಜ್ಞಾತಿರ್ಹಿ ವಿಕ್ರಾಂತೋ ಬ್ರಾಹ್ಮಣಾದೋ ಬಕೋ ಹತಃ।
07151003c ಕಿರ್ಮೀರಶ್ಚ ಮಹಾತೇಜಾ ಹಿಡಿಂಬಶ್ಚ ಸಖಾ ತಥಾ।।

ಬ್ರಾಹ್ಮಣಭಕ್ಷಕ ವಿಕ್ರಾಂತ ಬಕನು ಅಲಾಯುಧನ ಬಂಧುವಾಗಿದ್ದನು. ಹತರಾದ ಮಹಾತೇಜಸ್ವಿ ಕಿರ್ಮೀರ ಹಿಡಿಂಬರೂ ಕೂಡ ಅವನ ಸಖರಾಗಿದ್ದರು.

07151004a ಸ ದೀರ್ಘಕಾಲಾಧ್ಯುಷಿತಂ ಪೂರ್ವವೈರಮನುಸ್ಮರನ್।
07151004c ವಿಜ್ಞಾಯೈತನ್ನಿಶಾಯುದ್ಧಂ ಜಿಘಾಂಸುರ್ಭೀಮಮಾಹವೇ।।

ಬಹಳ ಹಿಂದಿನಿಂದಲೂ ಮನಸ್ಸಿನಲ್ಲಡಗಿದ್ದ ವೈರವನ್ನು ಸ್ಮರಣೆಗೆ ತಂದುಕೊಂಡು ಸೇಡನ್ನು ತೀರಿಸಿಕೊಳ್ಳುವ ಸಲುವಾಗಿ ಅಲಾಯುಧನು ಅಲ್ಲಿಗೆ ಬಂದನು.

07151005a ಸ ಮತ್ತ ಇವ ಮಾತಂಗಃ ಸಂಕ್ರುದ್ಧ ಇವ ಚೋರಗಃ।
07151005c ದುರ್ಯೋಧನಮಿದಂ ವಾಕ್ಯಮಬ್ರವೀದ್ಯುದ್ಧಲಾಲಸಃ।।

ಮದಿಸಿದ ಸಲಗದಂತಿದ್ದ ಮತ್ತು ಸಂಕ್ರುದ್ಧ ಸರ್ಪದಂತಿದ್ದ ಆ ಯುದ್ಧಲಾಲಸನು ದುರ್ಯೋಧನನಿಗೆ ಈ ಮಾತನ್ನಾಡಿದನು:

07151006a ವಿದಿತಂ ತೇ ಮಹಾರಾಜ ಯಥಾ ಭೀಮೇನ ರಾಕ್ಷಸಾಃ।
07151006c ಹಿಡಿಂಬಬಕಕಿರ್ಮೀರಾ ನಿಹತಾ ಮಮ ಬಾಂಧವಾಃ।।

“ಮಹಾರಾಜ! ಹೇಗೆ ನನ್ನ ಬಾಂಧವ ಹಿಡಿಂಬ, ಬಕ ಮತ್ತು ಕಿರ್ಮೀರ ರಾಕ್ಷಸರು ಭೀಮನಿಂದ ಹತರಾದರೆನ್ನುವುದು ನಿನಗೆ ತಿಳಿದೇ ಇದೆ.

07151007a ಪರಾಮರ್ಶಶ್ಚ ಕನ್ಯಾಯಾ ಹಿಡಿಂಬಾಯಾಃ ಕೃತಃ ಪುರಾ।
07151007c ಕಿಮನ್ಯದ್ರಾಕ್ಷಸಾನನ್ಯಾನಸ್ಮಾಂಶ್ಚ ಪರಿಭೂಯ ಹ।।

ಅಷ್ಟುಮಾತ್ರವಲ್ಲದೇ ಹಿಂದೆ ಅನ್ಯ ನಮ್ಮಂಥಹ ರಾಕ್ಷಸರನ್ನು ಬಿಟ್ಟು ಕನ್ಯೆ ಹಿಡಿಂಬೆಯು ಭೀಮನನ್ನು ವರಿಸಿದಳು!

07151008a ತಮಹಂ ಸಗಣಂ ರಾಜನ್ಸವಾಜಿರಥಕುಂಜರಂ।
07151008c ಹೈಡಿಂಬಂ ಚ ಸಹಾಮಾತ್ಯಂ ಹಂತುಮಭ್ಯಾಗತಃ ಸ್ವಯಂ।।

ಅವನ್ನೆಲ್ಲ ಪರಾಮರ್ಶಿಸಿ ರಾಜನ್! ವಾಜಿ-ರಥ-ಕುಂಜರ ಗಣಗಳೊಂದಿಗೆ ಮತ್ತು ಅಮಾತ್ಯರೊಂದಿಗೆ ಹೈಡಿಂಬನನ್ನು ಸಂಹರಿಸಲು ಸ್ವಯಂ ನಾನೇ ಬಂದಿದ್ದೇನೆ.

07151009a ಅದ್ಯ ಕುಂತೀಸುತಾನ್ಸರ್ವಾನ್ವಾಸುದೇವಪುರೋಗಮಾನ್।
07151009c ಹತ್ವಾ ಸಂಭಕ್ಷಯಿಷ್ಯಾಮಿ ಸರ್ವೈರನುಚರೈಃ ಸಹ।
07151009e ನಿವಾರಯ ಬಲಂ ಸರ್ವಂ ವಯಂ ಯೋತ್ಸ್ಯಾಮ ಪಾಂಡವಾನ್।।

ಇಂದು ವಾಸುದೇಪ್ರಮುಖರಾದ ಎಲ್ಲ ಕುಂತೀಸುತರನ್ನೂ ಅವರ ಅನುಚರರೊಂದಿಗೆ ಸಂಹರಿಸಿ ಭಕ್ಷಿಸುತ್ತೇನೆ. ಎಲ್ಲ ಸೇನೆಗಳನ್ನೂ ನಿಲ್ಲಿಸು. ನಾವು ಪಾಂಡವರೊಂದಿಗೆ ಹೋರಾಡುತ್ತೇವೆ!”

07151010a ತಸ್ಯ ತದ್ವಚನಂ ಶ್ರುತ್ವಾ ಹೃಷ್ಟೋ ದುರ್ಯೋಧನಸ್ತದಾ।
07151010c ಪ್ರತಿಪೂಜ್ಯಾಬ್ರವೀದ್ವಾಕ್ಯಂ ಭ್ರಾತೃಭಿಃ ಪರಿವಾರಿತಃ।।

ಅವನ ಆ ಮಾತನ್ನು ಕೇಳಿ ಸಂತೋಷಗೊಂಡ ದುರ್ಯೋಧನನು ಸಹೋದರರಿಂದ ಸುತ್ತುವರೆಯಲ್ಪಟ್ಟು ಅವನನ್ನು ಅಭಿನಂದಿಸಿ ಈ ಮಾತನ್ನಾಡಿದನು:

07151011a ತ್ವಾಂ ಪುರಸ್ಕೃತ್ಯ ಸಗಣಂ ವಯಂ ಯೋತ್ಸ್ಯಾಮಹೇ ಪರಾನ್।
07151011c ನ ಹಿ ವೈರಾಂತಮನಸಃ ಸ್ಥಾಸ್ಯಂತಿ ಮಮ ಸೈನಿಕಾಃ।।

“ಸಸೈನ್ಯನಾದ ನಿನ್ನನ್ನು ಮುಂದೆಮಾಡಿಕೊಂಡು ನಾವೂ ಕೂಡ ಶತ್ರುಗಳೊಂದಿಗೆ ಯುದ್ಧಮಾಡುತ್ತೇವೆ. ಏಕೆಂದರೆ ವೈರವನ್ನು ಮುಗಿಸುವ ಸಲುವಾಗಿರುವ ನನ್ನ ಸೈನಿಕರು ಸುಮ್ಮನೆ ಕುಳಿತಿರಲಾರರು!”

07151012a ಏವಮಸ್ತ್ವಿತಿ ರಾಜಾನಮುಕ್ತ್ವಾ ರಾಕ್ಷಸಪುಂಗವಃ।
07151012c ಅಭ್ಯಯಾತ್ತ್ವರಿತೋ ಭೀಮಂ ಸಹಿತಃ ಪುರುಷಾಶನೈಃ।।

ಹಾಗೆಯೇ ಆಗಲೆಂದು ರಾಜನಿಗೆ ಹೇಳಿ ರಾಕ್ಷಸಪುಂಗವನು ತ್ವರೆಮಾಡಿ ಭಯಂಕರ ನರಭಕ್ಷಕರೊಡನೆ ಧಾವಿಸಿದನು.

07151013a ದೀಪ್ಯಮಾನೇನ ವಪುಷಾ ರಥೇನಾದಿತ್ಯವರ್ಚಸಾ।
07151013c ತಾದೃಶೇನೈವ ರಾಜೇಂದ್ರ ಯಾದೃಶೇನ ಘಟೋತ್ಕಚಃ।।

ರಾಜೇಂದ್ರ! ದೇದೀಪ್ಯಮಾನ ಶರೀರಕಾಂತಿಯಿಂದ ಕೂಡಿದ್ದ ಅಲಾಯುಧನು ಘಟೋತ್ಕಚನಂತೆಯೇ ಆದಿತ್ಯವರ್ಚಸ್ಸಿನ ರಥದಮೇಲೆ ಕುಳಿತಿದ್ದನು.

07151014a ತಸ್ಯಾಪ್ಯತುಲನಿರ್ಘೋಷೋ ಬಹುತೋರಣಚಿತ್ರಿತಃ।
07151014c ಋಕ್ಷಚರ್ಮಾವನದ್ಧಾಂಗೋ ನಲ್ವಮಾತ್ರೋ ಮಹಾರಥಃ।।

ಅಲಾಯುಧನ ರಥವೂ ಬಹುತೋರಣಗಳಿಂದ ಅಲಂಕೃತವಾಗಿತ್ತು. ಕರಡಿಯ ಚರ್ಮವನ್ನು ಹೊದಿಸಲಾಗಿತ್ತು. ಅವನ ಮಹಾ ರಥದ ಸುತ್ತಳತೆಯೂ ನಾಲ್ಕು ನೂರು ಮೊಳದಷ್ಟಿದ್ದಿತು.

07151015a ತಸ್ಯಾಪಿ ತುರಗಾಃ ಶೀಘ್ರಾ ಹಸ್ತಿಕಾಯಾಃ ಖರಸ್ವನಾಃ।
07151015c ಶತಂ ಯುಕ್ತಾ ಮಹಾಕಾಯಾ ಮಾಂಸಶೋಣಿತಭೋಜನಾಃ।।

ಅದಕ್ಕೆ ಕಟ್ಟಿದ್ದ ಕುದುರೆಗಳೂ ಕೂಡ ಆನೆಗಳಂತೆ ಮಹಾದೇಹವುಳ್ಳದ್ದಾಗಿದ್ದವು, ಶೀಘ್ರವಾಗಿದ್ದವು ಮತ್ತು ಕತ್ತೆಗಳಂತೆ ಕಿರುಚಿತ್ತಿದ್ದವು. ಕಟ್ಟಿದ್ದ ಅಂತಹ ನೂರು ಮಹಾಕಾಯ ಕುದುರೆಗಳಿಗೆ ರಕ್ತಮಾಂಸಗಳೇ ಭೋಜನವಾಗಿದ್ದವು.

07151016a ತಸ್ಯಾಪಿ ರಥನಿರ್ಘೋಷೋ ಮಹಾಮೇಘರವೋಪಮಃ।
07151016c ತಸ್ಯಾಪಿ ಸುಮಹಚ್ಚಾಪಂ ದೃಢಜ್ಯಂ ಬಲವತ್ತರಂ।।

ಅವನ ರಥನಿರ್ಘೋಷವೂ ಮಹಾಮೇಘಗಳ ಗರ್ಜನೆಯಂತಿದ್ದಿತು. ಅವನ ಮಹಾಚಾಪವೂ ದೃಢಮೌರ್ವಿಯಿಂದ ಕೂಡಿದ್ದು ಬಲವತ್ತರವಾಗಿದ್ದಿತು.

07151017a ತಸ್ಯಾಪ್ಯಕ್ಷಸಮಾ ಬಾಣಾ ರುಕ್ಮಪುಂಖಾಃ ಶಿಲಾಶಿತಾಃ।
07151017c ಸೋಽಪಿ ವೀರೋ ಮಹಾಬಾಹುರ್ಯಥೈವ ಸ ಘಟೋತ್ಕಚಃ।।

ಅವನ ಬಾಣಗಳು ಕೂಡ ರಥದ ಅಚ್ಚುಮರದಷ್ಟು ದಪ್ಪನಾಗಿದ್ದವು, ರುಕ್ಮಪುಂಖಗಳಾಗಿದ್ದವು. ಶಿಲಾಶಿತಗಳಾಗಿದ್ದವು. ಘಟೋತ್ಕಚನಂತೆ ಅವನೂ ಕೂಡ ಮಹಾಬಾಹು ವೀರನಾಗಿದ್ದನು.

07151018a ತಸ್ಯಾಪಿ ಗೋಮಾಯುಬಡಾಭಿಗುಪ್ತೋ ಬಭೂವ ಕೇತುರ್ಜ್ವಲನಾರ್ಕತುಲ್ಯಃ।
07151018c ಸ ಚಾಪಿ ರೂಪೇಣ ಘಟೋತ್ಕಚಸ್ಯ ಶ್ರೀಮತ್ತಮೋ ವ್ಯಾಕುಲದೀಪಿತಾಸ್ಯಃ।।

ಗುಳ್ಳೆನರಿಗಳ ಸಮೂಹಗಳಿಂದ ರಕ್ಷಿಸಲ್ಪಟ್ಟಿದ್ದ ಅವನ ಧ್ವಜವೂ ಕೂಡ ಜ್ವಲನದಲ್ಲಿ ಸೂರ್ಯನ ಸಮಾನವಾಗಿದ್ದಿತು. ಅವನ ರೂಪವೂ ಸಹ ಘಟೋತ್ಕಚನ ರೂಪದಂತೆ ಅತ್ಯಂತ ಕಾಂತಿಯುಕ್ತವಾಗಿತ್ತು. ಮುಖವು ವ್ಯಾಕುಲಗೊಂಡಿತ್ತು.

07151019a ದೀಪ್ತಾಂಗದೋ ದೀಪ್ತಕಿರೀಟಮಾಲೀ ಬದ್ಧಸ್ರಗುಷ್ಣೀಷನಿಬದ್ಧಖಡ್ಗಃ।
07151019c ಗದೀ ಭುಶುಂಡೀ ಮುಸಲೀ ಹಲೀ ಚ ಶರಾಸನೀ ವಾರಣತುಲ್ಯವರ್ಷ್ಮಾ।।

ಥಳಥಳಿಸುವ ಅಂಗದಗಳನ್ನು ಧರಿಸಿದ್ದ, ಬೆಳಗುತ್ತಿರುವ ಕಿರೀಟ ಮಾಲೆಗಳನ್ನು ಧರಿಸಿದ್ದ, ತಲೆಯ ರುಮಾಲಿನಲ್ಲಿಯೇ ಕತ್ತಿಯನ್ನು ಕಟ್ಟಿಕೊಂಡಿದ್ದ ಅವನು ಗದೆ-ಭುಷಂಡಿ-ಮುಸಲ-ಹಲ-ಬತ್ತಳಿಕೆ ಮತ್ತು ಆನೆಗಳ ಗಾತ್ರದ ಕಲ್ಲುಬಂಡೆಗಳನ್ನು ಹೊಂದಿದ್ದನು.

07151020a ರಥೇನ ತೇನಾನಲವರ್ಚಸಾ ಚ ವಿದ್ರಾವಯನ್ಪಾಂಡವವಾಹಿನೀಂ ತಾಂ।
07151020c ರರಾಜ ಸಂಖ್ಯೇ ಪರಿವರ್ತಮಾನೋ ವಿದ್ಯುನ್ಮಾಲೀ ಮೇಘ ಇವಾಂತರಿಕ್ಷೇ।।

ಅಗ್ನಿಸಮಾನ ತೇಜಸ್ಸಿನಿಂದ ಬೆಳಗುತ್ತಿದ್ದ ರಥದಲ್ಲಿ ಕುಳಿತು ಅವನು ಪಾಂಡವ ಸೇನೆಯನ್ನು ಓಡಿಸುತ್ತಾ ರಣದಲ್ಲಿ ಸಂಚರಿಸುತ್ತಿರಲು ಅಂತರಿಕ್ಷದಲ್ಲಿ ಮಿಂಚಿನಿಂದ ಕೂಡಿದ ಮೇಘದಂತೆ ಪ್ರಕಾಶಿಸಿದನು.

07151021a ತೇ ಚಾಪಿ ಸರ್ವೇ ಪ್ರವರಾ ನರೇಂದ್ರಾ ಮಹಾಬಲಾ ವರ್ಮಿಣಶ್ಚರ್ಮಿಣಶ್ಚ।
07151021c ಹರ್ಷಾನ್ವಿತಾ ಯುಯುಧುಸ್ತತ್ರ ರಾಜನ್ ಸಮಂತತಃ ಪಾಂಡವಯೋಧವೀರಾಃ।।

ರಾಜನ್! ಆ ಎಲ್ಲ ನರೇಂದ್ರಪ್ರಮುಖರೂ ಪಾಂಡವ ಯೋಧ ವೀರರೂ ಕೂಡ ಮಹಾಬಲದಿಂದ, ಕವಚ-ಗುರಾಣಿಗಳೊಡನೆ ಹರ್ಷಾನ್ವಿತರಾಗಿ ಅವನನ್ನು ಸುತ್ತುವರೆದು ಯುದ್ಧಮಾಡತೊಡಗಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಅಲಾಯುಧಯುದ್ಧೇ ಏಕಪಂಚಾಶದಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಅಲಾಯುಧಯುದ್ಧ ಎನ್ನುವ ನೂರಾಐವತ್ತೊಂದನೇ ಅಧ್ಯಾಯವು.