ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 111
ಸಾರ
ಭೀಮಸೇನನು ಧೃತರಾಷ್ಟ್ರನ ಏಳು ಮಕ್ಕಳನ್ನು - ಚಿತ್ರ, ಉಪಚಿತ್ರ, ಚಿತ್ರಾಕ್ಷ, ಚಾರುಚಿತ್ರ, ಶರಾಸನ, ಚಿತ್ರಾಯುಧ ಮತ್ತು ಚಿತ್ರವರ್ಮ – ಸಂಹರಿಸಿದುದು (1-19). ಭೀಮಸೇನ-ಕರ್ಣರ ಯುದ್ಧ (20-35).
07111001 ಸಂಜಯ ಉವಾಚ।
07111001a ತವಾತ್ಮಜಾಂಸ್ತು ಪತಿತಾನ್ದೃಷ್ಟ್ವಾ ಕರ್ಣಃ ಪ್ರತಾಪವಾನ್।
07111001c ಕ್ರೋಧೇನ ಮಹತಾವಿಷ್ಟೋ ನಿರ್ವಿಣ್ಣೋಽಭೂತ್ಸ ಜೀವಿತಾತ್।।
ಸಂಜಯನು ಹೇಳಿದನು: “ನಿನ್ನ ಮಕ್ಕಳು ಬಿದ್ದುದನ್ನು ನೋಡಿ ಪ್ರತಾಪವಾನ ಕರ್ಣನು ಮಹಾ ಕ್ರೋಧದಿಂದ ಆವಿಷ್ಟನಾದನು ಮತ್ತು ತನ್ನ ಜೀವನದಲ್ಲಿಯೇ ಜಿಗುಪ್ಸೆತಾಳಿದನು.
07111002a ಆಗಸ್ಕೃತಮಿವಾತ್ಮಾನಂ ಮೇನೇ ಚಾಧಿರಥಿಸ್ತದಾ।
07111002c ಭೀಮಸೇನಂ ತತಃ ಕ್ರುದ್ಧಃ ಸಮಾದ್ರವತ ಸಂಭ್ರಮಾತ್।।
ಆಗ ಆಧಿರಥನು ತಾನೇ ತಪ್ಪಿತಸ್ಥನು ಎಂದು ಕೊಂಡನು. ಅನಂತರ ಕ್ರುದ್ಧನಾಗಿ ಉತ್ತೇಜದಿಂದ ಭೀಮಸೇನನನ್ನು ಆಕ್ರಮಣಿಸಿದನು.
07111003a ಸ ಭೀಮಂ ಪಂಚಭಿರ್ವಿದ್ಧ್ವಾ ರಾಧೇಯಃ ಪ್ರಹಸನ್ನಿವ।
07111003c ಪುನರ್ವಿವ್ಯಾಧ ಸಪ್ತತ್ಯಾ ಸ್ವರ್ಣಪುಂಖೈಃ ಶಿಲಾಶಿತೈಃ।।
ರಾಧೇಯನು ನಗುತ್ತಾ ಭೀಮನನ್ನು ಐದರಿಂದ ಹೊಡೆದು ಪುನಃ ಏಳು ಸ್ವರ್ಣಪುಂಖ56 ಶಿಲಾಶಿತಬಾಣಗಳಿಂದ ಹೊಡೆದನು.
07111004a ಅವಹಾಸಂ ತು ತಂ ಪಾರ್ಥೋ ನಾಮೃಷ್ಯತ ವೃಕೋದರಃ।
07111004c ತತೋ ವಿವ್ಯಾಧ ರಾಧೇಯಂ ಶತೇನ ನತಪರ್ವಣಾಂ।।
ಅವನ ಆ ಅವಹೇಳನವನ್ನು ಪಾರ್ಥ ವೃಕೋದರನು ಸಹಿಸಿಕೊಳ್ಳಲಿಲ್ಲ. ಆಗ ಅವನು ರಾಧೇಯನನ್ನು ನೂರು ನತಪರ್ವಗಳಿಂದ ಹೊಡೆದನು.
07111005a ಪುನಶ್ಚ ವಿಶಿಖೈಸ್ತೀಕ್ಷ್ಣೈರ್ವಿದ್ಧ್ವಾ ಪಂಚಭಿರಾಶುಶುಗೈಃ।
07111005c ಧನುಶ್ಚಿಚ್ಚೇದ ಭಲ್ಲೇನ ಸೂತಪುತ್ರಸ್ಯ ಮಾರಿಷ।।
ಮಾರಿಷ! ಪುನಃ ಅವನು ಐದು ತೀಕ್ಷ್ಣ ವಿಶಿಖ ಆಶುಶುಗಗಳಿಂದ ಹೊಡೆದು ಭಲ್ಲದಿಂದ ಸೂತಪುತ್ರನ ಬಿಲ್ಲನ್ನು ಕತ್ತರಿಸಿದನು.
07111006a ಅಥಾನ್ಯದ್ಧನುರಾದಾಯ ಕರ್ಣೋ ಭಾರತ ದುರ್ಮನಾಃ।
07111006c ಇಷುಭಿಶ್ಚಾದಯಾಮಾಸ ಭೀಮಸೇನಂ ಸಮಂತತಃ।।
ಭಾರತ! ಆಗ ದುಃಖಿತನಾದ ಕರ್ಣನು ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಬಾಣಗಳಿಂದ ಭೀಮಸೇನನನ್ನು ಎಲ್ಲ ಕಡೆಗಳಿಂದ ಮುಚ್ಚಿದನು.
07111007a ತಸ್ಯ ಭೀಮೋ ಹಯಾನ್ ಹತ್ವಾ ವಿನಿಹತ್ಯ ಚ ಸಾರಥಿಂ।
07111007c ಪ್ರಜಹಾಸ ಮಹಾಹಾಸಂ ಕೃತೇ ಪ್ರತಿಕೃತಂ ಪುನಃ।।
ಭೀಮನು ಅವನ ಕುದುರೆಗಳನ್ನು ಕೊಂದು, ಸಾರಥಿಯನ್ನೂ ಸಂಹರಿಸಿ ಮಾಡಿದುದಕ್ಕೆ ಪ್ರತೀಕಾರ ಮಾಡಿದನೆಂದು ಅಟ್ಟಹಾಸದ ನಗುವನ್ನು ನಕ್ಕನು.
07111008a ಇಷುಭಿಃ ಕಾರ್ಮುಕಂ ಚಾಸ್ಯ ಚಕರ್ತ ಪುರುಷರ್ಷಭಃ।
07111008c ತತ್ಪಪಾತ ಮಹಾರಾಜ ಸ್ವರ್ಣಪೃಷ್ಠಂ ಮಹಾಸ್ವನಂ।।
ಮಹಾರಾಜ! ಆ ಪುರುಷರ್ಷಭ ಭೀಮನು ಬಾಣಗಳಿಂದ ಕರ್ಣನ ಧನುಸ್ಸನ್ನು ಕತ್ತರಿಸಲು ಆ ಸ್ವರ್ಣದ ಹಿಡಿಯಿದ್ದ, ಜೋರಾಗಿ ಟೇಂಕರಿಸುತ್ತಿದ್ದ ಬಿಲ್ಲು ಕೆಳಕ್ಕೆ ಬಿದ್ದಿತು.
07111009a ಅವಾರೋಹದ್ರಥಾತ್ತಸ್ಮಾದಥ ಕರ್ಣೋ ಮಹಾರಥಃ।
07111009c ಗದಾಂ ಗೃಹೀತ್ವಾ ಸಮರೇ ಭೀಮಸೇನಾಯ ಚಾಕ್ಷಿಪತ್।।
ಆಗ ಮಹಾರಥಿ ಕರ್ಣನು ರಥದಿಂದ ಇಳಿದು ಸಮರದಲ್ಲಿ ಗದೆಯನ್ನು ಹಿಡಿದು ಭೀಮಸೇನನ ಮೇಲೆ ಎಸೆದನು.
07111010a ತಾಮಾಪತಂತೀಂ ಸಹಸಾ ಗದಾಂ ದೃಷ್ಟ್ವಾ ವೃಕೋದರಃ।
07111010c ಶರೈರವಾರಯದ್ರಾಜನ್ಸರ್ವಸೈನ್ಯಸ್ಯ ಪಶ್ಯತಃ।।
ರಾಜನ್! ಮೇಲಿಂದ ಬೀಳುತ್ತಿದ್ದ ಆ ಗದೆಯನ್ನು ನೋಡಿ ಕೂಡಲೇ ವೃಕೋದರನು ಸರ್ವಸೇನೆಗಳೂ ನೋಡುತ್ತಿದ್ದಂತೆಯೇ ಶರಗಳಿಂದ ಅದನ್ನು ತಡೆದನು.
07111011a ತತೋ ಬಾಣಸಹಸ್ರಾಣಿ ಪ್ರೇಷಯಾಮಾಸ ಪಾಂಡವಃ।
07111011c ಸೂತಪುತ್ರವಧಾಕಾಂಕ್ಷೀ ತ್ವರಮಾಣಃ ಪರಾಕ್ರಮೀ।।
ಆಗ ಪರಾಕ್ರಮೀ ಪಾಂಡವನು ಸೂತಪುತ್ರನ ವಧೆಯನ್ನು ಬಯಸಿ ತ್ವರೆಮಾಡಿ ಸಹಸ್ರಾರು ಬಾಣಗಳನ್ನು ಪ್ರಯೋಗಿಸಿದನು.
07111012a ತಾನಿಷೂನಿಷುಭಿಃ ಕರ್ಣೋ ವಾರಯಿತ್ವಾ ಮಹಾಮೃಧೇ।
07111012c ಕವಚಂ ಭೀಮಸೇನಸ್ಯ ಪಾತಯಾಮಾಸ ಸಾಯಕೈಃ।।
ಮಹಾರಣದಲ್ಲಿ ಆ ಬಾಣಗಳನ್ನು ಬಾಣಗಳಿಂದಲೇ ತಡೆದು ಕರ್ಣನು ಸಾಯಕಗಳಿಂದ ಭೀಮಸೇನನ ಕವಚವನ್ನು ಬೀಳಿಸಿದನು.
07111013a ಅಥೈನಂ ಪಂಚವಿಂಶತ್ಯಾ ಕ್ಷುದ್ರಕಾಣಾಂ ಸಮಾರ್ಪಯತ್।
07111013c ಪಶ್ಯತಾಂ ಸರ್ವಭೂತಾನಾಂ ತದದ್ಭುತಮಿವಾಭವತ್।।
ಇನ್ನೂ ಇಪ್ಪತ್ತೈದು ಕ್ಷುದ್ರಕ ಬಾಣಗಳನ್ನು ಅವನ ಮೇಲೆ ಪ್ರಯೋಗಿಸಿದನು. ನೋಡುತ್ತಿರುವ ಸರ್ವಭೂತಗಳಿಗೂ ಅದೊಂದು ಅದ್ಭುತವೆನಿಸಿತು.
07111014a ತತೋ ಭೀಮೋ ಮಹಾರಾಜ ನವಭಿರ್ನತಪರ್ವಣಾಂ।
07111014c ರಣೇಽಪ್ರೇಷಯತ ಕ್ರುದ್ಧಃ ಸೂತಪುತ್ರಸ್ಯ ಮಾರಿಷ।।
ಮಾರಿಷ! ಮಹಾರಾಜ! ಆಗ ರಣದಲ್ಲಿ ಕ್ರುದ್ಧನಾದ ಭೀಮನು ಒಂಭತ್ತು ನತಪರ್ವಗಳನ್ನು ಸೂತಪುತ್ರನ ಮೇಲೆ ಪ್ರಯೋಗಿಸಿದನು.
07111015a ತೇ ತಸ್ಯ ಕವಚಂ ಭಿತ್ತ್ವಾ ತಥಾ ಬಾಹುಂ ಚ ದಕ್ಷಿಣಂ।
07111015c ಅಭ್ಯಗುರ್ಧರಣೀಂ ತೀಕ್ಷ್ಣಾ ವಲ್ಮೀಕಮಿವ ಪನ್ನಗಾಃ।।
ಆ ತೀಕ್ಷ್ಣ ಬಾಣಗಳು ಅವನ ಕವಚವನ್ನು ಮತ್ತು ಬಲ ಬಾಹುವನ್ನು ಸೀಳಿ ಹಾವುಗಳು ಹುತ್ತವನ್ನು ಹೊಗುವಂತೆ ನೆಲವನ್ನು ಹೊಕ್ಕವು.
07111016a ರಾಧೇಯಂ ತು ರಣೇ ದೃಷ್ಟ್ವಾ ಪದಾತಿನಮವಸ್ಥಿತಂ।
07111016c ಭೀಮಸೇನೇನ ಸಂರಬ್ಧಂ ರಾಜಾ ದುರ್ಯೋಧನೋಽಬ್ರವೀತ್।
07111016e ತ್ವರಧ್ವಂ ಸರ್ವತೋ ಯತ್ತಾ ರಾಧೇಯಸ್ಯ ರಥಂ ಪ್ರತಿ।।
ರಣದಲ್ಲಿ ರಾಧೇಯನು ಭೀಮಸೇನನಿಂದ ಗಾಬರಿಗೊಂಡು ನೆಲದಮೇಲೆ ನಿಂತಿರುವುದನ್ನು ನೋಡಿ ದುರ್ಯೋಧನನು “ಎಲ್ಲರೂ ರಾಧೇಯನ ರಥದ ಕಡೆ ತ್ವರೆಮಾಡಿ!” ಎಂದು ಹೇಳಿದನು.
07111017a ತತಸ್ತವ ಸುತಾ ರಾಜನ್ ಶ್ರುತ್ವಾ ಭ್ರಾತುರ್ವಚೋ ದ್ರುತಂ।
07111017c ಅಭ್ಯಯುಃ ಪಾಂಡವಂ ಯುದ್ಧೇ ವಿಸೃಜಂತಃ ಶಿತಾಂ ಶರಾನ್।।
07111018a ಚಿತ್ರೋಪಚಿತ್ರಶ್ಚಿತ್ರಾಕ್ಷಶ್ಚಾರುಚಿತ್ರಃ ಶರಾಸನಃ।
07111018c ಚಿತ್ರಾಯುಧಶ್ಚಿತ್ರವರ್ಮಾ ಸಮರೇ ಚಿತ್ರಯೋಧಿನಃ।।
ರಾಜನ್! ಅಣ್ಣನ ಮಾತನ್ನು ಕೇಳಿದ ನಿನ್ನ ಮಕ್ಕಳು - ಚಿತ್ರ, ಉಪಚಿತ್ರ, ಚಿತ್ರಾಕ್ಷ, ಚಾರುಚಿತ್ರ, ಶರಾಸನ, ಚಿತ್ರಾಯುಧ ಮತ್ತು ಸಮರದಲ್ಲಿ ಚಿತ್ರಯೋಧೀ ಚಿತ್ರವರ್ಮ – ಇವರು ಯುದ್ಧದಲ್ಲಿ ನಿಶಿತ ಶರಗಳನ್ನು ಪ್ರಯೋಗಿಸುತ್ತಾ ಪಾಂಡವನನ್ನು ಆಕ್ರಮಣಿಸಿದರು.
07111019a ಆಗಚ್ಚತಸ್ತಾನ್ಸಹಸಾ ಭೀಮೋ ರಾಜನ್ಮಹಾರಥಃ।
07111019c ಸಾಶ್ವಸೂತಧ್ವಜಾನ್ಯತ್ತಾನ್ಪಾತಯಾಮಾಸ ಸಂಯುಗೇ।
07111019e ತೇ ಹತಾ ನ್ಯಪತನ್ಭೂಮೌ ವಾತನುನ್ನಾ ಇವ ದ್ರುಮಾಃ।।
ರಾಜನ್! ಮಹಾರಥ ಭೀಮನು ಸಂಯುಗದಲ್ಲಿ ಬರುತ್ತಿದ್ದ ಅವರನ್ನು ಕೂಡಲೇ ಕುದುರೆಗಳು, ಸೂತರು ಮತ್ತು ಧ್ವಜಗಳೊಂದಿಗೆ ಉರುಳಿಸಿದನು. ಭಿರುಗಾಳಿಗೆ ಸಿಲುಕಿದ ಮರಗಳಂತೆ ಅವರು ಹತರಾಗಿ ನೆಲದ ಮೇಲೆ ಬಿದ್ದರು.
07111020a ದೃಷ್ಟ್ವಾ ವಿನಿಹತಾನ್ಪುತ್ರಾಂಸ್ತವ ರಾಜನ್ಮಹಾರಥಾನ್।
07111020c ಅಶ್ರುಪೂರ್ಣಮುಖಃ ಕರ್ಣಃ ಕಶ್ಮಲಂ ಸಮಪದ್ಯತ।।
ರಾಜನ್! ನಿನ್ನ ಮಹಾರಥ ಪುತ್ರರು ಹತರಾದುದನ್ನು ಕಂಡು ಕರ್ಣನು ಕಣ್ಣೀರುತುಂಬಿದವನಾಗಿ ಶೋಕಭರಿತನಾದನು.
07111021a ರಥಮನ್ಯಂ ಸಮಾಸ್ಥಾಯ ವಿಧಿವತ್ಕಲ್ಪಿತಂ ಪುನಃ।
07111021c ಅಭ್ಯಯಾತ್ಪಾಂಡವಂ ಯುದ್ಧೇ ತ್ವರಮಾಣಃ ಪರಾಕ್ರಮೀ।।
ಆ ಪರಾಕ್ರಮಿಯು ವಿಧಿವತ್ತಾಗಿ ಸಜ್ಜುಗೊಳಿಸಿದ್ದ ಇನ್ನೊಂದು ರಥವನ್ನೇರಿ ಯುದ್ಧದಲ್ಲಿ ತ್ವರೆಮಾಡುತ್ತಾ ಪುನಃ ಪಾಂಡವ ಭೀಮನನ್ನು ಎದುರಿಸಿದನು.
07111022a ತಾವನ್ಯೋನ್ಯಂ ಶರೈರ್ವಿದ್ಧ್ವಾ ಸ್ವರ್ಣಪುಂಖೈಃ ಶಿಲಾಶಿತೈಃ।
07111022c ವ್ಯಭ್ರಾಜೇತಾಂ ಮಹಾರಾಜ ಪುಷ್ಪಿತಾವಿವ ಕಿಂಶುಕೌ।।
ಮಹಾರಾಜ! ಅನ್ಯೋನ್ಯರನ್ನು ಸ್ವರ್ಣಪುಂಖಗಳ ಶಿಲಾಶಿತ ಶರಗಳಿಂದ ಹೊಡೆದು ಗಾಯಗೊಳಿಸಿದ ಅವರು ಹೂಬಿಟ್ಟ ಕಿಂಶುಕ ವೃಕ್ಷಗಳಂತೆ ಕಂಗೊಳಿಸಿದರು.
07111023a ಷಟ್ತ್ರಿಂಶದ್ಭಿಸ್ತತೋ ಭಲ್ಲೈರ್ನಿಶಿತೈಸ್ತಿಗ್ಮತೇಜನೈಃ।
07111023c ವ್ಯಧಮತ್ಕವಚಂ ಕ್ರುದ್ಧಃ ಸೂತಪುತ್ರಸ್ಯ ಪಾಂಡವಃ।।
ಆಗ ಪಾಂಡವನು ಕ್ರುದ್ಧನಾಗಿ ಮೂವತ್ತಾರು ತಿಗ್ಮತೇಜಸ್ಸಿನ ನಿಶಿತ ಭಲ್ಲಗಳಿಂದ ಸೂತಪುತ್ರನ ಕವಚವನ್ನು ತುಂಡರಿಸಿದನು.
07111024a ರಕ್ತಚಂದನದಿಗ್ಧಾಂಗೌ ಶರೈಃ ಕೃತಮಹಾವ್ರಣೌ।
07111024c ಶೋಣಿತಾಕ್ತೌ ವ್ಯರಾಜೇತಾಂ ಕಾಲಸೂರ್ಯಾವಿವೋದಿತೌ।।
ರಕ್ತ-ಚಂದನಗಳಿಂದ ಲೇಪಿತಗೊಂಡ, ಶರಗಳಿಂದ ತುಂಬಾ ಗಾಯಮಾಡಿಕೊಂಡು ಕೆಂಪಾಗಿದ್ದ ಅವರಿಬ್ಬರೂ ಉದಯಿಸುತ್ತಿರುವ ಪ್ರಳಯಕಾಲದ ಸೂರ್ಯರಂತೆ ರಾರಾಜಿಸಿದರು.
07111025a ತೌ ಶೋಣಿತೋಕ್ಷಿತೈರ್ಗಾತ್ರೈಃ ಶರೈಶ್ಚಿನ್ನತನುಚ್ಚದೌ।
07111025c ವಿವರ್ಮಾಣೌ ವ್ಯರಾಜೇತಾಂ ನಿರ್ಮುಕ್ತಾವಿವ ಪನ್ನಗೌ।।
ರಕ್ತದಿಂದ ಅಂಗಾಂಗಳು ತೋಯ್ದುಹೋಗಿದ್ದ, ಶರಗಳು ತಾಗಿ ಚರ್ಮವು ಹರಿದುಹೋಗಿದ್ದ, ಕವಚಗಳನ್ನು ಕಳೆದುಕೊಂಡಿದ್ದ ಅವರಿಬ್ಬರು ಪೊರೆಬಿಟ್ಟ ಸರ್ಪಗಳಂತೆ ರಾಜಿಸುತ್ತಿದ್ದರು.
07111026a ವ್ಯಾಘ್ರಾವಿವ ನರವ್ಯಾಘ್ರೌ ದಂಷ್ಟ್ರಾಭಿರಿತರೇತರಂ।
07111026c ಶರದಂಷ್ಟ್ರಾ ವಿಧುನ್ವಾನೌ ತತಕ್ಷತುರರಿಂದಮೌ।।
ಹುಲಿಗಳು ತಮ್ಮ ಕೋರೆದಾಡೆಗಳಿಂದ ಪರಸ್ಪರರನ್ನು ಗಾಯಗೊಳಿಸುವಂತೆ ಆ ಇಬ್ಬರು ಅರಿಂದಮ ನರವ್ಯಾಘ್ರರು ಶರಗಳೆಂಬ ತಮ್ಮ ಹಲ್ಲುಗಳಿಂದ ಪರೆದಾಡಿಕೊಂಡು ಗಾಯಮಾಡಿದರು.
07111027a ವಾರಣಾವಿವ ಸಂಸಕ್ತೌ ರಂಗಮಧ್ಯೇ ವಿರೇಜತುಃ।
07111027c ತುದಂತೌ ವಿಶಿಖೈಸ್ತೀಕ್ಷ್ಣೈರ್ಮತ್ತವಾರಣವಿಕ್ರಮೌ।।
ರಂಗಮಧ್ಯದಲ್ಲಿ ತಮ್ಮ ದಂತಗಳಿಂದ ತಿವಿದು ಕಾದಾಡುವ ಆನೆಗಳಂತೆ ಆ ಇಬ್ಬರು ಮತ್ತವಾರಣವಿಕ್ರಮಿಗಳು ತೀಕ್ಷ್ಣ ವಿಶಿಖಗಳಿಂದ ಕಾದಾಡಿ ವಿರಾಜಿಸಿದರು.
07111028a ಪ್ರಚ್ಚಾದಯಂತೌ ಸಮರೇ ಶರಜಾಲೈಃ ಪರಸ್ಪರಂ।
07111028c ರಥಾಭ್ಯಾಂ ನಾದಯಂತೌ ಚ ದಿಶಃ ಸರ್ವಾ ವಿಚೇರತುಃ।।
ಸಮರದಲ್ಲಿ ಪರಸ್ಪರರನ್ನು ಶರಜಾಲಗಳಿಂದ ಮುಚ್ಚಿಬಿಡುತ್ತಾ, ಗರ್ಜಿಸುತ್ತಾ ಅವರಿಬ್ಬರೂ ರಥಗಳೆರಡರಲ್ಲಿ ಎಲ್ಲ ದಿಕ್ಕುಗಳಲ್ಲಿಯೂ ಸಂಚರಿಸುತ್ತಿದ್ದರು.
07111029a ತೌ ರಥಾಭ್ಯಾಂ ಮಹಾರಾಜ ಮಂಡಲಾವರ್ತನಾದಿಷು।
07111029c ವ್ಯರೋಚೇತಾಂ ಮಹಾತ್ಮಾನೌ ವೃತ್ರವಜ್ರಧರಾವಿವ।।
ಮಹಾರಾಜ! ಮಂಡಲಾಕಾರದಲ್ಲಿ ಆ ಎರಡು ರಥಗಳೂ ತಿರುಗುತ್ತಿರಲು ಅವರಿಬ್ಬರು ಮಹಾತ್ಮರೂ ವೃತ-ವಜ್ರಧರರಂತೆ ರಾರಾಜಿಸಿದರು.
07111030a ಸಹಸ್ತಾಭರಣಾಭ್ಯಾಂ ತು ಭುಜಾಭ್ಯಾಂ ವಿಕ್ಷಿಪನ್ಧನುಃ।
07111030c ವ್ಯರೋಚತ ರಣೇ ಭೀಮಃ ಸವಿದ್ಯುದಿವ ತೋಯದಃ।।
ಹಸ್ತಾಭರಣ ಯುಕ್ತ ಎರಡೂ ಭುಜಗಳಿಂದ ಧನುಸ್ಸನ್ನು ಸೆಳೆಯುತ್ತಿದ್ದ ಭೀಮನು ರಣದಲ್ಲಿ ಮಿಂಚಿನಿಂದ ಕೂಡಿದ ಮೋಡದಂತೆ ಪ್ರಕಾಶಿಸಿದನು.
07111031a ಸ ಚಾಪಘೋಷಸ್ತನಿತಃ ಶರಧಾರಾಂಬುದೋ ಮಹಾನ್।
07111031c ಭೀಮಮೇಘೋ ಮಹಾರಾಜ ಕರ್ಣಪರ್ವತಮಭ್ಯಯಾತ್।।
ಮಹಾರಾಜ! ಗುಡುಗುವ ಮಳೆಸುರಿಸುವ ಮಹಾ ಮೋಡದಂತೆ ಚಾಪಘೋಷಯುಕ್ತ ಭೀಮನೆಂಬ ಮೇಘವು ಕರ್ಣವೆಂಬ ಪರ್ವತವನ್ನೇ ಮುಸುಕಿ ಹಾಕಿತು.
07111032a ತತಃ ಶರಸಹಸ್ರೇಣ ಧನುರ್ಮುಕ್ತೇನ ಭಾರತ।
07111032c ಪಾಂಡವೋ ವ್ಯಕಿರತ್ಕರ್ಣಂ ಘನೋಽದ್ರಿಮಿವ ವೃಷ್ಟಿಭಿಃ।।
ಆಗ ಭಾರತ! ಧನುಸ್ಸಿನಿಂದ ಬಿಟ್ಟ ಸಹಸ್ರ ಬಾಣಗಳಿಂದ ಪಾಂಡವನು ಮೋಡವು ಪರ್ವತವನ್ನು ಮಳೆಯಿಂದ ಹೇಗೋ ಹಾಗೆ ಕರ್ಣನನ್ನು ಮುಚ್ಚಿಬಿಟ್ಟನು.
07111033a ತತ್ರಾವೈಕ್ಷಂತ ಪುತ್ರಾಸ್ತೇ ಭೀಮಸೇನಸ್ಯ ವಿಕ್ರಮಂ।
07111033c ಸುಪುಂಖೈಃ ಕಂಕವಾಸೋಭಿರ್ಯತ್ಕರ್ಣಂ ಚಾದಯಚ್ಚರೈಃ।।
ಪುಂಖಗಳಿದ್ದ ಕಂಕವಾಸ ಶರಗಳಿಂದ ಕರ್ಣನನ್ನು ಮುಸುಕಿಹಾಕಿದ ಭೀಮಸೇನನ ವಿಕ್ರಮವನ್ನು ನಿನ್ನ ಪುತ್ರರೂ ನೋಡುತ್ತಿದ್ದರು.
07111034a ಸ ನಂದಯನ್ರಣೇ ಪಾರ್ಥಂ ಕೇಶವಂ ಚ ಯಶಸ್ವಿನಂ।
07111034c ಸಾತ್ಯಕಿಂ ಚಕ್ರರಕ್ಷೌ ಚ ಭೀಮಃ ಕರ್ಣಮಯೋಧಯತ್।।
ಕರ್ಣನೊಡನೆ ಯುದ್ಧಮಾಡಿ ಭೀಮನು ರಣದಲ್ಲಿ ಅರ್ಜುನ ಮತ್ತು ಯಶಸ್ವಿ ಕೇಶವನಿಗೂ, ಸಾತ್ಯಕಿಗೂ, ಚಕ್ರರಕ್ಷಕರಿಗೂ ಆನಂದವನ್ನುಂಟುಮಾಡಿದನು.
07111035a ವಿಕ್ರಮಂ ಭುಜಯೋರ್ವೀರ್ಯಂ ಧೈರ್ಯಂ ಚ ವಿದಿತಾತ್ಮನಃ।
07111035c ಪುತ್ರಾಸ್ತವ ಮಹಾರಾಜ ದದೃಶುಃ ಪಾಂಡವಸ್ಯ ಹ।।
ಮಹಾರಾಜ! ಪಾಂಡವ ಭೀಮನ ವಿಕ್ರಮವನ್ನೂ, ಭುಜಗಳ ವೀರ್ಯವನ್ನೂ, ಧೈರ್ಯವನ್ನೂ ನಿನ್ನ ಪುತ್ರರು ತಾವೇ ನೋಡಿ ಅರ್ಥಮಾಡಿಕೊಂಡರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಭೀಮಯುದ್ಧೇ ಏಕಾದಶಾಧಿಕಶತತಮೋಽಧ್ಯಾಯಃ ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಭೀಮಯುದ್ಧ ಎನ್ನುವ ನೂರಾಹನ್ನೊಂದನೇ ಅಧ್ಯಾಯವು.