113 ಭೀಮಕರ್ಣಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಜಯದ್ರಥವಧ ಪರ್ವ

ಅಧ್ಯಾಯ 113

ಸಾರ

ಭೀಮ-ಕರ್ಣರ ಯುದ್ಧ (1-26).

07113001 ಧೃತರಾಷ್ಟ್ರ ಉವಾಚ।
07113001a ಮಹಾನಪನಯಃ ಸೂತ ಮಮೈವಾತ್ರ ವಿಶೇಷತಃ।
07113001c ಸ ಇದಾನೀಮನುಪ್ರಾಪ್ತೋ ಮನ್ಯೇ ಸಂಜಯ ಶೋಚತಃ।।

ಧೃತರಾಷ್ಟ್ರನು ಹೇಳಿದನು: “ಸಂಜಯ! ಸೂತ! ಮಹಾ ಅನ್ಯಾಯವಾಗಿ ಹೋಯಿತು. ವಿಶೇಷತಃ ನನ್ನಿಂದ! ದುಃಖದಲ್ಲಿ ಸಿಕ್ಕಿಹಾಕಿಕೊಂಡಿರುವ ನಾನು ಈಗ ಇದನ್ನು ಮನಗಾಣುತ್ತಿದ್ದೇನೆ.

07113002a ಯದ್ಗತಂ ತದ್ಗತಮಿತಿ ಮಮಾಸೀನ್ಮನಸಿ ಸ್ಥಿತಂ।
07113002c ಇದಾನೀಮತ್ರ ಕಿಂ ಕಾರ್ಯಂ ಪ್ರಕರಿಷ್ಯಾಮಿ ಸಂಜಯ।।

ಸಂಜಯ! ಏನು ನಡೆಯಿತೋ ಅದು ನಡೆದು ಹೋಯಿತು ಎಂಬ ಅಭಿಪ್ರಾಯದಿಂದಲೇ ನಾನು ಈಗ ಯೋಚಿಸುತ್ತಿದ್ದೇನೆ. ಈಗ ಇಲ್ಲಿ ನಾನು ಏನು ಮಾಡಬಹುದು ಹೇಳು! ಅದನ್ನು ಮಾಡುತ್ತೇನೆ.

07113003a ಯಥಾ ತ್ವೇಷ ಕ್ಷಯೋ ವೃತ್ತೋ ಮಮಾಪನಯಸಂಭವಃ।
07113003c ವೀರಾಣಾಂ ತನ್ಮಮಾಚಕ್ಷ್ವ ಸ್ಥಿರೀಭೂತೋಽಸ್ಮಿ ಸಂಜಯ।।

ಸಂಜಯ! ನೀನು ಏನು ನಾಶದ ವರದಿಯನ್ನು ಮಾಡುತ್ತಿದ್ದೀಯೋ ಆ ವೀರರ ನಾಶವು ನನ್ನ ಅಪರಾಧದಿಂದಲೇ ನಡೆಯುತ್ತಿದೆ. ಅದರ ಕುರಿತು ಹೇಳು. ಮನಸ್ಸನ್ನು ಗಟ್ಟಿಮಾಡಿಕೊಂಡಿದ್ದೇನೆ!”

07113004 ಸಂಜಯ ಉವಾಚ।
07113004a ಕರ್ಣಭೀಮೌ ಮಹಾರಾಜ ಪರಾಕ್ರಾಂತೌ ಮಹಾಹವೇ।
07113004c ಬಾಣವರ್ಷಾಣ್ಯವರ್ಷೇತಾಂ ವೃಷ್ಟಿಮಂತಾವಿವಾಂಬುದೌ।।

ಸಂಜಯನು ಹೇಳಿದನು: “ಮಹಾರಾಜ! ಮಹಾಯುದ್ಧದಲ್ಲಿ ಪರಾಕ್ರಾಂತ ಕರ್ಣ-ಭೀಮರಿಬ್ಬರೂ ಮಳೆಗರೆಯುವ ಮೋಡಗಳಂತೆ ಪರಸ್ಪರರ ಮೇಲೆ ಬಾಣಗಳ ಮಳೆಯನ್ನು ಸುರಿಸಿದರು.

07113005a ಭೀಮನಾಮಾಂಕಿತಾ ಬಾಣಾಃ ಸ್ವರ್ಣಪುಂಖಾಃ ಶಿಲಾಶಿತಾಃ।
07113005c ವಿವಿಶುಃ ಕರ್ಣಮಾಸಾದ್ಯ ಭಿಂದಂತ ಇವ ಜೀವಿತಂ।।

“ಭೀಮ!” ಎಂಬ ನಾಮಾಂಕಿತ ಸ್ವರ್ಣಪುಂಖಗಳ ಶಿಲಾಶಿತ ಬಾಣಗಳು ಜೀವವನ್ನೇ ಹರಣಮಾಡುವವೋ ಎಂಬಂತೆ ಕರ್ಣನ ಶರೀರವನ್ನು ಹೊಕ್ಕವು.

07113006a ತಥೈವ ಕರ್ಣನಿರ್ಮುಕ್ತೈಃ ಸವಿಷೈರಿವ ಪನ್ನಗೈಃ।
07113006c ಆಕೀರ್ಯತ ರಣೇ ಭೀಮಃ ಶತಶೋಽಥ ಸಹಸ್ರಶಃ।।

ಹಾಗೆಯೇ ರಣದಲ್ಲಿ ಕರ್ಣನು ಪ್ರಯೋಗಿಸಿದ ಹಾವಿನ ವಿಷಗಳಂತಿದ್ದ ನೂರಾರು ಸಹಸ್ರಾರು ಬಾಣಗಳು ಭೀಮನನ್ನು ಮುಚ್ಚಿಬಿಟ್ಟವು.

07113007a ತಯೋಃ ಶರೈರ್ಮಹಾರಾಜ ಸಂಪತದ್ಭಿಃ ಸಮಂತತಃ।
07113007c ಬಭೂವ ತವ ಸೈನ್ಯಾನಾಂ ಸಂಕ್ಷೋಭಃ ಸಾಗರೋಪಮಃ।।

ಮಹಾರಾಜ! ಎಲ್ಲಕಡೆಗಳಲ್ಲಿ ಬೀಳುತ್ತಿದ್ದ ಅವರ ಶರಗಳಿಂದಾಗಿ ಸಾಗರದಂತಿದ್ದ ನಿನ್ನ ಸೇನೆಯಲ್ಲಿ ಅಲ್ಲೋಲಕಲ್ಲೋಲವುಂಟಾಯಿತು.

07113008a ಭೀಮಚಾಪಚ್ಯುತೈರ್ಬಾಣೈಸ್ತವ ಸೈನ್ಯಮರಿಂದಮ।
07113008c ಅವಧ್ಯತ ಚಮೂಮಧ್ಯೇ ಘೋರೈರಾಶೀವಿಷೋಪಮೈಃ।।

ಅರಿಂದಮ! ಭೀಮನ ಚಾಪದಿಂದ ಹೊರಟ ಘೋರ ಸರ್ಪಗಳ ವಿಷಕ್ಕೆ ಸಮಾನ ಬಾಣಗಳು ನಿನ್ನ ಸೇನೆಗಳ ಚಮೂಮಧ್ಯದಲ್ಲಿ ಅನೇಕರನ್ನು ಸಂಹರಿದವು.

07113009a ವಾರಣೈಃ ಪತಿತೈ ರಾಜನ್ವಾಜಿಭಿಶ್ಚ ನರೈಃ ಸಹ।
07113009c ಅದೃಶ್ಯತ ಮಹೀ ಕೀರ್ಣಾ ವಾತನುನ್ನೈರ್ದ್ರುಮೈರಿವ।।

ರಾಜನ್! ಹರಡಿ ಬಿದ್ದಿದ್ದ ಆನೆ-ಕುದುರೆಗಳಿಂದ ಮತ್ತು ಮನುಷ್ಯರಿಂದ ರಣಭೂಮಿಯು ಚಂಡಮಾರುತಕ್ಕೆ ಸಿಲುಕಿ ಮರಗಳು ಉರುಳಿ ಬಿದ್ದಿರುವಂತೆ ತೋರಿತು.

07113010a ತೇ ವಧ್ಯಮಾನಾಃ ಸಮರೇ ಭೀಮಚಾಪಚ್ಯುತೈಃ ಶರೈಃ।
07113010c ಪ್ರಾದ್ರವಂಸ್ತಾವಕಾ ಯೋಧಾಃ ಕಿಮೇತದಿತಿ ಚಾಬ್ರುವನ್।।

ಸಮರದಲ್ಲಿ ಭೀಮನ ಚಾಪದಿಂದ ಹೊರಟ ಶರಗಳಿಂದ ವಧಿಸಲ್ಪಡುತ್ತಿದ್ದ ನಿನ್ನಕಡೆಯ ಯೋಧರು “ಇದೇನಿದು?” ಎಂದು ಹೇಳುತ್ತಾ ಓಡಿಹೋಗುತ್ತಿದ್ದರು.

07113011a ತತೋ ವ್ಯುದಸ್ತಂ ತತ್ಸೈನ್ಯಂ ಸಿಂಧುಸೌವೀರಕೌರವಂ।
07113011c ಪ್ರೋತ್ಸಾರಿತಂ ಮಹಾವೇಗೈಃ ಕರ್ಣಪಾಂಡವಯೋಃ ಶರೈಃ।।

ಹೀಗೆ ಕರ್ಣ-ಪಾಂಡವರ ಶರಗಳ ಮಹಾವೇಗದಿಂದ ಸಿಂಧು-ಸೌವೀರ-ಕೌರವ ಸೇನೆಗಳು ಭಗ್ನವಾಗಿ ಪಲಾಯನಗೈದವು.

07113012a ತೇ ಶರಾತುರಭೂಯಿಷ್ಠಾ ಹತಾಶ್ವನರವಾಹನಾಃ।
07113012c ಉತ್ಸೃಜ್ಯ ಕರ್ಣಂ ಭೀಮಂ ಚ ಪ್ರಾದ್ರವನ್ಸರ್ವತೋದಿಶಂ।।

ಅವರ ಶರಗಳಿಂದ ಹತರಾಗದೇ ಉಳಿದಿದ್ದ ಅಶ್ವ-ರಥ-ಗಜ-ಪದಾತಿಗಳು ಕರ್ಣ-ಭೀಮರನ್ನು ಅಲ್ಲಿಯೇ ಬಿಟ್ಟು ಎಲ್ಲ ದಿಕ್ಕುಗಳಿಗೂ ಓಡಿ ಹೋದವು.

07113013a ನೂನಂ ಪಾರ್ಥಾರ್ಥಂ ಏವಾಸ್ಮಾನ್ಮೋಹಯಂತಿ ದಿವೌಕಸಃ।
07113013c ಯತ್ಕರ್ಣಭೀಮಪ್ರಭವೈರ್ವಧ್ಯತೇ ನೋ ಬಲಂ ಶರೈಃ।।
07113014a ಏವಂ ಬ್ರುವಂತೋ ಯೋಧಾಸ್ತೇ ತಾವಕಾ ಭಯಪೀಡಿತಾಃ।
07113014c ಶರಪಾತಂ ಸಮುತ್ಸೃಜ್ಯ ಸ್ಥಿತಾ ಯುದ್ಧದಿದೃಕ್ಷವಃ।।

“ನಿಜವಾಗಿಯೂ ಪಾರ್ಥರ ಹಿತಕ್ಕಾಗಿಯೇ ದಿವೌಕಸರು ನಮ್ಮನ್ನು ಹೀಗೆ ಭ್ರಾಂತರನ್ನಾಗಿಸಿದ್ದಾರೆ! ಕರ್ಣ-ಭೀಮರಿಂದ ಹೊರಟ ಬಾಣಗಳು ನಮ್ಮ ಸೇನೆಗಳನ್ನೇ ವಧಿಸುತ್ತಿವೆ.” ಹೀಗೆ ಹೇಳುತ್ತಾ ಭಯಪೀಡಿತ ನಿನ್ನವರು ಶರಗಳು ಬೀಳುತ್ತಿರುವ ಪ್ರದೇಶವನ್ನು ಬಿಟ್ಟು ದೂರದಲ್ಲಿ ಯುದ್ಧಪ್ರೇಕ್ಷಕರಾಗಿ ನಿಂತುಬಿಟ್ಟರು.

07113015a ತತಃ ಪ್ರಾವರ್ತತ ನದೀ ಘೋರರೂಪಾ ಮಹಾಹವೇ।
07113015c ಬಭೂವ ಚ ವಿಶೇಷೇಣ ಭೀರೂಣಾಂ ಭಯವರ್ಧಿನೀ।।

ಆಗ ಮಹಾಹವದಲ್ಲಿ ವಿಶೇಷವಾಗಿ ರಣಹೇಡಿಗಳ ಭಯವನ್ನು ಹೆಚ್ಚಿಸುವ ಘೋರರೂಪದ ನದಿಯು ಪ್ರವಹಿಸತೊಡಗಿತು.

07113016a ವಾರಣಾಶ್ವಮನುಷ್ಯಾಣಾಂ ರುಧಿರೌಘಸಮುದ್ಭವಾ।
07113016c ಸಂವೃತಾ ಗತಸತ್ತ್ವೈಶ್ಚ ಮನುಷ್ಯಗಜವಾಜಿಭಿಃ।।

ಆನೆ-ಕುದುರೆ-ಮನುಷ್ಯರ ರಕ್ತದಿಂದ ಹುಟ್ಟಿದ ಆ ನದಿಯು ಸತ್ತುಹೋಗಿದ್ದ ಮನುಷ್ಯ-ಆನೆ-ಕುದುರೆಗಳಿಂದ ತುಂಬಿಹೋಗಿತ್ತು.

07113017a ಸಾನುಕರ್ಷಪತಾಕೈಶ್ಚ ದ್ವಿಪಾಶ್ವರಥಭೂಷಣೈಃ।
07113017c ಸ್ಯಂದನೈರಪವಿದ್ಧೈಶ್ಚ ಭಗ್ನಚಕ್ರಾಕ್ಷಕೂಬರೈಃ।।
07113018a ಜಾತರೂಪಪರಿಷ್ಕಾರೈರ್ಧನುರ್ಭಿಃ ಸುಮಹಾಧನೈಃ।
07113018c ಸುವರ್ಣಪುಂಖೈರಿಷುಭಿರ್ನಾರಾಚೈಶ್ಚ ಸಹಸ್ರಶಃ।।
07113019a ಕರ್ಣಪಾಂಡವನಿರ್ಮುಕ್ತೈರ್ನಿರ್ಮುಕ್ತೈರಿವ ಪನ್ನಗೈಃ।
07113019c ಪ್ರಾಸತೋಮರಸಂಘಾತೈಃ ಖಡ್ಗೈಶ್ಚ ಸಪರಶ್ವಧೈಃ।।
07113020a ಸುವರ್ಣವಿಕೃತೈಶ್ಚಾಪಿ ಗದಾಮುಸಲಪಟ್ಟಿಶೈಃ।
07113020c ವಜ್ರೈಶ್ಚ ವಿವಿಧಾಕಾರೈಃ ಶಕ್ತಿಭಿಃ ಪರಿಘೈರಪಿ।
07113020e ಶತಘ್ನೀಭಿಶ್ಚ ಚಿತ್ರಾಭಿರ್ಬಭೌ ಭಾರತ ಮೇದಿನೀ।।
07113021a ಕನಕಾಂಗದಕೇಯೂರೈಃ ಕುಂಡಲೈರ್ಮಣಿಭಿಃ ಶುಭೈಃ।
07113021c ತನುತ್ರೈಃ ಸತಲತ್ರೈಶ್ಚ ಹಾರೈರ್ನಿಷ್ಕೈಶ್ಚ ಭಾರತ।।
07113022a ವಸ್ತ್ರೈಶ್ಚತ್ರೈಶ್ಚ ವಿಧ್ವಸ್ತೈಶ್ಚಾಮರವ್ಯಜನೈರಪಿ।
07113022c ಗಜಾಶ್ವಮನುಜೈರ್ಭಿನ್ನೈಃ ಶಸ್ತ್ರೈಃ ಸ್ಯಂದನಭೂಷಣೈಃ।।
07113023a ತೈಸ್ತೈಶ್ಚ ವಿವಿಧೈರ್ಭಾವೈಸ್ತತ್ರ ತತ್ರ ವಸುಂಧರಾ।
07113023c ಪತಿತೈರಪವಿದ್ಧೈಶ್ಚ ಸಂಬಭೌ ದ್ಯೌರಿವ ಗ್ರಹೈಃ।।

ಭಾರತ! ತೋಳುಮರಗಳು, ಪತಾಕೆಗಳು, ಆನೆ-ಕುದುರೆ-ರಥಗಳ ಭೂಷಣಗಳು, ಪುಡಿಯಾಗಿದ್ದ ರಥಗಳು, ಮುರಿದುಹೋಗಿದ್ದ ರಥಚಕ್ರಗಳು, ನೊಗಗಳು, ಬಂಗಾರದಿಂದ ಮಾಡಲ್ಪಟ್ಟ ಮಹಾಮೌಲ್ಯದ ಧನುಸ್ಸುಗಳು, ಕರ್ಣ-ಪಾಂಡವರು ಬಿಟ್ಟ ಪೊರೆಬಿಟ್ಟ ಹಾವುಗಳಂತಿರುವ ಸಾವಿರಾರು ಸುವರ್ಣಪುಂಖ ನಾರಾಚ ಬಾಣಗಳು, ಒಡೆದು ಬಿದ್ದಿದ್ದ ಪ್ರಾಸ-ತೋಮರ-ಖಡ್ಗ ಮತ್ತು ಪರಶಾಯುಧಗಳು, ಬಂಗಾರದಿಂದ ಮಾಡಲ್ಪಟ್ಟ ಗದೆ-ಮುಸಲ-ಪಟ್ಟಿಶಗಳು, ವಿವಿಧಾಕಾರದ ವಜ್ರಗಳು, ಪರಿಘ-ಶಕ್ತಿಗಳು, ಶತಘ್ನೀ-ಚಕ್ರಗಳು, ಕನಕಾಂಗದ-ಕೇಯೂರಗಳು, ಶುಭ ಕುಂಡಲ ಮಣಿಗಳು, ಕವಚಗಳು, ಬಳೆಗಳು, ಉಂಗುರಗಳು, ಕೈಚೀಲಗಳಿಂದ, ಹಾರಗಳಿಂದ, ನಿಷ್ಕಗಳಿಂದ, ವಸ್ತ್ರ-ಚತ್ರಗಳಿಂದ, ಮುರಿದಿದ್ದ ಚಾಮರ-ವ್ಯಜಗಳಿಂದ, ಛಿನ್ನ-ಛಿನ್ನರಾಗಿದ ಗಜ-ಅಶ್ವ-ಮನುಷ್ಯರಿಂದ, ಶಸ್ತ್ರಗಳಿಂದ, ರಥಭೂಷಣಗಳಿಂದ, ವಿವಿಧ ಭಾವ್ಗಳಿಂದ ಅಲ್ಲಲ್ಲಿ ಬಿದ್ದಿದ್ದ ಇನ್ನೂ ಅನೇಕ ವಸ್ತುಗಳಿಂದ ವ್ಯಾಪ್ತವಾಗಿದ್ದ ರಣಾಂಗಣವು ಗ್ರಹಗಳಿಂದ ತುಂಬಿದ್ದ ಆಕಾಶದಂತೆ ಪ್ರಕಾಶಿಸುತ್ತಿತ್ತು.

07113024a ಅಚಿಂತ್ಯಮದ್ಭುತಂ ಚೈವ ತಯೋಃ ಕರ್ಮಾತಿಮಾನುಷಂ।
07113024c ದೃಷ್ಟ್ವಾ ಚಾರಣಸಿದ್ಧಾನಾಂ ವಿಸ್ಮಯಃ ಸಮಪದ್ಯತ।।

ಯೋಚನೆಗೆ ಸಿಲುಕದ ಅವರಿಬ್ಬರ ಅದ್ಭುತ ಅಮಾನುಷ ಕೃತ್ಯಗಳನ್ನು ನೋಡಿ ಚಾರಣ-ಸಿದ್ಧರಲ್ಲಿ ವಿಸ್ಮಯವುಂಟಾಯಿತು.

07113025a ಅಗ್ನೇರ್ವಾಯುಸಹಾಯಸ್ಯ ಗತಿಃ ಕಕ್ಷ ಇವಾಹವೇ।
07113025c ಆಸೀದ್ಭೀಮಸಹಾಯಸ್ಯ ರೌದ್ರಮಾಧಿರಥೇರ್ಗತಂ।।

ಒಣಮರಗಳಿರುವ ವನದಲ್ಲಿ ಅಗ್ನಿಯ ಮುನ್ನಡೆಯು ಗಾಳಿಯ ಸಹಾಯದಿಂದ ಬಹಳ ಭಯಂಕರವಾಗಿ ಪರಿಣಮಿಸುವಂತೆ ಯುದ್ಧದಲ್ಲಿ ಭೀಮನ ಸಹಾಯವನ್ನು ಪಡೆದ ಆಧಿರಥ ಕರ್ಣನ ಗಮನವು ಬಹಳ ಭಯಂಕರವಾಗಿ ಪರಿಣಮಿಸಿತು.

07113025e ನಿಪಾತಿತಧ್ವಜರಥಂ ಹತವಾಜಿನರದ್ವಿಪಂ।
07113026a ಗಜಾಭ್ಯಾಂ ಸಂಪ್ರಯುಕ್ತಾಭ್ಯಾಮಾಸೀನ್ನಡವನಂ ಯಥಾ।।

ಅಂಕುಶಪ್ರಹಾರದಿಂದ ಪ್ರೇರಿತ ಎರಡು ಆನೆಗಳು ಜೊಂಡುಹುಲ್ಲಿನ ವನವನ್ನು ಧ್ವಂಸಮಾಡುವಂತೆ ಅವರಿಬ್ಬರು ಧ್ವಜ-ರಥಗಳನ್ನು ಕೆಳಗುರುಳಿಸಿ ಅಶ್ವ-ನರ-ಗಜಗಳನ್ನು ಸಂಹರಿಸಿದರು.

07113026c ತಥಾಭೂತಂ ಮಹತ್ಸೈನ್ಯಮಾಸೀದ್ಭಾರತ ಸಂಯುಗೇ।
07113026e ವಿಮರ್ದಃ ಕರ್ಣಭೀಮಾಭ್ಯಾಮಾಸೀಚ್ಚ ಪರಮೋ ರಣೇ।।

ಆಗ ಭಾರತ! ಸಂಯುಗದಲ್ಲಿ ಕರ್ಣ-ಭೀಮರಿಂದ ಆ ಮಹಾಸೇನೆಯು ಸಂಪೂರ್ಣವಾಗಿ ನಾಶಗೊಂಡಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಭೀಮಕರ್ಣಯುದ್ಧೇ ತ್ರಯೋದಶಾಧಿಕಶತತಮೋಽಧ್ಯಾಯಃ ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಭೀಮಕರ್ಣಯುದ್ಧ ಎನ್ನುವ ನೂರಾಹದಿಮೂರನೇ ಅಧ್ಯಾಯವು.