138 ರಾತ್ರಿಯುದ್ಧೇ ದೀಪೋದ್ಯೋತನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಘಟೋತ್ಕಚವಧ ಪರ್ವ

ಅಧ್ಯಾಯ 138

ಸಾರ

ದೀಪೋದ್ಯೋತನ (1-34).

07138001 ಸಂಜಯ ಉವಾಚ।
07138001a ವರ್ತಮಾನೇ ತಥಾ ಯುದ್ಧೇ ಘೋರರೂಪೇ ಭಯಾವಹೇ।
07138001c ತಮಸಾ ಸಂವೃತೇ ಲೋಕೇ ರಜಸಾ ಚ ಮಹೀಪತೇ।

ಸಂಜಯನು ಹೇಳಿದನು: “ಮಹೀಪತೇ! ಘೋರರೂಪೀ ಭಯಾವಹ ಆ ಯುದ್ಧವು ಹಾಗೆ ನಡೆಯುತ್ತಿರಲು ಲೋಕವು ಕತ್ತಲೆ ಮತ್ತು ಧೂಳಿನಿಂದ ಮುಚ್ಚಿಹೋಯಿತು.

07138001e ನಾಪಶ್ಯಂತ ರಣೇ ಯೋಧಾಃ ಪರಸ್ಪರಮವಸ್ಥಿತಾಃ।।
07138002a ಅನುಮಾನೇನ ಸಂಜ್ಞಾಭಿರ್ಯುದ್ಧಂ ತದ್ವವೃತೇ ಮಹತ್।
07138002c ನರನಾಗಾಶ್ವಮಥನಂ ಪರಮಂ ಲೋಮಹರ್ಷಣಂ।।

ರಣದಲ್ಲಿ ಎದುರಿಸಿದ್ದ ಯೋಧರಿಗೆ ಪರಸ್ಪರರನ್ನು ಗುರುತಿಸಲಾಗುತ್ತಿರಲಿಲ್ಲ. ಅನುಮಾನದಿಂದ ಮತ್ತು ಸಂಕೇತಗಳಿಂದ ಆ ಮನುಷ್ಯ-ಆನೆ-ಕುದುರೆಗಳ ಸಂಹಾರಕಾರ್ಯ, ರೋಮರಾಶಿಗಳು ನಿಮಿರಿ ನಿಲ್ಲುವಷ್ಟು ರೋಮಾಂಚಕಾರಿ ಮಹಾ ಯುದ್ಧವು ನಡೆಯಿತು.

07138003a ದ್ರೋಣಕರ್ಣಕೃಪಾ ವೀರಾ ಭೀಮಪಾರ್ಷತಸಾತ್ಯಕಾಃ।
07138003c ಅನ್ಯೋನ್ಯಂ ಕ್ಷೋಭಯಾಮಾಸುಃ ಸೈನ್ಯಾನಿ ನೃಪಸತ್ತಮ।।

ನೃಪಸತ್ತಮ! ವೀರರಾದ ದ್ರೋಣ-ಕರ್ಣ-ಕೃಪರು ಮತ್ತು ಭೀಮ-ಪಾರ್ಷತ-ಸಾತ್ಯಕಿಯರು ಅನ್ಯೋನ್ಯರ ಸೇನೆಗಳನ್ನು ಅಲ್ಲೋಲಕಲ್ಲೋಲಗೊಳಿಸುತ್ತಿದ್ದರು.

07138004a ವಧ್ಯಮಾನಾನಿ ಸೈನ್ಯಾನಿ ಸಮಂತಾತ್ತೈರ್ಮಹಾರಥೈಃ।
07138004c ತಮಸಾ ರಜಸಾ ಚೈವ ಸಮಂತಾದ್ವಿಪ್ರದುದ್ರುವುಃ।।

ಮಹಾರಥರಿಂದ ವಧಿಸಲ್ಪಟ್ಟು ಸೇನೆಗಳು ಎಲ್ಲಕಡೆ ಓಡಿಹೋಗುತ್ತಿದ್ದವು. ಹಾಗೆಯೇ ಕತ್ತಲೆ ಮತ್ತು ಧೂಳಿನಿಂದ ದಿಕ್ಕುಕಾಣದೆ ಸೇನೆಗಳು ಓಡಿ ಹೋಗುತ್ತಿದ್ದವು.

07138005a ತೇ ಸರ್ವತೋ ವಿದ್ರವಂತೋ ಯೋಧಾ ವಿತ್ರಸ್ತಚೇತಸಃ।
07138005c ಅಹನ್ಯಂತ ಮಹಾರಾಜ ಧಾವಮಾನಾಶ್ಚ ಸಮ್ಯುಗೇ।।

ಮಹಾರಾಜ! ಬಳಲಿ ನಿದ್ದೆಗೆಟ್ಟಿದ್ದ ಯೋಧರು ಎಲ್ಲಕಡೆ ಓಡಿಹೋಗುತ್ತಿದ್ದವರನ್ನೂ ಯುದ್ಧದಲ್ಲಿ ಸಂಹರಿಸಿದರು.

07138006a ಮಹಾರಥಸಹಸ್ರಾಣಿ ಜಘ್ನುರನ್ಯೋನ್ಯಮಾಹವೇ।
07138006c ಅಂಧೇ ತಮಸಿ ಮೂಢಾನಿ ಪುತ್ರಸ್ಯ ತವ ಮಂತ್ರಿತೇ।।

ನಿನ್ನ ಮಗನ ಯೋಜನೆಯಂತೆ ಆ ರಾತ್ರಿಯ ಅಂಧಕಾರದಲ್ಲಿ ಸಹಸ್ರಾರು ಮೂಢ ಮಹಾರಥರು ರಣರಂಗದಲ್ಲಿ ಅನ್ಯೋನ್ಯರನ್ನು ಸಂಹರಿಸಿದರು.

07138007a ತತಃ ಸರ್ವಾಣಿ ಸೈನ್ಯಾನಿ ಸೇನಾಗೋಪಾಶ್ಚ ಭಾರತ।
07138007c ವ್ಯಮುಹ್ಯಂತ ರಣೇ ತತ್ರ ತಮಸಾ ಸಂವೃತೇ ಸತಿ।।

ಭಾರತ! ಆಗ ರಣಾಂಗಣವು ಗಾಢಾಂಧಕಾರದಿಂದ ಆವೃತವಾಗಿರಲು ಎಲ್ಲ ಸೇನೆಗಳೂ, ಸೇನಾಧಿಪತಿಗಳೂ ಮೋಹಗೊಂಡರು.”

07138008 ಧೃತರಾಷ್ಟ್ರ ಉವಾಚ।
07138008a ತೇಷಾಂ ಸಂಲೋಡ್ಯಮಾನಾನಾಂ ಪಾಂಡವೈರ್ನಿಹತೌಜಸಾಂ।
07138008c ಅಂಧೇ ತಮಸಿ ಮಗ್ನಾನಾಮಾಸೀತ್ಕಾ ವೋ ಮತಿಸ್ತದಾ।।

ಧೃತರಾಷ್ಟ್ರನು ಹೇಳಿದನು: “ಓಜಸ್ಸು ಕುಂಠಿತರಾಗಿ ಕತ್ತಲೆಯಲ್ಲಿ ಅಂಧರಾಗಿ ಪಾಂಡವರಿಂದ ಸಂಹರಿಸಲ್ಪಡುತ್ತಿದ್ದ ನಿಮ್ಮ ಮನಸ್ಸು ಆಗ ಹೇಗಿದ್ದಿತು?

07138009a ಕಥಂ ಪ್ರಕಾಶಸ್ತೇಷಾಂ ವಾ ಮಮ ಸೈನ್ಯೇಷು ವಾ ಪುನಃ।
07138009c ಬಭೂವ ಲೋಕೇ ತಮಸಾ ತಥಾ ಸಂಜಯ ಸಂವೃತೇ।।

ಸಂಜಯ! ನೀನು ಹೇಳಿದಂತೆ ಲೋಕವು ಕತ್ತಲೆಯಿಂದ ಆವರಿಸಲ್ಪಟ್ಟಿರಲು ನನ್ನ ಅಥವಾ ಅವರ ಸೇನೆಗಳಲ್ಲಿ ಪ್ರಕಾಶವು ಹೇಗೆ ದೊರಕಿತು?”

07138010 ಸಂಜಯ ಉವಾಚ।
07138010a ತತಃ ಸರ್ವಾಣಿ ಸೈನ್ಯಾನಿ ಹತಶಿಷ್ಟಾನಿ ಯಾನಿ ವೈ।
07138010c ಸೇನಾಗೋಪ್ತೄನಥಾದಿಶ್ಯ ಪುನರ್ವ್ಯೂಹಮಕಲ್ಪಯತ್।।

ಸಂಜಯನು ಹೇಳಿದನು: “ಅನಂತರ ದುರ್ಯೋಧನನು ಅಳಿಯದೇ ಉಳಿದಿರುವ ಎಲ್ಲ ಸೇನೆಗಳನ್ನೂ ಸೇನಾನಾಯಕರನ್ನೂ ಒಟ್ಟುಗೂಡಿಸಿ ಪುನಃ ಒಂದು ನೂತನ ವ್ಯೂಹವನ್ನೇ ಕಲ್ಪಿಸಿದನು.

07138011a ದ್ರೋಣಃ ಪುರಸ್ತಾಜ್ಜಘನೇ ತು ಶಲ್ಯಸ್ ತಥಾ ದ್ರೌಣಿಃ ಪಾರ್ಶ್ವತಃ ಸೌಬಲಶ್ಚ।
07138011c ಸ್ವಯಂ ತು ಸರ್ವಾಣಿ ಬಲಾನಿ ರಾಜನ್ ರಾಜಾಭ್ಯಯಾದ್ಗೋಪಯನ್ವೈ ನಿಶಾಯಾಂ।।

ಆ ವ್ಯೂಹದ ಮುಂಬಾಗದಲ್ಲಿ ದ್ರೋಣ, ಹಿಂಬಾಗದಲ್ಲಿ ಶಲ್ಯ, ಪಕ್ಕಗಳಲ್ಲಿ ದ್ರೌಣಿ-ಸೌಬಲರಿದ್ದರು. ರಾಜನ್! ಸ್ವಯಂ ರಾಜಾ ದುರ್ಯೋಧನನು ಆ ರಾತ್ರಿಯಲ್ಲಿ ಸರ್ವಸೇನೆಗಳನ್ನು ರಕ್ಷಿಸುತ್ತಾ ಮುಂದೆ ಹೋಗುತ್ತಿದ್ದನು.

07138012a ಉವಾಚ ಸರ್ವಾಂಶ್ಚ ಪದಾತಿಸಂಘಾನ್ ದುರ್ಯೋಧನಃ ಪಾರ್ಥಿವ ಸಾಂತ್ವಪೂರ್ವಂ।
07138012c ಉತ್ಸೃಜ್ಯ ಸರ್ವೇ ಪರಮಾಯುಧಾನಿ ಗೃಹ್ಣೀತ ಹಸ್ತೈರ್ಜ್ವಲಿತಾನ್ಪ್ರದೀಪಾನ್।।

ರಾಜಾ ದುರ್ಯೋಧನನು ಸಾಂತ್ವನಪೂರ್ವಕವಾಗಿ ಎಲ್ಲ ಪದಾತಿಪಡೆಗಳಿಗೆ ಈ ರೀತಿ ಹೇಳಿದನು: “ನೀವೆಲ್ಲರೂ ಪರಮ ಆಯುಧಗಳನ್ನು ಕೆಳಗಿಟ್ಟು ಪ್ರಜ್ವಲಿಸುತ್ತಿರುವ ಪಂಜುಗಳನ್ನು ಹಿಡಿದುಕೊಳ್ಳಿರಿ!”

07138013a ತೇ ಚೋದಿತಾಃ ಪಾರ್ಥಿವಸತ್ತಮೇನ ತತಃ ಪ್ರಹೃಷ್ಟಾ ಜಗೃಹುಃ ಪ್ರದೀಪಾನ್।
07138013c ಸಾ ಭೂಯ ಏವ ಧ್ವಜಿನೀ ವಿಭಕ್ತಾ ವ್ಯರೋಚತಾಗ್ನಿಪ್ರಭಯಾ ನಿಶಾಯಾಂ।।

ಪಾರ್ಥಿವಸತ್ತಮನಿಂದ ಹೀಗೆ ಪ್ರಚೋದನೆಗೊಂಡ ಯೋಧರು ಸಂತೋಷಗೊಂಡು ಉರಿಯುತ್ತಿರುವ ಪಂಜುಗಳನ್ನು ಹಿಡಿದುಕೊಂಡರು. ಆ ಅಗ್ನಿಪ್ರಭೆಯಿಂದ ರಾತ್ರಿಯಾಗಿದ್ದರೂ ಎರಡು ಕಡೆಯ ದಳಗಳು ಪ್ರತ್ಯೇಕವಾಗಿ ಕಾಣತೊಡಗಿದವು.

07138014a ಮಹಾಧನೈರಾಭರಣೈಶ್ಚ ದಿವ್ಯೈಃ ಶಸ್ತ್ರೈಃ ಪ್ರದೀಪ್ತೈರಭಿಸಂಪತದ್ಭಿಃ।
07138014c ಕ್ಷಣೇನ ಸರ್ವೇ ವಿಹಿತಾಃ ಪ್ರದೀಪಾ ವ್ಯದೀಪಯಂಶ್ಚ ಧ್ವಜಿನೀಂ ತದಾಶು।।

ಅಮೂಲ್ಯ ದಿವ್ಯ ಆಭರಣಗಳ ಮತ್ತು ಹೊಳೆಯುತ್ತಿದ್ದ ಶಸ್ತ್ರಗಳ ಮೇಲೆ ಬೆಳಕು ಬಿದ್ದು ಎರಡೂ ಪಕ್ಷಗಳ ಸೇನೆಗಳು ಪ್ರಕಾಶಮಾನವಾಗಿ ಕಾಣುತ್ತಿದ್ದವು.

07138015a ಸರ್ವಾಸ್ತು ಸೇನಾ ವ್ಯತಿಸೇವ್ಯಮಾನಾಃ ಪದಾತಿಭಿಃ ಪಾವಕತೈಲಹಸ್ತೈಃ।
07138015c ಪ್ರಕಾಶ್ಯಮಾನಾ ದದೃಶುರ್ನಿಶಾಯಾಂ ಯಥಾಂತರಿಕ್ಷೇ ಜಲದಾಸ್ತಡಿದ್ಭಿಃ।।

ಎಣ್ಣೆಯನ್ನೂ ಪಂಜುಗಳನ್ನೂ ಹಿಡಿದಿದ್ದ ಪದಾತಿಗಳು ಬೆಳಕನ್ನು ತೋರಿಸುತ್ತಿರಲು ಎಲ್ಲ ಸೇನೆಗಳೂ ರಾತ್ರಿಯ ಆಕಾಶದಲ್ಲಿ ಮಿಂಚುಗಳಿಂದ ಬೆಳಗಿಸಲ್ಪಡುತ್ತಿದ್ದ ಕಪ್ಪು ಮೋಡಗಳಂತೆ ತೋರುತ್ತಿದ್ದವು.

07138016a ಪ್ರಕಾಶಿತಾಯಾಂ ತು ತಥಾ ಧ್ವಜಿನ್ಯಾಂ ದ್ರೋಣೋಽಗ್ನಿಕಲ್ಪಃ ಪ್ರತಪನ್ಸಮಂತಾತ್।
07138016c ರರಾಜ ರಾಜೇಂದ್ರ ಸುವರ್ಣವರ್ಮಾ ಮಧ್ಯಂ ಗತಃ ಸೂರ್ಯ ಇವಾಂಶುಮಾಲೀ।।

ರಾಜೇಂದ್ರ! ಹಾಗೆ ಪ್ರಕಾಶಿತಗೊಂಡ ಸೇನೆಗಳ ಮಧ್ಯೆ ಸುವರ್ಣಕವಚವನ್ನು ಧರಿಸಿದ್ದ ದ್ರೋಣನು ಮಧ್ಯಾಹ್ನದ ಸೂರ್ಯನಂತೆ ಅಗ್ನಿಸದೃಶನಾಗಿ ಬೆಳಗುತ್ತಿದ್ದನು.

07138017a ಜಾಂಬೂನದೇಷ್ವಾಭರಣೇಷು ಚೈವ ನಿಷ್ಕೇಷು ಶುದ್ಧೇಷು ಶರಾವರೇಷು।
07138017c ಪೀತೇಷು ಶಸ್ತ್ರೇಷು ಚ ಪಾವಕಸ್ಯ ಪ್ರತಿಪ್ರಭಾಸ್ತತ್ರ ತತೋ ಬಭೂವುಃ।।

ಸುವರ್ಣಮಯ ಆಭರಣಗಳಲ್ಲಿಯೂ, ಎದೆಗೆ ಹಾಕುವ ಶುದ್ಧ ನಿಷ್ಕಗಳಲ್ಲಿಯೂ, ಧನುಸ್ಸುಗಳಲ್ಲಿಯೂ, ಪೀತಲ ಶಸ್ತ್ರಗಳಲ್ಲಿಯೂ ಪಂಜುಗಳ ಬೆಳಕು ಪ್ರತಿಬಿಂಬಿಸುತ್ತಿದ್ದವು.

07138018a ಗದಾಶ್ಚ ಶೈಕ್ಯಾಃ ಪರಿಘಾಶ್ಚ ಶುಭ್ರಾ ರಥೇಷು ಶಕ್ತ್ಯಶ್ಚ ವಿವರ್ತಮಾನಾಃ।
07138018c ಪ್ರತಿಪ್ರಭಾ ರಶ್ಮಿಭಿರಾಜಮೀಢ ಪುನಃ ಪುನಃ ಸಂಜನಯಂತಿ ದೀಪ್ತಾಃ।।

ಅಜಮೀಢನ ವಂಶದವನೇ! ಝಳಪಿಸುತ್ತಿದ್ದ ಗದೆಗಳೂ, ಶಕ್ತ್ಯಾಯುಧಗಳೂ, ಪರಿಘಗಳೂ, ರಥಶಕ್ತಿಗಳೂ ಪಂಜುಗಳನ್ನು ಪ್ರತಿಬಿಂಬಿಸುತ್ತಾ ಪುನಃ ಪುನಃ ಇನ್ನೂ ಅನೇಕ ದೀಪಗಳಿವೆಯೋ ಎನ್ನುವಂತೆ ತೋರುತ್ತಿತ್ತು.

07138019a ಚತ್ರಾಣಿ ಬಾಲವ್ಯಜನಾನುಷಂಗಾ ದೀಪ್ತಾ ಮಹೋಲ್ಕಾಶ್ಚ ತಥೈವ ರಾಜನ್।
07138019c ವ್ಯಾಘೂರ್ಣಮಾನಾಶ್ಚ ಸುವರ್ಣಮಾಲಾ ವ್ಯಾಯಚ್ಚತಾಂ ತತ್ರ ತದಾ ವಿರೇಜುಃ।।

ರಾಜನ್! ಛತ್ರಗಳೂ, ಚಾಮರಗಳೂ, ಖಡ್ಗಗಳೂ, ಅಲ್ಲಾಡುತ್ತಿದ್ದ ಸುವರ್ಣಮಾಲೆಗಳೂ ಆಗ ದೀಪಗಳ ಬೆಳಕಿನಿಂದ ಶೋಭಾಯಮಾನವಾಗಿ ಕಾಣುತ್ತಿದ್ದವು.

07138020a ಶಸ್ತ್ರಪ್ರಭಾಭಿಶ್ಚ ವಿರಾಜಮಾನಂ ದೀಪಪ್ರಭಾಭಿಶ್ಚ ತದಾ ಬಲಂ ತತ್।
07138020c ಪ್ರಕಾಶಿತಂ ಚಾಭರಣಪ್ರಭಾಭಿರ್ ಭೃಶಂ ಪ್ರಕಾಶಂ ನೃಪತೇ ಬಭೂವ।।

ಶಸ್ತ್ರಗಳ ಪ್ರಭೆಗಳಿಂದ ಮತ್ತು ದೀವಟಿಗೆಗಳ ಪ್ರಭೆಯಿಂದ ವಿರಾಜಮಾನವಾಗಿ ಕಾಣುತ್ತಿದ್ದ ನಿನ್ನ ಸೇನೆಯು ಆಗ ಆಭರಣ ಪ್ರಭೆಯಿಂದ ಇನ್ನೂ ಹೆಚ್ಚಿನ ಪ್ರಕಾಶದಿಂದ ಬೆಳಗುತ್ತಿತ್ತು.

07138021a ಪೀತಾನಿ ಶಸ್ತ್ರಾಣ್ಯಸೃಗುಕ್ಷಿತಾನಿ ವೀರಾವಧೂತಾನಿ ತನುದ್ರುಹಾಣಿ।
07138021c ದೀಪ್ತಾಂ ಪ್ರಭಾಂ ಪ್ರಾಜನಯಂತ ತತ್ರ ತಪಾತ್ಯಯೇ ವಿದ್ಯುದಿವಾಂತರಿಕ್ಷೇ।।

ಬಂಗಾರದ ಬಣ್ಣದ ಶಸ್ತ್ರಗಳೂ ಮತ್ತು ಅಲ್ಲಾಡುತಿದ್ದ ವೀರರ ಕವಚಗಳೂ ದೀವಟಿಗೆಗಳ ಪ್ರಭೆಯನ್ನು ಆಗಾಗ ಪ್ರತಿಬಿಂಬಿಸುತ್ತಿರಲು ಅಂತರಿಕ್ಷದಲ್ಲಿರುವ ಮಿಂಚುಗಳಂತೆ ಹೊಳೆಯುತ್ತಿದ್ದವು.

07138022a ಪ್ರಕಂಪಿತಾನಾಮಭಿಘಾತವೇಗೈರ್ ಅಭಿಘ್ನತಾಂ ಚಾಪತತಾಂ ಜವೇನ।
07138022c ವಕ್ತ್ರಾಣ್ಯಶೋಭಂತ ತದಾ ನರಾಣಾಂ ವಾಯ್ವೀರಿತಾನೀವ ಮಹಾಂಬುಜಾನಿ।।

ಹೊಡೆತಗಳ ವೇಗದಿಂದ ಪ್ರಕಂಪಿಸುತ್ತಿದ್ದ, ಪ್ರಹರಿಸಲು ವೇಗವಾಗಿ ಮುಂದೆ ಬರುತ್ತಿದ್ದ ಮನುಷ್ಯರ ಮುಖಗಳು ಗಾಳಿಯಿಂದ ವಿಚಲಿತವಾದ ದೊಡ್ಡ ದೊಡ್ಡ ಕಮಲಗಳಂತೆ ಕಾಣುತ್ತಿದ್ದವು.

07138023a ಮಹಾವನೇ ದಾವ ಇವ ಪ್ರದೀಪ್ತೇ ಯಥಾ ಪ್ರಭಾ ಭಾಸ್ಕರಸ್ಯಾಪಿ ನಶ್ಯೇತ್।
07138023c ತಥಾ ತವಾಸೀದ್ಧ್ವಜಿನೀ ಪ್ರದೀಪ್ತಾ ಮಹಾಭಯೇ ಭಾರತ ಭೀಮರೂಪಾ।।

ಭಾರತ! ಮಹಾವನದಲ್ಲಿ ಉರಿಯುತ್ತಿರುವ ಕಾಡ್ಗಿಚ್ಚು ಹೇಗೆ ಭಾಸ್ಕರನ ಪ್ರಭೆಯನ್ನೂ ಕುಂಠಿತಗೊಳಿಸುತ್ತದೆಯೋ ಹಾಗೆ ನಿನ್ನ ಮಹಾಭಯಂಕರ ಭೀಮರೂಪದ ಸೇನೆಯು ಬೆಳಗಿ ಪ್ರಕಾಶಿಸುತ್ತಿತ್ತು.

07138024a ತತ್ಸಂಪ್ರದೀಪ್ತಂ ಬಲಮಸ್ಮದೀಯಂ ನಿಶಾಮ್ಯ ಪಾರ್ಥಾಸ್ತ್ವರಿತಾಸ್ತಥೈವ।
07138024c ಸರ್ವೇಷು ಸೈನ್ಯೇಷು ಪದಾತಿಸಂಘಾನ್ ಅಚೋದಯಂಸ್ತೇಽಥ ಚಕ್ರುಃ ಪ್ರದೀಪಾನ್।।

ನಮ್ಮವರ ಸೇನೆಯು ಹಾಗೆ ಬೆಳಗುತ್ತಿರುವುದನ್ನು ನೋಡಿ ಪಾರ್ಥರೂ ಕೂಡ ಕೂಡಲೇ ತಮ್ಮ ಎಲ್ಲ ಸೇನೆಗಳ ಪದಾತಿಪಡೆಗಳಿಗೆ ದೀವಟಿಗೆಗಳನ್ನು ಹಿಡಿದು ಬೆಳಕುತೋರುವಂತೆ ಪ್ರಚೋದಿಸಿದರು.

07138025a ಗಜೇ ಗಜೇ ಸಪ್ತ ಕೃತಾಃ ಪ್ರದೀಪಾ ರಥೇ ರಥೇ ಚೈವ ದಶ ಪ್ರದೀಪಾಃ।
07138025c ದ್ವಾವಶ್ವಪೃಷ್ಠೇ ಪರಿಪಾರ್ಶ್ವತೋಽನ್ಯೇ ಧ್ವಜೇಷು ಚಾನ್ಯೇ ಜಘನೇಷು ಚಾನ್ಯೇ।।

ಪ್ರತಿಯೊಂದು ಆನೆಯ ಮೇಲೂ ಏಳೇಳು ದೀಪಗಳನ್ನಿಟ್ಟಿದ್ದರು. ಪ್ರತಿಯೊಂದು ರಥದಲ್ಲಿ ಹತ್ತು ಹತ್ತು ದೀಪಗಳನ್ನಿಟ್ಟಿದ್ದರು. ಪ್ರತಿಯೊಂದು ಕುದುರೆಯ ಮೇಲೂ, ಪಾರ್ಶ್ವಗಳಲ್ಲಿಯೂ, ಧ್ವಜಗಳಲ್ಲಿಯೂ ಮತ್ತು ಜಘನಗಳಲ್ಲಿಯೂ ಎರಡೆರಡು ದೀಪಗಳನ್ನು ಇಟ್ಟಿದ್ದರು.

07138026a ಸೇನಾಸು ಸರ್ವಾಸು ಚ ಪಾರ್ಶ್ವತೋಽನ್ಯೇ ಪಶ್ಚಾತ್ಪುರಸ್ತಾಚ್ಚ ಸಮಂತತಶ್ಚ।
07138026c ಮಧ್ಯೇ ತಥಾನ್ಯೇ ಜ್ವಲಿತಾಗ್ನಿಹಸ್ತಾಃ ಸೇನಾದ್ವಯೇಽಪಿ ಸ್ಮ ನರಾ ವಿಚೇರುಃ।।

ಎಲ್ಲ ಸೇನೆಗಳ ಪಾರ್ಶ್ವಗಳಲ್ಲಿಯೂ, ಹಿಂದೆ-ಮುಂದೆ ಮತ್ತು ಸುತ್ತಲೂ, ಮಧ್ಯದಲ್ಲಿಯೂ ಉರಿಯುತ್ತಿರುವ ದೀವಟಿಗೆಗಳನ್ನು ಹಿಡಿದ ನರರು ಎರಡೂ ಸೇನೆಗಳ ಮಧ್ಯೆ ಸಂಚರಿಸುತ್ತಿದ್ದರು.

07138027a ಸರ್ವೇಷು ಸೈನ್ಯೇಷು ಪದಾತಿಸಂಘಾ ವ್ಯಾಮಿಶ್ರಿತಾ ಹಸ್ತಿರಥಾಶ್ವವೃಂದೈಃ।
07138027c ಮಧ್ಯೇ ತಥಾನ್ಯೇ ಜ್ವಲಿತಾಗ್ನಿಹಸ್ತಾ ವ್ಯದೀಪಯನ್ಪಾಂಡುಸುತಸ್ಯ ಸೇನಾಂ।।

ಎಲ್ಲ ಸೇನೆಗಳಲ್ಲಿಯೂ ಪದಾತಿಪಡೆಗಳು ಆನೆ-ರಥ-ಕುದುರೆಗಳ ಗುಂಪುಗಳೊಡನೆ ಮಧ್ಯ ಮಧ್ಯದಲ್ಲಿ ಮಿಶ್ರಿತವಾಗಿ ಪಾಂಡುಸುತನ ಸೇನೆಯನ್ನು ಬೆಳಗಿಸಿದರು.

07138028a ತೇನ ಪ್ರದೀಪ್ತೇನ ತಥಾ ಪ್ರದೀಪ್ತಂ ಬಲಂ ತದಾಸೀದ್ಬಲವದ್ಬಲೇನ।
07138028c ಭಾಃ ಕುರ್ವತಾ ಭಾನುಮತಾ ಗ್ರಹೇಣ ದಿವಾಕರೇಣಾಗ್ನಿರಿವಾಭಿತಪ್ತಃ।।

ಕಿರಣಗಳನ್ನು ಹೊರಸೂಸುವ ಮತ್ತು ಕಿರಣಗಳನ್ನು ಹೊಂದಿರುವ ದಿವಾಕರ ಸೂರ್ಯಗ್ರಹನಿಂದ ರಕ್ಷಿತ ಅಗ್ನಿಯು ರಾತ್ರಿಯಲ್ಲಿ ಹೆಚ್ಚು ಪ್ರಕಾಶಮಾನನಾಗಿ ಉರಿಯುವಂತೆ ಯುಧಿಷ್ಠಿರನ ಸೇನೆಗಳ ದೀಪಗಳಿಂದ ನಿನ್ನ ಸೇನೆಗಳ ಪ್ರಕಾಶವೂ ಹೆಚ್ಚಾಗಿ ತೋರಿತು.

07138029a ತಯೋಃ ಪ್ರಭಾಃ ಪೃಥಿವೀಮಂತರಿಕ್ಷಂ ಸರ್ವಾ ವ್ಯತಿಕ್ರಮ್ಯ ದಿಶಶ್ಚ ವೃದ್ಧಾಃ।
07138029c ತೇನ ಪ್ರಕಾಶೇನ ಭೃಶಂ ಪ್ರಕಾಶಂ ಬಭೂವ ತೇಷಾಂ ತವ ಚೈವ ಸೈನ್ಯಂ।।

ಆ ಪ್ರಭೆಗಳು ಪೃಥ್ವಿ, ಅಂತರಿಕ್ಷ ಮತ್ತು ಎಲ್ಲ ದಿಕ್ಕುಗಳನ್ನೂ ಅತಿಕ್ರಮಿಸಿ ಬೆಳೆಯಲು ಅವುಗಳ ಪ್ರಕಾಶದಿಂದ ನಿನ್ನ ಮತ್ತು ಅವರ ಸೇನೆಗಳು ಇನ್ನೂ ಪ್ರಕಾಶಮಾನವಾಗಿ ಕಾಣುತ್ತಿದ್ದವು.

07138030a ತೇನ ಪ್ರಕಾಶೇನ ದಿವಂಗಮೇನ ಸಂಬೋಧಿತಾ ದೇವಗಣಾಶ್ಚ ರಾಜನ್।
07138030c ಗಂಧರ್ವಯಕ್ಷಾಸುರಸಿದ್ಧಸಂಘಾಃ ಸಮಾಗಮನ್ನಪ್ಸರಸಶ್ಚ ಸರ್ವಾಃ।।

ರಾಜನ್! ಆ ಬೆಳಕಿನಿಂದ ಆಹ್ವಾನಿತರಾಗಿ ದಿವಂಗಮದಲ್ಲಿ ದೇವಗಣಗಳೂ, ಗಂಧರ್ವ-ಯಕ್ಷ-ಅಸುರ-ಸಿದ್ಧ ಸಂಘಗಳು ಮತ್ತು ಎಲ್ಲ ಅಪ್ಸರೆಯರೂ ಬಂದು ಸೇರಿದರು.

07138031a ತದ್ದೇವಗಂಧರ್ವಸಮಾಕುಲಂ ಚ ಯಕ್ಷಾಸುರೇಂದ್ರಾಪ್ಸರಸಾಂ ಗಣೈಶ್ಚ।
07138031c ಹತೈಶ್ಚ ವೀರೈರ್ದಿವಮಾರುಹದ್ಭಿರ್ ಆಯೋಧನಂ ದಿವ್ಯಕಲ್ಪಂ ಬಭೂವ।।

ಆ ದೇವ-ಗಂಧರ್ವ ಸಮಾಕುಲಗಳಿಂದ, ಯಕ್ಷ-ಅಸುರ-ಇಂದ್ರ ಅಪ್ಸರ ಗಣಗಳಿಂದ ಮತ್ತು ಹತರಾಗಿ ದಿವವನ್ನು ಏರಿದ್ದ ವೀರರಿಂದ ಕೂಡಿದ್ದ ಆ ಆಕಾಶವು ಸ್ವರ್ಗಲೋಕದಂತೆಯೇ ಕಂಡಿತು.

07138032a ರಥಾಶ್ವನಾಗಾಕುಲದೀಪದೀಪ್ತಂ ಸಂರಬ್ಧಯೋಧಾಹತವಿದ್ರುತಾಶ್ವಂ।
07138032c ಮಹದ್ಬಲಂ ವ್ಯೂಢರಥಾಶ್ವನಾಗಂ ಸುರಾಸುರವ್ಯೂಹಸಮಂ ಬಭೂವ।।

ಬೆಳಗುತ್ತಿರುವ ರಥ-ಅಶ್ವ-ಗಜ ಸಮೂಹಗಳಿಂದ, ಹತರಾಗುತ್ತಿದ್ದ ಮತ್ತು ಓಡಿಹೋಗುತ್ತಿದ್ದ ಯೋಧರಿಂದ ಕೂಡಿದ್ದ ಆ ರಥಾಶ್ವಗಜ ಸೇನೆಗಳ ಮಹಾಬಲವು ಸುರಾಸುರರ ವ್ಯೂಹಗಳ ಸಮನಾಗಿದ್ದವು.

07138033a ತಚ್ಚಕ್ತಿಸಂಘಾಕುಲಚಂಡವಾತಂ ಮಹಾರಥಾಭ್ರಂ ರಥವಾಜಿಘೋಷಂ।
07138033c ಶಸ್ತ್ರೌಘವರ್ಷಂ ರುಧಿರಾಂಬುಧಾರಂ ನಿಶಿ ಪ್ರವೃತ್ತಂ ನರದೇವಯುದ್ಧಂ।।

ನರದೇವ! ಆ ರಾತ್ರಿಯ ಯುದ್ಧದಲ್ಲಿ ಶಕ್ತ್ಯಾಯುಧಗಳ ಪ್ರಯೋಗವೇ ಚಂಡಮಾರುತವಾಗಿತ್ತು. ಮಹಾರಥಗಳೇ ಮೋಡಗಳಾಗಿದ್ದವು. ರಥ-ಕುದುರೆಗಳ ಘೋಷವೇ ಗುಡುಗುಗಳಾಗಿದ್ದವು. ಶಸ್ತ್ರಗಳ ಪ್ರಯೋಗವೇ ಸುರಿಮಳೆಯಂತಿತ್ತು. ರಕ್ತವೇ ಮಳೆಯ ನೀರಾಗಿತ್ತು.

07138034a ತಸ್ಮಿನ್ ಮಹಾಗ್ನಿಪ್ರತಿಮೋ ಮಹಾತ್ಮಾ ಸಂತಾಪಯನ್ ಪಾಂಡವಾನ್ ವಿಪ್ರಮುಖ್ಯಃ।
07138034c ಗಭಸ್ತಿಭಿರ್ಮಧ್ಯಗತೋ ಯಥಾರ್ಕೋ ವರ್ಷಾತ್ಯಯೇ ತದ್ವದಭೂನ್ನರೇಂದ್ರ।।

ನರೇಂದ್ರ! ಮಳೆಗಾಲವು ಮುಗಿಯುತ್ತಲೇ ಹೇಗೆ ಸೂರ್ಯನು ಆಕಾಶದ ಮಧ್ಯದಲ್ಲಿಯೇ ಇರುತ್ತಾನೋ ಹಾಗೆ ಆ ಸೇನೆಯಲ್ಲಿ ಮಹಾ ‌ಅಗ್ನಿಪ್ರತಿಮನಾಗಿದ್ದ ಮಹಾತ್ಮ ದ್ರೋಣನು ಪಾಂಡವ ಪ್ರಮುಖರನ್ನು ಸಂತಾಪಗೊಳಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ದೀಪೋದ್ಯೋತನೇ ಅಷ್ಠತ್ರಿಂಶಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ದೀಪೋದ್ಯೋತನ ಎನ್ನುವ ನೂರಾಮೂವತ್ತೆಂಟನೇ ಅಧ್ಯಾಯವು.