149 ರಾತ್ರಿಯುದ್ಧೇ ಅಲಂಬುಷವಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಘಟೋತ್ಕಚವಧ ಪರ್ವ

ಅಧ್ಯಾಯ 149

ಸಾರ

ಜಟಾಸುರನ ಮಗ ಅಲಂಬಲನನ್ನು ಘಟೋತ್ಕಚನು ಸಂಹರಿಸಿದುದು (1-37).

07149001 ಸಂಜಯ ಉವಾಚ।
07149001a ದೃಷ್ಟ್ವಾ ಘಟೋತ್ಕಚಂ ರಾಜನ್ಸೂತಪುತ್ರರಥಂ ಪ್ರತಿ।
07149001c ಪ್ರಯಾಂತಂ ತ್ವರರ್ಯಾ ಯುಕ್ತಂ ಜಿಘಾಂಸುಂ ಕರ್ಣಮಾಹವೇ।।
07149002a ಅಬ್ರವೀತ್ತವ ಪುತ್ರಸ್ತು ದುಃಶಾಸನಮಿದಂ ವಚಃ।

ಸಂಜಯನು ಹೇಳಿದನು: “ರಾಜನ್! ಯುದ್ಧದಲ್ಲಿ ಕರ್ಣನನ್ನು ಸಂಹರಿಸುವ ಇಚ್ಛೆಯಿಂದ ತ್ವರೆಮಾಡಿ ಕರ್ಣನ ರಥದ ಸಮೀಪಕ್ಕೆ ಬರುತ್ತಿದ್ದ ಘಟೋತ್ಕಚನನ್ನು ನೋಡಿ ನಿನ್ನ ಮಗನು ದುಃಶಾಸನನಿಗೆ ಈ ಮಾತನ್ನಾಡಿದನು:

07149002c ಏತದ್ರಕ್ಷೋ ರಣೇ ತೂರ್ಣಂ ದೃಷ್ಟ್ವಾ ಕರ್ಣಸ್ಯ ವಿಕ್ರಮಂ।।
07149003a ಅಭಿಯಾತಿ ದ್ರುತಂ ಕರ್ಣಂ ತದ್ವಾರಯ ಮಹಾರಥಂ।

“ರಣದಲ್ಲಿ ಕರ್ಣನ ವಿಕ್ರಮವನ್ನು ನೋಡಿ ಕರ್ಣನನ್ನು ಸಂಹರಿಸಲು ಈ ರಾಕ್ಷಸನು ಅವಸರದಲ್ಲಿ ಬರುತ್ತಿದ್ದಾನೆ. ಈ ಮಹಾರಥನನ್ನು ತಡೆ!

07149003c ವೃತಃ ಸೈನ್ಯೇನ ಮಹತಾ ಯಾಹಿ ಯತ್ರ ಮಹಾಬಲಃ।।
07149004a ಕರ್ಣೋ ವೈಕರ್ತನೋ ಯುದ್ಧೇ ರಾಕ್ಷಸೇನ ಯುಯುತ್ಸತಿ।
07149004c ರಕ್ಷ ಕರ್ಣಂ ರಣೇ ಯತ್ತೋ ವೃತಃ ಸೈನ್ಯೇನ ಮಾನದ।।

ಮಹಾಬಲ ವೈಕರ್ತನ ಕರ್ಣನು ರಾಕ್ಷಸನೊಡನೆ ಯುದ್ಧಮಾಡುವಲ್ಲಿಗೆ ಮಹಾಸೇನೆಯೊಂದಿಗೆ ಹೋಗು. ಮಾನದ! ಸೇನೆಗಳಿಂದ ಪರಿವೃತನಾಗಿ ಪ್ರಯತ್ನಪಟ್ಟು ರಣದಲ್ಲಿ ಕರ್ಣನನ್ನು ರಕ್ಷಿಸು!”

07149005a ಏತಸ್ಮಿನ್ನಂತರೇ ರಾಜನ್ಜಟಾಸುರಸುತೋ ಬಲೀ।
07149005c ದುರ್ಯೋಧನಮುಪಾಗಮ್ಯ ಪ್ರಾಹ ಪ್ರಹರತಾಂ ವರಃ।।

ಅಷ್ಟರಲ್ಲಿಯೇ ರಾಜನ್! ಪ್ರಹರಿಗಳಲ್ಲಿ ಶ್ರೇಷ್ಠ ಜಟಾಸುರನ ಬಲಶಾಲೀ ಮಗನು ದುರ್ಯೋಧನನ ಬಳಿಬಂದು ಹೇಳಿದನು:

07149006a ದುರ್ಯೋಧನ ತವಾಮಿತ್ರಾನ್ಪ್ರಖ್ಯಾತಾನ್ಯುದ್ಧದುರ್ಮದಾನ್।
07149006c ಪಾಂಡವಾನ್ಹಂತುಮಿಚ್ಚಾಮಿ ತ್ವಯಾಜ್ಞಪ್ತಃ ಸಹಾನುಗಾನ್।।

“ದುರ್ಯೋಧನ! ನಿನ್ನಿಂದ ಅಪ್ಪಣೆಯನ್ನು ಪಡೆದು ನನ್ನ ಅನುಯಾಯಿಗಳೊಂದಿಗೆ ನಿನ್ನ ಶತ್ರುಗಳಾದ ಆ ಪ್ರಖ್ಯಾತ ಯುದ್ಧದುರ್ಮದ ಪಾಂಡವರನ್ನು ಸಂಹರಿಸಲು ಬಯಸುತ್ತೇನೆ.

07149007a ಜಟಾಸುರೋ ಮಮ ಪಿತಾ ರಕ್ಷಸಾಮಗ್ರಣೀಃ ಪುರಾ।
07149007c ಪ್ರಯುಜ್ಯ ಕರ್ಮ ರಕ್ಷೋಘ್ನಂ ಕ್ಷುದ್ರೈಃ ಪಾರ್ಥೈರ್ನಿಪಾತಿತಃ।
07149007e ತಸ್ಯಾಪಚಿತಿಮಿಚ್ಚಾಮಿ ತ್ವದ್ದಿಷ್ಟೋ ಗಂತುಮೀಶ್ವರ।।

ರಾಕ್ಷಸರ ಅಗ್ರಣಿ ಜಟಾಸುರನೇ ನನ್ನ ತಂದೆ. ಹಿಂದೆ ಅವನು ರಾಕ್ಷಸರನ್ನು ಸಂಹರಿಸುವ ಕಾರ್ಯಮಾಡುತ್ತಿದ್ದ ಈ ಕ್ಷುದ್ರ ಪಾರ್ಥರಿಂದ ವಧಿಸಲ್ಪಟ್ಟನು. ಅದರ ಪ್ರತೀಕಾರವನ್ನು ಬಯಸುತ್ತೇನೆ. ಈಶ್ವರ! ನನಗೆ ಅನುಜ್ಞೆಯನ್ನು ದಯಪಾಲಿಸು!”

07149008a ತಮಬ್ರವೀತ್ತತೋ ರಾಜಾ ಪ್ರೀಯಮಾಣಃ ಪುನಃ ಪುನಃ।
07149008c ದ್ರೋಣಕರ್ಣಾದಿಭಿಃ ಸಾರ್ಧಂ ಪರ್ಯಾಪ್ತೋಽಹಂ ದ್ವಿಷದ್ವಧೇ।
07149008e ತ್ವಂ ತು ಗಚ್ಚ ಮಯಾಜ್ಞಪ್ತೋ ಜಹಿ ಯುದ್ಧಂ ಘಟೋತ್ಕಚಂ।।

ಪುನಃ ಪುನಃ ಪ್ರೀತಿತೋರಿಸುವ ರಾಜನು ಅವನಿಗೆ ಹೇಳಿದನು: “ಶತ್ರುಗಳ ವಧೆಗೆ ದ್ರೋಣ-ಕರ್ಣಾದಿಗಳೊಡನೆ ನಾನು ಸಾಕು. ನೀನಾದರೋ ಹೋಗಿ ಯುದ್ಧದಲ್ಲಿ ಘಟೋತ್ಕಚನನ್ನು ಸಂಹರಿಸು!”

07149009a ತಥೇತ್ಯುಕ್ತ್ವಾ ಮಹಾಕಾಯಃ ಸಮಾಹೂಯ ಘಟೋತ್ಕಚಂ।
07149009c ಜಟಾಸುರಿರ್ಭೈಮಸೇನಿಂ ನಾನಾಶಸ್ತ್ರೈರವಾಕಿರತ್।।

ಹಾಗೆಯೇ ಆಗಲೆಂದು ಹೇಳಿ ಮಹಾಕಾಯ ಜಟಾಸುರಿಯು ಭೈಮಸೇನಿ ಘಟೋತ್ಕಚನನ್ನು ಕೂಗಿ ಕರೆದು ನಾನಾಶಸ್ತ್ರಗಳಿಂದ ಮುಸುಕಿದನು.

07149010a ಅಲಂಬಲಂ ಚ ಕರ್ಣಂ ಚ ಕುರುಸೈನ್ಯಂ ಚ ದುಸ್ತರಂ।
07149010c ಹೈಡಿಂಬಃ ಪ್ರಮಮಾಥೈಕೋ ಮಹಾವಾತೋಽಂಬುದಾನಿವ।।

ಹೈಡಿಂಬನು ಒಬ್ಬನೇ ಕರ್ಣನನ್ನೂ, ದುಸ್ತರ ಕುರುಸೈನ್ಯವನ್ನೂ, ಅಲಂಬಲನನ್ನೂ ಭಿರುಗಾಳಿಯು ಮೋಡವನ್ನು ಹೇಗೋ ಹಾಗೆ ಚದುರಿಸಿಬಿಟ್ಟನು.

07149011a ತತೋ ಮಾಯಾಮಯಂ ದೃಷ್ಟ್ವಾ ರಥಂ ತೂರ್ಣಮಲಂಬಲಃ।
07149011c ಘಟೋತ್ಕಚಂ ಶರವ್ರಾತೈರ್ನಾನಾಲಿಂಗೈಃ ಸಮಾರ್ದಯತ್।।

ಆಗ ಮಾಯಾಮಯ ಘಟೋತ್ಕಚನನ್ನು ನೋಡಿ ಅಲಂಬಲನು ಅವನನ್ನು ಶರವ್ರಾತಗಳಿಂದ ಕಾಣದಂತೆ ಮುಚ್ಚಿಬಿಟ್ಟನು.

07149012a ವಿದ್ಧ್ವಾ ಚ ಬಹುಭಿರ್ಬಾಣೈರ್ಭೈಮಸೇನಿಮಲಂಬಲಃ।
07149012c ವ್ಯದ್ರಾವಯಚ್ಚರವ್ರಾತೈಃ ಪಾಂಡವಾನಾಮನೀಕಿನೀಂ।।

ಬಹಳ ಬಾಣಗಳಿಂದ ಭೈಮಸೇನಿಯನ್ನು ಗಾಯಗೊಳಿಸಿ ಅಲಂಬಲನು ಶರವ್ರಾತಗಳಿಂದ ಪಾಂಡವರ ಸೇನೆಯನ್ನು ಮುತ್ತಿದನು.

07149013a ತೇನ ವಿದ್ರಾವ್ಯಮಾಣಾನಿ ಪಾಂಡುಸೈನ್ಯಾನಿ ಮಾರಿಷ।
07149013c ನಿಶೀಥೇ ವಿಪ್ರಕೀರ್ಯಂತ ವಾತನುನ್ನಾ ಘನಾ ಇವ।।

ಮಾರಿಷ! ಆ ರಾತ್ರಿವೇಳೆಯಲ್ಲಿ ಓಡಿ ಹೋಗುತ್ತಿದ್ದ ಪಾಂಡು ಸೇನೆಗಳು ಭಿರುಗಾಳಿಗೆ ಸಿಲುಕಿ ಚದುರಿ ಹೋಗುತ್ತಿರುವ ಮೋಡಗಳಂತೆ ಕಾಣುತ್ತಿದ್ದವು.

07149014a ಘಟೋತ್ಕಚಶರೈರ್ನುನ್ನಾ ತಥೈವ ಕುರುವಾಹಿನೀ।
07149014c ನಿಶೀಥೇ ಪ್ರಾದ್ರವದ್ರಾಜನ್ನುತ್ಸೃಜ್ಯೋಲ್ಕಾಃ ಸಹಸ್ರಶಃ।।

ಅದೇ ರೀತಿ ಘಟೋತ್ಕಚನ ಶರಗಳಿಗೆ ಸಿಲುಕಿದ ಕುರುವಾಹಿನಿಯೂ ಕೂಡ ಆ ದಟ್ಟ ರಾತ್ರಿಯಲ್ಲಿ ಸಹಸ್ರಾರು ದೀವಟಿಗೆಗಳನ್ನು ಬಿಸುಟು ಓಡಿಹೋಗುತ್ತಿತ್ತು.

07149015a ಅಲಂಬಲಸ್ತತಃ ಕ್ರುದ್ಧೋ ಭೈಮಸೇನಿಂ ಮಹಾಮೃಧೇ।
07149015c ಆಜಘ್ನೇ ನಿಶಿತೈರ್ಬಾಣೈಸ್ತೋತ್ತ್ರೈರಿವ ಮಹಾದ್ವಿಪಂ।।

ಕ್ರುದ್ಧ ಅಲಂಬಲನಾದರೋ ಆ ಮಹಾಯುದ್ಧದಲ್ಲಿ ಭೈಮಸೇನಿಯನ್ನು ಮಾವುತನು ಆನೆಯನ್ನು ತಿವಿಯುವಂತೆ ನಿಶಿತ ಬಾಣಗಳಿಂದ ಹೊಡೆದನು.

07149016a ತಿಲಶಸ್ತಸ್ಯ ತದ್ಯಾನಂ ಸೂತಂ ಸರ್ವಾಯುಧಾನಿ ಚ।
07149016c ಘಟೋತ್ಕಚಃ ಪ್ರಚಿಚ್ಚೇದ ಪ್ರಾಣದಚ್ಚಾತಿದಾರುಣಂ।।

ಆಗ ಕ್ಷಣದಲ್ಲಿಯೇ ಘಟೋತ್ಕಚನು ತನ್ನ ಶತ್ರುವಿನ ರಥವನ್ನೂ, ಸೂತನನ್ನೂ, ಸರ್ವ ಆಯುಧಗಳನ್ನೂ ಪುಡಿಪುಡಿಮಾಡಿ, ಅತಿದಾರುಣವಾಗಿ ಗಹಗಹಿಸಿ ನಕ್ಕನು.

07149017a ತತಃ ಕರ್ಣಂ ಶರವ್ರಾತೈಃ ಕುರೂನನ್ಯಾನ್ಸಹಸ್ರಶಃ।
07149017c ಅಲಂಬಲಂ ಚಾಭ್ಯವರ್ಷನ್ಮೇಘೋ ಮೇರುಮಿವಾಚಲಂ।।

ಅನಂತರ ಅವನು ಕರ್ಣನನ್ನೂ, ಅನ್ಯ ಕುರುಗಳನ್ನೂ ಮತ್ತು ಅಲಂಬಲನನ್ನೂ ಸಹಸ್ರಾರು ಶರವ್ರಾತಗಳಿಂದ ಮೇಘಗಳು ಮೇರುಪರ್ವತವನ್ನು ಹೇಗೋ ಹಾಗೆ ವರ್ಷಿಸಿದನು.

07149018a ತತಃ ಸಂಚುಕ್ಷುಭೇ ಸೈನ್ಯಂ ಕುರೂಣಾಂ ರಾಕ್ಷಸಾರ್ದಿತಂ।
07149018c ಉಪರ್ಯುಪರಿ ಚಾನ್ಯೋನ್ಯಂ ಚತುರಂಗಂ ಮಮರ್ದ ಹ।।

ರಾಕ್ಷಸನಿಂದ ಆರ್ದಿತಗೊಂಡ ಕುರುಗಳ ಸೇನೆಯಲ್ಲಿ ಅಲ್ಲೋಲಕಲ್ಲೋಲವಾಯಿತು. ಮೇಲಿಂದಮೇಲೆ ಚತುರಂಗಬಲವು ಅನ್ಯೋನ್ಯರನ್ನು ಸಂಹರಿಸತೊಡಗಿತು.

07149019a ಜಟಾಸುರಿರ್ಮಹಾರಾಜ ವಿರಥೋ ಹತಸಾರಥಿಃ।
07149019c ಘಟೋತ್ಕಚಂ ರಣೇ ಕ್ರುದ್ಧೋ ಮುಷ್ಟಿನಾಭ್ಯಹನದ್ದೃಢಂ।।

ಮಹಾರಾಜ! ವಿರಥನಾದ ಸಾರಥಿಯನ್ನೂ ಕಳೆದುಕೊಂಡ ಜಟಾಸುರಿಯು ರಣದಲ್ಲಿ ಕ್ರುದ್ಧನಾಗಿ ಘಟೋತ್ಕಚನನ್ನು ದೃಡ ಮುಷ್ಟಿಯಿಂದ ಹೊಡೆಯತೊಡಗಿದನು.

07149020a ಮುಷ್ಟಿನಾಭಿಹತಸ್ತೇನ ಪ್ರಚಚಾಲ ಘಟೋತ್ಕಚಃ।
07149020c ಕ್ಷಿತಿಕಂಪೇ ಯಥಾ ಶೈಲಃ ಸವೃಕ್ಷಗಣಗುಲ್ಮವಾನ್।।

ಅವನ ಮುಷ್ಟಿಯಿಂದ ಹೊಡೆಯಲ್ಪಟ್ಟ ಘಟೋತ್ಕಚನು ಭೂಕಂಪವಾದಾಗ ವೃಕ್ಷಗಣಗುಲ್ಮಲಗಳೊಡನೆ ಶೈಲವು ಅಲುಗಾಡುವಂತೆ ತತ್ತರಿಸಿದನು.

07149021a ತತಃ ಸ ಪರಿಘಾಭೇನ ದ್ವಿಟ್ಸಂಘಘ್ನೇನ ಬಾಹುನಾ।
07149021c ಜಟಾಸುರಿಂ ಭೈಮಸೇನಿರವಧೀನ್ಮುಷ್ಟಿನಾ ಭೃಶಂ।।

ಆಗ ಭೈಮಸೇನಿಯು ಪರಿಘದಂತಿದ್ದ ತನ್ನ ಬಾಹುಗಳನ್ನು ಮೇಲೆತ್ತಿ ಮುಷ್ಟಿಯಿಂದ ಜಟಾಸುರಿಯನ್ನು ಜೋರಾಗಿ ಗುದ್ದಿದನು.

07149022a ತಂ ಪ್ರಮಥ್ಯ ತತಃ ಕ್ರುದ್ಧಸ್ತೂರ್ಣಂ ಹೈಡಿಂಬಿರಾಕ್ಷಿಪತ್।
07149022c ದೋರ್ಭ್ಯಾಮಿಂದ್ರಧ್ವಜಾಭಾಭ್ಯಾಂ ನಿಷ್ಪಿಪೇಷ ಮಹೀತಲೇ।।

ಕ್ರುದ್ಧ ಹೈಡಿಂಬನು ತಕ್ಷಣವೇ ಅವನನ್ನು ಕೆಳಕ್ಕೆ ಕೆಡವಿ ತನ್ನ ಎರಡೂ ಬಾಹುಗಳಿಂದ ಅವನನ್ನು ನೆಲಕ್ಕೆ ಅದುಮಿದನು.

07149023a ಅಲಂಬಲೋಽಪಿ ವಿಕ್ಷಿಪ್ಯ ಸಮುತ್ಕ್ಷಿಪ್ಯ ಚ ರಾಕ್ಷಸಂ।
07149023c ಘಟೋತ್ಕಚಂ ರಣೇ ರೋಷಾನ್ನಿಷ್ಪಿಪೇಷ ಮಹೀತಲೇ।।

ಅಲಂಬಲನಾದರೋ ಆ ರಾಕ್ಷಸನ ಹಿಡಿತದಿಂದ ಬಿಡಿಸಿಕೊಂಡು ರಣದಲ್ಲಿ ರೋಷಾನ್ವಿತನಾಗಿ ಘಟೋತ್ಕಚನನ್ನು ನೆಲಕ್ಕೆ ಕೆಡವಿದನು.

07149024a ತಯೋಃ ಸಮಭವದ್ಯುದ್ಧಂ ಗರ್ಜತೋರತಿಕಾಯಯೋಃ।
07149024c ಘಟೋತ್ಕಚಾಲಂಬಲಯೋಸ್ತುಮುಲಂ ಲೋಮಹರ್ಷಣಂ।।

ಆಗ ಅತಿಕಾಯರಾದ ಘಟೋತ್ಕಚ-ಅಲಂಬಲರಿಬ್ಬರ ನಡುವೆ ರೋಮಾಂಚಕಾರೀ ತುಮುಲ ಯುದ್ಧವು ಪ್ರಾರಂಬವಾಯಿತು.

07149025a ವಿಶೇಷಯಂತಾವನ್ಯೋನ್ಯಂ ಮಾಯಾಭಿರತಿಮಾಯಿನೌ।
07149025c ಯುಯುಧಾತೇ ಮಹಾವೀರ್ಯಾವಿಂದ್ರವೈರೋಚನಾವಿವ।।

ಅನ್ಯೋನ್ಯರನ್ನು ಮೀರಿಸುತ್ತಾ ಆ ಮಯಾವಿ ಮತ್ತು ಅತಿಮಾಯಿ ಮಹಾವೀರರಿಬ್ಬರೂ ಇಂದ್ರ –ವೈರೋಚನರಂತೆ ಯುದ್ಧಮಾಡಿದರು.

07149026a ಪಾವಕಾಂಬುನಿಧೀ ಭೂತ್ವಾ ಪುನರ್ಗರುಡತಕ್ಷಕೌ।
07149026c ಪುನರ್ಮೇಘಮಹಾವಾತೌ ಪುನರ್ವಜ್ರಮಹಾಚಲೌ।
07149026e ಪುನಃ ಕುಂಜರಶಾರ್ದೂಲೌ ಪುನಃ ಸ್ವರ್ಭಾನುಭಾಸ್ಕರೌ।।
07149027a ಏವಂ ಮಾಯಾಶತಸೃಜಾವನ್ಯೋನ್ಯವಧಕಾಂಕ್ಷಿಣೌ।
07149027c ಭೃಶಂ ಚಿತ್ರಮಯುಧ್ಯೇತಾಮಲಂಬಲಘಟೋತ್ಕಚೌ।।

ಅಗ್ನಿ ಮತ್ತು ನೀರಾಗಿ, ಪುನಃ ಗರುಡ-ತಕ್ಷಕರಾಗಿ, ಪುನಃ ಮೋಡ-ಭಿರುಗಾಳಿಗಳಾಗಿ, ಪುನಃ ವಜ್ರ-ಮಹಾಚಲಗಳಾಗಿ, ಪುನಃ ಆನೆ-ಸಿಂಹಗಳಾಗಿ, ಪುನಃ ರಾಹು-ಭಾಸ್ಕರರಾಗಿ - ಈ ರೀತಿ ನೂರಾರು ಮಾಯೆಗಳನ್ನು ಸೃಷ್ಟಿಸುತ್ತಾ ಅನ್ಯೋನ್ಯರನ್ನು ವಧಿಸಲು ಬಯಸಿ ಅಲಂಬಲ ಘಟೋತ್ಕಚರು ಅತ್ಯಂತ ವಿಚಿತ್ರವಾದ ಯುದ್ಧವನ್ನು ಹೋರಾಡಿದರು.

07149028a ಪರಿಘೈಶ್ಚ ಗದಾಭಿಶ್ಚ ಪ್ರಾಸಮುದ್ಗರಪಟ್ಟಿಶೈಃ।
07149028c ಮುಸಲೈಃ ಪರ್ವತಾಗ್ರೈಶ್ಚ ತಾವನ್ಯೋನ್ಯಂ ನಿಜಘ್ನತುಃ।।

ಪರಿಘ, ಗದೆ, ಪ್ರಾಸ, ಮುದ್ಗರ, ಪಟ್ಟಿಶ, ಮುಸಲ, ಪರ್ವತಾಗ್ರಗಳಿಂದ ಅವರು ಅನ್ಯೋನ್ಯರನ್ನು ಹೊಡೆದರು.

07149029a ಹಯಾಭ್ಯಾಂ ಚ ಗಜಾಭ್ಯಾಂ ಚ ಪದಾತಿರಥಿನೌ ಪುನಃ।
07149029c ಯುಯುಧಾತೇ ಮಹಾಮಾಯೌ ರಾಕ್ಷಸಪ್ರವರೌ ಯುಧಿ।।

ಮಹಾಮಾಯಾವಿ ಆ ರಾಕ್ಷಸಪ್ರವರರು ಯುದ್ಧದಲ್ಲಿ ಕುದುರೆಗಳ ಮೇಲೆ, ಆನೆಗಳ ಮೇಲೆ, ಪದಾತಿಗಳಾಗಿ ಮತ್ತೆ ಪುನಃ ರಥಗಳ ಮೇಳೆ ಯುದ್ಧಮಾಡಿದರು.

07149030a ತತೋ ಘಟೋತ್ಕಚೋ ರಾಜನ್ನಲಂಬಲವಧೇಪ್ಸಯಾ।
07149030c ಉತ್ಪಪಾತ ಭೃಶಂ ಕ್ರುದ್ಧಃ ಶ್ಯೇನವನ್ನಿಪಪಾತ ಹ।।
07149031a ಗೃಹೀತ್ವಾ ಚ ಮಹಾಕಾಯಂ ರಾಕ್ಷಸೇಂದ್ರಮಲಂಬಲಂ।
07149031c ಉದ್ಯಮ್ಯ ನ್ಯವಧೀದ್ಭೂಮೌ ಮಯಂ ವಿಷ್ಣುರಿವಾಹವೇ।।

ರಾಜನ್! ಆಗ ಘಟೋತ್ಕಚನು ಅಲಂಬಲನನ್ನು ವಧಿಸಲು ಬಯಸಿ ಬಹಳ ಕ್ರುದ್ಧನಾಗಿ ಗಿಡುಗನಂತೆ ಮೇಲೆ ಹಾರಿ ಕೆಳಗೆ ಧುಮುಕಿ, ಆ ಮಹಾಕಾಯ ರಾಕ್ಷಸ ಅಲಂಬಲನನ್ನು ವಿಷ್ಣುವು ಯುದ್ಧದಲ್ಲಿ ಮಯನನ್ನು ಹೇಗೋ ಹಾಗೆ ಹಿಡಿದು ಮೇಲೆ ಹಾರಿ ಕೆಳಗೆ ನೆಲದ ಮೇಲೆ ಚಚ್ಚಿದನು.

07149032a ತತೋ ಘಟೋತ್ಕಚಃ ಖಡ್ಗಮುದ್ಗೃಹ್ಯಾದ್ಭುತದರ್ಶನಂ।
07149032c ಚಕರ್ತ ಕಾಯಾದ್ಧಿ ಶಿರೋ ಭೀಮಂ ವಿಕೃತದರ್ಶನಂ।।

ಆಗ ಘಟೋತ್ಕಚನು ಅದ್ಭುತವಾಗಿ ಕಾಣುತ್ತಿದ್ದ ಖಡ್ಗವನ್ನು ಮೇಲೆತ್ತಿ ವಿಕೃತವಾಗಿ ಕಾಣುತ್ತಿದ್ದ ಅಲಂಬಲನ ಶಿರವನ್ನು ಕಾಯದಿಂದ ಕತ್ತರಿಸಿದನು.

07149033a ತಚ್ಚಿರೋ ರುಧಿರಾಭ್ಯಕ್ತಂ ಗೃಹ್ಯ ಕೇಶೇಷು ರಾಕ್ಷಸಃ।
07149033c ಘಟೋತ್ಕಚೋ ಯಯಾವಾಶು ದುರ್ಯೋಧನರಥಂ ಪ್ರತಿ।।

ರಕ್ತವನ್ನು ಸುರಿಸುತ್ತಿದ್ದ ಆ ಶಿರವನ್ನು ಕೂದಲಿನಲ್ಲಿ ಹಿಡಿದು ರಾಕ್ಷಸ ಘಟೋತ್ಕಚನು ದುರ್ಯೋಧನನ ರಥದ ಕಡೆ ನಡೆದನು.

07149034a ಅಭ್ಯೇತ್ಯ ಚ ಮಹಾಬಾಹುಃ ಸ್ಮಯಮಾನಃ ಸ ರಾಕ್ಷಸಃ।
07149034c ರಥೇಽಸ್ಯ ನಿಕ್ಷಿಪ್ಯ ಶಿರೋ ವಿಕೃತಾನನಮೂರ್ಧಜಂ।
07149034e ಪ್ರಾಣದದ್ಭೈರವಂ ನಾದಂ ಪ್ರಾವೃಷೀವ ಬಲಾಹಕಃ।।

ಅವನ ಬಳಿ ಹೋಗಿ ನಗುತ್ತಾ ಮಹಾಬಾಹು ರಾಕ್ಷಸನು ವಿಕಾರ ಕೂದಲುಗಳುಳ್ಳ ಆ ಶಿರವನ್ನು ಅವನ ರಥದ ಮೇಲೆ ಎಸೆದು ಮಳೆಗಾಲದ ಮೋಡದಂತೆ ಭೈರವವಾಗಿ ಗರ್ಜಿಸಿದನು.

07149035a ಅಬ್ರವೀಚ್ಚ ತತೋ ರಾಜನ್ದುರ್ಯೋಧನಮಿದಂ ವಚಃ।
07149035c ಏಷ ತೇ ನಿಹತೋ ಬಂಧುಸ್ತ್ವಯಾ ದೃಷ್ಟೋಽಸ್ಯ ವಿಕ್ರಮಃ।
07149035e ಪುನರ್ದ್ರಷ್ಟಾಸಿ ಕರ್ಣಸ್ಯ ನಿಷ್ಠಾಮೇತಾಂ ತಥಾತ್ಮನಃ।।

ರಾಜನ್! ಆಗ ಅವನು ದುರ್ಯೋಧನನಿಗೆ ಈ ಮಾತನ್ನಾಡಿದನು: “ಇಗೋ! ನಿನ್ನ ವಿಕ್ರಮಿ ಬಂಧುವು ಹತನಾಗಿರುವುದನ್ನು ನೋಡು! ಇವನಂತೆಯೇ ನಿನಗೆ ನಿಷ್ಠನಾಗಿರುವ ಕರ್ಣನನ್ನೂ ಕೂಡ ಪುನಃ ನೋಡಲಿದ್ದೀಯೆ!”

07149036a ಏವಮುಕ್ತ್ವಾ ತತಃ ಪ್ರಾಯಾತ್ಕರ್ಣಂ ಪ್ರತಿ ಜನೇಶ್ವರ।
07149036c ಕಿರಂ ಶರಶತಾಂಸ್ತೀಕ್ಷ್ಣಾನ್ವಿಮುಂಚನ್ಕರ್ಣಮೂರ್ಧನಿ।।

ಜನೇಶ್ವರ! ಹೀಗೆ ಹೇಳಿ ಅವನು ಕರ್ಣನ ಮೇಲೆ ನೂರಾರು ತೀಕ್ಷ್ಣ ಶರಗಳನ್ನು ಎರಚುತ್ತಾ ಅವನ ಕಡೆಗೇ ಹೋದನು.

07149037a ತತಃ ಸಮಭವದ್ಯುದ್ಧಂ ಘೋರರೂಪಂ ಭಯಾನಕಂ।
07149037c ವಿಸ್ಮಾಪನಂ ಮಹಾರಾಜ ನರರಾಕ್ಷಸಯೋರ್ಮೃಧೇ।।

ಮಹಾರಾಜ! ಅನಂತರ ಆ ನರ-ರಾಕ್ಷಸರ ಮಧ್ಯೆ ರಣದಲ್ಲಿ ಘೋರರೂಪದ, ಭಯಾನಕ, ವಿಸ್ಮಯದಾಯಕ ಯುದ್ಧವು ನಡೆಯಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಅಲಂಬುಷವಧೇ ಏಕೋನಪಂಚಾಶದಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಅಲಂಬುಷವಧ ಎನ್ನುವ ನೂರಾನಲ್ವತ್ತೊಂಭನೇ ಅಧ್ಯಾಯವು.