144 ರಾತ್ರಿಯುದ್ಧೇ ಸಂಕುಲಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಘಟೋತ್ಕಚವಧ ಪರ್ವ

ಅಧ್ಯಾಯ 144

ಸಾರ

ನಕುಲ-ಶಕುನಿಯರ ಯುದ್ಧ (1-14). ಶಿಖಂಡಿ-ಕೃಪರ ಯುದ್ಧ (15-28). ರಾತ್ರಿಯುದ್ಧದ ವರ್ಣನೆ (29-42).

07144001 ಸಂಜಯ ಉವಾಚ।
07144001a ನಕುಲಂ ರಭಸಂ ಯುದ್ಧೇ ನಿಘ್ನಂತಂ ವಾಹಿನೀಂ ತವ।
07144001c ಅಭ್ಯಯಾತ್ಸೌಬಲಃ ಕ್ರುದ್ಧಸ್ತಿಷ್ಠ ತಿಷ್ಠೇತಿ ಚಾಬ್ರವೀತ್।।

ಸಂಜಯನು ಹೇಳಿದನು: “ಯುದ್ಧದಲ್ಲಿ ರಭಸದಿಂದ ನಿನ್ನ ಸೇನೆಯನ್ನು ಸಂಹರಿಸುತ್ತಿದ್ದ ನಕುಲನನ್ನು ಕ್ರುದ್ಧ ಸೌಬಲನು ಆಕ್ರಮಣಿಸಿ ನಿಲ್ಲು ನಿಲ್ಲೆಂದು ಹೇಳಿದನು.

07144002a ಕೃತವೈರೌ ತು ತೌ ವೀರಾವನ್ಯೋನ್ಯವಧಕಾಂಕ್ಷಿಣೌ।
07144002c ಶರೈಃ ಪೂರ್ಣಾಯತೋತ್ಸೃಷ್ಟೈರನ್ಯೋನ್ಯಮಭಿಜಘ್ನತುಃ।।

ಬದ್ಧವೈರಿಗಳಾಗಿದ್ದ ಆ ವೀರರಿಬ್ಬರೂ ಅನ್ಯೋನ್ಯರನ್ನು ವಧಿಸಲು ಬಯಸಿ ಪೂರ್ಣವಾಗಿ ಸೆಳೆದು ಬಿಟ್ಟ ಬಾಣಗಳಿಂದ ಅನ್ಯೋನ್ಯರನ್ನು ಪ್ರಹರಿಸಿದರು.

07144003a ಯಥೈವ ಸೌಬಲಃ ಕ್ಷಿಪ್ರಂ ಶರವರ್ಷಾಣಿ ಮುಂಚತಿ।
07144003c ತಥೈವ ನಕುಲೋ ರಾಜಂ ಶಿಕ್ಷಾಂ ಸಂದರ್ಶಯನ್ಯುಧಿ।।

ರಾಜನ್! ಸೌಬಲನು ಹೇಗೆ ಕ್ಷಿಪ್ರವಾಗಿ ಶರವರ್ಷಗಳನ್ನು ಸುರಿಸುತ್ತಿದ್ದನೋ ಹಾಗೆ ನಕುಲನು ತನ್ನ ಯುದ್ಧನೈಪುಣ್ಯವನ್ನು ಪ್ರದರ್ಶಿಸುತ್ತಿದ್ದನು.

07144004a ತಾವುಭೌ ಸಮರೇ ಶೂರೌ ಶರಕಂಟಕಿನೌ ತದಾ।
07144004c ವ್ಯರಾಜೇತಾಂ ಮಹಾರಾಜ ಕಂಟಕೈರಿವ ಶಾಲ್ಮಲೀ।।

ಮಹಾರಾಜ! ಸಮರದಲ್ಲಿ ಶರಗಳಿಂದ ಚುಚ್ಚಲ್ಪಟ್ಟಿದ್ದ ಆ ಇಬ್ಬರು ಶೂರರು ಮುಳ್ಳುಗಳಿದ್ದ ಮುಳ್ಳುಹಂದಿಗಳಂತೆಯೇ ವಿರಾಜಿಸಿದರು.

07144005a ಸುಜಿಹ್ಮಂ ಪ್ರೇಕ್ಷಮಾಣೌ ಚ ರಾಜನ್ವಿವೃತಲೋಚನೌ।
07144005c ಕ್ರೋಧಸಂರಕ್ತನಯನೌ ನಿರ್ದಹಂತೌ ಪರಸ್ಪರಂ।।

ರಾಜನ್! ಅವರಿಬ್ಬರೂ ಕಣ್ಣುಗಳನ್ನು ತೆರೆದು ಕ್ರೋಧದಿಂದ ಕೆಂಪಾದ ಕಣ್ಣುಗಳಿಂದ ಪರಸ್ಪರರನ್ನು ಸುಟ್ಟುಬಿಡುವರೋ ಎನ್ನುವಂತೆ ನೋಡುತ್ತಿದ್ದರು.

07144006a ಸ್ಯಾಲಸ್ತು ತವ ಸಂಕ್ರುದ್ಧೋ ಮಾದ್ರೀಪುತ್ರಂ ಹಸನ್ನಿವ।
07144006c ಕರ್ಣಿನೈಕೇನ ವಿವ್ಯಾಧ ಹೃದಯೇ ನಿಶಿತೇನ ಹ।।

ಸಂಕ್ರುದ್ಧನಾದ ನಿನ್ನ ಬಾವಮೈದುನನಾದರೋ ನಸುನಗುತ್ತಾ ನಿಶಿತ ಕರ್ಣಿಕದಿಂದ ಮಾದ್ರೀಪುತ್ರನ ಹೃದಯಕ್ಕೆ ಹೊಡೆದನು.

07144007a ನಕುಲಸ್ತು ಭೃಶಂ ವಿದ್ಧಃ ಸ್ಯಾಲೇನ ತವ ಧನ್ವಿನಾ।
07144007c ನಿಷಸಾದ ರಥೋಪಸ್ಥೇ ಕಶ್ಮಲಂ ಚೈನಮಾವಿಶತ್।।

ನಿನ್ನ ಧನ್ವಿ ಬಾವಮೈದುನನಿಂದ ಅತಿಯಾಗಿ ಗಾಯಗೊಂಡ ನಕುಲನಾದರೋ ಪೀಠದಿಂದ ಪಕ್ಕಕ್ಕೆ ಸರಿದು ಮೂರ್ಛಿತನಾದನು.

07144008a ಅತ್ಯಂತವೈರಿಣಂ ದೃಪ್ತಂ ದೃಷ್ಟ್ವಾ ಶತ್ರುಂ ತಥಾಗತಂ।
07144008c ನನಾದ ಶಕುನೀ ರಾಜಂಸ್ತಪಾಂತೇ ಜಲದೋ ಯಥಾ।।

ರಾಜನ್! ಅತ್ಯಂತ ವೈರಿ ಶತ್ರುವಿನ ಆ ಸ್ಥಿತಿಯನ್ನು ಕಂಡು ಶಕುನಿಯು ಬೇಸಗೆಯ ಅಂತ್ಯದಲ್ಲಿ ಮೋಡವು ಗುಡುಗುವಂತೆ ಜೋರಾಗಿ ಗರ್ಜಿಸಿದನು.

07144009a ಪ್ರತಿಲಭ್ಯ ತತಃ ಸಂಜ್ಞಾಂ ನಕುಲಃ ಪಾಂಡುನಂದನಃ।
07144009c ಅಭ್ಯಯಾತ್ಸೌಬಲಂ ಭೂಯೋ ವ್ಯಾತ್ತಾನನ ಇವಾಂತಕಃ।।

ಆಗ ಪಾಂಡುನಂದನ ನಕುಲನು ಸಂಜ್ಞೆಯನ್ನು ಪಡೆದು ಬಾಯಿಕಳೆದ ಅಂತಕನಂತೆ ಸೌಬಲನನ್ನು ಇನ್ನೊಮ್ಮೆ ಆಕ್ರಮಣಿಸಿದನು.

07144010a ಸಂಕ್ರುದ್ಧಃ ಶಕುನಿಂ ಷಷ್ಟ್ಯಾ ವಿವ್ಯಾಧ ಭರತರ್ಷಭ।
07144010c ಪುನಶ್ಚೈವ ಶತೇನೈವ ನಾರಾಚಾನಾಂ ಸ್ತನಾಂತರೇ।।

ಆ ಸಂಕ್ರುದ್ಧ ಭರತರ್ಷಭನು ಶಕುನಿಯನ್ನು ಅರವತ್ತು ನಾರಾಚಗಳಿಂದ ಹೊಡೆದು ಪುನಃ ನೂರರಿಂದ ಅವನ ಎದೆಯನ್ನು ಪ್ರಹರಿಸಿದನು.

07144011a ತತೋಽಸ್ಯ ಸಶರಂ ಚಾಪಂ ಮುಷ್ಟಿದೇಶೇ ಸ ಚಿಚ್ಚಿದೇ।
07144011c ಧ್ವಜಂ ಚ ತ್ವರಿತಂ ಚಿತ್ತ್ವಾ ರಥಾದ್ಭೂಮಾವಪಾತಯತ್।।

ಅನಂತರ ಶಕುನಿಯ ಶರ ಮತ್ತು ಚಾಪವನ್ನು ಮುಷ್ಟಿಪ್ರದೇಶದಲ್ಲಿ ಕತ್ತರಿಸಿ, ತ್ವರೆಮಾಡಿ ಧ್ವಜವನ್ನು ಮತ್ತು ಅವನನ್ನು ಕೂಡ ರಥದಿಂದ ಭೂಮಿಯ ಮೇಲೆ ಕೆಡವಿದನು.

07144012a ಸೋಽತಿವಿದ್ಧೋ ಮಹಾರಾಜ ರಥೋಪಸ್ಥ ಉಪಾವಿಶತ್।
07144012c ತಂ ವಿಸಂಜ್ಞಂ ನಿಪತಿತಂ ದೃಷ್ಟ್ವಾ ಸ್ಯಾಲಂ ತವಾನಘ।
07144012e ಅಪೋವಾಹ ರಥೇನಾಶು ಸಾರಥಿರ್ಧ್ವಜಿನೀಮುಖಾತ್।।

ಮಹಾರಾಜ! ಅನಘ! ಅತಿಯಾಗಿ ಗಾಯಗೊಂಡು ಮೂರ್ಛಿತನಾಗಿ ಬಿದ್ದ ನಿನ್ನ ಬಾವ ಮೈದುನನು ನೋಡಿ ಅವನ ಸಾರಥಿಯು ಅವನನ್ನು ರಥದ ಮೇಲೆ ಕುಳ್ಳಿರಿಸಿ ರಥವನ್ನು ದೂರ ಕೊಂಡೊಯ್ದನು.

07144013a ತತಃ ಸಂಚುಕ್ರುಶುಃ ಪಾರ್ಥಾ ಯೇ ಚ ತೇಷಾಂ ಪದಾನುಗಾಃ।
07144013c ನಿರ್ಜಿತ್ಯ ಚ ರಣೇ ಶತ್ರೂನ್ನಕುಲಃ ಶತ್ರುತಾಪನಃ।
07144013e ಅಬ್ರವೀತ್ಸಾರಥಿಂ ಕ್ರುದ್ಧೋ ದ್ರೋಣಾನೀಕಾಯ ಮಾಂ ವಹ।।

ರಣದಲ್ಲಿ ಶತ್ರುವನ್ನು ಸೋಲಿಸಿದ ಶತ್ರುತಾಪನ ಪಾರ್ಥ ನಕುಲ ಮತ್ತು ಅವನ ಅನುಯಾಯಿಗಳು ಜೋರಾಗಿ ಗರ್ಜಿಸಿದರು. ಕ್ರುದ್ಧನಾದ ಅವನು ದ್ರೋಣಸೇನೆಯ ಕಡೆ ತನ್ನನ್ನು ಕರೆದುಕೊಂಡು ಹೋಗುವಂತೆ ಸಾರಥಿಗೆ ಹೇಳಿದನು.

07144014a ತಸ್ಯ ತದ್ವಚನಂ ಶ್ರುತ್ವಾ ಮಾದ್ರೀಪುತ್ರಸ್ಯ ಧೀಮತಃ।
07144014c ಪ್ರಾಯಾತ್ತೇನ ರಣೇ ರಾಜನ್ಯೇನ ದ್ರೋಣೋಽನ್ವಯುಧ್ಯತ।।

ರಾಜನ್! ಮಾದ್ರೀಪುತ್ರನ ಆ ಮಾತನ್ನು ಕೇಳಿ ಧೀಮತ ಸಾರಥಿಯು ದ್ರೋಣನು ಯುದ್ಧಮಾಡುತ್ತಿರುವಲ್ಲಿಗೆ ಅವನನ್ನು ಕೊಂಡೊಯ್ದನು.

07144015a ಶಿಖಂಡಿನಂ ತು ಸಮರೇ ದ್ರೋಣಪ್ರೇಪ್ಸುಂ ವಿಶಾಂ ಪತೇ।
07144015c ಕೃಪಃ ಶಾರದ್ವತೋ ಯತ್ತಃ ಪ್ರತ್ಯುದ್ಗಚ್ಚತ್ಸುವೇಗಿತಃ।।

ವಿಶಾಂಪತೇ! ಸಮರದಲ್ಲಿ ದ್ರೋಣನ ಬಳಿ ಹೋಗುತ್ತಿದ್ದ ಶಿಖಂಡಿಯನ್ನು ಪ್ರಯತ್ನಪಟ್ಟು ಕೃಪ ಶಾರದ್ವತನು ವೇಗದಿಂದ ಎದುರಿಸಿ ತಡೆದನು.

07144016a ಗೌತಮಂ ದ್ರುತಮಾಯಾಂತಂ ದ್ರೋಣಾಂತಿಕಮರಿಂದಮಂ।
07144016c ವಿವ್ಯಾಧ ನವಭಿರ್ಭಲ್ಲೈಃ ಶಿಖಂಡೀ ಪ್ರಹಸನ್ನಿವ।।

ದ್ರೋಣನ ಸಮೀಪದಿಂದ ವೇಗದಿಂದ ತನ್ನ ಕಡೆಬರುತ್ತಿದ್ದ ಅರಿಂದಮ ಗೌತಮನನ್ನು ಶಿಖಂಡಿಯು ನಗುತ್ತಾ ಒಂಭತ್ತು ಭಲ್ಲಗಳಿಂದ ಪ್ರಹರಿಸಿದನು.

07144017a ತಮಾಚಾರ್ಯೋ ಮಹಾರಾಜ ವಿದ್ಧ್ವಾ ಪಂಚಭಿರಾಶುಗೈಃ।
07144017c ಪುನರ್ವಿವ್ಯಾಧ ವಿಂಶತ್ಯಾ ಪುತ್ರಾಣಾಂ ಪ್ರಿಯಕೃತ್ತವ।।

ಮಹಾರಾಜ! ನಿನ್ನ ಪುತ್ರರಿಗೆ ಪ್ರಿಯವನ್ನುಂಟು ಮಾಡುತ್ತಿದ್ದ ಆಚಾರ್ಯನು ಅವನನ್ನು ಐದು ಆಶುಗಗಳಿಂದ ಹೊಡೆದು ಪುನಃ ಇಪ್ಪತ್ತರಿಂದ ಪ್ರಹರಿಸಿದನು.

07144018a ಮಹದ್ಯುದ್ಧಂ ತಯೋರಾಸೀದ್ಘೋರರೂಪಂ ವಿಶಾಂ ಪತೇ।
07144018c ಯಥಾ ದೇವಾಸುರೇ ಯುದ್ಧೇ ಶಂಬರಾಮರರಾಜಯೋಃ।।

ವಿಶಾಂಪತೇ! ದೇವಾಸುರರ ಯುದ್ಧದಲ್ಲಿ ಶಂಬರ ಮತ್ತು ಅಮರರಾಜರ ನಡುವೆ ನಡೆದಂತೆ ಅವರಿಬ್ಬರ ನಡುವೆ ಘೋರರೂಪದ ಮಹಾಯುದ್ಧವು ನಡೆಯಿತು.

07144019a ಶರಜಾಲಾವೃತಂ ವ್ಯೋಮ ಚಕ್ರತುಸ್ತೌ ಮಹಾರಥೌ।
07144019c ಪ್ರಕೃತ್ಯಾ ಘೋರರೂಪಂ ತದಾಸೀದ್ಘೋರತರಂ ಪುನಃ।।

ಆ ಇಬ್ಬರು ಮಹಾರಥರೂ ಆಕಾಶವನ್ನು ಶರಜಾಲಗಳಿಂದ ಮುಚ್ಚಿಬಿಟ್ಟರು. ಘೋರರೂಪವನ್ನು ತಾಳಿದ್ದ ಪ್ರಕೃತಿಯು ಅದರಿಂದಾಗಿ ಇನ್ನೂ ಘೋರವಾಗಿ ಕಾಣುತ್ತಿತ್ತು.

07144020a ರಾತ್ರಿಶ್ಚ ಭರತಶ್ರೇಷ್ಠ ಯೋಧಾನಾಂ ಯುದ್ಧಶಾಲಿನಾಂ।
07144020c ಕಾಲರಾತ್ರಿನಿಭಾ ಹ್ಯಾಸೀದ್ಘೋರರೂಪಾ ಭಯಾವಹಾ।।

ಭರತಶ್ರೇಷ್ಠ! ಯುದ್ಧಾಸಕ್ತರಾಗಿದ್ದ ಯೋಧರಿಗೂ ಆ ಕಾಲರಾತ್ರಿಯು ಘೋರರೂಪವನ್ನು ತಾಳಿ ಭಯವನ್ನುಂಟುಮಾಡುತ್ತಿತ್ತು.

07144021a ಶಿಖಂಡೀ ತು ಮಹಾರಾಜ ಗೌತಮಸ್ಯ ಮಹದ್ಧನುಃ।
07144021c ಅರ್ಧಚಂದ್ರೇಣ ಚಿಚ್ಚೇದ ಸಜ್ಯಂ ಸವಿಶಿಖಂ ತದಾ।।

ಮಹಾರಾಜ! ಶಿಖಂಡಿಯಾದರೋ ಅರ್ಧಚಂದ್ರಾಕಾರದ ವಿಶಿಖವನ್ನು ಹೂಡಿ ಗೌತಮನ ಮಹಾಧನುಸ್ಸನ್ನು ತುಂಡರಿಸಿದನು.

07144022a ತಸ್ಯ ಕ್ರುದ್ಧಃ ಕೃಪೋ ರಾಜಂ ಶಕ್ತಿಂ ಚಿಕ್ಷೇಪ ದಾರುಣಾಂ।
07144022c ಸ್ವರ್ಣದಂಡಾಮಕುಂಠಾಗ್ರಾಂ ಕರ್ಮಾರಪರಿಮಾರ್ಜಿತಾಂ।।

ರಾಜನ್! ಕ್ರುದ್ಧ ಕೃಪನು ಅವನ ಮೇಲೆ ಕಮ್ಮಾರನಿಂದ ಮಾಡಲ್ಪಟ್ಟ ಸ್ವರ್ಣದ ಹಿಡಿ ಮತ್ತು ಮುಳ್ಳಿನ ತುದಿಯುಳ್ಳ ದಾರುಣ ಶಕ್ತಿಯನ್ನು ಎಸೆದನು.

07144023a ತಾಮಾಪತಂತೀಂ ಚಿಚ್ಚೇದ ಶಿಖಂಡೀ ಬಹುಭಿಃ ಶರೈಃ।
07144023c ಸಾಪತನ್ಮೇದಿನೀಂ ದೀಪ್ತಾ ಭಾಸಯಂತೀ ಮಹಾಪ್ರಭಾ।।

ಬೀಳುತ್ತಿದ್ದ ಅದನ್ನು ಶಿಖಂಡಿಯು ಅನೇಕ ಶರಗಳಿಂದ ತುಂಡರಿಸಿದನು. ಮಹಾಪ್ರಭೆಯ ಆ ಶಕ್ತಿಯು ಬೆಂಕಿಯಿಂದ ಬೆಳಗುತ್ತಾ ಭೂಮಿಯ ಮೇಲೆ ಬಿದ್ದಿತು.

07144024a ಅಥಾನ್ಯದ್ಧನುರಾದಾಯ ಗೌತಮೋ ರಥಿನಾಂ ವರಃ।
07144024c ಪ್ರಾಚ್ಚಾದಯಚ್ಚಿತೈರ್ಬಾಣೈರ್ಮಹಾರಾಜ ಶಿಖಂಡಿನಂ।।

ಮಹಾರಾಜ! ತಕ್ಷಣವೇ ರಥಿಗಳಲ್ಲಿ ಶ್ರೇಷ್ಠ ಗೌತಮನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ನಿಶಿತ ಬಾಣಗಳಿಂದ ಶಿಖಂಡಿಯನ್ನು ಮುಚ್ಚಿಬಿಟ್ಟನು.

07144025a ಸ ಚಾದ್ಯಮಾನಃ ಸಮರೇ ಗೌತಮೇನ ಯಶಸ್ವಿನಾ।
07144025c ವ್ಯಷೀದತ ರಥೋಪಸ್ಥೇ ಶಿಖಂಡೀ ರಥಿನಾಂ ವರಃ।।

ಸಮರದಲ್ಲಿ ಯಶಸ್ವಿ ಗೌತಮನಿಂದ ಗಾಯಗೊಂಡ ರಥಿಗಳಲ್ಲಿ ಶ್ರೇಷ್ಠ ಶಿಖಂಡಿಯು ರಥದಲ್ಲಿ ಸರಿದು ಕುಳಿತುಕೊಂಡನು.

07144026a ಸೀದಂತಂ ಚೈನಮಾಲೋಕ್ಯ ಕೃಪಃ ಶಾರದ್ವತೋ ಯುಧಿ।
07144026c ಆಜಘ್ನೇ ಬಹುಭಿರ್ಬಾಣೈರ್ಜಿಘಾಂಸನ್ನಿವ ಭಾರತ।।

ಭಾರತ! ಯುದ್ಧದಲ್ಲಿ ಅವನು ಕುಸಿದುದನ್ನು ನೋಡಿ ಕೃಪ ಶಾರದ್ವತನು ಕೊಲ್ಲುವನೋ ಎನ್ನುವಂತೆ ಅವನನ್ನು ಅನೇಕ ಬಾಣಗಳಿಂದ ಹೊಡೆದನು.

07144027a ವಿಮುಖಂ ತಂ ರಣೇ ದೃಷ್ಟ್ವಾ ಯಾಜ್ಞಸೇನಿಂ ಮಹಾರಥಂ।
07144027c ಪಾಂಚಾಲಾಃ ಸೋಮಕಾಶ್ಚೈವ ಪರಿವವ್ರುಃ ಸಮಂತತಃ।।

ರಣದಲ್ಲಿ ಮಹಾರಥಿ ಯಾಜ್ಞಸೇನಿಯು ವಿಮುಖನಾದುದನ್ನು ನೋಡಿ ಪಾಂಚಾಲ-ಸೋಮಕರು ಎಲ್ಲಕಡೆಗಳಿಂದ ಸುತ್ತುವರೆದರು.

07144028a ತಥೈವ ತವ ಪುತ್ರಾಶ್ಚ ಪರಿವವ್ರುರ್ದ್ವಿಜೋತ್ತಮಂ।
07144028c ಮಹತ್ಯಾ ಸೇನಯಾ ಸಾರ್ಧಂ ತತೋ ಯುದ್ಧಮಭೂತ್ಪುನಃ।।

ಹಾಗೆಯೇ ನಿನ್ನ ಪುತ್ರರೂ ಕೂಡ ದ್ವಿಜೋತ್ತಮನನ್ನು ಸುತ್ತುವರೆದರು. ಆಗ ಮಹಾಸೇನೆಗಳೊಡನೆ ಪುನಃ ಯುದ್ಧವು ನಡೆಯಿತು.

07144029a ರಥಾನಾಂ ಚ ರಣೇ ರಾಜನ್ನನ್ಯೋನ್ಯಮಭಿಧಾವತಾಂ।
07144029c ಬಭೂವ ತುಮುಲಃ ಶಬ್ದೋ ಮೇಘಾನಾಂ ನದತಾಮಿವ।।

ರಾಜನ್! ರಣದಲ್ಲಿ ಅನ್ಯೋನ್ಯರನ್ನು ಆಕ್ರಮಣಿಸುತ್ತಿದ್ದ ಆ ರಥಿಗಳ ತುಮುಲಶಬ್ಧವು ಮೋಡಗಳ ಗುಡುಗುಗಳಂತೆ ಕೇಳಿಬರುತ್ತಿತ್ತು.

07144030a ದ್ರವತಾಂ ಸಾದಿನಾಂ ಚೈವ ಗಜಾನಾಂ ಚ ವಿಶಾಂ ಪತೇ।
07144030c ಅನ್ಯೋನ್ಯಮಭಿತೋ ರಾಜನ್ಕ್ರೂರಮಾಯೋಧನಂ ಬಭೌ।।

ವಿಶಾಂಪತೇ! ರಾಜನ್! ಓಡಿಬಂದು ಪರಸ್ಪರರನ್ನು ಆಕ್ರಮಣಿಸುತ್ತಿದ್ದ ಕುದುರೆಸವಾರರ ಮತ್ತು ಆನೆಗಳ ಯುದ್ಧವು ಕ್ರೂರವಾಗಿ ಪರಿಣಮಿಸಿತು.

07144031a ಪತ್ತೀನಾಂ ದ್ರವತಾಂ ಚೈವ ಪದಶಬ್ದೇನ ಮೇದಿನೀ।
07144031c ಅಕಂಪತ ಮಹಾರಾಜ ಭಯತ್ರಸ್ತೇವ ಚಾಂಗನಾ।।

ಮಹಾರಾಜ! ಓಡುತ್ತಿದ್ದ ಪದಾತಿಗಳ ಕಾಲುಶಬ್ಧಗಳಿಂದ ಮೇದಿನಿಯು ಭಯದಿಂದ ನಡುಗುತ್ತಿದ್ದ ಅಂಗನೆಯಂತೆ ಕಂಪಿಸಿತು.

07144032a ರಥಾ ರಥಾನ್ಸಮಾಸಾದ್ಯ ಪ್ರದ್ರುತಾ ವೇಗವತ್ತರಂ।
07144032c ನ್ಯಗೃಹ್ಣನ್ಬಹವೋ ರಾಜಂ ಶಲಭಾನ್ವಾಯಸಾ ಇವ।।

ರಾಜನ್! ವೇಗದಿಂದ ಓಡುತ್ತಿದ್ದ ರಥಿಗಳು ರಥಿಗಳನ್ನು ತಲುಪಿ ಕಾಗೆಗಳು ಮಿಡತೆಹುಳಗಳನ್ನು ಹೇಗೋ ಹಾಗೆ ಅನೇಕರನ್ನು ಹಿಡಿದು ಸಂಹರಿಸುತ್ತಿದ್ದರು.

07144033a ತಥಾ ಗಜಾನ್ಪ್ರಭಿನ್ನಾಂಶ್ಚ ಸುಪ್ರಭಿನ್ನಾ ಮಹಾಗಜಾಃ।
07144033c ತಸ್ಮಿನ್ನೇವ ಪದೇ ಯತ್ತಾ ನಿಗೃಹ್ಣಂತಿ ಸ್ಮ ಭಾರತ।।

ಭಾರತ! ಹಾಗೆಯೇ ಮದೋದಕವನ್ನು ಸುರಿಸುತ್ತಿದ್ದ ಆನೆಗಳು ಮದೋದಕವನ್ನು ಸುರಿಸುತ್ತಿದ್ದ ಇತರ ಮಹಾಗಜಗಳನ್ನು ದಾರಿಯಲ್ಲಿಯೇ ಪ್ರಯತ್ನಪಟ್ಟು ಧ್ವಂಸಗೊಳಿಸುತ್ತಿದ್ದವು.

07144034a ಸಾದೀ ಸಾದಿನಮಾಸಾದ್ಯ ಪದಾತೀ ಚ ಪದಾತಿನಂ।
07144034c ಸಮಾಸಾದ್ಯ ರಣೇಽನ್ಯೋನ್ಯಂ ಸಂರಬ್ಧಾ ನಾತಿಚಕ್ರಮುಃ।।

ಅಶ್ವಾರೋಹಿಗಳು ಅಶ್ವಾರೋಹಿಗಳನ್ನು ಮತ್ತು ಕಾಲಾಳುಗಳು ಕಾಲಾಳುಗಳನ್ನು ರಣದಲ್ಲಿ ಎದುರಿಸಿ ಸಂರಬ್ಧರಾಗಿ ಯಾರಿಗೂ ಮುಂದೆಹೋಗಲು ಬಿಡದೇ ಯುದ್ಧಮಾಡುತ್ತಿದ್ದರು.

07144035a ಧಾವತಾಂ ದ್ರವತಾಂ ಚೈವ ಪುನರಾವರ್ತತಾಮಪಿ।
07144035c ಬಭೂವ ತತ್ರ ಸೈನ್ಯಾನಾಂ ಶಬ್ದಃ ಸುತುಮುಲೋ ನಿಶಿ।।

ಚೆಲ್ಲಾಪಿಲ್ಲಿಯಾಗಿ ಓಡಿಹೋಗುತ್ತಿದ್ದ ಮತ್ತು ಪುನಃ ಯುದ್ಧಕ್ಕೆ ಹಿಂದಿರುಗುತ್ತಿದ್ದ ಸೇನೆಗಳ ಆ ತುಮುಲಶಬ್ಧವು ರಾತ್ರಿಯಲ್ಲಿ ಕೇಳಿಬರುತ್ತಿತ್ತು.

07144036a ದೀಪ್ಯಮಾನಾಃ ಪ್ರದೀಪಾಶ್ಚ ರಥವಾರಣವಾಜಿಷು।
07144036c ಅದೃಶ್ಯಂತ ಮಹಾರಾಜ ಮಹೋಲ್ಕಾ ಇವ ಖಾಚ್ಚ್ಯುತಾಃ।।

ಮಹಾರಾಜ! ರಥ, ಆನೆ, ಕುದುರೆಗಳ ಮೇಲೆ ಉರಿಯುತ್ತಿದ್ದ ಪಂಜುಗಳು ಆಕಾಶದಿಂದ ಕೆಳಕ್ಕೆ ಬಿದ್ದ ಮಹಾ ಉಲ್ಕೆಗಳಂತೆ ತೋರುತ್ತಿದ್ದವು.

07144037a ಸಾ ನಿಶಾ ಭರತಶ್ರೇಷ್ಠ ಪ್ರದೀಪೈರವಭಾಸಿತಾ।
07144037c ದಿವಸಪ್ರತಿಮಾ ರಾಜನ್ಬಭೂವ ರಣಮೂರ್ಧನಿ।।

ಭರತಶ್ರೇಷ್ಠ! ರಾಜನ್! ರಣರಂಗದಲ್ಲಿ ಹತ್ತಿ ಉರಿಯುತ್ತಿದ್ದ ಪಂಜುಗಳಿಂದ ಪ್ರಕಾಶಿತಗೊಂಡ ಆ ರಾತ್ರಿಯು ಹಗಲಿನಂತೆಯೇ ಕಾಣುತ್ತಿತ್ತು.

07144038a ಆದಿತ್ಯೇನ ಯಥಾ ವ್ಯಾಪ್ತಂ ತಮೋ ಲೋಕೇ ಪ್ರಣಶ್ಯತಿ।
07144038c ತಥಾ ನಷ್ಟಂ ತಮೋ ಘೋರಂ ದೀಪೈರ್ದೀಪ್ತೈರಲಂಕೃತಂ।।

ಆದಿತ್ಯನಿಂದ ಲೋಕದಲ್ಲಿ ಕತ್ತಲೆಯು ಹೇಗೆ ನಾಶವಾಗುತ್ತದೆಯೋ ಹಾಗೆ ಉರಿಯುತ್ತಿರುವ ದೀಪಗಳಿಂದ ಅಲಂಕೃತಗೊಂಡು ಆ ಘೋರ ಕತ್ತಲೆಯು ನಾಶವಾಗಿತ್ತು.

07144039a ಶಸ್ತ್ರಾಣಾಂ ಕವಚಾನಾಂ ಚ ಮಣೀನಾಂ ಚ ಮಹಾತ್ಮನಾಂ।
07144039c ಅಂತರ್ದಧುಃ ಪ್ರಭಾಃ ಸರ್ವಾ ದೀಪೈಸ್ತೈರವಭಾಸಿತಾಃ।।

ಮಹಾತ್ಮರ ಶಸ್ತ್ರಗಳು, ಕವಚಗಳು ಮತ್ತು ಮಣಿಗಳ ಮೇಲೆ ಬಿದ್ದು ಅವುಗಳು ಒಳಗಿನಿಂದಲೇ ಪ್ರಕಾಶಗೊಳ್ಳುತ್ತಿವೆಯೋ ಎಂದು ಅನ್ನಿಸುತ್ತಿತ್ತು.

07144040a ತಸ್ಮಿನ್ಕೋಲಾಹಲೇ ಯುದ್ಧೇ ವರ್ತಮಾನೇ ನಿಶಾಮುಖೇ।
07144040c ಅವಧೀತ್ಸಮರೇ ಪುತ್ರಂ ಪಿತಾ ಭರತಸತ್ತಮ।।
07144041a ಪುತ್ರಶ್ಚ ಪಿತರಂ ಮೋಹಾತ್ಸಖಾಯಂ ಚ ಸಖಾ ತಥಾ।
07144041c ಸಂಬಂಧಿನಂ ಚ ಸಂಬಂಧೀ ಸ್ವಸ್ರೀಯಂ ಚಾಪಿ ಮಾತುಲಃ।।

ಭರತಸತ್ತಮ! ರಾತ್ರಿವೇಳೆಯಲ್ಲಿ ನಡೆಯುತ್ತಿದ್ದ ಆ ಕೋಲಾಹಲ ಯುದ್ಧದಲ್ಲಿ ತಿಳಿಯದೇ ತಂದೆಯರು ಮಕ್ಕಳನ್ನು, ಮಕ್ಕಳು ತಂದೆಯರನ್ನು, ಸಖರು ಸಖರನ್ನು, ಸಂಬಂಧಿಗಳು ಸಂಬಂಧಿಗಳನ್ನು ಮತ್ತು ಅಳಿಯರು ಮಾವರನ್ನು ವಧಿಸಿದರು.

07144042a ಸ್ವೇ ಸ್ವಾನ್ಪರೇ ಪರಾಂಶ್ಚಾಪಿ ನಿಜಘ್ನುರಿತರೇತರಂ।
07144042c ನಿರ್ಮರ್ಯಾದಮಭೂದ್ಯುದ್ಧಂ ರಾತ್ರೌ ಘೋರಂ ಭಯಾವಹಂ।।

ನಮ್ಮವರು ನಮ್ಮವರನ್ನೇ ಮತ್ತು ಶತ್ರುಗಳು ಶತ್ರುಗಳನ್ನೇ ಪರಸ್ಪರ ಕೊಲ್ಲುತ್ತಿದ್ದರು. ಮರ್ಯಾದೆಗಳಿಲ್ಲದ ಆ ರಾತ್ರಿಯುದ್ಧವು ಘೋರವೂ ಭಯಂಕರವೂ ಆಗಿತ್ತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಸಂಕುಲಯುದ್ಧೇ ಚತುಶ್ಚತ್ವಾರಿಂಶಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಸಂಕುಲಯುದ್ಧ ಎನ್ನುವ ನೂರಾನಲ್ವತ್ನಾಲ್ಕನೇ ಅಧ್ಯಾಯವು.