ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಘಟೋತ್ಕಚವಧ ಪರ್ವ
ಅಧ್ಯಾಯ 145
ಸಾರ
ದ್ರೋಣ-ಧೃಷ್ಟದ್ಯುಮ್ನರ ಯುದ್ಧ (1-19). ಧೃಷ್ಟದ್ಯುಮ್ನನಿಂದ ದ್ರುಮಸೇನನ ವಧೆ (20-28). ಸಾತ್ಯಕಿ-ಕರ್ಣರ ಯುದ್ಧ (29-43). ಅರ್ಜುನನನ್ನು ತಡೆದರು ತಾವು ಷಡ್ರಥರು ಹಿಂದೆ ಅಭಿಮನ್ಯುವನ್ನು ಹೇಗೋ ಹಾಗೆ ಇಂದು ಸಾತ್ಯಕಿ-ಧೃಷ್ಟದ್ಯುಮ್ನರನ್ನು ಕೊಲ್ಲಬಹುದೆಂದು ಕರ್ಣನು ದುರ್ಯೋಧನನಿಗೆ ಹೇಳಿದುದು (44-58). ಅರ್ಜುನನನ್ನು ತಡೆಯಲು ದುರ್ಯೋಧನನು ಶಕುನಿಯನ್ನು ಕಳುಹಿಸಿದುದು (59-68).
07145001 ಸಂಜಯ ಉವಾಚ।
07145001a ತಸ್ಮಿನ್ಸುತುಮುಲೇ ಯುದ್ಧೇ ವರ್ತಮಾನೇ ಭಯಾವಹೇ।
07145001c ಧೃಷ್ಟದ್ಯುಮ್ನೋ ಮಹಾರಾಜ ದ್ರೋಣಂ ಏವಾಭ್ಯವರ್ತತ।।
ಸಂಜಯನು ಹೇಳಿದನು: “ಮಹಾರಾಜ! ಭಯವನ್ನುಂಟುಮಾಡುವ ಆ ತುಮುಲ ಯುದ್ಧವು ನಡೆಯುತ್ತಿರಲು ಧೃಷ್ಟದ್ಯುಮ್ನನು ದ್ರೋಣನನ್ನು ಆಕ್ರಮಣಿಸಿದನು.
07145002a ಸಮ್ಮೃಜಾನೋ ಧನುಃ ಶ್ರೇಷ್ಠಂ ಜ್ಯಾಂ ವಿಕರ್ಷನ್ಪುನಃ ಪುನಃ।
07145002c ಅಭ್ಯವರ್ತತ ದ್ರೋಣಸ್ಯ ರಥಂ ರುಕ್ಮವಿಭೂಷಿತಂ।।
ಶಿಂಜಿನಿಯನ್ನು ಪುನಃ ಪುನಃ ಎಳೆಯುತ್ತ ಶ್ರೇಷ್ಠ ಧನುಸ್ಸನ್ನು ಟೇಂಕರಿಸುತ್ತಾ ಅವನು ಬಂಗಾರದಿಂದ ವಿಭೂಷಿತ ದ್ರೋಣನ ರಥವನ್ನು ಆಕ್ರಮಣಿಸಿದನು.
07145003a ಧೃಷ್ಟದ್ಯುಮ್ನಂ ತದಾಯಾಂತಂ ದ್ರೋಣಸ್ಯಾಂತಚಿಕೀರ್ಷಯಾ।
07145003c ಪರಿವವ್ರುರ್ಮಹಾರಾಜ ಪಾಂಚಾಲಾಃ ಪಾಂಡವೈಃ ಸಹ।।
ಮಹಾರಾಜ! ದ್ರೋಣನನ್ನು ಕೊನೆಗಾಣಿಸಲು ಬಯಸಿ ಮುಂದೆ ಬರುತ್ತಿದ್ದ ಧೃಷ್ಟದ್ಯುಮ್ನನನ್ನು ಪಾಂಡವರೊಂದಿಗೆ ಪಾಂಚಾಲರು ಸುತ್ತುವರೆದಿದ್ದರು.
07145004a ತಥಾ ಪರಿವೃತಂ ದೃಷ್ಟ್ವಾ ದ್ರೋಣಮಾಚಾರ್ಯಸತ್ತಮಂ।
07145004c ಪುತ್ರಾಸ್ತೇ ಸರ್ವತೋ ಯತ್ತಾ ರರಕ್ಷುರ್ದ್ರೋಣಮಾಹವೇ।।
ಆಚಾರ್ಯಸತ್ತಮ ದ್ರೋಣನು ಹಾಗೆ ಮುತ್ತಿಗೆಹಾಕಲ್ಪಟ್ಟಿದ್ದುದನ್ನು ನೋಡಿ ನಿನ್ನ ಮಕ್ಕಳು ಯುದ್ಧದಲ್ಲಿ ದ್ರೋಣನನ್ನು ರಕ್ಷಿಸಲು ಎಲ್ಲ ಕಡೆಗಳಿಂದ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದರು.
07145005a ಬಲಾರ್ಣವೌ ತತಸ್ತೌ ತು ಸಮೇಯಾತಾಂ ನಿಶಾಮುಖೇ।
07145005c ವಾತೋದ್ಧೂತೌ ಕ್ಷುಬ್ಧಸತ್ತ್ವೌ ಭೈರವೌ ಸಾಗರಾವಿವ।।
ನಿಶಾಮುಖದಲ್ಲಿ ಎದುರಾಗುತ್ತಿದ್ದ ಆ ಎರಡು ಸೇನೆಗಳು ಚಂಡಮಾರುತಕ್ಕೆ ಸಿಲುಕಿ ಅಲ್ಲೋಲಕಲ್ಲೋಲಗೊಳ್ಳುವ ಭೈರವ ಸಾಗರಗಳಂತೆ ತೋರುತ್ತಿದ್ದವು.
07145006a ತತೋ ದ್ರೋಣಂ ಮಹಾರಾಜ ಪಾಂಚಾಲ್ಯಃ ಪಂಚಭಿಃ ಶರೈಃ।
07145006c ವಿವ್ಯಾಧ ಹೃದಯೇ ತೂರ್ಣಂ ಸಿಂಹನಾದಂ ನನಾದ ಚ।।
ಮಹಾರಾಜ! ಆಗ ಪಾಂಚಾಲ್ಯನು ಐದು ಶರಗಳನ್ನು ದ್ರೋಣನ ಎದೆಗೆ ಗುರಿಯಿಟ್ಟು ಹೊಡೆದು ತಕ್ಷಣವೇ ಸಿಂಹನಾದಗೈದನು.
07145007a ತಂ ದ್ರೋಣಃ ಪಂಚವಿಂಶತ್ಯಾ ವಿದ್ಧ್ವಾ ಭಾರತ ಸಮ್ಯುಗೇ।
07145007c ಚಿಚ್ಚೇದಾನ್ಯೇನ ಭಲ್ಲೇನ ಧನುರಸ್ಯ ಮಹಾಪ್ರಭಂ।।
ಭಾರತ! ಸಂಯುಗದಲ್ಲಿ ದ್ರೋಣನು ಅವನನ್ನು ಇಪ್ಪತ್ತೈದು ಬಾಣಗಳಿಂದ ಹೊಡೆದು ಇನ್ನೊಂದು ಭಲ್ಲದಿಂದ ಅವನ ಮಹಾಪ್ರಭೆಯ ಧನುಸ್ಸನ್ನು ತುಂಡರಿಸಿದನು.
07145008a ಧೃಷ್ಟದ್ಯುಮ್ನಸ್ತು ನಿರ್ವಿದ್ಧೋ ದ್ರೋಣೇನ ಭರತರ್ಷಭ।
07145008c ಉತ್ಸಸರ್ಜ ಧನುಸ್ತೂರ್ಣಂ ಸಂದಶ್ಯ ದಶನಚ್ಚದಂ।।
ಭರತರ್ಷಭ! ದ್ರೋಣನಿಂದ ಗಾಯಗೊಂಡ ಧೃಷ್ಟದ್ಯುಮ್ನನಾದರೋ ಹಲ್ಲುಕಚ್ಚುತ್ತಾ ಬೇಗನೇ ಆ ಧನುಸ್ಸನ್ನು ಬಿಸಾಡಿದನು.
07145009a ತತಃ ಕ್ರುದ್ಧೋ ಮಹಾರಾಜ ಧೃಷ್ಟದ್ಯುಮ್ನಃ ಪ್ರತಾಪವಾನ್।
07145009c ಆದದೇಽನ್ಯದ್ಧನುಃ ಶ್ರೇಷ್ಠಂ ದ್ರೋಣಸ್ಯಾಂತಚಿಕೀರ್ಷಯಾ।।
ಮಹಾರಾಜ! ಆಗ ಪ್ರತಾಪವಾನ್ ಧೃಷ್ಟದ್ಯುಮ್ನನು ದ್ರೋಣನನ್ನು ಮುಗಿಸಿಬಿಡಲು ಬಯಸಿ ಇನ್ನೊಂದು ಶ್ರೇಷ್ಠ ಧನುಸ್ಸನ್ನು ಎತ್ತಿಕೊಂಡನು.
07145010a ವಿಕೃಷ್ಯ ಚ ಧನುಶ್ಚಿತ್ರಮಾಕರ್ಣಾತ್ಪರವೀರಹಾ।
07145010c ದ್ರೋಣಸ್ಯಾಂತಕರಂ ಘೋರಂ ವ್ಯಸೃಜತ್ಸಾಯಕಂ ತತಃ।।
ಪರವೀರಹನು ಆ ಚಿತ್ರಧನುಸ್ಸನ್ನು ಆಕರ್ಣವಾಗಿ ಸೆಳೆದು ದ್ರೋಣನನ್ನು ಅಂತ್ಯಗೊಳಿಸಬಲ್ಲ ಘೋರ ಸಾಯಕವನ್ನು ಪ್ರಯೋಗಿಸಿದನು.
07145011a ಸ ವಿಸೃಷ್ಟೋ ಬಲವತಾ ಶರೋ ಘೋರೋ ಮಹಾಮೃಧೇ।
07145011c ಭಾಸಯಾಮಾಸ ತತ್ಸೈನ್ಯಂ ದಿವಾಕರ ಇವೋದಿತಃ।।
ಮಹಾಮೃಧದಲ್ಲಿ ಅವನು ಪ್ರಯೋಗಿಸಿದ ಬಲವುಳ್ಳ ಆ ಘೋರ ಶರವು ಉದಯಿಸುತ್ತಿರುವ ದಿವಾಕರನಂತೆ ಸೇನೆಯನ್ನು ಬೆಳಗಿಸಿತು.
07145012a ತಂ ದೃಷ್ಟ್ವಾ ತು ಶರಂ ಘೋರಂ ದೇವಗಂಧರ್ವಮಾನವಾಃ।
07145012c ಸ್ವಸ್ತ್ಯಸ್ತು ಸಮರೇ ರಾಜನ್ದ್ರೋಣಾಯೇತ್ಯಬ್ರುವನ್ವಚಃ।।
ರಾಜನ್! ಸಮರದಲ್ಲಿ ಆ ಘೋರ ಶರವನ್ನು ನೋಡಿ ದೇವ-ಗಂಧರ್ವ-ಮಾನವರು ದ್ರೋಣನಿಗೆ ಮಂಗಳವಾಗಲೆಂದು ಹೇಳಿಕೊಂಡರು.
07145013a ತಂ ತು ಸಾಯಕಮಪ್ರಾಪ್ತಮಾಚಾರ್ಯಸ್ಯ ರಥಂ ಪ್ರತಿ।
07145013c ಕರ್ಣೋ ದ್ವಾದಶಧಾ ರಾಜಂಶ್ಚಿಚ್ಚೇದ ಕೃತಹಸ್ತವತ್।।
ರಾಜನ್! ಆ ಸಾಯಕವು ಆಚಾರ್ಯನ ರಥವನ್ನು ತಲುಪುವುದರೊಳಗೇ ಕರ್ಣನು ಕೈಚಳಕದಿಂದ ಅದನ್ನು ಹನ್ನೆರಡು ಭಾಗಗಳನ್ನಾಗಿ ತುಂಡರಿಸಿದನು.
07145014a ಸ ಚಿನ್ನೋ ಬಹುಧಾ ರಾಜನ್ಸೂತಪುತ್ರೇಣ ಮಾರಿಷ।
07145014c ನಿಪಪಾತ ಶರಸ್ತೂರ್ಣಂ ನಿಕೃತ್ತಃ ಕರ್ಣಸಾಯಕೈಃ।।
ರಾಜನ್! ಮಾರಿಷ! ಸೂತಪುತ್ರ ಕರ್ಣನ ಸಾಯಕದಿಂದ ತುಂಡರಿಸಲ್ಪಟ್ಟ ಆ ಶರವು ತಕ್ಷಣವೇ ಅನೇಕ ಚೂರುಗಳಾಗಿ ಬಿದ್ದಿತು.
07145015a ಚಿತ್ತ್ವಾ ತು ಸಮರೇ ಬಾಣಂ ಶರೈಃ ಸಮ್ನತಪರ್ವಭಿಃ।
07145015c ಧೃಷ್ಟದ್ಯುಮ್ನಂ ರಣೇ ಕರ್ಣೋ ವಿವ್ಯಾಧ ದಶಭಿಃ ಶರೈಃ।।
ಸಮರದಲ್ಲಿ ಸನ್ನತಪರ್ವ ಶರಗಳಿಂದ ಆ ಬಾಣವನ್ನು ಕತ್ತರಿಸಿ ಕರ್ಣನು ರಣದಲ್ಲಿ ಧೃಷ್ಟದ್ಯುಮ್ನನನ್ನು ಹತ್ತು ಶರಗಳಿಂದ ಹೊಡೆದನು.
07145016a ಪಂಚಭಿರ್ದ್ರೋಣಪುತ್ರಸ್ತು ಸ್ವಯಂ ದ್ರೋಣಶ್ಚ ಸಪ್ತಭಿಃ।
07145016c ಶಲ್ಯಶ್ಚ ನವಭಿರ್ಬಾಣೈಸ್ತ್ರಿಭಿದುಃಶಾಸನಸ್ತಥಾ।।
07145017a ದುರ್ಯೋಧನಶ್ಚ ವಿಂಶತ್ಯಾ ಶಕುನಿಶ್ಚಾಪಿ ಪಂಚಭಿಃ।
07145017c ಪಾಂಚಾಲ್ಯಂ ತ್ವರಿತಾವಿಧ್ಯನ್ಸರ್ವ ಏವ ಮಹಾರಥಾಃ।।
ಆಗ ತ್ವರೆಮಾಡಿ ಎಲ್ಲ ಮಹಾರಥರೂ ಪಾಂಚಾಲ್ಯನನ್ನು ಪ್ರಹರಿಸಿದರು: ದ್ರೋಣಪುತ್ರನು ಐದರಿಂದ, ದ್ರೋಣನು ಏಳರಿಂದ, ಶಲ್ಯನು ಒಂಭತ್ತು ಬಾಣಗಳಿಂದ, ದುಃಶಾಸನನು ಮೂರರಿಂದ, ದುರ್ಯೋಧನನನು ಇಪ್ಪತ್ತರಿಂದ, ಮತ್ತು ಶಕುನಿಯು ಐದರಿಂದ ಹೊಡೆದರು.
07145018a ಸ ವಿದ್ಧಃ ಸಪ್ತಭಿರ್ವೀರೈರ್ದ್ರೋಣತ್ರಾಣಾರ್ಥಮಾಹವೇ।
07145018c ಸರ್ವಾನಸಂಭ್ರಮಾದ್ರಾಜನ್ಪ್ರತ್ಯವಿಧ್ಯತ್ತ್ರಿಭಿಸ್ತ್ರಿಭಿಃ।
07145018e ದ್ರೋಣಂ ದ್ರೌಣಿಂ ಚ ಕರ್ಣಂ ಚ ವಿವ್ಯಾಧ ತವ ಚಾತ್ಮಜಂ।।
ರಾಜನ್! ಯುದ್ಧದಲ್ಲಿ ದ್ರೋಣನ ಪ್ರಾಣವನ್ನು ರಕ್ಷಿಸುತ್ತಿದ್ದ ಆ ಏಳು ವೀರರಿಂದ ಪ್ರಹರಿಸಲ್ಪಟ್ಟ ಧೃಷ್ಟದ್ಯುಮ್ನನು ಸ್ವಲ್ಪವೂ ಗಾಬರಿಗೊಳ್ಳದೇ ಅವರೆಲ್ಲರನ್ನೂ ಮೂರು ಮೂರು ಬಾಣಗಳಿಂದ ಪ್ರತಿಯಾಗಿ ಪ್ರಹರಿಸಿದನು. ಅವನು ದ್ರೋಣನನ್ನು, ದ್ರೌಣಿಯನ್ನು, ಕರ್ಣನನ್ನು ಮತ್ತು ನಿನ್ನ ಮಗನನ್ನೂ ಹೊಡೆದನು.
07145019a ತೇ ವಿದ್ಧ್ವಾ ಧನ್ವಿನಾ ತೇನ ಧೃಷ್ಟದ್ಯುಮ್ನಂ ಪುನರ್ಮೃಧೇ।
07145019c ವಿವ್ಯಧುಃ ಪಂಚಭಿಸ್ತೂರ್ಣಂ ಏಕೈಕೋ ರಥಿನಾಂ ವರಃ।।
ಯುದ್ಧದಲ್ಲಿ ಧನ್ವಿ ಧೃಷ್ಟದ್ಯುಮ್ನನಿಂದ ಪ್ರಹರಿಸಲ್ಪಟ್ಟ ಆ ಒಬ್ಬೊಬ್ಬ ರಥಶ್ರೇಷ್ಠರೂ ಪುನಃ ಬೇಗನೆ ಧೃಷ್ಟದ್ಯುಮ್ನನನ್ನು ಐದು ಬಾಣಗಳಿಂದ ಹೊಡೆದರು.
07145020a ದ್ರುಮಸೇನಸ್ತು ಸಂಕ್ರುದ್ಧೋ ರಾಜನ್ವಿವ್ಯಾಧ ಪತ್ರಿಣಾ।
07145020c ತ್ರಿಭಿಶ್ಚಾನ್ಯೈಃ ಶರೈಸ್ತೂರ್ಣಂ ತಿಷ್ಠ ತಿಷ್ಠೇತಿ ಚಾಬ್ರವೀತ್।।
ರಾಜನ್! ದ್ರುಮಸೇನನಾದರೋ ಸಂಕ್ರುದ್ಧನಾಗಿ ಧೃಷ್ಟದ್ಯುಮ್ನನನ್ನು ಪತ್ರಿಗಳಿಂದ ಹೊಡೆದನು. ತಕ್ಷಣವೇ ಇತರ ಅನ್ಯ ಶರಗಳಿಂದ ಹೊಡೆದು ನಿಲ್ಲು ನಿಲ್ಲೆಂದು ಹೇಳಿದನು.
07145021a ಸ ತು ತಂ ಪ್ರತಿವಿವ್ಯಾಧ ತ್ರಿಭಿಸ್ತೀಕ್ಷ್ಣೈರಜಿಹ್ಮಗೈಃ।
07145021c ಸ್ವರ್ಣಪುಂಖೈಃ ಶಿಲಾಧೌತೈಃ ಪ್ರಾಣಾಂತಕರಣೈರ್ಯುಧಿ।।
ಧೃಷ್ಟದ್ಯುಮ್ನನಾದರೋ ಅವನನ್ನು ಯುದ್ಧದಲ್ಲಿ ಪ್ರಾಣಗಳನ್ನು ಅಂತ್ಯಗೊಳಿಸಬಲ್ಲ ಸ್ವರ್ಣಪುಂಖಗಳ ಶಿಲೆಗೆ ಹಚ್ಚಿ ಮೊನಚುಮಾಡಲ್ಪಟ್ಟ ಮೂರು ತೀಕ್ಷ್ಣ ಜಿಹ್ಮಗಗಳಿಂದ ತಿರುಗಿ ಹೊಡೆದನು.
07145022a ಭಲ್ಲೇನಾನ್ಯೇನ ತು ಪುನಃ ಸುವರ್ಣೋಜ್ಜ್ವಲಕುಂಡಲಂ।।
07145022c ಉನ್ಮಮಾಥ ಶಿರಃ ಕಾಯಾದ್ದ್ರುಮಸೇನಸ್ಯ ವೀರ್ಯವಾನ್।
ಪುನಃ ಅನ್ಯ ಭಲ್ಲದಿಂದ ವೀರ್ಯವಾನ್ ದ್ರುಮಸೇನನ ಸುವರ್ಣದಂತೆ ಬೆಳಗುತ್ತಿದ್ದ ಕುಂಡಲಗಳನ್ನು ಧರಿಸಿದ್ದ ಶಿರವನ್ನು ಕಾಯದಿಂದ ಕತ್ತರಿಸಿದನು.
07145023a ತಚ್ಚಿರೋ ನ್ಯಪತದ್ಭೂಮೌ ಸಂದಷ್ಟೌಷ್ಠಪುಟಂ ರಣೇ।
07145023c ಮಹಾವಾತಸಮುದ್ಧೂತಂ ಪಕ್ವಂ ತಾಲಫಲಂ ಯಥಾ।।
ಭಿರುಗಾಳಿಗೆ ಸಿಲುಕಿದ್ದ ಪಕ್ವ ತಾಳೆಯ ಫಲವು ಹೇಗೋ ಹಾಗೆ ಅವುಡುಗಚ್ಚಿದ್ದ ಆ ನೃಪತಿಯ ಶಿರವು ರಣಭೂಮಿಯ ಮೇಲೆ ಬಿದ್ದಿತು.
07145024a ತಾಂಶ್ಚ ವಿದ್ಧ್ವಾ ಪುನರ್ವೀರಾನ್ವೀರಃ ಸುನಿಶಿತೈಃ ಶರೈಃ।
07145024c ರಾಧೇಯಸ್ಯಾಚ್ಚಿನದ್ಭಲ್ಲೈಃ ಕಾರ್ಮುಕಂ ಚಿತ್ರಯೋಧಿನಃ।।
ವೀರ ಧೃಷ್ಟದ್ಯುಮ್ನನು ಆ ವೀರರನ್ನು ಪುನಃ ನಿಶಿತ ಶರಗಳಿಂದ ಹೊಡೆದು ಭಲ್ಲಗಳಿಂದ ಚಿತ್ರಯೋಧಿ ರಾಧೇಯನ ಕಾರ್ಮುಕವನ್ನು ಕತ್ತರಿಸಿದನು.
07145025a ನ ತು ತನ್ಮಮೃಷೇ ಕರ್ಣೋ ಧನುಷಶ್ಚೇದನಂ ತಥಾ।
07145025c ನಿಕರ್ತನಮಿವಾತ್ಯುಗ್ರೋ ಲಾಂಗೂಲಸ್ಯ ಯಥಾ ಹರಿಃ।।
ಸಿಂಹವು ತನ್ನ ಬಾಲವು ಕತ್ತರಿಸಿದುದನ್ನು ಸಹಿಸಿಕೊಳ್ಳದಂತೆ ಕರ್ಣನು ತನ್ನ ಧನುಸ್ಸು ತುಂಡಾಗಿದ್ದುದನ್ನು ಸಹಿಸಿಕೊಳ್ಳಲಿಲ್ಲ.
07145026a ಸೋಽನ್ಯದ್ಧನುಃ ಸಮಾದಾಯ ಕ್ರೋಧರಕ್ತೇಕ್ಷಣಃ ಶ್ವಸನ್।
07145026c ಅಭ್ಯವರ್ಷಚ್ಚರೌಘೈಸ್ತಂ ಧೃಷ್ಟದ್ಯುಮ್ನಂ ಮಹಾಬಲಂ।।
ಅವನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು ದೀರ್ಘ ಉಸಿರುಬಿಡುತ್ತಾ ಮಹಾಬಲ ಧೃಷ್ಟದ್ಯುಮ್ನನ ಮೇಲೆ ಶರಗಳ ಮಳೆಯನ್ನೇ ಸುರಿಸಿದನು.
07145027a ದೃಷ್ಟ್ವಾ ತು ಕರ್ಣಂ ಸಂರಬ್ಧಂ ತೇ ವೀರಾಃ ಷಡ್ರಥರ್ಷಭಾಃ।
07145027c ಪಾಂಚಾಲ್ಯಪುತ್ರಂ ತ್ವರಿತಾಃ ಪರಿವವ್ರುರ್ ಜಿಘಾಂಸಯಾ।।
ಕರ್ಣನು ಕುಪಿತನಾಗಿರುವುದನ್ನು ಕಂಡು ಆ ಆರು ವೀರ ರಥರ್ಷಭರು (ದ್ರೋಣ, ಅಶ್ವತ್ಥಾಮ, ದುರ್ಯೋಧನ, ಶಲ್ಯ, ದುಃಶಾಸನ ಮತ್ತು ಶಕುನಿ) ತ್ವರೆಮಾಡಿ ಸಂಹರಿಸಲು ಬಯಸಿ ಪಾಂಚಾಲ್ಯಪುತ್ರನನ್ನು ಸುತ್ತುವರೆದರು.
07145028a ಷಣ್ಣಾಂ ಯೋಧಪ್ರವೀರಾಣಾಂ ತಾವಕಾನಾಂ ಪುರಸ್ಕೃತಂ।
07145028c ಮೃತ್ಯೋರಾಸ್ಯಮನುಪ್ರಾಪ್ತಂ ಧೃಷ್ಟದ್ಯುಮ್ನಮಮಂಸ್ಮಹಿ।।
ನಿನ್ನಕಡೆಯ ಆ ಆರು ಯೋಧಪ್ರವೀಣರಿಂದ ಎದುರಿಸಲ್ಪಟ್ಟಿದ್ದ ಧೃಷ್ಟದ್ಯುಮ್ನನು ಮೃತ್ಯುವಿನ ಬಾಗಿಲನ್ನೇ ತಲುಪಿದ್ದಾನೆಂದು ನಮಗನ್ನಿಸಿತ್ತು.
07145029a ಏತಸ್ಮಿನ್ನೇವ ಕಾಲೇ ತು ದಾಶಾರ್ಹೋ ವಿಕಿರಂ ಶರಾನ್।
07145029c ಧೃಷ್ಟದ್ಯುಮ್ನಂ ಪರಾಕ್ರಾಂತಂ ಸಾತ್ಯಕಿಃ ಪ್ರತ್ಯಪದ್ಯತ।।
ಇದೇ ಸಮಯದಲ್ಲಿ ಶರಗಳನ್ನು ಚೆಲ್ಲುತ್ತಾ ದಾಶಾರ್ಹ ಸಾತ್ಯಕಿಯು ಪರಾಕ್ರಾಂತ ಧೃಷ್ಟದ್ಯುಮ್ನನನ್ನು ಸಮೀಪಿಸಿದನು.
07145030a ತಮಾಯಾಂತಂ ಮಹೇಷ್ವಾಸಂ ಸಾತ್ಯಕಿಂ ಯುದ್ಧದುರ್ಮದಂ।
07145030c ರಾಧೇಯೋ ದಶಭಿರ್ಬಾಣೈಃ ಪ್ರತ್ಯವಿಧ್ಯದಜಿಹ್ಮಗೈಃ।।
ಮುಂದುವರೆಯುತ್ತಿದ್ದ ಯುದ್ಧದುರ್ಮದ ಮಹೇಷ್ವಾಸ ಸಾತ್ಯಕಿಯನ್ನು ರಾಧೇಯನು ಹತ್ತು ಜಿಹ್ಮಗ ಬಾಣಗಳಿಂದ ಹೊಡೆದನು.
07145031a ತಂ ಸಾತ್ಯಕಿರ್ಮಹಾರಾಜ ವಿವ್ಯಾಧ ದಶಭಿಃ ಶರೈಃ 07145031c ಪಶ್ಯತಾಂ ಸರ್ವವೀರಾಣಾಂ ಮಾ ಗಾಸ್ತಿಷ್ಠೇತಿ ಚಾಬ್ರವೀತ್।।
ಮಹಾರಾಜ! ಅವನನ್ನು ಸಾತ್ಯಕಿಯು ಹತ್ತು ಶರಗಳಿಂದ ಹೊಡೆದು ಸರ್ವ ವೀರರೂ ನೋಡುತ್ತಿದ್ದಂತೆಯೇ “ಹೋಗಬೇಡ! ನಿಲ್ಲು!” ಎಂದು ಹೇಳಿದನು.
07145032a ಸ ಸಾತ್ಯಕೇಸ್ತು ಬಲಿನಃ ಕರ್ಣಸ್ಯ ಚ ಮಹಾತ್ಮನಃ।
07145032c ಆಸೀತ್ಸಮಾಗಮೋ ಘೋರೋ ಬಲಿವಾಸವಯೋರಿವ।।
ಬಲಶಾಲೀ ಸಾತ್ಯಕಿ ಮತ್ತು ಮಹಾತ್ಮ ಕರ್ಣರ ಆ ಸಮಾಗಮವು ಬಲಿ-ವಾಸವರ ಸಮಾಗಮದಂತೆ ಘೋರವಾಗಿತ್ತು.
07145033a ತ್ರಾಸಯಂಸ್ತಲಘೋಷೇಣ ಕ್ಷತ್ರಿಯಾನ್ ಕ್ಷತ್ರಿಯರ್ಷಭಃ।
07145033c ರಾಜೀವಲೋಚನಂ ಕರ್ಣಂ ಸಾತ್ಯಕಿಃ ಪ್ರತ್ಯವಿಧ್ಯತ।।
ಚಪ್ಪಾಳೆ ಘೋಷದಿಂದ ಕ್ಷತ್ರಿಯರನ್ನು ಬೆದರಿಸುತ್ತಾ ಕ್ಷತ್ರಿಯರ್ಷಭ ಸಾತ್ಯಕಿಯು ರಾಜೀವಲೋಚನ ಕರ್ಣನನ್ನು ತಿರುಗಿ ಹೊಡೆದನು.
07145034a ಕಂಪಯನ್ನಿವ ಘೋಷೇಣ ಧನುಷೋ ವಸುಧಾಂ ಬಲೀ।
07145034c ಸೂತಪುತ್ರೋ ಮಹಾರಾಜ ಸಾತ್ಯಕಿಂ ಪ್ರತ್ಯಯೋಧಯತ್।।
ಮಹಾರಾಜ! ಧನುರ್ಘೋಷದಿಂದ ವಸುಧೆಯನ್ನು ನಡುಗಿಸುವಂತೆ ಬಲಶಾಲೀ ಸೂತಪುತ್ರನು ಸಾತ್ಯಕಿಯನ್ನು ತಿರುಗಿ ಹೊಡೆದನು.
07145035a ವಿಪಾಠಕರ್ಣಿನಾರಾಚೈರ್ವತ್ಸದಂತೈಃ ಕ್ಷುರೈರಪಿ।
07145035c ಕರ್ಣಃ ಶರಶತೈಶ್ಚಾಪಿ ಶೈನೇಯಂ ಪ್ರತ್ಯವಿಧ್ಯತ।।
ವಿಪಾಠ, ಕರ್ಣಿ, ನಾರಾಚ, ವತ್ಸದಂತ ಮತ್ತು ಕ್ಷುರಗಳೆಂಬ ನೂರಾರು ಶರಗಳಿಂದ ಕರ್ಣನು ಶೈನೇಯನನ್ನು ಪ್ರಹರಿಸಿದನು.
07145036a ತಥೈವ ಯುಯುಧಾನೋಽಪಿ ವೃಷ್ಣೀನಾಂ ಪ್ರವರೋ ರಥಃ।
07145036c ಅಭ್ಯವರ್ಷಚ್ಚರೈಃ ಕರ್ಣಂ ತದ್ಯುದ್ಧಮಭವತ್ಸಮಂ।।
ಹಾಗೆಯೇ ವೃಷ್ಣಿಶ್ರೇಷ್ಠ ಮಹಾರಥ ಯುಯುಧಾನನು ಕೂಡ ಶರಗಳನ್ನು ಸುರಿಸಿ ಕರ್ಣನನ್ನು ಮುಚ್ಚಿಬಿಟ್ಟನು. ಆ ಯುದ್ಧವು ಸರಿಸಮನಾಗಿತ್ತು.
07145037a ತಾವಕಾಶ್ಚ ಮಹಾರಾಜ ಕರ್ಣಪುತ್ರಶ್ಚ ದಂಶಿತಃ।
07145037c ಸಾತ್ಯಕಿಂ ವಿವ್ಯಧುಸ್ತೂರ್ಣಂ ಸಮಂತಾನ್ನಿಶಿತೈಃ ಶರೈಃ।।
ಮಹಾರಾಜ! ತಕ್ಷಣ ನಿನ್ನವರೂ ಕವಚಧಾರೀ ಕರ್ಣಪುತ್ರನೂ ಎಲ್ಲಕಡೆಗಳಿಂದ ಸಾತ್ಯಕಿಯನ್ನು ನಿಶಿತ ಶರಗಳಿಂದ ಹೊಡೆದರು.
07145038a ಅಸ್ತ್ರೈರಸ್ತ್ರಾಣಿ ಸಂವಾರ್ಯ ತೇಷಾಂ ಕರ್ಣಸ್ಯ ಚಾಭಿಭೋ।
07145038c ಅವಿಧ್ಯತ್ಸಾತ್ಯಕಿಃ ಕ್ರುದ್ಧೋ ವೃಷಸೇನಂ ಸ್ತನಾಂತರೇ।।
ವಿಭೋ! ಸಾತ್ಯಕಿಯು ಕರ್ಣನ ಮತ್ತು ಅವರ ಅಸ್ತ್ರಗಳನ್ನು ಅಸ್ತ್ರಗಳಿಂದಲೇ ನಾಶಗೊಳಿಸಿ ಕ್ರುದ್ಧನಾಗಿ ವೃಷಸೇನನ ವಕ್ಷಸ್ಥಳಕ್ಕೆ ಹೊಡೆದನು.
07145039a ತೇನ ಬಾಣೇನ ನಿರ್ವಿದ್ಧೋ ವೃಷಸೇನೋ ವಿಶಾಂ ಪತೇ।
07145039c ನ್ಯಪತತ್ಸ ರಥೇ ಮೂಢೋ ಧನುರುತ್ಸೃಜ್ಯ ವೀರ್ಯವಾನ್।।
ವಿಶಾಂಪತೇ! ಅವನ ಬಾಣದಿಂದ ಗಾಯಗೊಂಡ ವೀರ್ಯವಾನ್ ವೃಷಸೇನನು ಮೂರ್ಛಿತನಾಗಿ ಧನುಸ್ಸನ್ನು ಬಿಸುಟು ರಥದಮೇಲೆ ಕುಸಿದುಬಿದ್ದನು.
07145040a ತತಃ ಕರ್ಣೋ ಹತಂ ಮತ್ವಾ ವೃಷಸೇನಂ ಮಹಾರಥಃ।
07145040c ಪುತ್ರಶೋಕಾಭಿಸಂತಪ್ತಃ ಸಾತ್ಯಕಿಂ ಪ್ರತ್ಯಪೀಡಯತ್।।
ಆಗ ವೃಷಸೇನನು ಹತನಾದನೆಂದೇ ತಿಳಿದು ಪುತ್ರಶೋಕದಿಂದ ಸಂತಪ್ತನಾದ ಮಹಾರಥ ಕರ್ಣನು ಸಾತ್ಯಕಿಯನ್ನು ತಿರುಗಿ ಪೀಡಿಸಿದನು.
07145041a ಪೀಡ್ಯಮಾನಸ್ತು ಕರ್ಣೇನ ಯುಯುಧಾನೋ ಮಹಾರಥಃ।
07145041c ವಿವ್ಯಾಧ ಬಹುಭಿಃ ಕರ್ಣಂ ತ್ವರಮಾಣಃ ಪುನಃ ಪುನಃ।।
ಕರ್ಣನಿಂದ ಪೀಡಿಸಲ್ಪಟ್ಟ ಮಹಾರಥ ಯುಯುಧಾನನು ತ್ವರೆಮಾಡಿ ಕರ್ಣನನ್ನು ಅನೇಕ ಬಾರಿ ಪುನಃ ಪುನಃ ಪ್ರಹರಿಸಿದನು.
07145042a ಸ ಕರ್ಣಂ ದಶಭಿರ್ವಿದ್ಧ್ವಾ ವೃಷಸೇನಂ ಚ ಸಪ್ತಭಿಃ।
07145042c ಸಹಸ್ತಾವಾಪಧನುಷೀ ತಯೋಶ್ಚಿಚ್ಚೇದ ಸಾತ್ವತಃ।।
ಸಾತ್ವತನು ಕರ್ಣನನ್ನು ಹತ್ತರಿಂದ ಮತ್ತು ವೃಷಸೇನನನ್ನು ಏಳರಿಂದ ಹೊಡೆದು ಅವರ ಕೈಚೀಲಗಳನ್ನೂ ಧನುಸ್ಸುಗಳನ್ನೂ ಕತ್ತರಿಸಿದನು.
07145043a ತಾವನ್ಯೇ ಧನುಷೀ ಸಜ್ಯೇ ಕೃತ್ವಾ ಶತ್ರುಭಯಂಕರೇ।
07145043c ಯುಯುಧಾನಮವಿಧ್ಯೇತಾಂ ಸಮಂತಾನ್ನಿಶಿತೈಃ ಶರೈಃ।।
ಅವರು ಶತ್ರುಭಯಂಕರ ಅನ್ಯ ಧನುಸ್ಸುಗಳನ್ನು ಸಜ್ಜುಗೊಳಿಸಿ ಎಲ್ಲಕಡೆಗಳಿಂದ ನಿಶಿತ ಶರಗಳಿಂದ ಯುಯುಧಾನನನ್ನು ಪ್ರಹರಿಸಿದರು.
07145044a ವರ್ತಮಾನೇ ತು ಸಂಗ್ರಾಮೇ ತಸ್ಮಿನ್ವೀರವರಕ್ಷಯೇ।
07145044c ಅತೀವ ಶುಶ್ರುವೇ ರಾಜನ್ಗಾಂಡೀವಸ್ಯ ಮಹಾಸ್ವನಃ।।
ರಾಜನ್! ಆ ವೀರವರಕ್ಷಯ ಸಂಗ್ರಾಮವು ನಡೆಯುತ್ತಿರಲು ನಾವು ಗಾಂಡೀವದ ಅತೀವ ಮಹಾಧ್ವನಿಯನ್ನು ಕೇಳಿದೆವು.
07145045a ಶ್ರುತ್ವಾ ತು ರಥನಿರ್ಘೋಷಂ ಗಾಂಡೀವಸ್ಯ ಚ ನಿಸ್ವನಂ।
07145045c ಸೂತಪುತ್ರೋಽಬ್ರವೀದ್ರಾಜನ್ದುರ್ಯೋಧನಮಿದಂ ವಚಃ।।
ರಾಜನ್! ರಥನಿರ್ಘೋಷವನ್ನೂ ಗಾಂಡೀವ ನಿಸ್ವನವನ್ನೂ ಕೇಳಿದ ಸೂತಪುತ್ರನು ದುರ್ಯೋಧನನಿಗೆ ಹೇಳಿದನು:
07145046a ಏಷ ಸರ್ವಾಂ ಶಿಬೀನ್ ಹತ್ವಾ ಮುಖ್ಯಶಶ್ಚ ನರರ್ಷಭಾನ್।
07145046c ಪೌರವಾಂಶ್ಚ ಮಹೇಷ್ವಾಸಾನ್ಗಾಂಡೀವನಿನದೋ ಮಹಾನ್।।
07145047a ಶ್ರೂಯತೇ ರಥಘೋಷಶ್ಚ ವಾಸವಸ್ಯೇವ ನರ್ದತಃ।
07145047c ಕರೋತಿ ಪಾಂಡವೋ ವ್ಯಕ್ತಂ ಕರ್ಮೌಪಯಿಕಮಾತ್ಮನಃ।।
“ಇಗೋ! ಸರ್ವ ಶಿಬಿಗಳನ್ನೂ, ನರರ್ಷಭ ಮುಖ್ಯರನ್ನೂ, ಮಹೇಷ್ವಾಸ ಪೌರವರನ್ನೂ ಸಂಹರಿಸಿ ಅರ್ಜುನನು ಗರ್ಜಿಸುತ್ತಿರುವುದು, ಗಾಂಡೀವವನ್ನು ಟೇಂಕರಿಸುವುದು ಮತ್ತು ಅವನ ರಥಘೋಷವು ಕೇಳಿಬರುತ್ತಿದೆ. ಪಾಂಡವನು ತನಗೆ ಅನುರೂಪ ಕರ್ಮವನ್ನು ಮಾಡಿದ್ದಾನೆಂದು ವ್ಯಕ್ತವಾಗುತ್ತಿದೆ.
07145048a ಏಷಾ ವಿದೀರ್ಯತೇ ರಾಜನ್ಬಹುಧಾ ಭಾರತೀ ಚಮೂಃ।
07145048c ವಿಪ್ರಕೀರ್ಣಾನ್ಯನೀಕಾನಿ ನಾವತಿಷ್ಠಂತಿ ಕರ್ಹಿ ಚಿತ್।।
ರಾಜನ್! ಇವನು ಭಾರತೀ ಸೇನೆಯನ್ನು ಅನೇಕ ಭಾಗಗಳಾಗಿ ಸೀಳುತ್ತಿದ್ದಾನೆ. ಚದುರಿಹೋದ ಸೇನೆಗಳು ಎಂದೂ ಯುದ್ಧದಲ್ಲಿ ನಿಲ್ಲುವುದಿಲ್ಲ.
07145049a ವಾತೇನೇವ ಸಮುದ್ಧೂತಮಭ್ರಜಾಲಂ ವಿದೀರ್ಯತೇ।
07145049c ಸವ್ಯಸಾಚಿನಮಾಸಾದ್ಯ ಭಿನ್ನಾ ನೌರಿವ ಸಾಗರೇ।।
ಸವ್ಯಸಾಚಿಯ ಧಾಳಿಯಿಂದ ಚಂಡಮಾರುತಕ್ಕೆ ಸಿಲುಕಿದ ಸಾಗರದಂತೆ ಅಲ್ಲೋಲಕಲ್ಲೋಲಗೊಂಡ ಸೇನೆಯು ಸಾಗರದಲ್ಲಿ ತುಂಡಾದ ನೌಕೆಯಂತೆ ಕಾಣುತ್ತಿದೆ.
07145050a ದ್ರವತಾಂ ಯೋಧಮುಖ್ಯಾನಾಂ ಗಾಂಡೀವಪ್ರೇಷಿತೈಃ ಶರೈಃ।
07145050c ವಿದ್ಧಾನಾಂ ಶತಶೋ ರಾಜಂ ಶ್ರೂಯತೇ ನಿನದೋ ಮಹಾನ್।
ರಾಜನ್! ಗಾಂಡೀವದಿಂದ ಹೊರಬಂದ ಶರಗಳಿಂದ ಹೊಡೆಯಲ್ಪಟ್ಟ ಯೋಧಮುಖ್ಯರು ಓಡಿ ಹೋಗುತ್ತಿರುವ ಮಹಾ ನಿನಾದವು ಕೇಳಿಬರುತ್ತಿದೆ.
07145050e ನಿಶೀಥೇ ರಾಜಶಾರ್ದೂಲ ಸ್ತನಯಿತ್ನೋರಿವಾಂಬರೇ।।
07145051a ಹಾಹಾಕಾರರವಾಂಶ್ಚೈವ ಸಿಂಹನಾದಾಂಶ್ಚ ಪುಷ್ಕಲಾನ್।
07145051c ಶೃಣು ಶಬ್ದಾನ್ಬಹುವಿಧಾನರ್ಜುನಸ್ಯ ರಥಂ ಪ್ರತಿ।।
ರಾಜಶಾರ್ದೂಲ! ಈ ರಾತ್ರಿಯಲ್ಲಿ ಆಕಾಶದಲ್ಲುಂಟಾಗುವ ಮೇಘಗಳ ಗುಡುಗಿನಂತೆ ಅರ್ಜುನನ ರಥದ ಬಳಿ ಕೇಳಿಬರುತ್ತಿರುವ ಹಾಹಾಕಾರ ಕೂಗುಗಳು ಮತ್ತು ಪುಷ್ಕಲ ಸಿಂಹನಾದಗಳನ್ನು ಕೇಳು.
07145052a ಅಯಂ ಮಧ್ಯೇ ಸ್ಥಿತೋಽಸ್ಮಾಕಂ ಸಾತ್ಯಕಿಃ ಸಾತ್ವತಾಧಮಃ।
07145052c ಇಹ ಚೇಲ್ಲಭ್ಯತೇ ಲಕ್ಷ್ಯಂ ಕೃತ್ಸ್ನಾಂ ಜೇಷ್ಯಾಮಹೇ ಪರಾನ್।।
ನಮ್ಮ ಮಧ್ಯೆ ಈ ಸಾತ್ವತಾಧಮ ಸಾತ್ಯಕಿಯು ನಿಂತಿದ್ದಾನೆ. ಇವನು ನಮ್ಮ ಲಕ್ಷ್ಯಕ್ಕೆ ಸಿಗುತ್ತಾನಾದರೆ ಶತ್ರುಗಳೆಲ್ಲರನ್ನೂ ನಾವು ಜಯಿಸಬಲ್ಲೆವು.
07145053a ಏಷ ಪಾಂಚಾಲರಾಜಸ್ಯ ಪುತ್ರೋ ದ್ರೋಣೇನ ಸಂಗತಃ।
07145053c ಸರ್ವತಃ ಸಂವೃತೋ ಯೋಧೈ ರಾಜನ್ಪುರುಷಸತ್ತಮೈಃ।।
ರಾಜನ್! ಈ ಪಾಂಚಾಲರಾಜನ ಪುತ್ರನು ಸುತ್ತಲೂ ಪುರುಷಸತ್ತಮ ಯೋಧರಿಂದ ಸುತ್ತುವರೆಯಲ್ಪಟ್ಟ ದ್ರೋಣನೊಂದಿಗೆ ಯುದ್ಧಮಾಡುತ್ತಿದ್ದಾನೆ.
07145054a ಸಾತ್ಯಕಿಂ ಯದಿ ಹನ್ಯಾಮೋ ಧೃಷ್ಟದ್ಯುಮ್ನಂ ಚ ಪಾರ್ಷತಂ।
07145054c ಅಸಂಶಯಂ ಮಹಾರಾಜ ಧ್ರುವೋ ನೋ ವಿಜಯೋ ಭವೇತ್।।
ಮಹಾರಾಜ! ಒಂದುವೇಳೆ ಸಾತ್ಯಕಿಯನ್ನು ಮತ್ತು ಪಾರ್ಷತ ಧೃಷ್ಟದ್ಯುಮ್ನನನ್ನು ನಾವು ಸಂಹರಿಸಿದರೆ ನಮ್ಮ ವಿಜಯವು ನಿಶ್ಚಯ. ಅದರಲ್ಲಿ ಸಂಶಯವೇ ಇಲ್ಲ.
07145055a ಸೌಭದ್ರವದಿಮೌ ವೀರೌ ಪರಿವಾರ್ಯ ಮಹಾರಥೌ।
07145055c ಪ್ರಯತಾಮೋ ಮಹಾರಾಜ ನಿಹಂತುಂ ವೃಷ್ಣಿಪಾರ್ಷತೌ।।
ಮಹಾರಾಜ! ಸೌಭದ್ರನನ್ನು ಹೇಗೋ ಹಾಗೆ ಈ ಇಬ್ಬರು ವೃಷ್ಣಿ-ಪಾರ್ಷತ ಮಹಾರಥರನ್ನೂ ಸುತ್ತುವರೆದು ಕೊಲ್ಲಲು ಪ್ರಯತ್ನಿಸೋಣ.
07145056a ಸವ್ಯಸಾಚೀ ಪುರೋಽಭ್ಯೇತಿ ದ್ರೋಣಾನೀಕಾಯ ಭಾರತ।
07145056c ಸಂಸಕ್ತಂ ಸಾತ್ಯಕಿಂ ಜ್ಞಾತ್ವಾ ಬಹುಭಿಃ ಕುರುಪುಂಗವೈಃ।।
ಭಾರತ! ಸಾತ್ಯಕಿಯು ಅನೇಕ ಕುರುಪುಂಗವರಿಂದ ಸುತ್ತುವರೆಯಲ್ಪಟ್ಟಿದ್ದಾನೆ ಎಂದು ತಿಳಿದ ಕೂಡಲೇ ಸವ್ಯಸಾಚಿಯು ದ್ರೋಣನ ಸೇನೆಯ ಬಳಿ ಮುಂದುವರೆದು ಬರುತ್ತಾನೆ.
07145057a ತತ್ರ ಗಚ್ಚಂತು ಬಹವಃ ಪ್ರವರಾ ರಥಸತ್ತಮಾಃ।
07145057c ಯಾವತ್ಪಾರ್ಥೋ ನ ಜಾನಾತಿ ಸಾತ್ಯಕಿಂ ಬಹುಭಿರ್ವೃತಂ।।
ಸಾತ್ಯಕಿಯು ಅನೇಕರಿಂದ ಸುತ್ತುವರೆಯಲ್ಪಟ್ಟಿದ್ದಾನೆ ಎಂದು ಪಾರ್ಥನಿಗೆ ತಿಳಿಯದಂತೆ ಅನೇಕ ರಥಸತ್ತಮ ಪ್ರವರರು ಅಲ್ಲಿಗೆ ಹೋಗಲಿ.
07145058a ತೇ ತ್ವರಧ್ವಂ ಯಥಾ ಶೂರಾಃ ಶರಾಣಾಂ ಮೋಕ್ಷಣೇ ಭೃಶಂ।
07145058c ಯಥಾ ತೂರ್ಣಂ ವ್ರಜತ್ಯೇಷ ಪರಲೋಕಾಯ ಮಾಧವಃ।।
ಶೂರರು ಬಹಳ ತ್ವರೆಮಾಡಿ ಶರಗಳನ್ನು ಪ್ರಯೋಗಿಸುವಂತೆ ಬೇಗನೆ ಈ ಮಾಧವನನ್ನು ಪರಲೋಕಕ್ಕೆ ಕಳುಹಿಸಿ ಬಿಡೋಣ!”
07145059a ಕರ್ಣಸ್ಯ ಮತಮಾಜ್ಞಾಯ ಪುತ್ರಸ್ತೇ ಪ್ರಾಹ ಸೌಬಲಂ।
07145059c ಯಥೇಂದ್ರಃ ಸಮರೇ ರಾಜನ್ಪ್ರಾಹ ವಿಷ್ಣುಂ ಯಶಸ್ವಿನಂ।।
ರಾಜನ್! ಕರ್ಣನ ಅಭಿಪ್ರಾಯವನ್ನು ತಿಳಿದು ನಿನ್ನ ಮಗನು ಸಮರದಲ್ಲಿ ಇಂದ್ರನು ಯಶಸ್ವಿ ವಿಷ್ಣುವಿಗೆ ಹೇಗೋ ಹಾಗೆ ಸೌಬಲನಿಗೆ ಹೇಳಿದನು:
07145060a ವೃತಃ ಸಹಸ್ರೈರ್ದಶಭಿರ್ಗಜಾನಾಮನಿವರ್ತಿನಾಂ।
07145060c ರಥೈಶ್ಚ ದಶಸಾಹಸ್ರೈರ್ವೃತೋ ಯಾಹಿ ಧನಂಜಯಂ।।
“ಹತ್ತು ಸಾವಿರ ಆನೆಗಳಿಂದಲೂ, ಹಿಂದಿರುಗದೇ ಇದ್ದ ಹತ್ತು ಸಾವಿರ ರಥಗಳಿಂದಲೂ ಆವೃತನಾಗಿ ಧನಂಜಯನಿದ್ದಲ್ಲಿಗೆ ಹೋಗು.
07145061a ದುಃಶಾಸನೋ ದುರ್ವಿಷಹಃ ಸುಬಾಹುರ್ದುಷ್ಪ್ರಧರ್ಷಣಃ।
07145061c ಏತೇ ತ್ವಾಮನುಯಾಸ್ಯಂತಿ ಪತ್ತಿಭಿರ್ಬಹುಭಿರ್ವೃತಾಃ।।
ಅನೇಕ ಪದಾತಿಗಳನ್ನು ಕರೆದುಕೊಂಡು ದುಃಶಾಸನ, ದುರ್ವಿಷಹ, ಸುಬಾಹು ಮತ್ತು ದುಷ್ಪ್ರಧರ್ಷಣರು ನಿನ್ನನ್ನು ಹಿಂಬಾಲಿಸಿ ಬರುತ್ತಾರೆ.
07145062a ಜಹಿ ಕೃಷ್ಣೌ ಮಹಾಬಾಹೋ ಧರ್ಮರಾಜಂ ಚ ಮಾತುಲ।
07145062c ನಕುಲಂ ಸಹದೇವಂ ಚ ಭೀಮಸೇನಂ ಚ ಭಾರತ।।
ಮಾವ! ಮಾಹಾಬಾಹೋ! ಇಬ್ಬರು ಕೃಷ್ಣರನ್ನೂ, ಭಾರತ ಧರ್ಮರಾಜ, ನಕುಲ, ಸಹದೇವ ಮತ್ತು ಭೀಮಸೇನರನ್ನೂ ಸಂಹರಿಸು!
07145063a ದೇವಾನಾಮಿವ ದೇವೇಂದ್ರೇ ಜಯಾಶಾ ಮೇ ತ್ವಯಿ ಸ್ಥಿತಾ।
07145063c ಜಹಿ ಮಾತುಲ ಕೌಂತೇಯಾನಸುರಾನಿವ ಪಾವಕಿಃ।।
ದೇವತೆಗಳೆಲ್ಲರೂ ದೇವೇಂದ್ರನ ಮೇಲೆ ಜಯದ ಭರವಸೆಯನ್ನಿಡುವಂತೆ ನಾನು ನಿನ್ನಮೇಲೆ ಭರವಸೆಯನ್ನಿಟ್ಟಿದ್ದೇನೆ. ಮಾವ! ಪಾವಕಿಯು ಅಸುರರನ್ನು ಹೇಗೋ ಹಾಗೆ ಕೌಂತೇಯರನ್ನು ಸಂಹರಿಸು!”
07145064a ಏವಮುಕ್ತೋ ಯಯೌ ಪಾರ್ಥಾನ್ಪುತ್ರೇಣ ತವ ಸೌಬಲಃ।
07145064c ಮಹತ್ಯಾ ಸೇನಯಾ ಸಾರ್ಧಂ ತವ ಪುತ್ರೈಸ್ತಥಾ ವಿಭೋ।।
ವಿಭೋ! ನಿನ್ನ ಮಗನು ಹೀಗೆ ಹೇಳಲು ಸೌಬಲನು ಮಹಾ ಸೇನೆಯೊಡನೆ ಪಾರ್ಥರಿದ್ದಲ್ಲಿಗೆ ತೆರಳಿದನು.
07145065a ಪ್ರಿಯಾರ್ಥಂ ತವ ಪುತ್ರಾಣಾಂ ದಿಧಕ್ಷುಃ ಪಾಂಡುನಂದನಾನ್।
07145065c ತತಃ ಪ್ರವವೃತೇ ಯುದ್ಧಂ ತಾವಕಾನಾಂ ಪರೈಃ ಸಹ।।
ನಿನ್ನ ಪುತ್ರರ ಪ್ರೀತಿಗಾಗಿ ಅವನು ಪಾಂಡುನಂದನರನ್ನು ಪೀಡಿಸಿದನು. ಆಗ ನಿನ್ನವರ ಮತ್ತು ಶತ್ರುಗಳ ನಡುವೆ ಯುದ್ಧವು ನಡೆಯಿತು.
07145066a ಪ್ರಯಾತೇ ಸೌಬಲೇ ರಾಜನ್ಪಾಂಡವಾನಾಮನೀಕಿನೀಂ।
07145066c ಬಲೇನ ಮಹತಾ ಯುಕ್ತಃ ಸೂತಪುತ್ರಸ್ತು ಸಾತ್ವತಂ।।
07145067a ಅಭ್ಯಯಾತ್ತ್ವರಿತಂ ಯುದ್ಧೇ ಕಿರಂ ಶರಶತಾನ್ಬಹೂನ್।
ರಾಜನ್! ಸೌಬಲನು ಪಾಂಡವರ ಸೇನೆಯ ಕಡೆ ಹೊರಟುಹೋಗಲು ಯುದ್ಧದಲ್ಲಿ ಸೂತಪುತ್ರನು ತ್ವರೆಮಾಡಿ ಮಹಾ ಬಲದೊಂದಿಗೆ ಸಾತ್ವತನನ್ನು ಆಕ್ರಮಣಿಸಿ ಅನೇಕ ನೂರು ಬಾಣಗಳನ್ನು ಎರಚಿದನು.
07145067c ತಥೈವ ಪಾಂಡವಾಃ ಸರ್ವೇ ಸಾತ್ಯಕಿಂ ಪರ್ಯವಾರಯನ್।।
07145068a ಮಹದ್ಯುದ್ಧಂ ತದಾಸೀತ್ತು ದ್ರೋಣಸ್ಯ ನಿಶಿ ಭಾರತ।
07145068c ಧೃಷ್ಟದ್ಯುಮ್ನೇನ ಶೂರೇಣ ಪಾಂಚಾಲೈಶ್ಚ ಮಹಾತ್ಮನಃ।।
ಹಾಗೆಯೇ ಪಾಂಡವರೆಲ್ಲರೂ ಸಾತ್ಯಕಿಯನ್ನು ಸುತ್ತುವರೆದರು. ಭಾರತ! ದ್ರೋಣನಿಗಾಗಿ ಆ ರಾತ್ರಿ ಮಹಾತ್ಮ ಶೂರ ಪಾಂಚಾಲ ಧೃಷ್ಟದ್ಯುಮ್ನನ ಮಹಾಯುದ್ಧವು ನಡೆಯಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣಪರ್ವಣಿ ಘಟೋತ್ಕಚವಧಪರ್ವಣಿ ರಾತ್ರಿಯುದ್ಧೇ ಸಂಕುಲಯುದ್ಧೇ ಪಂಚಚತ್ವಾರಿಂಶಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣಪರ್ವದಲ್ಲಿ ಘಟೋತ್ಕಚವಧಪರ್ವದಲ್ಲಿ ರಾತ್ರಿಯುದ್ಧೇ ಸಂಕುಲಯುದ್ಧ ಎನ್ನುವ ನೂರಾನಲ್ವತ್ತೈದನೇ ಅಧ್ಯಾಯವು.