ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 121
ಸಾರ
ಜಯದ್ರಥವಧೆ (1-49).
07121001 ಸಂಜಯ ಉವಾಚ।
07121001a ಸ ರಣೇ ವ್ಯಚರತ್ಪಾರ್ಥಃ ಪ್ರೇಕ್ಷಣೀಯೋ ಧನಂಜಯಃ।
07121001c ಯುಗಪದ್ದಿಕ್ಷು ಸರ್ವಾಸು ಚಿತ್ರಾಣ್ಯಸ್ತ್ರಾಣಿ ದರ್ಶಯನ್।।
ಸಂಜಯನು ಹೇಳಿದನು: “ಪಾರ್ಥ ಧನಂಜಯನು ರಣದಲ್ಲಿ ವಿಚಿತ್ರ ಅಸ್ತ್ರಗಳನ್ನು ಪ್ರದರ್ಶಿಸುತ್ತಾ ಒಂದೇ ಸಮಯದಲ್ಲಿ ಎಲ್ಲ ದಿಕ್ಕುಗಳಲ್ಲಿ ಕಾಣಿಸಿಕೊಳ್ಳುತ್ತಾ ಸಂಚರಿಸುತ್ತಿದ್ದನು.
07121002a ಮಧ್ಯಂದಿನಗತಂ ಸೂರ್ಯಂ ಪ್ರತಪಂತಮಿವಾಂಬರೇ।
07121002c ನ ಶೇಕುಃ ಸರ್ವಭೂತಾನಿ ಪಾಂಡವಂ ಪ್ರತಿವೀಕ್ಷಿತುಂ।।
ಅಂಬರದಲ್ಲಿ ದಿನದ ಮಧ್ಯಾಹ್ನವನ್ನು ತಲುಪಿದ ಸೂರ್ಯನಂತೆ ಪ್ರತಾಪಿಸುತ್ತಿದ್ದ ಪಾಂಡವನನ್ನು ಸರ್ವಭೂತಗಳೂ ಎವೆಯಿಕ್ಕಿ ನೋಡಲು ಶಕ್ಯರಾಗುತ್ತಿರಲಿಲ್ಲ.
07121003a ಪ್ರಸೃತಾಂಸ್ತಸ್ಯ ಗಾಂಡೀವಾಚ್ಚರವ್ರಾತಾನ್ಮಹಾತ್ಮನಃ।
07121003c ಸಂಗ್ರಾಮೇ ಸಮಪಶ್ಯಾಮ ಹಂಸಪಂಕ್ತೀರಿವಾಂಬರೇ।।
ಆ ಮಹಾತ್ಮನು ಗಾಂಡೀವದಿಂದ ಹೊರಬಿಡುತ್ತಿದ್ದ ಶರಸಮೂಹಗಳನ್ನು ಅಂಬರದಲ್ಲಿ ಹಂಸಗಳ ಪಂಗ್ತಿಗಳಂತೆ ಸಂಗ್ರಾಮದಲ್ಲಿ ನಾವು ನೊಡಿದೆವು.
07121004a ವಿನಿವಾರ್ಯ ಸ ವೀರಾಣಾಮಸ್ತ್ರೈರಸ್ತ್ರಾಣಿ ಸರ್ವಶಃ।
07121004c ದರ್ಶಯನ್ ರೌದ್ರಮಾತ್ಮಾನಮುಗ್ರೇ ಕರ್ಮಣಿ ಧಿಷ್ಠಿತಃ।।
ಅವನು ಎಲ್ಲಕಡೆ ವೀರರ ಅಸ್ತ್ರಗಳನ್ನು ಅಸ್ತ್ರಗಳಿಂದ ತಡೆಯುತ್ತಾ ತನ್ನನ್ನು ಉಗ್ರಕರ್ಮದಲ್ಲಿ ತೊಡಗಿಸಿಕೊಂಡು ರೌದ್ರನಾಗಿ ತೋರಿದನು.
07121005a ಸ ತಾನ್ರಥವರಾನ್ರಾಜನ್ನಭ್ಯತಿಕ್ರಾಮದರ್ಜುನಃ।
07121005c ಮೋಹಯನ್ನಿವ ನಾರಾಚೈರ್ಜಯದ್ರಥವಧೇಪ್ಸಯಾ।।
ರಾಜನ್! ಅರ್ಜುನನು ಜಯದ್ರಥನ ವಧೆಯನ್ನು ಬಯಸಿ ನಾರಾಚಗಳಿಂದ ಮೋಹಗೊಳಿಸುತ್ತಿರುವಂತೆ ಆ ರಥವರರನ್ನು ಅತಿಕ್ರಮಿಸಿದನು.
07121006a ವಿಸೃಜನ್ದಿಕ್ಷು ಸರ್ವಾಸು ಶರಾನಸಿತಸಾರಥಿಃ।
07121006c ಸ ರಣೇ ವ್ಯಚರತ್ತೂರ್ಣಂ ಪ್ರೇಕ್ಷಣೀಯೋ ಧನಂಜಯಃ।।
ಅಸಿತಸಾರಥಿ ಧನಂಜಯನು ಎಲ್ಲ ದಿಕ್ಕುಗಳಲ್ಲಿ ಶರಗಳನ್ನು ಪ್ರಯೋಗಿಸುತ್ತಾ ವೇಗವಾಗಿ ರಣದಲ್ಲಿ ಸಂಚರಿಸುತ್ತಿದ್ದಂತೆ ತೋರುತ್ತಿದ್ದನು.
07121007a ಭ್ರಮಂತ ಇವ ಶೂರಸ್ಯ ಶರವ್ರಾತಾ ಮಹಾತ್ಮನಃ।
07121007c ಅದೃಶ್ಯಂತಾಂತರಿಕ್ಷಸ್ಥಾಃ ಶತಶೋಽಥ ಸಹಸ್ರಶಃ।।
ಆ ಮಹಾತ್ಮ ಶೂರನ ನೂರಾರು ಸಹಸ್ರಾರು ಶರಸಮೂಹಗಳು ಅಂತರಿಕ್ಷದಲ್ಲಿ ಅಲ್ಲಲ್ಲಿಯೇ ತಿರುಗುತ್ತಿರುವಂತೆ ತೋರುತ್ತಿದ್ದವು.
07121008a ಆದದಾನಂ ಮಹೇಷ್ವಾಸಂ ಸಂದಧಾನಂ ಚ ಪಾಂಡವಂ।
07121008c ವಿಸೃಜಂತಂ ಚ ಕೌಂತೇಯಂ ನಾನುಪಶ್ಯಾಮಹೇ ತದಾ।।
ಆಗ ಕೌಂತೇಯ ಪಾಂಡವ ಮಹೇಷ್ವಾಸನು ಬಾಣಗಳನ್ನು ತೆಗೆದುಕೊಳ್ಳುವುದನ್ನಾಗಲಿ, ಹೂಡುವುದನ್ನಾಗಲೀ, ಬಿಡುವುದನ್ನಾಗಲೀ ನಾವು ಕಾಣುತ್ತಿರಲಿಲ್ಲ.
07121009a ತಥಾ ಸರ್ವಾ ದಿಶೋ ರಾಜನ್ಸರ್ವಾಂಶ್ಚ ರಥಿನೋ ರಣೇ।
07121009c ಆಕುಲೀಕೃತ್ಯ ಕೌಂತೇಯೋ ಜಯದ್ರಥಮುಪಾದ್ರವತ್।
07121009e ವಿವ್ಯಾಧ ಚ ಚತುಃಷಷ್ಟ್ಯಾ ಶರಾಣಾಂ ನತಪರ್ವಣಾಂ।।
ರಾಜನ್! ಹಾಗೆ ಸರ್ವ ದಿಕ್ಕುಗಳನ್ನೂ ಸರ್ವ ರಥಿಗಳನ್ನೂ ರಣದಲ್ಲಿ ವಿಮೋಹಿತರನ್ನಾಗಿ ಮಾಡಿ ಕೌಂತೇಯನು ಜಯದ್ರಥನ ಬಳಿ ಬಂದೇಬಿಟ್ಟನು ಮತ್ತು ಅರತ್ನಾಲ್ಕು ನತಪರ್ವಶರಗಳಿಂದ ಹೊಡೆದನು.
07121010a ಸೈಂಧವಸ್ತು ತಥಾ ವಿದ್ಧಃ ಶರೈರ್ಗಾಂಡೀವಧನ್ವನಾ।
07121010c ನ ಚಕ್ಷಮೇ ಸುಸಂಕ್ರುದ್ಧಸ್ತೋತ್ತ್ರಾರ್ದಿತ ಇವ ದ್ವಿಪಃ।।
ಗಾಂಡೀವಧನ್ವಿಯ ಶರಗಳಿಂದ ಪೀಡಿತನಾದ ಸೈಂಧವನಾದರೋ ಗಾಯಗೊಂಡು ಕೋಪಗೊಂಡ ಸಲಗದಂತೆ ಸಹಿಸಿಕೊಳ್ಳಲಿಲ್ಲ.
07121011a ಸ ವರಾಹಧ್ವಜಸ್ತೂರ್ಣಂ ಗಾರ್ಧ್ರಪತ್ರಾನಜಿಹ್ಮಗಾನ್।
07121011c ಆಶೀವಿಷಸಮಪ್ರಖ್ಯಾನ್ಕರ್ಮಾರಪರಿಮಾರ್ಜಿತಾನ್।
07121011e ಮುಮೋಚ ನಿಶಿತಾನ್ಸಂಖ್ಯೇ ಸಾಯಕಾನ್ಸವ್ಯಸಾಚಿನಿ।।
ಆ ವರಾಹಧ್ವಜನು ಕೂಡಲೇ ಹಾವಿನ ವಿಷಕ್ಕೆ ಸಮಾನ ಪ್ರಖರವಿದ್ದ, ಕಮ್ಮಾರನಲ್ಲಿಂದ ಮಾಡಿಸಲ್ಪಟ್ಟ ಹದ್ದಿನ ಗರಿಗಳಿದ್ದ ನಿಶಿತ ಜಿಹ್ಮಗ ಸಾಯಕಗಳನ್ನು ಸವ್ಯಸಾಚಿಯ ಮೇಲೆ ಪ್ರಯೋಗಿಸಿದನು.
07121012a ತ್ರಿಭಿಸ್ತು ವಿದ್ಧ್ವಾ ಗಾಂಡೀವಂ ನಾರಾಚೈಃ ಷಡ್ಭಿರರ್ಜುನಂ।
07121012c ಅಷ್ಟಾಭಿರ್ವಾಜಿನೋಽವಿಧ್ಯದ್ಧ್ವಜಂ ಚೈಕೇನ ಪತ್ರಿಣಾ।।
ಮೂರರಿಂದ ಗಾಂಡೀವ72ವನ್ನು ಹೊಡೆದು, ಆರು ನಾರಾಚಗಳಿಂದ ಅರ್ಜುನನನ್ನೂ, ಎಂಟರಿಂದ ಕುದುರೆಗಳನ್ನೂ, ಮತ್ತು ಒಂದು ಪತ್ರಿಯಿಂದ ಧ್ವಜವನ್ನೂ ಹೊಡೆದನು.
07121013a ಸ ವಿಕ್ಷಿಪ್ಯಾರ್ಜುನಸ್ತೀಕ್ಷ್ಣಾನ್ಸೈಂಧವಪ್ರೇಷಿತಾಂ ಶರಾನ್।
07121013c ಯುಗಪತ್ತಸ್ಯ ಚಿಚ್ಚೇದ ಶರಾಭ್ಯಾಂ ಸೈಂಧವಸ್ಯ ಹ।
07121013e ಸಾರಥೇಶ್ಚ ಶಿರಃ ಕಾಯಾದ್ಧ್ವಜಂ ಚ ಸಮಲಂಕೃತಂ।।
ಸೈಂಧವನು ಕಳುಹಿಸಿದ ಆ ತೀಕ್ಷ್ಣ ಶರಗಳನ್ನು ತುಂಡರಿಸಿ ಅರ್ಜುನನು ಎರಡು ಬಾಣಗಳಿಂದ ಸೈಂಧವನ ಸಾರಥಿಯ ಶಿರವನ್ನು ಕಾಯದಿಂದ ಮತ್ತು ಸಮಲಂಕೃತ ಧ್ವಜವನ್ನು ಕತ್ತರಿಸಿದನು.
07121014a ಸ ಚಿನ್ನಯಷ್ಟಿಃ ಸುಮಹಾಂ ಶೀರ್ಯಮಾಣಃ ಶರಾಹತಃ।
07121014c ವರಾಹಃ ಸಿಂಧುರಾಜಸ್ಯ ಪಪಾತಾಗ್ನಿಶಿಖೋಪಮಃ।।
ಅವನ ಶರದಿಂದ ಹೊಡೆಯಲ್ಪಟ್ಟು ದಂಡವು ತುಂಡಾಗಲು ಸಿಂಧುರಾಜನ ಆ ದೊಡ್ಡ, ಅಗ್ನಿಶಿಖೆಗೆಯಂತಿದ್ದ ವರಾಹವು ಕೆಳಗೆ ಬಿದ್ದಿತು.
07121015a ಏತಸ್ಮಿನ್ನೇವ ಕಾಲೇ ತು ದ್ರುತಂ ಗಚ್ಚತಿ ಭಾಸ್ಕರೇ।
07121015c ಅಬ್ರವೀತ್ಪಾಂಡವಂ ತತ್ರ ತ್ವರಮಾಣೋ ಜನಾರ್ದನಃ।।
ಇದೇ ಸಮಯದಲ್ಲಿ ಭಾಸ್ಕರನು ಶೀಘ್ರವಾಗಿ ಹೋಗುತ್ತಿರಲು, ತ್ವರೆಮಾಡಿ ಜನಾರ್ದನನು ಪಾಂಡವನಿಗೆ ಅಲ್ಲಿ ಹೇಳಿದನು: 7307121016a ಧನಂಜಯ ಶಿರಶ್ಚಿಂಧಿ ಸೈಂಧವಸ್ಯ ದುರಾತ್ಮನಃ।
07121016c ಅಸ್ತಂ ಮಹೀಧರಶ್ರೇಷ್ಠಂ ಯಿಯಾಸತಿ ದಿವಾಕರಃ।
07121016e ಶೃಣುಷ್ವೈವ ಚ ಮೇ ವಾಕ್ಯಂ ಜಯದ್ರಥವಧಂ ಪ್ರತಿ।।
“ಧನಂಜಯ! ದುರಾತ್ಮ ಸೈಂಧವನ ಶಿರಸ್ಸನ್ನು ಕತ್ತರಿಸು. ದಿವಾಕರನು ಅಸ್ತಾಚಲವನ್ನು ಸೇರುತ್ತಿದ್ದಾನೆ. ಜಯದ್ರಥನ ವಧೆಯ ಕುರಿತಾದ ನನ್ನ ಈ ಮಾತನ್ನೂ ಕೇಳು!
07121017a ವೃದ್ಧಕ್ಷತ್ರಃ ಸೈಂಧವಸ್ಯ ಪಿತಾ ಜಗತಿ ವಿಶ್ರುತಃ।
07121017c ಸ ಕಾಲೇನೇಹ ಮಹತಾ ಸೈಂಧವಂ ಪ್ರಾಪ್ತವಾನ್ಸುತಂ।।
07121018a ಜಯದ್ರಥಮಮಿತ್ರಘ್ನಂ ತಂ ಚೋವಾಚ ತತೋ ನೃಪಂ।
07121018c ಅಂತರ್ಹಿತಾ ತದಾ ವಾಣೀ ಮೇಘದುಂದುಭಿನಿಸ್ವನಾ।।
ಜಗತ್ತಿನಲ್ಲಿ ವಿಶ್ರುತನಾಗಿದ್ದ ಸೈಂಧವನ ತಂದೆ ವೃದ್ಧಕ್ಷತ್ರನು ಬಹಳ ಸಮಯದ ನಂತರ ಮಗನನ್ನಾಗಿ ಈ ಸೈಂಧವ ಅಮಿತ್ರಘ್ನ ಜಯದ್ರಥನನ್ನು ಪಡೆದನು. ಆಗ ಮೇಘದುಂಧುಭಿಯಂತೆ ಮೊಳಗುತ್ತಿದ್ದ ಅಶರೀರವಾಣಿಯು ಅವನಿಗೆ ಹೇಳಿತು:
07121019a ತವಾತ್ಮಜೋಽಯಂ ಮರ್ತ್ಯೇಷು ಕುಲಶೀಲದಮಾದಿಭಿಃ।
07121019c ಗುಣೈರ್ಭವಿಷ್ಯತಿ ವಿಭೋ ಸದೃಶೋ ವಂಶಯೋರ್ದ್ವಯೋಃ।
07121019e ಕ್ಷತ್ರಿಯಪ್ರವರೋ ಲೋಕೇ ನಿತ್ಯಂ ಶೂರಾಭಿಸತ್ಕೃತಃ।।
“ನಿನ್ನ ಈ ಮಗನು ಮನುಷ್ಯರಲ್ಲಿ ಕುಲ-ಶೀಲ-ದಮಗಳಲ್ಲಿ ಗುಣಶೀಲನಾಗಿ ಎರಡೂ ಕುಲಗಳಿಗೆ ಸದೃಶನಾಗಿರುತ್ತಾನೆ. ಲೋಕದಲ್ಲಿ ಕ್ಷತ್ರಿಯಪ್ರವರನೆಂದೆನಿಸಿಕೊಳ್ಳುತ್ತಾನೆ. ಶೂರರೂ ಇವನನ್ನು ಸದಾ ಸತ್ಕರಿಸುತ್ತಾರೆ.
07121020a ಶತ್ರುಭಿರ್ಯುಧ್ಯಮಾನಸ್ಯ ಸಂಗ್ರಾಮೇ ತ್ವಸ್ಯ ಧನ್ವಿನಃ।
07121020c ಶಿರಶ್ಚೇತ್ಸ್ಯತಿ ಸಂಕ್ರುದ್ಧಃ ಶತ್ರುರ್ನಾಲಕ್ಷಿತೋ ಭುವಿ।।
ಆದರೆ ಶತ್ರುವಾಗಿ ಯುದ್ಧಮಾಡುತ್ತಿರುವಾಗ ಸಂಗ್ರಾಮದಲ್ಲಿ ಸಂಕ್ರುದ್ಧನಾಗಿ ಧನ್ವಿಯೋರ್ವನು ಇವನ ಶಿರವನ್ನು ಕತ್ತರಿಸುತ್ತಾನೆ.”
07121021a ಏತಚ್ಚ್ರುತ್ವಾ ಸಿಂಧುರಾಜೋ ಧ್ಯಾತ್ವಾ ಚಿರಮರಿಂದಮ।
07121021c ಜ್ಞಾತೀನ್ಸರ್ವಾನುವಾಚೇದಂ ಪುತ್ರಸ್ನೇಹಾಭಿಪೀಡಿತಃ।।
ಇದನ್ನು ಕೇಳಿ ತುಂಬಾ ಸಮಯ ಚಿಂತಿಸಿದ ಅರಿಂದಮ ಸಿಂಧುರಾಜನು ಪುತ್ರಸ್ನೇಹದಿಂದ ಪೀಡಿತನಾಗಿ ತನ್ನ ಎಲ್ಲ ದಾಯಾದಿ-ಬಾಂಧವರಿಗೆ ಹೇಳಿದನು:
07121022a ಸಂಗ್ರಾಮೇ ಯುಧ್ಯಮಾನಸ್ಯ ವಹತೋ ಮಹತೀಂ ಧುರಂ।
07121022c ಧರಣ್ಯಾಂ ಮಮ ಪುತ್ರಸ್ಯ ಪಾತಯಿಷ್ಯತಿ ಯಃ ಶಿರಃ।
07121022e ತಸ್ಯಾಪಿ ಶತಧಾ ಮೂರ್ಧಾ ಫಲಿಷ್ಯತಿ ನ ಸಂಶಯಃ।।
“ಸಂಗ್ರಾಮದಲ್ಲಿ ಮಹಾ ಭಾರವನ್ನು ಹೊತ್ತು ಯುದ್ಧಮಾಡುತ್ತಿದ್ದ ನನ್ನ ಮಗನ ಶಿರವನ್ನು ಯಾರು ಭೂಮಿಯ ಮೇಲೆ ಬೀಳಿಸುತ್ತಾರೋ ಅವನ ಶಿರವೂ ಕೂಡ ನೂರು ಚೂರಾಗುತ್ತದೆ. ಇದು ಖಂಡಿತ!”
07121023a ಏವಮುಕ್ತ್ವಾ ತತೋ ರಾಜ್ಯೇ ಸ್ಥಾಪಯಿತ್ವಾ ಜಯದ್ರಥಂ।
07121023c ವೃದ್ಧಕ್ಷತ್ರೋ ವನಂ ಯಾತಸ್ತಪಶ್ಚೇಷ್ಟಂ ಸಮಾಸ್ಥಿತಃ।।
ಹೀಗೆ ಹೇಳಿ ಜಯದ್ರಥನನ್ನು ರಾಜ್ಯದಲ್ಲಿ ಸ್ಥಾಪಿಸಿ ವೃದ್ಧಕ್ಷತ್ರನು ವನಕ್ಕೆ ತೆರಳಿ ತಪಸ್ಸಿನಲ್ಲಿ ತೊಡಗಿದನು.
07121024a ಸೋಽಯಂ ತಪ್ಯತಿ ತೇಜಸ್ವೀ ತಪೋ ಘೋರಂ ದುರಾಸದಂ।
07121024c ಸಮಂತಪಂಚಕಾದಸ್ಮಾದ್ಬಹಿರ್ವಾನರಕೇತನ।।
ವಾನರಕೇತನ! ಆ ತೇಜಸ್ವಿಯು ಸಮಂತಪಂಚಕದ ಹೊರಗೆ ಘೋರ ದುರಾಸದ ತಪಸ್ಸನ್ನು ತಪಿಸುತ್ತಿದ್ದಾನೆ.
07121025a ತಸ್ಮಾಜ್ಜಯದ್ರಥಸ್ಯ ತ್ವಂ ಶಿರಶ್ಚಿತ್ತ್ವಾ ಮಹಾಮೃಧೇ।
07121025c ದಿವ್ಯೇನಾಸ್ತ್ರೇಣ ರಿಪುಹನ್ಘೋರೇಣಾದ್ಭುತಕರ್ಮಣಾ।।
07121026a ಸಕುಂಡಲಂ ಸಿಂಧುಪತೇಃ ಪ್ರಭಂಜನಸುತಾನುಜ।
07121026c ಉತ್ಸಂಗೇ ಪಾತಯಸ್ವಾಶು ವೃದ್ಧಕ್ಷತ್ರಸ್ಯ ಭಾರತ।।
ಪ್ರಭಂಜನ (ವಾಯು) ಸುತಾನುಜನೇ! ಭಾರತ! ಆದುದರಿಂದ ನೀನು ಮಹಾಯುದ್ಧದಲ್ಲಿ ಘೋರವೂ ಅದ್ಭುತವೂ ಆದುದನ್ನು ಮಾಡಬಲ್ಲ ದಿವ್ಯಾಸ್ತ್ರದಿಂದ ಜಯದ್ರಥನ ಕುಂಡಲಗಳೊಂದಿಗೆ ಶಿರಸ್ಸನ್ನು ಕತ್ತರಿಸಿ ವೃದ್ಧಕ್ಷತ್ರನ ತೊಡೆಯ ಮೇಲೆ ಕೆಡವು.
07121027a ಅಥ ತ್ವಮಸ್ಯ ಮೂರ್ಧಾನಂ ಪಾತಯಿಷ್ಯಸಿ ಭೂತಲೇ।
07121027c ತವಾಪಿ ಶತಧಾ ಮೂರ್ಧಾ ಫಲಿಷ್ಯತಿ ನ ಸಂಶಯಃ।।
ಆದರೆ ಈಗ ನೀನು ಅವನ ತಲೆಯನ್ನು ನೆಲದ ಮೇಲೆ ಬೀಳಿಸಿದರೆ ನಿನ್ನ ತಲೆಯೂ ಕೂಡ ನೂರು ಚೂರಾಗಿ ಒಡೆಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.
07121028a ಯಥಾ ಚೈತನ್ನ ಜಾನೀಯಾತ್ಸ ರಾಜಾ ಪೃಥಿವೀಪತಿಃ।
07121028c ತಥಾ ಕುರು ಕುರುಶ್ರೇಷ್ಠ ದಿವ್ಯಮಸ್ತ್ರಮುಪಾಶ್ರಿತಃ।।
ಕುರುಶ್ರೇಷ್ಠ! ಇದು ರಾಜಾ ಪೃಥಿವೀಪತಿಗೆ ತಿಳಿಯದಂತೆ ದಿವ್ಯ ಅಸ್ತ್ರದ ಆಶ್ರಯದಲ್ಲಿ ಇದನ್ನು ಮಾಡು.
07121029a ನ ಹ್ಯಸಾಧ್ಯಮಕಾರ್ಯಂ ವಾ ವಿದ್ಯತೇ ತವ ಕಿಂ ಚನ।
07121029c ಸಮಸ್ತೇಷ್ವಪಿ ಲೋಕೇಷು ತ್ರಿಷು ವಾಸವನಂದನ।।
ವಾಸವನಂದನ! ಸಮಸ್ತವಾದ ಈ ಮೂರು ಲೋಕಗಳಲ್ಲಿಯೂ ನಿನಗೆ ಅಸಾಧ್ಯ ಕಾರ್ಯವೆನ್ನುವುದು ಯಾವುದೂ ಇಲ್ಲ.”
07121030a ಏತಚ್ಚ್ರುತ್ವಾ ತು ವಚನಂ ಸೃಕ್ಕಿಣೀ ಪರಿಸಂಲಿಹನ್।
07121030c ಇಂದ್ರಾಶನಿಸಮಸ್ಪರ್ಶಂ ದಿವ್ಯಮಂತ್ರಾಭಿಮಂತ್ರಿತಂ।।
07121031a ಸರ್ವಭಾರಸಹಂ ಶಶ್ವದ್ಗಂಧಮಾಲ್ಯಾರ್ಚಿತಂ ಶರಂ।
07121031c ವಿಸಸರ್ಜಾರ್ಜುನಸ್ತೂರ್ಣಂ ಸೈಂಧವಸ್ಯ ವಧೇ ವೃತಃ।।
ಈ ಮಾತನ್ನು ಕೇಳಿ ಅರ್ಜುನನು ತಕ್ಷಣವೇ ಕಟವಾಯಿಗಳನ್ನು ಸವರುತ್ತಾ ಇಂದ್ರನ ವಜ್ರಾಯುಧದಂತೆ ಕಠಿನಸ್ಪರ್ಶಿಯಾದ, ದಿವ್ಯಮಂತ್ರಗಳಿಂದ ಅಭಿಮಂತ್ರಿತವಾದ, ಸರ್ವಭಾರಗಳನ್ನೂ ಸಹಿಸಿಕೊಳ್ಳಬಲ್ಲ, ಗಂಧ-ಮಾಲೆಗಳಿಂದ ಅರ್ಚಿತವಾದ ಶರವನ್ನು ಸೈಂಧವನ ವಧೆಗಾಗಿ ಬಿಟ್ಟನು.
07121032a ಸ ತು ಗಾಂಡೀವನಿರ್ಮುಕ್ತಃ ಶರಃ ಶ್ಯೇನ ಇವಾಶುಗಃ।
07121032c ಶಕುಂತಮಿವ ವೃಕ್ಷಾಗ್ರಾತ್ಸೈಂಧವಸ್ಯ ಶಿರೋಽಹರತ್।।
07121033a ಅಹರತ್ತತ್ಪುನಶ್ಚೈವ ಶರೈರೂರ್ಧ್ವಂ ಧನಂಜಯಃ।
07121033c ದುರ್ಹೃದಾಮಪ್ರಹರ್ಷಾಯ ಸುಹೃದಾಂ ಹರ್ಷಣಾಯ ಚ।।
ಗಾಂಡೀವದಿಂದ ಹೊರಟ ಆ ಶರವು ಮರದ ಮೇಲಿಂದ ಆಹಾರವನ್ನು ಎತ್ತಿಕೊಂಡು ಹೋಗುವ ಗಿಡುಗ ಪಕ್ಷಿಯಂತೆ ಸೈಂಧವನ ಶಿರವನ್ನು ಅಪಹರಿಸಿ ಮೇಲೆ ಹಾರಿತು. ಪುನಃ ಶರಗಳಿಂದ ಅದನ್ನು ಇನ್ನೂ ಮೇಲಕ್ಕೆ ಏರಿಸಿ ಧನಂಜಯನು ದುಹೃದರ ಸಂತೋಷವನ್ನು ಅಪಹರಿಸಿ ಸುಹೃದರಿಗೆ ಹರ್ಷವನ್ನಿತ್ತನು.
07121034a ಶರೈಃ ಕದಂಬಕೀಕೃತ್ಯ ಕಾಲೇ ತಸ್ಮಿಂಶ್ಚ ಪಾಂಡವಃ।
07121034c ಸಮಂತಪಂಚಕಾದ್ಬಾಹ್ಯಂ ಶಿರಸ್ತದ್ವ್ಯಹರತ್ತತಃ।।
ಶರಗಳಿಂದ ಸೇತುವೆಯಂತೆ ಮಾಡಿ ಪಾಂಡವನು ಅವನ ಶಿರವನ್ನು ಸಮಂತಪಂಚಕದ ಹೊರಗೆ ಕಳುಹಿಸಿದನು.
07121035a ಏತಸ್ಮಿನ್ನೇವ ಕಾಲೇ ತು ವೃದ್ಧಕ್ಷತ್ರೋ ಮಹೀಪತಿಃ।
07121035c ಸಂಧ್ಯಾಮುಪಾಸ್ತೇ ತೇಜಸ್ವೀ ಸಂಬಂಧೀ ತವ ಮಾರಿಷ।।
ಮಾರಿಷ! ಇದೇ ಸಮಯದಲ್ಲಿ ನಿನ್ನ ಸಂಬಂಧಿ ತೇಜಸ್ವಿ ಮಹೀಪತಿ ವೃದ್ಧಕ್ಷತ್ರನು ಸಂಧ್ಯಾವಂದನೆಯಲ್ಲಿ ತೊಡಗಿದ್ದನು.
07121036a ಉಪಾಸೀನಸ್ಯ ತಸ್ಯಾಥ ಕೃಷ್ಣಕೇಶಂ ಸಕುಂಡಲಂ।
07121036c ಸಿಂಧುರಾಜಸ್ಯ ಮೂರ್ಧಾನಮುತ್ಸಂಗೇ ಸಮಪಾತಯತ್।।
ಕುಳಿತಿದ್ದ ಅವನ ತೊಡೆಗಳ ಮೇಲೆ ಸಿಂಧುರಾಜನ ಕಪ್ಪು ಕೂದಲಿನ, ಕುಂಡಲಗಳೊಂದಿಗಿನ ರುಂಡವು ಬಿದ್ದಿತು.
07121037a ತಸ್ಯೋತ್ಸಂಗೇ ನಿಪತಿತಂ ಶಿರಸ್ತಚ್ಚಾರುಕುಂಡಲಂ।
07121037c ವೃದ್ಧಕ್ಷತ್ರಸ್ಯ ನೃಪತೇರಲಕ್ಷಿತಮರಿಂದಮ।।
ಅರಿಂದಮ! ತನ್ನ ತೊಡೆಯಮೇಲೆ ಬಿದ್ದಿದ್ದ ಕುಂಡಲಗಳಿಂದ ಸುಂದರವಾಗಿದ್ದ ತಲೆಯನ್ನು ನೃಪತಿ ವೃದ್ಧಕ್ಷತ್ರನು ಗಮನಿಸಲೇ ಇಲ್ಲ.
07121038a ಕೃತಜಪ್ಯಸ್ಯ ತಸ್ಯಾಥ ವೃದ್ಧಕ್ಷತ್ರಸ್ಯ ಧೀಮತಃ।
07121038c ಉತ್ತಿಷ್ಠತಸ್ತತ್ಸಹಸಾ ಶಿರೋಽಗಚ್ಚದ್ಧರಾತಲಂ।।
ಜಪವನ್ನು ಮುಗಿಸಿ ಧೀಮತ ವೃದ್ಧಕ್ಷತ್ರನು ಎದ್ದು ನಿಲ್ಲಲು ಒಮ್ಮೆಲೇ ಶಿರವು ನೆಲದಮೇಲೆ ಬಿದ್ದಿತು.
07121039a ತತಸ್ತಸ್ಯ ನರೇಂದ್ರಸ್ಯ ಪುತ್ರಮೂರ್ಧನಿ ಭೂತಲಂ।
07121039c ಗತೇ ತಸ್ಯಾಪಿ ಶತಧಾ ಮೂರ್ಧಾಗಚ್ಚದರಿಂದಮ।।
ಅರಿಂದಮ! ಆಗ ಅವನ ಮಗನ ಶಿರವು ನೆಲವನ್ನು ಮುಟ್ಟಲು ನರೇಂದ್ರನ ತಲೆಯೂ ಕೂಡ ನೂರು ಚೂರುಗಳಾಯಿತು.
07121040a ತತಃ ಸರ್ವಾಣಿ ಭೂತಾನಿ ವಿಸ್ಮಯಂ ಜಗ್ಮುರುತ್ತಮಂ।
07121040c ವಾಸುದೇವಶ್ಚ ಬೀಭತ್ಸುಂ ಪ್ರಶಶಂಸ ಮಹಾರಥಂ।।
ಆಗ ಸರ್ವ ಭೂತಗಳೂ ಉತ್ತಮ ವಿಸ್ಮಿತರಾದರು. ವಾಸುದೇವನು ಮಹಾರಥ ಬೀಭತ್ಸುವನ್ನು ಹೊಗಳಿದನು.
07121041a ತತೋ ದೃಷ್ಟ್ವಾ ವಿನಿಹತಂ ಸಿಂಧುರಾಜಂ ಜಯದ್ರಥಂ।
07121041c ಪುತ್ರಾಣಾಂ ತವ ನೇತ್ರೇಭ್ಯೋ ದುಃಖಾದ್ಬಹ್ವಪತಜ್ಜಲಂ।।
ಸಿಂಧುರಾಜ ಜಯದ್ರಥನು ಹತನಾದುದನ್ನು ನೋಡಿ ನಿನ್ನ ಪುತ್ರರು ದುಃಖದಿಂದ ಕಣ್ಣೀರು ಸುರಿಸಿದರು.
07121042a ಭೀಮಸೇನೋಽಪಿ ಸಂಗ್ರಾಮೇ ಬೋಧಯನ್ನಿವ ಪಾಂಡವಂ।
07121042c ಸಿಂಹನಾದೇನ ಮಹತಾ ಪೂರಯಾಮಾಸ ರೋದಸೀ।।
ಭೀಮಸೇನನೂ ಕೂಡ ಸಂಗ್ರಾಮದಲ್ಲಿ ಪಾಂಡವನಿಗೆ ಕೇಳುವಂತೆ ಎದೆ ತುಂಬಿ ಜೋರಾಗಿ ಸಿಂಹನಾದಗೈದನು.
07121043a ತಂ ಶ್ರುತ್ವಾ ತು ಮಹಾನಾದಂ ಧರ್ಮಪುತ್ರೋ ಯುಧಿಷ್ಠಿರಃ।
07121043c ಸೈಂಧವಂ ನಿಹತಂ ಮೇನೇ ಫಲ್ಗುನೇನ ಮಹಾತ್ಮನಾ।।
ಆ ಮಹಾನಾದವನ್ನು ಕೇಳಿ ಧರ್ಮಪುತ್ರ ಯುಧಿಷ್ಠಿರನು ಮಹಾತ್ಮ ಫಲ್ಗುನನಿಂದ ಸೈಂಧವನು ಹತನಾದನೆಂದು ತಿಳಿದುಕೊಂಡನು.
07121044a ತತೋ ವಾದಿತ್ರಘೋಷೇಣ ಸ್ವಾನ್ಯೋಧಾನಭಿಹರ್ಷಯನ್।
07121044c ಅಭ್ಯವರ್ತತ ಸಂಗ್ರಾಮೇ ಭಾರದ್ವಾಜಂ ಯುಯುತ್ಸಯಾ।।
ಆಗ ವಾದ್ಯಘೋಷಗಳಿಂದ ತನ್ನವರನ್ನು ಹರ್ಷಗೊಳಿಸುತ್ತಾ ಸಂಗ್ರಾಮದಲ್ಲಿ ಯುದ್ಧೇಚ್ಛೆಯಿಂದ ಭಾರದ್ವಾಜನನ್ನು ಆಕ್ರಮಣಿಸಿದನು.
07121045a ತತಃ ಪ್ರವವೃತೇ ರಾಜನ್ನಸ್ತಂ ಗಚ್ಚತಿ ಭಾಸ್ಕರೇ।
07121045c ದ್ರೋಣಸ್ಯ ಸೋಮಕೈಃ ಸಾರ್ಧಂ ಸಂಗ್ರಾಮೋ ಲೋಮಹರ್ಷಣಃ।।
ರಾಜನ್! ಭಾಸ್ಕರನು ಅಸ್ತಂಗತನಾಗುತ್ತಿರಲು ಸೋಮಕರೊಂದಿಗೆ ದ್ರೋಣನ ಲೋಮಹರ್ಷಣ ಸಂಗ್ರಾಮವು ನಡೆಯಿತು.
07121046a ತೇ ತು ಸರ್ವಪ್ರಯತ್ನೇನ ಭಾರದ್ವಾಜಂ ಜಿಘಾಂಸವಃ।
07121046c ಸೈಂಧವೇ ನಿಹತೇ ರಾಜನ್ನಯುಧ್ಯಂತ ಮಹಾರಥಾಃ।।
ರಾಜನ್! ಸೈಂಧವನು ಹತನಾದ ನಂತರ ಭಾರದ್ವಾಜನನ್ನು ಸಂಹರಿಸಲು ಬಯಸಿ ಆ ಮಹಾರಥರು ಸರ್ವ ಪ್ರಯತ್ನದಿಂದ ಯುದ್ಧಮಾಡುತ್ತಿದ್ದರು.
07121047a ಪಾಂಡವಾಸ್ತು ಜಯಂ ಲಬ್ಧ್ವಾ ಸೈಂಧವಂ ವಿನಿಹತ್ಯ ಚ।
07121047c ಅಯೋಧಯಂಸ್ತತೋ ದ್ರೋಣಂ ಜಯೋನ್ಮತ್ತಾಸ್ತತಸ್ತತಃ।।
ಸೈಂಧವನನ್ನು ಸಂಹರಿಸಿ ಜಯವನ್ನು ಪಡೆದ ಪಾಂಡವರಾದರೋ ಜಯೋನ್ಮತ್ತರಾಗಿ ಅಲ್ಲಲ್ಲಿ ದ್ರೋಣನೊಂದಿಗೆ ಯುದ್ಧಮಾಡಿದರು.
07121048a ಅರ್ಜುನೋಽಪಿ ರಣೇ ಯೋಧಾಂಸ್ತಾವಕಾನ್ರಥಸತ್ತಮಾನ್।
07121048c ಅಯೋಧಯನ್ಮಹಾರಾಜ ಹತ್ವಾ ಸೈಂಧವಕಂ ನೃಪಂ।।
ಮಹಾರಾಜ! ನೃಪ ಸೈಂಧವನನ್ನು ಕೊಂದು ಅರ್ಜುನನಾದರೋ ನಿನ್ನವರಾದ ರಥಸತ್ತಮ ಯೋಧರೊಂದಿಗೆ ರಣದಲ್ಲಿ ಯುದ್ಧಮಾಡಿದನು.
07121049a ಸ ದೇವಶತ್ರೂನಿವ ದೇವರಾಜಃ ಕಿರೀಟಮಾಲೀ ವ್ಯಧಮತ್ಸಮಂತಾತ್।
07121049c ಯಥಾ ತಮಾಂಸ್ಯಭ್ಯುದಿತಸ್ತಮೋಘ್ನಃ ಪೂರ್ವಾಂ ಪ್ರತಿಜ್ಞಾಂ ಸಮವಾಪ್ಯ ವೀರಃ।।
ಹಿಂದೆ ಮಾಡಿದ ಪ್ರತಿಜ್ಞೆಯನ್ನು ಪೂರೈಸಿದ ಆ ವೀರ ಕಿರೀಟಮಾಲಿಯು ದೇವರಾಜನು ದೇವಶತ್ರುಗಳನ್ನು ಹೇಗೋ ಹಾಗೆ ಮತ್ತು ಸೂರ್ಯನು ಉದಯಿಸಿ ಕತ್ತಲೆಯನ್ನು ಹೇಗೆ ಕಳೆಯುವನೋ ಹಾಗೆ ಎಲ್ಲಕಡೆ ವಧಿಸುತ್ತಿದ್ದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಜಯದ್ರಥವಧೇ ಏಕವಿಂಶಾಧಿಕಶತತಮೋಽಧ್ಯಾಯಃ ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಜಯದ್ರಥವಧ ಎನ್ನುವ ನೂರಾಇಪ್ಪತ್ತೊಂದನೇ ಅಧ್ಯಾಯವು.