ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 125
ಸಾರ
ದುರ್ಯೋಧನನು ಅನುತಾಪಗೊಂಡು ದ್ರೋಣನಲ್ಲಿ ಹೇಳಿಕೊಂಡಿದುದು (1-33).
07125001 ಸಂಜಯ ಉವಾಚ।
07125001a ಸೈಂಧವೇ ನಿಹತೇ ರಾಜನ್ಪುತ್ರಸ್ತವ ಸುಯೋಧನಃ।
07125001c ಅಶ್ರುಕ್ಲಿನ್ನಮುಖೋ ದೀನೋ ನಿರುತ್ಸಾಹೋ ದ್ವಿಷಜ್ಜಯೇ।
ಸಂಜಯನು ಹೇಳಿದನು: “ರಾಜನ್! ಸೈಂಧವನು ಹತನಾಗಲು ನಿನ್ನ ಪುತ್ರ ಸುಯೋಧನನು ಕಣ್ಣೀರುತುಂಬಿ, ಬೇಸರದ ಮುಖದಲ್ಲಿ ದೀನನೂ, ಶತ್ರುಗಳನ್ನು ಜಯಿಸಲು ನಿರುತ್ಸಾಹಿಯೂ ಆದನು.
07125001e ಅಮನ್ಯತಾರ್ಜುನಸಮೋ ಯೋಧೋ ಭುವಿ ನ ವಿದ್ಯತೇ।।
07125002a ನ ದ್ರೋಣೋ ನ ಚ ರಾಧೇಯೋ ನಾಶ್ವತ್ಥಾಮಾ ಕೃಪೋ ನ ಚ।
07125002c ಕ್ರುದ್ಧಸ್ಯ ಪ್ರಮುಖೇ ಸ್ಥಾತುಂ ಪರ್ಯಾಪ್ತಾ ಇತಿ ಮಾರಿಷ।।
ಅರ್ಜುನನ ಸಮನಾದ ಯೋಧನು ಭುವಿಯಲ್ಲಿಯೇ ಇಲ್ಲ ಮತ್ತು ಮಾರಿಷ! ಕ್ರುದ್ಧನಾದ ಅವನನ್ನು ಎದುರಿಸಿ ನಿಲ್ಲನು ದ್ರೋಣನಾಗಲೀ, ರಾಧೇಯನಾಗಲೀ, ಅಶ್ವತ್ಥಾಮನಾಗಲೀ ಪರ್ಯಾಪ್ತರಲ್ಲ ಎಂದು ಅವನು ಒಪ್ಪಿಕೊಂಡನು.
07125003a ನಿರ್ಜಿತ್ಯ ಹಿ ರಣೇ ಪಾರ್ಥಃ ಸರ್ವಾನ್ಮಮ ಮಹಾರಥಾನ್।
07125003c ಅವಧೀತ್ಸೈಂಧವಂ ಸಂಖ್ಯೇ ನೈನಂ ಕಶ್ಚಿದವಾರಯತ್।।
“ನನ್ನ ಸರ್ವ ಮಹಾರಥರನ್ನೂ ರಣದಲ್ಲಿ ಸೋಲಿಸಿ ಸೈಂಧವನನ್ನು ಸಂಹರಿಸಿದನು. ರಣದಲ್ಲಿ ಯಾರೂ ಅವನನ್ನು ತಡೆಯಲಾಗಲಿಲ್ಲ.
07125004a ಸರ್ವಥಾ ಹತಮೇವೈತತ್ಕೌರವಾಣಾಂ ಮಹದ್ಬಲಂ।
07125004c ನ ಹ್ಯಸ್ಯ ವಿದ್ಯತೇ ತ್ರಾತಾ ಸಾಕ್ಷಾದಪಿ ಪುರಂದರಃ।।
ಕೌರವರ ಈ ಮಹಾಸೇನೆಯು ಸರ್ವಥಾ ನಾಶವಾಗಿಹೋಯಿತು. ಸಾಕ್ಷಾತ್ ಪುರಂದರನೇ ಬಂದರೂ ಇದನ್ನು ರಕ್ಷಿಸಲಾರನು!
07125005a ಯಮುಪಾಶ್ರಿತ್ಯ ಸಂಗ್ರಾಮೇ ಕೃತಃ ಶಸ್ತ್ರಸಮುದ್ಯಮಃ।
07125005c ಸ ಕರ್ಣೋ ನಿರ್ಜಿತಃ ಸಂಖ್ಯೇ ಹತಶ್ಚೈವ ಜಯದ್ರಥಃ।।
ಯಾರನ್ನು ಉಪಾಶ್ರಯಿಸಿ ನಾನು ಈ ಸಂಗ್ರಾಮಕ್ಕೆ ಶಸ್ತ್ರಗಳನ್ನು ಸಂಗ್ರಹಿಸಲು ಪ್ರಾರಂಭಿಸಿದೆನೋ ಅದೇ ಕರ್ಣನೇ ರಣದಲ್ಲಿ ಪರಾಜಿತನಾಗಿ ಜಯದ್ರಥನು ಹತನಾದನು!
07125006a ಪರುಷಾಣಿ ಸಭಾಮಧ್ಯೇ ಪ್ರೋಕ್ತವಾನ್ಯಃ ಸ್ಮ ಪಾಂಡವಾನ್।
07125006c ಸ ಕರ್ಣೋ ನಿರ್ಜಿತಃ ಸಂಖ್ಯೇ ಸೈಂಧವಶ್ಚ ನಿಪಾತಿತಃ।।
ಸಭಾಮಧ್ಯದಲ್ಲಿ ಪಾಂಡವರಿಗೆ ಕ್ರೂರವಾಗಿ ಮಾತನಾಡಿದ ಆ ಕರ್ಣನೇ ರಣದಲ್ಲಿ ಪರಾಜಿತನಾಗಿ ಜಯದ್ರಥನು ಹತನಾದನು!
07125007a ಯಸ್ಯ ವೀರ್ಯಂ ಸಮಾಶ್ರಿತ್ಯ ಶಮಂ ಯಾಚಂತಮಚ್ಯುತಂ।
07125007c ತೃಣವತ್ತಮಹಂ ಮನ್ಯೇ ಸ ಕರ್ಣೋ ನಿರ್ಜಿತೋ ಯುಧಿ।।
ಯಾರ ವೀರ್ಯವನ್ನು ಆಶ್ರಯಿಸಿ ಶಾಂತಿಯನ್ನು ಯಾಚಿಸುತ್ತಿದ್ದ ಅಚ್ಯುತನನ್ನು ತೃಣಕ್ಕೆ ಸಮಾನವಾಗಿ ಕಂಡೆನೋ ಆ ಕರ್ಣನೇ ಯುದ್ಧದಲ್ಲಿ ಪರಾಜಿತನಾಗಿದ್ದಾನೆ!”
07125008a ಏವಂ ಕ್ಲಾಂತಮನಾ ರಾಜನ್ನುಪಾಯಾದ್ದ್ರೋಣಮೀಕ್ಷಿತುಂ।
07125008c ಆಗಸ್ಕೃತ್ಸರ್ವಲೋಕಸ್ಯ ಪುತ್ರಸ್ತೇ ಭರತರ್ಷಭ।।
ರಾಜನ್! ಭರತರ್ಷಭ! ಹೀಗೆ ಬೇಸತ್ತ ಮನಸ್ಸಿನಿಂದ ನಿನ್ನ ಮಗನು ಸರ್ವಲೋಕವನ್ನೂ ತಿರಸ್ಕರಿಸಿ ದ್ರೋಣನನ್ನು ಕಾಣಲು ಹೋದನು.
07125009a ತತಸ್ತತ್ಸರ್ವಮಾಚಖ್ಯೌ ಕುರೂಣಾಂ ವೈಶಸಂ ಮಹತ್।
07125009c ಪರಾನ್ವಿಜಯತಶ್ಚಾಪಿ ಧಾರ್ತರಾಷ್ಟ್ರಾನ್ನಿಮಜ್ಜತಃ।।
ಆಗ ಅವನಿಗೆ ಕುರುಗಳ ಮಹಾನಾಶವನ್ನೂ, ಶತ್ರುಗಳ ವಿಜಯವನ್ನೂ, ಧಾರ್ತರಾಷ್ಟ್ರರು ಶೋಕದಲ್ಲಿ ಮುಳುಗಿರುವುದನ್ನೂ ಹೇಳಿದನು.
07125010 ದುರ್ಯೋಧನ ಉವಾಚ।
07125010a ಪಶ್ಯ ಮೂರ್ಧಾವಸಿಕ್ತಾನಾಮಾಚಾರ್ಯ ಕದನಂ ಕೃತಂ।
07125010c ಕೃತ್ವಾ ಪ್ರಮುಖತಃ ಶೂರಂ ಭೀಷ್ಮಂ ಮಮ ಪಿತಾಮಹಂ।।
ದುರ್ಯೋಧನನು ಹೇಳಿದನು: “ಆಚಾರ್ಯ! ನಾಯಕನಾಗಿ ಅಭಿಷೇಕಗೊಂಡು ಕದನವನ್ನಾಡಿದ ನನ್ನ ಪಿತಾಮಹ ಶೂರ ಭೀಷ್ಮನನ್ನು ನೋಡಿರಿ!
07125011a ತಂ ನಿಹತ್ಯ ಪ್ರಲುಬ್ಧೋಽಯಂ ಶಿಖಂಡೀ ಪೂರ್ಣಮಾನಸಃ।
07125011c ಪಾಂಚಾಲೈಃ ಸಹಿತಃ ಸರ್ವೈಃ ಸೇನಾಗ್ರಮಭಿಕರ್ಷತಿ।।
ಅವನನ್ನು ಕೊಂದು ಪ್ರಲುಬ್ಧನಾದ ಈ ಶಿಖಂಡಿಯು ಸಂಪೂರ್ಣ ಮನಸ್ಕನಾಗಿ ಎಲ್ಲ ಪಾಂಚಾಲರೊಂದಿಗೆ ಎದಿರುನಿಂತು ಸೇನೆಗಳನ್ನು ನಡೆಸುತ್ತಿದ್ದಾನೆ!
07125012a ಅಪರಶ್ಚಾಪಿ ದುರ್ಧರ್ಷಃ ಶಿಷ್ಯಸ್ತೇ ಸವ್ಯಸಾಚಿನಾ।
07125012c ಅಕ್ಷೌಹಿಣೀಃ ಸಪ್ತ ಹತ್ವಾ ಹತೋ ರಾಜಾ ಜಯದ್ರಥಃ।।
ಅನಂತರವೂ ಕೂಡ ನಿಮ್ಮ ಶಿಷ್ಯ ದುರ್ಧರ್ಷ ಸವ್ಯಸಾಚಿಯು ಏಳು ಅಕ್ಷೌಹಿಣಿಗಳನ್ನು ಸಂಹರಿಸಿ, ರಾಜಾ ಜಯದ್ರಥನನ್ನು ವಧಿಸಿದನು.
07125013a ಅಸ್ಮದ್ವಿಜಯಕಾಮಾನಾಂ ಸುಹೃದಾಮುಪಕಾರಿಣಾಂ।
07125013c ಗಂತಾಸ್ಮಿ ಕಥಮಾನೃಣ್ಯಂ ಗತಾನಾಂ ಯಮಸಾದನಂ।।
ನಮಗೆ ವಿಜಯವನ್ನು ಬಯಸಿ ಯಮಸಾದನಕ್ಕೆ ಹೋದ ಆ ಉಪಕಾರೀ ಸುಹೃದಯರ ಋಣವನ್ನು ಹೇಗೆ ತೀರಿಸಲಿ?
07125014a ಯೇ ಮದರ್ಥಂ ಪರೀಪ್ಸಂತಿ ವಸುಧಾಂ ವಸುಧಾಧಿಪಾಃ।
07125014c ತೇ ಹಿತ್ವಾ ವಸುಧೈಶ್ವರ್ಯಂ ವಸುಧಾಮಧಿಶೇರತೇ।।
ನನಗಾಗಿ ಈ ವಸುಂಧರೆಯನ್ನು ಯಾರು ಬಯಸಿದ್ದರೋ ಆ ವಸುಧಾಧಿಪರೇ ಈ ವಸುಧೆಯ ಐಶ್ವರ್ಯವನ್ನು ತೊರೆದು ವಸುಧೆಯ ಮೇಲೆ ಮಲಗಿದ್ದಾರೆ!
07125015a ಸೋಽಹಂ ಕಾಪುರುಷಃ ಕೃತ್ವಾ ಮಿತ್ರಾಣಾಂ ಕ್ಷಯಮೀದೃಶಂ।
07125015c ನಾಶ್ವಮೇಧಸಹಸ್ರೇಣ ಪಾತುಮಾತ್ಮಾನಮುತ್ಸಹೇ।।
ಮಿತ್ರರ ಈ ರೀತಿಯ ವಿನಾಶವನ್ನೆಸಗಿ ಹೇಡಿಯಾದ ನಾನು ಸಹಸ್ರ ಅಶ್ವಮೇಧಗಳನ್ನು ಮಾಡಿಯೂ ನನ್ನ ಈ ಪಾಪವನ್ನು ತೊಳೆದು ಪುನೀತನಾಗಲಾರೆನು.
07125016a ಮಮ ಲುಬ್ಧಸ್ಯ ಪಾಪಸ್ಯ ತಥಾ ಧರ್ಮಾಪಚಾಯಿನಃ।
07125016c ವ್ಯಾಯಚ್ಚಂತೋ ಜಿಗೀಷಂತಃ ಪ್ರಾಪ್ತಾ ವೈವಸ್ವತಕ್ಷಯಂ।।
ಲುಬ್ಧನಾದ, ಪಾಪಿಯಾದ, ಮತ್ತು ಧರ್ಮನಾಶಕನಾದ ನನಗೆ ವಿಜಯವನ್ನು ಬಯಸಿ ಹೋರಾಡುತ್ತಿದ್ದವರು ಯಮಲೋಕಕ್ಕೆ ಹೊರಟುಹೋದರು.
07125017a ಕಥಂ ಪತಿತವೃತ್ತಸ್ಯ ಪೃಥಿವೀ ಸುಹೃದಾಂ ದ್ರುಹಃ।
07125017c ವಿವರಂ ನಾಶಕದ್ದಾತುಂ ಮಮ ಪಾರ್ಥಿವಸಂಸದಿ।।
ಪತಿತನಂತೆ ನಡೆದುಕೊಂಡಿರುವ, ಸುಹೃದರಿಗೆ ದ್ರೋಹವನ್ನೆಸಗಿದ ನನಗೆ ಪಾರ್ಥಿವಸಂಸದಿಯಲ್ಲಿ ಈ ಭೂಮಿಯು ಏಕೆ ಸೀಳಿಹೋಗಿ ಅವಕಾಶಮಾಡಿಕೊಡುವುದಿಲ್ಲ?
07125018a ಸೋಽಹಂ ರುಧಿರಸಿಕ್ತಾಂಗಂ ರಾಜ್ಞಾಂ ಮಧ್ಯೇ ಪಿತಾಮಹಂ।
07125018c ಶಯಾನಂ ನಾಶಕಂ ತ್ರಾತುಂ ಭೀಷ್ಮಮಾಯೋಧನೇ ಹತಂ।।
ರಾಜರ ಮಧ್ಯೆ ಯುದ್ಧಮಾಡುತ್ತಾ, ಅವನ ಅಂಗಗಳು ರಕ್ತದಿಂದ ತೋಯುತ್ತಿರಲು ಪಿತಾಮಹ ಭೀಷ್ಮನು ಹತನಾಗಿ ಮಲಗಿದಾಗ ನಾನು ಅವನನ್ನು ರಕ್ಷಿಸಲು ಶಕ್ತನಾಗಲಿಲ್ಲ.
07125019a ತಂ ಮಾಮನಾರ್ಯಪುರುಷಂ ಮಿತ್ರದ್ರುಹಮಧಾರ್ಮಿಕಂ।
07125019c ಕಿಂ ಸ ವಕ್ಷ್ಯತಿ ದುರ್ಧರ್ಷಃ ಸಮೇತ್ಯ ಪರಲೋಕಜಿತ್।।
ಆ ದುರ್ಧರ್ಷ ಪರಲೋಕವನ್ನು ಜಯಿಸಿರುವವನು ಈ ಅನಾರ್ಯಪುರುಷ, ಮಿತ್ರದ್ರೋಹಿ, ಅಧಾರ್ಮಿಕ ನನಗೆ ಏನು ಹೇಳಿಯಾನು?
07125020a ಜಲಸಂಧಂ ಮಹೇಷ್ವಾಸಂ ಪಶ್ಯ ಸಾತ್ಯಕಿನಾ ಹತಂ।
07125020c ಮದರ್ಥಮುದ್ಯತಂ ಶೂರಂ ಪ್ರಾಣಾಂಸ್ತ್ಯಕ್ತ್ವಾ ಮಹಾರಥಂ।।
ನನಗಾಗಿ ಪ್ರಾಣವನ್ನು ತ್ಯಜಿಸಿ ಹೋರಾಡಿದ ಮಹಾರಥ ಶೂರ ಮಹೇಷ್ವಾಸ ಜಲಸಂಧನನ್ನು ಸಾತ್ಯಕಿಯು ಸಂಹರಿಸಿದುದನ್ನು ನೋಡು!
07125021a ಕಾಂಬೋಜಂ ನಿಹತಂ ದೃಷ್ಟ್ವಾ ತಥಾಲಂಬುಸಮೇವ ಚ।
07125021c ಅನ್ಯಾನ್ಬಹೂಂಶ್ಚ ಸುಹೃದೋ ಜೀವಿತಾರ್ಥೋಽದ್ಯ ಕೋ ಮಮ।।
ಕಾಂಬೋಜ, ಅಲಂಬುಸ ಮತ್ತು ಇನ್ನೂ ಅನೇಕ ಸುಹೃದಯರು ಹತರಾದುದನ್ನು ನೋಡಿ ಇಂದು ನಾನು ಬದುಕಿರುವುದರ ಅರ್ಥವೇನು?
07125022a ವ್ಯಾಯಚ್ಚಂತೋ ಹತಾಃ ಶೂರಾ ಮದರ್ಥೇ ಯೇಽಪರಾಙ್ಮುಖಾಃ।
07125022c ಯತಮಾನಾಃ ಪರಂ ಶಕ್ತ್ಯಾ ವಿಜೇತುಮಹಿತಾನ್ಮಮ।।
ನನ್ನ ವಿಜಯಕ್ಕಾಗಿ ಹಿತಕ್ಕಾಗಿ ಪರಾಙ್ಮುಖರಾಗದೇ ಪರಮ ಶಕ್ತಿಯಿಂದ ಪ್ರಯತ್ನಮಾಡಿದ ಶೂರರು ಹತರಾದರು.
07125023a ತೇಷಾಂ ಗತ್ವಾಹಮಾನೃಣ್ಯಮದ್ಯ ಶಕ್ತ್ಯಾ ಪರಂತಪ।
07125023c ತರ್ಪಯಿಷ್ಯಾಮಿ ತಾನೇವ ಜಲೇನ ಯಮುನಾಮನು।।
ಪರಂತಪ! ಇಂದು ಹೊರಟುಹೋಗಿರುವ ಅವರ ಋಣವನ್ನು ನಾನು ಶಕ್ತಿಯಿಂದ ಯಮುನೆಯ ಜಲದಿಂದ ತರ್ಪಣಗಳನ್ನಿತ್ತು ತೀರಿಸಿಕೊಳ್ಳುತ್ತೇನೆ.
07125024a ಸತ್ಯಂ ತೇ ಪ್ರತಿಜಾನಾಮಿ ಸರ್ವಶಸ್ತ್ರಭೃತಾಂ ವರ।
07125024c ಇಷ್ಟಾಪೂರ್ತೇನ ಚ ಶಪೇ ವೀರ್ಯೇಣ ಚ ಸುತೈರಪಿ।।
ಸರ್ವಶಸ್ತ್ರಧಾರಿಗಳಲ್ಲಿ ಶ್ರೇಷ್ಠನೇ! ನಿನಗೆ ಸತ್ಯವಾದುದನ್ನು ಪ್ರತಿಜ್ಞೆಮಾಡಿ ಹೇಳುತ್ತೇನೆ. ನನ್ನ ವೀರ್ಯ ಮತ್ತು ಸುತರ ಮೇಲೆ ಆಣೆಯಿಟ್ಟು ಇಷ್ಟಾಪೂರ್ತಿಯಿಂದ ಶಪಥ ಮಾಡುತ್ತೇನೆ.
07125025a ನಿಹತ್ಯ ತಾನ್ರಣೇ ಸರ್ವಾನ್ಪಾಂಚಾಲಾನ್ಪಾಂಡವೈಃ ಸಹ।
07125025c ಶಾಂತಿಂ ಲಬ್ಧಾಸ್ಮಿ ತೇಷಾಂ ವಾ ರಣೇ ಗಂತಾ ಸಲೋಕತಾಂ।।
ರಣದಲ್ಲಿ ಆ ಎಲ್ಲ ಪಾಂಚಾಲರನ್ನೂ ಪಾಂಡವರೊಂದಿಗೆ ಸಂಹರಿಸಿ ಶಾಂತಿಯನ್ನು ಪಡೆಯುತ್ತೇನೆ ಅಥವಾ ಅವರು ಹೋಗಿರುವ ಲೋಕಗಳಿಗೆ ಹೋಗುತ್ತೇನೆ.
07125026a ನ ಹೀದಾನೀಂ ಸಹಾಯಾ ಮೇ ಪರೀಪ್ಸಂತ್ಯನುಪಸ್ಕೃತಾಃ।
07125026c ಶ್ರೇಯೋ ಹಿ ಪಾಂಡೂನ್ಮನ್ಯಂತೇ ನ ತಥಾಸ್ಮಾನ್ಮಹಾಭುಜ।।
ಮಹಾಭುಜ! ನನ್ನನ್ನು ಅನುಸರಿಸಿಬಂದವರು ಈಗ ನನಗೆ ಸಹಾಯವನ್ನು ಮಾಡಲು ಬಯಸುತ್ತಿಲ್ಲ. ಏಕೆಂದರೆ ಈಗ ಅವರು ನಮ್ಮನ್ನಲ್ಲ - ಪಾಂಡವರನ್ನೇ ಶ್ರೇಷ್ಠರೆಂದು ತಿಳಿದಿದ್ದಾರೆ.
07125027a ಸ್ವಯಂ ಹಿ ಮೃತ್ಯುರ್ವಿಹಿತಃ ಸತ್ಯಸಂಧೇನ ಸಂಯುಗೇ।
07125027c ಭವಾನುಪೇಕ್ಷಾಂ ಕುರುತೇ ಸುಶಿಷ್ಯತ್ವಾದ್ಧನಂಜಯೇ।।
ಆ ಸತ್ಯಸಂಧ ಭೀಷ್ಮನು ಸಂಯುಗದಲ್ಲಿ ತಾನೇ ತನಗೆ ಮೃತ್ಯುವನ್ನು ತಂದುಕೊಂಡನು. ನೀವು ನಿಮ್ಮ ಪ್ರಿಯ ಶಿಷ್ಯ ಧನಂಜಯನಿಂದಾಗಿ ಉಪೇಕ್ಷೆ ಮಾಡುತ್ತಿದ್ದೀರಿ.
07125028a ಅತೋ ವಿನಿಹತಾಃ ಸರ್ವೇ ಯೇಽಸ್ಮಜ್ಜಯಚಿಕೀರ್ಷವಃ।
07125028c ಕರ್ಣಮೇವ ತು ಪಶ್ಯಾಮಿ ಸಂಪ್ರತ್ಯಸ್ಮಜ್ಜಯೈಷಿಣಂ।।
ನಮಗೆ ಜಯವನ್ನು ಬಯಸಿದವರೆಲ್ಲರೂ ಈಗ ಹತರಾಗಿಬಿಟ್ಟಿದ್ದಾರೆ. ಆದರೆ ಸದ್ಯದಲ್ಲಿ ಕರ್ಣನಲ್ಲಿ ಮಾತ್ರ ನನಗೆ ಜಯವನ್ನು ತರುವ ಬಯಕೆಯನ್ನು ಕಾಣುತ್ತಿದ್ದೇನೆ.
07125029a ಯೋ ಹಿ ಮಿತ್ರಮವಿಜ್ಞಾಯ ಯಾಥಾತಥ್ಯೇನ ಮಂದಧೀಃ।
07125029c ಮಿತ್ರಾರ್ಥೇ ಯೋಜಯತ್ಯೇನಂ ತಸ್ಯ ಸೋಽರ್ಥೋಽವಸೀದತಿ।।
ಯಾವ ಮಂದಬುದ್ಧಿಯು ಮಿತ್ರನು ಹೇಗಿದ್ದಾನೆಂದು ಸರಿಯಾಗಿ ತಿಳಿದುಕೊಳ್ಳದೇ ಮಿತ್ರರು ಮಾಡುವ ಕೆಲಸವನ್ನು ಅವನಿಗೆ ವಹಿಸಿದರೆ ಅದು ಹಾಳಾಗಿ ಹೋಗುತ್ತದೆ.
07125030a ತಾದೃಗ್ರೂಪಮಿದಂ ಕಾರ್ಯಂ ಕೃತಂ ಮಮ ಸುಹೃದ್ಬ್ರುವೈಃ।
07125030c ಮೋಹಾಲ್ಲುಬ್ಧಸ್ಯ ಪಾಪಸ್ಯ ಜಿಹ್ಮಾಚಾರೈಸ್ತತಸ್ತತಃ।।
ಲುಬ್ಧ, ಪಾಪಿ, ಕುಟಿಲ, ಧನಲೋಭಿಯಾದ ನನ್ನ ಕಾರ್ಯಗಳೂ ಸುಹೃದಯರೆಂದು ಹೇಳಿಸಿಕೊಳ್ಳುವವರಿಂದ ಹೀಗೆಯೇ ಹಾಳಾಗಿ ಹೋಯಿತು.
07125031a ಹತೋ ಜಯದ್ರಥಶ್ಚೈವ ಸೌಮದತ್ತಿಶ್ಚ ವೀರ್ಯವಾನ್।
07125031c ಅಭೀಷಾಹಾಃ ಶೂರಸೇನಾಃ ಶಿಬಯೋಽಥ ವಸಾತಯಃ।।
ಜಯದ್ರಥ, ವೀರ್ಯವಾನ್ ಸೌಮದತ್ತಿ, ಅಭೀಷಾಹರು, ಶೂರಸೇನರು, ಶಿಬಿಗಳು ಮತ್ತು ವಸಾಹತರು ಹತರಾದರು.
07125032a ಸೋಽಹಮದ್ಯ ಗಮಿಷ್ಯಾಮಿ ಯತ್ರ ತೇ ಪುರುಷರ್ಷಭಾಃ।
07125032c ಹತಾ ಮದರ್ಥಂ ಸಂಗ್ರಾಮೇ ಯುಧ್ಯಮಾನಾಃ ಕಿರೀಟಿನಾ।।
ನನಗಾಗಿ ಸಂಗ್ರಾಮದಲ್ಲಿ ಹೋರಾಡುತ್ತಾ ಆ ಪುರುಷರ್ಷಭರು ಕಿರೀಟಿಯಿಂದ ಹತರಾಗಿ ಎಲ್ಲಿಗೆ ಹೋಗಿರುವರೋ ಅಲ್ಲಿಗೆ ನಾನೂ ಕೂಡ ಇಂದು ಹೋಗುತ್ತೇನೆ.
07125033a ನ ಹಿ ಮೇ ಜೀವಿತೇನಾರ್ಥಸ್ತಾನೃತೇ ಪುರುಷರ್ಷಭಾನ್।
07125033c ಆಚಾರ್ಯಃ ಪಾಂಡುಪುತ್ರಾಣಾಮನುಜಾನಾತು ನೋ ಭವಾನ್।।
ಆ ಪುರುಷರ್ಷಭರು ಇಲ್ಲದೇ ನಾನು ಬದುಕಿರುವುದರಲ್ಲಿ ಅರ್ಥವಿಲ್ಲ. ಪಾಂಡುಪುತ್ರರ ಆಚಾರ್ಯರಾದ ನೀವು ನನಗೆ ಅನುಮತಿಯನ್ನು ನೀಡಬೇಕು.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ದುರ್ಯೋಧನಾನುತಾಪೇ ಪಂಚವಿಂಶಾಧಿಕಶತತಮೋಽಧ್ಯಾಯಃ ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ದುರ್ಯೋಧನಾನುತಾಪ ಎನ್ನುವ ನೂರಾಇಪ್ಪತ್ತೈದನೇ ಅಧ್ಯಾಯವು.