ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 114
ಸಾರ
ಭೀಮಸೇನ-ಕರ್ಣರ ಯುದ್ಧದಲ್ಲಿ ಭೀಮಸೇನನು ವಿರಥನಾಗಿ ಮೂರ್ಛಿತನಾದುದು (1-66). ಕುಂತಿಗೆ ಕೊಟ್ಟ ಮಾತನ್ನು ಸ್ಮರಿಸಿಕೊಂಡು ಕರ್ಣನು ಭೀಮಸೇನನನ್ನು ವಧಿಸದೇ ಮೂದಲಿಸಿದುದು (67-80). ಅರ್ಜುನನು ಕರ್ಣ-ಅಶ್ವತ್ಥಾಮರನ್ನು ಹಿಮ್ಮೆಟ್ಟಿಸಿದುದು (81-94).
07114001 ಸಂಜಯ ಉವಾಚ।
07114001a ತತಃ ಕರ್ಣೋ ಮಹಾರಾಜ ಭೀಮಂ ವಿದ್ಧ್ವಾ ತ್ರಿಭಿಃ ಶರೈಃ।
07114001c ಮುಮೋಚ ಶರವರ್ಷಾಣಿ ಚಿತ್ರಾಣಿ ಚ ಬಹೂನಿ ಚ।।
ಸಂಜಯನು ಹೇಳಿದನು: “ಮಹಾರಾಜ! ಆಗ ಕರ್ಣನು ಭೀಮನನ್ನು ಮೂರು ಶರಗಳಿಂದ ಹೊಡೆದು ಅನೇಕ ವಿಚಿತ್ರ ಶರವರ್ಷಗಳನ್ನು ಸುರಿಸಿದನು.
07114002a ವಧ್ಯಮಾನೋ ಮಹಾರಾಜ ಸೂತಪುತ್ರೇಣ ಪಾಂಡವಃ।
07114002c ನ ವಿವ್ಯಥೇ ಭೀಮಸೇನೋ ಭಿದ್ಯಮಾನ ಇವಾಚಲಃ।।
ಮಹಾರಾಜ! ಸೂತಪುತ್ರನಿಂದ ಪ್ರಹರಿಸಲ್ಪಡುತ್ತಿದ್ದ ಭೀಮನೇನನು ಭೇದಿಸಲ್ಪಡುವ ಪರ್ವತದಂತೆ ಸ್ವಲ್ಪವೂ ಅಲುಗಾಡಲಿಲ್ಲ.
07114003a ಸ ಕರ್ಣಂ ಕರ್ಣಿನಾ ಕರ್ಣೇ ಪೀತೇನ ನಿಶಿತೇನ ಚ।
07114003c ವಿವ್ಯಾಧ ಯುಧಿ ರಾಜೇಂದ್ರ ಭೀಮಸೇನಃ ಪತತ್ರಿಣಾ।।
ರಾಜೇಂದ್ರ! ಆ ಯುದ್ಧದಲ್ಲಿ ಭೀಮಸೇನನು ಕರ್ಣನ ಕಿವಿಯ ಪ್ರದೇಶಕ್ಕೆ ಎಣ್ಣೆಯನ್ನು ಕುಡಿಸಿದ್ದ ನಿಶಿತ ಪತತ್ರಿ ಕರ್ಣಿಗಳಿಂದ ಹೊಡೆದನು.
07114004a ಸ ಕುಂಡಲಂ ಮಹತ್ಕರ್ಣಾತ್ಕರ್ಣಸ್ಯಾಪಾತಯದ್ಭುವಿ।
07114004c ತಪನೀಯಂ ಮಹಾರಾಜ ದೀಪ್ತಂ ಜ್ಯೋತಿರಿವಾಂಬರಾತ್।।
ಮಹಾರಾಜ! ಅದು ಕರ್ಣನ ಕಿವಿಯಿಂದ ಬಂಗಾರದ ಮಹಾ ಕುಂಡಲವನ್ನು ಅಂಬರದಿಂದ ಉರಿಯುತ್ತಿರುವ ನಕ್ಷತ್ರದಂತೆ ಭೂಮಿಯ ಮೇಲೆ ಬೀಳಿಸಿತು.
07114005a ಅಥಾಪರೇಣ ಭಲ್ಲೇನ ಸೂತಪುತ್ರಂ ಸ್ತನಾಂತರೇ।
07114005c ಆಜಘಾನ ಭೃಶಂ ಭೀಮಃ ಸ್ಮಯನ್ನಿವ ಮಹಾಬಲಃ।।
ಕೂಡಲೇ ಇನ್ನೊಂದು ಭಲ್ಲದಿಂದ ನಗುತ್ತಾ ಮಹಾಬಲ ಭೀಮನು ಸೂತಪುತ್ರನ ಎದೆಗೆ ಹೊಡೆದನು.
07114006a ಪುನರಸ್ಯ ತ್ವರನ್ಭೀಮೋ ನಾರಾಚಾನ್ದಶ ಭಾರತ।
07114006c ರಣೇ ಪ್ರೈಷೀನ್ಮಹಾವೇಗಾನ್ಯಮದಂಡೋಪಮಾಂಸ್ತಥಾ।।
ಭಾರತ! ಪುನಃ ಬೇಗನೆ ಭೀಮನು ರಣದಲ್ಲಿ ಯಮದಂಡಗಳಂತಿದ್ದ ಮಹಾವೇಗದ ಹತ್ತು ನಾರಾಚಗಳನ್ನು ಪ್ರಯೋಗಿಸಿದನು.
07114007a ತೇ ಲಲಾಟಂ ಸಮಾಸಾದ್ಯ ಸೂತಪುತ್ರಸ್ಯ ಮಾರಿಷ।
07114007c ವಿವಿಶುಶ್ಚೋದಿತಾಸ್ತೇನ ವಲ್ಮೀಕಮಿವ ಪನ್ನಗಾಃ।।
ಮಾರಿಷ! ಅವು ಸೂತಪುತ್ರನ ಹಣೆಯನ್ನು ಹೊಕ್ಕು, ಹಾವುಗಳು ಹುತ್ತವನ್ನು ಹೊಗುವಂತೆ ಹೊಕ್ಕು ನಾಟಿಕೊಂಡವು.
07114008a ಲಲಾಟಸ್ಥೈಸ್ತು ತೈರ್ಬಾಣೈಃ ಸೂತಪುತ್ರೋ ವ್ಯರೋಚತ।
07114008c ನೀಲೋತ್ಪಲಮಯೀಂ ಮಾಲಾಂ ಧಾರಯನ್ಸ ಪುರಾ ಯಥಾ।।
ಹಣೆಯಲ್ಲಿದ್ದ ಆ ಬಾಣಗಳಿಂದ ಸೂತಪುತ್ರನು ಹಿಂದೆ ನೀಲಪುಷ್ಪಗಳ ಮಾಲೆಯನ್ನು ಧರಿಸಿದ್ದಾಗ ಹೇಗೋ ಹಾಗೆ ಕಂಗೊಳಿಸಿದನು.
07114009a ತತಃ ಕ್ರುದ್ಧೋ ರಣೇ ಕರ್ಣಃ ಪೀಡಿತೋ ದೃಢಧನ್ವನಾ।
07114009c ವೇಗಂ ಚಕ್ರೇ ಮಹಾವೇಗೋ ಭೀಮಸೇನವಧಂ ಪ್ರತಿ।।
ಆಗ ರಣದಲ್ಲಿ ದೃಢಧನ್ವನಿಂದ ಪೀಡಿತನಾಗಿ ಕ್ರುದ್ಧನಾದ ಮಹಾವೇಗಿ ಕರ್ಣನು ಭೀಮಸೇನನ ವಧೆಗೆ ತ್ವರೆಮಾಡಿದನು.
07114010a ತಸ್ಮೈ ಕರ್ಣಃ ಶತಂ ರಾಜನ್ನಿಷೂಣಾಂ ಗಾರ್ಧ್ರವಾಸಸಾಂ।
07114010c ಅಮರ್ಷೀ ಬಲವಾನ್ಕ್ರುದ್ಧಃ ಪ್ರೇಷಯಾಮಾಸ ಭಾರತ।।
ರಾಜನ್! ಭಾರತ! ಅಮರ್ಷೀ ಬಲವಾನ್ ಕ್ರುದ್ಧ ಕರ್ಣನು ನೂರು ಗಾರ್ಧ್ರವಾಸಸಗಳನ್ನು ಅವನ ಮೇಲೆ ಪ್ರಯೋಗಿಸಿದನು.
07114011a ತತಃ ಪ್ರಾಸೃಜದುಗ್ರಾಣಿ ಶರವರ್ಷಾಣಿ ಪಾಂಡವಃ।
07114011c ಸಮರೇ ತಮನಾದೃತ್ಯ ನಾಸ್ಯ ವೀರ್ಯಮಚಿಂತಯತ್।।
ಆಗ ಪಾಂಡವನು ಸಮರದಲ್ಲಿ ಅವನನ್ನು ಅನಾದರಿಸಿ, ಅವನ ವೀರ್ಯದ ಕುರಿತು ಚಿಂತಿಸದೇ ಅವನ ಮೇಲೆ ಶರವರ್ಷಗಳನ್ನು ಸುರಿಸಿದನು.
07114012a ತತಃ ಕರ್ಣೋ ಮಹಾರಾಜ ಪಾಂಡವಂ ನಿಶಿತೈಃ ಶರೈಃ।
07114012c ಆಜಘಾನೋರಸಿ ಕ್ರುದ್ಧಃ ಕ್ರುದ್ಧರೂಪಂ ಪರಂತಪಃ।।
ಮಹಾರಾಜ! ಆಗ ಕ್ರುದ್ಧ ಪರಂತಪ ಕರ್ಣನು ಕ್ರುದ್ಧರೂಪೀ ಪಾಂಡವನ ಎದೆಗೆ ನಿಶಿತ ಬಾಣಗಳಿಂದ ಹೊಡೆದನು.
07114013a ಜೀಮೂತಾವಿವ ಚಾನ್ಯೋನ್ಯಂ ತೌ ವವರ್ಷತುರಾಹವೇ।
07114013c ತಲಶಬ್ದರವೈಶ್ಚೈವ ತ್ರಾಸಯಂತೌ ಪರಸ್ಪರಂ।।
ಮೋಡಗಳಂತೆ ಅವರಿಬ್ಬರು ಅನ್ಯೋನ್ಯರ ಮೇಲೆ ಬಾಣಗಳ ಮಳೆಗಳನ್ನು ಸುರಿಸಿದರು ಮತ್ತು ರಣದಲ್ಲಿ ಚಪ್ಪಾಳೆಯ ಶಬ್ಧ ಮತ್ತು ಕೂಗುಗಳಿಂದ ಪರಸ್ಪರರನ್ನು ಬೆದರಿಸಿದರು.
07114014a ಶರಜಾಲೈಶ್ಚ ವಿವಿಧೈಶ್ಚಾದಯಾಮಾಸತುರ್ಮೃಧೇ।
07114014c ಅನ್ಯೋನ್ಯಂ ಸಮರೇ ಕ್ರುದ್ಧೌ ಕೃತಪ್ರತಿಕೃತೈಷಿಣೌ।।
ರಣದಲ್ಲಿ ವಿವಿಧ ಶರಜಾಲಗಳಿಂದ ಅನ್ಯೋನ್ಯರನ್ನು ಮುಚ್ಚಿದರು ಮತ್ತು ಸಮರದಲ್ಲಿ ಕ್ರುದ್ಧರಾಗಿ ಅನ್ಯೋನ್ಯರನ್ನು ಮೀರಿಸುವಂತಿದ್ದರು.
07114015a ತತೋ ಭೀಮೋ ಮಹಾಬಾಹೂ ರಾಧೇಯಸ್ಯ ಮಹಾತ್ಮನಃ।
07114015c ಕ್ಷುರಪ್ರೇಣ ಧನುಶ್ಚಿತ್ತ್ವಾ ಕರ್ಣಂ ವಿವ್ಯಾಧ ಪತ್ರಿಣಾ।।
ಆಗ ಮಹಾಬಾಹೂ ಮಹಾತ್ಮ ಭೀಮನು ಕ್ಷುರಪ್ರದಿಂದ ರಾಧೇಯ ಕರ್ಣನ ಧನುಸ್ಸನ್ನು ತುಂಡರಿಸಿ ಪತ್ರಿಗಳಿಂದ ಅವನನ್ನು ಹೊಡೆದನು.
07114016a ತದಪಾಸ್ಯ ಧನುಶ್ಚಿನ್ನಂ ಸೂತಪುತ್ರೋ ಮಹಾಮನಾಃ।
07114016c ಅನ್ಯತ್ಕಾರ್ಮುಕಮಾದತ್ತ ವೇಗಘ್ನಂ ಭಾರಸಾಧನಂ।।
ತನ್ನ ಧನುಸ್ಸು ತುಂಡಾಗಲು ಮಹಾಮನಸ್ವಿ ಸೂತಪುತ್ರನು ಇನ್ನೊಂದು ವೇಗವಿದ್ದ ಭಾರಸಾಧನ ಬಿಲ್ಲನ್ನು ಎತ್ತಿಕೊಂಡನು.
07114017a ದೃಷ್ಟ್ವಾ ಚ ಕುರುಸೌವೀರಸೈಂಧವಾನಾಂ ಬಲಕ್ಷಯಂ।
07114017c ಸವರ್ಮಧ್ವಜಶಸ್ತ್ರೈಶ್ಚ ಪತಿತೈಃ ಸಂವೃತಾಂ ಮಹೀಂ।।
07114018a ಹಸ್ತ್ಯಶ್ವನರದೇಹಾಂಶ್ಚ ಗತಾಸೂನ್ಪ್ರೇಕ್ಷ್ಯ ಸರ್ವತಃ।
07114018c ಸೂತಪುತ್ರಸ್ಯ ಸಂರಂಭಾದ್ದೀಪ್ತಂ ವಪುರಜಾಯತ।।
ಕುರು-ಸೌವೀರ-ಸೈಂಧವರ ಸೇನೆಗಳು ನಾಶವಾಗುತ್ತಿರುವುದನ್ನು ನೋಡಿ, ಕವಚ-ಧ್ವಜ-ಶಸ್ತ್ರಗಳೊಂದಿಗೆ ನೆಲದಮೇಲೆ ಬಿದ್ದು ಅಸುನೀಗಿದ ಆನೆ-ಕುದುರೆ-ನರರ ದೇಹಗಳನ್ನು ಎಲ್ಲ ಕಡೆ ನೋಡಿ ಸೂತಪುತ್ರನ ಮುಖವು ಕ್ರೋಧದಿಂದ ಉರಿದು ಬೆಳಗತೊಡಗಿತು.
07114019a ಸ ವಿಸ್ಫಾರ್ಯ ಮಹಚ್ಚಾಪಂ ಕಾರ್ತಸ್ವರವಿಭೂಷಿತಂ।
07114019c ಭೀಮಂ ಪ್ರೈಕ್ಷತ ರಾಧೇಯೋ ರಾಜನ್ಘೋರೇಣ ಚಕ್ಷುಷಾ।।
ರಾಜನ್! ಬಂಗಾರದಿಂದ ವಿಭೂಷಿತ ಆ ಮಹಾ ಧನುಸ್ಸನ್ನು ಟೇಂಕರಿಸಿ ರಾಧೇಯನು ಭೀಮನನ್ನು ಘೋರ ದೃಷ್ಟಿಯಿಂದ ನೋಡಿದನು.
07114020a ತತಃ ಕ್ರುದ್ಧಃ ಶರಾನಸ್ಯನ್ಸೂತಪುತ್ರೋ ವ್ಯರೋಚತ।
07114020c ಮಧ್ಯಂದಿನಗತೋಽರ್ಚಿಷ್ಮಾಂ ಶರದೀವ ದಿವಾಕರಃ।।
ಬಾಣಗಳನ್ನು ಬಿಡುವಾಗ ಕ್ರುದ್ಧ ಸೂತಪುತ್ರನು ಶರತ್ಕಾಲದ ಮಧ್ಯಾಹ್ನದ ಅರ್ಚಿಷ್ಮಾನ್ ದಿವಾಕರನಂತೆ ರಾರಾಜಿಸಿದನು.
07114021a ಮರೀಚಿವಿಕಚಸ್ಯೇವ ರಾಜನ್ಭಾನುಮತೋ ವಪುಃ।
07114021c ಆಸೀದಾಧಿರಥೇರ್ಘೋರಂ ವಪುಃ ಶರಶತಾರ್ಚಿಷಃ।।
ರಾಜನ್! ನೂರಾರು ಶರಗಳನ್ನು ಬಿಡುತ್ತಿದ್ದ ಆಧಿರಥನ ಘೋರ ಮುಖವು ಕಿರಣಗಳನ್ನು ಹೊರಸೂಸುವ ಭಾನುಮತನ ಮುಖದಂತಾಯಿತು.
07114022a ಕರಾಭ್ಯಾಮಾದದಾನಸ್ಯ ಸಂದಧಾನಸ್ಯ ಚಾಶುಗಾನ್।
07114022c ವಿಕರ್ಷತೋ ಮುಂಚತೋ ವಾ ನಾಂತರಂ ದದೃಶೂ ರಣೇ।।
ರಣದಲ್ಲಿ ಅವನು ಕೈಯಿಂದ ಶರಗಳನ್ನು ತೆಗೆದುಕೊಳ್ಳುವುದಾಗಲೀ, ಹೂಡುವುದಾಗಲೀ, ಎಳೆಯುವುದಾಗಲೀ ಅಥವಾ ಬಿಡುವುದರಲ್ಲಾಗಲೀ ಅಂತರವನ್ನೇ ಕಾಣುತ್ತಿರಲಿಲ್ಲ.
07114023a ಅಗ್ನಿಚಕ್ರೋಪಮಂ ಘೋರಂ ಮಂಡಲೀಕೃತಮಾಯುಧಂ।
07114023c ಕರ್ಣಸ್ಯಾಸೀನ್ಮಹಾರಾಜ ಸವ್ಯದಕ್ಷಿಣಮಸ್ಯತಃ।।
ಮಹಾರಾಜ! ಆಯುಧವನ್ನು ಘೋರ ಅಗ್ನಿಚಕ್ರದಂತೆ ಗೋಲಾಕಾರವಾಗಿ ಮಾಡಿ ಕರ್ಣನು ಎಡ-ಬಲಗಳಲ್ಲಿ ಒಂದೇ ಸಮನಾಗಿ ಕಾಣುತ್ತಿದ್ದನು.
07114024a ಸ್ವರ್ಣಪುಂಖಾಃ ಸುನಿಶಿತಾಃ ಕರ್ಣಚಾಪಚ್ಯುತಾಃ ಶರಾಃ।
07114024c ಪ್ರಾಚ್ಚಾದಯನ್ಮಹಾರಾಜ ದಿಶಃ ಸೂರ್ಯಸ್ಯ ಚ ಪ್ರಭಾಂ।।
ಮಹಾರಾಜ! ಕರ್ಣನ ಚಾಪದಿಂದ ಬಿಡಲ್ಪಟ್ಟ ಸ್ವರ್ಣಪುಂಖದ ನಿಶಿತ ಶರಗಳು ಸೂರ್ಯನ ಪ್ರಭೆಯಂತೆ ದಿಕ್ಕುಗಳನ್ನು ಮುಸುಕಿದವು.
07114025a ತತಃ ಕನಕಪುಂಖಾನಾಂ ಶರಾಣಾಂ ನತಪರ್ವಣಾಂ।
07114025c ಧನುಶ್ಚ್ಯುತಾನಾಂ ವಿಯತಿ ದದೃಶೇ ಬಹುಧಾ ವ್ರಜಃ।।
ಅವನ ಧನುಸ್ಸಿನಿಂದ ಹೊರಟ ಕನಕಪುಂಖಗಳ ನತಪರ್ವ ಶರಗಳು ಅನೇಕ ಸಂಖ್ಯೆಗಳಲ್ಲಿ ಹಾರುತ್ತಿರುವುದು ಕಂಡಿತು.
07114026a ಶರಾಸನಾದಾಧಿರಥೇಃ ಪ್ರಭವಂತಃ ಸ್ಮ ಸಾಯಕಾಃ।
07114026c ಶ್ರೇಣೀಕೃತಾ ವ್ಯರಾಜಂತ ರಾಜನ್ಕ್ರೌಂಚಾ ಇವಾಂಬರೇ।।
ರಾಜನ್! ಆಧಿರಥನ ಧನುಸ್ಸಿನಿಂದ ಹೊರಟ ಸಾಯಕಗಳು ಆಕಾಶದಲ್ಲಿ ಸಾಲುಕಟ್ಟಿದ ಕ್ರೌಂಚಪಕ್ಷಿಗಳಂತೆ ರಾಜಿಸಿದವು.
07114027a ಗಾರ್ಧ್ರಪತ್ರಾಂ ಶಿಲಾಧೌತಾನ್ಕಾರ್ತಸ್ವರವಿಭೂಷಿತಾನ್।
07114027c ಮಹಾವೇಗಾನ್ಪ್ರದೀಪ್ತಾಗ್ರಾನ್ಮುಮೋಚಾಧಿರಥಿಃ ಶರಾನ್।।
ಆಧಿರಥನು ಗಾರ್ಧ್ರಪತ್ರಗಳ, ಶಿಲೆಗಳ ಮೇಲೆ ಮಸೆದ, ಬಂಗಾರದಿಂದ ವಿಭೂಷಿತ, ಮಹಾವೇಗದ, ಬೆಳಗುತ್ತಿರುವ ಉಗ್ರ ಶರಗಳನ್ನು ಪ್ರಯೋಗಿಸುತ್ತಿದ್ದನು.
07114028a ತೇ ತು ಚಾಪಬಲೋದ್ಧೂತಾಃ ಶಾತಕುಂಭವಿಭೂಷಿತಾಃ।
07114028c ಅಜಸ್ರಮನ್ವಕೀರ್ಯಂತ ಶರಾಃ ಪಾರ್ಥರಥಂ ಪ್ರತಿ।।
ಧನುಸ್ಸಿನ ಬಲದಿಂದ ಕೊಂಡೊಯ್ಯಲ್ಪಟ್ಟ ಆ ಬಂಗಾರದಿಂದ ವಿಭೂಷಿತ ಶರಗಳು ಆಕಾಶದಲ್ಲಿ ಗೀರೆಳೆಯುತ್ತಾ ಪಾರ್ಥನ ರಥದ ಕಡೆ ಹೋಗುತ್ತಿದ್ದವು.
07114029a ತೇ ವ್ಯೋಮ್ನಿ ರತ್ನವಿಕೃತಾ ವ್ಯಕಾಶಂತ ಸಹಸ್ರಶಃ।
07114029c ಶಲಭಾನಾಮಿವ ವ್ರಾತಾಃ ಶರಾಃ ಕರ್ಣಸಮೀರಿತಾಃ।।
ಕರ್ಣನು ಬಿಟ್ಟ ರತ್ನವಿಕೃತ ಬಾಣಗಳು ಆಕಾಶದಲ್ಲಿ ಸಾವಿರಾರು ಹಾರುತ್ತಾ ಸಹಸ್ರಾರು ಮಿಡಿತೆಗಳಂತೆ ತೋರುತ್ತಿದ್ದವು.
07114030a ಚಾಪಾದಾಧಿರಥೇರ್ಮುಕ್ತಾಃ ಪ್ರಪತಂತಃ ಸ್ಮ ಸಾಯಕಾಃ।
07114030c ಏಕೋ ದೀರ್ಘ ಇವ ಪ್ರಾಂಶುಃ ಪ್ರಭವನ್ದೃಶ್ಯತೇ ಶರಃ।।
ಆದಿರಥನ ಧನುಸ್ಸಿನಿಂದ ಬಿಡಲ್ಪಟ್ಟ ಉರಿಯುತ್ತಿರುವ ಸಾಯಕಗಳು ಒಂದೇ ಉದ್ದ ಶರದಂತಾಗಿ ಕಾಣುತ್ತಿದ್ದವು.
07114031a ಪರ್ವತಂ ವಾರಿಧಾರಾಭಿಶ್ಚಾದಯನ್ನಿವ ತೋಯದಃ।
07114031c ಕರ್ಣಃ ಪ್ರಾಚ್ಚಾದಯತ್ಕ್ರುದ್ಧೋ ಭೀಮಂ ಸಾಯಕವೃಷ್ಟಿಭಿಃ।।
ಮೋಡವು ಪರ್ವತವನ್ನು ಮಳೆಯ ನೀರಿನಿಂದ ಮುಚ್ಚಿಬಿಡುವಂತೆ ಕ್ರುದ್ಧ ಕರ್ಣನು ಸಾಯಕಗಳ ಮಳೆಯಿಂದ ಭೀಮನನ್ನು ಮುಚ್ಚಿಬಿಟ್ಟನು.
07114032a ತತ್ರ ಭಾರತ ಭೀಮಸ್ಯ ಬಲವೀರ್ಯಪರಾಕ್ರಮಂ।
07114032c ವ್ಯವಸಾಯಂ ಚ ಪುತ್ರಾಸ್ತೇ ಪ್ರೈಕ್ಷಂತ ಕುರುಭಿಃ ಸಹ।।
ಭಾರತ! ಅಲ್ಲಿ ಭೀಮನ ಬಲವೀರ್ಯ ಪರಾಕ್ರಮವನ್ನೂ ಅವನ ಕಸರತ್ತನ್ನೂ ಕುರುಗಳೊಂದಿಗೆ ನಿನ್ನ ಪುತ್ರರು ನೋಡಿದರು.
07114033a ತಾಂ ಸಮುದ್ರಮಿವೋದ್ಧೂತಾಂ ಶರವೃಷ್ಟಿಂ ಸಮುತ್ಥಿತಾಂ।
07114033c ಅಚಿಂತಯಿತ್ವಾ ಭೀಮಸ್ತು ಕ್ರುದ್ಧಃ ಕರ್ಣಮುಪಾದ್ರವತ್।।
ಉಕ್ಕಿಬರುವ ಸಮುದ್ರದಂತೆ ಮೇಲಿಂದ ಬೀಳುತ್ತಿರುವ ಶರವೃಷ್ಟಿಯನ್ನು ಲೆಕ್ಕಿಸದೇ ಕ್ರುದ್ಧ ಭೀಮನು ಕರ್ಣನನ್ನು ಆಕ್ರಮಿಣಿಸಿದನು.
07114034a ರುಕ್ಮಪೃಷ್ಠಂ ಮಹಚ್ಚಾಪಂ ಭೀಮಸ್ಯಾಸೀದ್ವಿಶಾಂ ಪತೇ।
07114034c ಆಕರ್ಷಾನ್ಮಂಡಲೀಭೂತಂ ಶಕ್ರಚಾಪಮಿವಾಪರಂ।
07114034e ತಸ್ಮಾಚ್ಚರಾಃ ಪ್ರಾದುರಾಸನ್ಪೂರಯಂತ ಇವಾಂಬರಂ।।
ವಿಶಾಂಪತೇ! ಭೀಮನ ಮಹಾಚಾಪವು ಬಂಗಾರದ ಹಿಂಬದಿಯುಳ್ಳದ್ದಾಗಿತ್ತು. ಇನ್ನೊಂದು ಶಕ್ರಚಾಪವೋ ಎಂಬಂತಿದ್ದ ಅದನ್ನು ಮಂಡಲಾಕಾರದಲ್ಲಿ ಸೆಳೆದು ಅದರಿಂದ ಬಾಣಗಳನ್ನು ಬಿಟ್ಟು ಇಡೀ ಅಂಬರವನ್ನೇ ತುಂಬಿಸಿಬಿಟ್ಟನು.
07114035a ಸುವರ್ಣಪುಂಖೈರ್ಭೀಮೇನ ಸಾಯಕೈರ್ನತಪರ್ವಭಿಃ।
07114035c ಗಗನೇ ರಚಿತಾ ಮಾಲಾ ಕಾಂಚನೀವ ವ್ಯರಾಜತ।।
ಭೀಮನ ಸುವರ್ಣಪುಂಖಗಳ ಸಾಯಕ-ನತಪರ್ವಗಳು ಗಗನದಲ್ಲಿ ರಚಿಸಿದ ಬಂಗಾರದ ಮಾಲೆಯಂತೆ ಕಂಗೊಳಿಸಿದವು.
07114036a ತತೋ ವ್ಯೋಮ್ನಿ ವಿಷಕ್ತಾನಿ ಶರಜಾಲಾನಿ ಭಾಗಶಃ।
07114036c ಆಹತಾನಿ ವ್ಯಶೀರ್ಯಂತ ಭೀಮಸೇನಸ್ಯ ಪತ್ರಿಭಿಃ।।
ಆಗ ಅವ (ಕರ್ಣ) ನ ಶರಜಾಲಗಳು ವ್ಯೋಮವನ್ನೇ ತುಂಬಿಬಿಡಲು ಅವುಗಳ ಭಾಗಶವನ್ನು ಭೀಮಸೇನನ ಪತ್ರಿಗಳು ಹೊಡೆದುರುಳಿಸಿದವು.
07114037a ಕರ್ಣಸ್ಯ ಶರಜಾಲೌಘೈರ್ಭೀಮಸೇನಸ್ಯ ಚೋಭಯೋಃ।
07114037c ಅಗ್ನಿಸ್ಫುಲಿಂಗಸಂಸ್ಪರ್ಶೈರಂಜೋಗತಿಭಿರಾಹವೇ।
07114037e ತೈಸ್ತೈಃ ಕನಕಪುಂಖಾನಾಂ ದ್ಯೌರಾಸೀತ್ಸಂವೃತಾ ವ್ರಜೈಃ।।
ರಣದಲ್ಲಿ ಕರ್ಣ ಮತ್ತು ಭೀಮಸೇನ ಇಬ್ಬರದ್ದೂ ವೇಗದಿಂದ ಕೂಡಿದ ಕನಕ ಪುಂಖಗಳ ಶರಜಾಲಗಳು ಆಕಾಶದಲ್ಲಿ ಹಾರಾಡುವಾಗ ಒಂದಕ್ಕೊಂದು ತಾಗಿ ಬೆಂಕಿಯ ಕಿಡಿಗಳನ್ನು ಹಾರಿಸುತ್ತಿದ್ದವು.
07114038a ಸ ಭೀಮಂ ಚಾದಯನ್ಬಾಣೈಃ ಸೂತಪುತ್ರಃ ಪೃಥಗ್ವಿಧೈಃ।
07114038c ಉಪಾರೋಹದನಾದೃತ್ಯ ತಸ್ಯ ವೀರ್ಯಂ ಮಹಾತ್ಮನಃ।।
ಸೂತಪುತ್ರನು ಮಹಾತ್ಮ ಭೀಮಸೇನನ ವೀರ್ಯವನ್ನು ಕಡೆಗಣಿಸಿ ಇನ್ನೂ ಹೆಚ್ಚು ಬಾಣಗಳಿಂದ ಅವನನ್ನು ಮುಚ್ಚಿ ಮೀರಿಸಿದನು.
07114039a ತಯೋರ್ವಿಸೃಜತೋಸ್ತತ್ರ ಶರಜಾಲಾನಿ ಮಾರಿಷ।
07114039c ವಾಯುಭೂತಾನ್ಯದೃಶ್ಯಂತ ಸಂಸಕ್ತಾನೀತರೇತರಂ।।
ಮಾರಿಷ! ಅಲ್ಲಿ ಅವರಿಬ್ಬರು ಬಿಟ್ಟ ಶರಜಾಲಗಳು ಒಂದು ಇನ್ನೊಂದನ್ನು ಟಕ್ಕರಿಸುವ ವಿರೋಧದಿಕ್ಕುಗಳಲ್ಲಿ ಬೀಸುವ ಎರಡು ಭಿರುಗಾಳಿಗಳಂತೆ ತೋರಿದವು.
07114040a ತಸ್ಮೈ ಕರ್ಣಃ ಶಿತಾನ್ಬಾಣಾನ್ಕರ್ಮಾರಪರಿಮಾರ್ಜಿತಾನ್।
07114040c ಸುವರ್ಣವಿಕೃತಾನ್ಕ್ರುದ್ಧಃ ಪ್ರಾಹಿಣೋದ್ವಧಕಾಂಕ್ಷಯಾ।।
ಭೀಮನನ್ನು ವಧಿಸಲು ಬಯಸಿದ ಕರ್ಣನು ಕ್ರುದ್ಧನಾಗಿ ಕಮ್ಮಾರರಿಂದ ಸಾಣೆಹಿಡಿಸಲ್ಪಟ್ಟ ಬಂಗಾರದಿಂದ ಮಾಡಿದ ನಿಶಿತ ಬಾಣಗಳನ್ನು ಪ್ರಯೋಗಿಸಿದನು.
07114041a ತಾನಂತರಿಕ್ಷೇ ವಿಶಿಖೈಸ್ತ್ರಿಧೈಕೈಕಮಶಾತಯತ್।
07114041c ವಿಶೇಷಯನ್ಸೂತಪುತ್ರಂ ಭೀಮಸ್ತಿಷ್ಠೇತಿ ಚಾಬ್ರವೀತ್।।
ಅವುಗಳನ್ನು ಅಂತರಿಕ್ಷದಲ್ಲಿಯೇ ವಿಶಿಖಗಳಿಂದ ಒಂದೊಂದನ್ನೂ ಮೂರು ಮೂರು ತುಂಡುಗಳನ್ನಾಗಿ ಕತ್ತರಿಸಿ, ಸೂತಪುತ್ರನನ್ನು ಮೀರಿಸುತ್ತಾ ಭೀಮಸೇನನು “ನಿಲ್ಲು!” ಎಂದು ಹೇಳಿದನು.
07114042a ಪುನಶ್ಚಾಸೃಜದುಗ್ರಾಣಿ ಶರವರ್ಷಾಣಿ ಪಾಂಡವಃ।
07114042c ಅಮರ್ಷೀ ಬಲವಾನ್ಕ್ರುದ್ಧೋ ದಿಧಕ್ಷನ್ನಿವ ಪಾವಕಃ।।
ಭಸ್ಮಮಾಡಿಬಿಡುವನೋ ಎನ್ನುವ ಪಾವಕನಂತೆ ಕ್ರುದ್ಧನಾದ ಬಲವಾನ್, ಅಸಹನಶೀಲ ಪಾಂಡವನು ಪುನಃ ಉಗ್ರ ಶರವರ್ಷಗಳನ್ನು ಸುರಿಸಿದನು.
07114043a ತಸ್ಯ ತಾನ್ಯಾದದೇ ಕರ್ಣಃ ಸರ್ವಾಣ್ಯಸ್ತ್ರಾಣ್ಯಭೀತವತ್।
07114043c ಯುಧ್ಯತಃ ಪಾಂಡುಪುತ್ರಸ್ಯ ಸೂತಪುತ್ರೋಽಸ್ತ್ರಮಾಯಯಾ।।
ಆದರೆ ಕರ್ಣನು ಭಯಪಡದೇ ಭೀಮನ ಎಲ್ಲ ಅಸ್ತ್ರಗಳನ್ನೂ ತಡೆದನು. ಸೂತಪುತ್ರನು ಪಾಂಡುಪುತ್ರನೊಡನೆ ಅಸ್ತ್ರಮಾಯೆಯಿಂದ ಯುದ್ಧಮಾಡತೊಡಗಿದನು.
07114044a ತಸ್ಯೇಷುಧೀ ಧನುರ್ಜ್ಯಾಂ ಚ ಬಾಣೈಃ ಸನ್ನತಪರ್ವಭಿಃ।
07114044c ರಶ್ಮೀನ್ಯೋಕ್ತ್ರಾಣಿ ಚಾಶ್ವಾನಾಂ ಕರ್ಣೋ ವೈಕರ್ತನೋಽಚ್ಚಿನತ್।।
ವೈಕರ್ತನ ಕರ್ಣನು ಸನ್ನತ ಪರ್ವ ಬಾಣಗಳಿಂದ ಅವನ ಭತ್ತಳಿಕೆಗಳನ್ನೂ, ಧನುಸ್ಸಿನ ಶಿಂಜನಿಯನ್ನೂ, ಧನುಸ್ಸನ್ನೂ, ಹಗ್ಗಗಳನ್ನೂ, ಕುದುರೆಗಳ ಕಡಿವಾಣಗಳನ್ನೂ ಕತ್ತರಿಸಿದನು.
07114045a ಅಥಾಸ್ಯಾಶ್ವಾನ್ಪುನರ್ಹತ್ವಾ ತ್ರಿಭಿರ್ವಿವ್ಯಾಧ ಸಾರಥಿಂ।
07114045c ಸೋಽವಪ್ಲುತ್ಯ ದ್ರುತಂ ಸೂತೋ ಯುಯುಧಾನರಥಂ ಯಯೌ।।
ಪುನಃ ಅವನ ಕುದುರೆಗಳನ್ನು ಸಂಹರಿಸಿ, ಮೂರರಿಂದ ಸಾರಥಿಯನ್ನು ಹೊಡೆದನು. ಆ ಸಾರಥಿಯು ಕೂಡಲೇ ರಥದಿಂದ ಹಾರಿ ಯುಯುಧಾನ ಸಾತ್ಯಕಿಯ ರಥಕ್ಕೆ ಹೋದನು.
07114046a ಉತ್ಸ್ಮಯನ್ನಿವ ಭೀಮಸ್ಯ ಕ್ರುದ್ಧಃ ಕಾಲಾನಲಪ್ರಭಃ।
07114046c ಧ್ವಜಂ ಚಿಚ್ಚೇದ ರಾಧೇಯಃ ಪತಾಕಾಶ್ಚ ನ್ಯಪಾತಯತ್।।
ಪ್ರಳಯಾಗ್ನಿಯ ಪ್ರಭೆಯಿಂದ ಪ್ರಕಾಶಿಸುತ್ತಿದ್ದ ಕ್ರುದ್ಧ ರಾಧೇಯನು ಭೀಮನನ್ನು ಗೇಲಿಮಾಡುತ್ತಾ ಅವನ ಧ್ವಜವನ್ನೂ ಪತಾಕೆಯನ್ನೂ ಕತ್ತರಿಸಿ ಬೀಳಿಸಿದನು.
07114047a ಸ ವಿಧನ್ವಾ ಮಹಾರಾಜ ರಥಶಕ್ತಿಂ ಪರಾಮೃಶತ್।
07114047c ತಾಮವಾಸೃಜದಾವಿಧ್ಯ ಕ್ರುದ್ಧಃ ಕರ್ಣರಥಂ ಪ್ರತಿ।।
ಮಹಾರಾಜ! ಧನುಸ್ಸನ್ನು ಕಳೆದುಕೊಂಡ ಕ್ರುದ್ಧ ಭೀಮನು ಪರಮ ರೋಷದಿಂದ ಕರ್ಣನ ರಥದ ಕಡೆಗೆ ಶಕ್ತ್ಯಾಯುಧವನ್ನು ಬೀಸಿ ಪ್ರಯೋಗಿಸಿದನು.
07114048a ತಾಮಾಧಿರಥಿರಾಯಸ್ತಃ ಶಕ್ತಿಂ ಹೇಮಪರಿಷ್ಕೃತಾಂ।
07114048c ಆಪತಂತೀಂ ಮಹೋಲ್ಕಾಭಾಂ ಚಿಚ್ಚೇದ ದಶಭಿಃ ಶರೈಃ।।
ಮೇಲೆ ಬೀಳುತ್ತಿದ್ದ ಮಹಾಉಲ್ಕೆಯ ಪ್ರಭೆಯ ಹೇಮಪರಿಷ್ಕೃತ ಆ ಶಕ್ತಿಯನ್ನು ಆಯಾಸಗೊಂಡಿದ್ದ ಆಧಿರಥಿ ಕರ್ಣನು ಹತ್ತು ಶರಗಳಿಂದ ಕತ್ತರಿಸಿದನು.
07114049a ಸಾಪತದ್ದಶಧಾ ರಾಜನ್ನಿಕೃತ್ತಾ ಕರ್ಣಸಾಯಕೈಃ।
07114049c ಅಸ್ಯತಃ ಸೂತಪುತ್ರಸ್ಯ ಮಿತ್ರಾರ್ಥೇ ಚಿತ್ರಯೋಧಿನಃ।।
ರಾಜನ್! ಮಿತ್ರನಿಗಾಗಿ ವಿಚಿತ್ರವಾಗಿ ಯುದ್ಧಮಾಡುತ್ತಿದ್ದ ಸೂತಪುತ್ರ ಕರ್ಣನ ಸಾಯಕಗಳಿಂದ ಆ ಶಕ್ತಿಯು ಹತ್ತು ತುಂಡುಗಳಾಗಿ ಬಿದ್ದಿತು.
07114050a ಸ ಚರ್ಮಾದತ್ತ ಕೌಂತೇಯೋ ಜಾತರೂಪಪರಿಷ್ಕೃತಂ।
07114050c ಖಡ್ಗಂ ಚಾನ್ಯತರಪ್ರೇಪ್ಸುರ್ಮೃತ್ಯೋರಗ್ರೇ ಜಯಸ್ಯ ವಾ।
07114050e ತದಸ್ಯ ಸಹಸಾ ಕರ್ಣೋ ವ್ಯಧಮತ್ಪ್ರಹಸನ್ನಿವ।।
ಯುದ್ಧದಲ್ಲಿ ಬೇಗನೇ ಮೃತ್ಯು ಅಥವಾ ಜಯವನ್ನು ಬಯಸಿ ಕೌಂತೇಯ ಭೀಮನು ಬಂಗಾರದಿಂದ ಮಾಡಲ್ಪಟ್ಟ ಖಡ್ಗ-ಗುರಾಣಿಗಳನ್ನು ಎತ್ತಿಕೊಂಡನು. ಕೂಡಲೆ ಕರ್ಣನು ನಗುತ್ತಾ ಗುರಾಣಿಯನ್ನು ತುಂಡರಿಸಿದನು.
07114051a ಸ ವಿಚರ್ಮಾ ಮಹಾರಾಜ ವಿರಥಃ ಕ್ರೋಧಮೂರ್ಚಿತಃ।
07114051c ಅಸಿಂ ಪ್ರಾಸೃಜದಾವಿಧ್ಯ ತ್ವರನ್ಕರ್ಣರಥಂ ಪ್ರತಿ।।
ಮಹಾರಾಜ! ಗುರಾಣಿಯನ್ನು ಕಳೆದುಕೊಂಡು ವಿರಥನಾಗಿದ್ದ ಭೀಮನು ಕ್ರೋಧಮೂರ್ಚಿತನಾಗಿ ತ್ವರೆಮಾಡಿ ಖಡ್ಗವನ್ನೇ ತಿರುಗಿಸುತ್ತಾ ಕರ್ಣನ ರಥದ ಕಡೆ ಎಸೆದನು.
07114052a ಸ ಧನುಃ ಸೂತಪುತ್ರಸ್ಯ ಚಿತ್ತ್ವಾ ಜ್ಯಾಂ ಚ ಸುಸಂಶಿತಃ।
07114052c ಅಪತದ್ಭುವಿ ನಿಸ್ತ್ರಿಂಶಶ್ಚ್ಯುತಃ ಸರ್ಪ ಇವಾಂಬರಾತ್।।
ಆ ಖಡ್ಗವು ಸೂತಪುತ್ರನ ಮೌರ್ವಿಯುಕ್ತ ಧನುಸ್ಸನ್ನು ಕತ್ತರಿಸಿ ಕೋಪಗೊಂಡ ಸರ್ಪವು ಆಕಾಶದಿಂದ ಕೆಳಕ್ಕೆ ಬೀಳುವಂತೆ ಭೂಮಿಯ ಮೇಲೆ ಬಿದ್ದಿತು.
07114053a ತತಃ ಪ್ರಹಸ್ಯಾಧಿರಥಿರನ್ಯದಾದತ್ತ ಕಾರ್ಮುಕಂ।
07114053c ಶತ್ರುಘ್ನಂ ಸಮರೇ ಕ್ರುದ್ಧೋ ದೃಢಜ್ಯಂ ವೇಗವತ್ತರಂ।।
ಆಗ ಸಮರದಲ್ಲಿ ಕ್ರುದ್ಧನಾದ ಆಧಿರಥನು ಜೋರಾಗಿ ನಗುತ್ತಾ ಶತ್ರುವನ್ನು ಕೊಲ್ಲಬಲ್ಲ ದೃಢ ಮೌರ್ವಿಯ, ವೇಗವತ್ತರ ಇನ್ನೊಂದು ಧನುಸ್ಸನ್ನು ಎತ್ತಿಕೊಂಡನು.
07114054a ಸ ಭೀಮಸೇನಃ ಕುಪಿತೋ ಬಲವಾನ್ಸತ್ಯವಿಕ್ರಮಃ।
07114054c ವಿಹಾಯಸಂ ಪ್ರಾಕ್ರಮದ್ವೈ ಕರ್ಣಸ್ಯ ವ್ಯಥಯನ್ಮನಃ।।
ಕುಪಿತ ಸತ್ಯವಿಕ್ರಮಿ ಭೀಮಸೇನನು ಕರ್ಣನ ಮನಸ್ಸನ್ನು ವ್ಯಥೆಗೊಳಿಸುತ್ತಾ ಆಕಾಶಕ್ಕೆ ಹಾರಿದನು.
07114055a ತಸ್ಯ ತಚ್ಚರಿತಂ ದೃಷ್ಟ್ವಾ ಸಂಗ್ರಾಮೇ ವಿಜಯೈಷಿಣಃ।
07114055c ಲಯಮಾಸ್ಥಾಯ ರಾಧೇಯೋ ಭೀಮಸೇನಮವಂಚಯತ್।।
ಅವನ ಆ ನಡತೆಯನ್ನು ನೋಡಿ ಸಂಗ್ರಾಮದಲ್ಲಿ ವಿಜಯವನ್ನು ಬಯಸುತ್ತಿದ್ದ ರಾಧೇಯನು ಶರೀರವನ್ನು ಸಂಕುಚಿಸಿಕೊಂಡು ಭೀಮಸೇನನನ್ನು ಮೋಸಗೊಳಿಸಿದನು.
07114056a ತಮದೃಷ್ಟ್ವಾ ರಥೋಪಸ್ಥೇ ನಿಲೀನಂ ವ್ಯಥಿತೇಂದ್ರಿಯಂ।
07114056c ಧ್ವಜಮಸ್ಯ ಸಮಾಸಾದ್ಯ ತಸ್ಥೌ ಸ ಧರಣೀತಲೇ।।
ವ್ಯಥಿತ ಮನಸ್ಕನಾಗಿ ರಥದ ಹಿಂಭಾಗದಲ್ಲಿ ಅಡಗಿದ್ದ ಕರ್ಣನನ್ನು ನೋಡಿ ಭೀಮಸೇನನು ರಥದ ಧ್ವಜಸ್ಥಂಭವನ್ನು ಹಿಡಿದು ಭೂಮಿಯಮೇಲೆ ನಿಂತನು.
07114057a ತದಸ್ಯ ಕುರವಃ ಸರ್ವೇ ಚಾರಣಾಶ್ಚಾಭ್ಯಪೂಜಯನ್।
07114057c ಯದಿಯೇಷ ರಥಾತ್ಕರ್ಣಂ ಹಂತುಂ ತಾರ್ಕ್ಷ್ಯ ಇವೋರಗಂ।।
07114058a ಸ ಚಿನ್ನಧನ್ವಾ ವಿರಥಃ ಸ್ವಧರ್ಮಮನುಪಾಲಯನ್।
07114058c ಸ್ವರಥಂ ಪೃಷ್ಠತಃ ಕೃತ್ವಾ ಯುದ್ಧಾಯೈವ ವ್ಯವಸ್ಥಿತಃ।।
ಗರುಡನು ಸರ್ಪವೊಂದನ್ನು ಎತ್ತಿಕೊಂಡು ಹೋಗುವಂತೆ ರಥದಿಂದ ಕರ್ಣನನ್ನು ಎತ್ತಿಕೊಂಡು ಹೋಗುವಂತಿದ್ದ ಭೀಮನನ್ನು “ಧನುಸ್ಸನ್ನು ಕಳೆದುಕೊಂಡಿದ್ದರೂ ವಿರಥನಾಗಿದ್ದರೂ ತನ್ನ ಧರ್ಮವನ್ನು ಅನುಸರಿಸಿ ಇವನು ತನ್ನ ರಥವನ್ನು ಹಿಂದಕ್ಕೆ ಬಿಟ್ಟು, ಯುದ್ಧದಲ್ಲಿಯೇ ನಿರತನಾಗಿದ್ದಾನೆ!” ಎಂದು ಕುರುಗಳು ಮತ್ತು ಚಾರಣರು ಎಲ್ಲರೂ ಪ್ರಶಂಸಿಸಿದರು.
07114059a ತದ್ವಿಹತ್ಯಾಸ್ಯ ರಾಧೇಯಸ್ತತ ಏನಂ ಸಮಭ್ಯಯಾತ್।
07114059c ಸಂರಬ್ಧಃ ಪಾಂಡವಂ ಸಂಖ್ಯೇ ಯುದ್ಧಾಯ ಸಮುಪಸ್ಥಿತಂ।।
ಆಕಾಶದಿಂದ ಹಾರಿ ಹೀಗೆ ತನ್ನ ಹತ್ತಿರುವೇ ಬಂದ ಪಾಂಡವನನ್ನು ನೋಡಿ ಕ್ರೋಧಿತ ರಾಧೇಯನು ಅವನೊಂದಿಗೆ ಪುನಃ ಯುದ್ಧವನ್ನು ಮುಂದುವರಿಸಿದನು.
07114060a ತೌ ಸಮೇತೌ ಮಹಾರಂಗೇ ಸ್ಪರ್ಧಮಾನೌ ಮಹಾಬಲೌ।
07114060c ಜೀಮೂತಾವಿವ ಘರ್ಮಾಂತೇ ಗರ್ಜಮಾನೌ ನಭಸ್ತಲೇ।।
ಬೇಸಗೆಯ ಕೊನೆಯಲ್ಲಿ ನಭಸ್ಥಲದಲ್ಲಿ ಗರ್ಜಿಸುವ ಮೋಡಗಳಂತೆ ಅವರಿಬ್ಬರೂ ಮಹಬಲಶಾಲಿಗಳು ಮಹಾರಂಗದಲ್ಲಿ ಜೊತೆಗೂಡಿ ಸ್ಪರ್ಧಿಸುತ್ತಿದ್ದರು.
07114061a ತಯೋರಾಸೀತ್ಸಂಪ್ರಹಾರಃ ಕ್ರುದ್ಧಯೋರ್ನರಸಿಂಹಯೋಃ।
07114061c ಅಮೃಷ್ಯಮಾಣಯೋಃ ಸಂಖ್ಯೇ ದೇವದಾನವಯೋರಿವ।।
ರಣದಲ್ಲಿ ಕ್ರುದ್ಧರಾಗಿದ್ದ, ಅಸಹನಶೀಲರಾಗಿದ್ದ ಆ ನರಸಿಂಹರ ನಡುವೆ ದೇವ-ದಾನವರ ನಡುವಿನಂತೆ ಪ್ರಹಾರಗಳು ನಡೆದವು.
07114062a ಕ್ಷೀಣಶಸ್ತ್ರಸ್ತು ಕೌಂತೇಯಃ ಕರ್ಣೇನ ಸಮಭಿದ್ರುತಃ।
07114062c ದೃಷ್ಟ್ವಾರ್ಜುನಹತಾನ್ನಾಗಾನ್ಪತಿತಾನ್ಪರ್ವತೋಪಮಾನ್।
07114062e ರಥಮಾರ್ಗವಿಘಾತಾರ್ಥಂ ವ್ಯಾಯುಧಃ ಪ್ರವಿವೇಶ ಹ।।
ಕರ್ಣನಿಂದ ಆಕ್ರಮಣಿಸಿಸಲ್ಪಟ್ಟ ಶಸ್ತ್ರಗಳನ್ನು ಕಳೆದುಕೊಂಡಿದ್ದ ಕೌಂತೇಯ ಭೀಮನು ಅರ್ಜುನನಿಂದ ಹತವಾಗಿ ಬಿದ್ದಿದ್ದ ಪರ್ವತೋಪಮ ಆನೆಗಳನ್ನು ನೋಡಿ ಕರ್ಣನ ರಥಮಾರ್ಗವನ್ನು ತಡೆಯಲೋಸುಗ ಆ ಪ್ರದೇಶವನ್ನು ಪ್ರವೇಶಿಸಿದನು.
07114063a ಹಸ್ತಿನಾಂ ವ್ರಜಮಾಸಾದ್ಯ ರಥದುರ್ಗಂ ಪ್ರವಿಶ್ಯ ಚ।
07114063c ಪಾಂಡವೋ ಜೀವಿತಾಕಾಂಕ್ಷೀ ರಾಧೇಯಂ ನಾಭ್ಯಹಾರಯತ್।।
ರಥವು ಬರಲು ಕಷ್ಟವಾಗಿದ್ದ ಸತ್ತ ಆನೆಗಳ ರಾಶಿಗಳನ್ನು ಪ್ರವೇಶಿಸಿ ಜೀವಿತಾಕಾಂಕ್ಷಿ ಪಾಂಡವನು ರಾಧೇಯನನ್ನು ಪ್ರಹರಿಸಲಿಲ್ಲ.
07114064a ವ್ಯವಸ್ಥಾನಮಥಾಕಾಂಕ್ಷನ್ಧನಂಜಯಶರೈರ್ಹತಂ।
07114064c ಉದ್ಯಮ್ಯ ಕುಂಜರಂ ಪಾರ್ಥಸ್ತಸ್ಥೌ ಪರಪುರಂಜಯಃ।।
ಹೋರಾಡಲು ಸರಿಯಾದ ಸ್ಥಾನದಲ್ಲಿ ನಿಲ್ಲಲು ಬಯಸಿ ಪರಪುರಂಜಯ ಪಾರ್ಥ ಭೀಮನು ಧನಂಜಯನ ಶರಗಳಿಂದ ಹತವಾಗಿ ಬಿದ್ದಿದ್ದ ಆನೆಯೊಂದನ್ನು ಎತ್ತಿ ನಿಂತನು.
07114065a ತಮಸ್ಯ ವಿಶಿಖೈಃ ಕರ್ಣೋ ವ್ಯಧಮತ್ಕುಂಜರಂ ಪುನಃ।
07114065c ಹಸ್ತ್ಯಂಗಾನ್ಯಥ ಕರ್ಣಾಯ ಪ್ರಾಹಿಣೋತ್ಪಾಂಡವೋ ನದನ್।।
ಆ ಕುಂಜರವನ್ನು ಕರ್ಣನು ವಿಶಿಖಗಳಿಂದ ತುಂಡುಮಾಡಲು ಪಾಂಡವನು ಇತರ ಆನೆಗಳನ್ನು ಹಿಡಿದು ಕರ್ಣನ ಮೇಲೆ ಎಸೆದು ಗರ್ಜಿಸಿದನು.
07114066a ಚಕ್ರಾಣ್ಯಶ್ವಾಂಸ್ತಥಾ ವಾಹಾನ್ಯದ್ಯತ್ಪಶ್ಯತಿ ಭೂತಲೇ।
07114066c ತತ್ತದಾದಾಯ ಚಿಕ್ಷೇಪ ಕ್ರುದ್ಧಃ ಕರ್ಣಾಯ ಪಾಂಡವಃ।।
ಕ್ರುದ್ಧ ಪಾಂಡವನು ಆಗ ರಣಭೂಮಿಯ ಮೇಲೆ ಏನೆಲ್ಲ ಕಂಡನೋ - ರಥಚಕ್ರಗಳು, ಕುದುರೆಗಳು, ರಥಗಳು - ಅವುಗಳನ್ನು ಕರ್ಣನ ಮೇಲೆ ಎಸೆಯುತ್ತಿದ್ದನು.
07114067a ತದಸ್ಯ ಸರ್ವಂ ಚಿಚ್ಚೇದ ಕ್ಷಿಪ್ತಂ ಕ್ಷಿಪ್ತಂ ಶಿತೈಃ ಶರೈಃ।
07114067c ವ್ಯಾಯುಧಂ ನಾವಧೀಚ್ಚೈನಂ ಕರ್ಣಃ ಕುಂತ್ಯಾ ವಚಃ ಸ್ಮರನ್।।
ಎಸೆದಹಾಗೆ ಅವೆಲ್ಲವನ್ನೂ ಕರ್ಣನು ನಿಶಿತ ಶರಗಳಿಂದ ಚೂರು ಚೂರು ಮಾಡಿ ಕತ್ತರಿಸಿದನು. ಕುಂತಿಯ ವಚನವನ್ನು ಸ್ಮರಿಸಿಕೊಂಡ ಕರ್ಣನು ನಿರಾಯುಧನಾಗಿ ಜ್ಞಾನತಪ್ಪಿದ್ದ ಭೀಮನನ್ನು ಕೊಲ್ಲಲಿಲ್ಲ.
07114068a ಧನುಷೋಽಗ್ರೇಣ ತಂ ಕರ್ಣಸ್ತ್ವಭಿದ್ರುತ್ಯ ಪರಾಮೃಶತ್।
07114068c ಉತ್ಸ್ಮಯನ್ನಿವ ರಾಧೇಯೋ ಭೀಮಸೇನಮುವಾಚ ಹ।।
ಪರಮ ಕ್ರೋಧದಿಂದ ರಾಧೇಯ ಕರ್ಣನು ಧನುಸ್ಸಿನ ತುದಿಯಿಂದ ಭೀಮಸೇನನನ್ನು ತಿವಿದನು ಮತ್ತು ನಗುತ್ತಾ ಅವನಿಗೆ ಹೇಳಿದನು:
07114069a ಪುನಃ ಪುನಸ್ತೂಬರಕ ಮೂಢ ಔದರಿಕೇತಿ ಚ।
07114069c ಅಕೃತಾಸ್ತ್ರಕ ಮಾ ಯೋತ್ಸೀರ್ಬಾಲ ಸಂಗ್ರಾಮಕಾತರ।।
“ಪುರುಷರಿಗಿರಬೇಕಾದ ಗಡ್ಡ-ಮೀಸೆಗಳಿಲ್ಲದ ನಪುಂಸಕನೇ! ಮೂಢ! ಹೊಟ್ಟೆಬಾಕ! ಅಸ್ತ್ರಗಳನ್ನು ಕಲಿಯದವನೇ! ಯುದ್ಧಹೇಡಿಯೇ! ಬಾಲಸ್ವಭಾವದವನೇ! ಸಂಗ್ರಾಮಕಾತರ! ಪುನಃ ಪುನಃ ಯುದ್ಧಕ್ಕೆ ಬರಬೇಡ!
07114070a ಯತ್ರ ಭೋಜ್ಯಂ ಬಹುವಿಧಂ ಭಕ್ಷ್ಯಂ ಪೇಯಂ ಚ ಪಾಂಡವ।
07114070c ತತ್ರ ತ್ವಂ ದುರ್ಮತೇ ಯೋಗ್ಯೋ ನ ಯುದ್ಧೇಷು ಕಥಂ ಚನ।।
ದುರ್ಮತೇ! ಪಾಂಡವ! ಎಲ್ಲಿ ಭೋಜಿಸಲು ಬಹುವಿಧದ ಭಕ್ಷ್ಯ ಪಾನೀಯಗಳಿವೆಯೋ ಅಲ್ಲಿಗೆ ನೀನು ಯೋಗ್ಯನೇ ಹೊರತು ಯುದ್ಧದಲ್ಲಿ ಎಂದೂ ಅಲ್ಲ!
07114071a ಮುನಿರ್ಭೂತ್ವಾಥ ವಾ ಭೀಮ ಫಲಾನ್ಯದ್ಧಿ ಸುದುರ್ಮತೇ।
07114071c ವನಾಯ ವ್ರಜ ಕೌಂತೇಯ ನ ತ್ವಂ ಯುದ್ಧವಿಶಾರದಃ।।
ದುರ್ಮತೇ! ಕೌಂತೇಯ! ನೀನು ಯುದ್ಧವಿಶಾರದನಲ್ಲ! ಭೀಮ! ಮುನಿಯಾಗು ಅಥವಾ ವನಕ್ಕೆ ಹೋಗಿ ಫಲಗಳನ್ನಾದರೂ ಸೇವಿಸಿ ಜೀವಿಸಿಕೊಂಡಿರು!
07114072a ಫಲಮೂಲಾಶನೇ ಯುಕ್ತಸ್ತ್ವಂ ತಥಾತಿಥಿಭೋಜನೇ।
07114072c ನ ತ್ವಾಂ ಶಸ್ತ್ರಸಮುದ್ಯೋಗೇ ಯೋಗ್ಯಂ ಮನ್ಯೇ ವೃಕೋದರ।।
ವೃಕೋದರ! ನೀನು ಫಲಮೂಲಗಳನ್ನು ತಿನ್ನುವುದಕ್ಕೆ ಮತ್ತು ಅತಿಥಿಭೋಜನಕ್ಕೆ ಯೋಗ್ಯ! ಆದರೆ ಶಸ್ತ್ರಗಳನ್ನೆತ್ತಿ ಯುದ್ಧಮಾಡುವುದರಲ್ಲಿ ಯೋಗ್ಯನೆಂದು ನಿನ್ನನ್ನು ಮನ್ನಿಸುವುದಿಲ್ಲ.
07114073a ಪುಷ್ಪಮೂಲಫಲಾಹಾರೋ ವ್ರತೇಷು ನಿಯಮೇಷು ಚ।
07114073c ಉಚಿತಸ್ತ್ವಂ ವನೇ ಭೀಮ ನ ತ್ವಂ ಯುದ್ಧವಿಶಾರದಃ।।
ಭೀಮ! ವನದಲ್ಲಿ ಪುಷ್ಪ-ಮೂಲ-ಫಲಾಹಾರಗಳು ಮತ್ತು ವ್ರತ-ನಿಯಮಗಳೇ ನಿನಗೆ ಉಚಿತವಾದವುಗಳು. ನೀನು ಯುದ್ಧವಿಶಾರದನಲ್ಲ!
07114074a ಕ್ವ ಯುದ್ಧಂ ಕ್ವ ಮುನಿತ್ವಂ ಚ ವನಂ ಗಚ್ಚ ವೃಕೋದರ।
07114074c ನ ತ್ವಂ ಯುದ್ಧೋಚಿತಸ್ತಾತ ವನವಾಸರತಿರ್ಭವ।।
ಅಯ್ಯಾ! ಯುದ್ಧವೆಲ್ಲಿ? ಮುನಿತ್ವವೆಲ್ಲಿ? ವನಕ್ಕೆ ತೆರಳು! ಯುದ್ಧವು ನಿನಗೆ ಉಚಿತವಾದುದಲ್ಲ! ವನವಾಸವೇ ನಿನಗೆ ಅತಿಯಾಗಿ ಯೋಗ್ಯವಾದುದು!
07114075a ಸೂದಾನ್ಭೃತ್ಯಜನಾನ್ದಾಸಾಂಸ್ತ್ವಂ ಗೃಹೇ ತ್ವರಯನ್ಭೃಶಂ।
07114075c ಯೋಗ್ಯಸ್ತಾಡಯಿತುಂ ಕ್ರೋಧಾದ್ಭೋಜನಾರ್ಥಂ ವೃಕೋದರ।।
ವೃಕೋದರ! ಭೋಜನಾರ್ಥವಾಗಿ ನೀನು ಕ್ರೋಧದಿಂದ ಮನೆಯಲ್ಲಿರುವ ಅಡುಗೆಯವರನ್ನು ಮತ್ತು ಭೃತ್ಯಜನ-ದಾಸರನ್ನು ತುಂಬಾ ಅವಸರ ಪಡಿಸಿ ಹೊಡೆಯಲು ಮಾತ್ರ ನೀನು ಯೋಗ್ಯ!”
07114076a ಕೌಮಾರೇ ಯಾನಿ ಚಾಪ್ಯಾಸನ್ನಪ್ರಿಯಾಣಿ ವಿಶಾಂ ಪತೇ।
07114076c ಪೂರ್ವವೃತ್ತಾನಿ ಚಾಪ್ಯೇನಂ ರೂಕ್ಷಾಣ್ಯಶ್ರಾವಯದ್ಭೃಶಂ।।
ವಿಶಾಂಪತೇ! ಹಿಂದೆ ಬಾಲತನದಲ್ಲಿ ಏನು ಅಪ್ರಿಯವಾದವುಗಳು ನಡೆದಿದ್ದವೋ ಅವುಗಳನ್ನು ಕೂಡ ಎತ್ತಿ ಹೇಳುತ್ತಾ ಕರ್ಣನು ಭೀಮನೊಡನೆ ನಿಷ್ಟೂರವಾಗಿ ಮಾತನಾಡಿದನು.
07114077a ಅಥೈನಂ ತತ್ರ ಸಂಲೀನಮಸ್ಪೃಶದ್ಧನುಷಾ ಪುನಃ।
07114077c ಪ್ರಹಸಂಶ್ಚ ಪುನರ್ವಾಕ್ಯಂ ಭೀಮಮಾಹ ವೃಷಸ್ತದಾ।।
ಶರೀರವನ್ನು ಸಂಕುಚಿತಗೊಳಿಸಿಕೊಂಡಿದ್ದ ಭೀಮನನ್ನು ವೃಷ ಕರ್ಣನು ಪುನಃ ಧನುಸ್ಸಿನಿಂದ ತಿವಿದು ಜೋರಾಗಿ ನಕ್ಕು ಈ ಮಾತನ್ನಾಡಿದನು:
07114078a ಯೋದ್ಧವ್ಯಮಾವಿಶಾನ್ಯತ್ರ ನ ಯೋದ್ಧವ್ಯಂ ತು ಮಾದೃಶೈಃ।
07114078c ಮಾದೃಶೈರ್ಯುಧ್ಯಮಾನಾನಾಂ ಏತಚ್ಚಾನ್ಯಚ್ಚ ವಿದ್ಯತೇ।।
“ಎಲ್ಲಿ ಅಲ್ಪಬಲವುಳವುಳ್ಳವರಿದ್ದಾರೋ ಅಲ್ಲಿ ಹೋರಾಡಬೇಕು. ನನ್ನಂಥವರೊಂದಿಗೆ ಹೋರಾಡಬಾರದು. ನನ್ನೊಡನೆ ಯುದ್ಧಮಾಡುವವರಿಗೆ ಹೀಗಿರುವ ಮತ್ತು ಇನ್ನೂ ಕೆಟ್ಟ ಅವಸ್ಥೆಯಾಗುತ್ತದೆ.
07114079a ಗಚ್ಚ ವಾ ಯತ್ರ ತೌ ಕೃಷ್ಣೌ ತೌ ತ್ವಾ ರಕ್ಷಿಷ್ಯತೋ ರಣೇ।
07114079c ಗೃಹಂ ವಾ ಗಚ್ಚ ಕೌಂತೇಯ ಕಿಂ ತೇ ಯುದ್ಧೇನ ಬಾಲಕ।।
ಕೌಂತೇಯ! ರಣದಲ್ಲಿ ನಿನ್ನನ್ನು ರಕ್ಷಿಸಲಿರುವ ಆ ಇಬ್ಬರು ಕೃಷ್ಣರು ಎಲ್ಲಿದ್ದಾರೋ ಅಲ್ಲಿಗೆ ಹೋಗು! ಅಥವಾ ಮನೆಗಾದರೂ ಹೋಗು! ನಿನ್ನಂತಹ ಬಾಲಕನೊಂದಿಗೇನು ಯುದ್ಧ!”
07114080a ಏವಂ ತಂ ವಿರಥಂ ಕೃತ್ವಾ ಕರ್ಣೋ ರಾಜನ್ವ್ಯಕತ್ಥತ।
07114080c ಪ್ರಮುಖೇ ವೃಷ್ಣಿಸಿಂಹಸ್ಯ ಪಾರ್ಥಸ್ಯ ಚ ಮಹಾತ್ಮನಃ।।
ರಾಜನ್! ಹೀಗೆ ಕರ್ಣನು ವೃಷ್ಣಿಸಿಂಹ ಕೃಷ್ಣನ ಎದುರಿಗೇ ಮಹಾತ್ಮ ಪಾರ್ಥ ಭೀಮನನ್ನು ವಿರಥನನ್ನಾಗಿ ಮಾಡಿ ಕೊಚ್ಚಿಕೊಂಡನು.
07114081a ತತೋ ರಾಜನ್ ಶಿಲಾಧೌತಾಂ ಶರಾನ್ ಶಾಖಾಮೃಗಧ್ವಜಃ।
07114081c ಪ್ರಾಹಿಣೋತ್ಸೂತಪುತ್ರಾಯ ಕೇಶವೇನ ಪ್ರಚೋದಿತಃ।।
ರಾಜನ್! ಆಗ ಕೇಶವನಿಂದ ಪ್ರಚೋದಿತ ಕಪಿಧ್ವಜ ಅರ್ಜುನನು ಸೂತಪುತ್ರನ ಮೇಲೆ ಮಸೆಗಲ್ಲಿನಿಂದ ಶುದ್ಧಪಡಿಸಿದ್ದ ಶರಗಳನ್ನು ಪ್ರಯೋಗಿಸಿದನು.
07114082a ತತಃ ಪಾರ್ಥಭುಜೋತ್ಸೃಷ್ಟಾಃ ಶರಾಃ ಕಾಂಚನಭೂಷಣಾಃ।
07114082c ಗಾಂಡೀವಪ್ರಭವಾಃ ಕರ್ಣಂ ಹಂಸಾಃ ಕ್ರೌಂಚಮಿವಾವಿಶನ್।।
ಆಗ ಪಾರ್ಥನ ಭುಜಗಳಿಂದ ಬಿಡಲ್ಪಟ್ಟ, ಗಾಂಡೀವದಿಂದ ಹೊರಟ ಕಾಂಚನಭೂಷಣ ಶರಗಳು ಹಂಸಗಳು ಕ್ರೌಂಚಪರ್ವತವನ್ನು ಹೇಗೋ ಹಾಗೆ ಕರ್ಣನ ಶರೀರದ ಒಳಹೊಕ್ಕವು.
07114083a ಸ ಭುಜಂಗೈರಿವಾಯಸ್ತೈರ್ಗಾಂಡೀವಪ್ರೇಷಿತೈಃ ಶರೈಃ।
07114083c ಭೀಮಸೇನಾದಪಾಸೇಧತ್ಸೂತಪುತ್ರಂ ಧನಂಜಯಃ।।
ಧನಂಜಯನು ಗಾಂಡೀವದಿಂದ ಪ್ರಯೋಗಿಸಿದ ಭುಜಂಗಗಳಂತಿದ್ದ ಆ ಬಾಣಗಳಿಂದ ಸೂತಪುತ್ರನು ಭೀಮಸೇನನಿಂದ ದೂರಸರಿಯುವಂತೆ ಮಾಡಿದನು.
07114084a ಸ ಚಿನ್ನಧನ್ವಾ ಭೀಮೇನ ಧನಂಜಯಶರಾಹತಃ।
07114084c ಕರ್ಣೋ ಭೀಮಾದಪಾಯಾಸೀದ್ರಥೇನ ಮಹತಾ ದ್ರುತಂ।।
ಮೊದಲು ಭೀಮನಿಂದ ಧನುಸ್ಸನ್ನು ಕಳೆದುಕೊಂಡಿದ್ದ ಮತ್ತು ಈಗ ಧನಂಜಯನ ಶರಗಳಿಂದ ಪೀಡಿತನಾದ ಕರ್ಣನು ತನ್ನ ಮಹಾರಥದಲ್ಲಿ ಕುಳಿತು ಭೀಮನಿರುವಲ್ಲಿಂದ ದೂರ ಹೊರಟುಹೋದನು.
07114085a ಭೀಮೋಽಪಿ ಸಾತ್ಯಕೇರ್ವಾಹಂ ಸಮಾರುಹ್ಯ ನರರ್ಷಭಃ।
07114085c ಅನ್ವಯಾದ್ಭ್ರಾತರಂ ಸಂಖ್ಯೇ ಪಾಂಡವಂ ಸವ್ಯಸಾಚಿನಂ।।
ನರರ್ಷಭ ಭೀಮನೂ ಕೂಡ ಸಾತ್ಯಕಿಯ ರಥವನ್ನೇರಿ ತಮ್ಮ ಪಾಂಡವ ಸವ್ಯಸಾಚಿಯನ್ನು ರಣದಲ್ಲಿ ಅನುಸರಿಸಿಹೋದನು.
07114086a ತತಃ ಕರ್ಣಂ ಸಮುದ್ದಿಶ್ಯ ತ್ವರಮಾಣೋ ಧನಂಜಯಃ।
07114086c ನಾರಾಚಂ ಕ್ರೋಧತಾಮ್ರಾಕ್ಷಃ ಪ್ರೈಷೀನ್ಮೃತ್ಯುಮಿವಾಂತಕಃ।।
ಆಗ ಕ್ರೋಧದಿಂದ ಕಣ್ಣುಗಳು ಕೆಂಪಾಗಿದ್ದ ಧನಂಜಯನು ತ್ವರೆಮಾಡಿ ಕರ್ಣನನ್ನು ಗುರಿಯಿಟ್ಟು ಅಂತಕ ಮೃತ್ಯುವಿನಂತಿರುವ ನಾರಾಚವನ್ನು ಪ್ರಯೋಗಿಸಿದನು.
07114087a ಸ ಗರುತ್ಮಾನಿವಾಕಾಶೇ ಪ್ರಾರ್ಥಯನ್ಭುಜಗೋತ್ತಮಂ।
07114087c ನಾರಾಚೋಽಭ್ಯಪತತ್ಕರ್ಣಂ ತೂರ್ಣಂ ಗಾಂಡೀವಚೋದಿತಃ।।
ಆಕಾಶದಲ್ಲಿ ಗರುಡವು ಸರ್ಪವನ್ನು ಹುಡುಕಿಕೊಂಡು ಹೋಗುವಂತೆ ಗಾಂಡೀವದಿಂದ ಬಿಡಲ್ಪಟ್ಟ ಆ ನಾರಾಚವು ವೇಗವಾಗಿ ಕರ್ಣನನ್ನು ಹುಡುಕಿಕೊಂಡು ಹೋಯಿತು.
07114088a ತಮಂತರಿಕ್ಷೇ ನಾರಾಚಂ ದ್ರೌಣಿಶ್ಚಿಚ್ಚೇದ ಪತ್ರಿಣಾ।
07114088c ಧನಂಜಯಭಯಾತ್ಕರ್ಣಮುಜ್ಜಿಹೀರ್ಷುರ್ಮಹಾರಥಃ।।
ಅಂತರಿಕ್ಷದಲ್ಲಿ ಹೋಗುತ್ತಿದ್ದ ಆ ನಾರಾಚವನ್ನು ಮಹಾರಥ ದ್ರೌಣಿಯು ಧನಂಜಯನ ಭಯದಿಂದ ಕರ್ಣನನ್ನು ಉಳಿಸಲು ಬಯಸಿ ಪತ್ರಿಯಿಂದ ತುಂಡರಿಸಿದನು.
07114089a ತತೋ ದ್ರೌಣಿಂ ಚತುಃಷಷ್ಟ್ಯಾ ವಿವ್ಯಾಧ ಕುಪಿತೋಽರ್ಜುನಃ।
07114089c ಶಿಲೀಮುಖೈರ್ಮಹಾರಾಜ ಮಾ ಗಾಸ್ತಿಷ್ಠೇತಿ ಚಾಬ್ರವೀತ್।।
ಮಹಾರಾಜ! ಆಗ ಕುಪಿತನಾದ ಅರ್ಜುನನು ಅರವತ್ನಾಲ್ಕು ಶಿಲೀಮುಖಗಳಿಂದ ದ್ರೌಣಿಯನ್ನು ಹೊಡೆದು “ಹೋಗಬೇಡ! ನಿಲ್ಲು!” ಎಂದು ಹೇಳಿದನು.
07114090a ಸ ತು ಮತ್ತಗಜಾಕೀರ್ಣಮನೀಕಂ ರಥಸಂಕುಲಂ।
07114090c ತೂರ್ಣಮಭ್ಯಾವಿಶದ್ದ್ರೌಣಿರ್ಧನಂಜಯಶರಾರ್ದಿತಃ।।
ಧನಂಜಯ ಶರಗಳಿಂದ ಪೀಡಿತನಾದ ದ್ರೌಣಿಯಾದರೋ ಮತ್ತಗಜ- ರಥಸಂಕುಲಗಳ ಸೇನೆಯಲ್ಲಿ ನುಸುಳಿಕೊಂಡನು.
07114091a ತತಃ ಸುವರ್ಣಪೃಷ್ಠಾನಾಂ ಧನುಷಾಂ ಕೂಜತಾಂ ರಣೇ।
07114091c ಶಬ್ದಂ ಗಾಂಡೀವಘೋಷೇಣ ಕೌಂತೇಯೋಽಭ್ಯಭವದ್ಬಲೀ।।
ಆಗ ರಣದಲ್ಲಿ ಸುವರ್ಣದ ಹಿಡಿಗಳಿದ್ದ ಧನುಸ್ಸುಗಳ ಟೇಂಕಾರ ಶಬ್ಧವನ್ನು ತನ್ನ ಗಾಂಡೀವ ಘೋಷದಿಂದ ಬಲಶಾಲಿ ಕೌಂತೇಯನು ಮೀರಿಸಿದನು.
07114092a ಧನಂಜಯಸ್ತಥಾ ಯಾಂತಂ ಪೃಷ್ಠತೋ ದ್ರೌಣಿಮಭ್ಯಯಾತ್।
07114092c ನಾತಿದೀರ್ಘಮಿವಾಧ್ವಾನಂ ಶರೈಃ ಸಂತ್ರಾಸಯನ್ಬಲಂ।।
ಹಾಗೆ ಧನಂಜಯನು ಶರಗಳಿಂದ ಸೇನೆಗಳನ್ನು ಪೀಡಿಸುತ್ತಾ ಸ್ವಲ್ಪದೂರದವರೆಗೆ ಹೋಗುತ್ತಿದ್ದ ದ್ರೌಣಿಯನ್ನು ಹಿಂಬಾಲಿಸಿದನು.
07114093a ವಿದಾರ್ಯ ದೇಹಾನ್ನಾರಾಚೈರ್ನರವಾರಣವಾಜಿನಾಂ।
07114093c ಕಂಕಬರ್ಹಿಣವಾಸೋಭಿರ್ಬಲಂ ವ್ಯಧಮದರ್ಜುನಃ।।
ನಾರಾಚಗಳಿಂದ ಮನುಷ್ಯರು, ಕುದುರೆಗಳು ಮತ್ತು ಆನೆಗಳ ದೇಹಗಳನ್ನು ಸೀಳುತ್ತಾ ಅರ್ಜುನನು ಕಂಕಬರ್ಹಿಣಗಳಿಂದ ಸೇನೆಯನ್ನು ಮರ್ದಿಸಿದನು.
07114094a ತದ್ಬಲಂ ಭರತಶ್ರೇಷ್ಠ ಸವಾಜಿದ್ವಿಪಮಾನವಂ।
07114094c ಪಾಕಶಾಸನಿರಾಯಸ್ತಃ ಪಾರ್ಥಃ ಸಂನಿಜಘಾನ ಹ।।
ಭರತಶ್ರೇಷ್ಠ! ಕುದುರೆ-ಆನೆ-ಮನುಷ್ಯರೊಂದಿಗೆ ಆ ಬಲವನ್ನು ಪಾಕಶಾಸನಿ ಪಾರ್ಥ ಅರ್ಜುನನು ಪ್ರಯತ್ನಿಸಿ ಧ್ವಂಸಮಾಡಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಭೀಮಕರ್ಣಯುದ್ಧೇ ಚತುರ್ದಶಾಧಿಕಶತತಮೋಽಧ್ಯಾಯಃ ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಭೀಮಕರ್ಣಯುದ್ಧ ಎನ್ನುವ ನೂರಾಹದಿನಾಲ್ಕನೇ ಅಧ್ಯಾಯವು.