133 ರಾತ್ರಿಯುದ್ಧೇ ಕೃಪಕರ್ಣವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಘಟೋತ್ಕಚವಧ ಪರ್ವ

ಅಧ್ಯಾಯ 133

ಸಾರ

ಇಂದ್ರನಿತ್ತ ಶಕ್ತಿಯನ್ನು ಅರ್ಜುನನ ಮೇಲೆ ಪ್ರಯೋಗಿಸುತ್ತೇನೆಂದು ಕರ್ಣನು ದುರ್ಯೋಧನನಿಗೆ ಹೇಳಿದುದು (1-11). ಕೃಪ-ಕರ್ಣರ ವಿವಾದ (12-64).

07133001 ಸಂಜಯ ಉವಾಚ।
07133001a ಉದೀರ್ಯಮಾಣಂ ತದ್ದೃಷ್ಟ್ವಾ ಪಾಂಡವಾನಾಂ ಮಹದ್ಬಲಂ।
07133001c ಅವಿಷಹ್ಯಂ ಚ ಮನ್ವಾನಃ ಕರ್ಣಂ ದುರ್ಯೋಧನೋಽಬ್ರವೀತ್।।

ಸಂಜಯನು ಹೇಳಿದನು: “ಪಾಂಡವರ ಮಹಾಸೇನೆಯು ಆ ರೀತಿ ತನ್ನ ಸೇನೆಯನ್ನು ಸೀಳುತ್ತಿರುವುದನ್ನು ನೋಡಿ ಅದನ್ನು ಎದುರಿಸಲು ಸಾಧ್ಯವಾಗಲಾರದೆಂದು ಬಗೆದು ದುರ್ಯೋಧನನು ಕರ್ಣನಿಗೆ ಹೇಳಿದನು:

07133002a ಅಯಂ ಸ ಕಾಲಃ ಸಂಪ್ರಾಪ್ತೋ ಮಿತ್ರಾಣಾಂ ಮಿತ್ರವತ್ಸಲ।
07133002c ತ್ರಾಯಸ್ವ ಸಮರೇ ಕರ್ಣ ಸರ್ವಾನ್ಯೋಧಾನ್ಮಹಾಬಲ।।
07133003a ಪಾಂಚಾಲೈರ್ಮತ್ಸ್ಯಕೈಕೇಯೈಃ ಪಾಂಡವೈಶ್ಚ ಮಹಾರಥೈಃ।
07133003c ವೃತಾನ್ಸಮಂತಾತ್ಸಂಕ್ರುದ್ಧೈರ್ನಿಃಶ್ವಸದ್ಭಿರಿವೋರಗೈಃ।।

“ಮಿತ್ರವತ್ಸಲ! ಕರ್ಣ! ಮಹಾಬಲ! ಮಿತ್ರರಾದವರು ತಮ್ಮ ಕರ್ತವ್ಯವನ್ನು ನಿರ್ವಹಿಸುವ ಕಾಲವು ಈಗ ಸಂಪ್ರಾಪ್ತವಾಗಿದೆ. ಸಮರದಲ್ಲಿ ಸಂಕ್ರುದ್ಧ ಮಹಾ ಸರ್ಪಗಳಂತೆ ಭುಸುಗುಟ್ಟುತ್ತಿರುವ ಪಾಂಚಾಲ-ಮತ್ಸ್ಯ-ಕೇಕಯ ಮತ್ತು ಪಾಂಡವ ಮಹಾರಥರಿಂದ ಸುತ್ತುವರೆಯಲ್ಪಟ್ಟಿರುವ ಸರ್ವ ಯೋಧರ ಭಯವನ್ನು ಹೋಗಲಾಡಿಸು.

07133004a ಏತೇ ನದಂತಿ ಸಂಹೃಷ್ಟಾಃ ಪಾಂಡವಾ ಜಿತಕಾಶಿನಃ।
07133004c ಶಕ್ರೋಪಮಾಶ್ಚ ಬಹವಃ ಪಾಂಚಾಲಾನಾಂ ರಥವ್ರಜಾಃ।।

ಜಯವನ್ನು ಗಳಿಸಿರುವ ಶಕ್ರನಿಗೆ ಸಮಾನ ಅನೇಕ ಪಾಂಡವ ಮತ್ತು ಪಾಂಚಾಲ ರಥಸೈನಿಕರು ಸಂಹೃಷ್ಟರಾಗಿ ಸಿಂಹನಾದಗೈಯುತ್ತಿದ್ದಾರೆ.”

07133005 ಕರ್ಣ ಉವಾಚ।
07133005a ಪರಿತ್ರಾತುಮಿಹ ಪ್ರಾಪ್ತೋ ಯದಿ ಪಾರ್ಥಂ ಪುರಂದರಃ।
07133005c ತಮಪ್ಯಾಶು ಪರಾಜಿತ್ಯ ತತೋ ಹಂತಾಸ್ಮಿ ಪಾಂಡವಂ।।

ಕರ್ಣನು ಹೇಳಿದನು: “ಒಂದು ವೇಳೆ ಪುರಂದರನೇ ಪಾರ್ಥನನ್ನು ರಕ್ಷಿಸಲು ಇಲ್ಲಿಗೆ ಬಂದರೂ ನಾನು ಆ ಪಾಂಡವನನ್ನು ಸೋಲಿಸಿ ಸಂಹರಿಸುತ್ತೇನೆ.

07133006a ಸತ್ಯಂ ತೇ ಪ್ರತಿಜಾನಾಮಿ ಸಮಾಶ್ವಸಿಹಿ ಭಾರತ।
07133006c ಹಂತಾಸ್ಮಿ ಪಾಂಡುತನಯಾನ್ಪಾಂಚಾಲಾಂಶ್ಚ ಸಮಾಗತಾನ್।।

ಭಾರತ! ನಿನಗೆ ಸತ್ಯವನ್ನೇ ತಿಳಿಸುತ್ತಿದ್ದೇನೆ. ಸಮಾಧಾನಹೊಂದು. ಪಾಂಡುತನಯರನ್ನು ಮತ್ತು ಜೊತೆಗೆ ಬಂದಿರುವ ಪಾಂಚಾಲರನ್ನೂ ಸಂಹರಿಸುತ್ತೇನೆ.

07133007a ಜಯಂ ತೇ ಪ್ರತಿಜಾನಾಮಿ ವಾಸವಸ್ಯೇವ ಪಾವಕಿಃ।
07133007c ಪ್ರಿಯಂ ತವ ಮಯಾ ಕಾರ್ಯಮಿತಿ ಜೀವಾಮಿ ಪಾರ್ಥಿವ।।

ಪಾರ್ಥಿವ! ಪಾವಕಿ ಷಣ್ಮುಖನು ವಾಸವನಿಗೆ ಜಯವನ್ನು ಒದಗಿಸಿ ಕೊಟ್ಟಂತೆ ನಾನು ನಿನಗೆ ಪ್ರಿಯವಾದುದನ್ನು ಮಾಡುವುದು ನನ್ನ ಕರ್ತವ್ಯವೆಂದು ಭಾವಿಸಿ ಇನ್ನೂ ಜೀವಂತವಿರುವೆನು.

07133008a ಸರ್ವೇಷಾಮೇವ ಪಾರ್ಥಾನಾಂ ಫಲ್ಗುನೋ ಬಲವತ್ತರಃ।
07133008c ತಸ್ಯಾಮೋಘಾಂ ವಿಮೋಕ್ಷ್ಯಾಮಿ ಶಕ್ತಿಂ ಶಕ್ರವಿನಿರ್ಮಿತಾಂ।।

ಪಾರ್ಥರೆಲ್ಲರಲ್ಲಿ ಫಲ್ಗುನನೇ ಬಲಶಾಲಿಯು. ಶಕ್ರನಿಂದ ವಿನಿರ್ಮಿತ ಆ ಅಮೋಘ ಶಕ್ತಿಯನ್ನು ಅವನ ಮೇಲೆ ಪ್ರಯೋಗಿಸುತ್ತೇನೆ.

07133009a ತಸ್ಮಿನ್ ಹತೇ ಮಹೇಷ್ವಾಸೇ ಭ್ರಾತರಸ್ತಸ್ಯ ಮಾನದ।
07133009c ತವ ವಶ್ಯಾ ಭವಿಷ್ಯಂತಿ ವನಂ ಯಾಸ್ಯಂತಿ ವಾ ಪುನಃ।।

ಮಾನದ! ಆ ಮಹೇಷ್ವಾಸನು ಹತನಾದರೆ ಅವನ ಸಹೋದರರು ನಿನ್ನ ವಶದಲ್ಲಿ ಬರುತ್ತಾರೆ ಮತ್ತು ಪುನಃ ವನಕ್ಕೆ ತೆರಳುತ್ತಾರೆ.

07133010a ಮಯಿ ಜೀವತಿ ಕೌರವ್ಯ ವಿಷಾದಂ ಮಾ ಕೃಥಾಃ ಕ್ವ ಚಿತ್।
07133010c ಅಹಂ ಜೇಷ್ಯಾಮಿ ಸಮರೇ ಸಹಿತಾನ್ಸರ್ವಪಾಂಡವಾನ್।।
07133011a ಪಾಂಚಾಲಾನ್ಕೇಕಯಾಂಶ್ಚೈವ ವೃಷ್ಣೀಂಶ್ಚಾಪಿ ಸಮಾಗತಾನ್।
07133011c ಬಾಣೌಘೈಃ ಶಕಲೀಕೃತ್ಯ ತವ ದಾಸ್ಯಾಮಿ ಮೇದಿನೀಂ।।

ಕೌರವ್ಯ! ನಾನು ಜೀವಂತವಿರುವವರೆಗೆ ನೀನು ಖಂಡಿತವಾಗಿ ವಿಷಾದಿಸಬೇಕಾಗಿಲ್ಲ. ಸಮರದಲ್ಲಿ ನಾನು ಪಾಂಡವರೆಲ್ಲರನ್ನೂ ಪಾಂಚಾಲ-ಕೇಕಯ-ವೃಷ್ಣಿಗಳೊಂದಿಗೆ ನನ್ನ ಬಾಣ ಸಮೂಹಗಳಿಂದ ತುಂಡು ತುಂಡು ಮಾಡಿ ಈ ಮೇದಿನಿಯನ್ನು ನಿನಗೊಪ್ಪಿಸುತ್ತೇನೆ.””

07133012 ಸಂಜಯ ಉವಾಚ।
07133012a ಏವಂ ಬ್ರುವಾಣಂ ಕರ್ಣಂ ತು ಕೃಪಃ ಶಾರದ್ವತೋಽಬ್ರವೀತ್।
07133012c ಸ್ಮಯನ್ನಿವ ಮಹಾಬಾಹುಃ ಸೂತಪುತ್ರಮಿದಂ ವಚಃ।।

ಸಂಜಯನು ಹೇಳಿದನು: “ಹೀಗೆ ಹೇಳುತ್ತಿದ್ದ ಸೂತಪುತ್ರ ಕರ್ಣನಿಗೆ ಮಹಾಬಾಹು ಶಾರದ್ವತ ಕೃಪನು ನಸುನಗುತ್ತಾ ಇದನ್ನು ಹೇಳಿದನು:

07133013a ಶೋಭನಂ ಶೋಭನಂ ಕರ್ಣ ಸನಾಥಃ ಕುರುಪುಂಗವಃ।
07133013c ತ್ವಯಾ ನಾಥೇನ ರಾಧೇಯ ವಚಸಾ ಯದಿ ಸಿಧ್ಯತಿ।।

“ಕರ್ಣ! ನಿನ್ನ ಮಾತುಗಳು ತುಂಬಾ ಸೊಗಸಾಗಿವೆ! ರಾಧೇಯ! ಮಾತಿನಿಂದಲೇ ಎಲ್ಲವೂ ಸಿದ್ಧವಾಗುತ್ತದೆಯಾದರೆ ನೀನು ರಕ್ಷಿಸುತ್ತಿರುವುದರಿಂದಲೇ ಕುರುಪುಂಗವನು ರಕ್ಷಿತನಾಗಿದ್ದಾನೆ!

07133014a ಬಹುಶಃ ಕತ್ಥಸೇ ಕರ್ಣ ಕೌರವ್ಯಸ್ಯ ಸಮೀಪತಃ।
07133014c ನ ತು ತೇ ವಿಕ್ರಮಃ ಕಶ್ಚಿದ್ದೃಶ್ಯತೇ ಬಲಮೇವ ವಾ।।

ಕರ್ಣ! ಕೌರವನ ಹತ್ತಿರದಲ್ಲಿ ನೀನು ಕೊಚ್ಚಿಕೊಳ್ಳುತ್ತೀಯೇ ಹೊರತು ನಿನ್ನಲ್ಲಿ ಯಾವುದೇ ರೀತಿಯ ಬಲವಾದರೂ ವಿಕ್ರಮವಾದರೂ ಕಾಣುವುದಿಲ್ಲ.

07133015a ಸಮಾಗಮಃ ಪಾಂಡುಸುತೈರ್ದೃಷ್ಟಸ್ತೇ ಬಹುಶೋ ಯುಧಿ।
07133015c ಸರ್ವತ್ರ ನಿರ್ಜಿತಶ್ಚಾಸಿ ಪಾಂಡವೈಃ ಸೂತನಂದನ।।

ಸೂತನಂದನ! ಯುದ್ಧದಲ್ಲಿ ಅನೇಕಬಾರಿ ನೀನು ಪಾಂಡುಸುತರನ್ನು ಎದುರಿಸಿದುದು ಕಂಡುಬಂದರೂ ಎಲ್ಲ ಬಾರಿಯೂ ನೀನು ಪಾಂಡವರಿಂದ ಪರಾಜಿತನಾಗಿಯೇ ಹಿಂದಿರುಗಿರುವೆ.

07133016a ಹ್ರಿಯಮಾಣೇ ತದಾ ಕರ್ಣ ಗಂಧರ್ವೈರ್ಧೃತರಾಷ್ಟ್ರಜೇ।
07133016c ತದಾಯುಧ್ಯಂತ ಸೈನ್ಯಾನಿ ತ್ವಮೇಕಸ್ತು ಪಲಾಯಥಾಃ।।

ಕರ್ಣ! ಧೃತರಾಷ್ಟ್ರಜನು ಗಂಧರ್ವರಿಂದ ಅಪಹರಿಸಲ್ಪಟ್ಟಾಗ ಸೇನೆಗಳು ಯುದ್ಧಮಾಡುತ್ತಿರಲು ನೀನೊಬ್ಬನೇ ಪಲಾಯನಮಾಡಿದ್ದೆ!

07133017a ವಿರಾಟನಗರೇ ಚಾಪಿ ಸಮೇತಾಃ ಸರ್ವಕೌರವಾಃ।
07133017c ಪಾರ್ಥೇನ ನಿರ್ಜಿತಾ ಯುದ್ಧೇ ತ್ವಂ ಚ ಕರ್ಣ ಸಹಾನುಜಃ।।

ವಿರಾಟನಗರದಲ್ಲಿ ಕೂಡ ಕೌರವರೆಲ್ಲರೂ ಒಟ್ಟಾಗಿ ಪಾರ್ಥನಿಂದ ಸೋಲನ್ನನುಭವಿಸಿದಾಗ ಕರ್ಣ! ನೀನೂ ಕೂಡ ನಿನ್ನ ಸಹೋದರರೊಂದಿಗೆ ಪರಾಜಿತನಾಗಿದ್ದೆಯಲ್ಲವೇ?

07133018a ಏಕಸ್ಯಾಪ್ಯಸಮರ್ಥಸ್ತ್ವಂ ಫಲ್ಗುನಸ್ಯ ರಣಾಜಿರೇ।
07133018c ಕಥಮುತ್ಸಹಸೇ ಜೇತುಂ ಸಕೃಷ್ಣಾನ್ಸರ್ವಪಾಂಡವಾನ್।।

ರಣಾಂಗಣದಲ್ಲಿ ಫಲ್ಗುನನೊಬ್ಬನನ್ನೂ ಎದುರಿಸಲು ನೀನು ಅಸಮರ್ಥನಾಗಿರುವಾಗ ಕೃಷ್ಣನೊಂದಿಗೆ ಸರ್ವ ಪಾಂಡವರನ್ನೂ ಹೇಗೆ ಗೆಲ್ಲುತ್ತೀಯೆ?

07133019a ಅಬ್ರುವನ್ಕರ್ಣ ಯುಧ್ಯಸ್ವ ಬಹು ಕತ್ಥಸಿ ಸೂತಜ।
07133019c ಅನುಕ್ತ್ವಾ ವಿಕ್ರಮೇದ್ಯಸ್ತು ತದ್ವೈ ಸತ್ಪುರುಷವ್ರತಂ।।

ಕರ್ಣ! ನೀನು ಬಹಳ ಮಾತನಾಡುವವನು! ನಿನ್ನನ್ನು ನೀನೇ ಹೊಗಳಿಕೊಳ್ಳದೇ ಯುದ್ಧಮಾಡು! ತನ್ನ ಪರಾಕ್ರಮದ ವಿಷಯವಾಗಿ ಯಾವುದೊಂದು ಮಾತನ್ನೂ ಆಡದೇ ಪರಾಕ್ರಮವನ್ನು ಕೃತಿಯಲ್ಲಿ ತೋರಿಸುವುದೇ ಸತ್ಪುರುಷರ ಮಾರ್ಗ.

07133020a ಗರ್ಜಿತ್ವಾ ಸೂತಪುತ್ರ ತ್ವಂ ಶಾರದಾಭ್ರಮಿವಾಜಲಂ।
07133020c ನಿಷ್ಫಲೋ ದೃಶ್ಯಸೇ ಕರ್ಣ ತಚ್ಚ ರಾಜಾ ನ ಬುಧ್ಯತೇ।।

ಸೂತಪುತ್ರ! ಶರತ್ಕಾಲದ ಮೋಡವು ಗರ್ಜಿಸುವಂತೆ ಗರ್ಜಿಸಿ ನಿಷ್ಫಲನಾಗುತ್ತಿರುವೆ! ಕರ್ಣ! ಇದನ್ನು ರಾಜನು ತಿಳಿದಿಲ್ಲ!

07133021a ತಾವದ್ಗರ್ಜಸಿ ರಾಧೇಯ ಯಾವತ್ಪಾರ್ಥಂ ನ ಪಶ್ಯಸಿ।
07133021c ಪುರಾ ಪಾರ್ಥಂ ಹಿ ತೇ ದೃಷ್ಟ್ವಾ ದುರ್ಲಭಂ ಗರ್ಜಿತಂ ಭವೇತ್।।

ರಾಧೇಯ! ಎಲ್ಲಿಯವರೆಗೆ ಪಾರ್ಥನನ್ನು ನೀನು ಕಾಣುವುದಿಲ್ಲವೋ ಅಲ್ಲಿಯವರೆಗೆ ನೀನು ಗರ್ಜಿಸುತ್ತಲೇ ಇರುವೆ. ಏಕೆಂದರೆ ಪಾರ್ಥನನ್ನು ನೋಡಿದ ನಂತರ ನಿನಗೆ ಗರ್ಜಿಸಲಾಗುವುದಿಲ್ಲ!

07133022a ತ್ವಮನಾಸಾದ್ಯ ತಾನ್ಬಾಣಾನ್ಫಲ್ಗುನಸ್ಯ ವಿಗರ್ಜಸಿ।
07133022c ಪಾರ್ಥಸಾಯಕವಿದ್ಧಸ್ಯ ದುರ್ಲಭಂ ಗರ್ಜಿತಂ ಭವೇತ್।।

ಎಲ್ಲಿಯವರೆಗೆ ಫಲ್ಗುನನ ಆ ಬಾಣಗಳು ನಿನಗೆ ತಾಗುವುದಿಲ್ಲವೋ ಅಲ್ಲಿಯವರೆಗೆ ನೀನು ಗರ್ಜಿಸುತ್ತಿರುವೆ! ಪಾರ್ಥನ ಸಾಯಕಗಳು ತಾಗಿದನಂತರ ನಿನ್ನ ಗರ್ಜನೆಯು ದುರ್ಲಭವಾಗುವುದು.

07133023a ಬಾಹುಭಿಃ ಕ್ಷತ್ರಿಯಾಃ ಶೂರಾ ವಾಗ್ಭಿಃ ಶೂರಾ ದ್ವಿಜಾತಯಃ।
07133023c ಧನುಷಾ ಫಲ್ಗುನಃ ಶೂರಃ ಕರ್ಣಃ ಶೂರೋ ಮನೋರಥೈಃ।।

ಕ್ಷತ್ರಿಯರು ಬಾಹುಬಲದಿಂದ ಶೂರರೆನಿಸಿಕೊಳ್ಳುತ್ತಾರೆ. ಬ್ರಾಹ್ಮಣರು ವಾಕ್ಚಾತುರ್ಯದಿಂದ ಶೂರರೆನಿಸಿಕೊಳ್ಳುತ್ತಾರೆ. ಫಲ್ಗುನನು ಧನುರ್ವಿದ್ಯೆಯಲ್ಲಿ ಶೂರನೆನಿಸಿಕೊಂಡಿದ್ದಾನೆ. ಕರ್ಣನು ತನ್ನ ಮನೋರಥಗಳಿಂದ ಶೂರನೆನಿಸಿಕೊಂಡಿದ್ದಾನೆ!”

07133024a ಏವಂ ಪರುಷಿತಸ್ತೇನ ತದಾ ಶಾರದ್ವತೇನ ಸಃ।
07133024c ಕರ್ಣಃ ಪ್ರಹರತಾಂ ಶ್ರೇಷ್ಠಃ ಕೃಪಂ ವಾಕ್ಯಮಥಾಬ್ರವೀತ್।।

ಹೀಗೆ ಚುಚ್ಚುಮಾತುಗಳಿಂದ ಶಾರದ್ವತನು ರೇಗಿಸಲು ಪ್ರಹರಿಗಳಲ್ಲಿ ಶ್ರೇಷ್ಠ ಕರ್ಣನು ಕೃಪನಿಗೆ ಹೇಳಿದನು:

07133025a ಶೂರಾ ಗರ್ಜಂತಿ ಸತತಂ ಪ್ರಾವೃಷೀವ ಬಲಾಹಕಾಃ।
07133025c ಫಲಂ ಚಾಶು ಪ್ರಯಚ್ಚಂತಿ ಬೀಜಮುಪ್ತಂ ಋತಾವಿವ।।

“ಶೂರರು ಸತತವೂ ಗರ್ಜಿಸುತ್ತಿರುತ್ತಾರೆ ಮತ್ತು ಮೋಡಗಳಂತೆ ಮಳೆಯನ್ನೂ ಸುರಿಸುತ್ತಾರೆ. ಋತುಕಾಲದಲ್ಲಿ ಬಿತ್ತಿದ ಬೀಜವು ಫಲಕೊಡುವಂತೆ ಶೂರರಾದವರು ಫಲವನ್ನು ಕೊಡುತ್ತಾರೆ.

07133026a ದೋಷಮತ್ರ ನ ಪಶ್ಯಾಮಿ ಶೂರಾಣಾಂ ರಣಮೂರ್ಧನಿ।
07133026c ತತ್ತದ್ವಿಕತ್ಥಮಾನಾನಾಂ ಭಾರಂ ಚೋದ್ವಹತಾಂ ಮೃಧೇ।।

ರಣಭೂಮಿಯಲ್ಲಿ ಯುದ್ಧದ ಭಾರವನ್ನು ಹೊತ್ತು ಸಂಹರಿಸುತ್ತಿರುವವರು ತಮ್ಮ ಪರಾಕ್ರಮದ ವಿಷಯವಾಗಿ ಹೇಳಿಕೊಳ್ಳುವ ಶೂರರಲ್ಲಿ ನಾನು ಯಾವುದೇ ರೀತಿಯ ದೋಷವನ್ನು ಕಾಣುವುದಿಲ್ಲ.

07133027a ಯಂ ಭಾರಂ ಪುರುಷೋ ವೋಢುಂ ಮನಸಾ ಹಿ ವ್ಯವಸ್ಯತಿ।
07133027c ದೈವಮಸ್ಯ ಧ್ರುವಂ ತತ್ರ ಸಾಹಾಯ್ಯಾಯೋಪಪದ್ಯತೇ।।

ಯಾವ ಭಾರವನ್ನು ಹೊರಲು ಮನುಷ್ಯನು ಮನಸತಃ ನಿಶ್ಚಯಿಸುತ್ತಾನೋ ಅದರಲ್ಲಿ ದೈವವು ಅವನಿಗೆ ಸಹಾಯಮಾಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

07133028a ವ್ಯವಸಾಯದ್ವಿತೀಯೋಽಹಂ ಮನಸಾ ಭಾರಮುದ್ವಹನ್।
07133028c ಗರ್ಜಾಮಿ ಯದ್ಯಹಂ ವಿಪ್ರ ತವ ಕಿಂ ತತ್ರ ನಶ್ಯತಿ।।

ವಿಪ್ರ! ಈ ಕಾರ್ಯಭಾರವನ್ನು ವಹಿಸಿಕೊಳ್ಳಲು ನಾನು ಮನಸಾರೆ ನಿಶ್ಚಯಿಸಿದ್ದೇನೆ. ಅದರ ಕಾರ್ಯಸಿದ್ಧಿಯು ಎರಡನೆಯ ವಿಷಯ. ಒಂದುವೇಳೆ ನಾನು ಗರ್ಜಿಸಿದರೆ ಅದರಲ್ಲಿ ನಿನಗೇನು ನಷ್ಟ?

07133029a ವೃಥಾ ಶೂರಾ ನ ಗರ್ಜಂತಿ ಸಜಲಾ ಇವ ತೋಯದಾಃ।
07133029c ಸಾಮರ್ಥ್ಯಮಾತ್ಮನೋ ಜ್ಞಾತ್ವಾ ತತೋ ಗರ್ಜಂತಿ ಪಂಡಿತಾಃ।।

ಶೂರರು ಸುಮ್ಮ ಸುಮ್ಮನೇ ಗರ್ಜಿಸುವುದಿಲ್ಲ. ಮಳೆಯಿಂದ ತುಂಬಿರುವ ಮೋಡಗಳಂತೆ ಪಂಡಿತರು ತಮ್ಮ ಸಾಮರ್ಥ್ಯವನ್ನು ತಿಳಿದೇ ಗರ್ಜಸುತ್ತಾರೆ.

07133030a ಸೋಽಹಮದ್ಯ ರಣೇ ಯತ್ತಃ ಸಹಿತೌ ಕೃಷ್ಣಪಾಂಡವೌ।
07133030c ಉತ್ಸಹೇ ತರಸಾ ಜೇತುಂ ತತೋ ಗರ್ಜಾಮಿ ಗೌತಮ।।

ಗೌತಮ! ರಣಭೂಮಿಯಲ್ಲಿ ಜಯಿಸಲು ಉತ್ಸುಕರಾಗಿ ಒಟ್ಟಾಗಿ ಪ್ರಯತ್ನಿಸುತ್ತಿರುವ ಕೃಷ್ಣ-ಪಾಂಡವರನ್ನು ಜಯಿಸಲು ನಾನು ಮನಸ್ಸಿನಿಂದಲೇ ಉತ್ಸಾಹಿತನಾಗಿ ಗರ್ಜಿಸುತ್ತಿದ್ದೇನೆ.

07133031a ಪಶ್ಯ ತ್ವಂ ಗರ್ಜಿತಸ್ಯಾಸ್ಯ ಫಲಂ ಮೇ ವಿಪ್ರ ಸಾನುಗಃ।
07133031c ಹತ್ವಾ ಪಾಂಡುಸುತಾನಾಜೌ ಸಹಕೃಷ್ಣಾನ್ಸಸಾತ್ವತಾನ್।
07133031e ದುರ್ಯೋಧನಾಯ ದಾಸ್ಯಾಮಿ ಪೃಥಿವೀಂ ಹತಕಂಟಕಾಂ।।

ವಿಪ್ರ! ಈ ಗರ್ಜನೆಯ ಫಲವನ್ನು ನೀನೇ ನೋಡುವಿಯಂತೆ! ಇಂದು ನಾನು ಅನುಗರೊಂದಿಗೆ ಪಾಂಡುಸುತರನ್ನು, ಕೃಷ್ಣನೂ ಮತ್ತು ಸಾತ್ವತರನ್ನೂ ಸೇರಿಕೊಂಡು ಸಂಹರಿಸಿ ಕಂಟಕರಹಿತ ಈ ಪೃಥ್ವಿಯನ್ನು ದುರ್ಯೋಧನನಿಗೆ ಕೊಡುತ್ತೇನೆ!”

07133032 ಕೃಪ ಉವಾಚ।
07133032a ಮನೋರಥಪ್ರಲಾಪೋ ಮೇ ನ ಗ್ರಾಹ್ಯಸ್ತವ ಸೂತಜ।
07133032c ಯದಾ ಕ್ಷಿಪಸಿ ವೈ ಕೃಷ್ಣೌ ಧರ್ಮರಾಜಂ ಚ ಪಾಂಡವಂ।।

ಕೃಪನು ಹೇಳಿದನು: “ಸೂತಜ! ನಿನ್ನ ಈ ಮನೋರಥಪ್ರಲಾಪವು ನನಗೆ ಸ್ವಲ್ಪವೂ ಹಿಡಿಸುವುದಿಲ್ಲ. ನೀನು ಸದಾ ಕೃಷ್ಣಾರ್ಜುನರನ್ನೂ ಪಾಂಡವ ಧರ್ಮರಾಜನನ್ನೂ ನಿಂದಿಸುತ್ತಿರುತ್ತೀಯೆ.

07133033a ಧ್ರುವಸ್ತತ್ರ ಜಯಃ ಕರ್ಣ ಯತ್ರ ಯುದ್ಧವಿಶಾರದೌ।
07133033c ದೇವಗಂಧರ್ವಯಕ್ಷಾಣಾಂ ಮನುಷ್ಯೋರಗರಕ್ಷಸಾಂ।
07133033e ದಂಶಿತಾನಾಮಪಿ ರಣೇ ಅಜೇಯೌ ಕೃಷ್ಣಪಾಂಡವೌ।।

ಕರ್ಣ! ಎಲ್ಲಿ ಯುದ್ಧವಿಶಾರದ ಕೃಷ್ಣ-ಪಾಂಡವರಿರುವರೋ ಅಲ್ಲಿಗೇ ಜಯವು ನಿಶ್ಚಿತವಾದುದು. ಇವರಿಬ್ಬರೂ ರಣದಲ್ಲಿ ಕವಚಧಾರಿಗಳಾದ ದೇವ-ಗಂಧರ್ವ-ಯಕ್ಷ-ಮನುಷ್ಯ-ಉರಗ-ರಾಕ್ಷಸರಿಗೂ ಅಜೇಯರು.

07133034a ಬ್ರಹ್ಮಣ್ಯಃ ಸತ್ಯವಾಗ್ದಾಂತೋ ಗುರುದೈವತಪೂಜಕಃ।
07133034c ನಿತ್ಯಂ ಧರ್ಮರತಶ್ಚೈವ ಕೃತಾಸ್ತ್ರಶ್ಚ ವಿಶೇಷತಃ।
07133034e ಧೃತಿಮಾಂಶ್ಚ ಕೃತಜ್ಞಶ್ಚ ಧರ್ಮಪುತ್ರೋ ಯುಧಿಷ್ಠಿರಃ।।

ಧರ್ಮಪುತ್ರ ಯುಧಿಷ್ಠಿರನಾದರೋ ಬ್ರಹ್ಮಣ್ಯ, ಸತ್ಯವಾಗ್ಮಿ, ಜಿತೇಂದ್ರಿಯ, ಗುರು-ದೇವತೆಗಳನ್ನು ಪೂಜಿಸುವವನು. ನಿತ್ಯವೂ ಧರ್ಮನಿರತನಾಗಿರುವವನು. ವಿಶೇಷವಾಗಿ ಅಸ್ತ್ರಗಳಲ್ಲಿ ಪರಿಣಿತನೂ ಹೌದು. ಅವನು ಧೃತಿವಂತ ಮತ್ತು ಕೃತಜ್ಞ.

07133035a ಭ್ರಾತರಶ್ಚಾಸ್ಯ ಬಲಿನಃ ಸರ್ವಾಸ್ತ್ರೇಷು ಕೃತಶ್ರಮಾಃ।
07133035c ಗುರುವೃತ್ತಿರತಾಃ ಪ್ರಾಜ್ಞಾ ಧರ್ಮನಿತ್ಯಾ ಯಶಸ್ವಿನಃ।।

ಅವನ ಅನುಜರೂ ಕೂಡ ಬಲಶಾಲಿಗಳು. ಸರ್ವ ಶಸ್ತ್ರಗಳಲ್ಲಿ ಪಳಗಿದವರು. ಗುರುಸೇವೆಯಲ್ಲಿ ನಿರತರಾದವರು. ಪ್ರಾಜ್ಞರು. ಧರ್ಮನಿರತರು ಮತ್ತು ಯಶಸ್ವಿಗಳು ಕೂಡ.

07133036a ಸಂಬಂಧಿನಶ್ಚೇಂದ್ರವೀರ್ಯಾಃ ಸ್ವನುರಕ್ತಾಃ ಪ್ರಹಾರಿಣಃ।
07133036c ಧೃಷ್ಟದ್ಯುಮ್ನಃ ಶಿಖಂಡೀ ಚ ದೌರ್ಮುಖಿರ್ಜನಮೇಜಯಃ।।
07133037a ಚಂದ್ರಸೇನೋ ಭದ್ರಸೇನಃ ಕೀರ್ತಿಧರ್ಮಾ ಧ್ರುವೋ ಧರಃ।
07133037c ವಸುಚಂದ್ರೋ ದಾಮಚಂದ್ರಃ ಸಿಂಹಚಂದ್ರಃ ಸುವೇಧನಃ।।
07133038a ದ್ರುಪದಸ್ಯ ತಥಾ ಪುತ್ರಾ ದ್ರುಪದಶ್ಚ ಮಹಾಸ್ತ್ರವಿತ್।
07133038c ಯೇಷಾಮರ್ಥಾಯ ಸಮ್ಯತ್ತೋ ಮತ್ಸ್ಯರಾಜಃ ಸಹಾನುಗಃ।।

ಇವನ ಸಂಬಂಧಿಗಳೂ ವೀರ್ಯದಲ್ಲಿ ಇಂದ್ರನ ಸಮಾನರು. ಇವನಲ್ಲಿ ವಿಶೇಷ ಅನುರಾಗವನ್ನು ಹೊಂದಿದವರು. ಪ್ರಹಾರಿಗಳು. ಧೃಷ್ಟದ್ಯುಮ್ನ, ಶಿಖಂಡೀ, ದೌರ್ಮುಖೀ, ಜನಮೇಜಯ, ಚಂದ್ರಸೇನ, ಭದ್ರಸೇನ, ಕೀರ್ತಿಧರ್ಮ, ಧ್ರುವ, ಧರ, ವಸುಚಂದ್ರ, ದಾಮಚಂದ್ರ, ಸಿಂಹಚಂದ್ರ, ಸುವೇಧನ ಮೊದಲಾದ ದ್ರುಪದನ ಪುತ್ರರು ಮತ್ತು ಮಹಾಸ್ತ್ರವಿದು ದ್ರುಪದ ಇವರೆಲ್ಲರೂ ಮತ್ತು ಅನುಯಾಯಿಗಳೊಂದಿಗೆ ಮತ್ಸ್ಯರಾಜ ಇವರು ಯುಧಿಷ್ಠಿರನಿಗಾಗಿ ಒಂದಾಗಿದ್ದಾರೆ.

07133039a ಶತಾನೀಕಃ ಸುದಶನಃ ಶ್ರುತಾನೀಕಃ ಶ್ರುತಧ್ವಜಃ।
07133039c ಬಲಾನೀಕೋ ಜಯಾನೀಕೋ ಜಯಾಶ್ವೋ ರಥವಾಹನಃ।।
07133040a ಚಂದ್ರೋದಯಃ ಕಾಮರಥೋ ವಿರಾಟಭ್ರಾತರಃ ಶುಭಾಃ।
07133040c ಯಮೌ ಚ ದ್ರೌಪದೇಯಾಶ್ಚ ರಾಕ್ಷಸಶ್ಚ ಘಟೋತ್ಕಚಃ।
07133040e ಯೇಷಾಮರ್ಥಾಯ ಯುಧ್ಯಂತೇ ನ ತೇಷಾಂ ವಿದ್ಯತೇ ಕ್ಷಯಃ।।

ಶತಾನೀಕ, ಸುದರ್ಶನ, ಶ್ರುತಾನೀಕ, ಶ್ರುತಧ್ವಜ, ಬಲಾನೀಕ, ಜಯಾನೀಕ, ಜಯಾಶ್ವ, ರಥವಾಹನ, ಚಂದ್ರೋದಯ, ಕಾಮರಥ ಇವರು ವಿರಾಟನ ಶುಭ ಸಹೋದರರು. ಯಮಳರು, ದ್ರೌಪದೇಯರು, ಮತ್ತು ರಾಕ್ಷಸ ಘಟೋತ್ಕಚ ಇವರು ಕೂಡ ಯುಧಿಷ್ಠಿರನ ಸಲುವಾಗಿ ಯುದ್ಧಮಾಡುತ್ತಿದ್ದಾರೆ. ಇವರನ್ನು ಸಂಹರಿಸುವ ರೀತಿಯು ತಿಳಿದಿಲ್ಲ.

07133041a ಕಾಮಂ ಖಲು ಜಗತ್ಸರ್ವಂ ಸದೇವಾಸುರಮಾನವಂ।
07133041c ಸಯಕ್ಷರಾಕ್ಷಸಗಣಂ ಸಭೂತಭುಜಗದ್ವಿಪಂ।
07133041e ನಿಃಶೇಷಮಸ್ತ್ರವೀರ್ಯೇಣ ಕುರ್ಯಾತಾಂ ಭೀಮಫಲ್ಗುನೌ।।

ಭೀಮ-ಫಲ್ಗುನರು ಬಯಸಿದರೆ ತಮ್ಮ ಅಸ್ತ್ರವೀರ್ಯದಿಂದ ದೇವ-ಅಸುರ-ಮಾನವ-ಯಕ್ಷ-ರಾಕ್ಷಸಗಣಗಳಿಂದ ಕೂಡಿರುವ ಮತ್ತು ಇರುವ ಸರ್ಪ-ಆನೆಗಳೊಂದಿಗೆ ಇಡೀ ಜಗತ್ತೆಲ್ಲವನ್ನೂ ನಿಃಶೇಷವನ್ನಾಗಿ ಮಾಡಬಲ್ಲರು.

07133042a ಯುಧಿಷ್ಠಿರಶ್ಚ ಪೃಥಿವೀಂ ನಿರ್ದಹೇದ್ಘೋರಚಕ್ಷುಷಾ।
07133042c ಅಪ್ರಮೇಯಬಲಃ ಶೌರಿರ್ಯೇಷಾಮರ್ಥೇ ಚ ದಂಶಿತಃ।
07133042e ಕಥಂ ತಾನ್ಸಮ್ಯುಗೇ ಕರ್ಣ ಜೇತುಮುತ್ಸಹಸೇ ಪರಾನ್।।

ಯುಧಿಷ್ಠಿರನಾದರೋ ತನ್ನ ಘೋರ ದೃಷ್ಟಿಯಿಂದಲೇ ಈ ಭೂಮಿಯನ್ನು ಸುಡಬಲ್ಲನು. ಕರ್ಣ! ಯಾರ ರಕ್ಷಣೆಗೆಂದು ಅಪ್ರಮೇಯಬಲಶಾಲಿ ಶೌರಿಯೇ ಇರುವನೋ ಅಂಥಹ ಶತ್ರುಗಳನ್ನು ನೀನು ರಣದಲ್ಲಿ ಹೇಗೆ ಗೆಲ್ಲಬಲ್ಲೆ?

07133043a ಮಹಾನಪನಯಸ್ತ್ವೇಷ ತವ ನಿತ್ಯಂ ಹಿ ಸೂತಜ।
07133043c ಯಸ್ತ್ವಮುತ್ಸಹಸೇ ಯೋದ್ಧುಂ ಸಮರೇ ಶೌರಿಣಾ ಸಹ।।

ಸೂತಜ! ಸಮರದಲ್ಲಿ ಶೌರಿಯೊಡನೆ ಯುದ್ಧಮಾಡುತ್ತೇನೆಂದು ನೀನು ನಿತ್ಯವೂ ತೋರಿಸಿಕೊಂಡು ಬಂದಿರುವ ಉತ್ಸಾಹವೇ ನೀನು ಮಾಡುತ್ತಿರುವ ದೊಡ್ಡ ತಪ್ಪು!””

07133044 ಸಂಜಯ ಉವಾಚ।
07133044a ಏವಮುಕ್ತಸ್ತು ರಾಧೇಯಃ ಪ್ರಹಸನ್ಭರತರ್ಷಭ।
07133044c ಅಬ್ರವೀಚ್ಚ ತದಾ ಕರ್ಣೋ ಗುರುಂ ಶಾರದ್ವತಂ ಕೃಪಂ।।

ಸಂಜಯನು ಹೇಳಿದನು: “ಭರತರ್ಷಭ! ಇದನ್ನು ಕೇಳಿ ರಾಧೇಯ ಕರ್ಣನು ಜೋರಾಗಿ ನಗುತ್ತಾ ಗುರು ಶಾರದ್ವತ ಕೃಪನಿಗೆ ಹೇಳಿದನು:

07133045a ಸತ್ಯಮುಕ್ತಂ ತ್ವಯಾ ಬ್ರಹ್ಮನ್ಪಾಂಡವಾನ್ಪ್ರತಿ ಯದ್ವಚಃ।
07133045c ಏತೇ ಚಾನ್ಯೇ ಚ ಬಹವೋ ಗುಣಾಃ ಪಾಂಡುಸುತೇಷು ವೈ।।

“ಬ್ರಹ್ಮನ್! ಪಾಂಡವರ ಕುರಿತಾಗಿ ನೀನು ಏನು ಮಾತನಾಡುತ್ತಿರುವೆಯೋ ಅದು ಸತ್ಯವೇ ಆಗಿದೆ. ಇವಲ್ಲದೇ ಇನ್ನೂ ಅನೇಕ ಗುಣಗಳು ಪಾಂಡುಸುತರಲ್ಲಿ ಇವೆ ತಾನೇ?

07133046a ಅಜಯ್ಯಾಶ್ಚ ರಣೇ ಪಾರ್ಥಾ ದೇವೈರಪಿ ಸವಾಸವೈಃ।
07133046c ಸದೈತ್ಯಯಕ್ಷಗಂಧರ್ವಪಿಶಾಚೋರಗರಾಕ್ಷಸೈಃ।
07133046e ತಥಾಪಿ ಪಾರ್ಥಾಂ ಜೇಷ್ಯಾಮಿ ಶಕ್ತ್ಯಾ ವಾಸವದತ್ತಯಾ।।

ದೈತ್ಯ-ಯಕ್ಷ-ಗಂಧರ್ವ-ಪಿಶಾಚ-ಉರಗ-ರಾಕ್ಷಸರು ಮತ್ತು ವಾಸವನನ್ನು ಕೂಡಿ ಬಂದ ದೇವತೆಗಳಿಗೂ ಪಾರ್ಥರು ರಣದಲ್ಲಿ ಅಜೇಯರು. ಹಾಗಿದ್ದರೂ ಕೂಡ ನಾನು ವಾಸವನು ನೀಡಿರುವ ಶಕ್ತಿಯಿಂದ ಪಾರ್ಥನನ್ನು ಗೆಲ್ಲುತ್ತೇನೆ.

07133047a ಮಮಾಪ್ಯಮೋಘಾ ದತ್ತೇಯಂ ಶಕ್ತಿಃ ಶಕ್ರೇಣ ವೈ ದ್ವಿಜ।
07133047c ಏತಯಾ ನಿಹನಿಷ್ಯಾಮಿ ಸವ್ಯಸಾಚಿನಮಾಹವೇ।।

ದ್ವಿಜ! ಶಕ್ರನು ನನಗೆ ಕೊಟ್ಟಿರುವ ಆ ಅಮೋಘ ಶಕ್ತಿಯಿಂದ ನಾನು ರಣದಲ್ಲಿ ಸವ್ಯಸಾಚಿಯನ್ನು ಸಂಹರಿಸುತ್ತೇನೆ.

07133048a ಹತೇ ತು ಪಾಂಡವೇ ಕೃಷ್ಣೋ ಭ್ರಾತರಶ್ಚಾಸ್ಯ ಸೋದರಾಃ।
07133048c ಅನರ್ಜುನಾ ನ ಶಕ್ಷ್ಯಂತಿ ಮಹೀಂ ಭೋಕ್ತುಂ ಕಥಂ ಚನ।।

ಪಾಂಡವ ಕೃಷ್ಣನು ಹತನಾದನೆಂದರೆ ಅವನ ಅಣ್ಣಂದಿರು ಮತ್ತು ತಮ್ಮಂದಿರು ಅರ್ಜುನನಿಲ್ಲದೇ ಈ ಭೂಮಿಯನ್ನು ಭೋಗಿಸಲು ಶಕ್ಯರಾಗುವುದಿಲ್ಲ.

07133049a ತೇಷು ನಷ್ಟೇಷು ಸರ್ವೇಷು ಪೃಥಿವೀಯಂ ಸಸಾಗರಾ।
07133049c ಅಯತ್ನಾತ್ಕೌರವೇಯಸ್ಯ ವಶೇ ಸ್ಥಾಸ್ಯತಿ ಗೌತಮ।।

ಗೌತಮ! ಅವರೆಲ್ಲರೂ ನಷ್ಟರಾಗಲು ಸಾಗರದೊಂದಿನ ಈ ಪೃಥ್ವಿಯು ಏನೂ ಪ್ರಯತ್ನಮಾಡದೇ ಕೌರವನ ವಶದಲ್ಲಿ ಬರುತ್ತದೆ.

07133050a ಸುನೀತೈರಿಹ ಸರ್ವಾರ್ಥಾಃ ಸಿಧ್ಯಂತೇ ನಾತ್ರ ಸಂಶಯಃ।
07133050c ಏತಮರ್ಥಮಹಂ ಜ್ಞಾತ್ವಾ ತತೋ ಗರ್ಜಾಮಿ ಗೌತಮ।।

ಉತ್ತಮ ಉಪಾಯವು ಸರ್ವ ಉದ್ದೇಶಗಳನ್ನೂ ಸಿದ್ಧಿಗೊಳಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಗೌತಮ! ಇದರ ಅರ್ಥವನ್ನು ತಿಳಿದೇ ನಾನು ಗರ್ಜಿಸುತ್ತಿದ್ದೇನೆ.

07133051a ತ್ವಂ ತು ವೃದ್ಧಶ್ಚ ವಿಪ್ರಶ್ಚ ಅಶಕ್ತಶ್ಚಾಪಿ ಸಮ್ಯುಗೇ।
07133051c ಕೃತಸ್ನೇಹಶ್ಚ ಪಾರ್ಥೇಷು ಮೋಹಾನ್ಮಾಮವಮನ್ಯಸೇ।।

ನೀನಾದರೋ ಬ್ರಾಹ್ಮಣ! ಅದರಲ್ಲೂ ಮುದಿಬ್ರಾಹ್ಮಣ! ಯುದ್ಧಮಾಡಲು ಅಶಕ್ತನಾಗಿರುವೆ. ಪಾರ್ಥರೊಂದಿಗೆ ವಿಶೇಷವಾದ ಸ್ನೇಹವನ್ನಿಟ್ಟುಕೊಂಡಿರುವ ನೀನು ಮೋಹಗೊಂಡು ನನ್ನನ್ನು ಅಪಮಾನಿಸುತ್ತಿರುವೆ.

07133052a ಯದ್ಯೇವಂ ವಕ್ಷ್ಯಸೇ ಭೂಯೋ ಮಾಮಪ್ರಿಯಮಿಹ ದ್ವಿಜ।
07133052c ತತಸ್ತೇ ಖಡ್ಗಮುದ್ಯಮ್ಯ ಜಿಹ್ವಾಂ ಚೇತ್ಸ್ಯಾಮಿ ದುರ್ಮತೇ।।

ದುರ್ಮತಿ ದ್ವಿಜನೇ! ಇನ್ನೊಮ್ಮೆ ನೀನೇನಾದಾರೂ ನನಗೆ ಅಪ್ರಿಯವಾಗಿ ಈ ರೀತಿ ಮಾತನಾಡಿದರೆ ಖಡ್ಗವನ್ನೆತ್ತಿ ನಿನ್ನ ನಾಲಿಗೆಯನ್ನು ಕತ್ತರಿಸುತ್ತೇನೆ.

07133053a ಯಚ್ಚಾಪಿ ಪಾಂಡವಾನ್ವಿಪ್ರ ಸ್ತೋತುಮಿಚ್ಚಸಿ ಸಮ್ಯುಗೇ।
07133053c ಭೀಷಯನ್ಸರ್ವಸೈನ್ಯಾನಿ ಕೌರವೇಯಾಣಿ ದುರ್ಮತೇ।
07133053e ಅತ್ರಾಪಿ ಶೃಣು ಮೇ ವಾಕ್ಯಂ ಯಥಾವದ್ಗದತೋ ದ್ವಿಜ।।

ವಿಪ್ರ! ದುರ್ಮತೇ! ಸಂಯುಗದಲ್ಲಿ ಕೌರವರ ಸರ್ವ ಸೇನೆಗಳನ್ನೂ ಹೆದರಿಸುತ್ತಾ ಪಾಂಡವರನ್ನು ಪ್ರಶಂಸಿಸಲು ಬಯಸುತ್ತಿರುವೆ. ಈ ವಿಷಯದಲ್ಲಿ ಕೆಲವೊಂದನ್ನು ಯಥಾವತ್ತಾಗಿ ಹೇಳುತ್ತೇನೆ. ಕೇಳು.

07133054a ದುರ್ಯೋಧನಶ್ಚ ದ್ರೋಣಶ್ಚ ಶಕುನಿರ್ದುರ್ಮುಖೋ ಜಯಃ।
07133054c ದುಃಶಾಸನೋ ವೃಷಸೇನೋ ಮದ್ರರಾಜಸ್ತ್ವಮೇವ ಚ।
07133054e ಸೋಮದತ್ತಶ್ಚ ಭೂರಿಶ್ಚ ತಥಾ ದ್ರೌಣಿರ್ವಿವಿಂಶತಿಃ।।
07133055a ತಿಷ್ಠೇಯುರ್ದಂಶಿತಾ ಯತ್ರ ಸರ್ವೇ ಯುದ್ಧವಿಶಾರದಾಃ।
07133055c ಜಯೇದೇತಾನ್ರಣೇ ಕೋ ನು ಶಕ್ರತುಲ್ಯಬಲೋಽಪ್ಯರಿಃ।।

ದುರ್ಯೋಧನ, ದ್ರೋಣ, ಶಕುನಿ, ದುರ್ಮುಖ, ಜಯ, ದುಃಶಾಸನ, ವೃಷಸೇನ, ಮದ್ರರಾಜ, ಮತ್ತು ನೀನು, ಸೋಮದತ್ತ, ಭೂರಿ, ದ್ರೌಣಿ, ವಿವಿಂಶತಿ, ಇವರೆಲ್ಲ ಯುದ್ಧವಿಶಾರದರೂ ಕವಚಗಳನ್ನು ಧರಿಸಿ ನಿಂತಿರುವಾಗ ಶಕ್ರನಿಗೂ ಸಮ ಬಲಶಾಲಿ ಯಾವ ಶತ್ರುವು ತಾನೇ ರಣದಲ್ಲಿ ನಮ್ಮನ್ನು ಜಯಿಸಿಯಾನು?

07133056a ಶೂರಾಶ್ಚ ಹಿ ಕೃತಾಸ್ತ್ರಾಶ್ಚ ಬಲಿನಃ ಸ್ವರ್ಗಲಿಪ್ಸವಃ।
07133056c ಧರ್ಮಜ್ಞಾ ಯುದ್ಧಕುಶಲಾ ಹನ್ಯುರ್ಯುದ್ಧೇ ಸುರಾನಪಿ।।

ಇವರು ಶೂರರು. ಅಸ್ತ್ರವಿದರು. ಬಲಶಾಲಿಗಳು. ಸ್ವರ್ಗಾಭಿಲಾಷಿಗಳು. ಧರ್ಮಜ್ಞರು. ಯುದ್ಧಕುಶಲರು. ಯುದ್ಧದಲ್ಲಿ ಸುರರನ್ನೂ ಸಂಹರಿಸಬಲ್ಲರು.

07133057a ಏತೇ ಸ್ಥಾಸ್ಯಂತಿ ಸಂಗ್ರಾಮೇ ಪಾಂಡವಾನಾಂ ವಧಾರ್ಥಿನಃ।
07133057c ಜಯಮಾಕಾಂಕ್ಷಮಾಣಾ ಹಿ ಕೌರವೇಯಸ್ಯ ದಂಶಿತಾಃ।।

ಇವರೆಲ್ಲರೂ ಕೌರವೇಯನ ಜಯವನ್ನು ಬಯಸಿ ಪಾಂಡವರನ್ನು ವಧಿಸುವ ಸಲುವಾಗಿ ಕವಚಗಳನ್ನು ಧರಿಸಿ ಸಂಗ್ರಾಮದಲ್ಲಿ ನಿಂತಿದ್ದಾರೆ.

07133058a ದೈವಾಯತ್ತಮಹಂ ಮನ್ಯೇ ಜಯಂ ಸುಬಲಿನಾಮಪಿ।
07133058c ಯತ್ರ ಭೀಷ್ಮೋ ಮಹಾಬಾಹುಃ ಶೇತೇ ಶರಶತಾಚಿತಃ।।

ಭೀಷ್ಮನಂತಹ ಮಹಾಬಾಹುವೇ ನೂರಾರು ಬಾಣಗಳಿಂದ ಚುಚ್ಚಲ್ಪಟ್ಟವನಾಗಿ ಮಲಗಿದ್ದಾನೆಂದರೆ ಮಹಾಬಲಶಾಲಿಗಳಿಗೂ ಜಯವೆನ್ನುವುದು ದೈವದತ್ತವಾದುದು ಎಂದು ನನಗನ್ನಿಸುತ್ತದೆ.

07133059a ವಿಕರ್ಣಶ್ಚಿತ್ರಸೇನಶ್ಚ ಬಾಹ್ಲೀಕೋಽಥ ಜಯದ್ರಥಃ।
07133059c ಭೂರಿಶ್ರವಾ ಜಯಶ್ಚೈವ ಜಲಸಂಧಃ ಸುದಕ್ಷಿಣಃ।।
07133060a ಶಲಶ್ಚ ರಥಿನಾಂ ಶ್ರೇಷ್ಠೋ ಭಗದತ್ತಶ್ಚ ವೀರ್ಯವಾನ್।
07133060c ಏತೇ ಚಾನ್ಯೇ ಚ ರಾಜಾನೋ ದೇವೈರಪಿ ಸುದುರ್ಜಯಾಃ।।

ವಿಕರ್ಣ, ಚಿತ್ರಸೇನ, ಬಾಹ್ಲೀಕ, ಜಯದ್ರಥ, ಭೂರಿಶ್ರವ, ಜಯ, ಜಲಸಂಧ, ಸುದಕ್ಷಿಣ, ಶಲ, ರಥಿಗಳಲ್ಲಿ ಶ್ರೇಷ್ಠ ವೀರ್ಯವಾನ್ ಭಗದತ್ತ ಇವರು ಮತ್ತು ಅನ್ಯ ರಾಜರುಗಳು ದೇವತೆಗಳಿಗೂ ಗೆಲ್ಲಲಸಾಧ್ಯರಾಗಿದ್ದರು.

07133061a ನಿಹತಾಃ ಸಮರೇ ಶೂರಾಃ ಪಾಂಡವೈರ್ಬಲವತ್ತರಾಃ।
07133061c ಕಿಮನ್ಯದ್ದೈವಸಮ್ಯೋಗಾನ್ಮನ್ಯಸೇ ಪುರುಷಾಧಮ।।

ಪುರುಷಾಧಮ! ಪಾಂಡವರಿಗಿಂತಲೂ ಬಲಶಾಲಿಗಳಾದ ಈ ಶೂರರು ಸಮರದಲ್ಲಿ ಹತರಾದರು. ಇದು ದೈವ ಸಂಯೋಗವಲ್ಲದೇ ಮತ್ತೇನು?

07133062a ಯಾಂಶ್ಚ ತಾನ್ಸ್ತೌಷಿ ಸತತಂ ದುರ್ಯೋಧನರಿಪೂನ್ದ್ವಿಜ।
07133062c ತೇಷಾಮಪಿ ಹತಾಃ ಶೂರಾಃ ಶತಶೋಽಥ ಸಹಸ್ರಶಃ।।

ದ್ವಿಜ! ನೀನು ಪ್ರಶಂಸಿಸುತ್ತಿರುವ ದುರ್ಯೋಧನನ ಶತ್ರುಗಳಲ್ಲಿಯೂ ಕೂಡ ನೂರಾರು ಸಹಸ್ರಾರು ಶೂರರು ಹತರಾಗಿದ್ದಾರೆ.

07133063a ಕ್ಷೀಯಂತೇ ಸರ್ವಸೈನ್ಯಾನಿ ಕುರೂಣಾಂ ಪಾಂಡವೈಃ ಸಹ।
07133063c ಪ್ರಭಾವಂ ನಾತ್ರ ಪಶ್ಯಾಮಿ ಪಾಂಡವಾನಾಂ ಕಥಂ ಚನ।।

ಕುರುಗಳ ಮತ್ತು ಪಾಂಡವರ ಎಲ್ಲ ಸೈನ್ಯಗಳೂ ಒಟ್ಟಿಗೇ ನಶಿಸುತ್ತಿವೆ. ಇದರಲ್ಲಿ ಪಾಂಡವರ ವಿಶೇಷ ಪ್ರಭಾವ ಯಾವುದನ್ನೂ ನಾನು ಕಾಣುತ್ತಿಲ್ಲ.

07133064a ಯಾಂಸ್ತಾನ್ಬಲವತೋ ನಿತ್ಯಂ ಮನ್ಯಸೇ ತ್ವಂ ದ್ವಿಜಾಧಮ।
07133064c ಯತಿಷ್ಯೇಽಹಂ ಯಥಾಶಕ್ತಿ ಯೋದ್ಧುಂ ತೈಃ ಸಹ ಸಮ್ಯುಗೇ।
07133064e ದುರ್ಯೋಧನಹಿತಾರ್ಥಾಯ ಜಯೋ ದೈವೇ ಪ್ರತಿಷ್ಠಿತಃ।।

ದ್ವಿಜಾಧಮ! ದುರ್ಯೋಧನನ ಹಿತಕ್ಕಾಗಿ ಯಾರನ್ನು ನೀನು ಎಲ್ಲರಿಗಿಂತಲೂ ಬಲವಂತರೆಂದು ಭಾವಿಸಿರುವೆಯೋ ಅವರೊಡನೆ ಯಥಾಶಕ್ತಿಯಾಗಿ ರಣದಲ್ಲಿ ಯುದ್ಧಮಾಡಲು ಪ್ರಯತ್ನಿಸುತ್ತೇನೆ. ಜಯವು ದೈವಾಧೀನವಾಗಿದೆ!””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಕೃಪಕರ್ಣವಾಕ್ಯೇ ತ್ರ್ಯಾತ್ರಿಂಶಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಕೃಪಕರ್ಣವಾಕ್ಯ ಎನ್ನುವ ನೂರಾಮೂವತ್ಮೂರನೇ ಅಧ್ಯಾಯವು.