ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಘಟೋತ್ಕಚವಧ ಪರ್ವ
ಅಧ್ಯಾಯ 139
ಸಾರ
ರಣಭೂಮಿಯ ವರ್ಣನೆ (1-8). ಧೃತರಾಷ್ಟ್ರನ ಪ್ರಶ್ನೆ (9-15). ದುರ್ಯೋಧನನು ದ್ರೋಣನ ರಕ್ಷಣೆಗೆ ಆದೇಶವನ್ನಿತ್ತಿದುದು (16-28). ಯುದ್ಧ ವರ್ಣನೆ (29-33).
07139001 ಸಂಜಯ ಉವಾಚ।
07139001a ಪ್ರಕಾಶಿತೇ ತಥಾ ಲೋಕೇ ರಜಸಾ ಚ ತಮೋವೃತೇ।
07139001c ಸಮಾಜಗ್ಮುರಥೋ ವೀರಾಃ ಪರಸ್ಪರವಧೈಷಿಣಃ।।
ಸಂಜಯನು ಹೇಳಿದನು: “ಕತ್ತಲೆಯು ತುಂಬಿದ್ದ ಆ ರಾತ್ರಿಯಲ್ಲಿ ಲೋಕವು ಹಾಗೆ ಪ್ರಕಾಶಿತಗೊಂಡಿರಲು ಪರಸ್ಪರರನ್ನು ವಧಿಸಲು ಬಯಸಿದ ವೀರರಥರು ಸೇರಿದರು.
07139002a ತೇ ಸಮೇತ್ಯ ರಣೇ ರಾಜಂ ಶಸ್ತ್ರಪ್ರಾಸಾಸಿಧಾರಿಣಃ।
07139002c ಪರಸ್ಪರಮುದೈಕ್ಷಂತ ಪರಸ್ಪರಕೃತಾಗಸಃ।।
ರಾಜನ್! ಪರಸ್ಪರರನ್ನು ಅಪರಾಧಿಗಳೆಂದು ತಿಳಿದು ಶಸ್ತ್ರ-ಪ್ರಾಸಗಳನ್ನು ಹಿಡಿದ ಅವರು ರಣದಲ್ಲಿ ಒಟ್ಟಾಗಿ ಪರಸ್ಪರರನ್ನು ವೀಕ್ಷಿಸುತ್ತಿದ್ದರು.
07139003a ಪ್ರದೀಪಾನಾಂ ಸಹಸ್ರೈಶ್ಚ ದೀಪ್ಯಮಾನೈಃ ಸಮಂತತಃ।
07139003c ವಿರರಾಜ ತದಾ ಭೂಮಿರ್ದ್ಯೌರ್ಗ್ರಹೈರಿವ ಭಾರತ।।
ಭಾರತ! ಎಲ್ಲ ಕಡೆಗಳಲ್ಲಿ ಸಹಸ್ರಾರು ದೀಪಗಳಿಂದ ಬೆಳಗುತ್ತಿದ್ದ ಆ ರಣಭೂಮಿಯು ಗ್ರಹಗಳಿಂದ ತುಂಬಿದ ಆಕಾಶದಂತೆ ವಿರಾಜಿಸುತ್ತಿತ್ತು.
07139004a ಉಲ್ಕಾಶತೈಃ ಪ್ರಜ್ವಲಿತೈ ರಣಭೂಮಿರ್ವ್ಯರಾಜತ।
07139004c ದಹ್ಯಮಾನೇವ ಲೋಕಾನಾಮಭಾವೇ ವೈ ವಸುಂಧರಾ।।
ನೂರಾರು ದೀವಟಿಗೆಗಳಿಂದ ಪ್ರಜ್ವಲಿತಗೊಂಡ ಆ ರಣಭೂಮಿಯು ಪ್ರಳಯಕಾಲದಲ್ಲಿ ದಹಿಸುತ್ತಿರುವ ವಸುಂಧರೆಯಂತೆ ವಿರಾಜಿಸುತ್ತಿತ್ತು.
07139005a ಪ್ರಾದೀಪ್ಯಂತ ದಿಶಃ ಸರ್ವಾಃ ಪ್ರದೀಪೈಸ್ತೈಃ ಸಮಂತತಃ।
07139005c ವರ್ಷಾಪ್ರದೋಷೇ ಖದ್ಯೋತೈರ್ವೃತಾ ವೃಕ್ಷಾ ಇವಾಬಭುಃ।।
ಸುತ್ತಲೂ ಇದ್ದ ಆ ದೀವಟಿಗೆಗಳಿಂದ ಎಲ್ಲ ದಿಕ್ಕುಗಳೂ ಬೆಳಗಿ, ವರ್ಷಾಕಾಲದ ಪ್ರದೋಷಕಾಲದಲ್ಲಿ ಮಿಂಚುಹುಳುಗಳಿಂದ ತುಂಬಿದ ವೃಕ್ಷಗಳಂತೆ ತೋರುತ್ತಿದ್ದವು.
07139006a ಅಸಜ್ಜಂತ ತತೋ ವೀರಾ ವೀರೇಷ್ವೇವ ಪೃಥಕ್ ಪೃಥಕ್।
07139006c ನಾಗಾ ನಾಗೈಃ ಸಮಾಜಗ್ಮುಸ್ತುರಗಾಃ ಸಹ ವಾಜಿಭಿಃ।।
ಅಲ್ಲಿ ವೀರರು ವೀರರೊಂದಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಯುದ್ಧದಲ್ಲಿ ತೊಡಗಿದರು. ಆನೆಗಳು ಆನೆಗಳೊಡನೆಯೂ ಅಶ್ವಾರೋಹಿಗಳು ಅಶ್ವಾರೋಹಿಗಳೊಡನೆಯೂ ಯುದ್ಧದಲ್ಲಿ ತೊಡಗಿದರು.
07139007a ರಥಾ ರಥವರೈರೇವ ಸಮಾಜಗ್ಮುರ್ಮುದಾನ್ವಿತಾಃ।
07139007c ತಸ್ಮಿನ್ರಾತ್ರಿಮುಖೇ ಘೋರೇ ಪುತ್ರಸ್ಯ ತವ ಶಾಸನಾತ್।।
ಆ ಘೋರ ರಾತ್ರಿಯ ಪ್ರಾರಂಭದಲ್ಲಿ ನಿನ್ನ ಮಗನ ಶಾಸನದಂತೆ ರಥಾರೂಢರು ಮುದಾನ್ವಿತರಾಗಿ ರಥಾರೂಢರೊಂದಿಗೇ ಯುದ್ಧದಲ್ಲಿ ತೊಡಗಿದರು.
07139008a ತತೋಽರ್ಜುನೋ ಮಹಾರಾಜ ಕೌರವಾಣಾಮನೀಕಿನೀಂ।
07139008c ವ್ಯಧಮತ್ತ್ವರಯಾ ಯುಕ್ತಃ ಕ್ಷಪಯನ್ಸರ್ವಪಾರ್ಥಿವಾನ್।।
ಮಹಾರಾಜ! ಆಗ ಅರ್ಜುನನು ತ್ವರೆಮಾಡಿ ಎಲ್ಲ ಪಾರ್ಥಿವರನ್ನೂ ಸಂಹರಿಸುತ್ತಾ ಕೌರವರ ಸೇನೆಯನ್ನು ಧ್ವಂಸಗೊಳಿಸಲು ಉಪಕ್ರಮಿಸಿದನು.”
07139009 ಧೃತರಾಷ್ಟ್ರ ಉವಾಚ।
07139009a ತಸ್ಮಿನ್ಪ್ರವಿಷ್ಟೇ ಸಂರಬ್ಧೇ ಮಮ ಪುತ್ರಸ್ಯ ವಾಹಿನೀಂ।
07139009c ಅಮೃಷ್ಯಮಾಣೇ ದುರ್ಧರ್ಷೇ ಕಿಂ ವ ಆಸೀನ್ಮನಸ್ತದಾ।।
ಧೃತರಾಷ್ಟ್ರನು ಹೇಳಿದನು: “ಅಸಹನಶೀಲ ದುರ್ಧರ್ಷ ಅರ್ಜುನನು ಕೋಪಾವಿಷ್ಟನಾಗಿ ನನ್ನ ಮಗನ ಸೇನೆಯನ್ನು ಪ್ರವೇಶಿಸಿದಾಗ ನಿಮ್ಮ ಮನಸ್ಸಿನ ಸ್ಥಿತಿಯು ಹೇಗಿದ್ದಿತು?
07139010a ಕಿಮಮನ್ಯಂತ ಸೈನ್ಯಾನಿ ಪ್ರವಿಷ್ಟೇ ಶತ್ರುತಾಪನೇ।
07139010c ದುರ್ಯೋಧನಶ್ಚ ಕಿಂ ಕೃತ್ಯಂ ಪ್ರಾಪ್ತಕಾಲಮಮನ್ಯತ।।
ಆ ಶತ್ರುತಾಪನನು ಪ್ರವೇಶಿಸಲು ನನ್ನ ಸೇನೆಗಳು ಏನುಮಾಡಿದವು? ಆಗ ದುರ್ಯೋಧನನೂ ಕೂಡ ಏನು ಮಾಡಬೇಕೆಂದು ನಿಶ್ಚಯಿಸಿದನು?
07139011a ಕೇ ಚೈನಂ ಸಮರೇ ವೀರಂ ಪ್ರತ್ಯುದ್ಯಯುರರಿಂದಮಂ।
07139011c ಕೇಽರಕ್ಷನ್ದಕ್ಷಿಣಂ ಚಕ್ರಂ ಕೇ ಚ ದ್ರೋಣಸ್ಯ ಸವ್ಯತಃ।।
07139012a ಕೇ ಪೃಷ್ಠತೋಽಸ್ಯ ಹ್ಯಭವನ್ವೀರಾ ವೀರಸ್ಯ ಯುಧ್ಯತಃ।
07139012c ಕೇ ಪುರಸ್ತಾದಗಚ್ಚಂತ ನಿಘ್ನತಃ ಶಾತ್ರವಾನ್ರಣೇ।।
ಸಮರದಲ್ಲಿ ಆ ವೀರ ಅರಿಂದಮನನ್ನು ಯಾರು ಎದುರಿಸಿ ಯುದ್ಧಮಾಡಿದರು? ದ್ರೋಣನ ಎಡ ಮತ್ತು ಬಲ ಚಕ್ರಗಳನ್ನು ಯಾರು ರಕ್ಷಿಸುತ್ತಿದ್ದರು? ಆ ವೀರನ ಮುಂದುಗಡೆ ಇದ್ದುಕೊಂಡು ಯಾವ ವೀರನು ಆ ವೀರ ಅರ್ಜುನನೊಂದಿಗೆ ಯುದ್ಧಮಾಡಿದನು? ರಣದಲ್ಲಿ ಶತ್ರುಗಳನ್ನು ಸಂಹರಿಸುತ್ತಾ ಅವನ ರಥದ ಮುಂದೆ ಯಾರು ಹೋಗುತ್ತಿದ್ದರು?
07139013a ಯತ್ಪ್ರಾವಿಶನ್ಮಹೇಷ್ವಾಸಃ ಪಾಂಚಾಲಾನಪರಾಜಿತಃ।
07139013c ನೃತ್ಯನ್ನಿವ ನರವ್ಯಾಘ್ರೋ ರಥಮಾರ್ಗೇಷು ವೀರ್ಯವಾನ್।।
ಮಹೇಷ್ವಾಸ, ಅಪರಾಜಿತ, ವೀರ್ಯವಾನ್ ನರವ್ಯಾಘ್ರ ದ್ರೋಣನು ರಥಮಾರ್ಗದಲ್ಲಿ ನರ್ತಿಸುತ್ತಿರುವನೇ ಎನ್ನುವಂತೆ ಪಾಂಚಾಲರ ಸೇನೆಯನ್ನು ಪ್ರವೇಶಿಸಿದ್ದನು.
07139014a ದದಾಹ ಚ ಶರೈರ್ದ್ರೋಣಃ ಪಾಂಚಾಲಾನಾಂ ರಥವ್ರಜಾನ್।
07139014c ಧೂಮಕೇತುರಿವ ಕ್ರುದ್ಧಃ ಸ ಕಥಂ ಮೃತ್ಯುಮೀಯಿವಾನ್।।
ಧೂಮಕೇತುವಂತೆ ಕ್ರುದ್ಧನಾಗಿ ದ್ರೋಣನು ಶರಗಳಿಂದ ಪಾಂಚಾಲರ ರಥಶ್ರೇಣಿಗಳನ್ನು ಸುಡುತ್ತಿದ್ದನು. ಅಂಥವನು ಹೇಗೆ ಮೃತ್ಯುವಿಗೀಡಾದನು?
07139015a ಅವ್ಯಗ್ರಾನೇವ ಹಿ ಪರಾನ್ಕಥಯಸ್ಯಪರಾಜಿತಾನ್।
07139015c ಹತಾಂಶ್ಚೈವ ವಿಷಣ್ಣಾಂಶ್ಚ ವಿಪ್ರಕೀರ್ಣಾಂಶ್ಚ ಶಂಸಸಿ।
07139015e ರಥಿನೋ ವಿರಥಾಂಶ್ಚೈವ ಕೃತಾನ್ಯುದ್ಧೇಷು ಮಾಮಕಾನ್।।
ಎದುರಾಳಿಗಳು ಅವ್ಯಗ್ರರೂ ಅಪರಾಜಿತರೂ ಆಗಿದ್ದರೆಂದು ಹೇಳುತ್ತಿರುವೆ. ಆದರೆ ನಮ್ಮವರು ಹತರಾದರೆಂದೂ, ವಿಷಣ್ಣರಾಗಿದ್ದರೆಂದೂ, ಚದುರಿಹೋಗಿದ್ದರೆಂದೂ, ರಥಿಗಳು ವಿರಥರಾಗಿ ಹೋದರೆಂದೂ ಹೇಳುತ್ತಿರುವೆ!”
07139016 ಸಂಜಯ ಉವಾಚ।
07139016a ದ್ರೋಣಸ್ಯ ಮತಮಾಜ್ಞಾಯ ಯೋದ್ಧುಕಾಮಸ್ಯ ತಾಂ ನಿಶಾಂ।
07139016c ದುರ್ಯೋಧನೋ ಮಹಾರಾಜ ವಶ್ಯಾನ್ ಭ್ರಾತೄನಭಾಷತ।।
07139017a ವಿಕರ್ಣಂ ಚಿತ್ರಸೇನಂ ಚ ಮಹಾಬಾಹುಂ ಚ ಕೌರವಂ।
07139017c ದುರ್ಧರ್ಷಂ ದೀರ್ಘಬಾಹುಂ ಚ ಯೇ ಚ ತೇಷಾಂ ಪದಾನುಗಾಃ।।
ಸಂಜಯನು ಹೇಳಿದನು: “ಮಹಾರಾಜ! ಆ ರಾತ್ರಿಯಲ್ಲಿ ದ್ರೋಣನು ಯುದ್ಧಮಾಡಲು ಬಯಸುತ್ತಿದ್ದಾನೆಂದು ತಿಳಿದ ದುರ್ಯೋಧನನು ತನ್ನ ವಶವರ್ತಿಗಳಾಗಿದ್ದ ಅನುಜರಿಗೆ – ವಿಕರ್ಣ, ಚಿತ್ರಸೇನ, ಮಹಾಬಾಹು ಕೌರವ ದುರ್ಧರ್ಷ, ದೀರ್ಘಬಾಹು ಮತ್ತು ಅವರ ಅನುಯಾಯಿಗಳಿಗೆ ಹೇಳಿದನು:
07139018a ದ್ರೋಣಂ ಯತ್ತಾಃ ಪರಾಕ್ರಾಂತಾಃ ಸರ್ವೇ ರಕ್ಷತ ಪೃಷ್ಠತಃ।
07139018c ಹಾರ್ದಿಕ್ಯೋ ದಕ್ಷಿಣಂ ಚಕ್ರಂ ಶಲ್ಯಶ್ಚೈವೋತ್ತರಂ ತಥಾ।।
“ಪರಾಕ್ರಾಂತರಾದ ನೀವೆಲ್ಲರೂ ಪ್ರಯತ್ನಪಟ್ಟು ದ್ರೋಣನನ್ನು ಹಿಂದಿನಿಂದ ರಕ್ಷಿಸಿ. ಹಾಗೆಯೇ ಹಾರ್ದಿಕ್ಯ ಕೃತವರ್ಮನು ಅವನ ಬಲಚಕ್ರವನ್ನೂ ಶಲ್ಯನು ಎಡ ಚಕ್ರವನ್ನೂ ರಕ್ಷಿಸಲಿ!”
07139019a ತ್ರಿಗರ್ತಾನಾಂ ಚ ಯೇ ಶೂರಾ ಹತಶಿಷ್ಟಾ ಮಹಾರಥಾಃ।
07139019c ತಾಂಶ್ಚೈವ ಸರ್ವಾನ್ಪುತ್ರಸ್ತೇ ಸಮಚೋದಯದಗ್ರತಃ।।
ತ್ರಿಗರ್ತರಲ್ಲಿ ಅಳಿದುಳಿದಿದ್ದ ಮಹಾರಥರೆಲ್ಲರನ್ನು ಕೂಡ ನಿನ್ನ ಮಗನು ದ್ರೋಣನ ರಥದ ಮುಂಬಾಗದಲ್ಲಿ ಹೋಗುವಂತೆ ಪ್ರಚೋದಿಸಿದನು.
07139020a ಆಚಾರ್ಯೋ ಹಿ ಸುಸಮ್ಯತ್ತೋ ಭೃಶಂ ಯತ್ತಾಶ್ಚ ಪಾಂಡವಾಃ।
07139020c ತಂ ರಕ್ಷತ ಸುಸಮ್ಯತ್ತಾ ನಿಘ್ನಂತಂ ಶಾತ್ರವಾನ್ರಣೇ।।
“ಆಚಾರ್ಯನು ಚೆನ್ನಾಗಿ ಪ್ರಯತ್ನಿಸುತ್ತಿರುವನು. ಪಾಂಡವರೂ ಕೂಡ ಚೆನ್ನಾಗಿ ಪ್ರಯತ್ನಿಸುತ್ತಿದ್ದಾರೆ. ರಣದಲ್ಲಿ ಶತ್ರುಗಳನ್ನು ಸಂಹರಿಸುವ ದ್ರೋಣನನ್ನು ನೀವು ಅತಿ ಪ್ರಯತ್ನದಿಂದ ರಕ್ಷಿಸಿರಿ.
07139021a ದ್ರೋಣೋ ಹಿ ಬಲವಾನ್ಯುದ್ಧೇ ಕ್ಷಿಪ್ರಹಸ್ತಃ ಪರಾಕ್ರಮೀ।
07139021c ನಿರ್ಜಯೇತ್ತ್ರಿದಶಾನ್ಯುದ್ಧೇ ಕಿಮು ಪಾರ್ಥಾನ್ಸಸೋಮಕಾನ್।।
ಏಕೆಂದರೆ ದ್ರೋಣನೇ ಬಲವಾನನು. ಯುದ್ಧದಲ್ಲಿ ವೇಗದ ಕೈಚಳಕವುಳ್ಳವನು. ಪರಾಕ್ರಮಿಯು. ಯುದ್ಧದಲ್ಲಿ ತ್ರಿದಶರನ್ನೂ ಜಯಿಸಬಲ್ಲನು. ಇನ್ನು ಸೋಮಕರೊಂದಿಗೆ ಪಾರ್ಥರು ಯಾವ ಲೆಖ್ಕಕ್ಕೆ?
07139022a ತೇ ಯೂಯಂ ಸಹಿತಾಃ ಸರ್ವೇ ಭೃಶಂ ಯತ್ತಾ ಮಹಾರಥಾಃ।
07139022c ದ್ರೋಣಂ ರಕ್ಷತ ಪಾಂಚಾಲ್ಯಾದ್ಧೃಷ್ಟದ್ಯುಮ್ನಾನ್ಮಹಾರಥಾತ್।।
ನೀವೆಲ್ಲ ಮಹಾರಥರೂ ಒಟ್ಟಾಗಿ ಬಹಳ ಪ್ರಯತ್ನದಿಂದ ದ್ರೋಣನನ್ನು ಮಹಾರಥ ಪಾಂಚಾಲ್ಯ ಧೃಷ್ಟದ್ಯುಮ್ನನಿಂದ ರಕ್ಷಿಸಿರಿ!
07139023a ಪಾಂಡವೇಯೇಷು ಸೈನ್ಯೇಷು ಯೋಧಂ ಪಶ್ಯಾಮ್ಯಹಂ ನ ತಂ।
07139023c ಯೋ ಜಯೇತ ರಣೇ ದ್ರೋಣಂ ಧೃಷ್ಟದ್ಯುಮ್ನಾದೃತೇ ನೃಪಾಃ।।
ನೃಪರೇ! ಧೃಷ್ಟದ್ಯುಮ್ನನನ್ನು ಬಿಟ್ಟು ಪಾಂಡವರ ಸೇನೆಯಲ್ಲಿ ರಣದಲ್ಲಿ ದ್ರೋಣನನ್ನು ಜಯಿಸಬಲ್ಲ ಬೇರೆ ಯೋಧರು ಯಾರನ್ನೂ ನಾನು ಕಾಣೆ!
07139024a ತಸ್ಯ ಸರ್ವಾತ್ಮನಾ ಮನ್ಯೇ ಭಾರದ್ವಾಜಸ್ಯ ರಕ್ಷಣಂ।
07139024c ಸ ಗುಪ್ತಃ ಸೋಮಕಾನ್ ಹನ್ಯಾತ್ಸೃಂಜಯಾಂಶ್ಚ ಸರಾಜಕಾನ್।।
ಭಾರದ್ವಾಜನ ರಕ್ಷಣೆಯು ನಮ್ಮೆಲ್ಲರ ಕರ್ತವ್ಯವೆಂದು ಭಾವಿಸಿರಿ. ಹಾಗೆ ನಮ್ಮಿಂದ ರಕ್ಷಿಸಲ್ಪಟ್ಟರೆ ಅವನು ರಾಜರೊಂದಿಗೆ ಸೃಂಜಯರನ್ನು ಸಂಹರಿಸಬಲ್ಲನು.
07139025a ಸೃಂಜಯೇಷ್ವಥ ಸರ್ವೇಷು ನಿಹತೇಷು ಚಮೂಮುಖೇ।
07139025c ಧೃಷ್ಟದ್ಯುಮ್ನಂ ರಣೇ ದ್ರೌಣಿರ್ನಾಶಯಿಷ್ಯತ್ಯಸಂಶಯಂ।।
ಹಾಗೆ ಸೃಂಜಯರು ಎಲ್ಲರೂ ಹತರಾದನಂತರ ರಣಭೂಮಿಯಲ್ಲಿ ಧೃಷ್ಟದ್ಯುಮ್ನನನ್ನು ದ್ರೌಣಿ ಅಶ್ವತ್ಥಾಮನು ಸಂಹರಿಸುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.
07139026a ತಥಾರ್ಜುನಂ ರಣೇ ಕರ್ಣೋ ವಿಜೇಷ್ಯತಿ ಮಹಾರಥಃ।
07139026c ಭೀಮಸೇನಮಹಂ ಚಾಪಿ ಯುದ್ಧೇ ಜೇಷ್ಯಾಮಿ ದಂಶಿತಃ।।
ಹಾಗೆಯೇ ರಣದಲ್ಲಿ ಮಹಾರಥ ಕರ್ಣನು ಅರ್ಜುನನನ್ನು ಜಯಿಸುತ್ತಾನೆ. ಕವಚಧಾರಿಯಾಗಿ ನಾನು ಯುದ್ಧದಲ್ಲಿ ಭೀಮಸೇನನನ್ನು ಜಯಿಸುತ್ತೇನೆ.
07139027a ಸೋಽಯಂ ಮಮ ಜಯೋ ವ್ಯಕ್ತಂ ದೀರ್ಘಕಾಲಂ ಭವಿಷ್ಯತಿ।
07139027c ತಸ್ಮಾದ್ರಕ್ಷತ ಸಂಗ್ರಾಮೇ ದ್ರೋಣಮೇವ ಮಹಾರಥಾಃ।।
ಹೀಗೆ ನನ್ನ ವಿಜಯವು ದೀರ್ಘಕಾಲದವರೆಗೂ ಇರುತ್ತದೆ ಎಂದು ವ್ಯಕ್ತವಾಗುತ್ತಿದೆ. ಆದುದರಿಂದ ಮಹಾರಥರೇ! ಸಂಗ್ರಾಮದಲ್ಲಿ ದ್ರೋಣನನ್ನೇ ರಕ್ಷಿಸಿರಿ!”
07139028a ಇತ್ಯುಕ್ತ್ವಾ ಭರತಶ್ರೇಷ್ಠ ಪುತ್ರೋ ದುರ್ಯೋಧನಸ್ತವ।
07139028c ವ್ಯಾದಿದೇಶ ತತಃ ಸೈನ್ಯಂ ತಸ್ಮಿಂಸ್ತಮಸಿ ದಾರುಣೇ।।
ಭರತಶ್ರೇಷ್ಠ! ಹೀಗೆ ಹೇಳಿ ನಿನ್ನ ಮಗ ದುರ್ಯೋಧನನು ಆ ದಾರುಣ ರಾತ್ರಿಯಲ್ಲಿ ಸೈನ್ಯಕ್ಕೆ ಆದೇಶಗಳನ್ನಿತ್ತನು.
07139029a ತತಃ ಪ್ರವವೃತೇ ಯುದ್ಧಂ ರಾತ್ರೌ ತದ್ಭರತರ್ಷಭ।
07139029c ಉಭಯೋಃ ಸೇನಯೋರ್ಘೋರಂ ವಿಜಯಂ ಪ್ರತಿ ಕಾಂಕ್ಷಿಣೋಃ।।
ಭರತರ್ಷಭ! ಆಗ ಆ ರಾತ್ರಿಯಲ್ಲಿ ವಿಜಯದ ಗುರಿಯನ್ನೇ ಬಯಸಿದ ಎರಡೂ ಸೇನೆಗಳ ಮಧ್ಯೆ ಘೋರ ಯುದ್ಧವು ನಡೆಯಿತು.
07139030a ಅರ್ಜುನಃ ಕೌರವಂ ಸೈನ್ಯಮರ್ಜುನಂ ಚಾಪಿ ಕೌರವಾಃ।
07139030c ನಾನಾಶಸ್ತ್ರಸಮಾವಾಪೈರನ್ಯೋನ್ಯಂ ಪರ್ಯಪೀಡಯನ್।।
ಅರ್ಜುನನು ಕೌರವ ಸೇನೆಯನ್ನೂ, ಕೌರವರು ಅರ್ಜುನನನ್ನೂ ಹೀಗೆ ಅನ್ಯೋನ್ಯರನ್ನು ನಾನಾ ಶಸ್ತ್ರಗಳನ್ನು ಬಳಸಿ ಪೀಡಿಸಿದರು.
07139031a ದ್ರೌಣಿಃ ಪಾಂಚಾಲರಾಜಾನಂ ಭಾರದ್ವಾಜಶ್ಚ ಸೃಂಜಯಾನ್।
07139031c ಚಾದಯಾಮಾಸತುಃ ಸಂಖ್ಯೇ ಶರೈಃ ಸಮ್ನತಪರ್ವಭಿಃ।।
ಯುದ್ಧದಲ್ಲಿ ದ್ರೌಣಿಯು ಪಾಂಚಾಲರಾಜರನ್ನೂ ಭಾರದ್ವಾಜನು ಸೃಂಜಯರನ್ನೂ ಸನ್ನತಪರ್ವ ಶರಗಳಿಂದ ಮುಸುಕತೊಡಗಿದರು.
07139032a ಪಾಂಡುಪಾಂಚಾಲಸೇನಾನಾಂ ಕೌರವಾಣಾಂ ಚ ಮಾರಿಷ।
07139032c ಆಸೀನ್ನಿಷ್ಟಾನಕೋ ಘೋರೋ ನಿಘ್ನತಾಮಿತರೇತರಂ।।
ಮಾರಿಷ! ಪರಸ್ಪರರನ್ನು ಸಂಹರಿಸುತ್ತಿದ್ದ ಪಾಂಡು-ಪಾಂಚಾಲ ಸೇನೆ ಮತ್ತು ಕುರು ಸೇನೆಗಳಲ್ಲಿ ಘೋರ ಆರ್ತನಾದಗಳುಂಟಾದವು.
07139033a ನೈವಾಸ್ಮಾಭಿರ್ನ ಪೂರ್ವೈರ್ನೋ ದೃಷ್ಟಂ ಪೂರ್ವಂ ತಥಾವಿಧಂ।
07139033c ಯುದ್ಧಂ ಯಾದೃಶಂ ಏವಾಸೀತ್ತಾಂ ರಾತ್ರಿಂ ಸುಮಹಾಭಯಂ।।
ನಾವಾಗಲೀ ನಮ್ಮ ಪೂರ್ವಜರಾಗಲೀ ಅಂತಹ ಯುದ್ಧವನ್ನು ಕಂಡಿರಲಿಲ್ಲ ಕೇಳಿರಲಿಲ್ಲ. ಅಂತಹ ಮಹಾಭಯಂಕರ ಯುದ್ಧವು ಆ ರಾತ್ರಿ ನಡೆಯಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಸಂಕುಲಯುದ್ಧೇ ಏಕೋನಚತ್ವಾರಿಂಶಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಸಂಕುಲಯುದ್ಧ ಎನ್ನುವ ನೂರಾಮೂವತ್ತೊಂಭತ್ತನೇ ಅಧ್ಯಾಯವು.