122 ಕರ್ಣಸಾತ್ಯಕಿಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಜಯದ್ರಥವಧ ಪರ್ವ

ಅಧ್ಯಾಯ 122

ಸಾರ

ಅರ್ಜುನ-ಕೃಪರ ಯುದ್ಧ; ಕೃಪನು ಮೂರ್ಛಿತನಾದುದು (1-10). ಮೂರ್ಛಿತನಾದ ಕೃಪನನ್ನು ನೋಡಿ ಅರ್ಜುನನು ವಿಷಾದಿಸಿದುದು (11-26). ಸಾತ್ಯಕಿಯನ್ನು ಆಕ್ರಮಣಿಸುತ್ತಿದ್ದ ಕರ್ಣನೊಡನೆ ಯುದ್ಧಮಾಡಲು ಬಯಸಿದ ಅರ್ಜುನನಿಗೆ ಕೃಷ್ಣನು ಕರ್ಣನಲ್ಲಿ ಇಂದ್ರನು ಕೊಟ್ಟ ಶಕ್ತಿಯು ಇನ್ನೂ ಇರುವಾಗ ಅವನೊಂದಿಗೆ ಯುದ್ಧಮಾಡುವುದು ಈಗ ಸರಿಯಾದ ಸಮಯವಲ್ಲವೆಂದು ಹೇಳಿದುದು (27-34). ಕರ್ಣನಿಂದ ವಿರಥನಾದ ಸಾತ್ಯಕಿಗೆ ದಾರುಕಯುಕ್ತ ತನ್ನ ರಥವನ್ನು ಕರೆಯಿಸಿದುದು (35-49). ಕರ್ಣ-ಸಾತ್ಯಕಿಯರ ಯುದ್ಧ (50-88).

07122001 ಧೃತರಾಷ್ಟ್ರ ಉವಾಚ।
07122001a ತಸ್ಮಿನ್ವಿನಿಹತೇ ವೀರೇ ಸೈಂಧವೇ ಸವ್ಯಸಾಚಿನಾ।
07122001c ಮಾಮಕಾ ಯದಕುರ್ವಂತ ತನ್ಮಮಾಚಕ್ಷ್ವ ಸಂಜಯ।।

ಧೃತರಾಷ್ಟ್ರನು ಹೇಳಿದನು: “ಸಂಜಯ! ವೀರ ಸೈಂಧವನು ಸವ್ಯಸಾಚಿಯಿಂದ ಹತನಾಗಲು ನನ್ನವರು ಏನು ಮಾಡಿದರೆಂದು ನನಗೆ ಹೇಳು!”

07122002 ಸಂಜಯ ಉವಾಚ।
07122002a ಸೈಂಧವಂ ನಿಹತಂ ದೃಷ್ಟ್ವಾ ರಣೇ ಪಾರ್ಥೇನ ಮಾರಿಷ।
07122002c ಅಮರ್ಷವಶಮಾಪನ್ನಃ ಕೃಪಃ ಶಾರದ್ವತಸ್ತದಾ।।

ಸಂಜಯನು ಹೇಳಿದನು: “ಮಾರಿಷ! ಪಾರ್ಥನಿಂದ ರಣದಲ್ಲಿ ಸೈಂಧವನು ಹತನಾದುದನ್ನು ಕಂಡು ಕೃಪ ಶಾರದ್ವತನು ಕ್ರೋಧವಶನಾದನು.

07122003a ಮಹತಾ ಶರವರ್ಷೇಣ ಪಾಂಡವಂ ಸಮವಾಕಿರತ್।
07122003c ದ್ರೌಣಿಶ್ಚಾಭ್ಯದ್ರವತ್ಪಾರ್ಥಂ ರಥಮಾಸ್ಥಾಯ ಫಲ್ಗುನಂ।।

ಅವನು ಮಹಾ ಶರವರ್ಷದಿಂದ ಪಾಂಡವನನ್ನು ಮುಸುಕಿದನು. ದ್ರೌಣಿಯೂ ಕೂಡ ಪಾರ್ಥ ಫಲ್ಗುನನ ರಥವನ್ನು ಆಕ್ರಮಣಿಸಿದನು.

07122004a ತಾವೇನಂ ರಥಿನಾಂ ಶ್ರೇಷ್ಠೌ ರಥಾಭ್ಯಾಂ ರಥಸತ್ತಮಂ।
07122004c ಉಭಾವುಭಯತಸ್ತೀಕ್ಷ್ಣೈರ್ವಿಶಿಖೈರಭ್ಯವರ್ಷತಾಂ।।

ಅವರಿಬ್ಬರು ರಥಿಶ್ರೇಷ್ಠರೂ ಆ ರಥಸತ್ತಮನ ಎರಡೂ ಕಡೆಗಳಿಂದ ತೀಕ್ಷ್ಣ ವಿಶಿಖಗಳನ್ನು ಸುರಿಸಿದರು.

07122005a ಸ ತಥಾ ಶರವರ್ಷಾಭ್ಯಾಂ ಸುಮಹದ್ಭ್ಯಾಂ ಮಹಾಭುಜಃ।
07122005c ಪೀಡ್ಯಮಾನಃ ಪರಾಮಾರ್ತಿಮಗಮದ್ರಥಿನಾಂ ವರಃ।।

ಆಗ ರಥಿಗಳಲ್ಲಿ ಶ್ರೇಷ್ಠ ಮಹಾಭುಜನು ಎರಡೂ ಕಡೆಗಳಿಂದ ಬೀಳುತ್ತಿರುವ ಮಹಾ ಶರವರ್ಷಗಳಿಂದ ಪೀಡಿತನಾಗಿ ಸಂಕಟಕ್ಕೊಳಗಾದನು.

07122006a ಸೋಽಜಿಘಾಂಸುರ್ಗುರುಂ ಸಂಖ್ಯೇ ಗುರೋಸ್ತನಯಮೇವ ಚ।
07122006c ಚಕಾರಾಚಾರ್ಯಕಂ ತತ್ರ ಕುಂತೀಪುತ್ರೋ ಧನಂಜಯಃ।।

ಅಲ್ಲಿ ಕುಂತೀಪುತ್ರ ಧನಂಜಯನು ಯುದ್ಧದಲ್ಲಿ ಗುರುವನ್ನಾಗಲೀ ಗುರುಪುತ್ರನನ್ನಾಗಲೀ ಸಂಹರಿಸಲು ಬಯಸದೇ ಕೇವಲ ಚಮತ್ಕಾರಗಳನ್ನು ತೋರಿಸುತ್ತಿದ್ದನು.

07122007a ಅಸ್ತ್ರೈರಸ್ತ್ರಾಣಿ ಸಂವಾರ್ಯ ದ್ರೌಣೇಃ ಶಾರದ್ವತಸ್ಯ ಚ।
07122007c ಮಂದವೇಗಾನಿಷೂಂಸ್ತಾಭ್ಯಾಮಜಿಘಾಂಸುರವಾಸೃಜತ್।।

ದ್ರೌಣಿ ಮತ್ತು ಶಾರದ್ವತರ ಅಸ್ತ್ರಗಳನ್ನು ಅಸ್ತ್ರಗಳಿಂದ ತಡೆಯುತ್ತಾ, ಅವರನ್ನು ಕೊಲ್ಲಬಾರದೆಂದು, ಮಂದವೇಗದಲ್ಲಿ ಬಾಣಗಳನ್ನು ಬಿಡುತ್ತಿದ್ದನು.

07122008a ತೇ ನಾತಿಭೃಶಮಭ್ಯಘ್ನನ್ವಿಶಿಖಾ ಜಯಚೋದಿತಾಃ।
07122008c ಬಹುತ್ವಾತ್ತು ಪರಾಮಾರ್ತಿಂ ಶರಾಣಾಂ ತಾವಗಚ್ಚತಾಂ।।

ಅವನು ತುಂಬಾ ಜೋರಾಗಿ ಬಿಡದಿದ್ದರೂ ಕೂಡ ಜಯನಿಂದ ಬಿಡಲ್ಪಟ್ಟ ವಿಶಿಖ ಬಾಣಗಳು ಅವರಲ್ಲಿ ಬಹಳ ಆಳದವರೆಗೂ ತಾಗಿ ಗಾಯಗಳನ್ನುಂಟುಮಾಡಿದವು.

07122009a ಅಥ ಶಾರದ್ವತೋ ರಾಜನ್ಕೌಂತೇಯಶರಪೀಡಿತಃ।
07122009c ಅವಾಸೀದದ್ರಥೋಪಸ್ಥೇ ಮೂರ್ಚ್ಚಾಮಭಿಜಗಾಮ ಹ।।

ರಾಜನ್! ಆಗ ಕೌಂತೇಯನ ಶರಗಳಿಂದ ಪೀಡಿತನಾಗಿ ಶಾರದ್ವತನು ರಥದಲ್ಲಿ ಮೂರ್ಛೆಹೊಂದಿ ಆಸನದಲ್ಲಿಯೇ ಒರಗಿದರು.

07122010a ವಿಹ್ವಲಂ ತಮಭಿಜ್ಞಾಯ ಭರ್ತಾರಂ ಶರಪೀಡಿತಂ।
07122010c ಹತೋಽಯಮಿತಿ ಚ ಜ್ಞಾತ್ವಾ ಸಾರಥಿಸ್ತಮಪಾವಹತ್।।

ತನ್ನ ಒಡೆಯನು ಶರಪೀಡಿತನಾಗಿ ಮೂರ್ಛೆ ಹೋಗಿದ್ದುದನ್ನು ತಿಳಿಯದೇ ಇವನು ಹತನಾದನೆಂದೇ ತಿಳಿದು ಸಾರಥಿಯು ಅಲ್ಲಿಂದ ಪಲಾಯನಗೈದನು.

07122011a ತಸ್ಮಿನ್ಸನ್ನೇ ಮಹಾರಾಜ ಕೃಪೇ ಶಾರದ್ವತೇ ಯುಧಿ।
07122011c ಅಶ್ವತ್ಥಾಮಾಪ್ಯಪಾಯಾಸೀತ್ಪಾಂಡವೇಯಾದ್ರಥಾಂತರಂ।।

ಮಹಾರಾಜ! ಕೃಪ ಶಾರದ್ವತನು ಯುದ್ಧದಲ್ಲಿ ಮೂರ್ಛೆಹೋಗಲು ಅಶ್ವತ್ಥಾಮನು ಪಾಂಡವನನ್ನು ಬಿಟ್ಟು ಬೇರೆಯವರೊಡನೆ ಯುದ್ಧಮಾಡತೊಡಗಿದನು.

07122012a ದೃಷ್ಟ್ವಾ ಶಾರದ್ವತಂ ಪಾರ್ಥೋ ಮೂರ್ಚಿತಂ ಶರಪೀಡಿತಂ।
07122012c ರಥ ಏವ ಮಹೇಷ್ವಾಸಃ ಕೃಪಣಂ ಪರ್ಯದೇವಯತ್।।

ಶರಪೀಡಿತನಾದ ಶಾರದ್ವತನು ಮೂರ್ಛಿತನಾದುದನ್ನು ನೋಡಿ ರಥದಲ್ಲಿಯೇ ಮಹೇಷ್ವಾಸ ಅರ್ಜುನನು ಕೃಪಾವಿಷ್ಟನಾಗಿ ವಿಲಪಿಸಿದನು:

07122013a ಪಶ್ಯನ್ನಿದಂ ಮಹಾಪ್ರಾಜ್ಞಃ ಕ್ಷತ್ತಾ ರಾಜಾನಮುಕ್ತವಾನ್।
07122013c ಕುಲಾಂತಕರಣೇ ಪಾಪೇ ಜಾತಮಾತ್ರೇ ಸುಯೋಧನೇ।।
07122014a ನೀಯತಾಂ ಪರಲೋಕಾಯ ಸಾಧ್ವಯಂ ಕುಲಪಾಂಸನಃ।
07122014c ಅಸ್ಮಾದ್ಧಿ ಕುರುಮುಖ್ಯಾನಾಂ ಮಹದುತ್ಪತ್ಸ್ಯತೇ ಭಯಂ।।

“ಹೀಗಾಗುವುದೆಂದು ಕಂಡೇ ಮಹಾಪ್ರಾಜ್ಞ ಕ್ಷತ್ತನು ಕುಲಾಂತಕ ಪಾಪೀ ಸುಯೋಧನನು ಹುಟ್ಟಿದಾಗಲೇ ರಾಜನಿಗೆ ಹೇಳಿದ್ದನು: “ಈ ಕುಲಪಾಂಸನನನ್ನು ಈಗಲೇ ಪರಲೋಕಕ್ಕೆ ಕಳುಹಿಸಿಬಿಡು! ಇವನ ಬುದ್ಧಿಯಿಂದಾಗಿ ಕುರುಮುಖ್ಯರಿಗೆ ಮಹಾ ಭಯವು ಉಂಟಾಗುತ್ತದೆ!”

07122015a ತದಿದಂ ಸಮನುಪ್ರಾಪ್ತಂ ವಚನಂ ಸತ್ಯವಾದಿನಃ।
07122015c ತತ್ಕೃತೇ ಹ್ಯದ್ಯ ಪಶ್ಯಾಮಿ ಶರತಲ್ಪಗತಂ ಕೃಪಂ।।

ಆ ಸತ್ಯವಾದಿಯ ಮಾತೇ ಈಗ ಸತ್ಯವಾದಂತಿದೆ. ಅವನ ಕೃತ್ಯದಿಂದಾಗಿಯೇ ನಾನು ಇಂದು ಬಾಣದಿಂದ ಮಲಗಿರುವ74 ಕೃಪನನ್ನು ನೋಡುತ್ತಿದ್ದೇನೆ.

07122016a ಧಿಗಸ್ತು ಕ್ಷಾತ್ರಮಾಚಾರಂ ಧಿಗಸ್ತು ಬಲಪೌರುಷಂ।
07122016c ಕೋ ಹಿ ಬ್ರಾಹ್ಮಣಮಾಚಾರ್ಯಮಭಿದ್ರುಹ್ಯೇತ ಮಾದೃಶಃ।।

ಕ್ಷತ್ರಿಯ ಧರ್ಮಕ್ಕೆ ಧಿಕ್ಕಾರ! ಬಲಪೌರುಷಕ್ಕೆ ಧಿಕ್ಕಾರ! ನನ್ನಂಥಹ ಯಾರು ತಾನೇ ಆಚಾರ್ಯ ಬ್ರಾಹ್ಮಣನಿಗೆ ದ್ರೋಹವೆಸಗುತ್ತಾನೆ?

07122017a ಋಷಿಪುತ್ರೋ ಮಮಾಚಾರ್ಯೋ ದ್ರೋಣಸ್ಯ ದಯಿತಃ ಸಖಾ।
07122017c ಏಷ ಶೇತೇ ರಥೋಪಸ್ಥೇ ಮದ್ಬಾಣೈರಭಿಪೀಡಿತಃ।।

ಋಷಿಪುತ್ರ ನನ್ನ ಆಚಾರ್ಯ, ದ್ರೋಣನ ಪ್ರಿಯ ಸಖನಾದ ಇವನು ನನ್ನ ಬಾಣಗಳಿಂದ ಪೀಡಿತನಾಗಿ ರಥದಲ್ಲಿಯೇ ಒರಗಿ ಮಲಗಿದ್ದಾನೆ.

07122018a ಅಕಾಮಯಾನೇನ ಮಯಾ ವಿಶಿಖೈರರ್ದಿತೋ ಭೃಶಂ।
07122018c ಅವಾಸೀದದ್ರಥೋಪಸ್ಥೇ ಪ್ರಾಣಾನ್ಪೀಡಯತೀವ ಮೇ।।

ಬಯಸದಿದ್ದರೂ ನಾನು ಅವನನ್ನು ವಿಶಿಖಗಳಿಂದ ತುಂಬಾ ಪೀಡಿಸಿದೆನು. ಅವನು ರಥದಲ್ಲಿಯೇ ಕುಸಿದು ಬಿದ್ದುದು ನನ್ನ ಪ್ರಾಣಗಳನ್ನು ಅತೀವವಾಗಿ ಪೀಡಿಸುತ್ತಿದೆ.

07122019a ಶರಾರ್ದಿತೇನ ಹಿ ಮಯಾ ಪ್ರೇಕ್ಷಣೀಯೋ ಮಹಾದ್ಯುತಿಃ।
07122019c ಪ್ರತ್ಯಸ್ತೋ ಬಹುಭಿರ್ಬಾಣೈರ್ದಶಧರ್ಮಗತೇನ ವೈ।।

ಶರಾರ್ದಿತನಾದ ನಾನು ಆ ಮಹಾದ್ಯುತಿಯನ್ನು ಸುಮ್ಮನೇ ನೋಡುತ್ತಿರಬೇಕಿತ್ತು. ಆದರೆ ನನ್ನ ಅನೇಕ ಬಾಣಗಳಿಂದ ಹೊಡೆಯಲ್ಪಟ್ಟು ಅವನು ಎಲ್ಲ ಜೀವಿಗಳೂ ಹೋಗುವ ದಾರಿಯಲ್ಲಿ ಹೋಗಿದ್ದಾನೆ.

07122020a ಶೋಚಯತ್ಯೇಷ ನಿಪತನ್ಭೂಯಃ ಪುತ್ರವಧಾದ್ಧಿ ಮಾಂ।
07122020c ಕೃಪಣಂ ಸ್ವರಥೇ ಸನ್ನಂ ಪಶ್ಯ ಕೃಷ್ಣ ಯಥಾ ಗತಂ।।

ಅವನು ಬಿದ್ದು ನನ್ನ ಮಗನ ವಧೆಗಿಂತಲೂ ಹೆಚ್ಚಿನ ಶೋಕವನ್ನು ನೀಡಿದ್ದಾನೆ. ಕೃಷ್ಣ! ಅವನು ತನ್ನ ರಥದಲ್ಲಿಯೇ ಜೀವತೊರೆದು ಹೋಗುತ್ತಿರುವುದನ್ನು ನೋಡು!

07122021a ಉಪಾಕೃತ್ಯ ತು ವೈ ವಿದ್ಯಾಮಾಚಾರ್ಯೇಭ್ಯೋ ನರರ್ಷಭಾಃ।
07122021c ಪ್ರಯಚ್ಚಂತೀಹ ಯೇ ಕಾಮಾನ್ದೇವತ್ವಮುಪಯಾಂತಿ ತೇ।।

ವಿದ್ಯೆಯನ್ನು ನೀಡಿದ ಆಚಾರ್ಯರಿಗೆ ಇಷ್ಟವಾದ ಉಡುಗೊರೆಗಳನ್ನಿತ್ತು ನರರ್ಷಭರು ದೇವತ್ವವನ್ನು ಹೊಂದುತ್ತಾರೆ.

07122022a ಯೇ ತು ವಿದ್ಯಾಮುಪಾದಾಯ ಗುರುಭ್ಯಃ ಪುರುಷಾಧಮಾಃ।
07122022c ಘ್ನಂತಿ ತಾನೇವ ದುರ್ವೃತ್ತಾಸ್ತೇ ವೈ ನಿರಯಗಾಮಿನಃ।।

ಆದರೆ ವಿದ್ಯೆಯನ್ನು ಪಡೆದು ಗುರುವನ್ನು ಕೊಲ್ಲುವ ಕೆಟ್ಟ ನಡತೆಯುಳ್ಳ ಪುರುಷಾಧಮರು ನರಕಕ್ಕೆ ಹೋಗುತ್ತಾರೆ.

07122023a ತದಿದಂ ನರಕಾಯಾದ್ಯ ಕೃತಂ ಕರ್ಮ ಮಯಾ ಧ್ರುವಂ।
07122023c ಆಚಾರ್ಯಂ ಶರವರ್ಷೇಣ ರಥೇ ಸಾದಯತಾ ಕೃಪಂ।।

ಖಂಡಿತವಾಗಿಯೂ ಇಂದಿನ ನನ್ನ ಈ ಕೆಲಸದಿಂದಾಗಿ ನಾನು ನರಕಕ್ಕೆ ಹೋಗುವವನಿದ್ದೇನೆ. ಆಚಾರ್ಯ ಕೃಪನ ರಥವನ್ನು ಶರವರ್ಷದಿಂದ ಮುಚ್ಚಿಬಿಟ್ಟೆನಲ್ಲ!

07122024a ಯತ್ತತ್ಪೂರ್ವಮುಪಾಕುರ್ವನ್ನಸ್ತ್ರಂ ಮಾಮಬ್ರವೀತ್ಕೃಪಃ।
07122024c ನ ಕಥಂ ಚನ ಕೌರವ್ಯ ಪ್ರಹರ್ತವ್ಯಂ ಗುರಾವಿತಿ।।

ಹಿಂದೆ ಅಸ್ತ್ರಗಳನ್ನು ಹೇಳಿಕೊಡುವಾಗ ಕೃಪನು ನನಗೆ “ಕೌರವ್ಯ! ಗುರುವನ್ನು ಎಂದೂ ಹೊಡೆಯಬಾರದು!” ಎಂದು ಹೇಳಿದ್ದನು.

07122025a ತದಿದಂ ವಚನಂ ಸಾಧೋರಾಚಾರ್ಯಸ್ಯ ಮಹಾತ್ಮನಃ।
07122025c ನಾನುಷ್ಠಿತಂ ತಮೇವಾಜೌ ವಿಶಿಖೈರಭಿವರ್ಷತಾ।।

ಅವನ ಆ ವಚನದಂತೆ ನಡೆದುಕೊಂಡಿಲ್ಲ! ಇಂದು ನಾನು ಮಹಾತ್ಮ ಆಚಾರ್ಯನ ಮೇಲೆ ನನ್ನ ವಿಶಿಖಗಳನ್ನು ಸುರಿದೆನಲ್ಲ!

07122026a ನಮಸ್ತಸ್ಮೈ ಸುಪೂಜ್ಯಾಯ ಗೌತಮಾಯಾಪಲಾಯಿನೇ।
07122026c ಧಿಗಸ್ತು ಮಮ ವಾರ್ಷ್ಣೇಯ ಯೋ ಹ್ಯಸ್ಮೈ ಪ್ರಹರಾಮ್ಯಹಂ।।

ಪೂಜ್ಯನಾದ, ಪಲಾಯನಮಾಡದಿರುವ ಗೌತಮನಿಗೆ ನಮಸ್ಕರಿಸುತ್ತೇನೆ. ವಾರ್ಷ್ಣೇಯ! ಅವರ ಮೇಲೆ ಪ್ರಹರಿಸಿದ ನನಗೆ ಧಿಕ್ಕಾರ!”

07122027a ತಥಾ ವಿಲಪಮಾನೇ ತು ಸವ್ಯಸಾಚಿನಿ ತಂ ಪ್ರತಿ।
07122027c ಸೈಂಧವಂ ನಿಹತಂ ದೃಷ್ಟ್ವಾ ರಾಧೇಯಃ ಸಮುಪಾದ್ರವತ್।।

ಹೀಗೆ ವಿಲಪಿಸುತ್ತಿರುವ ಸವ್ಯಸಾಚಿಯ ಬಳಿ ಸೈಂಧವನು ಹತನಾದುದನ್ನು ನೋಡಿದ ರಾಧೇಯನು ಬಂದು ಆಕ್ರಮಿಸಿದನು.

07122028a ಉಪಾಯಾಂತಂ ತು ರಾಧೇಯಂ ದೃಷ್ಟ್ವಾ ಪಾರ್ಥೋ ಮಹಾರಥಃ।
07122028c ಪ್ರಹಸನ್ದೇವಕೀಪುತ್ರಮಿದಂ ವಚನಮಬ್ರವೀತ್।।

ಹತ್ತಿರಬರುತ್ತಿದ್ದ ರಾಧೇಯನನ್ನು ನೋಡಿ ಮಹಾರಥ ಪಾರ್ಥನು ನಕ್ಕು, ದೇವಕೀ ಪುತ್ರನಿಗೆ ಈ ಮಾತನ್ನಾಡಿದನು:

07122029a ಏಷ ಪ್ರಯಾತ್ಯಾಧಿರಥಿಃ ಸಾತ್ಯಕೇಃ ಸ್ಯಂದನಂ ಪ್ರತಿ।
07122029c ನ ಮೃಷ್ಯತಿ ಹತಂ ನೂನಂ ಭೂರಿಶ್ರವಸಮಾಹವೇ।।

“ಇಗೋ! ಅಧಿರಥಿಯು ಸಾತ್ಯಕಿಯ ರಥದ ಕಡೆ ಹೋಗುತ್ತಿದ್ದಾನೆ. ಆಹವದಲ್ಲಿ ಭೂರಿಶ್ರವನು ಹತನಾದುದನ್ನು ಇನ್ನೂ ಸಹಿಸಿಕೊಂಡಿಲ್ಲವೆಂದು ತೋರುತ್ತದೆ.

07122030a ಯತ್ರ ಯಾತ್ಯೇಷ ತತ್ರ ತ್ವಂ ಚೋದಯಾಶ್ವಾಂ ಜನಾರ್ದನ।
07122030c ಮಾ ಸೋಮದತ್ತೇಃ ಪದವೀಂ ಗಮಯೇತ್ಸಾತ್ಯಕಿಂ ವೃಷಃ।।

ಜನಾರ್ದನ! ಅವನು ಎಲ್ಲಿ ಹೋಗುತ್ತಿದ್ದಾನೋ ಅಲ್ಲಿಗೆ ಕುದುರೆಗಳನ್ನು ಓಡಿಸು! ವೃಷನು ಸಾತ್ಯಕಿಯನ್ನು ಸೌಮದತ್ತಿಯ ಪದವಿಗೆ ಕಳುಹಿಸದೇ ಇರಲಿ!”

07122031a ಏವಮುಕ್ತೋ ಮಹಾಬಾಹುಃ ಕೇಶವಃ ಸವ್ಯಸಾಚಿನಾ।
07122031c ಪ್ರತ್ಯುವಾಚ ಮಹಾತೇಜಾಃ ಕಾಲಯುಕ್ತಮಿದಂ ವಚಃ।।

ಹೀಗೆ ಹೇಳಲು ಮಹಾಬಾಹು ಮಹಾತೇಜಸ್ವಿ ಕೇಶವನು ಸವ್ಯಸಾಚಿಗೆ ಕಾಲಯುಕ್ತವಾದ ಈ ಮಾತನ್ನಾಡಿದನು:

07122032a ಅಲಮೇಷ ಮಹಾಬಾಹುಃ ಕರ್ಣಾಯೈಕೋ ಹಿ ಪಾಂಡವ।
07122032c ಕಿಂ ಪುನರ್ದ್ರೌಪದೇಯಾಭ್ಯಾಂ ಸಹಿತಃ ಸಾತ್ವತರ್ಷಭಃ।।

“ಪಾಂಡವ! ಆ ಮಹಾಬಾಹು ಸಾತ್ವತರ್ಷಭನೊಬ್ಬನೇ ಕರ್ಣನಿಗೆ ಸಾಕು. ದ್ರುಪದನ ಇಬ್ಬರು ಮಕ್ಕಳೊಂದಿರುವಾಗ ಇನ್ನೇನು?

07122033a ನ ಚ ತಾವತ್ ಕ್ಷಮಃ ಪಾರ್ಥ ಕರ್ಣೇನ ತವ ಸಂಗರಃ।
07122033c ಪ್ರಜ್ವಲಂತೀ ಮಹೋಲ್ಕೇವ ತಿಷ್ಠತ್ಯಸ್ಯ ಹಿ ವಾಸವೀ।
07122033e ತ್ವದರ್ಥಂ ಪೂಜ್ಯಮಾನೈಷಾ ರಕ್ಷ್ಯತೇ ಪರವೀರಹನ್।।

ಪಾರ್ಥ! ಮಹಾ‌ಉಲ್ಕೆಯಂತೆ ಪ್ರಜ್ವಲಿಸುತ್ತಿರುವ ವಾಸವನ ಶಕ್ತಿಯು ಅವನಲ್ಲಿ ಇರುವಾಗ ಕರ್ಣನ ಜೊತೆ ನೀನು ಯುದ್ಧಮಾಡುವುದು ಸರಿಯಲ್ಲ. ಆ ಪರವೀರಹನು ನಿನಗಾಗಿಯೇ ಅದನ್ನು ಪೂಜಿಸಿ ರಕ್ಷಿಸುತ್ತಾ ಬಂದಿದ್ದಾನೆ.

07122034a ಅತಃ ಕರ್ಣಃ ಪ್ರಯಾತ್ವತ್ರ ಸಾತ್ವತಸ್ಯ ಯಥಾ ತಥಾ।
07122034c ಅಹಂ ಜ್ಞಾಸ್ಯಾಮಿ ಕೌರವ್ಯ ಕಾಲಮಸ್ಯ ದುರಾತ್ಮನಃ।।

ಈಗ ಕರ್ಣನು ಸಾತ್ವತನ ಕಡೆ ಹೇಗೆ ಹೋಗುತ್ತಿದ್ದಾನೋ ಹಾಗೆ ಹೋಗಲಿ. ಕೌರವ್ಯ! ಆ ದುರಾತ್ಮನ ಸಮಯವನ್ನು ನಾನು ತಿಳಿದಿದ್ದೇನೆ.””

07122035 ಧೃತರಾಷ್ಟ್ರ ಉವಾಚ।
07122035a ಯೋಽಸೌ ಕರ್ಣೇನ ವೀರೇಣ ವಾರ್ಷ್ಣೇಯಸ್ಯ ಸಮಾಗಮಃ।
07122035c ಹತೇ ತು ಭೂರಿಶ್ರವಸಿ ಸೈಂಧವೇ ಚ ನಿಪಾತಿತೇ।।

ಧೃತರಾಷ್ಟ್ರನು ಹೇಳಿದನು: “ಭೂರಿಶ್ರವ ಮತ್ತು ಸೈಂಧವರು ಹತರಾಗಿ ಕೆಳಗುರುಳಲು ವೀರ ಕರ್ಣ ಮತ್ತು ವಾರ್ಷ್ಣೇಯರು ಎದುರಾದರಲ್ಲವೇ?

07122036a ಸಾತ್ಯಕಿಶ್ಚಾಪಿ ವಿರಥಃ ಕಂ ಸಮಾರೂಢವಾನ್ರಥಂ।
07122036c ಚಕ್ರರಕ್ಷೌ ಚ ಪಾಂಚಾಲ್ಯೌ ತನ್ಮಮಾಚಕ್ಷ್ವ ಸಂಜಯ।।

ವಿರಥನಾಗಿದ್ದ ಸಾತ್ಯಕಿಯಾದರೋ ಯಾವ ರಥವನ್ನು ಏರಿದನು? ಮತ್ತು ಚಕ್ರರಕ್ಷಕರಾಗಿದ್ದ ಆ ಇಬ್ಬರು ಪಾಂಚಾಲರು ಹೇಗೆ ಹೋರಾಡಿದರು? ಇದನ್ನು ನನಗೆ ಹೇಳು ಸಂಜಯ!”

07122037 ಸಂಜಯ ಉವಾಚ।
07122037a ಹಂತ ತೇ ವರ್ಣಯಿಷ್ಯಾಮಿ ಯಥಾವೃತ್ತಂ ಮಹಾರಣೇ।
07122037c ಶುಶ್ರೂಷಸ್ವ ಸ್ಥಿರೋ ಭೂತ್ವಾ ದುರಾಚರಿತಮಾತ್ಮನಃ।।

ಸಂಜಯನು ಹೇಳಿದನು: “ತಡೆ! ಮಹಾರಣದಲ್ಲಿ ಏನಾಯಿತೋ ಹಾಗೆ ವರ್ಣಿಸುತ್ತೇನೆ. ಸ್ಥಿರನಾಗಿದ್ದುಕೊಂಡು ನಿನ್ನದೇ ದುರಾಚಾರದ ಕುರಿತು ಕೇಳು!

07122038a ಪೂರ್ವಮೇವ ಹಿ ಕೃಷ್ಣಸ್ಯ ಮನೋಗತಮಿದಂ ಪ್ರಭೋ।
07122038c ವಿಜೇತವ್ಯೋ ಯಥಾ ವೀರಃ ಸಾತ್ಯಕಿರ್ಯೂಪಕೇತುನಾ।।

ಪ್ರಭೋ! ವೀರ ಸಾತ್ಯಕಿಯು ಯೂಪಕೇತು ಭೂರಿಶ್ರವನಿಂದ ಸೋಲುತ್ತಾನೆಂದು ಮೊದಲೇ ಶ್ರೀಕೃಷ್ಣನಿಗೆ ಮನೋಗತವಾಗಿತ್ತು.

07122039a ಅತೀತಾನಾಗತಂ ರಾಜನ್ಸ ಹಿ ವೇತ್ತಿ ಜನಾರ್ದನಃ।
07122039c ಅತಃ ಸೂತಂ ಸಮಾಹೂಯ ದಾರುಕಂ ಸಂದಿದೇಶ ಹ।
07122039e ರಥೋ ಮೇ ಯುಜ್ಯತಾಂ ಕಾಲ್ಯಮಿತಿ ರಾಜನ್ಮಹಾಬಲಃ।।

ರಾಜನ್! ಜನಾರ್ದನನಿಗೆ ಅತೀತ75ವೂ ಅನಾಗತ76ವೂ ತಿಳಿದಿದೆ. ಆದುದರಿಂದಲೇ ರಾಜನ್! ಆ ಮಹಾಬಲನು ಸೂತ ದಾರುಕನನ್ನು ಕರೆದು “ನಾಳೆಗೆ ನನ್ನ ರಥವನ್ನು ಸಜ್ಜುಗೊಳಿಸು!” ಎಂಬ ಸಂದೇಶವನ್ನಿತ್ತಿದ್ದನು.

07122040a ನ ಹಿ ದೇವಾ ನ ಗಂಧರ್ವಾ ನ ಯಕ್ಷೋರಗರಾಕ್ಷಸಾಃ।
07122040c ಮಾನವಾ ವಾ ವಿಜೇತಾರಃ ಕೃಷ್ಣಯೋಃ ಸಂತಿ ಕೇ ಚನ।।

ದೇವತೆಗಳಾಗಲೀ, ಗಂಧರ್ವರಾಗಲೀ, ಯಕ್ಷ-ಉರಗ-ರಾಕ್ಷಸರಾಗಲೀ, ಮಾನವರಾಗಲೀ ಈ ಕೃಷ್ಣರನ್ನು ಗೆಲ್ಲುವವರು ಯಾರೂ ಇಲ್ಲ.

07122041a ಪಿತಾಮಹಪುರೋಗಾಶ್ಚ ದೇವಾಃ ಸಿದ್ಧಾಶ್ಚ ತಂ ವಿದುಃ।
07122041c ತಯೋಃ ಪ್ರಭಾವಮತುಲಂ ಶೃಣು ಯುದ್ಧಂ ಚ ತದ್ಯಥಾ।

ಅವರಿಬ್ಬರ ಅತುಲ ಪ್ರಭಾವವನ್ನು ಪಿತಾಮಹನೇ ಮೊದಲಾಗಿ ದೇವತೆಗಳೂ ಸಿದ್ಧರೂ ಬಲ್ಲರು. ಆಗ ನಡೆದ ಯುದ್ಧದ ಕುರಿತು ಕೇಳು.

07122042a ಸಾತ್ಯಕಿಂ ವಿರಥಂ ದೃಷ್ಟ್ವಾ ಕರ್ಣಂ ಚಾಭ್ಯುದ್ಯತಾಯುಧಂ।
07122042c ದಧ್ಮೌ ಶಂಖಂ ಮಹಾವೇಗಮಾರ್ಷಭೇಣಾಥ ಮಾಧವಃ।।

ಸಾತ್ಯಕಿಯು ವಿರಥನಾದುದನ್ನು ಮತ್ತು ಕರ್ಣನು ಆಯುಧವನ್ನೆತ್ತಿ ಬರುತ್ತಿರುವುದನ್ನು ಕಂಡು ಮಾಧವನು ಮಹಾವೇಗದಿಂದ ಋಷಭ ಸ್ವರದಲ್ಲಿ ಶಂಖವನ್ನು ಊದಿದನು.

07122043a ದಾರುಕೋಽವೇತ್ಯ ಸಂದೇಶಂ ಶ್ರುತ್ವಾ ಶಂಖಸ್ಯ ಚ ಸ್ವನಂ।
07122043c ರಥಮನ್ವಾನಯತ್ತಸ್ಮೈ ಸುಪರ್ಣೋಚ್ಚ್ರಿತಕೇತನಂ।।

ಶಂಖದ ಆ ನಾದವನ್ನು ಕೇಳಿ ಸಂದೇಶವನ್ನು ಅರ್ಥಮಾಡಿಕೊಂಡ ದಾರುಕನು ಅವನಿಗಾಗಿ ಗರುಡನು ನೆಲೆಸಿರುವ ಧ್ವಜವುಳ್ಳ ರಥವನ್ನು ತಂದನು.

07122044a ಸ ಕೇಶವಸ್ಯಾನುಮತೇ ರಥಂ ದಾರುಕಸಂಯುತಂ।
07122044c ಆರುರೋಹ ಶಿನೇಃ ಪೌತ್ರೋ ಜ್ವಲನಾದಿತ್ಯಸನ್ನಿಭಂ।।

ಆಗ ಶಿನಿಯ ಪೌತ್ರನು ಕೇಶವನ ಅನುಮತಿಯಂತೆ ದಾರುಕ ಸಂಯುಕ್ತ ಆದಿತ್ಯನಂತೆ ಪ್ರಜ್ವಲಿಸುತ್ತಿದ್ದ ಆ ರಥವನ್ನು ಏರಿದನು.

07122045a ಕಾಮಗೈಃ ಸೈನ್ಯಸುಗ್ರೀವಮೇಘಪುಷ್ಪಬಲಾಹಕೈಃ।
07122045c ಹಯೋದಗ್ರೈರ್ಮಹಾವೇಗೈರ್ಹೇಮಭಾಂಡವಿಭೂಷಿತೈಃ।।
07122046a ಯುಕ್ತಂ ಸಮಾರುಹ್ಯ ಚ ತಂ ವಿಮಾನಪ್ರತಿಮಂ ರಥಂ।
07122046c ಅಭ್ಯದ್ರವತ ರಾಧೇಯಂ ಪ್ರವಪನ್ಸಾಯಕಾನ್ಬಹೂನ್।।

ಬೇಕಾದಲ್ಲಿಗೆ ಹೋಗಬಲ್ಲ, ಮಹಾವೇಗಶಾಲಿಗಳಾದ, ಹೇಮಭಾಂಡಗಳಿಂದ ವಿಭೂಷಿತವಾದ, ಸೈನ್ಯ-ಸುಗ್ರೀವ-ಮೇಘಪುಷ್ಪ-ಬಲಾಹಕಗಳೆಂಬ ಅಗ್ರ ಅಶ್ವಗಳನ್ನು ಕಟ್ಟಿದ್ದ ವಿಮಾನದಂತಿದ್ದ ರಥವನ್ನು ಏರಿ ಅವನು ಅನೇಕ ಸಾಯಕಗಳನ್ನು ಪ್ರಹರಿಸುತ್ತಾ ರಾಧೇಯನನ್ನು ಆಕ್ರಮಣಿಸಿದನು.

07122047a ಚಕ್ರರಕ್ಷಾವಪಿ ತದಾ ಯುಧಾಮನ್ಯೂತ್ತಮೌಜಸೌ।
07122047c ಧನಂಜಯರಥಂ ಹಿತ್ವಾ ರಾಧೇಯಂ ಪ್ರತ್ಯುದೀಯಯುಃ।।

ಚಕ್ರರಕ್ಷಕರಾದ ಯುಧಾಮನ್ಯು ಉತ್ತಮೌಜಸರೂ ಕೂಡ ಧನಂಜಯನ ರಥವನ್ನು ತೊರೆದು ರಾಧೇಯನೊಂದಿಗೆ ಯುದ್ಧಕ್ಕೆ ತೊಡಗಿದರು.

07122048a ರಾಧೇಯೋಽಪಿ ಮಹಾರಾಜ ಶರವರ್ಷಂ ಸಮುತ್ಸೃಜನ್।
07122048c ಅಭ್ಯದ್ರವತ್ಸುಸಂಕ್ರುದ್ಧೋ ರಣೇ ಶೈನೇಯಮಚ್ಯುತಂ।।

ಮಹಾರಾಜ! ರಾಧೇಯನೂ ಕೂಡ ರಣದಲ್ಲಿ ಸಂಕ್ರುದ್ಧನಾಗಿ ಶರವರ್ಷವನ್ನು ಸುರಿಸುತ್ತಾ ಅಚ್ಯುತ ಶೈನೇಯನನ್ನು ಆಕ್ರಮಣಿಸಿದನು.

07122049a ನೈವ ದೈವಂ ನ ಗಾಂಧರ್ವಂ ನಾಸುರೋರಗರಾಕ್ಷಸಂ।
07122049c ತಾದೃಶಂ ಭುವಿ ವಾ ಯುದ್ಧಂ ದಿವಿ ವಾ ಶ್ರುತಮಿತ್ಯುತ।।

ಇದೂವರೆಗೆ ಅಂಥಹ ಯುದ್ಧದ ಕುರಿತು ಭೂಮಿಯಲ್ಲಾಗಲೀ, ದಿವಿಯಲ್ಲಾಗಲೀ, ದೇವ-ಗಂಧರ್ವ-ಅಸುರ-ಉರಗ-ರಾಕ್ಷಸರಲ್ಲಿಯಾಗಲೀ ಕೇಳಿರಲಿಲ್ಲ.

07122050a ಉಪಾರಮತ ತತ್ಸೈನ್ಯಂ ಸರಥಾಶ್ವನರದ್ವಿಪಂ।
07122050c ತಯೋರ್ದೃಷ್ಟ್ವಾ ಮಹಾರಾಜ ಕರ್ಮ ಸಮ್ಮೂಢಚೇತನಂ।।

ಮಹಾರಾಜ! ಅವರಿಬ್ಬರ ಯುದ್ಧವನ್ನೂ ನೋಡಿ ಸಮ್ಮೂಢಚೇತನರಾಗಿ ರಥ-ಕುದುರೆ-ಪದಾತಿ-ಆನೆಗಳೊಂದಿಗೆ ಆ ಸೇನೆಯು ಏನೂ ಮಾಡದೇ ನೋಡುತ್ತಾ ನಿಂತುಬಿಟ್ಟಿತು.

07122051a ಸರ್ವೇ ಚ ಸಮಪಶ್ಯಂತ ತದ್ಯುದ್ಧಮತಿಮಾನುಷಂ।
07122051c ತಯೋರ್ನೃವರಯೋ ರಾಜನ್ಸಾರಥ್ಯಂ ದಾರುಕಸ್ಯ ಚ।।

ರಾಜನ್! ಎಲ್ಲರೂ ಆ ಇಬ್ಬರು ನರವರರ ಅತಿಮಾನುಷ ಯುದ್ಧವನ್ನೂ ದಾರುಕನ ಸಾರಥ್ಯವನ್ನೂ ನೋಡತೊಡಗಿದರು.

07122052a ಗತಪ್ರತ್ಯಾಗತಾವೃತ್ತೈರ್ಮಂಡಲೈಃ ಸನ್ನಿವರ್ತನೈಃ।
07122052c ಸಾರಥೇಸ್ತು ರಥಸ್ಥಸ್ಯ ಕಾಶ್ಯಪೇಯಸ್ಯ ವಿಸ್ಮಿತಾಃ।।

ಸಾರಥಿ ಕಾಶ್ಯಪನು ರಥವನ್ನು ಮುಂದೆ, ಹಿಂದೆ, ಮಂಡಲಾಕಾರದಲ್ಲಿ ಮತ್ತು ತಿರುಗಿ ತರುವುದನ್ನು ನೋಡಿ ವಿಸ್ಮಿತರಾದರು.

07122053a ನಭಸ್ತಲಗತಾಶ್ಚೈವ ದೇವಗಂಧರ್ವದಾನವಾಃ।
07122053c ಅತೀವಾವಹಿತಾ ದ್ರಷ್ಟುಂ ಕರ್ಣಶೈನೇಯಯೋ ರಣಂ।।

ನಭಸ್ತಲದಲ್ಲಿ ಕೂಡ ದೇವ-ಗಂಧರ್ವ-ದಾನವರು ರಣದಲ್ಲಿ ಕರ್ಣ-ಶೈನೇಯರು ಯುದ್ಧಮಾಡುವುದನ್ನು ನೋಡಲು ಸೇರಿದರು.

07122054a ಮಿತ್ರಾರ್ಥೇ ತೌ ಪರಾಕ್ರಾಂತೌ ಸ್ಪರ್ಧಿನೌ ಶುಷ್ಮಿಣೌ ರಣೇ।
07122054c ಕರ್ಣಶ್ಚಾಮರಸಂಕಾಶೋ ಯುಯುಧಾನಶ್ಚ ಸಾತ್ಯಕಿಃ।।

ಮಿತ್ರರಿಗಾಗಿ ಅಮರಸಂಕಾಶ ಕರ್ಣ ಮತ್ತು ಯುಯುಧಾನ ಸಾತ್ಯಕಿಯರು ಪರಾಕ್ರಾಂತರಾಗಿ ಸ್ಪರ್ಧಿಸುತ್ತಾ ಬಲವನ್ನುಪಯೋಗಿಸಿ ಹೋರಾಡಿದರು.

07122055a ಅನ್ಯೋನ್ಯಂ ತೌ ಮಹಾರಾಜ ಶರವರ್ಷೈರವರ್ಷತಾಂ।
07122055c ಪ್ರಮಮಾಥ ಶಿನೇಃ ಪೌತ್ರಂ ಕರ್ಣಃ ಸಾಯಕವೃಷ್ಟಿಭಿಃ।।

ಮಹಾರಾಜ! ಅವರಿಬ್ಬರೂ ಅನ್ಯೋನ್ಯರನ್ನು ಶರವರ್ಷಗಳಿಂದ ಮುಚ್ಚಿದರು. ಆಗ ಕರ್ಣನು ಶಿನಿಯ ಮೊಮ್ಮಗನನ್ನು ಸಾಯಕಗಳ ಮಳೆಯಿಂದ ಆಕ್ರಮಣಿಸಿದನು.

07122056a ಅಮೃಷ್ಯಮಾಣೋ ನಿಧನಂ ಕೌರವ್ಯಜಲಸಂಧಯೋಃ।
07122056c ಕರ್ಣಃ ಶೋಕಸಮಾವಿಷ್ಟೋ ಮಹೋರಗ ಇವ ಶ್ವಸನ್।।
07122057a ಸ ಶೈನೇಯಂ ರಣೇ ಕ್ರುದ್ಧಃ ಪ್ರದಹನ್ನಿವ ಚಕ್ಷುಷಾ।
07122057c ಅಭ್ಯದ್ರವತ ವೇಗೇನ ಪುನಃ ಪುನರರಿಂದಮಃ।।

ಕೌರವ್ಯ-ಜಲಸಂಧರ ನಿಧನವನ್ನು ಸಹಿಸಿಕೊಳ್ಳಲಾರದೇ ಶೋಕಸಮಾವಿಷ್ಟನಾಗಿ, ಮಹಾನಾಗದಂತೆ ನಿಟ್ಟುಸಿರು ಬಿಡುತ್ತಾ ಅರಿಂದಮ ಕರ್ಣನು, ರಣದಲ್ಲಿ ಕೋಪದಿಂದ ಸುಟ್ಟುಬಿಡುವನೋ ಎಂಬಂತೆ ಶೈನೇಯನನ್ನು ನೋಡುತ್ತಾ ಪುನಃ ಪುನಃ ವೇಗದಿಂದ ಆಕ್ರಮಣಿಸಿದನು.

07122058a ತಂ ತು ಸಂಪ್ರೇಕ್ಷ್ಯ ಸಂಕ್ರುದ್ಧಂ ಸಾತ್ಯಕಿಃ ಪ್ರತ್ಯವಿಧ್ಯತ।
07122058c ಮಹತಾ ಶರವರ್ಷೇಣ ಗಜಃ ಪ್ರತಿಗಜಂ ಯಥಾ।।

ಅವನು ಸಂಕ್ರುದ್ಧನಾದುದನ್ನು ನೋಡಿ ಸಾತ್ಯಕಿಯು ಆನೆಯನ್ನು ಎದುರಿಸಿದ ಇನ್ನೊಂದು ಆನೆಯು ಹೇಗೋ ಹಾಗೆ ಮಹಾ ಶರವರ್ಷದಿಂದ ತಿರುಗಿ ಆಕ್ರಮಣಿಸಿದನು.

07122059a ತೌ ಸಮೇತ್ಯ ನರವ್ಯಾಘ್ರೌ ವ್ಯಾಘ್ರಾವಿವ ತರಸ್ವಿನೌ।
07122059c ಅನ್ಯೋನ್ಯಂ ಸಂತತಕ್ಷಾತೇ ರಣೇಽನುಪಮವಿಕ್ರಮೌ।।

ವ್ಯಾಘ್ರಗಳಂತೆ ಕಾತರರಾದ ಆ ಇಬ್ಬರು ನರವ್ಯಾಘ್ರ ಅನುಪಮ ವಿಕ್ರಮರು ಎದುರಿಸಿ ರಣದಲ್ಲಿ ಅನ್ಯೋನ್ಯರನ್ನು ತುಂಬಾ ಗಾಯಗೊಳಿಸಿದರು.

07122060a ತತಃ ಕರ್ಣಂ ಶಿನೇಃ ಪೌತ್ರಃ ಸರ್ವಪಾರಶವೈಃ ಶರೈಃ।
07122060c ಬಿಭೇದ ಸರ್ವಗಾತ್ರೇಷು ಪುನಃ ಪುನರರಿಂದಮಃ।।

ಆಗ ಅರಿಂದಮ ಶಿನಿಯ ಮೊಮ್ಮಗನು ಎಲ್ಲವೂ ಉಕ್ಕಿನಿಂದ ಮಾಡಲ್ಪಟ್ಟ ಶರಗಳಿಂದ ಕರ್ಣನ ಎಲ್ಲ ಅಂಗಾಂಗಗಳಿಗೆ ಚುಚ್ಚುವಂತೆ ಪುನಃ ಪುನಃ ಹೊಡೆದನು.

07122061a ಸಾರಥಿಂ ಚಾಸ್ಯ ಭಲ್ಲೇನ ರಥನೀಡಾದಪಾಹರತ್।
07122061c ಅಶ್ವಾಂಶ್ಚ ಚತುರಃ ಶ್ವೇತಾನ್ನಿಜಘ್ನೇ ನಿಶಿತೈಃ ಶರೈಃ।।

ಭಲ್ಲದಿಂದ ಅವನ ಸಾರಥಿಯನ್ನೂ ರಥದ ನೊಗದ ಮೇಲಿಂದ ಬೀಳಿಸಿದನು. ಮತ್ತು ನಿಶಿತ ಶರಗಳಿಂದ ಅವನ ನಾಲ್ಕು ಶ್ವೇತಾಶ್ವಗಳನ್ನೂ ಸಂಹರಿಸಿದನು.

07122062a ಚಿತ್ತ್ವಾ ಧ್ವಜಂ ಶತೇನೈವ ಶತಧಾ ಪುರುಷರ್ಷಭಃ।
07122062c ಚಕಾರ ವಿರಥಂ ಕರ್ಣಂ ತವ ಪುತ್ರಸ್ಯ ಪಶ್ಯತಃ।।

ನೂರು ಬಾಣಗಳಿಂದ ಅವನ ಧ್ವಜವನ್ನು ನೂರುಚೂರುಗಳನ್ನಾಗಿ ಮಾಡಿ ಆ ಪುರುಷರ್ಷಭನು ನಿನ್ನ ಮಕ್ಕಳು ನೋಡುತ್ತಿದ್ದಂತೆಯೇ ಕರ್ಣನನ್ನು ವಿರಥನನ್ನಾಗಿ ಮಾಡಿದನು.

07122063a ತತೋ ವಿಮನಸೋ ರಾಜಂಸ್ತಾವಕಾಃ ಪುರುಷರ್ಷಭಾಃ।
07122063c ವೃಷಸೇನಃ ಕರ್ಣಸುತಃ ಶಲ್ಯೋ ಮದ್ರಾಧಿಪಸ್ತಥಾ।।
07122064a ದ್ರೋಣಪುತ್ರಶ್ಚ ಶೈನೇಯಂ ಸರ್ವತಃ ಪರ್ಯವಾರಯನ್।
07122064c ತತಃ ಪರ್ಯಾಕುಲಂ ಸರ್ವಂ ನ ಪ್ರಾಜ್ಞಾಯತ ಕಿಂ ಚನ।।

ಆಗ ರಾಜನ್! ನಿನ್ನವರಾದ ಪುರುಷರ್ಷಭರು - ಕರ್ಣಸುತ ವೃಷಸೇನ, ಮದ್ರಾಧಿಪ ಶಲ್ಯ ಮತ್ತು ದ್ರೋಣಪುತ್ರರು -ವಿಮನಸ್ಕರಾಗಿ ಶೈನೇಯನನ್ನು ಎಲ್ಲ ಕಡೆಗಳಿಂದ ಸುತ್ತುವರೆದರು. ಆಗ ಎಲ್ಲ ಗೊಂದಲವುಂಟಾಗಿ ಏನೂ ತಿಳಿಯಲಾಗಲಿಲ್ಲ.

07122065a ತಥಾ ಸಾತ್ಯಕಿನಾ ವೀರೇ ವಿರಥೇ ಸೂತಜೇ ಕೃತೇ।
07122065c ಹಾಹಾಕಾರಸ್ತತೋ ರಾಜನ್ಸರ್ವಸೈನ್ಯೇಷು ಚಾಭವತ್।।

ರಾಜನ್! ಹೀಗೆ ವೀರ ಸೂತಜನು ಸಾತ್ಯಕಿಯಿಂದ ವಿರಥನಾಗಲು ಸರ್ವ ಸೇನೆಗಳಲ್ಲಿ ಹಾಹಾಕಾರವುಂಟಾಯಿತು.

07122066a ಕರ್ಣೋಽಪಿ ವಿಹ್ವಲೋ ರಾಜನ್ಸಾತ್ವತೇನಾರ್ದಿತಃ ಶರೈಃ।
07122066c ದುರ್ಯೋಧನರಥಂ ರಾಜನ್ನಾರುರೋಹ ವಿನಿಃಶ್ವಸನ್।।
07122067a ಮಾನಯಂಸ್ತವ ಪುತ್ರಸ್ಯ ಬಾಲ್ಯಾತ್ ಪ್ರಭೃತಿ ಸೌಹೃದಂ।
07122067c ಕೃತಾಂ ರಾಜ್ಯಪ್ರದಾನೇನ ಪ್ರತಿಜ್ಞಾಂ ಪರಿಪಾಲಯನ್।।

ರಾಜನ್! ಕರ್ಣನೂ ಕೂಡ ಸಾತ್ವತನ ಶರಗಳಿಂದ ಪೀಡಿತನಾಗಿ ವಿಹ್ವಲನಾಗಿ ನಿಟ್ಟುಸಿರು ಬಿಡುತ್ತಾ, ಬಾಲ್ಯದಿಂದಲೂ ನಿನ್ನ ಮಗನು ತೋರಿದ ಸೌಹಾರ್ದತೆ ಮತ್ತು ಅವನಿಗೆ ರಾಜ್ಯವನ್ನು ಕೊಡಿಸುತ್ತೇನೆ ಎನ್ನುವ ಪರಿಪಾಲಿಸಬೇಕಾದ ಪ್ರತಿಜ್ಞೆಯನ್ನು ಮನ್ನಿಸಿ, ದುರ್ಯೋಧನನ ರಥವನ್ನೇರಿದನು.

07122068a ತಥಾ ತು ವಿರಥೇ ಕರ್ಣೇ ಪುತ್ರಾನ್ವೈ ತವ ಪಾರ್ಥಿವ।
07122068c ದುಃಶಾಸನಮುಖಾಂ ಶೂರಾನ್ನಾವಧೀತ್ಸಾತ್ಯಕಿರ್ವಶೀ।।

ಪಾರ್ಥಿವ! ಕರ್ಣನನ್ನು ವಿರಥನನ್ನಾಗಿ ಮಾಡಿ ನಿಯಂತ್ರಣದಲ್ಲಿದ್ದ ಸಾತ್ಯಕಿಯು ದುಃಶಾಸನನ ನಾಯಕತ್ವದಲ್ಲಿದ್ದ ನಿನ್ನ ಶೂರಪುತ್ರರನ್ನು ಕೊಲ್ಲಲಿಲ್ಲ.

07122069a ರಕ್ಷನ್ಪ್ರತಿಜ್ಞಾಂ ಚ ಪುನರ್ಭೀಮಸೇನಕೃತಾಂ ಪುರಾ।
07122069c ವಿರಥಾನ್ವಿಹ್ವಲಾಂಶ್ಚಕ್ರೇ ನ ತು ಪ್ರಾಣೈರ್ವ್ಯಯೋಜಯತ್।।

ಹಿಂದೆ ಭೀಮಸೇನನು ಮಾಡಿದ್ದ ಪ್ರತಿಜ್ಞೆಯನ್ನು ರಕ್ಷಿಸಲೋಸುಗ ಅವರನ್ನು ವಿರಥರನ್ನಾಗಿಸಿ ವಿಹ್ವಲರನ್ನಾಗಿಸಿ, ಪ್ರಾಣಗಳೊಂದಿಗೆ ಬಿಟ್ಟನು.

07122070a ಭೀಮಸೇನೇನ ತು ವಧಃ ಪುತ್ರಾಣಾಂ ತೇ ಪ್ರತಿಶ್ರುತಃ।
07122070c ಪುನರ್ದ್ಯೂತೇ ಚ ಪಾರ್ಥೇನ ವಧಃ ಕರ್ಣಸ್ಯ ಶಂಶ್ರುತಃ।।

ನಿನ್ನ ಪುತ್ರರ ವಧೆಯ ಕುರಿತು ಭೀಮಸೇನನಿಂದ ಕೇಳಿದ್ದನು. ಪುನಃ ದ್ಯೂತದಲ್ಲಿ ಕರ್ಣನ ವಧೆಯ ಕುರಿತು ಪಾರ್ಥನಿಂದ ಕೇಳಿದ್ದನು.

07122071a ವಧೇ ತ್ವಕುರ್ವನ್ಯತ್ನಂ ತೇ ತಸ್ಯ ಕರ್ಣಮುಖಾಸ್ತದಾ।
07122071c ನಾಶಕ್ನುವಂಶ್ಚ ತಂ ಹಂತುಂ ಸಾತ್ಯಕಿಂ ಪ್ರವರಾ ರಥಾಃ।।

ಕರ್ಣನ ನಾಯಕತ್ವದಲ್ಲಿ ರಥಿಗಳಲ್ಲಿ ಪ್ರವರ ಸಾತ್ಯಕಿಯನ್ನು ಸಂಹರಿಸಲು ಪ್ರಯತ್ನಿಸಿದರೂ ಅದಕ್ಕೆ ಅವನು ಅಶಕ್ಯರಾದರು.

07122072a ದ್ರೌಣಿಶ್ಚ ಕೃತವರ್ಮಾ ಚ ತಥೈವಾನ್ಯೇ ಮಹಾರಥಾಃ।
07122072c ನಿರ್ಜಿತಾ ಧನುಷೈಕೇನ ಶತಶಃ ಕ್ಷತ್ರಿಯರ್ಷಭಾಃ।
07122072e ಕಾಂಕ್ಷತಾ ಪರಲೋಕಂ ಚ ಧರ್ಮರಾಜಸ್ಯ ಚ ಪ್ರಿಯಂ।।

ಒಂದೇ ಒಂದು ಧನುಸ್ಸಿನಿಂದ ಪರಲೋಕವನ್ನೂ ಧರ್ಮರಾಜನಿಗೆ ಪ್ರಿಯವಾದದನ್ನು ಮಾಡಬೇಕೆಂದೂ ಅವನು ದ್ರೌಣಿ, ಕೃತವರ್ಮ, ಮತ್ತು ಇತರ ಅನ್ಯ ನೂರಾರು ಕ್ಷತ್ರಿಯರ್ಷಭ ಮಹಾರಥರನ್ನು ಸೋಲಿಸಿದನು.

07122073a ಕೃಷ್ಣಯೋಃ ಸದೃಶೋ ವೀರ್ಯೇ ಸಾತ್ಯಕಿಃ ಶತ್ರುಕರ್ಶನಃ।
07122073c ಕೃಷ್ಣೋ ವಾಪಿ ಭವೇಲ್ಲೋಕೇ ಪಾರ್ಥೋ ವಾಪಿ ಧನುರ್ಧರಃ।
07122073e ಶೈನೇಯೋ ವಾ ನರವ್ಯಾಘ್ರಶ್ಚತುರ್ಥೋ ನೋಪಲಭ್ಯತೇ।।

ಶತ್ರುಕರ್ಶನ ಸಾತ್ಯಕಿಯು ವೀರ್ಯದಲ್ಲಿ ಕೃಷ್ಣರ ಸದೃಶನಾಗಿದ್ದಾನೆ. ಲೋಕದಲ್ಲಿ ಕೃಷ್ಣ ಅಥವಾ ಧನುರ್ಧರ ಪಾರ್ಥ ಅಥವಾ ನರವ್ಯಾಘ್ರ ಶೈನೇಯ. ನಾಲ್ಕನೆಯವನು ದೊರೆಯುವುದಿಲ್ಲ.”

07122074 ಧೃತರಾಷ್ಟ್ರ ಉವಾಚ।
07122074a ಅಜಯ್ಯಂ ರಥಮಾಸ್ಥಾಯ ವಾಸುದೇವಸ್ಯ ಸಾತ್ಯಕಿಃ।
07122074c ವಿರಥಂ ಕೃತವಾನ್ಕರ್ಣಂ ವಾಸುದೇವಸಮೋ ಯುವಾ।।
07122075a ದಾರುಕೇಣ ಸಮಾಯುಕ್ತಂ ಸ್ವಬಾಹುಬಲದರ್ಪಿತಃ।
07122075c ಕಚ್ಚಿದನ್ಯಂ ಸಮಾರೂಢಃ ಸ ರಥಂ ಸಾತ್ಯಕಿಃ ಪುನಃ।।

ಧೃತರಾಷ್ಟ್ರನು ಹೇಳಿದನು: “ವಾಸುದೇವ ಸಮನಾದ ಸ್ವಬಾಹುಬಲದರ್ಪಿತ ಯುವ ಸಾತ್ಯಕಿಯು ದಾರುಕನಿಂದ ಯುಕ್ತವಾದ ವಾಸುದೇವನ ಅಜೇಯ ರಥದಲ್ಲಿ ಕುಳಿತು ಕರ್ಣನನ್ನು ವಿರಥನನ್ನಾಗಿ ಮಾಡಿದನು. ಪುನಃ ಆ ಸಾತ್ಯಕಿಯು ಬೇರೆ ಯಾರ ರಥವನ್ನಾದರೂ ಏರಿದನೇ?

07122076a ಏತದಿಚ್ಚಾಮ್ಯಹಂ ಶ್ರೋತುಂ ಕುಶಲೋ ಹ್ಯಸಿ ಭಾಷಿತುಂ।
07122076c ಅಸಹ್ಯಂ ತಮಹಂ ಮನ್ಯೇ ತನ್ಮಮಾಚಕ್ಷ್ವ ಸಂಜಯ।।

ಸಂಜಯ! ಇದನ್ನು ಕೇಳಲು ಬಯಸುತ್ತೇನೆ. ಮಾತನಾಡುವುದರಲ್ಲಿ ಕುಶಲನಾಗಿದ್ದೀಯೆ. ಅವನು ಸಹಿಸಲಸಾಧ್ಯನೆಂದು ತಿಳಿಯುತ್ತೇನೆ. ಅದನ್ನು ನನಗೆ ಹೇಳು!”

07122077 ಸಂಜಯ ಉವಾಚ।
07122077a ಶೃಣು ರಾಜನ್ಯಥಾ ತಸ್ಯ ರಥಮನ್ಯಂ ಮಹಾಮತಿಃ।
07122077c ದಾರುಕಸ್ಯಾನುಜಸ್ತೂರ್ಣಂ ಕಲ್ಪನಾವಿಧಿಕಲ್ಪಿತಂ।।

ಸಂಜಯನು ಹೇಳಿದನು: “ರಾಜನ್! ಅದು ಹೇಗಾಯಿತೆನ್ನುವುದನ್ನು ಕೇಳು. ಮಹಾಮತಿ ದಾರುಕನ ತಮ್ಮನು ಕೂಡಲೇ ವಿಧಿವತ್ತಾಗಿ ಸಜ್ಜುಗೊಳಿಸಿದ ಅವನ ಇನ್ನೊಂದು ರಥವನ್ನು ತಂದನು.

07122078a ಆಯಸೈಃ ಕಾಂಚನೈಶ್ಚಾಪಿ ಪಟ್ಟೈರ್ನದ್ಧಂ ಸಕೂಬರಂ।
07122078c ತಾರಾಸಹಸ್ರಖಚಿತಂ ಸಿಂಹಧ್ವಜಪತಾಕಿನಂ।।
07122079a ಅಶ್ವೈರ್ವಾತಜವೈರ್ಯುಕ್ತಂ ಹೇಮಭಾಂಡಪರಿಚ್ಚದೈಃ।
07122079c ಪಾಂಡುರೈರಿಂದುಸಂಕಾಶೈಃ ಸರ್ವಶಬ್ದಾತಿಗೈರ್ದೃಢೈಃ।।
07122080a ಚಿತ್ರಕಾಂಚನಸನ್ನಾಹೈರ್ವಾಜಿಮುಖ್ಯೈರ್ವಿಶಾಂ ಪತೇ।
07122080c ಘಂಟಾಜಾಲಾಕುಲರವಂ ಶಕ್ತಿತೋಮರವಿದ್ಯುತಂ।।
07122081a ವೃತಂ ಸಾಂಗ್ರಾಮಿಕೈರ್ದ್ರವ್ಯೈರ್ಬಹುಶಸ್ತ್ರಪರಿಚ್ಚದಂ।
07122081c ರಥಂ ಸಂಪಾದಯಾಮಾಸ ಮೇಘಗಂಭೀರನಿಸ್ವನಂ।।

ವಿಶಾಂಪತೇ! ಉಕ್ಕಿನಿಂದ ಮಾಡಲ್ಪಟ್ಟ, ಕಾಂಚನದ ಪಟ್ಟಿಯನ್ನು ಕಟ್ಟಿದ್ದ ಮೂಕಿರುವ, ಸಾವಿರ ನಕ್ಷತ್ರಗಳು ಖಚಿತಗೊಂಡಿರುವ ಸಿಂಹಧ್ವಜ ಪತಾಕೆಗಳನ್ನುಳ್ಳ, ಗಾಳಿಯ ವೇಗದ ಕುದುರೆಗಳನ್ನು ಕಟ್ಟಿದ್ದ, ಬಂಗಾರದ ತಗಡಿನಿಂದ ಮುಚ್ಚಿದ್ದ, ಚಂದ್ರನಂತೆ ಬಿಳುಪಾಗಿದ್ದ, ಎಲ್ಲವುಗಳಿಗಿಂತ ದೃಢಶಬ್ಧವುಳ್ಳ, ಚಿತ್ರ-ಕಾಂಚನಗಳಿಂದ ಸನ್ನದ್ಧವಾಗಿದ್ದ ಪ್ರಮುಖ ಕುದುರೆಗಳನ್ನು ಕಟ್ಟಿದ್ದ, ಧ್ವನಿಗೈಯುತ್ತಿದ್ದ ಗಂಟೆಗಳ ಮಾಲೆಗಳಿರುವ, ಶಕ್ತಿ-ತೋಮರಗಳಿಂದ ಕೂಡಿದ್ದ, ಅನೇಕ ವಿವಿಧ ಸಾಮಾಗ್ರಿ, ದ್ರವ್ಯ, ಶಸ್ತ್ರಗಳಿಂದ ತುಂಬಿದ್ದ, ಮೇಘದಂತೆ ಗಂಭೀರ ಧ್ವನಿಯುಳ್ಳ ರಥವನ್ನು ತೆಗೆದುಕೊಂಡು ಬಂದನು.

07122082a ತಂ ಸಮಾರುಹ್ಯ ಶೈನೇಯಸ್ತವ ಸೈನ್ಯಮುಪಾದ್ರವತ್।
07122082c ದಾರುಕೋಽಪಿ ಯಥಾಕಾಮಂ ಪ್ರಯಯೌ ಕೇಶವಾಂತಿಕಂ।।

ಅದನ್ನು ಏರಿ ಶೈನೇಯನು ನಿನ್ನ ಸೇನೆಯನ್ನು ಆಕ್ರಮಣಿಸಿದನು. ದಾರುಕನೂ ಕೂಡ ಬಯಸಿದಂತೆ ಕೇಶವನ ಬಳಿ ಹೋದನು.

07122083a ಕರ್ಣಸ್ಯಾಪಿ ಮಹಾರಾಜ ಶಂಖಗೋಕ್ಷೀರಪಾಂಡುರೈಃ।
07122083c ಚಿತ್ರಕಾಂಚನಸನ್ನಾಹೈಃ ಸದಶ್ವೈರ್ವೇಗವತ್ತರೈಃ।।
07122084a ಹೇಮಕಕ್ಷ್ಯಾಧ್ವಜೋಪೇತಂ ಕ್ಲಪ್ತಯಂತ್ರಪತಾಕಿನಂ।
07122084c ಅಗ್ರ್ಯಂ ರಥಂ ಸುಯಂತಾರಂ ಬಹುಶಸ್ತ್ರಪರಿಚ್ಚದಂ।।
07122085a ಉಪಾಜಹ್ರುಸ್ತಮಾಸ್ಥಾಯ ಕರ್ಣೋಽಪ್ಯಭ್ಯದ್ರವದ್ರಿಪೂನ್।
07122085c ಏತತ್ತೇ ಸರ್ವಮಾಖ್ಯಾತಂ ಯನ್ಮಾಂ ತ್ವಂ ಪರಿಪೃಚ್ಚಸಿ।।

ಮಹಾರಾಜ! ಕರ್ಣನಿಗೆ ಕೂಡ ಶಂಖ ಮತ್ತು ಹಸುವಿನ ಹಾಲಿನ ಬಣ್ಣದ, ಚಿತ್ರಕಾಂಚನಗಳಿಂದ ಸಜ್ಜುಪಡಿಸಿದ್ದ, ವೇಗಶಾಲಿಗಳಾದ ಕುದುರೆಗಳನ್ನು ಕಟ್ಟಿದ, ಬಂಗಾರದ ಕೋಣೆ-ಧ್ವಜಗಳಿದ್ದ, ಪತಾಕೆಯನ್ನು ಏರಿಸುವ ಯಂತ್ರವಿದ್ದ, ಉತ್ತಮ ಸಾರಥಿಯಿದ್ದ, ಅನೇಕ ಶಸ್ತ್ರಗಳಿಂದ ತುಂಬಿದ ಅಗ್ರ ರಥವನ್ನು ತರಲಾಯಿತು. ಅದರಲ್ಲಿ ಕುಳಿತು ಕರ್ಣನು ಶತ್ರುಗಳೊಂದಿಗೆ ಹೋರಾಡಿದನು. ನೀನು ನನಗೆ ಕೇಳಿದುದೆಲ್ಲವನ್ನೂ ನಾನು ಹೇಳಿದ್ದೇನೆ.

07122086a ಭೂಯಶ್ಚಾಪಿ ನಿಬೋಧ ತ್ವಂ ತವಾಪನಯಜಂ ಕ್ಷಯಂ।
07122086c ಏಕತ್ರಿಂಶತ್ತವ ಸುತಾ ಭೀಮಸೇನೇನ ಪಾತಿತಾಃ।।

ನಿನ್ನ ದುರ್ನ್ಯಾಯದಿಂದ ಆದ ಕ್ಷಯದ ಕುರಿತು ಇನ್ನೂ ಕೇಳು. ನಿನ್ನ ಮೂವತ್ತೊಂದು ಮಕ್ಕಳು ಭೀಮಸೇನನಿಂದ ಹತರಾದರು.

07122087a ದುರ್ಮುಖಂ ಪ್ರಮುಖೇ ಕೃತ್ವಾ ಸತತಂ ಚಿತ್ರಯೋಧಿನಂ।
07122087c ಶತಶೋ ನಿಹತಾಃ ಶೂರಾಃ ಸಾತ್ವತೇನಾರ್ಜುನೇನ ಚ।।
07122088a ಭೀಷ್ಮಂ ಪ್ರಮುಖತಃ ಕೃತ್ವಾ ಭಗದತ್ತಂ ಚ ಮಾರಿಷ।
07122088c ಏವಮೇಷ ಕ್ಷಯೋ ವೃತ್ತೋ ರಾಜನ್ದುರ್ಮಂತ್ರಿತೇ ತವ।।

ಅವರಲ್ಲಿ ಸತತವೂ ಚಿತ್ರಯೋಧಿಯಾದ ದುರ್ಮುಖನು ಪ್ರಮುಖನಾಗಿದ್ದನು. ಸಾತ್ವತ ಮತ್ತು ಅರ್ಜುನರಿಂದ ನೂರಾರು ಶೂರರು ಹತರಾದರು. ಮಾರಿಷ! ಭೀಷ್ಮನನ್ನು ಪ್ರಮುಖನನ್ನಾಗಿ ಮಾಡಿ ಭಗದತ್ತನೂ ಹತನಾದನು. ನಿನ್ನ ದುರ್ಮಂತ್ರದಿಂದಾಗಿ ಈ ರೀತಿಯ ನಾಶವು ನಡೆಯಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಕರ್ಣಸಾತ್ಯಕಿಯುದ್ಧೇ ದ್ವಾವಿಂಶಾಧಿಕಶತತಮೋಽಧ್ಯಾಯಃ ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಕರ್ಣಸಾತ್ಯಕಿಯುದ್ಧ ಎನ್ನುವ ನೂರಾಇಪ್ಪತ್ತೆರಡನೇ ಅಧ್ಯಾಯವು.