150 ರಾತ್ರಿಯುದ್ಧೇ ಕರ್ಣಘಟೋತ್ಕಚಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಘಟೋತ್ಕಚವಧ ಪರ್ವ

ಅಧ್ಯಾಯ 150

ಸಾರ

ಕರ್ಣ-ಘಟೋತ್ಕಚರ ಘೋರ ಯುದ್ಧ (1-106)

07150001 ಧೃತರಾಷ್ಟ್ರ ಉವಾಚ।
07150001a ಯತ್ರ ವೈಕರ್ತನಃ ಕರ್ಣೋ ರಾಕ್ಷಸಶ್ಚ ಘಟೋತ್ಕಚಃ।
07150001c ನಿಶೀಥೇ ಸಮಸಜ್ಜೇತಾಂ ತದ್ಯುದ್ಧಮಭವತ್ಕಥಂ।।

ಧೃತರಾಷ್ಟ್ರನು ಹೇಳಿದನು: “ಆ ರಾತ್ರಿ ವೈಕರ್ತನ ಕರ್ಣ ಮತ್ತು ರಾಕ್ಷಸ ಘಟೋತ್ಕಚರಿಬ್ಬರೂ ಸಜ್ಜಾಗಿದ್ದಲ್ಲಿ ನಡೆದ ಯುದ್ಧವು ಹೇಗಿದ್ದಿತು?

07150002a ಕೀದೃಶಂ ಚಾಭವದ್ಯುದ್ಧಂ ತಸ್ಯ ಘೋರಸ್ಯ ರಕ್ಷಸಃ।
07150002c ರಥಶ್ಚ ಕೀದೃಶಸ್ತಸ್ಯ ಮಾಯಾಃ ಸರ್ವಾಯುಧಾನಿ ಚ।।

ಆ ಘೋರ ರಾಕ್ಷಸನ ಯುದ್ಧವು ಹೇಗಾಯಿತು? ಅವನ ಮಾಯೆಗಳು ಮತ್ತು ಸರ್ವ ಆಯುಧಗಳು ಹೇಗಿದ್ದವು?

07150003a ಕಿಂಪ್ರಮಾಣಾ ಹಯಾಸ್ತಸ್ಯ ರಥಕೇತುರ್ಧನುಸ್ತಥಾ।
07150003c ಕೀದೃಶಂ ವರ್ಮ ಚೈವಾಸ್ಯ ಕಂಠತ್ರಾಣಂ ಚ ಕೀದೃಶಂ।
07150003e ಪೃಷ್ಟಸ್ತ್ವಂ ಏತದಾಚಕ್ಷ್ವ ಕುಶಲೋ ಹ್ಯಸಿ ಸಂಜಯ।।

ಅವನ ಕುದುರೆಗಳು, ರಥ, ಕೇತು, ಧನುಸ್ಸುಗಳು ಯಾವ ಪ್ರಮಾಣದಲ್ಲಿದ್ದವು? ಅವನ ಕವಚವು ಹೇಗಿದ್ದಿತು? ಅವನ ಕಂಠತ್ರಾಣವು ಹೇಗಿದ್ದಿತು? ಸಂಜಯ! ನಿನಗೆ ನಾನು ಇದನ್ನು ಕೇಳುತ್ತಿದ್ದೇನೆ. ಕುಶಲನಾಗಿರುವ ನೀನು ಇದನ್ನು ನನಗೆ ಹೇಳು!”

07150004 ಸಂಜಯ ಉವಾಚ।
07150004a ಲೋಹಿತಾಕ್ಷೋ ಮಹಾಕಾಯಸ್ತಾಮ್ರಾಸ್ಯೋ ನಿಮ್ನಿತೋದರಃ।
07150004c ಊರ್ಧ್ವರೋಮಾ ಹರಿಶ್ಮಶ್ರುಃ ಶಂಕುಕರ್ಣೋ ಮಹಾಹನುಃ।।
07150005a ಆಕರ್ಣಾದ್ದಾರಿತಾಸ್ಯಶ್ಚ ತೀಕ್ಷ್ಣದಂಷ್ಟ್ರಃ ಕರಾಲವಾನ್।

ಸಂಜಯನು ಹೇಳಿದನು: “ಮಹಾಕಾಯ, ಲೋಹಿತಾಕ್ಷ, ತಾಮ್ರವರ್ಣದ ಮುಖವುಳ್ಳ, ಆಳವಾದ ಹೊಟ್ಟೆಯನ್ನು ಹೊಂದಿರುವ, ರೋಮಗಳು ನಿಮಿರಿ ನಿಂತಿರುವ, ಹಸಿರುಬಣ್ಣದ ಗಡ್ಡ-ಮೀಸೆಗಳುಳ್ಳ, ಗೂಟದಂತಹ ಕಿವಿಗಳುಳ್ಳ, ದೊಡ್ಡ ದೊಡ್ಡ ದವಡೆಗಳುಳ್ಳ ಅವನ ಬಾಯಿಯು ಕಿವಿಗಳ ಪರ್ಯಂತವಾಗಿತ್ತು. ತೀಕ್ಷ್ಣ ಕೋರೆದಾಡೆಗಳುಳ್ಳ ಅವನು ಭಯಂಕರರೂಪನಾಗಿದ್ದನು.

07150005c ಸುದೀರ್ಘತಾಮ್ರಜಿಹ್ವೋಷ್ಠೋ ಲಂಬಭ್ರೂಃ ಸ್ಥೂಲನಾಸಿಕಃ।।
07150006a ನೀಲಾಂಗೋ ಲೋಹಿತಗ್ರೀವೋ ಗಿರಿವರ್ಷ್ಮಾ ಭಯಂಕರಃ।
07150006c ಮಹಾಕಾಯೋ ಮಹಾಬಾಹುರ್ಮಹಾಶೀರ್ಷೋ ಮಹಾಬಲಃ।।
07150007a ವಿಕಚಃ ಪರುಷಸ್ಪರ್ಶೋ ವಿಕಟೋದ್ಬದ್ಧಪಿಂಡಿಕಃ।

ಅವನ ಕೆಂಪು ನಾಲಿಗೆ-ತುಟಿಗಳು ನೀಳವಾಗಿದ್ದವು. ಹುಬ್ಬುಗಳು ಜೋಲಾಡುತ್ತಿದ್ದವು. ಮೂಗು ದಪ್ಪವಾಗಿತ್ತು. ಶರೀರವು ನೀಲಿ ಬಣ್ಣದ್ದಾಗಿತ್ತು. ಕುತ್ತಿಗೆಯು ಕೆಂಪಾಗಿತ್ತು. ಅವನ ಶರೀರವು ಪರ್ವತಾಕಾರವಾಗಿದ್ದು ನೋಡಲು ಭಯಂಕರನಾಗಿದ್ದನು. ಆ ಮಹಾಕಾಯ, ಮಹಾಬಾಹು, ಮಹಾಶೀರ್ಷ, ಮಹಾಬಲ, ವಿಕಾರಸ್ವರೂಪನ ಸ್ಪರ್ಷವು ಗಡುಸಾಗಿತ್ತು. ಅವನ ಕಣಕಾಲಿನ ಹಿಂಭಾಗವು ವಿಕಾರವಾಗಿಯೂ ಮಾಂಸಲವಾಗಿಯೂ ಇದ್ದಿತು.

07150007c ಸ್ಥೂಲಸ್ಫಿಗ್ಗೂಢನಾಭಿಶ್ಚ ಶಿಥಿಲೋಪಚಯೋ ಮಹಾನ್।।
07150008a ತಥೈವ ಹಸ್ತಾಭರಣೀ ಮಹಾಮಾಯೋಽಮ್ಗದೀ ತಥಾ।
07150008c ಉರಸಾ ಧಾರಯನ್ನಿಷ್ಕಮಗ್ನಿಮಾಲಾಂ ಯಥಾಚಲಃ।।

ಅವನ ನಿತಂಬವು ದಪ್ಪವಾಗಿದ್ದಿತು. ಹೊಕ್ಕಳು ಪ್ರದೇಶವು ಚಿಕ್ಕುದಾಗಿದ್ದು ಆಳವಾಗಿದ್ದಿತು. ಅವನ ಶರೀರವು ದೊಡ್ಡದಾಗಿ ಬೆಳೆದಿದ್ದಿತು. ಮಹಾಮಾಯಾವಿಯಾಗಿದ್ದ ಅವನು ಕೈಗಳಲ್ಲಿ ಆಭರಣಗಳನ್ನು ತೊಟ್ಟುಕೊಂಡಿದ್ದ ಅವನು ಭುಜಗಳಲ್ಲಿ ಅಂಗದ ಕೇಯೂರಗಳನ್ನು ಧರಿಸಿದ್ದನು. ಪರ್ವತವು ಅಗ್ನಿಯನ್ನೇ ಮಾಲೆಯನ್ನಾಗಿ ಧರಿಸುವಂತೆ ಘಟೋತ್ಕಚನು ವಕ್ಷಸ್ಠಳದಲ್ಲಿ ಸ್ವರ್ಣಮಾಲೆಯನ್ನು ಧರಿಸಿದ್ದನು.

07150009a ತಸ್ಯ ಹೇಮಮಯಂ ಚಿತ್ರಂ ಬಹುರೂಪಾಂಗಶೋಭಿತಂ।
07150009c ತೋರಣಪ್ರತಿಮಂ ಶುಭ್ರಂ ಕಿರೀಟಂ ಮೂರ್ಧ್ನ್ಯಶೋಭತ।।

ಹೇಮಮಯ ಚಿತ್ರಿತ ತೋರಣಸದೃಶ ಬಹುರೂಪದ ಶುಭ್ರ ಕಿರೀಟವು ಅವನ ತಲೆಯ ಮೇಲೆ ಬೆಳಗುತ್ತಿತ್ತು.

07150010a ಕುಂಡಲೇ ಬಾಲಸೂರ್ಯಾಭೇ ಮಾಲಾಂ ಹೇಮಮಯೀಂ ಶುಭಾಂ।
07150010c ಧಾರಯನ್ವಿಪುಲಂ ಕಾಂಸ್ಯಂ ಕವಚಂ ಚ ಮಹಾಪ್ರಭಂ।।

ಬಾಲಸೂರ್ಯನಂತೆ ಹೊಳೆಯುತ್ತಿದ್ದ ಕುಂಡಲಗಳನ್ನೂ, ಸುವರ್ಣಮಯ ಶುಭ ಮಾಲೆಯನ್ನೂ, ಮಹಾಪ್ರಭೆಯುಳ್ಳ ಕಂಚಿನ ವಿಶಾಲ ಕವಚವನ್ನೂ ಧರಿಸಿದ್ದನು.

07150011a ಕಿಂಕಿಣೀಶತನಿರ್ಘೋಷಂ ರಕ್ತಧ್ವಜಪತಾಕಿನಂ।
07150011c ಋಕ್ಷಚರ್ಮಾವನದ್ಧಾಂಗಂ ನಲ್ವಮಾತ್ರಂ ಮಹಾರಥಂ।।
07150012a ಸರ್ವಾಯುಧವರೋಪೇತಮಾಸ್ಥಿತೋ ಧ್ವಜಮಾಲಿನಂ।
07150012c ಅಷ್ಟಚಕ್ರಸಮಾಯುಕ್ತಂ ಮೇಘಗಂಭೀರನಿಸ್ವನಂ।।

ಅವನ ಮಹಾರಥವು ಶಬ್ದಾಯಮಾನ ನೂರಾರು ಗಂಟೆಗಳಿಂದ ಅಲಂಕೃತವಾಗಿತ್ತು. ಕೆಂಪು ಧ್ವಜ-ಪತಾಕೆಗಳಿದ್ದವು. ಕರಡಿಯ ಚರ್ಮವನ್ನು ಹೊದಿಸಿದ್ದ ಆ ರಥವು ನಾಲ್ಕುನೂರು ಮೊಳಗಳಷ್ಟು ವಿಸ್ತಾರವಾಗಿತ್ತು. ಸರ್ವಾಯುಧಗಳಿಂದ ಸಮೃದ್ಧವಾಗಿದ್ದ ಆ ರಥದ ಧ್ವನಿಯು ಮೇಘಗಳ ಗಂಭೀರಧ್ವನಿಗೆ ಸಮನಾಗಿದ್ದಿತು. ದೊಡ್ಡ ಧ್ವಜವಿದ್ದ ಆ ರಥಕ್ಕೆ ಎಂಟು ಗಾಲಿಗಳಿದ್ದವು.

07150013a ತತ್ರ ಮಾತಂಗಸಂಕಾಶಾ ಲೋಹಿತಾಕ್ಷಾ ವಿಭೀಷಣಾಃ।
07150013c ಕಾಮವರ್ಣಜವಾ ಯುಕ್ತಾ ಬಲವಂತೋಽವಹನ್ ಹಯಾಃ।।

ಅದಕ್ಕೆ ಮದಿಸಿದ ಆನೆಗಳಿಗೆ ಸಮಾನ ಕೆಂಪು ಕಣ್ಣುಗಳುಳ್ಳ ವಿಭೀಷಣವಾಗಿ ತೋರುತ್ತಿದ್ದ, ಇಚ್ಛಾನುಸಾರವಾಗಿ ರೂಪಗಳನ್ನು ಬದಲಾಯಿಸಬಲ್ಲ, ಮಹಾಬಲಿಷ್ಠ ಕುದುರೆಗಳನ್ನು ಕಟ್ಟಲಾಗಿತ್ತು.

07150014a ರಾಕ್ಷಸೋಽಸ್ಯ ವಿರೂಪಾಕ್ಷಃ ಸೂತೋ ದೀಪ್ತಾಸ್ಯಕುಂಡಲಃ।
07150014c ರಶ್ಮಿಭಿಃ ಸೂರ್ಯರಶ್ಮ್ಯಾಭೈಃ ಸಂಜಗ್ರಾಹ ಹಯಾನ್ರಣೇ।
07150014e ಸ ತೇನ ಸಹಿತಸ್ತಸ್ಥಾವರುಣೇನ ಯಥಾ ರವಿಃ।।

ಬೆಳಗುತ್ತಿದ್ದ ಮುಖ ಮತ್ತು ಕುಂಡಲಗಳನ್ನು ಹೊಂದಿದ್ದ ವಿರೂಪಾಕ್ಷನೆಂಬ ರಾಕ್ಷಸನು ಅವನ ಸಾರಥಿಯಾಗಿದ್ದನು. ಸೂರ್ಯನ ರಶ್ಮಿಗೆ ಸಮಾನ ಕಡಿವಾಣಗಳಿಂದ ಕುದುರೆಗಳನ್ನು ಹಿಡಿದಿದ್ದ ಅವನೊಡನೆ ಅರುಣನೊಂದಿಗೆ ರವಿಯು ಹೇಗೋ ಹಾಗೆ ರಣಸನ್ನದ್ಧನಾಗಿದ್ದನು.

07150015a ಸಂಸಕ್ತ ಇವ ಚಾಭ್ರೇಣ ಯಥಾದ್ರಿರ್ಮಹತಾ ಮಹಾನ್।
07150015c ದಿವಸ್ಪೃಕ್ಸುಮಹಾನ್ಕೇತುಃ ಸ್ಯಂದನೇಽಸ್ಯ ಸಮುಚ್ಚ್ರಿತಃ।
07150015e ರಕ್ತೋತ್ತಮಾಂಗಃ ಕ್ರವ್ಯಾದೋ ಗೃಧ್ರಃ ಪರಮಭೀಷಣಃ।।

ಕೆಂಪು ತಲೆಯ ಪರಮಭೀಷಣ ಮಾಂಸಾಹಾರಿ ರಣಹದ್ದಿರುವ ಮಹಾ ಧ್ವಜವು ಮೋಡಗಳಿಂದ ಕೂಡಿದ ಪರ್ವತವು ಆಕಾಶವನ್ನು ಚುಂಬಿಸುವಂತೆ ರಥದ ಮೇಲೆ ಹಾರಾಡುತಿತ್ತು.

07150016a ವಾಸವಾಶನಿನಿರ್ಘೋಷಂ ದೃಢಜ್ಯಮಭಿವಿಕ್ಷಿಪನ್।
07150016c ವ್ಯಕ್ತಂ ಕಿಷ್ಕುಪರೀಣಾಹಂ ದ್ವಾದಶಾರತ್ನಿ ಕಾರ್ಮುಕಂ।।
07150017a ರಥಾಕ್ಷಮಾತ್ರೈರಿಷುಭಿಃ ಸರ್ವಾಃ ಪ್ರಚ್ಚಾದಯನ್ದಿಶಃ।
07150017c ತಸ್ಯಾಂ ವೀರಾಪಹಾರಿಣ್ಯಾಂ ನಿಶಾಯಾಂ ಕರ್ಣಮಭ್ಯಯಾತ್।।

ಇಂದ್ರನ ವಜ್ರಾಯುಧದ ಘೋಷಕ್ಕೆ ಸಮಾನ ಟೇಂಕಾರಶಬ್ಧದಿಂದಲೂ, ಧೃಢ ಮೌರ್ವಿಯುಳ್ಳ, ಒಂದು ಕಿಷ್ಕುವಿನಷ್ಟು ಅಗಲವಾಗಿದ್ದ, ಹನ್ನೆರಡು ಆರತ್ನಿಗಳಷ್ಟು ಉದ್ದವಾಗಿದ್ದ ಕಾರ್ಮುಕವನ್ನು ಕರ್ಣಪರ್ಯಂತವಾಗಿ ಸೆಳೆಯುತ್ತಾ ರಥದ ಅಚ್ಚುಗಳ ಗಾತ್ರದ ಬಾಣಗಳಿಂದ ದಿಕ್ಕುಗಳನ್ನು ಮುಚ್ಚುತ್ತಾ ವೀರರ ಪ್ರಾಣಾಪಹಾರಕ ಆ ಘೋರರಾತ್ರಿಯಲ್ಲಿ ಘಟೋತ್ಕಚನು ಕರ್ಣನ ಬಳಿ ಧಾವಿಸಿದನು.

07150018a ತಸ್ಯ ವಿಕ್ಷಿಪತಶ್ಚಾಪಂ ರಥೇ ವಿಷ್ಟಭ್ಯ ತಿಷ್ಠತಃ।
07150018c ಅಶ್ರೂಯತ ಧನುರ್ಘೋಷೋ ವಿಸ್ಫೂರ್ಜಿತಮಿವಾಶನೇಃ।।

ರಥದಲ್ಲಿ ಸ್ಥಿರನಾಗಿ ಕುಳಿತಿದ್ದ ಅವನು ಧನುಸ್ಸನ್ನು ಸೆಳೆದು ಬಿಡುತ್ತಿದ್ದಾಗ ಅದರ ಟೇಂಕಾರಶಬ್ಧವು ಸಿಡಿಲಿನ ಶಬ್ಧದಂತೆ ಕೇಳಿಬರುತ್ತಿತ್ತು.

07150019a ತೇನ ವಿತ್ರಾಸ್ಯಮಾನಾನಿ ತವ ಸೈನ್ಯಾನಿ ಭಾರತ।
07150019c ಸಮಕಂಪಂತ ಸರ್ವಾಣಿ ಸಿಂಧೋರಿವ ಮಹೋರ್ಮಯಃ।।

ಭಾರತ! ಧನುಸ್ಸಿನ ಆ ಘೋರಶಬ್ಧದಿಂದ ಭಯಗೊಂಡ ನಿನ್ನ ಸೈನ್ಯಗಳು ಸಮುದ್ರದ ದೊಡ್ಡ ಅಲೆಗಳಂತೆ ಕಂಪಿಸಿದವು.

07150020a ತಮಾಪತಂತಂ ಸಂಪ್ರೇಕ್ಷ್ಯ ವಿರೂಪಾಕ್ಷಂ ವಿಭೀಷಣಂ।
07150020c ಉತ್ಸ್ಮಯನ್ನಿವ ರಾಧೇಯಸ್ತ್ವರಮಾಣೋಽಭ್ಯವಾರಯತ್।।

ಆ ವಿಭೀಷಣ ವಿರೂಪಾಕ್ಷನು ತನ್ನ ಮೇಲೆ ಎರಗುತ್ತಿರುವುದನ್ನು ಕಂಡು ಉತ್ಸಾಹಿತ ರಾಧೇಯನು ತ್ವರೆಮಾಡಿ ರಣದಲ್ಲಿ ಅವನನ್ನು ತಡೆದನು.

07150021a ತತಃ ಕರ್ಣೋಽಭ್ಯಯಾದೇನಮಸ್ಯನ್ನಸ್ಯಂತಮಂತಿಕಾತ್।
07150021c ಮಾತಂಗ ಇವ ಮಾತಂಗಂ ಯೂಥರ್ಷಭ ಇವರ್ಷಭಂ।।

ಮದಿಸಿದ ಸಲಗವನ್ನು ಮತ್ತೊಂದು ಸಲಗವು ಹೇಗೋ ಹಾಗೆ ಮತ್ತು ಹೋರಿಯೊಂದು ಇನ್ನೊಂದು ಹೋರಿಯನ್ನು ಹೇಗೋ ಹಾಗೆ ಕರ್ಣನು ಅವನನ್ನು ಹತ್ತಿರದಿಂದಲೇ ಆಕ್ರಮಣಿಸಿದನು.

07150022a ಸ ಸಮ್ನಿಪಾತಸ್ತುಮುಲಸ್ತಯೋರಾಸೀದ್ವಿಶಾಂ ಪತೇ।
07150022c ಕರ್ಣರಾಕ್ಷಸಯೋ ರಾಜನ್ನಿಂದ್ರಶಂಬರಯೋರಿವ।।

ವಿಶಾಂಪತೇ! ರಾಜನ್! ಕರ್ಣ-ರಾಕ್ಷಸರ ಆ ತುಮುಲ ಯುದ್ಧವು ಇಂದ್ರ-ಶಂಬರರ ಯುದ್ಧದಂತಿದ್ದಿತು.

07150023a ತೌ ಪ್ರಗೃಹ್ಯ ಮಹಾವೇಗೇ ಧನುಷೀ ಭೀಮನಿಸ್ವನೇ।
07150023c ಪ್ರಾಚ್ಚಾದಯೇತಾಮನ್ಯೋನ್ಯಂ ತಕ್ಷಮಾಣೌ ಮಹೇಷುಭಿಃ।।

ಅವರಿಬ್ಬರೂ ಭಯಂಕರ ಶಬ್ಧಮಾಡುವ ಧನುಸ್ಸುಗಳನ್ನು ಹಿಡಿದು ಮಹಾ ಬಾಣಗಳಿಂದ ಗಾಯಗೊಳಿಸುತ್ತಾ ಮಹಾವೇಗದಲ್ಲಿ ಅನ್ಯೋನ್ಯರನ್ನು ಮುಚ್ಚಿಬಿಟ್ಟರು.

07150024a ತತಃ ಪೂರ್ಣಾಯತೋತ್ಸೃಷ್ಟೈಃ ಶರೈಃ ಸಮ್ನತಪರ್ವಭಿಃ।
07150024c ನ್ಯವಾರಯೇತಾಮನ್ಯೋನ್ಯಂ ಕಾಂಸ್ಯೇ ನಿರ್ಭಿದ್ಯ ವರ್ಮಣೀ।।

ಆಗ ಆಕರ್ಣವಾಗಿ ಸೆಳೆದುಬಿಡುತ್ತಿದ್ದ ಸನ್ನತಪರ್ವ ಶರಗಳಿಂದ ಕಂಚಿನ ಕವಚಗಳನ್ನು ಭೇದಿಸಿ ಅನ್ಯೋನ್ಯರನ್ನು ತಡೆದು ನಿಲ್ಲಿಸಿದರು.

07150025a ತೌ ನಖೈರಿವ ಶಾರ್ದೂಲೌ ದಂತೈರಿವ ಮಹಾದ್ವಿಪೌ।
07150025c ರಥಶಕ್ತಿಭಿರನ್ಯೋನ್ಯಂ ವಿಶಿಖೈಶ್ಚ ತತಕ್ಷತುಃ।।

ಎರಡು ಸಿಂಹಗಳು ಪಂಜಗಳಿಂದ, ಮಹಾ ಗಜಗಳು ದಂತಗಳಿಂದ ಸೆಣಸಾಡುವಂತೆ ಅವರಿಬ್ಬರು ರಥಶಕ್ತಿಗಳಿಂದ ಮತ್ತು ವಿಶಿಖಗಳಿಂದ ಅನ್ಯೋನ್ಯರನ್ನು ಗಾಯಗೊಳಿಸಿದರು.

07150026a ಸಂಚಿಂದಂತೌ ಹಿ ಗಾತ್ರಾಣಿ ಸಂದಧಾನೌ ಚ ಸಾಯಕಾನ್।
07150026c ಧಕ್ಷ್ಯಮಾಣೌ ಶರವ್ರಾತೈರ್ನೋದೀಕ್ಷಿತುಮಶಕ್ನುತಾಂ।।

ಸಾಯಕಗಳನ್ನು ಹೂಡುತ್ತಾ ಶರೀರಗಳನ್ನು ಚಿಂದಿಮಾಡುತ್ತಿದ್ದರು. ಶರವ್ರಾತಗಳಿಂದ ಅನ್ಯೋನ್ಯರನ್ನು ಸುಡುತ್ತಾ ಪ್ರೇಕ್ಷಕರಿಗೆ ದುರ್ಧರ್ಷರಾಗಿ ಕಾಣುತ್ತಿದ್ದರು.

07150027a ತೌ ತು ವಿಕ್ಷತಸರ್ವಾಂಗೌ ರುಧಿರೌಘಪರಿಪ್ಲುತೌ।
07150027c ವ್ಯಭ್ರಾಜೇತಾಂ ಯಥಾ ವಾರಿಪ್ರಸ್ರುತೌ ಗೈರಿಕಾಚಲೌ।।

ಸರ್ವಾಂಗಗಳೂ ಗಾಯಗೊಂಡು ಅವುಗಳಿಂದ ರಕ್ತವು ಧಾರಾಕಾರವಾಗಿ ಸುರಿಯುತ್ತಿರಲು ಅವರಿಬ್ಬರೂ ಧಾತುಗಳ ಕೆಂಪು ನದಿಗಳು ಹರಿಯುತ್ತಿರುವ ಪರ್ವತಗಳಂತೆ ಬೆಳಗುತ್ತಿದ್ದರು.

07150028a ತೌ ಶರಾಗ್ರವಿಭಿನ್ನಾಂಗೌ ನಿರ್ಭಿಂದಂತೌ ಪರಸ್ಪರಂ।
07150028c ನಾಕಂಪಯೇತಾಮನ್ಯೋನ್ಯಂ ಯತಮಾನೌ ಮಹಾದ್ಯುತೀ।।

ಅವರಿಬ್ಬರು ಮಹಾದ್ಯುತಿಗಳು ಪರಸ್ಪರರರನ್ನು ಶರಾಗ್ರಗಳಿಂದ ಗಾಯಗೊಳಿಸುತ್ತಾ ಪ್ರಯತ್ನಿಸುತ್ತಿದ್ದರೂ ಅನ್ಯೋನ್ಯರನ್ನು ಅಲುಗಾಡಿಸಲಾಗಲಿಲ್ಲ.

07150029a ತತ್ಪ್ರವೃತ್ತಂ ನಿಶಾಯುದ್ಧಂ ಚಿರಂ ಸಮಮಿವಾಭವತ್।
07150029c ಪ್ರಾಣಯೋರ್ದೀವ್ಯತೋ ರಾಜನ್ಕರ್ಣರಾಕ್ಷಸಯೋರ್ಮೃಧೇ।।

ರಾಜನ್! ಪ್ರಾಣಗಳನ್ನೇ ಪಣವನ್ನಾಗಿಟ್ಟು ಯುದ್ಧಮಾಡುತ್ತಿದ್ದ ಕರ್ಣ-ರಾಕ್ಷಸರ ಆ ರಾತ್ರಿಯುದ್ಧವು ಬಹಳ ಸಮಯದವರೆಗೆ ಸಮ-ಸಮವಾಗಿಯೇ ನಡೆಯುತ್ತಿತ್ತು.

07150030a ತಸ್ಯ ಸಂದಧತಸ್ತೀಕ್ಷ್ಣಾಂ ಶರಾಂಶ್ಚಾಸಕ್ತಮಸ್ಯತಃ।
07150030c ಧನುರ್ಘೋಷೇಣ ವಿತ್ರಸ್ತಾಃ ಸ್ವೇ ಪರೇ ಚ ತದಾಭವನ್।
07150030e ಘಟೋತ್ಕಚಂ ಯದಾ ಕರ್ಣೋ ವಿಶೇಷಯತಿ ನೋ ನೃಪ।।
07150031a ತತಃ ಪ್ರಾದುಷ್ಕರೋದ್ದಿವ್ಯಮಸ್ತ್ರಮಸ್ತ್ರವಿದಾಂ ವರಃ।

ನೃಪ! ತೀಕ್ಷ್ಣಬಾಣಗಳನ್ನು ಅನುಸಂಧಾನಮಾಡುತ್ತಾ, ಒಂದಕ್ಕೊಂದು ಅಂಟಿಕೊಂಡಿರುವಂತೆ ಸತತವಾಗಿ ಬಿಡುತ್ತಿದ್ದ ಘಟೋತ್ಕಚನ ಧನುಸ್ಸಿನ ಟೇಂಕಾರ ಶಬ್ಧವನ್ನು ಕೇಳಿ ನಿನ್ನ ಕಡೆಯ ಮತ್ತು ಶತ್ರುಗಳ ಕಡೆಯ ಯೋಧರು ಭಯಗೊಂಡು ತತ್ತರಿಸಿದರು. ಆಗ ಅಸ್ತ್ರವಿದರಲ್ಲಿ ಶ್ರೇಷ್ಠ ಕರ್ಣನು ಅವನನ್ನು ಮೀರಿಸಲು ದಿವ್ಯಾಸ್ತ್ರವನ್ನು ಪ್ರಯೋಗಿಸತೊಡಗಿದನು.

07150031c ಕರ್ಣೇನ ವಿಹಿತಂ ದೃಷ್ಟ್ವಾ ದಿವ್ಯಮಸ್ತ್ರಂ ಘಟೋತ್ಕಚಃ।
07150031e ಪ್ರಾದುಶ್ಚಕ್ರೇ ಮಹಾಮಾಯಾಂ ರಾಕ್ಷಸಃ ಪಾಂಡುನಂದನಃ।।

ಕರ್ಣನು ದಿವ್ಯಾಸ್ತ್ರವನ್ನು ಬಳಸುವುದನ್ನು ನೋಡಿ ಪಾಂಡುನಂದನ ರಾಕ್ಷಸ ಘಟೋತ್ಕಚನು ಮಹಾಮಾಯೆಯನ್ನು ಬಳಸತೊಡಗಿದನು.

07150032a ಶೂಲಮುದ್ಗರಧಾರಿಣ್ಯಾ ಶೈಲಪಾದಪಹಸ್ತಯಾ।
07150032c ರಕ್ಷಸಾಂ ಘೋರರೂಪಾಣಾಂ ಮಹತ್ಯಾ ಸೇನಯಾ ವೃತಃ।।
07150033a ತಮುದ್ಯತಮಹಾಚಾಪಂ ದೃಷ್ಟ್ವಾ ತೇ ವ್ಯಥಿತಾ ನೃಪಾಃ।
07150033c ಭೂತಾಂತಕಮಿವಾಯಾಂತಂ ಕಾಲದಂಡೋಗ್ರಧಾರಿಣಂ।।

ಶೂಲಮುದ್ಗರಗಳನ್ನು ಪರ್ವತವೃಕ್ಷಗಳನ್ನು ಕೈಗಳಲ್ಲಿ ಹಿಡಿದ್ದಿದ್ದ ಘೋರರೂಪೀ ರಾಕ್ಷಸರ ಮಹಾ ಸೇನೆಯಿಂದ ಆವೃತನಾದ, ಉಗ್ರ ಕಾಲದಂಡವನ್ನು ಧರಿಸಿದ್ದ ಸಮಸ್ತ ಪ್ರಾಣಿಗಳ ಅಂತಕ ಯಮನಂತೆ ಮಹಾಚಾಪವನ್ನು ಎತ್ತಿ ಹಿಡಿದಿದ್ದ ಅವನನ್ನು ನೋಡಿ ನಿನ್ನ ರಾಜರು ವ್ಯಥಿತರಾದರು.

07150034a ಘಟೋತ್ಕಚಪ್ರಮುಕ್ತೇನ ಸಿಂಹನಾದೇನ ಭೀಷಿತಾಃ।
07150034c ಪ್ರಸುಸ್ರುವುರ್ಗಜಾ ಮೂತ್ರಂ ವಿವ್ಯಥುಶ್ಚ ನರಾ ಭೃಶಂ।।

ಘಟೋತ್ಕಚನು ಮಾಡಿದ ಸಿಂಹನಾದದಿಂದ ಭಯಗೊಂಡ ಆನೆಗಳು ಮೂತ್ರವಿಸರ್ಜನೆಮಾಡಿದವು. ಮನುಷ್ಯರು ಬಹಳವಾಗಿ ವ್ಯಥಿತರಾದರು.

07150035a ತತೋಽಶ್ಮವೃಷ್ಟಿರತ್ಯುಗ್ರಾ ಮಹತ್ಯಾಸೀತ್ಸಮಂತತಃ।
07150035c ಅರ್ಧರಾತ್ರೇಽಧಿಕಬಲೈರ್ವಿಮುಕ್ತಾ ರಕ್ಷಸಾಂ ಬಲೈಃ।।

ಆ ಅರ್ಧರಾತ್ರಿಯಲ್ಲಿ ಅಧಿಕಬಲವುಳ್ಳ ರಾಕ್ಷಸ ಸೈನಿಕರು ಅತಿ ಉಗ್ರ ಕಲ್ಲುಗಳ ಮಳೆಯನ್ನು ಎಲ್ಲೆಡೆ ಸುರಿಸಿದರು.

07150036a ಆಯಸಾನಿ ಚ ಚಕ್ರಾಣಿ ಭುಶುಂಡ್ಯಃ ಶಕ್ತಿತೋಮರಾಃ।
07150036c ಪತಂತ್ಯವಿರಲಾಃ ಶೂಲಾಃ ಶತಘ್ನ್ಯಃ ಪಟ್ಟಿಶಾಸ್ತಥಾ।।

ಕಬ್ಬಿಣದ ಚಕ್ರಗಳೂ, ಭುಶುಂಡಿಗಳೂ, ಶಕ್ತಿ-ತೋಮರಗಳೂ, ಶೂಲ-ಶತಘ್ನೀ-ಪಟ್ಟಿಶಗಳೂ ಅವಿರತವಾಗಿ ಬೀಳುತ್ತಿದ್ದವು.

07150037a ತದುಗ್ರಮತಿರೌದ್ರಂ ಚ ದೃಷ್ಟ್ವಾ ಯುದ್ಧಂ ನರಾಧಿಪಾಃ।
07150037c ಪುತ್ರಾಶ್ಚ ತವ ಯೋಧಾಶ್ಚ ವ್ಯಥಿತಾ ವಿಪ್ರದುದ್ರುವುಃ।।

ಆ ಅತಿ ‌ಉಗ್ರ ರೌದ್ರ ಯುದ್ಧವನ್ನು ನೋಡಿ ನರಾಧಿಪರೂ, ನಿನ್ನ ಪುತ್ರರೂ, ಯೋಧರೂ ವ್ಯಥಿತರಾಗಿ ಪಲಾಯನಮಾಡಿದರು.

07150038a ತತ್ರೈಕೋಽಸ್ತ್ರಬಲಶ್ಲಾಘೀ ಕರ್ಣೋ ಮಾನೀ ನ ವಿವ್ಯಥೇ।
07150038c ವ್ಯಧಮಚ್ಚ ಶರೈರ್ಮಾಯಾಂ ಘಟೋತ್ಕಚವಿನಿರ್ಮಿತಾಂ।।

ಆದರೆ ಅಲ್ಲಿ ಅಸ್ತ್ರಬಲಶ್ಲಾಘಿ ಮಾನಿನಿ ಕರ್ಣನು ಮಾತ್ರ ವ್ಯಥೆಗೊಳ್ಳಲಿಲ್ಲ. ಶರಗಳಿಂದ ಘಟೋತ್ಕಚನು ನಿರ್ಮಿಸಿದ ಮಾಯೆಯನ್ನು ಧ್ವಂಸಮಾಡಿದನು.

07150039a ಮಾಯಾಯಾಂ ತು ಪ್ರಹೀಣಾಯಾಮಮರ್ಷಾತ್ಸ ಘಟೋತ್ಕಚಃ।
07150039c ವಿಸಸರ್ಜ ಶರಾನ್ಘೋರಾನ್ಸೂತಪುತ್ರಂ ತ ಆವಿಶನ್।।

ತನ್ನ ಮಾಯೆಯು ನಷ್ಟವಾದುದನ್ನು ನೋಡಿ ಸಹನೆಮೀರಿದ ಘಟೋತ್ಕಚನು ಘೋರಶರಗಳನ್ನು ಬಿಡಲು ಅವು ಸೂತಪುತ್ರನ ಶರೀರವನ್ನು ಪ್ರವೇಶಿಸಿದವು.

07150040a ತತಸ್ತೇ ರುಧಿರಾಭ್ಯಕ್ತಾ ಭಿತ್ತ್ವಾ ಕರ್ಣಂ ಮಹಾಹವೇ।
07150040c ವಿವಿಶುರ್ಧರಣೀಂ ಬಾಣಾಃ ಸಂಕ್ರುದ್ಧಾ ಇವ ಪನ್ನಗಾಃ।।

ಮಹಾಹವದಲ್ಲಿ ಆ ಶರಗಳು ಕರ್ಣನನ್ನು ಭೇದಿಸಿ ರಕ್ತವನ್ನು ಕುಡಿದು ಸಂಕ್ರುದ್ಧ ಪನ್ನಗಗಳಂತೆ ಭೂಮಿಯನ್ನು ಹೊಕ್ಕವು.

07150041a ಸೂತಪುತ್ರಸ್ತು ಸಂಕ್ರುದ್ಧೋ ಲಘುಹಸ್ತಃ ಪ್ರತಾಪವಾನ್।
07150041c ಘಟೋತ್ಕಚಮತಿಕ್ರಮ್ಯ ಬಿಭೇದ ದಶಭಿಃ ಶರೈಃ।।

ಲಘುಹಸ್ತ ಪ್ರತಾಪವಾನ್ ಸೂತಪುತ್ರನಾದರೋ ಸಂಕ್ರುದ್ಧನಾಗಿ ಘಟೋತ್ಕಚನನ್ನು ಅತಿಕ್ರಮಿಸಿ ಹತ್ತು ಶರಗಳಿಂದ ಗಾಯಗೊಳಿಸಿದನು.

07150042a ಘಟೋತ್ಕಚೋ ವಿನಿರ್ಭಿನ್ನಃ ಸೂತಪುತ್ರೇಣ ಮರ್ಮಸು।
07150042c ಚಕ್ರಂ ದಿವ್ಯಂ ಸಹಸ್ರಾರಮಗೃಹ್ಣಾದ್ವ್ಯಥಿತೋ ಭೃಶಂ।।

ಸೂತಪುತ್ರನಿಂದ ಮರ್ಮಗಳಲ್ಲಿ ಗಾಯಗೊಂಡು ತುಂಬಾ ವ್ಯಥಿತನಾದ ಘಟೋತ್ಕಚನು ಸಾವಿರ ಅರೆಗಳುಳ್ಳ ದಿವ್ಯ ಚಕ್ರವನ್ನು ಕೈಗೆತ್ತಿಕೊಂಡನು.

07150043a ಕ್ಷುರಾಂತಂ ಬಾಲಸೂರ್ಯಾಭಂ ಮಣಿರತ್ನವಿಭೂಷಿತಂ।
07150043c ಚಿಕ್ಷೇಪಾಧಿರಥೇಃ ಕ್ರುದ್ಧೋ ಭೈಮಸೇನಿರ್ಜಿಘಾಂಸಯಾ।।

ಕ್ರುದ್ಧ ಭೈಮಸೇನಿಯು ಅಧಿರಥಿಯನ್ನು ಕೊಲ್ಲಲೋಸುಗ ತೀಕ್ಷ್ಣ ಅಲಗುಗಳಿಂದ ಕೂಡಿದ್ದ ಬಾಲ ಸೂರ್ಯನಂತೆ ಪ್ರಕಾಶಮಾನ, ಮಣಿರತ್ನಗಳಿಂದ ವಿಭೂಷಿತ ಚಕ್ರವನ್ನು ಅವನ ರಥದ ಮೇಲೆ ಬೀಸಿ ಎಸೆದನು.

07150044a ಪ್ರವಿದ್ಧಮತಿವೇಗೇನ ವಿಕ್ಷಿಪ್ತಂ ಕರ್ಣಸಾಯಕೈಃ।
07150044c ಅಭಾಗ್ಯಸ್ಯೇವ ಸಂಕಲ್ಪಸ್ತನ್ಮೋಘಮಪತದ್ಭುವಿ।।

ಅಭಾಗ್ಯನ ಸಂಕಲ್ಪಗಳು ವ್ಯರ್ಥವಾಗಿ ಹೋಗುವಂತೆ ಎಸೆಯಲ್ಪಟ್ಟ ಆ ಚಕ್ರವು ಕರ್ಣನ ಸಾಯಕಗಳಿಂದ ಬಹಳ ವೇಗವಾಗಿ ಪ್ರಹರಿಸಲ್ಪಟ್ಟು ಕೆಳಕ್ಕೆ ಬಿದ್ದುಹೋಯಿತು.

07150045a ಘಟೋತ್ಕಚಸ್ತು ಸಂಕ್ರುದ್ಧೋ ದೃಷ್ಟ್ವಾ ಚಕ್ರಂ ನಿಪಾತಿತಂ।
07150045c ಕರ್ಣಂ ಪ್ರಾಚ್ಚಾದಯದ್ಬಾಣೈಃ ಸ್ವರ್ಭಾನುರಿವ ಭಾಸ್ಕರಂ।।

ತನ್ನ ಚಕ್ರವು ಕೆಳಗುರುಳಿದುದನ್ನು ನೋಡಿ ಸಂಕ್ರುದ್ಧನಾದ ಘಟೋತ್ಕಚನಾದರೋ ರಾಹುವು ಭಾಸ್ಕರನನ್ನು ಹೇಗೋ ಹಾಗೆ ಕರ್ಣನನ್ನು ಬಾಣಗಳಿಂದ ಮುಚ್ಚಿಬಿಟ್ಟನು.

07150046a ಸೂತಪುತ್ರಸ್ತ್ವಸಂಭ್ರಾಂತೋ ರುದ್ರೋಪೇಂದ್ರೇಂದ್ರವಿಕ್ರಮಃ।
07150046c ಘಟೋತ್ಕಚರಥಂ ತೂರ್ಣಂ ಚಾದಯಾಮಾಸ ಪತ್ರಿಭಿಃ।।

ರುದ್ರ-ಉಪೇಂದ್ರರ ಸಮಾನ ವಿಕ್ರಮವುಳ್ಳ ಸೂತಪುತ್ರನಾದರೋ ಗಾಭರಿಗೊಳ್ಳದೇ ತಕ್ಷಣವೇ ಘಟೋತ್ಕಚನ ರಥವನ್ನು ಪತ್ರಿಗಳಿಂದ ಮುಚ್ಚಿಬಿಟ್ಟನು.

07150047a ಘಟೋತ್ಕಚೇನ ಕ್ರುದ್ಧೇನ ಗದಾ ಹೇಮಾಂಗದಾ ತದಾ।
07150047c ಕ್ಷಿಪ್ತಾ ಭ್ರಾಮ್ಯ ಶರೈಃ ಸಾಪಿ ಕರ್ಣೇನಾಭ್ಯಾಹತಾಪತತ್।।

ಆಗ ಕ್ರುದ್ಧ ಘಟೋತ್ಕಚನಿಂದ ಗರಗರನೆ ತಿರುಗಿಸಿ ಎಸೆಯಲ್ಪಟ್ಟ ಸುವರ್ಣಮಯ ಆಭರಣಗಳಿಂದ ಅಲಂಕೃತ ಗದೆಯೂ ಕೂಡ ಕರ್ಣನಿಂದ ಹೊಡೆಯಲ್ಪಟ್ಟು ಕೆಳಕ್ಕೆ ಬಿದ್ದಿತು.

07150048a ತತೋಽಮ್ತರಿಕ್ಷಮುತ್ಪತ್ಯ ಕಾಲಮೇಘ ಇವೋನ್ನದನ್।
07150048c ಪ್ರವವರ್ಷ ಮಹಾಕಾಯೋ ದ್ರುಮವರ್ಷಂ ನಭಸ್ತಲಾತ್।।

ಆಗ ಮಹಾಕಾಯನು ಅಂತರಿಕ್ಷಕ್ಕೆ ಹಾರಿ ಕಾಲಮೇಘದಂತೆ ಗುಡುಗುತ್ತಾ ನಭಸ್ತಲದಿಂದ ವೃಕ್ಷಗಳ ಮಳೆಯನ್ನು ಸುರಿಸಿದನು.

07150049a ತತೋ ಮಾಯಾವಿನಂ ಕರ್ಣೋ ಭೀಮಸೇನಸುತಂ ದಿವಿ।
07150049c ಮಾರ್ಗಣೈರಭಿವಿವ್ಯಾಧ ಘನಂ ಸೂರ್ಯ ಇವಾಂಶುಭಿಃ।।

ಆಗ ದಿವಿಯಲ್ಲಿದ್ದ ಭೀಮಸೇನಸುತ ಮಾಯಾವಿಯನ್ನು ಕರ್ಣನು ಸೂರ್ಯನು ಮೋಡಗಳನ್ನು ತನ್ನ ಕಿರಣಗಳಿಂದ ಭೇದಿಸುವಂತೆ ಮಾರ್ಗಣಗಳಿಂದ ಗಾಯಗೊಳಿಸಿದನು.

07150050a ತಸ್ಯ ಸರ್ವಾನ್ ಹಯಾನ್ ಹತ್ವಾ ಸಂಚಿದ್ಯ ಶತಧಾ ರಥಂ।
07150050c ಅಭ್ಯವರ್ಷಚ್ಚರೈಃ ಕರ್ಣಃ ಪರ್ಜನ್ಯ ಇವ ವೃಷ್ಟಿಮಾನ್।।

ಅವನ ಎಲ್ಲ ಕುದುರೆಗಳನ್ನೂ ಸಂಹರಿಸಿ, ರಥವನ್ನು ನೂರು ಚೂರುಗಳನ್ನಾಗಿಸಿ, ಕರ್ಣನು ಮೋಡಗಳು ಮಳೆಸುರಿಸುವಂತೆ ಬಾಣಗಳ ಮಳೆಯನ್ನು ಸುರಿಸಿದನು.

07150051a ನ ಚಾಸ್ಯಾಸೀದನಿರ್ಭಿನ್ನಂ ಗಾತ್ರೇ ದ್ವ್ಯಂಗುಲಮಂತರಂ।
07150051c ಸೋಽದೃಶ್ಯತ ಮುಹೂರ್ತೇನ ಶ್ವಾವಿಚ್ಚಲಲಿತೋ ಯಥಾ।।

ಘಟೋತ್ಕಚನ ಶರೀರದಲ್ಲಿ ಕರ್ಣನ ಬಾಣಗಳಿಂದ ಗಾಯಗೊಳ್ಳದೇ ಇದ್ದ ಎರಡು ಅಂಗುಲ ಜಾಗವೂ ಇರಲಿಲ್ಲ. ಒಂದೇ ಕ್ಷಣದಲ್ಲಿ ಅವನು ಮುಳ್ಳುಗಳಿಂದ ತುಂಬಿದ ಮುಳ್ಳುಹಂದಿಯಂತೆಯೇ ಕಂಡನು.

07150052a ನ ಹಯಾನ್ನ ರಥಂ ತಸ್ಯ ನ ಧ್ವಜಂ ನ ಘಟೋತ್ಕಚಂ।
07150052c ದೃಷ್ಟವಂತಃ ಸ್ಮ ಸಮರೇ ಶರೌಘೈರಭಿಸಂವೃತಂ।।

ಬಾಣಗಳ ಸಮೂಹಗಳಿಂದ ಮುಚ್ಚಿಹೋಗಿದ್ದ ಘಟೋತ್ಕಚನಾಗಲೀ ಅವನ ಕುದುರೆಗಳಾಗಲೀ ರಥವಾಗಲೀ ಧ್ವಜವಾಗಲೀ ಸಮರದಲ್ಲಿ ನಮಗೆ ಕಾಣುತ್ತಿರಲಿಲ್ಲ.

07150053a ಸ ತು ಕರ್ಣಸ್ಯ ತದ್ದಿವ್ಯಮಸ್ತ್ರಮಸ್ತ್ರೇಣ ಶಾತಯನ್।
07150053c ಮಾಯಾಯುದ್ಧೇನ ಮಾಯಾವೀ ಸೂತಪುತ್ರಮಯೋಧಯತ್।।

ಅವನಾದರೋ ಕರ್ಣನ ಆ ದಿವ್ಯಾಸ್ತ್ರವನ್ನು ಅಸ್ತ್ರದಿಂದಲೇ ಪ್ರಶಮನಗೊಳಿಸಿದನು. ಆ ಮಾಯಾವಿಯು ಸೂತಪುತ್ರನನ್ನು ಮಾಯಾಯುದ್ಧದಿಂದಲೇ ಎದುರಿಸಿದನು.

07150054a ಸೋಽಯೋಧಯತ್ತದಾ ಕರ್ಣಂ ಮಾಯಯಾ ಲಾಘವೇನ ಚ।
07150054c ಅಲಕ್ಷ್ಯಮಾಣೋಽಥ ದಿವಿ ಶರಜಾಲೇಷು ಸಂಪತನ್।।

ಅವನು ಚಳಕದಿಂದಲೂ ಮಾಯೆಯಿಂದಲೂ ಕರ್ಣನೊಡನೆ ಯುದ್ಧಮಾಡುತ್ತಿದ್ದನು. ಇದ್ದಕ್ಕಿದ್ದಂತೆಯೇ ಆಕಾಶದಿಂದ ಬಾಣಗಳ ಜಾಲಗಳು ಕರ್ಣನ ಮೇಲೆ ಬೀಳತೊಡಗಿದವು.

07150055a ಭೈಮಸೇನಿರ್ಮಹಾಮಾಯೋ ಮಾಯಯಾ ಕುರುಸತ್ತಮ।
07150055c ಪ್ರಚಕಾರ ಮಹಾಮಾಯಾಂ ಮೋಹಯನ್ನಿವ ಭಾರತ।।

ಕುರುಸತ್ತಮ! ಭಾರತ! ಮಹಾಮಾಯಾವಿ ಭೈಮಸೇನಿಯು ಮಾಯೆಯಿಂದ ಎಲ್ಲರನ್ನೂ ಮೋಹಗೊಳಿಸುವಂತೆ ಮಾಡಿದನು.

07150056a ಸ ಸ್ಮ ಕೃತ್ವಾ ವಿರೂಪಾಣಿ ವದನಾನ್ಯಶುಭಾನನಃ।
07150056c ಅಗ್ರಸತ್ಸೂತಪುತ್ರಸ್ಯ ದಿವ್ಯಾನ್ಯಸ್ತ್ರಾಣಿ ಮಾಯಯಾ।।

ಅವನು ವಿರೂಪಮಾಡಿಕೊಂಡು ಅಶುಭ ಮುಖವನ್ನು ಮಾಡಿಕೊಂಡು ಮಾಯೆಯಿಂದ ಸೂತಪುತ್ರನ ದಿವ್ಯಾಸ್ತ್ರಗಳನ್ನು ನುಂಗಿಹಾಕಿದನು.

07150057a ಪುನಶ್ಚಾಪಿ ಮಹಾಕಾಯಃ ಸಂಚಿನ್ನಃ ಶತಧಾ ರಣೇ।
07150057c ಗತಸತ್ತ್ವೋ ನಿರುತ್ಸಾಹಃ ಪತಿತಃ ಖಾದ್ವ್ಯದೃಶ್ಯತ।

ಪುನಃ ಆ ಮಹಾಕಾಯನು ರಣದಲ್ಲಿ ನೂರಾರು ಚೂರುಗಳಾಗಿ ಸತ್ವವನ್ನು ಕಳೆದುಕೊಂಡು ನಿರುತ್ಸಾಹನಾಗಿ ಆಕಾಶದಿಂದ ಕೆಳಗೆ ಬೀಳತ್ತಿರುವುದು ತೋರಿತು.

07150057e ಹತಂ ತಂ ಮನ್ಯಮಾನಾಃ ಸ್ಮ ಪ್ರಾಣದನ್ಕುರುಪುಂಗವಾಃ।।
07150058a ಅಥ ದೇಹೈರ್ನವೈರನ್ಯೈರ್ದಿಕ್ಷು ಸರ್ವಾಸ್ವದೃಶ್ಯತ।
07150058c ಪುನಶ್ಚಾಪಿ ಮಹಾಕಾಯಃ ಶತಶೀರ್ಷಃ ಶತೋದರಃ।।

ಅವನು ಹತನಾದನೆಂದೇ ತಿಳಿದು ಕುರುಪುಂಗವರು ಜಯಘೋಷಮಾಡಿದರು. ಆದರೆ ಮರುಕ್ಷಣದಲ್ಲಿಯೇ ಪುನಃ ಆ ಮಹಾಕಾಯನು ನೂರು ತಲೆಗಳೊಂದಿಗೆ ನೂರು ಹೊಟ್ಟೆಗಳೊಂದಿಗೆ ಹೊಸದೇಹಗಳಿಂದ ಎಲ್ಲ ದಿಕ್ಕುಗಳಲ್ಲಿ ಕಾಣಿಸಿಕೊಂಡನು.

07150059a ವ್ಯದೃಶ್ಯತ ಮಹಾಬಾಹುರ್ಮೈನಾಕ ಇವ ಪರ್ವತಃ।
07150059c ಅಂಗುಷ್ಠಮಾತ್ರೋ ಭೂತ್ವಾ ಚ ಪುನರೇವ ಸ ರಾಕ್ಷಸಃ।
07150059e ಸಾಗರೋರ್ಮಿರಿವೋದ್ಧೂತಸ್ತಿರ್ಯಗೂರ್ಧ್ವಮವರ್ತತ।।

ಪುನಃ ಆ ರಾಕ್ಷಸನು ಮೈನಾಕಪರ್ವತದಂತೆ ಮಹಾಕಾಯನಾಗಿಯೂ, ಪುನಃ ಅಂಗುಷ್ಠಮಾತ್ರನಾಗಿಯೂ ಕಾಣುತ್ತಿದ್ದನು. ಸಾಗರದ ಅಲೆಗಳೋಪಾದಿಯಲ್ಲಿ ಮೇಲೆ ಕೆಳಕ್ಕೆ ಹೋಗುತ್ತಾ, ಕೆಲವೊಮ್ಮೆ ವಕ್ರವಾಗಿ ಸಂಚರಿಸುತ್ತಿದ್ದನು.

07150060a ವಸುಧಾಂ ದಾರಯಿತ್ವಾ ಚ ಪುನರಪ್ಸು ನ್ಯಮಜ್ಜತ।
07150060c ಅದೃಶ್ಯತ ತದಾ ತತ್ರ ಪುನರುನ್ಮಜ್ಜಿತೋಽನ್ಯತಃ।।

ಅವನು ಭೂಮಿಯನ್ನು ಸೀಳಿಕೊಂಡು ಹೋಗುತ್ತಿದ್ದನು. ಇನ್ನೊಮ್ಮೆ ನೀರಿನಲ್ಲಿ ಮುಳುಗುತ್ತಿದ್ದನು. ಒಮ್ಮಿಂದೊಮ್ಮೆಲೇ ಅದೃಶ್ಯನಾಗಿ ಪುನಃ ಕಾಣಿಸಿಕೊಳ್ಳುತ್ತಿದ್ದನು.

07150061a ಸೋಽವತೀರ್ಯ ಪುನಸ್ತಸ್ಥೌ ರಥೇ ಹೇಮಪರಿಷ್ಕೃತೇ।
07150061c ಕ್ಷಿತಿಂ ದ್ಯಾಂ ಚ ದಿಶಶ್ಚೈವ ಮಾಯಯಾವೃತ್ಯ ದಂಶಿತಃ।।

ಅವನು ಕೆಳಗಿಳಿದು ಪುನಃ ಹೇಮಪರಿಷ್ಕೃತ ರಥದಲ್ಲಿ ಕುಳಿತುಕೊಳ್ಳುತ್ತಿದ್ದನು. ಕವಚಧಾರಿಯಾದ ಅವನು ತನ್ನ ಮಾಯೆಯಿಂದ ಭೂಮ್ಯಾಕಾಶಗಳನ್ನೂ ದಿಕ್ಕುಗಳನ್ನೂ ಆವರಿಸಿದ್ದನು.

07150062a ಗತ್ವಾ ಕರ್ಣರಥಾಭ್ಯಾಶಂ ವಿಚಲತ್ಕುಂಡಲಾನನಃ।
07150062c ಪ್ರಾಹ ವಾಕ್ಯಮಸಂಭ್ರಾಂತಃ ಸೂತಪುತ್ರಂ ವಿಶಾಂ ಪತೇ।।

ವಿಶಾಂಪತೇ! ಅನಂತರ ಕರ್ಣನ ರಥದ ಸಮೀಪಕ್ಕೆ ಹೋಗಿ ಆ ಕುಂಡಲಾನನನು ಅಸಂಭ್ರಾಂತನಾಗಿ ಸೂತಪುತ್ರನಿಗೆ ಹೇಳಿದನು:

07150063a ತಿಷ್ಠೇದಾನೀಂ ನ ಮೇ ಜೀವನ್ಸೂತಪುತ್ರ ಗಮಿಷ್ಯಸಿ।
07150063c ಯುದ್ಧಶ್ರದ್ಧಾಮಹಂ ತೇಽದ್ಯ ವಿನೇಷ್ಯಾಮಿ ರಣಾಜಿರೇ।।

“ಸೂತಪುತ್ರ! ನಿಲ್ಲು! ನೀನು ಜೀವಸಹಿತವಾಗಿ ನನ್ನಿಂದ ತಪ್ಪಿಸಿಕೊಂಡು ಹೋಗಲಾರೆ! ಈ ರಣಾಂಗಣದಲ್ಲಿ ನಿನಗಿರುವ ಯುದ್ಧಶ್ರದ್ಧೆಯನ್ನು ನಾನು ಹೋಗಲಾಡಿಸುತ್ತೇನೆ!”

07150064a ಇತ್ಯುಕ್ತ್ವಾ ರೋಷತಾಮ್ರಾಕ್ಷಂ ರಕ್ಷಃ ಕ್ರೂರಪರಾಕ್ರಮಂ।
07150064c ಉತ್ಪಪಾತಾಂತರಿಕ್ಷಂ ಚ ಜಹಾಸ ಚ ಸುವಿಸ್ವರಂ।
07150064e ಕರ್ಣಮಭ್ಯಾಹನಚ್ಚೈವ ಗಜೇಂದ್ರಮಿವ ಕೇಸರೀ।।

ಹೀಗೆ ಹೇಳಿ ರೋಷದಿಂದ ಕೆಂಗಣ್ಣನಾಗಿದ್ದ ಆ ಕ್ರೂರಪರಾಕ್ರಮಿ ರಾಕ್ಷಸನು ಅಂತರಿಕ್ಷಕ್ಕೆ ಹಾರಿ ಅಟ್ಟಹಾಸದಿಂದ ನಗುತ್ತಾ ಸಿಂಹವು ಗಜೇಂದ್ರನನ್ನು ಪ್ರಹರಿಸುವಂತೆ ಕರ್ಣನನ್ನು ಪ್ರಹರಿಸತೊಡಗಿದನು.

07150065a ರಥಾಕ್ಷಮಾತ್ರೈರಿಷುಭಿರಭ್ಯವರ್ಷದ್ಘಟೋತ್ಕಚಃ।
07150065c ರಥಿನಾಂ ಋಷಭಂ ಕರ್ಣಂ ಧಾರಾಭಿರಿವ ತೋಯದಃ।
07150065e ಶರವೃಷ್ಟಿಂ ಚ ತಾಂ ಕರ್ಣೋ ದೂರಪ್ರಾಪ್ತಾಮಶಾತಯತ್।।

ಮೇಘವು ಜಲಧಾರೆಯಿಂದ ಪರ್ವತವನ್ನು ಮುಚ್ಚುವಂತೆ ರಥದ ಅಚ್ಚುಮರದಷ್ಟು ಗಾತ್ರದ ಬಾಣಗಳ ಮಳೆಯನ್ನು ರಥಶ್ರೇಷ್ಠ ಕರ್ಣನ ಮೇಲೆ ಘಟೋತ್ಕಚನು ಸುರಿಸಿದನು. ಆ ಶರವೃಷ್ಟಿಯನ್ನು ಕರ್ಣನು ದೂರದಿಂದಲೇ ವಿನಾಶಗೊಳಿಸಿದನು.

07150066a ದೃಷ್ಟ್ವಾ ಚ ವಿಹತಾಂ ಮಾಯಾಂ ಕರ್ಣೇನ ಭರತರ್ಷಭ।
07150066c ಘಟೋತ್ಕಚಸ್ತತೋ ಮಾಯಾಂ ಸಸರ್ಜಾಂತರ್ಹಿತಃ ಪುನಃ।।

ಭರತರ್ಷಭ! ಕರ್ಣನು ತನ್ನ ಮಾಯೆಯನ್ನು ನಾಶಗೊಳಿಸಿದುದನ್ನು ನೋಡಿ ಘಟೋತ್ಕಚನು ಪುನಃ ಅಂತರ್ಹಿತನಾಗಿ ಮಾಯೆಗಳನ್ನು ಸೃಷ್ಟಿಸಿದನು.

07150067a ಸೋಽಭವದ್ಗಿರಿರಿತ್ಯುಚ್ಚಃ ಶಿಖರೈಸ್ತರುಸಂಕಟೈಃ।
07150067c ಶೂಲಪ್ರಾಸಾಸಿಮುಸಲಜಲಪ್ರಸ್ರವಣೋ ಮಹಾನ್।।

ಅವನು ವೃಕ್ಷಗಳ ಸಾಲುಗಳಿಂದಲೂ ಉಚ್ಚ ಶಿಖರಗಳಿಂದಲೂ ಕೂಡಿದ ಗಿರಿಯಾದನು ಮತ್ತು ಅದರಿಂದ ಮಹಾ ಶೂಲ-ಪ್ರಾಸ-ಖಡ್ಗ-ಮುಸಲಗಳು ನೀರಿನ ರೂಪದಲ್ಲಿ ಹರಿದುಬರುತ್ತಿದ್ದವು.

07150068a ತಮಂಜನಚಯಪ್ರಖ್ಯಂ ಕರ್ಣೋ ದೃಷ್ಟ್ವಾ ಮಹೀಧರಂ।
07150068c ಪ್ರಪಾತೈರಾಯುಧಾನ್ಯುಗ್ರಾಣ್ಯುದ್ವಹಂತಂ ನ ಚುಕ್ಷುಭೇ।।

ಆಯುಧಗಳ ಪ್ರವಾಹವನ್ನು ಹರಿಸುತ್ತಿದ್ದ ಆ ಕಾಡಿಗೆಯಂತೆ ಕಪ್ಪಾಗಿದ್ದ ಪರ್ವತರೂಪವನ್ನು ನೋಡಿ ಕರ್ಣನು ಸ್ವಲ್ಪವೂ ಭ್ರಾಂತನಾಗಲಿಲ್ಲ.

07150069a ಸ್ಮಯನ್ನಿವ ತತಃ ಕರ್ಣೋ ದಿವ್ಯಮಸ್ತ್ರಮುದೀರಯತ್।
07150069c ತತಃ ಸೋಽಸ್ತ್ರೇಣ ಶೈಲೇಂದ್ರೋ ವಿಕ್ಷಿಪ್ತೋ ವೈ ವ್ಯನಶ್ಯತ।।

ಕರ್ಣನು ನಗುನಗುತ್ತಲೇ ದಿವ್ಯಾಸ್ತ್ರವನ್ನು ಪ್ರಯೋಗಿಸಲು ಆ ಪರ್ವತವು ಅಸ್ತ್ರದಿಂದ ಬಹುದೂರ ಎಸೆಯಲ್ಪಟ್ಟು ನಾಶಗೊಂಡಿತು.

07150070a ತತಃ ಸ ತೋಯದೋ ಭೂತ್ವಾ ನೀಲಃ ಸೇಂದ್ರಾಯುಧೋ ದಿವಿ।
07150070c ಅಶ್ಮವೃಷ್ಟಿಭಿರತ್ಯುಗ್ರಃ ಸೂತಪುತ್ರಮವಾಕಿರತ್।।

ಅನಂತರ ಆ ಉಗ್ರ ಘಟೋತ್ಕಚನು ಆಕಾಶದಲ್ಲಿ ಕಾಮನಬಿಲ್ಲಿನಿಂದ ಕೂಡಿದ ನೀಲಿಬಣ್ಣದ ಮೇಘವಾಗಿ ಕಲ್ಲಿನ ಮಳೆಗಳಿಂದ ಸೂತಪುತ್ರನನ್ನು ಮುಚ್ಚಿದನು.

07150071a ಅಥ ಸಂಧಾಯ ವಾಯವ್ಯಮಸ್ತ್ರಮಸ್ತ್ರವಿದಾಂ ವರಃ।
07150071c ವ್ಯಧಮತ್ಕಾಲಮೇಘಂ ತಂ ಕರ್ಣೋ ವೈಕರ್ತನೋ ವೃಷಾ।।

ಆಗ ಅಸ್ತ್ರವಿದರಲ್ಲಿ ಶ್ರೇಷ್ಠ ವೈಕರ್ತನ ಕರ್ಣನು ರೋಷದಿಂದ ವಾಯವ್ಯಾಸ್ತ್ರವನ್ನು ಹೂಡಿ ಆ ಕಾಲಮೇಘವನ್ನು ನಾಶಗೊಳಿಸಿದನು.

07150072a ಸ ಮಾರ್ಗಣಗಣೈಃ ಕರ್ಣೋ ದಿಶಃ ಪ್ರಚ್ಚಾದ್ಯ ಸರ್ವಶಃ।
07150072c ಜಘಾನಾಸ್ತ್ರಂ ಮಹಾರಾಜ ಘಟೋತ್ಕಚಸಮೀರಿತಂ।।

ಮಹಾರಾಜ! ಕರ್ಣನು ಮಾರ್ಗಣಗಣಗಳಿಂದ ಸರ್ವ ದಿಕ್ಕುಗಳನ್ನೂ ತುಂಬಿ ಘಟೋತ್ಕಚನು ಪ್ರಯೋಗಿಸಿದ ಅಸ್ತ್ರವನ್ನು ಧ್ವಂಸಗೊಳಿಸಿದನು.

07150073a ತತಃ ಪ್ರಹಸ್ಯ ಸಮರೇ ಭೈಮಸೇನಿರ್ಮಹಾಬಲಃ।
07150073c ಪ್ರಾದುಶ್ಚಕ್ರೇ ಮಹಾಮಾಯಾಂ ಕರ್ಣಂ ಪ್ರತಿ ಮಹಾರಥಂ।।

ಆಗ ಸಮರದಲ್ಲಿ ಜೋರಾಗಿ ನಗುತ್ತಾ ಮಹಾಬಲ ಭೈಮಸೇನಿಯು ಕರ್ಣನ ಮೇಲೆ ಮಹಾಮಾಯೆಯನ್ನು ಬಳಸತೊಡಗಿದನು.

07150074a ಸ ದೃಷ್ಟ್ವಾ ಪುನರಾಯಾಂತಂ ರಥೇನ ರಥಿನಾಂ ವರಂ।
07150074c ಘಟೋತ್ಕಚಮಸಂಭ್ರಾಂತಂ ರಾಕ್ಷಸೈರ್ಬಹುಭಿರ್ವೃತಂ।।
07150075a ಸಿಂಹಶಾರ್ದೂಲಸದೃಶೈರ್ಮತ್ತದ್ವಿರದವಿಕ್ರಮೈಃ।
07150075c ಗಜಸ್ಥೈಶ್ಚ ರಥಸ್ಥೈಶ್ಚ ವಾಜಿಪೃಷ್ಠಗತೈಸ್ತಥಾ।।
07150076a ನಾನಾಶಸ್ತ್ರಧರೈರ್ಘೋರೈರ್ನಾನಾಕವಚಭೂಷಣೈಃ।

ಪುನಃ ಸಿಂಹ-ಶಾರ್ದೂಲ ಸಮರಾಗಿದ್ದ, ಮದಿಸಿದ ಆನೆಗಳ ಬಲವುಳ್ಳ, ಆನೆ-ಕುದುರೆ-ರಥಾರೂಡರಾಗಿದ್ದ, ನಾನಾ ಶಸ್ತ್ರಗಳನ್ನು ಹಿಡಿದಿದ್ದ, ನಾನಾಕವಚಭೂಷಣಗಳಿಂದ ಉಗ್ರರಾಗಿ ಕಾಣುತ್ತಿದ್ದ ಅನೇಕ ರಾಕ್ಷಸರಿಂದ ಸುತ್ತುವರೆಯಲ್ಪಟ್ಟು, ಅಸಂಭ್ರಾಂತನಾಗಿ ರಥವನ್ನೇರಿ ಬರುತ್ತಿದ್ದ ಆ ರಥಿಗಳಲ್ಲಿ ಶ್ರೇಷ್ಠ ಘಟೋತ್ಕಚನನ್ನು ಕರ್ಣನು ನೋಡಿದನು.

07150076c ವೃತಂ ಘಟೋತ್ಕಚಂ ಕ್ರೂರೈರ್ಮರುದ್ಭಿರಿವ ವಾಸವಂ।
07150076e ದೃಷ್ಟ್ವಾ ಕರ್ಣೋ ಮಹೇಷ್ವಾಸೋ ಯೋಧಯಾಮಾಸ ರಾಕ್ಷಸಂ।।

ವಾಸವನು ಮರುತ್ತುಗಳಿಂದ ಹೇಗೋ ಹಾಗೆ ಕ್ರೂರ ರಾಕ್ಷಸರಿಂದ ಸುತ್ತುವರೆಯಲ್ಪಟ್ಟಿದ್ದ ರಾಕ್ಷಸ ಘಟೋತ್ಕಚನನ್ನು ನೋಡಿ ಮಹೇಷ್ವಾಸ ಕರ್ಣನು ಅವನೊಂದಿಗೆ ಯುದ್ಧಮಾಡತೊಡಗಿದನು.

07150077a ಘಟೋತ್ಕಚಸ್ತತಃ ಕರ್ಣಂ ವಿದ್ಧ್ವಾ ಪಂಚಭಿರಾಶುಗೈಃ।
07150077c ನನಾದ ಭೈರವಂ ನಾದಂ ಭೀಷಯನ್ಸರ್ವಪಾರ್ಥಿವಾನ್।।

ಘಟೋತ್ಕಚನು ಕರ್ಣನನ್ನು ಐದು ಆಶುಗಗಳಿಂದ ಹೊಡೆದು ಸರ್ವಪಾರ್ಥಿವರನ್ನು ಹೆದರಿಸುವಂತೆ ಭೈರವ ಗರ್ಜನೆ ಮಾಡಿದನು.

07150078a ಭೂಯಶ್ಚಾಂಜಲಿಕೇನಾಥ ಸಮಾರ್ಗಣಗಣಂ ಮಹತ್।
07150078c ಕರ್ಣಹಸ್ತಸ್ಥಿತಂ ಚಾಪಂ ಚಿಚ್ಚೇದಾಶು ಘಟೋತ್ಕಚಃ।।

ಪುನಃ ಅಂಜಲೀಕದಿಂದ ಮಹಾ ಮಾರ್ಗಣಗಣಗಳೊಂದಿಗೆ ಕರ್ಣನ ಕೈಯಲ್ಲಿದ್ದ ಚಾಪವನ್ನು ಘಟೋತ್ಕಚನು ಕತ್ತರಿಸಿದನು.

07150079a ಅಥಾನ್ಯದ್ಧನುರಾದಾಯ ದೃಢಂ ಭಾರಸಹಂ ಮಹತ್।
07150079c ವ್ಯಕರ್ಷತ ಬಲಾತ್ಕರ್ಣ ಇಂದ್ರಾಯುಧಮಿವೋಚ್ಚ್ರಿತಂ।।

ಕೂಡಲೇ ಕರ್ಣನು ಇನ್ನೊಂದು ದೃಢ, ಮಹಾ ಭಾರವನ್ನು ಸಹಿಸಬಲ್ಲ, ಇಂದ್ರಾಯುಧದಂತೆ ಉದ್ದವಾಗಿದ್ದ ಧನುಸ್ಸನ್ನು ತೆಗೆದುಕೊಂಡು ಬಲವನ್ನುಪಯೋಗಿಸಿ ಸೆಳೆದನು.

07150080a ತತಃ ಕರ್ಣೋ ಮಹಾರಾಜ ಪ್ರೇಷಯಾಮಾಸ ಸಾಯಕಾನ್।
07150080c ಸುವರ್ಣಪುಂಖಾನ್ ಶತ್ರುಘ್ನಾನ್ಖಚರಾನ್ರಾಕ್ಷಸಾನ್ಪ್ರತಿ।।

ಮಹಾರಾಜ! ಆಗ ಕರ್ಣನು ಸುವರ್ಣಪುಂಖಗಳುಳ್ಳ ಶತ್ರುಗಳನ್ನು ನಾಶಗೊಳಿಸಬಲ್ಲ ಸಾಯಕಗಳನ್ನು ಆಕಾಶದಲ್ಲಿ ಸಂಚರಿಸುತ್ತಿದ್ದ ರಾಕ್ಷಸರ ಮೇಲೆ ಪ್ರಯೋಗಿಸಿದನು.

07150081a ತದ್ಬಾಣೈರರ್ದಿತಂ ಯೂಥಂ ರಕ್ಷಸಾಂ ಪೀನವಕ್ಷಸಾಂ।
07150081c ಸಿಂಹೇನೇವಾರ್ದಿತಂ ವನ್ಯಂ ಗಜಾನಾಮಾಕುಲಂ ಕುಲಂ।।

ಆ ಬಾಣಗಳಿಂದ ಪೀಡಿತಗೊಂಡ ಉಬ್ಬಿದ ಎದೆಯುಳ್ಳ ಆ ರಾಕ್ಷಸಗಣಗಳು ಅರಣ್ಯದಲ್ಲಿ ಸಿಂಹದಿಂದ ಪೀಡಿಸಲ್ಪಟ್ಟ ಆನೆಗಳ ಹಿಂಡಿನಂತೆ ಬಹಳವಾಗಿ ವ್ಯಾಕುಲಗೊಂಡವು.

07150082a ವಿಧಮ್ಯ ರಾಕ್ಷಸಾನ್ಬಾಣೈಃ ಸಾಶ್ವಸೂತಗಜಾನ್ವಿಭುಃ।
07150082c ದದಾಹ ಭಗವಾನ್ವಹ್ನಿರ್ಭೂತಾನೀವ ಯುಗಕ್ಷಯೇ।।

ಭಗವಾನ್ ಅಗ್ನಿಯು ಯುಗಕ್ಷಯದಲ್ಲಿ ಪ್ರಾಣಿಗಳನ್ನು ದಹಿಸುವಂತೆ ವಿಭು ಕರ್ಣನು ಬಾಣಗಳಿಂದ ಅಶ್ವ-ಸೂತ-ಗಜಗಳೊಡನೆ ರಾಕ್ಷಸರನ್ನು ಮರ್ದಿಸಿ ದಹಿಸಿದನು.

07150083a ಸ ಹತ್ವಾ ರಾಕ್ಷಸೀಂ ಸೇನಾಂ ಶುಶುಭೇ ಸೂತನಂದನಃ।
07150083c ಪುರೇವ ತ್ರಿಪುರಂ ದಗ್ಧ್ವಾ ದಿವಿ ದೇವೋ ಮಹೇಶ್ವರಃ।।

ಹಿಂದೆ ದಿವಿಯಲ್ಲಿ ದೇವ ಮಹೇಶ್ವರನು ತ್ರಿಪುರವನ್ನು ಸುಟ್ಟು ಪ್ರಕಾಶಿಸಿದಂತೆ ಸೂತನಂದನನು ಆ ರಾಕ್ಷಸೀ ಸೇನೆಯನ್ನು ಸಂಹರಿಸಿ ಶೋಭಿಸಿದನು.

07150084a ತೇಷು ರಾಜಸಹಸ್ರೇಷು ಪಾಂಡವೇಯೇಷು ಮಾರಿಷ।
07150084c ನೈನಂ ನಿರೀಕ್ಷಿತುಮಪಿ ಕಶ್ಚಿಚ್ಚಕ್ನೋತಿ ಪಾರ್ಥಿವ।।
07150085a ಋತೇ ಘಟೋತ್ಕಚಾದ್ರಾಜನ್ರಾಕ್ಷಸೇಂದ್ರಾನ್ಮಹಾಬಲಾತ್।
07150085c ಭೀಮವೀರ್ಯಬಲೋಪೇತಾತ್ಕ್ರುದ್ಧಾದ್ವೈವಸ್ವತಾದಿವ।।

ರಾಜನ್! ಪಾರ್ಥಿವ! ಮಾರಿಷ! ರಾಕ್ಷಸೇಂದ್ರ, ಮಹಾಬಲಶಾಲೀ, ಭೀಮನ ವೀರ್ಯಬಲಗಳಿಂದ ಕೂಡಿದ್ದ, ಕ್ರುದ್ಧ ವೈವಸ್ವತನಂತಿದ್ದ ಘಟೋತ್ಕಚನನ್ನು ಬಿಟ್ಟು ಪಾಂಡವೇಯರ ಸಹಸ್ರ ರಾಜರಲ್ಲಿ ಯಾರೂ ಕರ್ಣನನ್ನು ದಿಟ್ಟಿಸಿ ನೋಡಲು ಶಕ್ಯರಾಗಿರಲಿಲ್ಲ.

07150086a ತಸ್ಯ ಕ್ರುದ್ಧಸ್ಯ ನೇತ್ರಾಭ್ಯಾಂ ಪಾವಕಃ ಸಮಜಾಯತ।
07150086c ಮಹೋಲ್ಕಾಭ್ಯಾಂ ಯಥಾ ರಾಜನ್ಸಾರ್ಚಿಷಃ ಸ್ನೇಹಬಿಂದವಃ।।

ರಾಜನ್! ದೊಡ್ಡ ಪಂಜುಗಳ ಬೆಂಕಿಯಿಂದ ಉರಿಯುತ್ತಿರುವ ಎಣ್ಣೆಯ ತೊಟ್ಟುಗಳು ಉದುರುತ್ತಿರುವಂತೆ ಕ್ರುದ್ಧ ಘಟೋತ್ಕಚನ ಎರಡೂ ಕಣ್ಣುಗಳಿಂದ ಬೆಂಕಿ ಕೂಡಿದ ಕಣ್ಣೀರು ಉದುರುತ್ತಿತ್ತು.

07150087a ತಲಂ ತಲೇನ ಸಂಹತ್ಯ ಸಂದಶ್ಯ ದಶನಚ್ಚದಂ।
07150087c ರಥಮಾಸ್ಥಾಯ ಚ ಪುನರ್ಮಾಯಯಾ ನಿರ್ಮಿತಂ ಪುನಃ।।
07150088a ಯುಕ್ತಂ ಗಜನಿಭೈರ್ವಾಹೈಃ ಪಿಶಾಚವದನೈಃ ಖರೈಃ।
07150088c ಸ ಸೂತಮಬ್ರವೀತ್ಕ್ರುದ್ಧಃ ಸೂತಪುತ್ರಾಯ ಮಾ ವಹ।।

ಆಗ ಕ್ರುದ್ಧ ಘಟೋತ್ಕಚನು ಕೈಯಿಂದ ಕೈಯನ್ನು ಮಸೆಯುತ್ತಾ ಹಲ್ಲುಗಳಿಂದ ಅವಡುಗಚ್ಚುತ್ತಾ ಮಾಯೆಯಿಂದ ನಿರ್ಮಿತ ಗಜಸದೃಶ ಪಿಶಾಚಿಯ ಮುಖದಿಂದ ಕೂಡಿದ ಹೇಸರಗತ್ತೆಗಳನ್ನು ಕಟ್ಟಿದ್ದ ರಥದಲ್ಲಿ ಕುಳಿತು “ಸೂತಪುತ್ರನಲ್ಲಿಗೆ ನನ್ನನ್ನು ಕೊಂಡೊಯ್ಯಿ!” ಎಂದು ಸಾರಥಿಗೆ ಹೇಳಿದನು.

07150089a ಸ ಯಯೌ ಘೋರರೂಪೇಣ ರಥೇನ ರಥಿನಾಂ ವರಃ।
07150089c ದ್ವೈರಥಂ ಸೂತಪುತ್ರೇಣ ಪುನರೇವ ವಿಶಾಂ ಪತೇ।।

ವಿಶಾಂಪತೇ! ರಥಿಗಳಲ್ಲಿ ಶ್ರೇಷ್ಠ ಅವನು ಘೋರರೂಪದ ರಥದಲ್ಲಿ ಕುಳಿತು ಪುನಃ ಸೂತಪುತ್ರನೊಂದಿಗೆ ದ್ವೈರಥ ಯುದ್ಧದಲ್ಲಿ ತೊಡಗಿದನು.

07150090a ಸ ಚಿಕ್ಷೇಪ ಪುನಃ ಕ್ರುದ್ಧಃ ಸೂತಪುತ್ರಾಯ ರಾಕ್ಷಸಃ।
07150090c ಅಷ್ಟಚಕ್ರಾಂ ಮಹಾಘೋರಾಮಶನಿಂ ರುದ್ರನಿರ್ಮಿತಾಂ।।

ಕ್ರುದ್ಧನಾಗಿದ್ದ ಆ ರಾಕ್ಷಸನು ಪುನಃ ಎಂಟು ಚಕ್ರಗಳುಳ್ಳ, ರುದ್ರನಿರ್ಮಿತ ಮಹಾಘೋರ ವಜ್ರಾಯುಧವನ್ನು ಸೂತಪುತ್ರನ ಮೇಲೆ ಎಸೆದನು.

07150091a ತಾಮವಪ್ಲುತ್ಯ ಜಗ್ರಾಹ ಕರ್ಣೋ ನ್ಯಸ್ಯ ರಥೇ ಧನುಃ।
07150091c ಚಿಕ್ಷೇಪ ಚೈನಾಂ ತಸ್ಯೈವ ಸ್ಯಂದನಾತ್ಸೋಽವಪುಪ್ಲುವೇ।।

ಕರ್ಣನು ರಥದಲ್ಲಿ ಧನುಸ್ಸನ್ನು ಇಟ್ಟು ರಥದಿಂದ ಜಿಗಿದು ಹಾರಿ ಅದನ್ನು ಕೈಯಲ್ಲಿ ಹಿಡಿದು ರಥದಿಂದ ಕೆಳಗೆ ಧುಮುಕಿದ್ದ ಘಟೋತ್ಕಚನ ಮೇಲೆ ಅದನ್ನೇ ಎಸೆದನು.

07150092a ಸಾಶ್ವಸೂತಧ್ವಜಂ ಯಾನಂ ಭಸ್ಮ ಕೃತ್ವಾ ಮಹಾಪ್ರಭಾ।
07150092c ವಿವೇಶ ವಸುಧಾಂ ಭಿತ್ತ್ವಾ ಸುರಾಸ್ತತ್ರ ವಿಸಿಸ್ಮಿಯುಃ।।

ಮಹಾಪ್ರಭೆಯುಳ್ಳ ಆ ವಜ್ರಾಯುಧವು ಅಶ್ವ-ಸೂತ-ಧ್ವಜಗಳೊಡನೆ ಘಟೋತ್ಕಚನ ರಥವನ್ನು ಭಸ್ಮಮಾಡಿ ವಸುಧೆಯನ್ನು ಸೀಳಿ ಪ್ರವೇಶಿಸಿತು. ಅದನ್ನು ನೋಡಿ ಸುರರೂ ವಿಸ್ಮಿತರಾದರು!

07150093a ಕರ್ಣಂ ತು ಸರ್ವಭೂತಾನಿ ಪೂಜಯಾಮಾಸುರಂಜಸಾ।
07150093c ಯದವಪ್ಲುತ್ಯ ಜಗ್ರಾಹ ದೇವಸೃಷ್ಟಾಂ ಮಹಾಶನಿಂ।।

ದೇವನಿಂದ ಸೃಷ್ಟಿಸಲ್ಪಟ್ಟಿದ್ದ ಆ ಮಹಾ ವಜ್ರವನ್ನು ಅನಾಯಾಸದಿಂದ ಹಾರಿ ಕೈಯಲ್ಲಿ ಹಿಡಿದುದನ್ನು ನೋಡಿ ಕರ್ಣನನ್ನು ಸರ್ವಭೂತಗಳೂ ಪ್ರಶಂಸಿಸಿದವು.

07150094a ಏವಂ ಕೃತ್ವಾ ರಣೇ ಕರ್ಣ ಆರುರೋಹ ರಥಂ ಪುನಃ।
07150094c ತತೋ ಮುಮೋಚ ನಾರಾಚಾನ್ಸೂತಪುತ್ರಃ ಪರಂತಪಃ।।

ರಣದಲ್ಲಿ ಹೀಗೆ ಮಾಡಿ ಪರಂತಪ ಸೂತಪುತ್ರ ಕರ್ಣನು ಪುನಃ ರಥವನ್ನೇರಿ ನಾರಾಚಗಳನ್ನು ಪ್ರಯೋಗಿಸಿದನು.

07150095a ಅಶಕ್ಯಂ ಕರ್ತುಮನ್ಯೇನ ಸರ್ವಭೂತೇಷು ಮಾನದ।
07150095c ಯದಕಾರ್ಷೀತ್ತದಾ ಕರ್ಣಃ ಸಂಗ್ರಾಮೇ ಭೀಮದರ್ಶನೇ।।

ಮಾನದ! ಭಯಂಕರವಾಗಿ ತೋರುತ್ತಿದ್ದ ಆ ಸಂಗ್ರಾಮದಲ್ಲಿ ಕರ್ಣನು ಏನನ್ನು ಮಾಡಿದನೋ ಅದನ್ನು ಸರ್ವ ಭೂತಗಳಲ್ಲಿ ಬೇರೆ ಯಾರಿಗೂ ಮಾಡಲು ಅಶಕ್ಯವಾಗಿತ್ತು.

07150096a ಸ ಹನ್ಯಮಾನೋ ನಾರಾಚೈರ್ಧಾರಾಭಿರಿವ ಪರ್ವತಃ।
07150096c ಗಂಧರ್ವನಗರಾಕಾರಃ ಪುನರಂತರಧೀಯತ।।

ಪರ್ವತವು ಮಳೆಯ ಧಾರೆಗಳಿಂದ ಮುಚ್ಚಿಹೋಗುವಂತೆ ಕರ್ಣನ ನಾರಾಚಗಳಿಂದ ಮುಚ್ಚಲ್ಪಟ್ಟು ಪ್ರಹೃತನಾದ ಘಟೋತ್ಕಚನು ಗಂಧರ್ವ ನಗರಿಯಂತೆ ಪುನಃ ಅಂತರ್ಧಾನನಾದನು.

07150097a ಏವಂ ಸ ವೈ ಮಹಾಮಾಯೋ ಮಾಯಯಾ ಲಾಘವೇನ ಚ।
07150097c ಅಸ್ತ್ರಾಣಿ ತಾನಿ ದಿವ್ಯಾನಿ ಜಘಾನ ರಿಪುಸೂದನಃ।।

ಹೀಗೆ ಆ ರಿಪುಸೂದನ ಮಯಾಮಾಯಿ ಘಟೋತ್ಕಚನು ಮಾಯೆಯಿಂದ ಮತ್ತು ಹಸ್ತ ಲಾಘವದಿಂದ ಕರ್ಣನ ಆ ದಿವ್ಯಾಸ್ತ್ರಗಳನ್ನು ನಾಶಗೊಳಿಸಿದನು.

07150098a ನಿಹನ್ಯಮಾನೇಷ್ವಸ್ತ್ರೇಷು ಮಾಯಯಾ ತೇನ ರಕ್ಷಸಾ।
07150098c ಅಸಂಭ್ರಾಂತಸ್ತತಃ ಕರ್ಣಸ್ತದ್ರಕ್ಷಃ ಪ್ರತ್ಯಯುಧ್ಯತ।।

ಮಾಯೆಯನ್ನು ಆಶ್ರಯಿಸಿ ಆ ರಾಕ್ಷಸನು ತನ್ನ ಅಸ್ತ್ರಗಳನ್ನು ಧ್ವಂಸಮಾಡುತ್ತಿರಲು ಕರ್ಣನು ಸ್ವಲ್ಪವೂ ಭ್ರಾಂತನಾಗದೇ ಅವನೊಡನೇ ಯುದ್ಧಮಾಡುತ್ತಲೇ ಇದ್ದನು.

07150099a ತತಃ ಕ್ರುದ್ಧೋ ಮಹಾರಾಜ ಭೈಮಸೇನಿರ್ಮಹಾಬಲಃ।
07150099c ಚಕಾರ ಬಹುಧಾತ್ಮಾನಂ ಭೀಷಯಾಣೋ ನರಾಧಿಪಾನ್।।

ಮಹಾರಾಜ! ಆಗ ಕ್ರುದ್ಧ ಮಹಾಬಲ ಭೈಮಸೇನಿಯು ನರಾಧಿಪರನ್ನು ಭಯಪಡಿಸುತ್ತಾ ತನ್ನನ್ನು ಅನೇಕ ರೂಪಗಳನ್ನಾಗಿ ಪರಿವರ್ತಿಸಿಕೊಂಡನು.

07150100a ತತೋ ದಿಗ್ಭ್ಯಃ ಸಮಾಪೇತುಃ ಸಿಂಹವ್ಯಾಘ್ರತರಕ್ಷವಃ।
07150100c ಅಗ್ನಿಜಿಹ್ವಾಶ್ಚ ಭುಜಗಾ ವಿಹಗಾಶ್ಚಾಪ್ಯಯೋಮುಖಾಃ।।

ಆಗ ಕರ್ಣನ ಮೇಲೆ ಎಲ್ಲ ಕಡೆಗಳಿಂದ ಸಿಂಹ, ವ್ಯಾಘ್ರ, ಕಿರುಬ, ಅಗ್ನಿರೂಪದ ನಾಲಿಗೆಗಳುಳ್ಳ ಸರ್ಪಗಳೂ, ಲೋಹಮಯ ಕೊಕ್ಕುಗಳನ್ನು ಹೊಂದಿದ್ದ ಪಕ್ಷಿಗಳೂ ಏಕಕಾಲದಲ್ಲಿ ಬಿದ್ದವು.

07150101a ಸ ಕೀರ್ಯಮಾಣೋ ನಿಶಿತೈಃ ಕರ್ಣಚಾಪಚ್ಯುತೈಃ ಶರೈಃ।
07150101c ನಗರಾದ್ರಿವನಪ್ರಖ್ಯಸ್ತತ್ರೈವಾಂತರಧೀಯತ।।

ಕರ್ಣನ ಚಾಪದಿಂದ ಹೊರಟ ನಿಶಿತ ಶರಗಳಿಂದ ಎರಚಲ್ಪಟ್ಟ ಅವನು ಸರ್ಪ-ಗಿರಿ-ವನಚರರೊಡನೆ ಅಲ್ಲಿಯೇ ಅಂತರ್ಧಾನನಾದನು.

07150102a ರಾಕ್ಷಸಾಶ್ಚ ಪಿಶಾಚಾಶ್ಚ ಯಾತುಧಾನಾಃ ಶಲಾವೃಕಾಃ।
07150102c ತೇ ಕರ್ಣಂ ಭಕ್ಷಯಿಷ್ಯಂತಃ ಸರ್ವತಃ ಸಮುಪಾದ್ರವನ್।

ಆಗ ರಾಕ್ಷಸರು, ಪಿಶಾಚಿಗಳು, ಯಾತುಧಾನರು, ನಾಯಿ-ತೋಳಗಳು ಕರ್ಣನನ್ನು ಭಕ್ಷಿಸುವವೋ ಎನ್ನುವಂತೆ ಎಲ್ಲ ಕಡೆಗಳಿಂದ ಓಡಿ ಬಂದವು.

07150102e ಅಥೈನಂ ವಾಗ್ಭಿರುಗ್ರಾಭಿಸ್ತ್ರಾಸಯಾಂ ಚಕ್ರಿರೇ ತದಾ।।
07150103a ಉದ್ಯತೈರ್ಬಹುಭಿರ್ಘೋರೈರಾಯುಧೈಃ ಶೋಣಿತೋಕ್ಷಿತೈಃ।
07150103c ತೇಷಾಮನೇಕೈರೇಕೈಕಂ ಕರ್ಣೋ ವಿವ್ಯಾಧ ಚಾಶುಗೈಃ।।

ಅವು ಭಯಂಕರ ಗರ್ಜನೆಯೊಡನೆ ಕರ್ಣನನ್ನು ಬೆದರಿಸಲು ಉಪಕ್ರಮಿಸಿದವು. ಆಗ ಕರ್ಣನು ಅನೇಕ ರಕ್ತಸಿಕ್ತ ಘೋರ ಆಯುಧಗಳಿಂದಲೂ ಮತ್ತು ಬಾಣಗಳಿಂದಲೂ ಬಹುಸಂಖ್ಯಾತ ರಾಕ್ಷಸರಲ್ಲಿ ಪ್ರತಿಯೊಬ್ಬನನ್ನೂ ಪ್ರಹರಿಸಿದನು.

07150104a ಪ್ರತಿಹತ್ಯ ತು ತಾಂ ಮಾಯಾಂ ದಿವ್ಯೇನಾಸ್ತ್ರೇಣ ರಾಕ್ಷಸೀಂ।
07150104c ಆಜಘಾನ ಹಯಾನಸ್ಯ ಶರೈಃ ಸಮ್ನತಪರ್ವಭಿಃ।।

ಆ ರಾಕ್ಷಸೀ ಮಾಯೆಯನ್ನು ದಿವ್ಯಾಸ್ತ್ರಗಳಿಂದ ನಾಶಗೊಳಿಸಿ ಕರ್ಣನು ಸನ್ನತಪರ್ವ ಶರಗಳಿಂದ ಅವನ ಕುದುರೆಗಳನ್ನು ಸಂಹರಿಸಿದನು.

07150105a ತೇ ಭಗ್ನಾ ವಿಕೃತಾಂಗಾಶ್ಚ ಚಿನ್ನಪೃಷ್ಠಾಶ್ಚ ಸಾಯಕೈಃ।
07150105c ವಸುಧಾಮನ್ವಪದ್ಯಂತ ಪಶ್ಯತಸ್ತಸ್ಯ ರಕ್ಷಸಃ।।

ರಾಕ್ಷಸನು ನೋಡುತ್ತಿದ್ದಂತೆಯೇ ಆ ಕುದುರೆಗಳು ಭಗ್ನವಾಗಿ ಅಂಗಗಳು ಕ್ಷತವಿಕ್ಷತವಾಗಿ, ಪೃಷ್ಟಭಾಗಗಳು ಭಿನ್ನವಾಗಿ ಭೂಮಿಯ ಮೇಲೆ ಬಿದ್ದವು.

07150106a ಸ ಭಗ್ನಮಾಯೋ ಹೈಡಿಂಬಃ ಕರ್ಣಂ ವೈಕರ್ತನಂ ತತಃ।
07150106c ಏಷ ತೇ ವಿದಧೇ ಮೃತ್ಯುಮಿತ್ಯುಕ್ತ್ವಾಂತರಧೀಯತ।।

ಹೀಗೆ ಭಗ್ನನಾದ ಹೈಡಿಂಬನು ವೈಕರ್ತನ ಕರ್ಣನಿಗೆ “ಈಗಲೇ ನಾನು ನಿನಗೆ ಮೃತ್ಯುವನ್ನೀಯುತ್ತೇನೆ!” ಎಂದು ಹೇಳಿ ಅಂತರ್ಧಾನನಾದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಕರ್ಣಘಟೋತ್ಕಚಯುದ್ಧೇ ಪಂಚಾಶದಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಕರ್ಣಘಟೋತ್ಕಚಯುದ್ಧ ಎನ್ನುವ ನೂರಾಐವತ್ತನೇ ಅಧ್ಯಾಯವು.