130 ರಾತ್ರಿಯುದ್ಧೇ ಭೀಮಪರಾಕ್ರಮಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಘಟೋತ್ಕಚವಧ ಪರ್ವ

ಅಧ್ಯಾಯ 130

ಸಾರ

ಧೃತರಾಷ್ಟ್ರನು ರಾತ್ರಿಯುದ್ಧದ ಕುರಿತು ಪುನಃ ಪ್ರಶ್ನಿಸಿದುದು (1-10). ದ್ರೋಣನಿಂದ ಶಿಬಿಯ ವಧೆ (11-17). ಭೀಮನು ಕಳಿಂಗ ರಾಜಕುಮಾರ, ಧ್ರುವ ಮತ್ತು ಜಯರಾತರನ್ನು ಸಂಹರಿಸಿದುದು (18-25). ಭೀಮನಿಂದ ದುರ್ಮದ-ದುಷ್ಕರ್ಣರ ಸಂಹಾರ (26-40).

07130001 ಧೃತರಾಷ್ಟ್ರ ಉವಾಚ।
07130001a ತಸ್ಮಿನ್ಪ್ರವಿಷ್ಟೇ ದುರ್ಧರ್ಷೇ ಸೃಂಜಯಾನಮಿತೌಜಸಿ।
07130001c ಅಮೃಷ್ಯಮಾಣೇ ಸಂರಬ್ಧೇ ಕಾ ವೋಽಭೂದ್ವೈ ಮತಿಸ್ತದಾ।।

ಧೃತರಾಷ್ಟ್ರನು ಹೇಳಿದನು: “ಅಸಹನಶೀಲ ಕ್ರುದ್ಧ ಅಮಿತೌಜಸ ದ್ರೋಣನು ಆ ದುರ್ಧರ್ಷ ಸೃಂಜಯರನ್ನು ಪ್ರವೇಶಿಸಿದಾಗ ನಮ್ಮವರ ಮನಸ್ಥಿತಿಯು ಹೇಗಿದ್ದಿತು?

07130002a ದುರ್ಯೋಧನಂ ತಥಾ ಪುತ್ರಮುಕ್ತ್ವಾ ಶಾಸ್ತ್ರಾತಿಗಂ ಮಮ।
07130002c ಯತ್ಪ್ರಾವಿಶದಮೇಯಾತ್ಮಾ ಕಿಂ ಪಾರ್ಥಃ ಪ್ರತ್ಯಪದ್ಯತ।।

ಶಾಸ್ತ್ರಗಳನ್ನು ಉಲ್ಲಂಘಿಸಿ ನಡೆಯುವ ನನ್ನ ಮಗ ದುರ್ಯೋಧನನೊಂದಿಗೆ ಮಾತನಾಡಿದ ಆ ಅಮೇಯಾತ್ಮನು ಸೇನೆಯನ್ನು ಪ್ರವೇಶಿಸಿದಾಗ ಪಾರ್ಥನು ಏನು ಮಾಡಿದನು?

07130003a ನಿಹತೇ ಸೈಂಧವೇ ವೀರೇ ಭೂರಿಶ್ರವಸಿ ಚೈವ ಹಿ।
07130003c ಯದಭ್ಯಗಾನ್ಮಹಾತೇಜಾಃ ಪಾಂಚಾಲಾನಪರಾಜಿತಃ।।
07130004a ಕಿಮಮನ್ಯತ ದುರ್ಧರ್ಷಃ ಪ್ರವಿಷ್ಟೇ ಶತ್ರುತಾಪನೇ।
07130004c ದುರ್ಯೋಧನಶ್ಚ ಕಿಂ ಕೃತ್ಯಂ ಪ್ರಾಪ್ತಕಾಲಮಮನ್ಯತ।।

ವೀರ ಸೈಂಧವ ಮತ್ತು ಭೂರಿಶ್ರವರು ಹತರಾಗಲು ಮಹಾತೇಜಸ್ವಿ ಪಾಂಚಾಲರನ್ನು ಆ ಅಪರಾಜಿತ ದುರ್ಧರ್ಷ ಶತ್ರುತಾಪನನು ಪ್ರವೇಶಿಸಿ ಆಕ್ರಮಿಸಲು ಆ ಸಮಯದಲ್ಲಿ ದುರ್ಯೋಧನನು ಯಾವ ಕೆಲಸವು ಉಚಿತವೆಂದು ಯೋಚಿಸಿದನು?

07130005a ಕೇ ಚ ತಂ ವರದಂ ವೀರಮನ್ವಯುರ್ದ್ವಿಜಸತ್ತಮಂ।
07130005c ಕೇ ಚಾಸ್ಯ ಪೃಷ್ಠತೋಽಗಚ್ಚನ್ವೀರಾಃ ಶೂರಸ್ಯ ಯುಧ್ಯತಃ।
07130005e ಕೇ ಪುರಸ್ತಾದಯುಧ್ಯಂತ ನಿಘ್ನತಃ ಶಾತ್ರವಾನ್ರಣೇ।।

ಆ ವರದ ವೀರ ದ್ವಿಜಸತ್ತಮನನ್ನು ಯಾರು ಅನುಸರಿಸಿದರು? ಯುದ್ಧಮಾಡುತ್ತಿರುವ ಆ ಶೂರನ ಹಿಂದಿನಿಂದ ಯಾವ ವೀರರು ಹೋದರು? ಅವನು ರಣದಲ್ಲಿ ಯುದ್ಧಮಾಡಿ ಶತ್ರುಗಳನ್ನು ಸಂಹರಿಸುತ್ತಿರುವಾಗ ಅವನ ಮುಂದೆ ಯಾರಿದ್ದರು?

07130006a ಮನ್ಯೇಽಹಂ ಪಾಂಡವಾನ್ಸರ್ವಾನ್ಭಾರದ್ವಾಜಶರಾರ್ದಿತಾನ್।
07130006c ಶಿಶಿರೇ ಕಂಪಮಾನಾ ವೈ ಕೃಶಾ ಗಾವ ಇವಾಭಿಭೋ।।

ಭಾರದ್ವಾಜನ ಶರಗಳಿಂದ ಗಾಯಗೊಂಡ ಪಾಂಡವರೆಲ್ಲರೂ ಛಳಿಗಾಲದಲ್ಲಿ ನಡುಗುವ ಬಡಕಲು ಆಕಳುಗಳಂತೆ ತೋರುತ್ತಿದ್ದಿರಬಹುದಲ್ಲವೇ?

07130007a ಪ್ರವಿಶ್ಯ ಸ ಮಹೇಷ್ವಾಸಃ ಪಾಂಚಾಲಾನರಿಮರ್ದನಃ।
07130007c ಕಥಂ ನು ಪುರುಷವ್ಯಾಘ್ರಃ ಪಂಚತ್ವಮುಪಜಗ್ಮಿವಾನ್।।

ಪಾಂಚಾಲರನ್ನು ಪ್ರವೇಶಿಸಿ ಆ ಮಹೇಷ್ವಾಸ, ಪುರುಷವ್ಯಾಘ್ರ, ಅರಿಮರ್ದನನು ಹೇಗೆ ಪಂಚತ್ವವನ್ನು ಹೊಂದಿದನು?

07130008a ಸರ್ವೇಷು ಸೈನ್ಯೇಷು ಚ ಸಂಗತೇಷು ರಾತ್ರೌ ಸಮೇತೇಷು ಮಹಾರಥೇಷು।
07130008c ಸಂಲೋಡ್ಯಮಾನೇಷು ಪೃಥಗ್ವಿಧೇಷು ಕೇ ವಸ್ತದಾನೀಂ ಮತಿಮಂತ ಆಸನ್।।

ಆ ರಾತ್ರಿ ಎಲ್ಲಸೇನೆಗಳೂ ಸೇರಿರಲು, ಮಹಾರಥರು ಒಟ್ಟಾಗಿರಲು, ಭೂಮಿ-ಆಕಾಶಗಳನ್ನು ಅಲ್ಲಾಡಿಸುತ್ತಿರಲು ನಮ್ಮವರಲ್ಲಿ ಅತಿ ಬುದ್ಧಿವಂತನಾದವನು ಯಾರಿದ್ದನು?

07130009a ಹತಾಂಶ್ಚೈವ ವಿಷಕ್ತಾಂಶ್ಚ ಪರಾಭೂತಾಂಶ್ಚ ಶಂಸಸಿ।
07130009c ರಥಿನೋ ವಿರಥಾಂಶ್ಚೈವ ಕೃತಾನ್ಯುದ್ಧೇಷು ಮಾಮಕಾನ್।।

ಯುದ್ಧ ಮಾಡುತ್ತಿರುವ ನನ್ನವರಾದ ಮಹಾರಥರು “ಹತರಾದರು!” “ಪರಾಜಿತರಾದರು!” “ಶಕ್ತಿಯನ್ನು ಕಳೆದುಕೊಂಡರು!” “ವಿರಥರಾದರು!” ಎಂದು ಹೇಳಿಕೊಂಡೇ ಇದ್ದೀಯೆ!

07130010a ಕಥಮೇಷಾಂ ತದಾ ತತ್ರ ಪಾರ್ಥಾನಾಮಪಲಾಯಿನಾಂ।
07130010c ಪ್ರಕಾಶಮಭವದ್ರಾತ್ರೌ ಕಥಂ ಕುರುಷು ಸಂಜಯ।।

ಸಂಜಯ! ಪಲಾಯನ ಮಾಡದೇ ಇದ್ದ ಪಾರ್ಥರಿಗೆ ಮತ್ತು ಕುರುಗಳಿಗೆ ಆ ರಾತ್ರಿ ಅಲ್ಲಿ ಬೆಳಕು ಹೇಗೆ ಉಂಟಾಯಿತು?”

07130011 ಸಂಜಯ ಉವಾಚ।
07130011a ರಾತ್ರಿಯುದ್ಧೇ ತದಾ ರಾಜನ್ವರ್ತಮಾನೇ ಸುದಾರುಣೇ।
07130011c ದ್ರೋಣಮಭ್ಯದ್ರವನ್ರಾತ್ರೌ ಪಾಂಡವಾಃ ಸಹಸೈನಿಕಾಃ।।

ಸಂಜಯನು ಹೇಳಿದನು: “ರಾಜನ್! ಆ ಸುದಾರುಣ ರಾತ್ರಿಯುದ್ಧವು ನಡೆಯುತ್ತಿರಲು ಸೈನಿಕರೊಂದಿಗೆ ಪಾಂಡವರು ದ್ರೋಣನನ್ನು ಆಕ್ರಮಣಿಸಿದರು.

07130012a ತತೋ ದ್ರೋಣಃ ಕೇಕಯಾಂಶ್ಚ ಧೃಷ್ಟದ್ಯುಮ್ನಸ್ಯ ಚಾತ್ಮಜಾನ್।
07130012c ಪ್ರೇಷಯನ್ಮೃತ್ಯುಲೋಕಾಯ ಸರ್ವಾನಿಷುಭಿರಾಶುಗೈಃ।।

ಆಗ ದ್ರೋಣನು ಕೇಕಯರನ್ನೂ, ಧೃಷ್ಟದ್ಯುಮ್ನನ ಎಲ್ಲ ಮಕ್ಕಳನ್ನೂ ಆಶುಗಗಳಿಂದ ಮೃತ್ಯುಲೋಕಕ್ಕೆ ಕಳುಹಿಸಿದನು.

07130013a ತಸ್ಯ ಪ್ರಮುಖತೋ ರಾಜನ್ಯೇಽವರ್ತಂತ ಮಹಾರಥಾಃ।
07130013c ತಾನ್ಸರ್ವಾನ್ಪ್ರೇಷಯಾಮಾಸ ಪರಲೋಕಾಯ ಭಾರತ।।

ರಾಜನ್! ಭಾರತ! ಅವನ ಎದುರಾದ ಎಲ್ಲ ಮಹಾರಥರನ್ನೂ ಅವನು ಪರಲೋಕಕ್ಕೆ ಕಳುಹಿಸಿದನು.

07130014a ಪ್ರಮಥ್ನಂತಂ ತದಾ ವೀರಂ ಭಾರದ್ವಾಜಂ ಮಹಾರಥಂ।
07130014c ಅಭ್ಯವರ್ತತ ಸಂಕ್ರುದ್ಧಃ ಶಿಬೀ ರಾಜನ್ಪ್ರತಾಪವಾನ್।।

ರಾಜನ್! ಆಗ ಸಂಕ್ರುದ್ಧ ಪ್ರತಾಪವಾನ ಶಿಬಿಯು ವೀರ ಮಹಾರಥ ಭಾರದ್ವಾಜನ ಮೇಲೆ ದಾಳಿ ಮಾಡಿದನು.

07130015a ತಮಾಪತಂತಂ ಸಂಪ್ರೇಕ್ಷ್ಯ ಪಾಂಡವಾನಾಂ ಮಹಾರಥಂ।
07130015c ವಿವ್ಯಾಧ ದಶಭಿರ್ದ್ರೋಣಃ ಸರ್ವಪಾರಶವೈಃ ಶರೈಃ।।

ಪಾಂಡವರ ಮಹಾರಥನು ತನ್ನ ಮೇಲೆ ಆಕ್ರಮಣ ಮಾಡುತ್ತಿರುವನ್ನು ನೋಡಿ ದ್ರೋಣನು ಹತ್ತು ಲೋಹಮಯ ಬಾಣಗಳಿಂದ ಅವನನ್ನು ಹೊಡೆದನು.

07130016a ತಂ ಶಿಬಿಃ ಪ್ರತಿವಿವ್ಯಾಧ ತ್ರಿಂಶತಾ ನಿಶಿತೈಃ ಶರೈಃ।
07130016c ಸಾರಥಿಂ ಚಾಸ್ಯ ಭಲ್ಲೇನ ಸ್ಮಯಮಾನೋ ನ್ಯಪಾತಯತ್।।

ಆಗ ಶಿಬಿಯು ನಸುನಗುತ್ತಾ ಮೂವತ್ತು ನಿಶಿತ ಶರಗಳಿಂದ ಅವನನ್ನು ಹೊಡೆದು, ಭಲ್ಲದಿಂದ ಸಾರಥಿಯನ್ನು ರಥದಿಂದ ಉರುಳಿಸಿದನು.

07130017a ತಸ್ಯ ದ್ರೋಣೋ ಹಯಾನ್ ಹತ್ವಾ ಸಾರಥಿಂ ಚ ಮಹಾತ್ಮನಃ।
07130017c ಅಥಾಸ್ಯ ಸಶಿರಸ್ತ್ರಾಣಂ ಶಿರಃ ಕಾಯಾದಪಾಹರತ್।।

ಮಹಾತ್ಮ ದ್ರೋಣನು ಅವನ ಕುದುರೆಗಳನ್ನೂ ಸಾರಥಿಯನ್ನೂ ಸಂಹರಿಸಿ ಕಿರೀಟದೊಂದಿಗಿನ ಅವನ ಶಿರವನ್ನು ಕಾಯದಿಂದ ಬೇರ್ಪಡಿಸಿದನು.

07130018a ಕಲಿಂಗಾನಾಂ ಚ ಸೈನ್ಯೇನ ಕಲಿಂಗಸ್ಯ ಸುತೋ ರಣೇ।
07130018c ಪೂರ್ವಂ ಪಿತೃವಧಾತ್ಕ್ರುದ್ಧೋ ಭೀಮಸೇನಮುಪಾದ್ರವತ್।।

ಹಿಂದೆ ತಂದೆಯನ್ನು ಸಂಹರಿಸಿದುದರಿಂದ ಭೀಮಸೇನನ ಮೇಲೆ ಕ್ರುದ್ಧನಾದ ಕಲಿಂಗನ ಮಗನು ಕಲಿಂಗರ ಸೇನೆಯೊಂದಿಗೆ ರಣದಲ್ಲಿ ಭೀಮಸೇನನನ್ನು ಆಕ್ರಮಣಿಸಿದನು.

07130019a ಸ ಭೀಮಂ ಪಂಚಭಿರ್ವಿದ್ಧ್ವಾ ಪುನರ್ವಿವ್ಯಾಧ ಸಪ್ತಭಿಃ।
07130019c ವಿಶೋಕಂ ತ್ರಿಭಿರಾಜಘ್ನೇ ಧ್ವಜಮೇಕೇನ ಪತ್ರಿಣಾ।।

ಅವನು ಭೀಮನನ್ನು ಮೊದಲು ಐದರಿಂದ ಮತ್ತು ಪುನಃ ಏಳರಿಂದ ಹೊಡೆದು ಸಾರಥಿ ವಿಶೋಕನನ್ನು ಮೂರರಿಂದಲೂ ಒಂದು ಪತ್ರಿಯಿಂದ ಧ್ವಜವನ್ನೂ ಹೊಡೆದನು.

07130020a ಕಲಿಂಗಾನಾಂ ತು ತಂ ಶೂರಂ ಕ್ರುದ್ಧಂ ಕ್ರುದ್ಧೋ ವೃಕೋದರಃ।
07130020c ರಥಾದ್ರಥಮಭಿದ್ರುತ್ಯ ಮುಷ್ಟಿನಾಭಿಜಘಾನ ಹ।।

ಕಲಿಂಗರ ಆ ಕ್ರುದ್ಧ ಶೂರನನ್ನು ಕ್ರುದ್ಧ ವೃಕೋದರನು ಅವನ ರಥಕ್ಕೆ ಹಾರಿ ಮುಷ್ಟಿಯಿಂದಲೇ ಗುದ್ದಿ ಸಂಹರಿಸಿದನು.

07130021a ತಸ್ಯ ಮುಷ್ಟಿಹತಸ್ಯಾಜೌ ಪಾಂಡವೇನ ಬಲೀಯಸಾ।
07130021c ಸರ್ವಾಣ್ಯಸ್ಥೀನಿ ಸಹಸಾ ಪ್ರಾಪತನ್ವೈ ಪೃಥಕ್ ಪೃಥಕ್।।

ಬಲಿಷ್ಟ ಭೀಮಸೇನನ ಮುಷ್ಟಿಯಿಂದ ಹತನಾದ ಅವನ ಎಲ್ಲ ಮೂಳೆಗಳೂ ಚೂರಾಗಿ ಪ್ರತ್ಯೇಕ ಪ್ರತ್ಯೇಕವಾಗಿ ಕೆಳಗೆ ಬಿದ್ದವು.

07130022a ತಂ ಕರ್ಣೋ ಭ್ರಾತರಶ್ಚಾಸ್ಯ ನಾಮೃಷ್ಯಂತ ಮಹಾರಥಾಃ।
07130022c ತೇ ಭೀಮಸೇನಂ ನಾರಾಚೈರ್ಜಘ್ನುರಾಶೀವಿಷೋಪಮೈಃ।।

ಆ ಕೃತ್ಯವನ್ನು ಮಹಾರಥ ಕರ್ಣನೂ ಕಳಿಂಗನ ಸಹೋದರರೂ ಸಹಿಸಿಕೊಳ್ಳಲಿಲ್ಲ. ಅವರು ಭೀಮಸೇನನನ್ನು ಸರ್ಪಗಳಂತಿದ್ದ ನಾರಾಚಗಳಿಂದ ಪ್ರಹರಿಸಿದರು.

07130023a ತತಃ ಶತ್ರುರಥಂ ತ್ಯಕ್ತ್ವಾ ಭೀಮೋ ಧ್ರುವರಥಂ ಗತಃ।
07130023c ಧ್ರುವಂ ಚಾಸ್ಯಂತಮನಿಶಂ ಮುಷ್ಟಿನಾ ಸಮಪೋಥಯತ್।
07130023e ಸ ತಥಾ ಪಾಂಡುಪುತ್ರೇಣ ಬಲಿನಾ ನಿಹತೋಽಪತತ್।।

ಆಗ ಭೀಮನು ಶತ್ರುವಿನ ರಥವನ್ನು ಬಿಟ್ಟು ಧ್ರುವನ ರಥಕ್ಕೆ ಹಾರಿ ಒಂದೇ ಸಮನೆ ಬಾಣಗಳನ್ನು ಬಿಡುತ್ತಿದ್ದ ಧ್ರುವನನ್ನು ಕೂಡ ಮುಷ್ಟಿಯಿಂದ ಜಜ್ಜಿದನು. ಬಲಶಾಲಿ ಪಾಂಡುಪುತ್ರನ ಪೆಟ್ಟಿಗೆ ಸಿಲುಕಿದ ಅವನು ಕೂಡ ಹತನಾದನು.

07130024a ತಂ ನಿಹತ್ಯ ಮಹಾರಾಜ ಭೀಮಸೇನೋ ಮಹಾಬಲಃ।
07130024c ಜಯರಾತರಥಂ ಪ್ರಾಪ್ಯ ಮುಹುಃ ಸಿಂಹ ಇವಾನದತ್।।

ಮಹಾರಾಜ! ಅವನನ್ನು ಸಂಹರಿಸಿ ಮಹಾಬಲ ಭೀಮಸೇನನು ಜಯರಾತನ ರಥಕ್ಕೆ ಹಾರಿ ಸಿಂಹನಾದಗೈದನು.

07130025a ಜಯರಾತಮಥಾಕ್ಷಿಪ್ಯ ನದನ್ಸವ್ಯೇನ ಪಾಣಿನಾ।
07130025c ತಲೇನ ನಾಶಯಾಮಾಸ ಕರ್ಣಸ್ಯೈವಾಗ್ರತಃ ಸ್ಥಿತಂ।।

ಆಗ ಜಯರಾತನ ತಲೆಯನ್ನು ಎಡಗೈಯಿಂದ ಹಿಡಿದುಕೊಂಡು ಬಲಗೈಯಿಂದ ಅವನನ್ನು ಪ್ರಹರಿಸಿ ಕೊಂದು ಕರ್ಣನ ಎದುರೇ ಹೋಗಿ ನಿಂತುಕೊಂಡನು.

07130026a ಕರ್ಣಸ್ತು ಪಾಂಡವೇ ಶಕ್ತಿಂ ಕಾಂಚನೀಂ ಸಮವಾಸೃಜತ್।
07130026c ತತಸ್ತಾಮೇವ ಜಗ್ರಾಹ ಪ್ರಹಸನ್ಪಾಂಡುನಂದನಃ।।

ಕರ್ಣನಾದರೋ ಸುವರ್ಣಮಯ ಶಕ್ತ್ಯಾಯುಧವನ್ನು ಪಾಂಡವನ ಮೇಲೆ ಪ್ರಯೋಗಿಸಿದನು. ಅದನ್ನು ಕೂಡ ಪಾಂಡುನಂದನನು ನಸುನಗುತ್ತಾ ಹಿಡಿದುಕೊಂಡನು.

07130027a ಕರ್ಣಾಯೈವ ಚ ದುರ್ಧರ್ಷಶ್ಚಿಕ್ಷೇಪಾಜೌ ವೃಕೋದರಃ।
07130027c ತಾಮಂತರಿಕ್ಷೇ ಚಿಚ್ಚೇದ ಶಕುನಿಸ್ತೈಲಪಾಯಿನಾ।।

ಅದನ್ನೇ ದುರ್ಧರ್ಷ ವೃಕೋದರನು ಕರ್ಣನ ಮೇಲೆ ಎಸೆಯಲು ಪಲಾಯನಮಾಡದಿರುವ ಶಕುನಿಯು ಅದನ್ನು ಅಂತರಿಕ್ಷದಲ್ಲಿಯೇ ತುಂಡರಿಸಿದನು.

07130028a ತತಸ್ತವ ಸುತಾ ರಾಜನ್ಭೀಮಸ್ಯ ರಥಮಾವ್ರಜನ್।
07130028c ಮಹತಾ ಶರವರ್ಷೇಣ ಚಾದಯಂತೋ ವೃಕೋದರಂ।।

ರಾಜನ್! ಆಗ ನಿನ್ನ ಮಕ್ಕಳು ಭೀಮನ ರಥವನ್ನು ಸುತ್ತುವರೆದು ಮಹಾ ಶರವರ್ಷಗಳಿಂದ ವೃಕೋದರನನ್ನು ಮುಚ್ಚಿದರು.

07130029a ದುರ್ಮದಸ್ಯ ತತೋ ಭೀಮಃ ಪ್ರಹಸನ್ನಿವ ಸಮ್ಯುಗೇ।
07130029c ಸಾರಥಿಂ ಚ ಹಯಾಂಶ್ಚೈವ ಶರೈರ್ನಿನ್ಯೇ ಯಮಕ್ಷಯಂ।।

ಆಗ ರಣದಲ್ಲಿ ಭೀಮನು ನಗುತ್ತಾ ದುರ್ಮದನ ಸಾರಥಿಯನ್ನೂ ಕುದುರೆಗಳನ್ನೂ ಬಾಣಗಳಿಂದ ಹೊಡೆದು ಯಮಸದನಕ್ಕೆ ಕಳುಹಿಸಿದನು.

07130029e ದುರ್ಮದಸ್ತು ತತೋ ಯಾನಂ ದುಷ್ಕರ್ಣಸ್ಯಾವಪುಪ್ಲುವೇ।।
07130030a ತಾವೇಕರಥಮಾರೂಢೌ ಭ್ರಾತರೌ ಪರತಾಪನೌ।
07130030c ಸಂಗ್ರಾಮಶಿರಸೋ ಮಧ್ಯೇ ಭೀಮಂ ದ್ವಾವಭ್ಯಧಾವತಾಂ।
07130030e ಯಥಾಂಬುಪತಿಮಿತ್ರೌ ಹಿ ತಾರಕಂ ದೈತ್ಯಸತ್ತಮಂ।।

ಆಗ ದುರ್ಮದನಾದರೋ ಹಾರಿ ದುಷ್ಕರ್ಣನ ರಥವನ್ನೇರಿದನು. ಆ ಇಬ್ಬರು ಪರತಾಪನ ಸಹೋದರರೂ ಒಂದೇ ರಥವನ್ನೇರಿ ಯುದ್ಧಭೂಮಿಯ ಮಧ್ಯದಲ್ಲಿ ಮಿತ್ರಾವರುಣರು ದೈತ್ಯಸತ್ತಮ ತಾರಕನನ್ನು ಎದುರಿಸಿ ಯುದ್ಧಮಾಡಿದಂತೆ ಭೀಮನನ್ನು ಆಕ್ರಮಣಿಸಿದರು.

07130031a ತತಸ್ತು ದುರ್ಮದಶ್ಚೈವ ದುಷ್ಕರ್ಣಶ್ಚ ತವಾತ್ಮಜೌ।
07130031c ರಥಮೇಕಂ ಸಮಾರುಹ್ಯ ಭೀಮಂ ಬಾಣೈರವಿಧ್ಯತಾಂ।।

ನಿನ್ನ ಮಕ್ಕಳಾದ ದುರ್ಮದ-ದುಷ್ಕರ್ಣರು ಒಂದೇ ರಥವನ್ನೇರಿ ಬಾಣಗಳಿಂದ ಭೀಮನನ್ನು ಪ್ರಹರಿಸಿದರು.

07130032a ತತಃ ಕರ್ಣಸ್ಯ ಮಿಷತೋ ದ್ರೌಣೇರ್ದುರ್ಯೋಧನಸ್ಯ ಚ।
07130032c ಕೃಪಸ್ಯ ಸೋಮದತ್ತಸ್ಯ ಬಾಹ್ಲೀಕಸ್ಯ ಚ ಪಾಂಡವಃ।।
07130033a ದುರ್ಮದಸ್ಯ ಚ ವೀರಸ್ಯ ದುಷ್ಕರ್ಣಸ್ಯ ಚ ತಂ ರಥಂ।
07130033c ಪಾದಪ್ರಹಾರೇಣ ಧರಾಂ ಪ್ರಾವೇಶಯದರಿಂದಮಃ।।

ಆಗ ಕರ್ಣ, ದುರ್ಯೋಧನ, ಕೃಪ, ಸೋಮದತ್ತ ಮತ್ತು ಬಾಹ್ಲೀಕರು ನೋಡುತ್ತಿದ್ದಂತೆಯೇ ಅರಿಂದಮ ಪಾಂಡವನು ವೀರ ದುರ್ಮದ-ದುಷ್ಕರ್ಣರ ಆ ರಥವನ್ನು ಕಾಲಿನಿಂದಲೇ ಒದೆದು ಭೂಮಿಗುರುಳಿಸಿದನು.

07130034a ತತಃ ಸುತೌ ತೇ ಬಲಿನೌ ಶೂರೌ ದುಷ್ಕರ್ಣದುರ್ಮದೌ।
07130034c ಮುಷ್ಟಿನಾಹತ್ಯ ಸಂಕ್ರುದ್ಧೋ ಮಮರ್ದ ಚರಣೇನ ಚ।।

ಸಂಕ್ರುದ್ಧನಾದ ಅವನು ನಿನ್ನ ಮಕ್ಕಳಾದ ಆ ಬಲಶಾಲೀ ದುಷ್ಕರ್ಣ-ದುರ್ಮದರನ್ನು ಮುಷ್ಟಿಯಿಂದ ಹೊಡೆದು ಕಾಲಿನಿಂದ ತುಳಿದು ಸಂಹರಿಸಿದನು.

07130035a ತತೋ ಹಾಹಾಕೃತೇ ಸೈನ್ಯೇ ದೃಷ್ಟ್ವಾ ಭೀಮಂ ನೃಪಾಬ್ರುವನ್।
07130035c ರುದ್ರೋಽಯಂ ಭೀಮರೂಪೇಣ ಧಾರ್ತರಾಷ್ಟ್ರೇಷು ಗೃಧ್ಯತಿ।।

ಆಗ ಭೀಮನನ್ನು ಕಂಡು ಸೈನ್ಯದಲ್ಲಿದ್ದ ನೃಪರು “ಭೀಮರೂಪದ ರುದ್ರನೇ ಧಾರ್ತರಾಷ್ಟ್ರರನ್ನು ಸಂಹರಿಸುತ್ತಿದ್ದಾನೆ!” ಎಂದು ಹೇಳಿಕೊಳ್ಳುತ್ತಾ ಹಾಹಾಕಾರಗೈದರು.

07130036a ಏವಮುಕ್ತ್ವಾಪಲಾಯಂತ ಸರ್ವೇ ಭಾರತ ಪಾರ್ಥಿವಾಃ।
07130036c ವಿಸಂಜ್ಞಾವಾಹಯನ್ವಾಹಾನ್ನ ಚ ದ್ವೌ ಸಹ ಧಾವತಃ।।

ಭಾರತ! ಹೀಗೆ ಮಾತನಾಡಿಕೊಳ್ಳುತ್ತ ಎಲ್ಲರೂ ಬುದ್ಧಿಗೆಟ್ಟವರಾಗಿ ಕಂಡ ಕಂಡ ಕಡೆಗೆ ತಮ್ಮ ವಾಹನಗಳನ್ನು ಓಡಿಸಿಕೊಂಡು ಪಲಾಯನಮಾಡಿದರು.

07130037a ತತೋ ಬಲೇ ಭೃಶಲುಲಿತೇ ನಿಶಾಮುಖೇ ಸುಪೂಜಿತೋ ನೃಪವೃಷಭೈರ್ವೃಕೋದರಃ।
07130037c ಮಹಾಬಲಃ ಕಮಲವಿಬುದ್ಧಲೋಚನೋ ಯುಧಿಷ್ಠಿರಂ ನೃಪತಿಮಪೂಜಯದ್ಬಲೀ।।

ಆಗ ರಾತ್ರಿಯ ಪ್ರಥಮ ಯಾಮದಲ್ಲಿ ನೃಪರು ವೃಕೋದರನನ್ನು ಗೌರವಿಸಿದರು. ಮಹಾಬಲ, ಕಮಲಲೋಚನ ಬಲಶಾಲೀ ಭೀಮನೂ ಕೂಡ ನೃಪತಿ ಯುಧಿಷ್ಠಿರನನ್ನು ಪೂಜಿಸಿದನು.

07130038a ತತೋ ಯಮೌ ದ್ರುಪದವಿರಾಟಕೇಕಯಾ ಯುಧಿಷ್ಠಿರಶ್ಚಾಪಿ ಪರಾಂ ಮುದಂ ಯಯುಃ।
07130038c ವೃಕೋದರಂ ಭೃಶಮಭಿಪೂಜಯಂಶ್ಚ ತೇ ಯಥಾಂಧಕೇ ಪ್ರತಿನಿಹತೇ ಹರಂ ಸುರಾಃ।।

ಆಗ ಯಮಳರೂ, ದ್ರುಪದ-ವಿರಾಟ-ಕೇಕಯರೂ ಮತ್ತು ಯುಧಿಷ್ಠಿರನೂ ಪರಮ ಸಂತೋಷಗೊಂಡರು. ಅಂಧಕನನ್ನು ಸಂಹರಿಸಿದ ಹರನನ್ನು ಸುರರು ಹೇಗೋ ಹಾಗೆ ಅವರು ವೃಕೋದರನನ್ನು ತುಂಬಾ ಗೌರವಿಸಿದರು.

07130039a ತತಃ ಸುತಾಸ್ತವ ವರುಣಾತ್ಮಜೋಪಮಾ ರುಷಾನ್ವಿತಾಃ ಸಹ ಗುರುಣಾ ಮಹಾತ್ಮನಾ।
07130039c ವೃಕೋದರಂ ಸರಥಪದಾತಿಕುಂಜರಾ ಯುಯುತ್ಸವೋ ಭೃಶಮಭಿಪರ್ಯವಾರಯನ್।।

ಆಗ ವರುಣನ ಮಕ್ಕಳ ಪರಾಕ್ರಮವುಳ್ಳ ನಿನ್ನ ಮಕ್ಕಳು ರೋಷಾನ್ವಿತರಾಗಿ ಮಹಾತ್ಮ ಗುರು ದ್ರೋಣನೊಂದಿಗೆ ರಥ-ಪದಾತಿ-ಕುಂಜರಗಳೊಂದಿಗೆ ಯುದ್ಧವನ್ನು ಮಾಡಲು ಬಯಸಿ ವೃಕೋದರನನ್ನು ಸುತ್ತುವರೆದರು.

07130040a ತತೋಽಭವತ್ತಿಮಿರಘನೈರಿವಾವೃತಂ ಮಹಾಭಯೇ ಭಯದಮತೀವ ದಾರುಣಂ।
07130040c ನಿಶಾಮುಖೇ ಬಡವೃಕಗೃಧ್ರಮೋದನಂ ಮಹಾತ್ಮನಾಂ ನೃಪವರಯುದ್ಧಮದ್ಭುತಂ।।

ಆಗ ದಟ್ಟ ಕತ್ತಲೆಯಿಂದ ಆವೃತ ರಾತ್ರಿವೇಳೆಯಲ್ಲಿ ಮಹಾಭಯಂಕರ, ಭಯದಾಯಕ, ದಾರುಣ, ತೋಳ-ಕಾಗೆ-ರಣಹದ್ದುಗಳಿಗೆ ಆನಂದದಾಯಕ ಅದ್ಭುತ ಮಹಾತ್ಮ ನೃಪವರರ ಯುದ್ಧವು ಪುನಃ ಪ್ರಾರಂಭವಾಯಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಭೀಮಪರಾಕ್ರಮೇ ತ್ರಿಂಶಾಧಿಕಶತತಮೋಽಧ್ಯಾಯಃ ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಭೀಮಪರಾಕ್ರಮ ಎನ್ನುವ ನೂರಾಮೂವತ್ತನೇ ಅಧ್ಯಾಯವು.