ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಘಟೋತ್ಕಚವಧ ಪರ್ವ
ಅಧ್ಯಾಯ 142
ಸಾರ
ಕರ್ಣನಿಂದ ಸಹದೇವನ ಪರಾಜಯ, ಕುಂತಿಯ ಮಾತನ್ನು ಸ್ಮರಿಸಿ ಕರ್ಣನು ಸಹದೇವನನ್ನು ಅಪಮಾನಿಸಿ ಜೀವಸಹಿತ ಬಿಟ್ಟಿದುದು (1-19). ಶಲ್ಯನಿಂದ ವಿರಾಟನ ತಮ್ಮ ಶತಾನೀಕನ ವಧೆ (20-32). ಅರ್ಜುನನಿಂದ ಅಲಂಬುಸನ ಪರಾಜಯ (33-44).
07142001 ಸಂಜಯ ಉವಾಚ।
07142001a ಸಹದೇವಮಥಾಯಾಂತಂ ದ್ರೋಣಪ್ರೇಪ್ಸುಂ ವಿಶಾಂ ಪತೇ।
07142001c ಕರ್ಣೋ ವೈಕರ್ತನೋ ಯುದ್ಧೇ ವಾರಯಾಮಾಸ ಭಾರತ।।
ಸಂಜಯನು ಹೇಳಿದನು: “ವಿಶಾಂಪತೇ! ಭಾರತ! ದ್ರೋಣನ ಬಳಿ ಬರುತ್ತಿದ್ದ ಸಹದೇವನನ್ನು ವೈಕರ್ತನ ಕರ್ಣನು ಯುದ್ಧದಲ್ಲಿ ತಡೆದನು.
07142002a ಸಹದೇವಸ್ತು ರಾಧೇಯಂ ವಿದ್ಧ್ವಾ ನವಭಿರಾಶುಗೈಃ।
07142002c ಪುನರ್ವಿವ್ಯಾಧ ದಶಭಿರ್ನಿಶಿತೈರ್ನತಪರ್ವಭಿಃ।।
ಸಹದೇವನಾದರೋ ರಾಧೇಯನನ್ನು ಒಂಭತ್ತು ಆಶುಗಗಳಿಂದ ಹೊಡೆದು ಪುನಃ ಹತ್ತು ನಿಶಿತ ನತಪರ್ವಗಳಿಂದ ಹೊಡೆದನು.
07142003a ತಂ ಕರ್ಣಃ ಪ್ರತಿವಿವ್ಯಾಧ ಶತೇನ ನತಪರ್ವಣಾಂ।
07142003c ಸಜ್ಯಂ ಚಾಸ್ಯ ಧನುಃ ಶೀಘ್ರಂ ಚಿಚ್ಚೇದ ಲಘುಹಸ್ತವತ್।।
ಅವನನ್ನು ಕರ್ಣನು ಪ್ರತಿಯಾಗಿ ನೂರು ನತಪರ್ವಗಳಿಂದ ಹೊಡೆದನು. ಮತ್ತು ಶೀಘ್ರವಾಗಿ ಕೈಚಳಕದಿಂದ ಮೌರ್ವಿಯೊಡನೆ ಅವನ ಧನುಸ್ಸನ್ನು ಕತ್ತರಿಸಿದನು.
07142004a ತತೋಽನ್ಯದ್ಧನುರಾದಾಯ ಮಾದ್ರೀಪುತ್ರಃ ಪ್ರತಾಪವಾನ್।
07142004c ಕರ್ಣಂ ವಿವ್ಯಾಧ ವಿಂಶತ್ಯಾ ತದದ್ಭುತಮಿವಾಭವತ್।।
ಆಗ ಪ್ರತಾಪವಾನ್ ಮಾದ್ರೀಪುತ್ರನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಕರ್ಣನನ್ನು ಇಪ್ಪತ್ತು ಬಾಣಗಳಿಂದ ಹೊಡೆದನು. ಅದೊಂದು ಅದ್ಭುತವಾಗಿತ್ತು.
07142005a ತಸ್ಯ ಕರ್ಣೋ ಹಯಾನ್ ಹತ್ವಾ ಶರೈಃ ಸನ್ನತಪರ್ವಭಿಃ।
07142005c ಸಾರಥಿಂ ಚಾಸ್ಯ ಭಲ್ಲೇನ ದ್ರುತಂ ನಿನ್ಯೇ ಯಮಕ್ಷಯಂ।।
ಕರ್ಣನು ಅವನ ಕುದುರೆಗಳನ್ನು ಸನ್ನತಪರ್ವ ಶರಗಳಿಂದ ಕೊಂದು ತಕ್ಷಣವೇ ಸಾರಥಿಯನ್ನು ಕೂಡ ಭಲ್ಲದಿಂದ ಹೊಡೆದು ಯಮಕ್ಷಯಕ್ಕೆ ಕಳುಹಿಸಿದನು.
07142006a ವಿರಥಃ ಸಹದೇವಸ್ತು ಖಡ್ಗಂ ಚರ್ಮ ಸಮಾದದೇ।
07142006c ತದಪ್ಯಸ್ಯ ಶರೈಃ ಕರ್ಣೋ ವ್ಯಧಮತ್ಪ್ರಹಸನ್ನಿವ।।
ರಥವನ್ನು ಕಳೆದುಕೊಂಡ ಸಹದೇವನು ಖಡ್ಗ ಮತ್ತು ಗುರಾಣಿಗಳನ್ನು ಕೈಗೆತ್ತಿಕೊಂಡನು. ಅವುಗಳನ್ನೂ ಸಹ ಕರ್ಣನು ನಸುನಗುತ್ತಾ ಶರಗಳಿಂದ ನಾಶಗೊಳಿಸಿದನು.
07142007a ತತೋ ಗುರ್ವೀಂ ಮಹಾಘೋರಾಂ ಹೇಮಚಿತ್ರಾಂ ಮಹಾಗದಾಂ।
07142007c ಪ್ರೇಷಯಾಮಾಸ ಸಮರೇ ವೈಕರ್ತನರಥಂ ಪ್ರತಿ।।
ಆಗ ಸಹದೇವನು ಬಂಗಾರದ ಚಿತ್ರಗಳುಳ್ಳ ಮಹಾಘೋರ ಮಹಾಗದೆಯನ್ನು ಸಮರದಲ್ಲಿ ವೈಕರ್ತನನ ರಥದ ಮೇಲೆ ಪ್ರಯೋಗಿಸಿದನು.
07142008a ತಾಮಾಪತಂತೀಂ ಸಹಸಾ ಸಹದೇವಪ್ರವೇರಿತಾಂ।
07142008c ವ್ಯಷ್ಟಂಭಯಚ್ಚರೈಃ ಕರ್ಣೋ ಭೂಮೌ ಚೈನಾಮಪಾತಯತ್।।
ಸಹದೇವನು ಪ್ರಯೋಗಿಸಿದ ಆ ಗದೆಯನ್ನು ತನ್ನ ಮೇಲೆ ಒಮ್ಮೆಲೇ ಬೀಳುವವರೊಳಗೆ ಕರ್ಣನು ಬಾಣಗಳಿಂದ ಸ್ತಂಭನಗೊಳಿಸಿ, ಭೂಮಿಯ ಮೇಲೆ ಬೀಳುವಂತೆ ಮಾಡಿದನು.
07142009a ಗದಾಂ ವಿನಿಹತಾಂ ದೃಷ್ಟ್ವಾ ಸಹದೇವಸ್ತ್ವರಾನ್ವಿತಃ।
07142009c ಶಕ್ತಿಂ ಚಿಕ್ಷೇಪ ಕರ್ಣಾಯ ತಾಮಪ್ಯಸ್ಯಾಚ್ಚಿನಚ್ಚರೈಃ।।
ಆ ಗದೆಯೂ ನಿರರ್ಥಕವಾದುದನ್ನು ಕಂಡು ಸಹದೇವನು ತ್ವರೆಮಾಡಿ ಕರ್ಣನ ಮೇಲೆ ಶಕ್ತಿಯನ್ನು ಎಸೆದನು. ಅದನ್ನೂ ಕೂಡ ಕರ್ಣನು ಶರಗಳಿಂದ ಕತ್ತರಿಸಿದನು.
07142010a ಸಸಂಭ್ರಮಸ್ತತಸ್ತೂರ್ಣಮವಪ್ಲುತ್ಯ ರಥೋತ್ತಮಾತ್।
07142010c ಸಹದೇವೋ ಮಹಾರಾಜ ದೃಷ್ಟ್ವಾ ಕರ್ಣಂ ವ್ಯವಸ್ಥಿತಂ।
07142010e ರಥಚಕ್ರಂ ತತೋ ಗೃಹ್ಯ ಮುಮೋಚಾಧಿರಥಿಂ ಪ್ರತಿ।।
ಮಹಾರಾಜ! ಆಗ ಸಹದೇವನು ಸಂಭ್ರಮದಿಂದ ತನ್ನ ಶ್ರೇಷ್ಠ ರಥದಿಂದ ಧುಮುಕಿ ಕರ್ಣನು ವ್ಯವಸ್ಥಿತನಾಗಿ ನಿಂತಿರುವುದನ್ನು ನೋಡಿ ರಥದ ಚಕ್ರವನ್ನು ಹಿಡಿದು ಆಧಿರಥಿಯೆಡೆಗೆ ರಭಸದಿಂದ ಎಸೆದನು.
07142011a ತಮಾಪತಂತಂ ಸಹಸಾ ಕಾಲಚಕ್ರಮಿವೋದ್ಯತಂ।
07142011c ಶರೈರನೇಕಸಾಹಸ್ರೈರಚ್ಚಿನತ್ ಸೂತನಂದನಃ।।
ಒಮ್ಮೆಲೇ ತನ್ನ ಮೇಲೆ ಬೀಳುತ್ತಿದ್ದ ಕಾಲಚಕ್ರದಂತಿದ್ದ ಆ ಚಕ್ರವನ್ನು ಸೂತನಂದನನು ಶರಗಳಿಂದ ಅನೇಕ ಸಹಸ್ರ ಚೂರುಗಳನ್ನಾಗಿ ತುಂಡರಿಸಿದನು.
07142012a ತಸ್ಮಿಂಸ್ತು ವಿತಥೇ ಚಕ್ರೇ ಕೃತೇ ತೇನ ಮಹಾತ್ಮನಾ।
07142012c ವಾರ್ಯಮಾಣಶ್ಚ ವಿಶಿಖೈಃ ಸಹದೇವೋ ರಣಂ ಜಹೌ।।
ಆ ಮಹಾತ್ಮನಿಂದ ತನ್ನ ರಥಚಕ್ರವೂ ಧ್ವಂಸಗೊಳ್ಳಲು ವಿಶಿಖಗಳಿಂದ ತಡೆಯಲ್ಪಟ್ಟು ಸಹದೇವನು ರಣರಂಗವನ್ನು ಬಿಟ್ಟು ಹೊರಟು ಹೋದನು.
07142013a ತಮಭಿದ್ರುತ್ಯ ರಾಧೇಯೋ ಮುಹೂರ್ತಾದ್ಭರತರ್ಷಭ।
07142013c ಅಬ್ರವೀತ್ಪ್ರಹಸನ್ವಾಕ್ಯಂ ಸಹದೇವಂ ವಿಶಾಂ ಪತೇ।।
ಭರತರ್ಷಭ! ವಿಶಾಂಪತೇ! ಸ್ವಲ್ಪ ಸಮಯ ಅವನನ್ನು ಅಟ್ಟಿಕೊಂಡು ಹೋಗುತ್ತಾ ರಾಧೇಯನು ನಗುತ್ತಾ ಸಹದೇವನಿಗೆ ಈ ಮಾತುಗಳನ್ನಾಡಿದನು:
07142014a ಮಾ ಯುಧ್ಯಸ್ವ ರಣೇ ವೀರ ವಿಶಿಷ್ಟೈ ರಥಿಭಿಃ ಸಹ।
07142014c ಸದೃಶೈರ್ಯುಧ್ಯ ಮಾದ್ರೇಯ ವಚೋ ಮೇ ಮಾ ವಿಶಂಕಿಥಾಃ।।
“ವೀರ! ರಣದಲ್ಲಿ ನಿನಗಿಂತಲೂ ವಿಶಿಷ್ಟ ರಥಿಗಳೊಂದಿಗೆ ಯುದ್ಧಮಾಡಬೇಡ! ಮಾದ್ರೇಯ! ನಿನಗೆ ಸಮಾನರಾದವರೊಡನೆ ಮಾತ್ರ ಯುದ್ಧಮಾಡು. ಈ ನನ್ನ ಮಾತನ್ನು ಶಂಕಿಸಬೇಡ!”
07142015a ಅಥೈನಂ ಧನುಷೋಽಗ್ರೇಣ ತುದನ್ಭೂಯೋಽಬ್ರವೀದ್ವಚಃ।
07142015c ಏಷೋಽರ್ಜುನೋ ರಣೇ ಯತ್ತೋ ಯುಧ್ಯತೇ ಕುರುಭಿಃ ಸಹ।
07142015e ತತ್ರ ಗಚ್ಚಸ್ವ ಮಾದ್ರೇಯ ಗೃಹಂ ವಾ ಯದಿ ಮನ್ಯಸೇ।।
ಅನಂತರ ಕರ್ಣನು ತನ್ನ ಧನುಸ್ಸಿನ ಅಗ್ರಭಾಗದಿಂದ ಸಹದೇವನನ್ನು ತಿವಿಯುತ್ತಾ ಪುನಃ ಹೇಳಿದನು: “ಮಾದ್ರೇಯ! ಎಲ್ಲಿ ಅರ್ಜುನನು ರಣದಲ್ಲಿ ಕುರುಗಳೊಂದಿಗೆ ಯುದ್ಧಮಾಡುತ್ತಿರುವನೋ ಅಲ್ಲಿಗೆ ಹೋಗು. ಅಥವಾ ನಿನಗೆ ಇಷ್ಟವಾದರೆ ಮನೆಗೆ ಹೊರಟು ಹೋಗು!”
07142016a ಏವಮುಕ್ತ್ವಾ ತು ತಂ ಕರ್ಣೋ ರಥೇನ ರಥಿನಾಂ ವರಃ।
07142016c ಪ್ರಾಯಾತ್ಪಾಂಚಾಲಪಾಂಡೂನಾಂ ಸೈನ್ಯಾನಿ ಪ್ರಹಸನ್ನಿವ।।
ಹೀಗೆ ಹೇಳಿ ರಥಿಗಳಲ್ಲಿ ಶ್ರೇಷ್ಠ ಕರ್ಣನು ನಗುತ್ತಾ ರಥದಲ್ಲಿ ಕುಳಿತು ಪಾಂಚಾಲ-ಪಾಂಡುಪುತ್ರರ ಸೇನೆಗಳಿರುವಲ್ಲಿಗೆ ನಡೆದನು.
07142017a ವಧಪ್ರಾಪ್ತಂ ತು ಮಾದ್ರೇಯಂ ನಾವಧೀತ್ಸಮರೇಽರಿಹಾ।
07142017c ಕುಂತ್ಯಾಃ ಸ್ಮೃತ್ವಾ ವಚೋ ರಾಜನ್ಸತ್ಯಸಂಧೋ ಮಹಾರಥಃ।।
ರಾಜನ್! ಕುಂತಿಗೆ ಕೊಟ್ಟಿದ್ದ ವಚನವನ್ನು ಸ್ಮರಿಸಿಕೊಂಡು ಸತ್ಯಸಂಧ, ಮಹಾರಥ ಆ ಅರಿಹನು ಸಮರದಲ್ಲಿ ವಧೆಗೆ ಸಿಕ್ಕಿದ್ದರೂ ಮಾದ್ರೇಯನನ್ನು ವಧಿಸಲಿಲ್ಲ.
07142018a ಸಹದೇವಸ್ತತೋ ರಾಜನ್ವಿಮನಾಃ ಶರಪೀಡಿತಃ।
07142018c ಕರ್ಣವಾಕ್ಶಲ್ಯತಪ್ತಶ್ಚ ಜೀವಿತಾನ್ನಿರವಿದ್ಯತ।।
ರಾಜನ್! ಸಹದೇವನಾದರೋ ವಿಮನಸ್ಕನಾಗಿ, ಶರಪೀಡಿತನಾಗಿ, ಕರ್ಣನ ಮಾತಿನ ಬಾಣಗಳಿಂದ ಪರಿತಪಿಸಿ, ಜೀವನದಲ್ಲಿಯೇ ವಿರಕ್ತಿಯನ್ನು ಹೊಂದಿದನು.
07142019a ಆರುರೋಹ ರಥಂ ಚಾಪಿ ಪಾಂಚಾಲ್ಯಸ್ಯ ಮಹಾತ್ಮನಃ।
07142019c ಜನಮೇಜಯಸ್ಯ ಸಮರೇ ತ್ವರಾಯುಕ್ತೋ ಮಹಾರಥಃ।।
ಸಮರದಲ್ಲಿ ಆ ಮಹಾತ್ಮ ಮಹಾರಥನು ಪಾಂಚಾಲ್ಯ ಜನಮೇಜಯನ ರಥವನ್ನು ಅವಸರದಲ್ಲಿ ಏರಿದನು.
07142020a ವಿರಾಟಂ ಸಹಸೇನಂ ತು ದ್ರೋಣಾರ್ಥೇ ದ್ರುತಮಾಗತಂ।
07142020c ಮದ್ರರಾಜಃ ಶರೌಘೇಣ ಚಾದಯಾಮಾಸ ಧನ್ವಿನಂ।।
ದ್ರೋಣನಿಗಾಗಿ ಧಾವಿಸಿ ಸೇನೆಯೊಂದಿಗೆ ಬರುತ್ತಿದ್ದ ಧನ್ವಿ ವಿರಾಟನನ್ನು ಮದ್ರರಾಜನು ಶರೌಘಗಳಿಂದ ಮುಚ್ಚಿದನು.
07142021a ತಯೋಃ ಸಮಭವದ್ಯುದ್ಧಂ ಸಮರೇ ದೃಢಧನ್ವಿನೋಃ।
07142021c ಯಾದೃಶಂ ಹ್ಯಭವದ್ರಾಜಂ ಜಂಭವಾಸವಯೋಃ ಪುರಾ।।
ಹಿಂದೆ ಜಂಭಾಸುರ-ವಾಸವರೊಡನೆ ಹೇಗೆ ನಡೆಯಿತೋ ಹಾಗೆ ಸಮರದಲ್ಲಿ ಆ ಇಬ್ಬರು ದೃಢಧನ್ವಿಗಳ ನಡುವೆ ಯುದ್ಧವು ನಡೆಯಿತು.
07142022a ಮದ್ರರಾಜೋ ಮಹಾರಾಜ ವಿರಾಟಂ ವಾಹಿನೀಪತಿಂ।
07142022c ಆಜಘ್ನೇ ತ್ವರಿತಂ ತೀಕ್ಷ್ಣೈಃ ಶತೇನ ನತಪರ್ವಣಾಂ।।
ಮಹಾರಾಜ! ವಾಹಿನೀಪತಿ ವಿರಾಟನನ್ನು ಮದ್ರರಾಜನು ತ್ವರೆಮಾಡಿ ನೂರು ತೀಕ್ಷ್ಣ ನತಪರ್ವಗಳಿಂದ ಹೊಡೆದನು.
07142023a ಪ್ರತಿವಿವ್ಯಾಧ ತಂ ರಾಜಾ ನವಭಿರ್ನಿಶಿತೈಃ ಶರೈಃ।
07142023c ಪುನಶ್ಚೈವ ತ್ರಿಸಪ್ತತ್ಯಾ ಭೂಯಶ್ಚೈವ ಶತೇನ ಹ।।
ಪ್ರತಿಯಾಗಿ ರಾಜಾ ವಿರಾಟನು ಶಲ್ಯನನ್ನು ಒಂಭತ್ತು ನಿಶಿತ ಶರಗಳಿಂದ ಹೊಡೆದು, ಪುನಃ ಮೂವತ್ತರಿಂದ ಮತ್ತು ಇನ್ನೂ ನೂರರಿಂದ ಹೊಡೆದನು.
07142024a ತಸ್ಯ ಮದ್ರಾಧಿಪೋ ಹತ್ವಾ ಚತುರೋ ರಥವಾಜಿನಃ।
07142024c ಸೂತಂ ಧ್ವಜಂ ಚ ಸಮರೇ ರಥೋಪಸ್ಥಾದಪಾತಯತ್।।
ಮದ್ರಾಧಿಪನು ಅವನ ನಾಲ್ಕು ರಥಕುದುರೆಗಳನ್ನು ಸಂಹರಿಸಿ, ಸಮರದಲ್ಲಿ ಸಾರಥಿ ಮತ್ತು ಧ್ವಜವನ್ನು ರಥದಿಂದ ಕೆಳಕ್ಕೆ ಬೀಳಿಸಿದನು.
07142025a ಹತಾಶ್ವಾತ್ತು ರಥಾತ್ತೂರ್ಣಮವಪ್ಲುತ್ಯ ಮಹಾರಥಃ।
07142025c ತಸ್ಥೌ ವಿಸ್ಫಾರಯಂಶ್ಚಾಪಂ ವಿಮುಂಚಂಶ್ಚ ಶಿತಾಂ ಶರಾನ್।।
ಕುದುರೆಗಳು ಹತವಾಗಲು, ತಕ್ಷಣವೇ ರಥದಿಂದ ಕೆಳಗೆ ಹಾರಿ ಮಹಾರಥ ವಿರಾಟನು ಧನುಸ್ಸನ್ನು ಟೇಂಕರಿಸಿ ನಿಶಿತ ಶರಗಳನ್ನು ಪ್ರಯೋಗಿಸತೊಡಗಿದನು.
07142026a ಶತಾನೀಕಸ್ತತೋ ದೃಷ್ಟ್ವಾ ಭ್ರಾತರಂ ಹತವಾಹನಂ।
07142026c ರಥೇನಾಭ್ಯಪತತ್ತೂರ್ಣಂ ಸರ್ವಲೋಕಸ್ಯ ಪಶ್ಯತಃ।।
ಹತವಾಹನನಾದ ಭ್ರಾತರನನ್ನು ನೋಡಿದ ಶತಾನೀಕನು ಸರ್ವಲೋಕಗಳೂ ನೋಡುತ್ತಿದ್ದಂತೆಯೇ ಬೇಗನೇ ರಥದಿಂದ ಅಲ್ಲಿಗೆ ಧಾವಿಸಿದನು.
07142027a ಶತಾನೀಕಮಥಾಯಾಂತಂ ಮದ್ರರಾಜೋ ಮಹಾಮೃಧೇ।
07142027c ವಿಶಿಖೈರ್ಬಹುಭಿರ್ವಿದ್ಧ್ವಾ ತತೋ ನಿನ್ಯೇ ಯಮಕ್ಷಯಂ।।
ಮಹಾಯುದ್ಧದಲ್ಲಿ ಹಾಗೆ ಮುಂದುವರೆದು ಬರುತ್ತಿದ್ದ ಶತಾನೀಕನನ್ನು ಮದ್ರರಾಜನು ಅನೇಕ ವಿಶಿಖಗಳಿಂದ ಗಾಯಗೊಳಿಸಿ ಯಮಕ್ಷಯಕ್ಕೆ ಕಳುಹಿಸಿದನು.
07142028a ತಸ್ಮಿಂಸ್ತು ನಿಹತೇ ವೀರೇ ವಿರಾಟೋ ರಥಸತ್ತಮಃ।
07142028c ಆರುರೋಹ ರಥಂ ತೂರ್ಣಂ ತಮೇವ ಧ್ವಜಮಾಲಿನಂ।।
ಆ ವೀರನು ಹತನಾಗಲು ರಥಸತ್ತಮ ವಿರಾಟನು ಬೇಗನೆ ಅದೇ ಧ್ವಜ-ಮಾಲೆಗಳಿಂದ ಅಲಂಕೃತ ರಥವನ್ನು ಏರಿದನು.
07142029a ತತೋ ವಿಸ್ಫಾರ್ಯ ನಯನೇ ಕ್ರೋಧಾದ್ದ್ವಿಗುಣವಿಕ್ರಮಃ।
07142029c ಮದ್ರರಾಜರಥಂ ತೂರ್ಣಂ ಚಾದಯಾಮಾಸ ಪತ್ರಿಭಿಃ।।
ಆಗ ಕ್ರೋಧದಿಂದ ಕಣ್ಣುಗಳನ್ನು ಅರಳಿಸಿ ಆ ದ್ವಿಗುಣವಿಕ್ರಮನು ಕೂಡಲೇ ಮದ್ರರಾಜನ ರಥವನ್ನು ಪತ್ರಿಗಳಿಂದ ಮುಚ್ಚಿಬಿಟ್ಟನು.
07142030a ತತೋ ಮದ್ರಾಧಿಪಃ ಕ್ರುದ್ಧಃ ಶತೇನ ನತಪರ್ವಣಾಂ।
07142030c ಆಜಘಾನೋರಸಿ ದೃಢಂ ವಿರಾಟಂ ವಾಹಿನೀಪತಿಂ।।
ಆಗ ಕ್ರುದ್ಧ ಮದ್ರಾಧಿಪನು ನೂರು ನತಪರ್ವಗಳಿಂದ ವಾಹಿನೀಪತಿ ದೃಢ ವಿರಾಟನ ಎದೆಗೆ ಹೊಡೆದನು.
07142031a ಸೋಽತಿವಿದ್ಧೋ ಮಹಾರಾಜ ರಥೋಪಸ್ಥ ಉಪಾವಿಶತ್।
07142031c ಕಶ್ಮಲಂ ಚಾವಿಶತ್ತೀವ್ರಂ ವಿರಾಟೋ ಭರತರ್ಷಭ।
07142031e ಸಾರಥಿಸ್ತಮಪೋವಾಹ ಸಮರೇ ಶರವಿಕ್ಷತಂ।।
ಭರತರ್ಷಭ! ಮಹಾರಾಜ! ಹಾಗೆ ಅತಿಯಾಗಿ ಗಾಯಗೊಂಡ ವಿರಾಟನು ಅತಿ ತೀವ್ರವಾಗಿ ಬಳಲಿ ರಥದಲ್ಲಿಯೇ ಕುಸಿದನು. ಬಾಣಗಳಿಂದ ಗಾಯಗೊಂಡಿದ್ದ ಅವನನ್ನು ಅವನ ಸಾರಥಿಯು ಸಮರದಿಂದ ದೂರಕ್ಕೆ ಕೊಂಡೊಯ್ದನು.
07142032a ತತಃ ಸಾ ಮಹತೀ ಸೇನಾ ಪ್ರಾದ್ರವನ್ನಿಶಿ ಭಾರತ।
07142032c ವಧ್ಯಮಾನಾ ಶರಶತೈಃ ಶಲ್ಯೇನಾಹವಶೋಭಿನಾ।।
ಭಾರತ! ಯುದ್ಧಶೋಭೀ ಶಲ್ಯನ ನೂರಾರು ಬಾಣಗಳಿಂದ ವಧಿಸಲ್ಪಡುತ್ತಿದ್ದ ಆ ಮಹಾಸೇನೆಯು ಆ ರಾತ್ರಿ ಪಲಾಯನಮಾಡತೊಡಗಿತು.
07142033a ತಾಂ ದೃಷ್ಟ್ವಾ ವಿದ್ರುತಾಂ ಸೇನಾಂ ವಾಸುದೇವಧನಂಜಯೌ।
07142033c ಪ್ರಾಯಾತಾಂ ತತ್ರ ರಾಜೇಂದ್ರ ಯತ್ರ ಶಲ್ಯೋ ವ್ಯವಸ್ಥಿತಃ।।
ರಾಜೇಂದ್ರ! ಸೇನೆಯು ಹಾಗೆ ಓಡಿಹೋಗುತ್ತಿರುವುದನ್ನು ನೋಡಿ ವಾಸುದೇವ-ಧನಂಜಯರು ಎಲ್ಲಿ ಶಲ್ಯನಿದ್ದನೋ ಅಲ್ಲಿಗೆ ಬಂದರು.
07142034a ತೌ ತು ಪ್ರತ್ಯುದ್ಯಯೌ ರಾಜನ್ರಾಕ್ಷಸೇಂದ್ರೋ ಹ್ಯಲಂಬುಸಃ।
07142034c ಅಷ್ಟಚಕ್ರಸಮಾಯುಕ್ತಮಾಸ್ಥಾಯ ಪ್ರವರಂ ರಥಂ।।
ಅವರಿಬ್ಬರೊಡನೆ ಎಂಟು ಚಕ್ರಗಳುಳ್ಳ ಶ್ರೇಷ್ಠ ರಥದಲ್ಲಿ ಕುಳಿತಿದ್ದ ರಾಕ್ಷಸೇಂದ್ರ ಅಲಂಬುಸನು ಪ್ರತಿಯಾಗಿ ಯುದ್ಧಮಾಡತೊಡಗಿದನು.
07142035a ತುರಂಗಮಮುಖೈರ್ಯುಕ್ತಂ ಪಿಶಾಚೈರ್ಘೋರದರ್ಶನೈಃ।
07142035c ಲೋಹಿತಾರ್ದ್ರಪತಾಕಂ ತಂ ರಕ್ತಮಾಲ್ಯವಿಭೂಷಿತಂ।
07142035e ಕಾರ್ಷ್ಣಾಯಸಮಯಂ ಘೋರಂ ಋಕ್ಷಚರ್ಮಾವೃತಂ ಮಹತ್।।
07142036a ರೌದ್ರೇಣ ಚಿತ್ರಪಕ್ಷೇಣ ವಿವೃತಾಕ್ಷೇಣ ಕೂಜತಾ।
07142036c ಧ್ವಜೇನೋಚ್ಚ್ರಿತತುಂಡೇನ ಗೃಧ್ರರಾಜೇನ ರಾಜತಾ।।
07142037a ಸ ಬಭೌ ರಾಕ್ಷಸೋ ರಾಜನ್ಭಿನ್ನಾಂಜನಚಯೋಪಮಃ।
ಕುದುರೆಗಳ ಮುಖಗಳನ್ನೇ ಹೊಂದಿದ್ದ ಘೋರ ಪಿಶಾಚಿಗಳಿಂದ ಎಳೆಯಲ್ಪಡುತ್ತಿದ್ದ ಆ ರಥವು ರಕ್ತದಲ್ಲಿ ತೋಯ್ದ ಪತಾಕೆಯನ್ನು ಹೊಂದಿತ್ತು ಮತ್ತು ಕೆಂಪು ಮಾಲೆಗಳಿಂದ ವಿಭೂಷಿತವಾಗಿತ್ತು. ಸಂಪೂರ್ಣವಾಗಿ ಕಬ್ಬಿಣದಿಂದ ನಿರ್ಮಿತವಾಗಿತ್ತು. ಘೋರವಾದ ಆ ಮಹಾರಥವು ಕರಡಿಯ ಚರ್ಮದಿಂದ ಹೊದಿಸಲ್ಪಟ್ಟಿತ್ತು. ಆ ರಥ ಧ್ವಜದ ತುದಿಯಲ್ಲಿ ರೌದ್ರರೂಪದ, ಬಣ್ಣದ ರೆಕ್ಕೆಗಳುಳ್ಳ, ಕಣ್ಣುಗಳನ್ನು ಅಗಲ ತೆರೆದುಕೊಂಡಿರುವ ಹದ್ದಿನ ರಾಜನ ಚಿತ್ರವಿತ್ತು. ಆ ರಾಕ್ಷಸನು ಕಲ್ಲಿದ್ದಿನ ರಾಶಿಯಂತೆಯೇ ಕಾಣುತ್ತಿದ್ದನು.
07142037c ರುರೋಧಾರ್ಜುನಮಾಯಾಂತಂ ಪ್ರಭಂಜನಮಿವಾದ್ರಿರಾಟ್।
07142037e ಕಿರನ್ ಬಾಣಗಣಾನ್ ರಾಜಂ ಶತಶೋಽರ್ಜುನಮೂರ್ಧನಿ।।
ರಾಜನ್! ಚಂಡಮಾರುತವನ್ನು ಪರ್ವತವು ಹೇಗೋ ಹಾಗೆ ಮುಂದೆಬರುತ್ತಿದ್ದ ಅರ್ಜುನನನ್ನು ಅಲಂಬುಸನು ನೂರಾರು ಬಾಣಗಣಗಳನ್ನು ಅವನ ತಲೆಯ ಮೇಲೆ ಎರಚಿ ತಡೆದನು.
07142038a ಅತಿತೀವ್ರಮಭೂದ್ಯುದ್ಧಂ ನರರಾಕ್ಷಸಯೋರ್ಮೃಧೇ।
07142038c ದ್ರಷ್ಟೄಣಾಂ ಪ್ರೀತಿಜನನಂ ಸರ್ವೇಷಾಂ ಭರತರ್ಷಭ।।
ಆಗ ರಣಾಂಗಣದಲ್ಲಿ ಆ ನರ-ರಾಕ್ಷಸರ ನಡುವೆ ನೋಡುವವರೆಲ್ಲರಿಗೆ ಸಂತೋಷವನ್ನು ನೀಡುವ ಅತಿ ತೀವ್ರ ಯುದ್ಧವು ನಡೆಯಿತು.
07142039a ತಮರ್ಜುನಃ ಶತೇನೈವ ಪತ್ರಿಣಾಮಭ್ಯತಾಡಯತ್।
07142039c ನವಭಿಶ್ಚ ಶಿತೈರ್ಬಾಣೈಶ್ಚಿಚ್ಚೇದ ಧ್ವಜಮುಚ್ಚ್ರಿತಂ।।
ಅರ್ಜುನನು ಅವನನ್ನು ನೂರು ಪತ್ರಿಗಳಿಂದ ಹೊಡೆದನು. ಮತ್ತು ಎತ್ತರ ಹಾರಾಡುತ್ತಿದ್ದ ಅವನ ಧ್ವಜವನ್ನು ಒಂಭತ್ತು ನಿಶಿತ ಬಾಣಗಳಿಂದ ತುಂಡರಿಸಿದನು.
07142040a ಸಾರಥಿಂ ಚ ತ್ರಿಭಿರ್ಬಾಣೈಸ್ತ್ರಿಭಿರೇವ ತ್ರಿವೇಣುಕಂ।
07142040c ಧನುರೇಕೇನ ಚಿಚ್ಚೇದ ಚತುರ್ಭಿಶ್ಚತುರೋ ಹಯಾನ್।
07142040e ವಿರಥಸ್ಯೋದ್ಯತಂ ಖಡ್ಗಂ ಶರೇಣಾಸ್ಯ ದ್ವಿಧಾಚ್ಚಿನತ್।।
ಅವನ ಸಾರಥಿಯನ್ನು ಮೂರು ಬಾಣಗಳಿಂದಲೂ, ಇನ್ನೂ ಮೂರು ಬಾಣಗಳಿಂದ ರಥದ ಮೂಕಿಯನ್ನೂ, ಒಂದರಿಂದ ಧನುಸ್ಸನ್ನು ತುಂಡರಿಸಿ ನಾಲ್ಕು ಬಾಣಗಳಿಂದ ನಾಲ್ಕು ಕುದುರೆಗಳನ್ನು ಸಂಹರಿಸಿದನು. ಮತ್ತು ವಿರಥನಾಗಿ ಮೇಲೆತ್ತಿದ್ದ ಅವನ ಖಡ್ಗವನ್ನು ಶರದಿಂದ ಎರಡಾಗಿ ತುಂಡರಿಸಿದನು.
07142041a ಅಥೈನಂ ನಿಶಿತೈರ್ಬಾಣೈಶ್ಚತುರ್ಭಿರ್ಭರತರ್ಷಭ।
07142041c ಪಾರ್ಥೋಽರ್ದಯದ್ರಾಕ್ಷಸೇಂದ್ರಂ ಸ ವಿದ್ಧಃ ಪ್ರಾದ್ರವದ್ಭಯಾತ್।।
ಭರತರ್ಷಭ! ಆಗ ಪಾರ್ಥನ ನಾಲ್ಕು ನಿಶಿತ ಬಾಣಗಳಿಂದ ಅತಿಯಾಗಿ ಗಾಯಗೊಂಡ ರಾಕ್ಷಸೇಂದ್ರನು ಭಯಗೊಂಡು ರಣಾಂಗಣವನ್ನೇ ಬಿಟ್ಟು ಓಡಿಹೋದನು.
07142042a ತಂ ವಿಜಿತ್ಯಾರ್ಜುನಸ್ತೂರ್ಣಂ ದ್ರೋಣಾಂತಿಕಮುಪಾಯಯೌ।
07142042c ಕಿರಂ ಶರಗಣಾನ್ರಾಜನ್ನರವಾರಣವಾಜಿಷು।।
ರಾಜನ್! ಅವನನ್ನು ಸೋಲಿಸಿ ಬೇಗನೆ ಅರ್ಜುನನು ನರ-ವಾರಣ-ವಾಜಿಗಳನ್ನು ಶರಗಣಗಳಿಂದ ಮುಚ್ಚುತ್ತಾ ದ್ರೋಣನ ಬಳಿ ಆಗಮಿಸಿದನು.
07142043a ವಧ್ಯಮಾನಾ ಮಹಾರಾಜ ಪಾಂಡವೇನ ಯಶಸ್ವಿನಾ।
07142043c ಸೈನಿಕಾ ನ್ಯಪತನ್ನುರ್ವ್ಯಾಂ ವಾತನುನ್ನಾ ಇವ ದ್ರುಮಾಃ।।
ಮಹಾರಾಜ! ಯಶಸ್ವಿ ಪಾಂಡವನಿಂದ ವಧಿಸಲ್ಪಡುತ್ತಿದ್ದ ಸೈನಿಕರು ಚಂಡಮಾರುತಕ್ಕೆ ಸಿಲುಕಿದ ವೃಕ್ಷಗಳಂತೆ ಭೂಮಿಯಮೇಲೆ ಉರುಳಿ ಬಿದ್ದರು.
07142044a ತೇಷು ತೂತ್ಸಾದ್ಯಮಾನೇಷು ಫಲ್ಗುನೇನ ಮಹಾತ್ಮನಾ।
07142044c ಸಂಪ್ರಾದ್ರವದ್ಬಲಂ ಸರ್ವಂ ಪುತ್ರಾಣಾಂ ತೇ ವಿಶಾಂ ಪತೇ।।
ವಿಶಾಂಪತೇ! ಹೀಗೆ ಮಹಾತ್ಮ ಫಲ್ಗುನನಿಂದ ಧ್ವಂಸಗೊಳ್ಳುತ್ತಿದ್ದ ನಿನ್ನ ಮಗನ ಸೇನೆಯಲ್ಲಿ ಅಳಿದುಳಿದವರು ಪಲಾಯನಮಾಡಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಅಲಂಬುಷಪರಾಭವೇ ದ್ವಾಚತ್ವಾರಿಂಶಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಅಲಂಬುಷಪರಾಜಯ ಎನ್ನುವ ನೂರಾನಲ್ವತ್ತೆರಡನೇ ಅಧ್ಯಾಯವು.