ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 119
ಸಾರ
ಸಾತ್ಯಕಿ-ಭೂರಿಶ್ರವಸರ ಉತ್ಪತ್ತಿ; ವೃಷ್ಣಿಗಳ ಪ್ರಶಂಸೆ (1-28).
07119001 ಧೃತರಾಷ್ಟ್ರ ಉವಾಚ।
07119001a ಅಜಿತೋ ದ್ರೋಣರಾಧೇಯವಿಕರ್ಣಕೃತವರ್ಮಭಿಃ।
07119001c ತೀರ್ಣಃ ಸೈನ್ಯಾರ್ಣವಂ ವೀರಃ ಪ್ರತಿಶ್ರುತ್ಯ ಯುಧಿಷ್ಠಿರೇ।।
ಧೃತರಾಷ್ಟ್ರನು ಹೇಳಿದನು: “ಯುಧಿಷ್ಠಿರನಿಗೆ ಪ್ರತಿಯಾಗಿ ಹೇಳಿ ಆ ವೀರನು ದ್ರೋಣ-ರಾಧೇಯ-ವಿಕರ್ಣ-ಕೃತವರ್ಮರಿಗೂ ಸೋಲದೇ ಆ ಸೈನ್ಯವೆಂಬ ಸಾಗರವನ್ನು ದಾಟಿದನು.
07119002a ಸ ಕಥಂ ಕೌರವೇಯೇಣ ಸಮರೇಷ್ವನಿವಾರಿತಃ।
07119002c ನಿಗೃಹ್ಯ ಭೂರಿಶ್ರವಸಾ ಬಲಾದ್ಭುವಿ ನಿಪಾತಿತಃ।।
ಸಮರದಲ್ಲಿ ಕೌರವೇಯರ್ಯಾರಿಂದಲೂ ತಡೆಯಲ್ಪಡದ ಅವನು ಹೇಗೆ ತಾನೇ ಭೂರಿಶ್ರವಸನ ಹಿಡಿತಕ್ಕೆ ಬಂದು ಬಲಾತ್ಕಾರವಾಗಿ ಭೂಮಿಯ ಮೇಲೆ ಕೆಡವಲ್ಪಟ್ಟನು?”
07119003 ಸಂಜಯ ಉವಾಚ।
07119003a ಶೃಣು ರಾಜನ್ನಿಹೋತ್ಪತ್ತಿಂ ಶೈನೇಯಸ್ಯ ಯಥಾ ಪುರಾ।
07119003c ಯಥಾ ಚ ಭೂರಿಶ್ರವಸೋ ಯತ್ರ ತೇ ಸಂಶಯೋ ನೃಪ।।
ಸಂಜಯನು ಹೇಳಿದನು: “ರಾಜನ್! ನೃಪ! ನಿನಗೆ ಏನು ಸಂಶಯವಿದೆಯೋ ಅದನ್ನು ಹಿಂದೆ ನಡೆದ ಶೈನೇಯನ ಮತ್ತು ಭೂರಿಶ್ರವಸನ ಉತ್ಪತ್ತಿಯ ಕುರಿತು ಹೇಳಿ ಹೋಗಲಾಡಿಸುತ್ತೇನೆ. ಕೇಳು.
07119004a ಅತ್ರೇಃ ಪುತ್ರೋಽಭವತ್ಸೋಮಃ ಸೋಮಸ್ಯ ತು ಬುಧಃ ಸ್ಮೃತಃ।
07119004c ಬುಧಸ್ಯಾಸೀನ್ಮಹೇಂದ್ರಾಭಃ ಪುತ್ರ ಏಕಃ ಪುರೂರವಾಃ।।
ಅತ್ರಿಯ ಮಗನು ಸೋಮ. ಸೋಮನ ಮಗ ಬುಧನೆಂದು ಕೇಳಿದ್ದೇವೆ. ಬುಧನಿಗೆ ಮಹೇಂದ್ರ ಪ್ರಕಾಶದ ಪುರೂರವನೆಂಬ ಒಬ್ಬ ಮಗನಿದ್ದನು.
07119005a ಪುರೂರವಸ ಆಯುಸ್ತು ಆಯುಷೋ ನಹುಷಃ ಸ್ಮೃತಃ।
07119005c ನಹುಷಸ್ಯ ಯಯಾತಿಸ್ತು ರಾಜರ್ಷಿರ್ದೇವಸಮ್ಮಿತಃ।।
ಪುರೂರವನ ಮಗ ಆಯು. ಆಯುವಿನ ಮಗ ನಹುಷನೆಂದು ಹೇಳುತ್ತಾರೆ. ನಹುಷನಿಗೆ ಯಯಾತಿ – ರಾಜರ್ಷಿ ದೇವಸಮ್ಮಿತ - ಮಗನು.
07119006a ಯಯಾತೇದೇವಯಾನ್ಯಾಂ ತು ಯದುರ್ಜ್ಯೇಷ್ಠೋಽಭವತ್ಸುತಃ।
07119006c ಯದೋರಭೂದನ್ವವಾಯೇ ದೇವಮೀಢ ಇತಿ ಶ್ರುತಃ।।
ಯಯಾತಿಗೆ ದೇವಯಾನಿಯಲ್ಲಿ ಯದುವೆಂಬ ಜ್ಯೇಷ್ಠಮಗನಾದನು. ಯದುವಿನ ವಂಶದಲ್ಲಿ ದೇವಮೀಢನೆಂಬ ಪ್ರಸಿದ್ಧನಾದವನು ಹುಟ್ಟಿದನು.
07119007a ಯಾದವಸ್ತಸ್ಯ ಚ ಸುತಃ ಶೂರಸ್ತ್ರೈಲೋಕ್ಯಸಮ್ಮತಃ।
07119007c ಶೂರಸ್ಯ ಶೌರಿರ್ನೃವರೋ ವಸುದೇವೋ ಮಹಾಯಶಾಃ।।
ಯಾದವನಾದ ಅವನ ಮಗನೇ ತ್ರೈಲೋಕ್ಯಸಮ ಶೂರ. ಶೂರನ ಮಗ ಶೌರಿ - ವಾಸುದೇವನೆಂದೂ ಪ್ರಸಿದ್ಧನಾದವನು.
07119008a ಧನುಷ್ಯನವರಃ ಶೂರಃ ಕಾರ್ತವೀರ್ಯಸಮೋ ಯುಧಿ।
07119008c ತದ್ವೀರ್ಯಶ್ಚಾಪಿ ತತ್ರೈವ ಕುಲೇ ಶಿನಿರಭೂನ್ನೃಪಃ।।
ಅವನು ಧನುರ್ವಿದ್ಯೆಯಲ್ಲಿ ಶ್ರೇಷ್ಠನೂ, ಯುದ್ಧದಲ್ಲಿ ಕಾರ್ತವೀರ್ಯಸಮನೂ ಆಗಿದ್ದನು. ಅದೇ ವೀರ್ಯ ಕುಲದಲ್ಲಿ ಶಿನಿಯೆಂಬ ರಾಜನೂ ಹುಟ್ಟಿದನು.
07119009a ಏತಸ್ಮಿನ್ನೇವ ಕಾಲೇ ತು ದೇವಕಸ್ಯ ಮಹಾತ್ಮನಃ।
07119009c ದುಹಿತುಃ ಸ್ವಯಂವರೇ ರಾಜನ್ಸರ್ವಕ್ಷತ್ರಸಮಾಗಮೇ।।
ರಾಜನ್! ಇದೇ ಸಮಯದಲ್ಲಿ ಮಹಾತ್ಮ ದೇವಕನ ಮಗಳ ಸ್ವಯಂವರಕ್ಕೆ ಸರ್ವ ಕ್ಷತ್ರಿಯರೂ ಬಂದು ಸೇರಿದ್ದರು.
07119010a ತತ್ರ ವೈ ದೇವಕೀಂ ದೇವೀಂ ವಸುದೇವಾರ್ಥಮಾಪ್ತವಾನ್।
07119010c ನಿರ್ಜಿತ್ಯ ಪಾರ್ಥಿವಾನ್ಸರ್ವಾನ್ರಥಮಾರೋಪಯಚ್ಚಿನಿಃ।।
ಅಲ್ಲಿ ದೇವೀ ದೇವಕಿಯನ್ನು ವಸುದೇವನಿಗೋಸ್ಕರವಾಗಿ ಶಿನಿಯು ಸರ್ವ ಪಾರ್ಥಿವರನ್ನೂ ಸೋಲಿಸಿ ತನ್ನ ರಥದ ಮೇಲೆ ಏರಿಸಿಕೊಂಡನು.
07119011a ತಾಂ ದೃಷ್ಟ್ವಾ ದೇವಕೀಂ ಶೌರೇ ರಥಸ್ಥಾಂ ಪುರುಷರ್ಷಭಃ।
07119011c ನಾಮೃಷ್ಯತ ಮಹಾತೇಜಾಃ ಸೋಮದತ್ತಃ ಶಿನೇರ್ನೃಪ।।
ಶೌರಿ ಶಿನಿಯ ರಥದಲ್ಲಿ ದೇವಕಿಯನ್ನು ಕಂಡು ಪುರುಷರ್ಷಭ ಮಹಾತೇಜಸ್ವಿ ನೃಪ ಸೋಮದತ್ತನು ಸಹಿಸಿಕೊಳ್ಳಲಿಲ್ಲ.
07119012a ತಯೋರ್ಯುದ್ಧಮಭೂದ್ರಾಜನ್ದಿನಾರ್ಧಂ ಚಿತ್ರಮದ್ಭುತಂ।
07119012c ಬಾಹುಯುದ್ಧಂ ಸುಬಲಿನೋಃ ಶಕ್ರಪ್ರಹ್ರಾದಯೋರಿವ।।
ರಾಜನ್! ಅವರಿಬ್ಬರು ಬಲಶಾಲಿಗಳ ನಡುವೆ ಶಕ್ರ-ಪ್ರಹ್ರಾದರ ನಡುವೆ ಹೇಗೋ ಹಾಗೆ ಅರ್ಧದಿನದ ವಿಚಿತ್ರವೂ ಅದ್ಭುತವೂ ಆದ ಬಾಹುಯುದ್ಧವು ನಡೆಯಿತು.
07119013a ಶಿನಿನಾ ಸೋಮದತ್ತಸ್ತು ಪ್ರಸಹ್ಯ ಭುವಿ ಪಾತಿತಃ।
07119013c ಅಸಿಮುದ್ಯಮ್ಯ ಕೇಶೇಷು ಪ್ರಗೃಹ್ಯ ಚ ಪದಾ ಹತಃ।।
ಶಿನಿಯು ಜೋರಾಗಿ ನಗುತ್ತಾ ಸೋಮದತ್ತನನ್ನು ನೆಲದ ಮೇಲೆ ಕೆಡವಿ ಕೂದಲುಗಳನ್ನು ಹಿಡಿದು ಖಡ್ಗವನ್ನೆತ್ತಿ ಕಾಲಿನಿಂದ ಒದೆದನು.
07119014a ಮಧ್ಯೇ ರಾಜಸಹಸ್ರಾಣಾಂ ಪ್ರೇಕ್ಷಕಾಣಾಂ ಸಮಂತತಃ।
07119014c ಕೃಪಯಾ ಚ ಪುನಸ್ತೇನ ಜೀವೇತಿ ಸ ವಿಸರ್ಜಿತಃ।।
ಸುತ್ತಲೂ ನೆರೆದಿದ್ದ ಸಹಸ್ರಾರು ರಾಜರುಗಳು ನೋಡುತ್ತಿರಲು ಮಧ್ಯದಲ್ಲಿದ್ದ ಅವನನ್ನು “ಪುನಃ ಜೀವಿಸು!” ಎಂದು ಹೇಳಿ ಬಿಟ್ಟುಬಿಟ್ಟನು.
07119015a ತದವಸ್ಥಃ ಕೃತಸ್ತೇನ ಸೋಮದತ್ತೋಽಥ ಮಾರಿಷ।
07119015c ಪ್ರಸಾದಯನ್ಮಹಾದೇವಮಮರ್ಷವಶಮಾಸ್ಥಿತಃ।।
ಮಾರಿಷ! ಅವನಿಂದ ಆ ಅವಸ್ಥೆಗೆ ತರಿಸಲ್ಪಟ್ಟ ಸೋಮದತ್ತನು ಕೋಪಾವಿಷ್ಟನಾಗಿ ಮಹಾದೇವನನ್ನು ಒಲಿಸಿದನು.
07119016a ತಸ್ಯ ತುಷ್ಟೋ ಮಹಾದೇವೋ ವರಾಣಾಂ ವರದಃ ಪ್ರಭುಃ।
07119016c ವರೇಣ ಚಂದಯಾಮಾಸ ಸ ತು ವವ್ರೇ ವರಂ ನೃಪಃ।।
ಆಗ ವರಗಳ ವರದ ಪ್ರಭು ಮಹಾದೇವನು ಅವನ ಮೇಲೆ ತುಷ್ಟನಾಗಿ ವರವನ್ನು ನೀಡಲು ಆ ನೃಪನು ಈ ವರವನ್ನು ಬೇಡಿಕೊಂಡನು:
07119017a ಪುತ್ರಮಿಚ್ಚಾಮಿ ಭಗವನ್ಯೋ ನಿಹನ್ಯಾಚ್ಚಿನೇಃ ಸುತಂ69।
07119017c ಮಧ್ಯೇ ರಾಜಸಹಸ್ರಾಣಾಂ ಪದಾ ಹನ್ಯಾಚ್ಚ ಸಂಯುಗೇ।।
“ಭಗವನ್! ರಾಜಸಹಸ್ರರ ಮಧ್ಯೆ ಶಿನಿಯ ಮಗನನ್ನು ಸಂಯುಗದಲ್ಲಿ ಕಾಲಿನಿಂದ ಒದೆದು ಸಂಹರಿಸುವಂಥಹ ಮಗನನ್ನು ಬಯಸುತ್ತೇನೆ.”
07119018a ತಸ್ಯ ತದ್ವಚನಂ ಶ್ರುತ್ವಾ ಸೋಮದತ್ತಸ್ಯ ಪಾರ್ಥಿವ।
07119018c ಏವಮಸ್ತ್ವಿತಿ ತತ್ರೋಕ್ತ್ವಾ ಸ ದೇವೋಽಂತರಧೀಯತ।।
ಪಾರ್ಥಿವ! ಸೋಮದತ್ತನ ಆ ಮಾತನ್ನು ಕೇಳಿ “ಹೀಗೆಯೇ ಆಗಲಿ!” ಎಂದು ಹೇಳಿ ದೇವನು ಅಂತರ್ಧಾನನಾದನು.
07119019a ಸ ತೇನ ವರದಾನೇನ ಲಬ್ಧವಾನ್ಭೂರಿದಕ್ಷಿಣಂ।
07119019c ನ್ಯಪಾತಯಚ್ಚ ಸಮರೇ ಸೌಮದತ್ತಿಃ ಶಿನೇಃ ಸುತಂ।।
ಅದೇ ವರದಾನದಿಂದ ಅವನು ಭೂರಿದಕ್ಷಿಣನನ್ನು ಪಡೆದನು. ಮತ್ತು ಸಮರದಲ್ಲಿ ಸೌಮದತ್ತಿಯು ಶಿನಿಯ ಮಗನನ್ನು ಕೆಡವಿದನು.
07119020a ಏತತ್ತೇ ಕಥಿತಂ ರಾಜನ್ಯನ್ಮಾಂ ತ್ವಂ ಪರಿಪೃಚ್ಚಸಿ।
07119020c ನ ಹಿ ಶಕ್ಯಾ ರಣೇ ಜೇತುಂ ಸಾತ್ವತಾ ಮನುಜರ್ಷಭ।।
ರಾಜನ್! ಕೇಳಿದೆಯೆಂದು ನಾನು ನಿನಗೆ ಈ ಕಥೆಯನ್ನು ಹೇಳಿದ್ದೇನೆ. ಮನುಜರ್ಷಭ! ರಣದಲ್ಲಿ ಸಾತ್ವತನನ್ನು ಗೆಲ್ಲುವುದು ಶಕ್ಯವಿಲ್ಲ.
07119021a ಲಬ್ಧಲಕ್ಷ್ಯಾಶ್ಚ ಸಂಗ್ರಾಮೇ ಬಹವಶ್ಚಿತ್ರಯೋಧಿನಃ।
07119021c ದೇವದಾನವಗಂಧರ್ವಾನ್ವಿಜೇತಾರೋ ಹ್ಯವಿಸ್ಮಿತಾಃ।
07119021e ಸ್ವವೀರ್ಯವಿಜಯೇ ಯುಕ್ತಾ ನೈತೇ ಪರಪರಿಗ್ರಹಾಃ।।
ಸಂಗ್ರಾಮದಲ್ಲಿ ಲಕ್ಷ್ಯವನ್ನು ಹಿಡಿದಿಟ್ಟುಕೊಳ್ಳುವವರೂ, ಬಹಳ ವಿಚಿತ್ರ ಯೋಧಿಗಳೂ ಆದ ಇವರು ದೇವ-ದಾನವ-ಗಂಧರ್ವರಿಗೂ ಅಜೇಯರು. ಆದರೂ ಇವರಲ್ಲಿ ಗರ್ವವಿಲ್ಲ. ತಮ್ಮದೇ ವೀರ್ಯವನ್ನು ಬಳಸಿ ವಿಜಯಹೊಂದುವವರು. ಪರಾಧೀನರಾಗತಕ್ಕವರಲ್ಲ.
07119022a ನ ತುಲ್ಯಂ ವೃಷ್ಣಿಭಿರಿಹ ದೃಶ್ಯತೇ ಕಿಂ ಚನ ಪ್ರಭೋ।
07119022c ಭೂತಂ ಭವ್ಯಂ ಭವಿಷ್ಯಚ್ಚ ಬಲೇನ ಭರತರ್ಷಭ।।
ಭರತರ್ಷಭ! ಪ್ರಭೋ! ಬಲದಲ್ಲಿ ವೃಷ್ಣಿಗಳಿಗೆ ಸಮಾನರಾದವರು ಯಾರೂ ಇರಲಿಲ್ಲ, ಇಲ್ಲ ಮತ್ತು ಇರುವುದಿಲ್ಲ.
07119023a ನ ಜ್ಞಾತಿಮವಮನ್ಯಂತೇ ವೃದ್ಧಾನಾಂ ಶಾಸನೇ ರತಾಃ।
07119023c ನ ದೇವಾಸುರಗಂಧರ್ವಾ ನ ಯಕ್ಷೋರಗರಾಕ್ಷಸಾಃ।
07119023e ಜೇತಾರೋ ವೃಷ್ಣಿವೀರಾಣಾಂ ನ ಪುನರ್ಮಾನುಷಾ ರಣೇ।।
ತಮ್ಮವರನ್ನು ಅಪಮಾನಿಸದ, ವೃದ್ಧರ ಶಾಸನದಲ್ಲಿ ನಡೆದುಕೊಳ್ಳುವ ವೃಷ್ಣಿವೀರರನ್ನು ಜಯಿಸುವವರು ದೇವ-ಅಸುರ-ಗಂಧರ್ವ-ಯಕ್ಷ-ಉರಗ-ರಾಕ್ಷಸರಲ್ಲಿ ಇಲ್ಲ. ಇನ್ನು ಮನುಷ್ಯರ ರಣದಲ್ಲಿಯೂ ಇಲ್ಲ.
07119024a ಬ್ರಹ್ಮದ್ರವ್ಯೇ ಗುರುದ್ರವ್ಯೇ ಜ್ಞಾತಿದ್ರವ್ಯೇಽಪ್ಯಹಿಂಸಕಾಃ।
07119024c ಏತೇಷಾಂ ರಕ್ಷಿತಾರಶ್ಚ ಯೇ ಸ್ಯುಃ ಕಸ್ಯಾಂ ಚಿದಾಪದಿ।।
ಬ್ರಾಹ್ಮಣ-ಗುರು-ದಾಯಾದಿಗಳ ಆಸ್ತಿಗೆ ಅಸೆಪಟ್ಟು ಹಿಂಸೆಮಾಡುವವರಲ್ಲ. ಬದಲಾಗಿ ಇವರನ್ನು ರಕ್ಷಿಸುವವರು. ಆಪತ್ತಿನಲ್ಲಿ ಸಹಾಯಮಾಡುವವರು.
07119025a ಅರ್ಥವಂತೋ ನ ಚೋತ್ಸಿಕ್ತಾ ಬ್ರಹ್ಮಣ್ಯಾಃ ಸತ್ಯವಾದಿನಃ।
07119025c ಸಮರ್ಥಾನ್ನಾವಮನ್ಯಂತೇ ದೀನಾನಭ್ಯುದ್ಧರಂತಿ ಚ।।
ಧನವಂತರಾಗಿದ್ದರೂ ಅಭಿಮಾನವುಳ್ಳದವರು. ಬ್ರಹ್ಮಣ್ಯರು. ಸತ್ಯವಾದಿಗಳು. ಸಮರ್ಥರನ್ನು ಅಪಮಾನಿಸದವರು. ದೀನರನ್ನು ಅಭಿವೃದ್ಧಿಗೊಳಿಸುವವರು.
07119026a ನಿತ್ಯಂ ದೇವಪರಾ ದಾಂತಾ ದಾತಾರಶ್ಚಾವಿಕತ್ಥನಾಃ।
07119026c ತೇನ ವೃಷ್ಣಿಪ್ರವೀರಾಣಾಂ ಚಕ್ರಂ ನ ಪ್ರತಿಹನ್ಯತೇ।।
ನಿತ್ಯವೂ ದೇವಪರರು. ದಾಂತರು. ದಾತಾರರು. ಕೊಚ್ಚಿಕೊಳ್ಳದವರು. ಆ ವೃಷ್ಣಿಪ್ರವೀರರು ನಾಶಹೊಂದದವರು.
07119027a ಅಪಿ ಮೇರುಂ ವಹೇತ್ಕಶ್ಚಿತ್ತರೇದ್ವಾ ಮಕರಾಲಯಂ।
07119027c ನ ತು ವೃಷ್ಣಿಪ್ರವೀರಾಣಾಂ ಸಮೇತ್ಯಾಂತಂ ವ್ರಜೇನ್ನೃಪ।।
ನೃಪ! ಮೇರು ಪರ್ವತವನ್ನಾದರೂ ಎತ್ತಿಬಿಡಬಹುದು. ಸಮುದ್ರವನ್ನಾದರೂ ಈಜಿ ದಾಟಬಹುದು. ಆದರೆ ವೃಷ್ಣಿಪ್ರವೀರರ ಸಂಘವನ್ನು ಗೆಲ್ಲಲಾಗದು.
07119028a ಏತತ್ತೇ ಸರ್ವಮಾಖ್ಯಾತಂ ಯತ್ರ ತೇ ಸಂಶಯೋ ವಿಭೋ।
07119028c ಕುರುರಾಜ ನರಶ್ರೇಷ್ಠ ತವ ಹ್ಯಪನಯೋ ಮಹಾನ್।।
ವಿಭೋ! ಕುರುರಾಜ! ನರಶ್ರೇಷ್ಠ! ನಿನಗೆ ಸಂಶವಿರುವಲ್ಲಿ ಎಲ್ಲವನ್ನೂ ಹೇಳಿದ್ದೇನೆ. ಏಕೆಂದರೆ ಇದು ನಿನ್ನ ದೊಡ್ಡ ತಪ್ಪು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಾತ್ಯಕಿಪ್ರಶಂಸಾಯಾಂ ಏಕೋನವಿಂಶಾಧಿಕಶತತಮೋಽಧ್ಯಾಯಃ ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಾತ್ಯಕಿಪ್ರಶಂಸಾ ಎನ್ನುವ ನೂರಾಹತ್ತೊಂಭತ್ತನೇ ಅಧ್ಯಾಯವು.