146 ರಾತ್ರಿಯುದ್ಧೇ ಸಂಕುಲಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಘಟೋತ್ಕಚವಧ ಪರ್ವ

ಅಧ್ಯಾಯ 146

ಸಾರ

ಸಾತ್ಯಕಿಯ ಪರಾಕ್ರಮ, ದುರ್ಯೋಧನನ ಪರಾಜಯ (1-24). ಶಕುನಿ-ಅರ್ಜುನರ ಯುದ್ಧ; ಕೌರವ ಸೇನೆಯ ಪರಾಭವ (25-41). ದ್ರೋಣ-ಧೃಷ್ಟದ್ಯುಮ್ನರ ಯುದ್ಧ; ಧೃಷ್ಟದ್ಯುಮ್ನನ ಪರಾಕ್ರಮ (42-51).

07146001 ಸಂಜಯ ಉವಾಚ।
07146001a ತತಸ್ತೇ ಪ್ರಾದ್ರವನ್ಸರ್ವೇ ತ್ವರಿತಾ ಯುದ್ಧದುರ್ಮದಾಃ।
07146001c ಅಮೃಷ್ಯಮಾಣಾಃ ಸಂರಬ್ಧಾ ಯುಯುಧಾನರಥಂ ಪ್ರತಿ।।

ಸಂಜಯನು ಹೇಳಿದನು: “ಆಗ ನಿನ್ನವರಾದ ಯುದ್ಧದುರ್ಮದರೆಲ್ಲರೂ ರೋಷಗೊಂಡು ಸಂರಬ್ಧರಾಗಿ ಯುಯುಧಾನನ ರಥದ ಬಳಿಗೆ ಧಾವಿಸಿದರು.

07146002a ತೇ ರಥೈಃ ಕಲ್ಪಿತೈ ರಾಜನ್ ಹೇಮರೂಪ್ಯವಿಭೂಷಿತೈಃ।
07146002c ಸಾದಿಭಿಶ್ಚ ಗಜೈಶ್ಚೈವ ಪರಿವವ್ರುಃ ಸ್ಮ ಸಾತ್ವತಂ।।

ರಾಜನ್! ಚಿನ್ನ-ಬೆಳ್ಳಿಗಳಿಂದ ಅಲಂಕರಿಸಲ್ಪಟ್ಟ ರಥಗಳ ಮೇಲೆ, ಕುದುರೆ-ಆನೆಗಳ ಮೇಲೆ ಕುಳಿತು ಅವರು ಸಾತ್ವತನನ್ನು ಸುತ್ತುವರೆದರು.

07146003a ಅಥೈನಂ ಕೋಷ್ಠಕೀಕೃತ್ಯ ಸರ್ವತಸ್ತೇ ಮಹಾರಥಾಃ।
07146003c ಸಿಂಹನಾದಾಂಸ್ತದಾ ಚಕ್ರುಸ್ತರ್ಜಯಂತಃ ಸ್ಮ ಸಾತ್ಯಕಿಂ।।

ಆ ಮಹಾರಥರೆಲ್ಲರೂ ಕೋಟೆಯಾಕಾರವನ್ನು ಮಾಡಿಕೊಂಡು ಸಿಂಹನಾದಗೈಯುತ್ತಾ ಸಾತ್ಯಕಿಯನ್ನು ಹೆದರಿಸುತ್ತಿದ್ದರು.

07146004a ತೇಽಭ್ಯವರ್ಷಂ ಶರೈಸ್ತೀಕ್ಷ್ಣೈಃ ಸಾತ್ಯಕಿಂ ಸತ್ಯವಿಕ್ರಮಂ।
07146004c ತ್ವರಮಾಣಾ ಮಹಾವೀರ್ಯಾ ಮಾಧವಸ್ಯ ವಧೈಷಿಣಃ।।

ಮಾಧವನ ವಧೆಯನ್ನು ಬಯಸಿದ ಅವರು ಮಹಾವೀರ್ಯದಿಂದ ತೀಕ್ಷ್ಣ ಶರಗಳನ್ನು ಸತ್ಯವಿಕ್ರಮ ಸಾತ್ಯಕಿಯ ಮೇಲೆ ಸುರಿಸಿದರು.

07146005a ತಾನ್ದೃಷ್ಟ್ವಾ ಪತತಸ್ತೂರ್ಣಂ ಶೈನೇಯಃ ಪರವೀರಹಾ।
07146005c ಪ್ರತ್ಯಗೃಹ್ಣಾನ್ಮಹಾಬಾಹುಃ ಪ್ರಮುಂಚನ್ವಿಶಿಖಾನ್ಬಹೂನ್।।

ಅವರು ಮೇಲೆ ಬೀಳುತ್ತಿದ್ದನ್ನು ನೋಡಿ ತಕ್ಷಣವೇ ಪರವೀರಹ ಮಹಾಬಾಹು ಶೈನೇಯನು ಅನೇಕ ವಿಶಿಖಗಳನ್ನು ತೆಗೆದುಕೊಂಡು ಅವರ ಮೇಲೆ ಪ್ರಯೋಗಿಸಿದನು.

07146006a ತತ್ರ ವೀರೋ ಮಹೇಷ್ವಾಸಃ ಸಾತ್ಯಕಿರ್ಯುದ್ಧದುರ್ಮದಃ।
07146006c ನಿಚಕರ್ತ ಶಿರಾಂಸ್ಯುಗ್ರೈಃ ಶರೈಃ ಸಮ್ನತಪರ್ವಭಿಃ।।

ಅಲ್ಲಿ ವೀರ ಮಹೇಷ್ವಾಸ ಯುದ್ಧದುರ್ಮದ ಸಾತ್ಯಕಿಯು ಉಗ್ರ ಸನ್ನತಪರ್ವ ಶರಗಳಿಂದ ಅವರ ಶಿರಗಳನ್ನು ತುಂಡರಿಸಿದನು.

07146007a ಹಸ್ತಿಹಸ್ತಾನ್ ಹಯಗ್ರೀವಾನ್ಬಾಹೂನಪಿ ಚ ಸಾಯುಧಾನ್।
07146007c ಕ್ಷುರಪ್ರೈಃ ಪಾತಯಾಮಾಸ ತಾವಕಾನಾಂ ಸ ಮಾಧವಃ।।

ಆ ಮಾಧವನು ನಿನ್ನವರ ಆನೆಗಳ ಸೊಂಡಿಲುಗಳನ್ನೂ, ಕುದುರೆಗಳ ಕುತ್ತಿಗೆಗಳನ್ನೂ, ಆಯುಧಧಾರಿಗಳ ಬಾಹುಗಳನ್ನೂ ಕ್ಷುರಪ್ರಗಳಿಂದ ಬೀಳಿಸಿದನು.

07146008a ಪತಿತೈಶ್ಚಾಮರೈಶ್ಚೈವ ಶ್ವೇತಚ್ಚತ್ರೈಶ್ಚ ಭಾರತ।
07146008c ಬಭೂವ ಧರಣೀ ಪೂರ್ಣಾ ನಕ್ಷತ್ರೈರ್ದ್ಯೌರಿವ ಪ್ರಭೋ।।

ಭಾರತ! ಪ್ರಭೋ! ಬೀಳುತ್ತಿರುವ ಚಾಮರಗಳಿಂದ, ಶ್ವೇತಚತ್ರಗಳಿಂದ ಧರಣಿಯು ನಕ್ಷತ್ರಗಳಿಂದ ತುಂಬಿದ ಆಕಾಶದಂತಾಯಿತು.

07146009a ತೇಷಾಂ ತು ಯುಯುಧಾನೇನ ಯುಧ್ಯತಾಂ ಯುಧಿ ಭಾರತ।
07146009c ಬಭೂವ ತುಮುಲಃ ಶಬ್ದಃ ಪ್ರೇತಾನಾಮಿವ ಕ್ರಂದತಾಂ।।

ಭಾರತ! ಯುದ್ಧದಲ್ಲಿ ಯುಯುಧಾನನೊಂದಿಗೆ ಯುದ್ಧಮಾಡುತ್ತಿರುವಾಗ ನಡೆದ ತುಮುಲ ಶಬ್ಧವು ಪ್ರೇತಗಳ ಆಕ್ರಂದನದಂತೆ ಕೇಳಿಬರುತ್ತಿತ್ತು.

07146010a ತೇನ ಶಬ್ದೇನ ಮಹತಾ ಪೂರಿತಾಸೀದ್ವಸುಂಧರಾ।
07146010c ರಾತ್ರಿಃ ಸಮಭವಚ್ಚೈವ ತೀವ್ರರೂಪಾ ಭಯಾವಹಾ।।

ಆ ಮಹಾಶಬ್ಧದಿಂದ ವಸುಂಧರೆಯು ತುಂಬಿಹೋಯಿತು. ರಾತ್ರಿಯೂ ಕೂಡ ಭಯವನ್ನುಂಟುಮಾಡುವ ತೀವ್ರರೂಪವನ್ನು ತಾಳಿತು.

07146011a ದೀರ್ಯಮಾಣಂ ಬಲಂ ದೃಷ್ಟ್ವಾ ಯುಯುಧಾನಶರಾಹತಂ।
07146011c ಶ್ರುತ್ವಾ ಚ ವಿಪುಲಂ ನಾದಂ ನಿಶೀಥೇ ಲೋಮಹರ್ಷಣಂ।।
07146012a ಸುತಸ್ತವಾಬ್ರವೀದ್ರಾಜನ್ಸಾರಥಿಂ ರಥಿನಾಂ ವರಃ।
07146012c ಯತ್ರೈಷ ಶಬ್ದಸ್ತತ್ರಾಶ್ವಾಂಶ್ಚೋದಯೇತಿ ಪುನಃ ಪುನಃ।।

ರಾಜನ್! ಯುಯುಧಾನನ ಶರಗಳ ಹೊಡೆತಕ್ಕೆ ಸಿಲುಕಿ ತನ್ನ ಬಲವು ಧ್ವಂಸವಾಗುತ್ತಿರುವುದನ್ನು ನೋಡಿ ಮತ್ತು ನಿಶಿಯಲ್ಲಿ ಕೇಳಿಬರುತ್ತಿದ್ದ ರೋಮಹರ್ಷಣ ವಿಪುಲ ನಾದವನ್ನು ಕೇಳಿ ನಿನ್ನ ಮಗ ರಥಿಗಳಲ್ಲಿ ಶ್ರೇಷ್ಠನು ಸಾರಥಿಗೆ “ಎಲ್ಲಿಂದ ಈ ಶಬ್ಧವು ಕೇಳಿಬರುತ್ತಿದೆಯೋ ಅಲ್ಲಿಗೆ ಕುದುರೆಗಳನ್ನು ಪ್ರಚೋದಿಸು!” ಎಂದು ಪುನಃ ಪುನಃ ಹೇಳಿದನು.

07146013a ತೇನ ಸಂಚೋದ್ಯಮಾನಸ್ತು ತತಸ್ತಾಂಸ್ತುರಗೋತ್ತಮಾನ್।
07146013c ಸೂತಃ ಸಂಚೋದಯಾಮಾಸ ಯುಯುಧಾನರಥಂ ಪ್ರತಿ।।

ಅವನಿಂದ ಪ್ರಚೋದನೆಗೊಂಡು ಸೂತನು ಆ ಉತ್ತಮ ತುರುಗಗಳನ್ನು ಯುಯುಧಾನನ ರಥದ ಕಡೆ ಪ್ರಚೋದಿಸಿದನು.

07146014a ತತೋ ದುರ್ಯೋಧನಃ ಕ್ರುದ್ಧೋ ದೃಢಧನ್ವಾ ಜಿತಕ್ಲಮಃ।
07146014c ಶೀಘ್ರಹಸ್ತಶ್ಚಿತ್ರಯೋಧೀ ಯುಯುಧಾನಮುಪಾದ್ರವತ್।।

ಆಗ ಕ್ರುದ್ಧ ದೃಢಧನ್ವಿ ಜಿತಕ್ಲಮ ಶೀಘ್ರಹಸ್ತ ಚಿತ್ರಯೋಧೀ ದುರ್ಯೋಧನನು ಯುಯುಧಾನನ ಮೇಲೆ ಧಾಳಿಮಾಡಿದನು.

07146015a ತತಃ ಪೂರ್ಣಾಯತೋತ್ಸೃಷ್ಟೈರ್ಮಾಂಸಶೋಣಿತಭೋಜನೈಃ।
07146015c ದುರ್ಯೋಧನಂ ದ್ವಾದಶಭಿರ್ಮಾಧವಃ ಪ್ರತ್ಯವಿಧ್ಯತ।।

ಆಗ ಪೂರ್ಣವಾಗಿ ಸೆಳೆದು ಬಿಟ್ಟ ಮಾಂಸ-ರಕ್ತಗಳೇ ಭೋಜನವಾಗಿರುವ ಹನ್ನೆರಡು ಬಾಣಗಳಿಂದ ಮಾಧವನು ದುರ್ಯೋಧನನನ್ನು ಗಾಯಗೊಳಿಸಿದನು.

07146016a ದುರ್ಯೋಧನಸ್ತೇನ ತಥಾ ಪೂರ್ವಂ ಏವಾರ್ದಿತಃ ಶರೈಃ।
07146016c ಶೈನೇಯಂ ದಶಭಿರ್ಬಾಣೈಃ ಪ್ರತ್ಯವಿಧ್ಯದಮರ್ಷಿತಃ।।

ತಾನು ಬಾಣಗಳನ್ನು ಬಿಡುವ ಮೊದಲೇ ಗಾಯಗೊಳಿಸಿದ ಶೈನೇಯನನ್ನು ಕೋಪಗೊಂಡ ದುರ್ಯೋಧನನು ಹತ್ತು ಬಾಣಗಳಿಂದ ಪ್ರತಿಯಾಗಿ ಗಾಯಗೊಳಿಸಿದನು.

07146017a ತತಃ ಸಮಭವದ್ಯುದ್ಧಮಾಕುಲಂ ಭರತರ್ಷಭ।
07146017c ಪಾಂಚಾಲಾನಾಂ ಚ ಸರ್ವೇಷಾಂ ಭಾರತಾನಾಂ ಚ ದಾರುಣಂ।।

ಭರತರ್ಷಭ! ಆಗ ಪಾಂಚಾಲರೆಲ್ಲರ ಮತ್ತು ಭಾರತರ ದಾರುಣ ಸಂಕುಲ ಯುದ್ಧವು ಪ್ರಾರಂಭವಾಯಿತು.

07146018a ಶೈನೇಯಸ್ತು ರಣೇ ಕ್ರುದ್ಧಸ್ತವ ಪುತ್ರಂ ಮಹಾರಥಂ।
07146018c ಸಾಯಕಾನಾಮಶೀತ್ಯಾ ತು ವಿವ್ಯಾಧೋರಸಿ ಭಾರತ।।

ಭಾರತ! ರಣದಲ್ಲಿ ಕ್ರುದ್ಧ ಶೈನೇಯನಾದರೋ ನಿನ್ನ ಪುತ್ರ ಮಹಾರಥನ ಎದೆಗೆ ಹರಿತ ಸಾಯಕಗಳಿಂದ ಹೊಡೆದು ಗಾಯಗೊಳಿಸಿದನು.

07146019a ತತೋಽಸ್ಯ ವಾಹಾನ್ಸಮರೇ ಶರೈರ್ನಿನ್ಯೇ ಯಮಕ್ಷಯಂ।
07146019c ಸಾರಥಿಂ ಚ ರಥಾತ್ತೂರ್ಣಂ ಪಾತಯಾಮಾಸ ಪತ್ರಿಣಾ।।

ಅಗ ಅವನು ಸಮರದಲ್ಲಿ ಕುದುರೆಗಳನ್ನು ಶರಗಳಿಂದ ಯಮಕ್ಷಯಕ್ಕೆ ಕಳುಹಿಸಿದನು. ಮತ್ತು ತಕ್ಷಣವೇ ಪತ್ರಿಗಳಿಂದ ಸಾರಥಿಯನ್ನು ರಥದಿಂದ ಕೆಡವಿದನು.

07146020a ಹತಾಶ್ವೇ ತು ರಥೇ ತಿಷ್ಠನ್ಪುತ್ರಸ್ತವ ವಿಶಾಂ ಪತೇ।
07146020c ಮುಮೋಚ ನಿಶಿತಾನ್ಬಾಣಾಂ ಶೈನೇಯಸ್ಯ ರಥಂ ಪ್ರತಿ।।

ವಿಶಾಂಪತೇ! ಕುದುರೆಗಳು ಹತರಾದ ರಥದ ಮೇಲೆಯೇ ನಿಂತುಕೊಂಡು ನಿನ್ನ ಮಗನು ಶೈನೇಯನ ರಥದ ಕಡೆ ನಿಶಿತ ಬಾಣಗಳನ್ನು ಪ್ರಯೋಗಿಸಿದನು.

07146021a ಶರಾನ್ಪಂಚಾಶತಸ್ತಾಂಸ್ತು ಶೈನೇಯಃ ಕೃತಹಸ್ತವತ್।
07146021c ಚಿಚ್ಚೇದ ಸಮರೇ ರಾಜನ್ಪ್ರೇಷಿತಾಂಸ್ತನಯೇನ ತೇ।।

ರಾಜನ್! ನಿನ್ನ ಮಗನು ಕಳುಹಿಸಿದ ಆ ಐವತ್ತು ಶರಗಳನ್ನು ಕೃತಹಸ್ತ ಶೈನೇಯನು ಸಮರದಲ್ಲಿ ಕತ್ತರಿಸಿದನು.

07146022a ಅಥಾಪರೇಣ ಭಲ್ಲೇನ ಮುಷ್ಟಿದೇಶೇ ಮಹದ್ಧನುಃ।
07146022c ಚಿಚ್ಚೇದ ರಭಸೋ ಯುದ್ಧೇ ತವ ಪುತ್ರಸ್ಯ ಮಾರಿಷ।।

ಮಾರಿಷ! ಅಷ್ಟರಲ್ಲಿಯೇ ಇನ್ನೊಂದು ಭಲ್ಲದಿಂದ ರಭಸವಾಗಿ ಯುದ್ಧದಲ್ಲಿ ನಿನ್ನ ಮಗನ ಮಹಾಧನುಸ್ಸನ್ನು ಮುಷ್ಟಿದೇಶದಲ್ಲಿ ತುಂಡರಿಸಿದನು.

07146023a ವಿರಥೋ ವಿಧನುಷ್ಕಶ್ಚ ಸರ್ವಲೋಕೇಶ್ವರಃ ಪ್ರಭುಃ।
07146023c ಆರುರೋಹ ರಥಂ ತೂರ್ಣಂ ಭಾಸ್ವರಂ ಕೃತವರ್ಮಣಃ।।

ವಿರಥನಾದ, ಧನುಸ್ಸನ್ನೂ ಕಳೆದುಕೊಂಡ ಸರ್ವಲೋಕೇಶ್ವರ ಪ್ರಭುವು ತಕ್ಷಣವೇ ಕೃತವರ್ಮನ ಹೊಳೆಯುತ್ತಿದ್ದ ರಥವನ್ನು ಏರಿಕೊಂಡನು.

07146024a ದುರ್ಯೋಧನೇ ಪರಾವೃತ್ತೇ ಶೈನೇಯಸ್ತವ ವಾಹಿನೀಂ।
07146024c ದ್ರಾವಯಾಮಾಸ ವಿಶಿಖೈರ್ನಿಶಾಮಧ್ಯೇ ವಿಶಾಂ ಪತೇ।।

ವಿಶಾಂಪತೇ! ದುರ್ಯೋಧನನು ಪರಾಜಿತನಾಗಲು ಶೈನೇಯನು ನಿನ್ನ ಸೇನೆಯನ್ನು ಆ ರಾತ್ರಿಮಧ್ಯದಲ್ಲಿ ವಿಶಿಖಗಳಿಂದ ಪಲಾಯನಗೊಳಿಸಿದನು.

07146025a ಶಕುನಿಶ್ಚಾರ್ಜುನಂ ರಾಜನ್ಪರಿವಾರ್ಯ ಸಮಂತತಃ।
07146025c ರಥೈರನೇಕಸಾಹಸ್ರೈರ್ಗಜೈಶ್ಚೈವ ಸಹಸ್ರಶಃ।
07146025e ತಥಾ ಹಯಸಹಸ್ರೈಶ್ಚ ತುಮುಲಂ ಸರ್ವತೋಽಕರೋತ್।।

ರಾಜನ್! ಶಕುನಿಯು ಅರ್ಜುನನನ್ನು ಎಲ್ಲಕಡೆಗಳಿಂದ ಸುತ್ತುವರೆದನು. ಅನೇಕ ಸಹಸ್ರ ರಥಗಳಿಂದ, ಸಹಸ್ರಾರು ಆನೆಗಳಿಂದ ಮತ್ತು ಹಾಗೆಯೇ ಸಹಸ್ರಾರು ಕುದುರೆಗಳಿಂದ ಕೂಡಿದವನಾಗಿ ಎಲ್ಲಕಡೆಗಳಿಂದ ತುಮುಲ ಯುದ್ಧವನ್ನು ನಡೆಸಿದನು.

07146026a ತೇ ಮಹಾಸ್ತ್ರಾಣಿ ದಿವ್ಯಾನಿ ವಿಕಿರಂತೋಽರ್ಜುನಂ ಪ್ರತಿ।
07146026c ಅರ್ಜುನಂ ಯೋಧಯಂತಿ ಸ್ಮ ಕ್ಷತ್ರಿಯಾಃ ಕಾಲಚೋದಿತಾಃ।।

ಕಾಲಚೋದಿತ ಆ ಕ್ಷತ್ರಿಯರು ಅರ್ಜುನನ ಮೇಲೆ ದಿವ್ಯ ಮಹಾಸ್ತ್ರಗಳನ್ನು ಎರಚುತ್ತಾ ಅರ್ಜುನನೊಂದಿಗೆ ಯುದ್ಧಮಾಡುತ್ತಿದ್ದರು.

07146027a ತಾನ್ಯರ್ಜುನಃ ಸಹಸ್ರಾಣಿ ರಥವಾರಣವಾಜಿನಾಂ।
07146027c ಪ್ರತ್ಯವಾರಯದಾಯಸ್ತಃ ಪ್ರಕುರ್ವನ್ವಿಪುಲಂ ಕ್ಷಯಂ।।

ಬಳಲಿದ್ದರೂ ಅರ್ಜುನನು ವಿಪುಲ ಕ್ಷಯವನ್ನುಂಟುಮಾಡುತ್ತಾ ಆ ಸಹಸ್ರಾರು ರಥ-ಆನೆ-ಕುದುರೆಗಳನ್ನು ತಡೆದು ನಿಲ್ಲಿಸಿದನು.

07146028a ತತಸ್ತು ಸಮರೇ ಶೂರಃ ಶಕುನಿಃ ಸೌಬಲಸ್ತದಾ।
07146028c ವಿವ್ಯಾಧ ನಿಶಿತೈರ್ಬಾಣೈರರ್ಜುನಂ ಪ್ರಹಸನ್ನಿವ।।

ಆಗ ಸಮರದಲ್ಲಿ ಶೂರ ಶಕುನಿ ಸೌಬಲನು ನಸುನಗುತ್ತಾ ಅರ್ಜುನನನ್ನು ನಿಶಿತ ಬಾಣಗಳಿಂದ ಗಾಯಗೊಳಿಸಿದನು.

07146029a ಪುನಶ್ಚೈವ ಶತೇನಾಸ್ಯ ಸಂರುರೋಧ ಮಹಾರಥಂ।
07146029c ತಮರ್ಜುನಸ್ತು ವಿಂಶತ್ಯಾ ವಿವ್ಯಾಧ ಯುಧಿ ಭಾರತ।।

ವಿಶಾಂಪತೇ! ಪುನಃ ನೂರು ಬಾಣಗಳಿಂದ ಆ ಮಹಾರಥನನ್ನು ಮುಂದೆಹೋಗದಂತೆ ತಡೆದನು. ಅರ್ಜುನನಾದರೋ ಯುದ್ಧದಲ್ಲಿ ಅವನನ್ನು ಇಪ್ಪತ್ತು ಬಾಣಗಳಿಂದ ಹೊಡೆದನು.

07146030a ಅಥೇತರಾನ್ಮಹೇಷ್ವಾಸಾಂಸ್ತ್ರಿಭಿಸ್ತ್ರಿಭಿರವಿಧ್ಯತ।
07146030c ಸಂವಾರ್ಯ ತಾನ್ಬಾಣಗಣೈರ್ಯುಧಿ ರಾಜನ್ಧನಂಜಯಃ।
07146030e ಅವಧೀತ್ತಾವಕಾನ್ಯೋಧಾನ್ವಜ್ರಪಾಣಿರಿವಾಸುರಾನ್।।

ಇತರ ಮಹೇಷ್ವಾಸರನ್ನೂ ಅವನು ಮೂರು ಮೂರು ಬಾಣಗಳಿಂದ ಹೊಡೆದನು. ರಾಜನ್! ಅವರನ್ನು ಯುದ್ಧದಲ್ಲಿ ಬಾಣಗಣಗಳಿಂದ ತಡೆಯುತ್ತಾ ಧನಂಜಯನು ವಜ್ರಪಾಣಿಯು ಅಸುರರನ್ನು ಹೇಗೋ ಹಾಗೆ ನಿನ್ನಕಡೆಯ ಯೋಧರನ್ನು ಗಾಯಗೊಳಿಸಿದನು.

07146031a ಭುಜೈಶ್ಚಿನ್ನೈರ್ಮಹಾರಾಜ ಶರೀರೈಶ್ಚ ಸಹಸ್ರಶಃ।
07146031c ಸಮಾಸ್ತೀರ್ಣಾ ಧರಾ ತತ್ರ ಬಭೌ ಪುಷ್ಪೈರಿವಾಚಿತಾ।।

ಮಹಾರಾಜ! ಕತ್ತರಿಸಲ್ಪಟ್ಟು ಹರಡಿಹೋಗಿದ್ದ ಸಹಸ್ರಾರು ಭುಜಗಳಿಂದ ಮತ್ತು ಶರೀರಗಳಿಂದ ರಣಭೂಮಿಯು ಪುಷ್ಪಗಳಿಂದ ವ್ಯಾಪ್ತವಾಗಿರುವಂತೆ ತೋರುತ್ತಿತ್ತು.

07146032a ಸ ವಿದ್ಧ್ವಾ ಶಕುನಿಂ ಭೂಯಃ ಪಂಚಭಿರ್ನತಪರ್ವಭಿಃ।
07146032c ಉಲೂಕಂ ತ್ರಿಭಿರಾಜಘ್ನೇ ತ್ರಿಭಿರೇವ ಮಹಾಯಸೈಃ।।

ಶಕುನಿಯನ್ನು ಪುನಃ ಐದು ನತಪರ್ವಗಳಿಂದ ಹೊಡೆದು ಅವನು ಉಲೂಕನನ್ನು ಮೂರು ಮೂರು ಮಹಾಯಸಗಳಿಂದ ಹೊಡೆದನು.

07146033a ತಮುಲೂಕಸ್ತಥಾ ವಿದ್ಧ್ವಾ ವಾಸುದೇವಮತಾಡಯತ್।
07146033c ನನಾದ ಚ ಮಹಾನಾದಂ ಪೂರಯನ್ವಸುಧಾತಲಂ।।

ಆಗ ಉಲೂಕನು ವಾಸುದೇವನನನ್ನು ಹೊಡೆದನು ಮತ್ತು ವಸುಧಾತಲವನ್ನು ತುಂಬಿಬಿಡುವಂತೆ ಮಹಾನಾದಗೈದನು.

07146034a ಅರ್ಜುನಸ್ತು ದ್ರುತಂ ಗತ್ವಾ ಶಕುನೇರ್ಧನುರಾಚ್ಚಿನತ್।
07146034c ನಿನ್ಯೇ ಚ ಚತುರೋ ವಾಹಾನ್ಯಮಸ್ಯ ಸದನಂ ಪ್ರತಿ।।

ಅರ್ಜುನನಾದರೋ ಮುಂದುವರೆದು ಶಕುನಿಯ ಧನುಸ್ಸನ್ನು ಕತ್ತರಿಸಿದನು ಮತ್ತು ಅವನ ನಾಲ್ಕು ಕುದುರೆಗಳನ್ನು ಯಮಸದನದ ಕಡೆ ಕಳುಹಿಸಿದನು.

07146035a ತತೋ ರಥಾದವಪ್ಲುತ್ಯ ಸೌಬಲೋ ಭರತರ್ಷಭ।
07146035c ಉಲೂಕಸ್ಯ ರಥಂ ತೂರ್ಣಮಾರುರೋಹ ವಿಶಾಂ ಪತೇ।।

ವಿಶಾಂಪತೇ! ಭರತರ್ಷಭ! ಆಗ ರಥದಿಂದ ಹಾರಿ ಸೌಬಲನು ಬೇಗನೇ ಉಲೂಕನ ರಥವನ್ನೇರಿದನು.

07146036a ತಾವೇಕರಥಮಾರೂಢೌ ಪಿತಾಪುತ್ರೌ ಮಹಾರಥೌ।
07146036c ಪಾರ್ಥಂ ಸಿಷಿಚತುರ್ಬಾಣೈರ್ಗಿರಿಂ ಮೇಘಾವಿವೋತ್ಥಿತೌ।।

ಅವರಿಬ್ಬರು ಪಿತಾ-ಪುತ್ರ ಮಹಾರಥರೂ ಒಂದೇ ರಥವನ್ನೇರಿ ಮೇಲೆದ್ದ ಮೋಡಗಳು ಗಿರಿಯಮೇಲೆ ಹೇಗೋ ಹಾಗೆ ಪಾರ್ಥನ ಮೇಲೆ ಬಾಣಗಳ ಮಳೆಗರೆದರು.

07146037a ತೌ ತು ವಿದ್ಧ್ವಾ ಮಹಾರಾಜ ಪಾಂಡವೋ ನಿಶಿತೈಃ ಶರೈಃ।
07146037c ವಿದ್ರಾವಯಂಸ್ತವ ಚಮೂಂ ಶತಶೋ ವ್ಯಧಮಚ್ಚರೈಃ।।

ಮಹಾರಾಜ! ಪಾಂಡವನು ಅವರಿಬ್ಬರನ್ನೂ ನಿಶಿತ ಶರಗಳಿಂದ ಹೊಡೆದು ನಿನ್ನ ಸೇನೆಯನ್ನು ನೂರಾರು ಶರಗಳಿಂದ ಹೊಡೆದು ಓಡಿಸಿದನು.

07146038a ಅನಿಲೇನ ಯಥಾಭ್ರಾಣಿ ವಿಚ್ಚಿನ್ನಾನಿ ಸಮಂತತಃ।
07146038c ವಿಚ್ಚಿನ್ನಾನಿ ತಥಾ ರಾಜನ್ಬಲಾನ್ಯಾಸನ್ವಿಶಾಂ ಪತೇ।।

ರಾಜನ್! ವಿಶಾಂಪತೇ! ಗಾಳಿಯಿಂದ ಮೋಡಗಳು ಹೇಗೆ ಎಲ್ಲ ಕಡೆ ಚದುರಿ ಹೋಗುವವೋ ಹಾಗೆ ನಿನ್ನ ಸೇನೆಯು ಛಿದ್ರಛಿದ್ರವಾಗಿ ಒಡೆದುಹೋಯಿತು.

07146039a ತದ್ಬಲಂ ಭರತಶ್ರೇಷ್ಠ ವಧ್ಯಮಾನಂ ತಥಾ ನಿಶಿ।
07146039c ಪ್ರದುದ್ರಾವ ದಿಶಃ ಸರ್ವಾ ವೀಕ್ಷಮಾಣಂ ಭಯಾರ್ದಿತಂ।।

ಭರತಶ್ರೇಷ್ಠ! ರಾತ್ರಿಯಲ್ಲಿ ಹಾಗೆ ವಧಿಸಲ್ಪಡುತ್ತಿದ್ದ ಆ ಸೇನೆಯು ಭಯಾರ್ದಿತಗೊಂಡು ದಿಕ್ಕುಗಳನ್ನು ನೋಡುತ್ತಾ ಓಡಿಹೋಯಿತು.

07146040a ಉತ್ಸೃಜ್ಯ ವಾಹಾನ್ಸಮರೇ ಚೋದಯಂತಸ್ತಥಾಪರೇ।
07146040c ಸಂಭ್ರಾಂತಾಃ ಪರ್ಯಧಾವಂತ ತಸ್ಮಿಂಸ್ತಮಸಿ ದಾರುಣೇ।।

ಆ ದಾರುಣ ಕತ್ತಲೆಯ ಸಮರದಲ್ಲಿ ಕೆಲವರು ಸಂಭ್ರಾಂತರಾಗಿ ವಾಹನಗಳನ್ನೇ ಬಿಟ್ಟು ಓಡಿಹೋಗುತ್ತಿದ್ದರು.

07146041a ವಿಜಿತ್ಯ ಸಮರೇ ಯೋಧಾಂಸ್ತಾವಕಾನ್ಭರತರ್ಷಭ।
07146041c ದಧ್ಮತುರ್ಮುದಿತೌ ಶಂಖೌ ವಾಸುದೇವಧನಂಜಯೌ।।

ಭರತರ್ಷಭ! ಸಮರದಲ್ಲಿ ನಿನ್ನಕಡೆಯ ಯೋಧರನ್ನು ಸೋಲಿಸಿ ಮುದಿತರಾದ ವಾಸುದೇವ-ಧನಂಜಯರು ಶಂಖಗಳನ್ನು ಮೊಳಗಿಸಿದರು.

07146042a ಧೃಷ್ಟದ್ಯುಮ್ನೋ ಮಹಾರಾಜ ದ್ರೋಣಂ ವಿದ್ಧ್ವಾ ತ್ರಿಭಿಃ ಶರೈಃ।
07146042c ಚಿಚ್ಚೇದ ಧನುಷಸ್ತೂರ್ಣಂ ಜ್ಯಾಂ ಶರೇಣ ಶಿತೇನ ಹ।।

ಮಹಾರಾಜ! ಧೃಷ್ಟದ್ಯುಮ್ನನು ದ್ರೋಣನನ್ನು ಮೂರು ಶರಗಳಿಂದ ಹೊಡೆದು ತಕ್ಷಣವೇ ನಿಶಿತ ಶರದಿಂದ ಅವನ ಧನುಸ್ಸಿನ ಮೌರ್ವಿಯನ್ನು ಕತ್ತರಿಸಿದನು.

07146043a ತನ್ನಿಧಾಯ ಧನುರ್ನೀಡೇ ದ್ರೋಣಃ ಕ್ಷತ್ರಿಯಮರ್ದನಃ।
07146043c ಆದದೇಽನ್ಯದ್ಧನುಃ ಶೂರೋ ವೇಗವತ್ಸಾರವತ್ತರಂ।।

ಕ್ಷತ್ರಿಯಮರ್ದನ ಶೂರ ದ್ರೋಣನು ಆ ಧನುಸ್ಸನ್ನು ಕೆಳಗಿಟ್ಟು ಇನ್ನೊಂದು ವೇಗಶಾಲಿ ಭಾರ ಧನುಸ್ಸನ್ನು ಎತ್ತಿಕೊಂಡನು.

07146044a ಧೃಷ್ಟದ್ಯುಮ್ನಂ ತತೋ ದ್ರೋಣೋ ವಿದ್ಧ್ವಾ ಸಪ್ತಭಿರಾಶುಗೈಃ।
07146044c ಸಾರಥಿಂ ಪಂಚಭಿರ್ಬಾಣೈ ರಾಜನ್ವಿವ್ಯಾಧ ಸಮ್ಯುಗೇ।।

ರಾಜನ್! ಆಗ ದ್ರೋಣನು ಧೃಷ್ಟದ್ಯುಮ್ನನನ್ನು ಏಳು ಆಶುಗಗಳಿಂದ ಹೊಡೆದು ಸಂಯುಗದಲ್ಲಿ ಐದು ಬಾಣಗಳಿಂದ ಅವನ ಸಾರಥಿಯನ್ನೂ ಹೊಡೆದನು.

07146045a ತಂ ನಿವಾರ್ಯ ಶರೈಸ್ತೂರ್ಣಂ ಧೃಷ್ಟದ್ಯುಮ್ನೋ ಮಹಾರಥಃ।
07146045c ವ್ಯಧಮತ್ಕೌರವೀಂ ಸೇನಾಂ ಶತಶೋಽಥ ಸಹಸ್ರಶಃ।।

ಅವನನ್ನು ತಡೆಹಿಡಿದು ಮಹಾರಥ ಧೃಷ್ಟದ್ಯುಮ್ನನು ತಕ್ಷಣವೇ ನೂರಾರು ಸಾವಿರಾರು ಕೌರವೀ ಸೇನೆಯನ್ನು ವಧಿಸಿದನು.

07146046a ವಧ್ಯಮಾನೇ ಬಲೇ ತಸ್ಮಿಂಸ್ತವ ಪುತ್ರಸ್ಯ ಮಾರಿಷ।
07146046c ಪ್ರಾವರ್ತತ ನದೀ ಘೋರಾ ಶೋಣಿತೌಘತರಂಗಿಣೀ।।

ಮಾರಿಷ! ನಿನ್ನ ಮಗನ ಸೇನೆಯು ಹಾಗೆ ವಧಿಸಲ್ಪಡುತ್ತಿರುವಾಗ ಘೋರ ರಕ್ತದ ಅಲೆಗಳುಳ್ಳ ನದಿಯೇ ಹರಿಯತೊಡಗಿತು.

07146047a ಉಭಯೋಃ ಸೇನಯೋರ್ಮಧ್ಯೇ ನರಾಶ್ವದ್ವಿಪವಾಹಿನೀ।
07146047c ಯಥಾ ವೈತರಣೀ ರಾಜನ್ಯಮರಾಷ್ಟ್ರಪುರಂ ಪ್ರತಿ।।

ರಾಜನ್! ಯಮರಾಷ್ಟ್ರಪುರದ ಬಳಿ ವೈತರಣಿಯು ಹೇಗೋ ಹಾಗೆ ಎರಡೂ ಸೇನೆಗಳ ಮಧ್ಯೆ ನರ-ಅಶ್ವ-ಗಜಗಳನ್ನು ಹೊತ್ತುಕೊಂಡು ಹೋಗುತ್ತಿದ್ದ ಆ ನದಿಯು ಹರಿಯುತ್ತಿತ್ತು.

07146048a ದ್ರಾವಯಿತ್ವಾ ತು ತತ್ಸೈನ್ಯಂ ಧೃಷ್ಟದ್ಯುಮ್ನಃ ಪ್ರತಾಪವಾನ್।
07146048c ಅತ್ಯರಾಜತ ತೇಜಸ್ವೀ ಶಕ್ರೋ ದೇವಗಣೇಷ್ವಿವ।।

ಆ ಸೇನೆಯನ್ನು ಓಡಿಸಿದ ಪ್ರತಾಪವಾನ್ ತೇಜಸ್ವೀ ಧೃಷ್ಟದ್ಯುಮ್ನನು ದೇವಗಣಗಳ ಮಧ್ಯೆ ಶಕ್ರನಂತೆ ಅತಿಯಾಗಿ ರಾರಾಜಿಸಿದನು.

07146049a ಅಥ ದಧ್ಮುರ್ಮಹಾಶಂಖಾನ್ಧೃಷ್ಟದ್ಯುಮ್ನಶಿಖಂಡಿನೌ।
07146049c ಯಮೌ ಚ ಯುಯುಧಾನಶ್ಚ ಪಾಂಡವಶ್ಚ ವೃಕೋದರಃ।।

ಆಗ ಧೃಷ್ಟದ್ಯುಮ್ನ-ಶಿಖಂಡಿಯರು, ಯಮಳರಿಬ್ಬರು, ಯುಯುಧಾನ ಮಾತು ಪಾಂಡವ ವೃಕೋದರರು ಮಹಾಶಂಖಗಳನ್ನೂದಿದರು.

07146050a ಜಿತ್ವಾ ರಥಸಹಸ್ರಾಣಿ ತಾವಕಾನಾಂ ಮಹಾರಥಾಃ।
07146050c ಸಿಂಹನಾದರವಾಂಶ್ಚಕ್ರುಃ ಪಾಂಡವಾ ಜಿತಕಾಶಿನಃ।।

ನಿನ್ನಕಡೆಯ ಸಹಸ್ರಾರು ರಥಗಳನ್ನು ಗೆದ್ದು ವಿಜಯೋತ್ಸಾಹದಿಂದ ಮಹಾರಥ ಪಾಂಡವರು ಮಹಾಧ್ವನಿಯ ಸಿಂಹನಾದಗೈದರು.

07146051a ಪಶ್ಯತಸ್ತವ ಪುತ್ರಸ್ಯ ಕರ್ಣಸ್ಯ ಚ ಮದೋತ್ಕಟಾಃ।
07146051c ತಥಾ ದ್ರೋಣಸ್ಯ ಶೂರಸ್ಯ ದ್ರೌಣೇಶ್ಚೈವ ವಿಶಾಂ ಪತೇ।।

ವಿಶಾಂಪತೇ! ನಿನ್ನ ಪುತ್ರ, ಕರ್ಣ, ಹಾಗೆಯೇ ದ್ರೋಣ ಮತ್ತು ಶೂರ ದ್ರೌಣಿಯರು ಆ ಮದೋತ್ಕಟರನ್ನು ನೋಡುತ್ತಲೇ ಇದ್ದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಸಂಕುಲಯುದ್ಧೇ ಷಟ್ಚತ್ವಾರಿಂಶಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಸಂಕುಲಯುದ್ಧ ಎನ್ನುವ ನೂರಾನಲ್ವತ್ತಾರನೇ ಅಧ್ಯಾಯವು.