ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಘಟೋತ್ಕಚವಧ ಪರ್ವ
ಅಧ್ಯಾಯ 134
ಸಾರ
ಕರ್ಣನು ಕೃಪನಿಗೆ ಆಡಿದ ಮಾತನ್ನು ಕೇಳಿ ಅಶ್ವತ್ಥಾಮನು ಕ್ರೋಧಿತನಾಗಲು ದುರ್ಯೋಧನನು ಅವನನ್ನು ಸಮಾಧಾನಗೊಳಿಸಿದುದು (1-8). ಕರ್ಣನ ಪರಾಕ್ರಮ (9-28). ಅರ್ಜುನನಿಂದ ಕರ್ಣನು ಪರಾಜಿತನಾದುದು 29-51). ಸ್ವಯಂ ದುರ್ಯೋಧನನೇ ಅರ್ಜುನನೊಡನೆ ಯುದ್ಧಕ್ಕೆ ಹೊರಡಲು ಅಶ್ವತ್ಥಾಮನು ಅವನನ್ನು ತಡೆದುದು (52-81).
07134001 ಸಂಜಯ ಉವಾಚ।
07134001a ತಥಾ ಪರುಷಿತಂ ದೃಷ್ಟ್ವಾ ಸೂತಪುತ್ರೇಣ ಮಾತುಲಂ।
07134001c ಖಡ್ಗಮುದ್ಯಮ್ಯ ವೇಗೇನ ದ್ರೌಣಿರಭ್ಯಪತದ್ದ್ರುತಂ।।
ಸಂಜಯನು ಹೇಳಿದನು: “ಸೂತಪುತ್ರನು ಹಾಗೆ ಮಾವನೊಡನೆ ಕಟುವಾದ ಮಾತನಾಡಿದುದನ್ನು ನೋಡಿ ದ್ರೌಣಿಯು ಖಡ್ಗವನ್ನು ಎತ್ತಿಕೊಂಡು ವೇಗವಾಗಿ ಅಲ್ಲಿಗೆ ಧಾವಿಸಿಬಂದನು.
07134002 ಅಶ್ವತ್ಥಾಮೋವಾಚ।
07134002a ಕರ್ಣ ಪಶ್ಯ ಸುದುರ್ಬುದ್ಧೇ ತಿಷ್ಠೇದಾನೀಂ ನರಾಧಮ।
07134002c ಏಷ ತೇಽದ್ಯ ಶಿರಃ ಕಾಯಾದುದ್ಧರಾಮಿ ಸುದುರ್ಮತೇ।।
ಅಶ್ವತ್ಥಾಮನು ಹೇಳಿದನು: “ಸುದುರ್ಬುದ್ಧೇ! ಕರ್ಣ! ನರಾಧಮ! ಸುದುರ್ಮತೇ! ಸ್ವಲ್ಪ ನಿಲ್ಲು! ನಿನ್ನ ಶಿರಸ್ಸನ್ನು ಈಗಲೇ ನಾನು ಶರೀರದಿಂದ ಹಾರಿಸಿಬಿಡುತ್ತೇನೆ!””
07134003 ಸಂಜಯ ಉವಾಚ।
07134003a ತಮುತ್ಪತಂತಂ ವೇಗೇನ ರಾಜಾ ದುರ್ಯೋಧನಃ ಸ್ವಯಂ।
07134003c ನ್ಯವಾರಯನ್ಮಹಾರಾಜ ಕೃಪಶ್ಚ ದ್ವಿಪದಾಂ ವರಃ।।
ಸಂಜಯನು ಹೇಳಿದನು: “ಮಹಾರಾಜ! ಹೀಗೆ ವೇಗದಿಂದ ಮೇಲೆ ಬೀಳುತ್ತಿರುವ ಅಶ್ವತ್ಥಾಮನನ್ನು ಸ್ವಯಂ ರಾಜಾ ದುರ್ಯೋಧನ ಮತ್ತು ದ್ವಿಪದರಲ್ಲಿ ಶ್ರೇಷ್ಠ ಕೃಪರು ತಡೆದರು.
07134004 ಕರ್ಣ ಉವಾಚ।
07134004a ಶೂರೋಽಯಂ ಸಮರಶ್ಲಾಘೀ ದುರ್ಮತಿಶ್ಚ ದ್ವಿಜಾಧಮಃ।
07134004c ಆಸಾದಯತು ಮದ್ವೀರ್ಯಂ ಮುಂಚೇಮಂ ಕುರುಸತ್ತಮ।।
ಕರ್ಣನು ಹೇಳಿದನು: “ಕುರುಸತ್ತಮ! ಇವನು ಶೂರ. ಸಮರಶ್ಲಾಘೀ. ದುರ್ಮತಿ ಮತ್ತು ದ್ವಿಜಾಧಮ. ನನ್ನ ವೀರ್ಯವನ್ನು ಎದುರಿಸಲಿ. ಇವನನ್ನು ಬಿಟ್ಟುಬಿಡು!”
07134005 ಅಶ್ವತ್ಥಾಮೋವಾಚ।
07134005a ತವೈತತ್ ಕ್ಷಮ್ಯತೇಽಸ್ಮಾಭಿಃ ಸೂತಾತ್ಮಜ ಸುದುರ್ಮತೇ।
07134005c ದರ್ಪಮುತ್ಸಿಕ್ತಂ ಏತತ್ತೇ ಫಲ್ಗುನೋ ನಾಶಯಿಷ್ಯತಿ।।
ಅಶ್ವತ್ಥಾಮನು ಹೇಳಿದನು: “ಸುದುರ್ಮತೇ! ಸೂತಾತ್ಮಜ! ನಿನ್ನ ಈ ಅಪರಾಧವನ್ನು ಕ್ಷಮಿಸುತ್ತೇನೆ. ಆದರೆ ನಿನ್ನ ದರ್ಪ ಉತ್ಸಾಹವನ್ನು ಫಲ್ಗುನನು ನಾಶಗೊಳಿಸುತ್ತಾನೆ ಎನ್ನುವುದನ್ನು ನೆನಪಿನಲ್ಲಿಟ್ಟುಕೋ!”
07134006 ದುರ್ಯೋಧನ ಉವಾಚ।
07134006a ಅಶ್ವತ್ಥಾಮನ್ಪ್ರಸೀದಸ್ವ ಕ್ಷಂತುಮರ್ಹಸಿ ಮಾನದ।
07134006c ಕೋಪಃ ಖಲು ನ ಕರ್ತವ್ಯಃ ಸೂತಪುತ್ರೇ ಕಥಂ ಚನ।।
ದುರ್ಯೋಧನನು ಹೇಳಿದನು: “ಅಶ್ವತ್ಥಾಮ! ಮಾನದ! ಶಾಂತನಾಗು. ಕ್ಷಮಿಸಬೇಕು. ಸೂತಪುತ್ರನೊಡನೆ ಎಂದೂ ಕೋಪಗೊಳ್ಳಬೇಡ!
07134007a ತ್ವಯಿ ಕರ್ಣೇ ಕೃಪೇ ದ್ರೋಣೇ ಮದ್ರರಾಜೇಽಥ ಸೌಬಲೇ।
07134007c ಮಹತ್ಕಾರ್ಯಂ ಸಮಾಯತ್ತಂ ಪ್ರಸೀದ ದ್ವಿಜಸತ್ತಮ।।
ನೀನು, ಕರ್ಣ, ಕೃಪ, ದ್ರೋಣ, ಮದ್ರರಾಜ ಮತ್ತು ಸೌಬಲರ ಮೇಲೆ ಮಹಾ ಕಾರ್ಯವನ್ನು ವಹಿಸಿದ್ದೇನೆ. ಪ್ರಯತ್ನಮಾಡಿ! ಸಮಾಧಾನಗೊಳ್ಳು ದ್ವಿಜಸತ್ತಮ!
07134008a ಏತೇ ಹ್ಯಭಿಮುಖಾಃ ಸರ್ವೇ ರಾಧೇಯೇನ ಯುಯುತ್ಸವಃ।
07134008c ಆಯಾಂತಿ ಪಾಂಡವಾ ಬ್ರಹ್ಮನ್ನಾಹ್ವಯಂತಃ ಸಮಂತತಃ।।
ನಮ್ಮ ಮುಂದಿರುವ ಪಾಂಡವರು ಎಲ್ಲರೂ ರಾಧೇಯನೊಡನೆ ಯುದ್ಧಮಾಡಲೋಸುಗ ಬರುತ್ತಿದ್ದಾರೆ. ಬ್ರಹ್ಮನ್! ಎಲ್ಲ ಕಡೆಗಳಿಂದ ಯುದ್ಧಕ್ಕೆ ಕರೆಯುತ್ತಿದ್ದಾರೆ.””
07134009 ಸಂಜಯ ಉವಾಚ।
07134009a ಕರ್ಣೋಽಪಿ ರಥಿನಾಂ ಶ್ರೇಷ್ಠಶ್ಚಾಪಮುದ್ಯಮ್ಯ ವೀರ್ಯವಾನ್।
07134009c ಕೌರವಾಗ್ರ್ಯೈಃ ಪರಿವೃತಃ ಶಕ್ರೋ ದೇವಗಣೈರಿವ।
07134009e ಪರ್ಯತಿಷ್ಠತ ತೇಜಸ್ವೀ ಸ್ವಬಾಹುಬಲಮಾಶ್ರಿತಃ।।
ಸಂಜಯನು ಹೇಳಿದನು: “ರಥಿಗಳಲ್ಲಿ ಶ್ರೇಷ್ಠ ವೀರ್ಯವಾನ್ ಕರ್ಣನೂ ಕೂಡ ದೇವಗಣಗಳಿಂದ ಪರಿವೃತ ಶಕ್ರನಂತೆ ಕೌರವ ಮುಖ್ಯರಿಂದ ಪರಿವೃತನಾಗಿ ತನ್ನ ಬಾಹುಬಲವನ್ನು ಆಶ್ರಯಿಸಿ ತೇಜಸ್ವಿಯಾಗಿ ಯುದ್ಧಕ್ಕೆ ನಿಂತನು.
07134010a ತತಃ ಪ್ರವವೃತೇ ಯುದ್ಧಂ ಕರ್ಣಸ್ಯ ಸಹ ಪಾಂಡವೈಃ।
07134010c ಸಂರಬ್ಧಸ್ಯ ಮಹಾರಾಜ ಸಿಂಹನಾದವಿನಾದಿತಂ।।
ಮಹಾರಾಜ! ಆಗ ಪಾಂಡವರೊಡನೆ ಕರ್ಣನ ಸಿಂಹನಾದಗಳಿಂದ ಕೂಡಿದ ಭಯಂಕರ ಯುದ್ಧವು ಪ್ರಾರಂಭವಾಯಿತು.
07134011a ತತಸ್ತೇ ಪಾಂಡವಾ ರಾಜನ್ಪಾಂಚಾಲಾಶ್ಚ ಯಶಸ್ವಿನಃ।
07134011c ದೃಷ್ಟ್ವಾ ಕರ್ಣಂ ಮಹಾಬಾಹುಮುಚ್ಚೈಃ ಶಬ್ದಮಥಾನದನ್।।
07134012a ಅಯಂ ಕರ್ಣಃ ಕುತಃ ಕರ್ಣಸ್ತಿಷ್ಠ ಕರ್ಣ ಮಹಾರಣೇ।
07134012c ಯುಧ್ಯಸ್ವ ಸಹಿತೋಽಸ್ಮಾಭಿರ್ದುರಾತ್ಮನ್ಪುರುಷಾಧಮ।।
ರಾಜನ್! ಆಗ ಆ ಪಾಂಡವರು ಮತ್ತು ಯಶಸ್ವಿ ಪಾಂಚಾಲರು ಮಹಾಬಾಹು ಕರ್ಣನನ್ನು ನೋಡಿ “ಇವನೇ ಕರ್ಣ!”, “ಕರ್ಣನೆಲ್ಲಿದ್ದಾನೆ?”, “ಕರ್ಣ! ಮಹಾರಣದಲ್ಲಿ ನಿಲ್ಲು! ದುರಾತ್ಮನ್! ಪುರುಷಾಧಮ! ನಮ್ಮಡನೆ ಯುದ್ಧಮಾಡು!“ ಎಂದು ಉಚ್ಛ ಸ್ವರಗಳಲ್ಲಿ ಕೂಗಿದರು.
07134013a ಅನ್ಯೇ ತು ದೃಷ್ಟ್ವಾ ರಾಧೇಯಂ ಕ್ರೋಧರಕ್ತೇಕ್ಷಣಾಬ್ರುವನ್।
07134013c ಹನ್ಯತಾಮಯಮುತ್ಸಿಕ್ತಃ ಸೂತಪುತ್ರೋಽಲ್ಪಚೇತನಃ।।
ಮತ್ತೆ ಕೆಲವರು ರಾಧೇಯನನ್ನು ನೋಡಿ ಕ್ರೋಧದಿಂದ ಕೆಂಗಣ್ಣರಾಗಿ ಹೇಳಿದರು: “ದುರಹಂಕಾರದಿಂದ ಮೆರೆಯುತ್ತಿರುವ ಈ ಅಲ್ಪಚೇತನ ಸೂತಪುತ್ರನನ್ನು ಸಂಹರಿಸಿರಿ!
07134014a ಸರ್ವೈಃ ಪಾರ್ಥಿವಶಾರ್ದೂಲೈರ್ನಾನೇನಾರ್ಥೋಽಸ್ತಿ ಜೀವತಾ।
07134014c ಅತ್ಯಂತವೈರೀ ಪಾರ್ಥಾನಾಂ ಸತತಂ ಪಾಪಪೂರುಷಃ।।
ಇವನು ಬದುಕಿರುವುದರಿಂದ ಯಾವ ಪ್ರಯೋಜನವೂ ಇಲ್ಲ. ಎಲ್ಲ ಪಾರ್ಥಿವಶಾರ್ದೂಲರಿಗಿಂತ ಈ ಪಾಪಪುರುಷನೇ ಸತತವೂ ಪಾರ್ಥರ ವೈರಿಯಾಗಿರುವವನು.
07134015a ಏಷ ಮೂಲಂ ಹ್ಯನರ್ಥಾನಾಂ ದುರ್ಯೋಧನಮತೇ ಸ್ಥಿತಃ।
07134015c ಹತೈನಮಿತಿ ಜಲ್ಪಂತಃ ಕ್ಷತ್ರಿಯಾಃ ಸಮುಪಾದ್ರವನ್।।
ದುರ್ಯೋಧನನ ಮನಸ್ಸಿನಂತೆ ನಡೆದುಕೊಳ್ಳುತ್ತಿರುವ ಇವನೇ ಎಲ್ಲ ಅನರ್ಥಗಳಿಗೂ ಮೂಲ ಕಾರಣನಾಗಿದ್ದಾನೆ. ಇವನನ್ನು ಕೊಲ್ಲಿರಿ!” ಎಂದು ಮಾತನಾಡಿಕೊಳ್ಳುತ್ತಾ ಕ್ಷತ್ರಿಯರು ಆಕ್ರಮಿಸಿದರು.
07134016a ಮಹತಾ ಶರವರ್ಷೇಣ ಚಾದಯಂತೋ ಮಹಾರಥಾಃ।
07134016c ವಧಾರ್ಥಂ ಸೂತಪುತ್ರಸ್ಯ ಪಾಂಡವೇಯೇನ ಚೋದಿತಾಃ।।
ಪಾಂಡವೇಯರಿಂದ ಪ್ರಚೋದಿತರಾಗಿ ಸೂತಪುತ್ರನನ್ನು ವಧಿಸುವ ಸಲುವಾಗಿ ಆ ಮಹಾರಥರು ಅವನನ್ನು ಮಹಾ ಶರವರ್ಷಗಳಿಂದ ಮುಚ್ಚಿಬಿಟ್ಟರು.
07134017a ತಾಂಸ್ತು ಸರ್ವಾಂಸ್ತಥಾ ದೃಷ್ಟ್ವಾ ಧಾವಮಾನಾನ್ಮಹಾರಥಾನ್।
07134017c ನ ವಿವ್ಯಥೇ ಸೂತಪುತ್ರೋ ನ ಚ ತ್ರಾಸಮಗಚ್ಚತ।।
ತನ್ನ ಕಡೆಗೆ ರಭಸದಿಂದ ಬರುತ್ತಿದ್ದ ಆ ಮಹಾರಥರೆಲ್ಲರನ್ನು ನೋಡಿ ಸೂತಪುತ್ರನು ವ್ಯಥಿತನಾಗಲಿಲ್ಲ, ಭಯಪಡಲೂ ಇಲ್ಲ.
07134018a ದೃಷ್ಟ್ವಾ ನಗರಕಲ್ಪಂ ತಮುದ್ಧೂತಂ ಸೈನ್ಯಸಾಗರಂ।
07134018c ಪಿಪ್ರೀಷುಸ್ತವ ಪುತ್ರಾಣಾಂ ಸಂಗ್ರಾಮೇಷ್ವಪರಾಜಿತಃ।।
07134019a ಸಾಯಕೌಘೇನ ಬಲವಾನ್ ಕ್ಷಿಪ್ರಕಾರೀ ಮಹಾಬಲಃ।
07134019c ವಾರಯಾಮಾಸ ತತ್ಸೈನ್ಯಂ ಸಮಂತಾದ್ಭರತರ್ಷಭ।।
ಭರತರ್ಷಭ! ನಗರದಂತೆ ಉಕ್ಕಿಬರುತ್ತಿರುವ ಆ ಸೈನ್ಯಸಾಗರವನ್ನು ನೋಡಿ ನಿನ್ನ ಮಕ್ಕಳಿಗೆ ಪ್ರಿಯವನ್ನುಂಟು ಮಾಡುವ ಇಚ್ಛೆಯುಳ್ಳ, ಸಂಗ್ರಾಮಗಳಲ್ಲಿ ಅಪರಾಜಿತ ಮಹಾಬಲ ಬಲವಾನ್ ಕ್ಷಿಪ್ರಕಾರೀ ಕರ್ಣನು ಸಾಯಕಗಳ ಗಣಗಳಿಂದ ಆ ಸೇನೆಯನ್ನು ಎಲ್ಲ ಕಡೆಗಳಿಂದಲೂ ತಡೆದು ನಿಲ್ಲಿಸಿದನು.
07134020a ತತಸ್ತು ಶರವರ್ಷೇಣ ಪಾರ್ಥಿವಾಸ್ತಮವಾರಯನ್।
07134020c ಧನೂಂಷಿ ತೇ ವಿಧುನ್ವಾನಾಃ ಶತಶೋಽಥ ಸಹಸ್ರಶಃ।
07134020e ಅಯೋಧಯಂತ ರಾಧೇಯಂ ಶಕ್ರಂ ದೈತ್ಯಗಣಾ ಇವ।।
ಆಗ ಪಾರ್ಥಿವರು ಶರವರ್ಷಗಳಿಂದ ನೂರಾರು ಸಹಸ್ರಾರು ಧನುಸ್ಸುಗಳನ್ನು ಸೆಳೆಯುತ್ತಾ ತಡೆದು ದೈತ್ಯಗಣಗಳು ಶಕ್ರನನ್ನು ಹೇಗೋ ಹಾಗೆ ರಾಧೇಯನೊಡನೆ ಯುದ್ಧಮಾಡಿದರು.
07134021a ಶರವರ್ಷಂ ತು ತತ್ಕರ್ಣಃ ಪಾರ್ಥಿವೈಃ ಸಮುದೀರಿತಂ।
07134021c ಶರವರ್ಷೇಣ ಮಹತಾ ಸಮಂತಾದ್ವ್ಯಕಿರತ್ಪ್ರಭೋ।।
ಪ್ರಭೋ! ಪಾರ್ಥಿವರು ಸುರಿಸುತ್ತಿದ್ದ ಆ ಶರವರ್ಷಗಳನ್ನು ಕರ್ಣನು ಮಹಾ ಶರವರ್ಷದಿಂದಲೇ ಎಲ್ಲಕಡೆಗಳಲ್ಲಿ ನಿವಾರಿಸಿದನು.
07134022a ತದ್ಯುದ್ಧಮಭವತ್ತೇಷಾಂ ಕೃತಪ್ರತಿಕೃತೈಷಿಣಾಂ।
07134022c ಯಥಾ ದೇವಾಸುರೇ ಯುದ್ಧೇ ಶಕ್ರಸ್ಯ ಸಹ ದಾನವೈಃ।।
ಮಾಡಿದುದಕ್ಕೆ ಪ್ರತಿಯಾಗಿ ಮಾಡುವುದರಲ್ಲಿ ತೊಡಗಿದ ಅವರಿಬ್ಬರ ನಡುವೆ ದೇವಾಸುರರ ಯುದ್ಧದಲ್ಲಿ ದಾನವರೊಂದಿಗೆ ಶಕ್ರನ ಯುದ್ಧದಂತೆ ಯುದ್ಧವು ನಡೆಯಿತು.
07134023a ತತ್ರಾದ್ಭುತಮಪಶ್ಯಾಮ ಸೂತಪುತ್ರಸ್ಯ ಲಾಘವಂ।
07134023c ಯದೇನಂ ಸಮರೇ ಯತ್ತಾ ನಾಪ್ನುವಂತ ಪರೇ ಯುಧಿ।।
ಅಲ್ಲಿ ನಾವು ಸೂತಪುತ್ರನ ಹಸ್ತಲಾಘವದ ಅದ್ಭುತವನ್ನು ನೋಡಿದೆವು. ಸಮರದಲ್ಲಿ ಶತ್ರುಗಳು ಪ್ರಯತ್ನಿಸಿದರೂ ಅವನ ಹತ್ತಿರಹೋಗಲು ಶಕ್ತರಾಗಲಿಲ್ಲ.
07134024a ನಿವಾರ್ಯ ಚ ಶರೌಘಾಂಸ್ತಾನ್ಪಾರ್ಥಿವಾನಾಂ ಮಹಾರಥಃ।
07134024c ಯುಗೇಷ್ವೀಷಾಸು ಚತ್ರೇಷು ಧ್ವಜೇಷು ಚ ಹಯೇಷು ಚ।
07134024e ಆತ್ಮನಾಮಾಂಕಿತಾನ್ಬಾಣಾನ್ರಾಧೇಯಃ ಪ್ರಾಹಿಣೋಚ್ಚಿತಾನ್।।
ಪಾರ್ಥಿವರ ಶರೌಘಗಳನ್ನು ತಡೆಯುತ್ತಾ ಮಹಾರಥ ರಾಧೇಯನು ತನ್ನ ನಾಮಾಂಕಿತ ಬಾಣಗಳನ್ನು ರಥದ ನೊಗಗಳ ಮೇಲೆ, ಚತ್ರಗಳ ಮೇಲೆ, ಧ್ವಜಗಳ ಮೇಲೆ ಮತ್ತು ಕುದುರೆಗಳ ಮೇಲೆ ಪ್ರಯೋಗಿಸಿದನು.
07134025a ತತಸ್ತೇ ವ್ಯಾಕುಲೀಭೂತಾ ರಾಜಾನಃ ಕರ್ಣಪೀಡಿತಾಃ।
07134025c ಬಭ್ರಮುಸ್ತತ್ರ ತತ್ರೈವ ಗಾವಃ ಶೀತಾರ್ದಿತಾ ಇವ।।
ಕರ್ಣನಿಂದ ಪೀಡಿತ ರಾಜರು ವ್ಯಾಕುಲರಾಗಿ ಛಳಿಯಿಂದ ಪೀಡಿತ ಗೋವುಗಳಂತೆ ಅಲ್ಲಿಂದಿಲ್ಲಿಗೆ ಭ್ರಮಿಸತೊಡಗಿದರು.
07134026a ಹಯಾನಾಂ ವಧ್ಯಮಾನಾನಾಂ ಗಜಾನಾಂ ರಥಿನಾಂ ತಥಾ।
07134026c ತತ್ರ ತತ್ರಾಭ್ಯವೇಕ್ಷಾಮಃ ಸಂಘಾನ್ಕರ್ಣೇನ ಪಾತಿತಾನ್।।
ಕರ್ಣನಿಂದ ವಧೆಗೊಂಡು ಉರುಳಿಸಲ್ಪಟ್ಟ ಕುದುರೆ-ಆನೆ-ರಥಗಳ ಗುಂಪುಗಳನ್ನು ಅಲ್ಲಲ್ಲಿ ನೋಡಿದೆವು.
07134027a ಶಿರೋಭಿಃ ಪತಿತೈ ರಾಜನ್ಬಾಹುಭಿಶ್ಚ ಸಮಂತತಃ।
07134027c ಆಸ್ತೀರ್ಣಾ ವಸುಧಾ ಸರ್ವಾ ಶೂರಾಣಾಮನಿವರ್ತಿನಾಂ।।
ರಾಜನ್! ಯುದ್ಧದಲ್ಲಿ ಹಿಂದಿರುಗದೇ ಹತರಾಗಿ ಬಿದ್ದಿದ್ದ ಶೂರರ ತಲೆಗಳಿಂದಲೂ ತೋಳುಗಳಿಂದಲೂ ರಣಾಂಗಣವು ವ್ಯಾಪ್ತವಾಗಿತ್ತು.
07134028a ಹತೈಶ್ಚ ಹನ್ಯಮಾನೈಶ್ಚ ನಿಷ್ಟನದ್ಭಿಶ್ಚ ಸರ್ವಶಃ।
07134028c ಬಭೂವಾಯೋಧನಂ ರೌದ್ರಂ ವೈವಸ್ವತಪುರೋಪಮಂ।।
ಸತ್ತವರಿಂದಲೂ ಸಾಯುತ್ತಿರುವವರಿಂದಲೂ ಗಾಯಗೊಂಡು ಸಂಕಟಪಡುತ್ತಿರುವವರಿಂದಲೂ ಕೂಡಿದ್ದ ಆ ರಣಭೂಮಿಯು ಯಮರಾಜನ ಪಟ್ಟಣದಂತೆ ಬಹಳ ಭಯಂಕರವಾಗಿ ಕಾಣುತ್ತಿದ್ದಿತು.
07134029a ತತೋ ದುರ್ಯೋಧನೋ ರಾಜಾ ದೃಷ್ಟ್ವಾ ಕರ್ಣಸ್ಯ ವಿಕ್ರಮಂ।
07134029c ಅಶ್ವತ್ಥಾಮಾನಮಾಸಾದ್ಯ ತದಾ ವಾಕ್ಯಮುವಾಚ ಹ।।
ಕರ್ಣನ ಆ ವಿಕ್ರಮವನ್ನು ಕಂಡು ರಾಜಾ ದುರ್ಯೋಧನನು ಅಶ್ವತ್ಥಾಮನ ಬಳಿಸಾರಿ ಇಂತೆಂದನು:
07134030a ಯುಧ್ಯತೇಽಸೌ ರಣೇ ಕರ್ಣೋ ದಂಶಿತಃ ಸರ್ವಪಾರ್ಥಿವೈಃ।
07134030c ಪಶ್ಯೈತಾಂ ದ್ರವತೀಂ ಸೇನಾಂ ಕರ್ಣಸಾಯಕಪೀಡಿತಾಂ।
07134030e ಕಾರ್ತ್ತಿಕೇಯೇನ ವಿಧ್ವಸ್ತಾಮಾಸುರೀಂ ಪೃತನಾಮಿವ।।
“ಇಗೋ ಕರ್ಣನು ಕವಚವನ್ನು ಧರಿಸಿ ಸರ್ವ ರಾಜರೊಂದಿಗೆ ರಣದಲ್ಲಿ ಯುದ್ಧಮಾಡುತ್ತಿದ್ದಾನೆ! ಕಾರ್ತಿಕೇಯನಿಂದ ಧ್ವಂಸಿತ ಅಸುರೀ ಸೇನೆಯು ಪಲಾಯನ ಮಾಡುವಂತೆ ಕರ್ಣನ ಸಾಯಕಗಳಿಂದ ಪೀಡಿತ ಸೇನೆಯು ಓಡಿಹೋಗುತ್ತಿರುವುದನ್ನು ನೋಡು!
07134031a ದೃಷ್ಟ್ವೈತಾಂ ನಿರ್ಜಿತಾಂ ಸೇನಾಂ ರಣೇ ಕರ್ಣೇನ ಧೀಮತಾ।
07134031c ಅಭಿಯಾತ್ಯೇಷ ಬೀಭತ್ಸುಃ ಸೂತಪುತ್ರಜಿಘಾಂಸಯಾ।।
ಧೀಮತ ಕರ್ಣನಿಂದ ರಣದಲ್ಲಿ ಸೇನೆಯು ಈ ರೀತಿ ಸೋತುಹೋಗುತ್ತಿರುವುದನ್ನು ನೋಡಿ ಸೂತಪುತ್ರನನ್ನು ಕೊಲ್ಲಲು ಬಯಸಿ ಬೀಭತ್ಸುವು ಬರುತ್ತಿರಬಹುದು.
07134032a ತದ್ಯಥಾ ಪಶ್ಯಮಾನಾನಾಂ ಸೂತಪುತ್ರಂ ಮಹಾರಥಂ।
07134032c ನ ಹನ್ಯಾತ್ಪಾಂಡವಃ ಸಂಖ್ಯೇ ತಥಾ ನೀತಿರ್ವಿಧೀಯತಾಂ।।
ಯುದ್ಧದಲ್ಲಿ ನಾವು ನೋಡುತ್ತಿರುವಾಗಲೇ ಮಹಾರಥ ಸೂತಪುತ್ರನನ್ನು ಪಾಂಡವನು ಕೊಲ್ಲದ ರೀತಿಯಲ್ಲಿ ಯುದ್ಧ ನೀತಿಯು ರೂಪಿಸಲ್ಪಡಲಿ!”
07134033a ತತೋ ದ್ರೌಣಿಃ ಕೃಪಃ ಶಲ್ಯೋ ಹಾರ್ದಿಕ್ಯಶ್ಚ ಮಹಾರಥಃ।
07134033c ಪ್ರತ್ಯುದ್ಯಯುಸ್ತದಾ ಪಾರ್ಥಂ ಸೂತಪುತ್ರಪರೀಪ್ಸಯಾ।।
ಕೂಡಲೇ ದ್ರೌಣಿ, ಕೃಪ, ಶಲ್ಯ, ಮತ್ತು ಮಹಾರಥ ಹಾರ್ದಿಕ್ಯರು ಸೂತಪುತ್ರನನ್ನು ರಕ್ಷಿಸಲೋಸುಗ ಪಾರ್ಥನೊಡನೆ ಯುದ್ಧಮಾಡತೊಡಗಿದರು.
07134034a ಆಯಾಂತಂ ದೃಶ್ಯ ಕೌಂತೇಯಂ ವೃತ್ರಂ ದೇವಚಮೂಮಿವ।
07134034c ಪ್ರತ್ಯುದ್ಯಯೌ ತದಾ ಕರ್ಣೋ ಯಥಾ ಶಕ್ರಃ ಪ್ರತಾಪವಾನ್।।
ದೇವಸೇನೆಯಮೇಲೆ ಆಕ್ರಮಣಿಸುತ್ತಿರುವ ವೃತ್ರನನ್ನು ಶಕ್ರನು ಹೇಗೋ ಹಾಗೆ ಪ್ರತಾಪವಾನ್ ಕರ್ಣನೂ ಕೂಡ ಮುಂದೆ ಬರುತ್ತಿರುವ ಕೌಂತೇಯನೊಡನೆ ಯುದ್ಧಮಾಡತೊಡಗಿದನು.”
07134035 ಧೃತರಾಷ್ಟ್ರ ಉವಾಚ।
07134035a ಸಂರಬ್ಧಂ ಫಲ್ಗುನಂ ದೃಷ್ಟ್ವಾ ಕಾಲಾಂತಕಯಮೋಪಮಂ।
07134035c ಕರ್ಣೋ ವೈಕರ್ತನಃ ಸೂತ ಪ್ರತ್ಯಪದ್ಯತ್ಕಿಮುತ್ತರಂ।।
ಧೃತರಾಷ್ಟ್ರನು ಹೇಳಿದನು: “ಸೂತ! ಕಾಲಾಂತಕ ಯಮನಂತೆ ಕುಪಿತನಾಗಿ ಬರುತ್ತಿದ್ದ ಫಲ್ಗುನನನ್ನು ಕಂಡು ವೈಕರ್ತನ ಕರ್ಣನು ಪ್ರತಿಯಾಗಿ ಏನು ಉತ್ತರವನ್ನಿತ್ತನು?
07134036a ಸ ಹ್ಯಸ್ಪರ್ಧತ ಪಾರ್ಥೇನ ನಿತ್ಯಮೇವ ಮಹಾರಥಃ।
07134036c ಆಶಂಸತೇ ಚ ಬೀಭತ್ಸುಂ ಯುದ್ಧೇ ಜೇತುಂ ಸುದಾರುಣೇ।।
ನಿತ್ಯವೂ ಆ ಮಹಾರಥನು ಪಾರ್ಥನೊಡನೆ ಸ್ಪರ್ಧಿಸುತ್ತಿದ್ದನು. ಸುದಾರುಣ ಯುದ್ಧದಲ್ಲಿ ಬೀಭತ್ಸುವನ್ನು ಗೆಲ್ಲಲು ಬಯಸುತ್ತಿದ್ದನು.
07134037a ಸ ತು ತಂ ಸಹಸಾ ಪ್ರಾಪ್ತಂ ನಿತ್ಯಮತ್ಯಂತವೈರಿಣಂ।
07134037c ಕರ್ಣೋ ವೈಕರ್ತನಃ ಸೂತ ಕಿಮುತ್ತರಮಪದ್ಯತ।।
ಸೂತ! ಒಮ್ಮಿಂದೊಮ್ಮೆಲೇ ಎದುರಾಗಿಬಂದ ಆ ನಿತ್ಯ ಅತ್ಯಂತ ವೈರಿಯನ್ನು ಕಂಡು ವೈಕರ್ತನ ಕರ್ಣನು ಯಾವ ರೀತಿಯಲ್ಲಿ ಉತ್ತರ ಕೊಟ್ಟನು? ಮುಂದೇನು ಮಾಡಿದನು?”
07134038 ಸಂಜಯ ಉವಾಚ।
07134038a ಆಯಾಂತಂ ಪಾಂಡವಂ ದೃಷ್ಟ್ವಾ ಗಜಃ ಪ್ರತಿಗಜಂ ಯಥಾ।
07134038c ಅಸಂಭ್ರಾಂತತರಃ ಕರ್ಣಃ ಪರ್ತ್ಯುದೀಯಾದ್ಧನಂಜಯಂ।।
ಸಂಜಯನು ಹೇಳಿದನು: “ಒಂದು ಸಲಗವು ಮತ್ತೊಂದು ಸಲಗವನ್ನು ಎದುರಿಸಲು ಹೋಗುವಂತೆ ತನ್ನ ಕಡೆಗೆ ಬರುತ್ತಿದ್ದ ಪಾಂಡವನನ್ನು ಕಂಡು ಕರ್ಣನು ಸ್ವಲ್ಪವೂ ಗಾಬರಿಗೊಳ್ಳದೇ ಧನಂಜಯನ ಮೇಲೆ ಎರಗಿದನು.
07134039a ತಮಾಪತಂತಂ ವೇಗೇನ ವೈಕರ್ತನಮಜಿಹ್ಮಗೈಃ।
07134039c ವಾರಯಾಮಾಸ ತೇಜಸ್ವೀ ಪಾಂಡವಃ ಶತ್ರುತಾಪನಃ।।
ತೇಜಸ್ವೀ ಶತ್ರುತಾಪನ ಪಾಂಡವನು ವೇಗದಿಂದ ತನ್ನಮೇಲೆ ಬೀಳುತ್ತಿದ್ದ ವೈಕರ್ತನನನ್ನು ಜಿಹ್ಮಗಗಳಿಂದ ತಡೆದನು.
07134040a ತಂ ಕರ್ಣಃ ಶರಜಾಲೇನ ಚಾದಯಾಮಾಸ ಮಾರಿಷ।
07134040c ವಿವ್ಯಾಧ ಚ ಸುಸಂಕ್ರುದ್ಧಃ ಶರೈಸ್ತ್ರಿಭಿರಜಿಹ್ಮಗೈಃ।।
ಮಾರಿಷ! ಕರ್ಣನು ಅವನನ್ನು ಶರಜಾಲಗಳಿಂದ ಮುಚ್ಚಿಬಿಟ್ಟನು ಮತ್ತು ಸಂಕ್ರುದ್ಧನಾಗಿ ಮೂರು ಜಿಹ್ಮಗಗಳಿಂದ ಹೊಡೆದನು.
07134041a ತಸ್ಯ ತಲ್ಲಾಘವಂ ಪಾರ್ಥೋ ನಾಮೃಷ್ಯತ ಮಹಾಬಲಃ।
07134041c ತಸ್ಮೈ ಬಾಣಾಂ ಶಿಲಾಧೌತಾನ್ಪ್ರಸನ್ನಾಗ್ರಾನಜಿಹ್ಮಗಾನ್।।
07134042a ಪ್ರಾಹಿಣೋತ್ಸೂತಪುತ್ರಾಯ ತ್ರಿಂಶತಂ ಶತ್ರುತಾಪನಃ।
ಅವನ ಆ ಹಸ್ತಲಾಘವವನ್ನು ಮಹಾಬಲ ಪಾರ್ಥನು ಸಹಿಸಿಕೊಳ್ಳಲಿಲ್ಲ. ಆ ಶತ್ರುತಾಪನನು ಸೂತಪುತ್ರನ ಮೇಲೆ ಮೊನಚಾದ ತುದಿಗಳುಳ್ಳ, ಕಲ್ಲಿನಮೇಲೆ ಮಸೆದ ಮುನ್ನೂರು ಜಿಹ್ಮಗ ಬಾಣಗಳನ್ನು ಪ್ರಯೋಗಿಸಿದನು.
07134042c ವಿವ್ಯಾಧ ಚೈನಂ ಸಂರಬ್ಧೋ ಬಾಣೇನೈಕೇನ ವೀರ್ಯವಾನ್।।
07134043a ಸವ್ಯೇ ಭುಜಾಗ್ರೇ ಬಲವಾನ್ನಾರಾಚೇನ ಹಸನ್ನಿವ।
07134043c ತಸ್ಯ ವಿದ್ಧಸ್ಯ ವೇಗೇನ ಕರಾಚ್ಚಾಪಂ ಪಪಾತ ಹ।।
ಕುಪಿತನಾಗಿ ವೀರ್ಯವಾನ್ ಅರ್ಜುನನು ನಸುನಗುತ್ತಾ ಒಂದೇ ಬಾಣದಿಂದ ಅವನ ಎಡಭುಜಕ್ಕೆ ಬಲವನ್ನುಪಯೋಗಿಸಿ ಹೊಡೆದನು. ವೇಗವಾಗಿ ಗಾಯಗೊಂಡ ಅವನ ಕೈಯಿಂದ ಧನುಸ್ಸು ಕಳಚಿ ಬಿದ್ದಿತು.
07134044a ಪುನರಾದಾಯ ತಚ್ಚಾಪಂ ನಿಮೇಷಾರ್ಧಾನ್ಮಹಾಬಲಃ।
07134044c ಚಾದಯಾಮಾಸ ಬಾಣೌಘೈಃ ಫಲ್ಗುನಂ ಕೃತಹಸ್ತವತ್।।
ಆ ಚಾಪವನ್ನು ಪುನಃ ತೆಗೆದುಕೊಂಡು ಮಹಾಬಲನು ಸಿದ್ಧಹಸ್ತನಂತೆ ಬಾಣಗಳ ಸಮೂಹಗಳಿಂದ ಫಲ್ಗುನನನ್ನು ಮುಚ್ಚಿದನು.
07134045a ಶರವೃಷ್ಟಿಂ ತು ತಾಂ ಮುಕ್ತಾಂ ಸೂತಪುತ್ರೇಣ ಭಾರತ।
07134045c ವ್ಯಧಮಚ್ಚರವರ್ಷೇಣ ಸ್ಮಯನ್ನಿವ ಧನಂಜಯಃ।।
ಭಾರತ! ಧನಂಜಯನು ನಸುನಗುತ್ತಲೇ ಶರವರ್ಷಗಳಿಂದ ಸೂತಪುತ್ರನ ಶರವೃಷ್ಟಿಯನ್ನು ನಿರಸನಗೊಳಿಸಿದನು.
07134046a ತೌ ಪರಸ್ಪರಮಾಸಾದ್ಯ ಶರವರ್ಷೇಣ ಪಾರ್ಥಿವ।
07134046c ಚಾದಯೇತಾಂ ಮಹೇಷ್ವಾಸೌ ಕೃತಪ್ರತಿಕೃತೈಷಿಣೌ।।
ಪಾರ್ಥಿವ! ಶರವರ್ಷಗಳಿಂದ ಪರಸ್ಪರರನ್ನು ಮುಚ್ಚುತ್ತಾ ಆ ಮಹೇಷ್ವಾಸರು ಮಾಡಿದುದಕ್ಕೆ ಪ್ರತಿಯಾಗಿ ಮಾಡಲು ತೊಡಗಿದರು.
07134047a ತದದ್ಭುತಮಭೂದ್ಯುದ್ಧಂ ಕರ್ಣಪಾಂಡವಯೋರ್ಮೃಧೇ।
07134047c ಕ್ರುದ್ಧಯೋರ್ವಾಶಿತಾಹೇತೋರ್ವನ್ಯಯೋರ್ಗಜಯೋರಿವ।।
ಕಾವಿಗೆ ಬಂದ ಹೆಣ್ಣಾನೆಯ ಸಲುವಾಗಿ ಎರಡು ಸಲಗಗಳ ನಡುವೆ ಹೇಗೋ ಹಾಗೆ ಕ್ರುದ್ಧ ಕರ್ಣ-ಪಾಂಡವರ ನಡುವೆ ಅತಿ ಅಧ್ಭುತ ಯುದ್ಧವು ನಡೆಯಿತು.
07134048a ತತಃ ಪಾರ್ಥೋ ಮಹೇಷ್ವಾಸೋ ದೃಷ್ಟ್ವಾ ಕರ್ಣಸ್ಯ ವಿಕ್ರಮಂ।
07134048c ಮುಷ್ಟಿದೇಶೇ ಧನುಸ್ತಸ್ಯ ಚಿಚ್ಚೇದ ತ್ವರಯಾನ್ವಿತಃ।।
ಆಗ ಮಹೇಷ್ವಾಸ ಅರ್ಜುನನು ಕರ್ಣನ ವಿಕ್ರಮವನ್ನು ಕಂಡು ತ್ವರೆಮಾಡಿ ಅವನ ಧನುಸ್ಸನ್ನು ಮುಷ್ಟಿಪ್ರದೇಶದಲ್ಲಿ ಕತ್ತರಿಸಿದನು.
07134049a ಅಶ್ವಾಂಶ್ಚ ಚತುರೋ ಭಲ್ಲೈರನಯದ್ಯಮಸಾದನಂ।
07134049c ಸಾರಥೇಶ್ಚ ಶಿರಃ ಕಾಯಾದಹರಚ್ಚತ್ರುತಾಪನಃ।।
ಆ ಶತ್ರುತಾಪನನು ನಾಲ್ಕು ಕುದುರೆಗಳನ್ನೂ ಭಲ್ಲಗಳಿಂದ ಯಮಸಾದನಕ್ಕೆ ಕಳುಹಿಸಿ ಸಾರಥಿಯ ಶಿರವನ್ನೂ ಅವನ ದೇಹದಿಂದ ಬೇರ್ಪಡಿಸಿದನು.
07134050a ಅಥೈನಂ ಚಿನ್ನಧನ್ವಾನಂ ಹತಾಶ್ವಂ ಹತಸಾರಥಿಂ।
07134050c ವಿವ್ಯಾಧ ಸಾಯಕೈಃ ಪಾರ್ಥಶ್ಚತುರ್ಭಿಃ ಪಾಂಡುನಂದನಃ।।
ಮತ್ತೆ ಧನುಸ್ಸನ್ನು ಕಳೆದುಕೊಂಡ, ಕುದುರೆಗಳನ್ನು ಕಳೆದುಕೊಂಡ ಮತ್ತು ಸಾರಥಿಯನ್ನು ಕಳೆದುಕೊಂಡ ಅವನನ್ನು ಪಾಂಡುನಂದನ ಪಾರ್ಥನು ನಾಲ್ಕು ಸಾಯಕಗಳಿಂದ ಗಾಯಗೊಳಿಸಿದನು.
07134051a ಹತಾಶ್ವಾತ್ತು ರಥಾತ್ತೂರ್ಣಮವಪ್ಲುತ್ಯ ನರರ್ಷಭಃ।
07134051c ಆರುರೋಹ ರಥಂ ತೂರ್ಣಂ ಕೃಪಸ್ಯ ಶರಪೀಡಿತಃ।।
ಆಗ ಶರಪೀಡಿತ ನರರ್ಷಭ ಕರ್ಣನು ಕುದುರೆಗಳು ಹತವಾದ ರಥದಿಂದ ಬೇಗನೇ ಹಾರಿ ತಕ್ಷಣವೇ ಕೃಪನ ರಥವನ್ನೇರಿದನು.
07134052a ರಾಧೇಯಂ ನಿರ್ಜಿತಂ ದೃಷ್ಟ್ವಾ ತಾವಕಾ ಭರತರ್ಷಭ।
07134052c ಧನಂಜಯಶರೈರ್ನುನ್ನಾಃ ಪ್ರಾದ್ರವಂತ ದಿಶೋ ದಶ।।
ಭರತರ್ಷಭ! ರಾಧೇಯನು ಸೋತಿದುದನ್ನು ಕಂಡ ನಿನ್ನವರು ಧನಂಜಯನ ಶರಗಳಿಗೆ ಹೆದರಿ ದಿಕ್ಕು ದಿಕ್ಕುಗಳಿಗೆ ಓಡಿ ಹೋದರು.
07134053a ದ್ರವತಸ್ತಾನ್ಸಮಾಲೋಕ್ಯ ರಾಜಾ ದುರ್ಯೋಧನೋ ನೃಪ।
07134053c ನಿವರ್ತಯಾಮಾಸ ತದಾ ವಾಕ್ಯಂ ಚೇದಮುವಾಚ ಹ।।
ನೃಪ! ಓಡಿ ಹೋಗುತ್ತಿರುವ ಅವರನ್ನು ನೋಡಿ ರಾಜಾ ದುರ್ಯೋಧನನು ಈ ಮಾತುಗಳಿಂದ ಅವರನ್ನು ಹಿಂದಿರುಗಲು ಪ್ರಚೋದಿಸಿದನು:
07134054a ಅಲಂ ದ್ರುತೇನ ವಃ ಶೂರಾಸ್ತಿಷ್ಠಧ್ವಂ ಕ್ಷತ್ರಿಯರ್ಷಭಾಃ।
07134054c ಏಷ ಪಾರ್ಥವಧಾಯಾಹಂ ಸ್ವಯಂ ಗಚ್ಚಾಮಿ ಸಮ್ಯುಗೇ।
07134054e ಅಹಂ ಪಾರ್ಥಾನ್ ಹನಿಷ್ಯಾಮಿ ಸಪಾಂಚಾಲಾನ್ಸಸೋಮಕಾನ್।।
“ಕ್ಷತ್ರಿಯರ್ಷಭರೇ! ಪಲಾಯನ ಮಾಡುವುದನ್ನು ನಿಲ್ಲಿಸಿ! ಶೂರರಂತೆ ಯುದ್ಧಮಾಡಿ! ಪಾರ್ಥನನ್ನು ವಧಿಸಲು ಸ್ವಯಂ ನಾನೇ ಅವನೊಡನೆ ಯುದ್ಧಕ್ಕೆ ಹೋಗುತ್ತೇನೆ. ನಾನು ಸೋಮಕ-ಪಾಂಚಾಲರೊಂದಿಗೆ ಪಾರ್ಥರನ್ನು ಸಂಹರಿಸುತ್ತೇನೆ.
07134055a ಅದ್ಯ ಮೇ ಯುಧ್ಯಮಾನಸ್ಯ ಸಹ ಗಾಂಡೀವಧನ್ವನಾ।
07134055c ದ್ರಕ್ಷ್ಯಂತಿ ವಿಕ್ರಮಂ ಪಾರ್ಥಾಃ ಕಾಲಸ್ಯೇವ ಯುಗಕ್ಷಯೇ।।
ಯುಗಕ್ಷಯದ ಕಾಲನಂತೆ ಗಾಂಡೀವಧನ್ವಿಯೊಡನೆ ಯುದ್ಧಮಾಡುವ ನನ್ನ ಈ ವಿಕ್ರಮವನ್ನು ಪಾರ್ಥರು ಇಂದು ನೋಡಲಿದ್ದಾರೆ!
07134056a ಅದ್ಯ ಮದ್ಬಾಣಜಾಲಾನಿ ವಿಮುಕ್ತಾನಿ ಸಹಸ್ರಶಃ।
07134056c ದ್ರಕ್ಷ್ಯಂತಿ ಸಮರೇ ಯೋಧಾಃ ಶಲಭಾನಾಮಿವಾಯತೀಃ।।
ಇಂದು ಸಮರದಲ್ಲಿ ಯೋಧರು ನನ್ನಿಂದ ಶಲಭಗಳಂತೆ ಹೊರಹೊಮ್ಮುವ ಸಹಸ್ರಾರು ಬಾಣಗಳ ಜಾಲಗಳನ್ನು ನೋಡುವವರಿದ್ದಾರೆ!
07134057a ಅದ್ಯ ಬಾಣಮಯಂ ವರ್ಷಂ ಸೃಜತೋ ಮಮ ಧನ್ವಿನಃ।
07134057c ಜೀಮೂತಸ್ಯೇವ ಘರ್ಮಾಂತೇ ದ್ರಕ್ಷ್ಯಂತಿ ಯುಧಿ ಸೈನಿಕಾಃ।।
ಬೇಸಗೆಯ ಕೊನೆಯಲ್ಲಿ ಮೋಡಗಳು ಮಳೆಸುರಿಸುವಂತೆ ನನ್ನ ಧನುಸ್ಸಿನಿಂದ ಬಾಣಮಯ ಮಳೆಯನ್ನು ಸೃಷ್ಟಿಸುವ ನನ್ನನ್ನು ಇಂದು ಯುದ್ಧದಲ್ಲಿ ಸೈನಿಕರು ನೋಡಲಿದ್ದಾರೆ!
07134058a ಜೇಷ್ಯಾಮ್ಯದ್ಯ ರಣೇ ಪಾರ್ಥಂ ಸಾಯಕೈರ್ನತಪರ್ವಭಿಃ।
07134058c ತಿಷ್ಠಧ್ವಂ ಸಮರೇ ಶೂರಾ ಭಯಂ ತ್ಯಜತ ಫಲ್ಗುನಾತ್।।
07134059a ನ ಹಿ ಮದ್ವೀರ್ಯಮಾಸಾದ್ಯ ಫಲ್ಗುನಃ ಪ್ರಸಹಿಷ್ಯತಿ।
07134059c ಯಥಾ ವೇಲಾಂ ಸಮಾಸಾದ್ಯ ಸಾಗರೋ ಮಕರಾಲಯಃ।।
ಇಂದು ನತಪರ್ವಗಳಿಂದ ನಾನು ರಣದಲ್ಲಿ ಪಾರ್ಥನನ್ನು ಜಯಿಸುತ್ತೇನೆ. ಶೂರರೇ! ಫಲ್ಗುನನ ಭಯವನ್ನು ತೊರೆದು ಸಮರದಲ್ಲಿ ನಿಲ್ಲಿ! ನನ್ನ ವೀರ್ಯವನ್ನು ಎದುರಿಸಿ ಫಲ್ಗುನನು ತೀರವನ್ನು ಮುಟ್ಟಿದ ಮಕರಾಲಯ ಸಾಗರವು ಹೇಗೋ ಹಾಗೆ ಮುಂದುವರೆಯಲಾರ!”
07134060a ಇತ್ಯುಕ್ತ್ವಾ ಪ್ರಯಯೌ ರಾಜಾ ಸೈನ್ಯೇನ ಮಹತಾ ವೃತಃ।
07134060c ಫಲ್ಗುನಂ ಪ್ರತಿ ದುರ್ಧರ್ಷಃ ಕ್ರೋಧಸಂರಕ್ತಲೋಚನಃ।।
ಹೀಗೆ ಹೇಳಿ ಮಹಾ ಸೇನೆಯಿಂದ ಪರಿವೃತನಾಗಿ ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು ದುರ್ಧರ್ಷ ರಾಜನು ಫಲ್ಗುನನಿದ್ದಲ್ಲಿಗೆ ಹೊರಟನು.
07134061a ತಂ ಪ್ರಯಾಂತಂ ಮಹಾಬಾಹುಂ ದೃಷ್ಟ್ವಾ ಶಾರದ್ವತಸ್ತದಾ।
07134061c ಅಶ್ವತ್ಥಾಮಾನಮಾಸಾದ್ಯ ವಾಕ್ಯಮೇತದುವಾಚ ಹ।।
ಹಾಗೆ ಹೋಗುತ್ತಿದ್ದ ಆ ಮಹಾಬಾಹುವನ್ನು ನೋಡಿ ಶಾರದ್ವತನು ಅಶ್ವತ್ಥಾಮನ ಬಳಿಸಾರಿ ಈ ಮಾತನ್ನಾಡಿದನು:
07134062a ಏಷ ರಾಜಾ ಮಹಾಬಾಹುರಮರ್ಷೀ ಕ್ರೋಧಮೂರ್ಚಿತಃ।
07134062c ಪತಂಗವೃತ್ತಿಮಾಸ್ಥಾಯ ಫಲ್ಗುನಂ ಯೋದ್ಧುಮಿಚ್ಚತಿ।।
“ಈ ಮಹಾಬಾಹು ಅಸಹನಶೀಲ ರಾಜನು ಕ್ರೋಧದಿಂದ ಮೂರ್ಛಿತನಾಗಿ ಪತಂಗದ ಸ್ವಭಾವವನ್ನನ್ನುಸರಿಸಿ ಫಲ್ಗುನನೊಂದಿಗೆ ಯುದ್ಧಮಾಡಲು ಬಯಸುತ್ತಾನೆ!
07134063a ಯಾವನ್ನಃ ಪಶ್ಯಮಾನಾನಾಂ ಪ್ರಾಣಾನ್ಪಾರ್ಥೇನ ಸಂಗತಃ।
07134063c ನ ಜಹ್ಯಾತ್ಪುರುಷವ್ಯಾಘ್ರಸ್ತಾವದ್ವಾರಯ ಕೌರವಂ।।
ಪುರುಷವ್ಯಾಘ್ರ! ನಾವು ನೋಡುತ್ತಿರುವಂತೆಯೇ ಪಾರ್ಥನೊಂದಿಗೆ ಹೋರಾಡಿ ಪ್ರಾಣಗಳನ್ನು ತ್ಯಜಿಸದಂತೆ ಕೌರವನನ್ನು ತಡೆದು ಯುದ್ಧದಿಂದ ನಿಲ್ಲಿಸು!
07134064a ಯಾವತ್ಫಲ್ಗುನಬಾಣಾನಾಂ ಗೋಚರಂ ನಾಧಿಗಚ್ಚತಿ।
07134064c ಕೌರವಃ ಪಾರ್ಥಿವೋ ವೀರಸ್ತಾವದ್ವಾರಯ ತಂ ದ್ರುತಂ।।
07134065a ಯಾವತ್ಪಾರ್ಥಶರೈರ್ಘೋರೈರ್ನಿರ್ಮುಕ್ತೋರಗಸಮ್ನಿಭೈಃ।
07134065c ನ ಭಸ್ಮೀಕ್ರಿಯತೇ ರಾಜಾ ತಾವದ್ಯುದ್ಧಾನ್ನಿವಾರ್ಯತಾಂ।।
ಸರ್ಪಗಳಂತೆ ಹೊರಬರುವ ಪಾರ್ಥನ ಶರಸಮೂಹಗಳಿಂದ ರಾಜನು ಭಸ್ಮೀಭೂತನಾಗಬಾರದೆಂದು ರಾಜನನ್ನು ನೀನು ತಡೆಯಬೇಕು!
07134066a ಅಯುಕ್ತಮಿವ ಪಶ್ಯಾಮಿ ತಿಷ್ಠತ್ಸ್ವಸ್ಮಾಸು ಮಾನದ।
07134066c ಸ್ವಯಂ ಯುದ್ಧಾಯ ಯದ್ರಾಜಾ ಪಾರ್ಥಂ ಯಾತ್ಯಸಹಾಯವಾನ್।।
ಮಾನದ! ನಾವು ಇಲ್ಲಿಯೇ ಇರುವಾಗ ನಮ್ಮ ಸಹಾಯವನ್ನು ಕೇಳದೇ ಸ್ವಯಂ ತಾನೇ ಪಾರ್ಥನೊಡನೆ ರಾಜನು ಹೋಗಿದ್ದುದು ಸರಿಯಲ್ಲವೆಂದು ನನಗನ್ನಿಸುತ್ತದೆ.
07134067a ದುರ್ಲಭಂ ಜೀವಿತಂ ಮನ್ಯೇ ಕೌರವ್ಯಸ್ಯ ಕಿರೀಟಿನಾ।
07134067c ಯುಧ್ಯಮಾನಸ್ಯ ಪಾರ್ಥೇನ ಶಾರ್ದೂಲೇನೇವ ಹಸ್ತಿನಃ।।
ಸಿಂಹದೊಡನೆ ಹೋರಾಡುವ ಆನೆಯಂತೆ ಕಿರೀಟಿಯೊಂದಿಗೆ ಯುದ್ಧಮಾಡುತ್ತಿರುವ ಕೌರವನನ್ನು ಪಾರ್ಥನು ಜೀವಂತವಿಡುವುದು ದುರ್ಲಭವೆಂದು ನನಗನ್ನಿಸುತ್ತದೆ.”
07134068a ಮಾತುಲೇನೈವಮುಕ್ತಸ್ತು ದ್ರೌಣಿಃ ಶಸ್ತ್ರಭೃತಾಂ ವರಃ।
07134068c ದುರ್ಯೋಧನಮಿದಂ ವಾಕ್ಯಂ ತ್ವರಿತಂ ಸಮಭಾಷತ।।
ಸೋದರಮಾವನು ಹೀಗೆ ಹೇಳಲು ಶಸ್ತ್ರಭೃತರಲ್ಲಿ ಶ್ರೇಷ್ಠ ದ್ರೌಣಿಯು ತ್ವರೆಮಾಡಿ ದುರ್ಯೋಧನನಿಗೆ ಈ ಮಾತನ್ನಾಡಿದನು:
07134069a ಮಯಿ ಜೀವತಿ ಗಾಂಧಾರೇ ನ ಯುದ್ಧಂ ಗಂತುಮರ್ಹಸಿ।
07134069c ಮಾಮನಾದೃತ್ಯ ಕೌರವ್ಯ ತವ ನಿತ್ಯಂ ಹಿತೈಷಿಣಂ।।
“ಗಾಂಧಾರೇ! ಕೌರವ್ಯ! ನಿತ್ಯವೂ ನಿನ್ನ ಹಿತೈಷಿಯಾಗಿರುವ ನನ್ನನ್ನು ಅನಾದರಿಸಿ ನಾನು ಜೀವಿತವಾಗಿರುವಾಗಲೇ ನೀನು ಯುದ್ಧಕ್ಕೆ ಹೋಗುವುದು ಸರಿಯಲ್ಲ!
07134070a ನ ಹಿ ತೇ ಸಂಭ್ರಮಃ ಕಾರ್ಯಃ ಪಾರ್ಥಸ್ಯ ವಿಜಯಂ ಪ್ರತಿ।
07134070c ಅಹಮಾವಾರಯಿಷ್ಯಾಮಿ ಪಾರ್ಥಂ ತಿಷ್ಠ ಸುಯೋಧನ।।
ಸುಯೋಧನ! ಪಾರ್ಥನಿಗೆ ವಿಜಯದೊರೆಯುವಂತೆ ಅವಸರದಲ್ಲಿ ಯಾವ ಕಾರ್ಯವನ್ನೂ ಮಾಡಬೇಡ. ಪಾರ್ಥನನ್ನು ನಾನು ತಡೆಯುತ್ತೇನೆ. ನಿಲ್ಲು!”
07134071 ದುರ್ಯೋಧನ ಉವಾಚ।
07134071a ಆಚಾರ್ಯಃ ಪಾಂಡುಪುತ್ರಾನ್ವೈ ಪುತ್ರವತ್ಪರಿರಕ್ಷತಿ।
07134071c ತ್ವಮಪ್ಯುಪೇಕ್ಷಾಂ ಕುರುಷೇ ತೇಷು ನಿತ್ಯಂ ದ್ವಿಜೋತ್ತಮ।।
ದುರ್ಯೋಧನನು ಹೇಳಿದನು: “ದ್ವಿಜೋತ್ತಮ! ಆಚಾರ್ಯನು ಪಾಂಡುಪುತ್ರರನ್ನು ಪುತ್ರರಂತೆ ಪರಿರಕ್ಷಿಸುತ್ತಾರೆ. ನೀನೂ ಕೂಡ ಅವರ ಕುರಿತು ನಿತ್ಯವೂ ಉಪೇಕ್ಷಿಸುತ್ತಿರುವೆ.
07134072a ಮಮ ವಾ ಮಂದಭಾಗ್ಯತ್ವಾನ್ಮಂದಸ್ತೇ ವಿಕ್ರಮೋ ಯುಧಿ।
07134072c ಧರ್ಮರಾಜಪ್ರಿಯಾರ್ಥಂ ವಾ ದ್ರೌಪದ್ಯಾ ವಾ ನ ವಿದ್ಮ ತತ್।।
ನೀನು ಯುದ್ಧದಲ್ಲಿ ನಿನ್ನ ವಿಕ್ರಮವನ್ನು ಕಡಿಮೆ ತೋರಿಸುತ್ತಿದ್ದೀಯೆ. ಇದು ನನ್ನ ದುರ್ಭಾಗ್ಯದಿಂದಲೋ ಅಥವಾ ಧರ್ಮರಾಜ ಅಥವಾ ದ್ರೌಪದಿಯ ಮೇಲಿನ ಪ್ರೀತಿಯಿಂದಲೋ ಅರ್ಥವಾಗುತ್ತಿಲ್ಲ.
07134073a ಧಿಗಸ್ತು ಮಮ ಲುಬ್ಧಸ್ಯ ಯತ್ಕೃತೇ ಸರ್ವಬಾಂಧವಾಃ।
07134073c ಸುಖಾರ್ಹಾಃ ಪರಮಂ ದುಃಖಂ ಪ್ರಾಪ್ನುವಂತ್ಯಪರಾಜಿತಾಃ।।
ಯಾವುದರಿಂದಾಗಿ ಸುಖಾರ್ಹ ನನ್ನ ಸರ್ವ ಬಾಂಧವರೂ ಅಪರಾಜಿತರಾಗಿ ಪರಮ ದುಃಖವನ್ನು ಹೊಂದಿರುವರೋ ಆ ನನ್ನ ಲೋಭಕ್ಕೆ ಧಿಕ್ಕಾರ!
07134074a ಕೋ ಹಿ ಶಸ್ತ್ರಭೃತಾಂ ಮುಖ್ಯೋ ಮಹೇಶ್ವರಸಮೋ ಯುಧಿ।
07134074c ಶತ್ರೂನ್ನ ಕ್ಷಪಯೇಚ್ಚಕ್ತೋ ಯೋ ನ ಸ್ಯಾದ್ಗೌತಮೀಸುತಃ।।
ಶಸ್ತ್ರಭೃತರಲ್ಲಿ ಮುಖ್ಯನಾದ ಗೌತಮೀಸುತ ಅಶ್ವತ್ಥಾಮನ ಹೊರತಾಗಿ ಯುದ್ಧದಲ್ಲಿ ಮಹೇಶ್ವರಸಮನಾದ ಯಾರುತಾನೇ ಶತ್ರುಗಳನ್ನು ನಾಶಗೊಳಿಸಬಲ್ಲನು?
07134075a ಅಶ್ವತ್ಥಾಮನ್ಪ್ರಸೀದಸ್ವ ನಾಶಯೈತಾನ್ಮಮಾಹಿತಾನ್।
07134075c ತವಾಸ್ತ್ರಗೋಚರೇ ಶಕ್ತಾಃ ಸ್ಥಾತುಂ ದೇವಾಪಿ ನಾನಘ।।
ಅಶ್ವತ್ಥಾಮ! ಅನಘ! ಪ್ರಸನ್ನನಾಗು! ನನ್ನ ಹಿತಕ್ಕಾಗಿ ಇವರನ್ನು ನಾಶಗೊಳಿಸು. ನಿನ್ನ ಅಸ್ತ್ರಗಳ ಮುಂದೆ ದೇವತೆಗಳೂ ನಿಲ್ಲಲು ಶಕ್ತರಿಲ್ಲ.
07134076a ಪಾಂಚಾಲಾನ್ಸೋಮಕಾಂಶ್ಚೈವ ಜಹಿ ದ್ರೌಣೇ ಸಹಾನುಗಾನ್।
07134076c ವಯಂ ಶೇಷಾನ್ ಹನಿಷ್ಯಾಮಸ್ತ್ವಯೈವ ಪರಿರಕ್ಷಿತಾಃ।।
ದ್ರೌಣಿ! ಅನುಗರೊಂದಿಗೆ ಪಾಂಚಾಲರನ್ನೂ ಸೋಮಕರನ್ನು ಕೊಲ್ಲು! ನಿನ್ನಿಂದಲೇ ರಕ್ಷಿತರಾದ ನಾವು ಉಳಿದವರನ್ನು ಸಂಹರಿಸುತ್ತೇವೆ.
07134077a ಏತೇ ಹಿ ಸೋಮಕಾ ವಿಪ್ರ ಪಾಂಚಾಲಾಶ್ಚ ಯಶಸ್ವಿನಃ।
07134077c ಮಮ ಸೈನ್ಯೇಷು ಸಂರಬ್ಧಾ ವಿಚರಂತಿ ದವಾಗ್ನಿವತ್।।
ವಿಪ್ರ! ಯಶಸ್ವಿ ಸೋಮಕ ಪಾಂಚಾಲರಿಂದ ಕಾಡ್ಗಿಚ್ಚಿಗೆ ಸಿಲುಕಿದವರಂತೆ ನನ್ನ ಸೈನಿಕರು ಗಾಬರಿಯಿಂದ ಓಡಿ ಹೋಗುತ್ತಿದ್ದಾರೆ.
07134078a ತಾನ್ವಾರಯ ಮಹಾಬಾಹೋ ಕೇಕಯಾಂಶ್ಚ ನರೋತ್ತಮ।
07134078c ಪುರಾ ಕುರ್ವಂತಿ ನಿಃಶೇಷಂ ರಕ್ಷ್ಯಮಾಣಾಃ ಕಿರೀಟಿನಾ।।
ಮಹಾಬಾಹೋ! ನರೋತ್ತಮ! ಕಿರೀಟಿಯ ರಕ್ಷಣೆಯಲ್ಲಿ ಇವರು ಮತ್ತು ಕೇಕಯರು ನಮ್ಮವರು ನಿಃಶೇಷವಾಗುವಂತೆ ಮಾಡುವುದರೊಳಗೆ ಇವರನ್ನು ತಡೆ!
07134079a ಆದೌ ವಾ ಯದಿ ವಾ ಪಶ್ಚಾತ್ತವೇದಂ ಕರ್ಮ ಮಾರಿಷ।
07134079c ತ್ವಮುತ್ಪನ್ನೋ ಮಹಾಬಾಹೋ ಪಾಂಚಾಲಾನಾಂ ವಧಂ ಪ್ರತಿ।।
ಮಹಾಬಾಹೋ! ಮಾರಿಷ! ಮೊದಲಾಗಲೀ ಕಡೆಯಲ್ಲಾಗಲೀ ನೀನು ಈ ಕೆಲಸವನ್ನು ಮಾಡು. ಪಾಂಚಾಲರ ವಧೆಗೋಸ್ಕರವೇ ನೀನು ಜನ್ಮತಳೆದಿರುವೆ!
07134080a ಕರಿಷ್ಯಸಿ ಜಗತ್ಸರ್ವಮಪಾಂಚಾಲಂ ಕಿಲಾಚ್ಯುತ।
07134080c ಏವಂ ಸಿದ್ಧಾಬ್ರುವನ್ವಾಚೋ ಭವಿಷ್ಯತಿ ಚ ತತ್ತಥಾ।।
ಅಚ್ಯುತ! ಜಗತ್ತನ್ನು ಸರ್ವ ಪಾಂಚಾಲರಿಂದ ಮುಕ್ತಗೊಳಿಸುತ್ತೀಯೆಲ್ಲವೇ? ಹೀಗೆ ಸಿದ್ಧರು ಹೇಳಿದ್ದರು. ಅದು ಹಾಗೆಯೇ ಆಗುತ್ತದೆ.
07134081a ನ ತೇಽಸ್ತ್ರಗೋಚರೇ ಶಕ್ತಾಃ ಸ್ಥಾತುಂ ದೇವಾಃ ಸವಾಸವಾಃ।
07134081c ಕಿಮು ಪಾರ್ಥಾಃ ಸಪಾಂಚಾಲಾಃ ಸತ್ಯಂ ಏತದ್ವಚೋ ಮಮ।।
ನಿನ್ನ ಅಸ್ತ್ರಗಳ ಮಾರ್ಗದಲ್ಲಿ ವಾಸವ ಸಹಿತ ದೇವತೆಗಳೂ ನಿಲ್ಲಲು ಶಕ್ತರಲ್ಲ. ಇನ್ನು ಪಾಂಚಾಲರೊಂದಿಗೆ ಪಾರ್ಥರು ಯಾವ ಲೆಖ್ಕಕ್ಕೆ? ಇದು ನನ್ನ ಸತ್ಯನುಡಿ!””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ದುರ್ಯೋಧನವಾಕ್ಯೇ ಚತುಸ್ತ್ರಿಂಶಾಧಿಕಶತತಮೋಽಧ್ಯಾಯಃ ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ದುರ್ಯೋಧನವಾಕ್ಯ ಎನ್ನುವ ನೂರಾಮೂವತ್ನಾಲ್ಕನೇ ಅಧ್ಯಾಯವು.