123

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಜಯದ್ರಥವಧ ಪರ್ವ

ಅಧ್ಯಾಯ 123

ಸಾರ

ಕರ್ಣನಿಂದ ತನಗಾದ ಅಪಮಾನವನ್ನು ಭೀಮಸೇನನು ಹೇಳಿಕೊಳ್ಳಲು ಅರ್ಜುನನು ಕರ್ಣವಧೆಯ ಮತ್ತು ವೃಷಸೇನನನ್ನು ವಧಿಸುವ ಪ್ರತಿಜ್ಞೆಮಾಡಿದುದು (1-19). ಪ್ರತಿಜ್ಞೆಯನ್ನು ಪೂರೈಸಿದ ಅರ್ಜುನನೊಂದಿಗೆ ಕೃಷ್ಣನ ಸಂವಾದ (20-30). ಕೃಷ್ಣನು ಅರ್ಜುನನಿಗೆ ರಣಭೂಮಿಯನ್ನು ತೋರಿಸಿ ವರ್ಣಿಸಿದುದು (31-41).

07123001 ಧೃತರಾಷ್ಟ್ರ ಉವಾಚ।
07123001a ತಥಾ ಗತೇಷು ಶೂರೇಷು ತೇಷಾಂ ಮಮ ಚ ಸಂಜಯ।
07123001c ಕಿಂ ವೈ ಭೀಮಸ್ತದಾಕಾರ್ಷೀತ್ತನ್ಮಮಾಚಕ್ಷ್ವ ಸಂಜಯ।।

ಧೃತರಾಷ್ಟ್ರನು ಹೇಳಿದನು: “ಸಂಜಯ! ಹೀಗೆ ನನ್ನವರ ಮತ್ತು ಅವರ ಶೂರರು ಹೋಗಲು ಭೀಮನು ಏನು ಮಾಡುತ್ತಿದ್ದನೆನ್ನುವುದನ್ನು ನನಗೆ ಹೇಳು.”

07123002 ಸಂಜಯ ಉವಾಚ।
07123002a ವಿರಥೋ ಭೀಮಸೇನೋ ವೈ ಕರ್ಣವಾಕ್ಶಲ್ಯಪೀಡಿತಃ।
07123002c ಅಮರ್ಷವಶಮಾಪನ್ನಃ ಫಲ್ಗುನಂ ವಾಕ್ಯಮಬ್ರವೀತ್।।

ಸಂಜಯನು ಹೇಳಿದನು: “ವಿರಥನಾದ ಭಿಮಸೇನನು ಕರ್ಣನ ಮಾತಿನ ಈಟಿಯಿಂದ ಪೀಡಿತನಾಗಿ, ಕೋಪಾವಿಷ್ಟನಾಗಿ ಫಲ್ಗುನನಿಗೆ ಈ ಮಾತನ್ನಾಡಿದನು:

07123003a ಪುನಃ ಪುನಸ್ತೂಬರಕ ಮೂಢ ಔದರಿಕೇತಿ ಚ।
07123003c ಅಕೃತಾಸ್ತ್ರಕ ಮಾ ಯೋಧೀರ್ಬಾಲ ಸಂಗ್ರಾಮಕಾತರ।।
07123004a ಇತಿ ಮಾಮಬ್ರವೀತ್ಕರ್ಣಃ ಪಶ್ಯತಸ್ತೇ ಧನಂಜಯ।

“ಧನಂಜಯ! ನೀನು ನೋಡುತ್ತಿದ್ದಂತೆಯೇ ಕರ್ಣನು ನನಗೆ ಪುನಃ ಪುನಃ “ಗಡ್ಡಮೀಸೆಗಳಿಲ್ಲದವನೇ! ಮೂಢನೇ! ಹೊಟ್ಟೆಬಾಕ!” ಎಂದೂ “ಅಸ್ತ್ರವಿದ್ಯೆಯಲ್ಲಿ ಪರಿಣಿತಿಯಿಲ್ಲದವನೇ! ಬಾಲಕನಂತೆ ಯುದ್ಧಮಾಡುವವನೇ! ಸಂಗ್ರಾಮಭೀರೋ!” ಎಂದೂ ಹೇಳಿದನು.

07123004c ಏವಂ ವಕ್ತಾ ಚ ಮೇ ವಧ್ಯಸ್ತೇನ ಚೋಕ್ತೋಽಸ್ಮಿ ಭಾರತ।।
07123005a ಏತದ್ವ್ರತಂ ಮಹಾಬಾಹೋ ತ್ವಯಾ ಸಹ ಕೃತಂ ಮಯಾ।
07123005c ಯಥೈತನ್ಮಮ ಕೌಂತೇಯ ತಥಾ ತವ ನ ಸಂಶಯಃ।।

ಭಾರತ! ಹೀಗೆ ನನ್ನನ್ನು ನಿಂದಿಸುವವನನ್ನು ವಧಿಸುತ್ತೇನೆ ಎಂದು ಹೇಳಿದ್ದೆ. ಮಹಾಬಾಹೋ! ಆ ವ್ರತವನ್ನು ನನ್ನೊಂದಿಗೆ ನೀನೂ ಕೂಡ ಕೈಗೊಂಡಿದ್ದೆ. ಕೌಂತೇಯ! ಆದುದರಿಂದ ಇದು ನನ್ನ ಕರ್ತವ್ಯದಂತೆ ನಿನ್ನದೂ ಆಗಿದೆ. ಅದರಲ್ಲಿ ಸಂಶಯವಿಲ್ಲ.

07123006a ತದ್ವಧಾಯ ನರಶ್ರೇಷ್ಠ ಸ್ಮರೈತದ್ವಚನಂ ಮಮ।
07123006c ಯಥಾ ಭವತಿ ತತ್ಸತ್ಯಂ ತಥಾ ಕುರು ಧನಂಜಯ।।

ನರಶ್ರೇಷ್ಠ! ಅವನ ವಧೆಯ ಕುರಿತು ನನ್ನ ವಚನವನ್ನು ಸ್ಮರಿಸಿಕೋ. ಧನಂಜಯ! ಅದು ಸತ್ಯವಾಗುವಹಾಗೆ ಮಾಡು!”

07123007a ತಚ್ಚ್ರುತ್ವಾ ವಚನಂ ತಸ್ಯ ಭೀಮಸ್ಯಾಮಿತವಿಕ್ರಮಃ।
07123007c ತತೋಽರ್ಜುನೋಽಬ್ರವೀತ್ಕರ್ಣಂ ಕಿಂ ಚಿದಭ್ಯೇತ್ಯ ಸಂಯುಗೇ।।

ಭೀಮನ ಆ ಮಾತನ್ನು ಕೇಳಿ ಅಮಿತವಿಕ್ರಮ ಅರ್ಜುನನು ಸಂಯುಗದಲ್ಲಿ ಕರ್ಣನ ಬಳಿ ಹೋಗಿ ಹೇಳಿದನು:

07123008a ಕರ್ಣ ಕರ್ಣ ವೃಥಾದೃಷ್ಟೇ ಸೂತಪುತ್ರಾತ್ಮಸಂಸ್ತುತ।
07123008c ಅಧರ್ಮಬುದ್ಧೇ ಶೃಣು ಮೇ ಯತ್ತ್ವಾ ವಕ್ಷ್ಯಾಮಿ ಸಾಂಪ್ರತಂ।।

“ಕರ್ಣ! ಕರ್ಣ! ವ್ಯರ್ಥ ದೃಷ್ಟಿಯುಳ್ಳವನೇ! ಸೂತಪುತ್ರ! ಆತ್ಮಸಂಸ್ತುತನೇ! ಅಧರ್ಮಬುದ್ಧೇ! ನಾನು ಈಗ ಹೇಳುವುದನ್ನು ಕೇಳು!

07123009a ದ್ವಿವಿಧಂ ಕರ್ಮ ಶೂರಾಣಾಂ ಯುದ್ಧೇ ಜಯಪರಾಜಯೌ।
07123009c ತೌ ಚಾಪ್ಯನಿತ್ಯೌ ರಾಧೇಯ ವಾಸವಸ್ಯಾಪಿ ಯುಧ್ಯತಃ।।

ರಾಧೇಯ! ಯುದ್ಧದಲ್ಲಿ ಶೂರರ ಎರಡು ರೀತಿಯ ಕರ್ಮಗಳು: ಜಯ ಮತ್ತು ಪರಾಜಯ. ಯುದ್ಧಮಾಡುವ ವಾಸವನಿಗೆ ಕೂಡ ಇವೆರಡೂ ಅನಿತ್ಯ.

07123010a ಮುಮೂರ್ಷುರ್ಯುಯುಧಾನೇನ ವಿರಥೋಽಸಿ ವಿಸರ್ಜಿತಃ।
07123010c ಯದೃಚ್ಚಯಾ ಭೀಮಸೇನಂ ವಿರಥಂ ಕೃತವಾನಸಿ।।

ಯುಯುಧಾನನಿಂದ ವಿರಥನಾಗಿ, ಮೂರ್ಛಿತನಾಗಿ ವಿಸರ್ಜಿಸಲ್ಪಟ್ಟ ನೀನು ಕಷ್ಟಪಟ್ಟು ಭೀಮಸೇನನನ್ನು ವಿರಥನನ್ನಾಗಿ ಮಾಡಿದೆ.

07123011a ಅಧರ್ಮಸ್ತ್ವೇಷ ರಾಧೇಯ ಯತ್ತ್ವಂ ಭೀಮಮವೋಚಥಾಃ।
07123011c ಯುದ್ಧಧರ್ಮಂ ವಿಜಾನನ್ವೈ ಯುಧ್ಯಂತಮಪಲಾಯಿನಂ।।
07123011e ಪೂರಯಂತಂ ಯಥಾಶಕ್ತಿ ಶೂರಕರ್ಮಾಹವೇ ತಥಾ।
07123012a ಪಶ್ಯತಾಂ ಸರ್ವಸೈನ್ಯಾನಾಂ ಕೇಶವಸ್ಯ ಮಮೈವ ಚ।।
07123012c ವಿರಥೋ ಭೀಮಸೇನೇನ ಕೃತೋಽಸಿ ಬಹುಶೋ ರಣೇ।
07123012e ನ ಚ ತ್ವಾಂ ಪರುಷಂ ಕಿಂ ಚಿದುಕ್ತವಾನ್ಪಾಂಡುನಂದನಃ।।

ರಾಧೇಯ! ಅನಂತರ ನೀನು ಭೀಮನಿಗೆ ಮಾತನಾಡಿದ ರೀತಿಯು ಅಧರ್ಮವಾದುದು. ಯುದ್ಧದರ್ಮವನ್ನು ತಿಳಿದು ಪಲಾಯನ ಮಾಡದೇ ಯುದ್ಧಮಾಡುತ್ತಿರುವ, ಯಥಾಶಕ್ತಿಯಾಗಿ ಯುದ್ಧದಲ್ಲಿ ಹೋರಾಡುತ್ತಾ ಸರ್ವ ಸೇನೆಗಳು, ಕೇಶವ ಮತ್ತು ನಾನು ನೋಡುತ್ತಿರುವಂತೆ ಭೀಮಸೇನನು ನಿನ್ನನ್ನು ರಣದಲ್ಲಿ ಅನೇಕ ಬಾರಿ ವಿರಥನನ್ನಾಗಿ ಮಾಡಿದ್ದಾನೆ. ಆದರೆ ಆ ಪಾಂಡುನಂದನನು ಕಠೋರವಾದ ಏನನ್ನೂ ನಿನಗೆ ಹೇಳಿರಲಿಲ್ಲ.

07123013a ಯಸ್ಮಾತ್ತು ಬಹು ರೂಕ್ಷಂ ಚ ಶ್ರಾವಿತಸ್ತೇ ವೃಕೋದರಃ।
07123013c ಪರೋಕ್ಷಂ ಯಚ್ಚ ಸೌಭದ್ರೋ ಯುಷ್ಮಾಭಿರ್ನಿಹತೋ ಮಮ।।

ಆದರೆ ನೀನು ಬಹಳ ಕಠೋರವಾಗಿ ವೃಕೋದರನಿಗೆ ಮಾತನಾಡಿದ್ದೀಯೆ. ಮತ್ತು ನನ್ನ ಪರೋಕ್ಷದಲ್ಲಿ ನೀವು ಸೌಭದ್ರನನ್ನು ಸಂಹರಿಸಿದಿರಲ್ಲವೇ!

07123014a ತಸ್ಮಾದಸ್ಯಾವಲೇಪಸ್ಯ ಸದ್ಯಃ ಫಲಮವಾಪ್ನುಹಿ।
07123014c ತ್ವಯಾ ತಸ್ಯ ಧನುಶ್ಚಿನ್ನಮಾತ್ಮನಾಶಾಯ ದುರ್ಮತೇ।।

ಆದುದರಿಂದ ಈ ನಿನ್ನ ಅವಹೇಳನೆಗೆ ಸಧ್ಯವೇ ಫಲವನ್ನು ಹೊಂದುತ್ತೀಯೆ. ದುರ್ಮತೇ! ನೀನು ಅವನ ಧನುಸ್ಸನ್ನು ತುಂಡರಿಸಿ ನಿನ್ನದೇ ನಾಶವನ್ನು ನಿಶ್ಚಯಿಸಿರುವೆ.

07123015a ತಸ್ಮಾದ್ವಧ್ಯೋಽಸಿ ಮೇ ಮೂಢ ಸಭೃತ್ಯಬಲವಾಹನಃ।
07123015c ಕುರು ತ್ವಂ ಸರ್ವಕೃತ್ಯಾನಿ ಮಹತ್ತೇ ಭಯಮಾಗತಂ।।

ಆದುದರಿಂದ ಮೂಢ! ನಿನ್ನನ್ನು ನಾನು ಸೇವಕ-ಸೇನೆ-ವಾಹನಗಳೊಂದಿಗೆ ವಧಿಸುತ್ತೇನೆ. ನಿನ್ನ ಎಲ್ಲ ಕೆಲಸಗಳನ್ನೂ ಮಾಡಿಕೋ! ಮಹಾ ಭಯವು ಬರಲಿದೆ.

07123016a ಹಂತಾಸ್ಮಿ ವೃಷಸೇನಂ ತೇ ಪ್ರೇಕ್ಷಮಾಣಸ್ಯ ಸಂಯುಗೇ।
07123016c ಯೇ ಚಾನ್ಯೇಽಪ್ಯುಪಯಾಸ್ಯಂತಿ ಬುದ್ಧಿಮೋಹೇನ ಮಾಂ ನೃಪಾಃ।
07123016e ತಾಂಶ್ಚ ಸರ್ವಾನ್ ಹನಿಷ್ಯಾಮಿ ಸತ್ಯೇನಾಯುಧಮಾಲಭೇ।।

ಸಂಯುಗದಲ್ಲಿ ನೀನು ನೋಡುತ್ತಿರುವಂತೆಯೇ ವೃಷಸೇನನನ್ನು ಸಂಹರಿಸುತ್ತೇನೆ. ಬುದ್ಧಿಮೋಹದಿಂದ ಬೇರೆ ಯಾವನೃಪರು ನನ್ನೊಡನೆ ಯುದ್ಧಮಾಡುತ್ತಾರೋ ಅವರೆಲ್ಲರನ್ನೂ ಸಂಹರಿಸುತ್ತೇನೆ. ಹಿಡಿದಿರುವ ಆಯುಧದ ಮೇಲೆ ಆಣೆಯಿಡುತ್ತೇನೆ.

07123017a ತ್ವಾಂ ಚ ಮೂಢಾಕೃತಪ್ರಜ್ಞಮತಿಮಾನಿನಮಾಹವೇ।
07123017c ದೃಷ್ಟ್ವಾ ದುರ್ಯೋಧನೋ ಮಂದೋ ಭೃಶಂ ತಪ್ಸ್ಯತಿ ಪಾತಿತಂ।।

ಮೂಢ! ಕೃತಜ್ಞನಾದ, ಅತಿಮಾನಿನಿಯಾದ ನೀನೂ ಕೂಡ ಯುದ್ಧದಲ್ಲಿ ಬೀಳುವುದನ್ನು ನೋಡಿ ಮಂದ ದುರ್ಯೋಧನನು ತಪಿಸುತ್ತಾನೆ!”

07123018a ಅರ್ಜುನೇನ ಪ್ರತಿಜ್ಞಾತೇ ವಧೇ ಕರ್ಣಸುತಸ್ಯ ತು।
07123018c ಮಹಾನ್ಸುತುಮುಲಃ ಶಬ್ದೋ ಬಭೂವ ರಥಿನಾಂ ತದಾ।।

ಅರ್ಜುನನು ಕರ್ಣನ ಮಗನ ವಧೆಯ ಪ್ರತಿಜ್ಞೆಯನ್ನು ಮಾಡಲು ರಥಿಗಳ ಮಹಾ ತುಮುಲ ಶಬ್ಧವು ಉಂಟಾಯಿತು.

07123019a ತಸ್ಮಿನ್ನಾಕುಲಸಂಗ್ರಾಮೇ ವರ್ತಮಾನೇ ಮಹಾಭಯೇ।
07123019c ಮಂದರಶ್ಮಿಃ ಸಹಸ್ರಾಂಶುರಸ್ತಂ ಗಿರಿಮುಪಾಗಮತ್।।

ಮಹಾಭಯಂಕರ ಯುದ್ಧವು ಎಲ್ಲಕಡೆ ನಡೆಯುತ್ತಿರಲು, ಮಂದರಶ್ಮಿ ಸಹಸ್ರಾಂಶುವು ಅಸ್ತಾಚಲವನ್ನು ಸೇರಿದನು.

07123020a ತತೋ ರಾಜನ್ ಹೃಷೀಕೇಶಃ ಸಂಗ್ರಾಮಶಿರಸಿ ಸ್ಥಿತಂ।
07123020c ತೀರ್ಣಪ್ರತಿಜ್ಞಂ ಬೀಭತ್ಸುಂ ಪರಿಷ್ವಜ್ಯೇದಮಬ್ರವೀತ್।।

ರಾಜನ್! ಆಗ ಹೃಷೀಕೇಶನು ಪ್ರತಿಜ್ಞೆಯನ್ನು ಪೂರೈಸಿ ಸಂಗ್ರಾಮದ ಶಿರಸ್ಸಿನ ಭಾಗದಲ್ಲಿ ನಿಂತಿದ್ದ ಬೀಭತ್ಸುವನ್ನು ಬಿಗಿದಪ್ಪಿ ಹೇಳಿದನು:

07123021a ದಿಷ್ಟ್ಯಾ ಸಂಪಾದಿತಾ ಜಿಷ್ಣೋ ಪ್ರತಿಜ್ಞಾ ಮಹತೀ ತ್ವಯಾ।
07123021c ದಿಷ್ಟ್ಯಾ ಚ ನಿಹತಃ ಪಾಪೋ ವೃದ್ಧಕ್ಷತ್ರಃ ಸಹಾತ್ಮಜಃ।।

“ಒಳ್ಳೆಯದಾಯಿತು ಜಿಷ್ಣೋ! ನಿನ್ನ ಮಹಾ ಪ್ರತಿಜ್ಞೆಯನ್ನು ಪೂರೈಸಿದೆ! ಒಳ್ಳೆಯದಾಯಿತು ವೃದ್ಧಕ್ಷತ್ರನು ಪಾಪಿ ಮಗನೊಂದಿಗೆ ಹತನಾದನು.

07123022a ಧಾರ್ತರಾಷ್ಟ್ರಬಲಂ ಪ್ರಾಪ್ಯ ದೇವಸೇನಾಪಿ ಭಾರತ।
07123022c ಸೀದೇತ ಸಮರೇ ಜಿಷ್ಣೋ ನಾತ್ರ ಕಾರ್ಯಾ ವಿಚಾರಣಾ।।

ಜಿಷ್ಣೋ! ಭಾರತ! ಧಾರ್ತರಾಷ್ಟ್ರನ ಸೇನೆಯನ್ನು ಎದುರಿಸಿ ಸಮರದಲ್ಲಿ ದೇವಸೇನೆಯೂ ಕೂಡ ಕುಸಿಯುತ್ತದೆ. ಅದರಲ್ಲಿ ವಿಚಾರಮಾಡಬೇಕಾಗಿಯೇ ಇಲ್ಲ.

07123023a ನ ತಂ ಪಶ್ಯಾಮಿ ಲೋಕೇಷು ಚಿಂತಯನ್ಪುರುಷಂ ಕ್ವ ಚಿತ್।
07123023c ತ್ವದೃತೇ ಪುರುಷವ್ಯಾಘ್ರ ಯ ಏತದ್ಯೋಧಯೇದ್ಬಲಂ।।

ಪುರುಷವ್ಯಾಘ್ರ! ನಾನು ಎಷ್ಟೇ ಯೋಚಿಸಿದರೂ, ನಿನ್ನನ್ನು ಬಿಟ್ಟು ಈ ಸೇನೆಯೊಂದಿಗೆ ಯುದ್ಧಮಾಡಬಲ್ಲ ಬೇರೆ ಯಾವ ಪುರುಷನನ್ನೂ ನಾನು ಕಾಣುತ್ತಿಲ್ಲ.

07123024a ಮಹಾಪ್ರಭಾವಾ ಬಹವಸ್ತ್ವಯಾ ತುಲ್ಯಾಧಿಕಾಪಿ ವಾ।
07123024c ಸಮೇತಾಃ ಪೃಥಿವೀಪಾಲಾ ಧಾರ್ತರಾಷ್ಟ್ರಸ್ಯ ಕಾರಣಾತ್।
07123024e ತೇ ತ್ವಾಂ ಪ್ರಾಪ್ಯ ರಣೇ ಕ್ರುದ್ಧಂ ನಾಭ್ಯವರ್ತಂತ ದಂಶಿತಾಃ।।

ಮಹಾಪ್ರಭಾವುಳ್ಳ, ನಿನ್ನ ಸಮನಾದ ಅಥವಾ ಅಧಿಕರಾದ ಪೃಥಿವೀಪಾಲರು ಧಾರ್ತರಾಷ್ಟ್ರನ ಕಾರಣದಿಂದ ಒಂದುಗೂಡಿದ್ದಾರೆ. ಕವಚಧಾರಿಗಳಾದ ಅವರು ರಣದಲ್ಲಿ ಕ್ರುದ್ಧನಾದ ನಿನ್ನನ್ನು ಎದುರಿಸಲಾರರು.

07123025a ತವ ವೀರ್ಯಂ ಬಲಂ ಚೈವ ರುದ್ರಶಕ್ರಾಂತಕೋಪಮಂ।
07123025c ನೇದೃಶಂ ಶಕ್ನುಯಾತ್ ಕಶ್ಚಿದ್ರಣೇ ಕರ್ತುಂ ಪರಾಕ್ರಮಂ।
07123025e ಯಾದೃಶಂ ಕೃತವಾನದ್ಯ ತ್ವಮೇಕಃ ಶತ್ರುತಾಪನಃ।।

ನಿನ್ನ ವೀರ್ಯ ಮತ್ತು ಬಲವು ರುದ್ರ-ಶಕ್ರರ ಸಮನಾಗಿದೆ. ಶತ್ರುತಾಪನನಾದ ನೀನೊಬ್ಬನೇ ಇಂದು ಮಾಡಿ ತೋರಿಸಿದ ಪರಾಕ್ರಮವನ್ನು ರಣದಲ್ಲಿ ಬೇರೆ ಯಾರೂ ತೋರಿಸಲು ಶಕ್ಯರಿಲ್ಲ.

07123026a ಏವಮೇವ ಹತೇ ಕರ್ಣೇ ಸಾನುಬಂಧೇ ದುರಾತ್ಮನಿ।
07123026c ವರ್ಧಯಿಷ್ಯಾಮಿ ಭೂಯಸ್ತ್ವಾಂ ವಿಜಿತಾರಿಂ ಹತದ್ವಿಷಂ।।

ದುರಾತ್ಮ ಕರ್ಣನು ಅವನ ಅನುಯಾಯಿಗಳೊಂದಿಗೆ ಹತನಾದಾಗ ಪುನಃ ಶತ್ರುವನ್ನು ಗೆದ್ದ, ದ್ವೇಷಿಯನ್ನು ಸಂಹರಿಸಿದ ನಿನ್ನನ್ನು ಇನ್ನೂ ಹೊಗಳುತ್ತೇನೆ.”

07123027a ತಮರ್ಜುನಃ ಪ್ರತ್ಯುವಾಚ ಪ್ರಸಾದಾತ್ತವ ಮಾಧವ।
07123027c ಪ್ರತಿಜ್ಞೇಯಂ ಮಯೋತ್ತೀರ್ಣಾ ವಿಬುಧೈರಪಿ ದುಸ್ತರಾ।।

ಅರ್ಜುನನು ಅವನಿಗೆ ಉತ್ತರಿಸಿದನು: “ಮಾಧವ! ನಿನ್ನ ಪ್ರಸಾದದಿಂದ ದೇವತೆಗಳಿಗೂ ದುಸ್ತರವಾದ ಈ ಪ್ರತಿಜ್ಞೆಯನ್ನು ನಾನು ಪೂರೈಸಿದ್ದೇನೆ.

07123028a ಅನಾಶ್ಚರ್ಯೋ ಜಯಸ್ತೇಷಾಂ ಯೇಷಾಂ ನಾಥೋಽಸಿ ಮಾಧವ।
07123028c ತ್ವತ್ಪ್ರಸಾದಾನ್ಮಹೀಂ ಕೃತ್ಸ್ನಾಂ ಸಂಪ್ರಾಪ್ಸ್ಯತಿ ಯುಧಿಷ್ಠಿರಃ।।

ಮಾಧವ! ಯಾರ ನಾಥನು ನೀನೋ ಅವರ ಜಯವು ಆಶ್ಚರ್ಯವಾದುದೇನಲ್ಲ! ನಿನ್ನ ಪ್ರಸಾದದಿಂದ ಯುಧಿಷ್ಠಿರನು ಈ ಸಂಪೂರ್ಣ ಮಹಿಯನ್ನು ಪಡೆಯುತ್ತಾನೆ.

07123029a ತವೈವ ಭಾರೋ ವಾರ್ಷ್ಣೇಯ ತವೈವ ವಿಜಯಃ ಪ್ರಭೋ।
07123029c ವರ್ಧನೀಯಾಸ್ತವ ವಯಂ ಪ್ರೇಷ್ಯಾಶ್ಚ ಮಧುಸೂದನ।।

ಪ್ರಭೋ! ವಾರ್ಷ್ಣೇಯ! ನೀನೇ ಪೊರೆಯುವವನು. ನೀನೇ ವಿಜಯ. ಮಧುಸೂದನ! ನಿನ್ನಿಂದ ನಾವು ವರ್ಧಿಸುತ್ತಿದ್ದೇವೆ. ನಾವು ನಿನ್ನ ಸೇವಕರು!”

07123030a ಏವಮುಕ್ತಃ ಸ್ಮಯನ್ ಕೃಷ್ಣಃ ಶನಕೈರ್ವಾಹಯನ್ ಹಯಾನ್।
07123030c ದರ್ಶಯಾಮಾಸ ಪಾರ್ಥಾಯ ಕ್ರೂರಮಾಯೋಧನಂ ಮಹತ್।।

ಹೀಗೆ ಹೇಳಲು ಕೃಷ್ಣನು ಮುಗುಳ್ನಕ್ಕು, ಕುದುರೆಗಳನ್ನು ಮೆಲ್ಲನೆ ನಡೆಸುತ್ತಾ ಕ್ರೂರ ಮಹಾ ರಣವನ್ನು ಪಾರ್ಥನಿಗೆ ತೋರಿಸಿದನು.

07123031 ಶ್ರೀಕೃಷ್ಣ ಉವಾಚ।
07123031a ಪ್ರಾರ್ಥಯಂತೋ ಜಯಂ ಯುದ್ಧೇ ಪ್ರಥಿತಂ ಚ ಮಹದ್ಯಶಃ।
07123031c ಪೃಥಿವ್ಯಾಂ ಶೇರತೇ ಶೂರಾಃ ಪಾರ್ಥಿವಾಸ್ತ್ವಚ್ಚರೈರ್ಹತಾಃ।।

ಶ್ರೀಕೃಷ್ಣನು ಹೇಳಿದನು: “ಯುದ್ಧದಲ್ಲಿ ಜಯವನ್ನು ಬಯಸಿ, ಮಹಾ ಯಶಸ್ಸನ್ನು ಕಾಣಲು ಈ ಶೂರ ಪಾರ್ಥಿವರು ನಿನ್ನ ಶರಗಳಿಂದ ಹತರಾಗಿ ಭೂಮಿಯ ಮೇಲೆ ಮಲಗಿದ್ದಾರೆ.

07123032a ವಿಕೀರ್ಣಶಸ್ತ್ರಾಭರಣಾ ವಿಪನ್ನಾಶ್ವರಥದ್ವಿಪಾಃ।
07123032c ಸಂಚಿನ್ನಭಿನ್ನವರ್ಮಾಣೋ ವೈಕ್ಲವ್ಯಂ ಪರಮಂ ಗತಾಃ।।

ಶಸ್ತ್ರಾಭರಣಗಳು ಚೆಲ್ಲಿಬಿದ್ದಿವೆ. ಕುದುರೆ-ರಥ-ಆನೆಗಳು ಮುರಿದು ಬಿದ್ದಿವೆ. ಅವರ ಕವಚಗಳು ತುಂಡಾಗಿ ಅಥವಾ ಒಡೆದು ಪರಮ ದುಃಖವನ್ನು ಪಡೆದಿದ್ದಾರೆ.

07123033a ಸಸತ್ತ್ವಾ ಗತಸತ್ತ್ವಾಶ್ಚ ಪ್ರಭಯಾ ಪರಯಾ ಯುತಾಃ।
07123033c ಸಜೀವಾ ಇವ ಲಕ್ಷ್ಯಂತೇ ಗತಸತ್ತ್ವಾ ನರಾಧಿಪಾಃ।।

ಕೆಲವರು ಇನ್ನೂ ಜೀವದಿಂದಿದ್ದಾರೆ. ಕೆಲವರು ಜೀವವನ್ನು ಕಳೆದುಕೊಂಡಿದ್ದಾರೆ. ತೀರಿಹೋದ ನರಾಧಿಪರೂ ಕೂಡ ಪರಮ ಪ್ರಭೆಯಿಂದ ಕೂಡಿದವರಾಗಿದ್ದು ಜೀವದಿಂದಿರುವರೋ ಎನ್ನುವಂತೆ ಕಾಣುತ್ತಿದ್ದಾರೆ.

07123034a ತೇಷಾಂ ಶರೈಃ ಸ್ವರ್ಣಪುಂಖೈಃ ಶಸ್ತ್ರೈಶ್ಚ ವಿವಿಧೈಃ ಶಿತೈಃ।
07123034c ವಾಹನೈರಾಯುಧೈಶ್ಚೈವ ಸಂಪೂರ್ಣಾಂ ಪಶ್ಯ ಮೇದಿನೀಂ।।

ಅವರ ಸ್ವರ್ಣಪುಂಖ ಶರಗಳಿಂದ, ವಿವಿಧ ನಿಶಿತ ಶಸ್ತ್ರಗಳಿಂದ, ವಾಹನ-ಆಯುಧಗಳಿಂದ ಮೇದಿನಿಯು ತುಂಬಿಹೋಗಿರುವುದನ್ನು ನೋಡು!

07123035a ವರ್ಮಭಿಶ್ಚರ್ಮಭಿರ್ಹಾರೈಃ ಶಿರೋಭಿಶ್ಚ ಸಕುಂಡಲೈಃ।
07123035c ಉಷ್ಣೀಷೈರ್ಮುಕುಟೈಃ ಸ್ರಗ್ಭಿಶ್ಚೂಡಾಮಣಿಭಿರಂಬರೈಃ।।
07123036a ಕಂಠಸೂತ್ರೈರಂಗದೈಶ್ಚ ನಿಷ್ಕೈರಪಿ ಚ ಸುಪ್ರಭೈಃ।
07123036c ಅನ್ಯೈಶ್ಚಾಭರಣೈಶ್ಚಿತ್ರೈರ್ಭಾತಿ ಭಾರತ ಮೇದಿನೀ।।

ಭಾರತ! ಕವಚ-ಗುರಾಣಿ-ಹಾರಗಳಿಂದ, ಕುಂಡಲಯುಕ್ತ ಶಿರಗಳಿಂದ, ಶಿರಸ್ತ್ರಾಣ-ಮುಕುಟಗಳಿಂದ, ಮಾಲೆಗಳು-ಚೂಡಾಮಣಿಗಳು-ವಸ್ತ್ರಗಳಿಂದ, ಕಂಠಸೂತ್ರ-ಅಂಗದಗಳಿಂದ, ಪ್ರಭೆಯುಳ್ಳ ನಿಷ್ಕಗಳಿಂದ, ಅನ್ಯ ಬಣ್ಣದ ಆಭರಣಗಳಿಂದ ಮೇದಿನಿಯು ಥಳಥಳಿಸುತ್ತಿದೆ.

07123037a ಚಾಮರೈರ್ವ್ಯಜನೈಶ್ಚಿತ್ರೈರ್ಧ್ವಜೈಶ್ಚಾಶ್ವರಥದ್ವಿಪೈಃ।
07123037c ವಿವಿಧೈಶ್ಚ ಪರಿಸ್ತೋಮೈರಶ್ವಾನಾಂ ಚ ಪ್ರಕೀರ್ಣಕೈಃ।।
07123038a ಕುಥಾಭಿಶ್ಚ ವಿಚಿತ್ರಾಭಿರ್ವರೂಥೈಶ್ಚ ಮಹಾಧನೈಃ।
07123038c ಸಂಸ್ತೀರ್ಣಾಂ ವಸುಧಾಂ ಪಶ್ಯ ಚಿತ್ರಪಟ್ಟೈರಿವಾವೃತಾಂ।।

ಚಾಮರಗಳಿಂದ, ಬಣ್ಣದ ಕೇತುಗಳಿಂದ, ಧ್ವಜಗಳಿಂದ, ಕುದುರೆ-ರಥ-ಆನೆಗಳಿಂದ, ಕುದುರೆಗಳ ವಿವಿಧ ಪರಿಸ್ತೋಮ-ಪ್ರಕೀರ್ಣಕಗಳಿಂದ, ಕುಥಗಳಿಂದ, ಮಹಾಧನಗಳ ವಿಚಿತ್ರ ವರೂಥಗಳಿಂದ ತುಂಬಿರುವ ಈ ವಸುಧೆಯು ಚಿತ್ರಪಟವನ್ನು ಹೊಡೆದಂತೆ ಕಾಣುತ್ತಿದೆ ನೋಡು!

07123039a ನಾಗೇಭ್ಯಃ ಪತಿತಾನನ್ಯಾನ್ಕಲ್ಪಿತೇಭ್ಯೋ ದ್ವಿಪೈಃ ಸಹ।
07123039c ಸಿಂಹಾನ್ವಜ್ರಪ್ರಣುನ್ನೇಭ್ಯೋ ಗಿರ್ಯಗ್ರೇಭ್ಯ ಇವ ಚ್ಯುತಾನ್।।

ಆನೆಗಳ ಮೇಲಿಂದ, ಅನ್ಯರು ಆನೆಗಳೊಡನೆ ಬಿದ್ದಿರುವವರು ಸಿಡಿಲುಬಡಿದ ಪರ್ವತದಿಂದ ಬಿದ್ದ ಸಿಂಹಗಳಂತೆ ತೋರುತ್ತಿದ್ದಾರೆ.

07123040a ಸಂಸ್ಯೂತಾನ್ವಾಜಿಭಿಃ ಸಾರ್ಧಂ ಧರಣ್ಯಾಂ ಪಶ್ಯ ಚಾಪರಾನ್।
07123040c ಪದಾತಿಸಾದಿಸಂಘಾಂಶ್ಚ ಕ್ಷತಜೌಘಪರಿಪ್ಲುತಾನ್।।

ಸವಾರಿ ಮಾಡುತ್ತಿರುವ ಕುದುರೆಗಳೊಂದಿಗೆ ಧರಣಿಯ ಮೇಲೆ ಬಿದ್ದಿರುವ ಪದಾತಿ-ಅಶ್ವಾರೋಹಿಗಳು ಗಾಯಗೊಂಡು ರಕ್ತದಲ್ಲಿ ತೋಯ್ದುಹೋಗಿರುವುದನ್ನು ನೋಡು!””

07123041 ಸಂಜಯ ಉವಾಚ।
07123041a ಏವಂ ಸಂದರ್ಶಯನ್ ಕೃಷ್ಣೋ ರಣಭೂಮಿಂ ಕಿರೀಟಿನಃ।
07123041c ಸ್ವೈಃ ಸಮೇತಃ ಸ ಮುದಿತಃ ಪಾಂಚಜನ್ಯಂ ವ್ಯನಾದಯತ್।।

ಸಂಜಯನು ಹೇಳಿದನು: “ಹೀಗೆ ರಣಭೂಮಿಯನ್ನು ಕಿರೀಟಿಗೆ ತೋರಿಸುತ್ತಾ ಕೃಷ್ಣನು ತನ್ನವರೊಂದಿಗೆ ಮುದಿತನಾಗಿ ಪಾಂಚಜನ್ಯವನ್ನು ಮೊಳಗಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ತ್ರಿವಿಂಶಾಧಿಕಶತತಮೋಽಧ್ಯಾಯಃ ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ನೂರಾಇಪ್ಪತ್ಮೂರನೇ ಅಧ್ಯಾಯವು.