117 ಭೂರಿಶ್ರವೋಬಾಹುಚ್ಛೇದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಜಯದ್ರಥವಧ ಪರ್ವ

ಅಧ್ಯಾಯ 117

ಸಾರ

ಭೂರಿಶ್ರವ-ಸಾತ್ಯಕಿಯರ ವಾಗ್ಯುದ್ಧ (1-18). ಸಾತ್ಯಕಿ-ಭೂರಿಶ್ರವರ ಯುದ್ಧ (19-41). ಸಾತ್ಯಕಿಯನ್ನು ಉಳಿಸಲೋಸುಗ ಕೃಷ್ಣನ ಸೂಚನೆಯಂತೆ ಅರ್ಜುನನು ಖಡ್ಗವನ್ನು ಹಿಡಿದಿದ್ದ ಭೂರಿಶ್ರವನ ಬಾಹುವನ್ನು ಕತ್ತರಿಸಿದುದು (42-62).

07117001 ಸಂಜಯ ಉವಾಚ।
07117001a ತಮಾಪತಂತಂ ಸಂಪ್ರೇಕ್ಷ್ಯ ಸಾತ್ವತಂ ಯುದ್ಧದುರ್ಮದಂ।
07117001c ಕ್ರೋಧಾದ್ಭೂರಿಶ್ರವಾ ರಾಜನ್ಸಹಸಾ ಸಮುಪಾದ್ರವತ್।।

ಸಂಜಯನು ಹೇಳಿದನು: “ರಾಜನ್! ಯುದ್ಧದುರ್ಮದ ಸಾತ್ವತನು ಮೇಲೆ ಬೀಳುತ್ತಿರುವುದನ್ನು ನೋಡಿದ ಭೂರಿಶ್ರವನು ಕ್ರೋಧದಿಂದ ಅವನನ್ನು ಒಮ್ಮೆಲೇ ಆಕ್ರಮಣಿಸಿದನು.

07117002a ತಮಬ್ರವೀನ್ಮಹಾಬಾಹುಃ ಕೌರವ್ಯಃ ಶಿನಿಪುಂಗವಂ।
07117002c ಅದ್ಯ ಪ್ರಾಪ್ತೋಽಸಿ ದಿಷ್ಟ್ಯಾ ಮೇ ಚಕ್ಷುರ್ವಿಷಯಮಿತ್ಯುತ।।

ಆ ಮಹಾಬಾಹು ಕೌರವ್ಯನು ಶಿನಿಪುಂಗವನಿಗೆ ಹೇಳಿದನು: “ಇಂದು ನಿನ್ನನ್ನು ಪಡೆದೆ! ಒಳ್ಳೆಯದಾಯಿತು ಇಂದು ನೀನು ಕಣ್ಣಿಗೆ ಬಿದ್ದೆ!

07117003a ಚಿರಾಭಿಲಷಿತಂ ಕಾಮಮದ್ಯ ಪ್ರಾಪ್ಸ್ಯಾಮಿ ಸಂಯುಗೇ।
07117003c ನ ಹಿ ಮೇ ಮೋಕ್ಷ್ಯಸೇ ಜೀವನ್ಯದಿ ನೋತ್ಸೃಜಸೇ ರಣಂ।।

ಬಹಳ ಸಮಯದಿಂದ ಬಯಸುತ್ತಿದ್ದ ನನಗೆ ಇಂದು ಸಂಯುಗದಲ್ಲಿ ದೊರಕಿದ್ದೀಯೆ! ಇಂದು ರಣವನ್ನು ಬಿಟ್ಟು ಹೋಗದೇ ಇದ್ದರೆ ನೀನು ನನ್ನಿಂದ ಜೀವಂತ ಹೋಗಲಾರೆ.

07117004a ಅದ್ಯ ತ್ವಾಂ ಸಮರೇ ಹತ್ವಾ ನಿತ್ಯಂ ಶೂರಾಭಿಮಾನಿನಂ।
07117004c ನಂದಯಿಷ್ಯಾಮಿ ದಾಶಾರ್ಹ ಕುರುರಾಜಂ ಸುಯೋಧನಂ।।

ದಾಶಾರ್ಹ! ಶೂರನೆಂದು ನಿತ್ಯವೂ ಅಭಿಮಾನಿಯಾಗಿರುವ ನಿನ್ನನ್ನು ಇಂದು ಸಮರದಲ್ಲಿ ಕೊಂದು ಕುರುರಾಜ ಸುಯೋಧನನನ್ನು ಹರ್ಷಗೊಳಿಸುತ್ತೇನೆ.

07117005a ಅದ್ಯ ಮದ್ಬಾಣನಿರ್ದಗ್ಧಂ ಪತಿತಂ ಧರಣೀತಲೇ।
07117005c ದ್ರಕ್ಷ್ಯತಸ್ತ್ವಾಂ ರಣೇ ವೀರೌ ಸಹಿತೌ ಕೇಶವಾರ್ಜುನೌ।।

ಇಂದು ರಣದಲ್ಲಿ ನನ್ನ ಬಾಣಗಳಿಂದ ದಗ್ಧನಾಗಿ ಧರಣೀತಲದಲ್ಲಿ ಬಿದ್ದ ನಿನ್ನನ್ನು ವೀರದ ಕೇಶವ-ಅರ್ಜುನರು ಒಟ್ಟಿಗೇ ನೋಡಲಿದ್ದಾರೆ.

07117006a ಅದ್ಯ ಧರ್ಮಸುತೋ ರಾಜಾ ಶ್ರುತ್ವಾ ತ್ವಾಂ ನಿಹತಂ ಮಯಾ।
07117006c ಸವ್ರೀಡೋ ಭವಿತಾ ಸದ್ಯೋ ಯೇನಾಸೀಹ ಪ್ರವೇಶಿತಃ।।

ಇಂದು ನೀನು ನನ್ನಿಂತ ಹತನಾದೆಯೆಂದು ಕೇಳಿ ಸೇನೆಯನ್ನು ಪ್ರವೇಶಿಸಲು ಹೇಳಿದ ರಾಜಾ ಧರ್ಮಸುತನು ಸದ್ಯದಲ್ಲಿಯೇ ನಾಚಿಗೆಪಡುವವನಿದ್ದಾನೆ.

07117007a ಅದ್ಯ ಮೇ ವಿಕ್ರಮಂ ಪಾರ್ಥೋ ವಿಜ್ಞಾಸ್ಯತಿ ಧನಂಜಯಃ।
07117007c ತ್ವಯಿ ಭೂಮೌ ವಿನಿಹತೇ ಶಯಾನೇ ರುಧಿರೋಕ್ಷಿತೇ।।

ಇಂದು ನೀನು ರಕ್ತದಲ್ಲಿ ತೋಯ್ದು ಹತನಾಗಿ ಭೂಮಿಯಮೇಲೆ ಮಲಗಿರಲು ಪಾರ್ಥ ಧನಂಜಯನು ನನ್ನ ವಿಕ್ರಮವನ್ನು ತಿಳಿದುಕೊಳ್ಳುತ್ತಾನೆ.

07117008a ಚಿರಾಭಿಲಷಿತೋ ಹ್ಯದ್ಯ ತ್ವಯಾ ಸಹ ಸಮಾಗಮಃ।
07117008c ಪುರಾ ದೇವಾಸುರೇ ಯುದ್ಧೇ ಶಕ್ರಸ್ಯ ಬಲಿನಾ ಯಥಾ।।

ಹಿಂದೆ ದೇವಾಸುರರ ಯುದ್ಧದಲ್ಲಿ ಶಕ್ರನು ಬಲಿಯೊಂದಿಗೆ ಯುದ್ಧಮಾಡಿದಂತೆ ನಿನ್ನೊಡನೆ ಯುದ್ಧಮಾಡಬೇಕೆಂಬ ಬಹುಕಾಲದ ನನ್ನ ಅಭಿಲಾಷೆಯು ಇಂದು ಪೂರೈಸಲಿದೆ.

07117009a ಅದ್ಯ ಯುದ್ಧಂ ಮಹಾಘೋರಂ ತವ ದಾಸ್ಯಾಮಿ ಸಾತ್ವತ।
07117009c ತತೋ ಜ್ಞಾಸ್ಯಸಿ ತತ್ತ್ವೇನ ಮದ್ವೀರ್ಯಬಲಪೌರುಷಂ।।

ಸಾತ್ವತ! ಇಂದು ನಿನಗೆ ಮಹಾಘೋರ ಯುದ್ಧವನ್ನು ನೀಡುತ್ತೇನೆ. ಆಗ ನಿನಗೆ ನನ್ನ ಬಲಪೌರುಷವೇನೆಂದು ತಿಳಿಯುತ್ತದೆ.

07117010a ಅದ್ಯ ಸಮ್ಯಮನೀಂ ಯಾತಾ ಮಯಾ ತ್ವಂ ನಿಹತೋ ರಣೇ।
07117010c ಯಥಾ ರಾಮಾನುಜೇನಾಜೌ ರಾವಣಿರ್ಲಕ್ಷ್ಮಣೇನ ವೈ।।

ರಾಮಾನುಜ ಲಕ್ಷ್ಮಣನಿಂದ ರಾವಣಿಯು ಹೇಗೆ ಯಮಲೋಕಕ್ಕೆ ಕಳುಹಿಸಲ್ಪಟ್ಟನೋ ಹಾಗೆ ಇಂದು ನೀನೂ ಕೂಡ ರಣದಲ್ಲಿ ನನ್ನಿಂದ ಹತನಾಗಿ ಯಮಲೋಕಕ್ಕೆ ಹೋಗುವೆ.

07117011a ಅದ್ಯ ಕೃಷ್ಣಶ್ಚ ಪಾರ್ಥಶ್ಚ ಧರ್ಮರಾಜಶ್ಚ ಮಾಧವ।
07117011c ಹತೇ ತ್ವಯಿ ನಿರುತ್ಸಾಹಾ ರಣಂ ತ್ಯಕ್ಷ್ಯಂತ್ಯಸಂಶಯಂ।।

ಮಾಧವ! ಇಂದು ನೀನು ಹತನಾಗಲು ಕೃಷ್ಣ, ಪಾರ್ಥ ಮತ್ತು ಧರ್ಮರಾಜರು ನಿರುತ್ಸಾಹರಾಗಿ ರಣವನ್ನು ತೊರೆಯುವುದು ಖಂಡಿತ.

07117012a ಅದ್ಯ ತೇಽಪಚಿತಿಂ ಕೃತ್ವಾ ಶಿತೈರ್ಮಾಧವ ಸಾಯಕೈಃ।
07117012c ತತ್ಸ್ತ್ರಿಯೋ ನಂದಯಿಷ್ಯಾಮಿ ಯೇ ತ್ವಯಾ ನಿಹತಾ ರಣೇ।।

ಮಾಧವ! ನಿಶಿತ ಸಾಯಕಗಳಿಂದ ಇಂದು ನಿನಗೆ ಪೂಜೆಗೈದು ನಿನ್ನಿಂದ ರಣದಲ್ಲಿ ಹತರಾದವರ ಸ್ತ್ರೀಯರಿಗೆ ಆನಂದವನ್ನುಂಟುಮಾಡುತ್ತೇನೆ.

07117013a ಚಕ್ಷುರ್ವಿಷಯಸಂಪ್ರಾಪ್ತೋ ನ ತ್ವಂ ಮಾಧವ ಮೋಕ್ಷ್ಯಸೇ।
07117013c ಸಿಂಹಸ್ಯ ವಿಷಯಂ ಪ್ರಾಪ್ತೋ ಯಥಾ ಕ್ಷುದ್ರಮೃಗಸ್ತಥಾ।।

ಮಾಧವ! ಸಿಂಹದ ಆಹಾರವಾಗಿ ಬಂದ ಕ್ಷುದ್ರಮೃಗವು ಹೇಗೋ ಹಾಗೆ ನನ್ನ ದೃಷ್ಟಿಯ ಪರಿಧಿಯಲ್ಲಿ ಬಂದಿರುವ ನೀನು ಬಿಡುಗಡೆ ಹೊಂದಲಾರೆ.”

07117014a ಯುಯುಧಾನಸ್ತು ತಂ ರಾಜನ್ಪ್ರತ್ಯುವಾಚ ಹಸನ್ನಿವ।
07117014c ಕೌರವೇಯ ನ ಸಂತ್ರಾಸೋ ವಿದ್ಯತೇ ಮಮ ಸಂಯುಗೇ।।

ರಾಜನ್! ಯುಯುಧಾನನಾದರೋ ಅವನಿಗೆ ನಗುತ್ತಾ ಉತ್ತರಿಸಿದನು: “ಕೌರವೇಯ! ಯುದ್ಧದಲ್ಲಿ ನನಗೆ ಭಯವೆಂಬುದೇ ಗೊತ್ತಿಲ್ಲ.

07117015a ಸ ಮಾಂ ನಿಹನ್ಯಾತ್ಸಂಗ್ರಾಮೇ ಯೋ ಮಾಂ ಕುರ್ಯಾನ್ನಿರಾಯುಧಂ।
07117015c ಸಮಾಸ್ತು ಶಾಶ್ವತೀರ್ಹನ್ಯಾದ್ಯೋ ಮಾಂ ಹನ್ಯಾದ್ಧಿ ಸಂಯುಗೇ।।

ಸಂಗ್ರಾಮದಲ್ಲಿ ಯಾರು ನನ್ನನ್ನು ನಿರಾಯುಧನನ್ನಾಗಿ ಮಾಡುತ್ತಾರೋ ಅವರೇ ನನ್ನನ್ನು ಸಂಹರಿಸಬಲ್ಲರು. ಬಹಳ ವರ್ಷಗಳ ವರೆಗೆ ನನ್ನನ್ನು ಸಂಹರಿಸದಿದ್ದ ನೀನು ಇಂದು ಸಂಯುಗದಲ್ಲಿ ಕೊಲ್ಲಲಾರೆ.

07117016a ಕಿಂ ಮೃಷೋಕ್ತೇನ ಬಹುನಾ ಕರ್ಮಣಾ ತು ಸಮಾಚರ।
07117016c ಶಾರದಸ್ಯೇವ ಮೇಘಸ್ಯ ಗರ್ಜಿತಂ ನಿಷ್ಫಲಂ ಹಿ ತೇ।।

ಸೊಕ್ಕಿನಿಂದ ಹೇಳಿದ ಬಹಳ ಮಾತುಗಳನ್ನು ಕರ್ಮದಲ್ಲಿ ಮಾಡಿತೋರಿಸು. ಶರದೃತುವಿನ ಮೋಡದ ಗುಡುಗಿನಂತೆ ನಿನ್ನ ಈ ಕೂಗಾಟವು ನಿಷ್ಫಲವಾದುದು.

07117017a ಶ್ರುತ್ವೈತದ್ಗರ್ಜಿತಂ ವೀರ ಹಾಸ್ಯಂ ಹಿ ಮಮ ಜಾಯತೇ।
07117017c ಚಿರಕಾಲೇಪ್ಸಿತಂ ಲೋಕೇ ಯುದ್ಧಮದ್ಯಾಸ್ತು ಕೌರವ।।

ವೀರ! ನಿನ್ನ ಈ ಗರ್ಜನೆಯನ್ನು ಕೇಳಿ ನನಗೆ ನಗು ಬರುತ್ತಿದೆ. ಕೌರವ! ಬಹುಕಾಲದಿಂದ ನೀನು ಬಯಸುತ್ತಿರುವ ಈ ಯುದ್ಧವು ಇಂದು ನಡೆಯಲಿ.

07117018a ತ್ವರತೇ ಮೇ ಮತಿಸ್ತಾತ ತ್ವಯಿ ಯುದ್ಧಾಭಿಕಾಂಕ್ಷಿಣಿ।
07117018c ನಾಹತ್ವಾ ಸನ್ನಿವರ್ತಿಷ್ಯೇ ತ್ವಾಮದ್ಯ ಪುರುಷಾಧಮ।।

ಅಯ್ಯಾ ಪುರುಷಾಧಮ! ನಿನ್ನೊಡನೆ ಯುದ್ಧಮಾಡಲು ಬಯಸಿದ ನನ್ನ ಮತಿಯು ತ್ವರೆಮಾಡುತ್ತಿದೆ. ನಿನ್ನನ್ನು ಕೊಲ್ಲದೇ ನಾನಿಂದು ಹಿಂದಿರುಗುವುದಿಲ್ಲ.”

07117019a ಅನ್ಯೋನ್ಯಂ ತೌ ತದಾ ವಾಗ್ಭಿಸ್ತಕ್ಷಂತೌ ನರಪುಂಗವೌ।
07117019c ಜಿಘಾಂಸೂ ಪರಮಕ್ರುದ್ಧಾವಭಿಜಘ್ನತುರಾಹವೇ।।

ಹೀಗೆ ಅನ್ಯೋನ್ಯರನ್ನು ವಾಗ್ಬಾಣಗಳಿಂದ ಗಾಯಗೊಳಿಸುತ್ತಾ ಆ ನರಪುಂಗವರು ಪರಮ ಕ್ರುದ್ಧರಾಗಿ ಪರಸ್ಪರರ ಪ್ರಾಣಗಳನ್ನು ತೆಗೆಯಲು ಬಯಸಿ ರಣರಂಗದಲ್ಲಿ ಹೋರಾಡಿದರು.

07117020a ಸಮೇತೌ ತೌ ನರವ್ಯಾಘ್ರೌ ಶುಷ್ಮಿಣೌ ಸ್ಪರ್ಧಿನೌ ರಣೇ।
07117020c ದ್ವಿರದಾವಿವ ಸಂಕ್ರುದ್ಧೌ ವಾಶಿತಾರ್ಥೇ ಮದೋತ್ಕಟೌ।।

ಆ ಇಬ್ಬರು ನರವ್ಯಾಘ್ರ ಯೋಧರು ರಣದಲ್ಲಿ ಸ್ಪರ್ಧಿಸುತ್ತಾ ಹೆಣ್ಣಾನೆಗೆ ಮದೋತ್ಕಟ ಸಲಗಗಳೆರಡು ಸಂಕ್ರುದ್ಧರಾಗಿ ಹೋರಾಡುವಂತೆ ಪರಸ್ಪರರ ಮೇಲೆ ಎರಗಿದರು.

07117021a ಭೂರಿಶ್ರವಾಃ ಸಾತ್ಯಕಿಶ್ಚ ವವರ್ಷತುರರಿಂದಮೌ।
07117021c ಶರವರ್ಷಾಣಿ ಭೀಮಾನಿ ಮೇಘಾವಿವ ಪರಸ್ಪರಂ।।

ಅರಿಂದಮ ಭೂರಿಶ್ರವ ಮತ್ತು ಸಾತ್ಯಕಿಯರು ಭಯಂಕರ ಮೋಡಗಳಂತೆ ಪರಸ್ಪರರ ಮೇಲೆ ಶರವರ್ಷಗಳನ್ನು ಸುರಿಸಿದರು.

07117022a ಸೌಮದತ್ತಿಸ್ತು ಶೈನೇಯಂ ಪ್ರಚ್ಚಾದ್ಯೇಷುಭಿರಾಶುಗೈಃ।
07117022c ಜಿಘಾಂಸುರ್ಭರತಶ್ರೇಷ್ಠ ವಿವ್ಯಾಧ ನಿಶಿತೈಃ ಶರೈಃ।।

ಭರತಶ್ರೇಷ್ಠ! ಸೌಮದತ್ತಿಯಾದರೋ ಶೈನೇಯನನ್ನು ಆಶುಗಗಳಿಂದ ಮುಚ್ಚಿ ಸಂಹರಿಸಲು ಬಯಸಿ ನಿಶಿತ ಶರಗಳಿಂದ ಹೊಡೆದನು.

07117023a ದಶಭಿಃ ಸಾತ್ಯಕಿಂ ವಿದ್ಧ್ವಾ ಸೌಮದತ್ತಿರಥಾಪರಾನ್।
07117023c ಮುಮೋಚ ನಿಶಿತಾನ್ಬಾಣಾನ್ಜಿಘಾಂಸುಃ ಶಿನಿಪುಂಗವಂ।।

ಇನ್ನೂ ಬೇರೆ ಹತ್ತರಿಂದ ಸಾತ್ಯಕಿಯನ್ನು ಹೊಡೆದು, ಆ ಶಿನಿಪುಂಗವನನ್ನು ಕೊಲ್ಲಲು ನಿಶಿತ ಬಾಣಗಳನ್ನು ಬಿಟ್ಟನು.

07117024a ತಾನಸ್ಯ ವಿಶಿಖಾಂಸ್ತೀಕ್ಷ್ಣಾನಂತರಿಕ್ಷೇ ವಿಶಾಂ ಪತೇ।
07117024c ಅಪ್ರಾಪ್ತಾನಸ್ತ್ರಮಾಯಾಭಿರಗ್ರಸತ್ಸಾತ್ಯಕಿಃ ಪ್ರಭೋ।।

ವಿಶಾಂಪತೇ! ಪ್ರಭೋ! ಆ ತೀಕ್ಷ್ಣ ವಿಶಾಖಗಳು ಬರುವುದರೊಳಗೆ ಅಂತರಿಕ್ಷದಲ್ಲಿಯೇ ಸಾತ್ಯಕಿಯು ಅಸ್ತ್ರಗಳಿಂದ ತುಂಡರಿಸಿದನು.

07117025a ತೌ ಪೃಥಕ್ ಶರವರ್ಷಾಭ್ಯಾಮವರ್ಷೇತಾಂ ಪರಸ್ಪರಂ।
07117025c ಉತ್ತಮಾಭಿಜನೌ ವೀರೌ ಕುರುವೃಷ್ಣಿಯಶಸ್ಕರೌ।।

ಕುರು-ವೃಷ್ಣಿಯರ ಯಶಸ್ಕರರಾದ, ಉತ್ತಮ ಕುಲದಲ್ಲಿ ಜನಿಸಿದವರೂ ಆದ ಆ ವೀರರಿಬ್ಬರೂ ಮತ್ತೆ ಪರಸ್ಪರರ ಮೇಲೆ ಶರವರ್ಷಗಳನ್ನು ಸುರಿಸಿದರು.

07117026a ತೌ ನಖೈರಿವ ಶಾರ್ದೂಲೌ ದಂತೈರಿವ ಮಹಾದ್ವಿಪೌ।
07117026c ರಥಶಕ್ತಿಭಿರನ್ಯೋನ್ಯಂ ವಿಶಿಖೈಶ್ಚಾಪ್ಯಕೃಂತತಾಂ।।

ಎರಡು ಹುಲಿಗಳು ತಮ್ಮ ಉಗುರುಗಳಿಂದ ಮತ್ತು ಮಹಾಗಜಗಳು ತಮ್ಮ ದಂತಗಳಿಂದ ಹೇಗೋ ಹಾಗೆ ಅವರಿಬ್ಬರೂ ರಥಶಕ್ತಿಗಳಿಂದ ಮತ್ತು ವಿಶಿಖಗಳಿಂದ ಅನ್ಯೋನ್ಯರನ್ನು ಗಾಯಗೊಳಿಸಿದರು.

07117027a ನಿರ್ಭಿದಂತೌ ಹಿ ಗಾತ್ರಾಣಿ ವಿಕ್ಷರಂತೌ ಚ ಶೋಣಿತಂ।
07117027c ವ್ಯಷ್ಟಂಭಯೇತಾಮನ್ಯೋನ್ಯಂ ಪ್ರಾಣದ್ಯೂತಾಭಿದೇವಿನೌ।।

ದೇಹಗಳನ್ನು ಜರ್ಝರಿಸುತ್ತಾ, ಗಾಯಗಳಿಂದ ರಕ್ತವನ್ನು ಸುರಿಸುತ್ತಾ ಅವರಿಬ್ಬರೂ ಅನ್ಯೋನ್ಯರ ಪ್ರಾಣಗಳನ್ನು ಪಣವಾಗಿಟ್ಟು ಜೂಜಾಡುತ್ತಿದ್ದರು.

07117028a ಏವಮುತ್ತಮಕರ್ಮಾಣೌ ಕುರುವೃಷ್ಣಿಯಶಸ್ಕರೌ।
07117028c ಪರಸ್ಪರಮಯುಧ್ಯೇತಾಂ ವಾರಣಾವಿವ ಯೂಥಪೌ।।

ಹೀಗೆ ಆ ಇಬ್ಬರು ಉತ್ತಮಕರ್ಮಿಗಳು ಕುರು-ವೃಷ್ಣಿ ಯಶಸ್ಕರರು ಪರಸ್ಪರರೊಂದಿಗೆ ಆನೆಗಳ ಹಿಂಡಿನ ಸಲಗಗಳಂತೆ ಹೋರಾಡಿದರು.

07117029a ತಾವದೀರ್ಘೇಣ ಕಾಲೇನ ಬ್ರಹ್ಮಲೋಕಪುರಸ್ಕೃತೌ।
07117029c ಜಿಗೀಷಂತೌ ಪರಂ ಸ್ಥಾನಮನ್ಯೋನ್ಯಮಭಿಜಘ್ನತುಃ।।

ಪರಮ ಸ್ಥಾನ ಬ್ರಹ್ಮಲೋಕವನ್ನೇ ಬಯಸಿದ್ದ ಅವರು ಅನ್ಯೋನ್ಯರನ್ನು ಕೊಲ್ಲಲು ಬಯಸಿ ಬಹಳ ಕಾಲ ಯುದ್ಧಮಾಡುತ್ತಿದ್ದರು.

07117030a ಸಾತ್ಯಕಿಃ ಸೌಮದತ್ತಿಶ್ಚ ಶರವೃಷ್ಟ್ಯಾ ಪರಸ್ಪರಂ।
07117030c ಹೃಷ್ಟವದ್ಧಾರ್ತರಾಷ್ಟ್ರಾಣಾಂ ಪಶ್ಯತಾಮಭ್ಯವರ್ಷತಾಂ।।

ಸಾತ್ಯಕಿ-ಸೌಮದತ್ತಿಯರು ಪರಸ್ಪರರನ್ನು ಶರವೃಷ್ಟಿಗಳಿಂದ ಸುರಿಸಿ ಮುಚ್ಚಿಸಿ ನೋಡುತ್ತಿರುವ ಧಾರ್ತರಾಷ್ಟ್ರರ ಸಂತೋಷವನ್ನು ಹೆಚ್ಚಿಸಿದರು.

07117031a ಸಂಪ್ರೈಕ್ಷಂತ ಜನಾಸ್ತತ್ರ ಯುಧ್ಯಮಾನೌ ಯುಧಾಂ ಪತೀ।
07117031c ಯೂಥಪೌ ವಾಶಿತಾಹೇತೋಃ ಪ್ರಯುದ್ಧಾವಿವ ಕುಂಜರೌ।।

ಹೆಣ್ಣಾನೆಯ ಸಲುವಾಗಿ ಗುಂಪುಗಳ ಒಡೆತನವನ್ನು ಹೊಂದಿರುವ ಎರಡು ಸಲಗಗಳು ಸೆಣೆಸಾಡುವಂತೆ ಪರಸ್ಪರರೊಡನೆ ಸೆಣಸಾಡುತ್ತಿದ್ದ ಆ ಸೇನಾಪತಿಗಳನ್ನು ನೋಡುತ್ತಾ ನಿಂತುಬಿಟ್ಟರು.

07117032a ಅನ್ಯೋನ್ಯಸ್ಯ ಹಯಾನ್ ಹತ್ವಾ ಧನುಷೀ ವಿನಿಕೃತ್ಯ ಚ।
07117032c ವಿರಥಾವಸಿಯುದ್ಧಾಯ ಸಮೇಯಾತಾಂ ಮಹಾರಣೇ।।

ಪರಸ್ಪರರ ಕುದುರೆಗಳನ್ನು ಸಂಹರಿಸಿ ಧನುಸ್ಸನ್ನು ಕತ್ತರಿಸಿ ಅವರು ವಿರಥರನ್ನಾಗಿಸಿ ಮಹಾರಣದಲ್ಲಿ ಒಟ್ಟಿಗೆ ಹೋರಾಡಿದನು.

07117033a ಆರ್ಷಭೇ ಚರ್ಮಣೀ ಚಿತ್ರೇ ಪ್ರಗೃಹ್ಯ ವಿಪುಲೇ ಶುಭೇ।
07117033c ವಿಕೋಶೌ ಚಾಪ್ಯಸೀ ಕೃತ್ವಾ ಸಮರೇ ತೌ ವಿಚೇರತುಃ।।

ಎತ್ತಿನ ಚರ್ಮದಿಂದ ಮಾಡಿದ ಚಿತ್ರಿತ ವಿಶಾಲ ಶುಭ ಗುರಾಣಿಯನ್ನು ಇಬ್ಬರೂ ಹಿಡಿದು ಕತ್ತಿಯನ್ನು ಒರೆಯಿಂದ ತೆಗೆದು ಸಮರದಲ್ಲಿ ಸಂಚರಿಸತೊಡಗಿದರು.

07117034a ಚರಂತೌ ವಿವಿಧಾನ್ಮಾರ್ಗಾನ್ಮಂಡಲಾನಿ ಚ ಭಾಗಶಃ।
07117034c ಮುಹುರಾಜಘ್ನತುಃ ಕ್ರುದ್ಧಾವನ್ಯೋನ್ಯಮರಿಮರ್ದನೌ।।
07117035a ಸಖಡ್ಗೌ ಚಿತ್ರವರ್ಮಾಣೌ ಸನಿಷ್ಕಾಂಗದಭೂಷಣೌ।
07117035c ರಣೇ ರಣೋತ್ಕಟೌ ರಾಜನ್ನನ್ಯೋನ್ಯಂ ಪರ್ಯಕರ್ಷತಾಂ।।

ರಾಜನ್! ಖಡ್ಗಗಳನ್ನೂ, ಬಣ್ಣದ ಗುರಾಣಿಗಳನ್ನು ಹಿಡಿದು ಬಂಗಾರದ ಅಂಗದ ಭೂಷಿತ ಆ ರಣೋತ್ಕಟ ಅರಿಮರ್ದನರಿಬ್ಬರೂ ವಿವಿಧ ಮಾರ್ಗ-ಮಂಡಲಗಳಲ್ಲಿ ಸಂಚರಿಸುತ್ತಾ ಅನ್ಯೋನ್ಯರನ್ನು ಪ್ರಹರಿಸಿದರು.

07117036a ಮುಹೂರ್ತಮಿವ ರಾಜೇಂದ್ರ ಪರಿಕೃಷ್ಯ ಪರಸ್ಪರಂ।
07117036c ಪಶ್ಯತಾಂ ಸರ್ವಸೈನ್ಯಾನಾಂ ವೀರಾವಾಶ್ವಸತಾಂ ಪುನಃ।।

ರಾಜೇಂದ್ರ! ಪರಸ್ಪರರೊಡನೆ ಸೆಣೆಸಾಡಿ, ಒಂದು ಕ್ಷಣ ವಿಶ್ರಾಂತಿ ಪಡೆದು ಸರ್ವ ಸೇನೆಗಳು ನೋಡುತ್ತಿದ್ದಂತೆ ಆ ವೀರರು ಪುನಃ ಹೋರಾಡ ತೊಡಗಿದರು.

07117037a ಅಸಿಭ್ಯಾಂ ಚರ್ಮಣೀ ಶುಭ್ರೇ ವಿಪುಲೇ ಚ ಶರಾವರೇ।
07117037c ನಿಕೃತ್ಯ ಪುರುಷವ್ಯಾಘ್ರೌ ಬಾಹುಯುದ್ಧಂ ಪ್ರಚಕ್ರತುಃ।।

ಖಡ್ಗಗಳಿಂದ ಗುರಾಣಿಗಳನ್ನು ಕತ್ತರಿಸಿ ವಿಶಾಲ ಖಡ್ಗಗಳನ್ನು ಎಸೆದು ಆ ಪುರುಷವ್ಯಾಘ್ರರು ಬಾಹು ಯುದ್ಧದಲ್ಲಿ ತೊಡಗಿದರು.

07117038a ವ್ಯೂಢೋರಸ್ಕೌ ದೀರ್ಘಭುಜೌ ನಿಯುದ್ಧಕುಶಲಾವುಭೌ।
07117038c ಬಾಹುಭಿಃ ಸಮಸಜ್ಜೇತಾಮಾಯಸೈಃ ಪರಿಘೈರಿವ।।

ವಿಶಾಲ ಎದೆಯ, ನೀಳ ಭುಜಗಳ, ಬಾಹುಯುದ್ಧಕುಶಲರಾದ ಅವರಿಬ್ಬರೂ ಕಬ್ಬಿಣದ ಪರಿಘಗಳಂತಿದ್ದ ಬಾಹುಗಳಿಂದ ಪರಸ್ಪರರನ್ನು ಪ್ರಹರಿಸಿದರು.

07117039a ತಯೋರಾಸನ್ಭುಜಾಘಾತಾ ನಿಗ್ರಹಪ್ರಗ್ರಹೌ ತಥಾ।
07117039c ಶಿಕ್ಷಾಬಲಸಮುದ್ಭೂತಾಃ ಸರ್ವಯೋಧಪ್ರಹರ್ಷಣಾಃ।।

ಶಿಕ್ಷಾಬಲದಿಂದ ಕೂಡಿದ ಅವರ ಭುಜಾಘಾತ60, ನಿಗ್ರಹ61-ಪ್ರಗ್ರಹ62ಗಳು ಸರ್ವಯೋಧರಿಗೂ ಹರ್ಷವನ್ನುಂಟುಮಾಡುತ್ತಿದ್ದವು.

07117040a ತಯೋರ್ನೃವರಯೋ ರಾಜನ್ಸಮರೇ ಯುಧ್ಯಮಾನಯೋಃ।
07117040c ಭೀಮೋಽಭವನ್ಮಹಾಶಬ್ದೋ ವಜ್ರಪರ್ವತಯೋರಿವ।।

ರಾಜನ್! ಆ ನರಶ್ರೇಷ್ಠರು ಸಮರದಲ್ಲಿ ಯುದ್ಧಮಾಡುತ್ತಿರುವಾಗ ವರ್ಜಾಯುಧಕ್ಕೂ ಪರ್ವತಕ್ಕೂ ತಾಗುವ ಹಾಗೆ ಮಹಾ ಭಯಂಕರ ಶಬ್ಧವುಂಟಾಯಿತು.

07117041a ದ್ವಿಪಾವಿವ ವಿಷಾಣಾಗ್ರೈಃ ಶೃಂಗೈರಿವ ಮಹರ್ಷಭೌ।
07117041c ಯುಯುಧಾತೇ ಮಹಾತ್ಮಾನೌ ಕುರುಸಾತ್ವತಪುಂಗವೌ।।

ಆನೆಗಳು ದಂತಗಳ ತುದಿಯಿಂದ, ಮಹಾ ಹೋರಿಗಳು ಕೋಡಿನ ತುದಿಯಿಂದ ಹೇಗೋ ಹಾಗೆ ಆ ಕುರು-ಸಾತ್ವತ ಪುಂಗವ ಮಹಾತ್ಮರು ಸೆಣಸಾಡಿದರು.

07117042a ಕ್ಷೀಣಾಯುಧೇ ಸಾತ್ವತೇ ಯುಧ್ಯಮಾನೇ ತತೋಽಬ್ರವೀದರ್ಜುನಂ ವಾಸುದೇವಃ।
07117042c ಪಶ್ಯಸ್ವೈನಂ ವಿರಥಂ ಯುಧ್ಯಮಾನಂ ರಣೇ ಕೇತುಂ ಸರ್ವಧನುರ್ಧರಾಣಾಂ।।

ಸಾತ್ವತನು ಆಯುಧಗಳನ್ನು ಕಳೆದುಕೊಂಡು ಯುದ್ಧಮಾಡುತ್ತಿರಲು ವಾಸುದೇವನು ಅರ್ಜುನನಿಗೆ ಹೇಳಿದನು: “ಸರ್ವಧನುರ್ಧರರಲ್ಲಿ ಶ್ರೇಷ್ಠನಾದವನು ರಣದಲ್ಲಿ ವಿರಥನಾಗಿ ಯುದ್ಧಮಾಡುತ್ತಿರುವುದನ್ನು ನೋಡು!

07117043a ಪ್ರವಿಷ್ಟೋ ಭಾರತೀಂ ಸೇನಾಂ ತವ ಪಾಂಡವ ಪೃಷ್ಠತಃ।
07117043c ಯೋಧಿತಶ್ಚ ಮಹಾವೀರ್ಯೈಃ ಸರ್ವೈರ್ಭಾರತ ಭಾರತೈಃ।।

ಪಾಂಡವ! ಭಾರತ! ನಿನ್ನ ಹಿಂದೆಯೇ ಭಾರತೀ ಸೇನೆಯನ್ನು ಪ್ರವೇಶಿಸಿ ಇವನು ಮಹಾವೀರ್ಯದಿಂದ ಎಲ್ಲ ಭಾರತರೊಂದಿಗೆ ಯುದ್ಧಮಾಡುತ್ತಿದ್ದಾನೆ.

07117044a ಪರಿಶ್ರಾಂತೋ ಯುಧಾಂ ಶ್ರೇಷ್ಠಃ ಸಂಪ್ರಾಪ್ತೋ ಭೂರಿದಕ್ಷಿಣಂ।
07117044c ಯುದ್ಧಕಾಂಕ್ಷಿಣಮಾಯಾಂತಂ ನೈತತ್ಸಮಮಿವಾರ್ಜುನ।।

ಆಯಾಸಗೊಂಡಿರುವ ಯೋಧಶ್ರೇಷ್ಠನನ್ನು ಯುದ್ಧಾಕಾಂಕ್ಷಿ ಭೂರಿದಕ್ಷಿಣನು ತಡೆದಿರುವನು. ಅರ್ಜುನ! ಇದು ಸಮಾನರ ಯುದ್ಧವಲ್ಲ!”

07117045a ತತೋ ಭೂರಿಶ್ರವಾಃ ಕ್ರುದ್ಧಃ ಸಾತ್ಯಕಿಂ ಯುದ್ಧದುರ್ಮದಂ।
07117045c ಉದ್ಯಮ್ಯ ನ್ಯಹನದ್ರಾಜನ್ಮತ್ತೋ ಮತ್ತಮಿವ ದ್ವಿಪಂ।।

ರಾಜನ್! ಆಗ ಭೂರಿಶ್ರವನು ಕ್ರುದ್ಧನಾಗಿ ಯುದದುರ್ಮದ ಸಾತ್ಯಕಿಯನ್ನು ಮದಿಸಿದ ಆನೆಯು ಇನ್ನೊಂದು ಮದಿಸಿದ ಆನೆಯನ್ನು ಹೇಗೋ ಹಾಗೆ ಪ್ರಯತ್ನಪೂರ್ವಕವಾಗಿ ಪ್ರಹರಿಸಿದನು.

07117046a ರಥಸ್ಥಯೋರ್ದ್ವಯೋರ್ಯುದ್ಧೇ ಕ್ರುದ್ಧಯೋರ್ಯೋಧಮುಖ್ಯಯೋಃ।
07117046c ಕೇಶವಾರ್ಜುನಯೋ ರಾಜನ್ಸಮರೇ ಪ್ರೇಕ್ಷಮಾಣಯೋಃ।।

ರಾಜನ್! ಕ್ರುದ್ಧರಾದ ಆ ಯೋಧಮುಖ್ಯರ ಯುದ್ಧವನ್ನು ಸಮರದಲ್ಲಿ ರಥಸ್ಥರಾಗಿ ಕೇಶವಾರ್ಜುನರು ನೋಡುತ್ತಿದ್ದರು.

07117047a ಅಥ ಕೃಷ್ಣೋ ಮಹಾಬಾಹುರರ್ಜುನಂ ಪ್ರತ್ಯಭಾಷತ।
07117047c ಪಶ್ಯ ವೃಷ್ಣ್ಯಂಧಕವ್ಯಾಘ್ರಂ ಸೌಮದತ್ತಿವಶಂ ಗತಂ।।

ಆಗ ಮಹಾಬಾಹು ಕೃಷ್ಣನು ಅರ್ಜುನನಿಗೆ ಪುನಃ ಹೇಳಿದನು: “ವೃಷ್ಣಿ-ಅಂಧಕರ ವ್ಯಾಘ್ರನು ಸೌಮದತ್ತಿಯ ವಶನಾಗಿರುವುದನ್ನು ನೋಡು!

07117048a ಪರಿಶ್ರಾಂತಂ ಗತಂ ಭೂಮೌ ಕೃತ್ವಾ ಕರ್ಮ ಸುದುಷ್ಕರಂ।
07117048c ತವಾಂತೇವಾಸಿನಂ ಶೂರಂ ಪಾಲಯಾರ್ಜುನ ಸಾತ್ಯಕಿಂ।।

ದುಷ್ಕರ ಕರ್ಮಗಳನ್ನು ಮಾಡಿ ಬಳಲಿ ಭೂಮಿಗೆ ಕುಸಿದಿರುವ ನಿನ್ನ ಶೂರ ಶಿಷ್ಯ ಸಾತ್ಯಕಿಯನ್ನು ಪಾಲಿಸು ಅರ್ಜುನ!

07117049a ನ ವಶಂ ಯಜ್ಞಶೀಲಸ್ಯ ಗಚ್ಚೇದೇಷ ವರಾರಿಹನ್।
07117049c ತ್ವತ್ಕೃತೇ ಪುರುಷವ್ಯಾಘ್ರ ತದಾಶು ಕ್ರಿಯತಾಂ ವಿಭೋ।।

ಪುರುಷವ್ಯಾಘ್ರ! ವಿಭೋ! ನಿನಗಾಗಿ ಹೋರಾಡುತ್ತಿರುವ ಇವನು ಯಜ್ಞಶೀಲ63ನ ವಶನಾಗದಂತೆ ಪ್ರಯತ್ನಿಸು!”

07117050a ಅಥಾಬ್ರವೀದ್ಧೃಷ್ಟಮನಾ ವಾಸುದೇವಂ ಧನಂಜಯಃ।
07117050c ಪಶ್ಯ ವೃಷ್ಣಿಪ್ರವೀರೇಣ ಕ್ರೀಡಂತಂ ಕುರುಪುಂಗವಂ।
07117050e ಮಹಾದ್ವಿಪೇನೇವ ವನೇ ಮತ್ತೇನ ಹರಿಯೂಥಪಂ।।

ಆಗ ಸಂತೋಷದಿಂದ ಧನಂಜಯನು ವಾಸುದೇವನಿಗೆ ಹೇಳಿದನು: “ಸಿಂಹರಾಜನು ವನದಲ್ಲಿ ಗಜರಾಜನೊಂದಿಗೆ ಸೆಣಸಾಡುವಂತೆ ವೃಷ್ಣಿಪ್ರವೀರನೊಡನೆ ಆಟವಾಡುತ್ತಿರುವ ಕುರುಪುಂಗವನನ್ನು ನೋಡು!”

07117051a ಹಾಹಾಕಾರೋ ಮಹಾನಾಸೀತ್ಸೈನ್ಯಾನಾಂ ಭರತರ್ಷಭ।
07117051c ಯದುದ್ಯಮ್ಯ ಮಹಾಬಾಹುಃ ಸಾತ್ಯಕಿಂ ನ್ಯಹನದ್ಭುವಿ।।

ಭರತರ್ಷಭ! ಆ ಮಹಾಬಾಹು ಭೂರಿಶ್ರವನು ಸಾತ್ಯಕಿಯನ್ನು ಕುಕ್ಕಿ ನೆಲಕ್ಕೆ ಕೆಡವಲು ಸೇನೆಗಳಲ್ಲಿ ಮಹಾ ಹಾಹಾಕಾರವುಂಟಾಯಿತು.

07117052a ಸ ಸಿಂಹ ಇವ ಮಾತಂಗಂ ವಿಕರ್ಷನ್ಭೂರಿದಕ್ಷಿಣಃ।
07117052c ವ್ಯರೋಚತ ಕುರುಶ್ರೇಷ್ಠಃ ಸಾತ್ವತಪ್ರವರಂ ಯುಧಿ।।

ಕುರುಶ್ರೇಷ್ಠ ಭೂರಿದಕ್ಷಿಣ64ನು ಸಿಂಹವೊಂದು ಆನೆಯನ್ನು ಹೇಗೋ ಹಾಗೆ ಯುದ್ಧದಲ್ಲಿ ಸಾತ್ವತಪ್ರವರನನ್ನು ಗಿರಗಿರನೆ ತಿರುಗಿಸಿದನು.

07117053a ಅಥ ಕೋಶಾದ್ವಿನಿಷ್ಕೃಷ್ಯ ಖಡ್ಗಂ ಭೂರಿಶ್ರವಾ ರಣೇ।
07117053c ಮೂರ್ಧಜೇಷು ನಿಜಗ್ರಾಹ ಪದಾ ಚೋರಸ್ಯತಾಡಯತ್।।

ಆಗ ರಣದಲ್ಲಿ ಭೂರಿಶ್ರವನು ಒರೆಯಿಂದ ಖಡ್ಗವನ್ನು ಎಳೆದು ತೆಗೆದು, ಅವನ ಮುಡಿಯನ್ನು ಹಿಡಿದು ಕಾಲಿನಿಂದ ಎದೆಗೆ ಒದೆದನು.

07117054a ತಥಾ ತು ಪರಿಕೃಷ್ಯಂತಂ ದೃಷ್ಟ್ವಾ ಸಾತ್ವತಮಾಹವೇ।
07117054c ವಾಸುದೇವಸ್ತತೋ ರಾಜನ್ಭೂಯೋಽರ್ಜುನಮಭಾಷತ।।

ರಾಜನ್! ಹಾಗೆ ಆಹವದಲ್ಲಿ ಎಳೆದಾಡಲ್ಪಡುತ್ತಿದ್ದ ಸಾತ್ವತನನ್ನು ನೋಡಿ ವಾಸುದೇವನು ಇನ್ನೊಮ್ಮೆ ಅರ್ಜುನನಿಗೆ ಹೇಳಿದನು:

07117055a ಪಶ್ಯ ವೃಷ್ಣ್ಯಂಧಕವ್ಯಾಘ್ರಂ ಸೌಮದತ್ತಿವಶಂ ಗತಂ।
07117055c ತವ ಶಿಷ್ಯಂ ಮಹಾಬಾಹೋ ಧನುಷ್ಯನವರಂ ತ್ವಯಾ।।

“ಮಹಾಬಾಹೋ! ವೃಷ್ಣಿ-ಅಂಧಕರ ವ್ಯಾಘ್ರ, ಧನುರ್ವಿದ್ಯೆಯಲ್ಲಿ ನಿನಗಿಂಥ ಕಡಿಮೆಯಿಲ್ಲದ ನಿನ್ನ ಶಿಷ್ಯನು ಸೌಮದತ್ತಿಯ ವಶನಾಗಿರುವುದನ್ನು ನೋಡು!

07117056a ಅಸತ್ಯೋ ವಿಕ್ರಮಃ ಪಾರ್ಥ ಯತ್ರ ಭೂರಿಶ್ರವಾ ರಣೇ।
07117056c ವಿಶೇಷಯತಿ ವಾರ್ಷ್ಣೇಯಂ ಸಾತ್ಯಕಿಂ ಸತ್ಯವಿಕ್ರಮಂ।।

ಪಾರ್ಥ! ರಣದಲ್ಲಿ ಭೂರಿಶ್ರವನು ವಾರ್ಷ್ಣೇಯ ಸತ್ಯವಿಕ್ರಮ ಸಾತ್ಯಕಿಯನ್ನು ಮೀರಿಸಿದನೆಂದರೆ ವಿಕ್ರಮವೆಂಬುದೇ ಅಸತ್ಯವಾಗಿಬಿಡುತ್ತದೆ65.”

07117057a ಏವಮುಕ್ತೋ ಮಹಾಬಾಹುರ್ವಾಸುದೇವೇನ ಪಾಂಡವಃ।
07117057c ಮನಸಾ ಪೂಜಯಾಮಾಸ ಭೂರಿಶ್ರವಸಮಾಹವೇ।।

ರಣದಲ್ಲಿ ಮಹಾಬಾಹು ವಾಸುದೇವನು ಹೀಗೆ ಹೇಳಲು ಪಾಂಡವನು ಮನಸ್ಸಿನಲ್ಲಿಯೇ ಭೂರಿಶ್ರವನನ್ನು ಪ್ರಶಂಸಿಸಿದನು.

07117058a ವಿಕರ್ಷನ್ಸಾತ್ವತಶ್ರೇಷ್ಠಂ ಕ್ರೀಡಮಾನ ಇವಾಹವೇ।
07117058c ಸಂಹರ್ಷಯತಿ ಮಾಂ ಭೂಯಃ ಕುರೂಣಾಂ ಕೀರ್ತಿವರ್ಧನಃ।।
07117059a ಪ್ರವರಂ ವೃಷ್ಣಿವೀರಾಣಾಂ ಯನ್ನ ಹನ್ಯಾದ್ಧಿ ಸಾತ್ಯಕಿಂ।
07117059c ಮಹಾದ್ವಿಪಮಿವಾರಣ್ಯೇ ಮೃಗೇಂದ್ರ ಇವ ಕರ್ಷತಿ।।

“ಕುರುಗಳ ಕೀರ್ತಿವರ್ಧನನು ಸಾತ್ವತಶ್ರೇಷ್ಠನನ್ನು ಎಳೆದಾಡಿ ರಣಕ್ರೀಡೆಯಾಡುವಂತಿದ್ದಾನೆ. ಅರಣ್ಯದಲ್ಲಿ ಸಿಂಹವು ಮಹಾ ಆನೆಯೊಂದನ್ನು ಹೇಗೋ ಹಾಗೆ ಅವನು ವೃಷ್ಣಿವೀರರಲ್ಲಿ ಶ್ರೇಷ್ಠ ಸಾತ್ಯಕಿಯನ್ನು ಎಳೆದಾಡುತ್ತಿದ್ದಾನೆ. ಅವನನ್ನು ಇನ್ನೂ ಕೊಲ್ಲದೇ ನನ್ನ ಸಂತೋಷವನ್ನು ಹೆಚ್ಚಿಸುತ್ತಿದ್ದಾನೆ!”

07117060a ಏವಂ ತು ಮನಸಾ ರಾಜನ್ಪಾರ್ಥಃ ಸಂಪೂಜ್ಯ ಕೌರವಂ।
07117060c ವಾಸುದೇವಂ ಮಹಾಬಾಹುರರ್ಜುನಃ ಪ್ರತ್ಯಭಾಷತ।।

ರಾಜನ್! ಹೀಗೆ ಮನಸ್ಸಿನಲ್ಲಿಯೇ ಕೌರವನನ್ನು ಗೌರವಿಸಿ ಪಾರ್ಥ ಮಹಾಬಾಹು ಅರ್ಜುನನು ವಾಸುದೇವನಿಗೆ ಉತ್ತರಿಸಿದನು:

07117061a ಸೈಂಧವಾಸಕ್ತದೃಷ್ಟಿತ್ವಾನ್ನೈನಂ ಪಶ್ಯಾಮಿ ಮಾಧವ।
07117061c ಏಷ ತ್ವಸುಕರಂ ಕರ್ಮ ಯಾದವಾರ್ಥೇ ಕರೋಮ್ಯಹಂ।।

“ಸೈಂಧವನಲ್ಲಿಯೇ ಆಸಕ್ತನಾಗಿ ಗುರಿಯಿಟ್ಟಿರುವ ನಾನು ಇವನನ್ನು ನೋಡಲಿಲ್ಲ ಮಾಧವ! ಇದು ಒಳ್ಳೆಯ ಕೆಲಸವಲ್ಲದಿದ್ದರೂ66 ನಾನು ಇದನ್ನು ಯಾದವನಿಗಾಗಿ ಮಾಡುತ್ತೇನೆ!”

07117062a ಇತ್ಯುಕ್ತ್ವಾ ವಚನಂ ಕುರ್ವನ್ವಾಸುದೇವಸ್ಯ ಪಾಂಡವಃ।
07117062c ಸಖಡ್ಗಂ ಯಜ್ಞಶೀಲಸ್ಯ ಪತ್ರಿಣಾ ಬಾಹುಮಚ್ಚಿನತ್।।

ಹೀಗೆ ಹೇಳಿ ವಾಸುದೇವನ ಮಾತಿನಂತೆ ಮಾಡುತ್ತಾ ಪಾಂಡವನು ಪತ್ರಿಯಿಂದ ಖಡ್ಗವನ್ನು ಹಿಡಿದಿದ್ದ ಯಜ್ಞಶೀಲನ ಬಾಹುವನ್ನು ಕತ್ತರಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಭೂರಿಶ್ರವೋಬಾಹುಚ್ಛೇದೇ ಸಪ್ತದಶಾಧಿಕಶತತಮೋಽಧ್ಯಾಯಃ ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಭೂರಿಶ್ರವಬಾಹುಚ್ಛೇದ ಎನ್ನುವ ನೂರಾಹದಿನೇಳನೇ ಅಧ್ಯಾಯವು.