147 ರಾತ್ರಿಯುದ್ಧೇ ಸಂಕುಲಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಘಟೋತ್ಕಚವಧ ಪರ್ವ

ಅಧ್ಯಾಯ 147

ಸಾರ

ತನ್ನ ಸೇನೆಯು ನಾಶವಾಗುತ್ತಿರುವುದನ್ನು ನೋಡಿ ದುರ್ಯೋಧನನು ದ್ರೋಣ-ಕರ್ಣರನ್ನು ಮೂದಲಿಸಿ ಮಾತನಾಡಿದುದು (1-7). ದ್ರೋಣ-ಕರ್ಣರ ಪರಾಕ್ರಮ; ಪಾಂಡವ ಸೇನೆಯ ಪಲಾಯನ (8-21). ಕೃಷ್ಣನು ಅರ್ಜುನನಿಗೆ ದ್ರೋಣ-ಕರ್ಣರನ್ನು ಆಕ್ರಮಣಿಸಲು ಹೇಳಿದುದು (22-30). ಸಂಕುಲಯುದ್ಧ (31-38).

07147001 ಸಂಜಯ ಉವಾಚ।
07147001a ವಿದ್ರುತಂ ಸ್ವಬಲಂ ದೃಷ್ಟ್ವಾ ವಧ್ಯಮಾನಂ ಮಹಾತ್ಮಭಿಃ।
07147001c ಕ್ರೋಧೇನ ಮಹತಾವಿಷ್ಟಃ ಪುತ್ರಸ್ತವ ವಿಶಾಂ ಪತೇ।।

ಸಂಜಯನು ಹೇಳಿದನು: “ವಿಶಾಂಪತೇ! ಮಹಾತ್ಮರಿಂದ ವಧಿಸಲ್ಪಡುತ್ತಾ ಓಡಿಹೋಗುತ್ತಿರುವ ತನ್ನ ಸೇನೆಯನ್ನು ಕಂಡು ನಿನ್ನ ಮಗನು ಮಹಾ ಕ್ರೋಧದಿಂದ ಆವಿಷ್ಟನಾದನು.

07147002a ಅಭ್ಯೇತ್ಯ ಸಹಸಾ ಕರ್ಣಂ ದ್ರೋಣಂ ಚ ಜಯತಾಂ ವರಂ।
07147002c ಅಮರ್ಷವಶಮಾಪನ್ನೋ ವಾಕ್ಯಜ್ಞೋ ವಾಕ್ಯಮಬ್ರವೀತ್।।

ವಾಕ್ಯಜ್ಞನಾದ ಅವನು ಕ್ರೋಧದ ವಶಕ್ಕೆ ಸಿಲುಕಿ ತ್ವರೆಮಾಡಿ ಕರ್ಣ ಮತ್ತು ಜಯಿಗಳಲ್ಲಿ ಶ್ರೇಷ್ಠ ದ್ರೋಣರ ಬಳಿಸಾರಿ ಈ ಮಾತುಗಳನ್ನಾಡಿದನು:

07147003a ಭವದ್ಭ್ಯಾಮಿಹ ಸಂಗ್ರಾಮೋ ಕ್ರುದ್ಧಾಭ್ಯಾಂ ಸಂಪ್ರವರ್ತಿತಃ।
07147003c ಆಹವೇ ನಿಹತಂ ದೃಷ್ಟ್ವಾ ಸೈಂಧವಂ ಸವ್ಯಸಾಚಿನಾ।।

“ಸವ್ಯಸಾಚಿಯಿಂದ ಯುದ್ಧದಲ್ಲಿ ಸೈಂಧವನು ಹತನಾದುದನ್ನು ಕಂಡು ಕ್ರೋಧಿತರಾಗಿ ನೀವು ಈ ಯುದ್ಧವನ್ನು ರಾತ್ರಿಯಲ್ಲಿಯೂ ಮುಂದುವರಿಸಿದಿರಿ.

07147004a ನಿಹನ್ಯಮಾನಾಂ ಪಾಂಡೂನಾಂ ಬಲೇನ ಮಮ ವಾಹಿನೀಂ।
07147004c ಭೂತ್ವಾ ತದ್ವಿಜಯೇ ಶಕ್ತಾವಶಕ್ತಾವಿವ ಪಶ್ಯತಃ।।

ಆದರೆ ಪಾಂಡವರ ಸೇನೆಯು ನನ್ನ ಸೇನೆಯನ್ನು ಸಂಹರಿಸುತ್ತಲೇ ಇದೆ. ಇದರಲ್ಲಿ ವಿಜಯವನ್ನು ಹೊಂದಲು ಶಕ್ತರಾಗಿದ್ದರೂ ನೀವು ಅಶಕ್ತರೆಂದು ತೋರ್ಪಡಿಸಿಕೊಳ್ಳುತ್ತಿದ್ದೀರಿ.

07147005a ಯದ್ಯಹಂ ಭವತೋಸ್ತ್ಯಾಜ್ಯೋ ನ ವಾಚ್ಯೋಽಸ್ಮಿ ತದೈವ ಹಿ।
07147005c ಆವಾಂ ಪಾಂಡುಸುತಾನ್ಸಂಖ್ಯೇ ಜೇಷ್ಯಾವ ಇತಿ ಮಾನದೌ।।

ಒಂದುವೇಳೆ ನಿಮ್ಮಿಬ್ಬರಿಗೂ ನಾನು ಬೇಡವೆಂದಾದರೆ ಮಾನದರಾದ ನೀವು ಆಗ “ನಾವು ಪಾಂಡುಸುತರನ್ನು ಯುದ್ಧದಲ್ಲಿ ಜಯಿಸುತ್ತೇವೆ” ಎಂದು ನನಗೆ ಹೇಳಬಾರದಿತ್ತು!

07147006a ತದೈವಾಹಂ ವಚಃ ಶ್ರುತ್ವಾ ಭವದ್ಭ್ಯಾಮನುಸಮ್ಮತಂ।
07147006c ಕೃತವಾನ್ಪಾಂಡವೈಃ ಸಾರ್ಧಂ ವೈರಂ ಯೋಧವಿನಾಶನಂ।।

ನಿಮಗೆ ಸಮ್ಮತಿಯಿರದಿದ್ದರೆ ನಿಮ್ಮ ಆ ಮಾತನ್ನು ಕೇಳಿ ಈ ಯೋಧರ ವಿನಾಶಕಾರಕ ವೈರವನ್ನು ನಾನು ಪಾಂಡವರೊಡನೆ ಕಟ್ಟಿಕೊಳ್ಳುತ್ತಿರಲಿಲ್ಲ.

07147007a ಯದಿ ನಾಹಂ ಪರಿತ್ಯಾಜ್ಯೋ ಭವದ್ಭ್ಯಾಂ ಪುರುಷರ್ಷಭೌ।
07147007c ಯುಧ್ಯೇತಾಮನುರೂಪೇಣ ವಿಕ್ರಮೇಣ ಸುವಿಕ್ರಮೌ।।

ಪುರುಷರ್ಷಭರೇ! ಸುವಿಕ್ರಮಿಗಳೇ! ಒಂದುವೇಳೆ ನಿಮಗೆ ನಾನು ಪರಿತ್ಯಾಜ್ಯನೆನಿಸದಿದ್ದರೆ ವಿಕ್ರಮದಿಂದ ನಿಮಗೆ ಅನುರೂಪ ಯುದ್ಧವನ್ನು ಮಾಡಿ!”

07147008a ವಾಕ್ಪ್ರತೋದೇನ ತೌ ವೀರೌ ಪ್ರಣುನ್ನೌ ತನಯೇನ ತೇ।
07147008c ಪ್ರಾವರ್ತಯೇತಾಂ ತೌ ಯುದ್ಧಂ ಘಟ್ಟಿತಾವಿವ ಪನ್ನಗೌ।।

ತುಳಿಯಲ್ಪಟ್ಟ ಸರ್ಪಗಳಂತೆ ಮತ್ತು ಮಾತಿನ ಚಾವಟಿಯಿಂದ ಹೊಡೆಯಲ್ಪಟ್ಟವರಂತೆ ಆ ವೀರರಿಬ್ಬರೂ ಪುನಃ ಯುದ್ಧವನ್ನು ಪ್ರಾರಂಭಿಸಿದರು.

07147009a ತತಸ್ತೌ ರಥಿನಾಂ ಶ್ರೇಷ್ಠೌ ಸರ್ವಲೋಕಧನುರ್ಧರೌ।
07147009c ಶೈನೇಯಪ್ರಮುಖಾನ್ಪಾರ್ಥಾನಭಿದುದ್ರುವತೂ ರಣೇ।।

ಆಗ ಅವರಿಬ್ಬರು ರಥಶ್ರೇಷ್ಠರೂ ಸರ್ವಲೋಕಧನುರ್ಧರರೂ ರಣದಲ್ಲಿ ಶೈನೇಯಪ್ರಮುಖ ಪಾರ್ಥರನ್ನು ಆಕ್ರಮಣಿಸಿದರು.

07147010a ತಥೈವ ಸಹಿತಾಃ ಪಾರ್ಥಾಃ ಸ್ವೇನ ಸೈನ್ಯೇನ ಸಂವೃತಾಃ।
07147010c ಅಭ್ಯವರ್ತಂತ ತೌ ವೀರೌ ನರ್ದಮಾನೌ ಮುಹುರ್ಮುಹುಃ।।

ಹಾಗೆಯೇ ಪಾರ್ಥರೂ ಕೂಡ ತಮ್ಮ ತಮ್ಮ ಸೇನೆಗಳಿಂದ ಸುತ್ತುವರೆಯಲ್ಪಟ್ಟು ಪುನಃ ಪುನಃ ಸಿಂಹನಾದಗೈಯುತ್ತಾ ಆ ವೀರರಿಬ್ಬರನ್ನೂ ಎದುರಿಸಿದರು.

07147011a ಅಥ ದ್ರೋಣೋ ಮಹೇಷ್ವಾಸೋ ದಶಭಿಃ ಶಿನಿಪುಂಗವಂ।
07147011c ಅವಿಧ್ಯತ್ತ್ವರಿತಂ ಕ್ರುದ್ಧಃ ಸರ್ವಶಸ್ತ್ರಭೃತಾಂ ವರಃ।।

ಆಗ ಮಹೇಷ್ವಾಸ, ಸರ್ವಶಸ್ತ್ರಧಾರಿಗಳಲ್ಲಿ ಶ್ರೇಷ್ಠ ದ್ರೋಣನು ಕ್ರುದ್ಧನಾಗಿ ತ್ವರೆಯಿಂದ ಹತ್ತು ಬಾಣಗಳಿಂದ ಶಿನಿಪುಂಗವನನ್ನು ಹೊಡೆದನು.

07147012a ಕರ್ಣಶ್ಚ ದಶಭಿರ್ಬಾಣೈಃ ಪುತ್ರಶ್ಚ ತವ ಸಪ್ತಭಿಃ।
07147012c ದಶಭಿರ್ವೃಷಸೇನಶ್ಚ ಸೌಬಲಶ್ಚಾಪಿ ಸಪ್ತಭಿಃ।
07147012e ಏತೇ ಕೌರವ ಸಂಕ್ರಂದೇ ಶೈನೇಯಂ ಪರ್ಯವಾರಯನ್।।

ಹಾಗೆಯೇ ಕರ್ಣನು ಹತ್ತು ಬಾಣಗಳಿಂದ, ನಿನ್ನ ಮಗನು ಏಳರಿಂದ, ವೃಷಸೇನನು ಹತ್ತರಿಂದ, ಸೌಬಲನು ಏಳರಿಂದ ಹೊಡೆದು ಹೀಗೆ ಕೌರವರು ಶೈನೇಯನನ್ನು ಸುತ್ತುವರೆದರು.

07147013a ದೃಷ್ಟ್ವಾ ಚ ಸಮರೇ ದ್ರೋಣಂ ನಿಘ್ನಂತಂ ಪಾಂಡವೀಂ ಚಮೂಂ।
07147013c ವಿವ್ಯಧುಃ ಸೋಮಕಾಸ್ತೂರ್ಣಂ ಸಮಂತಾಚ್ಚರವೃಷ್ಟಿಭಿಃ।।

ಸಮರದಲ್ಲಿ ದ್ರೋಣನು ಪಾಂಡವೀ ಸೇನೆಯನ್ನು ಧ್ವಂಸಗೊಳಿಸುತ್ತಿರುವುದನ್ನು ನೋಡಿ ತಕ್ಷಣವೇ ಸೋಮಕರು ಎಲ್ಲಕಡೆಗಳಿಂದ ಶರವರ್ಷವನ್ನು ಸುರಿಸಿ ಅವನನ್ನು ಗಾಯಗೊಳಿಸಿದರು.

07147014a ತತೋ ದ್ರೋಣೋಽಹರತ್ಪ್ರಾಣಾನ್ಕ್ಷತ್ರಿಯಾಣಾಂ ವಿಶಾಂ ಪತೇ।
07147014c ರಶ್ಮಿಭಿರ್ಭಾಸ್ಕರೋ ರಾಜಂಸ್ತಮಸಾಮಿವ ಭಾರತ।।

ಭಾರತ! ರಾಜನ್! ವಿಶಾಂಪತೇ! ಆಗ ದ್ರೋಣನು ಭಾಸ್ಕರನು ಕತ್ತಲೆಯನ್ನು ತನ್ನ ಕಿರಣಗಳಿಂದ ಹೇಗೋ ಹಾಗೆ ಕ್ಷತ್ರಿಯರ ಪ್ರಾಣಗಳನ್ನು ಅಪಹರಿಸಿದನು.

07147015a ದ್ರೋಣೇನ ವಧ್ಯಮಾನಾನಾಂ ಪಾಂಚಾಲಾನಾಂ ವಿಶಾಂ ಪತೇ।
07147015c ಶುಶ್ರುವೇ ತುಮುಲಃ ಶಬ್ದಃ ಕ್ರೋಶತಾಮಿತರೇತರಂ।।

ವಿಶಾಂಪತೇ! ದ್ರೋಣನಿಂದ ವಧಿಸಲ್ಪಡುತ್ತಿರುವ ಪಾಂಚಾಲರ ಪರಸ್ಪರರ ತುಮುಲ ಶಬ್ಧವು ಒಂದು ಕ್ರೋಶ ದೂರದವರೆಗೂ ಕೇಳಿಬರುತ್ತಿತ್ತು.

07147016a ಪುತ್ರಾನನ್ಯೇ ಪಿತೄನನ್ಯೇ ಭ್ರಾತೄನನ್ಯೇ ಚ ಮಾತುಲಾನ್।
07147016c ಭಾಗಿನೇಯಾನ್ವಯಸ್ಯಾಂಶ್ಚ ತಥಾ ಸಂಬಂಧಿಬಾಂಧವಾನ್।
07147016e ಉತ್ಸೃಜ್ಯೋತ್ಸೃಜ್ಯ ಗಚ್ಚಂತಿ ತ್ವರಿತಾ ಜೀವಿತೇಪ್ಸವಃ।।

ಜೀವವನ್ನು ಉಳಿಸಿಕೊಳ್ಳುವ ಸಲುವಾಗಿ ತ್ವರೆಮಾಡಿ ಪುತ್ರರು ಪಿತೃಗಳನ್ನೂ, ಸಹೋದರರು ಸಹೋದರರನ್ನೂ, ಅಳಿಯಂದಿರು ಮಾವಂದಿರನ್ನೂ, ಸ್ನೇಹಿತರನ್ನೂ, ಸಂಬಂಧಿ-ಬಾಂಧವರನ್ನೂ ಅಲ್ಲಲ್ಲಿಯೇ ಬಿಟ್ಟು ಓಡಿಹೋಗುತ್ತಿದ್ದರು.

07147017a ಅಪರೇ ಮೋಹಿತಾ ಮೋಹಾತ್ತಮೇವಾಭಿಮುಖಾ ಯಯುಃ।
07147017c ಪಾಂಡವಾನಾಂ ರಣೇ ಯೋಧಾಃ ಪರಲೋಕಂ ತಥಾಪರೇ।।

ಕೆಲವರು ಮೋಹಿತರಾಗಿ ಮೋಹದಿಂದ ದ್ರೋಣನ ಎದುರಾಗಿಯೇ ಹೋಗುತ್ತಿದ್ದರು. ಇನ್ನು ಇತರ ಪಾಂಡವ ಯೋಧರು ರಣದಲ್ಲಿ ಪರಲೋಕವನ್ನು ಸೇರಿದರು.

07147018a ಸಾ ತಥಾ ಪಾಂಡವೀ ಸೇನಾ ವಧ್ಯಮಾನಾ ಮಹಾತ್ಮಭಿಃ।
07147018c ನಿಶಿ ಸಂಪ್ರಾದ್ರವದ್ರಾಜನ್ನುತ್ಸೃಜ್ಯೋಲ್ಕಾಃ ಸಹಸ್ರಶಃ।।
07147019a ಪಶ್ಯತೋ ಭೀಮಸೇನಸ್ಯ ವಿಜಯಸ್ಯಾಚ್ಯುತಸ್ಯ ಚ।
07147019c ಯಮಯೋರ್ಧರ್ಮಪುತ್ರಸ್ಯ ಪಾರ್ಷತಸ್ಯ ಚ ಪಶ್ಯತಃ।।

ರಾಜನ್! ಆ ಮಹಾತ್ಮನಿಂದ ಹಾಗೆ ವಧಿಸಲ್ಪಡುತ್ತಿದ್ದ ಪಾಂಡವೀ ಸೇನೆಯು ಸಹಸ್ರಾರು ಸಂಖ್ಯೆಗಳಲ್ಲಿ ದೀವಟಿಗೆಗಳನ್ನು ಬಿಸುಟು ರಾತ್ರಿಯಲ್ಲಿ ಭೀಮಸೇನ, ವಿಜಯ, ಅಚ್ಯುತ, ನಕುಲ-ಸಹದೇವರು, ಧರ್ಮಪುತ್ರ ಮತ್ತು ಪಾರ್ಷತರು ನೋಡುತ್ತಿದ್ದಂತೆಯೇ ಓಡಿಹೋಗುತ್ತಿದ್ದರು.

07147020a ತಮಸಾ ಸಂವೃತೇ ಲೋಕೇ ನ ಪ್ರಾಜ್ಞಾಯತ ಕಿಂ ಚನ।
07147020c ಕೌರವಾಣಾಂ ಪ್ರಕಾಶೇನ ದೃಶ್ಯಂತೇ ತು ದ್ರುತಾಃ ಪರೇ।।

ಕತ್ತಲೆಯಿಂದ ಲೋಕವೇ ತುಂಬಿಹೋಗಿರಲು ಅಲ್ಲಿ ಏನೊಂದೂ ತಿಳಿಯುತ್ತಿರಲಿಲ್ಲ. ಆದರೆ ಕೌರವರ ದೀವಟಿಗೆಗಳ ಪ್ರಕಾಶದಿಂದ ಶತ್ರುಗಳು ಓಡಿಹೋಗುತ್ತಿರುವುದು ಕಾಣುತ್ತಿತ್ತು.

07147021a ದ್ರವಮಾಣಂ ತು ತತ್ಸೈನ್ಯಂ ದ್ರೋಣಕರ್ಣೌ ಮಹಾರಥೌ।
07147021c ಜಘ್ನತುಃ ಪೃಷ್ಠತೋ ರಾಜನ್ಕಿರಂತೌ ಸಾಯಕಾನ್ಬಹೂನ್।।

ರಾಜನ್! ಓಡಿಹೋಗುತ್ತಿರುವ ಆ ಸೈನ್ಯವನ್ನು ಮಹಾರಥ ದ್ರೋಣ-ಕರ್ಣರು ಹಿಂದಿನಿಂದ ಅನೇಕ ಸಾಯಕಗಳನ್ನು ಎರಚುತ್ತಾ ಸಂಹರಿಸಿದರು.

07147022a ಪಾಂಚಾಲೇಷು ಪ್ರಭಗ್ನೇಷು ದೀರ್ಯಮಾಣೇಷು ಸರ್ವಶಃ।
07147022c ಜನಾರ್ದನೋ ದೀನಮನಾಃ ಪ್ರತ್ಯಭಾಷತ ಫಲ್ಗುನಂ।।

ಪಾಂಚಾಲರು ಎಲ್ಲಕಡೆಗಳಿಂದ ಸೀಳಿಕೊಂಡು ಭಗ್ನರಾಗುತ್ತಿರಲು ದೀನಮನಸ್ಕ ಜನಾರ್ದನನು ಫಲ್ಗುನನಿಗೆ ಹೇಳಿದನು:

07147023a ದ್ರೋಣಕರ್ಣೌ ಮಹೇಷ್ವಾಸಾವೇತೌ ಪಾರ್ಷತಸಾತ್ಯಕೀ।
07147023c ಪಾಂಚಾಲಾಂಶ್ಚೈವ ಸಹಿತೌ ಜಘ್ನತುಃ ಸಾಯಕೈರ್ಭೃಶಂ।।

“ಮಹೇಷ್ವಾಸ ದ್ರೋಣ-ಕರ್ಣರು ಪಾರ್ಷತ-ಸಾತ್ಯಕಿಯರನ್ನೂ ಪಾಂಚಾಲ ಸೇನೆಯೊಡನೆ ಅನೇಕ ಸಾಯಕಗಳಿಂದ ಸಂಹರಿಸುತ್ತಿದ್ದಾರೆ.

07147024a ಏತಯೋಃ ಶರವರ್ಷೇಣ ಪ್ರಭಗ್ನಾ ನೋ ಮಹಾರಥಾಃ।
07147024c ವಾರ್ಯಮಾಣಾಪಿ ಕೌಂತೇಯ ಪೃತನಾ ನಾವತಿಷ್ಠತೇ।।

ಕೌಂತೇಯ! ಇವರ ಈ ಶರವರ್ಷಗಳಿಂದ ಪ್ರಭಗ್ನರಾದ ನಮ್ಮ ಮಹಾರಥರು ತಡೆದರೂ ರಣರಂಗದಲ್ಲಿ ನಿಲ್ಲುತ್ತಿಲ್ಲ.

07147025a ಏತಾವಾವಾಂ ಸರ್ವಸೈನ್ಯೈರ್ವ್ಯೂಢೈಃ ಸಮ್ಯಗುದಾಯುಧೈಃ।
07147025c ದ್ರೋಣಂ ಚ ಸೂತಪುತ್ರಂ ಚ ಪ್ರಯತಾವಃ ಪ್ರಬಾಧಿತುಂ।।

ನಾವಿಬ್ಬರೂ ಸರ್ವಸೇನೆಗಳ ವ್ಯೂಹವನ್ನು ರಚಿಸಿ ಎಲ್ಲ ಆಯುಧಗಳೊಂದಿಗೆ ದ್ರೋಣ ಮತ್ತು ಸೂತಪುತ್ರರನ್ನು ಬಾಧೆಪಡಿಸಲು ಸಂಪೂರ್ಣ ಪ್ರಯತ್ನಿಸಬೇಕು.

07147026a ಏತೌ ಹಿ ಬಲಿನೌ ಶೂರೌ ಕೃತಾಸ್ತ್ರೌ ಜಿತಕಾಶಿನೌ।
07147026c ಉಪೇಕ್ಷಿತೌ ಬಲಂ ಕ್ರುದ್ಧೌ ನಾಶಯೇತಾಂ ನಿಶಾಮಿಮಾಂ।
07147026e ಏಷ ಭೀಮೋಽಭಿಯಾತ್ಯುಗ್ರಃ ಪುನರಾವರ್ತ್ಯ ವಾಹಿನೀಂ।।

ಇವರಿಬ್ಬರೂ ಬಲಶಾಲಿಗಳು, ಶೂರರು, ಕೃತಾಸ್ತ್ರರು ಮತ್ತು ವಿಜಯವನ್ನು ಬಯಸುವವರು. ಕ್ರುದ್ಧರಾದ ಇವರು ಬಯಸಿದರೆ ಈ ರಾತ್ರಿಯೇ ನಮ್ಮ ಸೇನೆಯನ್ನು ನಾಶಗೊಳಿಸಬಲ್ಲರು.” ಹೀಗೆ ಮಾತನಾಡಿಕೊಳ್ಳುತ್ತಿದ್ದಾಗ ಅತಿ ಉಗ್ರ ಭೀಮನು ಸೇನೆಯನ್ನು ಪುನಃ ಕರೆದು ತಂದನು.

07147027a ವೃಕೋದರಂ ತಥಾಯಾಂತಂ ದೃಷ್ಟ್ವಾ ತತ್ರ ಜನಾರ್ದನಃ।
07147027c ಪುನರೇವಾಬ್ರವೀದ್ರಾಜನ್ ಹರ್ಷಯನ್ನಿವ ಪಾಂಡವಂ।।

ರಾಜನ್! ಹಾಗೆ ವೃಕೋದರನು ಅಲ್ಲಿಗೆ ಬರುತ್ತಿದ್ದುದನ್ನು ನೋಡಿದ ಜನಾರ್ದನನು ಹರ್ಷಗೊಂಡವನಾಗಿ ಪಾಂಡವನಿಗೆ ಪುನಃ ಹೇಳಿದನು:

07147028a ಏಷ ಭೀಮೋ ರಣಶ್ಲಾಘೀ ವೃತಃ ಸೋಮಕಪಾಂಡವೈಃ।
07147028c ರುಷಿತೋಽಭ್ಯೇತಿ ವೇಗೇನ ದ್ರೋಣಕರ್ಣೌ ಮಹಾಬಲೌ।।

“ಇಗೋ! ರಣಶ್ಲಾಘೀ ಭೀಮನು ಸೋಮಕ-ಪಾಂಡವರಿಂದ ಸುತ್ತುವರೆಯಲ್ಪಟ್ಟು ರೋಷದಿಂದ ವೇಗವಾಗಿ ಮಹಾಬಲ ದ್ರೋಣ-ಕರ್ಣರು ಇರುವಲ್ಲಿಗೆ ಬರುತ್ತಿದ್ದಾನೆ.

07147029a ಏತೇನ ಸಹಿತೋ ಯುಧ್ಯ ಪಾಂಚಾಲೈಶ್ಚ ಮಹಾರಥೈಃ।
07147029c ಆಶ್ವಾಸನಾರ್ಥಂ ಸರ್ವೇಷಾಂ ಸೈನ್ಯಾನಾಂ ಪಾಂಡುನಂದನ।।

ಪಾಂಡುನಂದನ! ಸೇನೆಗಳೆಲ್ಲವಕ್ಕೆ ಆಶ್ವಾಸನೆ ನೀಡುವ ಸಲುವಾಗಿ ನೀನು ಪಾಂಚಾಲ ಮಹಾರಥರೊಂದಿಗೆ ಸೇರಿಕೊಂಡು ದ್ರೋಣ-ಕರ್ಣರೊಡನೆ ಯುದ್ಧಮಾಡು!”

07147030a ತತಸ್ತೌ ಪುರುಷವ್ಯಾಘ್ರಾವುಭೌ ಮಾಧವಪಾಂಡವೌ।
07147030c ದ್ರೋಣಕರ್ಣೌ ಸಮಾಸಾದ್ಯ ಧಿಷ್ಠಿತೌ ರಣಮೂರ್ಧನಿ।।

ಆಗ ಪುರುಷವ್ಯಾಘ್ರ ಮಾಧವ-ಪಾಂಡವರು ರಣಮೂರ್ದನಿಯಲ್ಲಿ ದ್ರೋಣ ಮತ್ತು ಕರ್ಣರ ಎದಿರಾಗಿ ಯುದ್ಧಸನ್ನದ್ಧರಾಗಿ ನಿಂತರು.

07147031a ತತಸ್ತತ್ಪುನರಾವೃತ್ತಂ ಯುಧಿಷ್ಠಿರಬಲಂ ಮಹತ್।
07147031c ತತೋ ದ್ರೋಣಶ್ಚ ಕರ್ಣಶ್ಚ ಪರಾನ್ಮಮೃದತುರ್ಯುಧಿ।।

ಆಗ ಯುಧಿಷ್ಠಿರನ ಮಹಾಸೇನೆಯು ಹಿಂದಿರುಗಿತು. ಮತ್ತು ದ್ರೋಣ-ಕರ್ಣರು ಯುದ್ಧದಲ್ಲಿ ಆ ಶತ್ರುಬಲವನ್ನು ಧ್ವಂಸಗೊಳಿಸತೊಡಗಿದರು.

07147032a ಸ ಸಂಪ್ರಹಾರಸ್ತುಮುಲೋ ನಿಶಿ ಪ್ರತ್ಯಭವನ್ಮಹಾನ್।
07147032c ಯಥಾ ಸಾಗರಯೋ ರಾಜಂಶ್ಚಂದ್ರೋದಯವಿವೃದ್ಧಯೋಃ।।

ಚಂದ್ರೋದಯದಿಂದ ಉಕ್ಕಿಬರುವ ಎರಡು ಮಹಾಸಾಗರಗಳಂತಿದ್ದ ಆ ಎರಡು ಸೇನೆಗಳ ನಡುವೆ ಆ ರಾತ್ರಿ ಪುನಃ ಸಂಪ್ರಹಾರಗಳನ್ನೊಡಗೂಡಿದ ಮಹಾ ತುಮುಲ ಯುದ್ಧವು ಪ್ರಾರಂಭವಾಯಿತು.

07147033a ತತ ಉತ್ಸೃಜ್ಯ ಪಾಣಿಭ್ಯಃ ಪ್ರದೀಪಾಂಸ್ತವ ವಾಹಿನೀ।
07147033c ಯುಯುಧೇ ಪಾಂಡವೈಃ ಸಾರ್ಧಮುನ್ಮತ್ತವದಹಃಕ್ಷಯೇ।।

ಆಗ ನಿನ್ನ ಸೇನೆಯು ಕೈಗಳಲ್ಲಿದ್ದ ದೀವಟಿಗೆಗಳನ್ನು ಬಿಸುಟು ಪಾಂಡವರೊಡನೆ ಉನ್ಮತ್ತರಾದವರಂತೆ ಯುದ್ಧಮಾಡತೊಡಗಿದರು.

07147034a ರಜಸಾ ತಮಸಾ ಚೈವ ಸಂವೃತೇ ಭೃಶದಾರುಣೇ।
07147034c ಕೇವಲಂ ನಾಮಗೋತ್ರೇಣ ಪ್ರಾಯುಧ್ಯಂತ ಜಯೈಷಿಣಃ।।

ಧೂಳು ಮತ್ತು ಕತ್ತಲಿನಿಂದ ಆವೃತವಾದ ಆ ಅತ್ಯಂತ ದಾರುಣ ರಾತ್ರಿಯಲ್ಲಿ ಎರಡು ಕಡೆಯ ಜಯೈಷಿಗಳು ಕೇವಲ ನಾಮಗೋತ್ರಗಳನ್ನು ಹೇಳಿಕೊಂಡು ಯುದ್ಧಮಾಡುತ್ತಿದ್ದರು.

07147035a ಅಶ್ರೂಯಂತ ಹಿ ನಾಮಾನಿ ಶ್ರಾವ್ಯಮಾಣಾನಿ ಪಾರ್ಥಿವೈಃ।
07147035c ಪ್ರಹರದ್ಭಿರ್ಮಹಾರಾಜ ಸ್ವಯಂವರ ಇವಾಹವೇ।।

ಮಹಾರಾಜ! ಸ್ವಯಂವರದಲ್ಲಿ ರಾಜರು ತಮ್ಮ ತಮ್ಮ ಹೆಸರುಗಳನ್ನು ಹೇಳಿಕೊಳ್ಳುವಂತೆ ಯುದ್ಧದಲ್ಲಿ ತಮ್ಮ ತಮ್ಮ ಹೆಸರುಗಳನ್ನು ಕೇಳುವಂತೆ ಹೇಳಿಕೊಳ್ಳುತ್ತಾ ಯುದ್ಧಮಾಡುತ್ತಿದ್ದರು.

07147036a ನಿಃಶಬ್ದಮಾಸೀತ್ಸಹಸಾ ಪುನಃ ಶಬ್ದೋ ಮಹಾನಭೂತ್।
07147036c ಕ್ರುದ್ಧಾನಾಂ ಯುಧ್ಯಮಾನಾನಾಂ ಜಯತಾಂ ಜೀಯತಾಮಪಿ।।

ಯುದ್ಧಮಾಡಿ ವಿಜಯಿಗಳಾಗುತ್ತಿದ್ದವರ ಮತ್ತು ಪರಾಜಿತರಾಗುತ್ತಿದ್ದವರ ಧ್ವನಿಗಳು ಒಮ್ಮಿಂದೊಮ್ಮೆಲೇ ನಿಃಶಬ್ಧವಾಗುತ್ತಿದ್ದವು. ಪುನಃ ಮಹಾ ಶಬ್ಧವುಂಟಾಗುತ್ತಿತ್ತು.

07147037a ಯತ್ರ ಯತ್ರ ಸ್ಮ ದೃಶ್ಯಂತೇ ಪ್ರದೀಪಾಃ ಕುರುಸತ್ತಮ।
07147037c ತತ್ರ ತತ್ರ ಸ್ಮ ತೇ ಶೂರಾ ನಿಪತಂತಿ ಪತಂಗವತ್।।

ಕುರುಸತ್ತಮ! ಎಲ್ಲೆಲ್ಲಿ ದೀವಟಿಗೆಗಳ ಬೆಳಕು ಕಾಣುತ್ತಿತ್ತೋ ಅಲ್ಲಲ್ಲಿ ಪತಂಗದ ಹುಳುಗಳೋಪಾದಿಯಲ್ಲಿ ಶೂರರು ಕೆಳಗೆ ಬೀಳುತ್ತಿದ್ದರು.

07147038a ತಥಾ ಸಮ್ಯುಧ್ಯಮಾನಾನಾಂ ವಿಗಾಢಾಭೂನ್ಮಹಾನಿಶಾ।
07147038c ಪಾಂಡವಾನಾಂ ಚ ರಾಜೇಂದ್ರ ಕೌರವಾಣಾಂ ಚ ಸರ್ವಶಃ।।

ರಾಜೇಂದ್ರ! ಹಾಗೆ ಯುದ್ಧಮಾಡುತ್ತಿದ್ದ ಪಾಂಡವರ ಮತ್ತು ಕೌರವರ ಸುತ್ತಲೂ ದಟ್ಟವಾದ ಮಹಾ ಕತ್ತಲೆಯು ಆವರಿಸಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಸಂಕುಲಯುದ್ಧೇ ಸಪ್ತಚತ್ವಾರಿಂಶಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಸಂಕುಲಯುದ್ಧ ಎನ್ನುವ ನೂರಾನಲ್ವತ್ತೇಳನೇ ಅಧ್ಯಾಯವು.