141 ರಾತ್ರಿಯುದ್ಧೇ ದುರ್ಯೋಧನಾಪಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಘಟೋತ್ಕಚವಧ ಪರ್ವ

ಅಧ್ಯಾಯ 141

ಸಾರ

ಸಾತ್ಯಕಿಯಿಂದ ಭೂರಿಯ ವಧೆ (1-12); ಘಟೋತ್ಕಚ-ಅಶ್ವಾತ್ಥಾಮರ ಘೋರ ಯುದ್ಧ (13-29); ದುರ್ಯೋಧನನು ಭೀಮಸೇನನಿಂದ ಪರಾಜಿತಗೊಂಡಿದುದು (40-61).

07141001 ಸಂಜಯ ಉವಾಚ।
07141001a ಭೂರಿಸ್ತು ಸಮರೇ ರಾಜಂ ಶೈನೇಯಂ ರಥಿನಾಂ ವರಂ।
07141001c ಆಪತಂತಮಪಾಸೇಧತ್ ಪ್ರಪಾನಾದಿವ ಕುಂಜರಂ।।

ಸಂಜಯನು ಹೇಳಿದನು: “ರಾಜನ್! ಸಮರದಲ್ಲಿ ಮುಂದುವರೆದು ಬರುತ್ತಿರುವ ಆನೆಯೊಂದನ್ನು ತಡೆಹಿಡಿಯುವಂತೆ ರಥಿಗಳಲ್ಲಿ ಶ್ರೇಷ್ಠ ಶೈನೇಯ ಸಾತ್ಯಕಿಯನ್ನು ಭೂರಿಯು ತಡೆದು ಯುದ್ಧಮಾಡಿದನು.

07141002a ಅಥೈನಂ ಸಾತ್ಯಕಿಃ ಕ್ರುದ್ಧಃ ಪಂಚಭಿರ್ನಿಶಿತೈಃ ಶರೈಃ।
07141002c ವಿವ್ಯಾಧ ಹೃದಯೇ ತೂರ್ಣಂ ಪ್ರಾಸ್ರವತ್ತಸ್ಯ ಶೋಣಿತಂ।।

ಆಗ ಕ್ರುದ್ಧ ಸಾತ್ಯಕಿಯು ಐದು ನಿಶಿತ ಶರಗಳಿಂದ ಭೂರಿಯ ಹೃದಯಕ್ಕೆ ಪ್ರಯೋಗಿಸಲು, ಅಲ್ಲಿಂದ ರಕ್ತವು ಧಾರಾಕಾರವಾಗಿ ಸುರಿಯತೊಡಗಿತು.

07141003a ತಥೈವ ಕೌರವೋ ಯುದ್ಧೇ ಶೈನೇಯಂ ಯುದ್ಧದುರ್ಮದಂ।
07141003c ದಶಭಿರ್ವಿಶಿಖೈಸ್ತೀಕ್ಷ್ಣೈರವಿಧ್ಯತ ಭುಜಾಂತರೇ।।

ಹಾಗೆಯೇ ಯುದ್ಧದಲ್ಲಿ ಕೌರವ ಭೂರಿಯೂ ಕೂಡ ಯುದ್ಧದುರ್ಮದ ಶೈನೇಯನ ಭುಜಾಂತರಕ್ಕೆ ಹತ್ತು ತೀಕ್ಷ್ಣ ವಿಶಿಖಗಳಿಂದ ಹೊಡೆದನು.

07141004a ತಾವನ್ಯೋನ್ಯಂ ಮಹಾರಾಜ ತತಕ್ಷಾತೇ ಶರೈರ್ಭೃಶಂ।
07141004c ಕ್ರೋಧಸಂರಕ್ತನಯನೌ ಕ್ರೋಧಾದ್ವಿಸ್ಫಾರ್ಯ ಕಾರ್ಮುಕೇ।।

ಮಹಾರಾಜ! ಅವರಿಬ್ಬರೂ ಕ್ರೋಧದಿಂದ ಕೆಂಗಣ್ಣುಗಳುಳ್ಳವರಾಗಿ ಧನುಸ್ಸುಗಳನ್ನು ಟೇಂಕರಿಸುತ್ತಾ ಶರಗಳಿಂದ ಅನ್ಯೋನ್ಯರನ್ನು ಗಾಯಗೊಳಿಸಿದರು.

07141005a ತಯೋರಾಸೀನ್ಮಹಾರಾಜ ಶಸ್ತ್ರವೃಷ್ಟಿಃ ಸುದಾರುಣಾ।
07141005c ಕ್ರುದ್ಧಯೋಃ ಸಾಯಕಮುಚೋರ್ಯಮಾಂತಕನಿಕಾಶಯೋಃ।।

ಮಹಾರಾಜ! ಯಮಾಂತಕರಂತೆ ಕ್ರುದ್ಧರಾಗಿದ್ದ ಅವರಿಬ್ಬರ ನಡುವಿನ ಸಾಯಕಗಳ ಶರವೃಷ್ಟಿಯು ಸುದಾರುಣವಾಗಿತ್ತು.

07141006a ತಾವನ್ಯೋನ್ಯಂ ಶರೈ ರಾಜನ್ಪ್ರಚ್ಚಾದ್ಯ ಸಮರೇ ಸ್ಥಿತೌ।
07141006c ಮುಹೂರ್ತಂ ಚೈವ ತದ್ಯುದ್ಧಂ ಸಮರೂಪಮಿವಾಭವತ್।।

ರಾಜನ್! ಅವರಿಬ್ಬರೂ ಅನ್ಯೋನ್ಯರನ್ನು ಸಮರದಲ್ಲಿ ಶರಗಳಿಂದ ಮುಚ್ಚಿ ನಿಂತರು. ಮುಹೂರ್ತಕಾಲ ಆ ಯುದ್ಧವು ಸಮರೂಪವಾಗಿದ್ದಿತು.

07141007a ತತಃ ಕ್ರುದ್ಧೋ ಮಹಾರಾಜ ಶೈನೇಯಃ ಪ್ರಹಸನ್ನಿವ।
07141007c ಧನುಶ್ಚಿಚ್ಚೇದ ಸಮರೇ ಕೌರವ್ಯಸ್ಯ ಮಹಾತ್ಮನಃ।।

ಮಹಾರಾಜ! ಆಗ ಸಮರದಲ್ಲಿ ಕ್ರುದ್ಧನಾದ ಶೈನೇಯನು ನಗುತ್ತಾ ಮಹಾತ್ಮ ಕೌರವನ ಧನುಸ್ಸನ್ನು ಕತ್ತರಿಸಿದನು.

07141008a ಅಥೈನಂ ಚಿನ್ನಧನ್ವಾನಂ ನವಭಿರ್ನಿಶಿತೈಃ ಶರೈಃ।
07141008c ವಿವ್ಯಾಧ ಹೃದಯೇ ತೂರ್ಣಂ ತಿಷ್ಠ ತಿಷ್ಠೇತಿ ಚಾಬ್ರವೀತ್।।

ಅವನ ಧನುಸ್ಸನ್ನು ತುಂಡರಿಸಿದ ನಂತರ ತಕ್ಷಣವೇ ಒಂಭತ್ತು ನಿಶಿತ ಶರಗಳಿಂದ ಅವನ ಹೃದಯಕ್ಕೆ ಹೊಡೆದು ನಿಲ್ಲುನಿಲ್ಲೆಂದು ಕೂಗಿದನು.

07141009a ಸೋಽತಿವಿದ್ಧೋ ಬಲವತಾ ಶತ್ರುಣಾ ಶತ್ರುತಾಪನಃ।
07141009c ಧನುರನ್ಯತ್ಸಮಾದಾಯ ಸಾತ್ವತಂ ಪ್ರತ್ಯವಿಧ್ಯತ।।

ಹಾಗೆ ಶತ್ರುವಿನಿಂದ ಅತಿ ಬಲವಾಗಿ ಹೊಡೆಯಲ್ಪಟ್ಟ ಆ ಶತ್ರುತಾಪನ ಭೂರಿಯು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಸಾತ್ವತನನ್ನು ಪ್ರತಿಯಾಗಿ ಹೊಡೆದನು.

07141010a ಸ ವಿದ್ಧ್ವಾ ಸಾತ್ವತಂ ಬಾಣೈಸ್ತ್ರಿಬಿÃರೇವ ವಿಶಾಂ ಪತೇ।
07141010c ಧನುಶ್ಚಿಚ್ಚೇದ ಭಲ್ಲೇನ ಸುತೀಕ್ಷ್ಣೇನ ಹಸನ್ನಿವ।।

ವಿಶಾಂಪತೇ! ಅವನು ಸಾತ್ವತನನ್ನು ಮೂರು ಬಾಣಗಳಿಂದ ಹೊಡೆದು ತೀಕ್ಷ್ಣ ಭಲ್ಲದಿಂದ ಅವನ ಧನುಸ್ಸನ್ನು ಕತ್ತರಿಸಿ ನಕ್ಕನು.

07141011a ಚಿನ್ನಧನ್ವಾ ಮಹಾರಾಜ ಸಾತ್ಯಕಿಃ ಕ್ರೋಧಮೂರ್ಚಿತಃ।
07141011c ಪ್ರಜಹಾರ ಮಹಾವೇಗಾಂ ಶಕ್ತಿಂ ತಸ್ಯ ಮಹೋರಸಿ।।

ಮಹಾರಾಜ! ಧನುಸ್ಸು ತುಂಡಾಗಲು ಕ್ರೋಧಮೂರ್ಚಿತ ಸಾತ್ಯಕಿಯು ಅವನ ಎದೆಗೆ ಗುರಿಯಿಟ್ಟು ಮಹಾವೇಗವುಳ್ಳ ಶಕ್ತಿಯನ್ನು ಪ್ರಯೋಗಿಸಿದನು.

07141012a ಸ ತು ಶಕ್ತ್ಯಾ ವಿಭಿನ್ನಾಂಗೋ ನಿಪಪಾತ ರಥೋತ್ತಮಾತ್।
07141012c ಲೋಹಿತಾಂಗ ಇವಾಕಾಶಾದ್ದೀಪ್ತರಶ್ಮಿರ್ಯದೃಚ್ಚಯಾ।।

ಆ ಶಕ್ತಿಯಿಂದ ಭಿನ್ನಾಂಗನಾದ ಭೂರಿಯು ಉರಿಯುತ್ತಿರುವ ಕಿರಣಗಳ ಲೋಹಿತಾಂಗ ಅಂಗಾರಕನು ಆಕಾಶದಿಂದ ಬೀಳುವಂತೆ ರಥದಿಂದ ಕೆಳಗೆ ಬಿದ್ದನು.

07141013a ತಂ ತು ದೃಷ್ಟ್ವಾ ಹತಂ ಶೂರಮಶ್ವತ್ಥಾಮಾ ಮಹಾರಥಃ।
07141013c ಅಭ್ಯಧಾವತ ವೇಗೇನ ಶೈನೇಯಂ ಪ್ರತಿ ಸಮ್ಯುಗೇ।
07141013e ಅಭ್ಯವರ್ಷಚ್ಚರೌಘೇಣ ಮೇರುಂ ವೃಷ್ಟ್ಯಾ ಯಥಾಂಬುದಃ।

ರಣಾಂಗಣದಲ್ಲಿ ಶೂರ ಭೂರಿಯು ಹತನಾದುದನ್ನು ನೋಡಿ ಮಹಾರಥ ಅಶ್ವತ್ಥಾಮನು ವೇಗದಿಂದ ಶೈನೇಯನ ಕಡೆ ಧಾವಿಸಿ ಬಂದು ಮೋಡಗಳು ಮೇರುಪರ್ವತದ ಮೇಲೆ ಮಳೆಗರೆಯುವಂತೆ ಸಾತ್ಯಕಿಯ ಮೇಲೆ ಶರೌಘಗಳ ಮಳೆಗರೆದನು.

07141014a ತಮಾಪತಂತಂ ಸಂರಬ್ಧಂ ಶೈನೇಯಸ್ಯ ರಥಂ ಪ್ರತಿ।
07141014c ಘಟೋತ್ಕಚೋಽಬ್ರವೀದ್ರಾಜನ್ನಾದಮ್ಮುಕ್ತ್ವಾ ಮಹಾರಥಃ।।

ರಾಜನ್! ಅವನು ಶೈನೇಯನ ರಥದ ಕಡೆ ಅವಸರದಿಂದ ಹೋಗುತ್ತಿರುವುದನ್ನು ನೋಡಿ ಮಹಾರಥ ಘಟೋತ್ಕಚನು ಸಿಂಹನಾದಗೈಯುತ್ತಾ ಅಶ್ವತ್ಥಾಮನಿಗೆ ಹೇಳಿದನು:

07141015a ತಿಷ್ಠ ತಿಷ್ಠ ನ ಮೇ ಜೀವನ್ದ್ರೋಣಪುತ್ರ ಗಮಿಷ್ಯಸಿ।
07141015c ಏಷ ತ್ವಾದ್ಯ ಹನಿಷ್ಯಾಮಿ ಮಹಿಷಂ ಸ್ಕಂದರಾಡಿವ।
07141015e ಯುದ್ಧಶ್ರದ್ಧಾಮಹಂ ತೇಽದ್ಯ ವಿನೇಷ್ಯಾಮಿ ರಣಾಜಿರೇ।।

“ದ್ರೋಣಪುತ್ರ! ನಿಲ್ಲು ನಿಲ್ಲು! ನನ್ನಿಂದ ಜೀವಂತವಾಗಿ ಹೋಗಲಾರೆ! ಇಂದು ನಾನು ನಿನ್ನನ್ನು ರಾಜಾ ಸ್ಕಂದನು ಮಹಿಷನನ್ನು ಸಂಹರಿಸಿದಂತೆ ಸಂಹರಿಸುತ್ತೇನೆ. ಇಂದು ರಣಾಂಗಣದಲ್ಲಿ ಯುದ್ಧದಲ್ಲಿ ನಿನಗಿರುವ ಶ್ರದ್ಧೆಯನ್ನು ನಾಶಗೊಳಿಸುತ್ತೇನೆ!”

07141016a ಇತ್ಯುಕ್ತ್ವಾ ರೋಷತಾಮ್ರಾಕ್ಷೋ ರಾಕ್ಷಸಃ ಪರವೀರಹಾ।
07141016c ದ್ರೌಣಿಮಭ್ಯದ್ರವತ್ಕ್ರುದ್ಧೋ ಗಜೇಂದ್ರಮಿವ ಕೇಸರೀ।।

ರೋಷದಿಂದ ಕೆಂಗಣ್ಣನಾಗಿದ್ದ ಪರವೀರಹ ರಾಕ್ಷಸನು ಹೀಗೆ ಹೇಳಿ ಕ್ರುದ್ಧ ಕೇಸರಿಯು ಗಜೇಂದ್ರನನ್ನು ಹೇಗೋ ಹಾಗೆ ದ್ರೌಣಿಯನ್ನು ಆಕ್ರಮಣಿಸಿದನು.

07141017a ರಥಾಕ್ಷಮಾತ್ರೈರಿಷುಭಿರಭ್ಯವರ್ಷದ್ ಘಟೋತ್ಕಚಃ।
07141017c ರಥಿನಾಂ ಋಷಭಂ ದ್ರೌಣಿಂ ಧಾರಾಭಿರಿವ ತೋಯದಃ।।

ಮೋಡಗಳ ಮಳೆಯಂತೆ ರಥದ ಅಚ್ಚುಗಳ ಗಾತ್ರದ ಬಾಣಗಳ ಮಳೆಯನ್ನು ಘಟೋತ್ಕಚನು ರಥಿಗಳಲ್ಲಿ ಋಷಭ ದ್ರೌಣಿಯ ಮೇಲೆ ಸುರಿಸಿದನು.

07141018a ಶರವೃಷ್ಟಿಂ ತು ತಾಂ ಪ್ರಾಪ್ತಾಂ ಶರೈರಾಶೀವಿಷೋಪಮೈಃ।
07141018c ಶಾತಯಾಮಾಸ ಸಮರೇ ತರಸಾ ದ್ರೌಣಿರುತ್ಸ್ಮಯನ್।।

ಮೇಲೆ ಬೀಳುತ್ತಿರುವ ಆ ಶರವೃಷ್ಟಿಯನ್ನು ದ್ರೌಣಿಯು ಅಲ್ಲಗಳೆಯುತ್ತಾ ಸಮರದಲ್ಲಿ ತಕ್ಷಣವೇ ಸರ್ಪಗಳ ವಿಷದಂತಿರುವ ಶರಗಳಿಂದ ನಾಶಗೊಳಿಸಿದನು.

07141019a ತತಃ ಶರಶತೈಸ್ತೀಕ್ಷ್ಣೈರ್ಮರ್ಮಭೇದಿಭಿರಾಶುಗೈಃ।
07141019c ಸಮಾಚಿನೋದ್ರಾಕ್ಷಸೇಂದ್ರಂ ಘಟೋತ್ಕಚಮರಿಂದಮ।।

ಅನಂತರ ಆ ಅರಿಂದಮ ಅಶ್ವತ್ಥಾಮನು ನೂರು ಮರ್ಮಭೇದೀ ತೀಕ್ಷ್ಣ ಆಶುಗ ಶರಗಳಿಂದ ರಾಕ್ಷಸೇಂದ್ರ ಘಟೋತ್ಕಚನನ್ನು ಮುಚ್ಚಿದನು.

07141020a ಸ ಶರೈರಾಚಿತಸ್ತೇನ ರಾಕ್ಷಸೋ ರಣಮೂರ್ಧನಿ।
07141020c ವ್ಯಕಾಶತ ಮಹಾರಾಜ ಶ್ವಾವಿಚ್ಚಲಲಿತೋ ಯಥಾ।।

ಮಹಾರಾಜ! ಹಾಗೆ ರಣಮೂರ್ಧನಿಯಲ್ಲಿ ಶರಗಳಿಂದ ಚುಚ್ಚಲ್ಪಟ್ಟ ರಾಕ್ಷಸನು ಮುಳ್ಳುಹಂದಿಯಂತೆಯೇ ಪ್ರಕಾಶಿಸಿದನು.

07141021a ತತಃ ಕ್ರೋಧಸಮಾವಿಷ್ಟೋ ಭೈಮಸೇನಿಃ ಪ್ರತಾಪವಾನ್।
07141021c ಶರೈರವಚಕರ್ತೋಗ್ರೈರ್ದ್ರೌಣಿಂ ವಜ್ರಾಶನಿಸ್ವನೈಃ।।
07141022a ಕ್ಷುರಪ್ರೈರರ್ಧಚಂದ್ರೈಶ್ಚ ನಾರಾಚೈಃ ಸಶಿಲೀಮುಖೈಃ।
07141022c ವರಾಹಕರ್ಣೈರ್ನಾಲೀಕೈಸ್ತೀಕ್ಷ್ಣೈಶ್ಚಾಪಿ ವಿಕರ್ಣಿಭಿಃ।।

ಆಗ ಕ್ರೋಧಸಮಾವಿಷ್ಟ ಪ್ರತಾಪವಾನ್ ಭೈಮಸೇನಿಯು ವಜ್ರಾಯುಧದ ಮತ್ತು ಸಿಡಿಲಿನ ಪ್ರಭೆಗೆ ಸಮಾನ ಪ್ರಭೆಯುಳ್ಳ ಉಗ್ರ ಕ್ಷುರಪ್ರ, ಅರ್ಧಚಂದ್ರ, ನಾರಾಚ, ಶಿಲೀಮುಖ, ವರಾಹಕರ್ಣ, ನಾಲೀಕ ಮತ್ತು ವಿಕರ್ಣ ಇವೇ ಮೊದಲಾದ ಬಾಣಗಳಿಂದ ದ್ರೌಣಿಯನ್ನು ಬಹಳವಾಗಿ ಗಾಯಗೊಳಿಸಿದನು.

07141023a ತಾಂ ಶಸ್ತ್ರವೃಷ್ಟಿಮತುಲಾಂ ವಜ್ರಾಶನಿಸಮಸ್ವನಾಂ।
07141023c ಪತಂತೀಮುಪರಿ ಕ್ರುದ್ಧೋ ದ್ರೌಣಿರವ್ಯಥಿತೇಂದ್ರಿಯಃ।।
07141024a ಸುದುಃಸಹಾಂ ಶರೈರ್ಘೋರೈರ್ದಿವ್ಯಾಸ್ತ್ರಪ್ರತಿಮಂತ್ರಿತೈಃ।
07141024c ವ್ಯಧಮತ್ಸ ಮಹಾತೇಜಾ ಮಹಾಭ್ರಾಣೀವ ಮಾರುತಃ।।

ಮಹಾತೇಜಸ್ವಿ ದ್ರೌಣಿಯು ಸ್ವಲ್ಪವೂ ವ್ಯಥಿತನಾಗದೇ ಕ್ರುದ್ಧನಾಗಿ ಸಿಡಿಲಿನಂತೆ ಘೋರಶಬ್ಧಮಾಡುತ್ತಾ ತನ್ನ ಮೇಲೆ ಬೀಳುತ್ತಿದ್ದ ಸಹಿಸಲಸಾಧ್ಯ ಆ ಅತುಲ ಶಸ್ತ್ರವೃಷ್ಟಿಯನ್ನು ಮಂತ್ರಿಸಿದ ದಿವ್ಯಾಸ್ತ್ರಗಳಿಂದ ಕೂಡಿದ ಘೋರ ಶರಗಳಿಂದ ಚಂಡಮಾರುತವು ಮೋಡಗಳನ್ನು ಹೇಗೋ ಹಾಗೆ ನಾಶಗೊಳಿಸಿದನು.

07141025a ತತೋಽಂತರಿಕ್ಷೇ ಬಾಣಾನಾಂ ಸಂಗ್ರಾಮೋಽನ್ಯ ಇವಾಭವತ್।
07141025c ಘೋರರೂಪೋ ಮಹಾರಾಜ ಯೋಧಾನಾಂ ಹರ್ಷವರ್ಧನಃ।।

ಆಗ ಅಂತರಿಕ್ಷದಲ್ಲಿ ಬಾಣಗಳ ಸಂಗ್ರಾಮವೇ ನಡೆಯುತ್ತಿದೆಯೋ ಎಂದು ಅನ್ನಿಸುತ್ತಿತ್ತು. ಮಹಾರಾಜ! ಆ ಘೋರದೃಶ್ಯವು ಯೋಧರ ಹರ್ಷವನ್ನು ಹೆಚ್ಚಿಸುತ್ತಿತ್ತು.

07141026a ತತೋಽಸ್ತ್ರಸಂಘರ್ಷಕೃತೈರ್ವಿಸ್ಫುಲಿಂಗೈಃ ಸಮಂತತಃ।
07141026c ಬಭೌ ನಿಶಾಮುಖೇ ವ್ಯೋಮ ಖದ್ಯೋತೈರಿವ ಸಂವೃತಂ।।

ಅಸ್ತ್ರಗಳ ಪರಸ್ಪರ ಸಂಘರ್ಷಣೆಯಿಂದ ಹುಟ್ಟಿದ ಕಿಡಿಗಳಿಂದ ವ್ಯಾಪ್ತವಾದ ಆಕಾಶವು ಸಾಯಂಕಾಲ ಮಿಂಚುಹುಳುಗಳಿಂದ ವ್ಯಾಪ್ತವಾಗಿರುವಂತೆ ತೋರುತ್ತಿತ್ತು.

07141027a ಸ ಮಾರ್ಗಣಗಣೈರ್ದ್ರೌಣಿರ್ದಿಶಃ ಪ್ರಚ್ಚಾದ್ಯ ಸರ್ವತಃ।
07141027c ಪ್ರಿಯಾರ್ಥಂ ತವ ಪುತ್ರಾಣಾಂ ರಾಕ್ಷಸಂ ಸಮವಾಕಿರತ್।।

ನಿನ್ನ ಮಗನಿಗೆ ಪ್ರಿಯವಾದುದನ್ನು ಮಾಡಲೋಸುಗ ದ್ರೌಣಿಯು ಮಾರ್ಗಣಗಳ ರಾಶಿಯಿಂದ ಎಲ್ಲ ದಿಕ್ಕುಗಳನ್ನೂ ಮುಚ್ಚಿ, ರಾಕ್ಷಸನನ್ನೂ ಮುಚ್ಚಿದನು.

07141028a ತತಃ ಪ್ರವವೃತೇ ಯುದ್ಧಂ ದ್ರೌಣಿರಾಕ್ಷಸಯೋರ್ಮೃಧೇ।
07141028c ವಿಗಾಢೇ ರಜನೀಮಧ್ಯೇ ಶಕ್ರಪ್ರಹ್ರಾದಯೋರಿವ।।

ಆಗ ಆ ಗಾಢ ರಾತ್ರಿಯಲ್ಲಿ ರಣದಲ್ಲಿ ದ್ರೌಣಿ-ರಾಕ್ಷಸರ ನಡುವೆ ಶಕ್ರ-ಪ್ರಹ್ರಾದರ ನಡುವೆ ನಡೆದಂತೆ ಯುದ್ಧವು ನಡೆಯಿತು.

07141029a ತತೋ ಘಟೋತ್ಕಚೋ ಬಾಣೈರ್ದಶಭಿರ್ದ್ರೌಣಿಮಾಹವೇ।
07141029c ಜಘಾನೋರಸಿ ಸಂಕ್ರುದ್ಧಃ ಕಾಲಜ್ವಲನಸಮ್ನಿಭೈಃ।।

ಆಗ ಘಟೋತ್ಕಚನು ರಣದಲ್ಲಿ ಸಂಕ್ರುದ್ಧನಾಗಿ ಕಾಲಜ್ವಲನ ಪ್ರಕಾಶವುಳ್ಳ ಹತ್ತು ಬಾಣಗಳಿಂದ ದ್ರೌಣಿಯ ಎದೆಗೆ ಹೊಡೆದನು.

07141030a ಸ ತೈರಭ್ಯಾಯತೈರ್ವಿದ್ಧೋ ರಾಕ್ಷಸೇನ ಮಹಾಬಲಃ।
07141030c ಚಚಾಲ ಸಮರೇ ದ್ರೌಣಿರ್ವಾತನುನ್ನ ಇವ ದ್ರುಮಃ।
07141030e ಸ ಮೋಹಮನುಸಂಪ್ರಾಪ್ತೋ ಧ್ವಜಯಷ್ಟಿಂ ಸಮಾಶ್ರಿತಃ।।

ರಾಕ್ಷಸನ ಆ ಉದ್ದ ಬಾಣಗಳಿಂದ ಗಾಯಗೊಂಡ ಮಹಾಬಲ ದ್ರೌಣಿಯು ಸಮರದಲ್ಲಿ ಚಂಡಮಾರುತಕ್ಕೆ ಸಿಲುಕಿದ ವೃಕ್ಷದಂತೆ ಅಳ್ಳಾಡಿ ಹೋದನು. ಅವನು ಮೂರ್ಛೆಹೊಂದಿ ಧ್ವಜದಂಡವನ್ನು ಹಿಡಿದು ಕುಳಿತನು.

07141031a ತತೋ ಹಾಹಾಕೃತಂ ಸೈನ್ಯಂ ತವ ಸರ್ವಂ ಜನಾಧಿಪ।
07141031c ಹತಂ ಸ್ಮ ಮೇನಿರೇ ಸರ್ವೇ ತಾವಕಾಸ್ತಂ ವಿಶಾಂ ಪತೇ।।

ಜನಾಧಿಪ! ವಿಶಾಂಪತೇ! ಆಗ ನಿನ್ನ ಸೈನ್ಯದಲ್ಲಿ ಎಲ್ಲರೂ ಹಾಹಾಕಾರಮಾಡಿದರು. ನಿನ್ನವರೆಲ್ಲರೂ ಅವನು ಹತನಾದನೆಂದೇ ಅಂದುಕೊಂಡರು.

07141032a ತಂ ತು ದೃಷ್ಟ್ವಾ ತಥಾವಸ್ಥಮಶ್ವತ್ಥಾಮಾನಮಾಹವೇ।
07141032c ಪಾಂಚಾಲಾಃ ಸೃಂಜಯಾಶ್ಚೈವ ಸಿಂಹನಾದಂ ಪ್ರಚಕ್ರಿರೇ।।

ಯುದ್ಧದಲ್ಲಿ ಅಶ್ವತ್ಥಾಮನ ಆ ಅವಸ್ಥೆಯನ್ನು ನೋಡಿ ಪಾಂಚಾಲರು ಮತ್ತು ಸೃಂಜಯರು ಸಿಂಹನಾದಗೈದರು.

07141033a ಪ್ರತಿಲಭ್ಯ ತತಃ ಸಂಜ್ಞಾಮಶ್ವತ್ಥಾಮಾ ಮಹಾಬಲಃ।
07141033c ಧನುಃ ಪ್ರಪೀಡ್ಯ ವಾಮೇನ ಕರೇಣಾಮಿತ್ರಕರ್ಶನಃ।।
07141034a ಮುಮೋಚಾಕರ್ಣಪೂರ್ಣೇನ ಧನುಷಾ ಶರಮುತ್ತಮಂ।
07141034c ಯಮದಂಡೋಪಮಂ ಘೋರಮುದ್ದಿಶ್ಯಾಶು ಘಟೋತ್ಕಚಂ।।

ಆಗ ಸ್ವಲ್ಪಹೊತ್ತಿನಲ್ಲಿಯೇ ಎಚ್ಚೆತ್ತ ಅಮಿತ್ರಕರ್ಶನ ಮಹಾಬಲ ಅಶ್ವತ್ಥಾಮನು ಎಡಗೈಯಿಂದ ಧನುಸ್ಸನ್ನು ಮೀಟಿ ಧನುಸ್ಸನ್ನು ಆಕರ್ಣಾಂತವಾಗಿ ಸೆಳೆದು ಯಮದಂಡದಂತಿರುವ ಘೋರ ಉತ್ತಮ ಶರವನ್ನು ಘಟೋತ್ಕಚನ ಮೇಲೆ ಪ್ರಯೋಗಿಸಿದನು.

07141035a ಸ ಭಿತ್ತ್ವಾ ಹೃದಯಂ ತಸ್ಯ ರಾಕ್ಷಸಸ್ಯ ಶರೋತ್ತಮಃ।
07141035c ವಿವೇಶ ವಸುಧಾಮುಗ್ರಃ ಸುಪುಂಖಃ ಪೃಥಿವೀಪತೇ।।

ಪೃಥಿವೀಪತೇ! ಪುಂಖಗಳುಳ್ಳ ಆ ಉಗ್ರ ಉತ್ತಮ ಶರವು ರಾಕ್ಷಸನ ಹೃದಯವನ್ನು ಭೇದಿಸಿ ವಸುಧೆಯನ್ನು ಸೇರಿತು.

07141036a ಸೋಽತಿವಿದ್ಧೋ ಮಹಾರಾಜ ರಥೋಪಸ್ಥ ಉಪಾವಿಶತ್।
07141036c ರಾಕ್ಷಸೇಂದ್ರಃ ಸುಬಲವಾನ್ದ್ರೌಣಿನಾ ರಣಮಾನಿನಾ।।

ಮಹಾರಾಜ! ರಣಮಾನಿನಿ ದ್ರೌಣಿಯಿಂದ ಅತಿಯಾಗಿ ಗಾಯಗೊಂಡ ಬಲವಾನ್ ರಾಕ್ಷಸೇಂದ್ರನು ರಥದಲ್ಲಿಯೇ ಕುಸಿದು ಕುಳಿತುಕೊಂಡನು.

07141037a ದೃಷ್ಟ್ವಾ ವಿಮೂಢಂ ಹೈಡಿಂಬಂ ಸಾರಥಿಸ್ತಂ ರಣಾಜಿರಾತ್।
07141037c ದ್ರೌಣೇಃ ಸಕಾಶಾತ್ಸಂಭ್ರಾಂತಸ್ತ್ವಪನಿನ್ಯೇ ತ್ವರಾನ್ವಿತಃ।।

ಹೈಡಿಂಬನು ವಿಮೂಢನಾಗಿದ್ದುದನ್ನು ಕಂಡು ಅವನ ಸಾರಥಿಯು ತಕ್ಷಣವೇ ಗಾಬರಿಗೊಂಡು ಅವನನ್ನು ದ್ರೌಣಿಯ ಸಮೀಪದಿಂದ ದೂರಕ್ಕೆ ಕೊಂಡೊಯ್ದನು.

07141038a ತಥಾ ತು ಸಮರೇ ವಿದ್ಧ್ವಾ ರಾಕ್ಷಸೇಂದ್ರಂ ಘಟೋತ್ಕಚಂ।
07141038c ನನಾದ ಸುಮಹಾನಾದಂ ದ್ರೋಣಪುತ್ರೋ ಮಹಾಬಲಃ।।

ಹಾಗೆ ಸಮರದಲ್ಲಿ ರಾಕ್ಷಸೇಂದ್ರ ಘಟೋತ್ಕಚನನ್ನು ಗಾಯಗೊಳಿಸಿ ಮಹಾಬಲ ದ್ರೋಣಪುತ್ರನು ಜೋರಾಗಿ ಗರ್ಜಿಸಿದನು.

07141039a ಪೂಜಿತಸ್ತವ ಪುತ್ರೈಶ್ಚ ಸರ್ವಯೋಧೈಶ್ಚ ಭಾರತ।
07141039c ವಪುಷಾ ಪ್ರತಿಜಜ್ವಾಲ ಮಧ್ಯಾಹ್ನ ಇವ ಭಾಸ್ಕರಃ।।

ಭಾರತ! ನಿನ್ನ ಮಕ್ಕಳಿಂದ ಮತ್ತು ಸರ್ವಯೋಧರಿಂದ ಪ್ರಶಂಸಿಸಲ್ಪಟ್ಟ ಅಶ್ವತ್ಥಾಮನ ಮುಖವು ಮಧ್ಯಾಹ್ನದ ಭಾಸ್ಕರನಂತೆ ಬೆಳಗಿತು.

07141040a ಭೀಮಸೇನಂ ತು ಯುಧ್ಯಂತಂ ಭಾರದ್ವಾಜರಥಂ ಪ್ರತಿ।
07141040c ಸ್ವಯಂ ದುರ್ಯೋಧನೋ ರಾಜಾ ಪ್ರತ್ಯವಿಧ್ಯಚ್ಚಿತೈಃ ಶರೈಃ।।

ಭಾರದ್ವಾಜನ ರಥದ ಬಳಿ ಯುದ್ಧಮಾಡುತ್ತಿದ್ದ ಭೀಮಸೇನನನ್ನು ಸ್ವಯಂ ರಾಜಾ ದುರ್ಯೋಧನನು ನಿಶಿತ ಶರಗಳಿಂದ ಎದುರಿಸಿದನು.

07141041a ತಂ ಭೀಮಸೇನೋ ನವಭಿಃ ಶರೈರ್ವಿವ್ಯಾಧ ಮಾರಿಷ।
07141041c ದುರ್ಯೋಧನೋಽಪಿ ವಿಂಶತ್ಯಾ ಶರಾಣಾಂ ಪ್ರತ್ಯವಿಧ್ಯತ।।

ಮಾರಿಷ! ಭೀಮಸೇನನು ಅವನನ್ನು ಒಂಭತ್ತು ಶರಗಳಿಂದ ಹೊಡೆಯಲು, ದುರ್ಯೋಧನನೂ ಕೂಡ ಇಪ್ಪತ್ತು ಬಾಣಗಳಿಂದ ಅವನನ್ನು ಪ್ರತಿಯಾಗಿ ಹೊಡೆದನು.

07141042a ತೌ ಸಾಯಕೈರವಚ್ಚನ್ನಾವದೃಶ್ಯೇತಾಂ ರಣಾಜಿರೇ।
07141042c ಮೇಘಜಾಲಸಮಾಚ್ಚನ್ನೌ ನಭಸೀವೇಂದುಭಾಸ್ಕರೌ।।

ರಣಭೂಮಿಯಲ್ಲಿ ಸಾಯಕಗಳಿಂದ ಮುಚ್ಚಿಹೋಗಿದ್ದ ಅವರಿಬ್ಬರೂ ಆಕಾಶದಲ್ಲಿ ಮೇಘಗಳಿಂದ ಮುಚ್ಚಲ್ಪಟ್ಟ ಸೂರ್ಯ-ಚಂದ್ರರಂತೆ ಕಾಣುತ್ತಿದ್ದರು.

07141043a ಅಥ ದುರ್ಯೋಧನೋ ರಾಜಾ ಭೀಮಂ ವಿವ್ಯಾಧ ಪತ್ರಿಭಿಃ।
07141043c ಪಂಚಭಿರ್ಭರತಶ್ರೇಷ್ಠ ತಿಷ್ಠ ತಿಷ್ಠೇತಿ ಚಾಬ್ರವೀತ್।।

ಭರತಶ್ರೇಷ್ಠ! ಆಗ ರಾಜಾ ದುರ್ಯೋಧನನು ಭೀಮನನ್ನು ಐದು ಪತ್ರಿಗಳಿಂದ ಹೊಡೆದು ನಿಲ್ಲು ನಿಲ್ಲೆಂದು ಹೇಳಿದನು.

07141044a ತಸ್ಯ ಭೀಮೋ ಧನುಶ್ಚಿತ್ತ್ವಾ ಧ್ವಜಂ ಚ ನವಭಿಃ ಶರೈಃ।
07141044c ವಿವ್ಯಾಧ ಕೌರವಶ್ರೇಷ್ಠಂ ನವತ್ಯಾ ನತಪರ್ವಣಾಂ।।

ಭೀಮನು ಅವನ ಧನುಸ್ಸು ಧ್ವಜಗಳನ್ನು ಒಂಬತ್ತು ಬಾಣಗಳಿಂದ ತುಂಡರಿಸಿ ಆ ಕೌರವಶ್ರೇಷ್ಠನನ್ನು ತೊಂಭತ್ತು ನತಪರ್ವಣಗಳಿಂದ ಗಾಯಗೊಳಿಸಿದನು.

07141045a ತತೋ ದುರ್ಯೋಧನಃ ಕ್ರುದ್ಧೋ ಭೀಮಸೇನಸ್ಯ ಮಾರಿಷ।
07141045c ಚಿಕ್ಷೇಪ ಸ ಶರಾನ್ರಾಜನ್ಪಶ್ಯತಾಂ ಸರ್ವಧನ್ವಿನಾಂ।।

ರಾಜನ್! ಮಾರಿಷ! ಆಗ ಕ್ರುದ್ಧ ದುರ್ಯೋಧನನು ಭೀಮಸೇನನ ಮೇಲೆ ಸರ್ವಧನ್ವಿಗಳೂ ನೋಡುತ್ತಿರುವಂತೆ ಬಾಣಗಳನ್ನು ಪ್ರಯೋಗಿಸಿದನು.

07141046a ತಾನ್ನಿಹತ್ಯ ಶರಾನ್ಭೀಮೋ ದುರ್ಯೋಧನಧನುಶ್ಚ್ಯುತಾನ್।
07141046c ಕೌರವಂ ಪಂಚವಿಂಶತ್ಯಾ ಕ್ಷುದ್ರಕಾಣಾಂ ಸಮಾರ್ಪಯತ್।।

ದುರ್ಯೋಧನನು ಬಿಟ್ಟ ಆ ಶರಗಳನ್ನು ನಾಶಗೊಳಿಸಿ ಭೀಮಸೇನನು ಕೌರವನ ಮೇಲೆ ಇಪ್ಪತ್ತೈದು ಕ್ಷುದ್ರಕಗಳನ್ನು ಪ್ರಯೋಗಿಸಿದನು.

07141047a ದುರ್ಯೋಧನಸ್ತು ಸಂಕ್ರುದ್ಧೋ ಭೀಮಸೇನಸ್ಯ ಮಾರಿಷ।
07141047c ಕ್ಷುರಪ್ರೇಣ ಧನುಶ್ಚಿತ್ತ್ವಾ ದಶಭಿಃ ಪ್ರತ್ಯವಿಧ್ಯತ।।

ಮಾರಿಷ! ದುರ್ಯೋಧನನಾದರೋ ಸಂಕ್ರುದ್ಧನಾಗಿ ಕ್ಷುರಪ್ರದಿಂದ ಭೀಮಸೇನನ ಧನುಸ್ಸನ್ನು ತುಂಡರಿಸಿ ಹತ್ತರಿಂದ ಅವನನ್ನು ಹೊಡೆದನು.

07141048a ಅಥಾನ್ಯದ್ಧನುರಾದಾಯ ಭೀಮಸೇನೋ ಮಹಾಬಲಃ।
07141048c ವಿವ್ಯಾಧ ನೃಪತಿಂ ತೂರ್ಣಂ ಸಪ್ತಭಿರ್ನಿಶಿತೈಃ ಶರೈಃ।।

ಆಗ ಮಹಾಬಲ ಭೀಮಸೇನನು ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ತಕ್ಷಣವೇ ಏಳು ನಿಶಿತ ಶರಗಳಿಂದ ನೃಪತಿಯನ್ನು ಹೊಡೆದನು.

07141049a ತದಪ್ಯಸ್ಯ ಧನುಃ ಕ್ಷಿಪ್ರಂ ಚಿಚ್ಚೇದ ಲಘುಹಸ್ತವತ್।
07141049c ದ್ವಿತೀಯಂ ಚ ತೃತೀಯಂ ಚ ಚತುರ್ಥಂ ಪಂಚಮಂ ತಥಾ।।
07141050a ಆತ್ತಮಾತ್ತಂ ಮಹಾರಾಜ ಭೀಮಸ್ಯ ಧನುರಾಚ್ಚಿನತ್।
07141050c ತವ ಪುತ್ರೋ ಮಹಾರಾಜ ಜಿತಕಾಶೀ ಮದೋತ್ಕಟಃ।।

ಮಹಾರಾಜ! ಆಗ ಲಘುಹಸ್ತ ದುರ್ಯೋಧನನು ಅವನ ಆ ಧನುಸ್ಸನ್ನೂ ಬೇಗನೆ ಕತ್ತರಿಸಿದನು. ಮಹಾರಾಜ! ಹಾಗೆಯೇ ಮದೋತ್ಕಟ, ವಿಜಯವನ್ನು ಬಯಸಿದ ನಿನ್ನ ಮಗನು ಭೀಮನ ಎರಡನೆಯ, ಮೂರನೆಯ, ನಾಲ್ಕನೆಯ ಮತ್ತು ಐದನೆಯ ಧನುಸ್ಸುಗಳನ್ನೂ ಕ್ಷಣಮಾತ್ರದಲ್ಲಿ ಕತ್ತರಿಸಿದನು.

07141051a ಸ ತದಾ ಚಿದ್ಯಮಾನೇಷು ಕಾರ್ಮುಕೇಷು ಪುನಃ ಪುನಃ।
07141051c ಶಕ್ತಿಂ ಚಿಕ್ಷೇಪ ಸಮರೇ ಸರ್ವಪಾರಶವೀಂ ಶುಭಾಂ।।

ಹಾಗೆ ತನ್ನ ಧನ್ನುಸ್ಸನ್ನು ಪುನಃ ಪುನಃ ತುಂಡರಿಸುತ್ತಿರಲು ಭೀಮಸೇನನು ಸಮರದಲ್ಲಿ ಸಂಪೂರ್ಣವಾಗಿ ಉಕ್ಕಿನಿಂದ ಮಾಡಲ್ಪಟ್ಟಿದ್ದ ಶುಭ ಶಕ್ತಿಯನ್ನು ದುರ್ಯೋಧನನ ಮೇಲೆ ಎಸೆದನು.

07141052a ಅಪ್ರಾಪ್ತಾಮೇವ ತಾಂ ಶಕ್ತಿಂ ತ್ರಿಧಾ ಚಿಚ್ಚೇದ ಕೌರವಃ।
07141052c ಪಶ್ಯತಃ ಸರ್ವಲೋಕಸ್ಯ ಭೀಮಸ್ಯ ಚ ಮಹಾತ್ಮನಃ।।

ಆ ಶಕ್ತಿಯು ಬಂದು ತಲುಪುವುದರೊಳಗೇ ಭೀಮ ಮತ್ತು ಸರ್ವಲೋಕಗಳೂ ನೋಡುತ್ತಿರುವಂತೆಯೇ ಮಹಾತ್ಮ ಕೌರವನು ಅದನ್ನು ಮೂರು ಭಾಗಗಳಾಗಿ ತುಂಡರಿಸಿದನು.

07141053a ತತೋ ಭೀಮೋ ಮಹಾರಾಜ ಗದಾಂ ಗುರ್ವೀಂ ಮಹಾಪ್ರಭಾಂ।
07141053c ಚಿಕ್ಷೇಪಾವಿಧ್ಯ ವೇಗೇನ ದುರ್ಯೋಧನರಥಂ ಪ್ರತಿ।।

ಮಹಾರಾಜ! ಆಗ ಭೀಮನು ಮಹಾಪ್ರಭೆಯುಳ್ಳ ಭಾರ ಗದೆಯನ್ನು ವೇಗದಿಂದ ದುರ್ಯೋಧನನ ರಥದ ಮೇಲೆ ಎಸೆದನು.

07141054a ತತಃ ಸಾ ಸಹಸಾ ವಾಹಾಂಸ್ತವ ಪುತ್ರಸ್ಯ ಸಮ್ಯುಗೇ।
07141054c ಸಾರಥಿಂ ಚ ಗದಾ ಗುರ್ವೀ ಮಮರ್ದ ಭರತರ್ಷಭ।।

ಭರತರ್ಷಭ! ಆಗ ಆ ಭಾರ ಗದೆಯು ಒಮ್ಮೆಲೇ ರಣದಲ್ಲಿ ನಿನ್ನ ಮಗನ ವಾಹನ ಮತ್ತು ಸಾರಥಿಯನ್ನು ಧ್ವಂಸಮಾಡಿತು.

07141055a ಪುತ್ರಸ್ತು ತವ ರಾಜೇಂದ್ರ ರಥಾದ್ಧೇಮಪರಿಷ್ಕೃತಾತ್।
07141055c ಆಪ್ಲುತಃ ಸಹಸಾ ಯಾನಂ ನಂದಕಸ್ಯ ಮಹಾತ್ಮನಃ।।

ರಾಜೇಂದ್ರ! ನಿನ್ನ ಮಗನಾದರೋ ಆ ಹೇಮಪರಿಷ್ಕೃತ ರಥದಿಂದ ಕೆಳಕ್ಕೆ ಹಾರಿ ಒಮ್ಮೆಲೇ ಮಹಾತ್ಮ ನಂದಕನ ರಥಕ್ಕೆ ಹಾರಿದನು.

07141056a ತತೋ ಭೀಮೋ ಹತಂ ಮತ್ವಾ ತವ ಪುತ್ರಂ ಮಹಾರಥಂ।
07141056c ಸಿಂಹನಾದಂ ಮಹಚ್ಚಕ್ರೇ ತರ್ಜಯನ್ನಿವ ಕೌರವಾನ್।।

ಆಗ ಮಹಾರಥ ನಿನ್ನ ಮಗನು ಹತನಾದನೆಂದು ತಿಳಿದು ಭೀಮನು ಕೌರವರನ್ನು ಬೆದರಿಸುತ್ತಾ ಮಹಾ ಸಿಂಹನಾದವನ್ನು ಮಾಡಿದನು.

07141057a ತಾವಕಾಃ ಸೈನಿಕಾಶ್ಚಾಪಿ ಮೇನಿರೇ ನಿಹತಂ ನೃಪಂ।
07141057c ತತೋ ವಿಚುಕ್ರುಶುಃ ಸರ್ವೇ ಹಾ ಹೇತಿ ಚ ಸಮಂತತಃ।।

ನಿನ್ನ ಸೈನಿಕರು ಕೂಡ ನೃಪನು ಹತನಾದನೆಂದೇ ಅಂದುಕೊಂಡರು. ಎಲ್ಲ ಕಡೆ ಎಲ್ಲರೂ ಹಾ ಹಾ ಕಾರಮಾಡಿದರು.

07141058a ತೇಷಾಂ ತು ನಿನದಂ ಶ್ರುತ್ವಾ ತ್ರಸ್ತಾನಾಂ ಸರ್ವಯೋಧಿನಾಂ।
07141058c ಭೀಮಸೇನಸ್ಯ ನಾದಂ ಚ ಶ್ರುತ್ವಾ ರಾಜನ್ಮಹಾತ್ಮನಃ।।
07141059a ತತೋ ಯುಧಿಷ್ಠಿರೋ ರಾಜಾ ಹತಂ ಮತ್ವಾ ಸುಯೋಧನಂ।
07141059c ಅಭ್ಯವರ್ತತ ವೇಗೇನ ಯತ್ರ ಪಾರ್ಥೋ ವೃಕೋದರಃ।।

ರಾಜನ್! ಆ ಎಲ್ಲ ನಡುಗುತ್ತಿದ್ದ ಸರ್ವಯೋಧರ ನಿನಾದವನ್ನು ಕೇಳಿ, ಮಹಾತ್ಮ ಭೀಮಸೇನನ ನಾದವನ್ನೂ ಕೇಳಿ ರಾಜಾ ಯುಧಿಷ್ಠಿರನೂ ಕೂಡ ಸುಯೋಧನನು ಹತನಾದನೆಂದೇ ತಿಳಿದು ವೇಗವಾಗಿ ಪಾರ್ಥ ವೃಕೋದರನಿದ್ದಲ್ಲಿಗೆ ಧಾವಿಸಿದನು.

07141060a ಪಾಂಚಾಲಾಃ ಕೇಕಯಾ ಮತ್ಸ್ಯಾಃ ಸೃಂಜಯಾಶ್ಚ ವಿಶಾಂ ಪತೇ।
07141060c ಸರ್ವೋದ್ಯೋಗೇನಾಭಿಜಗ್ಮುರ್ದ್ರೋಣಮೇವ ಯುಯುತ್ಸಯಾ।।

ವಿಶಾಂಪತೇ! ದ್ರೋಣನೊಡನೆಯೇ ಯುದ್ಧಮಾಡಬೇಕೆಂದು ಪಾಂಚಾಲರು, ಕೇಕಯರು, ಮತ್ಸ್ಯರು ಮತ್ತು ಸೃಂಜಯರು ಸರ್ವ ಪ್ರಯತ್ನಗಳನ್ನೂ ಮಾಡುತ್ತಿದ್ದರು.

07141061a ತತ್ರಾಸೀತ್ಸುಮಹದ್ಯುದ್ಧಂ ದ್ರೋಣಸ್ಯಾಥ ಪರೈಃ ಸಹ।
07141061c ಘೋರೇ ತಮಸಿ ಮಗ್ನಾನಾಂ ನಿಘ್ನತಾಮಿತರೇತರಂ।।

ಆ ಘೋರ ಕತ್ತಲೆಯಲ್ಲಿ ಪರಸ್ಪರರನ್ನು ಸಂಹರಿಸುವುದರಲ್ಲಿ ಮಗ್ನರಾಗಿದ್ದ ದ್ರೋಣ ಮತ್ತು ಶತ್ರುಗಳ ನಡುವೆ ಮಹಾ ಯುದ್ಧವು ನಡೆಯಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ದುರ್ಯೋಧನಾಪಯಾನೇ ಏಕಚತ್ವಾರಿಂಶಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ದುರ್ಯೋಧನಾಪಯಾನ ಎನ್ನುವ ನೂರಾನಲ್ವತ್ತೊಂದನೇ ಅಧ್ಯಾಯವು.