116 ಸಾತ್ಯಕರ್ಜುನದರ್ಶನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಜಯದ್ರಥವಧ ಪರ್ವ

ಅಧ್ಯಾಯ 116

ಸಾರ

ಅರ್ಜುನನು ಸಾತ್ಯಕಿಯನ್ನೂ ಅವನನ್ನು ಆಕ್ರಮಣಿಸಲು ಬರುತ್ತಿದ್ದ ಭೂರಿಶ್ರವನನ್ನೂ ನೋಡಿ ಯುಧಿಷ್ಠಿರನ ಮತ್ತು ಸಾತ್ಯಕಿಯ ರಕ್ಷಣೆಯ ಕುರಿತು ಚಿಂತಿಸಿದುದು (1-36).

07116001 ಸಂಜಯ ಉವಾಚ।
07116001a ತಮುದ್ಯತಂ ಮಹಾಬಾಹುಂ ದುಃಶಾಸನರಥಂ ಪ್ರತಿ।
07116001c ತ್ವರಿತಂ ತ್ವರಣೀಯೇಷು ಧನಂಜಯಹಿತೈಷಿಣಂ।।
07116002a ತ್ರಿಗರ್ತಾನಾಂ ಮಹೇಷ್ವಾಸಾಃ ಸುವರ್ಣವಿಕೃತಧ್ವಜಾಃ।
07116002c ಸೇನಾಸಮುದ್ರಮಾವಿಷ್ಟಮಾನರ್ತಂ ಪರ್ಯವಾರಯನ್।।

ಸಂಜಯನು ಹೇಳಿದನು: “ದುಃಶಾಸನನ ರಥದ ಮೇಲೆ ಆಕ್ರಮಣಿಸಲು ಸಿದ್ಧನಾಗಿದ್ದ, ಸೇನಾಸಮುದ್ರವನ್ನು ಧೈರ್ಯದಿಂದ ಪ್ರವೇಶಿದ, ಅವಸರದಲ್ಲಿದ್ದವರಲ್ಲಿಯೇ ಹೆಚ್ಚು ತ್ವರೆಮಾಡುತ್ತಿದ್ದ, ಧನಂಜಯನ ಹಿತೈಷಿಯಾದ ಆ ಮಹಾಬಾಹುವನ್ನು ಸುವರ್ಣವಿಕೃತ ಧ್ವಜರಾದ ಮಹೇಷ್ವಾಸ ತ್ರಿಗರ್ತರು ಸುತ್ತುವರೆದರು.

07116003a ಅಥೈನಂ ರಥವಂಶೇನ ಸರ್ವತಃ ಸನ್ನಿವಾರ್ಯ ತೇ।
07116003c ಅವಾಕಿರಂ ಶರವ್ರಾತೈಃ ಕ್ರುದ್ಧಾಃ ಪರಮಧನ್ವಿನಃ।।

ಆ ಕ್ರುದ್ಧ ಪರಮಧನ್ವಿಗಳು ರಥಗುಂಪುಗಳಿಂದ ಅವನನ್ನು ಎಲ್ಲಕಡೆಗಳಿಂದ ಸುತ್ತುವರೆದು ಶರವ್ರಾತಗಳಿಂದ ಮುಚ್ಚಿ ತಡೆದರು.

07116004a ಅಜಯದ್ರಾಜಪುತ್ರಾಂಸ್ತಾನ್ಯತಮಾನಾನ್ಮಹಾರಣೇ।
07116004c ಏಕಃ ಪಂಚಾಶತಂ ಶತ್ರೂನ್ಸಾತ್ಯಕಿಃ ಸತ್ಯವಿಕ್ರಮಃ।।

ರಾಜನ್! ಮಹಾರಣದಲ್ಲಿ ಪ್ರಯತ್ನಿಸುತ್ತಿದ್ದ ಆ ಐನೂರು ಶತ್ರು ರಾಜಪುತ್ರರನ್ನು ಸತ್ಯವಿಕ್ರಮಿ ಸಾತ್ಯಕಿಯೊಬ್ಬನೇ ಸೋಲಿಸಿದನು.

07116005a ಸಂಪ್ರಾಪ್ಯ ಭಾರತೀಮಧ್ಯಂ ತಲಘೋಷಸಮಾಕುಲಂ।
07116005c ಅಸಿಶಕ್ತಿಗದಾಪೂರ್ಣಮಪ್ಲವಂ ಸಲಿಲಂ ಯಥಾ।।
07116006a ತತ್ರಾದ್ಭುತಮಪಶ್ಯಾಮ ಶೈನೇಯಚರಿತಂ ರಣೇ।

ಚಪ್ಪಾಳೆ ಘೋಷಗಳಿಂದ ತುಂಬಿಹೋಗಿದ್ದ, ಖಡ್ಗ-ಶಕ್ತಿ-ಗದೆಗಳಿಂದ ತುಂಬಿಹೋಗಿದ್ದ, ನೌಕೆಯೇ ಇಲ್ಲದ ಸಮುದ್ರದಂತಿದ್ದ ಭಾರತೀ ಸೇನೆಯ ಮಧ್ಯದಲ್ಲಿ ಪ್ರವೇಶಿಸಿದ ಶೈನೇಯನು ರಣದಲ್ಲಿ ನಡೆಸಿದ ಅದ್ಭುತವನ್ನು ನೋಡಿದೆವು.

07116006c ಪ್ರತೀಚ್ಯಾಂ ದಿಶಿ ತಂ ದೃಷ್ಟ್ವಾ ಪ್ರಾಚ್ಯಾಂ ಪಶ್ಯಾಮ ಲಾಘವಾತ್।।
07116007a ಉದೀಚೀಂ ದಕ್ಷಿಣಾಂ ಪ್ರಾಚೀಂ ಪ್ರತೀಚೀಂ ಪ್ರಸೃತಸ್ತಥಾ।
07116007c ನೃತ್ಯನ್ನಿವಾಚರಚ್ಚೂರೋ ಯಥಾ ರಥಶತಂ ತಥಾ।।

ಅವನ ಲಾಘವವು ಎಷ್ಟಿತ್ತೆಂದರೆ ಪಶ್ಚಿಮದಲ್ಲಿ ಅವನನ್ನು ನೋಡಿದರೆ ಪೂರ್ವದಲ್ಲಿಯೂ ನೋಡುತ್ತಿದ್ದೆವು. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮಗಳಲ್ಲಿ ಮತ್ತು ಇತರ ದಿಕ್ಕುಗಳಲ್ಲಿ ನೂರು ರಥಗಳೂ ಒಂದರಲ್ಲಿಯೇ ಇವೆಯೋ ಎನ್ನುವಂತೆ ಆ ಶೂರನು ಸಂಚರಿಸಿ ಕಾಣಿಸಿಕೊಳ್ಳುತ್ತಿದ್ದನು.

07116008a ತದ್ದೃಷ್ಟ್ವಾ ಚರಿತಂ ತಸ್ಯ ಸಿಂಹವಿಕ್ರಾಂತಗಾಮಿನಃ।
07116008c ತ್ರಿಗರ್ತಾಃ ಸಂನ್ಯವರ್ತಂತ ಸಂತಪ್ತಾಃ ಸ್ವಜನಂ ಪ್ರತಿ।।

ಸಿಂಹದಂತೆ ನಡೆಯುತ್ತಿದ್ದ ಆ ವಿಕ್ರಾಂತನ ಚರಿತವನ್ನು ನೋಡಿ ಸಂತಪ್ತ ತ್ರಿಗರ್ತರು ತಮ್ಮವರ ಕಡೆ ಪಲಾಯನಮಾಡಿದರು.

07116009a ತಮನ್ಯೇ ಶೂರಸೇನಾನಾಂ ಶೂರಾಃ ಸಂಖ್ಯೇ ನ್ಯವಾರಯನ್।
07116009c ನಿಯಚ್ಚಂತಃ ಶರವ್ರಾತೈರ್ಮತ್ತಂ ದ್ವಿಪಮಿವಾಂಕುಶೈಃ।।

ಆಗ ಶೂರಸೇನರ ಇತರ ಶೂರರು ರಣದಲ್ಲಿ ಮದಿಸಿದ ಆನೆಯನ್ನು ಅಂಕುಶಗಳಿಂದ ಹೇಗೋ ಹಾಗೆ ಅವನನ್ನು ಶರವ್ರಾತಗಳಿಂದ ತಡೆದರು.

07116010a ತಾನ್ನ್ಯವಾರಯದಾಯಸ್ತಾನ್ಮುಹೂರ್ತಮಿವ ಸಾತ್ಯಕಿಃ।
07116010c ತತಃ ಕಲಿಂಗೈರ್ಯುಯುಧೇ ಸೋಽಚಿಂತ್ಯಬಲವಿಕ್ರಮಃ।।

ಮುಹೂರ್ತದಲ್ಲಿಯೇ ಅವರನ್ನು ಹಿಂದೆಸರಿಸಿ ಅಚಿಂತ್ಯಬಲವಿಕ್ರಮಿ ಸಾತ್ಯಕಿಯು ಕಲಿಂಗರೊಂದಿಗೆ ಯುದ್ಧಮಾಡಿದನು.

07116011a ತಾಂ ಚ ಸೇನಾಮತಿಕ್ರಮ್ಯ ಕಲಿಂಗಾನಾಂ ದುರತ್ಯಯಾಂ।
07116011c ಅಥ ಪಾರ್ಥಂ ಮಹಾಬಾಹುರ್ಧನಂಜಯಮುಪಾಸದತ್।।

ಸೋಲಿಸಲು ಕಷ್ಟವಾದ ಕಲಿಂಗರ ಆ ಸೇನೆಯನ್ನೂ ಅತಿಕ್ರಮಿಸಿ ಆ ಮಹಾಬಾಹುವು ಪಾರ್ಥ ಧನಂಜಯನ ಬಳಿ ಬಂದನು.

07116012a ತರನ್ನಿವ ಜಲೇ ಶ್ರಾಂತೋ ಯಥಾ ಸ್ಥಲಮುಪೇಯಿವಾನ್।
07116012c ತಂ ದೃಷ್ಟ್ವಾ ಪುರುಷವ್ಯಾಘ್ರಂ ಯುಯುಧಾನಃ ಸಮಾಶ್ವಸತ್।।

ನೀರಿನಲ್ಲಿ ಈಸಿ ಬಳಲಿದ ಈಜುಗಾರನು ದಡವನ್ನು ಸೇರಿದವನಂತೆ ಆ ಪುರುಷವ್ಯಾಘ್ರನನ್ನು ಕಂಡು ಯುಯುಧಾನನು ಆಶ್ವಾಸಿತನಾದನು.

07116013a ತಮಾಯಾಂತಮಭಿಪ್ರೇಕ್ಷ್ಯ ಕೇಶವೋಽರ್ಜುನಮಬ್ರವೀತ್।
07116013c ಅಸಾವಾಯಾತಿ ಶೈನೇಯಸ್ತವ ಪಾರ್ಥ ಪದಾನುಗಃ।।

ಬರುತ್ತಿರುವ ಅವನನ್ನು ನೋಡಿ ಕೇಶವನು ಅರ್ಜುನನಿಗೆ ಹೇಳಿದನು: “ಪಾರ್ಥ! ಇಗೋ ನಿನ್ನನ್ನೇ ಅನುಸರಿಸಿ ಶೈನೇಯನು ಇಲ್ಲಿಗೆ ಬಂದಿದ್ದಾನೆ.

07116014a ಏಷ ಶಿಷ್ಯಃ ಸಖಾ ಚೈವ ತವ ಸತ್ಯಪರಾಕ್ರಮಃ।
07116014c ಸರ್ವಾನ್ಯೋಧಾಂಸ್ತೃಣೀಕೃತ್ಯ ವಿಜಿಗ್ಯೇ ಪುರುಷರ್ಷಭಃ।।

ಇವನು ನಿನ್ನ ಶಿಷ್ಯ. ಸಖನೂ ಕೂಡ. ಈ ಸತ್ಯಪರಾಕ್ರಮೀ ಪುರುಷರ್ಷಭನು ಸರ್ವಯೋಧರನ್ನೂ ತೃಣೀಕರಿಸಿ ಜಯಿಸಿದ್ದಾನೆ.

07116015a ಏಷ ಕೌರವಯೋಧಾನಾಂ ಕೃತ್ವಾ ಘೋರಮುಪದ್ರವಂ।
07116015c ತವ ಪ್ರಾಣೈಃ ಪ್ರಿಯತರಃ ಕಿರೀಟಿನ್ನೇತಿ ಸಾತ್ಯಕಿಃ।।

ಕಿರೀಟೀ! ನಿನ್ನ ಪ್ರಾಣಗಳಿಗಿಂತಲೂ ಹೆಚ್ಚು ಪ್ರಿಯ ಸಾತ್ಯಕಿಯು ಕೌರವಯೋಧರಿಗೆ ಘೋರ ಉಪದ್ರವವನ್ನು ನೀಡಿ ಇಲ್ಲಿಗೆ ಬಂದಿದ್ದಾನೆ.

07116016a ಏಷ ದ್ರೋಣಂ ತಥಾ ಭೋಜಂ ಕೃತವರ್ಮಾಣಮೇವ ಚ।
07116016c ಕದರ್ಥೀಕೃತ್ಯ ವಿಶಿಖೈಃ ಫಲ್ಗುನಾಭ್ಯೇತಿ ಸಾತ್ಯಕಿಃ।।

ಇಗೋ! ಸಾತ್ಯಕಿಯು ದ್ರೋಣ ಮತ್ತು ಭೋಜ ಕೃತವರ್ಮನನ್ನೂ ವಿಶಿಖಗಳಿಂದ ಅಲ್ಲಗಾಣಿಸಿ ಫಲ್ಗುನನ ಬಳಿಗೆಂದು ಬಂದಿದ್ದಾನೆ.

07116017a ಧರ್ಮರಾಜಪ್ರಿಯಾನ್ವೇಷೀ ಹತ್ವಾ ಯೋಧಾನ್ವರಾನ್ವರಾನ್।
07116017c ಶೂರಶ್ಚೈವ ಕೃತಾಸ್ತ್ರಶ್ಚ ಫಲ್ಗುನಾಭ್ಯೇತಿ ಸಾತ್ಯಕಿಃ।।

ಧರ್ಮರಾಜನಿಗೆ ಪ್ರಿಯವಾದುದನ್ನು ಮಾಡಬಯಸಿ, ಶ್ರೇಷ್ಠರಲ್ಲಿ ಶ್ರೇಷ್ಠ ಯೋಧರನ್ನು ಸಂಹರಿಸಿ ಕೃತಾಸ್ತ್ರ ಸಾತ್ಯಕಿಯು ಫಲ್ಗುನನ ಬಳಿಗೆಂದು ಬಂದಿದ್ದಾನೆ.

07116018a ಕೃತ್ವಾ ಸುದುಷ್ಕರಂ ಕರ್ಮ ಸೈನ್ಯಮಧ್ಯೇ ಮಹಾಬಲಃ।
07116018c ತವ ದರ್ಶನಮನ್ವಿಚ್ಚನ್ಪಾಂಡವಾಭ್ಯೇತಿ ಸಾತ್ಯಕಿಃ।।

ಪಾಂಡವ! ಸೇನೆಯ ಮಧ್ಯದಲ್ಲಿ ಸುದುಷ್ಕರ ಕರ್ಮಗಳನ್ನು ಮಾಡಿ ನಿನ್ನ ದರ್ಶನವನ್ನು ಬಯಸಿ ಮಹಾಬಲ ಸಾತ್ಯಕಿಯು ಬಂದಿದ್ದಾನೆ.

07116019a ಬಹೂನೇಕರಥೇನಾಜೌ ಯೋಧಯಿತ್ವಾ ಮಹಾರಥಾನ್।
07116019c ಆಚಾರ್ಯಪ್ರಮುಖಾನ್ಪಾರ್ಥ ಆಯಾತ್ಯೇಷ ಹಿ ಸಾತ್ಯಕಿಃ।।

ಪಾರ್ಥ! ಏಕರಥನಾಗಿ ಆಚಾರ್ಯನೇ ಮೊದಲಾದ ಮಹಾರಥರೊಡನೆ ಯುದ್ಧಮಾಡಿ ಸಾತ್ಯಕಿಯು ಇಲ್ಲಿಗೆ ಬಂದಿದ್ದಾನೆ.

07116020a ಸ್ವಬಾಹುಬಲಮಾಶ್ರಿತ್ಯ ವಿದಾರ್ಯ ಚ ವರೂಥಿನೀಂ।
07116020c ಪ್ರೇಷಿತೋ ಧರ್ಮಪುತ್ರೇಣ ಪರ್ಥೈಷೋಽಭ್ಯೇತಿ ಸಾತ್ಯಕಿಃ।।

ಧರ್ಮಪುತ್ರನಿಂದ ಕಳುಹಿಸಲ್ಪಟ್ಟ ಸಾತ್ಯಕಿಯು ಸ್ವಬಾಹುಬಲವನ್ನೇ ಆಶ್ರಯಿಸಿ ಸೇನೆಯನ್ನು ಭೇದಿಸಿ ನಿನ್ನ ಬಳಿ ಬಂದಿದ್ದಾನೆ.

07116021a ಯಸ್ಯ ನಾಸ್ತಿ ಸಮೋ ಯೋಧಃ ಕೌರವೇಷು ಕಥಂ ಚನ।
07116021c ಸೋಽಯಮಾಯಾತಿ ಕೌಂತೇಯ ಸಾತ್ಯಕಿಃ ಸತ್ಯವಿಕ್ರಮಃ।।

ಕೌಂತೇಯ! ಇಲ್ಲಿಗೆ ಬಂದ ಸತ್ಯವಿಕ್ರಮಿ ಸಾತ್ಯಕಿಯ ಸಮನಾದ ಯೋಧನು ಕೌರವರಲ್ಲಿ ಯಾರೂ ಇಲ್ಲ.

07116022a ಕುರುಸೈನ್ಯಾದ್ವಿಮುಕ್ತೋ ವೈ ಸಿಂಹೋ ಮಧ್ಯಾದ್ಗವಾಮಿವ।
07116022c ನಿಹತ್ಯ ಬಹುಲಾಃ ಸೇನಾಃ ಪಾರ್ಥೈಷೋಽಭ್ಯೇತಿ ಸಾತ್ಯಕಿಃ।।

ಪಾರ್ಥ! ಗೋವುಗಳ ಮಧ್ಯದಿಂದ ಬರುವ ಸಿಂಹದಂತೆ ಸಾತ್ಯಕಿಯು ಬಹಳ ಸೇನೆಗಳನ್ನು ಸಂಹರಿಸಿ ಇಲ್ಲಿಗೆ ಬಂದಿದ್ದಾನೆ.

07116023a ಏಷ ರಾಜಸಹಸ್ರಾಣಾಂ ವಕ್ತ್ರೈಃ ಪಂಕಜಸನ್ನಿಭೈಃ।
07116023c ಆಸ್ತೀರ್ಯ ವಸುಧಾಂ ಪಾರ್ಥ ಕ್ಷಿಪ್ರಮಾಯಾತಿ ಸಾತ್ಯಕಿಃ।।

ಪಾರ್ಥ! ಸಹಸ್ರಾರು ರಾಜರ ಕಮಲಗಳಂತಿದ್ದ ಶಿರಗಳನ್ನು ಕತ್ತರಿಸಿ ಭೂಮಿಯ ಮೇಲೆ ಚೆಲ್ಲಿ ಬೇಗನೇ ಸಾತ್ಯಕಿಯು ಇಲ್ಲಿಗೆ ಬಂದಿದ್ದಾನೆ.

07116024a ಏಷ ದುರ್ಯೋಧನಂ ಜಿತ್ವಾ ಭ್ರಾತೃಭಿಃ ಸಹಿತಂ ರಣೇ।
07116024c ನಿಹತ್ಯ ಜಲಸಂಧಂ ಚ ಕ್ಷಿಪ್ರಮಾಯಾತಿ ಸಾತ್ಯಕಿಃ।।

ಈ ಸಾತ್ಯಕಿಯು ರಣದಲ್ಲಿ ಸಹೋದರರೊಂದಿಗೆ ದುರ್ಯೋದನನನ್ನು ಸೋಲಿಸಿ, ಜಲಸಂಧನನ್ನೂ ಸಂಹರಿಸಿ ಬೇಗನೆ ಇಲ್ಲಿಗೆ ಬಂದಿದ್ದಾನೆ.

07116025a ರುಧಿರೌಘವತೀಂ ಕೃತ್ವಾ ನದೀಂ ಶೋಣಿತಕರ್ದಮಾಂ।
07116025c ತೃಣವನ್ನ್ಯಸ್ಯ ಕೌರವ್ಯಾನೇಷ ಆಯಾತಿ ಸಾತ್ಯಕಿಃ।।

ರಕ್ತ-ಮಾಂಸಗಳ ನದಿಯು ರಕ್ತದ ಪ್ರವಾಹದಿಂದ ಹರಿಯುವಂತೆ ಮಾಡಿ, ಕೌರವರನ್ನು ಹುಲ್ಲುಗಳಂತೆ ಮಾಡಿ ಸಾತ್ಯಕಿಯು ಬರುತ್ತಿದ್ದಾನೆ.”

07116026a ತತೋಽಪ್ರಹೃಷ್ಟಃ ಕೌಂತೇಯಃ ಕೇಶವಂ ವಾಕ್ಯಮಬ್ರವೀತ್।
07116026c ನ ಮೇ ಪ್ರಿಯಂ ಮಹಾಬಾಹೋ ಯನ್ಮಾಮಭ್ಯೇತಿ ಸಾತ್ಯಕಿಃ।।

ಆಗ ಅಸಂತೋಷದಿಂದ ಕೌಂತೇಯನು ಕೇಶವನಿಗೆ ಹೇಳಿದನು: “ಮಹಾಬಾಹೋ! ಸಾತ್ಯಕಿಯು ನನ್ನ ಬಳಿ ಬಂದಿರುವುದು ನನಗೆ ಒಳ್ಳೆಯದೆನಿಸುತ್ತಿಲ್ಲ.

07116027a ನ ಹಿ ಜಾನಾಮಿ ವೃತ್ತಾಂತಂ ಧರ್ಮರಾಜಸ್ಯ ಕೇಶವ।
07116027c ಸಾತ್ವತೇನ ವಿಹೀನಃ ಸ ಯದಿ ಜೀವತಿ ವಾ ನ ವಾ।।

ಕೇಶವ! ಸಾತ್ವತನಿಲ್ಲದೇ ಧರ್ಮರಾಜನು ಜೀವಂತವಾಗಿದ್ದಾನೋ ಅಥವಾ ಇಲ್ಲವೋ ಎಂಬ ವೃತ್ತಾಂತವನ್ನು ನಾನು ಅರಿತಿಲ್ಲ.

07116028a ಏತೇನ ಹಿ ಮಹಾಬಾಹೋ ರಕ್ಷಿತವ್ಯಃ ಸ ಪಾರ್ಥಿವಃ।
07116028c ತಮೇಷ ಕಥಮುತ್ಸೃಜ್ಯ ಮಮ ಕೃಷ್ಣ ಪದಾನುಗಃ।।

ಮಹಾಬಾಹೋ! ಇವನೇ ಪಾರ್ಥಿವನನ್ನು ರಕ್ಷಿಸಬೇಕಾಗಿತ್ತು. ಹಾಗಿರುವಾಗ ಕೃಷ್ಣ! ಅವನನ್ನು ಬಿಟ್ಟು ಇವನು ಏಕೆ ನನ್ನನ್ನು ಅನುಸರಿಸಿ ಬಂದಿದ್ದಾನೆ?

07116029a ರಾಜಾ ದ್ರೋಣಾಯ ಚೋತ್ಸೃಷ್ಟಃ ಸೈಂಧವಶ್ಚಾನಿಪಾತಿತಃ।
07116029c ಪ್ರತ್ಯುದ್ಯಾತಶ್ಚ ಶೈನೇಯಮೇಷ ಭೂರಿಶ್ರವಾ ರಣೇ।।

ರಾಜನನ್ನು ದ್ರೋಣನಿಗಾಗಿ ಬಿಟ್ಟು ಬಿಟ್ಟಿದ್ದಾನೆ. ಸೈಂಧವನ ಪತನವಿನ್ನೂ ಆಗಿಲ್ಲ. ರಣದಲ್ಲಿ ಭೂರಿಶ್ರವನು ಶೈನೇಯನನ್ನು ಆಕ್ರಮಣಿಸಲು ಮುಂದೆ ಬರುತ್ತಿದ್ದಾನೆ.

07116030a ಸೋಽಯಂ ಗುರುತರೋ ಭಾರಃ ಸೈಂಧವಾನ್ಮೇ ಸಮಾಹಿತಃ।
07116030c ಜ್ಞಾತವ್ಯಶ್ಚ ಹಿ ಮೇ ರಾಜಾ ರಕ್ಷಿತವ್ಯಶ್ಚ ಸಾತ್ಯಕಿಃ।।

ಸೈಂಧವನ ಕುರಿತಾದ ಈ ಗುರುತರ ಭಾರವನ್ನು ಹೊತ್ತಿರುವ ನಾನು ರಾಜನ ಕುರಿತೂ ಚಿಂತಿಸಬೇಕು ಮತ್ತು ಸಾತ್ಯಕಿಯನ್ನೂ ರಕ್ಷಿಸಬೇಕಾಗಿದೆ.

07116031a ಜಯದ್ರಥಶ್ಚ ಹಂತವ್ಯೋ ಲಂಬತೇ ಚ ದಿವಾಕರಃ।
07116031c ಶ್ರಾಂತಶ್ಚೈಷ ಮಹಾಬಾಹುರಲ್ಪಪ್ರಾಣಶ್ಚ ಸಾಂಪ್ರತಂ।।

ದಿವಾಕರನು ಇಳಿಯುತ್ತಿದ್ದಾನೆ. ಜಯದ್ರಥನನ್ನೂ ಕೊಲ್ಲಬೇಕಾಗಿದೆ. ಮಹಾಬಾಹು ಸಾತ್ಯಕಿಯಾದರೋ ಬಳಲಿದ್ದಾನೆ. ಆಯುಧಗಳು ಕಡಿಮೆಯಾಗಿವೆ.

07116032a ಪರಿಶ್ರಾಂತಾ ಹಯಾಶ್ಚಾಸ್ಯ ಹಯಯಂತಾ ಚ ಮಾಧವ।
07116032c ನ ಚ ಭೂರಿಶ್ರವಾಃ ಶ್ರಾಂತಃ ಸಸಹಾಯಶ್ಚ ಕೇಶವ।।

ಮಾಧವ! ಕೇಶವ! ಅವನ ಕುದುರೆಗಳೂ ಸಾರಥಿಯೂ ಬಳಲಿದ್ದಾರೆ. ಸಹಾಯವುಳ್ಳ ಭೂರಿಶ್ರವನು ಬಳಲಿಲ್ಲ.

07116033a ಅಪೀದಾನೀಂ ಭವೇದಸ್ಯ ಕ್ಷೇಮಮಸ್ಮಿನ್ಸಮಾಗಮೇ।
07116033c ಕಚ್ಚಿನ್ನ ಸಾಗರಂ ತೀರ್ತ್ವಾ ಸಾತ್ಯಕಿಃ ಸತ್ಯವಿಕ್ರಮಃ।
07116033e ಗೋಷ್ಪದಂ ಪ್ರಾಪ್ಯ ಸೀದೇತ ಮಹೌಜಾಃ ಶಿನಿಪುಂಗವಃ।।

ಈ ಸಮಾಗಮದಲ್ಲಿ ಅವನು ಸುರಕ್ಷಿತನಾಗಿರಬಲ್ಲನೇ? ಸಾಗರವನ್ನು ಈಸಿಬಂದಿರುವ ಸತ್ಯವಿಕ್ರಮಿ ಸಾತ್ಯಕಿ ಮಹೋಜಸ ಶಿನಿಪುಂಗವನು ಈಗ ಗೋವಿನ ಪಾದದ ಗುಳಿಯನ್ನು ತಲುಪಿ ಎಡವಿ ಬೀಳಬಲ್ಲನೇ?

07116034a ಅಪಿ ಕೌರವಮುಖ್ಯೇನ ಕೃತಾಸ್ತ್ರೇಣ ಮಹಾತ್ಮನಾ।
07116034c ಸಮೇತ್ಯ ಭೂರಿಶ್ರವಸಾ ಸ್ವಸ್ತಿಮಾನ್ಸಾತ್ಯಕಿರ್ಭವೇತ್।।

ಕೌರವ ಮುಖ್ಯ ಕೃತಾಸ್ತ್ರ ಮಹಾತ್ಮ ಭೂರಿಶ್ರವನನ್ನು ಎದುರಿಸಿ ಸಾತ್ಯಕಿಯು ಕ್ಷೇಮದಿಂದಿರಬಲ್ಲನೇ?

07116035a ವ್ಯತಿಕ್ರಮಮಿಮಂ ಮನ್ಯೇ ಧರ್ಮರಾಜಸ್ಯ ಕೇಶವ।
07116035c ಆಚಾರ್ಯಾದ್ಭಯಮುತ್ಸೃಜ್ಯ ಯಃ ಪ್ರೇಷಯತಿ ಸಾತ್ಯಕಿಂ।।

ಕೇಶವ! ಆಚಾರ್ಯನ ಭಯವನ್ನು ಕಡೆಗಣಿಸಿ ಸಾತ್ಯಕಿಯನ್ನು ಕಳುಹಿಸಿರುವುದು ಧರ್ಮರಾಜನ ಒಂದು ದೊಡ್ಡ ತಪ್ಪೆಂದು ಭಾವಿಸುತ್ತೇನೆ.

07116036a ಗ್ರಹಣಂ ಧರ್ಮರಾಜಸ್ಯ ಖಗಃ ಶ್ಯೇನ ಇವಾಮಿಷಂ।
07116036c ನಿತ್ಯಮಾಶಂಸತೇ ದ್ರೋಣಃ ಕಚ್ಚಿತ್ಸ್ಯಾತ್ಕುಶಲೀ ನೃಪಃ।।

ಪಕ್ಷಿ ಗಿಡುಗವು ಮಾಂಸವನ್ನು ಹೇಗೋ ಹಾಗೆ ದ್ರೋಣನು ಧರ್ಮರಾಜನನ್ನು ಹಿಡಿಯಲು ಸದಾ ಬಯಸುತ್ತಿರುತ್ತಾನೆ. ನೃಪನು ಕುಶಲನಾಗಿರುವನೋ ಎನೋ!””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಾತ್ಯಕರ್ಜುನದರ್ಶನೇ ಷೋಡಶಾಧಿಕಶತತಮೋಽಧ್ಯಾಯಃ ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಾತ್ಯಕರ್ಜುನದರ್ಶನ ಎನ್ನುವ ನೂರಾಹದಿನಾರನೇ ಅಧ್ಯಾಯವು.