ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 124
ಸಾರ
ಜಯದ್ರಥನ ವಧೆಯಿಂದ ಹರ್ಷಿತನಾದ ಯುಧಿಷ್ಠಿರನು ಕೃಷ್ಣನನ್ನು ಪ್ರಶಂಸಿದುದು (1-18). ಕೃಷ್ಣನ ಪ್ರತಿಮಾತು (19-26). ಯುಧಿಷ್ಠಿರನು ಭೀಮಸೇನ-ಸಾತ್ಯಕಿಯರನ್ನೂ ಅಭಿನಂದಿಸಿದುದು (27-33).
07124001 ಸಂಜಯ ಉವಾಚ।
07124001a ತತೋ ಯುಧಿಷ್ಠಿರೋ ರಾಜಾ ರಥಾದಾಪ್ಲುತ್ಯ ಭಾರತ।
07124001c ಪರ್ಯಷ್ವಜತ್ತದಾ ಕೃಷ್ಣಾವಾನಂದಾಶ್ರುಪರಿಪ್ಲುತಃ।।
ಸಂಜಯನು ಹೇಳಿದನು: “ಭಾರತ! ಆಗ ರಾಜಾ ಯುಧಿಷ್ಠಿರನು ರಥದಿಂದ ಹಾರಿ ಇಳಿದು ಆನಂದಾಶ್ರುಗಳಿಂದ ತುಂಬಿದವನಾಗಿ ಕೃಷ್ಣರನ್ನು ಅಪ್ಪಿಕೊಂಡನು.
07124002a ಪ್ರಮೃಜ್ಯ ವದನಂ ಶುಭ್ರಂ ಪುಂಡರೀಕಸಮಪ್ರಭಂ।
07124002c ಅಬ್ರವೀದ್ವಾಸುದೇವಂ ಚ ಪಾಂಡವಂ ಚ ಧನಂಜಯಂ।।
ಕಮಲಕ್ಕೆ ಸಮಾನ ಪ್ರಭೆಯುಳ್ಳ ಶುಭ್ರ ಮುಖವನ್ನು ಒರೆಸಿಕೊಂಡು ವಾಸುದೇವ ಮತ್ತು ಪಾಂಡವ ಧನಂಜಯನಿಗೆ ಹೇಳಿದನು:
07124003a ದಿಷ್ಟ್ಯಾ ಪಶ್ಯಾಮಿ ಸಂಗ್ರಾಮೇ ತೀರ್ಣಭಾರೌ ಮಹಾರಥೌ।
07124003c ದಿಷ್ಟ್ಯಾ ಚ ನಿಹತಃ ಪಾಪಃ ಸೈಂಧವಃ ಪುರುಷಾಧಮಃ।।
“ಅದೃಷ್ಟವಶಾತ್ ಸಂಗ್ರಾಮದಲ್ಲಿ ಇಬ್ಬರು ಮಹಾರಥರೂ ಪ್ರತಿಜ್ಞೆಯ ಭಾರದಿಂದ ಮುಕ್ತರಾಗಿರುವುದನ್ನು ನೋಡುತ್ತಿದ್ದೇನೆ! ಒಳ್ಳೆಯದಾಯಿತು - ಪುರುಷಾಧಮ ಪಾಪಿ ಸೈಂಧವನು ಹತನಾದನು.
07124004a ಕೃಷ್ಣ ದಿಷ್ಟ್ಯಾ ಮಮ ಪ್ರೀತಿರ್ಮಹತೀ ಪ್ರತಿಪಾದಿತಾ।
07124004c ದಿಷ್ಟ್ಯಾ ಶತ್ರುಗಣಾಶ್ಚೈವ ನಿಮಗ್ನಾಃ ಶೋಕಸಾಗರೇ।।
ಕೃಷ್ಣ! ಸೌಭಾಗ್ಯವಶಾತ್ ನನ್ನ ಸಂತೋಷವು ತುಂಬಾ ಹೆಚ್ಚಾಗಿದೆ. ಒಳ್ಳೆಯದಾಯಿತು - ಶತ್ರುಗಣಗಳು ಶೋಕಸಾಗರದಲ್ಲಿ ಮುಳುಗಿವೆ.
07124005a ನ ತೇಷಾಂ ದುಷ್ಕರಂ ಕಿಂ ಚಿತ್ತ್ರಿಷು ಲೋಕೇಷು ವಿದ್ಯತೇ।
07124005c ಸರ್ವಲೋಕಗುರುರ್ಯೇಷಾಂ ತ್ವಂ ನಾಥೋ ಮಧುಸೂದನ।।
ಮಧುಸೂದನ! ಸರ್ವಲೋಕಗಳಿಗೆ ಗುರುವಾಗಿರುವ ನೀನು ಯಾರ ನಾಥನೋ ಅವರಿಗೆ ಈ ಮೂರು ಲೋಕಗಳಲ್ಲಿಯು ದುಷ್ಕರ ಕಾರ್ಯವೆನ್ನುವುದು ಯಾವುದೂ ಇಲ್ಲ.
07124006a ತವ ಪ್ರಸಾದಾದ್ಗೋವಿಂದ ವಯಂ ಜೇಷ್ಯಾಮಹೇ ರಿಪೂನ್।
07124006c ಯಥಾ ಪೂರ್ವಂ ಪ್ರಸಾದಾತ್ತೇ ದಾನವಾನ್ಪಾಕಶಾಸನಃ।।
ಹಿಂದೆ ನಿನ್ನ ಪ್ರಸಾದದಿಂದ ಪಾಕಶಾಸನನು ದಾನವರನ್ನು ಹೇಗೋ ಹಾಗೆ ಗೋವಿಂದ! ನಿನ್ನ ಪ್ರಸಾದದಿಂದ ನಾವು ಶತ್ರುಗಳನ್ನು ಗೆಲ್ಲುತ್ತೇವೆ.
07124007a ಪೃಥಿವೀವಿಜಯೋ ವಾಪಿ ತ್ರೈಲೋಕ್ಯವಿಜಯೋಽಪಿ ವಾ।
07124007c ಧ್ರುವೋ ಹಿ ತೇಷಾಂ ವಾರ್ಷ್ಣೇಯ ಯೇಷಾಂ ತುಷ್ಟೋಽಸಿ ಮಾಧವ।।
ವಾರ್ಷ್ಣೇಯ! ಮಾಧವ! ಯಾರಿಂದ ನೀನು ತೃಪ್ತನಾಗಿದ್ದೀಯೋ ಅವರಿಗೆ ಪೃಥ್ವೀ ವಿಜಯ ಅಥವಾ ತ್ರೈಲೋಕ್ಯಗಳ ವಿಜಯವೂ ನಿಶ್ಚಯವಾದುದೇ!
07124008a ನ ತೇಷಾಂ ವಿದ್ಯತೇ ಪಾಪಂ ಸಂಗ್ರಾಮೇ ವಾ ಪರಾಜಯಃ।
07124008c ತ್ರಿದಶೇಶ್ವರನಾಥಸ್ತ್ವಂ ಯೇಷಾಂ ತುಷ್ಟೋಽಸಿ ಮಾಧವ।।
ಮಾಧವ! ತ್ರಿದಶೇಶ್ವರನ ನಾಥನಾದ ನೀನು ಯಾರಮೇಲೆ ತುಷ್ಟನಾಗಿರುವೆಯೋ ಅವರಿಗೆ ಸಂಗ್ರಾಮದಲ್ಲಿ ಪಾಪವೆನ್ನುವುದಾಗಲೀ ಪರಾಜಯವಾಗಲೀ ಇರುವುದಿಲ್ಲ.
07124009a ತ್ವತ್ಪ್ರಸಾದಾದ್ಧೃಷೀಕೇಶ ಶಕ್ರಃ ಸುರಗಣೇಶ್ವರಃ।
07124009c ತ್ರೈಲೋಕ್ಯವಿಜಯಂ ಶ್ರೀಮಾನ್ಪ್ರಾಪ್ತವಾನ್ರಣಮೂರ್ಧನಿ।।
ಹೃಷೀಕೇಶ! ನಿನ್ನ ಪ್ರಸಾದದಿಂದ ಶ್ರೀಮಾನ್ ಸುರಗಣೇಶ್ವರ ಶಕ್ರನು ರಣಮೂರ್ಧನಿಯಲ್ಲಿ ತ್ರೈಲೋಕ್ಯವಿಜಯವನ್ನು ಪಡೆದನು.
07124010a ತವ ಚೈವ ಪ್ರಸಾದೇನ ತ್ರಿದಶಾಸ್ತ್ರಿದಶೇಶ್ವರ।
07124010c ಅಮರತ್ವಂ ಗತಾಃ ಕೃಷ್ಣ ಲೋಕಾಂಶ್ಚಾಶ್ನುವತೇಽಕ್ಷಯಾನ್।।
ಕೃಷ್ಣ! ತ್ರಿದಶೇಶ್ವರ! ನಿನ್ನ ಪ್ರಸಾದದಿಂದಲೇ ತ್ರಿದಶರು ಅಮರತ್ವವನ್ನು ಪಡೆದರು ಮತ್ತು ಅಕ್ಷಯ ಲೋಕಗಳನ್ನು ಹೊಂದಿದರು.
07124011a ತ್ವತ್ಪ್ರಸಾದಸಮುತ್ಥೇನ ವಿಕ್ರಮೇಣಾರಿಸೂದನ।
07124011c ಸುರೇಶತ್ವಂ ಗತಃ ಶಕ್ರೋ ಹತ್ವಾ ದೈತ್ಯಾನ್ಸಹಸ್ರಶಃ।।
ಅರಿಸೂದನ! ನಿನ್ನ ಪ್ರಸಾದದಿಂದ ಮೇಲೆದ್ದ ವಿಕ್ರಮದಿಂದ ಶಕ್ರನು ಸಹಸ್ರಾರು ದೈತ್ಯರನ್ನು ಸಂಹರಿಸಿ ಸುರೇಶತ್ವವನ್ನು ಹೊಂದಿದನು.
07124012a ತ್ವತ್ಪ್ರಸಾದಾದ್ಧೃಷೀಕೇಶ ಜಗತ್ ಸ್ಥಾವರಜಂಗಮಂ।
07124012c ಸ್ವವರ್ತ್ಮನಿ ಸ್ಥಿತಂ ವೀರ ಜಪಹೋಮೇಷು ವರ್ತತೇ।।
ಹೃಷೀಕೇಶ! ನಿನ್ನ ಪ್ರಸಾದದಿಂದ ಸ್ಥಾವರಜಂಗಮಗಳ ಈ ಜಗತ್ತು ತನ್ನ ಮಾರ್ಗದಲ್ಲಿ ಸ್ಥಿರವಾಗಿ ನಿಂತಿದೆ; ಜಪ-ಹೋಮಗಳಲ್ಲಿ ತೊಡಗಿದೆ.
07124013a ಏಕಾರ್ಣವಮಿದಂ ಪೂರ್ವಂ ಸರ್ವಮಾಸೀತ್ತಮೋಮಯಂ।
07124013c ತ್ವತ್ಪ್ರಸಾದಾತ್ಪ್ರಕಾಶತ್ವಂ ಜಗತ್ಪ್ರಾಪ್ತಂ ನರೋತ್ತಮ।।
ಹಿಂದೆ ಇದು ಒಂದೇ ಸಾಗರವಾಗಿದ್ದು ಎಲ್ಲಕಡೆ ಅತ್ಯಂತ ಕತ್ತಲೆಯು ಆವರಿಸಿತ್ತು. ನರೋತ್ತಮ! ಆಗ ನಿನ್ನ ಪ್ರಸಾದದಿಂದ ಜಗತ್ತು ಪ್ರಕಾಶತ್ವವನ್ನು ಪಡೆಯಿತು.
07124014a ಸ್ರಷ್ಟಾರಂ ಸರ್ವಲೋಕಾನಾಂ ಪರಮಾತ್ಮಾನಮಚ್ಯುತಂ।
07124014c ಯೇ ಪ್ರಪನ್ನಾ ಹೃಷೀಕೇಶಂ ನ ತೇ ಮುಹ್ಯಂತಿ ಕರ್ಹಿ ಚಿತ್।।
ಸರ್ವಲೋಕಗಳ ಸೃಷ್ಟಾರ, ಪರಮಾತ್ಮ, ಅಚ್ಯುತ, ಹೃಷೀಕೇಶನನ್ನು ಯಾರು ಮೊರೆಹೊಗುತ್ತಾರೋ ಅವರು ಎಂದೂ ಮೋಹಗೊಳ್ಳುವುದಿಲ್ಲ.
07124015a ಅನಾದಿನಿಧನಂ ದೇವಂ ಲೋಕಕರ್ತಾರಮವ್ಯಯಂ।
07124015c ತ್ವಾಂ ಭಕ್ತಾ ಯೇ ಹೃಷೀಕೇಶ ದುರ್ಗಾಣ್ಯತಿತರಂತಿ ತೇ।।
ಹೃಷೀಕೇಶ! ಅನಾದಿನಿಧನ, ದೇವ, ಲೋಕಕರ್ತಾರ, ಅವ್ಯಯನಾಗಿರುವ ನಿನ್ನ ಭಕ್ತರು ಕಷ್ಟಗಳನ್ನು ದಾಟುತ್ತಾರೆ.
07124016a ಪರಂ ಪುರಾಣಂ ಪುರುಷಂ ಪುರಾಣಾನಾಂ ಪರಂ ಚ ಯತ್।
07124016c ಪ್ರಪದ್ಯತಸ್ತಂ ಪರಮಂ ಪರಾ ಭೂತಿರ್ವಿಧೀಯತೇ।।
ಪರಮ, ಪುರಾಣ, ಪುರಾಣಗಳ ಪುರುಷ, ಪರಮ ಪದವನ್ನು ಯಾರು ಮೊರೆಹೋಗುತ್ತಾರೋ ಅವರು ಪರಮ ಪದವಿಯನ್ನು ಪಡೆಯುತ್ತಾರೆ.
07124017a ಯೋಽಗಾತ ಚತುರೋ ವೇದಾನ್ಯಶ್ಚ ವೇದೇಷು ಗೀಯತೇ।
07124017c ತಂ ಪ್ರಪದ್ಯ ಮಹಾತ್ಮಾನಂ ಭೂತಿಮಾಪ್ನೋತ್ಯನುತ್ತಮಾಂ।।
ಯಾರನ್ನು ನಾಲ್ಕು ವೇದಗಳೂ ಹಾಡುವವೋ, ಯಾರು ವೇದಗಳಲ್ಲಿ ಹಾಡಲ್ಪಟ್ಟಿರುವನೋ ಆ ಮಹಾತ್ಮನನ್ನು ಶರಣುಹೊಕ್ಕು ಅನುತ್ತಮ ಗತಿಯನ್ನು ಪಡೆಯುವರು.
07124018a ಧನಂಜಯಸಖಾ ಯಶ್ಚ ಧನಂಜಯಹಿತಶ್ಚ ಯಃ।
07124018c ತಂ ಧನಂಜಯಗೋಪ್ತಾರಂ ಪ್ರಪದ್ಯ ಸುಖಮೇಧತೇ।।
ಯಾರು ಧನಂಜಯನ ಸಖನಾಗಿರುವನೋ, ಯಾರು ಧನಂಜಯನ ಹಿತೈಷಿಯೋ ಆ ಧನಂಜಯರಕ್ಷಕನನ್ನು ಮೊರೆಹೊಕ್ಕರೆ ಸುಖವು ದೊರೆಯುತ್ತದೆ.”
07124019a ಇತ್ಯುಕ್ತೌ ತೌ ಮಹಾತ್ಮಾನಾವುಭೌ ಕೇಶವಪಾಂಡವೌ।
07124019c ತಾವಬ್ರೂತಾಂ ತದಾ ಹೃಷ್ಟೌ ರಾಜಾನಂ ಪೃಥಿವೀಪತಿಂ।।
ಹೀಗೆ ಅವನು ಆ ಮಹಾತ್ಮ ಕೇಶವ-ಪಾಂಡವರಿಗೆ ಹೇಳಲು ಅವರಿಬ್ಬರೂ ಹೃಷ್ಟರಾಗಿ ರಾಜಾ ಪೃಥಿವೀಪತಿಗೆ ಹೇಳಿದರು:
07124020a ತವ ಕೋಪಾಗ್ನಿನಾ ದಗ್ಧಃ ಪಾಪೋ ರಾಜಾ ಜಯದ್ರಥಃ।
07124020c ಉದೀರ್ಣಂ ಚಾಪಿ ಸುಮಹದ್ಧಾರ್ತರಾಷ್ಟ್ರಬಲಂ ರಣೇ।।
“ರಾಜಾ! ನಿನ್ನ ಕೋಪಾಗ್ನಿಯಿಂದ ಪಾಪಿ ಜಯದ್ರಥನು ಸುಟ್ಟುಹೋದನು ಮತ್ತು ರಣದಲ್ಲಿ ಧಾರ್ತರಾಷ್ಟ್ರನ ಅತಿದೊಡ್ಡ ಬಲವು ಪುಡಿಪುಡಿಯಾಯಿತು.
07124021a ಹನ್ಯತೇ ನಿಹತಂ ಚೈವ ವಿನಂಕ್ಷ್ಯತಿ ಚ ಭಾರತ।
07124021c ತವ ಕ್ರೋಧಹತಾ ಹ್ಯೇತೇ ಕೌರವಾಃ ಶತ್ರುಸೂದನ।।
ಭಾರತ! ಶತ್ರುಸೂದನ! ನಿನ್ನ ಕೋಪಾಗ್ನಿಯಿಂದ ಹತರಾದವರು ಹತರಾದರು. ಇನ್ನೂ ಹತರಾಗಲಿದ್ದಾರೆ.
07124022a ತ್ವಾಂ ಹಿ ಚಕ್ಷುರ್ಹಣಂ ವೀರಂ ಕೋಪಯಿತ್ವಾ ಸುಯೋಧನಃ।
07124022c ಸಮಿತ್ರಬಂಧುಃ ಸಮರೇ ಪ್ರಾಣಾಂಸ್ತ್ಯಕ್ಷ್ಯತಿ ದುರ್ಮತಿಃ।।
ದೃಷ್ಟಿಹಾಯಿಸುವುದರಿಂದ ಮಾತ್ರ ನಾಶಪಡಿಸಬಲ್ಲ ವೀರ ನಿನ್ನನ್ನು ಕೋಪಗೊಳಿಸಿ ದುರ್ಮತಿ ಸುಯೋಧನನು ಸಮರದಲ್ಲಿ ಮಿತ್ರ-ಬಂಧುಗಳೊಡನೆ ಪ್ರಾಣಗಳನ್ನು ಕಳೆದುಕೊಳ್ಳುತ್ತಾನೆ.
07124023a ತವ ಕ್ರೋಧಹತಃ ಪೂರ್ವಂ ದೇವೈರಪಿ ಸುದುರ್ಜಯಃ।
07124023c ಶರತಲ್ಪಗತಃ ಶೇತೇ ಭೀಷ್ಮಃ ಕುರುಪಿತಾಮಹಃ।।
ಈ ಹಿಂದೆಯೇ ನಿನ್ನ ಕ್ರೋಧದಿಂದ ಹತನಾಗಿ ದೇವತೆಗಳಿಗೂ ಸುದುರ್ಜಯನಾದ ಕುರುಪಿತಾಮಹ ಭೀಷ್ಮನು ಶರತಲ್ಪಗತನಾಗಿದ್ದಾನೆ.
07124024a ದುರ್ಲಭೋ ಹಿ ಜಯಸ್ತೇಷಾಂ ಸಂಗ್ರಾಮೇ ರಿಪುಸೂದನ।
07124024c ಯಾತಾ ಮೃತ್ಯುವಶಂ ತೇ ವೈ ಯೇಷಾಂ ಕ್ರುದ್ಧೋಽಸಿ ಪಾಂಡವ।।
ರಿಪುಸೂದನ! ಪಾಂಡವ! ಯಾರ ಮೇಲೆ ನೀನು ಕ್ರುದ್ಧನಾಗಿದ್ದೀಯೋ ಅವರಿಗೆ ಸಂಗ್ರಾಮದಲ್ಲಿ ಜಯವು ದುರ್ಲಭವೇ ಸರಿ. ಅವರು ಈಗಾಗಲೇ ಮೃತ್ಯುವಶರಾಗಿಬಿಟ್ಟಿದ್ದಾರೆ.
07124025a ರಾಜ್ಯಂ ಪ್ರಾಣಾಃ ಪ್ರಿಯಾಃ ಪುತ್ರಾಃ ಸೌಖ್ಯಾನಿ ವಿವಿಧಾನಿ ಚ।
07124025c ಅಚಿರಾತ್ತಸ್ಯ ನಶ್ಯಂತಿ ಯೇಷಾಂ ಕ್ರುದ್ಧೋಽಸಿ ಮಾನದ।।
ಮಾನದ! ಯಾರ ಮೇಲೆ ನೀನು ಕ್ರುದ್ಧನಾಗಿದ್ದೀಯೋ ಅವರ ರಾಜ್ಯ, ಪ್ರಾಣಗಳು, ಪ್ರಿಯರು, ಪುತ್ರರು ಮತ್ತು ವಿವಿಧ ಸುಖಗಳು ಬೇಗನೇ ನಾಶವಾಗುತ್ತವೆ.
07124026a ವಿನಷ್ಟಾನ್ಕೌರವಾನ್ಮನ್ಯೇ ಸಪುತ್ರಪಶುಬಾಂಧವಾನ್।
07124026c ರಾಜಧರ್ಮಪರೇ ನಿತ್ಯಂ ತ್ವಯಿ ಕ್ರುದ್ಧೇ ಯುಧಿಷ್ಠಿರ।।
ಯುಧಿಷ್ಠಿರ! ನಿತ್ಯವೂ ರಾಜಧರ್ಮದಲ್ಲಿ ನಿರತನಾಗಿರುವ ನೀನು ಕ್ರುದ್ಧನಾಗಿರಲು ಕೌರವರು ಪುತ್ರ-ಪಶು-ಬಾಂಧವರೊಂದಿಗೆ ವಿನಷ್ಟರಾದರೆಂದೇ ತಿಳಿದುಕೋ.”
07124027a ತತೋ ಭೀಮೋ ಮಹಾಬಾಹುಃ ಸಾತ್ಯಕಿಶ್ಚ ಮಹಾರಥಃ।
07124027c ಅಭಿವಾದ್ಯ ಗುರುಂ ಜ್ಯೇಷ್ಠಂ ಮಾರ್ಗಣೈಃ ಕ್ಷತವಿಕ್ಷತೌ।
07124027e ಸ್ಥಿತಾವಾಸ್ತಾಂ ಮಹೇಷ್ವಾಸೌ ಪಾಂಚಾಲ್ಯೈಃ ಪರಿವಾರಿತೌ।।
ಆಗ ಮಾರ್ಗಣಗಳಿಂದ ಕ್ಷತ-ವಿಕ್ಷತರಾಗಿದ್ದ ಮಹಾಬಾಹು ಭೀಮ ಮತ್ತು ಮಹಾರಥ ಸಾತ್ಯಕಿಯರು ಹಿರಿಯ ಜ್ಯೇಷ್ಠನಿಗೆ ವಂದಿಸಿದರು. ಅವರಿಬ್ಬರು ಮಹೇಷ್ವಾಸರೂ ಪಾಂಚಾಲರಿಂದ ಪರಿವೃತರಾಗಿ ಅಲ್ಲಿ ನಿಂತುಕೊಂಡರು.
07124028a ತೌ ದೃಷ್ಟ್ವ ಮುದಿತೌ ವೀರೌ ಪ್ರಾಂಜಲೀ ಚಾಗ್ರತಃ ಸ್ಥಿತೌ।
07124028c ಅಭ್ಯನಂದತ ಕೌಂತೇಯಸ್ತಾವುಭೌ ಭೀಮಸಾತ್ಯಕೀ।।
ಕೈಮುಗಿದು ಮುಂದೆ ನಿಂತುಕೊಂಡಿದ್ದ ಆ ಮುದಿತ ವೀರರಾದ ಭೀಮ-ಸಾತ್ಯಕಿಯರನ್ನು ನೋಡಿ ಕೌಂತೇಯನು ಅವರಿಬ್ಬರನ್ನೂ ಅಭಿನಂದಿಸಿದನು:
07124029a ದಿಷ್ಟ್ಯಾ ಪಶ್ಯಾಮಿ ವಾಂ ವೀರೌ ವಿಮುಕ್ತೌ ಸೈನ್ಯಸಾಗರಾತ್।
07124029c ದ್ರೋಣಗ್ರಾಹಾದ್ದುರಾಧರ್ಷಾದ್ಧಾರ್ದಿಕ್ಯಮಕರಾಲಯಾತ್।
“ಒಳ್ಳೆಯದಾಯಿತು! ದುರಧರ್ಷ ದ್ರೋಣನೆಂಬ ತಿಮಿಂಗಿಲ ಮತ್ತು ಹಾರ್ದಿಕ್ಯನೆಂಬ ಮೊಸಳೆಯಿದ್ದ ಸೈನ್ಯ ಸಾಗರದಿಂದ ಉತ್ತೀರ್ಣರಾಗಿ ಬಂದಿರುವ ನೀವಿಬ್ಬರು ವೀರರನ್ನೂ ಕಾಣುತ್ತಿದ್ದೇನೆ.
07124029e ದಿಷ್ಟ್ಯಾ ಚ ನಿರ್ಜಿತಾಃ ಸಂಖ್ಯೇ ಪೃಥಿವ್ಯಾಂ ಸರ್ವಪಾರ್ಥಿವಾಃ।।
07124030a ಯುವಾಂ ವಿಜಯಿನೌ ಚಾಪಿ ದಿಷ್ಟ್ಯಾ ಪಶ್ಯಾಮಿ ಸಂಯುಗೇ।
07124030c ದಿಷ್ಟ್ಯಾ ದ್ರೋಣೋ ಜಿತಃ ಸಂಖ್ಯೇ ಹಾರ್ದಿಕ್ಯಶ್ಚ ಮಹಾಬಲಃ।।
ಒಳ್ಳೆಯದಾಯಿತು! ರಣದಲ್ಲಿ ಪೃಥ್ವಿಯ ಸರ್ವಪಾರ್ಥಿವರೂ ಸೋತುಹೋದರು. ಒಳ್ಳೆಯದಾಯಿತು! ರಣದಲ್ಲಿ ವಿಜಯವನ್ನು ಗಳಿಸಿಬಂದ ನಿಮ್ಮೀರ್ವರನ್ನೂ ನೋಡುತ್ತಿದ್ದೇನೆ. ಒಳ್ಳೆಯದಾಯಿತು! ಯುದ್ಧದಲ್ಲಿ ದ್ರೋಣ ಮತ್ತು ಮಹಾಬಲ ಹಾರ್ದಿಕ್ಯರು ಗೆಲ್ಲಲ್ಪಟ್ಟರು.
07124031a ಸೈನ್ಯಾರ್ಣವಂ ಸಮುತ್ತೀರ್ಣೌ ದಿಷ್ಟ್ಯಾ ಪಶ್ಯಾಮಿ ಚಾನಘೌ।
07124031c ಸಮರಶ್ಲಾಘಿನೌ ವೀರೌ ಸಮರೇಷ್ವಪಲಾಯಿನೌ।
07124031e ಮಮ ಪ್ರಾಣಸಮೌ ಚೈವ ದಿಷ್ಟ್ಯಾ ಪಶ್ಯಾಮಿ ವಾಮಹಂ।।
ಒಳ್ಳೆಯದಾಯಿತು! ಸೈನ್ಯಸಮುದ್ರವನ್ನು ಚೆನ್ನಾಗಿ ದಾಟಿಬಂದ, ಅನಘ, ಸಮರಶ್ಲಾಘೀ, ವೀರ, ಸಮರದಲ್ಲಿ ಪಲಾಯನ ಮಾಡದೇ ಇರುವ, ನನ್ನ ಪ್ರಾಣಸಮರಾದ ನಿಮ್ಮಿಬ್ಬರನ್ನು ನನ್ನ ಪಕ್ಕದಲ್ಲಿ ಕಾಣುತ್ತಿದ್ದೇನೆ!”
07124032a ಇತ್ಯುಕ್ತ್ವಾ ಪಾಂಡವೋ ರಾಜಾ ಯುಯುಧಾನವೃಕೋದರೌ।
07124032c ಸಸ್ವಜೇ ಪುರುಷವ್ಯಾಘ್ರೌ ಹರ್ಷಾದ್ಬಾಷ್ಪಂ ಮುಮೋಚ ಹ।।
ಹೀಗೆ ಹೇಳಿ ರಾಜಾ ಪಾಂಡವನು ಪುರುಷವ್ಯಾಘ್ರ ಯುಯುಧಾನ-ವೃಕೋದರರನ್ನು ಬಿಗಿದಪ್ಪಿದನು ಮತ್ತು ಆನಂದಾಶ್ರುಗಳನ್ನು ಸುರಿಸಿದನು.
07124033a ತತಃ ಪ್ರಮುದಿತಂ ಸರ್ವಂ ಬಲಮಾಸೀದ್ವಿಶಾಂ ಪತೇ।
07124033c ಪಾಂಡವಾನಾಂ ಜಯಂ ದೃಷ್ಟ್ವಾ ಯುದ್ಧಾಯ ಚ ಮನೋ ದಧೇ।।
ವಿಶಾಂಪತೇ! ಆಗ ಪಾಂಡವರ ಜಯವನ್ನು ನೋಡಿ ಎಲ್ಲ ಸೇನೆಗಳೂ ಮುದಿತರಾಗಿ ಯುದ್ಧದ ಮನಸ್ಸು ಮಾಡಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಯುಧಿಷ್ಠಿರಹರ್ಷೇ ಚತುರ್ವಿಂಶಾಧಿಕಶತತಮೋಽಧ್ಯಾಯಃ ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಯುಧಿಷ್ಠಿರಹರ್ಷ ಎನ್ನುವ ನೂರಾಇಪ್ಪತ್ನಾಲ್ಕನೇ ಅಧ್ಯಾಯವು.