ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಘಟೋತ್ಕಚವಧ ಪರ್ವ
ಅಧ್ಯಾಯ 137
ಸಾರ
ಸಾತ್ಯಕಿಯಿಂದ ಸೋಮದತ್ತನ ವಧೆ (1-33). ದ್ರೋಣನೊಂದಿಗೆ ಯುದ್ಧಮಾಡುತ್ತಿದ್ದ ಯುಧಿಷ್ಠಿರನನ್ನು ಕೃಷ್ಣನು ಎಚ್ಚರಿಸಿ ತಡೆದುದು (34-51).
07137001 ಸಂಜಯ ಉವಾಚ।
07137001a ಸೋಮದತ್ತಂ ತು ಸಂಪ್ರೇಕ್ಷ್ಯ ವಿಧುನ್ವಾನಂ ಮಹದ್ಧನುಃ।
07137001c ಸಾತ್ಯಕಿಃ ಪ್ರಾಹ ಯಂತಾರಂ ಸೋಮದತ್ತಾಯ ಮಾಂ ವಹ।।
ಸಂಜಯನು ಹೇಳಿದನು: “ಮಹಾಧನುಸ್ಸನ್ನು ಟೇಂಕರಿಸುತ್ತಿದ್ದ ಸೋಮದತ್ತನನ್ನು ನೋಡಿ ಸಾತ್ಯಕಿಯು “ನನ್ನನ್ನು ಸೋಮದತ್ತನಿದ್ದಲ್ಲಿಗೆ ಒಯ್ಯಿ!” ಎಂದು ಸಾರಥಿಗೆ ಹೇಳಿದನು.
07137002a ನ ಹ್ಯಹತ್ವಾ ರಣೇ ಶತ್ರುಂ ಬಾಹ್ಲೀಕಂ ಕೌರವಾಧಮಂ।
07137002c ನಿವರ್ತಿಷ್ಯೇ ರಣಾತ್ಸೂತ ಸತ್ಯಂ ಏತದ್ವಚೋ ಮಮ।।
“ಸೂತ! ಕೌರವಾಧಮ ಶತ್ರು ಬಾಹ್ಲೀಕನನ್ನು ರಣದಲ್ಲಿ ಕೊಲ್ಲದೇ ರಣದಿಂದ ನಾನು ಹಿಂದಿರುಗುವುದಿಲ್ಲ. ನನ್ನ ಈ ಮಾತು ಸತ್ಯ.”
07137003a ತತಃ ಸಂಪ್ರೇಷಯದ್ಯಂತಾ ಸೈಂಧವಾಂಸ್ತಾನ್ಮಹಾಜವಾನ್।
07137003c ತುರಂಗಮಾಂ ಶಂಖವರ್ಣಾನ್ಸರ್ವಶಬ್ದಾತಿಗಾನ್ರಣೇ।।
ಆಗ ಸಾರಥಿಯು ಸೈಂಧವದೇಶದ, ಮಹಾವೇಗಶಾಲೀ, ಶಂಖವರ್ಣದ, ಸರ್ವ ಶಬ್ಧಗಳನ್ನೂ ಅತಿಕ್ರಮಿಸಬಲ್ಲ ಆ ಕುದುರೆಗಳನ್ನು ರಣದಲ್ಲಿ ಮುಂದೆ ಹೋಗುವಂತೆ ಚಪ್ಪರಿಸಿದನು.
07137004a ತೇಽವಹನ್ಯುಯುಧಾನಂ ತು ಮನೋಮಾರುತರಂಹಸಃ।
07137004c ಯಥೇಂದ್ರಂ ಹರಯೋ ರಾಜನ್ಪುರಾ ದೈತ್ಯವಧೋದ್ಯತಂ।।
ರಾಜನ್! ಹಿಂದೆ ದೈತ್ಯರವಧೆಗೆ ಸಿದ್ಧನಾದ ಇಂದ್ರನನ್ನು ಹೇಗೆ ಕುದುರೆಗಳು ಕೊಂಡೊಯ್ದವೋ ಹಾಗೆ ಯುಯುಧಾನನನ್ನು ಮನಸ್ಸು ಮತ್ತು ಮಾರುತರ ವೇಗವುಳ್ಳ ಅವನ ಕುದುರೆಗಳು ಕೊಂಡೊಯ್ದವು.
07137005a ತಮಾಪತಂತಂ ಸಂಪ್ರೇಕ್ಷ್ಯ ಸಾತ್ವತಂ ರಭಸಂ ರಣೇ।
07137005c ಸೋಮದತ್ತೋ ಮಹಾಬಾಹುರಸಂಭ್ರಾಂತೋಽಭ್ಯವರ್ತತ।।
ರಭಸದಿಂದ ರಣದಲ್ಲಿ ಬರುತ್ತಿದ್ದ ಸಾತ್ವತನನ್ನು ನೋಡಿ ಮಹಾಬಾಹು ಸೋಮದತ್ತನು ಗಾಬರಿಗೊಳ್ಳದೇ ಅವನೆದುರು ಧಾವಿಸಿದನು.
07137006a ವಿಮುಂಚಂ ಶರವರ್ಷಾಣಿ ಪರ್ಜನ್ಯ ಇವ ವೃಷ್ಟಿಮಾನ್।
07137006c ಚಾದಯಾಮಾಸ ಶೈನೇಯಂ ಜಲದೋ ಭಾಸ್ಕರಂ ಯಥಾ।।
ಮೋಡಗಳು ಭಾಸ್ಕರನನ್ನು ಮುಚ್ಚಿಬಿಡುವಂತೆ ಅವನು ಮಳೆಗರೆಯುವ ಮೋಡಗಳಂತೆ ಶರವರ್ಷಗಳನ್ನು ಸುರಿಸಿ ಶೈನೇಯನನ್ನು ಮುಚ್ಚಿದನು.
07137007a ಅಸಂಭ್ರಾಂತಶ್ಚ ಸಮರೇ ಸಾತ್ಯಕಿಃ ಕುರುಪುಂಗವಂ।
07137007c ಚಾದಯಾಮಾಸ ಬಾಣೌಘೈಃ ಸಮಂತಾದ್ಭರತರ್ಷಭ।।
ಭರತರ್ಷಭ! ಸಮರದಲ್ಲಿ ಗಾಬರಿಗೊಳ್ಳದೇ ಸಾತ್ಯಕಿಯು ಕುರುಪುಂಗವನನ್ನು ಬಾಣಗಳ ಗುಂಪುಗಳಿಂದ ಎಲ್ಲಕಡೆಗಳಿಂದ ಮುಚ್ಚಿದನು.
07137008a ಸೋಮದತ್ತಸ್ತು ತಂ ಷಷ್ಟ್ಯಾ ವಿವ್ಯಾಧೋರಸಿ ಮಾಧವಂ।
07137008c ಸಾತ್ಯಕಿಶ್ಚಾಪಿ ತಂ ರಾಜನ್ನವಿಧ್ಯತ್ಸಾಯಕೈಃ ಶಿತೈಃ।।
ರಾಜನ್! ಸೋಮದತ್ತನು ಆ ಮಾಧವನ ಎದೆಗೆ ಗುರಿಯಿಟ್ಟು ಅರವತ್ತು ಬಾಣಗಳನ್ನು ಹೊಡೆದನು. ಸಾತ್ಯಕಿಯೂ ಕೂಡ ಅವನನ್ನು ನಿಶಿತ ಸಾಯಕಗಳಿಂದ ಹೊಡೆದನು.
07137009a ತಾವನ್ಯೋನ್ಯಂ ಶರೈಃ ಕೃತ್ತೌ ವ್ಯರಾಜೇತಾಂ ನರರ್ಷಭೌ।
07137009c ಸುಪುಷ್ಪೌ ಪುಷ್ಪಸಮಯೇ ಪುಷ್ಪಿತಾವಿವ ಕಿಂಶುಕೌ।।
ಅನ್ಯೋನ್ಯರನ್ನು ಶರಗಳಿಂದ ಕತ್ತರಿಸಿದ ಆ ನರರ್ಷಭರಿಬ್ಬರೂ ಪುಷ್ಪಸಮಯದಲ್ಲಿ ಚೆನ್ನಾಗಿ ಹೂಬಿಟ್ಟ ಕಿಂಶುಕ ಮರಗಳಂತೆ ವಿರಾಜಿಸಿದರು.
07137010a ರುಧಿರೋಕ್ಷಿತಸರ್ವಾಂಗೌ ಕುರುವೃಷ್ಣಿಯಶಸ್ಕರೌ।
07137010c ಪರಸ್ಪರಮವೇಕ್ಷೇತಾಂ ದಹಂತಾವಿವ ಲೋಚನೈಃ।।
ಸರ್ವಾಂಗಗಳಿಂದಲೂ ರಕ್ತವು ಸೋರುತ್ತಿರಲು ಆ ಕುರು-ವೃಷ್ಣಿ ಯಶಸ್ಕರು ಕಣ್ಣುಗಳಿಂದಲೇ ಪರಸ್ಪರರನ್ನು ಸುಟ್ಟುಬಿಡುವರೋ ಎನ್ನುವಂತೆ ನೋಡುತ್ತಿದ್ದರು.
07137011a ರಥಮಂಡಲಮಾರ್ಗೇಷು ಚರಂತಾವರಿಮರ್ದನೌ।
07137011c ಘೋರರೂಪೌ ಹಿ ತಾವಾಸ್ತಾಂ ವೃಷ್ಟಿಮಂತಾವಿವಾಂಬುದೌ।।
ರಥಮಂಡಲ ಮಾರ್ಗಗಳಲ್ಲಿ ಸಂಚರಿಸುತ್ತಾ ಆ ಅರಿಮರ್ದನರು ಮಳೆಸುರಿಸುತ್ತಿರುವ ಘೋರರೂಪೀ ಮೋಡಗಳಂತೆ ತೋರುತ್ತಿದ್ದರು.
07137012a ಶರಸಂಭಿನ್ನಗಾತ್ರೌ ತೌ ಸರ್ವತಃ ಶಕಲೀಕೃತೌ।
07137012c ಶ್ವಾವಿಧಾವಿವ ರಾಜೇಂದ್ರ ವ್ಯದೃಷ್ಯೇತಾಂ ಶರಕ್ಷತೌ।।
ರಾಜೇಂದ್ರ! ಶರೀರದ ಪೂರ್ತಿ ಬಾಣಗಳು ಚುಚ್ಚಿಕೊಂಡಿರಲು ಬಾಣಗಳಿಂದ ಕ್ಷತವಿಕ್ಷತರಾಗಿದ್ದ ಅವರಿಬ್ಬರೂ ಗಾಯಗೊಂಡ ಮುಳ್ಳುಹಂದಿಗಳಂತೆ ತೋರುತ್ತಿದ್ದರು.
07137013a ಸುವರ್ಣಪುಂಖೈರಿಷುಭಿರಾಚಿತೌ ತೌ ವ್ಯರೋಚತಾಂ।
07137013c ಖದ್ಯೋತೈರಾವೃತೌ ರಾಜನ್ಪ್ರಾವೃಷೀವ ವನಸ್ಪತೀ।।
ಸುವರ್ಣಪುಂಖಗಳುಳ್ಳ ಬಾಣಗಳಿಂದ ಚುಚ್ಚಲ್ಪಟ್ಟ ಅವರಿಬ್ಬರೂ ವರ್ಷಾಕಾಲದಲ್ಲಿ ಮಿಣುಕುಹುಳುಗಳಿಂದ ಆವೃತ ಎರಡು ವೃಕ್ಷಗಳಂತೆ ಕಾಣುತ್ತಿದ್ದರು.
07137014a ಸಂಪ್ರದೀಪಿತಸರ್ವಾಂಗೌ ಸಾಯಕೈಸ್ತೌ ಮಹಾರಥೌ।
07137014c ಅದೃಶ್ಯೇತಾಂ ರಣೇ ಕ್ರುದ್ಧಾವುಲ್ಕಾಭಿರಿವ ಕುಂಜರೌ।।
ಸಾಯಕಗಳಿಂದ ಸರ್ವಾಂಗಗಳು ಉರಿಯುತ್ತಿರಲು ಆ ಮಹಾರಥರು ರಣದಲ್ಲಿ ಉಲ್ಕೆಗಳಂತೆ ಮತ್ತು ಎರಡು ಕ್ರುದ್ಧ ಆನೆಗಳಂತೆ ಕಾಣುತ್ತಿದ್ದರು.
07137015a ತತೋ ಯುಧಿ ಮಹಾರಾಜ ಸೋಮದತ್ತೋ ಮಹಾರಥಃ।
07137015c ಅರ್ಧಚಂದ್ರೇಣ ಚಿಚ್ಚೇದ ಮಾಧವಸ್ಯ ಮಹದ್ಧನುಃ।।
ಮಹಾರಾಜ! ಆಗ ಯುದ್ಧದಲ್ಲಿ ಮಹಾರಥ ಸೋಮದತ್ತನು ಅರ್ಧಚಂದ್ರಾಕಾರದ ಬಾಣದಿಂದ ಮಾಧವನ ಮಹಾಧನುಸ್ಸನ್ನು ತುಂಡರಿಸಿದನು.
07137016a ಅಥೈನಂ ಪಂಚವಿಂಶತ್ಯಾ ಸಾಯಕಾನಾಂ ಸಮಾರ್ಪಯತ್।
07137016c ತ್ವರಮಾಣಸ್ತ್ವರಾಕಾಲೇ ಪುನಶ್ಚ ದಶಭಿಃ ಶರೈಃ।।
ಆಗ ಅವನ ಮೇಲೆ ಇಪ್ಪತ್ತೈದು ಸಾಯಕಗಳನ್ನು ಪ್ರಯೋಗಿಸಿದನು ಮತ್ತು ತ್ವರೆಮಾಡಬೇಕಾದ ಸಮಯದಲ್ಲಿ ತ್ವರೆಮಾಡುತ್ತಾ ಪುನಃ ಹತ್ತು ಶರಗಳಿಂದ ಹೊಡೆದನು.
07137017a ಅಥಾನ್ಯದ್ಧನುರಾದಾಯ ಸಾತ್ಯಕಿರ್ವೇಗವತ್ತರಂ।
07137017c ಪಂಚಭಿಃ ಸಾಯಕೈಸ್ತೂರ್ಣಂ ಸೋಮದತ್ತಮವಿಧ್ಯತ।।
ಆಗ ಸಾತ್ಯಕಿಯು ಇನ್ನೊಂದು ವೇಗವತ್ತರ ಧನುಸ್ಸನ್ನು ಹಿಡಿದು ತಕ್ಷಣವೇ ಐದು ಸಾಯಕಗಳಿಂದ ಸೋಮದತ್ತನನ್ನು ಹೊಡೆದನು.
07137018a ತತೋಽಪರೇಣ ಭಲ್ಲೇನ ಧ್ವಜಂ ಚಿಚ್ಚೇದ ಕಾಂಚನಂ।
07137018c ಬಾಹ್ಲೀಕಸ್ಯ ರಣೇ ರಾಜನ್ಸಾತ್ಯಕಿಃ ಪ್ರಹಸನ್ನಿವ।।
ರಾಜನ್! ಆಗ ಸಾತ್ಯಕಿಯು ರಣದಲ್ಲಿ ನಗುತ್ತಾ ಇನ್ನೊಂದು ಭಲ್ಲದಿಂದ ಬಾಹ್ಲೀಕನ ಕಾಂಚನ ಧ್ವಜವನ್ನು ಕತ್ತರಿಸಿದನು.
07137019a ಸೋಮದತ್ತಸ್ತ್ವಸಂಭ್ರಾಂತೋ ದೃಷ್ಟ್ವಾ ಕೇತುಂ ನಿಪಾತಿತಂ।
07137019c ಶೈನೇಯಂ ಪಂಚವಿಂಶತ್ಯಾ ಸಾಯಕಾನಾಂ ಸಮಾಚಿನೋತ್।।
ಧ್ವಜವು ಕೆಳಗೆ ಬಿದ್ದುದನ್ನು ನೋಡಿ ಗಾಬರಿಗೊಳ್ಳದೇ ಸೋಮದತ್ತನು ಶೈನೇಯನನ್ನು ಇಪ್ಪತ್ತೈದು ಸಾಯಕಗಳಿಂದ ಹೊಡೆದನು.
07137020a ಸಾತ್ವತೋಽಪಿ ರಣೇ ಕ್ರುದ್ಧಃ ಸೋಮದತ್ತಸ್ಯ ಧನ್ವಿನಃ।
07137020c ಧನುಶ್ಚಿಚ್ಚೇದ ಸಮರೇ ಕ್ಷುರಪ್ರೇಣ ಶಿತೇನ ಹ।।
ರಣದಲ್ಲಿ ಕ್ರುದ್ಧ ಧನ್ವಿ ಸಾತ್ವತನೂ ಕೂಡ ಸಮರದಲ್ಲಿ ಹರಿತ ಕ್ಷುರಪ್ರದಿಂದ ಸೋಮದತ್ತನ ಧನುಸ್ಸನ್ನು ತುಂಡರಿಸಿದನು.
07137021a ಅಥೈನಂ ರುಕ್ಮಪುಂಖಾನಾಂ ಶತೇನ ನತಪರ್ವಣಾಂ।
07137021c ಆಚಿನೋದ್ಬಹುಧಾ ರಾಜನ್ಭಗ್ನದಂಷ್ಟ್ರಮಿವ ದ್ವಿಪಂ।।
ರಾಜನ್! ದಂತವನ್ನು ತುಂಡುಮಾಡಿ ಆನೆಯನ್ನು ಪುನಃ ಪುನಃ ಹೊಡೆಯುವಂತೆ ಅವನನ್ನು ರುಕ್ಮಪುಂಖಗಳ ನೂರಾರು ನತಪರ್ವಗಳಿಂದ ಬಹಳಷ್ಟು ಹೊಡೆದನು.
07137022a ಅಥಾನ್ಯದ್ಧನುರಾದಾಯ ಸೋಮದತ್ತೋ ಮಹಾರಥಃ।
07137022c ಸಾತ್ಯಕಿಂ ಚಾದಯಾಮಾಸ ಶರವೃಷ್ಟ್ಯಾ ಮಹಾಬಲಃ।।
ಆಗ ಮಹಾಬಲ ಮಹಾರಥ ಸೋಮದತ್ತನು ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಸಾತ್ಯಕಿಯನ್ನು ಶರವೃಷ್ಟಿಯಿಂದ ಮುಚ್ಚಿದನು.
07137023a ಸೋಮದತ್ತಂ ತು ಸಂಕ್ರುದ್ಧೋ ರಣೇ ವಿವ್ಯಾಧ ಸಾತ್ಯಕಿಃ।
07137023c ಸಾತ್ಯಕಿಂ ಚೇಷುಜಾಲೇನ ಸೋಮದತ್ತೋ ಅಪೀಡಯತ್।।
ಸಾತ್ಯಕಿಯು ರಣದಲ್ಲಿ ಸಂಕ್ರುದ್ಧನಾಗಿ ಸೋಮದತ್ತನನ್ನು ಹೊಡೆದನು. ಸೋಮದತ್ತನೂ ಕೂಡ ಸಾತ್ಯಕಿಯನ್ನು ಬಾಣಗಳ ಜಾಲದಿಂದ ಪೀಡಿಸಿದನು.
07137024a ದಶಭಿಃ ಸಾತ್ವತಸ್ಯಾರ್ಥೇ ಭೀಮೋಽಹನ್ಬಾಹ್ಲಿಕಾತ್ಮಜಂ।
07137024c ಸೋಮದತ್ತೋಽಪ್ಯಸಂಭ್ರಾಂತಃ ಶೈನೇಯಮವಧೀಚ್ಚರೈಃ।।
ಸಾತ್ವತನ ಸಹಾಯಮಾಡುತ್ತಿದ್ದ ಭೀಮನು ಆಗ ಬಾಹ್ಲೀಕಾತ್ಮಜನನ್ನು ಹತ್ತು ಬಾಣಗಳಿಂದ ಹೊಡೆದನು. ಆದರೆ ಸೋಮದತ್ತನು ಗಾಬರಿಗೊಳ್ಳದೇ ಶೈನೇಯನನ್ನು ಶರಗಳಿಂದ ಹೊಡೆದನು.
07137025a ತತಸ್ತು ಸಾತ್ವತಸ್ಯಾರ್ಥೇ ಭೈಮಸೇನಿರ್ನವಂ ದೃಢಂ।
07137025c ಮುಮೋಚ ಪರಿಘಂ ಘೋರಂ ಸೋಮದತ್ತಸ್ಯ ವಕ್ಷಸಿ।।
ಆಗ ಸಾತ್ವತನಿಗೋಸ್ಕರವಾಗಿ ಭೈಮಸೇನಿಯು ಹೊಸದಾದ ದೃಡ ಘೋರ ಪರಿಘವನ್ನು ಸೋಮದತ್ತನ ಎದೆಯಮೇಲೆ ಪ್ರಯೋಗಿಸಿದನು.
07137026a ತಮಾಪತಂತಂ ವೇಗೇನ ಪರಿಘಂ ಘೋರದರ್ಶನಂ।
07137026c ದ್ವಿಧಾ ಚಿಚ್ಚೇದ ಸಮರೇ ಪ್ರಹಸನ್ನಿವ ಕೌರವಃ।।
ವೇಗದಿಂದ ಬೀಳುತ್ತಿದ್ದ ಘೋರವಾಗಿ ಕಾಣುತ್ತಿದ್ದ ಆ ಪರಿಘವನ್ನು ಸಮರದಲ್ಲಿ ಕೌರವನು ನಸುನಗುತ್ತಾ ತುಂಡರಿಸಿದನು.
07137027a ಸ ಪಪಾತ ದ್ವಿಧಾ ಚಿನ್ನ ಆಯಸಃ ಪರಿಘೋ ಮಹಾನ್।
07137027c ಮಹೀಧರಸ್ಯೇವ ಮಹಚ್ಚಿಖರಂ ವಜ್ರದಾರಿತಂ।।
ಕಬ್ಬಿಣದ ಆ ಮಹಾ ಪರಿಘವು ಎರಡಾಗಿ ವಜ್ರದಿಂದ ಸೀಳಲ್ಪಟ್ಟ ಮಹಾ ಶಿಖರದಂತೆ ಭೂಮಿಯ ಮೇಲೆ ಬಿದ್ದಿತು.
07137028a ತತಸ್ತು ಸಾತ್ಯಕೀ ರಾಜನ್ಸೋಮದತ್ತಸ್ಯ ಸಮ್ಯುಗೇ।
07137028c ಧನುಶ್ಚಿಚ್ಚೇದ ಭಲ್ಲೇನ ಹಸ್ತಾವಾಪಂ ಚ ಪಂಚಭಿಃ।।
ರಾಜನ್! ಆಗ ಸಂಯುಗದಲ್ಲಿ ಸಾತ್ಯಕಿಯು ಭಲ್ಲದಿಂದ ಸೋಮದತ್ತನ ಧನುಸ್ಸನ್ನು ಕತ್ತರಿಸಿದನು ಮತ್ತು ಐದು ಬಾಣಗಳಿಂದ ಅವನ ಕೈಚೀಲವನ್ನು ಕತ್ತರಿಸಿದನು.
07137029a ಚತುರ್ಭಿಸ್ತು ಶರೈಸ್ತೂರ್ಣಂ ಚತುರಸ್ತುರಗೋತ್ತಮಾನ್।
07137029c ಸಮೀಪಂ ಪ್ರೇಷಯಾಮಾಸ ಪ್ರೇತರಾಜಸ್ಯ ಭಾರತ।।
ಭಾರತ! ತಕ್ಷಣವೇ ನಾಲ್ಕು ಬಾಣಗಳಿಂದ ಅವನ ನಾಲ್ಕು ಉತ್ತಮ ಕುದುರೆಗಳನ್ನೂ ಪ್ರೇತರಾಜನ ಸಮೀಪಕ್ಕೆ ಕಳುಹಿಸಿದನು.
07137030a ಸಾರಥೇಶ್ಚ ಶಿರಃ ಕಾಯಾದ್ಭಲ್ಲೇನ ನತಪರ್ವಣಾ।
07137030c ಜಹಾರ ರಥಶಾರ್ದೂಲಃ ಪ್ರಹಸಂ ಶಿನಿಪುಂಗವಃ।।
ರಥಶಾರ್ದೂಲ ಶಿನಿಪುಂಗವನು ನಸುನಗುತ್ತಾ ನತಪರ್ವಣ ಭಲ್ಲದಿಂದ ಸಾರಥಿಯ ಶಿರವನ್ನು ಅಪಹರಿಸಿದನು.
07137031a ತತಃ ಶರಂ ಮಹಾಘೋರಂ ಜ್ವಲಂತಮಿವ ಪಾವಕಂ।
07137031c ಮುಮೋಚ ಸಾತ್ವತೋ ರಾಜನ್ಸ್ವರ್ಣಪುಂಖಂ ಶಿಲಾಶಿತಂ।।
ರಾಜನ್! ಆಗ ಸಾತ್ವತನು ಪಾವಕನಂತೆ ಉರಿಯುತ್ತಿರುವ ಮಹಾಘೋರ ಶಿಲಾಶಿತ ಸ್ವರ್ಣಪುಂಖವನ್ನು ಪ್ರಯೋಗಿಸಿದನು.
07137032a ಸ ವಿಮುಕ್ತೋ ಬಲವತಾ ಶೈನೇಯೇನ ಶರೋತ್ತಮಃ।
07137032c ಘೋರಸ್ತಸ್ಯೋರಸಿ ವಿಭೋ ನಿಪಪಾತಾಶು ಭಾರತ।।
ಭಾರತ! ವಿಭೋ! ಶೈನೇಯನಿಂದ ಬಲವತ್ತರವಾಗಿ ಪ್ರಯೋಗಿಸಲ್ಪಟ್ಟ ಆ ಉತ್ತಮ ಘೋರ ಶರವು ಸೋಮದತ್ತನ ಎದೆಯಮೇಲೆ ಬಿದ್ದು ನಾಟಿತು.
07137033a ಸೋಽತಿವಿದ್ಧೋ ಬಲವತಾ ಸಾತ್ವತೇನ ಮಹಾರಥಃ।
07137033c ಸೋಮದತ್ತೋ ಮಹಾಬಾಹುರ್ನಿಪಪಾತ ಮಮಾರ ಚ।।
ಈ ರೀತಿ ಸಾತ್ವತನಿಂದ ಬಲವತ್ತರವಾಗಿ ಹೊಡೆಯಲ್ಪಟ್ಟ ಮಹಾರಥ ಮಹಾಬಾಹು ಸೋಮದತ್ತನು ಕೆಳಗಿ ಬಿದ್ದು ಅಸುನೀಗಿದನು.
07137034a ತಂ ದೃಷ್ಟ್ವಾ ನಿಹತಂ ತತ್ರ ಸೋಮದತ್ತಂ ಮಹಾರಥಾಃ।
07137034c ಮಹತಾ ಶರವರ್ಷೇಣ ಯುಯುಧಾನಮುಪಾದ್ರವನ್।।
ಸೋಮದತ್ತನು ಅಲ್ಲಿ ಹತನಾದುದನ್ನು ನೋಡಿ ಮಹಾರಥರು ಮಹಾ ಶರವರ್ಷಗಳಿಂದ ಯುಯುಧಾನನನ್ನು ಆಕ್ರಮಣಿಸಿದರು.
07137035a ಚಾದ್ಯಮಾನಂ ಶರೈರ್ದೃಷ್ಟ್ವಾ ಯುಯುಧಾನಂ ಯುಧಿಷ್ಠಿರಃ।
07137035c ಮಹತ್ಯಾ ಸೇನಯಾ ಸಾರ್ಧಂ ದ್ರೋಣಾನೀಕಮುಪಾದ್ರವತ್।।
ಶರಗಳಿಂದ ಮುಚ್ಚಲ್ಪಟ್ಟ ಯುಯುಧಾನನನ್ನು ನೋಡಿ ಯುಧಿಷ್ಠಿರನು ಮಹಾ ಸೇನೆಯೊಂದಿಗೆ ದ್ರೋಣನ ಸೇನೆಯನ್ನು ಆಕ್ರಮಣಿಸಿದನು.
07137036a ತತೋ ಯುಧಿಷ್ಠಿರಃ ಕ್ರುದ್ಧಸ್ತಾವಕಾನಾಂ ಮಹಾಬಲಂ।
07137036c ಶರೈರ್ವಿದ್ರಾವಯಾಮಾಸ ಭಾರದ್ವಾಜಸ್ಯ ಪಶ್ಯತಃ।।
ಆಗ ಕ್ರುದ್ಧ ಯುಧಿಷ್ಠಿರನು, ಭಾರದ್ವಾಜನು ನೋಡುತ್ತಿದ್ದಂತೆಯೇ, ನಿನ್ನ ಮಹಾಬಲವನ್ನು ಶರಗಳಿಂದ ಹೊಡೆದು ಪಲಾಯನಗೊಳಿಸಿದನು.
07137037a ಸೈನ್ಯಾನಿ ದ್ರಾವಯಂತಂ ತು ದ್ರೋಣೋ ದೃಷ್ಟ್ವಾ ಯುಧಿಷ್ಠಿರಂ।
07137037c ಅಭಿದುದ್ರಾವ ವೇಗೇನ ಕ್ರೋಧಸಂರಕ್ತಲೋಚನಃ।।
ಸೇನೆಗಳನ್ನು ಪಲಾಯನಗೊಳಿಸುತ್ತಿದ್ದ ಯುಧಿಷ್ಠಿರನನ್ನು ನೋಡಿ ದ್ರೋಣನು ಕ್ರೋಧದಿಂದ ಕೆಂಗಣ್ಣುಗಳುಳ್ಳವನಾಗಿ ವೇಗದಿಂದ ಅವನನ್ನು ಆಕ್ರಮಣಿಸಿದನು.
07137038a ತತಃ ಸುನಿಶಿತೈರ್ಬಾಣೈಃ ಪಾರ್ಥಂ ವಿವ್ಯಾಧ ಸಪ್ತಭಿಃ।
07137038c ಸೋಽತಿವಿದ್ಧೋ ಮಹಾಬಾಹುಃ ಸೃಕ್ಕಿಣೀ ಪರಿಸಂಲಿಹನ್।
07137038e ಯುಧಿಷ್ಠಿರಸ್ಯ ಚಿಚ್ಚೇದ ಧ್ವಜಂ ಕಾರ್ಮುಕಮೇವ ಚ।।
ಆಗ ಅವನು ಪಾರ್ಥನನ್ನು ಏಳು ನಿಶಿತ ಬಾಣಗಳಿಂದ ಹೊಡೆದನು. ಹಾಗೆ ಗಾಢವಾಗಿ ಹೊಡೆದು ಕಟವಾಯಿಯನ್ನು ಸವರುತ್ತಾ ಅವನು ಯುಧಿಷ್ಠಿರನ ಧ್ವಜವನ್ನೂ ಧನುಸ್ಸನ್ನೂ ತುಂಡರಿಸಿದನು.
07137039a ಸ ಚಿನ್ನಧನ್ವಾ ತ್ವರಿತಸ್ತ್ವರಾಕಾಲೇ ನೃಪೋತ್ತಮಃ।
07137039c ಅನ್ಯದಾದತ್ತ ವೇಗೇನ ಕಾರ್ಮುಕಂ ಸಮರೇ ದೃಢಂ।।
ತ್ವರೆಮಾಡಬೇಕಾದ ಸಮಯದಲ್ಲಿ ತ್ವರೆಮಾಡುತ್ತಾ ಆ ನೃಪೋತ್ತಮನು ವೇಗದಿಂದ ಸಮರದಲ್ಲಿ ಇನ್ನೊಂದು ದೃಢ ಧನುಸ್ಸನ್ನು ತೆಗೆದುಕೊಂಡನು.
07137040a ತತಃ ಶರಸಹಸ್ರೇಣ ದ್ರೋಣಂ ವಿವ್ಯಾಧ ಪಾರ್ಥಿವಃ।
07137040c ಸಾಶ್ವಸೂತಧ್ವಜರಥಂ ತದದ್ಭುತಮಿವಾಭವತ್।।
ಆಗ ಪಾರ್ಥಿವನು ನೂರಾರು ಸಹಸ್ರಾರು ಬಾಣಗಳಿಂದ ದ್ರೋಣನನ್ನು ಹೊಡೆದನು ಮತ್ತು ಅವನ ಕುದುರೆ-ಸೂತ-ಧ್ವಜ-ರಥಗಳನ್ನು ಹೊಡೆದನು. ಅದೊಂದು ಅದ್ಭುತವಾಗಿತ್ತು.
07137041a ತತೋ ಮುಹೂರ್ತಂ ವ್ಯಥಿತಃ ಶರಘಾತಪ್ರಪೀಡಿತಃ।
07137041c ನಿಷಸಾದ ರಥೋಪಸ್ಥೇ ದ್ರೋಣೋ ಭರತಸತ್ತಮ।।
ಭರತಸತ್ತಮ! ಆಗ ಶರಘಾತದಿಂದ ಪೀಡಿತ ದ್ರೋಣನು ಮುಹೂರ್ತಕಾಲ ರಥದಲ್ಲಿಯೇ ಕುಸಿದು ಕುಳಿತುಕೊಂಡನು.
07137042a ಪ್ರತಿಲಭ್ಯ ತತಃ ಸಂಜ್ಞಾಂ ಮುಹೂರ್ತಾದ್ದ್ವಿಜಸತ್ತಮಃ।
07137042c ಕ್ರೋಧೇನ ಮಹತಾವಿಷ್ಟೋ ವಾಯವ್ಯಾಸ್ತ್ರಮವಾಸೃಜತ್।।
ಆಗ ಮುಹೂರ್ತದಲ್ಲಿಯೇ ಸಂಜ್ಞೆಯನ್ನು ಪಡೆದು ದ್ವಿಜಸತ್ತಮನು ಕ್ರೋಧದಿಂದ ಮಹಾವಿಷ್ಟನಾಗಿ ವಾಯವ್ಯಾಸ್ತ್ರವನ್ನು ಪ್ರಯೋಗಿಸಿದನು.
07137043a ಅಸಂಭ್ರಾಂತಸ್ತತಃ ಪಾರ್ಥೋ ಧನುರಾಕೃಷ್ಯ ವೀರ್ಯವಾನ್।
07137043c ತದಸ್ತ್ರಮಸ್ತ್ರೇಣ ರಣೇ ಸ್ತಂಭಯಾಮಾಸ ಭಾರತ।।
ಭಾರತ! ಆಗ ವೀರ್ಯವಾನ್ ಪಾರ್ಥನು ಗಾಬರಿಗೊಳ್ಳದೇ ಧನುಸ್ಸನ್ನು ಸೆಳೆದು ರಣದಲ್ಲಿ ಆ ಅಸ್ತ್ರವನ್ನು ಅಸ್ತ್ರದಿಂದಲೇ ಸ್ತಂಭಗೊಳಿಸಿದನು.
07137044a ತತೋಽಬ್ರವೀದ್ವಾಸುದೇವಃ ಕುಂತೀಪುತ್ರಂ ಯುಧಿಷ್ಠಿರಂ।
07137044c ಯುಧಿಷ್ಠಿರ ಮಹಾಬಾಹೋ ಯತ್ತ್ವಾ ವಕ್ಷ್ಯಾಮಿ ತಚ್ಚೃಣು।।
ಆಗ ವಾಸುದೇವನು ಕುಂತೀಪುತ್ರ ಯುಧಿಷ್ಠಿರನಿಗೆ ಹೇಳಿದನು: “ಮಹಾಬಾಹೋ! ಯುಧಿಷ್ಠಿರ! ನಾನು ಹೇಳುವುದನ್ನು ಪ್ರಯತ್ನಿಸಿ ಕೇಳು!
07137045a ಉಪಾರಮಸ್ವ ಯುದ್ಧಾಯ ದ್ರೋಣಾದ್ಭರತಸತ್ತಮ।
07137045c ಗೃಧ್ಯತೇ ಹಿ ಸದಾ ದ್ರೋಣೋ ಗ್ರಹಣೇ ತವ ಸಮ್ಯುಗೇ।।
ಭರತಸತ್ತಮ! ದ್ರೋಣನೊಡನೆ ಮಾಡುವ ಈ ಯುದ್ಧವನ್ನು ಕೊನೆಗೊಳಿಸು. ಯುದ್ಧದಲ್ಲಿ ದ್ರೋಣನು ನಿನ್ನನ್ನು ಹಿಡಿಯುವುದಕ್ಕಾಗಿಯೇ ಸದಾ ಪ್ರಯತ್ನಿಸುತ್ತಿದ್ದಾನೆ.
07137046a ನಾನುರೂಪಮಹಂ ಮನ್ಯೇ ಯುದ್ಧಮಸ್ಯ ತ್ವಯಾ ಸಹ।
07137046c ಯೋಽಸ್ಯ ಸೃಷ್ಟೋ ವಿನಾಶಾಯ ಸ ಏನಂ ಶ್ವೋ ಹನಿಷ್ಯತಿ।।
ಆದುದರಿಂದ ನೀನು ಅವನೊಡನೆ ಯುದ್ಧಮಾಡುವುದು ನಿನಗೆ ಉಚಿತವೆಂದು ತೋರುವುದಿಲ್ಲ. ಇವನ ವಿನಾಶಕ್ಕಾಗಿ ಯಾರು ಸೃಸ್ಟಿಸಲ್ಪಟ್ಟಿರುವನೋ ಅವನು ಇವನನ್ನು ನಾಳೆ ಕೊಲ್ಲುವವನಿದ್ದಾನೆ.
07137047a ಪರಿವರ್ಜ್ಯ ಗುರುಂ ಯಾಹಿ ಯತ್ರ ರಾಜಾ ಸುಯೋಧನಃ।
07137047c ಭೀಮಶ್ಚ ರಥಶಾರ್ದೂಲೋ ಯುಧ್ಯತೇ ಕೌರವೈಃ ಸಹ।।
ಗುರುವನ್ನು ತೊರೆದು ಎಲ್ಲಿ ರಾಜಾ ಸುಯೋಧನನು ಕೌರವರೊಡಗೂಡಿ ರಥಶಾರ್ದೂಲ ಭೀಮನೊಡನೆ ಯುದ್ಧಮಾಡುತ್ತಿರುವನೋ ಅಲ್ಲಿಗೆ ಹೋಗು.”
07137048a ವಾಸುದೇವವಚಃ ಶ್ರುತ್ವಾ ಧರ್ಮರಾಜೋ ಯುಧಿಷ್ಠಿರಃ।
07137048c ಮುಹೂರ್ತಂ ಚಿಂತಯಿತ್ವಾ ತು ತತೋ ದಾರುಣಮಾಹವಂ।।
ವಾಸುದೇವನ ಮಾತನ್ನು ಕೇಳಿ ಧರ್ಮರಾಜ ಯುಧಿಷ್ಠಿರನು ಮುಹೂರ್ತಕಾಲ ಆ ದಾರುಣ ಯುದ್ಧದ ಕುರಿತು ಯೋಚಿಸಿದನು.
07137049a ಪ್ರಾಯಾದ್ದ್ರುತಮಮಿತ್ರಘ್ನೋ ಯತ್ರ ಭೀಮೋ ವ್ಯವಸ್ಥಿತಃ।
07137049c ವಿನಿಘ್ನಂಸ್ತಾವಕಾನ್ಯೋಧಾನ್ವ್ಯಾದಿತಾಸ್ಯ ಇವಾಂತಕಃ।।
ಅನಂತರ ಬಾಯ್ದೆರೆದ ಅಂತಕನಂತೆ ನಿನ್ನಕಡೆಯ ಯೋಧರನ್ನು ಸಂಹರಿಸುತ್ತಾ ಆ ಅಮಿತ್ರಘ್ನನು ಭೀಮನು ಎಲ್ಲಿದ್ದನೋ ಅಲ್ಲಿಗೆ ಧಾವಿಸಿದನು.
07137050a ರಥಘೋಷೇಣ ಮಹತಾ ನಾದಯನ್ವಸುಧಾತಲಂ।
07137050c ಪರ್ಜನ್ಯ ಇವ ಘರ್ಮಾಂತೇ ನಾದಯನ್ವೈ ದಿಶೋ ದಶ।।
07137051a ಭೀಮಸ್ಯ ನಿಘ್ನತಃ ಶತ್ರೂನ್ಪಾರ್ಷ್ಣಿಂ ಜಗ್ರಾಹ ಪಾಂಡವಃ।
07137051c ದ್ರೋಣೋಽಪಿ ಪಾಂಡುಪಾಂಚಾಲಾನ್ವ್ಯಧಮದ್ರಜನೀಮುಖೇ।।
ಮಹಾರಥಘೋಷದಿಂದ ವಸುಧಾತಲವನ್ನು ಮೊಳಗಿಸುತ್ತಾ, ಬೇಸಗೆಯ ಕೊಲೆಯಲ್ಲಿನ ಮೋಡಗಳಂತೆ ದಿಕ್ಕು ದಿಕ್ಕುಗಳನ್ನು ಮೊಳಗುತ್ತಾ ಪಾಂಡವನು ಶತ್ರುಗಳನ್ನು ಸಂಹರಿಸುತ್ತಿದ್ದ ಭೀಮನ ಪಾರ್ಷ್ಣಿಯನ್ನು ಹಿಡಿದನು. ದ್ರೋಣನೂ ಕೂಡ ಆ ರಾತ್ರಿಯಲ್ಲಿ ಪಾಂಡು-ಪಾಂಚಾಲರನ್ನು ವಧಿಸತೊಡಗಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಸೋಮದತ್ತವಧೇ ಸಪ್ತತ್ರಿಂಶಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಸೋಮದತ್ತವಧ ಎನ್ನುವ ನೂರಾಮೂವತ್ತೇಳನೇ ಅಧ್ಯಾಯವು.