ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 120
ಸಾರ
ಸಂಜೆಯಾಗುತ್ತಿರುವುದರಿಂದ ಬೇಗನೇ ರಥವನ್ನು ಜಯದ್ರಥನಲ್ಲಿಗೆ ಕೊಂಡೊಯ್ಯಿ ಎಂದು ಅರ್ಜುನನು ಕೃಷ್ಣನಿಗೆ ಹೇಳಿದುದು (1-9). ಸಂಜೆಯಾಗುವುದರೊಳಗೆ ಜಯದ್ರಥನನ್ನು ನಾವು ರಕ್ಷಿಸಿದರೆ ಸಾಕು. ಯುದ್ಧದಲ್ಲಿ ನಾವು ಗೆದ್ದಂತೆಯೇ ಎಂದು ದುರ್ಯೋಧನನು ಕರ್ಣನಿಗೆ ಅರ್ಜುನನನ್ನು ಎದುರಿಸಿ ಯುದ್ಧಮಾಡಲು ಹೇಳಿದುದು (10-22). ಭೀಮನ ಬಾಣಗಳ ಪ್ರಹಾರಗಳಿಂದ ಬಳಲಿದ್ದರೂ ಅರ್ಜುನನ್ನು ತಡೆಯುತ್ತೇನೆ; ಆದರೆ ಜಯವು ದೈವಾಧೀನವಾದದ್ದು ಎಂದು ಹೇಳಿ ಕರ್ಣನು ಅರ್ಜುನನನ್ನು ಆಕ್ರಮಣಿಸಿದ್ದುದು (23-30). ಸಂಕುಲಯುದ್ಧ (31-89).
07120001 ಧೃತರಾಷ್ಟ್ರ ಉವಾಚ।
07120001a ತದವಸ್ಥೇ ಹತೇ ತಸ್ಮಿನ್ಭೂರಿಶ್ರವಸಿ ಕೌರವೇ।
07120001c ಯಥಾ ಭೂಯೋಽಭವದ್ಯುದ್ಧಂ ತನ್ಮಮಾಚಕ್ಷ್ವ ಸಂಜಯ।।
ಧೃತರಾಷ್ಟ್ರನು ಹೇಳಿದನು: “ಸಂಜಯ! ಆ ಅವಸ್ಥೆಯಲ್ಲಿ ಕೌರವ ಭೂರಿಶ್ರವನು ಹತನಾಗಲು, ಪುನಃ ಯುದ್ಧವು ಹೇಗೆ ನಡೆತು ಎನ್ನುವುದನ್ನು ನನಗೆ ಹೇಳು.”
07120002 ಸಂಜಯ ಉವಾಚ।
07120002a ಭೂರಿಶ್ರವಸಿ ಸಂಕ್ರಾಂತೇ ಪರಲೋಕಾಯ ಭಾರತ।
07120002c ವಾಸುದೇವಂ ಮಹಾಬಾಹುರರ್ಜುನಃ ಸಮಚೂಚುದತ್।।
ಸಂಜಯನು ಹೇಳಿದನು: “ಭಾರತ! ಭೂರಿಶ್ರವನು ಪರಲೋಕಕ್ಕೆ ಹೊರಟುಹೋಗಲು ಮಹಾಬಾಹು ಅರ್ಜುನನು ವಾಸುದೇವನನ್ನು ಒತ್ತಾಯಿಸಿ ಹೇಳಿದನು:
07120003a ಚೋದಯಾಶ್ವಾನ್ಭೃಶಂ ಕೃಷ್ಣ ಯತೋ ರಾಜಾ ಜಯದ್ರಥಃ।
07120003c ಅಸ್ತಮೇತಿ ಮಹಾಬಾಹೋ ತ್ವರಮಾಣೋ ದಿವಾಕರಃ।।
“ಕೃಷ್ಣ! ರಾಜಾ ಜಯದ್ರಥನಿರುವಲ್ಲಿಗೆ ಕುದುರೆಗಳನ್ನು ಓಡಿಸು. ಮಹಾಬಾಹೋ! ದಿವಾಕರನು ಅಸ್ತನಾಗುತ್ತಿದ್ದಾನೆ. ತ್ವರೆಮಾಡು!
07120004a ಏತದ್ಧಿ ಪುರುಷವ್ಯಾಘ್ರ ಮಹದಭ್ಯುದ್ಯತಂ ಮಯಾ।
07120004c ಕಾರ್ಯಂ ಸಂರಕ್ಷ್ಯತೇ ಚೈಷ ಕುರುಸೇನಾಮಹಾರಥೈಃ।।
ಪುರುಷವ್ಯಾಘ್ರ! ಈ ಮಹಾ ಕಾರ್ಯವನ್ನು ನಾನು ಮಾಡಲೇಬೇಕಾಗಿದೆಯೆಂದು ತಿಳಿ. ಇವನಾದರೋ ಕುರುಸೇನೆಯ ಮಹಾರಥರಿಂದ ರಕ್ಷಿಸಲ್ಪಟ್ಟಿದ್ದಾನೆ.
07120005a ನಾಸ್ತಮೇತಿ ಯಥಾ ಸೂರ್ಯೋ ಯಥಾ ಸತ್ಯಂ ಭವೇದ್ವಚಃ।
07120005c ಚೋದಯಾಶ್ವಾಂಸ್ತಥಾ ಕೃಷ್ಣ ಯಥಾ ಹನ್ಯಾಂ ಜಯದ್ರಥಂ।।
ಕೃಷ್ಣ! ಸೂರ್ಯನು ಅಸ್ತನಾಗುವುದರೊಳಗೆ ಜಯದ್ರಥನನ್ನು ಕೊಂದು ನನ್ನ ವಚನವನ್ನು ಸತ್ಯವಾಗಿಸುವಂತೆ ಕುದುರೆಗಳನ್ನು ಓಡಿಸು70!”
07120006a ತತಃ ಕೃಷ್ಣೋ ಮಹಾಬಾಹೂ ರಜತಪ್ರತಿಮಾನ್ ಹಯಾನ್।
07120006c ಹಯಜ್ಞಶ್ಚೋದಯಾಮಾಸ ಜಯದ್ರಥರಥಂ ಪ್ರತಿ।।
ಆಗ ಹಯಜ್ಞ ಮಹಾಬಾಹು ಕೃಷ್ಣನು ಬೆಳ್ಳಿಯ ಪುತ್ಥಳಿಗಳಂತಿದ್ದ ಕುದುರೆಗಳನ್ನು ಜಯದ್ರಥನ ರಥದ ಕಡೆ ಓಡಿಸಿದನು.
07120007a ತಂ ಪ್ರಯಾಂತಮಮೋಘೇಷುಮುತ್ಪತದ್ಭಿರಿವಾಶುಗೈಃ।
07120007c ತ್ವರಮಾಣಾ ಮಹಾರಾಜ ಸೇನಾಮುಖ್ಯಾಃ ಸಮಾವ್ರಜನ್।।
07120008a ದುರ್ಯೋಧನಶ್ಚ ಕರ್ಣಶ್ಚ ವೃಷಸೇನೋಽಥ ಮದ್ರರಾಟ್।
07120008c ಅಶ್ವತ್ಥಾಮಾ ಕೃಪಶ್ಚೈವ ಸ್ವಯಮೇವ ಚ ಸೈಂಧವಃ।।
ಮಹಾರಾಜ! ಅಮೋಘ ಆಶುಗಗಳನ್ನು ದಿಕ್ಕು ದಿಕ್ಕುಗಳಲ್ಲಿ ತುಂಬಿಸುತ್ತಾ ವೇಗದಿಂದ ಬರುತ್ತಿದ್ದ ಅವನನ್ನು ಸೇನಮುಖ್ಯ ದುರ್ಯೋಧನ, ಕರ್ಣ, ವೃಷಸೇನ, ಮದ್ರರಾಜ, ಅಶ್ವತ್ಥಾಮ, ಕೃಪ ಮತ್ತು ಸ್ವಯಂ ಸೈಂಧವನೂ ಕೂಡ ಸುತ್ತುವರೆದರು.
07120009a ಸಮಾಸಾದ್ಯ ತು ಬೀಭತ್ಸುಃ ಸೈಂಧವಂ ಪ್ರಮುಖೇ ಸ್ಥಿತಂ।
07120009c ನೇತ್ರಾಭ್ಯಾಂ ಕ್ರೋಧದೀಪ್ತಾಭ್ಯಾಂ ಸಂಪ್ರೈಕ್ಷನ್ನಿರ್ದಹನ್ನಿವ।।
ಎದಿರು ನಿಂತಿರುವ ಸೈಂಧವನನ್ನು ಬೀಭತ್ಸುವು ಅವನನ್ನು ಸುಟ್ಟುಬಿಡುವನೋ ಎನ್ನುವಂತೆ ಕ್ರೋಧದಿಂದ ಉರಿಯುತ್ತಿದ್ದ ಕಣ್ಣುಗಳಿಂದ ನೋಡಿದನು.
07120010a ತತೋ ದುರ್ಯೋಧನೋ ರಾಜಾ ರಾಧೇಯಂ ತ್ವರಿತೋಽಬ್ರವೀತ್।
07120010c ಅರ್ಜುನಂ ವೀಕ್ಷ್ಯ ಸಮ್ಯಾಂತಂ ಜಯದ್ರಥರಥಂ ಪ್ರತಿ।।
ಅಗ ಜಯದ್ರಥನ ರಥದ ಬಳಿ ಬರುತ್ತಿದ್ದ ಅರ್ಜುನನನ್ನು ವೀಕ್ಷಿಸಿ ರಾಜಾ ದುರ್ಯೋಧನನು ತ್ವರೆಮಾಡಿ ರಾಧೇಯನಿಗೆ ಹೇಳಿದನು:
07120011a ಅಯಂ ಸ ವೈಕರ್ತನ ಯುದ್ಧಕಾಲೋ ವಿದರ್ಶಯಸ್ವಾತ್ಮಬಲಂ ಮಹಾತ್ಮನ್।
07120011c ಯಥಾ ನ ವಧ್ಯೇತ ರಣೇಽರ್ಜುನೇನ ಜಯದ್ರಥಃ ಕರ್ಣ ತಥಾ ಕುರುಷ್ವ।।
“ವೈಕರ್ತನ! ಇಗೋ ಯುದ್ಧಮಾಡುವ ಸಮಯವು ಬಂದಿದೆ. ಮಹಾತ್ಮನ್! ನಿನ್ನ ಬಲವನ್ನು ಪ್ರದರ್ಶಿಸು. ಕರ್ಣ! ರಣದಲ್ಲಿ ಅರ್ಜುನನಿಂದ ಜಯದ್ರಥನು ವಧಿಸಲ್ಪಡದಂತೆ ಮಾಡು!
07120012a ಅಲ್ಪಾವಶಿಷ್ಟಂ ದಿವಸಂ ನೃವೀರ ವಿಘಾತಯಸ್ವಾದ್ಯ ರಿಪುಂ ಶರೌಘೈಃ।
07120012c ದಿನಕ್ಷಯಂ ಪ್ರಾಪ್ಯ ನರಪ್ರವೀರ ಧ್ರುವಂ ಹಿ ನಃ ಕರ್ಣ ಜಯೋ ಭವಿಷ್ಯತಿ।।
ನರವೀರ! ಸ್ವಲ್ಪವೇ ಹಗಲು ಉಳಿದುಕೊಂಡಿದೆ. ಇಂದು ಶರೌಘಗಳಿಂದ ಶತ್ರುವನ್ನು ಸಂಹರಿಸು! ನರಪ್ರವೀರ! ಕರ್ಣ! ಹಗಲು ಮುಗಿಯಿತೆಂದರೆ ನಮಗೆ ಖಂಡಿತವಾಗಿಯೂ ಜಯವಾಗುತ್ತದೆ!
07120013a ಸೈಂಧವೇ ರಕ್ಷ್ಯಮಾಣೇ ತು ಸೂರ್ಯಸ್ಯಾಸ್ತಮಯಂ ಪ್ರತಿ।
07120013c ಮಿಥ್ಯಾಪ್ರತಿಜ್ಞಃ ಕೌಂತೇಯಃ ಪ್ರವೇಕ್ಷ್ಯತಿ ಹುತಾಶನಂ।।
ಸೂರ್ಯಾಸ್ತವಾಗುವ ವರೆಗೆ ಸೈಂಧವನನ್ನು ರಕ್ಷಿಸಿದೆವೆಂದಾದರೆ ಪ್ರತಿಜ್ಞೆಯನ್ನು ಸುಳ್ಳಾಗಿಸಿದ ಕೌಂತೇಯನು ಅಗ್ನಿಯನ್ನು ಪ್ರವೇಶಿಸುತ್ತಾನೆ.
07120014a ಅನರ್ಜುನಾಯಾಂ ಚ ಭುವಿ ಮುಹೂರ್ತಮಪಿ ಮಾನದ।
07120014c ಜೀವಿತುಂ ನೋತ್ಸಹೇರನ್ವೈ ಭ್ರಾತರೋಽಸ್ಯ ಸಹಾನುಗಾಃ।।
ಮಾನದ! ಭೂಮಿಯಲ್ಲಿ ಅರ್ಜುನನು ಮುಹೂರ್ತಕಾಲವೂ ಇಲ್ಲನೆಂದಾದರೆ ಅವನ ಸಹೋದರರು, ಅನುಯಾಯಿಗಳೊಂದಿಗೆ, ಜೀವಿಸಿರಲು ಬಯಸುವುದಿಲ್ಲ.
07120015a ವಿನಷ್ಟೈಃ ಪಾಂಡವೇಯೈಶ್ಚ ಸಶೈಲವನಕಾನನಾಂ।
07120015c ವಸುಂಧರಾಮಿಮಾಂ ಕರ್ಣ ಭೋಕ್ಷ್ಯಾಮೋ ಹತಕಂಟಕಾಂ।।
ಕರ್ಣ! ಪಾಂಡವೇಯರು ವಿನಷ್ಟರಾಗಲು, ಕಂಟಕರು ಹತರಾಗಿ ಗಿರಿ-ವನ-ಕಾನನಗಳೊಂದಿಗೆ ಈ ವಸುಂಧರೆಯನ್ನು ನಾವು ಭೋಗಿಸಬಲ್ಲೆವು.
07120016a ದೈವೇನೋಪಹತಃ ಪಾರ್ಥೋ ವಿಪರೀತಶ್ಚ ಮಾನದ।
07120016c ಕಾರ್ಯಾಕಾರ್ಯಮಜಾನನ್ವೈ ಪ್ರತಿಜ್ಞಾಂ ಕೃತವಾನ್ರಣೇ।।
ಮಾನದ! ಕಾರ್ಯಾಕಾರ್ಯಗಳನ್ನು ತಿಳಿದುಕೊಳ್ಳದೇ ರಣದಲ್ಲಿ ಈ ಪ್ರತಿಜ್ಞೆಯನ್ನು ಪಾರ್ಥನು ಮಾಡಿದ್ದಾನೆಂದರೆ ಈ ವಿಪರೀತವನ್ನು ದೈವವೇ ಅವನಿಗೆ ತಂದೊಡ್ಡಿದಂತಿದೆ.
07120017a ನೂನಮಾತ್ಮವಿನಾಶಾಯ ಪಾಂಡವೇನ ಕಿರೀಟಿನಾ।
07120017c ಪ್ರತಿಜ್ಞೇಯಂ ಕೃತಾ ಕರ್ಣ ಜಯದ್ರಥವಧಂ ಪ್ರತಿ।।
ಕರ್ಣ! ಕಿರೀಟಿ ಪಾಂಡವನು ತನ್ನ ವಿನಾಶಕ್ಕಾಗಿಯೇ ಜಯದ್ರಥನ ವಧೆಯ ಕುರಿತು ಪ್ರತಿಜ್ಞೆಯನ್ನು ಮಾಡಿರಬೇಕು.
07120018a ಕಥಂ ಜೀವತಿ ದುರ್ಧರ್ಷೇ ತ್ವಯಿ ರಾಧೇಯ ಫಲ್ಗುನಃ।
07120018c ಅನಸ್ತಂಗತ ಆದಿತ್ಯೇ ಹನ್ಯಾತ್ಸೈಂಧವಕಂ ನೃಪಂ।।
ರಾಧೇಯ! ನೀನು ಬದುಕಿರುವಾಗ ಹೇಗೆ ತಾನೇ ಆ ದುರ್ದರ್ಷ ಫಲ್ಗುನನು ಆದಿತ್ಯನು ಅಸ್ತಂಗತನಾಗುವುದರೊಳಗೆ ನೃಪ ಸೈಂಧವನನ್ನು ಕೊಂದಾನು?
07120019a ರಕ್ಷಿತಂ ಮದ್ರರಾಜೇನ ಕೃಪೇಣ ಚ ಮಹಾತ್ಮನಾ।
07120019c ಜಯದ್ರಥಂ ರಣಮುಖೇ ಕಥಂ ಹನ್ಯಾದ್ಧನಂಜಯಃ।।
ರಣಮುಖದಲ್ಲಿ ಮದ್ರರಾಜನಿಂದ ಮತ್ತು ಮಹಾತ್ಮ ಕೃಪನಿಂದ ರಕ್ಷಿತನಾಗಿರುವ ಜಯದ್ರಥನನ್ನು ಧನಂಜಯನು ಹೇಗೆ ಕೊಲ್ಲಬಲ್ಲನು?
07120020a ದ್ರೌಣಿನಾ ರಕ್ಷ್ಯಮಾಣಂ ಚ ಮಯಾ ದುಃಶಾಸನೇನ ಚ।
07120020c ಕಥಂ ಪ್ರಾಪ್ಸ್ಯತಿ ಬೀಭತ್ಸುಃ ಸೈಂಧವಂ ಕಾಲಚೋದಿತಃ।।
ದ್ರೌಣಿ, ನಾನು ಮತ್ತು ದುಃಶಾಸನರಿಂದ ರಕ್ಷಿಸಲ್ಪಡುತ್ತಿರುವ ಸೈಂಧವನನ್ನು ಕಾಲಚೋದಿತ ಬೀಭತ್ಸುವು ಹೇಗೆ ತಾನೇ ತಲುಪಬಲ್ಲನು?
07120021a ಯುಧ್ಯಂತೇ ಬಹವಃ ಶೂರಾ ಲಂಬತೇ ಚ ದಿವಾಕರಃ।
07120021c ಶಂಕೇ ಜಯದ್ರಥಂ ಪಾರ್ಥೋ ನೈವ ಪ್ರಾಪ್ಸ್ಯತಿ ಮಾನದ।।
ಮಾನದ! ಅನೇಕ ಶೂರರು ಯುದ್ಧಮಾಡುತ್ತಿದ್ದಾರೆ. ದಿವಾಕರನು ಇಳಿಯುತ್ತಿದ್ದಾನೆ. ಹೀಗಿರುವ ಪಾರ್ಥನು ಜಯದ್ರಥನನ್ನು ತಲುಪುವುದೇ ಶಂಕೆಯಾಗಿಬಿಟ್ಟಿದೆ.
07120022a ಸ ತ್ವಂ ಕರ್ಣ ಮಯಾ ಸಾರ್ಧಂ ಶೂರೈಶ್ಚಾನ್ಯೈರ್ಮಹಾರಥೈಃ।
07120022c ಯುಧ್ಯಸ್ವ ಯತ್ನಮಾಸ್ಥಾಯ ಪರಂ ಪಾರ್ಥೇನ ಸಂಯುಗೇ।।
ಕರ್ಣ! ಸಂಯುಗದಲ್ಲಿ ನೀನು ನನ್ನ ಮತ್ತು ಇತರ ಶೂರ ಮಹಾರಥರೊಂದಿಗೆ ಪರಮ ಯತ್ನವನ್ನು ಮಾಡಿ ಪಾರ್ಥನೊಡನೆ ಯುದ್ಧಮಾಡು!”
07120023a ಏವಮುಕ್ತಸ್ತು ರಾಧೇಯಸ್ತವ ಪುತ್ರೇಣ ಮಾರಿಷ।
07120023c ದುರ್ಯೋಧನಮಿದಂ ವಾಕ್ಯಂ ಪ್ರತ್ಯುವಾಚ ಕುರೂತ್ತಮಂ।।
ಮಾರಿಷ! ನಿನ್ನ ಮಗನು ಹೀಗೆ ಹೇಳಲು ರಾಧೇಯನು ಕುರೂತ್ತಮ ದುರ್ಯೋಧನನಿಗೆ ಈ ಮಾತನ್ನಾಡಿದನು:
07120024a ದೃಢಲಕ್ಷ್ಯೇಣ ಶೂರೇಣ ಭೀಮಸೇನೇನ ಧನ್ವಿನಾ।
07120024c ಭೃಶಮುದ್ವೇಜಿತಃ ಸಂಖ್ಯೇ ಶರಜಾಲೈರನೇಕಶಃ।।
“ಗುರಿಯಲ್ಲಿ ದೃಢನಾದ ಶೂರ ಧನ್ವಿ ಭೀಮಸೇನನ ಅನೇಕ ಶರಜಾಲಗಳಿಂದ ರಣದಲ್ಲಿ ನಾನು ತುಂಬಾ ನೋವನ್ನನುಭವಿಸುತ್ತಿದ್ದೇನೆ.
07120025a ಸ್ಥಾತವ್ಯಮಿತಿ ತಿಷ್ಠಾಮಿ ರಣೇ ಸಂಪ್ರತಿ ಮಾನದ।
07120025c ನೈವಾಂಗಮಿಂಗತಿ ಕಿಂ ಚಿನ್ಮೇ ಸಂತಪ್ತಸ್ಯ ರಣೇಷುಭಿಃ।।
ಮಾನದ! ನನ್ನಂಥವನು ರಣದಲ್ಲಿರಬೇಕು ಎಂಬ ಒಂದೇ ಕಾರಣದಿಂದ ನಾನಿನ್ನೂ ಇಲ್ಲಿ ನಿಂತಿದ್ದೇನೆ. ರಣದಲ್ಲಿಯ ಬಾಣಗಳಿಂದ ನನ್ನ ಅಂಗಾಂಗಗಳೆಲ್ಲವೂ ಅತಿ ನೋವನ್ನು ಅನುಭವಿಸುತ್ತಿವೆ.
07120026a ಯೋತ್ಸ್ಯಾಮಿ ತು ತಥಾ ರಾಜನ್ ಶಕ್ತ್ಯಾಹಂ ಪರಯಾ ರಣೇ।
07120026c ಯಥಾ ಪಾಂಡವಮುಖ್ಯೋಽಸೌ ನ ಹನಿಷ್ಯತಿ ಸೈಂಧವಂ।।
ಆದರೆ ರಾಜನ್! ನಾನು ರಣದಲ್ಲಿ ಪರಮ ಶಕ್ತಿಯನ್ನು ಬಳಸಿ ಪಾಂಡವಮುಖ್ಯನು ಸೈಂಧವನನ್ನು ಕೊಲ್ಲದಂತೆ ಯುದ್ಧಮಾಡುತ್ತೇನೆ.
07120027a ನ ಹಿ ಮೇ ಯುಧ್ಯಮಾನಸ್ಯ ಸಾಯಕಾಂಶ್ಚಾಸ್ಯತಃ ಶಿತಾನ್।
07120027c ಸೈಂಧವಂ ಪ್ರಾಪ್ಸ್ಯತೇ ವೀರಃ ಸವ್ಯಸಾಚೀ ಧನಂಜಯಃ।।
ನಾನು ನಿಶಿತ ಸಾಯಕಗಳನ್ನು ಪ್ರಯೋಗಿಸಿ ಯುದ್ಧಮಾಡುವಾಗ ವೀರ ಸವ್ಯಸಾಚೀ ಧನಂಜಯನು ಸೈಂಧವನನ್ನು ತಲುಪಲಾರನು.
07120028a ಯತ್ತು ಶಕ್ತಿಮತಾ ಕಾರ್ಯಂ ಸತತಂ ಹಿತಕಾರಿಣಾ।
07120028c ತತ್ಕರಿಷ್ಯಾಮಿ ಕೌರವ್ಯ ಜಯೋ ದೈವೇ ಪ್ರತಿಷ್ಠಿತಃ।।
ಕೌರವ್ಯ! ಸತತವೂ ಹಿತಕಾರಿಗಳಾಗಿರುವವರಿಗೆ ಎಷ್ಟು ಮಾಡಬೇಕೋ ಅಷ್ಟನ್ನೂ ಯಥಾಶಕ್ತಿ ಮಾಡುತ್ತೇನೆ. ಜಯವು ದೈವದ ಮೇಲೆ ನಿಂತಿದೆ!
07120029a ಅದ್ಯ ಯೋತ್ಸ್ಯೇಽರ್ಜುನಮಹಂ ಪೌರುಷಂ ಸ್ವಂ ವ್ಯಪಾಶ್ರಿತಃ।
07120029c ತ್ವದರ್ಥಂ ಪುರುಷವ್ಯಾಘ್ರ ಜಯೋ ದೈವೇ ಪ್ರತಿಷ್ಠಿತಃ।।
ಪುರುಷವ್ಯಾಘ್ರ! ನನ್ನ ಪೌರುಷವನ್ನು ಆಶ್ರಯಿಸಿ ನಿನಗಾಗಿ ಇಂದು ಅರ್ಜುನನೊಡನೆ ಯುದ್ಧಮಾಡುತ್ತೇನೆ. ಆದರೆ ಜಯವು ದೈವಾಧೀನವಾದುದು.
07120030a ಅದ್ಯ ಯುದ್ಧಂ ಕುರುಶ್ರೇಷ್ಠ ಮಮ ಪಾರ್ಥಸ್ಯ ಚೋಭಯೋಃ।
07120030c ಪಶ್ಯಂತು ಸರ್ವಭೂತಾನಿ ದಾರುಣಂ ಲೋಮಹರ್ಷಣಂ।।
ಕುರುಶ್ರೇಷ್ಠ! ಇಂದು ನನ್ನ ಮತ್ತು ಪಾರ್ಥ ಇಬ್ಬರ ನಡುವಿನ ದಾರುಣ ಲೋಮಹರ್ಷಣ ಯುದ್ಧವನ್ನು ಸರ್ವಭೂತಗಳೂ ನೋಡಲಿ!”
07120031a ಕರ್ಣಕೌರವಯೋರೇವಂ ರಣೇ ಸಂಭಾಷಮಾಣಯೋಃ।
07120031c ಅರ್ಜುನೋ ನಿಶಿತೈರ್ಬಾಣೈರ್ಜಘಾನ ತವ ವಾಹಿನೀಂ।।
ರಣದಲ್ಲಿ ಹೀಗೆ ಕರ್ಣ-ಕೌರವರು ಮಾತನಾಡಿಕೊಳ್ಳುತ್ತಿರಲು ಅರ್ಜುನನು ನಿನ್ನ ಸೇನೆಯನ್ನು ನಿಶಿತ ಬಾಣಗಳಿಂದ ಹೊಡೆದನು.
07120032a ಚಿಚ್ಚೇದ ತೀಕ್ಷ್ಣಾಗ್ರಮುಖೈಃ ಶೂರಾಣಾಮನಿವರ್ತಿನಾಂ।
07120032c ಭುಜಾನ್ಪರಿಘಸಂಕಾಶಾನ್ ಹಸ್ತಿಹಸ್ತೋಪಮಾನ್ರಣೇ।।
ಅವನು ತೀಕ್ಷ್ಣ ಅಗ್ರಮುಖಗಳಿಂದ ರಣದಲ್ಲಿ ಪಲಾಯನಮಾಡದಿರುವ ಶೂರರ ಪರಿಘದಂತಿದ್ದ ಮತ್ತು ಆನೆಯ ಸೊಂಡಲಿನಂತಿದ್ದ ಭುಜಗಳನ್ನು ಕತ್ತರಿಸಿದನು.
07120033a ಶಿರಾಂಸಿ ಚ ಮಹಾಬಾಹುಶ್ಚಿಚ್ಚೇದ ನಿಶಿತೈಃ ಶರೈಃ।
07120033c ಹಸ್ತಿಹಸ್ತಾನ್ ಹಯಗ್ರೀವಾ ರಥಾಕ್ಷಾಂಶ್ಚ ಸಮಂತತಃ।।
ಆ ಮಹಾಬಾಹುವು ನಿಶಿತ ಶರಗಳಿಂದ ಶಿರಗಳನ್ನು, ಆನೆಗಳ ಸೊಂಡಿಲುಗಳನ್ನು, ಕುದುರೆಗಳ ಕತ್ತುಗಳನ್ನು ಮತ್ತು ರಥಗಳ ಅಚ್ಚುಮಣೆಗಳನ್ನು ಎಲ್ಲೆಡೆ ಕತ್ತರಿಸಿದನು.
07120034a ಶೋಣಿತಾಕ್ತಾನ್ಹಯಾರೋಹಾನ್ಗೃಹೀತಪ್ರಾಸತೋಮರಾನ್।
07120034c ಕ್ಷುರೈಶ್ಚಿಚ್ಚೇದ ಬೀಭತ್ಸುರ್ದ್ವಿಧೈಕೈಕಂ ತ್ರಿಧೈವ ಚ।।
ಬೀಭತ್ಸುವು ಪ್ರಾಸ-ತೋಮರಗಳನ್ನು ಹಿಡಿದಿದ್ದ, ರಕ್ತದಿಂದ ತೋಯ್ದುಹೋಗಿದ್ದ ಅಶ್ವಾರೋಹಿಗಳು ಒಬ್ಬೊಬ್ಬರನ್ನೂ ಎರಡಾಗಿ ಅಥವಾ ಮೂರಾಗಿ ಕ್ಷುರಗಳಿಂದ ತುಂಡರಿಸಿದನು.
07120035a ಹಯವಾರಣಮುಖ್ಯಾಶ್ಚ ಪ್ರಾಪತಂತ ಸಹಸ್ರಶಃ।
07120035c ಧ್ವಜಾಶ್ಚತ್ರಾಣಿ ಚಾಪಾನಿ ಚಾಮರಾಣಿ ಶಿರಾಂಸಿ ಚ।।
ಸಹಸ್ರಾರು ಪ್ರಮುಖ ಆನೆ-ಕುದುರೆಗಳು, ಧ್ವಜ-ಚತ್ರಗಳು, ಚಾಪಗಳು, ಚಾಮರಗಳು ಮತ್ತು ಶಿರಗಳು ಬೀಳುತ್ತಿದ್ದವು.
07120036a ಕಕ್ಷಮಗ್ನಿಮಿವೋದ್ಧೂತಃ ಪ್ರದಹಂಸ್ತವ ವಾಹಿನೀಂ।
07120036c ಅಚಿರೇಣ ಮಹೀಂ ಪಾರ್ಥಶ್ಚಕಾರ ರುಧಿರೋತ್ತರಾಂ।।
ಬೆಂಕಿಯು ಒಣಹುಲ್ಲನ್ನು ಹೇಗೋ ಹಾಗೆ ನಿನ್ನ ಸೇನೆಯನ್ನು ಭಸ್ಮಮಾಡಿ ಪಾರ್ಥನು ಕ್ಷಣಮಾತ್ರದಲ್ಲಿ ರಣಭೂಮಿಯನ್ನು ರಕ್ತದಲ್ಲಿ ಮುಳುಗಿಸಿಬಿಟ್ಟನು.
07120037a ಹತಭೂಯಿಷ್ಠಯೋಧಂ ತತ್ಕೃತ್ವಾ ತವ ಬಲಂ ಬಲೀ।
07120037c ಆಸಸಾದ ದುರಾಧರ್ಷಃ ಸೈಂಧವಂ ಸತ್ಯವಿಕ್ರಮಃ।।
ಆ ಬಲಶಾಲೀ ದುರಾಧರ್ಷ ಸತ್ಯವಿಕ್ರಮಿಯು ನಿನ್ನ ಸೇನೆಯ ಹೆಚ್ಚುಭಾಗ ಯೋಧರನ್ನು ಸಂಹರಿಸಿ ಸೈಂಧವನ ಬಳಿಬಂದನು.
07120038a ಬೀಭತ್ಸುರ್ಭೀಮಸೇನೇನ ಸಾತ್ವತೇನ ಚ ರಕ್ಷಿತಃ।
07120038c ಸ ಬಭೌ ಭರತಶ್ರೇಷ್ಠ ಜ್ವಲನ್ನಿವ ಹುತಾಶನಃ।।
ಭರತಶ್ರೇಷ್ಠ! ಭೀಮಸೇನ ಮತ್ತು ಸಾತ್ವತರಿಂದ ರಕ್ಷಿತನಾದ ಬೀಭತ್ಸುವು ಪ್ರಜ್ವಲಿಸುತ್ತಿರುವ ಹುತಾಶನನಂತಿದ್ದನು.
07120039a ತಂ ತಥಾವಸ್ಥಿತಂ ದೃಷ್ಟ್ವಾ ತ್ವದೀಯಾ ವೀರ್ಯಸಮ್ಮತಾಃ।
07120039c ನಾಮೃಷ್ಯಂತ ಮಹೇಷ್ವಾಸಾಃ ಫಲ್ಗುನಂ ಪುರುಷರ್ಷಭಾಃ।।
ಹಾಗಿರುವ ಫಲ್ಗುನನನ್ನು ನೋಡಿ ನಿನ್ನವರ ವೀರ್ಯಸಮ್ಮತ ಮಹೇಷ್ವಾಸ ಪುರುಷರ್ಷಭರು ಸಹಿಸಿಕೊಳ್ಳಲಿಲ್ಲ.
07120040a ದುರ್ಯೋಧನಶ್ಚ ಕರ್ಣಶ್ಚ ವೃಷಸೇನೋಽಥ ಮದ್ರರಾಟ್।
07120040c ಅಶ್ವತ್ಥಾಮಾ ಕೃಪಶ್ಚೈವ ಸ್ವಯಮೇವ ಚ ಸೈಂಧವಃ।।
07120041a ಸಂರಬ್ಧಾಃ ಸೈಂಧವಸ್ಯಾರ್ಥೇ ಸಮಾವೃಣ್ವನ್ಕಿರೀಟಿನಂ।
07120041c ನೃತ್ಯಂತಂ ರಥಮಾರ್ಗೇಷು ಧನುರ್ಜ್ಯಾತಲನಿಸ್ವನೈಃ।।
ದುರ್ಯೋಧನ, ಕರ್ಣ, ವೃಷಸೇನ, ಮದ್ರರಾಜ, ಅಶ್ವತ್ಥಾಮ, ಕೃಪ ಮತ್ತು ಸ್ವಯಂ ಸೈಂಧವ ಇವರು ಸೈಂಧವನಿಗಾಗಿ ಸಂರಬ್ಧರಾಗಿ ರಥಮಾರ್ಗದಲ್ಲಿ ನರ್ತಿಸುವಂತಿದ್ದ, ಜೋರಾಗಿ ಧನುಸ್ಸನ್ನು ಟೇಂಕರಿಸುತ್ತಿದ್ದ ಮತ್ತು ಚಪ್ಪಾಳೆಹಾಕುತ್ತಿದ್ದ ಕಿರೀಟಿಯನ್ನು ಸುತ್ತುವರೆದರು.
07120042a ಸಂಗ್ರಾಮಕೋವಿದಂ ಪಾರ್ಥಂ ಸರ್ವೇ ಯುದ್ಧವಿಶಾರದಾಃ।
07120042c ಅಭೀತಾಃ ಪರ್ಯವರ್ತಂತ ವ್ಯಾದಿತಾಸ್ಯಮಿವಾಂತಕಂ।।
ಎಲ್ಲ ಯುದ್ಧವಿಶಾರದರೂ ಬಾಯಿಕಳೆದ ಅಂತಕನಂತಿದ್ದ ಸಂಗ್ರಾಮಕೋವಿದ ಪಾರ್ಥನನ್ನು ಸುತ್ತುವರೆದರು.
07120043a ಸೈಂಧವಂ ಪೃಷ್ಠತಃ ಕೃತ್ವಾ ಜಿಘಾಂಸಂತೋಽರ್ಜುನಾಚ್ಯುತೌ।
07120043c ಸೂರ್ಯಾಸ್ತಮಯಮಿಚ್ಚಂತೋ ಲೋಹಿತಾಯತಿ ಭಾಸ್ಕರೇ।।
ಭಾಸ್ಕರನು ಕೆಂಪಾಗುತ್ತಿರಲು, ಈಗಲೇ ಸೂರ್ಯಾಸ್ತವಾಗಲೆಂದು ಬಯಸುತ್ತಾ ಅವರು ಸೈಂಧವನನ್ನು ಹಿಂದಿರಿಸಿಕೊಂಡು ಅರ್ಜುನ-ಅಚ್ಯುತರನ್ನು ಆಕ್ರಮಣಿಸಿದರು.
07120044a ತೇ ಭುಜೈರ್ಭೋಗಿಭೋಗಾಭೈರ್ಧನೂಂಷ್ಯಾಯಮ್ಯ ಸಾಯಕಾನ್।
07120044c ಮುಮುಚುಃ ಸೂರ್ಯರಶ್ಮ್ಯಾಭಾಂ ಶತಶಃ ಫಲ್ಗುನಂ ಪ್ರತಿ।।
ಅವರು ತಮ್ಮ ಸರ್ಪಗಳಂತಿದ್ದ ಬಾಹುಗಳಿಂದ ಧನುಸ್ಸುಗಳನ್ನು ಎಳೆದು ಸೂರ್ಯನ ರಶ್ಮಿಗಳಂತಿದ್ದ ನೂರಾರು ಸಾಯಕಗಳನ್ನು ಫಲ್ಗುನನ ಮೇಲೆ ಪ್ರಯೋಗಿಸಿದರು.
07120045a ತಾನಸ್ತಾನಸ್ಯಮಾನಾಂಶ್ಚ ಕಿರೀಟೀ ಯುದ್ಧದುರ್ಮದಃ।
07120045c ದ್ವಿಧಾ ತ್ರಿಧಾಷ್ಟಧೈಕೈಕಂ ಚಿತ್ತ್ವಾ ವಿವ್ಯಾಧ ತಾನ್ರಣೇ।।
ಯುದ್ಧದುರ್ಮದ ಕಿರೀಟಿಯು ಅವರ ಪ್ರತಿಯೊಂದು ಬಾಣವನ್ನೂ ಎರಡು-ಮೂರಾಗಿ ತುಂಡರಿಸಿ ರಣದಲ್ಲಿ ಅವರನ್ನು ಹೊಡೆದನು.
07120046a ಸಿಂಹಲಾಂಗೂಲಕೇತುಸ್ತು ದರ್ಶಯನ್ ಶಕ್ತಿಮಾತ್ಮನಃ।
07120046c ಶಾರದ್ವತೀಸುತೋ ರಾಜನ್ನರ್ಜುನಂ ಪ್ರತ್ಯವಾರಯತ್।।
ರಾಜನ್! ಸಿಂಹದ ಬಾಲದ ಧ್ವಜವುಳ್ಳ ಶಾರದ್ವತೀಸುತನು ತನ್ನ ಶಕ್ತಿಯನ್ನು ತೋರಿಸುತ್ತಾ ಅರ್ಜುನನನ್ನು ಎದುರಿಸಿ ತಡೆದನು.
07120047a ಸ ವಿದ್ಧ್ವಾ ದಶಭಿಃ ಪಾರ್ಥಂ ವಾಸುದೇವಂ ಚ ಸಪ್ತಭಿಃ।
07120047c ಅತಿಷ್ಠದ್ರಥಮಾರ್ಗೇಷು ಸೈಂಧವಂ ಪರಿಪಾಲಯನ್।।
ಅವನು ಹತ್ತರಿಂದ ಪಾರ್ಥನನ್ನೂ, ಏಳರಿಂದ ವಾಸುದೇವನನ್ನೂ ಹೊಡೆದು ಸೈಂಧವನನ್ನು ಪರಿಪಾಲಿಸುತ್ತಾ ರಥಮಾರ್ಗದಲ್ಲಿ ನಿಂತನು.
07120048a ಅಥೈನಂ ಕೌರವಶ್ರೇಷ್ಠಾಃ ಸರ್ವ ಏವ ಮಹಾರಥಾಃ।
07120048c ಮಹತಾ ರಥವಂಶೇನ ಸರ್ವತಃ ಪರ್ಯವಾರಯನ್।।
ಆಗ ಅವರನ್ನು ಕೌರವಶ್ರೇಷ್ಠ ಮಹಾರಥರೆಲ್ಲರೂ ಅತಿದೊಡ್ಡ ರಥಗುಂಪುಗಳೊಡನೆ ಎಲ್ಲ ಕಡೆಗಳಿಂದ ಸುತ್ತುವರೆದರು.
07120049a ವಿಸ್ಫಾರಯಂತಶ್ಚಾಪಾನಿ ವಿಸೃಜಂತಶ್ಚ ಸಾಯಕಾನ್।
07120049c ಸೈಂಧವಂ ಪರ್ಯರಕ್ಷಂತ ಶಾಸನಾತ್ತನಯಸ್ಯ ತೇ।।
ಚಾಪಗಳನ್ನು ಸೆಳೆಯುತ್ತಾ, ಸಾಯಕಗಳನ್ನು ಬಿಡುತ್ತಾ ಅವರು ನಿನ್ನ ಮಗನ ಶಾಸನದಂತೆ ಸೈಂಧವನ್ನು ಪರಿರಕ್ಷಿಸುತ್ತಿದ್ದರು.
07120050a ತತ್ರ ಪಾರ್ಥಸ್ಯ ಶೂರಸ್ಯ ಬಾಹ್ವೋರ್ಬಲಮದೃಶ್ಯತ।
07120050c ಇಷೂಣಾಮಕ್ಷಯತ್ವಂ ಚ ಧನುಷೋ ಗಾಂಡಿವಸ್ಯ ಚ।।
ಅಲ್ಲಿ ನಾವು ಶೂರ ಪಾರ್ಥನ ಬಾಹುಗಳ ಬಲವನ್ನೂ, ಬಾಣಗಳ ಅಕ್ಷಯತ್ವವನ್ನೂ ಮತ್ತು ಗಾಂಡೀವ ಧನುಸ್ಸಿನ ಬಲವನ್ನೂ ಕಂಡೆವು.
07120051a ಅಸ್ತ್ರೈರಸ್ತ್ರಾಣಿ ಸಂವಾರ್ಯ ದ್ರೌಣೇಃ ಶಾರದ್ವತಸ್ಯ ಚ।
07120051c ಏಕೈಕಂ ನವಭಿರ್ಬಾಣೈಃ ಸರ್ವಾನೇವ ಸಮರ್ಪಯತ್।।
ಅವನು ದ್ರೌಣಿ ಮತ್ತು ಶಾರದ್ವತರ ಅಸ್ತ್ರಗಳನ್ನು ಅಸ್ತ್ರಗಳಿಂದ ತಡೆದು, ತಲಾ ಒಂಭತ್ತರಂತೆ ಎಲ್ಲರನ್ನೂ ಬಾಣಗಳಿಂದ ಹೊಡೆದನು.
07120052a ತಂ ದ್ರೌಣಿಃ ಪಂಚವಿಂಶತ್ಯಾ ವೃಷಸೇನಶ್ಚ ಸಪ್ತಭಿಃ।
07120052c ದುರ್ಯೋಧನಶ್ಚ ವಿಂಶತ್ಯಾ ಕರ್ಣಶಲ್ಯೌ ತ್ರಿಭಿಸ್ತ್ರಿಭಿಃ।।
ಅವನು ದ್ರೌಣಿಯನ್ನು ಇಪ್ಪತ್ತೈದರಿಂದ, ವೃಷಸೇನನನ್ನು ಏಳರಿಂದ, ದುರ್ಯೋಧನನನ್ನು ಇಪ್ಪತ್ತರಿಂದ ಮತ್ತು ಕರ್ಣ-ಶಲ್ಯರನ್ನು ಮೂರು-ಮೂರರಿಂದ ಹೊಡೆದನು.
07120053a ತ ಏನಮಭಿಗರ್ಜಂತೋ ವಿಧ್ಯಂತಶ್ಚ ಪುನಃ ಪುನಃ।
07120053c ವಿಧುನ್ವಂತಶ್ಚ ಚಾಪಾನಿ ಸರ್ವತಃ ಪರ್ಯವಾರಯನ್।।
ಪುನಃ ಪುನಃ ಗರ್ಜಿಸುತ್ತಾ ಹೊಡೆಯುತ್ತಾ ಧನುಸ್ಸುಗಳನ್ನು ಟೇಂಕರಿಸುತ್ತಾ ಅವರು ಅವನನ್ನು ಎಲ್ಲ ಕಡೆಗಳಿಂದ ಮುತ್ತಿಗೆ ಹಾಕಿದರು.
07120054a ಶ್ಲಿಷ್ಟಂ ತು ಸರ್ವತಶ್ಚಕ್ರೂ ರಥಮಂಡಲಮಾಶು ತೇ।
07120054c ಸೂರ್ಯಾಸ್ತಮಯಮಿಚ್ಚಂತಸ್ತ್ವರಮಾಣಾ ಮಹಾರಥಾಃ।।
ಸೂರ್ಯಾಸ್ತವನ್ನು ಬಯಸುತ್ತಾ ತ್ವರೆಮಾಡುತ್ತಿದ್ದ ಆ ಮಹಾರಥರು ಎಲ್ಲರೂ ಒಬ್ಬರಿಗೊಬ್ಬರು ತಾಗಿಕೊಂಡು ರಥಗಳ ಮಂಡಲವನ್ನು ಮಾಡಿಕೊಂಡು ಯುದ್ಧಮಾಡುತ್ತಿದ್ದರು.
07120055a ತ ಏನಮಭಿನರ್ದಂತೋ ವಿಧುನ್ವಾನಾ ಧನೂಂಷಿ ಚ।
07120055c ಸಿಷಿಚುರ್ಮಾರ್ಗಣೈರ್ಘೋರೈರ್ಗಿರಿಂ ಮೇಘಾ ಇವಾಂಬುಭಿಃ।।
ಅವನನ್ನು ಎದುರಿಸಿ ಗರ್ಜಿಸುತ್ತಾ, ಧನುಸ್ಸುಗಳನ್ನು ಟೇಂಕರಿಸುತ್ತಾ, ಘೋರ ಮಾರ್ಗಣಗಳಿಂದ ಮೋಡಗಳು ಪರ್ವತದ ಮೇಲೆ ಮಳೆನೀರನ್ನು ಸುರಿಸುವಂತೆ ಮುಚ್ಚಿದರು.
07120056a ತೇ ಮಹಾಸ್ತ್ರಾಣಿ ದಿವ್ಯಾನಿ ತತ್ರ ರಾಜನ್ವ್ಯದರ್ಶಯನ್।
07120056c ಧನಂಜಯಸ್ಯ ಗಾತ್ರೇಷು ಶೂರಾಃ ಪರಿಘಬಾಹವಃ।।
ರಾಜನ್! ಪರಿಘಗಳಂತೆ ಬಾಹುಗಳನ್ನು ಹೊಂದಿದ್ದ ಆ ಶೂರರು ಧನಂಜಯದ ಶರೀರದ ಮೇಲೆ ಮಹಾ ದಿವ್ಯಾಸ್ತ್ರಗಳನ್ನು ಪ್ರಯೋಗಿಸಿದರು. 7107120057a ಹತಭೂಯಿಷ್ಠಯೋಧಂ ತತ್ಕೃತ್ವಾ ತವ ಬಲಂ ಬಲೀ।
07120057c ಆಸಸಾದ ದುರಾಧರ್ಷಃ ಸೈಂಧವಂ ಸತ್ಯವಿಕ್ರಮಃ।।
ಆ ಬಲಶಾಲೀ ದುರಾಧರ್ಷ ಸತ್ಯವಿಕ್ರಮಿಯು ನಿನ್ನ ಸೇನೆಯ ಹೆಚ್ಚುಭಾಗ ಯೋಧರನ್ನು ಸಂಹರಿಸಿ ಸೈಂಧವನ ಬಳಿಬಂದನು.
07120058a ತಂ ಕರ್ಣಃ ಸಂಯುಗೇ ರಾಜನ್ಪ್ರತ್ಯವಾರಯದಾಶುಗೈಃ।
07120058c ಮಿಷತೋ ಭೀಮಸೇನಸ್ಯ ಸಾತ್ವತಸ್ಯ ಚ ಭಾರತ।।
ರಾಜನ್! ಭಾರತ! ಆಗ ಕರ್ಣನು ಭೀಮಸೇನ-ಸಾತ್ಯಕಿಯರು ನೋಡುತ್ತಿದ್ದಂತೆಯೇ ಅವನನ್ನು ಆಶುಗಗಳಿಂದ ತಡೆದನು.
07120059a ತಂ ಪಾರ್ಥೋ ದಶಭಿರ್ಬಾಣೈಃ ಪ್ರತ್ಯವಿಧ್ಯದ್ರಣಾಜಿರೇ।
07120059c ಸೂತಪುತ್ರಂ ಮಹಾಬಾಹುಃ ಸರ್ವಸೈನ್ಯಸ್ಯ ಪಶ್ಯತಃ।।
ಆ ಸೂತಪುತ್ರನನ್ನು ರಣಾಜಿರದಲ್ಲಿ ಮಹಾಬಾಹು ಪಾರ್ಥನು ಎಲ್ಲ ಸೈನ್ಯಗಳೂ ನೋಡುತ್ತಿದ್ದಂತೆ ಹತ್ತು ಬಾಣಗಳಿಂದ ಹೊಡೆದನು.
07120060a ಸಾತ್ವತಶ್ಚ ತ್ರಿಭಿರ್ಬಾಣೈಃ ಕರ್ಣಂ ವಿವ್ಯಾಧ ಮಾರಿಷ।
07120060c ಭೀಮಸೇನಸ್ತ್ರಿಭಿಶ್ಚೈವ ಪುನಃ ಪಾರ್ಥಶ್ಚ ಸಪ್ತಭಿಃ।।
ಮಾರಿಷ! ಸಾತ್ವತನೂ ಕರ್ಣನನ್ನು ಮೂರು ಬಾಣಗಳಿಂದ, ಭೀಮಸೇನನು ಮೂರರಿಂದ ಮತ್ತು ಪಾರ್ಥನು ಪುನಃ ಏಳರಿಂದ ಹೊಡೆದರು.
07120061a ತಾನ್ಕರ್ಣಃ ಪ್ರತಿವಿವ್ಯಾಧ ಷಷ್ಟ್ಯಾ ಷಷ್ಟ್ಯಾ ಮಹಾರಥಃ।
07120061c ತದ್ಯುದ್ಧಮಭವದ್ರಾಜನ್ಕರ್ಣಸ್ಯ ಬಹುಭಿಃ ಸಹ।।
ಮಹಾರಥ ಕರ್ಣನು ಅವರನ್ನು ಅರವತ್ತು-ಅರವತ್ತು ಶರಗಳಿಂದ ತಿರುಗಿ ಹೊಡೆದನು. ರಾಜನ್! ಆಗ ಅನೇಕರೊಂದಿಗೆ ಕರ್ಣನ ಯುದ್ಧವು ನಡೆಯಿತು.
07120062a ತತ್ರಾದ್ಭುತಮಪಶ್ಯಾಮ ಸೂತಪುತ್ರಸ್ಯ ಮಾರಿಷ।
07120062c ಯದೇಕಃ ಸಮರೇ ಕ್ರುದ್ಧಸ್ತ್ರೀನ್ರಥಾನ್ಪರ್ಯವಾರಯತ್।।
ಮಾರಿಷ! ಸಮರದಲ್ಲಿ ಒಬ್ಬನೇ ಕ್ರುದ್ಧನಾಗಿ ಮೂರು ರಥರನ್ನು ಸುತ್ತುವರೆಯುತ್ತಿದ್ದ ಸೂತಪುತ್ರನ ಅದ್ಭುತವನ್ನು ನಾವು ನೊಡಿದೆವು.
07120063a ಫಲ್ಗುನಸ್ತು ಮಹಾಬಾಹುಃ ಕರ್ಣಂ ವೈಕರ್ತನಂ ರಣೇ।
07120063c ಸಾಯಕಾನಾಂ ಶತೇನೈವ ಸರ್ವಮರ್ಮಸ್ವತಾಡಯತ್।।
ಮಹಾಬಾಹು ಫಲ್ಗುನನಾದರೋ ರಣದಲ್ಲಿ ನೂರು ಶರಗಳಿಂದ ವೈಕರ್ತನ ಕರ್ಣನ ಸರ್ವ ಮರ್ಮಗಳಿಗೆ ಹೊಡೆದನು.
07120064a ರುಧಿರೋಕ್ಷಿತಸರ್ವಾಂಗಃ ಸೂತಪುತ್ರಃ ಪ್ರತಾಪವಾನ್।
07120064c ಶರೈಃ ಪಂಚಾಶತಾ ವೀರಃ ಫಲ್ಗುನಂ ಪ್ರತ್ಯವಿಧ್ಯತ।
07120064e ತಸ್ಯ ತಲ್ಲಾಘವಂ ದೃಷ್ಟ್ವಾ ನಾಮೃಷ್ಯತ ರಣೇಽರ್ಜುನಃ।।
ಸರ್ವಾಂಗಗಳೂ ರಕ್ತದಿಂದ ತೋಯ್ದ ಪ್ರತಾಪವಾನ್ ವೀರ ಸೂತಪುತ್ರನು ಐನೂರು ಶರಗಳಿಂದ ಫಲ್ಗುನನನ್ನು ತಿರುಗಿ ಹೊಡೆದನು. ರಣದಲ್ಲಿ ಅವನ ಲಾಘವವನ್ನು ಕಂಡು ಅರ್ಜುನನು ಸಹಿಸಿಕೊಳ್ಳಲಿಲ್ಲ.
07120065a ತತಃ ಪಾರ್ಥೋ ಧನುಶ್ಚಿತ್ತ್ವಾ ವಿವ್ಯಾಧೈನಂ ಸ್ತನಾಂತರೇ।
07120065c ಸಾಯಕೈರ್ನವಭಿರ್ವೀರಸ್ತ್ವರಮಾಣೋ ಧನಂಜಯಃ।।
ಆಗ ತ್ವರೆಮಾಡಿ ವೀರ ಧನಂಜಯ ಪಾರ್ಥನು ಅವನ ಧನುಸ್ಸನ್ನು ತುಂಡರಿಸಿ, ಎದೆಯ ಮೇಲೆ ಒಂಭತ್ತು ಸಾಯಕಗಳಿಂದ ಹೊಡೆದನು.
07120066a ವಧಾರ್ಥಂ ಚಾಸ್ಯ ಸಮರೇ ಸಾಯಕಂ ಸೂರ್ಯವರ್ಚಸಂ।
07120066c ಚಿಕ್ಷೇಪ ತ್ವರಯಾ ಯುಕ್ತಸ್ತ್ವರಾಕಾಲೇ ಧನಂಜಯಃ।।
ಸಮರದಲ್ಲಿ ಅವನ ವಧೆಗೋಸ್ಕರ ಧನಂಜಯನು ತ್ವರೆಮಾಡಿ ವೇಗವುಳ್ಳ ಸೂರ್ಯವರ್ಚಸ ಸಾಯಕವನ್ನು ಎಸೆದನು.
07120067a ತಮಾಪತಂತಂ ವೇಗೇನ ದ್ರೌಣಿಶ್ಚಿಚ್ಚೇದ ಸಾಯಕಂ।
07120067c ಅರ್ಧಚಂದ್ರೇಣ ತೀಕ್ಷ್ಣೇನ ಸ ಚಿನ್ನಃ ಪ್ರಾಪತದ್ಭುವಿ।।
ವೇಗದಿಂದ ಬರುತ್ತಿದ್ದ ಆ ಸಾಯಕವನ್ನು ದ್ರೌಣಿಯು ತೀಕ್ಷ್ಣ ಅರ್ಧಚಂದ್ರದಿಂದ ಕತ್ತರಿಸಿ ಭೂಮಿಗೆ ಕೆಡವಿದನು.
07120068a ಅಥಾನ್ಯದ್ಧನುರಾದಾಯ ಸೂತಪುತ್ರಃ ಪ್ರತಾಪವಾನ್।
07120068c ಕರ್ಣೋಽಪಿ ದ್ವಿಷತಾಂ ಹಂತಾ ಚಾದಯಾಮಾಸ ಫಲ್ಗುನಂ।
07120068e ಸಾಯಕೈರ್ಬಹುಸಾಹಸ್ರೈಃ ಕೃತಪ್ರತಿಕೃತೇಪ್ಸಯಾ।।
ಆಗ ಶತ್ರುಹಂತಕ ಪ್ರತಾಪವಾನ್ ಸೂತಪುತ್ರ ಕರ್ಣನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಪ್ರತೀಕಾರವನ್ನು ಮಾಡಲು ಬಯಸಿ ಫಲ್ಗುನನನ್ನು ಅನೇಕ ಸಾವಿರ ಸಾಯಕಗಳಿಂದ ಮುಚ್ಚಿಬಿಟ್ಟನು.
07120069a ತೌ ವೃಷಾವಿವ ನರ್ದಂತೌ ನರಸಿಂಹೌ ಮಹಾರಥೌ।
07120069c ಸಾಯಕೌಘಪ್ರತಿಚ್ಚನ್ನಂ ಚಕ್ರತುಃ ಖಮಜಿಹ್ಮಗೈಃ।
07120069e ಅದೃಶ್ಯೌ ಚ ಶರೌಘೈಸ್ತೌ ನಿಘ್ನತಾಮಿತರೇತರಂ।।
ಗೂಳಿಗಳಂತೆ ಗುರುಟುಹಾಕುತ್ತಿದ್ದ ಆ ನರಸಿಂಹ ಮಹಾರಥರು ಸಾಯಕಗಳ ಸಮೂಹಗಳಿಂದ ಪರಸ್ಪರರನ್ನು ಮತ್ತು ಜಿಹ್ಮಗಗಳಿಂದ ಆಕಾಶವನ್ನು ಮುಚ್ಚಿ, ಪರಸ್ಪರರನ್ನು ಕೊಲ್ಲಲು ಬಯಸಿ ಶರೌಘಗಳಿಂದ ಅದೃಶ್ಯರನ್ನಾಗಿಸಿದರು.
07120070a ಪಾರ್ಥೋಽಹಮಸ್ಮಿ ತಿಷ್ಠ ತ್ವಂ ಕರ್ಣೋಽಹಂ ತಿಷ್ಠ ಫಲ್ಗುನ।
07120070c ಇತ್ಯೇವಂ ತರ್ಜಯಂತೌ ತೌ ವಾಕ್ಶಲ್ಯೈಸ್ತುದತಾಂ ತಥಾ।।
“ನಾನು ಪಾರ್ಥ! ನಿಲ್ಲು!” ಎಂದೂ “ನಾನು ಕರ್ಣ! ನಿಲ್ಲು ಫಲ್ಗುನ!” ಎಂದೂ ಕೂಗಿಕೊಳ್ಳುತ್ತಾ ವಾಕ್ಶಲ್ಯಗಳಿಂದ ಚುಚ್ಚುತ್ತಿರುವುದು ಕೇಳಿಬರುತ್ತಿತ್ತು.
07120071a ಯುಧ್ಯೇತಾಂ ಸಮರೇ ವೀರೌ ಚಿತ್ರಂ ಲಘು ಚ ಸುಷ್ಠು ಚ।
07120071c ಪ್ರೇಕ್ಷಣೀಯೌ ಚಾಭವತಾಂ ಸರ್ವಯೋಧಸಮಾಗಮೇ।।
ಸಮರದಲ್ಲಿ ವಿಚಿತ್ರವಾಗಿ, ಲಘುವಾಗಿ ಮತ್ತು ದೃಢವಾಗಿ ಯುದ್ಧಮಾಡುತ್ತಿದ್ದ ಆ ವೀರ ಸರ್ವಯೋಧರ ಸಮಾಗಮದಲ್ಲಿ ಪ್ರೇಕ್ಷಣೀಯವಾಗಿತ್ತು.
07120072a ಪ್ರಶಸ್ಯಮಾನೌ ಸಮರೇ ಸಿದ್ಧಚಾರಣವಾತಿಕೈಃ।
07120072c ಅಯುಧ್ಯೇತಾಂ ಮಹಾರಾಜ ಪರಸ್ಪರವಧೈಷಿಣೌ।।
ಮಹಾರಾಜ! ಸಮರದಲ್ಲಿ ಪರಸ್ಪರರನ್ನು ವಧಿಸಲು ಬಯಸಿ ಯುದ್ಧಮಾಡುತ್ತಿದ್ದ ಅವರನ್ನು ಸಿದ್ಧ-ಚಾರಣರು ಪ್ರಶಂಸಿಸಿದರು.
07120073a ತತೋ ದುರ್ಯೋಧನೋ ರಾಜಂಸ್ತಾವಕಾನಭ್ಯಭಾಷತ।
07120073c ಯತ್ತಾ ರಕ್ಷತ ರಾಧೇಯಂ ನಾಹತ್ವಾ ಸಮರೇಽರ್ಜುನಂ।
07120073e ನಿವರ್ತಿಷ್ಯತಿ ರಾಧೇಯ ಇತಿ ಮಾಮುಕ್ತವಾನ್ವೃಷಃ।।
ರಾಜನ್! ಆಗ ದುರ್ಯೋಧನನು ನಿನ್ನವರಿಗೆ “ರಾಧೇಯನನ್ನು ರಕ್ಷಿಸಿರಿ! ಸಮರದಲ್ಲಿ ಅರ್ಜುನನ್ನು ಸಂಹರಿಸದೇ ಹಿಂದಿರುಗುವುದಿಲ್ಲವೆಂದು ವೃಷನೇ ನನಗೆ ಹೇಳಿದ್ದಾನೆ” ಎಂದು ಹೇಳಿದನು.
07120074a ಏತಸ್ಮಿನ್ನಂತರೇ ರಾಜನ್ದೃಷ್ಟ್ವಾ ಕರ್ಣಸ್ಯ ವಿಕ್ರಮಂ।
07120074c ಆಕರ್ಣಮುಕ್ತೈರಿಷುಭಿಃ ಕರ್ಣಸ್ಯ ಚತುರೋ ಹಯಾನ್।
07120074e ಅನಯನ್ಮೃತ್ಯುಲೋಕಾಯ ಚತುರ್ಭಿಃ ಸಾಯಕೋತ್ತಮೈಃ।।
ರಾಜನ್! ಇದರ ನಡುವೆ ಕರ್ಣನ ವಿಕ್ರಮವನ್ನು ನೋಡಿ ಅರ್ಜುನನು ಆಕರ್ಣವಾಗಿ ಸೆಳೆದು ಬಿಟ್ಟ ನಾಲ್ಕು ಉತ್ತಮ ಸಾಯಕಗಳಿಂದ ಕರ್ಣನ ನಾಲ್ಕೂ ಕುದುರೆಗಳನ್ನು ಮೃತ್ಯುಲೋಕಕ್ಕೆ ಕಳುಹಿಸಿಬಿಟ್ಟನು.
07120075a ಸಾರಥಿಂ ಚಾಸ್ಯ ಭಲ್ಲೇನ ರಥನೀಡಾದಪಾಹರತ್।
07120075c ಚಾದಯಾಮಾಸ ಚ ಶರೈಸ್ತವ ಪುತ್ರಸ್ಯ ಪಶ್ಯತಃ।।
ಭಲ್ಲದಿಂದ ಅವನ ಸಾರಥಿಯನ್ನು ರಥದ ನೊಗದ ಮೇಲಿಂದ ಬೀಳಿಸಿದನು. ನಿನ್ನ ಮಗನು ನೋಡುತ್ತಿದ್ದಂತೆಯೇ ಶರಗಳಿಂದ ಅವನನ್ನು ಮುಚ್ಚಿಬಿಟ್ಟನು.
07120076a ಸ ಚಾದ್ಯಮಾನಃ ಸಮರೇ ಹತಾಶ್ವೋ ಹತಸಾರಥಿಃ।
07120076c ಮೋಹಿತಃ ಶರಜಾಲೇನ ಕರ್ತವ್ಯಂ ನಾಭ್ಯಪದ್ಯತ।।
ಸಮರದಲ್ಲಿ ಹೀಗೆ ಕುದುರೆಗಳು ಮತ್ತು ಸಾರಥಿಯು ಹತರಾಗಲು, ಶರಜಾಲಗಳಿಂದ ಮುಚ್ಚಲ್ಪಟ್ಟು ಮೋಹಿತನಾದ ಅವನಿಗೆ ಏನು ಮಾಡಬೇಕೆಂದು ತೋಚದಾಯಿತು.
07120077a ತಂ ತಥಾ ವಿರಥಂ ದೃಷ್ಟ್ವಾ ರಥಮಾರೋಪ್ಯ ಸ್ವಂ ತದಾ।
07120077c ಅಶ್ವತ್ಥಾಮಾ ಮಹಾರಾಜ ಭೂಯೋಽರ್ಜುನಮಯೋಧಯತ್।।
ಮಹಾರಾಜ! ಆಗ ಅವನು ವಿರಥನಾದುದನ್ನು ಕಂಡು ಅಶ್ವತ್ಥಾಮನು ಅವನನ್ನು ತನ್ನ ರಥದಲ್ಲಿ ಏರಿಸಿಕೊಂಡು ಮತ್ತೆ ಅರ್ಜುನನೊಂದಿಗೆ ಯುದ್ಧದಲ್ಲಿ ತೊಡಗಿದನು.
07120078a ಮದ್ರರಾಜಸ್ತು ಕೌಂತೇಯಮವಿಧ್ಯತ್ತ್ರಿಂಶತಾ ಶರೈಃ।
07120078c ಶಾರದ್ವತಸ್ತು ವಿಂಶತ್ಯಾ ವಾಸುದೇವಂ ಸಮಾರ್ಪಯತ್।
07120078e ಧನಂಜಯಂ ದ್ವಾದಶಭಿರಾಜಘಾನ ಶಿಲೀಮುಖೈಃ।।
ಮದ್ರರಾಜನಾದರೋ ಕೌಂತೇಯನನ್ನು ಮೂವತ್ತು ಬಾಣಗಳಿಂದ ಪ್ರಹರಿಸಿದನು. ಶಾರದ್ವತನಾದರೋ ಇಪ್ಪತ್ತರಿಂದ ವಾಸುದೇವನನ್ನು ಹೊಡೆದು, ಹನ್ನೆರಡು ಶಿಲೀಮುಖಗಳಿಂದ ಹೊಡೆದನು.
07120079a ಚತುರ್ಭಿಃ ಸಿಂಧುರಾಜಶ್ಚ ವೃಷಸೇನಶ್ಚ ಸಪ್ತಭಿಃ।
07120079c ಪೃಥಕ್ಪೃಥಂ ಮಹಾರಾಜ ಕೃಷ್ಣಪಾರ್ಥಾವವಿಧ್ಯತಾಂ।।
ಮಹಾರಾಜ! ಸಿಂಧುರಾಜನು ನಾಲ್ಕರಿಂದ ಮತ್ತು ವೃಷಸೇನನು ಏಳರಿಂದ ಪ್ರತ್ಯೇಕ ಪ್ರತ್ಯೇಕವಾಗಿ ಕೃಷ್ಣ-ಪಾರ್ಥರನ್ನು ಹೊಡೆದರು.
07120080a ತಥೈವ ತಾನ್ಪ್ರತ್ಯವಿಧ್ಯತ್ಕುಂತೀಪುತ್ರೋ ಧನಂಜಯಃ।
07120080c ದ್ರೋಣಪುತ್ರಂ ಚತುಃಷಷ್ಟ್ಯಾ ಮದ್ರರಾಜಂ ಶತೇನ ಚ।।
07120081a ಸೈಂಧವಂ ದಶಭಿರ್ಭಲ್ಲೈರ್ವೃಷಸೇನಂ ತ್ರಿಭಿಃ ಶರೈಃ।
07120081c ಶಾರದ್ವತಂ ಚ ವಿಂಶತ್ಯಾ ವಿದ್ಧ್ವಾ ಪಾರ್ಥಃ ಸಮುನ್ನದತ್।।
ಹಾಗೆಯೇ ಅವರನ್ನು ಕುಂತೀಪುತ್ರ ಧನಂಜಯನು ಪ್ರತಿಯಾಗಿ ಹೊಡೆದನು. ದ್ರೋಣಪುತ್ರನನ್ನು ಅರವತ್ನಾಲ್ಕರಿಂದ, ಮದ್ರರಾಜನನ್ನು ನೂರರಿಂದ, ಸೈಂಧವನನ್ನು ಹತ್ತು ಭಲ್ಲಗಳಿಂದ, ವೃಷಸೇನನನ್ನು ಮುರು ಶರಗಳಿಂದ, ಶಾರದ್ವತನನ್ನು ಇಪ್ಪತ್ತರಿಂದ ಹೊಡೆದು ಪಾರ್ಥನು ಜೋರಾಗಿ ಗರ್ಜಿಸಿದನು.
07120082a ತೇ ಪ್ರತಿಜ್ಞಾಪ್ರತೀಘಾತಮಿಚ್ಚಂತಃ ಸವ್ಯಸಾಚಿನಃ।
07120082c ಸಹಿತಾಸ್ತಾವಕಾಸ್ತೂರ್ಣಮಭಿಪೇತುರ್ಧನಂಜಯಂ।।
ಸವ್ಯಸಾಚಿಯ ಪ್ರತಿಜ್ಞೆಯನ್ನು ಪ್ರತೀಘಾತಗೊಳಿಸಲು ಇಚ್ಛಿಸಿ ನಿನ್ನವರೆಲ್ಲರೂ ಒಟ್ಟಿಗೇ ತಕ್ಷಣವೇ ಧನಂಜಯನ ಮೇಲೆ ಎರಗಿದರು.
07120083a ಅಥಾರ್ಜುನಃ ಸರ್ವತೋಧಾರಮಸ್ತ್ರಂ ಪ್ರಾದುಶ್ಚಕ್ರೇ ತ್ರಾಸಯನ್ಧಾರ್ತರಾಷ್ಟ್ರಾನ್।
07120083c ತಂ ಪ್ರತ್ಯುದೀಯುಃ ಕುರವಃ ಪಾಂಡುಸೂನುಂ ರಥೈರ್ಮಹಾರ್ಹೈಃ ಶರವರ್ಷಾಣ್ಯವರ್ಷನ್।।
ಆಗ ಅರ್ಜುನನು ಧಾರ್ತರಾಷ್ಟ್ರರನ್ನು ಭಯಪಡಿಸುತ್ತ ಸರ್ವತ್ರ ವಾರುಣಾಸ್ತ್ರವನ್ನು ಪ್ರಕಟಪಡಿಸಿದನು. ಅದಕ್ಕೆ ಪ್ರತಿಯಾಗಿ ಕುರುಗಳು ಮಹಾಮೂಲ್ಯ ರಥಗಳ ಮೇಲಿಂದ ಪಾಂಡುಪುತ್ರನ ಮೇಲೆ ಶರವರ್ಷಗಳನ್ನು ಸುರಿಸಿದರು.
07120084a ತತಸ್ತು ತಸ್ಮಿಂಸ್ತುಮುಲೇ ಸಮುತ್ಥಿತೇ ಸುದಾರುಣೇ ಭಾರತ ಮೋಹನೀಯೇ।
07120084c ನಾಮುಹ್ಯತ ಪ್ರಾಪ್ಯ ಸ ರಾಜಪುತ್ರಃ ಕಿರೀಟಮಾಲೀ ವಿಸೃಜನ್ಪೃಷತ್ಕಾನ್।।
ಭಾರತ! ಭ್ರಾಂತಗೊಳಿಸುವ, ಆ ಸುದಾರುಣ ತುಮುಲ ಯುದ್ಧವು ಪ್ರಾರಂಭವಾಗಲು ರಾಜಪುತ್ರ ಕಿರೀಟಮಾಲಿಯು ಮಾತ್ರ ಸ್ವಲ್ಪವೂ ಭ್ರಾಂತನಾಗದೇ ಬಾಣಗಳ ಸಮೂಹಗಳನ್ನು ಪ್ರಯೋಗಿಸುತ್ತಲೇ ಇದ್ದನು.
07120085a ರಾಜ್ಯಪ್ರೇಪ್ಸುಃ ಸವ್ಯಸಾಚೀ ಕುರೂಣಾಂ ಸ್ಮರನ್ಕ್ಲೇಶಾನ್ದ್ವಾದಶವರ್ಷವೃತ್ತಾನ್।
07120085c ಗಾಂಡೀವಮುಕ್ತೈರಿಷುಭಿರ್ಮಹಾತ್ಮಾ ಸರ್ವಾ ದಿಶೋ ವ್ಯಾವೃಣೋದಪ್ರಮೇಯೈಃ।।
ರಾಜ್ಯವನ್ನು ಪಡೆಯಬೇಕೆಂದು ಬಯಸುತ್ತಿದ್ದ ಮಹಾತ್ಮ ಸವ್ಯಸಾಚಿಯು, ಹನ್ನೆರಡು ವರ್ಷಗಳು ಕುರುಗಳು ನೀಡಿದ ಕ್ಲೇಶಗಳನ್ನು ಸ್ಮರಿಸಿಕೊಳ್ಳುತ್ತಾ ಗಾಂಡೀವದಿಂದ ಹೊರಟ ಬಾಣಗಳಿಂದ ಸರ್ವ ದಿಕ್ಕುಗಳನ್ನೂ ಮುಚ್ಚಿದನು.
07120086a ಪ್ರದೀಪ್ತೋಲ್ಕಮಭವಚ್ಚಾಂತರಿಕ್ಷಂ ದೇಹೇಷು ಭೂರೀಣ್ಯಪತನ್ವಯಾಂಸಿ।
07120086c ಯತ್ ಪಿಂಗಲಜ್ಯೇನ ಕಿರೀಟಮಾಲೀ ಕ್ರುದ್ಧೋ ರಿಪೂನಾಜಗವೇನ ಹಂತಿ।।
ಕ್ರುದ್ಧನಾದ ಕಿರೀಟಿಯು ಪಿಂಗಳವರ್ಣದ ಮೌರ್ವಿಯಿಂದ ವೇಗವಾಗಿ ಶತ್ರುಗಳನ್ನು ಕೊಲ್ಲುತ್ತಿರುವಾಗ ಆಕಾಶವು ಉಲ್ಕೆಗಳಿಂದಲೋ ಎಂಬಂತೆ ಪ್ರದೀಪ್ತವಾಗಿತ್ತು. ಕೆಳಗೆ ಬಿದ್ದ ದೇಹಗಳ ಮೇಲೆ ಕಾಗೆಗಳು ಬಂದು ಬೀಳುತ್ತಿದ್ದವು.
07120087a ಕಿರೀಟಮಾಲೀ ಮಹತಾ ಮಹಾಯಶಾಃ ಶರಾಸನೇನಾಸ್ಯ ಶರಾನನೀಕಜಿತ್।
07120087c ಹಯಪ್ರವೇಕೋತ್ತಮನಾಗಧೂರ್ಗತಾನ್ ಕುರುಪ್ರವೀರಾನಿಷುಭಿರ್ನ್ಯಪಾತಯತ್।।
ಮಹಾಯಶಸ್ವೀ ಸೇನೆಗಳನ್ನು ಗೆಲ್ಲುವ ಕಿರೀಟಮಾಲಿಯು ಮಹಾ ಧನುಸ್ಸಿನಿಂದ ಬಿಟ್ಟ ಬಾಣಗಳಿಂದ ಕುದುರೆಗಳ ಮೇಲೆ ಮತ್ತು ಉತ್ತಮ ಆನೆಗಳ ಮೇಲೆ ಕುಳಿತಿದ್ದ ಕುರುಪ್ರವೀರರನ್ನು ಕೆಡವಿದನು.
07120088a ಗದಾಶ್ಚ ಗುರ್ವೀಃ ಪರಿಘಾನಯಸ್ಮಯಾನ್ ಅಸೀಂಶ್ಚ ಶಕ್ತೀಶ್ಚ ರಣೇ ನರಾಧಿಪಾಃ।
07120088c ಮಹಾಂತಿ ಶಸ್ತ್ರಾಣಿ ಚ ಭೀಮದರ್ಶನಾಃ ಪ್ರಗೃಹ್ಯ ಪಾರ್ಥಂ ಸಹಸಾಭಿದುದ್ರುವುಃ।।
ರಣದಲ್ಲಿ ನರಾಧಿಪರು ಭಾರ ಗದೆಗಳನ್ನೂ, ಕಬ್ಬಿಣದ ಪರಿಘಗಳನ್ನೂ, ಖಡ್ಗಗಳನ್ನೂ, ಶಕ್ತಿಗಳನ್ನೂ, ಭೀಮದರ್ಶನ ಮಹಾ ಶಸ್ತ್ರಗಳನ್ನೂ ಹಿಡಿದು ಪಾರ್ಥನ ಮೇಲೆ ಒಮ್ಮೆಲೇ ಆಕ್ರಮಣ ಮಾಡಿದರು.
07120089a ಸ ತಾನುದೀರ್ಣಾನ್ಸರಥಾಶ್ವವಾರಣಾನ್ ಪದಾತಿಸಂಘಾಂಶ್ಚ ಮಹಾಧನುರ್ಧರಃ।
07120089c ವಿಪನ್ನಸರ್ವಾಯುಧಜೀವಿತಾನ್ರಣೇ ಚಕಾರ ವೀರೋ ಯಮರಾಷ್ಟ್ರವರ್ಧನಾನ್।।
ಯಮರಾಷ್ಟ್ರವರ್ಧಕ ಮಹಾಧನುರ್ಧರ ವೀರನು ನುಗ್ಗಿಬರುತ್ತಿರುವ ರಥ-ಕುದುರೆ-ಆನೆ-ಪದಾತಿಸಂಘಗಳನ್ನು ಆಯುಧರಹಿತರನ್ನಾಗಿಯೂ ಜೀವರಹಿತರನ್ನಾಗಿಯೂ ಮಾಡಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಂಕುಲಯುದ್ಧೇ ವಿಂಶಾಧಿಕಶತತಮೋಽಧ್ಯಾಯಃ ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಂಕುಲಯುದ್ಧ ಎನ್ನುವ ನೂರಾಇಪ್ಪತ್ತನೇ ಅಧ್ಯಾಯವು.