ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಘಟೋತ್ಕಚವಧ ಪರ್ವ
ಅಧ್ಯಾಯ 148
ಸಾರ
ಕರ್ಣ-ಧೃಷ್ಟದ್ಯುಮ್ನರ ಯುದ್ಧ (1-7). ಕರ್ಣನ ಪರಾಕ್ರಮ; ಪಾಂಡವ ಸೇನೆಯ ಪಲಾಯನ (8-19). ಯುಧಿಷ್ಠಿರನು ಅರ್ಜುನನನಿಗೆ ಕರ್ಣನನ್ನು ಎದುರಿಸಲು ಹೇಳಿದುದು (20-24). ಕೃಷ್ಣಾರ್ಜುನರ ಸಂವಾದ (25-36). ಆಗ ಕೃಷ್ಣ-ಅರ್ಜುನರು ಕರ್ಣನೊಡನೆ ಯುದ್ಧಮಾಡಲು ಘಟೋತ್ಕಚನನ್ನು ಪ್ರೋತ್ಸಾಹಿಸಿದುದು (37-56). ಘಟೋತ್ಕಚನು ಒಪ್ಪಿಕೊಂಡು ಕರ್ಣನನ್ನು ಎದುರಿಸಿದುದು (57-62).
07148001 ಸಂಜಯ ಉವಾಚ।
07148001a ತತಃ ಕರ್ಣೋ ರಣೇ ದೃಷ್ಟ್ವಾ ಪಾರ್ಷತಂ ಪರವೀರಹಾ।
07148001c ಆಜಘಾನೋರಸಿ ಶರೈರ್ದಶಭಿರ್ಮರ್ಮಭೇದಿಭಿಃ।।
ಸಂಜಯನು ಹೇಳಿದನು: “ಆಗ ಪರವೀರಹ ಕರ್ಣನು ಪಾರ್ಷತನನ್ನು ನೋಡಿ ಅವನ ಎದೆಗೆ ಹತ್ತು ಮರ್ಮಭೇದಿಗಳಿಂದ ಹೊಡೆದನು.
07148002a ಪ್ರತಿವಿವ್ಯಾಧ ತಂ ತೂರ್ಣಂ ಧೃಷ್ಟದ್ಯುಮ್ನೋಽಪಿ ಮಾರಿಷ।
07148002c ಪಂಚಭಿಃ ಸಾಯಕೈರ್ಹೃಷ್ಟಸ್ತಿಷ್ಠ ತಿಷ್ಠೇತಿ ಚಾಬ್ರವೀತ್।।
ಮಾರಿಷ! ಕೂಡಲೆ ಧೃಷ್ಟದ್ಯುಮ್ನನು ಕೂಡ ಅವನನ್ನು ಐದು ಸಾಯಕಗಳಿಂದ ಹೊಡೆದು “ನಿಲ್ಲು! ನಿಲ್ಲು!” ಎಂದು ಕೂಗಿದನು.
07148003a ತಾವನ್ಯೋನ್ಯಂ ಶರೈಃ ಸಂಖ್ಯೇ ಸಂಚಾದ್ಯ ಸುಮಹಾರಥೌ।
07148003c ಪುನಃ ಪೂರ್ಣಾಯತೋತ್ಸೃಷ್ಟೈರ್ವಿವ್ಯಧಾತೇ ಪರಸ್ಪರಂ।।
ಅವರಿಬ್ಬರು ಮಹಾರಥರೂ ಅನ್ಯೋನ್ಯರನ್ನು ರಣದಲ್ಲಿ ಶರಗಳಿಂದ ಮುಚ್ಚಿ ಪೂರ್ಣವಾಗಿ ಸೆಳೆದು ಬಿಟ್ಟ ಬಾಣಗಳಿಂದ ಪುನಃ ಪರಸ್ಪರರನ್ನು ಗಾಯಗೊಳಿಸಿದರು.
07148004a ತತಃ ಪಾಂಚಾಲಮುಖ್ಯಸ್ಯ ಧೃಷ್ಟದ್ಯುಮ್ನಸ್ಯ ಸಮ್ಯುಗೇ।
07148004c ಸಾರಥಿಂ ಚತುರಶ್ಚಾಶ್ವಾನ್ಕರ್ಣೋ ವಿವ್ಯಾಧ ಸಾಯಕೈಃ।।
ಆಗ ಸಂಯುಗದಲ್ಲಿ ಕರ್ಣನು ಪಾಂಚಾಲಮುಖ್ಯ ಧೃಷ್ಟದ್ಯುಮ್ನನ ಸಾರಥಿಯನ್ನೂ ನಾಲ್ಕು ಕುದುರೆಗಳನ್ನೂ ಸಾಯಕಗಳಿಂದ ಹೊಡೆದನು.
07148005a ಕಾರ್ಮುಕಪ್ರವರಂ ಚಾಸ್ಯ ಪ್ರಚಿಚ್ಚೇದ ಶಿತೈಃ ಶರೈಃ।
07148005c ಸಾರಥಿಂ ಚಾಸ್ಯ ಭಲ್ಲೇನ ರಥನೀಡಾದಪಾತಯತ್।।
ಅವನ ಕಾರ್ಮುಕಪ್ರವರವನ್ನು ನಿಶಿತ ಶರಗಳಿಂದ ತುಂಡರಿಸಿದನು ಮತ್ತು ಭಲ್ಲದಿಂದ ಅವನ ಸಾರಥಿಯನ್ನು ಆಸನದಿಂದ ಬೀಳಿಸಿದನು.
07148006a ಧೃಷ್ಟದ್ಯುಮ್ನಸ್ತು ವಿರಥೋ ಹತಾಶ್ವೋ ಹತಸಾರಥಿಃ।
07148006c ಗೃಹೀತ್ವಾ ಪರಿಘಂ ಘೋರಂ ಕರ್ಣಸ್ಯಾಶ್ವಾನಪೀಪಿಷತ್।।
ಧೃಷ್ಟದ್ಯುಮ್ನನಾದರೋ ಕುದುರೆಗಳು ಹತವಾಗಿ ಸಾರಥಿಯು ಹತನಾಗಿ ವಿರಥನಾದನು ಮತ್ತು ಘೋರ ಪರಿಘವನ್ನು ಹಿಡಿದು ಕರ್ಣನ ಕುದುರೆಗಳನ್ನು ಅರೆದನು.
07148007a ವಿದ್ಧಶ್ಚ ಬಹುಭಿಸ್ತೇನ ಶರೈರಾಶೀವಿಷೋಪಮೈಃ।
07148007c ತತೋ ಯುಧಿಷ್ಠಿರಾನೀಕಂ ಪದ್ಭ್ಯಾಮೇವಾನ್ವವರ್ತತ।
07148007e ಆರುರೋಹ ರಥಂ ಚಾಪಿ ಸಹದೇವಸ್ಯ ಮಾರಿಷ।।
ಕರ್ಣನ ಸರ್ಪಗಳ ವಿಷದಂತಿದ್ದ ಬಾಣಗಳಿಂದ ಬಹಳ ಪೀಡಿತನಾದ ಧೃಷ್ಟದ್ಯುಮ್ನನು ಕಾಲ್ನಡುಗೆಯಲ್ಲಿಯೇ ಯುಧಿಷ್ಠಿರನ ಸೇನೆಯನ್ನು ಸೇರಿಕೊಂಡನು. ಮಾರಿಷ! ಅಲ್ಲಿ ಅವನು ಸಹದೇವನ ರಥವನ್ನೇರಿದನು.
07148008a ಕರ್ಣಸ್ಯಾಪಿ ರಥೇ ವಾಹಾನನ್ಯಾನ್ಸೂತೋ ನ್ಯಯೋಜಯತ್।
07148008c ಶಂಖವರ್ಣಾನ್ಮಹಾವೇಗಾನ್ಸೈಂಧವಾನ್ಸಾಧುವಾಹಿನಃ।।
ಕರ್ಣನ ರಥಕ್ಕೆ ಕೂಡ ಅವನ ಸೂತನು ಅನ್ಯ ಕುದುರೆಗಳನ್ನು – ಶಂಖವರ್ಣದ ಮಹಾವೇಗದ ಸುಶಿಕ್ಷಿತ ಸೈಂಧವ ಕುದುರೆಗಳನ್ನು ಕಟ್ಟಿದನು.
07148009a ಲಬ್ಧಲಕ್ಷ್ಯಸ್ತು ರಾಧೇಯಃ ಪಾಂಚಾಲಾನಾಂ ಮಹಾರಥಾನ್।
07148009c ಅಭ್ಯಪೀಡಯದಾಯಸ್ತಃ ಶರೈರ್ಮೇಘ ಇವಾಚಲಾನ್।।
ರಾಧೇಯನು ತನ್ನ ಲಕ್ಷ್ಯ ಮಹಾರಥ ಪಾಂಚಾಲರನ್ನು ಪಡೆದು ಅವರನ್ನು ಮೇಘಗಳು ಪರ್ವತವನ್ನು ಹೇಗೋ ಹಾಗೆ ಶರಗಳನ್ನು ಸುರಿದು ಪೀಡಿಸಿದನು.
07148010a ಸಾ ಪೀಡ್ಯಮಾನಾ ಕರ್ಣೇನ ಪಾಂಚಾಲಾನಾಂ ಮಹಾಚಮೂಃ।
07148010c ಸಂಪ್ರಾದ್ರವತ್ಸುಸಂತ್ರಸ್ತಾ ಸಿಂಹೇನೇವಾರ್ದಿತಾ ಮೃಗೀ।।
ಕರ್ಣನಿಂದ ಹಾಗೆ ಪೀಡಿಸಲ್ಪಟ್ಟ ಪಾಂಚಾಲರ ಆ ಮಹಾಸೇನೆಯು ಸಿಂಹದಿಂದ ಕಾಡಲ್ಪಟ್ಟ ಜಿಂಕೆಯಂತೆ ಭಯದಿಂದ ತತ್ತರಿಸಿ ಓಡತೊಡಗಿತು.
07148011a ಪತಿತಾಸ್ತುರಗೇಭ್ಯಶ್ಚ ಗಜೇಭ್ಯಶ್ಚ ಮಹೀತಲೇ।
07148011c ರಥೇಭ್ಯಶ್ಚ ನರಾಸ್ತೂರ್ಣಮದೃಶ್ಯಂತ ತತಸ್ತತಃ।।
ಕ್ಷಣದಲ್ಲಿಯೇ ರಣಭೂಮಿಯಲ್ಲಿ ಅಲ್ಲಲ್ಲಿ ಬಿದ್ದಿದ್ದ ಕುದುರೆಗಳೂ, ಆನೆಗಳೂ, ರಥಗಳೂ, ಮನುಷ್ಯರೂ ಕಂಡುಬಂದರು.
07148012a ಧಾವಮಾನಸ್ಯ ಯೋಧಸ್ಯ ಕ್ಷುರಪ್ರೈಃ ಸ ಮಹಾಮೃಧೇ।
07148012c ಬಾಹೂ ಚಿಚ್ಚೇದ ವೈ ಕರ್ಣಃ ಶಿರಶ್ಚೈವ ಸಕುಂಡಲಂ।।
ಆ ಮಹಾಯುದ್ಧದಲ್ಲಿ ಕರ್ಣನು ಓಡಿಹೋಗುತ್ತಿದ್ದ ಯೋಧರ ಬಾಹುಗಳನ್ನೂ ಕುಂಡಲಗಳೊಂದಿಗಿನ ಶಿರಗಳನ್ನೂ ಕತ್ತರಿಸಿದನು.
07148013a ಊರೂ ಚಿಚ್ಚೇದ ಚಾನ್ಯಸ್ಯ ಗಜಸ್ಥಸ್ಯ ವಿಶಾಂ ಪತೇ।
07148013c ವಾಜಿಪೃಷ್ಠಗತಸ್ಯಾಪಿ ಭೂಮಿಷ್ಠಸ್ಯ ಚ ಮಾರಿಷ।।
ಮಾರಿಷ! ವಿಶಾಂಪತೇ! ಅನ್ಯ ಗಜಾರೂಢರ ಅಶ್ವಾರೂಢರ ಮತ್ತು ಪದಾತಿಗಳ ತೊಡೆಗಳನ್ನು ಕತ್ತರಿಸಿದನು.
07148014a ನಾಜ್ಞಾಸಿಷುರ್ಧಾವಮಾನಾ ಬಹವಶ್ಚ ಮಹಾರಥಾಃ।
07148014c ಸಂಚಿನ್ನಾನ್ಯಾತ್ಮಗಾತ್ರಾಣಿ ವಾಹನಾನಿ ಚ ಸಮ್ಯುಗೇ।।
ಓಡಿಹೋಗುತ್ತಿರುವ ಬಹಳಷ್ಟು ಮಹಾರಾಥರಿಗೆ ತಮ್ಮ ಶರೀರದ ಅಂಗಾಂಗಗಳು ಕತ್ತರಿಸಿಹೋದದ್ದು ಅಥವಾ ಕುದುರೆಗಳು ನಾಶಹೊಂದಿದ್ದುದು ತಿಳಿಯುತ್ತಲೇ ಇರಲಿಲ್ಲ.
07148015a ತೇ ವಧ್ಯಮಾನಾಃ ಸಮರೇ ಪಾಂಚಾಲಾಃ ಸೃಂಜಯೈಃ ಸಹ।
07148015c ತೃಣಪ್ರಸ್ಪಂದನಾಚ್ಚಾಪಿ ಸೂತಪುತ್ರಂ ಸ್ಮ ಮೇನಿರೇ।।
ಆ ಸಮರದಲ್ಲಿ ವಧಿಸಲ್ಪಡುತ್ತಿದ್ದ ಸೃಂಜಯರೊಂದಿಗಿನ ಪಾಂಚಾಲರು ಹುಲ್ಲುಕಡ್ಡಿಯು ಹಂದಾಡಿದರೂ ಸೂತಪುತ್ರನೇ ಬಂದನೆಂದು ತಿಳಿದು ಭಯಪಡುತ್ತಿದ್ದರು.
07148016a ಅಪಿ ಸ್ವಂ ಸಮರೇ ಯೋಧಂ ಧಾವಮಾನಂ ವಿಚೇತಸಃ।
07148016c ಕರ್ಣಮೇವಾಭ್ಯಮನ್ಯಂತ ತತೋ ಭೀತಾ ದ್ರವಂತಿ ತೇ।।
ಸಮರದಲ್ಲಿ ತಮ್ಮ ಕಡೆಯ ಯೋಧರು ಓಡಿಬಂದರೂ ಬುದ್ಧಿಗೆಟ್ಟು ಭೀತರಾಗಿ ಕರ್ಣನೇ ಓಡಿಬರುತ್ತಿದ್ದಾನೆಂದು ಭಾವಿಸಿ ಓಡಿಹೋಗುತ್ತಿದ್ದರು.
07148017a ತಾನ್ಯನೀಕಾನಿ ಭಗ್ನಾನಿ ದ್ರವಮಾಣಾನಿ ಭಾರತ।
07148017c ಅಭ್ಯದ್ರವದ್ದ್ರುತಂ ಕರ್ಣಃ ಪೃಷ್ಠತೋ ವಿಕಿರಂ ಶರಾನ್।।
ಭಾರತ! ಆ ಸೇನೆಗಳು ಭಗ್ನವಾಗಿ ಓಡಿಹೋಗುತ್ತಿರಲು ಕರ್ಣನು ಅವರ ಹಿಂದೆಯೇ ಓಡಿ ಹೋಗಿ ಶರಗಳನ್ನು ಸುರಿಯುತ್ತಾ ಹೊಡೆಯುತ್ತಿದ್ದನು.
07148018a ಅವೇಕ್ಷಮಾಣಾಸ್ತೇಽನ್ಯೋನ್ಯಂ ಸುಸಮ್ಮೂಢಾ ವಿಚೇತಸಃ।
07148018c ನಾಶಕ್ನುವನ್ನವಸ್ಥಾತುಂ ಕಾಲ್ಯಮಾನಾ ಮಹಾತ್ಮನಾ।।
ಆ ಮಹಾತ್ಮನಿಂದ ನಾಶಗೊಳ್ಳುತ್ತಿದ್ದ ಅವರು ಸಮ್ಮೂಢರಾಗಿ ಚೇತನವನ್ನೇ ಕಳೆದುಕೊಂಡು ಅನ್ಯೋನ್ಯರನ್ನು ನೋಡುತ್ತಿದ್ದರು. ಅವನ ಎದಿರು ನಿಲ್ಲಲು ಅಶಕ್ಯರಾದರು.
07148019a ಕರ್ಣೇನಾಭ್ಯಾಹತಾ ರಾಜನ್ಪಾಂಚಾಲಾಃ ಪರಮೇಷುಭಿಃ।
07148019c ದ್ರೋಣೇನ ಚ ದಿಶಃ ಸರ್ವಾ ವೀಕ್ಷಮಾಣಾಃ ಪ್ರದುದ್ರುವುಃ।।
ರಾಜನ್! ಕರ್ಣನ ಮತ್ತು ದ್ರೋಣನ ಪರಮ ಬಾಣಗಳಿಂದ ಹತರಾಗುತ್ತಿದ್ದ ಪಾಂಚಾಲರು ಎಲ್ಲ ದಿಕ್ಕುಗಳನ್ನೂ ನೋಡುತ್ತಾ ಪಲಾಯನಗೈದರು.
07148020a ತತೋ ಯುಧಿಷ್ಠಿರೋ ರಾಜಾ ಸ್ವಸೈನ್ಯಂ ಪ್ರೇಕ್ಷ್ಯ ವಿದ್ರುತಂ।
07148020c ಅಪಯಾನೇ ಮತಿಂ ಕೃತ್ವಾ ಫಲ್ಗುನಂ ವಾಕ್ಯಮಬ್ರವೀತ್।।
ಆಗ ರಾಜಾ ಯುಧಿಷ್ಠಿರನು ತನ್ನ ಸೇನೆಯು ಓಡಿಹೋಗುತ್ತಿರುವುದನ್ನು ನೋಡಿ ತಾನೂ ಪಲಾಯನಮಾಡಬೇಕೆಂದು ಯೋಚಿಸಿ ಫಲ್ಗುನನಿಗೆ ಈ ಮಾತನ್ನಾಡಿದನು:
07148021a ಪಶ್ಯ ಕರ್ಣಂ ಮಹೇಷ್ವಾಸಂ ಧನುಷ್ಪಾಣಿಮವಸ್ಥಿತಂ।
07148021c ನಿಶೀಥೇ ದಾರುಣೇ ಕಾಲೇ ತಪಂತಮಿವ ಭಾಸ್ಕರಂ।।
“ಈ ದಾರುಣ ರಾತ್ರಿವೇಳೆಯಲ್ಲಿ ಭಾಸ್ಕರನಂತೆ ಸುಡುತ್ತಿರುವ ಧನುಷ್ಪಾಣಿ ಮಹೇಷ್ವಾಸ ಕರ್ಣನನ್ನು ನೋಡು!
07148022a ಕರ್ಣಸಾಯಕನುನ್ನಾನಾಂ ಕ್ರೋಶತಾಮೇಷ ನಿಸ್ವನಃ।
07148022c ಅನಿಶಂ ಶ್ರೂಯತೇ ಪಾರ್ಥ ತ್ವದ್ಬಂಧೂನಾಮನಾಥವತ್।।
ಕರ್ಣನ ಸಾಯಕಗಳಿಂದ ಗಾಯಗೊಂಡ ನಿನ್ನ ಬಂಧುಗಳು ಅನಾಥರಂತೆ ಗೋಳಾಡುವುದು ಒಂದೇಸಮನೆ ಹತ್ತಿರದಿಂದಲೇ ಕೇಳಿಬರುತ್ತಿದೆ.
07148023a ಯಥಾ ವಿಸೃಜತಶ್ಚಾಸ್ಯ ಸಂದಧಾನಸ್ಯ ಚಾಶುಗಾನ್।
07148023c ಪಶ್ಯಾಮಿ ಜಯವಿಕ್ರಾಂತಂ ಕ್ಷಪಯಿಷ್ಯತಿ ನೋ ಧ್ರುವಂ।।
ಅವನು ಬಾಣಗಳನ್ನು ಸಂಧಾನಮಾಡುವುದನ್ನು ಮತ್ತು ಬಿಡುವುದನ್ನು ನೋಡಿದರೆ ಇವನು ನಮ್ಮನ್ನು ನಾಶಗೊಳಿಸಿ ಜಯವನ್ನು ಗಳಿಸುತ್ತಾನೆ ಎನ್ನುವುದು ನಿಶ್ಚಯವೆನಿಸುತ್ತಿದೆ.
07148024a ಯದತ್ರಾನಂತರಂ ಕಾರ್ಯಂ ಪ್ರಾಪ್ತಕಾಲಂ ಪ್ರಪಶ್ಯಸಿ।
07148024c ಕರ್ಣಸ್ಯ ವಧಸಮ್ಯುಕ್ತಂ ತತ್ಕುರುಷ್ವ ಧನಂಜಯ।।
ಧನಂಜಯ! ಇದರ ಮಧ್ಯೆ ಕಾಲಕ್ಕೆ ತಕ್ಕಂತೆ ಏನು ಮಾಡಬೇಕೆಂದು ನಿನಗೆ ತೋರುತ್ತದೆಯೋ ಕರ್ಣನ ವಧೆಗೆ ಯುಕ್ತವಾದ ಕಾರ್ಯವನ್ನು ಮಾಡು!”
07148025a ಏವಮುಕ್ತೋ ಮಹಾಬಾಹುಃ ಪಾರ್ಥಃ ಕೃಷ್ಣಮಥಾಬ್ರವೀತ್।
07148025c ಭೀತಃ ಕುಂತೀಸುತೋ ರಾಜಾ ರಾಧೇಯಸ್ಯಾತಿವಿಕ್ರಮಾತ್।।
ಇದನ್ನು ಕೇಳಿದ ಮಹಾಬಾಹು ಪಾರ್ಥನು ಕೃಷ್ಣನಿಗೆ ಹೇಳಿದನು: “ರಾಧೇಯನ ಅತಿವಿಕ್ರಮವನ್ನು ನೋಡಿ ರಾಜಾ ಕುಂತೀಸುತನು ಭೀತನಾಗಿದ್ದಾನೆ.
07148026a ಏವಂ ಗತೇ ಪ್ರಾಪ್ತಕಾಲಂ ಕರ್ಣಾನೀಕೇ ಪುನಃ ಪುನಃ।
07148026c ಭವಾನ್ವ್ಯವಸ್ಯತಾಂ ಕ್ಷಿಪ್ರಂ ದ್ರವತೇ ಹಿ ವರೂಥಿನೀ।।
ಈಗ ಬಂದಿರುವ ಸಮಯಕ್ಕೆ ಸರಿಯಾದುದೇನೆಂದು ಕ್ಷಿಪ್ರವಾಗಿ ನೀನೇ ಹೇಳಬೇಕು. ಕರ್ಣನಿಂದ ಪುನಃ ಪುನಃ ನಮ್ಮ ಸೇನೆಯು ಓಡಿಹೋಗುತ್ತಿದೆ.
07148027a ದ್ರೋಣಸಾಯಕನುನ್ನಾನಾಂ ಭಗ್ನಾನಾಂ ಮಧುಸೂದನ।
07148027c ಕರ್ಣೇನ ತ್ರಾಸ್ಯಮಾನಾನಾಮವಸ್ಥಾನಂ ನ ವಿದ್ಯತೇ।।
ಮಧುಸೂದನ! ದ್ರೋಣನ ಸಾಯಕಗಳಿಂದ ಗಾಯಗೊಳ್ಳುತ್ತಿರುವ ಮತ್ತು ಕರ್ಣನಿಂದ ಭಯಗೊಂಡಿರುವ ನಮ್ಮವರಿಗೆ ನಿಲ್ಲುವ ಸ್ಥಾನವೇ ತಿಳಿಯದಂತಾಗಿದೆ.
07148028a ಪಶ್ಯಾಮಿ ಚ ತಥಾ ಕರ್ಣಂ ವಿಚರಂತಮಭೀತವತ್।
07148028c ದ್ರವಮಾಣಾನ್ ರಥೋದಾರಾನ್ಕಿರಂತಂ ವಿಶಿಖೈಃ ಶಿತೈಃ।।
ಏನೂ ಭಯವಿಲ್ಲದೇ ಕರ್ಣನು ರಣಾಂಗಣದಲ್ಲಿ ನಿಶಿತ ವಿಶಿಖಗಳನ್ನು ಸುರಿಸುತ್ತಾ ರಥೋದಾರರನ್ನು ಬೆನ್ನಟ್ಟಿ ಓಡಾಡುತ್ತಿರುವುದನ್ನು ನೋಡುತ್ತಿದ್ದೇನೆ.
07148029a ನೈತದಸ್ಯೋತ್ಸಹೇ ಸೋಢುಂ ಚರಿತಂ ರಣಮೂರ್ಧನಿ।
07148029c ಪ್ರತ್ಯಕ್ಷಂ ವೃಷ್ಣಿಶಾರ್ದೂಲ ಪಾದಸ್ಪರ್ಶಮಿವೋರಗಃ।।
ವೃಷ್ಣಿಶಾರ್ದೂಲ! ಉತ್ಸಾಹದಿಂದ ರಣಮೂರ್ಧನಿಯಲ್ಲಿ ಸಂಚರಿಸುತ್ತಿರುವ ಕರ್ಣನನ್ನು ಪ್ರತ್ಯಕ್ಷ ನೋಡಿ ಕಾಲಿನಿಂದ ತುಳಿಯಲ್ಪಟ್ಟ ಸರ್ಪದಂತೆ ನನ್ನ ಸಹನೆಯು ಮೀರಿಹೋಗುತ್ತಿದೆ.
07148030a ಸ ಭವಾನತ್ರ ಯಾತ್ವಾಶು ಯತ್ರ ಕರ್ಣೋ ಮಹಾರಥಃ।
07148030c ಅಹಮೇನಂ ವಧಿಷ್ಯಾಮಿ ಮಾಂ ವೈಷ ಮಧುಸೂದನ।।
ಮಧುಸೂದನ! ಮಹಾರಥ ಕರ್ಣನಿರುವಲ್ಲಿಗೆ ಹೋಗು! ಅವನನ್ನು ನಾನಾಗಲೀ ಅಥವ ನನ್ನನ್ನು ಅವನಾಗಲೀ ಸಂಹರಿಸುತ್ತೇವೆ!”
07148031 ವಾಸುದೇವ ಉವಾಚ।
07148031a ಪಶ್ಯಾಮಿ ಕರ್ಣಂ ಕೌಂತೇಯ ದೇವರಾಜಮಿವಾಹವೇ।
07148031c ವಿಚರಂತಂ ನರವ್ಯಾಘ್ರಮತಿಮಾನುಷವಿಕ್ರಮಂ।।
ವಾಸುದೇವನು ಹೇಳಿದನು: “ಕೌಂತೇಯ! ದೇವರಾಜನಂತೆ ಈ ರಣಾಂಗಣದಲ್ಲಿ ಸಂಚರಿಸುತ್ತಿರುವ ನರವ್ಯಾಘ್ರ ಅತಿಮಾನುಷ ವಿಕ್ರಮಿ ಕರ್ಣನನ್ನು ನೋಡುತ್ತಿದ್ದೇನೆ.
07148032a ನೈತಸ್ಯಾನ್ಯೋಽಸ್ತಿ ಸಮರೇ ಪ್ರತ್ಯುದ್ಯಾತಾ ಧನಂಜಯ।
07148032c ಋತೇ ತ್ವಾಂ ಪುರುಷವ್ಯಾಘ್ರ ರಾಕ್ಷಸಾದ್ವಾ ಘಟೋತ್ಕಚಾತ್।।
ಧನಂಜಯ! ಪುರುಷವ್ಯಾಘ್ರ! ನಿನ್ನನ್ನು ಮತ್ತು ರಾಕ್ಷಸ ಘಟೋತ್ಕಚನನ್ನು ಹೊರತಾಗಿ ಇವನನ್ನು ಸಮರದಲ್ಲಿ ಎದುರಿಸುವವರು ಬೇರೆ ಯಾರೂ ಇಲ್ಲ.
07148033a ನ ತು ತಾವದಹಂ ಮನ್ಯೇ ಪ್ರಾಪ್ತಕಾಲಂ ತವಾನಘ।
07148033c ಸಮಾಗಮಂ ಮಹಾಬಾಹೋ ಸೂತಪುತ್ರೇಣ ಸಮ್ಯುಗೇ।।
ಅನಘ! ಮಹಾಬಾಹೋ! ಆದರೆ ನೀನು ಸೂತಪುತ್ರನನ್ನು ಎದುರಿಸುವ ಕಾಲವು ಬಂದೊದಗಿದೆಯೆಂದು ನನಗನ್ನಿಸುವುದಿಲ್ಲ.
07148034a ದೀಪ್ಯಮಾನಾ ಮಹೋಲ್ಕೇವ ತಿಷ್ಠತ್ಯಸ್ಯ ಹಿ ವಾಸವೀ।
07148034c ತ್ವದರ್ಥಂ ಹಿ ಮಹಾಬಾಹೋ ರೌದ್ರರೂಪಂ ಬಿಭರ್ತಿ ಚ।।
ಮಹಾಬಾಹೋ! ನಿನಗೋಸ್ಕರವಾಗಿ ಇಟ್ಟುಕೊಂಡಿರುವ ಮಹಾ ಉಲ್ಕೆಯಂತೆ ಬೆಳಗುತ್ತಿರುವ ಇಂದ್ರನು ಕೊಟ್ಟ ರೌದ್ರರೂಪದ ಶಕ್ತಿಯು ಅವನಲ್ಲಿದೆ.
07148035a ಘಟೋತ್ಕಚಸ್ತು ರಾಧೇಯಂ ಪ್ರತ್ಯುದ್ಯಾತು ಮಹಾಬಲಃ।
07148035c ಸ ಹಿ ಭೀಮೇನ ಬಲಿನಾ ಜಾತಃ ಸುರಪರಾಕ್ರಮಃ।।
ಬಲಿಷ್ಟನಾದ ಭೀಮನಿಗೆ ಹುಟ್ಟಿದ ಸುರಪರಾಕ್ರಮಿ ಮಹಾಬಲ ಘಟೋತ್ಕಚನು ರಾಧೇಯನನ್ನು ಎದುರಿಸಬಲ್ಲನು.
07148036a ತಸ್ಮಿನ್ನಸ್ತ್ರಾಣಿ ದಿವ್ಯಾನಿ ರಾಕ್ಷಸಾನ್ಯಾಸುರಾಣಿ ಚ।
07148036c ಸತತಂ ಚಾನುರಕ್ತೋ ವೋ ಹಿತೈಷೀ ಚ ಘಟೋತ್ಕಚಃ।
07148036e ವಿಜೇಷ್ಯತಿ ರಣೇ ಕರ್ಣಮಿತಿ ಮೇ ನಾತ್ರ ಸಂಶಯಃ।।
ಅವನಲ್ಲಿ ದೇವ, ರಾಕ್ಷಸ, ಅಸುರರ ಅಸ್ತ್ರಗಳಿವೆ. ಘಟೋತ್ಕಚನು ಸತತವೂ ನಿಮ್ಮ ಹಿತೈಷಿಯಾಗಿದ್ದು ಅನುರಕ್ತನಾಗಿದ್ದಾನೆ. ರಣದಲ್ಲಿ ಅವನು ಕರ್ಣನನ್ನು ಜಯಿಸುತ್ತಾನೆ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ.””
07148037 ಸಂಜಯ ಉವಾಚ।
07148037a ಏವಮುಕ್ತ್ವಾ ಮಹಾಬಾಹುಃ ಪಾರ್ಥಂ ಪುಷ್ಕರಲೋಚನಃ।
07148037c ಆಜುಹಾವಾಥ ತದ್ರಕ್ಷಃ ತಚ್ಚಾಸೀತ್ಪ್ರಾದುರಗ್ರತಃ।।
ಸಂಜಯನು ಹೇಳಿದನು: “ಪಾರ್ಥನಿಗೆ ಹೀಗೆ ಹೇಳಿ ಪುಷ್ಕರಲೋಚನನು ರಾಕ್ಷಸನಿಗೆ ಹೇಳಿ ಕಳುಹಿಸಿದನು. ಅವನು ಅವರ ಮುಂದೆ ಬಂದು ನಿಂತುಕೊಂಡನು.
07148038a ಕವಚೀ ಸ ಶರೀ ಖಡ್ಗೀ ಸಧನ್ವಾ ಚ ವಿಶಾಂ ಪತೇ।
07148038c ಅಭಿವಾದ್ಯ ತತಃ ಕೃಷ್ಣಂ ಪಾಂಡವಂ ಚ ಧನಂಜಯಂ।
07148038e ಅಬ್ರವೀತ್ತಂ ತದಾ ಹೃಷ್ಟಸ್ತ್ವಯಮಸ್ಮ್ಯನುಶಾಧಿ ಮಾಂ।।
ವಿಶಾಂಪತೇ! ಕವಚ, ಬಾಣ, ಖಡ್ಗ ಮತ್ತು ಧನುಸ್ಸನ್ನು ಧರಿಸಿದ್ದ ಅವನು ಕೃಷ್ಣನನ್ನೂ ಪಾಂಡವ ಧನಂಜಯನನ್ನೂ ನಮಸ್ಕರಿಸಿ ಹೃಷ್ಟಮನಸ್ಕನಾಗಿ “ನನಗೆ ಆಜ್ಞಾಪಿಸಿ!” ಎಂದು ಹೇಳಿದನು.
07148039a ತತಸ್ತಂ ಮೇಘಸಂಕಾಶಂ ದೀಪ್ತಾಸ್ಯಂ ದೀಪ್ತಕುಂಡಲಂ।
07148039c ಅಭ್ಯಭಾಷತ ಹೈಡಿಂಬಂ ದಾಶಾರ್ಹಃ ಪ್ರಹಸನ್ನಿವ।।
ಆಗ ನಸುನಗುತ್ತಾ ಧಾಶಾರ್ಹನು ಆ ಮೇಘಸಂಕಾಶ, ಉರಿಯುತ್ತಿರುವ ಮುಖವುಳ್ಳ, ಉರಿಯುತ್ತಿರುವ ಕುಂಡಲಗಳುಳ್ಳ ಹೈಡಿಂಬನಿಗೆ ಹೇಳಿದನು:
07148040a ಘಟೋತ್ಕಚ ವಿಜಾನೀಹಿ ಯತ್ತ್ವಾಂ ವಕ್ಷ್ಯಾಮಿ ಪುತ್ರಕ।
07148040c ಪ್ರಾಪ್ತೋ ವಿಕ್ರಮಕಾಲೋಽಯಂ ತವ ನಾನ್ಯಸ್ಯ ಕಸ್ಯ ಚಿತ್।।
“ಘಟೋತ್ಕಚ! ಮಗನೇ! ನಾನು ಹೇಳುವುದನ್ನು ಅರ್ಥಮಾಡಿಕೋ! ನಿನ್ನ ವಿಕ್ರಮವನ್ನು ತೋರಿಸುವ ಕಾಲವು ಬಂದೊದಗಿದೆ. ಈ ಅವಕಾಶವು ಬೇರೆ ಯಾರಿಗೂ ಇನ್ನೂ ಬಂದಿಲ್ಲ!
07148041a ಸ ಭವಾನ್ಮಜ್ಜಮಾನಾನಾಂ ಬಂಧೂನಾಂ ತ್ವಂ ಪ್ಲವೋ ಯಥಾ।
07148041c ವಿವಿಧಾನಿ ತವಾಸ್ತ್ರಾಣಿ ಸಂತಿ ಮಾಯಾ ಚ ರಾಕ್ಷಸೀ।।
ಮುಳುಗುತ್ತಿರುವ ಬಂಧುಗಳಿಗೆ ನೀನು ತೆಪ್ಪದಂತಾಗು! ನಿನ್ನಲ್ಲಿ ವಿವಿಧ ಅಸ್ತ್ರಗಳಿವೆ. ರಾಕ್ಷಸೀ ಮಾಯೆಯೂ ಇದೆ.
07148042a ಪಶ್ಯ ಕರ್ಣೇನ ಹೈಡಿಂಬ ಪಾಂಡವಾನಾಮನೀಕಿನೀ।
07148042c ಕಾಲ್ಯಮಾನಾ ಯಥಾ ಗಾವಃ ಪಾಲೇನ ರಣಮೂರ್ಧನಿ।।
ಹೈಡಿಂಬ! ಗೋಪಾಲಕನು ಗೋವುಗಳನ್ನು ಒಟ್ಟುಹಾಕಿ ಹೊಡೆಯುವಂತೆ ರಣಮೂರ್ಧನಿಯಲ್ಲಿ ಕರ್ಣನು ಪಾಂಡವರ ಸೇನೆಯನ್ನು ಸದೆಬಡಿಯುತ್ತಿರುವುದನ್ನು ನೋಡು!
07148043a ಏಷ ಕರ್ಣೋ ಮಹೇಷ್ವಾಸೋ ಮತಿಮಾನ್ದೃಢವಿಕ್ರಮಃ।
07148043c ಪಾಂಡವಾನಾಮನೀಕೇಷು ನಿಹಂತಿ ಕ್ಷತ್ರಿಯರ್ಷಭಾನ್।।
ಈ ಮಹೇಷ್ವಾಸ ಮತಿವಂತ ದೃಢವಿಕ್ರಮಿ ಕರ್ಣನು ಪಾಂಡವರ ಸೇನೆಯಲ್ಲಿರುವ ಕ್ಷತ್ರಿಯರ್ಷಭರನ್ನು ಸಂಹರಿಸುತ್ತಿದ್ದಾನೆ.
07148044a ಕಿರಂತಃ ಶರವರ್ಷಾಣಿ ಮಹಾಂತಿ ದೃಢಧನ್ವಿನಃ।
07148044c ನ ಶಕ್ನುವಂತ್ಯವಸ್ಥಾತುಂ ಪೀಡ್ಯಮಾನಾಃ ಶರಾರ್ಚಿಷಾ।।
ನಮ್ಮಲ್ಲಿರುವ ದೃಡಧನ್ವಿಗಳಲ್ಲಿ ಯಾರೂ ಕೂಡ ಮಹಾ ಶರವರ್ಷಗಳನ್ನು ಸುರಿಸಿ ಪೀಡಿಸುತ್ತಿರುವ ಅವನನ್ನು ಎದುರಿಸಿ ನಿಲ್ಲಲು ಶಕ್ಯರಾಗಿಲ್ಲ.
07148045a ನಿಶೀಥೇ ಸೂತಪುತ್ರೇಣ ಶರವರ್ಷೇಣ ಪೀಡಿತಾಃ।
07148045c ಏತೇ ದ್ರವಂತಿ ಪಾಂಚಾಲಾಃ ಸಿಂಹಸ್ಯೇವ ಭಯಾನ್ಮೃಗಾಃ।।
ಸೂತಪುತ್ರನ ಶರವರ್ಷಗಳಿಂದ ಪೀಡಿತರಾದ ಪಾಂಚಾಲರು ಈ ರಾತ್ರಿ ಸಿಂಹದ ಭಯದಿಂದ ಜಿಂಕೆಗಳು ಓಡುವಂತೆ ಓಡಿಹೋಗುತ್ತಿದ್ದಾರೆ.
07148046a ಏತಸ್ಯೈವಂ ಪ್ರವೃದ್ಧಸ್ಯ ಸೂತಪುತ್ರಸ್ಯ ಸಮ್ಯುಗೇ।
07148046c ನಿಷೇದ್ಧಾ ವಿದ್ಯತೇ ನಾನ್ಯಸ್ತ್ವದೃತೇ ಭೀಮವಿಕ್ರಮ।।
ಈ ರೀತಿ ರಣದಲ್ಲಿ ವೃದ್ಧಿಸುತ್ತಿರುವ ಸೂತಪುತ್ರನನ್ನು ಎದುರಿಸುವವನು ಭೀಮವಿಕ್ರಮನಾದ ನೀನಲ್ಲದೇ ಬೇರೆ ಯಾರೂ ಇಲ್ಲ.
07148047a ಸ ತ್ವಂ ಕುರು ಮಹಾಬಾಹೋ ಕರ್ಮ ಯುಕ್ತಮಿಹಾತ್ಮನಃ।
07148047c ಮಾತುಲಾನಾಂ ಪಿತೄಣಾಂ ಚ ತೇಜಸೋಽಸ್ತ್ರಬಲಸ್ಯ ಚ।।
ಆದುದರಿಂದ ಮಹಾಬಾಹೋ! ನಿನಗೂ, ನಿನ್ನ ತಾಯಿಯ ಕುಲದವರಿಗೂ, ತಂದೆಯ ಕುಲದವರಿಗೂ, ನಿನ್ನ ತೇಜಸ್ಸಿಗೂ, ಅಸ್ತ್ರಬಲಕ್ಕೂ ಯುಕ್ತವಾದುದನ್ನು ಮಾಡು!
07148048a ಏತದರ್ಥಂ ಹಿ ಹೈಡಿಂಬ ಪುತ್ರಾನಿಚ್ಚಂತಿ ಮಾನವಾಃ।
07148048c ಕಥಂ ನಸ್ತಾರಯೇದ್ದುಃಖಾತ್ಸ ತ್ವಂ ತಾರಯ ಬಾಂಧವಾನ್।।
ಹೈಡಿಂಬ! ಇದಕ್ಕಾಗಿಯೇ ಮಾನವರು ಮಕ್ಕಳನ್ನು ಬಯಸುತ್ತಾರೆ. ತಮ್ಮನ್ನು ದುಃಖದಿಂದ ಹೇಗೆ ಅವರು ಪಾರುಮಾಡುತ್ತಾರೆಂದು ಯೋಚಿಸುತ್ತಿರುತ್ತಾರೆ. ನೀನು ನಿನ್ನ ಬಾಂಧವರನ್ನು ಪಾರುಮಾಡು!
07148049a ತವ ಹ್ಯಸ್ತ್ರಬಲಂ ಭೀಮಂ ಮಾಯಾಶ್ಚ ತವ ದುಸ್ತರಾಃ।
07148049c ಸಂಗ್ರಾಮೇ ಯುಧ್ಯಮಾನಸ್ಯ ಸತತಂ ಭೀಮನಂದನ।।
ಭೀಮನಂದನ! ಸಂಗ್ರಾಮದಲ್ಲಿ ಯುದ್ಧಮಾಡುವಾಗ ನಿನ್ನ ಅಸ್ತ್ರಬಲವೂ ನಿನ್ನ ದುಸ್ತರ ಮಾಯೆಯೂ ಸತತವಾಗಿ ವೃದ್ಧಿಯಾಗುತ್ತಲೇ ಇರುತ್ತದೆ.
07148050a ಪಾಂಡವಾನಾಂ ಪ್ರಭಗ್ನಾನಾಂ ಕರ್ಣೇನ ಶಿತಸಾಯಕೈಃ।
07148050c ಮಜ್ಜತಾಂ ಧಾರ್ತರಾಷ್ಟ್ರೇಷು ಭವ ಪಾರಂ ಪರಂತಪ।।
ಪರಂತಪ! ಕರ್ಣನ ನಿಶಿತ ಸಾಯಕಗಳಿಂದ ಮತ್ತು ಧಾರ್ತರಾಷ್ಟ್ರರಿಂದ ಮುಳುಗಿಹೋಗುತ್ತಿರುವ ಪಾಂಡವರಿಗೆ ತೀರದಂತಾಗು!
07148051a ರಾತ್ರೌ ಹಿ ರಾಕ್ಷಸಾ ಭೂಯೋ ಭವಂತ್ಯಮಿತವಿಕ್ರಮಾಃ।
07148051c ಬಲವಂತಃ ಸುದುರ್ಧರ್ಷಾಃ ಶೂರಾ ವಿಕ್ರಾಂತಚಾರಿಣಃ।।
ರಾತ್ರಿಯ ವೇಳೆಯಲ್ಲಿ ರಾಕ್ಷಸರು ಹೆಚ್ಚಿನ ಪರಾಕ್ರಮವುಳ್ಳವರೂ, ಬಲವಂತರೂ, ಹೆಚ್ಚಿನ ದುರ್ಧರ್ಷರೂ, ಶೂರರೂ, ವಿಕ್ರಾಂತಚಾರಿಗಳೂ ಆಗುತ್ತಾರೆ.
07148052a ಜಹಿ ಕರ್ಣಂ ಮಹೇಷ್ವಾಸಂ ನಿಶೀಥೇ ಮಾಯಯಾ ರಣೇ।
07148052c ಪಾರ್ಥಾ ದ್ರೋಣಂ ವಧಿಷ್ಯಂತಿ ಧೃಷ್ಟದ್ಯುಮ್ನಪುರೋಗಮಾಃ।।
ಈ ರಾತ್ರಿಯ ರಣದಲ್ಲಿ ಮಾಯೆಯಿಂದ ಮಹೇಷ್ವಾಸ ಕರ್ಣನನ್ನು ವಧಿಸು. ಧೃಷ್ಟದ್ಯುಮ್ನನನ್ನು ಮುಂದಿಟ್ಟುಕೊಂಡು ಪಾರ್ಥರು ದ್ರೋಣನನ್ನು ವಧಿಸುತ್ತಾರೆ.”
07148053a ಕೇಶವಸ್ಯ ವಚಃ ಶ್ರುತ್ವಾ ಬೀಭತ್ಸುರಪಿ ರಾಕ್ಷಸಂ।
07148053c ಅಭ್ಯಭಾಷತ ಕೌರವ್ಯ ಘಟೋತ್ಕಚಮರಿಂದಮಂ।।
ಕೌರವ್ಯ! ಕೇಶವನ ಮಾತನ್ನು ಕೇಳಿ ಬೀಭತ್ಸುವೂ ಕೂಡ ಅರಿಂದಮ ರಾಕ್ಷಸ ಘಟೋತ್ಕಚನಿಗೆ ಹೇಳಿದನು:
07148054a ಘಟೋತ್ಕಚ ಭವಾಂಶ್ಚೈವ ದೀರ್ಘಬಾಹುಶ್ಚ ಸಾತ್ಯಕಿಃ।
07148054c ಮತೌ ಮೇ ಸರ್ವಸೈನ್ಯೇಷು ಭೀಮಸೇನಶ್ಚ ಪಾಂಡವಃ।।
“ಘಟೋತ್ಕಚ! ನೀನು, ದೀರ್ಘಬಾಹು ಸಾತ್ಯಕಿ ಮತ್ತು ಪಾಂಡವ ಭೀಮಸೇನರು ಸರ್ವಸೈನ್ಯಗಳಲ್ಲಿ ವೀರಶ್ರೇಷ್ಠರೆಂದು ನನ್ನ ಅಭಿಪ್ರಾಯ.
07148055a ಸ ಭವಾನ್ಯಾತು ಕರ್ಣೇನ ದ್ವೈರಥಂ ಯುಧ್ಯತಾಂ ನಿಶಿ।
07148055c ಸಾತ್ಯಕಿಃ ಪೃಷ್ಠಗೋಪಸ್ತೇ ಭವಿಷ್ಯತಿ ಮಹಾರಥಃ।।
ಈ ರಾತ್ರಿ ನೀನು ಹೋಗಿ ಕರ್ಣನೊಂದಿಗೆ ದ್ವೈರಥದಲ್ಲಿ ಯುದ್ಧಮಾಡು. ಮಹಾರಥ ಸಾತ್ಯಕಿಯು ನಿನ್ನ ಹಿಂದೆಯೇ ಇರುತ್ತಾನೆ.
07148056a ಜಹಿ ಕರ್ಣಂ ರಣೇ ಶೂರಂ ಸಾತ್ವತೇನ ಸಹಾಯವಾನ್।
07148056c ಯಥೇಂದ್ರಸ್ತಾರಕಂ ಪೂರ್ವಂ ಸ್ಕಂದೇನ ಸಹ ಜಘ್ನಿವಾನ್।।
ಹಿಂದೆ ಇಂದ್ರನು ಸ್ಕಂದನ ಸಹಾಯದಿಂದ ತಾರಕನನ್ನು ಸಂಹರಿಸಿದಂತೆ ಸಾತ್ವತನ ಸಹಾಯವನ್ನು ಪಡೆದವನಾಗಿ ರಣದಲ್ಲಿ ಶೂರ ಕರ್ಣನನ್ನು ಸಂಹರಿಸು! “
07148057 ಘಟೋತ್ಕಚ ಉವಾಚ।
07148057a ಅಲಮೇವಾಸ್ಮಿ ಕರ್ಣಾಯ ದ್ರೋಣಾಯಾಲಂ ಚ ಸತ್ತಮ।
07148057c ಅನ್ಯೇಷಾಂ ಕ್ಷತ್ರಿಯಾಣಾಂ ಚ ಕೃತಾಸ್ತ್ರಾಣಾಂ ಮಹಾತ್ಮನಾಂ।।
ಘಟೋತ್ಕಚನು ಹೇಳಿದನು: “ಸತ್ತಮ! ಕರ್ಣನಿಗೆ, ದ್ರೋಣನಿಗೆ ಮತ್ತು ಅನ್ಯ ಕೃತಾಸ್ತ್ರ ಮಹಾತ್ಮ ಕ್ಷತ್ರಿಯರಿಗೆ ನಾನೊಬ್ಬನೇ ಸಾಕು!
07148058a ಅದ್ಯ ದಾಸ್ಯಾಮಿ ಸಂಗ್ರಾಮಂ ಸೂತಪುತ್ರಾಯ ತಂ ನಿಶಿ।
07148058c ಯಂ ಜನಾಃ ಸಂಪ್ರವಕ್ಷ್ಯಂತಿ ಯಾವದ್ಭೂಮಿರ್ಧರಿಷ್ಯತಿ।।
ಭೂಮಿಯಿರುವವರೆಗೆ ಜನರು ಇದರ ಕುರಿತು ಮಾತನಾಡಿಕೊಳ್ಳುತ್ತಿರುವಂತೆ ಇಂದಿನ ರಾತ್ರಿ ನಾನು ಸೂತಪುತ್ರನಿಗೆ ಸಂಗ್ರಾಮದ ಆತಿಥ್ಯವನ್ನು ಬಡಿಸುತ್ತೇನೆ.
07148059a ನ ಚಾತ್ರ ಶೂರಾನ್ಮೋಕ್ಷ್ಯಾಮಿ ನ ಭೀತಾನ್ನ ಕೃತಾಂಜಲೀನ್।
07148059c ಸರ್ವಾನೇವ ವಧಿಷ್ಯಾಮಿ ರಾಕ್ಷಸಂ ಧರ್ಮಮಾಸ್ಥಿತಃ।।
ರಾಕ್ಷಸಧರ್ಮವನ್ನು ಅನುಸರಿಸಿ ಅಲ್ಲಿ ಯಾವಶೂರರನ್ನೂ – ಭೀತರಾಗಿ ಕೈಮುಗಿಯುವವರನ್ನೂ – ಬಿಡದೇ ಎಲ್ಲರನ್ನೂ ವಧಿಸುತ್ತೇನೆ.””
07148060 ಸಂಜಯ ಉವಾಚ।
07148060a ಏವಮುಕ್ತ್ವಾ ಮಹಾಬಾಹುರ್ಹೈಡಿಂಬಃ ಪರವೀರಹಾ।
07148060c ಅಭ್ಯಯಾತ್ತುಮುಲೇ ಕರ್ಣಂ ತವ ಸೈನ್ಯಂ ವಿಭೀಷಯನ್।।
ಸಂಜಯನು ಹೇಳಿದನು: “ಹೀಗೆ ಹೇಳಿ ಮಹಾಬಾಹು ಪರವೀರಹ ಹೈಡಿಂಬನು ನಿನ್ನ ಸೇನೆಯನ್ನು ಭೀತಗೊಳಿಸುತ್ತಾ ಯುದ್ಧದಲ್ಲಿ ಕರ್ಣನನ್ನು ಎದುರಿಸಿದನು.
07148061a ತಮಾಪತಂತಂ ಸಂಕ್ರುದ್ಧಂ ದೀಪ್ತಾಸ್ಯಮಿವ ಪನ್ನಗಂ।
07148061c ಅಭ್ಯಸ್ಯನ್ಪರಮೇಷ್ವಾಸಃ ಪ್ರತಿಜಗ್ರಾಹ ಸೂತಜಃ।।
ಸಂಕ್ರುದ್ಧ ಪನ್ನಗದಂತೆ ಉರಿಯುತ್ತಿರುವ ಮುಖವುಳ್ಳವನಾಗಿ ಮೇಲೆ ಬೀಳುತ್ತಿದ್ದ ಅವನನ್ನು ಪರಮೇಷ್ವಾಸ ಸೂತಜನು ಸ್ವೀಕರಿಸಿದನು.
07148062a ತಯೋಃ ಸಮಭವದ್ಯುದ್ಧಂ ಕರ್ಣರಾಕ್ಷಸಯೋರ್ನಿಶಿ।
07148062c ಗರ್ಜತೋ ರಾಜಶಾರ್ದೂಲ ಶಕ್ರಪ್ರಹ್ರಾದಯೋರಿವ।।
ಆಗ ರಾಜಶಾರ್ದೂಲ! ಗರ್ಜಿಸುತ್ತಿರುವ ಕರ್ಣ-ರಾಕ್ಷಸರ ನಡುವೆ ಆ ರಾತ್ರಿ ಶಕ್ರ-ಪ್ರಹ್ರಾದರ ನಡುವೆ ನಡೆದ ಯುದ್ಧದಂತೆ ಯುದ್ಧವು ಪ್ರಾರಂಭವಾಯಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಘಟೋತ್ಕಚಪ್ರೋತ್ಸಾಹನೇ ಅಷ್ಠಚತ್ವಾರಿಂಶಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಘಟೋತ್ಕಚಪ್ರೋತ್ಸಾಹನ ಎನ್ನುವ ನೂರಾನಲ್ವತ್ತೆಂಟನೇ ಅಧ್ಯಾಯವು.