ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 127
ಸಾರ
ದುರ್ಯೋಧನನುದ ದ್ರೋಣನನ್ನು ನಿಂದಿಸಿ ಕರ್ಣನೊಡನೆ ಮಾತನಾಡಲು ಕರ್ಣನು ಅವನಿಗೆ ದ್ರೋಣನನ್ನು ನಿಂದಿಸಬೇಡ; ಜಯದ್ರಥನು ವಧಿಸಲ್ಪಟ್ಟಿದುದು ದೈವದೃಷ್ಟವು ಎನ್ನುವುದು (1-26).
07127001 ಸಂಜಯ ಉವಾಚ।
07127001a ತತೋ ದುರ್ಯೋಧನೋ ರಾಜಾ ದ್ರೋಣೇನೈವಂ ಪ್ರಚೋದಿತಃ।
07127001c ಅಮರ್ಷವಶಮಾಪನ್ನೋ ಯುದ್ಧಾಯೈವ ಮನೋ ದಧೇ।।
07127002a ಅಬ್ರವೀಚ್ಚ ತದಾ ಕರ್ಣಂ ಪುತ್ರೋ ದುರ್ಯೋಧನಸ್ತವ।
ಸಂಜಯನು ಹೇಳಿದನು: “ಆಗ ರಾಜಾ ದುರ್ಯೋಧನನು ದ್ರೋಣನಿಂದಲೇ ಪ್ರಚೋದಿತನಾಗಿ ಕೋಪಾವಿಷ್ಟನಾಗಿ ಯುದ್ಧದ ಕುರಿತೇ ಮನಸ್ಸು ಮಾಡಿದನು. ಆಗ ನಿನ್ನ ಮಗ ದುರ್ಯೋಧನನು ಕರ್ಣನಿಗೆ ಹೇಳಿದನು:
07127002c ಪಶ್ಯ ಕೃಷ್ಣಸಹಾಯೇನ ಪಾಂಡವೇನ ಕಿರೀಟಿನಾ।
07127002e ಆಚಾರ್ಯವಿಹಿತಂ ವ್ಯೂಹಂ ಭಿನ್ನಂ ದೇವೈಃ ಸುದುರ್ಭಿದಂ।।
“ಆಚಾರ್ಯರು ರಚಿಸಿದ ದೇವತೆಗಳಿಗೂ ದುರ್ಭೇದ್ಯ ವ್ಯೂಹವನ್ನೂ ಕೂಡ ಪಾಂಡವ ಕಿರೀಟಿಯು ಕೃಷ್ಣನ ಸಹಾಯದಿಂದ ಒಡೆದುದನ್ನು ನೋಡು!
07127003a ತವ ವ್ಯಾಯಚ್ಚಮಾನಸ್ಯ ದ್ರೋಣಸ್ಯ ಚ ಮಹಾತ್ಮನಃ।
07127003c ಮಿಷತಾಂ ಯೋಧಮುಖ್ಯಾನಾಂ ಸೈಂಧವೋ ವಿನಿಪಾತಿತಃ।।
ಮಹಾತ್ಮರಾದ ನೀನು ಮತ್ತು ದ್ರೋಣರು ಯುದ್ಧಮಾಡುತ್ತಿರುವಾಗ ಯೋಧಪ್ರಮುಖರು ನೋಡುತ್ತಿರುವಂತೆಯೇ ಸೈಂಧವನನ್ನು ಬೀಳಿಸಿದುದನ್ನು ನೋಡು!
07127004a ಪಶ್ಯ ರಾಧೇಯ ರಾಜಾನಃ ಪೃಥಿವ್ಯಾಂ ಪ್ರವರಾ ಯುಧಿ।
07127004c ಪಾರ್ಥೇನೈಕೇನ ನಿಹತಾಃ ಸಿಂಹೇನೇವೇತರಾ ಮೃಗಾಃ।।
ರಾಧೇಯ! ಯುದ್ಧದಲ್ಲಿ ಪೃಥ್ವಿಯ ಪ್ರಮುಖ ರಾಜರು ಪಾರ್ಥನೊಬ್ಬನಿಂದಲೇ ಸಿಂಹದಿಂದ ಇತರ ಮೃಗಗಳಂತೆ ಹತರಾಗಿರುವುದನ್ನು ನೋಡು!
07127005a ಮಮ ವ್ಯಾಯಚ್ಚಮಾನಸ್ಯ ಸಮರೇ ಶತ್ರುಸೂದನ।
07127005c ಅಲ್ಪಾವಶೇಷಂ ಸೈನ್ಯಂ ಮೇ ಕೃತಂ ಶಕ್ರಾತ್ಮಜೇನ ಹ।।
ಶತ್ರುಸೂದನ! ಸಮರದಲ್ಲಿ ನಾನೇ ಯುದ್ಧಮಾಡುತ್ತಿದ್ದರೂ ಈ ಶಕ್ರಾತ್ಮಜನು ನನ್ನ ಸೇನೆಯಲ್ಲಿ ಸ್ವಲ್ಪವೇ ಉಳಿದುಕೊಳ್ಳುವಂತೆ ಮಾಡಿಬಿಟ್ಟಿದ್ದಾನೆ!
07127006a ಕಥಂ ಹ್ಯನಿಚ್ಚಮಾನಸ್ಯ ದ್ರೋಣಸ್ಯ ಯುಧಿ ಫಲ್ಗುನಃ।
07127006c ಭಿಂದ್ಯಾತ್ಸುದುರ್ಭಿದಂ ವ್ಯೂಹಂ ಯತಮಾನೋಽಪಿ ಸಂಯುಗೇ।।
ಯುದ್ಧದಲ್ಲಿ ದ್ರೋಣನು ಬಿಟ್ಟುಕೊಡದೇ ಇದ್ದಿದ್ದರೆ ಫಲ್ಗುನನು ಸಂಯುಗದಲ್ಲಿ ಎಷ್ಟೇ ಪ್ರಯತ್ನಿಸಿದ್ದರೂ ಹೇಗೆ ತಾನೇ ಈ ದುರ್ಭೇದ್ಯ ವ್ಯೂಹವನ್ನು ಭೇದಿಸುತ್ತಿದ್ದನು?
07127007a ಪ್ರಿಯೋ ಹಿ ಫಲ್ಗುನೋ ನಿತ್ಯಮಾಚಾರ್ಯಸ್ಯ ಮಹಾತ್ಮನಃ।
07127007c ತತೋಽಸ್ಯ ದತ್ತವಾನ್ದ್ವಾರಂ ನಯುದ್ಧೇನಾರಿಮರ್ದನ।।
ಮಹಾತ್ಮ ಫಲ್ಗುನನು ಯಾವಾಗಲೂ ಪ್ರಿಯನಲ್ಲವೇ? ಆದುದರಿಂದಲೇ ಅರಿಮರ್ದನ! ಅವನು ಅವನೊಂದಿಗೆ ಯುದ್ಧಮಾಡದೇ ದಾರಿಮಾಡಿಕೊಟ್ಟನು!
07127008a ಅಭಯಂ ಸೈಂಧವಸ್ಯಾಜೌ ದತ್ತ್ವಾ ದ್ರೋಣಃ ಪರಂತಪಃ।
07127008c ಪ್ರಾದಾತ್ಕಿರೀಟಿನೇ ದ್ವಾರಂ ಪಶ್ಯ ನಿರ್ಗುಣತಾಂ ಮಮ।।
ಪರಂತಪ ದ್ರೋಣನು ಸೈಂಧವನಿಗೆ ಅಭಯವನ್ನಿತ್ತು ಕಿರೀಟಿಗೆ ದ್ವಾರವನ್ನು ತೆರೆದನು. ನನ್ನ ನಿರ್ಗುಣತೆಯನ್ನು ನೋಡು!
07127009a ಯದ್ಯದಾಸ್ಯಮನುಜ್ಞಾಂ ವೈ ಪೂರ್ವಮೇವ ಗೃಹಾನ್ಪ್ರತಿ।
07127009c ಸಿಂಧುರಾಜಸ್ಯ ಸಮರೇ ನಾಭವಿಷ್ಯಜ್ಜನಕ್ಷಯಃ।।
ಒಂದುವೇಳೆ ಮೊದಲೇ ಮನೆಗೆ ಹೋಗಲು ಸಿಂಧುರಾಜನಿಗೆ ಅನುಮತಿಯನ್ನಿತ್ತಿದ್ದರೆ ಸಮರದಲ್ಲಿ ಈ ಜನಕ್ಷಯವು ನಡೆಯುತ್ತಿರಲಿಲ್ಲ.
07127010a ಜಯದ್ರಥೋ ಜೀವಿತಾರ್ಥೀ ಗಚ್ಚಮಾನೋ ಗೃಹಾನ್ಪ್ರತಿ।
07127010c ಮಯಾನಾರ್ಯೇಣ ಸಂರುದ್ಧೋ ದ್ರೋಣಾತ್ಪ್ರಾಪ್ಯಾಭಯಂ ರಣೇ।।
ಆದರೆ ನಾನು ಅನಾರ್ಯನಂತೆ ರಣದಲ್ಲಿ ಸಂರುದ್ಧ ದ್ರೋಣನ ಅಭಯವನ್ನು ಪಡೆದು ಜೀವಿತಾರ್ಥ ಜಯದ್ರಥನನ್ನು ಮನೆಗೆ ಹೋಗದಂತೆ ತಡೆದೆನು.
07127011a ಅದ್ಯ ಮೇ ಭ್ರಾತರಃ ಕ್ಷೀಣಾಶ್ಚಿತ್ರಸೇನಾದಯೋ ಯುಧಿ।
07127011c ಭೀಮಸೇನಂ ಸಮಾಸಾದ್ಯ ಪಶ್ಯತಾಂ ನೋ ದುರಾತ್ಮನಾಂ।।
ನಾವೆಲ್ಲ ದುರಾತ್ಮರು ನೋಡುತ್ತಿದ್ದಂತೆಯೇ ಇಂದು ಯುದ್ಧದಲ್ಲಿ ಭೀಮಸೇನನನ್ನು ಎದುರಿಸಿ ಚಿತ್ರಸೇನನೇ ಮೊದಲಾದ ನನ್ನ ತಮ್ಮಂದಿರು ಅಸುನೀಗಿದರು!”
07127012 ಕರ್ಣ ಉವಾಚ।
07127012a ಆಚಾರ್ಯಂ ಮಾ ವಿಗರ್ಹಸ್ವ ಶಕ್ತ್ಯಾ ಯುಧ್ಯತ್ಯಸೌ ದ್ವಿಜಃ।
07127012c ಅಜಯ್ಯಾನ್ಪಾಂಡವಾನ್ಮನ್ಯೇ ದ್ರೋಣೇನಾಸ್ತ್ರವಿದಾ ಮೃಧೇ।।
ಕರ್ಣನು ಹೇಳಿದನು: “ಆಚಾರ್ಯನನ್ನು ನಿಂದಿಸದಿರು. ಆ ದ್ವಿಜನು ಪರಮ ಶಕ್ತಿಯಿಂದ ಯುದ್ಧಮಾಡುತ್ತಿದ್ದಾನೆ. ಯುದ್ಧದಲ್ಲಿ ಪಾಂಡವರು ಅಸ್ತ್ರವಿದ ದ್ರೋಣನಿಂದ ಅಜೇಯರೆಂದು ತಿಳಿ.
07127013a ತಥಾ ಹ್ಯೇನಮತಿಕ್ರಮ್ಯ ಪ್ರವಿಷ್ಟಃ ಶ್ವೇತವಾಹನಃ।
07127013c ದೈವದೃಷ್ಟೋಽನ್ಯಥಾಭಾವೋ ನ ಮನ್ಯೇ ವಿದ್ಯತೇ ಕ್ವ ಚಿತ್।।
ಹೇಗೆ ಅವನನ್ನು ಅತಿಕ್ರಮಿಸಿ ಶ್ವೇತವಾಹನನು ಪ್ರವೇಶಿಸಿದನೋ ಅದು ದೈವದೃಷ್ಟವೇ ಹೊರತು ಅನ್ಯಥಾ ಅದನ್ನು ತಿಳಿದುಕೊಳ್ಳಬಾರದು. ಬೇರೆ ಏನೂ ಅದರಲ್ಲಿಲ್ಲ.
07127014a ತತೋ ನೋ ಯುಧ್ಯಮಾನಾನಾಂ ಪರಂ ಶಕ್ತ್ಯಾ ಸುಯೋಧನ।
07127014c ಸೈಂಧವೋ ನಿಹತೋ ರಾಜನ್ದೈವಮತ್ರ ಪರಂ ಸ್ಮೃತಂ।।
ಸುಯೋಧನ! ರಾಜನ್! ಪರಮ ಶಕ್ತಿಯಿಂದ ನಾವು ಯುದ್ಧಮಾಡುತ್ತಿದ್ದರೂ ಸೈಂಧವನು ಹತನಾದನೆಂದರೆ ಅದರಲ್ಲಿ ದೈವವೇ ಮೇಲು ಎನ್ನುವುದನ್ನು ನೆನಪಿಸಿಕೊಳ್ಳಬೇಕು.
07127015a ಪರಂ ಯತ್ನಂ ಕುರ್ವತಾಂ ಚ ತ್ವಯಾ ಸಾರ್ಧಂ ರಣಾಜಿರೇ।
07127015c ಹತ್ವಾಸ್ಮಾಕಂ ಪೌರುಷಂ ಹಿ ದೈವಂ ಪಶ್ಚಾತ್ಕರೋತಿ ನಃ।
07127015e ಸತತಂ ಚೇಷ್ಟಮಾನಾನಾಂ ನಿಕೃತ್ಯಾ ವಿಕ್ರಮೇಣ ಚ।।
ರಣಾಂಗಣದಲ್ಲಿ ನಿನ್ನ ಜೊತೆಗೇ ಪರಮ ಯತ್ನವನ್ನು ಮಾಡುತ್ತಿರುವ, ಸತತವೂ ಮೋಸದಿಂದ ಅಥವಾ ವಿಕ್ರಮದಿಂದ ನಡೆದುಕೊಳ್ಳುತ್ತಿರುವ ನಮ್ಮ ಈ ಪೌರುಷವನ್ನು ಕೊಂದು ದೈವವು ಮೇಲುಗೈ ಮಾಡುತ್ತಿದೆ.
07127016a ದೈವೋಪಸೃಷ್ಟಃ ಪುರುಷೋ ಯತ್ಕರ್ಮ ಕುರುತೇ ಕ್ವ ಚಿತ್।
07127016c ಕೃತಂ ಕೃತಂ ಸ್ಮ ತತ್ತಸ್ಯ ದೈವೇನ ವಿನಿಹನ್ಯತೇ।।
ದೈವದಿಂದ ಪೀಡಿತ ಪುರುಷನು ಯಾವುದೇ ಕರ್ಮವನ್ನು ಮಾಡಲು ತೊಡಗಿದರೂ ಅವನ ಒಂದೊಂದು ಕೆಲಸವನ್ನೂ ದೈವವು ಹಾಳುಮಾಡುತ್ತದೆ.
07127017a ಯತ್ಕರ್ತವ್ಯಂ ಮನುಷ್ಯೇಣ ವ್ಯವಸಾಯವತಾ ಸತಾ।
07127017c ತತ್ಕಾರ್ಯಮವಿಶಂಕೇನ ಸಿದ್ಧಿರ್ದೈವೇ ಪ್ರತಿಷ್ಠಿತಾ।।
ಮನುಷ್ಯನು ಸದಾ ಉದ್ಯೋಗಶೀಲನಾಗಿ ಕಾರ್ಯವು ಸಿದ್ಧಿಯಾಗುವುದೋ ಇಲ್ಲವೋ ಎಂಬ ಶಂಕೆಯಿಲ್ಲದೇ ಕರ್ತವ್ಯವನ್ನು ಮಾಡುತ್ತಿರಬೇಕು. ಅದರ ಸಿದ್ಧಿಯು ದೈವಾಧೀನವಾದುದು.
07127018a ನಿಕೃತ್ಯಾ ನಿಕೃತಾಃ ಪಾರ್ಥಾ ವಿಷಯೋಗೈಶ್ಚ ಭಾರತ।
07127018c ದಗ್ಧಾ ಜತುಗೃಹೇ ಚಾಪಿ ದ್ಯೂತೇನ ಚ ಪರಾಜಿತಾಃ।।
ಭಾರತ! ಪಾರ್ಥರನ್ನು ನಾವು ವಿಷಕೊಡುವುದರಿಂದ ಮತ್ತು ಮೋಸದಿಂದ ವಂಚಿಸಿದ್ದೇವೆ. ಜತುಗೃಹದಲ್ಲಿ ಸುಟ್ಟೆವು ಮತ್ತು ದ್ಯೂತದಲ್ಲಿ ಸೋಲಿಸಿದೆವು.
07127019a ರಾಜನೀತಿಂ ವ್ಯಪಾಶ್ರಿತ್ಯ ಪ್ರಹಿತಾಶ್ಚೈವ ಕಾನನಂ।
07127019c ಯತ್ನೇನ ಚ ಕೃತಂ ಯತ್ತೇ ದೈವೇನ ವಿನಿಪಾತಿತಂ।।
ರಾಜನೀತಿಯನ್ನು ಆಶ್ರಯಿಸಿ ಅವರನ್ನು ಕಾನನಕ್ಕೆ ಕಳುಹಿಸಿಯೂ ಆಯಿತು. ಪ್ರಯತ್ನಪೂರ್ವಕವಾಗಿ ಮಾಡಿದ ಈ ಎಲ್ಲವನ್ನು ದೈವವು ಮಣ್ಣುಗೂಡಿಸಿತು.
07127020a ಯುಧ್ಯಸ್ವ ಯತ್ನಮಾಸ್ಥಾಯ ಮೃತ್ಯುಂ ಕೃತ್ವಾ ನಿವರ್ತನಂ।
07127020c ಯತತಸ್ತವ ತೇಷಾಂ ಚ ದೈವಂ ಮಾರ್ಗೇಣ ಯಾಸ್ಯತಿ।।
ಮೃತ್ಯುವನ್ನು ಹಿಂದೆ ಹಾಕಿ ಪ್ರಯತ್ನಪೂರ್ವಕವಾಗಿ ಯುದ್ಧಮಾಡು. ಪ್ರಯತ್ನಿಸುತ್ತಿರುವ ನಿನ್ನ ಮತ್ತು ಅವರ ಮಾರ್ಗದಲ್ಲಿ ದೈವವು ಹೋಗುತ್ತದೆ.
07127021a ನ ತೇಷಾಂ ಮತಿಪೂರ್ವಂ ಹಿ ಸುಕೃತಂ ದೃಶ್ಯತೇ ಕ್ವ ಚಿತ್।
07127021c ದುಷ್ಕೃತಂ ತವ ವಾ ವೀರ ಬುದ್ಧ್ಯಾ ಹೀನಂ ಕುರೂದ್ವಹ।।
ಕುರೂದ್ವಹ! ಅವರು ಬುದ್ಧಿಪೂರ್ವಕವಾಗಿ ಮಾಡಿರಬಹುದಾದ ಸುಕೃತವು ನಮಗೆ ಏನೂ ಕಾಣುವುದಿಲ್ಲ. ಹಾಗೆಯೇ ವೀರ! ಬುದ್ಧಿಹೀನತೆಯಿಂದ ನೀನು ಮಾಡಿರುವ ದುಷ್ಕೃತಗಳೂ ಕಾಣುವುದಿಲ್ಲ.
07127022a ದೈವಂ ಪ್ರಮಾಣಂ ಸರ್ವಸ್ಯ ಸುಕೃತಸ್ಯೇತರಸ್ಯ ವಾ।
07127022c ಅನನ್ಯಕರ್ಮ ದೈವಂ ಹಿ ಜಾಗರ್ತಿ ಸ್ವಪತಾಮಪಿ।।
ಸುಕೃತ-ದುಷ್ಕೃತಗಳೆಲ್ಲವಕ್ಕೂ ದೈವವೇ ಪ್ರಮಾಣವಾಗಿರುತ್ತದೆ. ನಿದ್ದೆಮಾಡುತ್ತಿರುವಾಗಲೂ ಜಾಗೃತವಾಗಿದ್ದು ದೈವವು ಅನನ್ಯವಾಗಿ ಇದೇ ಕೆಲಸವನ್ನು ಮಾಡುತ್ತಿರುತ್ತದೆ.
07127023a ಬಹೂನಿ ತವ ಸೈನ್ಯಾನಿ ಯೋಧಾಶ್ಚ ಬಹವಸ್ತಥಾ।
07127023c ನ ತಥಾ ಪಾಂಡುಪುತ್ರಾಣಾಮೇವಂ ಯುದ್ಧಮವರ್ತತ।।
ಆಗ ನಿನ್ನಲ್ಲಿ ಸೈನ್ಯಗಳೂ ಬಹಳವಾಗಿದ್ದವು. ಯೋಧರೂ ಬಹಳವಾಗಿದ್ದರು. ಪಾಂಡುಪುತ್ರರದ್ದು ಹಾಗಿರದಿದ್ದರೂ ಯುದ್ಧವು ನಡೆಯಿತು.
07127024a ತೈರಲ್ಪೈರ್ಬಹವೋ ಯೂಯಂ ಕ್ಷಯಂ ನೀತಾಃ ಪ್ರಹಾರಿಣಃ।
07127024c ಶಂಕೇ ದೈವಸ್ಯ ತತ್ಕರ್ಮ ಪೌರುಷಂ ಯೇನ ನಾಶಿತಂ।।
ಅಲ್ಪರಾಗಿದ್ದ ಅವರಿಂದ ಬಹಳವಾಗಿದ್ದ ನಾವು ಕ್ಷಯಹೊಂದುತ್ತಿದ್ದೇವೆ. ನಮ್ಮ ಪೌರುಷವನ್ನು ನಾಶಮಾಡಿದ ಇದು ದೈವದ ಕೆಲಸವೆಂದು ಶಂಕೆಯಾಗುತ್ತಿದೆ.””
07127025 ಸಂಜಯ ಉವಾಚ।
07127025a ಏವಂ ಸಂಭಾಷಮಾಣಾನಾಂ ಬಹು ತತ್ತಜ್ಜನಾಧಿಪ।
07127025c ಪಾಂಡವಾನಾಮನೀಕಾನಿ ಸಮದೃಶ್ಯಂತ ಸಂಯುಗೇ।।
ಸಂಜಯನು ಹೇಳಿದನು: “ಜನಾಧಿಪ! ಹೀಗೆ ಅವರು ಬಹಳವಾಗಿ ಮಾತನಾಡಿಕೊಳ್ಳುತ್ತಿದ್ದಾಗ ಸಂಯುಗದಲ್ಲಿ ಪಾಂಡವರ ಸೇನೆಗಳು ಕಾಣಿಸಿಕೊಂಡವು.
07127026a ತತಃ ಪ್ರವವೃತೇ ಯುದ್ಧಂ ವ್ಯತಿಷಕ್ತರಥದ್ವಿಪಂ।
07127026c ತಾವಕಾನಾಂ ಪರೈಃ ಸಾರ್ಧಂ ರಾಜನ್ದುರ್ಮಂತ್ರಿತೇ ತವ।।
ಆಗ ರಾಜನ್! ನಿನ್ನ ದುರ್ಮಂತ್ರದಿಂದಾದ, ನಿನ್ನವರ ಮತ್ತು ಪರರ ನಡುವೆ ರಥ-ಗಜಗಳ ಸಮ್ಮಿಶ್ರ ಯುದ್ಧವು ಪ್ರಾರಂಭವಾಯಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಪುನರ್ಯುದ್ಧಾರಂಭೇ ಸಪ್ತವಿಂಶಾಧಿಕಶತತಮೋಽಧ್ಯಾಯಃ ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಪುನರ್ಯುದ್ಧಾರಂಭ ಎನ್ನುವ ನೂರಾಇಪ್ಪತ್ತೇಳನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-6/18, ಉಪಪರ್ವಗಳು-69/100, ಅಧ್ಯಾಯಗಳು-1104/1995, ಶ್ಲೋಕಗಳು-38703/73784.