143 ರಾತ್ರಿಯುದ್ಧೇ ಶತಾನೀಕಾದಿಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಘಟೋತ್ಕಚವಧ ಪರ್ವ

ಅಧ್ಯಾಯ 143

ಸಾರ

ಧೃತರಾಷ್ಟ್ರನ ಮಗ ಚಿತ್ರಸೇನ ಮತ್ತು ನಕುಲನ ಮಗ ಶತಾನೀಕರ ಯುದ್ಧ (1-12). ದ್ರುಪದ-ವೃಷಸೇನರ ಯುದ್ಧ (13-28). ದುಃಶಾಸನ-ಪ್ರತಿವಿಂಧ್ಯರ ಯುದ್ಧ (29-42).

07143001 ಸಂಜಯ ಉವಾಚ।
07143001a ಶತಾನೀಕಂ ಶರೈಸ್ತೂರ್ಣಂ ನಿರ್ದಹಂತಂ ಚಮೂಂ ತವ।
07143001c ಚಿತ್ರಸೇನಸ್ತವ ಸುತೋ ವಾರಯಾಮಾಸ ಭಾರತ।।

ಸಂಜಯನು ಹೇಳಿದನು: “ಭಾರತ! ಬೇಗನೇ ಶರಗಳಿಂದ ನಿನ್ನ ಸೇನೆಯನ್ನು ಸುಡುತ್ತಿರುವ ಶತಾನೀಕನನ್ನು ನಿನ್ನ ಮಗ ಚಿತ್ರಸೇನನು ತಡೆದನು.

07143002a ನಾಕುಲಿಶ್ಚಿತ್ರಸೇನಂ ತು ನಾರಾಚೇನಾರ್ದಯದ್ಭೃಶಂ।
07143002c ಸ ಚ ತಂ ಪ್ರತಿವಿವ್ಯಾಧ ದಶಭಿರ್ನಿಶಿತೈಃ ಶರೈಃ।।

ನಕುಲನ ಮಗನು ಚಿತ್ರಸೇನನನ್ನು ನಾರಾಚಗಳಿಂದ ಬಹಳವಾಗಿ ಗಾಯಗೊಳಿಸಿದನು. ಚಿತ್ರಸೇನನೂ ಕೂಡ ಅವನನ್ನು ಹತ್ತು ನಿಶಿತ ಶರಗಳಿಂದ ತಿರುಗಿ ಹೊಡೆದನು.

07143003a ಚಿತ್ರಸೇನೋ ಮಹಾರಾಜ ಶತಾನೀಕಂ ಪುನರ್ಯುಧಿ।
07143003c ನವಭಿರ್ನಿಶಿತೈರ್ಬಾಣೈರಾಜಘಾನ ಸ್ತನಾಂತರೇ।।

ಮಹಾರಾಜ! ಚಿತ್ರಸೇನನು ಯುದ್ಧದಲ್ಲಿ ಪುನಃ ಶತಾನೀಕನ ಎದೆಗೆ ಒಂಭತ್ತು ನಿಶಿತ ಬಾಣಗಳನ್ನು ಪ್ರಹರಿಸಿದನು.

07143004a ನಾಕುಲಿಸ್ತಸ್ಯ ವಿಶಿಖೈರ್ವರ್ಮ ಸಮ್ನತಪರ್ವಭಿಃ।
07143004c ಗಾತ್ರಾತ್ಸಂಚ್ಯಾವಯಾಮಾಸ ತದದ್ಭುತಮಿವಾಭವತ್।।

ನಾಕುಲಿಯು ವಿಶಿಖ ಸನ್ನತಪರ್ವಗಳಿಂದ ಅವನ ಕವಚವನ್ನು ದೇಹದಿಂದ ಬೇರ್ಪಡಿಸಿದನು. ಅದೊಂದು ಅದ್ಭುತವಾಗಿತ್ತು.

07143005a ಸೋಽಪೇತವರ್ಮಾ ಪುತ್ರಸ್ತೇ ವಿರರಾಜ ಭೃಶಂ ನೃಪ।
07143005c ಉತ್ಸೃಜ್ಯ ಕಾಲೇ ರಾಜೇಂದ್ರ ನಿರ್ಮೋಕಮಿವ ಪನ್ನಗಃ।।

ನೃಪ! ರಾಜೇಂದ್ರ! ಕವಚವನ್ನು ಕಳೆದುಕೊಂಡು ನಿನ್ನ ಮಗನು ಪೊರೆಯನ್ನು ಕಳೆದುಕೊಂಡ ಸರ್ಪದಂತೆ ವಿರಾಜಿಸಿದನು.

07143006a ತತೋಽಸ್ಯ ನಿಶಿತೈರ್ಬಾಣೈರ್ಧ್ವಜಂ ಚಿಚ್ಚೇದ ನಾಕುಲಿಃ।
07143006c ಧನುಶ್ಚೈವ ಮಹಾರಾಜ ಯತಮಾನಸ್ಯ ಸಮ್ಯುಗೇ।।

ಆಗ ನಾಕುಲಿಯು ನಿಶಿತ ಬಾಣಗಳಿಂದ ಯುದ್ಧದಲ್ಲಿ ಪ್ರಯತ್ನಪಡುತ್ತಿದ್ದ ಅವನ ಧ್ವಜವನ್ನೂ ಧನುಸ್ಸನ್ನೂ ತುಂಡರಿಸಿದನು.

07143007a ಸ ಚಿನ್ನಧನ್ವಾ ಸಮರೇ ವಿವರ್ಮಾ ಚ ಮಹಾರಥಃ।
07143007c ಧನುರನ್ಯನ್ಮಹಾರಾಜ ಜಗ್ರಾಹಾರಿವಿದಾರಣಂ।।

ಮಹಾರಾಜ! ಸಮರದಲ್ಲಿ ಧನುಸ್ಸನ್ನೂ ಕವಚವನ್ನೂ ಕಳೆದುಕೊಂಡ ಆ ಮಹಾರಥನು ಶತ್ರುಗಳನ್ನು ಸೀಳಬಲ್ಲ ಇನ್ನೊಂದು ಧನುಸ್ಸನ್ನು ಎತ್ತಿಕೊಂಡನು.

07143008a ತತಸ್ತೂರ್ಣಂ ಚಿತ್ರಸೇನೋ ನಾಕುಲಿಂ ನವಭಿಃ ಶರೈಃ।
07143008c ವಿವ್ಯಾಧ ಸಮರೇ ಕ್ರುದ್ಧೋ ಭರತಾನಾಂ ಮಹಾರಥಃ।।

ತಕ್ಷಣವೇ ಭರತರ ಮಹಾರಥ ಚಿತ್ರಸೇನನು ಕ್ರುದ್ಧನಾಗಿ ಸಮರದಲ್ಲಿ ಒಂಭತ್ತು ಶರಗಳಿಂದ ನಾಕುಲಿಯನ್ನು ಹೊಡೆದನು.

07143009a ಶತಾನೀಕೋಽಥ ಸಂಕ್ರುದ್ಧಶ್ಚಿತ್ರಸೇನಸ್ಯ ಮಾರಿಷ।
07143009c ಜಘಾನ ಚತುರೋ ವಾಹಾನ್ಸಾರಥಿಂ ಚ ನರೋತ್ತಮಃ।।

ಮಾರಿಷ! ಆಗ ಸಂಕ್ರುದ್ಧ ನರೋತ್ತಮ ಶತಾನೀಕನು ಚಿತ್ರಸೇನನ ನಾಲ್ಕು ಕುದುರೆಗಳನ್ನೂ ಸಾರಥಿಯನ್ನೂ ಸಂಹರಿಸಿದನು.

07143010a ಅವಪ್ಲುತ್ಯ ರಥಾತ್ತಸ್ಮಾಚ್ಚಿತ್ರಸೇನೋ ಮಹಾರಥಃ।
07143010c ನಾಕುಲಿಂ ಪಂಚವಿಂಶತ್ಯಾ ಶರಾಣಾಮಾರ್ದಯದ್ಬಲೀ।।

ಮಹಾರಥ ಬಲಶಾಲೀ ಚಿತ್ರಸೇನನು ಆ ರಥದಿಂದ ಹಾರಿ ಇಪ್ಪತ್ತೈದು ಶರಗಳಿಂದ ನಾಕುಲಿಯನ್ನು ಹೊಡೆದನು.

07143011a ತಸ್ಯ ತತ್ಕುರ್ವತಃ ಕರ್ಮ ನಕುಲಸ್ಯ ಸುತೋ ರಣೇ।
07143011c ಅರ್ಧಚಂದ್ರೇಣ ಚಿಚ್ಚೇದ ಚಾಪಂ ರತ್ನವಿಭೂಷಿತಂ।।

ನಕುಲನ ಸುತನು ರಣದಲ್ಲಿ ಆ ಕೆಲಸವನ್ನು ಮಾಡಿದ ಚಿತ್ರಸೇನನ ರತ್ನವಿಭೂಷಿತ ಚಾಪವನ್ನು ಅರ್ಧಚಂದ್ರ ಶರದಿಂದ ತುಂಡರಿಸಿದನು.

07143012a ಸ ಚಿನ್ನಧನ್ವಾ ವಿರಥೋ ಹತಾಶ್ವೋ ಹತಸಾರಥಿಃ।
07143012c ಆರುರೋಹ ರಥಂ ತೂರ್ಣಂ ಹಾರ್ದಿಕ್ಯಸ್ಯ ಮಹಾತ್ಮನಃ।।

ಧನುಸ್ಸು ತುಂಡಾದ, ವಿರಥನಾದ, ಅಶ್ವ-ಸಾರಥಿಗಳನ್ನು ಕಳೆದುಕೊಂಡ ಚಿತ್ರಸೇನನು ಬೇಗನೇ ಮಹಾತ್ಮ ಹಾರ್ದಿಕ್ಯ ಕೃತವರ್ಮನ ರಥವನ್ನೇರಿದನು.

07143013a ದ್ರುಪದಂ ತು ಸಹಾನೀಕಂ ದ್ರೋಣಪ್ರೇಪ್ಸುಂ ಮಹಾರಥಂ।
07143013c ವೃಷಸೇನೋಽಭ್ಯಯಾತ್ತೂರ್ಣಂ ಕಿರಂ ಶರಶತೈಸ್ತದಾ।।

ದ್ರೋಣನ ಹತ್ತಿರ ಸೇನೆಯೊಂದಿಗೆ ಹೋಗುತ್ತಿದ್ದ ಮಹಾರಥ ದ್ರುಪದನನ್ನು ವೃಷಸೇನನು ಬೇಗನೇ ನೂರಾರು ಶರಗಳಿಂದ ಮುಚ್ಚಿಬಿಟ್ಟನು.

07143014a ಯಜ್ಞಸೇನಸ್ತು ಸಮರೇ ಕರ್ಣಪುತ್ರಂ ಮಹಾರಥಂ।
07143014c ಷಷ್ಟ್ಯಾ ಶರಾಣಾಂ ವಿವ್ಯಾಧ ಬಾಹ್ವೋರುರಸಿ ಚಾನಘ।।

ಅನಘ! ಯಜ್ಞಸೇನನಾದರೋ ಸಮರದಲ್ಲಿ ಮಹಾರಥ ಕರ್ಣಪುತ್ರನನ್ನು ಅರವತ್ತು ಶರಗಳಿಂದ ಬಾಹುಗಳಿಗೆ ಮತ್ತು ಎದೆಗೆ ಹೊಡೆದನು.

07143015a ವೃಷಸೇನಸ್ತು ಸಂಕ್ರುದ್ಧೋ ಯಜ್ಞಸೇನಂ ರಥೇ ಸ್ಥಿತಂ।
07143015c ಬಹುಭಿಃ ಸಾಯಕೈಸ್ತೀಕ್ಷ್ಣೈರಜಘಾನ ಸ್ತನಾಂತರೇ।।

ಸಂಕ್ರುದ್ಧ ವೃಷಸೇನನೂ ಕೂಡ ರಥದಲ್ಲಿ ನಿಂತಿದ್ದ ಯಜ್ಞಸೇನನನ್ನು ಅನೇಕ ತೀಕ್ಷ್ಣಸಾಯಕಗಳಿಂದ ಎದೆಯ ಮಧ್ಯದಲ್ಲಿ ಹೊಡೆದನು.

07143016a ತಾವುಭೌ ಶರನುನ್ನಾಂಗೌ ಶರಕಂಟಕಿನೌ ರಣೇ।
07143016c ವ್ಯಭ್ರಾಜೇತಾಂ ಮಹಾರಾಜ ಶ್ವಾವಿಧೌ ಶಲಲೈರಿವ।।

ಮಹಾರಾಜ! ಶರೀರವೆಲ್ಲಾ ಶರಗಳಿಂದ ಚುಚ್ಚಲ್ಪಟ್ಟಿದ್ದ ಅವರಿಬ್ಬರೂ ರಣದಲ್ಲಿ ಮುಳ್ಳುಗಳಿಂದ ಕೂಡಿದ್ದ ಮುಳ್ಳುಹಂದಿಗಳಂತೆ ಪ್ರಕಾಶಿಸುತ್ತಿದ್ದರು.

07143017a ರುಕ್ಮಪುಂಖೈರಜಿಹ್ಮಾಗ್ರೈಃ ಶರೈಶ್ಚಿನ್ನತನುಚ್ಚದೌ।
07143017c ರುಧಿರೌಘಪರಿಕ್ಲಿನ್ನೌ ವ್ಯಭ್ರಾಜೇತಾಂ ಮಹಾಮೃಧೇ।।

ರುಕ್ಮಪುಂಖಗಳ ಜಿಹ್ಮಾಗ್ರ ಶರಗಳಿಂದ ಕವಚಗಳು ಸೀಳಿಹೋಗಿ ರಕ್ತವು ಸುರಿಯುತ್ತಿದ್ದ ಅವರಿಬ್ಬರೂ ಮಹಾರಣದಲ್ಲಿ ಬಹಳವಾಗಿ ಪ್ರಕಾಶಿಸಿದರು.

07143018a ತಪನೀಯನಿಭೌ ಚಿತ್ರೌ ಕಲ್ಪವೃಕ್ಷಾವಿವಾದ್ಭುತೌ।
07143018c ಕಿಂಶುಕಾವಿವ ಚೋತ್ಫುಲ್ಲೌ ವ್ಯಕಾಶೇತಾಂ ರಣಾಜಿರೇ।।

ಸುವರ್ಣಮಯ ಚಿತ್ರಿತ ಕವಚಗಳುಳ್ಳ ಅವರಿಬ್ಬರೂ ರಣರಂಗದಲ್ಲಿ ಅದ್ಭುತ ಕಲ್ಪವೃಕ್ಷಗಳಂತೆ ಮತ್ತು ಹೂಬಿಟ್ಟ ಮುತ್ತುಗದ ಮರಗಳಂತೆ ಪ್ರಕಾಶಿಸಿದರು.

07143019a ವೃಷಸೇನಸ್ತತೋ ರಾಜನ್ನವಭಿರ್ದ್ರುಪದಂ ಶರೈಃ।
07143019c ವಿದ್ಧ್ವಾ ವಿವ್ಯಾಧ ಸಪ್ತತ್ಯಾ ಪುನಶ್ಚಾನ್ಯೈಸ್ತ್ರಿಭಿಃ ಶರೈಃ।।

ರಾಜನ್! ಆಗ ವೃಷಸೇನನು ದ್ರುಪದನನ್ನು ಒಂಬತ್ತು ಬಾಣಗಳಿಂದ ಪ್ರಹರಿಸಿ, ಎಪ್ಪತ್ತರಿಂದ ಗಾಯಗೊಳಿಸಿ ಪುನಃ ಮೂರು ಮೂರು ಶರಗಳಿಂದ ಹೊಡೆದನು.

07143020a ತತಃ ಶರಸಹಸ್ರಾಣಿ ವಿಮುಂಚನ್ವಿಬಭೌ ತದಾ।
07143020c ಕರ್ಣಪುತ್ರೋ ಮಹಾರಾಜ ವರ್ಷಮಾಣ ಇವಾಂಬುದಃ।।

ಮಹಾರಾಜ! ಆಗ ಕರ್ಣಪುತ್ರನು ಸಹಸ್ರಾರು ಬಾಣಗಳನ್ನು ಪ್ರಯೋಗಿಸಿ ಮೋಡದಂತೆ ಶರಗಳ ಮಳೆಯನ್ನು ಸುರಿಸಿದನು.

07143021a ತತಸ್ತು ದ್ರುಪದಾನೀಕಂ ಶರೈಶ್ಚಿನ್ನತನುಚ್ಚದಂ।
07143021c ಸಂಪ್ರಾದ್ರವದ್ರಣೇ ರಾಜನ್ನಿಶೀಥೇ ಭೈರವೇ ಸತಿ।।

ರಾಜನ್! ಅವನ ಶರಗಳಿಂದ ಕವಚಗಳನ್ನು ಕಳೆದುಕೊಂಡ ದ್ರುಪದನ ಸೇನೆಯು ಆ ಭೈರವ ರಾತ್ರಿಯಲ್ಲಿ ರಣದಿಂದ ಓಡಿ ಹೋಯಿತು.

07143022a ಪ್ರದೀಪೈರ್ಹಿ ಪರಿತ್ಯಕ್ತೈರ್ಜ್ವಲದ್ಭಿಸ್ತೈಃ ಸಮಂತತಃ।
07143022c ವ್ಯರಾಜತ ಮಹೀ ರಾಜನ್ವೀತಾಭ್ರಾ ದ್ಯೌರಿವ ಗ್ರಹೈಃ।।

ರಾಜನ್! ಅವರು ಎಲ್ಲಕಡೆ ಬಿಟ್ಟುಹೋಗಿದ್ದ ಉರಿಯುತ್ತಿರುವ ಪಂಜುಗಳಿಂದ ರಣಭೂಮಿಯು ಗ್ರಹ-ನಕ್ಷತ್ರಗಳಿಂದ ಕೂಡಿದ ಮೋಡಗಳಿಲ್ಲದ ಆಗಸದಂತೆ ವಿರಾಜಿಸುತ್ತಿತ್ತು.

07143023a ತಥಾಂಗದೈರ್ನಿಪತಿತೈರ್ವ್ಯರಾಜತ ವಸುಂಧರಾ।
07143023c ಪ್ರಾವೃಟ್ಕಾಲೇ ಮಹಾರಾಜ ವಿದ್ಯುದ್ಭಿರಿವ ತೋಯದಃ।।

ಮಹಾರಾಜ! ವರ್ಷಾಕಾಲದಲ್ಲಿ ಮಿಂಚಿನಿಂದ ಕೂಡಿದ ಮೋಡದಂತೆ ವಸುಂಧರೆಯು ಬಿದ್ದಿದ್ದ ಅಂಗದಾಭರಣಗಳಿಂದ ಪ್ರಕಾಶಿಸುತ್ತಿತ್ತು.

07143024a ತತಃ ಕರ್ಣಸುತತ್ರಸ್ತಾಃ ಸೋಮಕಾ ವಿಪ್ರದುದ್ರುವುಃ।
07143024c ಯಥೇಂದ್ರಭಯವಿತ್ರಸ್ತಾ ದಾನವಾಸ್ತಾರಕಾಮಯೇ।।

ಆ ತಾರಕಾಮಯ ಯುದ್ಧದಲ್ಲಿ ಇಂದ್ರನ ಭಯದಿಂದ ತತ್ತರಿಸಿದ ದಾನವರಂತೆ ಕರ್ಣಸುತನಿಂದ ಭಯಗೊಂಡ ಸೋಮಕರು ಪಲಾಯನಮಾಡಿದರು.

07143025a ತೇನಾರ್ದ್ಯಮಾನಾಃ ಸಮರೇ ದ್ರವಮಾಣಾಶ್ಚ ಸೋಮಕಾಃ।
07143025c ವ್ಯರಾಜಂತ ಮಹಾರಾಜ ಪ್ರದೀಪೈರವಭಾಸಿತಾಃ।।

ಮಹಾರಾಜ! ಸಮರದಲ್ಲಿ ಅವನಿಂದ ಪೀಡಿತರಾಗಿ ಪಂಜುಗಳನ್ನು ಹಿಡಿದು ಒಡಿಹೋಗುತ್ತಿರುವ ಸೋಮಕರು ಶೋಭಾಯಮಾನರಾಗಿ ಕಾಣುತ್ತಿದ್ದರು.

07143026a ತಾಂಸ್ತು ನಿರ್ಜಿತ್ಯ ಸಮರೇ ಕರ್ಣಪುತ್ರೋ ವ್ಯರೋಚತ।
07143026c ಮಧ್ಯಂದಿನಮನುಪ್ರಾಪ್ತೋ ಘರ್ಮಾಂಶುರಿವ ಭಾರತ।।

ಭಾರತ! ಸಮರದಲ್ಲಿ ಅವರನ್ನು ಗೆದ್ದ ಕರ್ಣಪುತ್ರನು ಮಧ್ಯಾಹ್ನ ನಡುನೆತ್ತಿಯ ಮೇಲಿದ್ದ ಸೂರ್ಯನಂತೆ ಪ್ರಕಾಶಿಸಿದನು.

07143027a ತೇಷು ರಾಜಸಹಸ್ರೇಷು ತಾವಕೇಷು ಪರೇಷು ಚ।
07143027c ಏಕ ಏವ ಜ್ವಲಂಸ್ತಸ್ಥೌ ವೃಷಸೇನಃ ಪ್ರತಾಪವಾನ್।।

ನಿನ್ನವರ ಮತ್ತು ಶತ್ರುಗಳ ಆ ಸಹಸ್ರಾರು ರಾಜರುಗಳ ಮಧ್ಯೆ ಪ್ರತಾಪವಾನ್ ವೃಷಸೇನನು ಒಬ್ಬನೇ ಪ್ರಜ್ವಲಿಸುತ್ತಾ ನಿಂತಿದ್ದನು.

07143028a ಸ ವಿಜಿತ್ಯ ರಣೇ ಶೂರಾನ್ಸೋಮಕಾನಾಂ ಮಹಾರಥಾನ್।
07143028c ಜಗಾಮ ತ್ವರಿತಸ್ತತ್ರ ಯತ್ರ ರಾಜಾ ಯುಧಿಷ್ಠಿರಃ।।

ರಣದಲ್ಲಿ ಮಹಾರಥ ಶೂರ ಸೋಮಕರನ್ನು ಗೆದ್ದು ಅವನು ತ್ವರೆಮಾಡಿ ರಾಜಾ ಯುಧಿಷ್ಠಿರನಿದ್ದಲ್ಲಿಗೆ ಹೋದನು.

07143029a ಪ್ರತಿವಿಂಧ್ಯಮಥ ಕ್ರುದ್ಧಂ ಪ್ರದಹಂತಂ ರಣೇ ರಿಪೂನ್।
07143029c ದುಃಶಾಸನಸ್ತವ ಸುತಃ ಪ್ರತ್ಯುದ್ಗಚ್ಚನ್ಮಹಾರಥಃ।।

ಆಗ ಕ್ರುದ್ಧನಾಗಿ ರಣದಲ್ಲಿ ರಿಪುಗಳನ್ನು ದಹಿಸುತ್ತಿದ್ದ ಪ್ರತಿವಿಂಧ್ಯನನ್ನು ನಿನ್ನ ಮಗ ಮಹಾರಥ ದುಃಶಾಸನನು ಹೋಗಿ ಎದುರಿಸಿದನು.

07143030a ತಯೋಃ ಸಮಾಗಮೋ ರಾಜಂಶ್ಚಿತ್ರರೂಪೋ ಬಭೂವ ಹ।
07143030c ವ್ಯಪೇತಜಲದೇ ವ್ಯೋಮ್ನಿ ಬುಧಭಾರ್ಗವಯೋರಿವ।।

ರಾಜನ್! ಅವರ ಸಮಾಗಮವು ಮೋಡವಿಲ್ಲದ ಆಕಾಶದಲ್ಲಿ ಬುಧ-ಸೂರ್ಯರ ಸಮಾಗಮದಂತೆ ಚಿತ್ರರೂಪವಾಗಿದ್ದಿತು.

07143031a ಪ್ರತಿವಿಂಧ್ಯಂ ತು ಸಮರೇ ಕುರ್ವಾಣಂ ಕರ್ಮ ದುಷ್ಕರಂ।
07143031c ದುಃಶಾಸನಸ್ತ್ರಿಭಿರ್ಬಾಣೈರ್ಲಲಾಟೇ ಸಮವಿಧ್ಯತ।।

ಸಮರದಲ್ಲಿ ದುಷ್ಕರ ಕರ್ಮವನ್ನು ಮಾಡುತ್ತಿದ್ದ ಪ್ರತಿವಿಂಧ್ಯನನ್ನು ದುಃಶಾಸನನು ಬಾಣಗಳಿಂದ ಹಣೆಗೆ ಹೊಡೆದನು.

07143032a ಸೋಽತಿವಿದ್ಧೋ ಬಲವತಾ ಪುತ್ರೇಣ ತವ ಧನ್ವಿನಾ।
07143032c ವಿರರಾಜ ಮಹಾಬಾಹುಃ ಸಶೃಂಗ ಇವ ಪರ್ವತಃ।।

ಮಹಾರಾಜ! ನಿನ್ನ ಬಲವಂತ ಧನ್ವಿ ಪುತ್ರನಿಂದ ಅತಿಯಾಗಿ ಗಾಯಗೊಂಡ ಆ ಮಹಾಬಾಹುವು ಶೃಂಗವಿರುವ ಪರ್ವತದಂತೆ ವಿರಾಜಿಸಿದನು.

07143033a ದುಃಶಾಸನಂ ತು ಸಮರೇ ಪ್ರತಿವಿಂಧ್ಯೋ ಮಹಾರಥಃ।
07143033c ನವಭಿಃ ಸಾಯಕೈರ್ವಿದ್ಧ್ವಾ ಪುನರ್ವಿವ್ಯಾಧ ಸಪ್ತಭಿಃ।।

ಸಮರದಲ್ಲಿ ಮಹಾರಥ ಪ್ರತಿವಿಂಧ್ಯನಾದರೋ ದುಃಶಾಸನನನ್ನು ಒಂಭತ್ತು ಸಾಯಕಗಳಿಂದ ಹೊಡೆದು ಪುನಃ ಏಳರಿಂದ ಪ್ರಹರಿಸಿದನು.

07143034a ತತ್ರ ಭಾರತ ಪುತ್ರಸ್ತೇ ಕೃತವಾನ್ಕರ್ಮ ದುಷ್ಕರಂ।
07143034c ಪ್ರತಿವಿಂಧ್ಯಹಯಾನುಗ್ರೈಃ ಪಾತಯಾಮಾಸ ಯಚ್ಚರೈಃ।।

ಭಾರತ! ಅಲ್ಲಿ ದುಷ್ಕರ ಕರ್ಮವನ್ನು ಮಾಡುವ ನಿನ್ನ ಪುತ್ರನು ಉಗ್ರ ಶರಗಳಿಂದ ಪ್ರತಿವಿಂಧ್ಯನ ಕುದುರೆಗಳನ್ನು ಕೆಳಗುರುಳಿಸಿದನು.

07143035a ಸಾರಥಿಂ ಚಾಸ್ಯ ಭಲ್ಲೇನ ಧ್ವಜಂ ಚ ಸಮಪಾತಯತ್।
07143035c ರಥಂ ಚ ಶತಶೋ ರಾಜನ್ವ್ಯಧಮತ್ತಸ್ಯ ಧನ್ವಿನಃ।।

ರಾಜನ್! ಆ ಧನ್ವಿಯು ಇನ್ನೊಂದು ಭಲ್ಲದಿಂದ ಅವನ ಸಾರಥಿಯನ್ನು ಮತ್ತು ಧ್ವಜವನ್ನು ಕೆಳಗುರುಳಿಸಿದನು. ಮತ್ತು ನೂರಾರು ಬಾಣಗಳಿಂದ ಅವನ ರಥವನ್ನು ಕೂಡ ಪ್ರಹರಿಸಿದನು.

07143036a ಪತಾಕಾಶ್ಚ ಸ ತೂಣೀರಾನ್ರಶ್ಮೀನ್ಯೋಕ್ತ್ರಾಣಿ ಚಾಭಿಭೋ।
07143036c ಚಿಚ್ಚೇದ ತಿಲಶಃ ಕ್ರುದ್ಧಃ ಶರೈಃ ಸಮ್ನತಪರ್ವಭಿಃ।।

ವಿಭೋ! ಕ್ರುದ್ಧನಾದ ಅವನು ಸನ್ನತಪರ್ವ ಶರಗಳಿಂದ ಪ್ರತಿವಿಂಧ್ಯನ ಪತಾಕೆಗಳನ್ನೂ, ತೂಣೀರಗಳನ್ನೂ, ಕಡಿವಾಣಗಳನ್ನೂ, ನೊಗಪಟ್ಟಿಗಳನ್ನೂ ನುಚ್ಚುನೂರು ಮಾಡಿದನು.

07143037a ವಿರಥಃ ಸ ತು ಧರ್ಮಾತ್ಮಾ ಧನುಷ್ಪಾಣಿರವಸ್ಥಿತಃ।
07143037c ಅಯೋಧಯತ್ತವ ಸುತಂ ಕಿರಂ ಶರಶತಾನ್ಬಹೂನ್।।

ವಿರಥನಾದ ಆ ಧರ್ಮಾತ್ಮ ಪ್ರತಿವಿಂಧ್ಯನಾದರೋ ಧನುಷ್ಪಾಣಿಯಾಗಿ ಅನೇಕ ನೂರು ಬಾಣಗಳಿಂದ ನಿನ್ನ ಸುತನನ್ನು ಮುಚ್ಚಿ ಯುದ್ಧವನ್ನು ಮುಂದುವರಿಸಿದನು.

07143038a ಕ್ಷುರಪ್ರೇಣ ಧನುಸ್ತಸ್ಯ ಚಿಚ್ಚೇದ ಕೃತಹಸ್ತವತ್।
07143038c ಅಥೈನಂ ದಶಭಿರ್ಭಲ್ಲೈಶ್ಚಿನ್ನಧನ್ವಾನಮಾರ್ದಯತ್।।

ಆಗ ದುಃಶಾಸನನು ಕೈಚಳಕದಿಂದ ಕ್ಷುರಪ್ರವನ್ನು ಪ್ರಯೋಗಿಸಿ ಅವನ ಧನುಸ್ಸನ್ನು ಕತ್ತರಿಸಿದನು. ಧನುಸ್ಸು ತುಂಡಾದ ಅವನನ್ನು ಹತ್ತು ಭಲ್ಲಗಳಿಂದ ಹೊಡೆದನು.

07143039a ತಂ ದೃಷ್ಟ್ವಾ ವಿರಥಂ ತತ್ರ ಭ್ರಾತರೋಽಸ್ಯ ಮಹಾರಥಾಃ।
07143039c ಅನ್ವವರ್ತಂತ ವೇಗೇನ ಮಹತ್ಯಾ ಸೇನಯಾ ಸಹ।।

ವಿರಥನಾಗಿದ್ದ ಪ್ರತಿವಿಂಧ್ಯನನ್ನು ನೋಡಿ ಅವನ ಮಹಾರಥ ಸಹೋದರರು ಮಹಾ ಸೇನೆಯೊಂದಿಗೆ ವೇಗದಿಂದ ಆಗಮಿಸಿದರು.

07143040a ಆಪ್ಲುತಃ ಸ ತತೋ ಯಾನಂ ಸುತಸೋಮಸ್ಯ ಭಾಸ್ವರಂ।
07143040c ಧನುರ್ಗೃಹ್ಯ ಮಹಾರಾಜ ವಿವ್ಯಾಧ ತನಯಂ ತವ।।

ಮಹಾರಾಜ! ಆಗ ಅವನು ಸುತಸೋಮನ ಹೊಳೆಯುತ್ತಿರುವ ರಥದ ಮೇಲೆ ಹಾರಿ, ಧನುಸ್ಸನ್ನೆತ್ತಿಕೊಂಡು ನಿನ್ನ ಮಗನನ್ನು ಪ್ರಹರಿಸಿದನು.

07143041a ತತಸ್ತು ತಾವಕಾಃ ಸರ್ವೇ ಪರಿವಾರ್ಯ ಸುತಂ ತವ।
07143041c ಅಭ್ಯವರ್ತಂತ ಸಂಗ್ರಾಮೇ ಮಹತ್ಯಾ ಸೇನಯಾ ವೃತಾಃ।।

ಆಗ ನಿನ್ನವರೆಲ್ಲರೂ ನಿನ್ನ ಮಗನನ್ನು ಮಹಾ ಸೇನೆಯೊಂದಿಗೆ ಕೂಡಿ ಸುತ್ತುವರೆದು ಸಂಗ್ರಾಮದಲ್ಲಿ ಎರಗಿದರು.

07143042a ತತಃ ಪ್ರವವೃತೇ ಯುದ್ಧಂ ತವ ತೇಷಾಂ ಚ ಭಾರತ।
07143042c ನಿಶೀಥೇ ದಾರುಣೇ ಕಾಲೇ ಯಮರಾಷ್ಟ್ರವಿವರ್ಧನಂ।।

ಭಾರತ! ಆಗ ಆ ದಾರುಣ ರಾತ್ರಿವೇಳೆಯಲ್ಲಿ ನಿನ್ನವರ ಮತ್ತು ಅವರ ನಡುವೆ ಯಮರಾಷ್ಟ್ರವನ್ನು ವರ್ಧಿಸುವ ಯುದ್ಧವು ನಡೆಯಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಶತಾನೀಕಾದಿಯುದ್ಧೇ ತ್ರಿಚತ್ವಾರಿಂಶಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಶತಾನೀಕಾದಿಯುದ್ಧ ಎನ್ನುವ ನೂರಾನಲ್ವತ್ಮೂರನೇ ಅಧ್ಯಾಯವು.