131 ರಾತ್ರಿಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಘಟೋತ್ಕಚವಧ ಪರ್ವ

ಅಧ್ಯಾಯ 131

ಸಾರ

ಸೋಮದತ್ತ-ಸಾತ್ಯಕಿಯರ ಪ್ರತಿಜ್ಞೆಗಳು (1-15). ಸಾತ್ಯಕಿ-ಸೋಮದತ್ತರ ಯುದ್ಧ (16-23). ಅಶ್ವತ್ಥಾಮ-ಘಟೋತ್ಕಚರ ಯುದ್ಧ (೨24-43). ಘಟೋತ್ಕಚನ ಮಗ ಅಂಜನಪರ್ವನ ವಧೆ (44-53). ಅಶ್ವತ್ಥಾಮನ ಪರಾಕ್ರಮ-ಘಟೋತ್ಕಚನ ಪರಾಭವ (54-135).

07131001 ಸಂಜಯ ಉವಾಚ।
07131001a ಪ್ರಾಯೋಪವಿಷ್ಟೇ ತು ಹತೇ ಪುತ್ರೇ ಸಾತ್ಯಕಿನಾ ತತಃ।
07131001c ಸೋಮದತ್ತೋ ಭೃಶಂ ಕ್ರುದ್ಧಃ ಸಾತ್ಯಕಿಂ ವಾಕ್ಯಮಬ್ರವೀತ್।।

ಸಂಜಯನು ಹೇಳಿದನು: “ಆಗ ಪ್ರಯೋಪವಿಷ್ಟನಾಗಿದ್ದ ತನ್ನ ಮಗನನ್ನು ಸಾತ್ಯಕಿಯು ಕೊಂದುದರಿಂದ ತುಂಬಾ ಕೋಪಾವಿಷ್ಟನಾಗಿದ್ದ ಸೋಮದತ್ತನು ಸಾತ್ಯಕಿಗೆ ಈ ಮಾತನ್ನಾಡಿದನು:

07131002a ಕ್ಷತ್ರಧರ್ಮಃ ಪುರಾ ದೃಷ್ಟೋ ಯಸ್ತು ದೇವೈರ್ಮಹಾತ್ಮಭಿಃ।
07131002c ತಂ ತ್ವಂ ಸಾತ್ವತ ಸಂತ್ಯಜ್ಯ ದಸ್ಯುಧರ್ಮೇ ಕಥಂ ರತಃ।।

“ಸಾತ್ವತ! ಹಿಂದೆ ಮಹಾತ್ಮ ದೇವತೆಗಳು ನಿರ್ಣಯಿಸಲ್ಪಟ್ಟ ಕ್ಷತ್ರಧರ್ಮವನ್ನು ಪರಿತ್ಯಜಿಸಿ ನೀನು ಹೇಗೆ ತಾನೇ ದಸ್ಯುಗಳ ಧರ್ಮದಲ್ಲಿ ನಿರತನಾಗಿರುವೆ?

07131003a ಪರಾಙ್ಮುಖಾಯ ದೀನಾಯ ನ್ಯಸ್ತಶಸ್ತ್ರಾಯ ಯಾಚತೇ।
07131003c ಕ್ಷತ್ರಧರ್ಮರತಃ ಪ್ರಾಜ್ಞಃ ಕಥಂ ನು ಪ್ರಹರೇದ್ರಣೇ।।

ಸಾತ್ಯಕೀ! ಯುದ್ಧದಿಂದ ವಿಮುಖನಾದವನನ್ನು, ಅದೀನನನ್ನು, ಶಸ್ತ್ರಗಳನ್ನು ಕೆಳಗಿಟ್ಟವನನ್ನು, ಯಾಚಿಸುವವನನ್ನು ಕ್ಷತ್ರಧರ್ಮನಿರತ ಪ್ರಾಜ್ಞನು ಹೇಗೆ ತಾನೇ ರಣದಲ್ಲಿ ಪ್ರಹರಿಸಬಲ್ಲನು?

07131004a ದ್ವಾವೇವ ಕಿಲ ವೃಷ್ಣೀನಾಂ ತತ್ರ ಖ್ಯಾತೌ ಮಹಾರಥೌ।
07131004c ಪ್ರದ್ಯುಮ್ನಶ್ಚ ಮಹಾಬಾಹುಸ್ತ್ವಂ ಚೈವ ಯುಧಿ ಸಾತ್ವತ।।

ಸಾತ್ವತ! ವೃಷ್ಣಿವಂಶೀಯರಲ್ಲಿ ಇಬ್ಬರೇ ಮಹಾರಥರೆಂದು ಯುದ್ಧದಲ್ಲಿ ಖ್ಯಾತರಾಗಿದ್ದಾರೆ. ಮಹಾಬಾಹು ಪ್ರದ್ಯುಮ್ನ ಮತ್ತು ನೀನು.

07131005a ಕಥಂ ಪ್ರಾಯೋಪವಿಷ್ಟಾಯ ಪಾರ್ಥೇನ ಚಿನ್ನಬಾಹವೇ।
07131005c ನೃಶಂಸಂ ಪತನೀಯಂ ಚ ತಾದೃಶಂ ಕೃತವಾನಸಿ।।

ಅರ್ಜುನನು ಬಾಹುವನ್ನು ಕತ್ತರಿಸಲು ಪ್ರಾಯೋಪವಿಷ್ಟನಾದವನನ್ನು ನಿನ್ನಂಥವನು ಕ್ರೂರನಾಗಿ ಹೇಗೆತಾನೇ ಬೀಳಿಸಿದನು?

07131006a ಶಪೇ ಸಾತ್ವತ ಪುತ್ರಾಭ್ಯಾಮಿಷ್ಟೇನ ಸುಕೃತೇನ ಚ।
07131006c ಅನತೀತಾಮಿಮಾಂ ರಾತ್ರಿಂ ಯದಿ ತ್ವಾಂ ವೀರಮಾನಿನಂ।।
07131007a ಅರಕ್ಷ್ಯಮಾಣಂ ಪಾರ್ಥೇನ ಜಿಷ್ಣುನಾ ಸಸುತಾನುಜಂ।
07131007c ನ ಹನ್ಯಾಂ ನಿರಯೇ ಘೋರೇ ಪತೇಯಂ ವೃಷ್ಣಿಪಾಂಸನ।।

ಸಾತ್ವತ! ವೃಷ್ಣಿಕುಲಕಳಂಕ! ನಾನು ನನ್ನ ಇಬ್ಬರು ಮಕ್ಕಳ ಮೇಲೆ, ನಾನು ಮಾಡಿದ ಯಾಗಗಳ ಮೇಲೆ ಮತ್ತು ನನ್ನ ಸುಕೃತಗಳ ಮೇಲೆ ಆಣೆಯಿಟ್ಟು ಹೇಳುತ್ತಿದ್ದೇನೆ – ಅರ್ಜುನನು ನಿನ್ನನ್ನು ರಕ್ಷಿಸಲು ಬರದೇ ಇದ್ದರೆ – ಲೋಕೈಕವೀರನೆಂದು ಭಾವಿಸಿರುವ ನಿನ್ನನ್ನೂ, ನಿನ್ನ ಮಕ್ಕಳನ್ನೂ, ಅನುಜರನ್ನೂ ಈ ರಾತ್ರಿ ಕಳೆಯುವುದರೊಳಗಾಗಿ ಸಂಹರಿಸದೇ ಇದ್ದರೆ ನಾನು ಅತಿಘೋರ ನರಕದಲ್ಲಿ ಬೀಳುವಂತಾಗಲಿ!”

07131008a ಏವಮುಕ್ತ್ವಾ ಸುಸಂಕ್ರುದ್ಧಃ ಸೋಮದತ್ತೋ ಮಹಾಬಲಃ।
07131008c ದಧ್ಮೌ ಶಂಖಂ ಚ ತಾರೇಣ ಸಿಂಹನಾದಂ ನನಾದ ಚ।।

ಹೀಗೆ ಹೇಳಿ ಸಂಕ್ರುದ್ಧ ಮಹಾಬಲ ಸೋಮದತ್ತನು ತಾರಸ್ವರದಲ್ಲಿ ಶಂಖವನ್ನು ಊದಿ ಸಿಂಹನಾದಗೈದನು.

07131009a ತತಃ ಕಮಲಪತ್ರಾಕ್ಷಃ ಸಿಂಹದಂಷ್ಟ್ರೋ ಮಹಾಬಲಃ।
07131009c ಸಾತ್ವತೋ ಭೃಶಸಂಕ್ರುದ್ಧಃ ಸೋಮದತ್ತಮಥಾಬ್ರವೀತ್।।

ಆಗ ಕಮಲಪತ್ರಾಕ್ಷ ಸಿಂಹದಂಷ್ಟ್ರ ಮಹಾಬಲ ಸಾತ್ವತನು ತುಂಬಾ ಕುಪಿತನಾಗಿ ಸೋಮದತ್ತನಿಗೆ ಹೀಗೆ ಹೇಳಿದನು:

07131010a ಹತೋ ಭೂರಿಶ್ರವಾ ವೀರಸ್ತವ ಪುತ್ರೋ ಮಹಾರಥಃ।
07131010c ಶಲಶ್ಚೈವ ತಥಾ ರಾಜನ್ಭ್ರಾತೃವ್ಯಸನಕರ್ಶಿತಃ।।

“ನಿನ್ನ ವೀರ ಮಗ ಮಹಾರಥ ಭೂರಿಶ್ರವನು ಹತನಾದನು. ರಾಜನ್! ಸಹೋದರನು ಹತನಾದನೆಂಬ ವ್ಯಸನದಿಂದ ದುಃಖಿತನಾಗಿದ್ದ ಶಲನೂ ಕೂಡ ಹತನಾದನು.

07131011a ತ್ವಾಂ ಚಾಪ್ಯದ್ಯ ವಧಿಷ್ಯಾಮಿ ಸಪುತ್ರಪಶುಬಾಂಧವಂ।
07131011c ತಿಷ್ಠೇದಾನೀಂ ರಣೇ ಯತ್ತಃ ಕೌರವೋಽಸಿ ವಿಶೇಷತಃ।।

ಕೌರವೇಯ! ಇಂದು ಪುತ್ರ-ಪಶು-ಬಾಂಧವರ ಸಹಿತನಾಗಿ ನಿನ್ನನ್ನೂ ವಧಿಸುತ್ತೇನೆ. ರಣದಲ್ಲಿ ನಿಂತು ವಿಶೇಷವಾಗಿ ಪ್ರಯತ್ನಿಸಿ ನನ್ನೊಡನೆ ಯುದ್ಧಮಾಡು!

07131012a ಯಸ್ಮಿನ್ದಾನಂ ದಮಃ ಶೌಚಮಹಿಂಸಾ ಹ್ರೀರ್ಧೃತಿಃ ಕ್ಷಮಾ।
07131012c ಅನಪಾಯೀನಿ ಸರ್ವಾಣಿ ನಿತ್ಯಂ ರಾಜ್ಞಿ ಯುಧಿಷ್ಠಿರೇ।।
07131013a ಮೃದಂಗಕೇತೋಸ್ತಸ್ಯ ತ್ವಂ ತೇಜಸಾ ನಿಹತಃ ಪುರಾ।
07131013c ಸಕರ್ಣಸೌಬಲಃ ಸಂಖ್ಯೇ ವಿನಾಶಂ ಸಮುಪೇಷ್ಯಸಿ।।

ಯಾವ ಯುಧಿಷ್ಠಿರನಲ್ಲಿ ದಾನ, ದಮ, ಶೌಚ, ಅಹಿಂಸೆ, ಲಜ್ಜೆ, ಧೃತಿ, ಕ್ಷಮೆ – ಇವೇ ಮೊದಲಾದ ಸರ್ವ ಸದ್ಗುಣಗಳು ನಿತ್ಯವೂ ಇವೆಯೋ ಆ ಮೃದಂಗಕೇತು ರಾಜನ ತೇಜಸ್ಸಿನಿಂದ ಈಗಾಗಲೇ ನೀನು ಹತನಾಗಿರುವೆ! ಈಗ ಯುದ್ಧದಲ್ಲಿ ಕರ್ಣ-ಸೌಬಲರೊಂದಿಗೆ ವಿನಾಶವನ್ನು ಹೊಂದುತ್ತೀಯೆ!

07131014a ಶಪೇಽಹಂ ಕೃಷ್ಣಚರಣೈರಿಷ್ಟಾಪೂರ್ತೇನ ಚೈವ ಹ।
07131014c ಯದಿ ತ್ವಾಂ ಸಸುತಂ ಪಾಪಂ ನ ಹನ್ಯಾಂ ಯುಧಿ ರೋಷಿತಃ।
07131014e ಅಪಯಾಸ್ಯಸಿ ಚೇತ್ತ್ಯಕ್ತ್ವಾ ತತೋ ಮುಕ್ತೋ ಭವಿಷ್ಯಸಿ।।

ನಾನೂ ಕೂಡ ಶ್ರೀಕೃಷ್ಣನ ಚರಣಗಳ ಮೇಲೆ ಮತ್ತು ನಾನು ಮಾಡಿದ ಇಷ್ಟಾಪೂರ್ತಗಳ ಮೇಲೆ ಆಣೆಯಿಟ್ಟು ಹೇಳುತ್ತೇನೆ: “ನಾನೇನಾದರೂ ಪಾಪಿಷ್ಟ ನಿನ್ನನ್ನು ನಿನ್ನ ಮಗನ ಸಹಿತ ಸಂಹರಿಸದಿದ್ದರೆ ಸದ್ಗತಿಯನ್ನು ಹೊಂದದಿರಲಿ!” ಇಷ್ಟು ಆತ್ಮಶ್ಲಾಘನೆ ಮಾಡಿಕೊಳ್ಳುತ್ತಿರುವ ನೀನು ಭಯಪಟ್ಟು ಯುದ್ಧವನ್ನು ಬಿಟ್ಟು ಹೋದರೆ ಮಾತ್ರ ನನ್ನಿಂದ ಬಿಡುಗಡೆಯನ್ನು ಹೊಂದುವೆ!”

07131015a ಏವಮಾಭಾಷ್ಯ ಚಾನ್ಯೋನ್ಯಂ ಕ್ರೋಧಸಂರಕ್ತಲೋಚನೌ।
07131015c ಪ್ರವೃತ್ತೌ ಶರಸಂಪಾತಂ ಕರ್ತುಂ ಪುರುಷಸತ್ತಮೌ।।

ಕೋಪದಿಂದ ಕೆಂಪಾದ ಕಣ್ಣುಗಳಿಂದ ಕೂಡಿದ್ದ ಪುರುಷಶ್ರೇಷ್ಠರಾದ ಅವರಿಬ್ಬರೂ ಹೀಗೆ ಅನ್ಯೋನ್ಯರೊಡನೆ ಮಾತನಾಡುತ್ತಾ ಪರಸ್ಪರರ ಮೇಲೆ ಬಾಣಗಳನ್ನು ಪ್ರಯೋಗಿಸಲು ಪ್ರಾರಂಭಿಸಿದರು.

07131016a ತತೋ ಗಜಸಹಸ್ರೇಣ ರಥಾನಾಮಯುತೇನ ಚ।
07131016c ದುರ್ಯೋಧನಃ ಸೋಮದತ್ತಂ ಪರಿವಾರ್ಯ ವ್ಯವಸ್ಥಿತಃ।।

ಆಗ ದುರ್ಯೋಧನನು ಒಂದು ಸಾವಿರ ಆನೆಗಳಿಂದಲೂ ಹತ್ತುಸಾವಿರ ರಥಗಳಿಂದಲೂ ಕೂಡಿದವನಾಗಿ ಸೋಮದತ್ತನನ್ನು ಸುತ್ತುವರೆದು ನಿಂತನು.

07131017a ಶಕುನಿಶ್ಚ ಸುಸಂಕ್ರುದ್ಧಃ ಸರ್ವಶಸ್ತ್ರಭೃತಾಂ ವರಃ।
07131017c ಪುತ್ರಪೌತ್ರೈಃ ಪರಿವೃತೋ ಭ್ರಾತೃಭಿಶ್ಚೇಂದ್ರವಿಕ್ರಮೈಃ।
07131017e ಸ್ಯಾಲಸ್ತವ ಮಹಾಬಾಹುರ್ವಜ್ರಸಂಹನನೋ ಯುವಾ।।

ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠ, ನಿನ್ನ ಬಾವ, ವಜ್ರಸಂಹನನ, ಯುವಕ, ಮಹಾಬಾಹು ಶಕುನಿಯೂ ಕೂಡ ಸಂಕ್ರುದ್ಧನಾಗಿ ತನ್ನ ಮಕ್ಕಳು, ಮೊಮ್ಮಕ್ಕಳು ಮತ್ತು ಇಂದ್ರನ ವಿಕ್ರಮಕ್ಕೆ ಸಮಾನ ಸಹೋದರರೊಂದಿಗೆ ಸೋಮದತ್ತನನ್ನು ಸುತ್ತುವರೆದನು.

07131018a ಸಾಗ್ರಂ ಶತಸಹಸ್ರಂ ತು ಹಯಾನಾಂ ತಸ್ಯ ಧೀಮತಃ।
07131018c ಸೋಮದತ್ತಂ ಮಹೇಷ್ವಾಸಂ ಸಮಂತಾತ್ಪರ್ಯರಕ್ಷತ।।

ಆ ಧೀಮತನು ನೂರುಸಾವಿರ ಕುದುರೆಸವಾರರೊಂದಿಗೆ ಮಹೇಷ್ವಾಸ ಸೋಮದತ್ತನನ್ನು ಎಲ್ಲಕಡೆಗಳಿಂದ ಸುತ್ತುವರೆದು ರಕ್ಷಿಸುತ್ತಿದ್ದನು.

07131019a ರಕ್ಷ್ಯಮಾಣಶ್ಚ ಬಲಿಭಿಶ್ಚಾದಯಾಮಾಸ ಸಾತ್ಯಕಿಂ।
07131019c ತಂ ಚಾದ್ಯಮಾನಂ ವಿಶಿಖೈರ್ದೃಷ್ಟ್ವಾ ಸಮ್ನತಪರ್ವಭಿಃ।
07131019e ಧೃಷ್ಟದ್ಯುಮ್ನೋಽಭ್ಯಯಾತ್ಕ್ರುದ್ಧಃ ಪ್ರಗೃಹ್ಯ ಮಹತೀಂ ಚಮೂಂ।।

ಬಲಶಾಲಿಗಳಿಂದ ರಕ್ಷಿತ ಸೋಮದತ್ತನು ಸಾತ್ಯಕಿಯನ್ನು ಬಾಣಗಳಿಂದ ಮುಚ್ಚಿಬಿಟ್ಟನು. ಸಾತ್ಯಕಿಯು ವಿಶಿಖ ಸನ್ನತಪರ್ವಗಳಿಂದ ಮುಚ್ಚಿಹೋದುದನ್ನು ನೋಡಿದ ಧೃಷ್ಟದ್ಯುಮ್ನನು ಕ್ರುದ್ಧನಾಗಿ ಮಹಾ ಸೇನೆಯೊಡನೆ ಅಲ್ಲಿಗೆ ಧಾವಿಸಿದನು.

07131020a ಚಂಡವಾತಾಭಿಸೃಷ್ಟಾನಾಮುದಧೀನಾಮಿವ ಸ್ವನಃ।
07131020c ಆಸೀದ್ರಾಜನ್ಬಲೌಘಾನಾಮನ್ಯೋನ್ಯಮಭಿನಿಘ್ನತಾಂ।।

ಅನ್ಯೋನ್ಯರನ್ನು ಪ್ರಹರಿಸುತ್ತಿದ್ದ ಸೈನಿಕರ ಸಮೂಹದಲ್ಲುಂಟಾದ ಕೋಲಾಹಲವು ಚಂಡಮಾರುತಕ್ಕೆ ಸಿಲುಕಿ ಅಲ್ಲೋಲಕಲ್ಲೋಲವಾಗುವ ಸಮುದ್ರದ ಭೋರ್ಗರೆತಕ್ಕೆ ಸಮಾನವಾಗಿ ಕೇಳಿಬರುತ್ತಿತ್ತು.

07131021a ವಿವ್ಯಾಧ ಸೋಮದತ್ತಸ್ತು ಸಾತ್ವತಂ ನವಭಿಃ ಶರೈಃ।
07131021c ಸಾತ್ಯಕಿರ್ದಶಭಿಶ್ಚೈನಮವಧೀತ್ಕುರುಪುಂಗವಂ।।

ಸೋಮದತ್ತನಾದರೋ ಸಾತ್ವತನನ್ನು ಒಂಭತ್ತು ಶರಗಳಿಂದ ಹೊಡೆದನು. ಸಾತ್ಯಕಿಯೂ ಕೂಡ ಕುರುಪುಂಗವನನ್ನು ಹತ್ತು ಬಾಣಗಳಿಂದ ಪ್ರಹರಿಸಿದನು.

07131022a ಸೋಽತಿವಿದ್ಧೋ ಬಲವತಾ ಸಮರೇ ದೃಢಧನ್ವನಾ।
07131022c ರಥೋಪಸ್ಥಂ ಸಮಾಸಾದ್ಯ ಮುಮೋಹ ಗತಚೇತನಃ।।

ದೃಢಧನ್ವಿ ಸಾತ್ಯಕಿಯಿಂದ ಬಲವಾಗಿ ಗಾಯಗೊಂಡ ಸೋಮದತ್ತನು ರಥದಮೇಲೆಯೇ ಮೂರ್ಛಿತನಾಗಿ ಒರಗಿದನು.

07131023a ತಂ ವಿಮೂಢಂ ಸಮಾಲಕ್ಷ್ಯ ಸಾರಥಿಸ್ತ್ವರಯಾನ್ವಿತಃ।
07131023c ಅಪೋವಾಹ ರಣಾದ್ವೀರಂ ಸೋಮದತ್ತಂ ಮಹಾರಥಂ।।

ಅವನು ಪ್ರಜ್ಞಾಹೀನನಾದುದನ್ನು ನೋಡಿದ ಸಾರಥಿಯು ಮಹಾರಥ ವೀರ ಸೋಮದತ್ತನನ್ನು ರಣದಿಂದ ದೂರಕ್ಕೆ ಕೊಂಡೊಯ್ದನು.

07131024a ತಂ ವಿಸಂಜ್ಞಂ ಸಮಾಲೋಕ್ಯ ಯುಯುಧಾನಶರಾರ್ದಿತಂ।
07131024c ದ್ರೌಣಿರಭ್ಯದ್ರವತ್ ಕ್ರುದ್ಧಃ ಸಾತ್ವತಂ ರಣಮೂರ್ಧನಿ।।

ಯುಯುಧಾನನ ಶರಗಳಿಂದ ಗಾಯಗೊಂಡು ಸೋಮದತ್ತನು ಮೂರ್ಛಿತನಾದುದನ್ನು ಕಂಡು ಕ್ರುದ್ಧನಾದ ದ್ರೌಣಿ ಅಶ್ವತ್ಥಾಮನು ರಣಮಧ್ಯದಲ್ಲಿ ಸಾತ್ವತನನ್ನು ಆಕ್ರಮಣಿಸಿದನು.

07131025a ತಮಾಪತಂತಂ ಸಂಪ್ರೇಕ್ಷ್ಯ ಶೈನೇಯಸ್ಯ ರಥಂ ಪ್ರತಿ।
07131025c ಭೈಮಸೇನಿಃ ಸುಸಂಕ್ರುದ್ಧಃ ಪ್ರತ್ಯಮಿತ್ರಮವಾರಯತ್।।

ಶೈನೇಯನ ರಥದ ಕಡೆಗೆ ಬರುತ್ತಿದ್ದ ಅವನನ್ನು ನೋಡಿ ಸಂಕ್ರುದ್ಧ ಭೈಮಸೇನಿ ಘಟೋತ್ಕಚನು ಶತ್ರುವನ್ನು ತಡೆದನು.

07131026a ಕಾರ್ಷ್ಣಾಯಸಮಯಂ ಘೋರಂ ಋಕ್ಷಚರ್ಮಾವೃತಂ ಮಹತ್।
07131026c ಯುಕ್ತಂ ಗಜನಿಭೈರ್ವಾಹೈರ್ನ ಹಯೈರ್ನಾಪಿ ವಾ ಗಜೈಃ।।
07131027a ವಿಕ್ಷಿಪ್ತಮಷ್ಟಚಕ್ರೇಣ ವಿವೃತಾಕ್ಷೇಣ ಕೂಜತಾ।
07131027c ಧ್ವಜೇನೋಚ್ಚ್ರಿತತುಂಡೇನ ಗೃಧ್ರರಾಜೇನ ರಾಜತಾ।।
07131028a ಲೋಹಿತಾರ್ದ್ರಪತಾಕಂ ತಮಂತ್ರಮಾಲಾವಿಭೂಷಿತಂ।
07131028c ಅಷ್ಟಚಕ್ರಸಮಾಯುಕ್ತಮಾಸ್ಥಾಯ ವಿಪುಲಂ ರಥಂ।।
07131029a ಶೂಲಮುದ್ಗರಧಾರಿಣ್ಯಾ ಶೈಲಪಾದಪಹಸ್ತಯಾ।
07131029c ರಕ್ಷಸಾಂ ಘೋರರೂಪಾಣಾಮಕ್ಷೌಹಿಣ್ಯಾ ಸಮಾವೃತಃ।।
07131030a ತಮುದ್ಯತಮಹಾಚಾಪಂ ನಿಶಾಮ್ಯ ವ್ಯಥಿತಾ ನೃಪಾಃ।
07131030c ಯುಗಾಂತಕಾಲಸಮಯೇ ದಂಡಹಸ್ತಮಿವಾಂತಕಂ।।

ಆ ಘೋರ ಕತ್ತಲೆಯಲ್ಲಿ ವಿಶಾಲ ಕರಡಿಯ ಚರ್ಮವನ್ನು ಹೊದಿಸಿದ್ದ, ಆನೆಗಳಷ್ಟೇ ದೊಡ್ಡ ಆದರೆ ಆನೆಗಳೂ ಕುದುರೆಗಳೂ ಅಲ್ಲದ ವಾಹನಗಳನ್ನು ಕಟ್ಟಿದ್ದ, ಎಂಟು ಚಕ್ರಗಳಿಂದ ಮತ್ತು ನೊಗಗಳಿಂದ ಕೂಡಿದ, ಅತಿ ಎತ್ತರದ ದಂಡದ ಮೇಲೆ ರಣಹದ್ದುಗಳ ರಾಜನಂತೆ ರಾರಾಜಿಸುವ ಧ್ವಜದಿಂದ ಯುಕ್ತವಾದ, ರಕ್ತದಿಂದ ತೋಯ್ದ ಪತಾಕೆಯುಳ್ಳ, ಕರುಳಿನ ಮಾಲೆಗಳಿಂದ ಅಲಂಕೃತಗೊಂಡಿದ್ದ, ಶೂಲ-ಮುದ್ಗರಗಳನ್ನು ಹಿಡಿದು, ಕೈಗಳಲ್ಲಿ ಮರಗಳನ್ನೂ ಹಿಡಿದು ಬರುತ್ತಿದ್ದ ಒಂದು ಅಕ್ಷೌಹಿಣೀ ರಾಕ್ಷಸ ಸೇನೆಯಿಂದ ಸುತ್ತುವರೆಯಲ್ಪಟ್ಟು ಎಂಟು ಚಕ್ರಗಳ ಮೇಲಿದ್ದ ವಿಶಾಲರಥದಲ್ಲಿ ಯುಗಾಂತಕಾಲಸಮಯದಲ್ಲಿ ದಂಡವನ್ನು ಹಿಡಿದ ಅಂತಕನಂತೆ ಮಹಾಚಾಪವನ್ನು ಟೇಂಕರಿಸಿ ಬರುತ್ತಿದ್ದ ಘಟೋತ್ಕಚನನ್ನು ಕಂಡು ನೃಪರು ವ್ಯಥಿತರಾದರು.

07131031a ಭಯಾರ್ದಿತಾ ಪ್ರಚುಕ್ಷೋಭ ಪುತ್ರಸ್ಯ ತವ ವಾಹಿನೀ।
07131031c ವಾಯುನಾ ಕ್ಷೋಭಿತಾವರ್ತಾ ಗಂಗೇವೋರ್ಧ್ವತರಂಗಿಣೀ।।

ಭಿರುಗಾಳಿಗೆ ಸಿಲುಕಿ ಪ್ರಕ್ಷೋಭೆಗೊಂಡ ಗಂಗಾನದಿಯ ಸುಳಿಯಂತೆ ನಿನ್ನ ಮಗನ ಸೇನೆಯು ತಳಮಳಗೊಂಡಿತು.

07131032a ಘಟೋತ್ಕಚಪ್ರಯುಕ್ತೇನ ಸಿಂಹನಾದೇನ ಭೀಷಿತಾಃ।
07131032c ಪ್ರಸುಸ್ರುವುರ್ಗಜಾ ಮೂತ್ರಂ ವಿವ್ಯಥುಶ್ಚ ನರಾ ಭೃಶಂ।।

ಘಟೋತ್ಕಚನು ಮಾಡಿದ ಸಿಂಹನಾದದಿಂದಲೇ ಭಯಗೊಂಡ ಆನೆಗಳು ಮೂತ್ರವಿಸರ್ಜನೆ ಮಾಡಿದವು. ಸೈನಿಕರು ಬಹಳ ವ್ಯಥಿತರಾದರು.

07131033a ತತೋಽಶ್ಮವೃಷ್ಟಿರತ್ಯರ್ಥಮಾಸೀತ್ತತ್ರ ಸಮಂತತಃ।
07131033c ಸಂಧ್ಯಾಕಾಲಾಧಿಕಬಲೈಃ ಪ್ರಮುಕ್ತಾ ರಾಕ್ಷಸೈಃ ಕ್ಷಿತೌ।।

ಸಂಧ್ಯಾಕಾಲದಲ್ಲಿ ಅಧಿಕಬಲವನ್ನು ಹೊಂದುವ ರಾಕ್ಷಸರು ಪ್ರಯೋಗಿಸಿದ ಕಲ್ಲುಗಳ ಮಳೆಯು ರಣರಂಗದ ಸುತ್ತಲೂ ಸುರಿಯಿತು.

07131034a ಆಯಸಾನಿ ಚ ಚಕ್ರಾಣಿ ಭುಶುಂಡ್ಯಃ ಪ್ರಾಸತೋಮರಾಃ।
07131034c ಪತಂತ್ಯವಿರಲಾಃ ಶೂಲಾಃ ಶತಘ್ನ್ಯಃ ಪಟ್ಟಿಶಾಸ್ತಥಾ।।
07131035a ತದುಗ್ರಮತಿರೌದ್ರಂ ಚ ದೃಷ್ಟ್ವಾ ಯುದ್ಧಂ ನರಾಧಿಪಾಃ।
07131035c ತನಯಾಸ್ತವ ಕರ್ಣಶ್ಚ ವ್ಯಥಿತಾಃ ಪ್ರಾದ್ರವನ್ದಿಶಃ।।

ಮೇಲಿಂದ ಲೋಹದ ಚಕ್ರಗಳು, ಭುಶಂಡಗಳು, ಪ್ರಾಸ-ತೋಮರಗಳು ಬೀಳುತ್ತಿದ್ದ ಆ ಅತಿರೌದ್ರ ಉಗ್ರ ಯುದ್ಧವನ್ನು ನೋಡಿ ನಿನ್ನ ಕಡೆಯ ರಾಜರು, ನಿನ್ನ ಮಕ್ಕಳೂ ಮತ್ತು ಕರ್ಣನೂ ಕೂಡ ವ್ಯಥಿತರಾಗಿ ದಿಕ್ಕಾಪಾಲಾಗಿ ಓಡಿ ಹೋದರು.

07131036a ತತ್ರೈಕೋಽಸ್ತ್ರಬಲಶ್ಲಾಘೀ ದ್ರೌಣಿರ್ಮಾನೀ ನ ವಿವ್ಯಥೇ।
07131036c ವ್ಯಧಮಚ್ಚ ಶರೈರ್ಮಾಯಾಂ ಘಟೋತ್ಕಚವಿನಿರ್ಮಿತಾಂ।।

ಆದರೆ ಅಲ್ಲಿ ತನ್ನ ಅಸ್ತ್ರಬಲವನ್ನು ಸದಾ ಹೊಗಳಿಕೊಳ್ಳುತ್ತಿದ್ದ ಸೊಕ್ಕಿನ ದ್ರೌಣಿ ಅಶ್ವತ್ಥಾಮನು ಮಾತ್ರ ವಿವ್ಯಥನಾಗದೆ ಘಟೋತ್ಕಚನು ನಿರ್ಮಿಸಿದ ಆ ಮಾಯೆಯನ್ನು ಬಾಣಗಳಿಂದ ನಾಶಮಾಡಿದನು.

07131037a ನಿಹತಾಯಾಂ ತು ಮಾಯಾಯಾಮಮರ್ಷೀ ಸ ಘಟೋತ್ಕಚಃ।
07131037c ವಿಸಸರ್ಜ ಶರಾನ್ಘೋರಾಂಸ್ತೇಽಶ್ವತ್ಥಾಮಾನಮಾವಿಶನ್।।

ತನ್ನ ಮಾಯೆಯು ಹೀಗೆ ಹತವಾದುದನ್ನು ಸಹಿಸಿಕೊಳ್ಳದೇ ಇದ್ದ ಘಟೋತ್ಕಚನು ಅಶ್ವತ್ಥಾಮನ ಮೇಲೆ ಘೋರ ಶರಗಳನ್ನು ಪ್ರಯೋಗಿಸಿದನು.

07131038a ಭುಜಗಾ ಇವ ವೇಗೇನ ವಲ್ಮೀಕಂ ಕ್ರೋಧಮೂರ್ಚಿತಾಃ।
07131038c ತೇ ಶರಾ ರುಧಿರಾಭ್ಯಕ್ತಾ ಭಿತ್ತ್ವಾ ಶಾರದ್ವತೀಸುತಂ।
07131038e ವಿವಿಶುರ್ಧರಣೀಂ ಶೀಘ್ರಾ ರುಕ್ಮಪುಂಖಾಃ ಶಿಲಾಶಿತಾಃ।।

ಕ್ರೋಧಮೂರ್ಛಿತ ಸರ್ಪಗಳು ವೇಗದಿಂದ ಹುತ್ತವನ್ನು ಹೊಗುವಂತೆ ಶೀಘ್ರವಾಗಿ ಹೋಗುತ್ತಿದ್ದ ಆ ರುಕ್ಮಪುಂಖಗಳ, ಶಿಲಾಶಿತ ಬಾಣಗಳು ಶಾರದ್ವತೀ ಕೃಪಿಯ ಮಗ ಅಶ್ವತ್ಥಾಮನನ್ನು ಭೇದಿಸಿ ರಕ್ತವನ್ನು ಕುಡಿದು ನೆಲವನ್ನು ಹೊಕ್ಕವು.

07131039a ಅಶ್ವತ್ಥಾಮಾ ತು ಸಂಕ್ರುದ್ಧೋ ಲಘುಹಸ್ತಃ ಪ್ರತಾಪವಾನ್।
07131039c ಘಟೋತ್ಕಚಮಭಿಕ್ರುದ್ಧಂ ಬಿಭೇದ ದಶಭಿಃ ಶರೈಃ।।

ಲಘುಹಸ್ತ ಪ್ರತಾಪವಾನ್ ಅಶ್ವತ್ಥಾಮನಾದರೋ ಸಂಕ್ರುದ್ಧನಾಗಿ ಇನ್ನೂ ಕುಪಿತನಾಗಿದ್ದ ಘಟೋತ್ಕಚನನ್ನು ಹತ್ತು ಶರಗಳಿಂದ ಹೊಡೆದನು.

07131040a ಘಟೋತ್ಕಚೋಽತಿವಿದ್ಧಸ್ತು ದ್ರೋಣಪುತ್ರೇಣ ಮರ್ಮಸು।
07131040c ಚಕ್ರಂ ಶತಸಹಸ್ರಾರಮಗೃಹ್ಣಾದ್ವ್ಯಥಿತೋ ಭೃಶಂ।।

ದ್ರೋಣಪುತ್ರನಿಂದ ಮರ್ಮಗಳಲ್ಲಿ ಗಾಯಗೊಂಡ ಘಟೋತ್ಕಚನು ಅತ್ಯಂತ ವ್ಯಥಿತನಾಗಿ ನೂರುಸಾವಿರ ಅರೆಕಾಲುಗಳನ್ನು ಹೊಂದಿದ್ದ ಚಕ್ರವನ್ನು ಕೈಗೆತ್ತಿಕೊಂಡನು.

07131041a ಕ್ಷುರಾಂತಂ ಬಾಲಸೂರ್ಯಾಭಂ ಮಣಿವಜ್ರವಿಭೂಷಿತಂ।
07131041c ಅಶ್ವತ್ಥಾಮ್ನಸ್ತು ಚಿಕ್ಷೇಪ ಭೈಮಸೇನಿರ್ಜಿಘಾಂಸಯಾ।।

ಅಶ್ವತ್ಥಾಮನನ್ನು ಕೊಲ್ಲಲು ಬಯಸಿ ಅವನ ಮೇಲೆ ಭೀಮಸೇನನ ಮಗನು ಬೇಸಗೆಯ ಕೊನೆಯಲ್ಲಿ ಉದಯಿಸುವ ಸೂರ್ಯನಂತಿದ್ದ ಮಣಿವಜ್ರವಿಭೂಷಿತ ಆ ಚಕ್ರವನ್ನು ಎಸೆದನು.

07131042a ವೇಗೇನ ಮಹತಾ ಗಚ್ಚದ್ವಿಕ್ಷಿಪ್ತಂ ದ್ರೌಣಿನಾ ಶರೈಃ।
07131042c ಅಭಾಗ್ಯಸ್ಯೇವ ಸಂಕಲ್ಪಸ್ತನ್ಮೋಘಂ ನ್ಯಪತದ್ಭುವಿ।।

ಅತ್ಯಂತ ವೇಗವಾಗಿ ಬಂದ ಆ ಚಕ್ರವು ದ್ರೌಣಿಯ ಶರಗಳಿಂದ ಬಹಳ ದೂರಕ್ಕೆ ಎಸೆಯಲ್ಪಟ್ಟು ನಿರ್ಭಾಗ್ಯನ ಸಂಕಲ್ಪವು ನಿಷ್ಫಲವಾಗುವಂತೆ ನಿಷ್ಫಲವಾಗಿ ಭೂಮಿಯಮೇಲೆ ಬಿದ್ದಿತು.

07131043a ಘಟೋತ್ಕಚಸ್ತತಸ್ತೂರ್ಣಂ ದೃಷ್ಟ್ವಾ ಚಕ್ರಂ ನಿಪಾತಿತಂ।
07131043c ದ್ರೌಣಿಂ ಪ್ರಾಚ್ಚಾದಯದ್ಬಾಣೈಃ ಸ್ವರ್ಭಾನುರಿವ ಭಾಸ್ಕರಂ।।

ಚಕ್ರವು ಕೆಳಗುರುಳಿದುದನ್ನು ನೋಡಿ ಘಟೋತ್ಕಚನು ತಕ್ಷಣವೇ ರಾಹುವು ಸೂರ್ಯನನ್ನು ಹೇಗೋ ಹಾಗೆ ದ್ರೌಣಿಯನ್ನು ಬಾಣಗಳಿಂದ ಮುಚ್ಚಿದನು.

07131044a ಘಟೋತ್ಕಚಸುತಃ ಶ್ರೀಮಾನ್ಭಿನ್ನಾಂಜನಚಯೋಪಮಃ।
07131044c ರುರೋಧ ದ್ರೌಣಿಮಾಯಾಂತಂ ಪ್ರಭಂಜನಮಿವಾದ್ರಿರಾಟ್।।

ಆಗ ಭಿನ್ನವಾದ ಕಾಡಿಗೆಯ ರಾಶಿಯಂತಿದ್ದ ಘಟೋತ್ಕಚನ ಮಗ ಅಂಜನಪರ್ವನು ಅದ್ರಿರಾಜ ಹಿಮಾಲಯನು ಚಂಡಮಾರುತವನ್ನು ಹೇಗೋ ಹಾಗೆ ದ್ರೌಣಿಯನ್ನು ತಡೆದು ನಿಲ್ಲಿಸಿದನು.

07131045a ಪೌತ್ರೇಣ ಭೀಮಸೇನಸ್ಯ ಶರೈಃ ಸೋಽಮ್ಜನಪರ್ವಣಾ।
07131045c ಬಭೌ ಮೇಘೇನ ಧಾರಾಭಿರ್ಗಿರಿರ್ಮೇರುರಿವಾರ್ದಿತಃ।।

ಭೀಮಸೇನನ ಮೊಮ್ಮಗ ಅಂಜನಪರ್ವನ ಬಾಣಗಳು ಚುಚ್ಚಿ ಅಶ್ವತ್ಥಾಮನು ಮೇಘದ ಜಲಧಾರೆಗಳಿಂದ ಆವೃತ ಮೇರುಪರ್ವತದಂತೆ ಕಂಡನು.

07131046a ಅಶ್ವತ್ಥಾಮಾ ತ್ವಸಂಭ್ರಾಂತೋ ರುದ್ರೋಪೇಂದ್ರೇಂದ್ರವಿಕ್ರಮಃ।
07131046c ಧ್ವಜಂ ಏಕೇನ ಬಾಣೇನ ಚಿಚ್ಚೇದಾಂಜನಪರ್ವಣಃ।।

ವಿಕ್ರಮದಲ್ಲಿ ರುದ್ರ ಮತ್ತು ಇಂದ್ರರ ಸಮನಾಗಿದ್ದ ಅಶ್ವತ್ಥಾಮನಾದರೋ ಸ್ವಲ್ಪವೂ ವಿಭ್ರಾಂತನಾಗದೇ ಒಂದೇ ಬಾಣದಿಂದ ಅಂಜನಪರ್ವನ ಧ್ವಜವನ್ನು ತುಂಡರಿಸಿದನು.

07131047a ದ್ವಾಭ್ಯಾಂ ತು ರಥಯಂತಾರಂ ತ್ರಿಭಿಶ್ಚಾಸ್ಯ ತ್ರಿವೇಣುಕಂ।
07131047c ಧನುರೇಕೇನ ಚಿಚ್ಚೇದ ಚತುರ್ಭಿಶ್ಚತುರೋ ಹಯಾನ್।।

ಎರಡರಿಂದ ಸಾರಥಿಯನ್ನು, ಮೂರರಿಂದ ಮೂಕಿಯನ್ನು, ಒಂದರಿಂದ ಧನುಸ್ಸನ್ನೂ ಮತ್ತು ನಾಲ್ಕರಿಂದ ನಾಲ್ಕು ಕುದುರೆಗಳನ್ನೂ ಹೊಡೆದನು.

07131048a ವಿರಥಸ್ಯೋದ್ಯತಂ ಹಸ್ತಾದ್ಧೇಮಬಿಂದುಭಿರಾಚಿತಂ।
07131048c ವಿಶಿಖೇನ ಸುತೀಕ್ಷ್ಣೇನ ಖಡ್ಗಮಸ್ಯ ದ್ವಿಧಾಕರೋತ್।।

ರಥಹೀನ ಅಂಜನಪರ್ವನು ಕೈಯಿಂದ ಹಿಡಿದೆತ್ತಿದ್ದ ಸುವರ್ಣಬಿಂದುಗಳಿಂದ ಸಮಲಂಕೃತ ಖಡ್ಗವನ್ನೂ ಅಶ್ವತ್ಥಾಮನು ಸುತೀಕ್ಷ್ಣ ವಿಶಿಖದಿಂದ ಎರಡು ಮಾಡಿದನು.

07131049a ಗದಾ ಹೇಮಾಂಗದಾ ರಾಜಂಸ್ತೂರ್ಣಂ ಹೈಡಿಂಬಸೂನುನಾ।
07131049c ಭ್ರಾಮ್ಯೋತ್ಕ್ಷಿಪ್ತಾ ಶರೈಃ ಸಾಪಿ ದ್ರೌಣಿನಾಭ್ಯಾಹತಾಪತತ್।।

ರಾಜನ್! ಹೈಡಿಂಬಸೂನು (ಹಿಡಿಂಬಿಯ ಮಗ ಘಟೋತ್ಕಚನ ಮಗ ಅಂಜನಪರ್ವ) ವು ತಕ್ಷಣವೇ ಎಸೆದ ಗದೆಯನ್ನು ಕೂಡ ಅದು ತಿರುಗುತ್ತಾ ಹಾರಿಬಂದು ಬೀಳುವುದರೊಳಗೆ ದ್ರೌಣಿಯು ನಾಶಗೊಳಿಸಿದನು.

07131050a ತತೋಽಮ್ತರಿಕ್ಷಮುತ್ಪತ್ಯ ಕಾಲಮೇಘ ಇವೋನ್ನದನ್।
07131050c ವವರ್ಷಾಂಜನಪರ್ವಾ ಸ ದ್ರುಮವರ್ಷಂ ನಭಸ್ತಲಾತ್।।

ಒಡನೆಯೇ ಅಂತರಿಕ್ಷಕ್ಕೆ ಹಾರಿ ಕಾಲಮೇಘದಂತೆ ಕೂಗುತ್ತಾ ಅಂಜನಪರ್ವನು ಅಶ್ವತ್ಥಾಮನ ಮೇಲೆ ನಭಸ್ತಲದಿಂದ ಮರಗಳ ಮಳೆಯನ್ನು ಸುರಿಸಿದನು.

07131051a ತತೋ ಮಾಯಾಧರಂ ದ್ರೌಣಿರ್ಘಟೋತ್ಕಚಸುತಂ ದಿವಿ।
07131051c ಮಾರ್ಗಣೈರಭಿವಿವ್ಯಾಧ ಘನಂ ಸೂರ್ಯ ಇವಾಂಶುಭಿಃ।।

ಆಗ ಆಕಾಶದಲ್ಲಿದ್ದ ಮಯಾವಿ ಘಟೋತ್ಕಚನ ಮಗನನ್ನು ದ್ರೌಣಿಯು ಘನಮೋಡಗಳನ್ನು ಸೂರ್ಯನು ತನ್ನ ರಶ್ಮಿಗಳಿಂದ ಭೇದಿಸುವಂತೆ ಮಾರ್ಗಣಗಳಿಂದ ಹೊಡೆದನು.

07131052a ಸೋಽವತೀರ್ಯ ಪುನಸ್ತಸ್ಥೌ ರಥೇ ಹೇಮಪರಿಷ್ಕೃತೇ।
07131052c ಮಹೀಧರ ಇವಾತ್ಯುಚ್ಚಃ ಶ್ರೀಮಾನಂಜನಪರ್ವತಃ।।

ಬಳಿಕ ಪರ್ವತದಷ್ಟೇ ಎತ್ತರನಾಗಿದ್ದ ಶ್ರೀಮಾನ್ ಅಂಜನಪರ್ವತನು ಪುನಃ ಕೆಳಗಿಳಿದು ಹೇಮಪರಿಷ್ಕೃತ ರಥದಲ್ಲಿ ಕುಳಿತುಕೊಂಡನು.

07131053a ತಮಯಸ್ಮಯವರ್ಮಾಣಂ ದ್ರೌಣಿರ್ಭೀಮಾತ್ಮಜಾತ್ಮಜಂ।
07131053c ಜಘಾನಾಂಜನಪರ್ವಾಣಂ ಮಹೇಶ್ವರ ಇವಾಂಧಕಂ।।

ಆಗ ಧರೆಗಿಳಿದ ಕಾಡಿಗೆಯಂತೆ ಹೊಳೆಯುವ ಪರ್ವತವೋ ಎಂಬತ್ತಿದ್ದ ಭೀಮನ ಮೊಮ್ಮಗ ಅಂಜನಪರ್ವನನ್ನು ದ್ರೌಣಿಯು ಅಂಧಕನನ್ನು ಮಹೇಶ್ವರನು ಹೇಗೋ ಹಾಗೆ ಸಂಹರಿಸಿದನು.

07131054a ಅಥ ದೃಷ್ಟ್ವಾ ಹತಂ ಪುತ್ರಮಶ್ವತ್ಥಾಮ್ನಾ ಮಹಾಬಲಂ।
07131054c ದ್ರೌಣೇಃ ಸಕಾಶಮಭ್ಯೇತ್ಯ ರೋಷಾತ್ಪ್ರಚಲಿತಾಂಗದಃ।।
07131055a ಪ್ರಾಹ ವಾಕ್ಯಮಸಂಭ್ರಾಂತೋ ವೀರಂ ಶಾರದ್ವತೀಸುತಂ।
07131055c ದಹಂತಂ ಪಾಂಡವಾನೀಕಂ ವನಮಗ್ನಿಮಿವೋದ್ಧತಂ।।

ತನ್ನ ಮಹಾಬಲ ಮಗನು ಅಶ್ವತ್ಥಾಮನಿಂದ ಹತನಾದುದನ್ನು ಕಂಡು ರೋಷದಿಂದ ಅಂಗಾಂಗಗಳು ಥರಥರಿಸುತ್ತಿದ್ದ ಘಟೋತ್ಕಚನು ಕಾಡಾಗ್ನಿಯು ಸುಡುವಂತೆ ಪಾಂಡವರ ಸೇನೆಯನ್ನು ದಹಿಸುತ್ತಿದ್ದ ವೀರ ಶಾರದ್ವತೀ ಕೃಪಿಯ ಮಗ, ದ್ರೌಣಿಯ ಬಳಿಸಾರಿ ಸ್ವಲ್ಪವೂ ಅಳುಕದೇ ಈ ಮಾತನ್ನಾಡಿದನು:

07131056a ತಿಷ್ಠ ತಿಷ್ಠ ನ ಮೇ ಜೀವನ್ದ್ರೋಣಪುತ್ರ ಗಮಿಷ್ಯಸಿ।
07131056c ತ್ವಾಮದ್ಯ ನಿಹನಿಷ್ಯಾಮಿ ಕ್ರೌಂಚಮಗ್ನಿಸುತೋ ಯಥಾ।।

“ದ್ರೋಣಪುತ್ರ! ನಿಲ್ಲು! ನಿಲ್ಲು! ನನ್ನಿಂದ ಜೀವಂತನಾಗಿ ನೀನು ಹಿಂದಿರುಗುವುದಿಲ್ಲ. ಅಗ್ನಿಸುತ ಕಾರ್ತಿಕೇಯನು ಕ್ರೌಂಚಪರ್ವತವನ್ನು ಹೇಗೋ ಹಾಗೆ ನಾನು ನಿನ್ನನ್ನು ಇಂದು ಕೊಂದುಬಿಡುತ್ತೇನೆ!”

07131057 ಅಶ್ವತ್ಥಾಮೋವಾಚ।
07131057a ಗಚ್ಚ ವತ್ಸ ಸಹಾನ್ಯೈಸ್ತ್ವಂ ಯುಧ್ಯಸ್ವಾಮರವಿಕ್ರಮ।
07131057c ನ ಹಿ ಪುತ್ರೇಣ ಹೈಡಿಂಬೇ ಪಿತಾ ನ್ಯಾಯ್ಯಂ ಪ್ರಬಾಧಿತುಂ।।

ಅಶ್ವತ್ಥಾಮನು ಹೇಳಿದನು: “ಅಮರವಿಕ್ರಮಿ! ಮಗೂ! ಹೈಡಿಂಬೇ! ಹೊರಟುಹೋಗು! ಬೇರೆ ಯಾರೊಡನೆಯಾದರೂ ಯುದ್ಧಮಾಡು! ತಂದೆಯು ಮಗನನ್ನು ಬಾಧಿಸುವುದು ನ್ಯಾಯವಲ್ಲ!

07131058a ಕಾಮಂ ಖಲು ನ ಮೇ ರೋಷೋ ಹೈಡಿಂಬೇ ವಿದ್ಯತೇ ತ್ವಯಿ।
07131058c ಕಿಂ ತು ರೋಷಾನ್ವಿತೋ ಜಂತುರ್ಹನ್ಯಾದಾತ್ಮಾನಮಪ್ಯುತ।।

ಹೈಡಿಂಬೇ! ನಿನ್ನ ಮೇಲೆ ನನಗೆ ಯಾವರೀತಿಯ ರೋಷವೂ ಇಲ್ಲ. ಆದರೆ ರೋಷಾವಿಷ್ಟನಾದವನು ಆತ್ಮಹತ್ಯೆಯನ್ನೂ ಮಾಡಿಕೊಳ್ಳಬಹುದು!””

07131059 ಸಂಜಯ ಉವಾಚ।
07131059a ಶ್ರುತ್ವೈತತ್ಕ್ರೋಧತಾಮ್ರಾಕ್ಷಃ ಪುತ್ರಶೋಕಸಮನ್ವಿತಃ।
07131059c ಅಶ್ವತ್ಥಾಮಾನಮಾಯಸ್ತೋ ಭೈಮಸೇನಿರಭಾಷತ।।

ಸಂಜಯನು ಹೇಳಿದನು: “ಇದನ್ನು ಕೇಳಿ ಪುತ್ರಶೋಕದಿಂದ ಆವೇಶಗೊಂಡಿದ್ದ ಭೈಮಸೇನಿಯು ಕ್ರೋಧದಿಂದ ಕಣ್ಣುಗಳನ್ನು ಕೆಂಪು ಮಾಡಿಕೊಂಡು ಅಶ್ವತ್ಥಾಮನಿಗೆ ಅಪಮಾನಿಸಿ ಹೀಗೆ ಹೇಳಿದನು:

07131060a ಕಿಮಹಂ ಕಾತರೋ ದ್ರೌಣೇ ಪೃಥಗ್ಜನ ಇವಾಹವೇ।
07131060c ಭೀಮಾತ್ಖಲ್ವಹಮುತ್ಪನ್ನಃ ಕುರೂಣಾಂ ವಿಪುಲೇ ಕುಲೇ।।

“ದ್ರೌಣೀ! ಹೀಗೇಕೆ ಮಾತನಾಡುತ್ತಿರುವೆ? ಯುದ್ಧದಲ್ಲಿ ನಾನೊಬ್ಬ ಸಾಮಾನ್ಯನವನೆಂದು ಭಾವಿಸಿರುವೆಯಾ? ನಾನು ಸುಪ್ರಸಿದ್ಧ ಕುರುಗಳ ಕುಲದಲ್ಲಿ ಭೀಮಸೇನನಿಂದ ಹುಟ್ಟಿದವನಾಗಿದ್ದೇನೆ.

07131061a ಪಾಂಡವಾನಾಮಹಂ ಪುತ್ರಃ ಸಮರೇಷ್ವನಿವರ್ತಿನಾಂ।
07131061c ರಕ್ಷಸಾಮಧಿರಾಜೋಽಹಂ ದಶಗ್ರೀವಸಮೋ ಬಲೇ।।

ಸಮರದಿಂದ ಪಲಾಯನ ಮಾಡದ ಪಾಂಡವರ ಮಗನು ನಾನು. ಬಲದಲ್ಲಿ ದಶಗ್ರೀವನ ಸಮನಾಗಿದ್ದು ನಾನು ರಾಕ್ಷಸರ ರಾಜನು.

07131062a ತಿಷ್ಠ ತಿಷ್ಠ ನ ಮೇ ಜೀವನ್ದ್ರೋಣಪುತ್ರ ಗಮಿಷ್ಯಸಿ।
07131062c ಯುದ್ಧಶ್ರದ್ಧಾಮಹಂ ತೇಽದ್ಯ ವಿನೇಷ್ಯಾಮಿ ರಣಾಜಿರೇ।।

ದ್ರೋಣಪುತ್ರ! ನಿಲ್ಲು! ನಿಲ್ಲು! ನನ್ನಿಂದ ಜೀವಿತನಾಗಿ ಹೋಗುವುದಿಲ್ಲ! ಇಂದಿನ ಯುದ್ಧದಲ್ಲಿ ನಾನು ನಿನ್ನ ಯುದ್ಧಶ್ರದ್ಧೆಯನ್ನೇ ತೊಡೆದುಹಾಕುತ್ತೇನೆ!”

07131063a ಇತ್ಯುಕ್ತ್ವಾ ರೋಷತಾಮ್ರಾಕ್ಷೋ ರಾಕ್ಷಸಃ ಸುಮಹಾಬಲಃ।
07131063c ದ್ರೌಣಿಮಭ್ಯದ್ರವತ್ಕ್ರುದ್ಧೋ ಗಜೇಂದ್ರಮಿವ ಕೇಸರೀ।।

ಹೀಗೆ ಹೇಳಿ, ರೋಷದಿಂದ ತಾಮ್ರಾಕ್ಷನಾಗಿದ್ದ ಸುಮಹಾಬಲಿ ರಾಕ್ಷಸನು ಕ್ರುದ್ಧ ಕೇಸರಿಯು ಗಜೇಂದ್ರನ ಮೇಲೆರಗುವಂತೆ ದ್ರೌಣಿಯನ್ನು ಆಕ್ರಮಣಿಸಿದನು.

07131064a ರಥಾಕ್ಷಮಾತ್ರೈರಿಷುಭಿರಭ್ಯವರ್ಷದ್ಘಟೋತ್ಕಚಃ।
07131064c ರಥಿನಾಂ ಋಷಭಂ ದ್ರೌಣಿಂ ಧಾರಾಭಿರಿವ ತೋಯದಃ।।

ಮೋಡವು ಪರ್ವತದ ಮೇಲೆ ಜಲಧಾರೆಯನ್ನು ಸುರಿಸುವಂತೆ ಘಟೋತ್ಕಚನು ರಥಿಗಳಲ್ಲಿ ಶ್ರೇಷ್ಠ ದ್ರೌಣಿಯ ಮೇಲೆ ರಥದ ಅಚ್ಚುಮರದ ಗಾತ್ರದ ಬಾಣಗಳನ್ನು ಸುರಿಸಿದನು.

07131065a ಶರವೃಷ್ಟಿಂ ಶರೈರ್ದ್ರೌಣಿರಪ್ರಾಪ್ತಾಂ ತಾಂ ವ್ಯಶಾತಯತ್।
07131065c ತತೋಽಮ್ತರಿಕ್ಷೇ ಬಾಣಾನಾಂ ಸಂಗ್ರಾಮೋಽನ್ಯ ಇವಾಭವತ್।।

ಆ ಶರವೃಷ್ಟಿಯು ತನ್ನ ಮೇಲೆ ಬೀಳುವುದರೊಳಗೇ ದ್ರೌಣಿಯು ಶರಗಳಿಂದ ತುಂಡುಮಾಡಿದನು. ಆಗ ಅಂತರಿಕ್ಷದಲ್ಲಿ ಬಾಣಗಳ ಸಂಗ್ರಾಮವೋ ಎಂದು ತೋರುವಂತೆ ಅವರಿಬ್ಬರೊಡನೆ ಯುದ್ಧವು ನಡೆಯಿತು.

07131066a ಅಥಾಸ್ತ್ರಸಂಘರ್ಷಕೃತೈರ್ವಿಸ್ಫುಲಿಂಗೈಃ ಸಮಾಬಭೌ।
07131066c ವಿಭಾವರೀಮುಖೇ ವ್ಯೋಮ ಖದ್ಯೋತೈರಿವ ಚಿತ್ರಿತಂ।।

ಅಸ್ತ್ರಗಳ ಸಂಘರ್ಷದಿಂದಾಗಿ ಹೊರಬೀಳುತ್ತಿದ್ದ ಬೆಂಕಿಯ ಕಿಡಿಗಳು ಆಕಾಶವನ್ನೇ ಪ್ರಕಾಶಗೊಳಿಸುತ್ತಿದ್ದವು. ರಾತ್ರಿಯ ಆ ಪ್ರಥಮಯಾನದಲ್ಲಿ ಆಕಾಶವೆಲ್ಲವೂ ಮಿಂಚುಹುಳುಗಳಿಂದ ಚಿತ್ರಿತವಾಗಿರುವಂತೆ ತೋರುತ್ತಿತ್ತು.

07131067a ನಿಶಾಮ್ಯ ನಿಹತಾಂ ಮಾಯಾಂ ದ್ರೌಣಿನಾ ರಣಮಾನಿನಾ।
07131067c ಘಟೋತ್ಕಚಸ್ತತೋ ಮಾಯಾಂ ಸಸರ್ಜಾಂತರ್ಹಿತಃ ಪುನಃ।।

ಯುದ್ಧಾಭಿಮಾನಿ ದ್ರೌಣಿಯಿಂದ ತನ್ನ ಮಾಯೆಯು ನಾಶವಾದುದನ್ನು ನೋಡಿ ಘಟೋತ್ಕಚನು ಅಂತರ್ಹಿತನಾಗಿ ಪುನಃ ಮಾಯೆಯನ್ನು ಸೃಷ್ಟಿಸಿದನು.

07131068a ಸೋಽಭವದ್ಗಿರಿರತ್ಯುಚ್ಚಃ ಶಿಖರೈಸ್ತರುಸಂಕಟೈಃ।
07131068c ಶೂಲಪ್ರಾಸಾಸಿಮುಸಲಜಲಪ್ರಸ್ರವಣೋ ಮಹಾನ್।।

ಅವನು ಶಿಖರ-ವಿಕ್ಷಗಳಿಂದ ಕೂಡಿದ ದೊಡ್ಡ ಪರ್ವತವಾಗಿಬಿಟ್ಟನು. ಶೂಲ, ಪ್ರಾಸ, ಖಡ್ಗ, ಮುಸುಲಗಳು ಆ ಪರ್ವತದಿಂದ ಧಾರಾಕಾರವಾಗಿ ಸುರಿಯುತ್ತಿದ್ದವು.

07131069a ತಮಂಜನಚಯಪ್ರಖ್ಯಂ ದ್ರೌಣಿರ್ದೃಷ್ಟ್ವಾ ಮಹೀಧರಂ।
07131069c ಪ್ರಪತದ್ಭಿಶ್ಚ ಬಹುಭಿಃ ಶಸ್ತ್ರಸಂಘೈರ್ನ ಚುಕ್ಷುಭೇ।।

ಅಂಜನಪರ್ವತಕ್ಕೆ ಸಮಾನವಾಗಿದ್ದ ಮಾಯಾನಿರ್ಮಿತ ಆ ಪರ್ವತವನ್ನೂ ಅದರಿಂದ ಧಾರಾಕಾರವಾಗಿ ಬೀಳುತ್ತಿದ್ದ ಶಸ್ತ್ರಸಮೂಹಗಳನ್ನೂ ನೋಡಿ ದ್ರೌಣಿಯು ಸ್ವಲ್ಪವೂ ವಿಚಲಿತನಾಗಲಿಲ್ಲ.

07131070a ತತಃ ಸ್ಮಯನ್ನಿವ ದ್ರೌಣಿರ್ವಜ್ರಮಸ್ತ್ರಮುದೀರಯತ್।
07131070c ಸ ತೇನಾಸ್ತ್ರೇಣ ಶೈಲೇಂದ್ರಃ ಕ್ಷಿಪ್ತಃ ಕ್ಷಿಪ್ರಮನಶ್ಯತ।।

ಆಗ ನಸುನಗುತ್ತಾ ದ್ರೌಣಿಯು ವಜ್ರಾಸ್ತ್ರವನ್ನು ಪ್ರಕಟಿಸಿದನು. ಅಸ್ತ್ರದಿಂದ ಆ ಪರ್ವತವು ತಕ್ಷಣವೇ ನಾಶವಾಯಿತು.

07131071a ತತಃ ಸ ತೋಯದೋ ಭೂತ್ವಾ ನೀಲಃ ಸೇಂದ್ರಾಯುಧೋ ದಿವಿ।
07131071c ಅಶ್ಮವೃಷ್ಟಿಭಿರತ್ಯುಗ್ರೋ ದ್ರೌಣಿಮಾಚ್ಚಾದಯದ್ರಣೇ।।

ಆಗ ಘಟೋತ್ಕಚನು ಕಾಮನಬಿಲ್ಲಿನಿಂದ ಕೂಡಿದ ಕಪ್ಪು ಮೋಡದ ರೂಪವನ್ನು ತಾಳಿ ಆಕಾಶದಿಂದ ಕಲ್ಲುಗಳ ಮಳೆಯನ್ನೇ ಸುರಿಸಿ ದ್ರೌಣಿಯನ್ನು ಮುಚ್ಚಿಬಿಟ್ಟನು.

07131072a ಅಥ ಸಂಧಾಯ ವಾಯವ್ಯಮಸ್ತ್ರಮಸ್ತ್ರವಿದಾಂ ವರಃ।
07131072c ವ್ಯಧಮದ್ದ್ರೋಣತನಯೋ ನೀಲಮೇಘಂ ಸಮುತ್ಥಿತಂ।।

ಕೂಡಲೇ ಅಸ್ತ್ರವಿದರಲ್ಲಿ ಶ್ರೇಷ್ಠ ದ್ರೋಣತನಯನು ಮೇಲೆದ್ದ ಆ ಕಪ್ಪುಮೋಡವನ್ನು ವಾಯವ್ಯಾಸ್ತ್ರದಿಂದ ನಾಶಗೊಳಿಸಿದನು.

07131073a ಸ ಮಾರ್ಗಣಗಣೈರ್ದ್ರೌಣಿರ್ದಿಶಃ ಪ್ರಚ್ಚಾದ್ಯ ಸರ್ವತಃ।
07131073c ಶತಂ ರಥಸಹಸ್ರಾಣಾಂ ಜಘಾನ ದ್ವಿಪದಾಂ ವರಃ।।

ಮನುಷ್ಯರಲ್ಲಿ ಶ್ರೇಷ್ಠ ದ್ರೌಣಿಯು ಮಾರ್ಗಣಗಣಗಳಿಂದ ಎಲ್ಲ ದಿಕ್ಕುಗಳನ್ನೂ ಮುಚ್ಚಿ ನೂರಾರು ಸಹಸ್ರಾರು ರಾಕ್ಷಸ ರಥಗಳನ್ನು ಧ್ವಂಸಗೊಳಿಸಿದನು.

07131074a ಸ ದೃಷ್ಟ್ವಾ ಪುನರಾಯಾಂತಂ ರಥೇನಾಯತಕಾರ್ಮುಕಂ।
07131074c ಘಟೋತ್ಕಚಮಸಂಭ್ರಾಂತಂ ರಾಕ್ಷಸೈರ್ಬಹುಭಿರ್ವೃತಂ।।
07131075a ಸಿಂಹಶಾರ್ದೂಲಸದೃಶೈರ್ಮತ್ತದ್ವಿರದವಿಕ್ರಮೈಃ।
07131075c ಗಜಸ್ಥೈಶ್ಚ ರಥಸ್ಥೈಶ್ಚ ವಾಜಿಪೃಷ್ಠಗತೈರಪಿ।।
07131076a ವಿವೃತಾಸ್ಯಶಿರೋಗ್ರೀವೈರ್ಹೈಡಿಂಬಾನುಚರೈಃ ಸಹ।
07131076c ಪೌಲಸ್ತ್ಯೈರ್ಯಾತುಧಾನೈಶ್ಚ ತಾಮಸೈಶ್ಚೋಗ್ರವಿಕ್ರಮೈಃ।।
07131077a ನಾನಾಶಸ್ತ್ರಧರೈರ್ವೀರೈರ್ನಾನಾಕವಚಭೂಷಣೈಃ।
07131077c ಮಹಾಬಲೈರ್ಭೀಮರವೈಃ ಸಂರಂಭೋದ್ವೃತ್ತಲೋಚನೈಃ।।
07131078a ಉಪಸ್ಥಿತೈಸ್ತತೋ ಯುದ್ಧೇ ರಾಕ್ಷಸೈರ್ಯುದ್ಧದುರ್ಮದೈಃ।
07131078c ವಿಷಣ್ಣಮಭಿಸಂಪ್ರೇಕ್ಷ್ಯ ಪುತ್ರಂ ತೇ ದ್ರೌಣಿರಬ್ರವೀತ್।।

ಅಷ್ಟಾದರೂ ಭ್ರಾಂತನಾಗದೇ ರಥದಲ್ಲಿ ಕುಳಿತು ದೀರ್ಘ ಕಾರ್ಮುಕವನ್ನು ಸೆಳೆಯುತ್ತಾ, ಆನೆಗಳ ಮೇಲೂ ರಥಗಳ ಮೇಲೂ ಮತ್ತು ಕುದುರೆಗಳ ಬೆನ್ನುಗಳ ಮೇಲೆ ಕುಳಿತಿದ್ದ, ಸಿಂಹ-ಶಾರ್ದೂಲಗಳ ಬಲವುಳ್ಳ, ಮದಿಸಿದ ಆನೆಗಳ ವಿಕ್ರಮವುಳ್ಳ, ವಿಕಾರ ಮುಖ-ಶಿರ-ಕುತ್ತಿಗೆಗಳನ್ನು ಹೊಂದಿದ್ದ, ನಾನಾ ಶಸ್ತ್ರಗಳನ್ನು ನಾನಾ ಕವಚ-ಭೂಷಣಗಳನ್ನು ಧರಿಸಿದ್ದ, ಕೋಪದಿಂದ ಕಣ್ಣುಗುಡ್ಡೆಗಳು ಮುಂದೆ ಬಂದಿದ್ದ, ಭಯಂಕರವಾಗಿ ಆರ್ಭಟಿಸುತ್ತಿದ್ದ ಅನೇಕ ಉಗ್ರವಿಕ್ರಮಿ, ವೀರ, ಮಹಾಬಲ ಪೌಲಸ್ತ್ಯ-ಯಾತುಧಾನ-ತಾಮಸ ಯುದ್ಧದುರ್ಮದ ರಾಕ್ಷಸ ಅನುಚರರಿಂದ ಸುತ್ತುವರೆಯಲ್ಪಟ್ಟು ಯುದ್ಧಕ್ಕೆ ಬರುತ್ತಿದ್ದ ಹೈಡಿಂಬಿಯನ್ನು ನೋಡಿ ವಿಷಣ್ಣನಾದ ನಿನ್ನ ಮಗನಿಗೆ ದ್ರೌಣಿಯು ಹೇಳಿದನು:

07131079a ತಿಷ್ಠ ದುರ್ಯೋಧನಾದ್ಯ ತ್ವಂ ನ ಕಾರ್ಯಃ ಸಂಭ್ರಮಸ್ತ್ವಯಾ।
07131079c ಸಹೈಭಿರ್ಭ್ರಾತೃಭಿರ್ವೀರೈಃ ಪಾರ್ಥಿವೈಶ್ಚೇಂದ್ರವಿಕ್ರಮೈಃ।।

“ದುರ್ಯೋಧನ! ಇಂದ್ರ ಸಮಾನ ವಿಕ್ರಮ ರಾಜರು ಮತ್ತು ವೀರ ಸಹೋದರರೊಡನೆ ಇಂದು ನೀನು ಸುಮ್ಮನೇ ಯುದ್ಧವನ್ನು ನೋಡು! ಗಾಬರಿಗೊಳ್ಳಲು ಕಾರಣವಿಲ್ಲ.

07131080a ನಿಹನಿಷ್ಯಾಮ್ಯಮಿತ್ರಾಂಸ್ತೇ ನ ತವಾಸ್ತಿ ಪರಾಜಯಃ।
07131080c ಸತ್ಯಂ ತೇ ಪ್ರತಿಜಾನಾಮಿ ಪರ್ಯಾಶ್ವಾಸಯ ವಾಹಿನೀಂ।।

ನಿನ್ನ ಶತ್ರುಗಳೆಲ್ಲರನ್ನೂ ಈಗ ಸಂಹರಿಸುತ್ತೇನೆ. ನಿನಗೆ ಪರಾಜಯವೆಂಬುದೇ ಆಗುವುದಿಲ್ಲ. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ. ಸೇನೆಯನ್ನು ಸಮಾಧಾನಗೊಳಿಸು!”

07131081 ದುರ್ಯೋಧನ ಉವಾಚ।
07131081a ನ ತ್ವೇತದದ್ಭುತಂ ಮನ್ಯೇ ಯತ್ತೇ ಮಹದಿದಂ ಮನಃ।
07131081c ಅಸ್ಮಾಸು ಚ ಪರಾ ಭಕ್ತಿಸ್ತವ ಗೌತಮಿನಂದನ।।

ದುರ್ಯೋಧನನು ಹೇಳಿದನು: “ಗೌತಮಿಯ ಮಗನೇ! ನಿನ್ನ ಮನಸ್ಸು ವಿಶಾಲವಾದುದು. ಆದುದರಿಂದ ಈ ಅದ್ಭುತವನ್ನು ನೀನು ಮಾಡುವೆ ಎನ್ನುವುದರಲ್ಲಿ ಸಂದೇಹವಿಲ್ಲ. ನಮ್ಮ ಮೇಲೆ ನಿನಗೆ ಪರಮ ಭಕ್ತಿಯಿದೆ!””

07131082 ಸಂಜಯ ಉವಾಚ।
07131082a ಅಶ್ವತ್ಥಾಮಾನಮುಕ್ತ್ವೈವಂ ತತಃ ಸೌಬಲಮಬ್ರವೀತ್।
07131082c ವೃತಃ ಶತಸಹಸ್ರೇಣ ರಥಾನಾಂ ರಣಶೋಭಿನಾಂ।।

ಸಂಜಯನು ಹೇಳಿದನು: “ಅಶ್ವತ್ಥಾಮನು ಹೀಗೆ ಹೇಳಲು ನಿನ್ನ ಮಗನು ನೂರುಸಾವಿರ ರಣಶೋಭೀ ರಥಗಳಿಂದ ಆವೃತನಾಗಿದ್ದ ಸೌಬಲ ಶಕುನಿಗೆ ಹೇಳಿದನು:

07131083a ಷಷ್ಟ್ಯಾ ಗಜಸಹಸ್ರೈಶ್ಚ ಪ್ರಯಾಹಿ ತ್ವಂ ಧನಂಜಯಂ।
07131083c ಕರ್ಣಶ್ಚ ವೃಷಸೇನಶ್ಚ ಕೃಪೋ ನೀಲಸ್ತಥೈವ ಚ।।
07131084a ಉದೀಚ್ಯಾಃ ಕೃತವರ್ಮಾ ಚ ಪುರುಮಿತ್ರಃ ಶ್ರುತಾರ್ಪಣಃ।
07131084c ದುಃಶಾಸನೋ ನಿಕುಂಭಶ್ಚ ಕುಂಡಭೇದೀ ಉರುಕ್ರಮಃ।।
07131085a ಪುರಂಜಯೋ ದೃಢರಥಃ ಪತಾಕೀ ಹೇಮಪಂಕಜಃ।
07131085c ಶಲ್ಯಾರುಣೀಂದ್ರಸೇನಾಶ್ಚ ಸಂಜಯೋ ವಿಜಯೋ ಜಯಃ।।
07131086a ಕಮಲಾಕ್ಷಃ ಪುರುಃ ಕ್ರಾಥೀ ಜಯವರ್ಮಾ ಸುದರ್ಶನಃ।
07131086c ಏತೇ ತ್ವಾಮನುಯಾಸ್ಯಂತಿ ಪತ್ತೀನಾಮಯುತಾನಿ ಷಟ್।।
07131087a ಜಹಿ ಭೀಮಂ ಯಮೌ ಚೋಭೌ ಧರ್ಮರಾಜಂ ಚ ಮಾತುಲ।
07131087c ಅಸುರಾನಿವ ದೇವೇಂದ್ರೋ ಜಯಾಶಾ ಮೇ ತ್ವಯಿ ಸ್ಥಿತಾ।।

“ಮಾತುಲ! ಆರು ಸಾವಿರ ಆನೆಗಳೊಂದಿಗೆ ನೀನು ಧನಂಜಯನನ್ನು ಆಕ್ರಮಣಿಸು! ಕರ್ಣ, ವೃಷಸೇನ, ಕೃಪ, ನೀಲ, ಉತ್ತರ ಸೇನೆ, ಕೃತವರ್ಮ, ಪುರುಮಿತ್ರ, ಶ್ರುತಾರ್ಪಣ, ದುಃಶಾಸನ, ನಿಕುಂಭ, ಕುಂಡಭೇದಿ, ಉರುಕ್ರಮ, ಪುರಂಜಯ, ದೃಢರಥ, ಪತಾಕೀ, ಹೇಮಪಂಕಜ, ಶಲ್ಯ, ಅರುಣೀಂದ್ರನ ಸೇನೆ, ಸಂಜಯ, ವಿಜಯ, ಜಯ, ಕಮಲಾಕ್ಷ, ಪುರು, ಕ್ರಾಥೀ, ಜಯವರ್ಮ, ಸುದರ್ಶನರು ಆರುಸಾವಿರ ಪದಾತಿಗಳೊಂದಿಗೆ ನಿನ್ನನ್ನು ಅನುಸರಿಸಿ ಬರುತ್ತಾರೆ. ದೇವೇಂದ್ರನು ಅಸುರರನ್ನು ಜಯಿಸಿದಂತೆ ನೀವು ಭೀಮ, ಯಮಳರು ಮತ್ತು ಧರ್ಮರಾಜನನ್ನು ಜಯಿಸಿರಿ! ನನ್ನ ವಿಜಯವು ನಿಮ್ಮ ಮೇಲೆ ನಿರ್ಭರಗೊಂಡಿದೆ!

07131088a ದಾರಿತಾನ್ದ್ರೌಣಿನಾ ಬಾಣೈರ್ಭೃಶಂ ವಿಕ್ಷತವಿಗ್ರಹಾನ್।
07131088c ಜಹಿ ಮಾತುಲ ಕೌಂತೇಯಾನಸುರಾನಿವ ಪಾವಕಿಃ।।

ಮಾತುಲ! ದ್ರೌಣಿಯ ಬಾಣಗಳಿಂದ ತುಂಬಾ ಗಾಯಗೊಂಡಿರುವ ಕೌಂತೇಯರನ್ನು ಪಾವಕಿಯು ಅಸುರರನ್ನು ಹೇಗೋ ಹಾಗೆ ಜಯಿಸು!”

07131089a ಏವಮುಕ್ತೋ ಯಯೌ ಶೀಘ್ರಂ ಪುತ್ರೇಣ ತವ ಸೌಬಲಃ।
07131089c ಪಿಪ್ರೀಷುಸ್ತೇ ಸುತಾನ್ರಾಜನ್ದಿಧಕ್ಷುಶ್ಚೈವ ಪಾಂಡವಾನ್।।

ರಾಜನ್! ನಿನ್ನ ಮಗನು ಹೀಗೆ ಹೇಳಲು ನಿನ್ನ ಮೈದುನ ಸೌಬಲನು ನಿನ್ನ ಮಕ್ಕಳನ್ನು ಸಂತೋಷಗೊಳಿಸಲು ಮತ್ತು ಪಾಂಡವರನ್ನು ನಾಶಗೊಳಿಸಲು ಹೊರಟನು.

07131090a ಅಥ ಪ್ರವವೃತೇ ಯುದ್ಧಂ ದ್ರೌಣಿರಾಕ್ಷಸಯೋರ್ಮೃಧೇ।
07131090c ವಿಭಾವರ್ಯಾಂ ಸುತುಮುಲಂ ಶಕ್ರಪ್ರಹ್ರಾದಯೋರಿವ।।

ಆಗ ಹಿಂದೆ ಶಕ್ರನಿಗೂ ಪ್ರಹ್ರಾದನಿಗೂ ನಡೆದ ತುಮುಲ ಯುದ್ಧದಂತೆ ದ್ರೌಣಿ-ರಾಕ್ಷಸನ ನಡುವೆ ಯುದ್ಧವು ನಡೆಯಿತು.

07131091a ತತೋ ಘಟೋತ್ಕಚೋ ಬಾಣೈರ್ದಶಭಿರ್ಗೌತಮೀಸುತಂ।
07131091c ಜಘಾನೋರಸಿ ಸಂಕ್ರುದ್ಧೋ ವಿಷಾಗ್ನಿಪ್ರತಿಮೈರ್ದೃಢೈಃ।।

ಸಂಕ್ರುದ್ಧ ಘಟೋತ್ಕಚನು ವಿಷಾಗ್ನಿಯಂತಿರುವ ಹತ್ತು ಬಾಣಗಳಿಂದ ಗೌತಮೀಸುತನ ಎದೆಗೆ ಹೊಡೆದನು.

07131092a ಸ ತೈರಭ್ಯಾಹತೋ ಗಾಢಂ ಶರೈರ್ಭೀಮಸುತೇರಿತೈಃ।
07131092c ಚಚಾಲ ರಥಮಧ್ಯಸ್ಥೋ ವಾತೋದ್ಧೂತ ಇವ ದ್ರುಮಃ।।

ಭೀಮಸುತನ ಶರಗಳಿಂದ ಗಾಢವಾಗಿ ಗಾಯಗೊಂಡ ಅಶ್ವತ್ಥಾಮನು ರಥದ ಮಧ್ಯದಲ್ಲಿಯೇ ಭಿರುಗಾಳಿಸಿ ಸಿಲುಕಿದ ಮರದಂತೆ ತತ್ತರಿಸಿದನು.

07131093a ಭೂಯಶ್ಚಾಂಜಲಿಕೇನಾಸ್ಯ ಮಾರ್ಗಣೇನ ಮಹಾಪ್ರಭಂ।
07131093c ದ್ರೌಣಿಹಸ್ತಸ್ಥಿತಂ ಚಾಪಂ ಚಿಚ್ಚೇದಾಶು ಘಟೋತ್ಕಚಃ।।

ಪುನಃ ಘಟೋತ್ಕಚನು ಮಹಾಪ್ರಭೆಯುಳ್ಳ ಅಂಜಲೀಕವೆಂಬ ಮಾರ್ಗಣದಿಂದ ದ್ರೌಣಿಯ ಕೈಯಲ್ಲಿದ್ದ ಚಾಪವನ್ನು ತುಂಡರಿಸಿದನು.

07131094a ತತೋಽನ್ಯದ್ದ್ರೌಣಿರಾದಾಯ ಧನುರ್ಭಾರಸಹಂ ಮಹತ್।
07131094c ವವರ್ಷ ವಿಶಿಖಾಂಸ್ತೀಕ್ಷ್ಣಾನ್ವಾರಿಧಾರಾ ಇವಾಂಬುದಃ।।

ಆಗ ದ್ರೌಣಿಯು ಮಹಾ ಭಾರವನ್ನು ಸಹಿಸಿಕೊಳ್ಳಬಲ್ಲ ಅನ್ಯ ಧನುಸ್ಸನ್ನು ತೆಗೆದುಕೊಂಡು ಮೋಡಗಳು ಮಳೆಯನ್ನು ಸುರಿಸುವಂತೆ ತೀಕ್ಷ್ಣ ವಿಶಿಖಗಳ ಮಳೆಯನ್ನು ಸುರಿಸಿದನು.

07131095a ತತಃ ಶಾರದ್ವತೀಪುತ್ರಃ ಪ್ರೇಷಯಾಮಾಸ ಭಾರತ।
07131095c ಸುವರ್ಣಪುಂಖಾಂ ಶತ್ರುಘ್ನಾನ್ಖಚರಾನ್ಖಚರಾನ್ಪ್ರತಿ।।

ಭಾರತ! ಆಗ ಶಾರದ್ವತೀಪುತ್ರನು ಆ ಆಕಾಶಗಾಮಿ ರಾಕ್ಷಸ ಶತ್ರುಗಳ ಮೇಲೆ ಸುವರ್ಣಪುಂಖಗಳುಳ್ಳ ಆಕಾಶಗಾಮೀ ಬಾಣಗಳನ್ನು ಪ್ರಯೋಗಿಸಿದನು.

07131096a ತದ್ಬಾಣೈರರ್ದಿತಂ ಯೂಥಂ ರಕ್ಷಸಾಂ ಪೀನವಕ್ಷಸಾಂ।
07131096c ಸಿಂಹೈರಿವ ಬಭೌ ಮತ್ತಂ ಗಜಾನಾಮಾಕುಲಂ ಕುಲಂ।।

ಸಿಂಹದಿಂದ ಪೀಡಿಸಲ್ಪಟ್ಟ ಆನೆಗಳ ಹಿಂಡಿನಂತೆ ಪೀನವಕ್ಷಸರಾದ ರಾಕ್ಷಸರ ಆ ಸೇನೆಯು ಅಶ್ವತ್ಥಾಮನ ಬಾಣಗಳಿಂದ ಬಹಳವಾಗಿ ಪೀಡಿತಗೊಂಡಿತು.

07131097a ವಿಧಮ್ಯ ರಾಕ್ಷಸಾನ್ಬಾಣೈಃ ಸಾಶ್ವಸೂತರಥಾನ್ವಿಭುಃ।
07131097c ದದಾಹ ಭಗವಾನ್ವಹ್ನಿರ್ಭೂತಾನೀವ ಯುಗಕ್ಷಯೇ।।

ಯುಗಕ್ಷಯದಲ್ಲಿ ಭಗವಂತ ವಿಭುವು ಇರುವವುಗಳನ್ನು ಹೇಗೆ ಅಗ್ನಿಯಿಂದ ಸುಡುವನೋ ಹಾಗೆ ಅಶ್ವತ್ಥಾಮನು ಕುದುರೆ-ಸೂತ-ರಥಗಳೊಂದಿಗೆ ಆ ರಾಕ್ಷಸರನ್ನು ಬಾಣಗಳಿಂದ ಸುಟ್ಟು ಧ್ವಂಸಗೊಳಿಸಿದನು.

07131098a ಸ ದಗ್ಧ್ವಾಕ್ಷೌಹಿಣೀಂ ಬಾಣೈರ್ನೈರೃತಾನ್ರುರುಚೇ ಭೃಶಂ।
07131098c ಪುರೇವ ತ್ರಿಪುರಂ ದಗ್ಧ್ವಾ ದಿವಿ ದೇವೋ ಮಹೇಶ್ವರಃ।।

ಹಿಂದೆ ದಿವಿಯಲ್ಲಿ ದೇವ ಮಹೇಶ್ವರನು ಹೇಗೆ ತ್ರಿಪುರವನ್ನು ದಹಿಸಿದ್ದನೋ ಹಾಗೆ ಬಾಣಗಳಿಂದ ರಾಕ್ಷಸರ ಅಕ್ಷೌಹಿಣಿಯನ್ನು ದಹಿಸಿ ಅಶ್ವತ್ಥಾಮನು ಬಹಳವಾಗಿ ಪ್ರಕಾಶಿಸಿದನು.

07131099a ಯುಗಾಂತೇ ಸರ್ವಭೂತಾನಿ ದಗ್ಧ್ವೇವ ವಸುರುಲ್ಬಣಃ।
07131099c ರರಾಜ ಜಯತಾಂ ಶ್ರೇಷ್ಠೋ ದ್ರೋಣಪುತ್ರಸ್ತವಾಹಿತಾನ್।।

ನಿನ್ನ ಹಿತವನ್ನೇ ಮಾಡುವ ವಿಜಯಿಗಳಲ್ಲಿ ಶ್ರೇಷ್ಠ ದ್ರೋಣಪುತ್ರನು ಯುಗಾಂತದಲ್ಲಿ ಸರ್ವಭೂತಗಳನ್ನು ಸುಡುವ ಅಗ್ನಿಯಂತೆ ಪ್ರಕಾಶಿಸಿದನು.

07131100a ತೇಷು ರಾಜಸಹಸ್ರೇಷು ಪಾಂಡವೇಯೇಷು ಭಾರತ।
07131100c ನೈನಂ ನಿರೀಕ್ಷಿತುಂ ಕಶ್ಚಿಚ್ಚಕ್ನೋತಿ ದ್ರೌಣಿಮಾಹವೇ।
07131100e ಋತೇ ಘಟೋತ್ಕಚಾದ್ವೀರಾದ್ರಾಕ್ಷಸೇಂದ್ರಾನ್ಮಹಾಬಲಾತ್।।

ಭಾರತ! ಮಹಾಬಲೀ ರಾಕ್ಷಸೇಂದ್ರ ಘಟೋತ್ಕಚನ ಹೊರತಾಗಿ ಆಗ ರಣದಲ್ಲಿದ್ದ ಪಾಂಡವರ ಸಹಸ್ರಾರು ರಾಜರಲ್ಲಿ ಯಾರೂ ದ್ರೌಣಿಯನ್ನು ವೀಕ್ಷಿಸಲು ಶಕ್ಯರಾಗಿರಲಿಲ್ಲ.

07131101a ಸ ಪುನರ್ಭರತಶ್ರೇಷ್ಠ ಕ್ರೋಧಾದ್ರಕ್ತಾಂತಲೋಚನಃ।
07131101c ತಲಂ ತಲೇನ ಸಂಹತ್ಯ ಸಂದಶ್ಯ ದಶನಚ್ಚದಂ।
07131101e ಸ್ವಸೂತಮಬ್ರವೀತ್ಕ್ರುದ್ಧೋ ದ್ರೋಣಪುತ್ರಾಯ ಮಾಂ ವಹ।।

ಭರತಶ್ರೇಷ್ಠ! ಅವನು ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು ಚಪ್ಪಾಳೆ ತಟ್ಟುತ್ತಾ “ಕ್ರುದ್ಧನಾದ ದ್ರೋಣಪುತ್ರನಲ್ಲಿಗೆ ನನ್ನನ್ನು ಕೊಂಡೊಯ್ಯಿ!” ಎಂದು ಹೇಳಿದನು.

07131102a ಸ ಯಯೌ ಘೋರರೂಪೇಣ ತೇನ ಜೈತ್ರಪತಾಕಿನಾ।
07131102c ದ್ವೈರಥಂ ದ್ರೋಣಪುತ್ರೇಣ ಪುನರಪ್ಯರಿಸೂದನಃ।।

ಅನಂತರ ಆ ಅರಿಸೂದನ ಘಟೋತ್ಕಚನು ವಿಚಿತ್ರ ಪತಾಕೆಗಳನ್ನುಳ್ಳ ಘೋರರೂಪದ ರಥವನ್ನೇರಿ ದ್ರೋಣಪುತ್ರನೊಂದಿಗೆ ಪುನಃ ದ್ವೈರಥಯುದ್ಧವನ್ನು ನಡೆಸಿದನು.

07131103a ಸ ಚಿಕ್ಷೇಪ ತತಃ ಕ್ರುದ್ಧೋ ದ್ರೋಣಪುತ್ರಾಯ ರಾಕ್ಷಸಃ।
07131103c ಅಷ್ಟಚಕ್ರಾಂ ಮಹಾರೌದ್ರಾಮಶನೀಂ ರುದ್ರನಿರ್ಮಿತಾಂ।।

ಆಗ ಕ್ರುದ್ಧ ರಾಕ್ಷಸನು ದ್ರೋಣಪುತ್ರನ ಮೇಲೆ ರುದ್ರನಿರ್ಮಿತ ಮಹಾರೌದ್ರಾಕಾರದ ಉಕ್ಕಿನ ಅಷ್ಟಚಕ್ರವನ್ನು ಪ್ರಯೋಗಿಸಿದನು.

07131104a ತಾಮವಪ್ಲುತ್ಯ ಜಗ್ರಾಹ ದ್ರೌಣಿರ್ನ್ಯಸ್ಯ ರಥೇ ಧನುಃ।
07131104c ಚಿಕ್ಷೇಪ ಚೈನಾಂ ತಸ್ಯೈವ ಸ್ಯಂದನಾತ್ಸೋಽವಪುಪ್ಲುವೇ।।

ಆಗ ದ್ರೌಣಿಯು ಧನುಸ್ಸನ್ನು ರಥದಲ್ಲಿಯೇ ಇರಿಸಿ, ರಥದಿಂದ ಕೆಳಕ್ಕೆ ಹಾರಿ ಆ ಚಕ್ರವನ್ನು ಹಿಡಿದು ಅದನ್ನೇ ಹಿಂದೆ ಎಸೆದನು.

07131105a ಸಾಶ್ವಸೂತಧ್ವಜಂ ವಾಹಂ ಭಸ್ಮ ಕೃತ್ವಾ ಮಹಾಪ್ರಭಾ।
07131105c ವಿವೇಶ ವಸುಧಾಂ ಭಿತ್ತ್ವಾ ಸಾಶನಿರ್ಭೃಶದಾರುಣಾ।।

ಮಹಾಪ್ರಭೆಯುಳ್ಳ ಆ ಅತಿ ದಾರುಣ ಅಶನಿಯು ಘಟೋತ್ಕಚನ ವಾಹನವನ್ನು ಕುದುರೆ-ಸೂತ-ಧ್ವಜಗಳೊಂದಿಗೆ ಭಸ್ಮಗೊಳಿಸಿ ಭೂಮಿಯನ್ನು ಸೀಳಿ ಪ್ರವೇಶಿಸಿತು.

07131106a ದ್ರೌಣೇಸ್ತತ್ಕರ್ಮ ದೃಷ್ಟ್ವಾ ತು ಸರ್ವಭೂತಾನ್ಯಪೂಜಯನ್।
07131106c ಯದವಪ್ಲುತ್ಯ ಜಗ್ರಾಹ ಘೋರಾಂ ಶಂಕರನಿರ್ಮಿತಾಂ।।

ಶಂಕರ ನಿರ್ಮಿತ ಆ ಘೋರ ಅಶನಿಯನ್ನು ಹಾರಿ ಹಿಡಿದ ದ್ರೌಣಿಯ ಆ ಕರ್ಮವನ್ನು ನೋಡಿ ಸರ್ವಭೂತಗಳು ಅವನನ್ನು ಹೊಗಳಿದವು.

07131107a ಧೃಷ್ಟದ್ಯುಮ್ನರಥಂ ಗತ್ವಾ ಭೈಮಸೇನಿಸ್ತತೋ ನೃಪ।
07131107c ಮುಮೋಚ ನಿಶಿತಾನ್ಬಾಣಾನ್ಪುನರ್ದ್ರೌಣೇರ್ಮಹೋರಸಿ।।

ನೃಪ! ಭೈಮಸೇನಿಯಾದರೋ ಧೃಷ್ಟದ್ಯುಮ್ನನ ರಥವನ್ನೇರಿ ಅಲ್ಲಿಂದಲೇ ಪುನಃ ದ್ರೌಣಿಯ ಮಹಾವಕ್ಷಸ್ಥಳಕ್ಕೆ ಗುರಿಯಿಟ್ಟು ನಿಶಿತ ಬಾಣಗಳನ್ನು ಪ್ರಯೋಗಿಸಿದನು.

07131108a ಧೃಷ್ಟದ್ಯುಮ್ನೋಽಪ್ಯಸಂಭ್ರಾಂತೋ ಮುಮೋಚಾಶೀವಿಷೋಪಮಾನ್।
07131108c ಸುವರ್ಣಪುಂಖಾನ್ವಿಶಿಖಾನ್ದ್ರೋಣಪುತ್ರಸ್ಯ ವಕ್ಷಸಿ।।

ಧೃಷ್ಟದ್ಯುಮ್ನನೂ ಕೂಡ ಗಾಬರಿಗೊಳ್ಳದೇ ಸರ್ಪಗಳ ವಿಷದಂತಿರುವ ಸುವರ್ಣಪುಂಖಗಳ ವಿಶಿಖಗಳನ್ನು ದ್ರೋಣಪುತ್ರನ ಎದೆಗೆ ಗುರಿಯಿಟ್ಟು ಪ್ರಯೋಗಿಸಿದನು.

07131109a ತತೋ ಮುಮೋಚ ನಾರಾಚಾನ್ದ್ರೌಣಿಸ್ತಾಭ್ಯಾಂ ಸಹಸ್ರಶಃ।
07131109c ತಾವಪ್ಯಗ್ನಿಶಿಖಾಪ್ರಖ್ಯೈರ್ಜಘ್ನತುಸ್ತಸ್ಯ ಮಾರ್ಗಣಾನ್।।

ದ್ರೌಣಿಯೂ ಕೂಡ ಅವರಿಬ್ಬರ ಮೇಲೆ ಸಹಸ್ರಾರು ನಾರಾಚಗಳನ್ನು ಪ್ರಯೋಗಿಸಿದನು. ಅವರೂ ಕೂಡ ಅಗ್ನಿಶಿಖೆಗಳಂತಿದ್ದ ಬಾಣಗಳಿಂದ ಅಶ್ವತ್ಥಾಮನ ಬಾಣಗಳನ್ನು ಆಕಾಶದಲ್ಲಿಯೇ ತುಂಡರಿಸಿದರು.

07131110a ಅತಿತೀವ್ರಮಭೂದ್ಯುದ್ಧಂ ತಯೋಃ ಪುರುಷಸಿಂಹಯೋಃ।
07131110c ಯೋಧಾನಾಂ ಪ್ರೀತಿಜನನಂ ದ್ರೌಣೇಶ್ಚ ಭರತರ್ಷಭ।।

ಭರತರ್ಷಭ! ಪುರುಷಸಿಂಹರು ಮತ್ತು ದ್ರೌಣಿಯ ನಡುವಿನ ಆ ಯುದ್ಧವು ಅತಿ ತೀವ್ರವೂ ಯೋಧರಿಗೆ ಪ್ರೀತಿವರ್ಧಕವೂ ಆಗಿತ್ತು.

07131111a ತತೋ ರಥಸಹಸ್ರೇಣ ದ್ವಿರದಾನಾಂ ಶತೈಸ್ತ್ರಿಭಿಃ।
07131111c ಷಡ್ಭಿರ್ವಾಜಿಸಹಸ್ರೈಶ್ಚ ಭೀಮಸ್ತಂ ದೇಶಮಾವ್ರಜತ್।।

ಆಗ ಸಾವಿರ ರಥಗಳಿಂದಲೂ, ಮುನ್ನೂರು ಆನೆಗಳಿಂದಲೂ, ಆರು ಸಾವಿರ ಕುದುರೆಸವಾರರಿಂದಲೂ ಕೂಡಿಕೊಂಡು ಭೀಮನು ಆ ಪ್ರದೇಶಕ್ಕೆ ಆಗಮಿಸಿದನು.

07131112a ತತೋ ಭೀಮಾತ್ಮಜಂ ರಕ್ಷೋ ಧೃಷ್ಟದ್ಯುಮ್ನಂ ಚ ಸಾನುಗಂ।
07131112c ಅಯೋಧಯತ ಧರ್ಮಾತ್ಮಾ ದ್ರೌಣಿರಕ್ಲಿಷ್ಟಕರ್ಮಕೃತ್।।

ಆ ಸಮಯದಲ್ಲಿ ಸ್ವಲ್ಪವೂ ಆಯಾಸವಿಲ್ಲದಂತೆ ಪರಾಕ್ರಮವನ್ನು ತೋರಿಸುತ್ತಿದ್ದ ಧರ್ಮಾತ್ಮ ದ್ರೌಣಿಯು ಭೀಮನ ರಾಕ್ಷಸ ಮಗನೊಡನೆ ಮತ್ತು ಅವನನ್ನು ಅನುಸರಿಸಿ ಬಂದ ಧೃಷ್ಟದ್ಯುಮ್ನನೊಡನೆ ಯುದ್ಧಮಾಡುತ್ತಿದ್ದನು.

07131113a ತತ್ರಾದ್ಭುತತಮಂ ದ್ರೌಣಿರ್ದರ್ಶಯಾಮಾಸ ವಿಕ್ರಮಂ।
07131113c ಅಶಕ್ಯಂ ಕರ್ತುಮನ್ಯೇನ ಸರ್ವಭೂತೇಷು ಭಾರತ।।

ಭಾರತ! ಅಲ್ಲಿ ಅನ್ಯ ಸರ್ವಭೂತಗಳಿಗೂ ಮಾಡಿತೋರಿಸಲು ಅಶಕ್ಯವಾದ ಅತಿ ಅದ್ಭುತ ವಿಕ್ರಮವನ್ನು ದ್ರೌಣಿಯು ಪ್ರದರ್ಶಿಸಿದನು.

07131114a ನಿಮೇಷಾಂತರಮಾತ್ರೇಣ ಸಾಶ್ವಸೂತರಥದ್ವಿಪಾಂ।
07131114c ಅಕ್ಷೌಹಿಣೀಂ ರಾಕ್ಷಸಾನಾಂ ಶಿತೈರ್ಬಾಣೈರಶಾತಯತ್।।
07131115a ಮಿಷತೋ ಭೀಮಸೇನಸ್ಯ ಹೈಡಿಂಬೇಃ ಪಾರ್ಷತಸ್ಯ ಚ।
07131115c ಯಮಯೋರ್ಧರ್ಮಪುತ್ರಸ್ಯ ವಿಜಯಸ್ಯಾಚ್ಯುತಸ್ಯ ಚ।।

ಒಂದೇ ನಿಮಿಷಮಾತ್ರದಲ್ಲಿ ಅವನು – ಭೀಮಸೇನ, ಹೈಡಿಂಬಿ, ಪಾರ್ಷತ, ಯಮಳರು, ಧರ್ಮಪುತ್ರ, ವಿಜಯ ಮತ್ತು ಅಚ್ಯುತರು ನೋಡುತ್ತಿದ್ದಂತೆಯೇ - ನಿಶಿತಬಾಣಗಳಿಂದ ಅಶ್ವ-ಸೂತ-ರಥ-ಗಜಗಳೊಂದಿಗೆ ರಾಕ್ಷಸರ ಅಕ್ಷೌಹಿಣೀ ಸೇನೆಯನ್ನು ಧ್ವಂಸಗೊಳಿಸಿದನು.

07131116a ಪ್ರಗಾಢಮಂಜೋಗತಿಭಿರ್ನಾರಾಚೈರಭಿತಾಡಿತಾಃ।
07131116c ನಿಪೇತುರ್ದ್ವಿರದಾ ಭೂಮೌ ದ್ವಿಶೃಂಗಾ ಇವ ಪರ್ವತಾಃ।।

ಅಶ್ವತ್ಥಾಮನ ನಾರಾಚಗಳಿಂದ ಅತಿಗಾಢವಾಗಿ ಗಾಯಗೊಂಡ ಆನೆಗಳು ಎರಡು ಶಿಖರಗಳಿರುವ ಪರ್ವತಗಳಂತೆ ಭೂಮಿಯ ಮೇಲೆ ಉರುಳಿ ಬಿದ್ದವು.

07131117a ನಿಕೃತ್ತೈರ್ಹಸ್ತಿಹಸ್ತೈಶ್ಚ ವಿಚಲದ್ಭಿರಿತಸ್ತತಃ।
07131117c ರರಾಜ ವಸುಧಾ ಕೀರ್ಣಾ ವಿಸರ್ಪದ್ಭಿರಿವೋರಗೈಃ।।

ಬಾಣಗಳಿಂದ ಕತ್ತರಿಸಲ್ಪಟ್ಟ ಆನೆಗಳ ಸೊಂಡಿಲುಗಳು ಚಲಿಸುತ್ತಿರುವಾಗ ರಣಭೂಮಿಯು ಹರಿದಾಡುತ್ತಿರುವ ಸರ್ಪಗಳಿಂದ ತುಂಬಿಹೋಗಿರುವಂತೆ ತೋರಿತು.

07131118a ಕ್ಷಿಪ್ತೈಃ ಕಾಂಚನದಂಡೈಶ್ಚ ನೃಪಚ್ಚತ್ರೈಃ ಕ್ಷಿತಿರ್ಬಭೌ।
07131118c ದ್ಯೌರಿವೋದಿತಚಂದ್ರಾರ್ಕಾ ಗ್ರಹಾಕೀರ್ಣಾ ಯುಗಕ್ಷಯೇ।।

ಅಲ್ಲಲ್ಲಿ ಬಿದ್ದಿದ್ದ ಸುವರ್ಣಮಯ ದಂಡಗಳು ಮತ್ತು ನೃಪರ ಛತ್ರಗಳಿಂದ ತುಂಬಿದ ರಣಭೂಮಿಯು ಯುಗಕ್ಷಯದಲ್ಲಿ ಸೂರ್ಯ-ಚಂದ್ರ ಗ್ರಹಗಳಿಂದ ತುಂಬಿದ ಆಕಾಶದಂತೆ ತೋರುತ್ತಿತ್ತು.

07131119a ಪ್ರವೃದ್ಧಧ್ವಜಮಂಡೂಕಾಂ ಭೇರೀವಿಸ್ತೀರ್ಣಕಚ್ಚಪಾಂ।
07131119c ಚತ್ರಹಂಸಾವಲೀಜುಷ್ಟಾಂ ಫೇನಚಾಮರಮಾಲಿನೀಂ।।
07131120a ಕಂಕಗೃಧ್ರಮಹಾಗ್ರಾಹಾಂ ನೈಕಾಯುಧಝಷಾಕುಲಾಂ।
07131120c ರಥಕ್ಷಿಪ್ತಮಹಾವಪ್ರಾಂ ಪತಾಕಾರುಚಿರದ್ರುಮಾಂ।।
07131121a ಶರಮೀನಾಂ ಮಹಾರೌದ್ರಾಂ ಪ್ರಾಸಶಕ್ತ್ಯುಗ್ರಡುಂಡುಭಾಂ।
07131121c ಮಜ್ಜಾಮಾಂಸಮಹಾಪಂಕಾಂ ಕಬಂಧಾವರ್ಜಿತೋಡುಪಾಂ।।
07131122a ಕೇಶಶೈವಲಕಲ್ಮಾಷಾಂ ಭೀರೂಣಾಂ ಕಶ್ಮಲಾವಹಾಂ।
07131122c ನಾಗೇಂದ್ರಹಯಯೋಧಾನಾಂ ಶರೀರವ್ಯಯಸಂಭವಾಂ।।
07131123a ಶೋಣಿತೌಘಮಹಾವೇಗಾಂ ದ್ರೌಣಿಃ ಪ್ರಾವರ್ತಯನ್ನದೀಂ।
07131123c ಯೋಧಾರ್ತರವನಿರ್ಘೋಷಾಂ ಕ್ಷತಜೋರ್ಮಿಸಮಾಕುಲಾಂ।।
07131124a ಪ್ರಾಯಾದತಿಮಹಾಘೋರಂ ಯಮಕ್ಷಯಮಹೋದಧಿಂ।

ದ್ರೌಣಿಯು ಯಮಕ್ಷಯದ ಸಾಗರದಂತಿರುವ, ಮಹಾವೇಗವಾಗಿ ಹರಿಯುತ್ತಿರುವ ಮಹಾಘೋರ ರಕ್ತದ ನದಿಯನ್ನೇ ನಿರ್ಮಿಸಿದನು. ರಾಶಿರಾಶಿಯಾಗಿ ಬಿದ್ದಿರುವ ಧ್ವಜಗಳೇ ಆ ನದಿಯ ಕಪ್ಪೆಗಳಂತಿದ್ದವು. ಒಡೆದುಹೋಗಿದ್ದ ಭೇರಿಗಳು ಆಮೆಗಳಂತಿದ್ದವು. ತುಂಡಾಗಿ ಬಿದ್ದಿದ್ದ ಚತ್ರಗಳು ಹಂಸಗಳ ಸಾಲಿನಂತಿದ್ದವು. ಚಾಮರಗಳ ಮಾಲೆಗಳು ನೊರೆಗಳಿಂತಿದ್ದವು. ಹದ್ದು-ರಣಹದ್ದುಗಳು ಮೊಸಳೆಗಳಂತಿದ್ದವು. ಅನೇಕ ಆಯುಧ-ಶರಗಳು ಮೀನುಗಳಂತಿದ್ದವು. ಪ್ರಾಸ-ಶಕ್ತಿಗಳು ಉಗ್ರ ಡುಂಡುಭಗಳಂತಿದ್ದವು. ಮಜ್ಜೆ-ಮಾಂಸಗಳು ನದಿಯ ಕೆಸರಿನಂತಿದ್ದವು. ತೇಲಿಹೋಗುತ್ತಿದ್ದ ಕಬಂಧಗಳು ದೋಣಿಗಳಂತೆ ತೋರುತ್ತಿದ್ದವು. ತಲೆಗೂದಲುಗಳೇ ಪಾಚಿಯಂತಿದ್ದ ಆ ನದಿಯು ಹೇಡಿಗಳಿಗೆ ಭಯವನ್ನುಂಟುಮಾಡುವಂತಹುದಾಗಿತ್ತು. ಅಪಾರ ಸಂಖ್ಯೆಗಳಲ್ಲಿ ಗಜಾಶ್ವಯೋಧರ ಹನನದಿಂದ ಉದ್ಭವವಾದ ಆ ನದಿಯಲ್ಲಿ ಯೋಧರ ಆರ್ತಸ್ವರಗಳೇ ಕಲಕಲ ಶಬ್ಧದಂತೆ ಕೇಳಿಬರುತ್ತಿದ್ದವು. ಗಾಯಗೊಂಡವರ ಶರೀರಗಳಿಂದ ಸೋರುವ ರಕ್ತವೇ ಆ ನದಿಯ ಅಲೆಗಳಂತಿತ್ತು.

07131124c ನಿಹತ್ಯ ರಾಕ್ಷಸಾನ್ಬಾಣೈರ್ದ್ರೌಣಿರ್ಹೈಡಿಂಬಮಾರ್ದಯತ್।।
07131125a ಪುನರಪ್ಯತಿಸಂಕ್ರುದ್ಧಃ ಸವೃಕೋದರಪಾರ್ಷತಾನ್।
07131125c ಸ ನಾರಾಚಗಣೈಃ ಪಾರ್ಥಾನ್ದ್ರೌಣಿರ್ವಿದ್ಧ್ವಾ ಮಹಾಬಲಃ।।

ಬಾಣಗಳಿಂದ ರಾಕ್ಷಸರನ್ನು ಸಂಹರಿಸಿ ದ್ರೌಣಿಯು ಹೈಡಿಂಬಿಯನ್ನು ಗಾಯಗೊಳಿಸಿದನು. ಪುನಃ ಅತಿ ಸಂಕ್ರುದ್ಧನಾಗಿ ಮಹಾಬಲ ದ್ರೌಣಿಯು ನಾರಾಚ ಗಣಗಳಿಂದ ವೃಕೋದರ-ಪಾರ್ಷತರೊಂದಿಗೆ ಪಾರ್ಥರನ್ನು ಹೊಡೆದನು.

07131126a ಜಘಾನ ಸುರಥಂ ನಾಮ ದ್ರುಪದಸ್ಯ ಸುತಂ ವಿಭುಃ।
07131126c ಪುನಃ ಶ್ರುತಂಜಯಂ ನಾಮ ಸುರಥಸ್ಯಾನುಜಂ ರಣೇ।।

ಆ ವಿಭುವು ಸುರಥನೆಂಬ ಹೆಸರಿನ ದ್ರುಪದನ ಮಗನನ್ನು ಸಂಹರಿಸಿದನು ಮತ್ತು ಪುನಃ ಶ್ರುತಂಜಯನೆಂಬ ಹೆಸರಿನ ಸುರಥನ ಅನುಜನನ್ನೂ ರಣದಲ್ಲಿ ಸಂಹರಿಸಿದನು.

07131127a ಬಲಾನೀಕಂ ಜಯಾನೀಕಂ ಜಯಾಶ್ವಂ ಚಾಭಿಜಘ್ನಿವಾನ್।
07131127c ಶ್ರುತಾಹ್ವಯಂ ಚ ರಾಜೇಂದ್ರ ದ್ರೌಣಿರ್ನಿನ್ಯೇ ಯಮಕ್ಷಯಂ।।

ರಾಜೇಂದ್ರ! ದ್ರೌಣಿಯು ಬಲಾನೀಕ, ಜಯಾನೀಕ, ಜಯ, ಶ್ರುತಾಹ್ವಯರನ್ನು ಸಂಹರಿಸಿ ಯಮಕ್ಷಯಕ್ಕೆ ಕಳುಹಿಸಿದನು.

07131128a ತ್ರಿಭಿಶ್ಚಾನ್ಯೈಃ ಶರೈಸ್ತೀಕ್ಷ್ಣೈಃ ಸುಪುಂಖೈ ರುಕ್ಮಮಾಲಿನಂ।
07131128c ಶತ್ರುಂಜಯಂ ಚ ಬಲಿನಂ ಶಕ್ರಲೋಕಂ ನಿನಾಯ ಹ।।

ಪುಂಖಗಳಿರುವ ಅನ್ಯ ಮೂರು ತೀಕ್ಷ್ಣ ಬಾಣಗಳಿಂದ ಅವನು ಬಲಶಾಲಿ ಶತ್ರುಂಜಯನನ್ನೂ ರುಕ್ಮಮಾಲಿನಿಯನ್ನೂ ಶಕ್ರಲೋಕಕ್ಕೆ ಕಳುಹಿಸಿದನು.

07131129a ಜಘಾನ ಸ ಪೃಷಧ್ರಂ ಚ ಚಂದ್ರದೇವಂ ಚ ಮಾನಿನಂ।
07131129c ಕುಂತಿಭೋಜಸುತಾಂಶ್ಚಾಜೌ ದಶಭಿರ್ದಶ ಜಘ್ನಿವಾನ್।।

ಅವನು ಪೃಷಧ್ರ ಮತ್ತು ಮಾನಿನಿ ಚಂದ್ರದೇವರನ್ನು ಕೂಡ ಸಂಹರಿಸಿದನು. ಕುಂತಿಭೋಜನ ಹತ್ತು ಮಕ್ಕಳನ್ನೂ ಹತ್ತು ಬಾಣಗಳಿಂದ ಸಂಹರಿಸಿದನು.

07131130a ಅಶ್ವತ್ಥಾಮಾ ಸುಸಂಕ್ರುದ್ಧಃ ಸಂಧಾಯೋಗ್ರಮಜಿಹ್ಮಗಂ।
07131130c ಮುಮೋಚಾಕರ್ಣಪೂರ್ಣೇನ ಧನುಷಾ ಶರಮುತ್ತಮಂ।
07131130e ಯಮದಂಡೋಪಮಂ ಘೋರಮುದ್ದಿಶ್ಯಾಶು ಘಟೋತ್ಕಚಂ।।

ಆಗ ಅಶ್ವತ್ಥಾಮನು ಸಂಕ್ರುದ್ಧನಾಗಿ ಉಗ್ರ ಜಿಹ್ಮಗವೊಂದನ್ನು ಹೂಡಿ ಧನುಸ್ಸನ್ನು ಆಕರ್ಣಪರ್ಯಂತವಾಗಿ ಎಳೆದು ಘೋರ ಯಮದಂಡದಂತಿದ್ದ ಆ ಉತ್ತಮ ಶರವನ್ನು ಘಟೋತ್ಕಚನಿಗೆ ಗುರಿಯಿಟ್ಟು ಪ್ರಯೋಗಿಸಿದನು.

07131131a ಸ ಭಿತ್ತ್ವಾ ಹೃದಯಂ ತಸ್ಯ ರಾಕ್ಷಸಸ್ಯ ಮಹಾಶರಃ।
07131131c ವಿವೇಶ ವಸುಧಾಂ ಶೀಘ್ರಂ ಸಪುಂಖಃ ಪೃಥಿವೀಪತೇ।।

ಪೃಥಿವೀಪತೇ! ಸುಂದರ ಪುಂಖಗಳುಳ್ಳ ಆ ಮಹಾಶರವು ರಾಕ್ಷಸನ ಹೃದಯವನ್ನು ಭೇದಿಸಿ ಶೀಘ್ರವಾಗಿ ನೆಲವನ್ನು ಹೊಕ್ಕಿತು.

07131132a ತಂ ಹತಂ ಪತಿತಂ ಜ್ಞಾತ್ವಾ ಧೃಷ್ಟದ್ಯುಮ್ನೋ ಮಹಾರಥಃ।
07131132c ದ್ರೌಣೇಃ ಸಕಾಶಾದ್ರಾಜೇಂದ್ರ ಅಪನಿನ್ಯೇ ರಥಾಂತರಂ।।

ರಾಜೇಂದ್ರ! ಅದರಿಂದ ಘಟೋತ್ಕಚನು ಹತನಾಗಿ ಬಿದ್ದನೆಂದೇ ತಿಳಿದ ಮಹಾರಥ ಧೃಷ್ಟದ್ಯುಮ್ನನು ತನ್ನ ರಥವನ್ನು ದ್ರೌಣಿಯಿಂದ ದೂರಕ್ಕೆ ಕೊಂಡೊಯ್ದನು.

07131133a ತಥಾ ಪರಾಙ್ಮಖರಥಂ ಸೈನ್ಯಂ ಯೌಧಿಷ್ಠಿರಂ ನೃಪ।
07131133c ಪರಾಜಿತ್ಯ ರಣೇ ವೀರೋ ದ್ರೋಣಪುತ್ರೋ ನನಾದ ಹ।
07131133e ಪೂಜಿತಃ ಸರ್ವಭೂತೈಶ್ಚ ತವ ಪುತ್ರೈಶ್ಚ ಭಾರತ।।

ನೃಪ! ಭಾರತ! ಹಾಗೆ ರಣದಲ್ಲಿ ಯುಧಿಷ್ಠಿರನ ಸೇನೆಯ ಮುಖ್ಯರಥರನ್ನು ಪರಾಜಯಗೊಳಿಸಿ ಪರಾಙ್ಮುಖಗೊಳಿಸಿ ವೀರ ದ್ರೋಣಪುತ್ರನು ಸಿಂಹನಾದಗೈದನು. ನಿನ್ನ ಪುತ್ರರಿಂದಲೂ ಸರ್ವಭೂತಗಳಿಂದಲೂ ಗೌರವಿಸಲ್ಪಟ್ಟನು.

07131134a ಅಥ ಶರಶತಭಿನ್ನಕೃತ್ತದೇಹೈರ್ ಹತಪತಿತೈಃ ಕ್ಷಣದಾಚರೈಃ ಸಮಂತಾತ್।
07131134c ನಿಧನಮುಪಗತೈರ್ಮಹೀ ಕೃತಾಭೂದ್ ಗಿರಿಶಿಖರೈರಿವ ದುರ್ಗಮಾತಿರೌದ್ರಾ।।

ಹಾಗೆ ನೂರಾರು ಬಾಣಗಳಿಂದ ಕತ್ತರಿಸಲ್ಪಟ್ಟ ದೇಹಗಳಿಂದ, ಹತರಾಗಿ ಎಲ್ಲೆಡೆಯೂ ಬಿದ್ದಿದ್ದ, ರಾಕ್ಷಸರಿಂದ ನಿಬಿಡವಾಗಿದ್ದ ರಣಭೂಮಿಯು ಪರ್ವತ ಶಿಖರಗಳಿಂದ ವ್ಯಾಪ್ತವಾಗಿರುವಂತೆ ಅತಿದುರ್ಗಮವಾಗಿಯೂ ರೌದ್ರವಾಗಿಯೂ ಕಾಣುತ್ತಿತ್ತು.

07131135a ತಂ ಸಿದ್ಧಗಂಧರ್ವಪಿಶಾಚಸಂಘಾ ನಾಗಾಃ ಸುಪರ್ಣಾಃ ಪಿತರೋ ವಯಾಂಸಿ।
07131135c ರಕ್ಷೋಗಣಾ ಭೂತಗಣಾಶ್ಚ ದ್ರೌಣಿಂ ಅಪೂಜಯನ್ನಪ್ಸರಸಃ ಸುರಾಶ್ಚ।।

ಆ ದ್ರೌಣಿಯನ್ನು ಸಿದ್ಧ-ಗಂಧರ್ವ-ಪಿಶಾಚ ಗಣಗಳೂ, ನಾಗ-ಸುಪರ್ಣ-ಪಿತೃದೇವ-ಪಕ್ಷಿಗಣಗಳೂ, ರಾಕ್ಷಸ-ಭೂತಗಣಗಳೂ, ಅಪ್ಸರೆಯರೂ, ಸುರರೂ ಪ್ರಶಂಸಿಸಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಏಕತ್ರಿಂಶಾಧಿಕಶತತಮೋಽಧ್ಯಾಯಃ ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚ ವಧ ಪರ್ವದಲ್ಲಿ ರಾತ್ರಿಯುದ್ಧ ಎನ್ನುವ ನೂರಾಮೂವತ್ತೊಂದನೇ ಅಧ್ಯಾಯವು.