ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 115
ಸಾರ
ಸಾತ್ಯಕಿಯಿಂದ ಅಲಂಬುಸನ ವಧೆ (1-24).
07115001 ಧೃತರಾಷ್ಟ್ರ ಉವಾಚ।
07115001a ಅಹನ್ಯಹನಿ ಮೇ ದೀಪ್ತಂ ಯಶಃ ಪತತಿ ಸಂಜಯ।
07115001c ಹತಾ ಮೇ ಬಹವೋ ಯೋಧಾ ಮನ್ಯೇ ಕಾಲಸ್ಯ ಪರ್ಯಯಂ।।
ಧೃತರಾಷ್ಟ್ರನು ಹೇಳಿದನು: “ಸಂಜಯ! ದಿನ ದಿನವೂ ನನ್ನ ಯಶಸ್ಸಿನ ದೀಪವು ಕಂದುತ್ತಿದೆ. ನನ್ನ ಬಹಳಷ್ಟು ಯೋಧರು ಹತರಾಗಿದ್ದಾರೆ. ಇದು ಕಾಲದ ಪರ್ಯಯವೆಂದು ನನಗನ್ನಿಸುತ್ತದೆ.
07115002a ಧನಂಜಯಸ್ತು ಸಂಕ್ರುದ್ಧಃ ಪ್ರವಿಷ್ಟೋ ಮಾಮಕಂ ಬಲಂ।
07115002c ರಕ್ಷಿತಂ ದ್ರೋಣಕರ್ಣಾಭ್ಯಾಮಪ್ರವೇಶ್ಯಂ ಸುರೈರಪಿ।।
ದ್ರೋಣ-ಕರ್ಣಾದಿಗಳಿಂದ ರಕ್ಷಿಸಲ್ಪಟ್ಟ, ಸುರರಿಗೂ ಪ್ರವೇಶಿಸಲು ಅಸಾಧ್ಯವಾದ ನನ್ನ ಸೇನೆಯನ್ನು ಸಂಕ್ರುದ್ಧ ಧನಂಜಯನು ಪ್ರವೇಶಿಸಿಬಿಟ್ಟನು.
07115003a ತಾಭ್ಯಾಂ ಊರ್ಜಿತವೀರ್ಯಾಭ್ಯಾಮಾಪ್ಯಾಯಿತಪರಾಕ್ರಮಃ।
07115003c ಸಹಿತಃ ಕೃಷ್ಣಭೀಮಾಭ್ಯಾಂ ಶಿನೀನಾಂ ಋಷಭೇಣ ಚ।।
ಕೃಷ್ಣ-ಭೀಮರ ಮತ್ತು ಶಿನಿಗಳ ವೃಷಭ ವೀರ್ಯ ಮತ್ತು ಪರಾಕ್ರಮಗಳೊಡನೆ ಸೇರಿ ಇವನ ವೀರ್ಯ ಪರಾಕ್ರಮಗಳು ಇನ್ನೂ ಹೆಚ್ಚಾಗಿವೆ.
07115004a ತದಾ ಪ್ರಭೃತಿ ಮಾ ಶೋಕೋ ದಹತ್ಯಗ್ನಿರಿವಾಶಯಂ।
07115004c ಗ್ರಸ್ತಾನ್ ಹಿ ಪ್ರತಿಪಶ್ಯಾಮಿ ಭೂಮಿಪಾಲಾನ್ಸಸೈಂಧವಾನ್।।
ಆವಾಗಿನಿಂದ ಅಗ್ನಿಯಂತೆ ಶೋಕವು ನನ್ನನ್ನು ಸುಡುತ್ತಿದೆ. ಸೈಂಧವನೊಂದಿಗೆ ಎಲ್ಲ ಭೂಮಿಪಾಲರೂ ಗ್ರಸ್ತರಾಗಿರುವುದನ್ನು ನೋಡುತ್ತಿದ್ದೇನೆ.
07115005a ಅಪ್ರಿಯಂ ಸುಮಹತ್ಕೃತ್ವಾ ಸಿಂಧುರಾಜಃ ಕಿರೀಟಿನಃ।
07115005c ಚಕ್ಷುರ್ವಿಷಯಮಾಪನ್ನಃ ಕಥಂ ಮುಚ್ಯೇತ ಜೀವಿತಃ।।
ಕಿರೀಟಿಗೆ ಮಹಾ ಅಪ್ರಿಯ ಕಾರ್ಯವನ್ನು ಮಾಡಿ ಸಿಂಧುರಾಜನು ಅವನ ಕಣ್ಣಿಗೆ ಬಿದ್ದು ಹೇಗೆ ತಾನೇ ಜೀವಂತ ಉಳಿದಾನು?
07115006a ಅನುಮಾನಾಚ್ಚ ಪಶ್ಯಾಮಿ ನಾಸ್ತಿ ಸಂಜಯ ಸೈಂಧವಃ।
07115006c ಯುದ್ಧಂ ತು ತದ್ಯಥಾ ವೃತ್ತಂ ತನ್ಮಮಾಚಕ್ಷ್ವ ಪೃಚ್ಚತಃ।।
ಸಂಜಯ! ಅನುಮಾನದಿಂದ ನನಗೆ ಸೈಂಧವನು ಈಗಲೇ ಇಲ್ಲವಾಗಿದ್ದಾನೆ ಎಂದು ತೋರುತ್ತಿದೆ. ಯುದ್ಧವಾದರೋ ಹೇಗೆ ನಡೆಯಿತೋ ಹಾಗೆಯೇ ಕೇಳುತ್ತಿರುವ ನನಗೆ ಹೇಳು.
07115007a ಯಚ್ಚ ವಿಕ್ಷೋಭ್ಯ ಮಹತೀಂ ಸೇನಾಂ ಸಂಲೋಡ್ಯ ಚಾಸಕೃತ್।
07115007c ಏಕಃ ಪ್ರವಿಷ್ಟಃ ಸಂಕ್ರುದ್ಧೋ ನಲಿನೀಮಿವ ಕುಂಜರಃ।।
07115008a ತಸ್ಯ ವೃಷ್ಣಿಪ್ರವೀರಸ್ಯ ಬ್ರೂಹಿ ಯುದ್ಧಂ ಯಥಾತಥಂ।
07115008c ಧನಂಜಯಾರ್ಥೇ ಯತ್ತಸ್ಯ ಕುಶಲೋ ಹ್ಯಸಿ ಸಂಜಯ।।
ಧನಂಜಯನಿಗಾಗಿ ಪ್ರಯತ್ನಪಡುತ್ತಾ, ಸಂಕ್ರುದ್ಧ ಆನೆಯೊಂದು ಕಮಲಗಳಿಂದ ಕೂಡಿದ ಸರೋವರವನ್ನು ಹೇಗೋ ಹಾಗೆ ಮಹಾ ಸೇನೆಯನ್ನು ಅಲ್ಲೋಲಕಲ್ಲೋಲಗೊಳಿಸಿದ ಆ ವೃಷ್ಣಿಪ್ರವೀರನ ಯುದ್ಧವನ್ನು ಯಥಾವತ್ತಾಗಿ ಹೇಳು. ಸಂಜಯ! ನೀನು ಹೇಳುವುದರಲ್ಲಿ ಕುಶಲನಾಗಿದ್ದೀಯೆ.”
07115009 ಸಂಜಯ ಉವಾಚ।
07115009a ತಥಾ ತು ವೈಕರ್ತನಪೀಡಿತಂ ತಂ ಭೀಮಂ ಪ್ರಯಾಂತಂ ಪುರುಷಪ್ರವೀರಂ।
07115009c ಸಮೀಕ್ಷ್ಯ ರಾಜನ್ನರವೀರಮಧ್ಯೇ ಶಿನಿಪ್ರವೀರೋಽನುಯಯೌ ರಥೇನ।।
ಸಂಜಯನು ಹೇಳಿದನು: “ರಾಜನ್! ಹಾಗೆ ವೈಕರ್ತನನಿಂದ ಪೀಡಿತನಾಗಿ ನರವೀರರ ಮಧ್ಯೆ ಹೋಗುತ್ತಿದ್ದ ಪುರುಷಪ್ರವೀರ ಭೀಮನನ್ನು ನೋಡಿ ಶಿನಿಪ್ರವೀರನು ಅವನನ್ನು ರಥದಲ್ಲಿ ಹಿಂಬಾಲಿಸಿದನು.
07115010a ನದನ್ಯಥಾ ವಜ್ರಧರಸ್ತಪಾಂತೇ ಜ್ವಲನ್ಯಥಾ ಜಲದಾಂತೇ ಚ ಸೂರ್ಯಃ।
07115010c ನಿಘ್ನನ್ನಮಿತ್ರಾನ್ಧನುಷಾ ದೃಢೇನ ಸಂಕಂಪಯಂಸ್ತವ ಪುತ್ರಸ್ಯ ಸೇನಾಂ।।
ಬೇಸಗೆಯ ಅಂತ್ಯದಲ್ಲಿ ವಜ್ರಧರನು ಹೇಗೆ ಗುಡುಗುವನೋ, ಮಳೆಗಾಲದ ಅಂತ್ಯದಲ್ಲಿ ಸೂರ್ಯನು ಹೇಗೆ ಸುಡುವನೋ ಹಾಗೆ ದೃಢ ಧನುಸ್ಸಿನಿಂದ ಶತ್ರುಗಳನ್ನು ವಧಿಸುತ್ತಾ ಅವನು ನಿನ್ನ ಮಗನ ಸೇನೆಯನ್ನು ನಡುಗಿಸಿದನು.
07115011a ತಂ ಯಾಂತಮಶ್ವೈ ರಜತಪ್ರಕಾಶೈರ್ ಆಯೋಧನೇ ನರವೀರಂ ಚರಂತಂ।
07115011c ನಾಶಕ್ನುವನ್ವಾರಯಿತುಂ ತ್ವದೀಯಾಃ ಸರ್ವೇ ರಥಾ ಭಾರತ ಮಾಧವಾಗ್ರ್ಯಂ।।
ಭಾರತ! ಬೆಳ್ಳಿಯ ಪ್ರಕಾಶದ ಕುದುರೆಗಳೊಂದಿಗೆ ಗರ್ಜಿಸುತ್ತಾ ಬರುತ್ತಿದ್ದ, ರಣದಲ್ಲಿ ಸಂಚರಿಸುತ್ತಿದ್ದ ನರವೀರ ಮಾಧವಾಗ್ರನನ್ನು ನಿನ್ನ ಕಡೆಯ ಎಲ್ಲ ರಥರಿಗೂ ತಡೆಯಲು ಸಾದ್ಯವಾಗಲಿಲ್ಲ.
07115012a ಅಮರ್ಷಪೂರ್ಣಸ್ತ್ವನಿವೃತ್ತಯೋಧೀ ಶರಾಸನೀ ಕಾಂಚನವರ್ಮಧಾರೀ।
07115012c ಅಲಂಬುಸಃ ಸಾತ್ಯಕಿಂ ಮಾಧವಾಗ್ರ್ಯಂ ಅವಾರಯದ್ರಾಜವರೋಽಭಿಪತ್ಯ।।
ಆಗ ರಾಜವರ, ಕೋಪದಿಂದ ತುಂಬಿಕೊಂಡಿದ್ದ, ಪಲಾಯನಗೈಯದ ಯೋಧ, ಧನುಸ್ಸನ್ನು ಹಿಡಿದ, ಕಾಂಚನದ ಕವಚವನ್ನು ಧರಿಸಿದ್ದ ಅಲಂಬುಸ59ನು ಮಾಧವಾಗ್ರ ಸಾತ್ಯಕಿಯನ್ನು ಎದುರಿಸಿ ತಡೆದನು.
07115013a ತಯೋರಭೂದ್ಭಾರತ ಸಂಪ್ರಹಾರಸ್ ತಥಾಗತೋ ನೈವ ಬಭೂವ ಕಶ್ಚಿತ್।
07115013c ಪ್ರೈಕ್ಷಂತ ಏವಾಹವಶೋಭಿನೌ ತೌ ಯೋಧಾಸ್ತ್ವದೀಯಾಶ್ಚ ಪರೇ ಚ ಸರ್ವೇ।।
ಅವರಿಬ್ಬರ ನಡುವೆ ಹಿಂದೆಂದೂ ನಡೆಯದ ಪ್ರಹಾರಗಳು ನಡೆದವು. ಈ ಇಬ್ಬರು ಆಹವಶೋಭರನ್ನು ನಿನ್ನವರು ಮತ್ತು ಶತ್ರುಸೇನೆಯವರು ನೋಡುತ್ತಿದ್ದರು.
07115014a ಅವಿಧ್ಯದೇನಂ ದಶಭಿಃ ಪೃಷತ್ಕೈರ್ ಅಲಂಬುಸೋ ರಾಜವರಃ ಪ್ರಸಹ್ಯ।
07115014c ಅನಾಗತಾನೇವ ತು ತಾನ್ಪೃಷತ್ಕಾಂಶ್ ಚಿಚ್ಚೇದ ಬಾಣೈಃ ಶಿನಿಪುಂಗವೋಽಪಿ।।
ರಾಜವರ ಅಲಂಬುಸನು ಜೋರಾಗಿ ನಕ್ಕು ಅವನನ್ನು ಹತ್ತು ಪೃಷತ್ಕರಗಳಿಂದ ಹೊಡೆದನು. ಆದರೆ ಶಿನಿಪುಂಗವನು ಆ ಪೃಷತ್ಕಗಳನ್ನು ಬಂದು ತಲುಪುವುದರೊಳಗೇ ಬಾಣಗಳಿಂದ ತುಂಡರಿಸಿದನು.
07115015a ಪುನಃ ಸ ಬಾಣೈಸ್ತ್ರಿಭಿರಗ್ನಿಕಲ್ಪೈರ್ ಆಕರ್ಣಪೂರ್ಣೈರ್ನಿಶಿತೈಃ ಸುಪುಂಖೈಃ।
07115015c ವಿವ್ಯಾಧ ದೇಹಾವರಣಂ ವಿದಾರ್ಯ ತೇ ಸಾತ್ಯಕೇರಾವಿವಿಶುಃ ಶರೀರಂ।।
ಪುನಃ ಅವನು ಅಗ್ನಿಯಂತಿದ್ದ ಪುಂಖಗಳ ಮೂರು ನಿಶಿತ ಬಾಣಗಳನ್ನು ಆಕರ್ಣಪೂರ್ಣವಾಗಿ ಎಳೆದು ಹೊಡೆಯಲು ಅವು ಸಾತ್ಯಕಿಯ ಕವಚವನ್ನು ಸೀಳಿ ಶರೀರವನ್ನು ಪ್ರವೇಶಿಸಿದವು.
07115016a ತೈಃ ಕಾಯಮಸ್ಯಾಗ್ನ್ಯನಿಲಪ್ರಭಾವೈರ್ ವಿದಾರ್ಯ ಬಾಣೈರಪರೈರ್ಜ್ವಲದ್ಭಿಃ।
07115016c ಆಜಘ್ನಿವಾಂಸ್ತಾನ್ರಜತಪ್ರಕಾಶಾನ್ ಅಶ್ವಾಂಶ್ಚತುರ್ಭಿಶ್ಚತುರಃ ಪ್ರಸಹ್ಯ।।
ಅನಿಲ-ಅಗ್ನಿಯರ ಪ್ರಭಾವದ ಆ ಬಾಣಗಳಿಂದ ಅವನ ದೇಹವನ್ನು ಸೀಳಿ, ಅಲಂಬುಸನು ಉರಿಯುತ್ತಿರುವ ಬಾಣಗಳಿಂದ ಅವನ ಬೆಳ್ಳಿಯ ಪ್ರಕಾಶದ ನಾಲ್ಕು ಕುದುರೆಗಳನ್ನೂ ಹೊಡೆದು ಜೋರಾಗಿ ನಕ್ಕನು.
07115017a ತಥಾ ತು ತೇನಾಭಿಹತಸ್ತರಸ್ವೀ ನಪ್ತಾ ಶಿನೇಶ್ಚಕ್ರಧರಪ್ರಭಾವಃ।
07115017c ಅಲಂಬುಸಸ್ಯೋತ್ತಮವೇಗವದ್ಭಿರ್ ಹಯಾಂಶ್ಚತುರ್ಭಿರ್ನಿಜಘಾನ ಬಾಣೈಃ।।
ಹಾಗೆ ಅವನಿಂದ ಹೊಡೆಯಲ್ಪಟ್ಟ ಚಕ್ರಧರ ಕೃಷ್ಣನ ಪ್ರಭಾವವಿದ್ದ ತರಸ್ವೀ ಶಿನಿಯ ಮೊಮ್ಮಗನು ಉತ್ತಮ ವೇಗದ ಬಾಣಗಳಿಂದ ಅಲಂಬುಸನ ನಾಲ್ಕು ಕುದುರೆಗಳನ್ನು ಸಂಹರಿಸಿದನು.
07115018a ಅಥಾಸ್ಯ ಸೂತಸ್ಯ ಶಿರೋ ನಿಕೃತ್ಯ ಭಲ್ಲೇನ ಕಾಲಾನಲಸನ್ನಿಭೇನ।
07115018c ಸಕುಂಡಲಂ ಪೂರ್ಣಶಶಿಪ್ರಕಾಶಂ ಭ್ರಾಜಿಷ್ಣು ವಕ್ತ್ರಂ ನಿಚಕರ್ತ ದೇಹಾತ್।।
ಆಗ ಅವನ ಸೂತನ ಶಿರವನ್ನು ಕತ್ತರಿಸಿ, ಕಾಲಾಗ್ನಿಯಂತೆ ಬೆಳಗುತ್ತಿದ್ದ ಭಲ್ಲದಿಂದ, ಪೂರ್ಣಚಂದ್ರನಂತೆ ಪ್ರಕಾಶಿಸುತ್ತಾ ಎಲ್ಲೆಡೆ ಹೊಳೆಯುತ್ತಿದ್ದ ಅವನ ಕುಂಡಲಸಹಿತ ಮುಖವನ್ನು ದೇಹದಿಂದ ಕತ್ತರಿಸಿದನು.
07115019a ನಿಹತ್ಯ ತಂ ಪಾರ್ಥಿವಪುತ್ರಪೌತ್ರಂ ಸಂಖ್ಯೇ ಮಧೂನಾಂ ಋಷಭಃ ಪ್ರಮಾಥೀ।
07115019c ತತೋಽನ್ವಯಾದರ್ಜುನಮೇವ ವೀರಃ ಸೈನ್ಯಾನಿ ರಾಜಂಸ್ತವ ಸನ್ನಿವಾರ್ಯ।।
ರಾಜನ್! ರಣದಲ್ಲಿ ಆ ರಾಜಪುತ್ರಪೌತ್ರನನ್ನು ಸಂಹರಿಸಿ ಮಧುಗಳ ಋಷಭ ಪ್ರಮಾಥಿ ವೀರನು ನಿನ್ನ ಸೇನೆಗಳನ್ನು ಹಿಂದೆ ಸರಿಸಿ ಅರ್ಜುನನ ಬಳಿ ಹೋದನು.
07115020a ಅನ್ವಾಗತಂ ವೃಷ್ಣಿವರಂ ಸಮೀಕ್ಷ್ಯ ತಥಾರಿಮಧ್ಯೇ ಪರಿವರ್ತಮಾನಂ।
07115020c ಘ್ನಂತಂ ಕುರೂಣಾಮಿಷುಭಿರ್ಬಲಾನಿ ಪುನಃ ಪುನರ್ವಾಯುರಿವಾಭ್ರಪೂಗಾನ್।।
ಮುಂದೆಹೋಗುತ್ತಿರುವ ಆ ವೃಷ್ಣಿವರನು ಶತ್ರುಗಳ ಮಧ್ಯೆ ಹೋಗುವಾಗ ಪುನಃ ಪುನಃ ಭಿರುಗಾಳಿಯು ಮೋಡಗಳ ರಾಶಿಯನ್ನು ಚದುರಿಬಿಡುವಂತೆ ಬಾಣಗಳಿಂದ ಕುರುಗಳ ಸೇನೆಯನ್ನು ಸಂಹರಿಸುತ್ತಿದ್ದನು.
07115021a ತತೋಽವಹನ್ಸೈಂಧವಾಃ ಸಾಧು ದಾಂತಾ ಗೋಕ್ಷೀರಕುಂದೇಂದುಹಿಮಪ್ರಕಾಶಾಃ।
07115021c ಸುವರ್ಣಜಾಲಾವತತಾಃ ಸದಶ್ವಾ ಯತೋ ಯತಃ ಕಾಮಯತೇ ನೃಸಿಂಹಃ।।
ಆ ನರಸಿಂಹನು ಎಲ್ಲೆಲ್ಲಿ ಹೋಗಲು ಬಯಸುತ್ತಿದ್ದನೋ ಅಲ್ಲಲ್ಲಿಗೆ ಸಿಂಧುದೇಶದ, ಸಾಧು, ತಾಳ್ಮೆಯುಳ್ಳ, ಗೋವಿನ ಹಾಲು-ಕುಂದ-ಚಂದ್ರ-ಹಿಮಗಳ ಪ್ರಕಾಶವುಳ್ಳ, ಸುವರ್ಣಜಾಲೆಗಳಿಂದ ಅಲಂಕೃತಗೊಂಡ ಅವನ ಕುದುರೆಗಳು ಕೊಂಡೊಯ್ಯುತ್ತಿದ್ದವು.
07115022a ಅಥಾತ್ಮಜಾಸ್ತೇ ಸಹಿತಾಭಿಪೇತುರ್ ಅನ್ಯೇ ಚ ಯೋಧಾಸ್ತ್ವರಿತಾಸ್ತ್ವದೀಯಾಃ।
07115022c ಕೃತ್ವಾ ಮುಖಂ ಭಾರತ ಯೋಧಮುಖ್ಯಂ ದುಃಶಾಸನಂ ತ್ವತ್ಸುತಮಾಜಮೀಢ।।
ಆಜಮೀಢ! ಭಾರತ! ಆಗ ನಿನ್ನ ಸುತ ದುಃಶಾಸನನ್ನು ಯೋಧಮಖ್ಯನನ್ನಾಗಿ ಮಾಡಿಕೊಂಡು ನಿನ್ನ ಮಕ್ಕಳು ಮತ್ತು ಅನ್ಯ ಯೋಧರು ತ್ವರೆಮಾಡಿ ಅವನನ್ನು ಮುತ್ತಿದರು.
07115023a ತೇ ಸರ್ವತಃ ಸಂಪರಿವಾರ್ಯ ಸಂಖ್ಯೇ ಶೈನೇಯಮಾಜಘ್ನುರನೀಕಸಾಹಾಃ।
07115023c ಸ ಚಾಪಿ ತಾನ್ಪ್ರವರಃ ಸಾತ್ವತಾನಾಂ ನ್ಯವಾರಯದ್ಬಾಣಜಾಲೇನ ವೀರಃ।।
ಅವರು ಶೈನೇಯನನ್ನು ಎಲ್ಲ ಕಡೆಗಳಿಂದ ಸುತ್ತುವರೆದು ರಣದಲ್ಲಿ ಸೇನೆಗಳ ಸಹಾಯದಿಂದ ಆಕ್ರಮಣಿಸಿದರು. ಸಾತ್ವತರ ಪ್ರವರ ಆ ವೀರನೂ ಕೂಡ ಬಾಣಜಾಲಗಳಿಂದ ಅವರನ್ನು ತಡೆದನು.
07115024a ನಿವಾರ್ಯ ತಾಂಸ್ತೂರ್ಣಮಮಿತ್ರಘಾತೀ ನಪ್ತಾ ಶಿನೇಃ ಪತ್ರಿಭಿರಗ್ನಿಕಲ್ಪೈಃ।
07115024c ದುಃಶಾಸನಸ್ಯಾಪಿ ಜಘಾನ ವಾಹಾನ್ ಉದ್ಯಮ್ಯ ಬಾಣಾಸನಮಾಜಮೀಢ।।
ಆಜಮೀಢ! ಆ ಅಮಿತ್ರಘಾತಿ ಶೈನಿಯು ತಕ್ಷಣವೇ ಅಗ್ನಿಕಲ್ಪ ಪತ್ರಿಯಿಂದ ಅವರನ್ನು ತಡೆದು ಬಿಲ್ಲನ್ನು ಎತ್ತಿ ದುಃಶಾಸನನ ಕುದುರೆಗಳನ್ನು ಸಂಹರಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಅಲಂಬುಷವಧೇ ಪಂಚದಶಾಧಿಕಶತತಮೋಽಧ್ಯಾಯಃ ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಅಲಂಬುಷವಧ ಎನ್ನುವ ನೂರಾಹದಿನೈದನೇ ಅಧ್ಯಾಯವು.