ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 126
ಸಾರ
ದ್ರೋಣನ ಮಾತು (1-39).
07126001 ಧೃತರಾಷ್ಟ್ರ ಉವಾಚ।
07126001a ಸಿಂಧುರಾಜೇ ಹತೇ ತಾತ ಸಮರೇ ಸವ್ಯಸಾಚಿನಾ।
07126001c ತಥೈವ ಭೂರಿಶ್ರವಸಿ ಕಿಮಾಸೀದ್ವೋ ಮನಸ್ತದಾ।।
ಧೃತರಾಷ್ಟ್ರನು ಹೇಳಿದನು: “ಅಯ್ಯಾ! ಸಮರದಲ್ಲಿ ಸವ್ಯಸಾಚಿಯಿಂದ ಸಿಂಧುರಾಜ ಮತ್ತು ಹಾಗೆಯೇ ಭೂರಿಶ್ರವರು ಹತರಾಗಲು ನಿನ್ನ ಮನಸ್ಸು ಹೇಗಿದ್ದಿತು?
07126002a ದುರ್ಯೋಧನೇನ ಚ ದ್ರೋಣಸ್ತಥೋಕ್ತಃ ಕುರುಸಂಸದಿ।
07126002c ಕಿಮುಕ್ತವಾನ್ಪರಂ ತಸ್ಮಾತ್ತನ್ಮಮಾಚಕ್ಷ್ವ ಸಂಜಯ।।
ಸಂಜಯ! ಕುರುಸಂಸದಿಯಲ್ಲಿದ್ದ ದ್ರೋಣನಿಗೆ ದುರ್ಯೋಧನನು ಹೀಗೆ ಹೇಳಲು ಅವನು ಅವನಿಗೆ ಉತ್ತರವಾಗಿ ಏನು ಹೇಳಿದನೆನ್ನುವುದನ್ನು ನನಗೆ ಹೇಳು.”
07126003 ಸಂಜಯ ಉವಾಚ।
07126003a ನಿಷ್ಟಾನಕೋ ಮಹಾನಾಸೀತ್ಸೈನ್ಯಾನಾಂ ತವ ಭಾರತ।
07126003c ಸೈಂಧವಂ ನಿಹತಂ ದೃಷ್ಟ್ವಾ ಭೂರಿಶ್ರವಸಮೇವ ಚ।।
ಸಂಜಯನು ಹೇಳಿದನು: “ಭಾರತ! ಸೈಂಧವನೂ ಭೂರಿಶ್ರವನೂ ಹತರಾದುದನ್ನು ಕಂಡು ನಿನ್ನ ಸೇನೆಗಳಲ್ಲಿ ಮಹಾ ಶೋಕವುಂಟಾಯಿತು.
07126004a ಮಂತ್ರಿತಂ ತವ ಪುತ್ರಸ್ಯ ತೇ ಸರ್ವಮವಮೇನಿರೇ।
07126004c ಯೇನ ಮಂತ್ರೇಣ ನಿಹತಾಃ ಶತಶಃ ಕ್ಷತ್ರಿಯರ್ಷಭಾಃ।।
ಯಾರ ಸಲಹೆಯಿಂದ ನೂರಾರು ಕ್ಷತ್ರಿಯರ್ಷಭರು ಹತರಾದರೋ ಆ ನಿನ್ನ ಮಗನ ಸಲಹೆಯನ್ನು ಎಲ್ಲರೂ ಅನಾದರಿಸಿದರು.
07126005a ದ್ರೋಣಸ್ತು ತದ್ವಚಃ ಶ್ರುತ್ವಾ ಪುತ್ರಸ್ಯ ತವ ದುರ್ಮನಾಃ।
07126005c ಮುಹೂರ್ತಮಿವ ತು ಧ್ಯಾತ್ವಾ ಭೃಶಮಾರ್ತೋಽಭ್ಯಭಾಷತ।।
ದ್ರೋಣನಾದರೋ ನಿನ್ನ ಮಗನ ಆ ಮಾತನ್ನು ಕೇಳಿ ದುಃಖಿತ ಮನವುಳ್ಳವನಾಗಿ, ಒಂದು ಮುಹೂರ್ತಕಾಲ ಯೋಚಿಸಿ, ತುಂಬಾ ಆರ್ತನಾಗಿ ಹೇಳಿದನು:
07126006a ದುರ್ಯೋಧನ ಕಿಮೇವಂ ಮಾಂ ವಾಕ್ಶರೈರಭಿಕೃಂತಸಿ।
07126006c ಅಜಯ್ಯಂ ಸಮರೇ ನಿತ್ಯಂ ಬ್ರುವಾಣಂ ಸವ್ಯಸಾಚಿನಂ।।
“ದುರ್ಯೋಧನ! ಮಾತಿನ ಶರಗಳಿಂದ ನನ್ನನ್ನೇಕೆ ತುಂಡು ತುಂಡು ಮಾಡುತ್ತಿರುವೆ? ಸಮರದಲ್ಲಿ ಸವ್ಯಸಾಚಿಯು ಅಜೇಯನೆಂದು ಯಾವಾಗಲೂ ಹೇಳಿಕೊಂಡು ಬಂದಿದ್ದೇನೆ.
07126007a ಏತೇನೈವಾರ್ಜುನಂ ಜ್ಞಾತುಮಲಂ ಕೌರವ ಸಂಯುಗೇ।
07126007c ಯಚ್ಚಿಖಂಡ್ಯವಧೀದ್ಭೀಷ್ಮಂ ಪಾಲ್ಯಮಾನಃ ಕಿರೀಟಿನಾ।।
ಕೌರವ! ಸಂಯುಗದಲ್ಲಿ ಅರ್ಜುನನ ಅತುಲ ಪರಾಕ್ರಮವನ್ನು ತಿಳಿದುಕೊಳ್ಳಲು ಕಿರೀಟಿಯಿಂದ ರಕ್ಷಿಸಲ್ಪಟ್ಟ ಶಿಖಂಡಿಯು ಭೀಷ್ಮನನ್ನು ವಧಿಸಿದುದೊಂದೇ ಸಾಕು.
07126008a ಅವಧ್ಯಂ ನಿಹತಂ ದೃಷ್ಟ್ವಾ ಸಂಯುಗೇ ದೇವಮಾನುಷೈಃ।
07126008c ತದೈವಾಜ್ಞಾಸಿಷಮಹಂ ನೇಯಮಸ್ತೀತಿ ಭಾರತೀ।।
ಸಂಯುಗದಲ್ಲಿ ದೇವಮಾನುಷರಿಂದಲೂ ಅವಧ್ಯನಾಗಿದ್ದ ಅವನು ಹತನಾದುದನ್ನು ನೋಡಿದಾಗಲೇ ಭಾರತೀ ಸೇನೆಯು ಉಳಿಯುವುದಿಲ್ಲವೆಂದು ತಿಳಿದುಕೊಂಡಿದ್ದೆ.
07126009a ಯಂ ಪುಂಸಾಂ ತ್ರಿಷು ಲೋಕೇಷು ಸರ್ವಶೂರಮಮಂಸ್ಮಹಿ।
07126009c ತಸ್ಮಿನ್ವಿನಿಹತೇ ಶೂರೇ ಕಿಂ ಶೇಷಂ ಪರ್ಯುಪಾಸ್ಮಹೇ।।
ಮೂರುಲೋಕಗಳಲ್ಲಿರುವ ಎಲ್ಲ ಪುರುಷರಲ್ಲಿ ಯಾರನ್ನು ಶೂರನೆಂದು ನಾವು ಪರಿಗಣಿಸಿದ್ದೆವೋ ಆ ಶೂರನೇ ಹತನಾದ ಮೇಲೆ ಬೇರೆ ಯಾರನ್ನು ಶರಣುಹೋಗಬಲ್ಲೆವು?
07126010a ಯಾನ್ಸ್ಮ ತಾನ್ಗ್ಲಹತೇ ತಾತಃ ಶಕುನಿಃ ಕುರುಸಂಸದಿ।
07126010c ಅಕ್ಷಾನ್ನ ತೇಽಕ್ಷಾ ನಿಶಿತಾ ಬಾಣಾಸ್ತೇ ಶತ್ರುತಾಪನಾಃ।।
07126011a ತ ಏತೇ ಘ್ನಂತಿ ನಸ್ತಾತ ವಿಶಿಖಾ ಜಯಚೋದಿತಾಃ।
07126011c ಯಾಂಸ್ತದಾ ಖ್ಯಾಪ್ಯಮಾನಾಂಸ್ತ್ವಂ ವಿದುರೇಣ ನ ಬುಧ್ಯಸೇ।।
ಮಗೂ! “ಕುರುಸಂಸದಿಯಲ್ಲಿ ಶಕುನಿಯು ಯಾವ ಪಗಡೆಕಾಯಿಗಳನ್ನು ನಡೆಸುತ್ತಿದ್ದನೋ ಅವು ನಿಜವಾದ ಪಗಡೆಕಾಯಿಗಳಲ್ಲ, ಶತ್ರುಗಳನ್ನು ಸುಡುವಂತಹ ಬಾಣಗಳು, ಅಯ್ಯಾ! ಜಯಚೋದಿತರಾದ ಇವು ವಿಶಿಖೆಗಳಾಗಿ ಕೊಲ್ಲುವುದಿಲ್ಲ!” ಎಂದು ಹೇಳಿದ ವಿದುರನನ್ನು ನೀನು ಅಂದು ಅರ್ಥಮಾಡಿಕೊಳ್ಳಲಿಲ್ಲ.
07126012a ತಾಸ್ತಾ ವಿಲಪತಶ್ಚಾಪಿ ವಿದುರಸ್ಯ ಮಹಾತ್ಮನಃ।
07126012c ಧೀರಸ್ಯ ವಾಚೋ ನಾಶ್ರೌಷೀಃ ಕ್ಷೇಮಾಯ ವದತಃ ಶಿವಾಃ।।
ನಿನ್ನ ಕ್ಷೇಮಕ್ಕಾಗಿ ಮಹಾತ್ಮ ವಿದುರನು ವಿಲಪಿಸುತ್ತಿದ್ದರೂ, ಮಂಗಳ ಮಾತನ್ನು ಆಡುತ್ತಿದ್ದರೂ ನೀನು ಅವನ ಮಾತನ್ನು ಕೇಳಲಿಲ್ಲ.
07126013a ತದಿದಂ ವರ್ತತೇ ಘೋರಮಾಗತಂ ವೈಶಸಂ ಮಹತ್।
07126013c ತಸ್ಯಾವಮಾನಾದ್ವಾಕ್ಯಸ್ಯ ದುರ್ಯೋಧನ ಕೃತೇ ತವ।।
ದುರ್ಯೋಧನ! ಅವನ ಆ ಮಾತುಗಳನ್ನು ಅನಾದರಿಸಿದುದರಿಂದ ಬಂದಿರುವ ಮತ್ತು ನಡೆಯುತ್ತಿರುವ ಈ ಘೋರ ಮಹಾ ನಾಶವು ನೀನೇ ಮಾಡಿದ ಕೆಲಸದಿಂದಾಗಿ!
07126014a ಯಚ್ಚ ನಃ ಪ್ರೇಕ್ಷಮಾಣಾನಾಂ ಕೃಷ್ಣಾಮಾನಾಯಯಃ ಸಭಾಂ।
07126014c ಅನರ್ಹತೀಂ ಕುಲೇ ಜಾತಾಂ ಸರ್ವಧರ್ಮಾನುಚಾರಿಣೀಂ।।
ನಾವೆಲ್ಲರೂ ನೋಡುತ್ತಿದ್ದಂತೆಯೇ ಅನರ್ಹಳಾದ, ಉತ್ತಮ ಕುಲದಲ್ಲಿ ಹುಟ್ಟಿದ, ಸರ್ವಧರ್ಮಾನುಚಾರಿಣಿ ಕೃಷ್ಣೆಯನ್ನು ಸಭೆಗೆ ಸೆಳೆದು ತರಿಸಿ ಅಪಮಾನಿಸಿದೆ.
07126015a ತಸ್ಯಾಧರ್ಮಸ್ಯ ಗಾಂಧಾರೇ ಫಲಂ ಪ್ರಾಪ್ತಮಿದಂ ತ್ವಯಾ।
07126015c ನೋ ಚೇತ್ಪಾಪಂ ಪರೇ ಲೋಕೇ ತ್ವಮರ್ಚ್ಚೇಥಾಸ್ತತೋಽಧಿಕಂ।।
ಗಾಂಧಾರೇ! ಆ ಅಧರ್ಮದ ಫಲವನ್ನು ನೀನು ಪಡೆಯುತ್ತಿದ್ದೀಯೆ. ಇಲ್ಲವಾದರೆ ನೀನು ಪರಲೋಕದಲ್ಲಿ ಇದಕ್ಕೂ ಅಧಿಕ ಫಲವನ್ನು ಅನುಭವಿಸಬೇಕಾಗಿದ್ದಿತು.
07126016a ಯಚ್ಚ ತಾನ್ಪಾಂಡವಾನ್ದ್ಯೂತೇ ವಿಷಮೇಣ ವಿಜಿತ್ಯ ಹ।
07126016c ಪ್ರಾವ್ರಾಜಯಸ್ತದಾರಣ್ಯೇ ರೌರವಾಜಿನವಾಸಸಃ।।
ಆ ಪಾಂಡವರನ್ನು ದ್ಯೂತದಲ್ಲಿ ಮೋಸದಿಂದ ಗೆದ್ದು ಮೃಗಚರ್ಮಧರರನ್ನಾಗಿ ಮಾಡಿ ಅರಣ್ಯಕ್ಕೆ ಕಳುಹಿಸಿದೆ.
07126017a ಪುತ್ರಾಣಾಮಿವ ಚೈತೇಷಾಂ ಧರ್ಮಮಾಚರತಾಂ ಸದಾ।
07126017c ದ್ರುಃಶೇತ್ಕೋ ನು ನರೋ ಲೋಕೇ ಮದನ್ಯೋ ಬ್ರಾಹ್ಮಣಬ್ರುವಃ।।
ನನಗೆ ಪುತ್ರರಂತಿದ್ದ, ಸದಾ ಧರ್ಮಾಚರಣೆಯಲ್ಲಿದ್ದ ಅವರಿಗೆ ನಾನು ದ್ರೋಹವೆಸಗುತ್ತಿದ್ದೇನೆ. ಲೋಕದ ಮನುಷ್ಯರು ನನ್ನಂತಹ ಬೇರೆ ಯಾರನ್ನು ತಾನೇ ಬ್ರಾಹ್ಮಣನೆಂದು ಕರೆಯುತ್ತಾರೆ?
07126018a ಪಾಂಡವಾನಾಮಯಂ ಕೋಪಸ್ತ್ವಯಾ ಶಕುನಿನಾ ಸಹ।
07126018c ಆಹೃತೋ ಧೃತರಾಷ್ಟ್ರಸ್ಯ ಸಮ್ಮತೇ ಕುರುಸಂಸದಿ।।
ಕುರುಸಂಸದಿಯಲ್ಲಿ ಧೃತರಾಷ್ಟ್ರನ ಸಮ್ಮತಿಯಲ್ಲಿ ಶಕುನಿಯೊಂದಿಗೆ ನೀನೇ ಪಾಂಡವರ ಈ ಕೋಪವನ್ನು ಬರಮಾಡಿಕೊಂಡೆ.
07126019a ದುಃಶಾಸನೇನ ಸಂಯುಕ್ತಃ ಕರ್ಣೇನ ಪರಿವರ್ಧಿತಃ।
07126019c ಕ್ಷತ್ತುರ್ವಾಕ್ಯಮನಾದೃತ್ಯ ತ್ವಯಾಭ್ಯಸ್ತಃ ಪುನಃ ಪುನಃ।।
ದುಃಶಾಸನ-ಕರ್ಣರ ಸಹಾಯದಿಂದ ಅದನ್ನು ಹೆಚ್ಚಿಸಿದೆ. ಕ್ಷತ್ತನ ವಾಕ್ಯಗಳನ್ನು ಪುನಃ ಪುನಃ ಅನಾದರಿಸಿ ನೀನು ಇದನ್ನು ವೃದ್ಧಿಸಿದೆ.
07126020a ಯತ್ತತ್ಸರ್ವೇ ಪರಾಭೂಯ ಪರ್ಯವಾರಯತಾರ್ಜುನಿಂ।
07126020c ಸಿಂಧುರಾಜಾನಮಾಶ್ರಿತ್ಯ ಸ ವೋ ಮಧ್ಯೇ ಕಥಂ ಹತಃ।।
ನೀವೆಲ್ಲರೂ ಒಟ್ಟಾಗಿ, ಸಿಂಧುರಾಜನನ್ನು ಆಶ್ರಯಿಸಿ ಆರ್ಜುನಿಯನ್ನು ಸುತ್ತುವರೆದು ಮಧ್ಯದಲ್ಲಿದ್ದ ಅವನನ್ನು ಹೇಗೆ ಕೊಂದಿರಿ?
07126021a ಕಥಂ ತ್ವಯಿ ಚ ಕರ್ಣೇ ಚ ಕೃಪೇ ಶಲ್ಯೇ ಚ ಜೀವತಿ।
07126021c ಅಶ್ವತ್ಥಾಮ್ನಿ ಚ ಕೌರವ್ಯ ನಿಧನಂ ಸೈಂಧವೋಽಗಮತ್।।
ಕೌರವ್ಯ! ನೀನು, ಕರ್ಣ, ಕೃಪ, ಶಲ್ಯ ಮತ್ತು ಅಶ್ವತ್ಥಾಮರು ಜೀವಿತರಾಗಿರುವಾಗ ಸೈಂಧವನು ಹೇಗೆ ನಿಧನವನ್ನು ಹೊಂದಿದನು?
07126022a ಯದ್ವಸ್ತತ್ಸರ್ವರಾಜಾನಸ್ತೇಜಸ್ತಿಗ್ಮಮುಪಾಸತೇ।
07126022c ಸಿಂಧುರಾಜಂ ಪರಿತ್ರಾತುಂ ಸ ವೋ ಮಧ್ಯೇ ಕಥಂ ಹತಃ।।
ಯಾವಾಗ ಎಲ್ಲ ರಾಜರೂ ತಿಗ್ಮ ತೇಜಸ್ಸನ್ನು ಬಳಸಿ ಸಿಂಧುರಾಜನನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ ಮಧ್ಯದಲ್ಲಿದ್ದ ಅವನು ಹೇಗೆ ಹತನಾದನು?
07126023a ಮಯ್ಯೇವ ಹಿ ವಿಶೇಷೇಣ ತಥಾ ದುರ್ಯೋಧನ ತ್ವಯಿ।
07126023c ಆಶಂಸತ ಪರಿತ್ರಾಣಮರ್ಜುನಾತ್ಸ ಮಹೀಪತಿಃ।।
ದುರ್ಯೋಧನ! ಆ ಮಹೀಪತಿಯು ಅರ್ಜುನನಿಂದ ರಕ್ಷಣೆಯನ್ನು ವಿಶೇಷವಾಗಿ ನನ್ನಿಂದ ಮತ್ತು ನಿನ್ನಿಂದ ಆಶಿಸಿದ್ದನು.
07126024a ತತಸ್ತಸ್ಮಿನ್ಪರಿತ್ರಾಣಮಲಬ್ಧವತಿ ಫಲ್ಗುನಾತ್।
07126024c ನ ಕಿಂ ಚಿದನುಪಶ್ಯಾಮಿ ಜೀವಿತತ್ರಾಣಮಾತ್ಮನಃ।।
ಫಲ್ಗುನನಿಂದ ಅವನಿಗೆ ರಕ್ಷಣೆಯನ್ನು ಒದಗಿಸದೇ ಇದ್ದ ನಾನು ನನ್ನ ಜೀವನದ ರಕ್ಷಣೆಯನ್ನೂ ಹೇಗೆ ಮಾಡಿಕೊಳ್ಳುವೆನೋ!
07126025a ಮಜ್ಜಂತಮಿವ ಚಾತ್ಮಾನಂ ಧೃಷ್ಟದ್ಯುಮ್ನಸ್ಯ ಕಿಲ್ಬಿಷೇ।
07126025c ಪಶ್ಯಾಮ್ಯಹತ್ವಾ ಪಾಂಚಾಲಾನ್ಸಹ ತೇನ ಶಿಖಂಡಿನಾ।।
ಆ ಶಿಖಂಡಿಯೊಡನೆ ಪಾಂಚಾಲರನ್ನು ಸಂಹರಿಸದೇ ನನ್ನನ್ನು ನಾನು ಧೃಷ್ಟದ್ಯುಮ್ನನೆಂಬ ಕಿಲ್ಬಿಷದಲ್ಲಿ ಮುಳುಗಿ ಹೋಗಿರುವೆನೋ ಎಂದು ನನಗೆ ತೋರುತ್ತಿದೆ.
07126026a ತನ್ಮಾ ಕಿಮಭಿತಪ್ಯಂತಂ ವಾಕ್ಶರೈರಭಿಕೃಂತಸಿ।
07126026c ಅಶಕ್ತಃ ಸಿಂಧುರಾಜಸ್ಯ ಭೂತ್ವಾ ತ್ರಾಣಾಯ ಭಾರತ।।
ಭಾರತ! ಸಿಂಧುರಾಜನಿಗೆ ರಕ್ಷಣೆಯನ್ನು ನೀಡಲು ಅಶಕ್ತನಾದ ನೀನು ಏನು ಮಾಡಬೇಕೆಂದು ಪರಿತಪಿಸುತ್ತಿರುವ ನನ್ನನ್ನು ಏಕೆ ಮಾತಿನ ಶರಗಳಿಂದ ಚುಚ್ಚುತ್ತಿರುವೆ?
07126027a ಸೌವರ್ಣಂ ಸತ್ಯಸಂಧಸ್ಯ ಧ್ವಜಮಕ್ಲಿಷ್ಟಕರ್ಮಣಃ।
07126027c ಅಪಶ್ಯನ್ಯುಧಿ ಭೀಷ್ಮಸ್ಯ ಕಥಮಾಶಂಸಸೇ ಜಯಂ।।
ಯುದ್ಧದಲ್ಲಿ ಸತ್ಯಸಂಧ ಅಕ್ಲಿಷ್ಟಕರ್ಮಿ ಭೀಷ್ಮನ ಸುವರ್ಣಧ್ವಜವನ್ನು ಕಾಣದೇ ನಾವು ಹೇಗೆ ಜಯವನ್ನು ಆಶಿಸಬಲ್ಲೆವು?
07126028a ಮಧ್ಯೇ ಮಹಾರಥಾನಾಂ ಚ ಯತ್ರಾಹನ್ಯತ ಸೈಂಧವಃ।
07126028c ಹತೋ ಭೂರಿಶ್ರವಾಶ್ಚೈವ ಕಿಂ ಶೇಷಂ ತತ್ರ ಮನ್ಯಸೇ।।
ಮಹಾರಥರ ಮಧ್ಯದಲ್ಲಿದ್ದ ಸೈಂಧವನು ಹತನಾಗಲು, ಭೂರಿಶ್ರವನೂ ಕೂಡ ಹತನಾಗಲು ಯೋಚಿಸಲು ಇನ್ನೇನು ಉಳಿದಿದೆ?
07126029a ಕೃಪ ಏವ ಚ ದುರ್ಧರ್ಷೋ ಯದಿ ಜೀವತಿ ಪಾರ್ಥಿವ।
07126029c ಯೋ ನಾಗಾತ್ಸಿಂಧುರಾಜಸ್ಯ ವರ್ತ್ಮ ತಂ ಪೂಜಯಾಮ್ಯಹಂ।।
ಪಾರ್ಥಿವ! ಸಿಂಧುರಾಜನ ಗತಿಯಲ್ಲಿಯೇ ಹೋಗದೇ ಜೀವಿಸಿರುವ ಕೃಪನೇ ದುರ್ಧರ್ಷನೆಂದು ನಾನು ಗೌರವಿಸುತ್ತೇನೆ.
07126030a ಯಚ್ಚಾಪಶ್ಯಂ ಹತಂ ಭೀಷ್ಮಂ ಪಶ್ಯತಸ್ತೇಽನುಜಸ್ಯ ವೈ।
07126030c ದುಃಶಾಸನಸ್ಯ ಕೌರವ್ಯ ಕುರ್ವಾಣಂ ಕರ್ಮ ದುಷ್ಕರಂ।।
07126030e ಅವಧ್ಯಕಲ್ಪಂ ಸಂಗ್ರಾಮೇ ದೇವೈರಪಿ ಸವಾಸವೈಃ।
07126031a ನ ತೇ ವಸುಂಧರಾಸ್ತೀತಿ ತದಹಂ ಚಿಂತಯೇ ನೃಪ।।
ಕೌರವ್ಯ! ನೃಪ! ಸಂಗ್ರಾಮದಲ್ಲಿ ವಾಸವನೊಂದಿಗೆ ದೇವತೆಗಳಿಗೂ ಅವಧ್ಯನೆಂದೆನಿಸಿಕೊಂಡಿರುವ, ದುಷ್ಕರ ಕರ್ಮಗಳನ್ನೆಸಗುವ ಭೀಷ್ಮನು ನಿನ್ನ ಅನುಜ ದುಃಶಾಸನನು ನೋಡುತ್ತಿರುವಂತೆಯೇ ಹತನಾದುದನ್ನು ಕಂಡಾಗಲೇ ನಾನು ಈ ವಸುಂಧರೆಯು ನಿನ್ನದಾಗುವುದಿಲ್ಲವೆಂದು ಯೋಚಿಸಿದ್ದೆ.
07126031c ಇಮಾನಿ ಪಾಂಡವಾನಾಂ ಚ ಸೃಂಜಯಾನಾಂ ಚ ಭಾರತ।
07126031e ಅನೀಕಾನ್ಯಾದ್ರವಂತೇ ಮಾಂ ಸಹಿತಾನ್ಯದ್ಯ ಮಾರಿಷ।।
ಮಾರಿಷ! ಭಾರತ! ಈ ಪಾಂಡವರು ಮತ್ತು ಸೃಂಜಯರ ಸೇನೆಗಳು ಒಟ್ಟಾಗಿ ಇಂದು ನನ್ನ ಮೇಲೆ ಬಂದು ಬೀಳಲಿ.
07126032a ನಾಹತ್ವಾ ಸರ್ವಪಾಂಚಾಲಾನ್ಕವಚಸ್ಯ ವಿಮೋಕ್ಷಣಂ।
07126032c ಕರ್ತಾಸ್ಮಿ ಸಮರೇ ಕರ್ಮ ಧಾರ್ತರಾಷ್ಟ್ರ ಹಿತಂ ತವ।।
ಧಾರ್ತರಾಷ್ಟ್ರ! ಸರ್ವಪಾಂಚಾಲರನ್ನು ಸಂಹರಿಸದೆಯೇ ನಾನು ಈ ಕವಚವನ್ನು ಬಿಚ್ಚುವುದಿಲ್ಲ. ಸಮರದಲ್ಲಿ ನಿನಗೆ ಹಿತವಾದ ಈ ಕಾರ್ಯವನ್ನು ಮಾಡುತ್ತೇನೆ.
07126033a ರಾಜನ್ಬ್ರೂಯಾಃ ಸುತಂ ಮೇ ತ್ವಮಶ್ವತ್ಥಾಮಾನಮಾಹವೇ।
07126033c ನ ಸೋಮಕಾಃ ಪ್ರಮೋಕ್ತವ್ಯಾ ಜೀವಿತಂ ಪರಿರಕ್ಷತಾ।।
ರಾಜನ್! ಆಹವದಲ್ಲಿ ನನ್ನ ಮಗ ಅಶ್ವತ್ಥಾಮನಿಗೆ ನೀನು ಇದನ್ನು ಹೇಳಬೇಕು: “ಜೀವವನ್ನು ರಕ್ಷಿಸಿಕೊಳ್ಳುವ ಆಸೆಯಿಂದ ಸೋಮಕರನ್ನು ವಧಿಸದೇ ಬಿಟ್ಟುಬಿಡಬಾರದು!
07126034a ಯಚ್ಚ ಪಿತ್ರಾನುಶಿಷ್ಟೋಽಸಿ ತದ್ವಚಃ ಪರಿಪಾಲಯ।
07126034c ಆನೃಶಂಸ್ಯೇ ದಮೇ ಸತ್ಯೇ ಆರ್ಜವೇ ಚ ಸ್ಥಿರೋ ಭವ।।
ಹೀಗೆ ತಂದೆಯಿಂದ ಅನುಶಾಸಿತನಾಗಿರುವೆ. ಆ ವಚನವನ್ನು ಪರಿಪಾಲಿಸು. ದಯೆ, ದಮ, ಸತ್ಯ ಮತ್ತು ಆರ್ಜವಗಳಲ್ಲಿ ನೀನು ಸ್ಠಿರನಾಗಿರು.
07126035a ಧರ್ಮಾರ್ಥಕಾಮಕುಶಲೋ ಧರ್ಮಾರ್ಥಾವಪ್ಯಪೀಡಯನ್।
07126035c ಧರ್ಮಪ್ರಧಾನಃ ಕಾರ್ಯಾಣಿ ಕುರ್ಯಾಶ್ಚೇತಿ ಪುನಃ ಪುನಃ।।
ಧರ್ಮಾರ್ಥಕುಶಲನಾಗಿದ್ದೀಯೆ! ಧರ್ಮಾರ್ಥಗಳನ್ನು ಪೀಡಿಸಬೇಡ! ಧರ್ಮಪ್ರಧಾನ ಕಾರ್ಯಗಳನ್ನೇ ಪುನಃ ಪುನಃ ಮಾಡುತ್ತಿರು!” ಎಂದು.
07126036a ಚಕ್ಷುರ್ಮನೋಭ್ಯಾಂ ಸಂತೋಷ್ಯಾ ವಿಪ್ರಾಃ ಸೇವ್ಯಾಶ್ಚ ಶಕ್ತಿತಃ।
07126036c ನ ಚೈಷಾಂ ವಿಪ್ರಿಯಂ ಕಾರ್ಯಂ ತೇ ಹಿ ವಹ್ನಿಶಿಖೋಪಮಾಃ।।
ನೋಟ ಮತ್ತು ಮನಸ್ಸುಗಳಿಂದ ಶಕ್ತಿಯಿದ್ದಷ್ಟು ವಿಪ್ರರ ಸೇವೆಮಾಡಿ ಸಂತೋಷಗೊಳಿಸಬೇಕು. ಬೆಂಕಿಯ ಜ್ವಾಲೆಗಳಂತಿರುವ ಅವರಿಗೆ ವಿಪ್ರಿಯವಾದ ಕೆಲಸಗಳನ್ನು ಮಾಡಬಾರದು.
07126037a ಏಷ ತ್ವಹಮನೀಕಾನಿ ಪ್ರವಿಶಾಮ್ಯರಿಸೂದನ।
07126037c ರಣಾಯ ಮಹತೇ ರಾಜಂಸ್ತ್ವಯಾ ವಾಕ್ಶಲ್ಯಪೀಡಿತಃ।।
ಅರಿಸೂದನ! ರಾಜನ್! ಇದೋ! ನಿನ್ನ ಈ ಮಾತಿನ ಈಟಿಯಿಂದ ತುಂಬಾ ಪೀಡಿತನಾಗಿ ನಾನು ರಣದಲ್ಲಿ ಸೇನೆಗಳನ್ನು ಸೇರುತ್ತಿದ್ದೇನೆ.
07126038a ತ್ವಂ ಚ ದುರ್ಯೋಧನ ಬಲಂ ಯದಿ ಶಕ್ನೋಷಿ ಧಾರಯ।
07126038c ರಾತ್ರಾವಪಿ ಹಿ ಯೋತ್ಸ್ಯಂತೇ ಸಂರಬ್ಧಾಃ ಕುರುಸೃಂಜಯಾಃ।।
ದುರ್ಯೋಧನ! ಸಾಧ್ಯವಾದರೆ ನೀನೂ ಕೂಡ ಸೇನೆಯನ್ನು ರಕ್ಷಿಸು. ರಾತ್ರಿಯಾದರೂ ಕೂಡ ಸಂರಬ್ಧ ಕುರು-ಸೃಂಜಯರು ಯುದ್ಧಮಾಡುತ್ತಾರೆ.”
07126039a ಏವಮುಕ್ತ್ವಾ ತತಃ ಪ್ರಾಯಾದ್ದ್ರೋಣಃ ಪಾಂಡವಸೃಂಜಯಾನ್।
07126039c ಮುಷ್ಣನ್ ಕ್ಷತ್ರಿಯತೇಜಾಂಸಿ ನಕ್ಷತ್ರಾಣಾಮಿವಾಂಶುಮಾನ್।।
ಹೀಗೆ ಹೇಳಿ ದ್ರೋಣನು ಸೂರ್ಯನು ನಕ್ಷತ್ರಗಳಿಂದ ಹೇಗೋ ಹಾಗೆ ಕ್ಷತ್ರಿಯರ ತೇಜಸ್ಸನ್ನು ಅಪಹರಿಸುತ್ತಾ ಪಾಂಡವ-ಸೃಂಜಯರ ಕಡೆ ತೆರಳಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ದ್ರೋಣವಾಕ್ಯೇ ಷಟ್ವಿಂಶಾಧಿಕಶತತಮೋಽಧ್ಯಾಯಃ ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ದ್ರೋಣವಾಕ್ಯ ಎನ್ನುವ ನೂರಾಇಪ್ಪತ್ತಾರನೇ ಅಧ್ಯಾಯವು.