ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಘಟೋತ್ಕಚವಧ ಪರ್ವ
ಅಧ್ಯಾಯ 129
ಸಾರ
ದ್ರೋಣನು ಹೇಗೆ ಮೃತ್ಯುವಶನಾದನು ಎಂಬ ಧೃತರಾಷ್ಟ್ರನ ಪ್ರಶ್ನೆಗೆ ಸಂಜಯನು ಹದಿನಾಲ್ಕನೆಯ ರಾತ್ರಿಯುದ್ಧವನ್ನು ವರ್ಣಿಸುವುದು (1-35).
07129001 ಧೃತರಾಷ್ಟ್ರ ಉವಾಚ।
07129001a ಯತ್ತದಾ ಪ್ರಾವಿಶತ್ಪಾಂಡೂನಾಮಾಚಾರ್ಯಃ ಕುಪಿತೋ ವಶೀ।
07129001c ಉಕ್ತ್ವಾ ದುರ್ಯೋಧನಂ ಸಮ್ಯಂ ಮಮ ಶಾಸ್ತ್ರಾತಿಗಂ ಸುತಂ।।
07129002a ಪ್ರವಿಶ್ಯ ವಿಚರಂತಂ ಚ ರಣೇ ಶೂರಮವಸ್ಥಿತಂ।
07129002c ಕಥಂ ದ್ರೋಣಂ ಮಹೇಷ್ವಾಸಂ ಪಾಂಡವಾಃ ಪರ್ಯವಾರಯನ್।।
ಧೃತರಾಷ್ಟ್ರನು ಹೇಳಿದನು: “ಶಾಸ್ತ್ರವನ್ನು ಮೀರಿ ನಡೆಯುವ ನನ್ನ ಮಗ ದುರ್ಯೋಧನನಿಗೆ ಸಾರಿ ಹೇಳಿ ಕೋಪಾವೇಶಗೊಂಡು ಪಾಂಡವರ ಸೈನ್ಯವನ್ನು ಪ್ರವೇಶಿಸಿ ರಣದಲ್ಲಿ ಸುತ್ತಲೂ ಸಂಚರಿಸುತ್ತಿದ್ದ ಶೂರ ಮಹೇಷ್ವಾಸ ಆಚಾರ್ಯ ದ್ರೋಣನನ್ನು ಪಾಂಡವರು ಹೇಗೆ ಮುತ್ತಿಗೆ ಹಾಕಿದರು?
07129003a ಕೇಽರಕ್ಷನ್ದಕ್ಷಿಣಂ ಚಕ್ರಮಾಚಾರ್ಯಸ್ಯ ಮಹಾತ್ಮನಃ।
07129003c ಕೇ ಚೋತ್ತರಮರಕ್ಷಂತ ನಿಘ್ನತಃ ಶಾತ್ರವಾನ್ರಣೇ।।
ಮಹಾತ್ಮ ಆಚಾರ್ಯನ ಬಲ ಚಕ್ರವನ್ನು ಯಾರು ರಕ್ಷಿಸಿದರು? ರಣದಲ್ಲಿ ಶತ್ರುಗಳನ್ನು ಸಂಹರಿಸುತ್ತಿದ್ದ ಅವನ ಎಡಚಕ್ರವನ್ನು ಯಾರು ರಕ್ಷಿಸುತ್ತಿದ್ದರು?
07129004a ನೃತ್ಯನ್ಸ ರಥಮಾರ್ಗೇಷು ಸರ್ವಶಸ್ತ್ರಭೃತಾಂ ವರಃ।
07129004c ಧೂಮಕೇತುರಿವ ಕ್ರುದ್ಧಃ ಕಥಂ ಮೃತ್ಯುಮುಪೇಯಿವಾನ್।।
ರಥಮಾರ್ಗಗಳಲ್ಲಿ ನರ್ತಿಸುತ್ತಾ ಸಂಚರಿಸುತ್ತಿರುವ, ಧೂಮಕೇತುವಿನಂತೆ ಕ್ರುದ್ಧನಾಗಿದ್ದ, ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠ ದ್ರೋಣನು ಹೇಗೆ ಮೃತ್ಯುವಶನಾದನು?”
07129005 ಸಂಜಯ ಉವಾಚ।
07129005a ಸಾಯಾಹ್ನೇ ಸೈಂಧವಂ ಹತ್ವಾ ರಾಜ್ಞಾ ಪಾರ್ಥಃ ಸಮೇತ್ಯ ಚ।
07129005c ಸಾತ್ಯಕಿಶ್ಚ ಮಹೇಷ್ವಾಸೋ ದ್ರೋಣಮೇವಾಭ್ಯಧಾವತಾಂ।।
ಸಂಜಯನು ಹೇಳಿದನು: “ಸಾಯಂಕಾಲ ಸೈಂಧವನನ್ನು ಸಂಹರಿಸಿ, ರಾಜಾ ಯುಧಿಷ್ಠಿರನೊಡನೆ ಸಮಾಲೋಚನೆಗೈದು ಪಾರ್ಥ ಅರ್ಜುನ ಮತ್ತು ಮಹೇಷ್ವಾಸ ಸಾತ್ಯಕಿಯರು ದ್ರೋಣನನ್ನು ಆಕ್ರಮಿಸಿದರು.
07129006a ತಥಾ ಯುಧಿಷ್ಠಿರಸ್ತೂರ್ಣಂ ಭೀಮಸೇನಶ್ಚ ಪಾಂಡವಃ।
07129006c ಪೃಥಕ್ಚಮೂಭ್ಯಾಂ ಸಂಸಕ್ತೌ ದ್ರೋಣಮೇವಾಭ್ಯಧಾವತಾಂ।।
ಹಾಗೆಯೇ ತಡಮಾಡದೇ ಯುಧಿಷ್ಠಿರ ಮತ್ತು ಪಾಂಡವ ಭೀಮಸೇನರು ತಮ್ಮ ತಮ್ಮ ಸೇನೆಗಳಿಂದೊಡಗೂಡಿ ದ್ರೋಣನನ್ನೇ ಆಕ್ರಮಿಸಿದರು.
07129007a ತಥೈವ ನಕುಲೋ ಧೀಮಾನ್ಸಹದೇವಶ್ಚ ದುರ್ಜಯಃ।
07129007c ಧೃಷ್ಟದ್ಯುಮ್ನಃ ಶತಾನೀಕೋ ವಿರಾಟಶ್ಚ ಸಕೇಕಯಃ।
07129007e ಮತ್ಸ್ಯಾಃ ಶಾಲ್ವೇಯಸೇನಾಶ್ಚ ದ್ರೋಣಮೇವ ಯಯುರ್ಯುಧಿ।।
ಹಾಗೆಯೇ ಧೀಮಂತ ನಕುಲ, ದುರ್ಜಯ ಸಹದೇವರು ಧೃಷ್ಟದ್ಯುಮ್ನ, ಶತಾನೀಕ, ವಿರಾಟರು, ಕೇಕಯ, ಮತ್ಸ್ಯ ಮತ್ತು ಶಾಲ್ವೇಯಸೇನೆಗಳೊಂದಿಗೆ ದ್ರೋಣನನ್ನೇ ಯುದ್ಧದಲ್ಲಿ ಎದುರಿಸಿದರು.
07129008a ದ್ರುಪದಶ್ಚ ತಥಾ ರಾಜಾ ಪಾಂಚಾಲೈರಭಿರಕ್ಷಿತಃ।
07129008c ಧೃಷ್ಟದ್ಯುಮ್ನಪಿತಾ ರಾಜನ್ದ್ರೋಣಮೇವಾಭ್ಯವರ್ತತ।।
ರಾಜನ್! ಹಾಗೆಯೇ ಧೃಷ್ಟದ್ಯುಮ್ನನ ತಂದೆ ರಾಜಾ ದ್ರುಪದನೂ ಕೂಡ ಪಾಂಚಾಲ್ಯರಿಂದ ರಕ್ಷಿತನಾಗಿ ದ್ರೋಣನನ್ನೇ ಆಕ್ರಮಿಸಿದನು.
07129009a ದ್ರೌಪದೇಯಾ ಮಹೇಷ್ವಾಸಾ ರಾಕ್ಷಸಶ್ಚ ಘಟೋತ್ಕಚಃ।
07129009c ಸಸೇನಾಸ್ತೇಽಭ್ಯವರ್ತಂತ ದ್ರೋಣಮೇವ ಮಹಾದ್ಯುತಿಂ।।
ಮಹೇಷ್ವಾಸ ದ್ರೌಪದೇಯರೂ ಮತ್ತು ರಾಕ್ಷಸ ಘಟೋತ್ಕಚನೂ ಸ್ವ-ಸೇನೆಗಳೊಂದಿಗೆ ಮಹಾದ್ಯುತಿ ದ್ರೋಣನನ್ನೇ ಆಕ್ರಮಿಸಿದರು.
07129010a ಪ್ರಭದ್ರಕಾಶ್ಚ ಪಾಂಚಾಲಾಃ ಷಟ್ಸಹಸ್ರಾಃ ಪ್ರಹಾರಿಣಃ।
07129010c ದ್ರೋಣಮೇವಾಭ್ಯವರ್ತಂತ ಪುರಸ್ಕೃತ್ಯ ಶಿಖಂಡಿನಂ।।
ಶಿಖಂಡಿಯನ್ನು ಮುಂದಿರಿಸಿಕೊಂಡು ಆರುಸಾವಿರ ಪ್ರಭದ್ರಕ ಮತ್ತು ಪಾಂಚಾಲ ಪ್ರಹಾರಿಗಳು ದ್ರೋಣನನ್ನೇ ಮುತ್ತಿದರು.
07129011a ತಥೇತರೇ ನರವ್ಯಾಘ್ರಾಃ ಪಾಂಡವಾನಾಂ ಮಹಾರಥಾಃ।
07129011c ಸಹಿತಾಃ ಸಮ್ನ್ಯವರ್ತಂತ ದ್ರೋಣಮೇವ ದ್ವಿಜರ್ಷಭಂ।।
ಹಾಗೆಯೇ ಪಾಂಡವರ ಕಡೆಯ ಇತರ ನರವ್ಯಾಘ್ರ ಮಹಾರಥರೂ ಒಟ್ಟಾಗಿ ದ್ವಿಜರ್ಷಭ ದ್ರೋಣನನ್ನೇ ಸುತ್ತುವರೆದು ಯುದ್ಧಮಾಡಿದರು.
07129012a ತೇಷು ಶೂರೇಷು ಯುದ್ಧಾಯ ಗತೇಷು ಭರತರ್ಷಭ।
07129012c ಬಭೂವ ರಜನೀ ಘೋರಾ ಭೀರೂಣಾಂ ಭಯವರ್ಧಿನೀ।।
ಭರತರ್ಷಭ! ಆ ಶೂರರು ಯುದ್ಧಕ್ಕೆ ಹೋಗಲು ರಾತ್ರಿಯು ಹೇಡಿಗಳ ಭಯವನ್ನು ಹೆಚ್ಚಿಸಿ ಘೋರವಾಗಿ ಪರಿಣಮಿಸಿತು.
07129013a ಯೋಧಾನಾಮಶಿವಾ ರೌದ್ರಾ ರಾಜನ್ನಂತಕಗಾಮಿನೀ।
07129013c ಕುಂಜರಾಶ್ವಮನುಷ್ಯಾಣಾಂ ಪ್ರಾಣಾಂತಕರಣೀ ತದಾ।।
ರಾಜನ್! ಆ ರೌದ್ರ ಅಮಂಗಳಕರ ರಾತ್ರಿಯು ಯೋಧರನ್ನು ಅಂತಕನಲ್ಲಿಗೆ ಕರೆದೊಯ್ಯುತ್ತಿತ್ತು. ಆನೆ-ಕುದುರೆ-ಮನುಷ್ಯರ ಪ್ರಾಣಗಳನ್ನು ಕೊನೆಗೊಳಿಸುವಂತಿತ್ತು.
07129014a ತಸ್ಯಾಂ ರಜನ್ಯಾಂ ಘೋರಾಯಾಂ ನದಂತ್ಯಃ ಸರ್ವತಃ ಶಿವಾಃ।
07129014c ನ್ಯವೇದಯನ್ಭಯಂ ಘೋರಂ ಸಜ್ವಾಲಕವಲೈರ್ಮುಖೈಃ।।
ಆ ಘೋರ ರಾತ್ರಿಯಲ್ಲಿ ಎಲ್ಲಕಡೆ ಜ್ವಾಲೆಗಳಿಂದ ಕೂಡಿದ ಮುಖಗಳಿಂದ ನರಿಗಳು ಘೋರವಾಗಿ ಕೂಗುತ್ತಾ ಮುಂದೆಬರುವ ಮಹಾಭಯವನ್ನು ಸೂಚಿಸುತ್ತಿದ್ದವು.
07129015a ಉಲೂಕಾಶ್ಚಾಪ್ಯದೃಶ್ಯಂತ ಶಂಸಂತೋ ವಿಪುಲಂ ಭಯಂ।
07129015c ವಿಶೇಷತಃ ಕೌರವಾಣಾಂ ಧ್ವಜಿನ್ಯಾಮತಿದಾರುಣಂ।।
ಮುಂಬರುವ ವಿಪುಲ ಅತಿದಾರುಣ ಭಯವನ್ನು ಸಾರುವ ಗೂಬೆಗಳು, ವಿಶೇಷವಾಗಿ ಕೌರವರ ಧ್ವಜಗಳ ಮೇಲೆ, ಕಾಣಿಸಿಕೊಂಡವು.
07129016a ತತಃ ಸೈನ್ಯೇಷು ರಾಜೇಂದ್ರ ಶಬ್ದಃ ಸಮಭವನ್ಮಹಾನ್।
07129016c ಭೇರೀಶಬ್ದೇನ ಮಹತಾ ಮೃದಂಗಾನಾಂ ಸ್ವನೇನ ಚ।।
ರಾಜೇಂದ್ರ! ಆಗ ಸೇನೆಗಳಲ್ಲಿ ಅತಿಜೋರಾದ ಭೇರಿಶಬ್ಧಗಳಿಂದ ಮತ್ತು ಮೃದಂಗಗಳ ನಾದದಿಂದ ಮಹಾ ಶಬ್ಧವು ಉಂಟಾಯಿತು.
07129017a ಗಜಾನಾಂ ಗರ್ಜಿತೈಶ್ಚಾಪಿ ತುರಂಗಾಣಾಂ ಚ ಹೇಷಿತೈಃ।
07129017c ಖುರಶಬ್ದನಿಪಾತೈಶ್ಚ ತುಮುಲಃ ಸರ್ವತೋಽಭವತ್।।
ಎಲ್ಲಕಡೆಗಳಲ್ಲಿ ಆನೆಗಳ ಘೀಂಕಾರ, ಕುದುರೆಗಳ ಹೇಷಾರವ ಮತ್ತು ಖುರಪುಟಗಳ ತುಮುಲ ಶಬ್ಧಗಳು ತುಂಬಿಕೊಂಡವು.
07129018a ತತಃ ಸಮಭವದ್ಯುದ್ಧಂ ಸಂಧ್ಯಾಯಾಮತಿದಾರುಣಂ।
07129018c ದ್ರೋಣಸ್ಯ ಚ ಮಹಾರಾಜ ಸೃಂಜಯಾನಾಂ ಚ ಸರ್ವಶಃ।।
ಮಹಾರಾಜ! ಆ ಸಾಯಂಕಾಲ ದ್ರೋಣ ಮತ್ತು ಎಲ್ಲ ಸೃಂಜಯರ ನಡುವೆ ಅತಿದಾರುಣ ಯುದ್ಧವು ನಡೆಯಿತು.
07129019a ತಮಸಾ ಚಾವೃತೇ ಲೋಕೇ ನ ಪ್ರಾಜ್ಞಾಯತ ಕಿಂ ಚನ।
07129019c ಸೈನ್ಯೇನ ರಜಸಾ ಚೈವ ಸಮಂತಾದುತ್ಥಿತೇನ ಹ।।
ಕತ್ತಲೆಯು ಲೋಕವನ್ನು ಆವರಿಸಿದುದರಿಂದ ಮತ್ತು ಸೇನೆಗಳ ತುಳಿತದಿಂದ ಮೇಲೆದ್ದ ಧೂಳಿನಿಂದಾಗಿ ಏನಾಗುತ್ತಿದೆಯೆಂದು ತಿಳಿಯುತ್ತಲೇ ಇರಲಿಲ್ಲ.
07129020a ನರಸ್ಯಾಶ್ವಸ್ಯ ನಾಗಸ್ಯ ಸಮಸಜ್ಜತ ಶೋಣಿತಂ।
07129020c ನಾಪಶ್ಯಾಮ ರಜೋ ಭೌಮಂ ಕಶ್ಮಲೇನಾಭಿಸಂವೃತಾಃ।।
ಅಷ್ಟರಲ್ಲಿಯೇ ಸೈನಿಕರು-ಕುದುರೆಗಳು-ಆನೆಗಳು ಸುರಿಸಿದ ರಕ್ತದಿಂದಾಗಿ ಭೂಮಿಯನ್ನು ಕಶ್ಮಲಗಳಿಂದ ತುಂಬಿದ್ದ ಧೂಳೇ ಕಾಣದಂತಾಯಿತು.
07129021a ರಾತ್ರೌ ವಂಶವನಸ್ಯೇವ ದಹ್ಯಮಾನಸ್ಯ ಪರ್ವತೇ।
07129021c ಘೋರಶ್ಚಟಚಟಾಶಬ್ದಃ ಶಸ್ತ್ರಾಣಾಂ ಪತತಾಮಭೂತ್।।
ರಾತ್ರಿಯ ವೇಳೆ ಪರ್ವತದ ಮೇಲೆ ಬಿದಿರಿನ ಕಾಡು ಸುಡುವಾಗ ಕೇಳಿಬರುವ ಘೋರ ಚಟ ಚಟಾ ಶಬ್ಧದಂತೆ ಶಸ್ತ್ರಗಳು ಬೀಳುವುದರಿಂದ ಕೇಳಿಬರುತ್ತಿತ್ತು.
07129022a ನೈವ ಸ್ವೇ ನ ಪರೇ ರಾಜನ್ಪ್ರಾಜ್ಞಾಯಂತ ತಮೋವೃತೇ।
07129022c ಉನ್ಮತ್ತಮಿವ ತತ್ಸರ್ವಂ ಬಭೂವ ರಜನೀಮುಖೇ।।
ರಾಜನ್! ಆ ಕತ್ತಲೆಯಲ್ಲಿ ನಮ್ಮವರ್ಯಾರು ಶತ್ರುಗಳ್ಯಾರು ಎನ್ನುವುದೇ ತಿಳಿಯುತ್ತಿರಲಿಲ್ಲ. ರಾತ್ರಿವೇಳೆಯಲ್ಲಿ ಅವರೆಲ್ಲರೂ ಅಮಲಿನಲ್ಲಿರುವವರಂತೆ ಆಗಿದ್ದರು.
07129023a ಭೌಮಂ ರಜೋಽಥ ರಾಜೇಂದ್ರ ಶೋಣಿತೇನ ಪ್ರಶಾಮಿತಂ।
07129023c ಶಾತಕೌಂಭೈಶ್ಚ ಕವಚೈರ್ಭೂಷಣೈಶ್ಚ ತಮೋಽಭ್ಯಗಾತ್।।
ರಾಜೇಂದ್ರ! ಭೂಮಿಯ ಮೇಲೆ ಬೀಳುತ್ತಿರುವ ರಕ್ತದಿಂದಾಗಿ ಧೂಳು ಸ್ವಲ್ಪ ಉಡುಗಿದಂತಾಯಿತು. ಸುವರ್ಣಮಯ ಕವಚ-ಭೂಷಣಗಳ ಹೊಳೆತದಿಂದಾಗಿ ಕತ್ತಲೆಯೂ ದೂರವಾದಂತಾಯಿತು.
07129024a ತತಃ ಸಾ ಭಾರತೀ ಸೇನಾ ಮಣಿಹೇಮವಿಭೂಷಿತಾ।
07129024c ದ್ಯೌರಿವಾಸೀತ್ಸನಕ್ಷತ್ರಾ ರಜನ್ಯಾಂ ಭರತರ್ಷಭ।।
ಭರತರ್ಷಭ! ಆಗ ಮಣಿಹೇಮವಿಭೂಷಿತ ಭಾರತೀ ಸೇನೆಯು ನಕ್ಷತ್ರಗಳಿಂದೊಡಗೂಡಿದ ರಾತ್ರಿಯ ಆಕಾಶದಂತೆ ತೋರಿತು.
07129025a ಗೋಮಾಯುಬಡಸಂಘುಷ್ಟಾ ಶಕ್ತಿಧ್ವಜಸಮಾಕುಲಾ।
07129025c ದಾರುಣಾಭಿರುತಾ ಘೋರಾ ಕ್ಷ್ವೇಡಿತೋತ್ಕ್ರುಷ್ಟನಾದಿತಾ।।
ಶಕ್ತಿ-ಧ್ವಜಗಳಿಂದ ತುಂಬಿದ್ದ ಆ ಸೇನೆಗಳ ಪಕ್ಕದಲ್ಲಿಯೇ ಗುಳ್ಳೆನರಿಗಳ ಸಮೂಹಗಳು ಭಯಂಕರವಾಗಿ ಕಿರುಚಿಕೊಳ್ಳುತ್ತಿದ್ದವು.
07129026a ತತೋಽಭವನ್ಮಹಾಶಬ್ದಸ್ತುಮುಲೋ ಲೋಮಹರ್ಷಣಃ।
07129026c ಸಮಾವೃಣ್ವನ್ದಿಶಃ ಸರ್ವಾ ಮಹೇಂದ್ರಾಶನಿನಿಸ್ವನಃ।।
ಆಗ ಅಲ್ಲಿ ಮಹೇಂದ್ರನ ಸಿಡಿಲಿಗೆ ಸಮಾನ ರೋಮಾಂಚನಗೊಳಿಸುವ ಮಹಾ ಶಬ್ಧವು ಎಲ್ಲ ದಿಕ್ಕುಗಳಲ್ಲಿಯೂ ಪ್ರತಿಧ್ವನಿಸಿತು.
07129027a ಸಾ ನಿಶೀಥೇ ಮಹಾರಾಜ ಸೇನಾದೃಶ್ಯತ ಭಾರತೀ।
07129027c ಅಂಗದೈಃ ಕುಂಡಲೈರ್ನಿಷ್ಕೈಃ ಶಸ್ತ್ರೈಶ್ಚೈವಾವಭಾಸಿತಾ।।
ಮಹಾರಾಜ! ಆ ರಾತ್ರಿ ಭಾರತೀ ಸೇನೆಯು ಅಂಗದಗಳಿಂದ, ಕುಂಡಲಗಳಿಂದ ಮತ್ತು ಥಳಥಳಿಸುವ ಶಸ್ತ್ರಗಳಿಂದ ಪ್ರಕಾಶಮಾನವಾಗಿ ಕಾಣುತ್ತಿತ್ತು.
07129028a ತತ್ರ ನಾಗಾ ರಥಾಶ್ಚೈವ ಜಾಂಬೂನದವಿಭೂಷಿತಾಃ।
07129028c ನಿಶಾಯಾಂ ಪ್ರತ್ಯದೃಶ್ಯಂತ ಮೇಘಾ ಇವ ಸವಿದ್ಯುತಃ।।
ಅಲ್ಲಿ ಬಂಗಾರದಿಂದ ವಿಭೂಷಿತಗೊಂಡಿದ್ದ ರಥ ಮತ್ತು ಆನೆಗಳು ರಾತ್ರಿಯವೇಳೆ ಮಿಂಚಿನಿಂದೊಡಗೂಡಿದ ಕಪ್ಪು ಮೋಡಗಳಂತೆ ಕಾಣಬರುತ್ತಿದ್ದವು.
07129029a ಋಷ್ಟಿಶಕ್ತಿಗದಾಬಾಣಮುಸಲಪ್ರಾಸಪಟ್ಟಿಶಾಃ।
07129029c ಸಂಪತಂತೋ ವ್ಯದೃಶ್ಯಂತ ಭ್ರಾಜಮಾನಾ ಇವಾಗ್ನಯಃ।।
ಅಲ್ಲಿ ಮೇಲಿಂದ ಬೀಳುತ್ತಿದ್ದ ಋಷ್ಟಿ, ಶಕ್ತಿ, ಗದೆ, ಬಾಣ, ಮುಸಲ, ಪ್ರಾಸ ಮತ್ತು ಪಟ್ಟಿಶಗಳು ಉರಿಯುತ್ತಿರುವ ಅಗ್ನಿಗಳಂತೆ ಹೊಳೆಯುತ್ತಿದ್ದವು.
07129030a ದುರ್ಯೋಧನಪುರೋವಾತಾಂ ರಥನಾಗಬಲಾಹಕಾಂ।
07129030c ವಾದಿತ್ರಘೋಷಸ್ತನಿತಾಂ ಚಾಪವಿದ್ಯುದ್ಧ್ವಜೈರ್ವೃತಾಂ।।
07129031a ದ್ರೋಣಪಾಂಡವಪರ್ಜನ್ಯಾಂ ಖಡ್ಗಶಕ್ತಿಗದಾಶನಿಂ।
07129031c ಶರಧಾರಾಸ್ತ್ರಪವನಾಂ ಭೃಶಂ ಶೀತೋಷ್ಣಸಂಕುಲಾಂ।।
07129032a ಘೋರಾಂ ವಿಸ್ಮಾಪನೀಮುಗ್ರಾಂ ಜೀವಿತಚ್ಚಿದಮಪ್ಲವಾಂ।
07129032c ತಾಂ ಪ್ರಾವಿಶನ್ನತಿಭಯಾಂ ಸೇನಾಂ ಯುದ್ಧಚಿಕೀರ್ಷವಃ।।
ದುರ್ಯೋಧನನೇ ಮುಂಗಾಳಿಯಾಗಿದ್ದ, ಆನೆ-ರಥಗಳೇ ಮೋಡಗಳಾಗಿದ್ದ, ರಣವಾದ್ಯಗಳೇ ಗುಡುಗಿನಂತಿದ್ದ, ಧನುಸ್ಸು-ಧ್ವಜಗಳೇ ಮಿಂಚುಗಳಂತಿದ್ದ, ದ್ರೋಣ-ಪಾಂಡವರೇ ಪರ್ಜನ್ಯಗಳಂತಿದ್ದ, ಖಡ್ಗ-ಶಕ್ತಿ-ಗದೆಗಳೇ ಸಿಡುಲಿನಂತಿದ್ದ, ಬಾಣಗಳೇ ಜಲಧಾರೆಗಳಾಗಿದ್ದ, ಅಸ್ತ್ರಗಳೇ ಭಿರುಗಾಳಿಯಂತಿದ್ದ, ಶೀತೋಷ್ಣಸಂಕುಲವಾಗಿದ್ದ, ಘೋರವಾಗಿದ್ದ, ವಿಸ್ಮಯಕಾರಿಯಾಗಿದ್ದ, ಉಗ್ರವಾಗಿದ್ದ, ಜೀವಿತವನ್ನೇ ಅಂತ್ಯಗೊಳಿಸುವಂತಿದ್ದ, ದಾಟಲು ದೋಣಿಗಳೇ ಇಲ್ಲವಾಗಿದ್ದ ಆ ಅತಿ ಭಯಂಕರ ಸೇನೆಯನ್ನು ಯುದ್ಧಮಾಡಲು ಬಯಸಿದವರು ಪ್ರವೇಶಿಸಿದರು.
07129033a ತಸ್ಮಿನ್ರಾತ್ರಿಮುಖೇ ಘೋರೇ ಮಹಾಶಬ್ದನಿನಾದಿತೇ।
07129033c ಭೀರೂಣಾಂ ತ್ರಾಸಜನನೇ ಶೂರಾಣಾಂ ಹರ್ಷವರ್ಧನೇ।।
ಆ ರಾತ್ರಿವೇಳೆಯ ಘೋರ ಯುದ್ಧದಲ್ಲಿ ಉಂಟಾದ ಮಹಾಶಬ್ಧಗಳು ಹೇಡಿಗಳಲ್ಲಿ ಭಯವನ್ನುಂಟುಮಾಡುತ್ತಿದ್ದವು ಮತ್ತು ಶೂರರ ಸಂತೋಷವನ್ನು ಹೆಚ್ಚಿಸುತ್ತಿದ್ದವು.
07129034a ರಾತ್ರಿಯುದ್ಧೇ ತದಾ ಘೋರೇ ವರ್ತಮಾನೇ ಸುದಾರುಣೇ।
07129034c ದ್ರೋಣಮಭ್ಯದ್ರವನ್ಕ್ರುದ್ಧಾಃ ಸಹಿತಾಃ ಪಾಂಡುಸೃಂಜಯಾಃ।।
ಘೋರವಾಗಿ ನಡೆಯುತ್ತಿದ್ದ ಆ ಸುದಾರುಣ ರಾತ್ರಿಯುದ್ಧದಲ್ಲಿ ಕ್ರುದ್ಧ ಪಾಂಡು-ಸೃಂಜಯರು ಒಂದಾಗಿ ದ್ರೋಣನನ್ನು ಆಕ್ರಮಣಿಸಿದರು.
07129035a ಯೇ ಯೇ ಪ್ರಮುಖತೋ ರಾಜನ್ನ್ಯವರ್ತಂತ ಮಹಾತ್ಮನಃ।
07129035c ತಾನ್ಸರ್ವಾನ್ವಿಮುಖಾಂಶ್ಚಕ್ರೇ ಕಾಂಶ್ಚಿನ್ನಿನ್ಯೇ ಯಮಕ್ಷಯಂ।।
ರಾಜನ್! ಆ ಮಹಾತ್ಮನಾದರೋ ತನ್ನನ್ನು ಎದುರಿಸಿ ಬಂದವರನ್ನೆಲ್ಲಾ ಪಲಾಯನಗೊಳಿಸುತ್ತಿದ್ದನು. ಯಾರು ವಿಮುಖರಾಗಲಿಲ್ಲವೋ ಅವರನ್ನು ಯಮಕ್ಷಯಕ್ಕೆ ಕಳುಹಿಸುತ್ತಿದ್ದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಏಕೋನತ್ರಿಂಶಾಧಿಕಶತತಮೋಽಧ್ಯಾಯಃ ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧ ಎನ್ನುವ ನೂರಾಇಪ್ಪತ್ತೊಂಭತ್ತನೇ ಅಧ್ಯಾಯವು.