136 ರಾತ್ರಿಯುದ್ಧೇ ಸಂಕುಲಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಘಟೋತ್ಕಚವಧ ಪರ್ವ

ಅಧ್ಯಾಯ 136

ಸಾರ

ಅರ್ಜುನನು ಕೌರವ ಸೇನೆಯನ್ನು ಪಲಾಯನಗೊಳಿಸಿದುದು (1-19).

07136001 ಸಂಜಯ ಉವಾಚ।
07136001a ತತೋ ಯುಧಿಷ್ಠಿರಶ್ಚೈವ ಭೀಮಸೇನಶ್ಚ ಪಾಂಡವಃ।
07136001c ದ್ರೋಣಪುತ್ರಂ ಮಹಾರಾಜ ಸಮಂತಾತ್ಪರ್ಯವಾರಯನ್।।

ಸಂಜಯನು ಹೇಳಿದನು: “ಮಹಾರಾಜ! ಆಗ ಯುಧಿಷ್ಠಿರನೂ ಪಾಂಡವ ಭೀಮಸೇನನೂ ದ್ರೋಣಪುತ್ರನನ್ನು ಎಲ್ಲಕಡೆಗಳಿಂದ ಮುತ್ತಿಗೆ ಹಾಕಿದರು.

07136002a ತತೋ ದುರ್ಯೋಧನೋ ರಾಜಾ ಭಾರದ್ವಾಜೇನ ಸಂವೃತಃ।
07136002c ಅಭ್ಯಯಾತ್ಪಾಂಡವಾನ್ಸಂಖ್ಯೇ ತತೋ ಯುದ್ಧಮವರ್ತತ।
07136002e ಘೋರರೂಪಂ ಮಹಾರಾಜ ಭೀರೂಣಾಂ ಭಯವರ್ಧನಂ।।

ಆಗ ರಾಜಾ ದುರ್ಯೋಧನನು ಭಾರದ್ವಾಜನಿಂದ ಸುತ್ತುವರೆಯಲ್ಪಟ್ಟು ಪಾಂಡವರನ್ನು ಆಕ್ರಮಣಿಸಿದನು. ಮಹಾರಾಜ! ಆಗ ರಣದಲ್ಲಿ ಹೇಡಿಗಳ ಭಯವನ್ನು ಹೆಚ್ಚಿಸುವ ಘೋರರೂಪದ ಯುದ್ಧವು ನಡೆಯಿತು.

07136003a ಅಂಬಷ್ಠಾನ್ಮಾಲವಾನ್ವಂಗಾಂ ಶಿಬೀಂಸ್ತ್ರೈಗರ್ತಕಾನಪಿ।
07136003c ಪ್ರಾಹಿಣೋನ್ಮೃತ್ಯುಲೋಕಾಯ ಗಣಾನ್ಕ್ರುದ್ಧೋ ಯುಧಿಷ್ಠಿರಃ।।

ಕ್ರುದ್ಧ ಯುಧಿಷ್ಠಿರನು ಅಂಬಷ್ಠರನ್ನೂ, ಮಾಲವರನ್ನೂ, ವಂಗರನ್ನೂ, ಶಿಬಿಗಳನ್ನೂ, ತೈಗರ್ತರ ಗಣಗಳನ್ನೂ ಮೃತ್ಯುಲೋಕಕ್ಕೆ ಕಳುಹಿಸಿದನು.

07136004a ಅಭೀಷಾಹಾಂ ಶೂರಸೇನಾನ್ ಕ್ಷತ್ರಿಯಾನ್ಯುದ್ಧದುರ್ಮದಾನ್।
07136004c ನಿಕೃತ್ಯ ಪೃಥಿವೀಂ ಚಕ್ರೇ ಭೀಮಃ ಶೋಣಿತಕರ್ದಮಾಂ।।

ಭೀಮನು ಅಭೀಷಾಹರನ್ನೂ, ಶೂರಸೇನರನ್ನೂ, ಯುದ್ಧದುರ್ಮದ ಕ್ಷತ್ರಿಯರನ್ನೂ ಸಂಹರಿಸಿ ಪೃಥ್ವಿಯನ್ನು ರಕ್ತ ಮಾಂಸಗಳಿಂದ ತೋಯಿಸಿದನು.

07136005a ಯೌಧೇಯಾರಟ್ಟರಾಜನ್ಯಾನ್ಮದ್ರಕಾಂಶ್ಚ ಗಣಾನ್ಯುಧಿ।
07136005c ಪ್ರಾಹಿಣೋನ್ಮೃತ್ಯುಲೋಕಾಯ ಕಿರೀಟೀ ನಿಶಿತೈಃ ಶರೈಃ।।

ಕಿರೀಟಿಯು ಯುದ್ಧದಲ್ಲಿ ನಿಶಿತ ಶರಗಳಿಂದ ಯೌಧೇಯರನ್ನೂ, ಅಟ್ಟರಾಜರನ್ನೂ, ಮತ್ತು ಮದ್ರಕ ಗಣಗಳನ್ನೂ ಮೃತ್ಯುಲೋಕಕ್ಕೆ ಕಳುಹಿಸಿದನು.

07136006a ಪ್ರಗಾಢಮಂಜೋಗತಿಭಿರ್ನಾರಾಚೈರಭಿಪೀಡಿತಾಃ।
07136006c ನಿಪೇತುರ್ದ್ವಿರದಾ ಭೂಮೌ ದ್ವಿಶೃಂಗಾ ಇವ ಪರ್ವತಾಃ।।

ವೇಗವಾಗಿ ಹೋಗುತ್ತಿರುವ ನಾರಾಚಗಳಿಂದ ಗಾಡವಾಗಿ ಪೀಡಿತ ಆನೆಗಳು ಎರಡು ಶೃಂಗಗಳುಳ್ಳ ಪರ್ವತಗಳಂತೆ ಭೂಮಿಯ ಮೇಲೆ ಬಿದ್ದವು.

07136007a ನಿಕೃತ್ತೈರ್ಹಸ್ತಿಹಸ್ತೈಶ್ಚ ಲುಠಮಾನೈಸ್ತತಸ್ತತಃ।
07136007c ರರಾಜ ವಸುಧಾ ಕೀರ್ಣಾ ವಿಸರ್ಪದ್ಭಿರಿವೋರಗೈಃ।।

ಕತ್ತರಿಸಲ್ಪಟ್ಟು ಅಲ್ಲಲ್ಲಿ ಬಿದ್ದು ವಿಲವಿಲ ಒದ್ದಾಡುತ್ತಿದ್ದ ಆನೆಗಳ ಸೊಂಡಿಲುಗಳಿಂದ ತುಂಬಿದ ರಣಭೂಮಿಯು ಹರಿದುಹೋಗುತ್ತಿದ್ದ ಸರ್ಪಗಳಿಂದ ತುಂಬಿಕೊಂಡಿದೆಯೋ ಎಂಬಂತೆ ಕಾಣುತ್ತಿತ್ತು.

07136008a ಕ್ಷಿಪ್ತೈಃ ಕನಕಚಿತ್ರೈಶ್ಚ ನೃಪಚ್ಚತ್ರೈಃ ಕ್ಷಿತಿರ್ಬಭೌ।
07136008c ದ್ಯೌರಿವಾದಿತ್ಯಚಂದ್ರಾದ್ಯೈರ್ಗ್ರಹೈಃ ಕೀರ್ಣಾ ಯುಗಕ್ಷಯೇ।।

ತುಂಡಾಗಿ ಕೆಳಗೆ ಬಿದ್ದಿದ್ದ ಕನಕ ಚಿತ್ರಗಳಿಂದ ಅಲಂಕೃತಗೊಂಡಿದ್ದ ರಾಜರ ಚತ್ರಗಳಿಂದ ಭೂಮಿಯು ಯುಗಾಂತದಲ್ಲಿ ಸೂರ್ಯ ಚಂದ್ರ ಮತ್ತು ಇತರ ಗ್ರಹಗಳು ಚೆಲ್ಲಿದ ಆಕಾಶದಂತೆ ತೋರುತ್ತಿತ್ತು.

07136009a ಹತ ಪ್ರಹರತಾಭೀತಾ ವಿಧ್ಯತ ವ್ಯವಕೃಂತತ।
07136009c ಇತ್ಯಾಸೀತ್ತುಮುಲಃ ಶಬ್ದಃ ಶೋಣಾಶ್ವಸ್ಯ ರಥಂ ಪ್ರತಿ।।

ಶೋಣಿತಾಶ್ವ ದ್ರೋಣನ ರಥದ ಬಳಿ “ಭಯವಿಲ್ಲದೇ ಸಂಹರಿಸಿ! ಹೊಡೆಯಿರಿ! ಬಾಣಗಳಿಂದ ಕತ್ತರಿಸಿರಿ!” ಎಂಬ ತುಮುಲ ಕೂಗುಗಳು ಕೇಳಿಬಂದವು.

07136010a ದ್ರೋಣಸ್ತು ಪರಮಕ್ರುದ್ಧೋ ವಾಯವ್ಯಾಸ್ತ್ರೇಣ ಸಮ್ಯುಗೇ।
07136010c ವ್ಯಧಮತ್ತಾನ್ಯಥಾ ವಾಯುರ್ಮೇಘಾನಿವ ದುರತ್ಯಯಃ।।

ದ್ರೋಣನಾದರೋ ಸಂಯುಗದಲ್ಲಿ ಪರಮ ಕ್ರುದ್ಧನಾಗಿ ವಾಯವ್ಯಾಸ್ತ್ರದಿಂದ ಅಸಾಧ್ಯ ಚಂಡಮಾರುತವು ಮೇಘಗಳನ್ನು ಚದುರಿಸುವಂತೆ ಶತ್ರುಸೇನೆಯನ್ನು ಧ್ವಂಸಗೊಳಿಸಿದನು.

07136011a ತೇ ಹನ್ಯಮಾನಾ ದ್ರೋಣೇನ ಪಾಂಚಾಲಾಃ ಪ್ರಾದ್ರವನ್ಭಯಾತ್।
07136011c ಪಶ್ಯತೋ ಭೀಮಸೇನಸ್ಯ ಪಾರ್ಥಸ್ಯ ಚ ಮಹಾತ್ಮನಃ।।

ಭೀಮಸೇನ ಮತ್ತು ಮಹಾತ್ಮ ಪಾರ್ಥರು ನೋಡುತ್ತಿದ್ದಂತೆಯೇ ದ್ರೋಣನಿಂದ ಸಂಹರಿಸಲ್ಪಡುತ್ತಿದ್ದ ಪಾಂಚಾಲರು ಭಯದಿಂದ ಪಲಾಯನಗೈದರು.

07136012a ತತಃ ಕಿರೀಟೀ ಭೀಮಶ್ಚ ಸಹಸಾ ಸಮ್ನ್ಯವರ್ತತಾಂ।
07136012c ಮಹತಾ ರಥವಂಶೇನ ಪರಿಗೃಹ್ಯ ಬಲಂ ತವ।।

ಆಗ ತಕ್ಷಣವೇ ಕಿರೀಟೀ ಮತ್ತು ಭೀಮರು ದೊಡ್ಡ ರಥಸೈನ್ಯದೊಂದಿಗೆ ನಿನ್ನ ಸೇನೆಯನ್ನು ಹಿಡಿದು ಆಕ್ರಮಣಿಸಿದರು.

07136013a ಬೀಭತ್ಸುರ್ದಕ್ಷಿಣಂ ಪಾರ್ಶ್ವಮುತ್ತರಂ ತು ವೃಕೋದರಃ।
07136013c ಭಾರದ್ವಾಜಂ ಶರೌಘಾಭ್ಯಾಂ ಮಹದ್ಭ್ಯಾಮಭ್ಯವರ್ಷತಾಂ।।

ಎಡಗಡೆಯಿಂದ ಬೀಭತ್ಸುವೂ ಬಲಗಡೆಯಿಂದ ವೃಕೋದರನೂ ಮಹಾ ಶರಸಮೂಹಗಳನ್ನು ಭಾರದ್ವಾಜನ ಮೇಲೆ ಸುರಿಸಿದರು.

07136014a ತೌ ತದಾ ಸೃಂಜಯಾಶ್ಚೈವ ಪಾಂಚಾಲಾಶ್ಚ ಮಹಾರಥಾಃ।
07136014c ಅನ್ವಗಚ್ಚನ್ಮಹಾರಾಜ ಮತ್ಸ್ಯಾಶ್ಚ ಸಹ ಸೋಮಕೈಃ।।

ಮಹಾರಾಜ! ಆಗ ಅವರಿಬ್ಬರನ್ನೂ ಸೃಂಜಯರು, ಮಹಾರಥ ಪಾಂಚಾಲರು, ಸೋಮಕರೊಂದಿಗೆ ಮತ್ಸ್ಯರು ಅನುಸರಿಸಿ ಹೋದರು.

07136015a ತಥೈವ ತವ ಪುತ್ರಸ್ಯ ರಥೋದಾರಾಃ ಪ್ರಹಾರಿಣಃ।
07136015c ಮಹತ್ಯಾ ಸೇನಯಾ ಸಾರ್ಧಂ ಜಗ್ಮುರ್ದ್ರೋಣರಥಂ ಪ್ರತಿ।।

ಹಾಗೆಯೇ ರಥೋದಾರ ಪ್ರಹಾರಿ ನಿನ್ನ ಪುತ್ರರೂ ಕೂಡ ಮಹಾ ಸೇನೆಯೊಂದಿಗೆ ದ್ರೋಣನ ರಥದ ಕಡೆ ಬಂದರು.

07136016a ತತಃ ಸಾ ಭರತೀ ಸೇನಾ ವಧ್ಯಮಾನಾ ಕಿರೀಟಿನಾ।
07136016c ತಮಸಾ ನಿದ್ರಯಾ ಚೈವ ಪುನರೇವ ವ್ಯದೀರ್ಯತ।।

ಆಗ ಕಿರೀಟಿಯಿಂದ ಸಂಹರಿಸಲ್ಪಡುತ್ತಿದ್ದ ಆ ಭಾರತೀ ಸೇನೆಯು ನಿದ್ರೆ ಮತ್ತು ಕತ್ತಲೆಗಳಿಂದಾಗಿ ಪುನಃ ಭಗ್ನವಾಗಿ ಹೋಯಿತು.

07136017a ದ್ರೋಣೇನ ವಾರ್ಯಮಾಣಾಸ್ತೇ ಸ್ವಯಂ ತವ ಸುತೇನ ಚ।
07136017c ನ ಶಕ್ಯಂತೇ ಮಹಾರಾಜ ಯೋಧಾ ವಾರಯಿತುಂ ತದಾ।।

ಮಹಾರಾಜ! ಓಡಿಹೋಗುತ್ತಿದ್ದವರನ್ನು ದ್ರೋಣ ಮತ್ತು ಸ್ವಯಂ ನಿನ್ನ ಮಗನು ತಡೆಯಲು ಪ್ರಯತ್ನಿಸಿದರೂ ಆ ಯೋಧರನ್ನು ತಡೆಯಲು ಅವರು ಶಕ್ಯರಾಗಲಿಲ್ಲ.

07136018a ಸಾ ಪಾಂಡುಪುತ್ರಸ್ಯ ಶರೈರ್ದಾರ್ಯಮಾಣಾ ಮಹಾಚಮೂಃ।
07136018c ತಮಸಾ ಸಂವೃತೇ ಲೋಕೇ ವ್ಯದ್ರವತ್ಸರ್ವತೋಮುಖೀ।।

ಪಾಂಡುಪುತ್ರನ ಶರಗಳಿಂದ ಇರಿಯಲ್ಪಡುತ್ತಿದ್ದ ಆ ಮಹಾಸೇನೆಯು ಕತ್ತಲೆಯಿಂದ ಆವರಿಸಲ್ಪಟ್ಟಿದ್ದ ಆ ಲೋಕದಲ್ಲಿ ಸರ್ವತೋಮುಖಿಯಾಗಿ ಓಡಿಹೋಯಿತು.

07136019a ಉತ್ಸೃಜ್ಯ ಶತಶೋ ವಾಹಾಂಸ್ತತ್ರ ಕೇ ಚಿನ್ನರಾಧಿಪಾಃ।
07136019c ಪ್ರಾದ್ರವಂತ ಮಹಾರಾಜ ಭಯಾವಿಷ್ಟಾಃ ಸಮಂತತಃ।।

ಮಹಾರಾಜ! ಕೆಲವು ನರಾಧಿಪರು ನೂರಾರು ವಾಹನಗಳನ್ನು ಅಲ್ಲಿಯೇ ಬಿಟ್ಟು ಭಯಾವಿಷ್ಟರಾಗಿ ಎಲ್ಲಕಡೆ ಓಡಿಹೋದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಸಂಕುಲಯುದ್ಧೇ ಷಟ್ತ್ರಿಂಶಾಧಿಕಶತತಮೋಽಧ್ಯಾಯಃ ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಸಂಕುಲಯುದ್ಧ ಎನ್ನುವ ನೂರಾಮೂವತ್ತಾರನೇ ಅಧ್ಯಾಯವು.